Thursday, December 18, 2008

ಮಳೆ ಹನಿಯ ಹೂವು


(ಕನ್ನಡ ಪ್ರಭದಲ್ಲಿ ಪ್ರಕಟವಾದ ಕಥೆ)
ಎತ್ತರದ ಮರಗಳ ನೆರಳಿನಾಸರೆಯ ಹಿಡಿದು ಸಾಗಿದವಳನ್ನು ಸ್ವಾಗತಿಸಿದ್ದು ಬೆಟ್ಟಗಳ ಮರೆಯಿಂದ ಹಾದು ಹಸಿರು ಹುಲ್ಲಿನ ಮೇಲೆ ಸ್ಪಷ್ಟ ಬೆಳಕು ಚೆಲ್ಲಿದ ಮುಂಜಾವಿನ ಸೂರ್ಯನ ಹಿತವಾದ ಕಿರಣಗಳು.ತಲೆಯೆತ್ತಿ ಬೆಟ್ಟದ ತುದಿಯವರೆಗೂ ನೋಟ ಬೀರಿದ ಮುಗ್ಧ ಹುಡುಗಿ ರಶ್ಮಿ ಒಂದು ಕ್ಷಣ ಕಣ್ಣು ಮುಚ್ಚಿ ತೆರೆದಳು.ದೂರದ ಬೆಟ್ಟ ಕಾಣೋದಿಕ್ಕೆ ನುಣ್ಣಗೆ!ಇದೇ ಬೆಟ್ಟದಲ್ಲಿ ಮರೆಯಾಗಿ ಹೋಗಿದ್ದು ತನ್ನ ಕನಸು! ಮುಗ್ಧ ಹುಡುಗಿಗೆ ಅರಿವಿಲ್ಲದಂತೆ ಕಣ್ಣಂಚಿನಿಂದ ನೀರು ಇಳಿದು ಬಂತು.ಬೆಟ್ಟದ ಪಾಚಿ ಹಿಡಿದ ಬಂಡೆಗಳ ಮೇಲಿನಿಂದ ಹರಿದ ಮಳೆಯ ನೀರು ಉದ್ದಕ್ಕೂ ಕಂದು ಬಣ್ಣದ ರೇಖೆಯನ್ನು ಎಳೆದಂತೆ ಕಾಣುತ್ತಿತ್ತು. ಅಲ್ಲೊಂದು ಇಲ್ಲೊಂದು ಮೋಡಗಳು ಬೆಟ್ಟದ ಹಸಿರು ಮರಗಳನ್ನು ಮರೆಯಾಗಿಸುವಂತೆ ಅವಚಿ ಹಿಡಿದಿದ್ದವು.ಕಣ್ಣಿನಿಂದ ಇಳಿದ ನೀರಿಗೆ ಸೀರೆಯ ಸೆರಗನ್ನು ಒತ್ತಿ ಹಿಡಿದು ಬೆಟ್ಟದ ಮೇಲೆ ಒತ್ತೊತ್ತಾಗಿ ಕುಳಿತ ಮೋಡಗಳನ್ನು ನೋಡುತ್ತಿದ್ದಳು.ಇದೇ ಮೋಡಗಳು ತನ್ನ ಕನಸನ್ನು ಮುತ್ತಿಕೊಂಡು ಭಗ್ನಗೊಳಿಸಿದ್ದು!ಆ ದಿನ ರೇಡಿಯೋದ ಮುಂದೆ ಕುಳಿತಿದ್ದ ಅವಳನ್ನು ಎತ್ತಿ ಪ್ರಪಾತಕ್ಕೆ ಎಸೆದಿದ್ದು ಇದೇ ಮೋಡಗಳು."ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ......." ರಾಗವಾಗಿ ಹಾಡುತ್ತಾ, ಹೊರಗೆ ಸುರಿಯುವ ಮಳೆಗೆ ಕಿಟಕಿಯಿಂದ ಮುಖ ತೂರಿಸಿ, ನೆಲದ ಮೇಲೆ ಬಿದ್ದ ಮಳೆ ಹನಿಯ ಹೂವುಗಳನ್ನು ಎಣಿಸುತ್ತಿದ್ದಳು. ಹನಿ ಚೆಲ್ಲಿ ಹೋಗುವ ಮೋಡಗಳಿಗೆ ಎಷ್ಟೊಂದು ಶಕ್ತಿ?ನಿರಂತರವಾಗಿ ಉಲಿಯುತ್ತಿದ್ದ ರೇಡಿಯೋ ಕರ ಕರ ಸದ್ದಿನೊಂದಿಗೆ ಅವಳನ್ನು ಎಚ್ಚರಿಸಿತ್ತು.ನೆಲ ಬಿರಿದು ಹೋಗುವಂತೆ ಗುಡುಗಿನ ಆರ್ಭಟ!ರೇಡಿಯೋದಲ್ಲಿ ಬಿತ್ತರವಾದ ಅಪಶಕುನದ ವಾರ್ತೆ!ಬೆಟ್ಟದ ತುದಿಯಲ್ಲಿ ಕ್ಷಣ ಬೆಂಕಿಯುಂಡೆಯಾಗಿ ಉರಿದು ಪುಡಿ ಪುಡಿಯಾಗಿ ನೆಲ ಸೇರಿತು!ಕನಸೂ!
***

ಮರಗಳ ಮರೆಯಲ್ಲಿದ್ದ ಮರದ ಕಾಟೇಜ್‍ನ ಮುಂದಿದ್ದ ಅಟ್ಟಣಿಗೆಯನ್ನು ಏರಿ ದೂರದವರೆಗೂ ದೃಷ್ಟಿ ಹೊರಳಿಸಿದಳು ರಶ್ಮಿ. ಒತ್ತೊತ್ತಾಗಿ ಬೆಳೆದಿದ್ದ ದೈತ್ಯಾಕಾರದ ಮರಗಳ ನಡುವಿನಿಂದಲೂ ಎದುರಿಗಿದ್ದ ಬೆಟ್ಟ ಸುಂದರವಾಗಿ ಕಾಣುತ್ತಿತ್ತು. ಕಣ್ಣರಳಿಸಿ ಕುತೂಹಲದ ನೋಟ ಬೀರುತ್ತಿದ್ದವಳನ್ನು ಎಚ್ಚರಿಸಿದ್ದು ಅಟ್ಟಣಿಗೆಯ ಮೇಲಿಂದ ಇಳಿದು ಕಾಲಿನ ಬಳಿ ಸರಿದ ಕಪ್ಪಗಿನ ಹಲ್ಲಿ!ಅಟ್ಟಣಿಗೆಯ ಅಂಚನ್ನು ಹಿಡಿದ ಕೈಗಳು ಸಡಿಲಗೊಂಡು, ಸೀರೆಯ ನೆರಿಗೆಯನ್ನು ಮೇಲಕ್ಕೇರಿಸಿ ಮೆಟ್ಟಲುಗಳನ್ನು ಹಾರಿ ಕೆಳಗಿಳಿದು ಕಾಟೇಜ್‍ನ ಮುಂದೆ ಎದೆಗೆ ಕೈ ಹಚ್ಚಿ ನಿಂತು ದೀರ್ಘ ಉಸಿರು ದಬ್ಬಿದಳು.ಅಟ್ಟಣಿಗೆಯ ದಡ ದಡ ಸದ್ದಿಗೆ ಹೊರಗೆ ಬಂದಿದ್ದ ಅಡುಗೆಯ ಆಳು ನರಂಗ ಆತಂಕದ ದೃಷ್ಟಿ ಬೀರಿದ. ಅವನನ್ನು ನೋಡುತ್ತಲೇ ಮತ್ತೊಮ್ಮೆ ಕಣ್ಣು ಮುಚ್ಚಿ ನಿಟ್ಟುಸಿರಿಟ್ಟಳು."ಏನಿಲ್ಲಾ, ಕಪ್ಪು ಹಲ್ಲಿ"ನರಂಗನ ತುಟಿಗಳಲ್ಲಿ ಕಿರು ನಗು ಕಾಣಿಸಿಕೊಂಡಿತು."ಅಯ್ಯೋ, ಒಂದು ಸಣ್ಣ ಹಲ್ಲಿಗೆ ಇಷ್ಟೊಂದು ಹೆದರೋದಾ? ಅಡುಗೆ ಮನೆಯ ಗೋಡೆಯಲ್ಲೆಲ್ಲಾ ಅವುಗಳದ್ದೇ ಸಾಮ್ರ್‍ಆಜ್ಯ""ನಿನ್ನ ಅಡುಗೆ ಮನೆಯ ಹಲ್ಲಿ ಅಲ್ಲ ಅದು. ಕಪ್ಪು ಹಲ್ಲಿ""ಅಂದ್ರೆ.... ದೈತ್ಯ ಹಲ್ಲಿನಾ?""ಓಹೋ! ನಿನ್ನಲ್ಲೆಂತಾ ಮಾತು. ಹೋಗು ನಿನ್ನ ಕೆಲ್ಸ ನೀನು ನೋಡ್ಕೊ"ಕಣ್ಣಗುಡ್ಡೆಗಳು ಹೊರಗೆ ಬರುವಷ್ಟು ಅಗಲಕ್ಕೆ ಕಣ್ಣುಗಳನ್ನು ಅಗಲಗೊಳಿಸಿ ಅವಳ ಹತ್ತಿರ ಬಂದು ಮಾತು ಹೊರಳಿಸಿದ."ನಿಮಗೆ ಗೊತ್ತಿಲ್ಲಮ್ಮಾ. ನೀವು ಹಲ್ಲಿಗಳ ಬಗ್ಗೆ ಹೆದರ್ತೀರಿ... ನಿಮ್ಮ ತಂದೆಗೆ ಹುಚ್ಚು. ಅರಣ್ಯಾಧಿಕಾರಿಂತ ಇಂತಹ ಭಯ ಹುಟ್ಟಿಸೋ ಕಾಡಿನ ಮಧ್ಯೆ ಇರೋ ಕಾಟೇಜ್‍ಗೆ ಬರೋದೆ? ಈ ಕಾಡಿನಲ್ಲಿ ರಾಕ್ಷಸರೂ ಇದ್ದಾರಂತೆ. ಎದುರಿಗೆ ಕಾಣಿಸೋ ಆ ಬೆಟ್ಟವಿದ್ಯಲ್ಲಾ. ಅದರಲ್ಲಿ ಅವರಿರೋದಂತೆ. ನರ ಬಲೀಂದ್ರೆ ಅವರಿಗೆ ಪಂಚ ಪ್ರಾಣವಂತೆ""ಇದೇನು ರಾಕ್ಷಸರಿರೋ ಯುಗಾನಾ? ಹೋಗಯ್ಯಾ ನಿನ್ನ ಕೆಲ್ಸ ಮಾಡು" ಅವನ ಮಾತನ್ನು ತಳ್ಳಿ ಹಾಕುವಂತೆ ಹೇಳಿದಳಾದರೂ ರಶ್ಮಿಯ ಎದೆ ಸಣ್ಣಗೆ ಬಡಿದುಕೊಳ್ಳಲಾರಂಭಿಸಿತು.ಮರಗಳೆಡೆಯಿಂದ ಕಾಣುತ್ತಿದ್ದ ಸುಂದರ ಬೆಟ್ಟವೀಗ ಭಯ ತರಿಸುವ ರಾಕ್ಷಸನಂತೆ ಕಂಡಿತು.ಏಕಾಏಕಿ ಚದುರಿದ್ದ ಮೋಡಗಳು ಬೆಟ್ಟದ ಮೇಲೆ ಒತ್ತೊತ್ತಾಗಿ ಕುಳಿತು ಇನ್ನೇನು ಮಳೆ ಹೊಯ್ಯುವಂತೆ ಕಂಡವು. ತಟ್ಟನೆ ಕಾಟೇಜ್‍ನ ಕಡೆಗೆ ಕಾಲು ಸರಿಸಿದಳು ಹುಡುಗಿ.ಎದುರಿಗಿನ ಬೆಟ್ಟ ಸಂಪೂರ್ಣ ಮೋಡಗಳಿಂದ ಮರೆಯಾಗಿತ್ತು. ಮುಸ್ಸಂಜೆಯ ಹೊತ್ತು ಮಳೆಯ ಹನಿ ತೀವ್ರತೆ ಪಡೆದು ಧಾರಕಾರವಾಗಿ ಸುರಿಯಲಾರಂಭಿಸಿತು.ತೂಗು ಹಾಕಿದ್ದ ಲಾಂದ್ರಕ್ಕೆ ಎಣ್ಣೆ ಸೇರಿಸಿದ ಅಡುಗೆಯ ಆಳು. ರಶ್ಮಿ ಬೆಂಕಿ ಪೊಟ್ಟಣ ತಂದು ಕಡ್ಡಿ ಗೀರಿ ಲಾಂದ್ರದ ಗಾಜನ್ನು ಏರಿಸಿ ಹಚ್ಚಿದವಳು, ಬೆಂಕಿ ಕಡ್ಡಿಯ ಬಿಸಿ ಕೈಗೆ ತಾಗುತ್ತಲೇ ಕಡ್ಡಿಯನ್ನು ದೂರಕ್ಕೆಸೆದು ಗಾಜನ್ನು ಕೆಳಗಿಳಿಸಿದಳು. ನರಂಗ ಲಾಂದ್ರವನ್ನು ಛಾವಣಿಯಿಂದ ಇಳಿ ಬಿದ್ದಿದ್ದ ಕೊಕ್ಕೆಗೆ ಸೇರಿಸಿದ. ಮಳೆಯ ಜೊತೆಗಿನ ಗಾಳಿಯ ರಭಸಕ್ಕೆ ಲಾಂದ್ರದ ದೀಪ ಒಂದೇ ದಿಕ್ಕಿಗೆ ಸರಿಯಿತು."ನರಂಗ, ಮುಂಬಾಗಿಲನ್ನು ಹಾಕಿ ಬಿಡು. ಗಾಳಿ, ಮಳೆ ಜೋರಾಗಿದೆ"ನರಂಗ ಎದ್ದು ಬಾಗಿಲನ್ನು ಹಾಕಿ ಚಿಲಕ ಸರಿಸಿದ. ಗೋಡೆಗೆ ತೂಗು ಹಾಕಿದ್ದ ಗಂಟೆ ಏಳು ಬಡಿಯುತ್ತಲೇ, ರಶ್ಮಿ ಕಣ್ಣನ್ನು ಗೋಡೆಯ ಕಡೆಗೆ ಹೊರಳಿಸಿದಳು."ನರಂಗ, ಅಪ್ಪಯ್ಯ ಎಲ್ಲೋ ಈ ಮಳೆಗೆ ಸಿಕ್ಕಿ ಹಾಕಿಕೊಂಡಿರಬೇಕು"ಹೊರಗೆ ಒಂದೇ ತೆರನಾಗಿ ಸುರಿಯುವ ಮಳೆಗೆ ದೇಹ ತಂಡಿ ಹಿಡಿದಂತಾಗಿ ದಪ್ಪನೆಯ ಉಣ್ಣೆಯ ಕೋಟು ಏರಿಸಿಕೊಂಡ ನರಂಗ."ನೀವು ಹೇಳೋದು ಸರಿಯಾಗಿದೆ. ಗಾಳಿ ನಿಲ್ಲದೆ ಅವರು ಜೀಪು ಓಡಿಸೋದು ಅಸಾಧ್ಯ. ಮಳೆ ಹಿಡಿದಿರೋದು ನೋಡಿದ್ರೆ ಪಕ್ಕನೆ ಬಿಡಲಾರದೂಂತ ಅನಿಸ್ತಿದೆ"ನರಂಗ ಮಾತುಗಳಿಗೆ ಆತಂಕದ ನೋಟ ಬೀರಿದಳು.ಆಗೊಮ್ಮೆ ಈಗೊಮ್ಮೆ ಸುಳಿಯುವ ಮಿಂಚಿನ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡು ಕಿಟಕಿಯ ಬಾಗಿಲುಗಳನ್ನು ತಳ್ಳಿ ಕಾಟೇಜ್‍ನ ಎದುರಿಗೆ ದೃಷ್ಟಿ ಹಾಯಿಸಿದಳು. ಏನೊಂದು ಕಾಣಿಸದಷ್ಟು ಕಪ್ಪು ಕತ್ತಲು!ಕಾಟೇಜ್‍ನ ಮುಂದಿನ ದಾರಿಯನ್ನು ಹುಡುಕುವುದು ವ್ಯರ್ಥ ಪ್ರಯತ್ನ. ಒಂದೇ ಸಮನೆ ಸುರಿಯುವ ಮಳೆಯ ರಾಗ. ಮಿಂಚಿನ ಬೆಳಕಿನಲ್ಲಿ ದಾರಿಯನ್ನು ತುಂಬಿ ನಿಂತ ಮಳೆಯ ನೀರು ಅಸ್ಪಷ್ಟವಾಗಿ ಕಾಣುತ್ತಿತ್ತು. ತಟ್ಟನೆ ದೂರದಲ್ಲಿ ಮಿಣುಕು ದೀಪ ಕಾಣಿಸಿತು!ರಸ್ತೆಯನ್ನು ನುಗ್ಗಿದ ನೀರು, ಜೀಪು ತರೋದಕ್ಕೆ ಅಡ್ಡಿಯಾಗಿರಬೇಕು. ಅದಕ್ಕಾಗಿ ಅಪ್ಪಯ್ಯ ನಡೆದುಕೊಂಡು ಬರುತ್ತಿರಬೇಕು!"ನರಂಗ, ಅಪ್ಪಯ್ಯ ಬರುತ್ತಿರೋ ಹಾಗಿದೆ. ಇನ್ನೊಂದು ಟಾರ್ಚ್ ಹಿಡಿದು ಹೋಗು" ಕಿಟಕಿಯ ಬಾಗಿಲು ಮುಚ್ಚುತ್ತಾ ಮೂಲೆಯಲ್ಲಿ ಮುದುರಿ ಕುಳಿತಿದ್ದ ಅಡುಗೆಯಾಳನ್ನು ಕರೆದು ಹೇಳಿದಳು.ಚಳಿಗೆ ಜಡ ಹಿಡಿದಿದ್ದ ದೇಹವನ್ನು ನಿಧಾನಕ್ಕೆ ಅಲುಗಿಸಿ ಎದ್ದು ನಿಂತ ನರಂಗ.ಮರದ ಅಲಂಕಾರಿಕ ಬೀರುವಿನಲ್ಲಿದ್ದ ಉದ್ದನೆಯ ಟಾರ್ಚ್‍ನ್ನು ತೆಗೆದು ಅವನ ಕೈಗೆ ನೀಡಿದಳು.ಅಗಲಕ್ಕೆ ಬಾಯಿಯನ್ನು ತೆರೆದು ಆಕಳಿಸಿ, ಹೆಜ್ಜೆಯನ್ನು ಹೊರಳಿಸಿದ. ಎದುರಿಗಿನ ಗೋಡೆಯ ಮೊಳೆಗೆ ತೂಗಿಸಿದ್ದ ಮಳೆಯ ನಿಲುವಂಗಿಯನ್ನು ತೆಗೆದು ಧರಿಸಿಕೊಂಡ. ತಲೆಗೆ ಸೇರಿಸಿದ ಟೋಪಿಯನ್ನು ಕಿವಿಯವರೆಗೆ ಎಳೆದು, ಕಾಲಿಗೆ ಗಮ್ ಬೂಟುಗಳನ್ನು ಸೇರಿಸಿದ.ಎದುರಿಗಿನ ಬಾಗಿಲನ್ನು ತೆರೆಯುತ್ತಲೇ ನೀರಿನ ತೇವದ ಗಾಳಿ ಮುಖಕ್ಕೆ ತಟ್ಟುತ್ತಲೇ ಎರಡೆರಡು ಬಾರಿ ಸೀನು ಹಾಕಿದ. ಎಡಗೈಯಿಂದ ಮೂಗನ್ನು ಒರೆಸಿಕೊಂಡು ದಾರಿಯುದ್ದಕ್ಕೂ ನೋಟ ಹರಿಸಿದ. ರಶ್ಮಿ ಕೂಡ ಬಾಗಿಲ ಬಳಿ ನಿಂತಳು.ಸಣ್ಣಗಿನ ಬೆಳಕಿಗಾಗಿ ದೂರದವರೆಗೆ ದೃಷ್ಟಿ ಹಾಯಿಸಿದವಳಿಗೆ ಆಶ್ಚರ್ಯ!ರಸ್ತೆಯ ನೇರ ದಾರಿ ಬಿಟ್ಟು, ಬೆಳಕು ಮರಗಳ ಮಧ್ಯೆ ಕಾಣಿಸಿದಂತಾಯ್ತು. ನರಂಗ ಅದಾಗಲೇ ಕಾಟೇಜ್‍ನ ಎದುರಿಗಿನ ರಸ್ತೆಯಲ್ಲಿ ಅರ್ಧದವರೆಗೂ ಸಾಗಿದ್ದ.ಯಾವುದೋ ಆತಂಕ ಅವಳನ್ನು ಆವರಿಸಿದಂತಾಯಿತು. ಬಾಗಿಲನ್ನು ಸರಿಸಿ ಚಿಲಕ ಹಾಕಿ ಕಿಟಕಿಯಾಚೆಗೆ ಸರಿದಳು.ಗಂಟೆ ಒಂದೇ ಸಮನೇ ಓಡುತಲಿತ್ತು.ತಾನು ತಿಳಿದುಕೊಂಡಂತೆ ದೂರದಲ್ಲಿ ಕಂಡ ಬೆಳಕು ಅಪ್ಪಯ್ಯನದಾಗಿದ್ದರೆ ಇಷ್ಟರಲ್ಲಿ ಆತ ಕಾಟೇಜ್ ತಲುಪಬೇಕಿತ್ತು!ಹಾಗಲ್ಲ! ರಸ್ತೆಯುದ್ದಕ್ಕೂ ನೀರು ತುಂಬಿದೆ. ಅದನ್ನು ತಪ್ಪಿಸಿ ಮರಗಳ ಕಡೆಯಿಂದ ಅಡ್ಡ ದಾರಿ ಹಿಡಿದು ಬರುತ್ತಿರಬಹುದು.ಕಿಟಕಿಯ ಗಾಜುಗಳನ್ನು ಮುಚ್ಚಿ ಲಾಂದ್ರದ ಬೆಳಕಿನಲ್ಲಿ ಮೂಡಿದ್ದ ನೆರಳನ್ನೇ ನೋಡುತ್ತಿದ್ದಳು. ತಟ್ಟನೆ ಲಾಂದ್ರದ ಬೆಳಕಿಗೆ ಸೋತ ಕೀಟ ಅವಳ ಮುಖವನ್ನು ಮುದ್ದಿಸಿತು. ಬೆಚ್ಚಿ ಹಿಂದೆ ಸರಿದು ನಿಂತಳು.ಮತ್ತೊಮ್ಮೆ ಮುಖಕ್ಕೆ ಏನೋ ಬಡಿದಂತಾಯಿತು.ಅಲ್ಲ! ಅದು ಮುಖಕ್ಕೆ ಬಡಿದ ಕೀಟದ ಸದ್ದಲ್ಲ!ಯಾರೋ ಬಾಗಿಲ ಮೇಲೆ ಬಡಿಯುವ ಸದ್ದು!ಒಂದೇ ಉಸುರಿಗೆ ಹಾರಿ, ಬಾಗಿಲಿನ ಚಿಲಕ ಜಾರಿಸಿದಳು.ಬಾಗಿಲು ಇದ್ದಕ್ಕಿದಂತೆ ಬಲವಾಗಿ ತಳ್ಳಿ ಒಳಗೆ ಬಂದ ವ್ಯಕ್ತಿ!ರಶ್ಮಿ ಚಿಟ್ಟನೆ ಚೀರಿ ಹಿಂದಕ್ಕೆ ಹಾರಿದಳು.ಆತ ಚಿಲಕ ಸಿಕ್ಕಿಸಿ ತಲೆಗೆ ಸುತ್ತಿದ್ದ ಬಟ್ಟೆಯ ನೀರನ್ನು ಹಿಂಡಿ ಮುಖ ಒರೆಸಿಕೊಂಡು ಸುತ್ತಲೂ ಪರೀಕ್ಷಕ ನೋಟ ಬೀರಿದ.ಸುಮಾರು ಆರಡಿ ಎತ್ತರದ ಅಜಾನು ಬಾಹು ವ್ಯಕ್ತಿ! ಮೂವತ್ತರ ಆಚೆ ಈಚೆ ವಯಸ್ಸಿರಬಹುದು. ಉಟ್ಟಿದ ಬಟ್ಟೆಯೆಲ್ಲಾ ತೊಯ್ದು ತೊಪ್ಪೆಯಾಗಿ ನೀರು ಇಳಿಯುತ್ತಿತ್ತು. ಹೆಗಲಿಗೇರಿಸಿದ ನಾಡಕೋವಿಯನ್ನು ಕೆಳಗಿಳಿಸಿ ಬಟ್ಟೆಯಿಂದ ಒರೆಸಿದ."ಮನೆಯಲ್ಲಿ ಬೇರ್‍ಯಾರಿದ್ದಾರೆ?" ಗಡಸು ಕಂಠಕ್ಕೆ ಬೆದರಿ ನಿಂತವಳನ್ನು ಮತ್ತಷ್ಟು ಮೂಲೆಗೆ ಸರಿಸಿತು ಮಾತು."ನಾನು ನಿನ್ನನ್ನೇ ಕೇಳ್ತಾ ಇರೋದು. ಇಲ್ಲಿ ಬೇರ್‍ಯಾರು ಇದ್ದಾರೆ?"ಅವನ ಕಂಠ ಇನ್ನಷ್ಟು ಗಡುಸಾಯಿತು."ಯಾರು ...ಇಲ್ಲ... ಯಾರು... ಇಲ್ಲ..." ನಡುಗುವ ದನಿಯಿಂದ ಮಾತು ಹೊರಗೆ ಬಂತು.ಒದ್ದೆ ಬಟ್ಟೆಯ ಕಿಸೆಗೆ ಕೈ ತೂರಿಸಿ ಪ್ಲಾಸ್ಟಿಕ್ ಚೀಲ ತೆಗೆದ. ಒಳಗೆ ಬೆಚ್ಚಗೆ ಕುಳಿತಿದ್ದ ಸಿಗರೇಟಿನ ಪಾಕೆಟನ್ನು ಹೊರ ತೆಗೆದು ತುಟಿಗಿರಿಸಿಕೊಂಡ."ಬೆಂಕಿ ಕಡ್ಡಿ ಬೇಕು" ಮಾತಿನಲ್ಲಿ ನಯವಿರಲಿಲ್ಲ.ಸರಕ್ಕನೆ ಸರಿದು ಸ್ಟಾಂಡ್‍ನ ಮೇಲಿದ್ದ ಬೆಂಕಿ ಪೆಟ್ಟಿಗೆ ನೀಡಿದಳು. ಒಂದು ಕಡ್ಡಿಯನ್ನು ಎರಡೆರಡು ಬಾರಿ ಗೀರಿದ."ಹಾಳಾದ ಮಳೆ, ಹಾಕಿದ ಯೋಜನೆಯೆಲ್ಲಾ ಹಾಳಾಯ್ತು" ಬೆಂಕಿ ಗಡ್ಡಿ ಉರಿಯುತ್ತಲೇ ಸಿಗರೇಟಿಗೆ ಸೋಕಿಸಿ ಒಂದೆರಡು ಧಂ ಎಳೆದು ಹೊಗೆಯುಗುಳಿದ."ತಿನ್ನೊದಿಕ್ಕೆ ಏನಾದ್ರೂ ಇದೆಯಾ?" ಬಲಕೈಯ ಬೆರಳ ತುದಿಗಳನ್ನು ಒಟ್ಟು ಸೇರಿಸಿ ತುಟಿಯ ಬಳಿ ಎರಡೆರಡು ಬಾರಿ ಸರಿಸಿ ಕೇಳಿದ."ಹಾಂ.. ಇಲ್ಲ......ಇಲ್ಲ...."ಹಲ್ಲಿಯ ಹಾಗೆ ಗೋಡೆಗೆ ಅಂಟಿಕೊಂಡಂತೆ ನಿಂತಳು.ಕೋವಿಯನ್ನು ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಅಡುಗೆ ಮನೆಯೊಳಗೆ ಹೋದ. ರಶ್ಮಿ ಬಿಟ್ಟ ಕಣ್ಣು ಬಿಟ್ಟಂತೆ ನಿಂತೇ ಇದ್ದಳು.ಒಂದೊಂದೇ ಪಾತ್ರೆಯ ಮುಚ್ಚಳ ಸರಿಸಿ ನೋಡುತ್ತಿದ್ದ. ಹೂಜಿಯಲ್ಲಿ ತುಂಬಿದ್ದ ನೀರನ್ನು ಗಟಗಟನೆ ಕುಡಿದು ಹೊರಗೆ ಬಂದ."ನಂಗೆ ಸುಳ್ಳು ಹೇಳ್ತೀಯಾ?" ಒರಟಾಗಿ ಬಂದ ಮಾತಿನ ಜೊತೆಗೆ ಕೋವಿಯ ತುದಿಯನ್ನು ಅವಳ ಕುತ್ತಿಗೆಯ ಬಳಿ ಹಿಡಿದ."ನಡಿ, ಇರೋದೆಲ್ಲವನ್ನೂ ಒಂದು ತಟ್ಟೆಗೆ ಹಾಕಿ ತಾ. ಇನ್ನು ಹೆಚ್ಚು ಸಮಯ ನಾನು ಇಲ್ಲಿ ನಿಲ್ಲೋದಿಲ್ಲ" ಕೋವಿಯ ತುದಿ ಕೆಳಗಿಳಿಯುತ್ತಲೇ ಹೇಳಿದ ಮಾತುಗಳಿಗೆ ಅವಳ ಕಾಲುಗಳು ಮಿಂಚಿನ ವೇಗ ಪಡೆದುಕೊಂಡವು.ಸರಸರನೆ ನಡೆದು ದೊಡ್ಡ ಬಟ್ಟಲಿಗೆ ಒಂದಷ್ಟು ಅನ್ನ, ಸಾಂಬಾರು ಸುರಿದು ಅವನ ಮುಂದೆ ಹಿಡಿದಳು.ಕೋವಿಯನ್ನು ಹೆಗಲಿಗೇರಿಸಿ ಬಿಗಿದುಕೊಂಡ. ಅವಳ ಕೈಯಲ್ಲಿದ ತಟ್ಟೆಯನ್ನು ಎಳೆದುಕೊಂಡ. ಬಲಗೈಯನ್ನು ಪ್ಯಾಂಟ್‍ನ ಹಿಂಬದಿಗೆ ಒರೆಸಿಕೊಂಡು ಗಬಗಬನೆ ತಿನ್ನಲಾರಂಭಿಸಿದ.ಒಂದೆರಡು ನಿಮಿಷದಲ್ಲಿ ತಟ್ಟೆಯನ್ನು ಬರಿದು ಮಾಡಿ ಸರಸರನೆ ನಡೆದು ಮಳೆಯ ಸದ್ದಿನೊಂದಿಗೆ ಕರಗಿ ಹೋದ.
***
ಘಟನೆ ನಡೆದು ವಾರಗಳು ಕಳೆದರೂ ಮಂಕಾಗಿಯೇ ಇರುತ್ತಿದ್ದಳು ರಶ್ಮಿ. ಮಗಳ ಮಂಕುತನಕ್ಕೆ ಬೇರೇನೋ ಕಲ್ಪನೆ ಕೊಟ್ಟ ಅರಣ್ಯ ಅಧಿಕಾರಿ ಮಲ್ಲಯ್ಯ."ನಿನಗೇನಾಗಿದೆ ಹೇಳ್ಬಿಡು? ಹೀಗೆ ಮಂಕಾಗಿ ಕುಳಿತಿರೋದ್ರಲ್ಲಿ ಅರ್ಥವಿಲ್ಲ"ಬರೀ ಕಣ್ಣ ಗುಡ್ಡೆಗಳನ್ನು ಅಧಿಕಾರಿಯ ಕಡೆಗೆ ತಿರುಗಿಸಿ, ಮಾತನಾಡದೆ ಎದ್ದು ನಿಂತಳು. ಅಧಿಕಾರಿ ಮಗಳ ಹಿಂದೆಯೇ ಎದ್ದು ಬಂದ. ಅವಳು ಕಿಟಕಿಗೆ ಆತು ನಿಂತಳು.ಮೂವತ್ತರ ಆಚೀಚೆ ವಯಸ್ಸಿನ, ತೊಯ್ದು ತೊಪ್ಪೆಯಾಗಿದ್ದ ವ್ಯಕ್ತಿ ಕಣ್ಣೆದುರು ಬಂದು ನಿಂತಂತಾಯಿತು. ಒಂದು ಕ್ಷಣ ನರಗಳಲ್ಲಿ ಭಯ ತುಂಬಿ ಮೈ ಅಲುಗಿಸಿದಳು."ಇನ್ನೇಷ್ಟು ದಿನ ಇಲ್ಲಿರ್ಬೆಕು?" ಮಾತಿನಲ್ಲಿ ನಡುಕ ತುಂಬಿತ್ತು."ಓಹೋ! ಹೀಗಾ?... ಈ ಮಲೆನಾಡಿನ ಮಳೆಯೇ ಹೀಗೆ, ಸುರಿದ್ರೆ ವಾರಾನುಗಟ್ಲೆ ಸುರಿತಾ ಇರುತ್ತೆ. ನಾನು ಒಂದು ಕೆಲಸ ಮಾಡ್ತೀನಿ. ನಾಳೆ ಸಿಟಿಗೆ ಹೋದೋನು ವಿಶಾಲುಗೆ ಫೋನ್ ಮಾಡ್ತೀನಿ. ನೀನು ಬೆಂಗಳೂರಿಗೆ ಹೋಗ್ಬಿಡು. ಮಳೆಗಾಲ ಮುಗಿದ ನಂತರ ಬಂದ್ಬಿಡು"ತಂದೆಯ ಮಾತಿಗೆ ಆಶ್ಚರ್ಯವಾಯಿತು.ಆ ವ್ಯಕ್ತಿ ಮತ್ತೊಮ್ಮೆ ಇಲ್ಲಿಗೆ ಬರಬಹುದು. ಅವನಿಂದ ತಪ್ಪಿಸಿಕೊಳ್ಳೋದಿಕ್ಕೆ ಇರೋದು ಒಂದೇ ದಾರಿ. ತಾನು ವಿಶಾಲು ಜೊತೆಗೆ ಬೆಂಗಳೂರು ಸೇರಿ ಬಿಡಬೇಕು.ಮನೆಗೆ ಬಂದಿದ್ದ ಅಪರಿಚಿತ ವ್ಯಕ್ತಿಯ ಬಗ್ಗೆ ಅಪ್ಪಯ್ಯನಿಗೆ ಹೇಳಿಬಿಡಬೇಕೆಂಬ ಇಚ್ಛೆ ಇದ್ದರೂ ಆ ವಿಷಯ ಅವಳಲ್ಲೇ ಉಳಿದು ಹೋಯಿತು. ಆದಷ್ಟು ಒಂಟಿಯಾಗಿರದೆ ನರಂಗನನ್ನು ಎಲ್ಲೂ ಹೋಗಗೊಡದೆ ಇದ್ದಳು.ಕಿಟಕಿಯ ಬಳಿ ನಿಂತವಳ ಕಣ್ಣುಗಳು ಯಾಂತ್ರಿಕವಾಗಿ ಬೆಟ್ಟದ ಕಡೆಗೆ ಚಲಿಸಿದವು. ಆಕಾಶದಲ್ಲಿ ಮೋಡಗಳು ತುಂಬಿದ್ದರೂ, ಮಳೆ ಸುರಿಯಲು ಮರೆತಂತಿತ್ತು.ಕಾಲಿಗೆ ಜೋಡುಗಳು ಜೊತೆಯಾಗಿ, ಒದ್ದೆ ನೆಲವನ್ನು ಸ್ಪರ್ಶಿಸಿದವು. ಎಲ್ಲೆಡೆ ಹೊಸ ಚಿಗುರುಗಳು ಪ್ರಕೃತಿಗೆ ಮೆರುಗು ತಂದಂತಿದ್ದವು. ದೂರಕ್ಕೂ ನಡೆದು ಕಳ್ಳಿ ಬೇಲಿಯ ಬಳಿ ನಿಂತಳು ಹುಡುಗಿ. ಕರ್ಕೊಟ್ಟೆಯ ಮುಳ್ಳು ಕಿತ್ತು ಕಳ್ಳಿಯ ಗಿಡಕ್ಕೆ ಚುಚ್ಚಿದಳು. ಕಣ್ಣಿನಲ್ಲಿಳಿದ ನೀರಿನಂತೆ ಕಳ್ಳಿ ಗಿಡದ ಬಿಳಿಯ ಸುನೆ ತಟತಟನೆ ನೆಲಕ್ಕೆ ಬಿಳುತ್ತಿತ್ತು. ತಟ್ಟನೆ ಒದ್ದೆ ತರಗೆಲೆಯ ಚರಪರ ಸದ್ದಿಗೆ ಹಿಂತಿರುಗಿದಳು.ಆರಡಿ ಎತ್ತರದ ಅದೇ ಅಜಾನುಬಾಹು ವ್ಯಕ್ತಿ ನಿಂತಿದ್ದ!ಭಯದಿಂದ ಎದೆಗೆ ಕೈ ಹಚ್ಚಿ ಮೆಲ್ಲ ಮೆಲ್ಲನೆ ಹಿಂದಕ್ಕೆ ಸರಿದಳು. ಆತ ಒಮ್ಮೆ ಅತ್ತಿತ್ತ ಕಣ್ಣಾಡಿಸಿದ."ನಿಂತ್ಕೋ" ಅದೇ ಗಡಸು ಕಂಠ!ಬಾಯಿಯಿಂದ `ಹಾಂ!' ಉದ್ಗಾರದೊಂದಿಗೆ ಕಾಲಿಗೆ ತಡೆ ಬಿದ್ದಿತು. ಬೆದರಿಕೆಯ ನೋಟದಿಂದ ಬಾಯಗಲಿಸಿ ಅವನನ್ನೇ ನೋಡುತ್ತಿದ್ದಳು.ಹೆಗಲಿನಲ್ಲಿ ಕೋವಿಯ ಬದಲು ಉದ್ದನೆಯ ಬಟ್ಟೆಯ ಚೀಲ ಇಳಿ ಬಿದ್ದಿತ್ತು! ಕೆನ್ನೆ, ಗಲ್ಲಗಳನ್ನು ಮರೆ ಮಾಡುವಂತೆ ಗಡ್ಡ ಬೆಳೆದಿತ್ತು. ಕಣ್ಣಿನಲ್ಲಿ ಮಾತ್ರ ಅದೇ ಚುರುಕುತನ!ಉಟ್ಟಿದ್ದ ಮುದ್ದೆ ಮುದ್ದೆಯಾದ ಬಟ್ಟೆ ಅವನಿಗೆ ಒಪ್ಪುವಂತೆ ಇತ್ತು. ಅವಳ ಕಣ್ಣುಗಳು ಮತ್ತೊಮ್ಮೆ ಅವನ ಹೆಗಲಿನ ಕಡೆಗೆ ಸರಿಯಿತು. ಗಂಟಲಿನಲ್ಲಿ ತಡೆಯಂತಿದ್ದ ಉಗುಳು ನುಂಗಿಕೊಂಡು ಯಾಂತ್ರಿಕವಾಗಿ ಬಾಯಿ ಮುಚ್ಚಿಕೊಂಡಿತು. ಆಸರೆಗಾಗಿ ಮರದ ಕೊಂಬೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು, ತನ್ನ ಭಾರವನ್ನೆಲ್ಲಾ ಅದರ ಮೇಲೆ ಹಾಕಿ ನಿಂತಳು.ಆತ ಅವಳನ್ನು ಓದಿದವರಂತೆ ತುಟಿ ಬಿರಿದು ನಕ್ಕ."ಮತ್ತೆ ನೀನು ಸಿಕ್ಕಿರೋದು ನನ್ನ ಅದೃಷ್ಟ" ಅವನ ಮಾತಿನಲ್ಲಿ ಹಿಂದಿನ ಗಡಸುತನವಿರಲಿಲ್ಲ."ನಿನ್ನ ಜೊತೆಗೆ ಬೇರ್ಯಾರಾದರೂ ಇದ್ದಾರಾ?" ತಗ್ಗಿದ ದನಿಯಲ್ಲಿ ಅತ್ತಿತ್ತ ನೋಟ ಹರಿಸಿ ಕೇಳಿದ."ಊಹುಂ..." ಕುಸಿದು ಬೀಳುವಂತಿತ್ತು ಅವಳ ಸ್ವರ."ನನಗೆ ಹಸಿವಾಗ್ತಿದೆ. ತಿನ್ನೋದಿಕ್ಕೆ ಏನಾದ್ರು ತಂದು ಕೊಡ್ತೀಯಾ?" ಅವಳು ಆಸರೆಗಾಗಿ ಹಿಡಿದಿದ್ದ ಕೊಂಬೆಯನ್ನು ಬಿಟ್ಟು ಕೈಯಲ್ಲಿ ಹಸಿರು ಎಲೆಯನ್ನು ಹಿಡಿದು ಸಣ್ಣ ಸಣ್ಣ ಚೂರುಗಳಾಗಿ ಮಾಡುತ್ತಿದ್ದಳು. ಅವನಿಂದ ತಪ್ಪಿಸಿಕೊಳ್ಳೋದಿಕ್ಕೆ ಇದೊಂದೇ ದಾರಿ!"ಏನು ಆಲೋಚಿಸ್ತಿದ್ದೀಯಾ? ನಿನ್ನ ಹೆದರಿಸೋದಿಕ್ಕೆ ನನ್ನ ಕೈಯಲ್ಲಿ ಕೋವಿಯಿಲ್ಲ. ನಾನು ಅದನ್ನ ಕೆಳಗಿಟ್ಟಿದೀನಿ. ನನಗೆ ಮೋಸ ಮಾಡ್ಬೇಡ. ಕೂಡ್ಲೆ ಬಂದು ಬಿಡು. ನೀನೇನಾದ್ರೂ ಬರದಿದ್ರೆ ನಿನ್ನ ಕಾಟೇಜ್ ಎಲ್ಲಿದೇಂತ ನನಗೆ ಗೊತ್ತು. ಅಲ್ಲಿಗೆ ಬರ್ತೀನಿ"ಆತನ ಮಾತು ಮುಗಿಯುತ್ತಿದ್ದಂತೆ ಹಾರು ನಡಿಗೆಯಲ್ಲಿ ಕಾಟೇಜ್‍ನ ಕಡೆಗೆ ಧಾವಿಸಿದಳು.ಕಾಟೇಜ್‍ಗೆ ನುಗ್ಗುತ್ತಲೇ ಬಾಗಿಲನ್ನು ತಟಕ್ಕನೆ ಮುಚ್ಚಿ ಚಿಲಕ ಸಿಕ್ಕಿಸಿ, ಬಾಗಿಲಿಗೆ ಒರಗಿ ನಿಂತಳು.ಬಾಗಿಲು ಮುಚ್ಚಿದ ಸದ್ದಿಗೆ ನರಂಗ ಹೊರಗೆ ಬಂದ."ಏನಾಯ್ತು? ಮತ್ತೆ ಕಪ್ಪು ಹಲ್ಲಿನ ನೋಡಿ ಹೆದರ್ಕೊಂಡ್ಬಿಟ್ರಾ?" ವ್ಯಂಗ್ಯ ತುಂಬಿದ ದನಿಯಲ್ಲಿ ಕೇಳಿದ.ಕಣ್ಣುಗಳನ್ನು ವಿಶಾಲಗೊಳಿಸಿ ಸಿಟ್ಟು ಪ್ರದರ್ಶಿಸಿದಳು."ನಿಂಗೆ ಎಲ್ಲವೂ ತಮಾಷೆ""ತಮಾಷೆ ಮಾಡದೆ ಇನ್ನೇನು ಮಾಡ್ಲಿ. ವಾರದ ಹಿಂದೆ ಮಿಂಚುಹುಳದ ಬೆಳಕು ಕಂಡು ಅಪ್ಪಯ್ಯ ಬಂದ್ರೂಂತ ನನ್ನ ಆ ಜಡಿ ಮಳೆಗೆ ಅಟ್ಟಿದ್ರಿ..." ಮಾತು ಮುಗಿಯುವ ಮೊದಲೇ ಗಹಗಹಿಸಿ ನಕ್ಕ."ನರಂಗ, ನಿಲ್ಸು..."ಅವಳ ಮಾತಿನ ತೀವ್ರತೆಗೆ ಹೆಗಲ ಮೇಲಿದ್ದ ಬಟ್ಟೆಯನ್ನು ಬಾಯಿಗೆ ಹಿಡಿದು ನಗು ನಿಯಂತ್ರಿಸಿಕೊಂಡ. ಅವನ ಕಣ್ಣುಗಳು ಗಂಭೀರತೆ ಪಡೆದವು."ಅಪ್ಪಯ್ಯ ಎಲ್ಲಿದ್ದಾರೆ?""ಈಗಷ್ಟೆ ಜೀಪು ತಕ್ಕಂಡು ಹೋದ್ರು"ಸೋತವರಂತೆ ಕುಸಿದು ಕುಳಿತಳು. ನರಂಗನಿಗೆ ಯಾಕೋ ಸಂಶಯ ಸುಳಿಯಿತು."ಮತ್ತೆ ಆ ರಾಕ್ಷಸನ್ನ ನೋಡಿದ್ರಾ?"ಯಾವುದೇ ಪ್ರತಿಕ್ರಿಯೆಯಿಲ್ಲದೆ ಕ್ಷಣ ಕಾಲ ಕುಳಿತಿದ್ದವಳು ಮೆಲ್ಲಗೆ ತಲೆ ಅಲುಗಿಸಿದಳು. ನರಂಗನ ಮುಖದಲ್ಲೂ ಬೆದರಿಕೆಯ ಛಾಪು ತುಂಬಿತು."ನೀನು ಅಪ್ಪಯ್ಯಂಗೆ ಆ ವಿಷಯ ಹೇಳಿದ್ದೀಯಾ? ನಾನು ನಿನಗೆ ಹೇಳ್ಬೇಡಾಂತ ತಿಳಿಸಿದ್ದೆ...""ಇಲ್ಲ... ನಾನು ಆ ವಿಷಯ ಅವರಿಗೆ ತಿಳಿಸಿಲ್ಲ"ನೆಮ್ಮದಿಯ ಉಸಿರು ದಬ್ಬಿ ಎದ್ದು ನಿಂತಳು."ನಾವು ತಪ್ಪು ಮಾಡಿದ್ವಿ. ಅವನು ಮನೆಗೆ ಬಂದು ಹೋದ ವಿಷಯ ಅಪ್ಪಯ್ಯನಿಗೆ ತಿಳಿಸಿಬೇಕಿತ್ತು. ಮತ್ತೆ ಅವನ ಭೇಟಿಯಾಗುತ್ತೇಂತ ನಾನು ಅಂದ್ಕೊಂಡಿರಲಿಲ್ಲ""ಮತ್ತೆಲ್ಲಿ ಅವನ್ನ ಕಂಡ್ರಿ?" ಕುತೂಹಲದಿಂದ ಮುಖ ಮುಂದೆ ತಂದ ನರಂಗ."ಕಳ್ಳಿಯ ಬೇಲಿಯ ಹತ್ತಿರ. ಅವನಿಗೆ ತಿನ್ನೋದಿಕ್ಕೆ ಏನಾದ್ರೂ ಬೇಕಂತೆ""ತಿನ್ನೋದಿಕ್ಕಾ? ಮಾಡಿಟ್ಟ ಆಡುಗೆ ಮಧ್ಯಾಹ್ನಕ್ಕೆ ಖಾಲಿಯಾಗಿದೆ. ರಾತ್ರಿಯ ತಯಾರಿ ಇನ್ನು ಆಗ್ಬೇಕಿದೆ. ಬೇಕಿದ್ರೆ ನಿನ್ನೆ ತಂದಿದ್ದ ಒಣ ಬ್ರೆಡ್ ಇದೆ" ನರಂಗನ ದನಿಯಲ್ಲಿ ಕಂಪನವಿತ್ತು."ನೀನೊಂದು ಕೆಲ್ಸ ಮಾಡು. ನಾನು ಕಾಟೇಜ್‍ನಲ್ಲಿರ್ತೀನಿ. ನೀನು ಆ ಬ್ರೆಡನ್ನು ಅವನಿಗೆ ಕೊಟ್ಬಿಟ್ಟು ಬಾ. ಆತ ಇನ್ನೂ ಆ ಕಳ್ಳಿಯ ಬೇಲಿ ಹತ್ರ ಕಾಯ್ತಿರಬಹುದು""ನ... ನಾ...ನು... ಇಲ್ಲ... ನೀವೇ ಹೋಗ್ಬನ್ನಿ" ನಿರಾಕರಿಸಿದ ನರಂಗ.ರಶ್ಮಿಯ ಎದೆಯೊಳಗೆ ಸಣ್ಣಗೆ ಒರೆ ಕಲ್ಲಿಗೆ ಕುಟ್ಟುವ ಹಾಗೇ ಸದ್ದು."ನೀವು ಸುಮ್ನಿರಿ. ಅವನೇನು ಮಾಡ್ತಾನೆ? ಅಲ್ಲಿಗೆ ಹೋಗೋದು ಬೇಡ" ನರಂಗ ಹೇಳುವುದರಲ್ಲಿ ಸತ್ಯವಿದೆಯೆನಿಸಿತು. ಅವನನ್ನು ಯಾಕೆ ಉಪಚರಿಸಬೇಕು?`...ನೀನು ಬರದಿದ್ರೆ ನಿನ್ನ ಕಾಟೇಜ್‍ಗೆ ಬಂದು ಬಿಡ್ತೀನಿ' ಅವನ ಮಾತುಗಳು ಎಚ್ಚರಿಸಿದವು."ನರಂಗ, ನೀನೂ ನನ್ನ ಜೊತೆಗೆ ಬಂದು ಬಿಡು. ನಾನು ಅವನಿಗೆ ತಿನ್ನೋದಿಕ್ಕೆ ಕೊಡದಿದ್ರೆ... ಆತ ಮತ್ತೆ ಇಲ್ಲಿ ಬಂದು ತೊಂದ್ರೆ ಕೊಟ್ಟಾನು"ನರಂಗ ಅಡುಗೆ ಕೋಣೆಗೆ ನುಗ್ಗಿ ಬ್ರೆಡನ್ನು ಒಂದು ಪ್ಲಾಸ್ಟಿಕ್ ಚೀಲಕ್ಕೆ ಸೇರಿಸಿ ಅಷ್ಟೇ ವೇಗದಲ್ಲಿ ಹೊರಗೆ ಬಂದ. ಯೋಚಿಸುವಷ್ಟು ಸಮಯವಿಲ್ಲ. ಎದೆ ಬಡಿತ ಏರುತ್ತಿದ್ದಂತೇ ಇಬ್ಬರೂ ಕಲ್ಲುಗಳ ಮೇಲೆ ಕಾಲೂರಿಕೊಂಡು ಕಳ್ಳಿಯ ಗಿಡದ ಬೇಲಿಯ ಬಳಿ ಬಂದು ಮರದ ಮರೆಗೆ ನಿಂತರು."ನೀನು ಮುಂದೆ ಹೋಗು. ಅದನ್ನ ಅವನಿಗೆ ಕೊಟ್ಬಿಡು"ನರಂಗ ಹೆದರುತ್ತಲೇ ಕಳ್ಳಿಯ ಬೇಲಿಯ ಬಳಿ ನಡೆದು ಸುತ್ತಲೂ ನೋಡಿದ. ಅಲ್ಲಿ ಆ ವ್ಯಕ್ತಿ ಇರಲಿಲ್ಲ!ನರಂಗ ಧೈರ್ಯ ತಂದುಕೊಂಡು ಬೇಲಿಯ ಬದಿಯಿಂದ ಕಾಲು ಸರಿಸಿದ. ಮರೆಯಲ್ಲಿ ನಿಂತಿದ್ದ ರಶ್ಮಿ ಇಣುಕಿ ನರಂಗನನ್ನೇ ಗಮನಿಸುತ್ತಿದ್ದಳು.ಏಕಾಏಕಿ ಅವಳ ಭುಜಗಳ ಮೇಲೆ ಬಲವಾದ ಕೈಗಳು ಬಿದ್ದವು!ಬೆಚ್ಚಿ ಹಿಂತಿರುಗಿದವಳು ಕಿಟಾರನೆ ಕಿರುಚಿದಳು."ಕೊಟ್ಬಿಡು... ಬೇಗ ಕೊಟ್ಬಿಡು... ನಾನು ಅದನ್ನು ತಿಂದು ದೂರ ಹೋಗ್ತೀನಿ. ಇಲ್ಲಾಂದ್ರೆ... ಅವರು ನನ್ನ ಸಾಯಿಸಿ ಬಿಡ್ತಾರೆ..."ಹಣೆಯ ಭಾಗದಿಂದ ರಕ್ತ ಸುರಿದು ಎಡ ಕಣ್ಣಿನಿಂದ ಇಳಿದು ಕೆನ್ನೆಯನ್ನೆಲ್ಲಾ ತೋಯಿಸಿತ್ತು. ಯಾರೋ ಅವನ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದಂತಿತ್ತು.ನರಂಗ ಅಲ್ಲಿಗೆ ಓಡು ನಡುಗೆಯಲ್ಲಿ ಬಂದ. ಆ ವ್ಯಕ್ತಿ ರಶ್ಮಿಯ ಹೆಗಲಿಗೆ ಮುಖವಿರಿಸಿದಂತೆ ನಿಂತಿದ್ದ! ರಶ್ಮಿ ಚೇತರಿಸಿಕೊಂಡು ಅವನನ್ನು ನಿಧಾನಕ್ಕೆ ಹಿಂದಕ್ಕೆ ಸರಿಸಿದಳು. ಆತ ಬಲಹೀನನಂತೆ ತನ್ನ ಭಾರವನ್ನೆಲ್ಲ ಅವಳ ಮೇಲೆ ಹಾಕಿದ್ದ. ಅವನ ಕಿಸೆಯಿಂದ ಕಾಗದದ ತುಂಡೊಂದು ಕೆಳಗೆ ಬಿತ್ತು."ನರಂಗ, ಹಿಡ್ಕೋ... ನಿಧಾನಕ್ಕೆ... ಕೂರಿಸ್ಬಿಡು" ರಶ್ಮಿ ಹೇಳುತ್ತಾ ಕೆಳಬಿದಿದ್ದ ಕಾಗದದ ತುಂಡನ್ನು ಎತ್ತಿಕೊಂಡಳು.ನರಂಗನ ಸಹಾಯದಿಂದ ಆತ ಕಲ್ಲು ನೆಲದ ಮೇಲೆ ಕುಳಿತ. ತೊಟ್ಟಿದ್ದ ಬಟ್ಟೆಗಳು ಚಿಂದಿಯಾಗಿ ಅಲ್ಲಲ್ಲಿ ರಕ್ತ ಒಸರುತ್ತಿದ್ದವು. ನರಂಗ ಕೈಯಲ್ಲಿದ್ದ ಬ್ರೆಡನ್ನು ಅವನಿಗೆ ನೀಡಿದ. ಹಸಿದು ಕಂಗಾಲಾಗಿದ್ದ ವ್ಯಕ್ತಿ ಗಬ ಗಬ ತಿನ್ನಲಾರಂಭಿಸಿದ. ಆತನ ಕಣ್ಣುಗಳಲ್ಲಿ ಧನ್ಯತೆಯ ಭಾವ ತುಂಬಿತ್ತು. ಚೀಲದಿಂದ ನೀರಿನ ಸೀಸೆಯನ್ನು ತೆರೆದು ಗಟಗಟನೆ ಕುಡಿದು ಸೆಟೆದು ಕುಳಿತ."ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ" ಇಬ್ಬರಿಗೂ ಕೈ ಮುಗಿದು ಚೈತನ್ಯ ತುಂಬಿದವರಂತೆ ಎದ್ದು ನಿಂತ.ಅವರು ನೋಡುತ್ತಿದ್ದಂತೆ ಕಲ್ಲು, ಮುಳ್ಳುಗಳ ಕೊರಕಲು ದಾರಿಯ ಇಳಿಜಾರಿಗೆ ನಡೆದು ಹೋದ.ಕಾಟೇಜ್‍ಗೆ ಮರಳಿದ ರಶ್ಮಿಗೆ ಅವನೊಬ್ಬ ವಿಚಿತ್ರವಾಗಿ ಕಂಡ. ಯಾವುದೋ ಮೋಸದ ಜಾಲದಲ್ಲಿ ಸಿಕ್ಕಿ ಬಿದ್ದಿರಬಹುದು! ಅಥವಾ ಯಾರದೋ ಕೈಯ ಸಾವಿನಿಂದ ತಪ್ಪಿಸಿಕೊಂಡು ಬಂದಿರಬಹುದು!"ನರಂಗ, ಈ ವಿಷಯ ಅಪ್ಪಯ್ಯನಿಗೆ ಹೇಳ್ಬೇಡ. ಹಾಗಂತ ಪ್ರಾಮಿಸ್ ಮಾಡು. ನಾನು ಹೇಗಿದ್ರೂ ಇವತ್ತು ರಾತ್ರಿಗೆ ಬೆಂಗಳೂರಿಗೆ ಹೊರಡ್ತೀನಿ" ಯಾಕೋ ಆ ಏಟು ತಿಂದಿದ್ದ ವ್ಯಕ್ತಿಯ ಬಗ್ಗೆ ಮರುಕ ಹುಟ್ಟಿತು ರಶ್ಮಿಗೆ."ನೀವು ಈ ವಿಷಯಾನ ಮುಚ್ಚಿಟ್ರೆ... ಮತ್ತೊಂದು ದಿನ ನಮಗೇ ಅಪಾಯವಾಗ್ಬಹುದು. ನಾನು ಹೇಳಿದ್ನಲ್ಲ ಈ ಬೆಟ್ಟದಲ್ಲಿ ರಾಕ್ಷಸರಿದ್ದಾರೇಂತ... ನಿಮ್ಮ ಅಪ್ಪಯ್ಯನಿಗೆ ಹೇಳಿದ್ರೆ ಏನಾದರೊಂದು ಪರಿಹಾರ ಸೂಚಿಸ್ಬಹುದು"ರಶ್ಮಿಗೇಕೋ ನರಂಗನ ಮಾತು ಹಿಡಿಸಲಿಲ್ಲ."ನರಂಗ, ನೀನು ಪ್ರಾಮಿಸ್ ಮಾಡಿದ್ದೀಯಾ. ಈ ವಿಷಯ ಯಾರಿಗೂ ತಿಳಿಸ್ಬೇಡಾ" ಅವನನ್ನು ಎಚ್ಚರಿಸುವಂತೆ ಹೇಳಿದಳು.ಪೆಟ್ಟು ತಿಂದಿದ್ದ ಅಜಾನುಬಾಹು ವ್ಯಕ್ತಿಯ ಬಗ್ಗೆ ಏನೋ ನವಿರು ಭಾವನೆ ರಶ್ಮಿಯ ಎದೆಯಲ್ಲಿ!
***
ಅಂದು ರಾತ್ರಿ ಅಪ್ಪಯ್ಯನಿಗೆ ಹೇಳಿ ಬೆಂಗಳೂರಿಗೆ ಹೊರಟು ನಿಂತಳು. ಜೀಪು ಕಾಡಿನ ಮಧ್ಯದ ಮಣ್ಣು ರಸ್ತೆಯನ್ನು ಹೆಡ್‍ಲೈಟ್‍ನ ಬೆಳಕಿನಲ್ಲಿ ಸೀಳಿಕೊಂಡು ಕುಲುಕುತ್ತಾ ಸಾಗುತ್ತಿತ್ತು.ಅರಣ್ಯ ಅಧಿಕಾರಿ ಮಲ್ಲಯ್ಯ ಮಗಳ ಕಡೆಗೊಮ್ಮೆ ದೃಷ್ಟಿ ಬೀರಿ ಜೀಪಿನ ವೇಗವನ್ನು ಹೆಚ್ಚಿಸಿದ. ರಶ್ಮಿ ಸೀಟ್‍ಗೆ ಸರಿದು ಕುಳಿತು ಎದುರಿನ ಕಬ್ಬಿಣದ ಪಟ್ಟಿಯನ್ನು ಗಟ್ಟಿಯಾಗಿ ಹಿಡಿದುಕೊಂಡಳು.ಹಣೆಗೆ ಕೈಯೊತ್ತಿಕೊಂಡಂತೆ ವ್ಯಕ್ತಿಯೊಬ್ಬ ರಪ್ಪನೆ ಜೀಪಿಗೆ ಅಡ್ಡ ನಿಂತ!ರಶ್ಮಿ ಕಣ್ಣುಗಳನ್ನು ಕಿರಿದುಗೊಳಿಸಿ ನೋಡಿದಳು. ಸಂಶಯವೇ ಇಲ್ಲ, ಕಳ್ಳಿಯ ಬೇಲಿ ಬದಿಗೆ ಕಂಡ ವ್ಯಕ್ತಿ!"ಸರ್, ಆ ಕಡೆಗೆ ಹೋಗೋದಿಕ್ಕೆ ಆಗ್ತಾ ಇಲ್ಲ. ಸೇತುವೆ ಕುಸಿದು ಬಿದ್ದಿದೆ"ಆತ ಹೇಳಿ ಅಲ್ಲಿ ನಿಲ್ಲದೆ ರಸ್ತೆಯಂಚಿನಿಂದ ಕಾಡಿನೊಳಗೆ ತೂರಿಕೊಂಡ."ಅವನ್ಯಾರು... ನಾನು ಈಗ ತಾನೇ ಸಿಟಿಯಿಂದ ಬಂದೆ" ಆಶ್ಚರ್ಯ ತೋರಿಸಿದ ಅರಣ್ಯಾಧಿಕಾರಿ.ರಶ್ಮಿಯ ತಲೆಗೇನೋ ಹೊಳೆಯಿತು."ಅಪ್ಪಯ್ಯ, ಹಿಂದಕ್ಕೆ ಹೋಗೋಣ"ಅಧಿಕಾರಿ ಮತ್ತೊಮ್ಮೆ ಮಗಳ ಕಡೆಗೆ ನೋಡಿದ. ಅವಳ ಮುಖದಲ್ಲಿ ಭೀತಿ ತುಂಬಿದಂತಿತ್ತು.ಕಾಟೇಜ್‍ಗೆ ಮರಳುವಷ್ಟರಲ್ಲಿ ಮಳೆ ಹನಿಯಲಾರಂಭಿಸಿತು. ಕೈಯಲ್ಲಿದ್ದ ಬ್ಯಾಗನ್ನು ದಡಕ್ಕನೆ ಜಗಲಿಯ ಮೇಲೆ ಎಸೆದು ನಿಂತವಳಿಗೆ ಏನೋ ಭಾರಿ ಸದ್ದು ಕೇಳಿಸಿತು.ಅಧಿಕಾರಿಯೂ ಮುಖ ಹೊರಕ್ಕೆ ತೂರಿಸಿ ನೋಡಿದ.ಸೇತುವೆಯಾಚೆಯಿಂದ ಕೇಳಿಸಿದ ಭಾರಿ ಸ್ಫೋಟ!ಅಂದರೆ ಸೇತುವೆ ಸ್ಫೋಟಗೊಂಡಿದೆ!ತಲ್ಲಣಿಸಿ ಹೋದವರಿಗೆ ಬೆಳಾಗಾಗುವವರೆಗೆ ನಿದ್ದೆ ಸುಳಿಯಲಿಲ್ಲ. ಅಧಿಕಾರಿ ಜೀಪು ಹಿಡಿದುಕೊಂಡು ಸೇತುವೆಯ ಕಡೆಗೆ ಹೊರಟ.ರಶ್ಮಿ ರೇಡಿಯೋ ಹಚ್ಚಿದಳು.ಗುಡುಗೊಂದು ಬೆಟ್ಟದ ತುದಿಯಲ್ಲಿ ಸ್ಫೋಟಿಸಿದಂತಾಯಿತು. ರೇಡಿಯೋ ಕರಕರ ಸದ್ದು ಹೊರಟಿಸಿತು. ವಾರ್ತೆ ಮಾತ್ರಾ ಮುಂದುವರಿದಿತ್ತು."ಆತ ಹೋರಾಟಗಾರನಾಗಿರಬೇಕು. ಸೇತುವೆ ಸ್ಫೋಟಗೊಂಡಿದ್ದು ಅವನಿಂದನೇ...""ನರಂಗ, ನನಗೆಲ್ಲಾ ಗೊತ್ತು. ನೋಡು ಈ ಕಾಗದ. ಅವನ ಕಿಸೆಯಿಂದ ಬಿದ್ದಿರೋದು. ಆತ ನಕ್ಸಲೇಟ್ ಆಗಿದ್ದ. ಆದ್ರೆ... ಅವರೊಳಗೆ ಮನಸ್ತಾಪ ಬಂದು ಅವರಿಂದ ಬೇರೆಯಾಗಿದ್ದ. ತಾನು ಒಳ್ಳೆ ವ್ಯಕ್ತಿ ಆಗ್ಬೇಕೂಂತ ಏನೆಲ್ಲಾ ಯೋಜನೆ ಹಾಕಿದ್ನಂತೆ. ಆದ್ರೆ... ಆ ಧೂರ್ತರು ಅವನನ್ನು ಬಿಡಲಿಲ್ಲ ಕಾಣ್ಬೇಕು. ಎಲ್ಲಿ ತಮ್ಮ ಯೋಜನೆಗಳೆಲ್ಲವನ್ನೂ ಸರಕಾರಕ್ಕೆ ತಿಳಿಸುತ್ತಾನೋ ಏನೋಂತ ಅವನನ್ನು ಮುಗಿಸ್ಲಿಕ್ಕೆ ನೋಡಿದ್ರು... ಆತ ನಾವು ನೆನ್ನೆ ರಾತ್ರಿಗೆ ಬೆಂಗಳೂರಿಗೆ ಹೊರಟಾಗ ಸೇತುವೆ ಕುಸಿದಿದೇಂತ ಸುಳ್ಳು ಹೇಳಿದ್ದ. ಅಂದ್ರೆ ಆತನಿಗೆ ಸೇತುವೆಯನ್ನು ಸ್ಫೋಟಗೊಳಿಸುವ ವಿಷಯ ತಿಳಿದಿತ್ತೂಂತ ಕಾಣ್ಸುತ್ತೆ. ನಮ್ಮನ್ನು ಸಾವಿನ ದವಡೆಯಿಂದ ಪಾರು ಮಾಡ್ದ. ಹೀ ಈಸ್ ಗ್ರೇಟ್... ಆದ್ರೆ ಆ ಧೂರ್ತರು ಅವನು ಒಳ್ಳೆಯವನಾಗೋದಿಕ್ಕೆ ಬಿಡ್ಲಿಲ್ಲ... ನನ್ನ ಕನಸುಗಳನ್ನೂ... ಅವನ್ನ ಸಾಯಿಸಿದ್ರು...." ಕುಸಿದು ಕುರ್ಚಿಯಲ್ಲಿ ಕುಳಿತು ಮೇಜಿನ ಮೇಲೆ ತಲೆಯಿರಿಸಿದಳು. ಕಣ್ಣಂಚಿನಿಂದ ನೀರಿನ ಹನಿಗಳು ಆತ ಬರೆದಿದ್ದ ಪತ್ರದ ಮೇಲೆ ಬೀಳುತ್ತಿತ್ತು....ನೆನಪಿನಾಳದಿಂದ ಹೊರ ಬಂದವಳನ್ನು ಕರಗಿದ ಮೋಡದ ಹನಿಗಳು ಸ್ವಾಗತಿಸಿದವು.

Read more!

Tuesday, December 9, 2008

ಹಸಿರು ಮಿಡತೆ


(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕಥೆ)

ಮೇಜಿನ ಮೇಲಿದ್ದ ದೀಪದ ಜೊತೆಗೆ ಆಟವಾಡುತ್ತಾ ತಟ್ಟನೆ ಏನೋ ನೆನಪಿಸಿಕೊಂಡು ಮೈ ಅದುರಿಸಿದಳು ರಚನಾ!ರಾತ್ರೋ ರಾತ್ರಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಆವರಣ ಗೋಡೆಯ ಹಿಂದಿರುವುದೇನು? ಅನ್ನುವ ಕುತೂಹಲ ಇನ್ನೂ ತಣಿದಿರಲಿಲ್ಲ! ಗೇಟ್‍ನ ಸಂಧಿಗೆ ಕಣ್ಣುಗಳನ್ನು ತೂರಿಸಿ ಹುಡುಕುವ ಪ್ರಯತ್ನ ಮಾಡುತ್ತಿದ್ದಳು.ತಾನು ಓಡಾಡಿದ ಸ್ಯಾಮ್ ಅಂಕಲ್‍ನ ಎಸ್ಟೇಟ್ ಅದು! ಕಿತ್ತಳೆ ಹಣ್ಣುಗಳನ್ನು ಕಿತ್ತು, ಸ್ಯಾಮ್ ಅಂಕಲ್‍ನ ಜೊತೆಗೆ ಎಸ್ಟೇಟ್‍ನ ಹುಲ್ಲುಗಳ ಮೇಲೆ ನಡೆದಾಡಿದ್ದಳು. ಕೈಯಲ್ಲಿ ಕೋವಿ ಹಿಡಿದುಕೊಂಡೆ ಆತ ಜೀಪನ್ನೇರುತ್ತಿದ್ದ!ಕಿತ್ತಳೆಯ ಸಿಪ್ಪೆ ಸುಲಿದು ಅದೆಷ್ಟೋ ಬಾರಿ ಅದರ ರಸವನ್ನು ಅವನ ಕಣ್ಣಿಗೆ ಹಾರಿಸಿದ್ದಳು.

"ನೀನು ಬಾರಿ ಚಾಲಾಕಿನ ಹುಡುಗಿ. ಹಸಿರು ಮಿಡತೆ ತರಹ ಚುರುಕಾಗಿದ್ದಿಯಾ. ನೀನು ಈ ಎಸ್ಟೇಟ್‍ಗೆ ಮಗಳಾಗಿ ಬರ್ತೀಯಾ? ಈ ಎಸ್ಟೇಟ್‍ಗೆ ನಿನಗಿಂತ ಒಳ್ಳೆ ವಾರ್‍ಅಸುದಾರರು ಬೇರಾರು ಸಿಗಲಿಕ್ಕಿಲ್ಲ. ನೀನೇ ಸರಿಯಾದ ಒಡತಿ" ಮಕ್ಕಳಿಲ್ಲದ ಸ್ಯಾಮ್ ಅಂಕಲ್‍ನ ಕಣ್ಣುಗಳಲ್ಲಿ ಆಸೆಯ ದೀಪವಿತ್ತು.

"ಅಂಕಲ್, ನೀವು ನನ್ನ ಛೇಡಿಸ್ತಿದ್ದೀರಾ?... ಇಷ್ಟು ದೊಡ್ಡ ಎಸ್ಟೇಟ್‍ನ ನಾನು ನಿಭಾಯಿಸಲಾರೆ. ನಿಮ್ಮ ಜೊತೆಗೆ ಸುತ್ತಾಡೋದಿಕ್ಕೆ ನಾನು ಬರ್ತೀನಿ.."ಸ್ಯಾಮ್‍ನ ಕಣ್ಣುಗಳು ಹನಿಗೂಡಿದವು.

"ವೈಶಾಲಿ ಹೋದ ನಂತರ ನನ್ನ ಆಸಕ್ತಿಯೆಲ್ಲಾ ಬಿದ್ದೋಯ್ತು. ನಿನ್ನ ತಂದೆ ಗಿರಿಯಪ್ಪನ ಕೇಳ್ದೆ. `ನನಗಿರೋಳು ಒಬ್ಳೆ ಮಗಳು. ಹೇಗಯ್ಯಾ ನಿನ್ನ ಎಸ್ಟೇಟ್‍ಗೆ ಕಳುಹಿಸ್ಲಿ?' ಅಂದು ನಿರಾಕರಿಸಿ ಬಿಟ್ಟ. ಎಸ್ಟೇಟನ್ನು ಮಾರೋದಿಕ್ಕೆ ನಂಗೆ ಇಷ್ಟವಿಲ್ಲ. ನಿನ್ನಂತಹ ಚುರುಕಿನ ಹುಡುಗಿ ನನ್ನ ಎಸ್ಟೇಟಿಗೆ ಬೇಕಿತ್ತು"

"ಅಂಕಲ್, ನಾನು ಯಾವತ್ತೂ ನಿಮ್ಮ ಜೊತೆಗಿರ್ತೀನಿ. ಆದರೆ ಎಸ್ಟೇಟ್‍ನ ವಾರಸುದಾರಿಕೆ ಬೇಡ"ಅವಳ ಮಾತಿಗೆ ಪ್ರೀತಿಯಿಂದ ಮೈದಡವಿದ್ದ...ಆಲೋಚನೆಯ ಗುಂಗಿನಲ್ಲಿರುವಾಗಲೇ ಅವಳಿಗೆ ಗೋಚರಿಸಿತ್ತು, ಗೋಡೆಯ ಮೇಲೆ ಬಿದ್ದ ನೆರಳು!

ಸಂಧಿನಿಂದ ಕಣ್ಣುಗಳನ್ನು ಹಿಂದಕ್ಕೆಳೆದುಕೊಂಡು ತನ್ನ ತಲೆಗೆ ಕುಟ್ಟಿಕೊಂಡಳು. ತನ್ನದೇ ನೆರಳನ್ನು ಕಂಡು ಹೆದರುವ ತಾನೊಬ್ಬಳು ಎಂತಹ ಧೈರ್ಯವಂತೆ!ಆದರೆ.. ಈಗ ಅವಳಿಗೆ ಸ್ಪಷ್ಟವಾಯಿತು. ಅದು ತನ್ನ ನೆರಳಲ್ಲ!ಗೋಡೆಗೆ ಹತ್ತಿರವಾಗಿರುವಾಗ ನೆರಳು ಹಾಗೇ ಬೀಳಲಾರದು! ಅಂದರೆ... ತನ್ನನ್ನು ಯಾವುದೋ ವ್ಯಕ್ತಿ ಹಿಂಬಾಲಿಸಿದ್ದ! ಇನ್ನು ಸ್ವಲ್ಪ ಸಮಯ ತಾನು ಅಲ್ಲಿರುವ ಹಾಗಿದ್ದರೆ ಆ ವ್ಯಕ್ತಿ ಗೋಚರಿಸುತ್ತಿದ್ದ! ಆದರೆ ತಾನು ಯಾರದೋ ಪಿಸು ಮಾತುಗಳನ್ನು ಕೇಳಿ ದಾಪುಗಾಲು ಹಾಕಿ ಮನೆ ಸೇರಿದ್ದೆ! ಆ ಮಾತುಗಳು ಈಗಲೂ ನೆನಪಿದೆ...

"ಆ ಹುಡುಗಿ ಇದ್ದಾಳಲ್ಲ... ಹಸಿರು ಮಿಡತೆ... ಈಗ ಇಲ್ಲಿ ಕಾಣಿಸ್ಕೊಂಡಿದ್ಲು.. ತಿರುಗಿ ನೋಡ್ತೀನಿ ಸುಯ್ಯಂತ ಹಾರಿ ಹೋದ್ಲು"ತಾನು ಗೋಡೆಯ ಸುತ್ತಲೂ ಮಾರು ದೂರ ನಡೆದಿದ್ದನ್ನು ಎಸ್ಟೇಟಿನ ಒಳಗಿದ್ದ ವ್ಯಕ್ತಿ ಗಮನಿಸಿದ್ದಾನೆ! ಇನ್ನೊಬ್ಬ ವ್ಯಕ್ತಿ ತನ್ನನ್ನು ಹಿಂಬಾಲಿಸಿದ್ದಾನೆ! ಆ ವ್ಯಕ್ತಿಯ ನೆರಳನ್ನು ತಾನು ಕಂಡಿದ್ದು!ಮೈ ಬೆವರಿತು! ಸ್ವಿಚ್ ಹಿಡಿದ ಕೈ ತರತರ ಕಂಪಿಸಿತು.ಕಣ್ಣು ಮುಚ್ಚಿಕೊಂಡು ಮತ್ತೊಮ್ಮೆ ನೆನಪಿಸಿಕೊಂಡಳು ರಚನಾ. ನೆರಳು ಗೋಡೆಯ ಮೇಲೆ ಸ್ಪಷ್ಟವಾಗಿ ಮೂಡಿತ್ತು. ಆದರೆ ಅರ್ಧದಷ್ಟು ಮಾತ್ರ!ಅಂದರೆ ವ್ಯಕ್ತಿ ದೂರದಲ್ಲಿದ್ದ!

`ಬೆಳಗ್ಗಿನ ಮತ್ತು ಸಂಜೆಯ ಸೂರ್ಯಕಿರಣಗಳು ಭೂಮಿಗೆ ವಕ್ರವಾಗಿ ಬೀಳುವುದರಿಂದ ನೆರಳು ಉದ್ದವಾಗಿ ಕಾಣುತ್ತದೆ'ಅಂದರೆ... ವ್ಯಕ್ತಿ ದೂರದಲ್ಲಿರಲಿಲ್ಲ... ತನ್ನ ಹತ್ತಿರದಲ್ಲೆ ಇದ್ದ!ಆ ವ್ಯಕ್ತಿ ತನ್ನನ್ನು ಹಿಂಬಾಲಿಸಿ ತನಗೆ ಅಪಾಯವನ್ನು ಮಾಡಲಿದ್ದಾನೆ! ದೀಪ ಆರಿಸಿ ಬಂದು ಹಾಸಿಗೆ ಸೇರಿದವಳಿಗೆ ಏನೇನೋ ವಿಚಿತ್ರ ಕನಸುಗಳು.
***

ಉದ್ದಕ್ಕೂ ಹರಡಿಕೊಂಡಿದ್ದ ಮುಳ್ಳು ಬೇಲಿಯನ್ನು ಆದರಿಸಿ ಇಬ್ಬನಿ ತುಂಬಿದ ಹುಲ್ಲು ಹಾದಿಯ ಮೇಲೆ, ಸೀರೆಯನ್ನು ಎತ್ತಿ ಹಿಡಿದು ನಡೆಯುತ್ತಿದ್ದಳು ರಚನಾ. ಗೋಡೆಯಾಚೆ ನಡೆಯುವ ವಿದ್ಯಮಾನವಿನ್ನೂ ಅಸ್ಪಷ್ಟ. ಮುಂಜಾನೆಯ ಹೊತ್ತಿಗೆ ಅಲ್ಲಿ ಯಾರೂ ಇರಲಾರೆಂಬ ಧೈರ್ಯದಿಂದ ಸಾಹಸಕ್ಕೆ ಇಳಿದಿದ್ದಳು.`ಯಾರೋ ಅಸಾಮಿ... ಎಸ್ಟೇಟನ್ನು ಮಾರ್ತೀರಾಂತ ಕೇಳ್ದ. ಇಲ್ಲಾಂದೆ.. ಬೆದರಿಸಿ.. ನೋಡ್ಕೋತಿನಿ.. ಅಂತ ಹೇಳಿ ಹೋದ. ನನಗೆ ಅಪಾಯ ತಪ್ಪಿದ್ದಲ್ಲ' ಸ್ಯಾಮ್ ಅಂಕಲ್‍ನ ಮಾತುಗಳು.ಅದೇ ತನ್ನ ಹಾಗೂ ಸ್ಯಾಮ್ ಅಂಕಲ್‍ನ ಕೊನೆಯ ಭೇಟಿ! ಸ್ಯಾಮ್ ಅಂಕಲ್ ಎಲ್ಲಿ ಹೋದ್ರು? ಏನಾದ್ರೂ? ಯಾವುದೂ ತಿಳಿದಿಲ್ಲ. ಆ ಆಗಂತುಕ ಅವರಿಗೆ ಅಪಾಯ ತಂದಿರಬಹುದು!ಗೇಟಿನ ಸಂಧಿಯಲ್ಲಿ ಒಳಗೆ ದೃಷ್ಟಿ ಹರಿಸಿದಳು. ಆವರಣದ ಗೋಡೆಯಷ್ಟು ಎತ್ತರಕ್ಕಿರುವ ಗೇಟಿನ ಬಾಗಿಲುಗಳು ಬೀಗ ಜಡಿದು ಭದ್ರವಾಗಿವೆ!ಅದಾಗಲೇ ಯಾವುದೋ ವಾಹನದ ಯಂತ್ರದ ಮೊರೆತದ ಸದ್ದು ಕೇಳಿಸಿತು! ಒಂದೆ ಉಸುರಿಗೆ ಗೇಟಿನ ಬಳಿಯಿಂದ ಹಾರಿ ಪೊದೆಯ ಹಿಂದೆ ಅವಿತು ಕುಳಿತಳು. ಇಬ್ಬನಿಯಲ್ಲಿ ತೊಳೆದ ಜೇಡರ ಬಲೆಯೊಂದು ಮುಖಕ್ಕೆ ಅಂಟಿಕೊಂಡಾಗ ಅಸಹ್ಯವೆನಿಸಿತು.ಅದೇ ಸಮಯಕ್ಕೆ ವಾಹನ ಬಂದು ನಿಂತಿತು. ಯಂತ್ರದ ಸದ್ದೂ ನಿಂತಿತು. ದಪ್ಪನೆಯ ಕುಳ್ಳಗಿನ ವ್ಯಕ್ತಿ ವಾಹನದಿಂದ ಇಳಿದು ಬೀಗ ತೆರೆದ. ಮತ್ತೆ ವಾಹನವೇರಬೇಕೆನ್ನುವಾಗ ಅವನಿಗೆ ಸಂಶಯ ಬಂದವರಂತೆ ನೋಡುತ್ತಿದ್ದ. ಗೇಟಿನ ಬಳಿಯಿಂದ ಪೊದೆಯವರೆಗೆ ದೃಷ್ಟಿ ಹಾಯಿಸಿದ. ಯಾರೋ ನಡೆದು ಕೊಂಡು ಹೋದಂತೆ ಹುಲ್ಲಿನ ಮೇಲಿನ ಇಬ್ಬನಿ ಕರಗಿತ್ತು! ಪೊದೆಯ ಬಳಿ ಹೆಜ್ಜೆ ಹಾಕಲಾರಂಭಿಸಿದ.ರಚನಾಳ ಎದೆ ಬಡಿತ ತೀವ್ರವಾಯಿತು. ತಾನೀಗ ಆತನ ಕೈಗೆ ಸಿಕ್ಕಿ ಬೀಳಲಿದ್ದೇನೆ!! ಉಸಿರು ಬಿಗಿ ಹಿಡಿದಳು.ಆತ ತಟ್ಟನೆ ನಿಂತು ಬಿಟ್ಟ. ಒಂದೆರಡು ಬಾರಿ ವಿಸಿಲ್ ಹಾಕಿದ. ಮುಖ ಹೊರಳಿಸಿದಳು ರಚನಾ. ದೂರದಲ್ಲಿ ಕಂಪೌಂಡಿನ ಅಂಚಿಗೆ ಸರಿದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕಾಣಿಸಿದ! ಸಧ್ಯ ತನ್ನನ್ನು ಕುಳ್ಳಗಿನ ವ್ಯಕ್ತಿ ನೋಡಿಲ್ಲ! ಸಮಾಧಾನದ ಉಸಿರು ದಬ್ಬಿದಳು.ಆತ ಮತ್ತೆ ವಾಹನವೇರಿ ಯಂತ್ರವನ್ನು ಚಾಲನೆಗೆ ತಂದು, ಮುಂದಕ್ಕೋಡಿಸಿದ. ಮತ್ತೆ ವಾಹನ ನಿಂತ ಸದ್ದು!ತಟ್ಟನೆ ಪೊದೆಗಳಿಂದ ಹೊರಗೆ ಬಂದು ಎಸ್ಟೇಟಿನ ಒಳಗೆ ದೃಷ್ಟಿ ಹಾಯಿಸಿದಳು. ಹಳದಿ ಬಣ್ಣದ ಮರಳ ರಾಶಿ!ಗೇಟಿನ ಬಾಗಿಲುಗಳು ಮುಚ್ಚಿಕೊಳ್ಳುತ್ತಲೆ ಸರಿದು ಮರೆಯಾಗಿ ನಿಂತಳು. ಇನ್ನು ಸ್ವಲ್ಪ ಹೊತ್ತು ತಾನು ಅಲ್ಲಿ ನಿಂತಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೆ! ವೇಗದ ನಡುಗೆಯಲ್ಲಿ ಮುಂದೆ ಸರಿದಳು. ಗೋಡೆಯ ಅಂಚಿಗೆ ಸರಿದು ಹೋಗುತ್ತಿದ್ದ ವ್ಯಕ್ತಿಯನ್ನು ನೋಡಿ ಅತ್ತ ಹೆಜ್ಜೆ ಸರಿಸಿದಳು. ಇವಳು ನೋಡುತ್ತಿದ್ದಂತೆಯೇ ಆತ ಇಳಿಜಾರಿಗೆ ಇಳಿದು ಮಾಯವಾದ! ಸ್ವಲ್ಪದರಲ್ಲೆ ತಪ್ಪಿದ ಅವಕಾಶ! ಆ ವ್ಯಕ್ತಿಯನ್ನು ನಿಲ್ಲಿಸಿ ಬಾಯಿ ಬಿಡಿಸುತ್ತಿದ್ದರೆ, ಎಸ್ಟೇಟಿನಲ್ಲಿ ನಡೆಯುವ ವಿಷಯವನ್ನು ತಿಳಿದುಕೊಳ್ಳಬಹುದಿತ್ತು. ಅಲ್ಲಿಂದ ಪಕ್ಕಕ್ಕೆ ಹೊರಳಿದವಳಿಗೆ ಕಂಡಿತು...!ಆವರಣದ ಗೋಡೆಗೆ ತಾಗಿಕೊಂಡಿರುವ ಸಣ್ಣಗಿನ ಮರ!ಅದನ್ನು ಹತ್ತಿದರೆ ನಿರಾಯಾಸವಾಗಿ ಗೋಡೆಯ ಮೇಲೆ ನಿಂತು ಒಳಗೆ ನೋಡಬಹುದು! ಆಲೋಚನೆ ಬರುತ್ತಲೇ ಮರ ಹತ್ತಿದಳು. ಅಲ್ಲಿಂದ ನಿಧಾನಕ್ಕೆ ಗೋಡೆಯ ಮೇಲೆ ನಿಂತವಳಿಗೆ ಬೆಳಗ್ಗಿನ ತಂಡಿಗೆ ಎರಡೆರಡು ಬಾರಿ ಸೀನು ಬಂತು. ಆಯ ತಪ್ಪಿ ಗೋಡೆಯ ಮೇಲಿನಿಂದ ದೊಪ್ಪನೆ ಕೆಳಗೆ ಬಿದ್ದಳು! ಸಣ್ಣ ಚಿತ್ಕಾರವೊಂದು ಅವಳ ಬಾಯಿಯಿಂದ ಹೊರಟಿತು. ಏನಾಯಿತೆಂದು ತಿಳಿಯುವಷ್ಟು ಸಮಯವಿಲ್ಲ. ಎದ್ದು ಸುತ್ತಲೂ ನಿರುಕಿಸಿದಳು. ಯಾರಾದರೂ ತನ್ನನ್ನು ಗಮನಿಸಿಯಾರೆಂಬ ಹೆದರಿಕೆಯಿತ್ತು.ಅನಪೇಕ್ಷಿತವಾಗಿ ಚಕ್ರವ್ಯೂಹದೊಳಗೆ ನುಗ್ಗಿದಂತಾಯಿತು. ತಟ್ಟನೆ ಯಂತ್ರದ ಮೊರೆತದ ಸದ್ದು ಕೇಳಿಸಿತು. ಹುಲ್ಲು ಮೆದೆಯಲ್ಲಿ ಬಾಗಿ ನಿಂತಳು. ತಾನು ಕಂಡ ವಾಹನ ಸರಿದು ಹೋಗುತ್ತಿರಬಹುದು! ಯಂತ್ರದ ಸದ್ದು ಅಡಗುತ್ತಲೇ ನಿಧಾನವಾಗಿ ಹೆಜ್ಜೆಗಳನ್ನು ಸರಿಸಿ ರಸ್ತೆಯಂಚಿಗೆ ಬಂದಳು. ಅಲ್ಲೆಲ್ಲಾ ತಾನು ಸ್ಯಾಮ್ ಅಂಕಲ್‌ನ ಜೊತೆಗೆ ಓಡಾಡಿದ್ದನ್ನು ನೆನಪಿಸಿಕೊಂಡಳು. ಎಸ್ಟೇಟಿನ ಮೂಲೆ ಮೂಲೆಯೂ ಅವಳಿಗೆ ಪರಿಚಿತ!ತಟ್ಟನೆ ಕಾಲುಗಳು ಸ್ಥಗಿತಗೊಂಡವು!ವಾಹನ ಇನ್ನೂ ಅಲ್ಲೇ ಇದೆ!ತಾನೆಂದುಕೊಂಡಂತೆ ಅದು ಸರಿದು ಹೋಗಿಲ್ಲ. ಹಳದಿ ಮರಳು ರಾಶಿಯ ಬಳಿ ನಿಂತಿದೆ! ರಸ್ತೆಯಂಚಿಗೆ ಒಂದೇ ಉಸುರಿಗೆ ಹಾರಿ ಮರದ ಕಡೆಗೆ ನಡೆದಳು. ಗೋಣಿ ಚೀಲದಲ್ಲಿ ಹಳದಿ ಮರಳನ್ನು ತುಂಬಿಸಿ ವಾಹನಕ್ಕೆ ಏರಿಸುತ್ತಿದ್ದರು.ಹಳದಿ ಮರಳು! ವಿಚಿತ್ರವೆನಿಸಿತು.ಎಲ್ಲಾ ಮೂಟೆಗಳನ್ನು ವಾಹನಕ್ಕೆ ತುಂಬಿಸಿಯಾದ ಬಳಿಕ, ದಪ್ಪ ಕುಳ್ಳನೆಯ ವ್ಯಕ್ತಿ ಜಿಗಿದು ವಾಹನವೇರಿ ಮತ್ತೆ ಯಂತ್ರವನ್ನು ಚಾಲನೆಗೆ ತಂದ. ವಾಹನ ಗೇಟಿನವರೆಗೂ ಸಾಗಿ ನಿಂತಿತು. ಕುಳ್ಳನೆಯ ವ್ಯಕ್ತಿ ವಾಹನದಿಂದ ಇಳಿದು ಗೇಟನ್ನು ತೆರೆದ. ಮತ್ತೆ ವಾಹನವನ್ನು ಮುಂದಕ್ಕೋಡಿಸಿದ. ಅದೇ ಸಮಯಕ್ಕೆ ಇಳಿಜಾರಿಗೆ ಇಳಿದು ಹೋದ ವ್ಯಕ್ತಿ ಕಾಣಿಸಿದ! ಮುಖ್ಯದ್ವಾರದ ಪಕ್ಕದಲ್ಲಿದ್ದ ಸಣ್ಣಗಿನ ಗೇಟನ್ನು ತೆರೆದುಕೊಂಡು ಒಳಗೆ ಬರುತ್ತಿದ್ದ!ಕಣ್ಣುಗಳನ್ನು ಕಿರಿದುಗೊಳಿಸಿ ನೋಡುತ್ತಿದ್ದಳು. ಮುಖದ ತುಂಬಾ ಗಡ್ಡ ಬೆಳೆಸಿದ್ದ ಆ ವ್ಯಕ್ತಿ ಹತ್ತಿರವಾಗುತ್ತಿದ್ದಂತೆ ಅವಳ ಬಾಯಿಯಿಂದ ಉದ್ಗಾರ ಬಂತು.ಸ್ಯಾಮ್ ಅಂಕಲ್!ಆತ ರಸ್ತೆಯಂಚಿಗೆ ನಡೆದು ಕಾಟೇಜನ್ನು ದಾಟಿ ಮುಂದಕ್ಕೆ ಹೋದ!ಮೆಲ್ಲನೆ ಅವನನ್ನು ಹಿಂಬಾಲಿಸಿ ನಡೆದಳು. ಆತ ನಡೆದು ಕಿತ್ತಳೆ ಹಣ್ಣಿನ ಮರಗಳ ನಡುವೆಯಿದ್ದ ಸಣ್ಣ ಗುಡಿಸಲನ್ನು ಸೇರ್‍ಇಕೊಂಡ.ಎಸ್ಟೇಟಿನ ಮಾಲೀಕನಿಗೆ ಗುಡಿಸಲಿನಲ್ಲೇನು ಕೆಲಸ? ಕುತೂಹಲ ತಡೆಯಲಾರದೆ ಅತ್ತಿತ್ತ ದೃಷ್ಟಿ ಹೊರಳಿಸಿ ತಟಕ್ಕನೆ ಗುಡಿಸಲಿನೊಳಗೆ ನುಗ್ಗಿದಳು.ಮಫ್ಲರನ್ನು ಬಿಚ್ಚಿ ಗೋಡೆಗಾನಿಸಿದ ಆತ , ಸದ್ದಿಗೆ ತಿರುಗಿ ನೋಡಿ ಉದ್ಗರಿಸಿದ.

"ನಿನ್ಯಾರು?"

"ಸ್ಯಾಮ್ ಅಂಕಲ್?!"

"ಅಲ್ಲ... ನಾನು ಸ್ಯಾಮ್ ಅಂಕಲ್ ಅಲ್ಲ... ನೀನು ಇಲ್ಲಿ ಬರ್ಬೇಡ..." ಆತ ಅರಚಿದಾಗ ರಚನಾ ಬೆವತು ಹೋದಳು.

"ಅಂಕಲ್, ನನ್ನ ಮಗಳೂಂತ ಕರೆದ್ರಿ... ಆ ಪ್ರೀತಿ ಎಲ್ಲಿ ಹೋಯ್ತು? ಅಂಕಲ್, ನೀವು ಏನೋ ನನ್ನಿಂದ ಮುಚ್ಚಿಡ್ತಾ ಇದ್ದೀರಿ. ಏನಿದೆಲ್ಲಾ ಎತ್ತರದ ಆವರಣ... ಹಳದಿ ಮರಳು... ಈ ಗುಡಿಸಲು...?" ಸ್ಯಾಮ್‍ನ ಕಣ್ಣುಗಳಲ್ಲಿ ನೀರು ಜಿನುಗಿತು. ನಾಲಗೆಯಿಂದ ತುಟಿಯನ್ನು ಸವರಿಕೊಂಡು ರಚನಾಳ ಕೈ ಹಿಡಿದು ಕಣ್ಣುಗಳಿಗೆ ಒತ್ತಿಕೊಂಡ.

"ಅಂಕಲ್, ಏನಿದೆಲ್ಲಾ?""ಹೇಳ್ತಿನಮ್ಮಾ, ಈ ಎಸ್ಟೇಟ್ ಈಗ ನನ್ನ ಕೈಯಲಿಲ್ಲಮ್ಮಾ. ಆ ಧೂರ್ತ ನನ್ನಿಂದ ಇದನ್ನೆಲ್ಲ ಕಿತ್ತುಕೊಂಡು ಬಿಟ್ಟ"

"ಏನು ಹೇಳ್ತ ಇದ್ದೀರಾ ಅಂಕಲ್?""ನಿಂಗಿದೆಲ್ಲಾ ಅರ್ಥವಾಗೊದಿಲ್ಲ.. " ಸ್ಯಾಮ್ ಅಂಕಲ್ ಗೋಡೆಯಾಚೆಗೆ ಮುಖ ಹೊರಳಿಸಿ ಕೈಯನ್ನು ಗೋಡೆಗೆ ಆನಿಸಿ ನಿಂತ.

"ಅಂಕಲ್, ನನ್ಗೆ ಅರ್ಥವಾಗದ ವಿಷಯಗಳು ತುಂಬಾ ಇವೆ. ಏನೂಂತ ಸರಿಯಾಗಿ ಹೇಳಿ.... ಆ ಹಳದಿ ಮರಳು... ಈ ಗುಡಿಸಲಲ್ಲಿ ನೀವು?"

"ಅದು ಹಳದಿ ಮರಳಲ್ಲ. ಅದು ರಾಸಾಯನಿಕ ಗೊಬ್ಬರ. ಆ ವ್ಯಕ್ತಿ ನನ್ನಿಂದ ಜಬರ್ದಸ್ತಿಯಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ಮಾಡ್ಕೊಂಡ. ಈ ಎಸ್ಟೇಟ್‍ನಲ್ಲಿ ಬಂಗಾರ ಬೆಳೆಸ್ತೇನೇಂತ ಅದೆಲ್ಲಿಂದಲೋ ಕೃತಕ ಗೊಬ್ಬರವನ್ನು ತಂದು ಹಾಕಿದ್ದಾನೆ. ಇಲ್ಲಿ ನಡೆಯೋ ವಿದ್ಯಮಾನಗಳು ಯಾರಿಗೂ ತಿಳಿಬಾರ್ದೂಂತ ಎತ್ತರಕ್ಕೆ ಆವರಣ ಹಾಕಿಸ್ದ. ಈಗ ನೋಡಿದ್ರೆ... ಎಸ್ಟೇಟ್‍ನ ಬೆಳೆಗಳೆಲ್ಲಾ ಸರಿಯಾದ ಆರೈಕೆಯಿಲ್ಲದೆ ಸೊರಗಿ ಹೋಗಿವೆ. ನಂಗೂ ಕಾವಲು ಹಾಕಿ ಕಾಯ್ತಾ ಇದ್ದಾನೆ. ನೀನು ನನಗೆ ಸಹಾಯ ಮಾಡಲಾರೆ...ನಾನು ಇಳಿಜಾರಿಗೆ ಹೋಗುವಾಗಲೆಲ್ಲ ನಿನ್ನ ಹುಡುಕ್ತಿದ್ದೆ""ಇಳಿಜಾರಿಗೆ ಹೋಗುವಾಗ ಯಾರೂ ನಿಮ್ಮನ್ನು ಗಮನಿಸುವುದಿಲ್ವೆ?"

"ಅಲ್ಲೂ ನನ್ನ ಹಿಂಬಾಲಿಸ್ತಾರೆ"ತಟ್ಟನೆ ಅವಳಿಗೆ ನೆನಪಾಯಿತು. ಬೆಳಗ್ಗೆ ವಾಹನ ಬಂದಿರುವ ಹೊತ್ತಲ್ಲಿ ತಾನು ಕಂಡಿದ್ದು ಸ್ಯಾಮ್ ಅಂಕಲ್‍ನನ್ನು! ಅಂದರೆ ಸ್ಯಾಮ್ ಅಂಕಲ್‍ನ ಕಾವಲುಗಾರ ತನ್ನನ್ನು ನೋಡಿದ್ದಾನೆ!ಆಗಲೆ ಕಾರಿನ ಸದ್ದು ಕೇಳಿಸಿತು. ಎಚ್ಚೆತ್ತುಕೊಂಡಳು ರಚನಾ!

"ಒಂದೇ ಒಂದು ಸಹಾಯ ಮಾಡ್ತೀಯಾ?"

"ಹೇಳಿ ಅಂಕಲ್.."

"ನನ್ನ ಇಲ್ಲಿಂದ ಕರೆದುಕೊಂಡು ಹೋಗು.."

"ಖಂಡಿತವಾಗಿಯೂ ಆದ್ರೆ ಇಲ್ಲಿಯ ಪ್ರತಿಯೊಂದು ವಿಷಯವನ್ನು ತಿಳ್ಕೊಂಡ ನಂತರ"ಕಪ್ಪು ಬಣ್ಣದ ಕಾರು ಕಾಟೇಜ್ ಬಳಿ ನಿಲ್ಲುತ್ತಲೇ ಅಂಕಲ್ ಅವಳನ್ನು ಅವಸರಿಸಿದ."ಓಡು ಇಲ್ಲಿಂದ. ಆತ ಈಗ ಈ ಕಡೆಗೆ ಬರ್ತಾನೆ"

"ಯಾರಾತ?" ಅವಳಿಗೆ ಯೋಚಿಸುವಷ್ಟು ಸಮಯ ನೀಡದೆ ಅವಳನ್ನು ದೂಡಿದ. ಅವಳು ಮರಗಳ ಮರೆಯಲ್ಲಿ ಸಾಗಿ ಸಣ್ಣ ಗೇಟಿನ ಮೂಲಕ ಹೊರಗೆ ಬಂದು ನಿಟ್ಟುಸಿರಿಟ್ಟಳು.ಎಲ್ಲವೂ ವಿಚಿತ್ರವಾಗಿ ಕಂಡಿತು. ವ್ಯಕ್ತಿ, ಸ್ಯಾಮ್ ಅಂಕಲ್‍ನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡು ಅವರನ್ನು ಮೂಲೆ ಗುಂಪು ಮಾಡಿ, ಅವರನ್ನು ಆಳುತ್ತಿದ್ದಾನೆ! ಅಂಕಲ್ ಆ ವ್ಯಕ್ತಿ ಯಾರೆಂದು ಹೇಳಲೂ ಹೆದರುತ್ತಿದ್ದಾರೆ! ನಿಧಾನಕ್ಕೆ ಹೆಜ್ಜೆ ಸರಿಸುತ್ತಿದ್ದವಳು, ಹಿಂದಿನಿಂದ ಯಾರದೋ ನಡುಗೆಯ ಸದ್ದು ಕೇಳುತ್ತಲೇ ನಡಿಗೆಯ ವೇಗವನ್ನು ಹೆಚ್ಚಿಸಿ ಮನೆಯ ಕಡೆಗೆ ಹೊರಟಳು.
***

ಮನೆಯ ಮುಂದೆ ಹಳೇ ಕಾಲದ ಕಪ್ಪು ಕಾರು ನಿಂತಿತ್ತು! ಅದನ್ನು ಕಾಣುತ್ತಲೇ ತಲೆ ಕೊಡವಿಕೊಂಡಳು. ಈ ಕಾರನ್ನು ತಾನು ನೋಡಿದ್ದು ಸ್ಯಾಮ್ ಅಂಕಲ್‍ನ ಎಸ್ಟೇಟ್‍ನಲ್ಲಿ! ಇಲ್ಲಿಗೆ ಹ್ಯಾಗೆ ಬಂತು? ವ್ಯಕ್ತಿ ತಾನು ಅಂಕಲ್ ಜೊತೆಗೆ ಮಾತನಾಡಿದ್ದನ್ನು ಗಮನಿಸಿ ತನ್ನನ್ನು ಹಿಂಬಾಲಿಸಿ ಬಂದಿದ್ದಾನೆ! ಹೆಜ್ಜೆ ಮುಂದಿರಿಸ ಹೋದವಳು ತಟ್ಟನೆ ನಿಂತಳು. ಕಾರು ಮರಳುವವರೆಗೆ ತಾನು ಮನೆಗೆ ತೆರಳಬಾರದು. ಹಿಂದೆ ಹೆಜ್ಜೆ ಹಾಕಲಿದ್ದವಳನ್ನು ತಡೆದು ನಿಲ್ಲಿಸಿದ್ದು ಕೋವಿ ಹಿಡಿದು ನಿಂತಿದ್ದ ವ್ಯಕ್ತಿ!ಅಪ್ಪಾ! ಅನಾಯಸವಾಗಿ ಅವಳ ಬಾಯಿಯಿಂದ ಉದ್ಗಾರ ಹೊರಟಿತು.

"ಹೌದಮ್ಮಾ, ನಾನೆ... ನಿನ್ನ ಅಪ್ಪ. ಸ್ಯಾಮ್ ಈಗಷ್ಟೆ ಎಸ್ಟೇಟ್‍ನಿಂದ ತಪ್ಪಿಸಿಕೊಂಡು ಬಿಟ್ಟ. ನೀನು ಅವನ ಜೊತೆಗೆ ಇದ್ದಿದ್ದನ್ನು ನಮ್ಮ ಡ್ರೈವರ್... ಅಂದರೆ ಕುಳ್ಳಗಿನ ವ್ಯಕ್ತಿ ನೋಡಿದ್ದಾನೆ. ನಿಜ ಹೇಳು ಸ್ಯಾಮ್ ಅಂಕಲ್ ಎಲ್ಲಿದ್ದಾನೆ?" ಕೋವಿಯ ತುದಿಯನ್ನು ಮಗಳ ಕಡೆಗೆ ಗುರಿಯಿಟ್ಟ ಗಿರಿಯಪ್ಪ.

"ಅಪ್ಪಾ, ನಂಗೊತ್ತಿಲ್ಲ..."

"ಸುಳ್ಳು ಹೇಳ್ಬೇಡ. ನಿನ್ನ ಅಂಕಲ್ ಎಷ್ಟೊಂದು ಔದಾರ್ಯವಂತ. ನಿನ್ನನ್ನು ಎಸ್ಟೇಟ್‍ನ ವಾರಸುದಾರಳನ್ನಾಗಿ ಮಾಡುತ್ತೇನೆಂದ. ನಾಳೆ ನೀನು ಮದುವೆಯಾಗಿ ಹೋದರೆ ಆಸ್ತಿನೂ ನಿನ್ನ ಜೊತೆಗೆ ಹೊರಟು ಹೋಗುತ್ತದೆ. ಅದಕ್ಕೆ ಇದು ನನ್ನ ಉಪಾಯ. ಮೊದಲೇ ಸ್ಮಗ್ಲಿಂಗ್ ಗುಂಪಿನೊಂದಿಗೆ ಸಂಪರ್ಕವಿರುವ ನನಗೆ... ಈಗ ಬಾಸ್ ಪಟ್ಟ. ಎಸ್ಟೇಟ್ ಈಗ ನನ್ನ ಕಾರ್ಯ ಸ್ಥಾನ" ನಗಲಾರಂಭಿಸಿದ.ರಚನಾ ಬೆದರಿದ ಹುಲ್ಲೆಯಂತೆ ತರ ತರ ಕಂಪಿಸಿದಳು. ಇದು ಅನಿರೀಕ್ಷಿತ! ತನ್ನ ತಂದೆ ಸ್ಮಗ್ಲಿಂಗ್ ಗುಂಪಿಗೆ ಸೇರಿದವರು! ಆ ಮಾತುಗಳನ್ನು ಅರಗಿಸಿಕೊಳ್ಳಲಾಗಲಿಲ್ಲ.

"ಏಯ್, ಆ ಸ್ಯಾಮ್ ಎಲ್ಲಿದ್ದಾನೆ ಹೇಳು?..." ಗಿರಿಯಪ್ಪ ಗದರಿಸಿದ.

"ಇಲ್ಲೆ ಇದ್ದೇನೆ ಗಿರಿಯಪ್ಪ... ಈ ಸ್ಯಾಮ್‍ನನ್ನು ಯಾರು ಅಷ್ಟು ಸುಲಭದಲ್ಲಿ ಮೋಸ ಮಾಡೋದಿಕ್ಕೆ ಸಾಧ್ಯವಿಲ್ಲ" ಸ್ಯಾಮ್‍ನ ಮಾತುಗಳು ಬಂದಾಗ ಗಿರಿಯಪ್ಪ ಹಿಂತಿರುಗಿದ.ಅವನ ಹಿಂದೆ ಪೊಲೀಸ್ ಅಧಿಕಾರಿ ನಿಂತು ಗಿರಿಯಪ್ಪನ ಕಡೆಗೆ ರಿವಾಲ್ವರನ್ನು ಗುರಿಯಿಟ್ಟಿದ್ದರು.

"ಗಿರಿಯಪ್ಪ ನಿನ್ನ ಆಟ ಇನ್ನು ನಡೆಯೋದಿಲ್ಲ. ನೀನು ಅವಸರದಲ್ಲಿ ಹೊರಟವನು ಮೊಬೈಲ್ ಫೋನನ್ನು ಬಿಟ್ಟು ಹೋಗಿದ್ದಿಯಾ. ಸ್ಯಾಮ್ ಅದರಿಂದ ನಮಗೆ ಫೋನ್ ಮಾಡಿ ತಿಳಿಸ್ದ. ಅದರಿಂದಾಗಿ ನಿನ್ನ ತಂಡವನ್ನು ಈಗಾಗ್ಲೆ ಹಿಡಿದಿದ್ದೇವೆ" ಅಧಿಕಾರಿಯ ಮಾತಿಗೆ ಗಿರಿಯಪ್ಪ ಅಸಹಾಯಕನಾಗಿ ಕೋವಿಯನ್ನು ಕೆಳಗೆ ಹಾಕಿದ.ಅಧಿಕಾರಿಯ ಸಹಾಯಕರು ಅವನನ್ನು ಬಂಧಿಸಿದರು.ರಚನಾಳ ಕಣ್ಣುಗಳಲ್ಲಿ ನೀರು ಹನಿಗೂಡಿತು.ಸ್ಯಾಮ್ ಅಂಕಲ್ ಅವಳ ಬಳಿ ಬಂದು ತಲೆ ನೆವರಿಸಿದ.

"ರಚನಾ ನೀನು ನನ್ನ ಮಗಳಮ್ಮಾ..." ಎಂದು ಪ್ರೀತಿಯಿಂದ ಹೇಳಿದ.

"ಹೌದಮ್ಮಾ, ಇನ್ನು ಮುಂದೆ ಎಸ್ಟೇಟಿಗೂ ನೀನೇ ವಾರಸುದಾರಳು" ಎಂದು ಅಧಿಕಾರಿ ಸ್ಯಾಮ್ ಅಂಕಲ್ ನೀಡಿದ್ದ ಪತ್ರಗಳನ್ನು ಅವಳ ಕೈಯಲ್ಲಿಟ್ಟರು. ಸ್ಯಾಮ್ ಅಂಕಲ್, ರಚನಾ ಇಬ್ಬರೂ ಅಧಿಕಾರಿಗೆ ವಂದಿಸಿ ಎಸ್ಟೇಟ್‍ಗೆ ನಡೆದರು.

Read more!