Thursday, March 15, 2012

ಹಕ್ಕಿ ಚೆಲ್ಲಿದ ಬೀಜದ ಮೊಳಕೆ


`ಹಕ್ಕಿ ಚೆಲ್ಲಿದ ಬೀಜ' ಶೀರ್ಷಿಕೆಯೆ ಅಮೂರ್ತತೆಯನ್ನು ಸೂಚಿಸುವ ಸಿ ಎನ್ ರಾಮಚಂದ್ರ ಅವರ ಮೂರನೆಯ ಕಥಾಸಂಕಲನ. ಹಕ್ಕಿ ಎಲ್ಲಿ ಬೇಕಾದರೂ ಬೀಜವನ್ನು ಚೆಲ್ಲಬಹುದು. ಇದು ಅಮೂರ್ತತೆ. ಆದರೆ ಆ ಬೀಜ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದು ಅದು ಟಿಸಿಲೊಡೆಯುವಲ್ಲಿಂದ. ಆ ಪ್ರಕ್ರಿಯೆ ನೆಲದ ಮೇಲೆಯೇ ಆಗಬೇಕೆಂದೇನಿಲ್ಲ. ಮರದ ಮೇಲೂ ಬೀಜ ಮೊಳಕೆಯೊಡೆಯಬಹುದು. ಇದು ಅದ್ಭುತವೂ ಅಲ್ಲ, ಅಗೋಚರವೂ ಅಲ್ಲ. ಎಲ್ಲಿ ಮೊಳಕೆಯೊಡೆಯುವುದಕ್ಕೆ ಅವಕಾಶವಿದೆಯೋ ಅಲ್ಲಿಯೇ ಗಿಡವಾಗಬಹುದು. ಆದರೆ ಅದರ ಮೂಲವನ್ನು ಶೋಧಿಸುವುದು ಬಹಳ ಕಷ್ಟ. ಅದು ಯಾವ ಮರದ ಬೀಜ? ಆ ಬೀಜ ಅಲ್ಲಿಯೇ ಗಿಡವಾಗಿ ಬೆಳೆಯುವುದೆ? ಆ ಬೀಜಕ್ಕೆ ಆಸರೆಯಾಗುವ ಮರ ಕೊನೆಯವರೆಗೂ ಗಿಡವನ್ನು ತಾಳಿಕೊಳ್ಳುವುದೆ? ಇದು ಅಸ್ಪಷ್ಟ. ಹಾಗೆಯೇ ಇಲ್ಲಿಯ ಕಥೆಗಳ ಸೆಕ್ಯೂಲರಿಸಂ. ಹುಟ್ಟುವುದು ಎಲ್ಲಿಯೋ ಬೆಳೆಯುವುದು ಇನ್ನೆಲ್ಲಿಯೋ? ಆದರೆ ಅವೆರಡರ ನಡುವೆ ಹುಟ್ಟಿಕೊಳ್ಳುವ ಕುತೂಹಲವೇ ಹುಡುಕಾಟವಾಗಿ ಇಲ್ಲಿಯ ಕಥೆಗಳಲ್ಲಿ ಗೋಚರಿಸುತ್ತದೆ. ಅದು ಕಳೆದುಕೊಂಡ ಸಂಬಂಧಗಳ ಹುಡುಕಾಟವಿರಬಹುದು, ಬಾಲ್ಯದ ಹುಡುಕಾಟವಿರಬಹುದು. ಒಟ್ಟು ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೋರಾಟ ಸಾಧಾರಣ ಎಲ್ಲಾ ಕಥೆಗಳಲ್ಲಿಯು ಕಾಣಸಿಗುತ್ತದೆ.
