Wednesday, January 12, 2011

ವ್ಯವಹಾರ ಜಗತ್ತಿನ ‘ಮಾಯಾ ಕಿನ್ನರಿ’ಯೇ?!


ಜೋಗಿಯವರ ಕಾದಂಬರಿಯೆಂದರೆ ಅದೇನೋ ಆಕರ್ಷಣೆಯಿದೆ. ಅವು ತಿಳಿಸುವ ಕುತೂಹಲಕರ ಸಂಗತಿಗಾಗಿಯೋ, ಇಲ್ಲ ನಾವು ಕಂಡು ಕೇಳಿರುವ ಪರಿಸರದ ಸುತ್ತ ಮುತ್ತ ನಡೆಯುವುದಕ್ಕೋ? ಕಾಡಿನ ನಿಗೂಢ ರಹಸ್ಯ, ಪ್ರಕೃತಿಯ ಒಡನಾಟದ ಜೊತೆಗಿನ ಓಡಾಟ, ಹಳ್ಳಿಯ ಜೀವನ, ಕನಸು, ಮುಗಿಲು, ಬೆಟ್ಟ, ಚಾರಣ ಮುಂತಾದವುಗಳು ಬಿಚ್ಚಿಕೊಳ್ಳುವ ರೀತಿ ಅಪೂರ್ವಾಗಿರುತ್ತವೆ. ಆದರೆ ಅದೇ ಗುಂಗಿನಲ್ಲಿ ‘ಮಾಯಾ ಕಿನ್ನರಿ’ ಕಗೆತ್ತಿಕೊಂಡರೆ ಆ ರೀತಿಯ ಕಾಡಿನ ರಹಸ್ಯವಾಗಲಿ, ಕುತೂಹಲವಾಗಲಿ ಇಲ್ಲ. ಇಲ್ಲಿ ಕಟ್ಟಿಕೊಟ್ಟಿರುವ ರಹಸ್ಯ, ಕುತೂಹಲಗಳೆಲ್ಲಾ ವ್ಯವಹಾರಿಕ ಜಗತ್ತು, ರಾತ್ರಿ ಹಗಲೆನ್ನದೆ ಕಣ್ತೆರೆದು ಮಲಗಿರುವ ನಗರಜೀವನ, ಮಾನವ ಸಹಜ ಭಾವನೆಗಳೊಂದಿಗೆ ದೈನಂದಿನ ಬದುಕಿನ ಗುದ್ದಾಟ, ಮೋಸ, ವಂಚನೆ, ಸುಲಿಗೆ, ಯಾಂತ್ರಿಕತೆ, ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ, ಬದುಕು ಇಷ್ಟೇ ಆಗಿ ಹೋಗುವ ಭಯ. ಇವೆಲ್ಲವನ್ನೂ ‘ಮಾಯಾ ಕಿನ್ನರಿ’ ಅನಾವರಣಗೊಳಿಸುತ್ತಾಳೆ. ನಗರ ಜೀವನವೇ ಮಾಯಾಕಿನ್ನರಿಯಾಗಿ ಮೈದಳೆದು ನಿಶ್ಶಬ್ದವಾಗಿ ಆವರಿಸಿ ಬಿಡುತ್ತಾಳೆ."

ಕಾದಂಬರಿಯ ನಾಯಕಿ ಶೋಭಾರಾಣಿಗೆ ಭಿಕ್ಷುಕರೆಂದರೆ ಭಯ. ನಗರ ಜೀವನದಲ್ಲಿ ಇದು ಸಹಜ. ಇಲ್ಲಿ ಯಾರು ಯಾರ ಮೇಲೆ ನಂಬಿಕೆಯಿಡಬೇಕೋ, ಎಲ್ಲಾ ಗೊಂದಲ. ನೆರೆಮನೆಯವರ ಪರಿಚಯವಿಲ್ಲದೆ ಮನೆಯೆಂಬ ಜಗತ್ತೊಳಗೆ ಉಳಿದುಕೊಳ್ಳುವ ಅನಿವಾರ್ಯತೆ. ಭಿಕ್ಷುಕರ ಬಗ್ಗೆ ಭಯವಿದ್ದರೂ ಅವರ ಮೇಲೆ ಅನುಕಂಪ, ಕಾಳಜಿ ಶೋಭಾರಾಣಿಗೆ. ಏನಾದರಾಗಲಿ ಕೈಯೆತ್ತಿ ದಾನ ಮಾಡಿದರೇನೆ ಅವಳಿಗೆ ಸಮಾಧಾನ, ಇಲ್ಲದಿದ್ದರೆ ಪರಿತಾಪ. ಭಿಕ್ಷುಕ ಅವನ ಪಾಡಿಗೆ ಅವನಿದ್ದರೂ ಅವಳಿಗೆ ಆತಂಕ, ಹತಾಶೆ, ನಿರಾಶೆ. ಹಾಗೆಯೇ ಅವಳಿಗೊಂದು ವೀಕ್ನೆಸ್, ಮೊಬೈಲ್ ಕೂಗಿದರೆ ಸಾಕು ಅದನ್ನು ಆದರಿಸುವುದು. ಪರಿಚಯವಿರಲಿ, ಇಲ್ಲದಿರಲಿ ಕಾಲ್ ಅಟೆಂಡ್ ಮಾಡಿದರೇನೆ ಸಮಾಧಾನ.

ವ್ಯವಹಾರಿಕ ಜಗತ್ತು ಯಾವ ಯಾವ ರೂಪದಲ್ಲಿಯೋ ಮನುಷ್ಯನನ್ನು ತನ್ನತ್ತ ಸೆಳೆಯುವಂತೆ ಶೋಭಾರಾಣಿಯ ಗಂಡ ನರಹರಿಯನ್ನೂ ಕೂಡ ಅಪ್ಪಿಕೊಳ್ಳುತ್ತದೆ. ಅವನು ಸ್ವಂತ ಪ್ರೊಡಕ್ಷನ್ ಸಂಸ್ಥೆಯನ್ನು ಹುಟ್ಟು ಹಾಕಿದರೂ ಅವನ ವ್ಯವಹಾರಗಳು ನಿರೀಕ್ಷೆಯನ್ನೂ ಮೀರಿ ಹೊರಗೂ ಚಾಚುತ್ತದೆ. ಅಲ್ಲಿಯ ವಾತಾವರಣ, ನೀತಿ, ನಿಯಮ ಅವನನ್ನು ಸೆಳೆಯುತ್ತದೆ. ಅವನು ಯಾಂತ್ರಿಕ ಬದುಕಿಗೆ ಹೊರಳಿದರೂ ಶೋಭಾರಾಣಿಗೆ ಅವನ ಮೇಲೆ ಅಗಾಧ ಪ್ರೀತಿ. ಅವನ ಅತೀ ಆರೈಕೆಯಲ್ಲಿ ಮನೆಯೇ ಜಗತ್ತಾದರೂ ಖುಷಿಪಡುತ್ತಿರುತ್ತಾಳೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಲೆ ಅವಳಿಗಿದೆ. ಮುಂಜಾನೆದ್ದು ಮುಂಬಾಗಿಲಿಗೆ ರಂಗೋಲಿ ಬರೆದು ಸಂಭ್ರಮಿಸುವ ಕಿನ್ನರಿ ಅವಳು.

ಆದರೂ ಎಲ್ಲೋ, ಏನೋ ಹಾದಿ ತಪ್ಪುವ ಆತಂಕ ಅವಳಿಗೆ. ನಗರ ಬದುಕಿನ ರೀತಿಯಲ್ಲಿಯೂ ಆಸೆಗಳ ಮೂಟೆಕಟ್ಟಿಕೊಂಡು ಒಂದು ಅದ್ಭುತ ಪ್ರೀತಿಯನ್ನು ಕಾಣುತ್ತಾಳೆ. ಆ ಪ್ರೀತಿಯೆ ಒಂದು ಸುವಾಸನೆಯಾಗಿ ಅವಳ ಮನೆಯೆಂಬ ಜಗತ್ತಿನಲ್ಲಿ ಪಸರಿಸುತ್ತಿರುತ್ತದೆ. ಈ ಸುವಾಸನೆಯೆ ಒಂದು ಪಾತ್ರವಾಗಿ ಕಾದಂಬರಿಯ ಉದ್ದಕ್ಕೂ ಹರಡುತ್ತದೆ. ಇದು ಜೀವನ್ಮುಖಿ ಪ್ರೀತಿಯಾಗಿ ಓದುಗನನ್ನು ಕುತೂಹಲಕ್ಕೆ ಕೊಂಡೊಯ್ಯುತ್ತದೆ.

ನರಹರಿ ಹೊರ ಜಗತ್ತಿಗೆ ತನ್ನನ್ನು ತಾನು ಎಕ್ಸ್ಪೋಸ್ ಮಾಡಿಕೊಂಡು ಹಣಗಳಿಸುವ ದಾರಿಯನ್ನು ಹಿಡಿಯುತ್ತಾನೆ. ತಾನು ತೊಡಗಿಸಿಕೊಂಡಿರುವ ವ್ಯವಹಾರ ದೀರ್ಘ ಅವಧಿಯಲ್ಲಿ ಹೆಚ್ಚು ಲಾಭದಾಯಕವಲ್ಲವೆಂದು ಗೊತ್ತು. ಆದರೆ ಅವನ ವ್ಯವಹಾರ ಚತುರತೆಯಲ್ಲಿ ಯಶಸ್ಸು ಸಾಧಿಸುತ್ತಾ, ಅವನಿಗೆ ತಿಳಿದಿರುವ ಮತ್ತು ತಿಳಿಯದಿರುವ ಲೋಕಕ್ಕೆ ನಿಧಾನವಾಗಿ ಇಳಿಯುತ್ತಾನೆ. ಅದು ಅವನ ಮತ್ತು ಮುಂಬೈಯ ಕಂಪನಿಯ ಒಡಂಬಡಿಕೆಯಾಗಿ ಅವನನ್ನು ಹತಾಶೆಗ ಇಳಿಯುವಂತೆ ಮಾಡುತ್ತದೆ. ನಯವಂಚನೆಯ ಜಾಲಕ್ಕೆ ಸಿಕ್ಕು ಚಡಪಡಿಸಿ ಅದರಿಂದ ಹೊರಗೆ ಬರುವಾಗ ಬದುಕು ಬಹಳಷ್ಟು ಅರ್ಥವಾಗಿರುತ್ತದೆ. ನಗರ ಬದುಕಿನ ಅನೂಹ್ಯ ತೆರೆ ಸರಿಯುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ದೃಶ್ಯ ಮಾಧ್ಯಮದ ಬಗ್ಗೆ ಲೇಖಕ ತಿಳಿಸಿಕೊಡುವ ಕರಾಳ ಸತ್ಯಗಳು.

ಕೊನೆಗೂ ನರಹರಿಗೆ ಹೊರ ಜಗತ್ತು ಒಂದು ಭ್ರಮೆಯಾಗಿ ತನ್ನ ಮನೆ, ಮನದನ್ನೆಯೇ ಹೆಚ್ಚಾಗಿ ಕೊನೆಪಕ್ಷ ಪ್ರೀತಿಸುವ, ಅವಳ ಅಭೀಷ್ಟಗಳನ್ನು ಉತ್ತೇಜಿಸುವ, ಅವಳದೇ ಜಗತ್ತಿನಲ್ಲಿ ವಿಹರಿಸುವ ದೊಡ್ಡ ನಿರ್ಧಾರ ಮಾಡುತ್ತಾನೆ. ಏನೆಲ್ಲಾ ಅವನು ತಳ್ಳಿರುತ್ತಾನೋ ಅವೆಲ್ಲವನ್ನೂ ನೆಚ್ಚಿಕೊಳ್ಳುತ್ತಾನೆ. ಹೊರ ಮತ್ತು ಒಳ ಜಗತ್ತಿನ ಸೂಕ್ಷ್ಮಗಳನ್ನು ಶೋಭಾರಾಣಿ ಮತ್ತು ನರಹರಿಯ ಮೂಲಕ ತಿಳಿಸುವ ಜಾಣ್ಮೆ ಲೇಖಕರದ್ದು. ಇಲ್ಲಿಯ ಸಮಸ್ತವನ್ನು ತಿಳಿಸುವ ಕಿನ್ನರಿ, ‘ಯಾರಿಲ್ಲಿಗೆ ಬಂದರು ಕಳೆದಿರುಳು! ಏ ಗಾಳೀ...’ ಎಂದು ಬೆರಗಾಗಿ ಕೇಳುತ್ತಾಳೆ.

ಹೀಗೆ ಸುಖಾಂತದಲ್ಲಿ ಕಾದಂಬರಿ ಕೊನೆಯಾಗುತ್ತದೆಯೆನ್ನುವ ಓದುಗನ ಭ್ರಮೆಗೆ ಲೇಖಕ ತಡೆಯೊಡ್ಡಿ ನರಹರಿ ಮತ್ತೊಮ್ಮೆ ವ್ಯವಹಾರದತ್ತ ಹೊರಳುವುದನ್ನು ಅವನ ಮಾತುಗಳಲ್ಲಿಯೇ ಸ್ಪಷ್ಟಪಡಿಸುತ್ತಾನೆ. ಇದೇ ವ್ಯವಹಾರ ಜಗತ್ತಿನ ‘ಮಾಯಾ ಕಿನ್ನರಿ’ಯೇ?!

ಈ ಪುಸ್ತಕವನ್ನು ಅಂಕಿತ ಪುಸ್ತಕ, ಬೆಂಗಳೂರು ಪ್ರಕಟಿಸಿದೆ. ಮುಖಪುಟ ರಘು ಅಪಾರ ಅವರದ್ದು. ಪುಸ್ತಕದ ವಿನ್ಯಾಸ ಆಕರ್ಷಕವಾಗಿದೆ. ಇದರ ಬೆಲೆ ಕೇವಲ ಎಪ್ಪತ್ತು ರೂಪಾಯಿಗಳು ಮಾತ್ರ.

No comments: