Tuesday, December 28, 2010

ಮುಗಿಲತ್ತ ಹಾರುವ ‘ಕ್ರೌಂಚ ಪಕ್ಷಿಗಳು’


ಕ್ರೌಂಚ ಪಕ್ಷಿಗಳು - ಒಂದು ಸತ್ತು, ಇನ್ನೊಂದು ಬದುಕಿರದಿದ್ದರೆ ರಾಮಾಯಣವೇ ಆಗುತ್ತಿರಲಿಲ್ಲವೇನೋ? ಹೌದಲ್ಲ, ವಾಲ್ಮೀಕಿಗೆ ಪರಿತಾಪ ಉಂಟಾದದ್ದೇ ಒಂದು ಹಕ್ಕಿಯ ಸಾವಿನಿಂದ ಮತ್ತು ಇನ್ನೊಂದರ ಒದ್ದಾಟದಿಂದ. ಇದು ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಕಥಾಸಂಕಲದಿಂದ. ಕ್ರೌಂಚ ಪಕ್ಷಿಗಳು ಎಂಬುದು ಈ ಸಂಕಲನದ ಒಂದು ಕಥೆಯ ತಲೆಬರಹ ಮಾತ್ರವಲ್ಲ ಅದು ಈ ಕಥನ ಕ್ರಮದ ಒಂದು ಆದಿ ಪ್ರತಿಮೆ - ಇದು ಬೆನ್ನುಡಿಯ ಬರಹ.

ವೈದೇಹಿಯವರ ಕಥೆಗಳನ್ನು ಓದುವಾಗ ಏನೋ ಒಂದು ಆತ್ಮೀಯತೆ. ಇಲ್ಲಿಯ ಪಾತ್ರಗಳೆಲ್ಲಾ ನಮ್ಮ ನಡುವೆ ಇದ್ದು, ಮುಗ್ಧತೆಯಿಂದ ಮುಕ್ತವಾಗಿ ಬೆರೆಯುವಂತಹ ಗುಣಗಳಿರುವವುಗಳು ಅನಿಸುತ್ತದೆ. ಈ ಪಾತ್ರಗಳನ್ನು ಬೆಳೆಸುತ್ತಾ ಬೆಳೆಸುತ್ತಾ ಲೇಖಕಿ ಬಹಳಷ್ಟು ಭಾವುಕರಾಗಿ ಬಿಡುತ್ತಾರೆ. ಒಂದೊಂದು ಪಾತ್ರ ಚಿತ್ರಣವೂ ಧೈರ್ಯದಿಂದ ತಮ್ಮ ಇಂಗಿತವನ್ನು ತೆರೆದಿಡುತ್ತಾ ಮುಗುಳ್ನಗುತ್ತಿರುವಂತೆ ಕಾಣುತ್ತವೆ. ಹಾಗೆಯೆ ಕೆಲವೊಂದು ನಿಗೂಢತೆಗಳನ್ನು ಪಾತ್ರಗಳು ಬಿಟ್ಟುಕೊಡುವುದೇ ಇಲ್ಲ. ಇದು ಸ್ವತ: ಲೇಖಕಿಗೆ ಆ ಪಾತ್ರಗಳ ಬಗೆಯಿರುವ ಪ್ರೀತಿಯನ್ನು ತೋರಿಸುತ್ತದೆ."