ಕಥೆಗಳನ್ನು ಓದುತ್ತಲೇ ಎಲ್ಲೋ ಕೈ ಬಿಟ್ಟು ಹೋಗುವಂತಹ ತವಕಗಳು ಇಲ್ಲಿಯ ಪಾತ್ರಗಳಲ್ಲಿ ಕಾಣುತ್ತಾವಾದರೂ, ಪಾತ್ರಗಳಲ್ಲಿ ಜಾತೀಯತೆಯನ್ನು ಗುರುತಿಸಿಕೊಂಡು ಜಾತ್ಯಾತೀತವನ್ನು ಮೀರುವ ಪ್ರಯತ್ನ ಇಲ್ಲಿಯದಾಗಿದೆ. ಹಾಗಾಗಿ ರಾಬರ್ಟ್ ಪದ್ಮರಾಜನಾಗಲಿ, ಭಾರತಿಪುತ್ರನ್, ಇಳಾಪೈ ಪಾತ್ರಗಳಿಗೆಲ್ಲಾ ಜಾತೀಯತೆ ಮುಖ್ಯವೆನಿಸುವುದಿಲ್ಲ. ಇವು ಬದುಕನ್ನು ಕಟ್ಟಿಕೊಳ್ಳುವಲ್ಲಿ, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ತುಡಿತಕ್ಕೊಳಗಾಗುತ್ತಲೇ ಇರುತ್ತವೆ.
`ಹಕ್ಕಿ ಚೆಲ್ಲಿದ ಬೀಜ', `ಧೀಯೋಯನ' ಕಥೆಗಳನ್ನು ಓದುವಾಗ ಜನಪ್ರಿಯ ಶೈಲಿಯ ಒಂದು ಅಂಚಿನಲ್ಲಿ ನಿರೂಪಣೆ ಸಾಗುತ್ತದಾದರೂ, ಅವಕ್ಕಿಂತಲೂ ಮಿಗಿಲಾಗಿ ಅವುಗಳಲ್ಲಿ `ಸಂಥಿಂಗ್' ಇದೆ ಅನಿಸದಿರದು. ಧೀಯೋಯೊನ ಕಥೆಯ ಹುಡುಕಾಟದಲ್ಲಿ ಕೊನೆಗೆ ಸಿಗುವುದು ನಿರಾಶೆಯಾದರೂ ಆ ನಿರಾಶೆಯೆನ್ನುವುದು ಸಾವಿನವರೆಗೂ ಕಾಡುವ ಮತ್ತು ಅನ್ಯ ದಾರಿಯಲ್ಲಿ ಸಾಗಿದ ಪರಿಗೆ ಶಾಪವೇನೋ ಅನ್ನುವ ರೀತಿಯಲ್ಲಿ ಭಾರತಿಯನ್ನು ಅಂತರ್ಮುಖಿಯನ್ನಾಗಿಸುವ ಹಾಗಿದೆ. ಅವಳ ಪ್ರೀತಿಯ ಸಾಕ್ಷ್ಯವೊಂದು ಶೋಚನೀಯ ಸ್ಥಿತಿಯಲ್ಲಿರುವುದು ಎಂತಹ ಓದುಗನ ಮನಸ್ಸನ್ನಾದರೂ ಸ್ವಲ್ಪ ಮಟ್ಟಿಗೆ ಅಲ್ಲಾಡಿಸಿ ಬಿಡುತ್ತದೆ. ಹಾಗೆಯೇ ಈ ಕಥೆ ಗಂಭೀರವಾಗಿ ಓದಿಸಿಕೊಳ್ಳುತ್ತಲೇ ತಟ್ಟನೆ ಸಿನಿಮೀಯತೆಗೆ ವಾಲುವುದರಿಂದ ಕೊಂಚ ಇತರೆ ಕಥೆಗಳ ಜೊತೆಗೆ ತುಲನಾತ್ಮಕವಾಗಿ ನೋಡುವುದಕ್ಕೆ ಅಸಾಧ್ಯವೆನಿಸುತ್ತದೆ. ಈ ಕಥೆಯಲ್ಲಿ ಭಾರತಿ ಅವಳ ಕ್ಲಾಸ್‌ಮೇಟ್ ಉನ್ನತ ಸ್ಥಾನದಲ್ಲಿರುವ ಶಂಕರನ ಕ್ವಾರ್ಟಸ್‌ಗೆ ಅವನ ಅನುಮತಿಯಿಲ್ಲದೆ ಬಂದು ಅವನನ್ನೇ ಅತಿಥಿಯ ರೂಪದಲ್ಲಿ ಕ್ಯಾರ್ ತೆಗೆದುಕೊಳ್ಳುವುದು. ಇದು ತೀರ ಸಿನಿಮೀಯವಾಗಿ ತೋರುತ್ತದೆ. ಆದರೂ ಇದೊಂದು ನೀಳ್ಗತೆಯಾಗಿ ಮತ್ತು ಕಥನ ಶೈಲಿಯಲ್ಲಿ ವಿಭಿನ್ನತೆಯಿರುವುದರಿಂದ ಕಥೆಯ ಉತ್ತರಾರ್ಧ ಪರಿಣಾಮಕಾರಿಯಾಗಿ ಮೂಡಿಬಂದಿರುವುದರಿಂದ ಮಗುವಿನಂತಹ ಮಗನ ಪಾತ್ರ ಓದುಗನ ಮನದಲ್ಲಿಯೇ ಉಳಿದು ಬಿಡುತ್ತದೆ.
ಸಿ ಎನ್ ರಾಮಚಂದ್ರ ಅವರ ಕಥೆಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ ಕಥೆಯ ಬೆಳೆಯುತ್ತಾ ಹೋದ ಹಾಗೆ ಕಥೆಯಲ್ಲಿ ಯಾವುದು ಮುಖ್ಯ ಅನಿಸುವುದಿಲ್ಲವೋ, ಅದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿ `ನಿಕ್ಷೇಪ' ಕಥೆ ತುಸು ವಿಭಿನ್ನವಾಗಿ ನಿಲ್ಲುತ್ತದೆ. ಇದಕ್ಕೆ ಆ ಕಥೆ ನಡೆಯುವ ಕಾಲಘಟ್ಟವೂ ಕಾರಣವಾಗಿರಬಹುದು. ಇಲ್ಲಿಯೂ ಮನುಷ್ಯ ಸದಾ ತನ್ನ ನಿಕ್ಷೇಪವನ್ನು ಕಂಡುಕೊಳ್ಳುವಲ್ಲಿ ಮಾತ್ರ ತೊಡಗಿರುತ್ತಾನೆಯೆನ್ನುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಗೊಡ್ಡಾರ್ಡ್‌ನ ಹೆಸರು ಪ್ರತೀ ವಾಕ್ಯದಲ್ಲಿಯೂ ಪುನರಾವರ್ತೆನೆಯಾಗಿ ಇಂಗ್ಲೀಷ್ ಕಥಾ ಶೈಲಿಯನ್ನು ನೆನಪಿಸುತ್ತದೆ.
ಅತಂತ್ರವಾಗಿ ಬಿಡುವ ಮನುಷ್ಯನೊಬ್ಬನ ಚಿತ್ರಣವನ್ನ ನೀಡುವ `ಸಮಾಧಿಯ ಮೇಲೊಂದು ಹೂವು' ಸಂಬಂಧವಿರದ ವ್ಯಕ್ತಿಯೊಬ್ಬನಿಗೆ ಜವಾಬ್ದಾರಿಯನ್ನು ಹೊರುವ ಕಾಯಕದ ನಡುವೆ ಎಲ್ಲವನ್ನೂ ಕಳೆದುಕೊಳ್ಳುವ ನಿರಾಳತೆಯಾದರೆ, `ಮೊತ್ತ' ಲಘು ದಾಟಿಯಲ್ಲಿ ಸಾಗುವ ಗಂಭೀರ ವಾಸ್ತವದ ಚಿತ್ರಣವಾಗಿದೆ. ರಾಮಚಂದ್ರ ಅವರ ಕಥೆಗಳ್ಳಲ್ಲಿಯ ಪಾತ್ರಗಳೆಲ್ಲವೂ ವಾಸ್ತವದಲ್ಲಿ ಕಾಣಸಿಗುವ ಪಾತ್ರಗಳಂತೆ ಕಂಡರೂ ಇಲ್ಲಿ ಕಥೆಗಾರ ಆ ಪಾತ್ರಗಳ ಒಳಕ್ಕಿಳಿದು ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸುವಲ್ಲಿ ಸಫಲತೆಯನ್ನು ಸಾಧಿಸಿದ್ದಾರೆ. ಹಾಗಾಗಿಯೇ `ಹುತ್ತಗಟ್ಟಿತು ಚಿತ್ತ'ದ ನಾಗವೇಣಿಯಾಗಲಿ, `ಇಳೆ ನಿಮ್ಮ ಧ್ಯಾನ' ಕಥೆಯ ಇಳಾಭಟ್ ಪಾತ್ರವಾಗಲಿ ಮನೋಜ್ಞವಾಗಿ ಮೂಡಿ ಬರುವುದಕ್ಕೆ ಸಾಧ್ಯವಾಗಿದೆ. ಹೆಣ್ಣಿನ ಒಳ ಮನಸ್ಸು, ಆಕೆಯ ಅಸಹಾಯಕತೆ, ಹತಾಶೆ, ಸೇಡು, ಸೆಡವುಗಳನ್ನ ಬಹಳ ಮಾರ್ಮಿಕವಾಗಿ ಚಿತ್ರಿಸಿರುವುದರಿಂದ ಕಥೆಗಳು ಮೆಲುಕು ಹಾಕುವಂತಿದೆ.
ಕೆಲವೊಮ್ಮೆ ಸಿನಿಮಾಗಳಲ್ಲಿ ಹಾಡುಗಳು ಕಥೆಯ ಬೆಳವಣಿಗೆಗೆ ಪೂರಕವಾದಂತೆ ಈ ಸಂಕಲನದ ಕೆಲವು ಕಥೆಗಳಲ್ಲಿ ಬಳಸಿದ ಉಪಮೆಗಳು ಕಥೆಯ ಮುಂದುವರಿದ ಭಾಗದಂತೆ ಕಾಣುತ್ತವೆ. ಇದು ಕಥನ ಶೈಲಿಯ ತಂತ್ರವಾಗಿ ಬಹಳ ಪರಿಣಾಮಕಾರಿಯಾಗಿದೆ. ಉದಾಹರಣೆಗೆ `ಧೀಯೋಯೊನ' ಕಥೆಯ ಭಾರತಿ ಉಲ್ಲಾಳದಲ್ಲಿದ್ದಾಗಿನ ನೆನಪುಗಳನ್ನು ಮಾಡಿಕೊಂಡು, ಈ ಕಡಲಲ್ಲಿ ಅದೆಷ್ಟು ಉಬ್ಬರ... ಅದೆಷ್ಟು ಇಳಿತ... ನೇತ್ರಾವತಿಯಲ್ಲಿ ಅದೆಷ್ಟು ಬಾರಿ ನೆರೆ... ಧಾರಾಕಾರ ಮಳೆ... ಅನ್ನುವ ಮಾತುಗಳು ಅವಳ ಬದುಕಿನೊಂದಿಗಿನ ಹೋಲಿಕೆ. ಈ ಸಾಲುಗಳು ಅಲ್ಲಿಯ ಆಗಿನ ಖುಷಿಯನ್ನ ನಿರೂಪಿಸುತ್ತವೆ.
`ಆತನನ್ನು ಕೊಂಡಾಡಿರಿ' ಮತ್ತು `ಏನಿದೇನು ಪ್ರಭುವೇ...?' ಕಥೆಗಳು ಅಧ್ಯಾತ್ಮದತ್ತ ಹೊರಳುವ ಕಥೆಗಳಾಗಿ ಕಾಣುತ್ತವೆ. `ಏನಿದೇನು ಪ್ರಭುವೇ...?' ಕಥೆಯಲ್ಲಿ ಬದುಕು ಸುಳ್ಳು ಸತ್ಯಗಳ ಪ್ರಪಂಚವನ್ನು ಮಲ್ಲಪ್ಪನಿಗೆ ತೋರಿಸುತ್ತದೆ. ಇದೂ ವಾಸ್ತವದಲ್ಲಿ ನಡೆಯುವ ಘಟನೆಯೇ ಅನ್ನುವ ಹಾಗಿದೆ.
ಆದ್ದರಿಂದ `ಹಕ್ಕಿ ಚೆಲ್ಲಿದ ಬೀಜ' ಓದಿ ಖುಷಿಪಡಬಹುದಾದಂತಹ ಕಥೆಗಳ ಸಂಕಲನ. ಈ ಕೃತಿಗೆ ಎಸ್. ಆರ್ ವಿಜಯಶಂಕರ್ ಅವರ ಮುನ್ನುಡಿಯಿದೆ.

Read more!

Thursday, March 8, 2012

ವೇದವತಿ ನದಿಯಲ್ಲ, ನದಿಯೇ!


ಇತ್ತೀಚೆಗೆ ಬಿಡುಗಡೆಗೊಂಡ ಒಂದು ಅಪರೂಪದ ಕೃತಿ ಡಾ| ಎಚ್. ಎಸ್. ವೆಂಕಟೇಶ ಮೂರ್ತಿಯವರ `ವೇದವತಿ ನದಿಯಲ್ಲ'. ಈ ಕೃತಿ ಎರಡು ವಿಭಿನ್ನ ನೆಲೆಗಳಲ್ಲಿ ಅಪರೂಪದ ಕೃತಿಯಾಗಿ ಕಾಣಿಸುತ್ತದೆ. ಒಂದನೆ ಕಾರಣ ಇದು ಮೂವತ್ತು ವರ್ಷಗಳ ಹಿಂದೆ ಬರೆದಿರುವುದು ಮತ್ತು ಇತ್ತೀಚೆಗೆ ಯಾವ ಮಾರ್ಪಾಟಿಲ್ಲದೆ ಪ್ರಕಟವಾಗಿರುವಂತದ್ದು. ಇನ್ನೊಂದು ಕಾರಣ ಕವಿತೆಗಳಲ್ಲಿಯೇ ಎಲ್ಲವನ್ನೂ ಹೇಳಿಬಿಡುವ ಕವಿಯೊಬ್ಬನ ಕಾದಂಬರಿಯೆನ್ನುವ ಕುತೂಹಲಕ್ಕೆ. ಹಾಗಾಗಿ ಈ ಕೃತಿಯನ್ನು ಓದುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇದನ್ನು ಬರೆದ ಕಾಲಘಟ್ಟ. ಅಂದರೆ ಮೂವತ್ತು ವರ್ಷಗಳ ಹಿಂದಿನ ಜೀವನ ಶೈಲಿಯನ್ನ ಗಮನದಲ್ಲಿಟ್ಟುಕೊಂಡು ಓದಬೇಕಾಗುತ್ತದೆ. ಇದು ಮೂವತ್ತು ವರ್ಷಗಳ ಹಿಂದೆಯೆ ಬರೆದ ಕೃತಿಯೆನ್ನುವುದನ್ನು ಎಚ್.ಎಸ್.ವಿ ಅವರು `ಲೇಖಕರ ಮಾತು' ವಿನಲ್ಲಿಯೂ ಹೇಳಿಕೊಂಡಿದ್ದಾರೆ.
ನದಿ ಹರಿಯುವ ಭಾವದ ಹಂಗಿನ ಜೊತೆಗೆ ಸಾಗುವ ಕೃತಿ `ವೇದವತಿ ನದಿಯಲ್ಲ'. ವೇದವತಿ ನದಿಯೇ, ಈ ಕೃತಿಯ ನಾಯಕಿಯಾಗಿ ಕಾಣಿಸುವ ರಂಗಲಕ್ಷ್ಮೀ ನದಿಯಂತೆ ಯಾರಿಂದಲೂ ಯಾವ ಪ್ರತಿಫಲಾಭೀಷ್ಟಗಳನ್ನು ಎದುರು ನೋಡದೆ ಮತ್ತು ಎದುರಾಗುವ ಅಡೆತಡೆ, ತಿರುವುಗಳನ್ನು ದಿಟ್ಟವಾಗಿ ನುಗ್ಗಿ, ಗಮ್ಯವೆನಿಸುವ ಸಾಗರವನ್ನು ತಲುಪುವವಳು. ಇದು ಕಾದಂಬರಿಯ ಚೌಕಟ್ಟು. ಆದರೆ ಈ ಕಾದಂಬರಿಗೆ ಬಳಸಿಕೊಂಡ ಕ್ಯಾನ್‌ವಾಸ್ ಒಂದು ಮಹತ್ವದ ಕಾದಂಬರಿಯಾಗಿಸುವ ಹಾಗಿದ್ದರೂ ಪಾತ್ರ ಪೋಷಣೆ ಮತ್ತು ಸನ್ನಿವೇಶಗಳಿಗೆ ನಿರ್ಬಂಧ ಹಾಕಿಕೊಂಡಿರುವುದರಿಂದ ಕೃತಿ ಸೊರಗಿದಂತೆ ಕಾಣುತ್ತದೆ. ಹಾಗಂತ ರಂಗಪ್ಪ ಮತ್ತು ಅವನ ಮಗಳು ರಂಗಲಕ್ಷ್ಮೀಯ ಪಾತ್ರಗಳು ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಸ್ವಲ್ಪ ಮಟ್ಟಿಗಾದರೂ ಕೃತಿಗೆ ನ್ಯಾಯ ಒದಗಿಸಿಕೊಡುತ್ತವೆ.
ಇಲ್ಲಿ ಕ್ಲಿಕ್ಕಾಗುವ ಪಾತ್ರಗಳು ರಂಗಲಕ್ಷ್ಮೀ ಮತ್ತು ರಂಗಪ್ಪ. ರಂಗಪ್ಪ ಆಗಿನ ಪರಿಸ್ಥಿತಿಗೆ ಹೆಣ್ಣು ಸಂಪ್ರದಾಯವನ್ನು ಮುರಿದರೆ ಸಮಾಜದಲ್ಲಿ ಆತನ ಸ್ಥಾನಮಾನಕ್ಕೆ ಕುಂದಾಗಬಹುದೆನ್ನುವ ಧೋರಣೆಯಿಂದ ರಂಗಲಕ್ಷ್ಮೀಗೆ ಮರುಮದುವೆಯನ್ನು ನಿರಾಕರಿಸುತ್ತಾನೆ. ಆದರೆ ಆತ ಕಾಕತಾಳಿಯವೆಂಬಂತೆ ಒಬ್ಬ ಹೆಂಡತಿಯ ಕಾಲಾ ನಂತರ ಇನ್ನೊಬ್ಬಳನ್ನು ಹೀಗೆ ಮೂರು ಮದುವೆಯಾಗುತ್ತಾನೆ. ಇಲ್ಲಿ ಮಗಳ ವೈಧವ್ಯದ ಬದುಕು ಅವನಿಗೆ ಏನೂ ಅನಿಸುವುದಿಲ್ಲ. ಹಾಗಂತ ಅವನು ಕೆಟ್ಟವನಾಗಿ ಉಳಿಯುವುದು ಓದುಗನ ಮನಸ್ಸಿನಲ್ಲಿ ಮಾತ್ರ.
ಈ ಎರಡು ಪಾತ್ರಗಳು ಸತ್ವ ಕಳೆದುಕೊಳ್ಳುವಂತದ್ದು ಕಾದಂಬರಿಯ ಉತ್ತರಾರ್ಧದಲ್ಲಿ. ಇಲ್ಲಿ ಸಿನಿಮೀಯ ಬದಲಾವಣೆಯೊಂದಿಗೆ ಕಾದಂಬರಿ ಓಡುತ್ತದೆ.
ನದಿ ಸಾಗರ ಸೇರುವುದಕ್ಕೂ, ಸಾಗರದ ಉಬ್ಬರವಿಳಿತಗಳೂ ಕಾರಣವಾಗುತ್ತವೆ. ಇಲ್ಲಿ ರಂಗಲಕ್ಷ್ಮೀ ಚಿದಂಬರನನ್ನು ಸೇರಲು ಆಕೆಯ ಮಗು ಪಾರ್ವತಿಯ ಅಸೌಖ್ಯ ಒಂದು ಹೆಳೆಯಾದರೂ ಚಿದಂಬರನನ್ನು ಒಪ್ಪಿಕೊಳ್ಳುವಲ್ಲಿ ಯಾವ ತಡೆಯೂ ಎದುರಾಗುವುದಿಲ್ಲ. ಇಲ್ಲಿ ಬಹಳಷ್ಟು ಗಮನಸೆಳೆಯುವ ಸನ್ನಿವೇಶ ಮಗಳ ಆರೈಕೆಯಲ್ಲಿ ಚಿದಂಬರನ ಮನೆಯಲ್ಲಿಯೇ ಉಳಿಯುವ ರಂಗಲಕ್ಷ್ಮೀಯನ್ನು ಕರೆದುಕೊಂಡು ಹೋಗುವುದಾಗಿ ಅವಳ ತಂದೆ ರಂಗಪ್ಪ ಪತ್ರ ಬರೆಯುತ್ತಾನೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಚಿದಂಬರನಿಗೆ ಅವಕಾಶ ಕೊಡದೆ ಅವಳು ಪರೋಕ್ಷವಾಗಿ ತಾನೆ ಉತ್ತರಿಸುವುದಾಗಿ ತಿಳಿಸುತ್ತಾಳೆ. ಕಾದಂಬರಿಯ ಅಂತ್ಯದಲ್ಲಿ ಅವಳು ಚಿದಂಬರನ ಮನೆಯಲ್ಲಿ ಅಸ್ತವ್ಯಸ್ತವಾದ ಹಾಸಿಗೆಯನ್ನು ಸರಿಪಡಿಸುವ ದೃಶ್ಯ. ಕಾದಂಬರಿ ಇಲ್ಲಿಗೆ ಮುಗಿಯುತ್ತಿದ್ದರೆ ಓದುಗನ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತಿತ್ತೇನೋ. ರಂಗಲಕ್ಷ್ಮೀಯ ಈ ಅಚಲ ನಿರ್ಧಾರ ಸಾಮಾಜಿಕ ಕಟ್ಟುಪಾಡಿನಿಂದ ಹೊರಗೆ ಬರುವಂತೆ ಮೂಡಿರುವುದರಿಂದ ಕೃತಿಗೆ ಹೆಚ್ಚಿನ ತೂಕ ಬಂದಿದೆಯೆನ್ನಲಡ್ಡಿಯಿಲ್ಲ.
ಕಾದಂಬರಿಯ ಕೆಲವು ಮುಖ್ಯ ಪಾತ್ರಗಳಾದ ಶಂಕರ, ಗೌಡ, ಚಿದಂಬರ ಇವರೆಲ್ಲಾ ಹಾಗೆ ಬಂದು ಹೀಗೆ ಹೋಗುವ ನಾಟಕದ ಪಾತ್ರಗಳಾಗಿ ಗೋಚರಿಸುತ್ತಾರೆ. ಈ ಯಾವ ಪಾತ್ರಗಳು ಬೆಳವಣಿಗೆ ಕಾಣುವುದೇ ಇಲ್ಲ. ಅದರಂತೆಯೇ ಇಲ್ಲಿಯ ಇನ್ನೊಂದು ಮುಖ್ಯ ನಾಟಕೀಯ ಬೆಳವಣಿಗೆಯಾಗಿ ಪ್ರತೀ ಬಾರಿಯೂ ಮಲ್ಲಪ್ಪನ ಹೆಂಡತಿಯರು ಸಾಯುವಾಗ ಧುತ್ತನೆ ಅವನಿಗೆ ಇನ್ನೊಂದು ಸಂಬಂಧ ತಯಾರಾಗಿರುವುದು ಕಾಣುತ್ತೇವೆ. ಇವುಗಳೆಲ್ಲಾ ಪುಟ ವ್ಯಾಪ್ತಿಯಲ್ಲಿ ರಚಿಸಿದಂತೆ ಕಾಣಿಸುತ್ತದೆ.
ರಂಗಲಕ್ಷ್ಮೀ ಆಧುನಿಕ ಮಹಿಳೆಯ ಹಾಗೆ ದಿಟ್ಟ ನಿಲುವಿನ ಹೆಣ್ಣು ಅನ್ನುವುದನ್ನು ಮೂವತ್ತು ವರ್ಷಗಳ ಹಿಂದೆಯೇ ಬೆಳೆಸಿರುವುದು ಗಮನಾರ್ಹ. ಆಗಿನ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಚಿದಂಬರನನ್ನು ಒಪ್ಪಿಕೊಳ್ಳುವ ಅವಳ ಧೈರ್ಯ ಕಾದಂಬರಿಯನ್ನು ಸುಖಾಂತದಲ್ಲಿ ಮುಗಿಸುವುದಕ್ಕಿಂತಲೂ ಓದುಗನಿಗೆ ಬೆರಗನ್ನು ನೀಡುತ್ತದೆ. ಚಿದಂಬರನ ಬಗ್ಗೆ ಅವಳಿಗಿರುವ ಒಲವನ್ನು ನೇರವಾಗಿ ಎಲ್ಲೂ ಹೇಳದೆ ಅಚಾನಕ್ಕಾಗಿ ಅವನನ್ನು ಅಪ್ಪಿಕೊಳ್ಳುವ ಸಂದರ್ಭದಲ್ಲಿ ಮೌನವೇ ಓದುಗನಿಗೆ ಎಲ್ಲವನ್ನೂ ಹೇಳಿಬಿಡುವಂತೆ ತೋರುತ್ತದೆ.
ಆಧುನಿಕತೆಯ ಸೋಂಕಿಲ್ಲದ ಹಳ್ಳಿಯ ಚಿತ್ರಣ, ಬದುಕಿನ ರೀತಿ, ಹಳ್ಳಿಗರ ಸ್ವಾಭಿಮಾನ, ಮೂಲ ಸೌಕರ್ಯಗಳಿಲ್ಲದ ವ್ಯವಸ್ಥೆ, ದ್ವೇಷ ಸಾಧನೆ, ಎಲ್ಲೂ ಮಿತಿ ಮೀರದೆ ಮತ್ತು ವ್ಯತಿರೀಕ್ತಗಳೆನಿಸದೆ ಕಾದಂಬರಿಯನ್ನು ಆಸ್ವಾದಿಸುವಂತೆ ಮಾಡುತ್ತದೆ.
ಎಚ್. ಎಸ್. ವಿ ಅವರ ಕಾವ್ಯಗಳ ಮಾದುರ್ಯತೆಯ ಹಾಗೆಯೇ ಈ ಕೃತಿಯೂ ಒಂದು ಕ್ಲಾಸಿಕಲ್ ವರ್ಕ ಆಗಿ ಮೂಡಿಬಂದಿರುವುದರಿಂದ ಒಮ್ಮೆಯಾದರೂ ಓದಬೇಕೆನಿಸುತ್ತದೆ. ಈ ಕೃತಿಗೆ ಎನ್. ಎಸ್. ಶ್ರೀಧರಮೂರ್ತಿಯವರ ಮುನ್ನುಡಿ ಮತ್ತು ಜೋಗಿಯವರ ಬೆನ್ನುಡಿಯಿದೆ.

Read more!