Sunday, February 12, 2012

ಹಲವು ರಂಗಗಳ ‘ವೇಷ’


ಪ್ರಾದೇಶಿಕ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕೃತಿಗಳನ್ನು ರಚಿಸುವ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಪ್ರಭಾಕರ ನೀರ್‌ಮಾರ್ಗ ಅವರ ಹದಿನೇಳನೆಯ ಕೃತಿ ‘ವೇಷ’. ದಕ್ಷಿಣ ಕನ್ನಡದ ಸಾಂಸ್ಕೃತಿಕ, ಸಾಮಾಜಿಕ ಜನಜೀವನವನ್ನ ಬಹಳ ಮಾರ್ಮಿಕವಾಗಿ ಚಿತ್ರಿಸುವ ಇವರ ಕೃತಿಗಳಲ್ಲಿ ದಾಯಿತ್ವ, ತಿಲ್ಲಾನ, ಧೀಂಗಿಣ, ಮಂಗಳೂರು ಕ್ರಾಂತಿ, ಶಿಶಿರ, ಪ್ರತಿಶೋಧ, ಜಾತ್ರೆ ಮತ್ತು ತಂಬಿಲಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಾದೇಶಿಕ ಹಿನ್ನಲೆಯಲ್ಲಿಯೇ ಮೂಡಿಬಂದವುಗಳು. ಆದರೆ ‘ವೇಷ’ ಕಾದಂಬರಿ ಇವುಗಳ ನಡುವೆ ತುಸು ವಿಭಿನ್ನವಾಗಿ ರಚಿಸಿದ ಕಾದಂಬರಿಯಂತೆ ಕಂಡರೂ, ಇಲ್ಲಿಯ ಪಾತ್ರಗಳಿಗೆ ಯಾವುದೇ ಪ್ರಾಮುಖ್ಯತೆಯಿಲ್ಲದೆ ಕೇವಲ ಬಣ್ಣದ ‘ವೇಷ’ ಮತ್ತು ಬದುಕಿನ ವೇಷದ ಸುತ್ತಾ ಕಥೆ ಹೆಣೆದುಕೊಂಡಿದೆಯೇನೋ ಅನಿಸುತ್ತದೆ.

ಕಥೆಯ ಆರಂಭದಲ್ಲಿ ನವರಾತ್ರಿಯ ಸಮಯದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ವೇಷದ ಬಗ್ಗೆ ‘ಎಪಿಲೋಗ್’ನ ಹಾಗೆ ಪ್ರಸ್ತಾಪಿಸುತ್ತಾ ದಕ್ಷಿಣ ಕನ್ನಡದಲ್ಲಿ ನವರಾತ್ರಿಯಲ್ಲಿ ಕಾಣಿಸುವ ವೇಷಗಳ ಬಗ್ಗೆ ವಿವರಗಳನ್ನು ನೀಡುತ್ತಾ ಕೃತಿಕಾರರು ಕಥೆಯೊಳಗೆ ಇಳಿಯುತ್ತಾರೆ. ಇಲ್ಲಿ ಆ ಬಣ್ಣದ ವೇಷಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವ ಓದುಗನ ನಿರೀಕ್ಷೆಯನ್ನು ಹುಸಿಯಾಗಿಸುತ್ತಾ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಉಳಿದ ಬಣ್ಣದ ಲೋಕಗಳಾದ ಯಕ್ಷಗಾನ, ನಾಟಕರಂಗಗಳಿಗೂ ಪಾತ್ರಗಳ ಮೂಲಕ ಇಳಿಯುತ್ತಾ ಹೊಸದೇನೋ ಹೇಳುತ್ತಾ ಕಥೆ ಸಾಗುತ್ತದೆ. ಇಲ್ಲಿ ಮಾರ್ನಮಿಯ ಹುಲಿವೇಷದ ವಿವರಣೆಗಳನ್ನು ಬಿಟ್ಟರೆ ಮತ್ತೆಲ್ಲವೂ ನಾಟಕ ಮತ್ತು ಯಕ್ಷಗಾನದ ಬಗೆಯೇ ಹೆಚ್ಚು ಒತ್ತುಕೊಟ್ಟು ಬರೆದಂತೆ ಕಾಣಿಸುತ್ತದೆ. ‘ಧೀಂಗಿಣ’ ಯಕ್ಷಗಾನದ ಒಳಹೊರಗನ್ನು ತಿಳಿಸುವ ಸಮಾಜಮುಖಿಯಾದ ಕಾದಂಬರಿಯಾದರೂ ಅಲ್ಲಿ ನೀರ್‌ಮಾರ್ಗ ಅವರ ‘ಪೇಪರ್ ವರ್ಕ್’ ಎದ್ದು ಕಾಣಿಸುತ್ತದೆ. ‘ತಿಲ್ಲಾನ’ ಕಾದಂಬರಿಯಲ್ಲಿ ಭೂತದಕೋಲದ ವಿವರಗಳಿರುವಂತೆ ‘ವೇಷ’ದಲ್ಲಿಯೂ ಅಂತಹುದೊಂದನ್ನು ಹುಡುಕಿದರೆ ಸಿಗಲಾರದೆನ್ನುವುದು ನನ್ನ ಅನಿಸಿಕೆ. ಹಾಗಂತ ಕಾದಂಬರಿ ಏನನ್ನೂ ಹೇಳದೆ ಸುಮ್ಮನಿರುವುದಿಲ್ಲ.

‘ವೇಷ’ ಕಾದಂಬರಿಯ ಪ್ಲಸ್ ಪಾಯಿಂಟ್ ಇಲ್ಲಿ ಚಿತ್ರಿತವಾಗಿರುವ ನಾಲ್ವರು ಯುವಕರ ಚಿತ್ರಣ. ಸೆಲೂನಿನ ವೆಂಕಣ್ಣ, ಹೊಟೇಲ್‌ನ ಕೆಲಸ ಮಾಡಿಕೊಂಡಿರುವ ಗಿರಿಯಪ್ಪ, ಟೈಲರ್ ವೃತ್ತಿಯ ರಮೇಶ, ವೆಂಕಪ್ಪನಿಗೆ ಪ್ರತಿಸ್ಪರ್ಧಿಯಂತಿದ್ದ ಶಾಮಣ್ಣ ಇವರೆಲ್ಲ ಯೌವನ ಸಹಜವಾದ ಕನಸುಗಳನ್ನು ಕಾಣುತ್ತಾ ತಂದೆ, ತಾಯಿ, ಹಿರಿಯರನ್ನು ಮೀರಿ ತಮ್ಮ ತಮ್ಮ ಅಭಿಲಾಷೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತವರು. ಇವರೆಲ್ಲರ ಗುರಿಯೂ ಸಂಸ್ಕೃತಿಯತ್ತ ಚಾಚಿರುವುದು, ಕಳಚಬಹುದಾದ ಒಂದು ಕೊಂಡಿಯನ್ನು ಮತ್ತೆ ಬೆಸೆಯುವಲ್ಲಿ ಅಥವಾ ಅದನ್ನು ಮುಂದುವರಿಸಿಕೊಂಡು ಹೋಗಬಹುದಾದ ಪಾತ್ರಗಳಾಗಿ ಬಹು ಮುಖ್ಯವೆನಿಸುತ್ತವೆ. ಇಂದಿನ ರಾಕೇಟ್ ಯುಗದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ದೂರೀಕರಿಸುತ್ತಾ ಹೊಸ ಸಂಸ್ಕೃತಿಯ ಹುಡುಕಾಟದಲ್ಲಿ ಕಳೆದು ಹೋಗುತ್ತಿರುವ ವೆಂಕಣ್ಣ, ಗಿರಿಯಪ್ಪ, ಶಾಮ ಮತ್ತು ರಮೇಶರು ಅಳಿಯುತ್ತಿರುವ ಸಂಸ್ಕೃತಿಯ ಅವಿಭಾಜ್ಯ ಅಂಗದಂತಿರುವ ಯಕ್ಷಗಾನ, ನಾಟಕಗತ್ತ ಹೊರಳುತ್ತಾ, ಆ ಸಾಂಸ್ಕೃತಿಯ ಮುಂದಿನ ಪೀಳಿಗೆಯವರಂತೆ ಕಾಣುತ್ತಾರೆಂದರೆ ಅತಿಶಯವಲ್ಲ. ‘ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು’ ಅನ್ನುವಂತೆ ಹಳೆಯದನ್ನು ಬಿಡದೆ ಹೊಸ ಪೀಳಿಗೆ ಅಂತಹ ಸಂಸ್ಕೃತಿಯನ್ನು ಮುಂದುವರೆಸಿಕೊಂಡರೆ ಆ ಸಂಸ್ಕೃತಿಯನ್ನು ಸಂಗ್ರಹಾಲದಲ್ಲಿಯ ವಸ್ತುಗಳಂತೆ ನೋಡಬೇಕಾಗಿಲ್ಲ ಅಥವಾ ದಾಖಲೆಗಳಿಂದ ನೋಡಿ ತಿಳಿದುಕೊಳ್ಳುವ ಅನಿವಾರ್ಯತೆಯೂ ಬರಲಾರದು.

ಆದರೆ ಈ ಕೃತಿಯಲ್ಲಿ ಹಿರಿಯರು ಯಾರೂ ಯುವಕರ ಮನಸ್ಸನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಎಲ್ಲರೂ ಅವರ ಆಸೆ, ಆಕಾಂಕ್ಷೆಗಳಿಗೆ ಅಡ್ಡಿಯಾಗುವವರೆ. ಮಕ್ಕಳು ಹೊಸ ದಾರಿ ಹಿಡಿದರೆ ಸಂಸ್ಕೃತಿಯ ನಾಶವಾಗುವುದು ಹೌದಾದರೂ ಅಲ್ಲಿ ಹೊಸ ಸಂಸ್ಕೃತಿಯೊಂದು ಯಾಕೆ ಹುಟ್ಟಿಕೊಳ್ಳಬಾರದು? ಸಮಾಜಮುಖಿಯಾದರೆ ಎಲ್ಲರೂ ಕೆಟ್ಟು ಹೋಗುತ್ತಾರೆನ್ನುವ ಆತಂಕ ಪೋಷಕರಲ್ಲಿದ್ದರೂ, ತಾವು ಬಣ್ಣದ ಬದುಕನ್ನು ಕಂಡು ಆನಂದ ಪಡುವವರೆ. ಇಲ್ಲಿ ಮನೆಯವರ ವಿರೋಧವಿದ್ದರೂ ಯುವಕರೇನೂ ಸುಮ್ಮನಿರುವುದಿಲ್ಲ, ತಮ್ಮ ಸದಭಿರುಚಿಗೆ ತಕ್ಕಂತೆ ಅವರು ಬಣ್ಣದ ಬದುಕಿನತ್ತ ಮುಖ ಮಾಡುತ್ತಾರೆ. ಆದರೆ ಬಣ್ಣದ ಬದುಕು ಅವರನ್ನು ನಿರಾಕರಿಸುವುದಿಲ್ಲ. ಆದರೆ ಈ ಕೃತಿಯಲ್ಲಿ ಈ ನಾಲ್ಕು ಪಾತ್ರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸೊರಗುತ್ತವೆ. ಸಮಾಜಮುಖಿಯಾದ ಯಾವ ಕಳಕಳಿಯೂ ಇಲ್ಲಿರದಿದ್ದರೂ ಸಾಂಸ್ಕೃತಿಕ ತಲ್ಲಣ ಮಾತ್ರ ಲೇಖಕನಲ್ಲಿ ಜಾಗೃತವಾಗಿರುವುದನ್ನು ಕಾಣುತ್ತೇವೆ. ಇದೇ ಜಾಗೃತಿ ಪಾತ್ರಗಳಲ್ಲಿಯೇ ಮೂಡಿ ಬರುತ್ತಿದ್ದರೆ ‘ವೇಷ’ ಇನ್ನಷ್ಟು ವಿಜೃಂಭಣೆಯಿಂದ ಕೂಡಿರುತ್ತಿತ್ತು.

ಸ್ತ್ರೀ ಪಾತ್ರಗಳಿಗೆ ಇಲ್ಲಿ ಪ್ರಾಮುಖ್ಯತೆ ಇಲ್ಲವೆನಿಸಿದರೂ ಇಲ್ಲಿ ಬರುವ ಶೈಲಶ್ರೀಯ ಪಾತ್ರ ಮಾತ್ರಾ ಮೆಚ್ಚುವಂತೆ ಇದೆ. ಸಿನಿಮಾದಂತಹ ಬಣ್ಣದ ಲೋಕಕ್ಕೆ ಇಳಿದರೂ ತನ್ನನ್ನು ತಾನು ಎಕ್ಸ್‌ಪೋಸ್ ಮಾಡಿಕೊಳ್ಳುವಲ್ಲಿ ಅವಳದ್ದು ಗಟ್ಟಿ ನಿರ್ಧಾರ. ಆ ಬಣ್ಣದಲೋಕದಲ್ಲಿದ್ದರೂ ರಂಗಭೂಮಿ ಕೈ ಬೀಸಿ ಕರೆದಾಗ ನಾಟಕದಲ್ಲಿ ಪಾತ್ರ ಮಾಡಲು ಒಪ್ಪಿಕೊಳ್ಳುವ ಅವಳ ಪಾತ್ರ ಒಂದು ನೈಜ್ಯ ಕಲಾವಿದೆಯೊಬ್ಬಳಿಗಿರುವ ಕಾಳಜಿಯನ್ನು ತೋರಿಸುತ್ತದೆ. ಇದು ಇಂದಿನ ಯುವ ಪೀಳಿಗೆಯ ನಟಿಯರಿಗೆ ರೋಲ್ ಮಾಡೆಲ್ ಆಗಿರುವುದು ಮೆಚ್ಚತಕ್ಕದ್ದು. ಇನ್ನುಳಿದಂತೆ ಇಲ್ಲಿ ಬರುವ ರಾಜೀವಿಯಾಗಲಿ, ಶ್ರೀಜಾಳಾಗಲಿ, ಕಾಮಿನಿಯಾಗಲಿ ಗಟ್ಟಿ ಪಾತ್ರಗಳಾಗಿ ಉಳಿಯುವುದಿಲ್ಲ. ವೆಂಕಣ್ಣನಂತಹ ಯುವಕ ಹೀರೋನೆನಿಸಿಕೊಂಡರೂ ಎರಡು ಪ್ರೇಮ ಪ್ರಕರಣಗಳಲ್ಲಿಯೂ ಸೋಲುಣ್ಣುವವನು. ಆದರೂ ಕೊನೆಯಲ್ಲಿ ಆದರ್ಶತೆಯನ್ನು ತೋರಿಸುವ ಅವನು ವಿವಾಹಬಂಧನಕ್ಕೆ ಸಿಲುಕುವುದು ‘ವೇಷ’ದ ನಾಟಕೀಯ ತಿರುವು ಆಗಿಬಿಡುತ್ತದೆ.

ಈ ಕಾದಂಬರಿಯಲ್ಲಿ ಗಮನಿಸಬಹುದಾದ ಮತ್ತೊಂದು ಮುಖ್ಯ ಅಂಶವೆಂದರೆ ಈ ಯುವಕರು ಪ್ರೀತಿಯಲ್ಲಿ ಬಿದ್ದರೂ ಯಾರೊಬ್ಬನೂ ಅದರಲ್ಲಿ ಗೆಲುವು ಕಾಣದಿರುವುದು ಕಾದಂಬರಿ ನಾಟಕೀಯತೆಯಿಂದ ಹೊರಗೆ ಬಂದಂತೆ ಕಾಣಿಸುತ್ತದೆ. ಇದು ಸಮಾಜದಲ್ಲಿ ಸಾಮಾನ್ಯವಾಗಿ ನಡೆಯುವ ಘಟನೆಗಳೆ. ಪ್ರೀತಿಸಿದ ಮೇಲೆ ಪರ‍್ಯವಸಾನ ಮದುವೆಯಲ್ಲೇ ಮುಗಿಯಬೇಕೆಂದೇನಿಲ್ಲವಲ್ಲ! ಗಿರಿಯಪ್ಪನನ್ನು ಹೊರತು ಪಡಿಸಿ ಮತ್ತೆಲ್ಲವೂ ಸೋಲುವ ಪ್ರೀತಿಗಳೆ ಇಲ್ಲಿ ಕಾಣಿಸುತ್ತವೆ.

ಕಾದಂಬರಿ ಮೊದಲಿನಿಂದ ಕೊನೆಯ ತನಕವೂ ಲವಲವಿಕೆಯಿಂದ ಓದಿಸಿಕೊಂಡು ಹೋಗುವುದಲ್ಲದೆ ಪ್ರಾದೇಶಿಕ ಭಾಷೆಯಿಂದಾಗಿ ಆಪ್ತವೆನಿಸುತ್ತದೆ. ಇಲ್ಲಿ ಪ್ರಯೋಗಿಸಿದ ಪ್ರಾದೇಶಿಕ ಪದಗಳ ಅನಿವಾರ್ಯತೆ ಕಥೆಗಿಲ್ಲವಾದರೂ ಕನ್ನಡಕ್ಕೆ ಅವುಗಳನ್ನು ಪರಿಚಯಿಸಿಕೊಟ್ಟಿರುವುದು ಶ್ಲಾಘನೀಯ. ಇಲ್ಲಿಯ ಕಥಾಹಂದರವು ಮೂರು ವಿಭಿನ್ನ ಕೋನಗಳಲ್ಲಿ ಹೊರಟು ಒಂದಕ್ಕೊಂದು ಕೊಂಡಿಯಿಲ್ಲದಂತಾಗಿ ಮೂರು ಭಾಗಗಳಲ್ಲಿ ಕಥೆಯನ್ನು ಓದಿದ ಅನುಭವವಾಗುತ್ತದೆ. ಎಲ್ಲಾ ಪಾತ್ರಗಳೂ ಕಥಾವಸ್ತುವಿನ ಜೊತೆಗೆ ಬೆಸೆದ್ದಿದ್ದರೆ ಕೃತಿ ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೇನೋ.

ಪ್ರಭಾಕರ ನೀರ್‌ಮಾರ್ಗ ಅವರ ಕಾದಂಬರಿಗಳ ವಸ್ತು ವೈವಿಧ್ಯತೆಯಿಂದ ಸಂಗ್ರಹಯೋಗ್ಯ ಮತ್ತು ಉಲ್ಲೇಖ ಪುಸ್ತಕವಾಗಿಯೂ ಉಪಯೋಗವಾಗಿರುವುದರಿಂದ ಒಮ್ಮೆಯಾದರೂ ಇವರ ಕೃತಿಗಳನ್ನು ಓದಲೇಬೇಕು.

Read more!