‘ಕ್ರೌಂಚ ಪಕ್ಷಿಗಳು’ ಕಥಾಸಂಕಲನದ ಹತ್ತು ಕಥೆಗಳು ವಿಭಿನ್ನವಾದರೂ ಎಲ್ಲಾ ಕಥೆಗಳಲ್ಲಿಯೂ ಒಂದು ಸಾಮ್ಯತೆಯಿದೆ. ಅದು ಮುಗ್ಧ ಮಹಿಳೆಯರ ಅಂತರಂಗದ ತಲ್ಲಣಗಳು. ಕಥೆಗಳೆಲ್ಲಾ ಮಹಿಳಾ ಕೇಂದ್ರಿಕೃತವೆನಿಸಿದರೂ ಆ ಪಾತ್ರಗಳು ಇರುವುದು ಹಾಗೆ; ಇದ್ದು ಬಿಡಲಿ. ನಿಮಗೇನು? ಅನ್ನುವಷ್ಟು ಸ್ಪಷ್ಟ ನಿಲುವುಗಳಿವೆ ಅವುಗಳಲ್ಲಿ. ‘ದಾಳಿ’ ಕಥೆಯ ಅವಮಾನಿತಳಾದರೂ ಮೆಲು ನಗುವ ಯುವತಿ; ‘ನಟಿ’ಯ ರತ್ನೆ; ‘ಸಬಿತಾ’ ಕಥೆಯ ಸಬಿತಾ; ‘ಮಾತು ಸೋತ ಕ್ಷಣ’ದ ವಯಸ್ಸಾದ ವ್ಯಕ್ತಿ; ‘ಮನೆಯವರೆಗಿನ ಹಾದಿ’ಯ ರಾಮಣ್ಣ; ‘ಪ್ರಶ್ನೆ’ಯ ಭುವಿ; ‘ಒಗಟು’ ಕಥೆಯ ಶುಭಾಂಟಿ; ‘ಅವರವರ ಭಾವಕ್ಕೆ’ ಕಥೆಯ ಸಮಿತಾ; ‘ತೆರೆದ ಪುಟಗಳು’ ಕಥೆಯ ರಾಜತ್ತೆ; ‘ಕ್ರೌಂಚ ಪಕ್ಷಿಗಳು’ ಕಥೆಯ ಲಕ್ಷ್ಮಮ್ಮ... ಎಲ್ಲರೂ ತಾವು ಇದ್ದ ಹಾಗೆ ಇದ್ದು ಬಿಡುವವರು. ಹಾಗಂದ್ರೆ ಹಾಗೆ; ಹೀಗಂದ್ರೆ ಹೀಗೆ, ನಿಮಗೇನು? ಅನ್ನುವ ಹಾಗೆ. ಇಲ್ಲಿಯ ಇಷ್ಟು ಕಥೆಗಳು ಬಹಳ ಆತ್ಮೀಯವಾಗಿ ಓದಿಸಿಕೊಂಡು ಹೋಗುತ್ತವೆ.

ಒಬ್ಬ ಸಾಮಾನ್ಯನಿಗೆ ತಾಳ್ಮೆ ಎಷ್ಟಿರಬಹುದೆನ್ನುವುದಕ್ಕೆ ‘ದಾಳಿ’ ಕಥೆಯ ಮುಗುಳ್ನಗುವಿನ ಹುಡುಗಿಯೇ ಸಾಕ್ಷಿ. ತುಂಬಿ ತುಳುಕುವ ಬಸ್ಸಿನಲ್ಲಿ ‘ಸೀಟ್ ಇಲ್ಲವಲ್ಲ’ ಅಂತ ಆ ಹುಡುಗಿ ಹೇಳಿದ್ದೆ ಕಂಡಕ್ಟರ್ ಅವಳನ್ನು ಹೀನಾಯಮಾನವಾಗಿ ಬೈಯುತ್ತಾನೆ. ಅವನ ಅತಿರೇಕದ ಮಾತುಗಳನ್ನು ಕೇಳಿದರೆ ಉಳಿದವರು ಸಿಟ್ಟಾದರೂ ಅವಳದ್ದು ಮಾತ್ರ ಅದೇ ಮುಗುಳ್ನಗು. ಕೊನೆಗೂ ಅವಳು ನಿಗೂಢವಾಗಿಯೇ ಇರುತ್ತಾಳೆ. ಇದೇ ರೀತಿ ‘ಒಗಟು’ ಕಥೆಯ ಶುಭಾಂಟಿ. ಅಪರೂಪಕ್ಕೆ ಊರಿಗೆ ಬರುವ ಶುಭಾಂಟಿ ಒಂದು ಒಗಟಾಗಿ ಮಧ್ಯಾಹ್ನದ ಹೊತ್ತು ಎಲ್ಲೋ ಒಬ್ಬಳೇ ಟ್ಯಾಕ್ಸಿ ಮಾಡಿಕೊಂಡು ಹೋಗಿ ಬರುತ್ತಾಳೆ. ಅವಳು ಹೋದದ್ದಾದರು ಎಲ್ಲಿಗೆ? ಏನು ಮಾಡಿದಳು? ಇಷ್ಟು ದಿನ ಇಲ್ಲದ ಅವಳ ಈ ವರ್ತನೆಗೆ ಕಾರಣವೇನು? ಎಲ್ಲವೂ ನಿಗೂಢ! ಇಲ್ಲಿ ಅಷ್ಟೇ ಮುಖ್ಯವಾಗಿ ಕಾಣುವುದು ಒಬ್ಬ ಹೆಣ್ಣಿನ ಸ್ವಾತಂತ್ರ್ಯದ ಪ್ರಶ್ನೆ. ಅವಳ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಅಥವಾ ಸಂಶಯಿಸುವ ಹಕ್ಕು ಯಾರಿಗೂ ಇಲ್ಲವೆನ್ನುವುದನ್ನು ಪರೋಕ್ಷವಾಗಿ ಸಾರುವ ಕಥೆಯಿದು.

‘ನಟಿ’ ಕಥೆಯ ರತ್ನೆ ಮತ್ತು ‘ಸಬಿತಾ’ ಕಥೆಯ ಸಬಿತಾ ಇಬ್ಬರೂ ಲವಲವಿಕೆಯ ಜೀವಿಗಳು. ರತ್ನೆ ಬದುಕಿನಲ್ಲಿ ಸೋತು ಗೆಲುವಿನ ದಾರಿ ಕಂಡುಕೊಂಡವಳು. ಇನ್ನೊಬ್ಬರನ್ನು ನಗಿಸುತ್ತಾ ದಿನ ಕಳೆಯುವವಳು. ಸಬಿತಾ ಬದುಕಿಗಾಗಿ ಹೋರಾಡುತ್ತಾ ದುರ್ಗಮಗಳನ್ನು ದೂರುವವಳು. ನಟಿ ಕಥೆಯ ರತ್ನೆ ದುರಂತ ನಾಯಕಿಯಾದಳೆ? ಸಬಿತಾ ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿರುವಳೆ? ಪ್ರಶ್ನೆಗಳು ಊಹನೆಗೆ ಹಚ್ಚುತ್ತವೆ. ‘ಮಾತು ಸೋತ ಕ್ಷಣ’ದಲ್ಲಿ ಮೌನದೊಳಡಗಿದ ಮೌನದ ನಿಗೂಢತೆಯೆ, ಏನೆನ್ನುವುದು ಕೊನೆಗೂ ತಿಳಿಯುವುದಿಲ್ಲ. ಇದು ಕೂಡ ಓದುಗರಿಗೆ ಬಿಟ್ಟ ವಿಚಾರವಾಗಿಯೆ ಉಳಿಯುತ್ತದೆ.

‘ಮನೆಯವರೆಗಿನ ಹಾದಿ’ ಕಥೆಯಲ್ಲಿ ಮನುಷ್ಯ ತನ್ನ ಸ್ವಾರ್ಥವಿಲ್ಲದೆ ಏನನ್ನೂ ಮಾಡಲಾರನ್ನೆನ್ನುವುದು ಸಾಬೀತಾಗುತ್ತದೆ. ‘ಪ್ರಶ್ನೆ’ ಇಬ್ಬರು ಧೈರ್ಯದ ಹುಡುಗಿಯರ ವಯೋಸಹಜವಾದ ಛಾಲೆಂಜ್ ಒಂದು ಪ್ರಶ್ನೆಯಾಗಿಯೇ ನಿಲ್ಲುವ ಕಥೆ. ಭುವಿ ಭಾಷಣಕಾರನನ್ನು ಮೆಚ್ಚಿ ಅವನ ಜೊತೆಗೆ ಒಂದು ರಾತ್ರಿ ಕಳೆಯುವ ಇಚ್ಛೆಯಿರುವವಳು. ಕೊನೆಗೂ ಅದೇ ಪ್ರಶ್ನೆಯನ್ನು ಬರೆದು ಅವನಿಗೆ ಕಳುಹಿದರೆ ಅವನ ಆಹ್ವಾನವನ್ನು ತಿರಸ್ಕರಿಸುತ್ತಾಳೆ. ಆದರೆ ಅವಳ ಗೆಳತಿ ಅನು ಧೈರ್ಯದಿಂದ ಅವನ ಜೊತೆಗೆ ಹೊರಡುತ್ತಾಳೆ. ಅವಳು ಅತಿಥಿಯ ಜೊತೆಗೆ ಹೋದದ್ದೆಲ್ಲಿಗೆ? ಮನೆಗೆ? ರೂಮಿಗೆ? ಎಲ್ಲಿಗೆ ಬಿಡಿಸಿ ಕೇಳುವ ಧೈರ್ಯವಾಗದೆ ಮೆಲ್ಲನೆ ಮೆಟ್ಟಿಲಿಳಿದಳು ಭುವಿ.

ಬಾಡಿಗೆಗೆ ಕೊಡುವ ಮನೆಯಲ್ಲಿ ದೇವರ ಕೋಣೆ ಬೇಕೆ, ಬೇಡವೆ? ಅನ್ನುವ ನಿರ್ಧಾರದೊಂದಿಗೆ ಆರಂಭವಾಗುವ ಕಥೆ ಅಲ್ಲಿಗೆ ಬರುವ ಬಾಡಿಗೆದಾರರಿಗೆ ದೇವರ ಕೋಣೆಯ ಅವಶ್ಯಕತೆಯೇನೆನ್ನುವುದನ್ನು ತಿಳಿಸುತ್ತದೆ, ಕಥೆ ‘ಅವರವರ ಭಾವಕ್ಕೆ’. ಭಾವನಾತ್ಮಕವಾಗಿ ಬಿಡಿಸಿಕೊಳ್ಳುವ ಕಥೆ ಸಮಿತಾಳ ಕೊರಗಿನಿಂದ ಮುಗಿಯುತ್ತದೆ. ರಾಜತ್ತೆಯಂತಹ ಧೈರ್ಯದ ಹೆಂಗಸಿನ ಸುತ್ತಾ ಹೆಣೆದ ಕಥೆ ‘ತೆರೆಯದ ಪುಟಗಳು’. ಕೆಲವೊಂದು ವಿಷಯಗಳನ್ನು ಇನ್ನೊಬ್ಬನ ಜೊತೆಗೆ ಹಂಚಿಕೊಳ್ಳಲಾಗುವುದಿಲ್ಲ. ಹಾಗೆಯೇ ರಾಜತ್ತೆಯ ಕಥೆ.

ಈ ಸಂಕಲನದ ಕೊನೆಯ ಕಥೆ ‘ಕ್ರೌಂಚ ಪಕ್ಷಿಗಳು’, ಒಂದು ಸತ್ತು ಇನ್ನೊಂದು ಬದುಕಿದ ಉಳಿದ ಪಕ್ಷಿಯ ಕಥೆಯಂತೆಯೂ ಕಾಣುತ್ತದೆ. ಸತ್ತ ಪಕ್ಷಿ ಯಾರು? ಬದುಕಿದ ಪಕ್ಷಿಯ ಒದ್ದಾಟವೇನೆನ್ನುವುದನ್ನು ನಯವಾಗಿ ಈ ಕಥೆ ಲಕ್ಷ್ಮಮ್ಮನ ಪಾತ್ರದ ಮೂಲಕ ತೆರೆದಿಡುತ್ತದೆ. ಮನುಷ್ಯ ಮನುಷ್ಯನಾಗಿರೋದು ಸಾಮಾನ್ಯ ಸ್ಥಿತಿಯಲ್ಲಿ ಮಾತ್ರ. ಸಿದ್ಧಾಂತ, ತತ್ವ, ರೀತಿ, ನೀತಿಗಳ ಬುಡ ತುಸುವೇ ಅಲ್ಲಾಡಿದರೂ ಮೊದಲು ಬಲಿಯಾಗೋದು ಮಹಿಳೆ. ಅವಳ ದೇಹ, ಅವಳ ಮನಸ್ಸು ಮತ್ತು ಅವಳ ಬದುಕು. ಹಾಗೆ ಬಲಿಯಾದ ಪಕ್ಷಿ ಲಕ್ಷ್ಮಮ್ಮ. ಆಶ್ನಾರ್ಣ ಭಟ್ಟರ ವ್ಯಕ್ತಿತ್ವವನ್ನು ತೆರೆದಿಡುವ ಲಕ್ಷ್ಮಮ್ಮ ಹೇಗೆ ಬಲಿಯಾದರೆನ್ನುವುದನ್ನು ತಿಳಿಸುತ್ತಾರೆ.

ಇಲ್ಲಿ ಬಳಸಿಕೊಂಡಿರುವ ಭಾಷೆಯಷ್ಟೆ ಕಥೆಯ ವಸ್ತುಗಳು ವಿಭಿನ್ನ ಮತ್ತು ಚಿಂತನೆಗೆ ಹಚ್ಚುವಂತಹವುಗಳು. ವೈದೇಹಿಯವರ ಕಥೆಗಳನ್ನು ಓದಿಕೊಂಡಷ್ಟು ಹೊಸ ಹೊಸ ವಿಚಾರಗಳು ನಮ್ಮನ್ನು ಕಾಡುತ್ತಿರುತ್ತವೆ. ಹಾಗಾಗಿ ‘ಕ್ರೌಂಚ ಪಕ್ಷಿಗಳು’ ಒಂದು ದೊಡ್ಡ ಓದುಗವರ್ಗವನ್ನೇ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

No comments: