Saturday, January 8, 2011

ಗಿರಿಕನ್ಯೆಯ ‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ’


ನನಗಾಗ ಶಾಲೆಯ ಮೆಟ್ಟಿಲು ಹತ್ತುವ ವಯಸ್ಸು. ನಮ್ಮದು ಕುಗ್ರಾಮವೆಂದರೆ ಕುಗ್ರಾಮ. ಆದರೆ ಹಸಿರು ವನರಾಶಿಯಿಂದ ಸದಾ ಕಂಗೊಳಿಸುವ ಸೌಂದರ್ಯವಂತೆ ಆ ಊರು. ಆಗಿನ್ನೂ ಸಂಪರ್ಕ ಸಾಧನಗಳಾವುದು ಇರಲಿಲ್ಲವಾಗಿ ಜನರಿಗೆ ಕಾಲ್ನಡಿಗೆಯೆ ಗತಿ. ಊರು ಅನ್ನುವುದಕ್ಕೆ ಒಂದು ರಸ್ತೆ, ನೆಪಮಾತ್ರಕ್ಕೆ! ಹೊಂಡ, ಕಲ್ಲುಗಳ ಪಾದಾಚಾರಿಗೂ ನಡೆಯುವುದಕ್ಕೂ ಕಷ್ಟವಾದ ದಾರಿ ಅದು. ಆ ದಾರಿಯಲ್ಲಿ ಶ್ರೀ ಮಂಜುನಾಥ ಮೋಟಾರ್ ಸರ್ವೀಸ್ (smms) ಕಂಪನಿಯ ಉದ್ದ ಮೂತಿಯ ಒಂದೇ ಒಂದು ಬಸ್ಸು ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಹಾಗಂತ ಯಾರೂ ಆ ಬಸ್ಸಿಗೆ ಕಾಯುವುದು ಇಲ್ಲ. ಬಸ್ಸು ಬಂದರೆ ಉಡುಪಿಗೋ ಶಿರ್ವಕ್ಕೊ ಹೋದಾರು. ಆಗಿನ ಕಾಲಕ್ಕೆ ಅದರ ಅನಿವಾರ್ಯತೆ ಇರಲಿಲ್ಲ ಅನ್ನುವಷ್ಟರ ಮಟ್ಟಿಗೆ.

ಅಂತಹ ನಮ್ಮ ಕಾಡುಗುಡ್ಡ ಹಳ್ಳಿಗೆ ಒಂದು ದಿನ ವಿಚಿತ್ರ ವಾಹನದಲ್ಲಿ ಸಿಟಿಯ ಜನರ ದಿಂಡು ಬಂದು ಬಿಟ್ಟಿತು. ನಮಗೆಲ್ಲಾ ಆಶ್ಚರ್ಯ. ಅವರ ವೇಷಭೂಷಣ, ಸ್ಟೈಲು, ಮಾತುಕತೆ ಎಲ್ಲಾ ಎಲ್ಲಾ ವಿಚಿತ್ರ ಅನಿಸಿಬಿಟ್ಟಿತು."

ಊರಿಗೆ ಏನಾದರೊಂದು ಹೊಸ ವಾಹನ ಬಂದ್ರೆ ಅದು ಮಕ್ಕಳನ್ನು ಕದ್ದೊಯ್ಯುವ ‘ಕಳ್ಳರ ವಾಹನ’ ಅಂತಲೆ ಊರವರ ಅಭಿಪ್ರಾಯ. ಊರಿನ ಪ್ರಮುಖರು ಬಂದ ವಾಹನವನ್ನು ನಿಲ್ಲಿಸಿ, ವಿಚಾರಿಸಿ ವ್ಯಕ್ತಿಗಳ ಬಗೆ ತಿಳಿದುಕೊಂಡ ಬಳಿಕವೆ, ‘ಇಂತವರು ಊರಿಗೆ ಬಂದಿದ್ರು’ ಅನ್ನುವ ಗಾಬು ಊರಿಗೆ ಹರಡುತ್ತಿತ್ತು.

ಹಳ್ಳಿಯಲ್ಲಿ ಮನೆಗಳೆಂದರೆ ಎರಡು ಮೂರು ಫರ್ಲಾಂಗ್ಗಳಿಗೆ ಒಂದು ಮನೆ. ತೊಡಮೆ, ತೋಡು, ಕಾಲುಸಂಕ, ವಳಚ್ಚಿಲ್, ಗುಡ್ಡ, ಕಾಡುಗಳನ್ನು ದಾಟಿ ಮನೆಯನ್ನು ತಲುಪಬೇಕಾದ ಪರಿಸ್ಥಿತಿ. ಕಾಲು ದಾರಿ ಬಿಟ್ಟರೆ ಊರಿಗೆ ರಸ್ತೆಯೆಂದರೆ ಸುಭಾಸ್ನಗರದಿಂದ ಬಂಟಕಲ್ ಕ್ರಾಸ್ ರೋಡ್ವರೆಗಿನ ಒಂದು ಮಣ್ಣಿನ ರಸ್ತೆಯಷ್ಟೆ. ಊರಿನವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅಭಿವೃದ್ಧಿಯೆಂದರೆ ಅದು ಅಪಾಯಗಳಿಗೆ ಆಹ್ವಾನವೆಂದೆ ತಿಳಿದಿದ್ದರು ಅನ್ಸುತ್ತೆ. ಅದಕ್ಕಾಗಿ ರಸ್ತೆಯಾಗಲಿ, ಸರಿಯಾದ ದಾರಿಯನ್ನಾಗಲಿ ಮಾಡುವುದಕ್ಕೆ ಯಾರೂ ಮುಂದೆ ಬರುತ್ತಿರಲಿಲ್ಲ. ಅವರ ಜಾಗೆಯನ್ನೂ ಬಿಟ್ಟು ಕೊಡುತ್ತಿರಲಿಲ್ಲ. ಇವತ್ತಿನ ಹಾಗೆ ಪಂಚಾಯತುಗಳು ಆಗಿನ್ನೂ ಬೆಳೆದಿರಲಿಲ್ಲ. ಇದ್ದರೂ ಅಭಿವೃದ್ಧಿಗೆ ಅವಕಾಶವನ್ನು ನೀಡುತ್ತಿರಲಿಲ್ಲ.

ಅಂತಹ ನಮ್ಮ ಹಳ್ಳಿಗೆ ಇನ್ನೊಂದು ಹೆಸರು ಬೊಲ್ಲೆ (ಬೆಳ್ಳೆ ಹೆಸರಿನ ತುಳು ಉಚ್ಛಾರ). ಊರಿನ ಪೂರ್ವದಿಂದ ಉತ್ತರ ದಿಕ್ಕಿನವರೆಗೂ ಪಾಪನಾಶಿನಿ ನದಿ ಹರಿಯುವುದರಿಂದ ಕೃಷಿ ಪ್ರಧಾನವಾದ ಊರು ನಮ್ಮದು. ಭತ್ತದ ಬೆಳೆ ಮತ್ತು ತೆಂಗಿನಬೆಳೆಗಳನ್ನು ಬಿಟ್ಟರೆ ಉಳಿದಂತೆ ಸೊಪ್ಪು ತರಕಾರಿಯನ್ನು ಬೆಳೆಯುವುದು ಸರ್ವೇ ಸಾಮಾನ್ಯ. ಆ ನದಿಯ ಹತ್ತಿರದಲ್ಲಿ ಅಂದರೆ ಉತ್ತರ ದಿಕ್ಕಿಗೆ ಬೊಲ್ಲೆದಂಗಡಿ. ಅದು ಊರಿನ ಒಂದೇ ಒಂದು ಗೌಡ ಸಾರಸ್ವತ ಬ್ರಾಹ್ಮಣರ ಮನೆ. ದಿನಸಿ ಸಾಮಾನಿಗೆ ಮಾತ್ರವಲ್ಲ ಮೊದಲು ಅಕ್ಕಿ ಮಿಲ್ಲು ಬಂದಂದು ಅಲ್ಲಿಯೆ. ಹಾಗಾಗಿ ಅದು ಒಂದು ಮೂಲೆಯಲ್ಲಿದ್ದರೂ ಜನರಿಗೆ ಅದನ್ನು ಹುಡುಕಿಕೊಂಡು ಹೋಗುವ ಅನಿವಾರ್ಯತೆ. ಅಲ್ಲಿ ಭತ್ತದ ಕೃಷಿ ಮತ್ತು ಕಬ್ಬನ್ನು ಬೆಳೆಯುವುದು ಗೊತ್ತಿತ್ತು.

ಬ್ರಹ್ಮಾವರದ ಕಬ್ಬಿನ ಕಾರ್ಖಾನೆ ಪ್ರಾರಂಭವಾಗುವವರೆಗೂ ಅಲ್ಲಿ ಆಲೆಮನೆಯಿತ್ತು. ಊರಿನ ಸೆಲ್ಫ್ ಮೆಕ್ಯಾನಿಕ್ ಎಂದೇ ಖ್ಯಾತರಾದ ಸೀನಪ್ಪ ಭಟ್ಟರು ಆಲೆಮನೆಯ ರೂವಾರಿ. ಕಬ್ಬು ಮಾಗುವ ಸಮಯಕ್ಕೆ ಅವರು ದೊಡ್ಡ ಕೊಪ್ಪರಿಗೆ ಮತ್ತು ಡಿಸೆಲ್ ಪಂಪ್ ತಂದು ಕಬ್ಬನ್ನು ಕ್ರಶ್ ಮಾಡಿ ಅದರ ಹಾಲನ್ನು ಕೊಪ್ಪರಿಗೆಗೆ ಸುರಿದು ಬೆಲ್ಲ ತಯಾರಿಸುವುದು ಈಗಲೂ ನಮಗೆ ನೆನಪಿದೆ. ಎರಡು ಮೂರು ದಿನಗಳವರೆಗೂ ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲು ಕೊತ ಕೊತಾಂತ ಕುದಿಯುವುದು ಗೊತ್ತು. ನಾವು ಮಧ್ಯಾಹ್ನದ ಹೊತ್ತಿಗೆ ಶಾಲೆಯಲ್ಲಿ ಬುತ್ತಿ ಊಟ ಮುಗಿಸಿ ಬೆಲ್ಲದ ಆಸೆಗಾಗಿ ಅಲ್ಲಿಗೆ ಓಡುವುದಿತ್ತು. ಬಿಸಿ ಬಿಸಿ ಬೆಲ್ಲವನ್ನು ದೊಡ್ಡ ಎಲೆಗೆ ಹಾಕಿ ಅವರು ನಮಗೆ ಕೊಟ್ಟು, ‘ಎಲ್ಲರೂ ಹಂಚಿ ತಿನ್ನಿ ಅನ್ನೋರು’.

ಅಂತಹ ಅಲೆಮನೆಯಿರುವ ಮನೆಗೆ ಪರವೂರಿನಿಂದ ಬಂದ ನಾಲ್ಕೈದು ವಾಹನಗಳು ಹೋದದ್ದು ನಮಗೆ ತಿಳಿಯಿತು. ಊರಿಗೆ ವಾಹನ ಬಂದರೆ ಕೇಳಬೇಕೆ? ಒಬ್ಬರ ಕಿವಿಯಿಂದ ಒಬ್ಬರಿಗೆ ವಿಷಯ ತಲುಪಿತು. ಹೆಂಗಸರು ಮಕ್ಕಳು ಮುದುಕರೆನ್ನದೆ ಅಲ್ಲಿಗೆ ಹೊರಟರೆ ಅಲ್ಲಿ ಊರೆ ಜಾತ್ರೆ ಸೇರಿದಂತೆ ಕಾಣುತ್ತಿತ್ತು.

ನಮಗೂ ಕುತೂಹಲ; ಅವರಂತೆ, ಇವರಂತೆ ಅನ್ನುವ ಗಾಬು. ಅಕ್ಕ, ಅಣ್ಣನ ಜೊತೆಗೆ ನಾವು ಹೋದೆವು. ಅರ್ಧ ದಾರಿಯಲ್ಲಿ ಅಮ್ಮ ನಮ್ಮನ್ನು ಗದರಿಸಿ ಹೋಗದಂತೆ ತಡೆದರು. ಹಾಗೂ ಹೀಗೂ ಅಣ್ಣನವರೆಲ್ಲಾ ಅಮ್ಮನ ಕಣ್ಣು ತಪ್ಪಿಸಿಕೊಂಡು ಓಡಿದರು.

“ಅಲ್ಲಿ ಆಗ್ತಾ ಇರೋದು ಸಿನಿಮಾ ಶೂಟಿಂಗ್. ಅದನ್ನೆಲ್ಲಾ ಏನು ನೋಡುವುದು ನೀವು ಸಣ್ಣ ಮಕ್ಕಳು, ಸುಮ್ನೆ ಮನೆಗೆ ಬರ್ತೀರಾ ಇಲ್ವಾ?” ಅಂದ್ರು. ಆಗ ಅವರ ಮಾತನ್ನು ಮೀರಿ ನಡೆಯುವ ಧೈರ್ಯವಿರಲಿಲ್ಲ. ಮನೆಗೆ ವಾಪಾಸಾದೆವು. ಆದರೆ ನಮ್ಮ ನೆರೆಮನೆಯ ಹುಡುಗ ಹುಡುಗಿಯರೆಲ್ಲಾ ಹೋದವರ ಬಾಯಿಯಲ್ಲಿ ಡಾ. ರಾಜಕುಮಾರ್ ಮತ್ತು ಜಯಮಾಲರ ಬಗ್ಗೆ ಮಾತುಗಳು.

ಕೊನೆಗೆ ನನ್ನ ಎರಡನೆ ಅಣ್ಣ ಹೈಸ್ಕೂಲ್ ಓದುತ್ತಿದ್ದ ಅವನು ರಾತ್ರಿ ಮನೆಗೆ ಬಂದವನೆ ಎಲ್ಲವನ್ನೂ ನಮಗೆ ವರದಿ ಒಪ್ಪಿಸಿದ. ಶೂಟಿಂಗ್ ನೋಡದಿದ್ದರು ಆ ಸನ್ನಿವೇಶವನ್ನು ಚಿತ್ರಿಸಿಕೊಂಡೆವು.

ಬೊಲ್ಲೆದಂಗಡಿಯ ಸುತ್ತಮುತ್ತ ಬೈಲು ಗದ್ದೆಯಾಗಿರುವುದರಿಂದ ಭತ್ತದ ಪಚ್ಚ ಪೈರಿನ ತೋರಣ ಮತ್ತೊಂದೆಡೆ ಕಬ್ಬಿನ ತೋಟ. ಅಷ್ಟಿದ್ದರೆ ಕೇಳಬೇಕೆ? ಎಂತಹ ಸಿನಿಮಾ ಮಂದಿಯೂ ಆ ದೃಶ್ಯಕ್ಕೆ ಮಾರುಹೋಗದಿರಲಾರರು.

ಅಂತಹ ಪ್ರಕೃತಿಯ ನಡುವೆ ‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ’ ಅನ್ನುವ ಯುಗಳ ಗೀತೆಯ ಚಿತ್ರೀಕರಣ. ಪಾಪನಾಶಿನಿ ನದಿಯ ‘ಕರಿಯದ ಬಾಕಿಲ್’ ನಿಂದ ಉದ್ದನೆಯ ಎತ್ತರದ ಕಟ್ಟಪುಣಿಯ ಇಕ್ಕೆಲಗಳಲ್ಲಿ ಭತ್ತದ ಹಸಿರು ಅಲ್ಲಿಂದ ಮುಂದುವರೆದು ದೊಡ್ಡ ಗೊಬ್ಬರದ ಗುಂಡಿಯಿರುವ ಗದ್ದೆಯವರೆಗೂ ಚಿತ್ರೀಕರಣ. ಸಾದಾರಣವಾಗಿ ಆ ಹಾಡಿನ ಕೊನೆಯ ಅರ್ಧ ಭಾಗ ಚಿತ್ರೀಕರಣವಾಗಿರುವುದು ನಮ್ಮೂರಿನಲ್ಲೆ.

ಚಿತ್ರೀಕರಣವೆಂದರೆ ಕನಿಷ್ಟಪಕ್ಷ ಒಂದೆರಡು ದಿನವಾದರೂ ಇರುತ್ತಾರೆಂದು ತಿಳಿದಿದ್ದ ನಮಗೆ ನಿರಾಶೆ. ಮರುದಿನ ಹೇಗೂ ಅಮ್ಮನನ್ನು ಒಪ್ಪಿಸಿ ನಾವು ಅಲ್ಲಿಗೆ ಹೋದರೆ ಅಲ್ಲಿ ಮೂಕ ಸಾಕ್ಷಿಯಂತೆ ನಿಂತಿದ್ದು ಬರೀ ಹಸಿರು ಭತ್ತದ ಪೈರಿನ ಗದ್ದೆಗಳು, ಪಾಪನಾಶಿನಿ ನದಿ, ದೊಡ್ಡ ಕಟ್ಟಪುಣಿ, ತೆಂಗಿನ ಮರದ ಸಾಲುಗಳು, ದೇವಸ್ಥಾನದ ಪ್ರಾಂಗಣ, ನಗಾರಿ ಕೋಣೆ, ನೀಲಗಿರಿ ಮರಗಳು... ಅಣ್ಣ ಮತ್ತು ಅವನ ಫ್ರೆಂಡ್ಸೆಲ್ಲಾ ಸೇರಿ, ‘ಓ ಇಲ್ಲಿಂದ ಜಯಮಾಲ ನೃತ್ಯ ಮಾಡ್ತಾ ಬರ್ತಾ ಇದ್ರು. ಅಣ್ಣಾವ್ರು ಆ ಕಡೆಯಿಂದ ಬರ್ತಾ ಇದ್ರು. ಅಲ್ಲಿಯೆ ಭತ್ತದ ತೆನೆಗಳನ್ನು ಕಲಶೆಯ ನಡುವೆ ಇಟ್ಟು ನೃತ್ಯ ಮಾಡ್ತಾ ಇದ್ದಿದ್ದು, ಇಲ್ಲಿ ಮೇಲಿನಿಂದ ಕೆಳಗೆ ಇಳಿಯುವ ಮೆಟ್ಟಿಲುಗಳ ದೃಶ್ಯ ತೆಗೆದದ್ದು. ಅಲ್ಲಿ ಅವರೆಲ್ಲಾ ಮೇಕಪ್ ಮಾಡ್ತಾ ಇದ್ರು. ಇಲ್ಲಿ ನಾವೆಲ್ಲಾ ನಿಂತು ನೋಡ್ತಾ ಇದ್ದೆವು. ಕ್ಯಾಮರಾ ನಿಧಾನಕ್ಕೆ ನಮ್ಮತ್ತ ತಿರುಗಿದ್ದು. ಪಿಕ್ಚರ್ ರಿಲೀಸ್ ಆದ ಕೂಡ್ಲೆ ನಾನು ಮೊದಲು ನೋಡ್ಬೇಕು. ನಮ್ಮ ಊರಿನ ಯಾರ್ಯಾರೆಲ್ಲಾ ಅದರೊಳಗೆ ಇದ್ದಾರೆಂತ ಕಾಣ್ಬೇಕು’ ಅಂತ ಉದ್ದಕ್ಕೆ ಹೇಳುತ್ತಿದ್ದರೆ ನಮಗೆ ಎಂತದೋ ಪುಳಕ.

ದೊರೆ-ಭಗವಾನ್ ನಿರ್ಧೇಶನದ ‘ಗಿರಿಕನ್ಯೆ’ಯ ಆ ಹಾಡು ಇಂದಿಗೂ ಜನಪ್ರಿಯ. ನಮ್ಮ ಮಣ್ಣಿನ, ಊರಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಾ ಸಾಗಿದ್ದ ಹಾಡಿನ ಸಾಲುಗಳನ್ನು ಕೇಳುವಾಗ ಅಲ್ಲಿಯ ದೃಶ್ಯಗಳದ್ದೇ ಕಾರುಬಾರು ಕಣ್ಣುಗಳಲ್ಲಿ.

ನೆಲವ ನಂಬಿ ಬಾಳೋರು ನಾವುಗಳೆಲ್ಲಾ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲಾ
ಹಸಿರೆ ಉಸಿರು ನಮಗೆಲ್ಲಾ

ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೆ ಹೊನ್ನು ನಮಗೆಲ್ಲಾ

ದುಡಿಮೆಗೆ ಫಲವ ಕಂಡೇ ಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ

ಎಂತಹ ಅದ್ಭುತವಾದ ಹಾಡು! ಅದಕ್ಕೆ ಪೂರಕವಾದ ಪಚ್ಚ ಪೈರಿನ ಗದ್ದೆಗಳು. ಸಮುದ್ರ ಮಟ್ಟಕ್ಕಿಂತಲೂ ಎತ್ತರದಲ್ಲಿರುವ ಕುಂಜಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ಅಲ್ಲಿಂದ ನಿಂತು ಸುತ್ತಾ ನೋಡಿದರೆ ಪೂರ್ವದಲ್ಲಿ ಕುದುರೆಮುಖದ ಬೆಟ್ಟದ ಸಾಲುಗಳು, ಪಶ್ಚಿಮದಲ್ಲಿ ಸುರತ್ಕಲ್ನ ದೀಪಸ್ತಂಭದವರೆಗೂ ಕಾಣುವ ಸಮುದ್ರ, ಉತ್ತರಕ್ಕೆ ಮಣಿಪಾಲ, ದಕ್ಷಿಣಕ್ಕೆ ಹಸಿರು ತುಂಬಿದ ಬೆಟ್ಟಗಳು. ಒಂದೊಂದೆ ದೃಶ್ಯಗಳು ಪರದೆಯ ಮೇಲೆ ಮೂಡಿ ಬರುವಾಗ ಇದು ನನ್ನೂರು, ಇದು ದೇವಸ್ಥಾನದ ಮುಂಭಾಗ, ಇದು ನಗಾರಿ ಕೋಣೆ, ದೇವಸ್ಥಾನದ ಎದುರಿನ ಮೆಟ್ಟಿಲುಗಳು. ಹೀಗೆ ಈಗಲೂ ಆ ಹಾಡು ಬರುವಾಗ ನಾವು ಹೇಳುವುದುಂಟು ಹಳೆಯ ನೆನಪುಗಳನ್ನು ಕೆದಕುತ್ತಾ...

1977 ರಲ್ಲಿ ಚಿತ್ರ ಬಿಡುಗಡೆ ಕಂಡಿತು. ಆಗ ಚಿಕ್ಕಮಕ್ಕಳಿಗೆ ಸಿನಿಮಾ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದಕ್ಕೆ ಮನೆಯಲ್ಲಿ ಅವಕಾಶವಿರಲಿಲ್ಲ. ಸುಮಾರು ಮೂವತ್ತು ವರ್ಷಗಳ ಬಳಿಕ ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ಆ ನೆನಪುಗಳು ನನ್ನನ್ನು ಇಲ್ಲಿ ಬಿಚ್ಚಿಡಲು ಅನುವು ಮಾಡಿಕೊಟ್ಟಿದೆ.

ಡಾ. ರಾಜ್ಕುಮಾರ್ ನಮ್ಮ ಊರಿಗೆ ಬಂದಿದ್ರು. ಡಾ. ಜಯಮಾಲ ಬಂದಿದ್ರು. ನೆನೆಸಿಕೊಂಡ್ರೆ ಈಗ್ಲೂ ಖುಷಿಯಾಗುತ್ತೆ. ಕೇವಲ ಸಿನಿಮಾ ಮಂದಿಯನ್ನು ಹೆಚ್ಚಾಗಿ ಈಗಲೂ ಟಿವಿ. ಸಿನೆಮಾಗಳಲ್ಲಿ ಮಾತ್ರ ನೋಡಿರ್ತೀವಿ. ಅವರನ್ನು ನೇರವಾಗಿ ನೋಡುವುದಕ್ಕೂ ದೃಶ್ಯಗಳಲ್ಲಿ ನೋಡುವುದಕ್ಕೂ ವ್ಯತ್ಯಾಸವಿರುತ್ತೆ, ಅಲ್ವಾ...?


ಚಿತ್ರ ಕೃಪೆ: ಈಕನಸು.ಕಾಂ

No comments: