Saturday, January 15, 2011

ಮಂಜುಳಾ, ಶಂಕರ್ ನಾಗ್ ಅಭಿನಯದ ‘ಸೀತಾ ರಾಮು’


ನಮ್ಮೂರು ಬೆಳ್ಳೆಯ ಪಕ್ಕದ ಊರು ಕುಂಜಾರುಗಿರಿ. ಅದನ್ನು ದುರ್ಗಾ ಬೆಟ್ಟವೆಂದು ಕೂಡ ಕರೆಯುತ್ತಾರೆ. ಕುಂಜರ ಅಂದರೆ ಆನೆ. ಮುಂಭಾಗದಿಂದ ಆನೆಯ ಹಾಗೆ ಕಾಣುವ ಗಿರಿಗೆ `ಕುಂಜಾರುಗಿರಿ' ಎಂಬ ಹೆಸರು ಬಂದಿದೆ ಅನ್ನುವ ಪ್ರತೀತಿ ಇದೆ.

ಅದು ಆಚಾರ್ಯ ಮಧ್ವರ ಜನ್ಮಸ್ಥಳವಾದ ಪಾಜಕಾಕ್ಷೇತ್ರದಿಂದ ಒಂದುವರೆ ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಎರಡು ಗುಹೆಗಳಿದ್ದು ಅವುಗಳಲ್ಲಿ ಒಂದು ಗುಹೆ ಕುಂಜಾರುಗಿರಿ ಬೆಟ್ಟದ ಪಶ್ಚಿಮದ ದಿಕ್ಕಿಗಿರುವ ಪರಶುರಾಮ ಕ್ಷೇತ್ರದ ಗರ್ಭ ಗುಡಿಯಲ್ಲಿ ಹೊರಗೆ ಬರುತ್ತದೆಯೆಂದು ಬಹಳ ವರ್ಷಗಳ ಹಿಂದೆಯೆ ರಾಮಕೃಷ್ಣ ಭಟ್ಟರೆನ್ನುವ ಸಾಹಸಿಯೊಬ್ಬರು ಪತ್ತೆ ಹಚ್ಚಿದ್ದಾರೆಂದು ನಮಗೆ ಗೊತ್ತಿತ್ತು. ಆದರೆ ಈ ಗುಹೆ ಪ್ರವೇಶ ಧ್ವಾರದಲ್ಲಿ ತೆವಳಿಕೊಂಡು ಹೋಗುವ ಹಾಗೆ ಇದ್ದು, ಮುಂದೆ ನೇರವಾಗಿ ನಿಂತು ನಡೆಯಬಹುದಾದಷ್ಟು ಅಗಲವಾಗಿದೆಯಂತೆ. ನಿರಂತರ ಬಾವಲಿಗಳ ಹಾರಾಟದಿಂದ ಅಲ್ಲಿ ನಿಲ್ಲುವುದು ಕೂಡ ಅಸಾಧ್ಯವೆನ್ನುವ ಹಾಗಿದೆ. ಅದಲ್ಲದೆ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ಈ ಕುಂಜಾರುಬೆಟ್ಟವನ್ನು ಏರಿ ವಿಹಂಗಮ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಬೆಟ್ಟಕ್ಕೆ ನಾಲ್ಕು ಕಡೆಯಿಂದಲೂ ದಾರಿಯಿದ್ದು. ಪೂರ್ವದಲ್ಲಿ ದೊಡ್ಡ ಪಾದೆಯನ್ನು ಏರಿ ಬರಬೇಕು. ಅಲ್ಲಿಂದ ಮೇಲೇರಿ ಬರುವಾಗ ಆಳವಾದ ಕಣಿವೆಯಂತಹ ನೋಟವನ್ನು ನೋಡುವಾಗ ಒಂದು ರೀತಿಯ ಪುಳಕವಾಗುತ್ತದೆ. ಪಶ್ಚಿಮಕ್ಕೆ ನಾಲ್ಕುನೂರು ಮೆಟ್ಟಿಲುಗಳು, ದಕ್ಷಿಣ ಭಾಗದಲ್ಲಿ ಕಡಿದಾದ ಮೆಟ್ಟಿಲುಗಳು ಮತ್ತು ಉತ್ತರ ಭಾಗದಲ್ಲಿ ಮಣ್ಣಿನ ಮೆಟ್ಟಿಲುಗಳಿವೆ. ಅಲ್ಲಿ ಒಂದಲ್ಲಾ ಒಂದು ಸಿನೆಮಾದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ."

ನಾವು ಹೈಸ್ಕೂಲ್ಗೆ ಹೋಗಬೇಕಾದರೆ ಒಂದೋ ಇನ್ನಂಜೆ ಅಥವಾ ಮೂಡುಬೆಳ್ಳೆಗೆ ಹೋಗಬೇಕಿತ್ತು. ಮೂಡುಬೆಳ್ಳೆಗೆ ನಮ್ಮೂರಿನಿಂದ ಸೇತುವೆ ಸಂಪರ್ಕವಿಲ್ಲದಿದ್ದರಿಂದ ಮಳೆಗಾಲಕ್ಕೆ ನೆರೆ ಬಂದು ನಮ್ಮೂರ ನದಿ, ಪಾಪನಾಶಿನಿಯನ್ನು ದಾಟುವುದು ಅಸಾಧ್ಯ. ತರಗತಿಗೆ ಬಂಕ್ ಹೊಡಯಲೇಬೇಕು. ದೋಣಿಯ ಪ್ರಯಾಣವಿದ್ದರೂ ನೆರೆಗೆ ಅಸಾಧ್ಯ. ನಮ್ಮೂರಿನ ನೆರೆಯೆಂದರೆ ಬೆಟ್ಟು ಗದ್ದೆಯವರೆಗೂ ನೀರು ಏರುವುದುಂಟು ಮತ್ತು ಒಂದು ವಾರವಾದರೂ ನೆರೆಯ ನೀರು ಇಳಿಯುವುದಿಲ್ಲ. ಎಲ್ಲಿ ನೋಡಿದರೂ ಕಾಡಿನ ನೀರು ಗುದ್ದಳಿಸಿ ಕೆಸರು ನೀರಿನಿಂದ ಕೂಡಿದ ಅಲೆಗಳ ಮತ್ತು ನೀರಿನ ಪ್ರವಾಹದ ನೆರೆ ಅದು. ಹಾಗಾಗಿ ನಾವು ಇನ್ನಂಜೆ ಹೈಸ್ಕೂಲನ್ನು ಸೇರುವುದು ಅನಿವಾರ್ಯವಾಗಿತ್ತು. ಅಲ್ಲಿಗೆ ಬಸ್ಸಿನ ವ್ಯವಸ್ಥೆಯಾಗಲಿ ಇನ್ಯಾವುದೇ ವಾಹನಗಳ ವ್ಯವಸ್ಥೆಯೂ ಇರಲಿಲ್ಲ. ನಡಿಗೆಯಿಂದಲೆ ನಾಲ್ಕೈದು ಮೈಲು ನಡೆದು ಹೋಗಬೆಕು.

ಶಾಲೆಗೆ ಹೋಗುವ ದಾರಿಯಲ್ಲಿ ಅಂದರೆ ಕುಂಜಾರುಗಿರಿಯ ಪಕ್ಕದಲ್ಲಿಯೆ ದೊಡ್ಡ ಪಾದೆಯನ್ನು ಇಳಿಯಬೇಕಿತ್ತು. ಆ ಪಾದೆಗೆ `ನಿನ್ನಿ ಪಾದೆ' ಎಂದು ಹೆಸರು. ನಿನ್ನಿ ಅಂದರೆ ತುಳುವಿನಲ್ಲಿ ಎದುರು ಮಾತನಾಡುವುದು ಎಂಬ ಅರ್ಥವಿದೆ. ಈ ಪಾದೆಯ ಕೆಳಗೆ ನಿಂತು ಮಾತನಾಡಿದರೆ ಅದು ಎರಡು ಬಾರಿ ಪ್ರತಿಧ್ವನಿಸುತ್ತದೆ. ಅದಕ್ಕಾಗಿ ನಿನ್ನಿಪಾದೆಯೆಂದು ಹೆಸರು ಬಂದಿರಬಹುದು. ಈ ಪಾದೆಯನ್ನು ಏರಬೇಕಾದರೆ ಒಂದು ಕಟ್ಟು ಕಡ್ಲೆಕಾಯಿ ಬೇಕೆನ್ನುವುದು ಆಗಿನ ಹುಡುಗರ ಜೋಕು. ಈಗ ಕಲ್ಲು ಗಣಿಗಾರಿಕೆಯಿಂದ ಬಂಡೆ ಕರಗಿದೆ. ಆಗಿನ ಅದರ ಭವ್ಯತೆ ಈಗ ಇಲ್ಲ!
ಕುಂಜಾರುಗಿರಿ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರವಂತೂ ತುಂಬಾ ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ. ಅಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯೂ ಅಷ್ಟೆ. ಎಲ್ಲೆಂದಿಲೋ ದೇವರ ದರ್ಶನ ಮಾಡುವುದಕ್ಕೆ ಬರುತ್ತಾರೆ. ಆಗ ಒಂದು ದೊಡ್ಡ ಜಾತ್ರೆಯೆ ಅಲ್ಲಿ ನೆರೆಯುವುದುಂಟು. ಕೆಲವೊಮ್ಮೆ ಐದು ಶುಕ್ರವಾರಗಳು ಇನ್ನು ಕೆಲವೊಮ್ಮೆ ನಾಲ್ಕು ಶುಕ್ರವಾರಗಳು ಬರುವುದಿದೆ. ಐದು ಶುಕ್ರವಾರವಾದರೆ ಹೆಣ್ಣು ಮಕ್ಕಳ ಮುಖದಲ್ಲಿ ಖುಷಿಯೋ ಖುಷಿ. ಕೈತುಂಬಾ ಬಣ್ಣ ಬಣ್ಣ ಗಾಜಿನ ಬಳೆಗಳನ್ನಿಟ್ಟು, ಬಗೆಬಗೆಯ ಬಿಂದಿ, ಅಲಂಕಾರಿಕ ವಸ್ತುಗಳನ್ನು ಕೊಂಡು ಸಂಭ್ರಮಿಸುವುದಲ್ಲದೆ, ಮಂಡಕ್ಕಿ(ಕುರ್ಲರಿ), ಸಕ್ಕರೆ ಕಡ್ಡಿ ಮಿಠಾಯಿ, ಐಸ್ಕ್ಯಾಂಡಿಗಳನ್ನು ತೆಗೆದುಕೊಂಡು ಬಂಡೆಯ ಒಂದು ಕಡೆಗೆ ಮರದ ನೆರಳಿನ ಅಡಿಯಲ್ಲಿ ಕುಳಿತು ತಿನ್ನುವುದು ಕೂಡ ಒಂದು ರೀತಿಯ ಮಜಾ ಅನಿಸುತ್ತಿತ್ತು. ಈ ಮಜಾವನ್ನು ಅನುಭವಿಸುವುದಕ್ಕಾಗಿಯೆ ಕೆಲವರು ಬರುವುದುಂಟು.

ಶ್ರಾವಣ ಶುಕ್ರವಾರಕ್ಕೆ ದುರ್ಗಾ ದೇವಿಗೆ ಕರಿಯ ಬಳೆ (ಕರಿಯ ಕಾಜಿ) ಹೇರಳವಾಗಿ ಹರಕೆಯ ರೂಪದಲ್ಲಿ ಹಾಕುವುದುಂಟು. ಸಂಜೆಯ ಹೊತ್ತು ಹೆಣ್ಮಕ್ಕಳೆಲ್ಲ ಶಾಲೆ ಮುಗಿಸಿ ಬಳೆಗಳ ಆಸೆಗೆ ದೇವಸ್ಥಾನಕ್ಕೆ ಹೋಗಿ ಮುಜುಗರ ಪಟ್ಟುಕೊಂಡು ಬಳೆಗಾಗಿ ಕಾಯುವುದು ಇದೆ. ಅಲ್ಲಿ ಒಂದು ಕಡೆ ಹರಕೆಗೆ ಬಂದ ಬಳೆಗಳನ್ನು ರಾಶಿ ಹಾಕಿಡುತ್ತಿದ್ದರು. ದೇವಸ್ಥಾನದ ಆಡಳಿತದವರ ಅಥವಾ ಅರ್ಚಕರ ಅನುಮತಿಯ ಮೇರೆಗೆ ಹೆಣ್ಮಕ್ಕಳೆಲ್ಲ ಅವರವರ ಕೈಯಳತೆಗೆ ಸರಿಯಾದ ಬಳೆಗಳನ್ನು ಆರಿಸಿಕೊಂಡು ಕೈತುಂಬಾ ಕರಿಯ ಬಳೆಗಳನ್ನು ಹಾಕಿಕೊಂಡು ಸಂತೋಷಪಡುವುದು ಸಾಮಾನ್ಯ ಸಂಗತಿಯಲ್ಲ. ಯಾಕೆಂದರೆ ಒಂದೆಡೆ ದೇವರ ಬಳೆ ಅನ್ನುವ ಭಕ್ತಿಭಾವ ಇನ್ನೊಂದೆಡೆ ದುಡ್ಡು ಕೊಟ್ಟರೂ ಕೈ ತುಂಬಾ ಬಳೆ ಇಡುವುದಕ್ಕೆ ಸಾಧ್ಯವಾಗದ ಆಗಿನ ಬಡತನ.
ಒಮ್ಮೆ ಹೆಣ್ಮಕ್ಕಳೆಲ್ಲಾ ಹಾಗೆ ಬಳೆ ತರುವುದಕ್ಕೆ ಅಲ್ಲಿಗೆ ಹೋದಾಗ ಅಲ್ಲೇನೋ ಪರವೂರಿನಜನ ಮಹಜರು ನಡೆಸುವಂತೆ ಸುತ್ತೆಲ್ಲಾ ನಿಂತು ಏನೋ ಎಲ್ಲಾ ಮಾತಾಡಿಕೊಳ್ಳುತ್ತಿದ್ದರಂತೆ. ಆಗ ಬಳೆ ತರುವುದಕ್ಕೆ ಹೋಗಿದ್ದ ಆ ಹುಡುಗಿಯರ ಗುಂಪಿನಲ್ಲಿ ನನ್ನಕ್ಕ ಕೂಡ ಇದ್ದರು. ಅಲ್ಲಿಯ ಅರ್ಚಕರು ಅಲ್ಲಿಗೆ ಮಂಜುಳಾ (ಶಂಕರ್ನಾಗ್ ಆಗ ಅಷ್ಟು ಜನಪ್ರಿಯರಾಗಿರಲಿಲ್ಲ!) ಬರುವ ಸುದ್ದಿ ತಿಳಿಸಿದರು. ಅಕ್ಕ ವಿಷಯ ತಿಳಿದು ಮನೆಗೆ ಬಂದು, ನಾಳೆ ಕುಂಜಾರಿಗೆ ಚಿತ್ರ ನಟಿ ಮಂಜುಳಾ ಬರ್ತಾರಂತೆ ಅಂದಿದ್ದೆ. ಮನೆಯಲ್ಲಿ ಅದರ ವಿಷಯವೆ ಮಾತುಕತೆಯಾಗುತ್ತಿತ್ತು. ಸಿನಿಮಾದವರು ಸುಮ್ಮನೆ ಬರ್ತಾರೆಯೆ? ಎಲ್ಲೋ ಶೂಟಿಂಗ್ ಇರಬಹುದು ಅಂತ ಅಮ್ಮ ಊಹಿಸಿದ್ರೆ, ಹೈಸ್ಕೂಲ್ಗೆ ಹೋಗ್ತಿದ್ದ ಅಣ್ಣ, ನಾಳೆ ಶಂಕರ್ನಾಗ್ ಮಂಜುಳಾ ಕುಂಜಾರುಗಿರಿಗೆ ಶೂಟಿಂಗ್ಗೆ ಬರ್ತಾರಂತೆ ಅಂದಿದ್ದೆ ಅದು ಅಪ್ಪನ ಕಿವಿಗೆ ಬಿದ್ದು, ಅಯ್ಯೋ ಮಾರಾಯ! ಇನ್ನು ಶಾಲೆ ಬಂಕ್ ಹಾಕ್ಲಿಕ್ಕೆ ಊಂಟಾ? ಅಂದಾಗ ಅವನು ಬಾಯಿಮುಚ್ಚಿ ಕುಳಿತ. ನಮ್ಮ ಅಪ್ಪ ಆಗ ಮಧುರೈಯಲ್ಲಿದ್ದ ಹೊಟೇಲನ್ನು ಮುಚ್ಚಿ ಊರಿಗೆ ಬಂದು ಎರಡು ಮೂರು ವರ್ಷಗಳಾಗಿರಬಹುದು. ಅಣ್ಣ ಮತ್ತು ಅಕ್ಕಂದಿರ ಎಜುಕೇಶನ್ ಅಲ್ಲಿಯೆ ಆಗಿದ್ದರಿಂದ ಇಲ್ಲಿ ಕನ್ನಡ ಮಾಧ್ಯಮ ಅವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ನಮ್ಮಣ್ಣನಿಗೆ ಲಾಂಗ್ವೇಜ್ ಪ್ರಾಬ್ಲಂ ಇದ್ದುದ್ದರಿಂದ ಅವನಿಗೆ ಶಾಲೆಗೆ ಹೋಗುವುದೆಂದರೆ ಅಷ್ಟಕಷ್ಟೆ. ಅದಲ್ಲದೆ ಶಾಲೆಗೆ ನಾಲ್ಕು ಮೈಲು ಬರಿ ಗಾಲಿನಲ್ಲಿ ನಡೆದುಕೊಂಡು ಹೋಗಿಬರಬೇಕಾದ ಪರಿಸ್ಥಿತಿ. ಹೋಗಿ ಬರಬೇಕಾದ ಸಂಕಟ ಒಂದೆಡೆ; ಕನ್ನಡ ಬರುವುದಿಲ್ಲವೆಂದು ಪೆಟ್ಟು ತಿನ್ನಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಅದಕ್ಕಾಗಿ ಅವನು ಶಾಲೆಗೆ ಹೊರಟರೂ ಗುಡ್ಡದಲ್ಲೋ, ಇನ್ನೆಲ್ಲೋ ಕುಳಿತು ಸಂಜೆ ಆರು ಏಳು ಗಂಟೆಗೆಲ್ಲಾ ಮನೆಗೆ ಬರುತ್ತಿದ್ದ. ಹಾಗಾಗಿ ಅವನು ಶಾಲೆಗೆ ಹೋಗುವುದಿಲ್ಲವೆಂದರೆ ಅಪ್ಪನ ಬೈಗುಳ, ಹೊಡೆತವಿದ್ದೇ ಇರುತ್ತಿತ್ತು.
ಅವನು ಅಪ್ಪನ ಹೆದರಿಕೆಯಿಂದ ಸುಮ್ಮನಾದರೂ ಅಕ್ಕ ಸುಮ್ಮಿನಿರದೆ, ಮಂಜುಳಾ ಬರುವುದಾದರೆ ನಾವು ನೋಡಲೆಬೇಕು ಎಂದು ಹಠ ಮಾಡಿದಾಗ ಅಮ್ಮ ಗದರಿಸಿ ಸುಮ್ಮನಾಗಿಸಿದರು. ಆದರೂ ಮರುದಿನ ಆ ದಾರಿಯಿಂದ ಶಾಲೆಗೆ ಹೋದಾಗ ಅಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿರುದನ್ನು ನೋಡಿ ಹುಡುಗಿಯರೆಲ್ಲಾ ಶಾಲೆಗೆ ಬಂಕ್ ಹೊಡೆದು ಅಲ್ಲಿ ಹಾಜರ್!
ಮಂಜುಳಾರನ್ನು ನೋಡುವ ಉತ್ಸಾಹದಿಂದ ಅಲ್ಲಿ ಹೋದಾಗ ಆಕೆ ದೂರದಲ್ಲಿ ನೀಲಿ ಜರತಾರಿ ಸೀರೆಯುಟ್ಟು ವಧುವಿನಂತೆ ಅಲಂಕಾರ ಮಾಡಿಕೊಂಡು ಒಂದು ಚೇರ್ನಲ್ಲಿ ಕುಳಿತು ಮೇಕಪ್ ಸರಿ ಮಾಡುತ್ತಿದ್ದರಂತೆ. ಇನ್ನೊಂದೆಡೆ ಶಂಕರ್ನಾಗ್ಗೆ ನಿರ್ದೇಶಕರು ದೇವಸ್ಥಾನದ ಮೆಟ್ಟಿಲಿನ ಬಳಿ ನಿಂತು ಸನ್ನಿವೇಶವನ್ನು ವಿವರಿಸುತ್ತಿದ್ದರಂತೆ. ಮಂಜುಳಾರನ್ನು ಹತ್ತಿರದಿಂದ ನೋಡುವ ಆಸೆಯಿಂದ ಅಲ್ಲಿಗೆ ಹೋದರೂ ಜನ ಮುತ್ತಿಗೆ ಹಾಕಿದ್ದರಿಂದ ನೋಡಲಾಗದೆ ಬೆಟ್ಟದ ಕೆಳಗೆ ನಿಂತು, ಇಣುಕಿ ಇಣುಕಿ ಶೂಟಿಂಗ್ ನೋಡುತ್ತಾ ನಿಂತರಂತೆ.

ಎರಡು ಹಾಡಿನ ಸನ್ನಿವೇಶಗಳು ಮತ್ತು ಕೆಲವೊಂದು ದೃಶ್ಯಗಳನ್ನು ಕುಂಜಾರುಗಿರಿಯ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿತ್ತು. ಅದರಲ್ಲೂ ಚಿತ್ರದಲ್ಲಿ ಸೀತಾ ಮದುವೆಯ ಕನಸು ಕಾಣುತ್ತಾ ಇರುವಾಗ ರಾಮುವನ್ನು ರೌಡಿಗಳು ಸಾಯಿಸಿದ ಮೇಲೆ ಅವಳ ತಂದೆಯೂ ಆಘಾತದಿಂದ ಸಾಯುತ್ತಾರೆ. ಅವಳು ಮತಿಭ್ರಮಣೆಗೊಂಡು ಹಾಡುವ ಸಂದರ್ಭ `ಬಂದೇ ಬರುತ್ತಾನೆ' ಹಾಡು. ಈ ಚಿತ್ರದ ಜನಪ್ರಿಯ ಹಾಡುಗಳಲ್ಲೊಂದಾದ ಇದು ಮಂಜುಳಾರವರಿಗೆ ಹೆಸರು ತಂದುಕೊಟ್ಟ ಹಾಡು ಕೂಡ ಹೌದು.

ಬಂದೇ ಬರುತ್ತಾನೆ ರಾಮ ಬಂದೇ ಬರುತ್ತಾನೆ
ಬಂದ ಒಡನೆಯೆ ಸೀತೆಯ ಕಂಡು ರಾಣಿ ಅನುತ್ತಾನೆ...

ತಾಳಿಯ ತರುತ್ತಾನೆ ರಾಮ ಚಿನ್ನದ ಬಳೆಗಳ ತರುತ್ತಾನೆ
ಮದುವೆಯಾಗಿ ತನ್ನರಮನೆಗೆ ಬಾರೆ ಅನುತ್ತಾನೆ...

ಹಾಡು ಹೇಳುತಾನೆ ರಾಮ ಪ್ರೀತಿಯ ಮಾತನಾಡುತಾನೆ
ಯಾರು ಇಲ್ಲ, ಬಾ ಚಿನ್ನ ಎಂದು ಸವಿ ಮುತ್ತನು ಕೊಡುತ್ತಾನೆ...

ಅರ್ಧದಷ್ಟು ಈ ಹಾಡಿನ ಚಿತ್ರೀಕರಣವಾಗಿರುವುದು ಕುಂಜಾರುಗಿರಿ ದೇವಸ್ಥಾನದ ಮುಂಭಾಗದಲ್ಲಿ. ಇದೇ ಚಿತ್ರದ ಇನ್ನೊಂದು ಜನಪ್ರಿಯ ಹಾಡು `ಹೂವಿನ ಸೊಗಸು ನನಗಾಗಿ ಆ ಹೂವೇ ನಿನ್ನ ಪೂಜೆಗಾಗಿ' ಹಾಡಿನ ಕೊನೆಯ ಸಾಲುಗಳು,

ಹೂವಿನ ಸೊಗಸು ನನಗಾಗಿ, ಆ ಹೂವೇ ನಿನ್ನ ಪೂಜೆಗಾಗಿ
ಹೂವಿನ ಸೊಗಸು ನಿನಗಾಗಿ, ಈ ಹೂವಿನ ಮೊಗವು ನನಗಾಗಿ

ಸನಿಹಕೆ ಬರುತಿರೆ, ಬಯಕೆಯು ಕುಣಿದಿರೆ
ಚೆಲುವನೆ ನಾ ತಾಳೆನು
ಬಳಸಲು ತೋಳಲಿ, ಕೆಣಕಲು ಮಾತಲಿ
ಚೆಲುವನೆ ನಾ ಸೋತೆನು

ಈ ಮನಸು ಮನಸು ಬೆರೆತು ಹೋದ ಮೇಲೆ
ನಾಚಿಕೆ ಮಾತೇಕೆ ಹೇಳೆ?

ಮಂಜುಳಾ ಮತ್ತು ಶಂಕರ್ನಾಗ್ರವರ ಈ ಡ್ಯೂಯೆಟ್ ಹಾಡನ್ನು ಮರೆಯಲು ಸಾಧ್ಯವೆ? ಚೆಲುವನ ಪ್ರೀತಿಗೆ ಕರಗುವ ರಾಗರಂಜಿತ ಕದಪುಗಳ ಹುಡುಗಿಯ ಅಂತರಂಗದ ಸವಿ ಮಾತುಗಳು ಹಾಡಾಗಿ ಇಲ್ಲಿ ಹೊರ ಹೊಮ್ಮಿದೆ. ಹಿನ್ನಲೆಯ ಹಸಿರು ಗಿರಿ, ಗಿರಿಯತ್ತ ಚಾಚಿದ ಮೆಟ್ಟಿಲುಗಳು, ಬಂಡೆಯ ಸಾನಿಧ್ಯದ ಸೊಬಗು ಹಾಡಿಗೆ ಮೆರಗು ನೀಡಿರುವುದರಲ್ಲಿ ಸಂದೇಹವಿಲ್ಲ.

ವಿ ಸೋಮಶೇಖರ್ ನಿರ್ದೇಶನದ ಈ ಚಿತ್ರದ ಇನ್ನೊಂದು ಹಾಡು `ಈ ರೂಪವೇ... ನನ್ನಿ ಬಾಳಿನ ನಂದಾದೀಪವು, ಇದು ನೂರಾರು ಜನುಮದ ಅನುಬಂಧವು ತಂದ ಆನಂದವು' ಸನ್ನಿವೇಶದಲ್ಲಿ ರಾಮು (ಶಂಕರ್ನಾಗ್) ಸತ್ತ ಆನಂತರ ಅವನ ಮೆದುಳನ್ನು ಸೀತಾ(ಮಂಜುಳಾ)ಳಿಗೆ ಬದಲಾಯಿಸಿ ಆತನ ನೆನಪುಗಳು ಸೀತಾಳಲ್ಲಿ ಜಾಗೃತವಾಗಿ ಹಿಂದೆ ತಾನು ಸೀತಾಳನ್ನು ದೇವಸ್ಥಾನದಲ್ಲಿ ಭೇಟಿಯಾದ ಸಂದರ್ಭವನ್ನು ನೆನಪಿಸುತ್ತಾ ಸಾಗುವ ಹಿನ್ನಲೆಯ ಹಾಡು ಇದು.

ಬ್ಯಾಂಕ್ ಉದ್ಯೋಗಿಯಾಗಿದ ಶಂಕರ್ ನಾಗ್ ಗೆ ರಂಗಭೂಮಿಯಲ್ಲಿದ್ದಷ್ಟು ಆಸಕ್ತಿ ಸಿನಿಮಾಗಳಲ್ಲಿ ಇರಲಿಲ್ಲ. ಅದರಲ್ಲೂ ಕಮರ್ಷಿಯಲ್ ಸಿನಿಮಾಗಳೆಂದರೆ ನಿರಾಕರಿಸುತ್ತಿದ್ದುದೇ ಹೆಚ್ಚು. ಹಾಗೆಯೆ ಈ ಚಿತ್ರ ಕೂಡ ನಾಯಕಿ ಪ್ರಧಾನವಾಗಿದ್ದರಿಂದ ಚಿತ್ರವನ್ನು ನಿರಾಕರಿಸಿದ್ದರಂತೆ. ಕೊನೆಗೆ ನಿರ್ಮಾಪಕ ಅಬ್ಬಯ್ಯ ನಾಯ್ಡುರವರ ಒತ್ತಾಯದ ಮೇರೆಗೆ ಅಭಿನಯಿಸಿದ್ದರಂತೆ. ಈ ಚಿತ್ರದಲ್ಲಿ ಅವರ ಪಾತ್ರವನ್ನು ಮರೆಯುವಂತಿಲ್ಲ. ಮೆದುಳು ಬದಲಾವಣೆಯಿಂದ ಸತ್ತ ವ್ಯಕ್ತಿಯಲ್ಲಿರುವ ರಹಸ್ಯವನ್ನು ತಿಳಿದುಕೊಂಡು ರೌಡಿಗಳನ್ನು ಸೆದೆಬಡಿಯುವ ರಿವೇಂಜ್ ಮಾದರಿಯ ಚಿತ್ರವಿದು. ಮಂಜುಳಾ ತನ್ನ ಪ್ರಿಯಕರ ಸತ್ತ ಮೇಲೆ ನೀಡಿದ ಮತಿಭ್ರಮಣೆಯ ಸನ್ನಿವೇಶವಂತೂ ಮರೆಯಲು ಅಸಾಧ್ಯ. ಇಂತಹ ನೆನಪುಗಳನ್ನು ಮರೆಯುವಂತೆ ಇಲ್ಲ. ಈ ಚಿತ್ರ 1979 ರಲ್ಲಿ ಬಿಡುಗಡೆ ಕಂಡು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ.
ಮತ್ತೆ ಮುಂದಿನ ಕಂತಿನಲ್ಲಿ ಇನ್ನಷ್ಟು!

ಚಿತ್ರ ಕೃಪೆ: ಈ ಕನಸು. ಕಾಂ

No comments: