Thursday, January 27, 2011

ನೆಗೆಟಿವ್ ಪಾತ್ರಗಳ ಬೆಳವಣಿಗೆಯ ‘ಕವಲು’


ತಮ್ಮ ಇತರ ಕೃತಿಗಳಂತೆ ಎಸ್. ಎಲ್. ಬೈರಪ್ಪನವರ ‘ಕವಲು’ ಕಾದಂಬರಿ ಕೂಡ ಓದುಗರಲ್ಲಿ ಕುತೂಹಲ ಕೆರಳಿಸಿದ್ದು ಸುಳ್ಳಲ್ಲ. ಸಂಪ್ರದಾಯಸ್ಥ ಭಾರತೀಯ ಕುಟುಂಬ ವ್ಯವಸ್ಥೆ ಯಾವ ರೀತಿಯಲ್ಲಿ ಛಿದ್ರವಾಗುತ್ತಿದೆಯೆನ್ನುವುದು ಇಡೀ ಕಾದಂಬರಿಯ ಆಶಯವಾದರೆ; ಕಾನೂನಿನ ಪಾತ್ರ ಈಗಿನ ಕುಟುಂಬ ವ್ಯವಸ್ಥೆಯಲ್ಲಿ ಹೇಗೆ ದುರುಪಯೋಗವಾಗುತ್ತಿದೆಯೆನ್ನುವುದನ್ನು ಈ ಕೃತಿ ಎತ್ತಿ ಹಿಡಿದಿರುವುದು ಕೃತಿಯ ಹೆಗ್ಗಳಿಕೆಗೆ ಕಾರಣವಾಗಿದೆ.

ಹಿಂದೆಯಿದ್ದ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಶೋಷಣೆಯೇ ಇಲ್ಲಿ ‘ಮೇಲ್ ಡೋಮಿನೇಟಿಂಗ್’ ಆಗಿರುವುದು ಗಮನಾರ್ಹ. ಹೊಂದಿಕೊಳ್ಳುವ ಗುಣವನ್ನು ಪರಿತ್ಯಜಿಸಿ ಪ್ರತೀಯೊಂದನ್ನೂ ಸಂಶಯದ ದೃಷ್ಟಿಯಿಂದಲೇ ನೋಡುತ್ತಾ, ಕೀಳರಿಮೆ ಬೆಳೆಸಿಕೊಂಡ ಒಂದು ವರ್ಗ, ಆ ವರ್ಗದಲ್ಲಿಯ ಮುಗ್ಧತೆಯನ್ನು ಬಳಸಿಕೊಂಡು ಸ್ವಾರ್ಥದಿಂದ ವಂಚಿಸುವ ಇನ್ನೊಂದು ವರ್ಗದ ಕ್ಲ್ಯಾಷ್ಗಳಿಗೆ ಕಾನೂನು ಯಾವ ರೀತಿ ದುರು(ಉ)ಪಯೋಗಕ್ಕೆ ಬರುವುದೆನ್ನುವುದನ್ನು ಕೂಡ ತಿಳಿಸಿಕೊಡುವ ಪ್ರಯತ್ನ ಈ ಕೃತಿಯಲ್ಲಿ ಅಭಿವ್ಯಕ್ತವಾಗಿದೆ. ಆಧುನಿಕ ಸಮಾಜದಲ್ಲಿ ಕುಟುಂಬಗಳು ರೂಪಾಂತರವಾಗುವುದನ್ನು ಮತ್ತು ಬದುಕು ಹೊಸ ಸಮಸ್ಯೆಗಳಿಗೆ ಒಡ್ಡಿಕೊಳ್ಳುವಾಗಿನ ತಲ್ಲಣಗಳನ್ನು ಕಾದಂಬರಿ ಬಹಳ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಸುಧಾರಿತ ನ್ಯಾಯ ವ್ಯವಸ್ಥೆಯ ಉಪಯೋಗವನ್ನು ದುರುಪಯೋಗಕ್ಕೆ ಬಳಸಿಕೊಂಡು ಸಾಂಸಾರಿಕ ಜೀವನದಲ್ಲಿ ವೈರತ್ವ, ಹಗೆ ಸಾಧನೆಯಲ್ಲಿ ತೊಡಗಿಕೊಂಡು ಪಾತ್ರಗಳು ಒಂದು ರೀತಿಯಲ್ಲಿ ನೆಗಟಿವ್ ಆಗಿ ಬೆಳವಣಿಗೆ ಪಡೆದಿವೆ."

ಈ ಕಾದಂಬರಿಯಲ್ಲಿ ಜಯಕುಮಾರ- ವೈಜಂತಿಯ ಸುಂದರ ಸಂಸಾರ ವೈಜಂತಿಯ ಸಾವಿನಿಂದ ಅಲ್ಲೋಲ ಕಲ್ಲೋಲವಾಗುತ್ತದೆ. ಜಯಕುಮಾರ ತನ್ನ ಮಡದಿಯ ಸಾವಿನ ಬಳಿಕ ಮನುಷ್ಯ ಸಹಜ ಕಾಮನೆಗಳಿಗೆ ಈಡಾಗಿ ಒಂದು ರೀತಿಯ ಮನೋವ್ಯಾಕುಲತೆಗೆ ತುತ್ತಾಗುತ್ತಾನೆ. ಇಲ್ಲಿ ಈ ಎರಡೂ ಪಾತ್ರಗಳು ಆದರ್ಶ ಪಾತ್ರಗಳಾದರೆ ವೈಜಯಂತಿಯ ಪಾತ್ರ ನೇಪಥ್ಯದ ಹಿಂದಿದ್ದು ಜಯಕುಮಾರನ ಪಾತ್ರ ಮಾತ್ರ ಬೆಳವಣಿಗೆ ಹೊಂದುತ್ತದೆ. ಹಾಗಾಗಿ ಇಡೀ ಕಾದಂಬರಿಯಲ್ಲಿ ಒಳ್ಳೆಯ ಪಾತ್ರವೊಂದು ತೆರೆಮರೆಯಲ್ಲಿದ್ದು, ಬೆಳವಣಿಗೆ ಪಡೆಯದೆ ಉಳಿದ ಪಾತ್ರಗಳ ಕಣ್ಣಿನಲ್ಲಿ ಮಾತ್ರ ಕಾಣಿಸುತ್ತ ಗೌಣವಾಗಿ ಬಿಡುತ್ತದೆ. ಇಲ್ಲಿಯ ನೆಗೆಟಿವ್ ಪಾತ್ರಗಳ ವರ್ಣನೆ ‘ಸ್ತ್ರೀ ಪರ’ ಯಾ ‘ಸ್ತ್ರೀ ವಿರೋಧಿ’ ಕಾದಂಬರಿಯಂತೆ ಕಂಡರೆ ಅಚ್ಚರಿಯೇನಿಲ್ಲ.

ವಿವಾಹಪೂರ್ವ ಲೈಂಗಿಕ ಸಂಬಂಧಕ್ಕೆ ತೊಡಗುವ ಮಂಗಳೆಗೆ ಸ್ತ್ರೀ ಚಳುವಳಿಯ ರೂವಾರಿಗಳಾದ ಮಾಲಾ ಕೆರೂರು, ಚಿತ್ರಾ ಹೊಸೂರು, ಇಳಾರಂತವರು ‘ಮಾಡೆಲ್’ ಆಗಿಯೂ ಅವಳ ವೈಯಕ್ತಿಕ ಮತ್ತು ಲೈಂಗಿಕ ಸ್ವಾತಂತ್ರ್ಯಕ್ಕೆ ಧೈರ್ಯ ನೀಡುತ್ತರೆಂದರೆ ಸುಳ್ಳಲ್ಲ. ಇಲ್ಲಿ ನೈತಿಕ ಅಧ:ಪತನಕ್ಕೆ ಕುಸಿಯುವ ಪಾತ್ರಗಳು ‘ಕ್ರಾಂತಿ’ಕಾರಿಗಳಾಗಿ ಕಾಣುತ್ತವಾದರೂ ಇವೆಲ್ಲಾ ವಿಕೃತ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಒಂದು ಮಾರ್ಗ ಕಂಡುಕೊಳ್ಳುವ ಪಾತ್ರಗಳೇ ಆಗಿವೆ.

ಕಾಲೇಜು ದಿನಗಳಲ್ಲಿ ಪ್ರಭಾಕರನಿಂದ ಶೋಷಣೆಗೊಳಗಾದ ಮಂಗಳೆ ವೃತ್ತಿ ಜೀವನದಲ್ಲಿ ಜಯಕುಮಾರನಿಂದಲೂ ಲೈಂಗಿಕ ಶೋಷಣೆಗೊಳಗಾದರೂ ಪ್ರಭಾಕರನನ್ನು ಮರೆತು ಜಯಕುಮಾರನನ್ನು ಒಪ್ಪಿಕೊಳ್ಳುವುದು ಕೇವಲ ಅವನ ಆಸ್ತಿಯನ್ನು ಅನುಭವಿಸುವುದಕ್ಕಾಗಿ ಮಾತ್ರ. ಇದು ಸ್ಪಷ್ಟವಾಗುವುದು ತನ್ನ ಗಂಡ ಜಯಕುಮಾರನ ವಿರುದ್ಧವೇ ಕಾನೂನಿನ ಮೊರೆ ಹೊಕ್ಕು ಲೈಂಗಿಕ ತೃಷೆಗಾಗಿ ಮತ್ತೆ ಪ್ರಭಾಕರನನ್ನು ಬಯಸುವಲ್ಲಿ. ಹರೆಯಕ್ಕೆ ಬಂದ ಬುದ್ಧಿ ಮಾಂದ್ಯ ಮಗಳು ಪುಟ್ಟಕ್ಕನನ್ನು ಅನುಕಂಪದ ದೃಷ್ಟಿಯಿಂದಲೋ, ಮಮಕಾರದಿಂದಲೋ, ವಾತ್ಸಲ್ಯದಿಂದಲೋ ಮುದ್ದಿಸುವ ಜಯಕುಮಾರನನ್ನು ಅರ್ಥೈಸಿಕೊಳ್ಳದ ಮಂಗಳೆ ಅವನಲ್ಲಿ ಎಲ್ಲವೂ ದೋಷಗಳೇ ಇವೆಯೆಂದುಕೊಳ್ಳುತ್ತಾಳೆ. ಇದು ಮಾನವೀಯ ಅಂತ:ಕರಣವಿಲ್ಲದ ಅವಳ ಮನಸ್ಥಿತಿ ಮಾತ್ರ.

ಕಾದಂಬರಿಯ ಕೊನೆಯಲ್ಲಿ ನಚಿಕೇತ ಪುಟ್ಟಕ್ಕನನ್ನು ಮದುವೆಯಾಗಿ ಆದರ್ಶವಂತನೆನಿಸಿಕೊಂಡರೂ ಒಂದು ರೀತಿಯಲ್ಲಿ ಅವನು ಈ ಹಿಂದೆ ಎರಡು ಮದುವೆಯಾಗಿ ನಲುಗಿದವನು. ಒಟ್ಟು ವ್ಯವಸ್ಥೆಯ ಒತ್ತಡದಿಂದ ಹೊರಗೆ ಬರುವಲ್ಲಿ ಅವನಿಗೆ ಜಯಕುಮಾರನ ತಾಯಿ ಅಂದರೆ ಅವನ ಅಜ್ಜಿ ಮತು ದ್ಯಾವಕ್ಕ ,ಪುಟ್ಟಕ್ಕನ ಮದುವೆಯ ಪ್ರಸ್ತಾಪ ಮಾಡುತ್ತಾ ಸಹಾಯವಾಗುತ್ತಾರೆ.

ಆಧುನಿಕತೆಯನ್ನು ಒಗ್ಗಿಸಿಕೊಂಡ ಇಳಾಲಾಗಲಿ, ಮಂಗಳೆಯಾಗಲಿ ಏನನ್ನೂ ಪಡೆದುಕೊಳ್ಳದೆ ಹತಾಶರಾಗುತ್ತಾರೆ. ಕಾನೂನಿನ ಮೊರೆ ಹೊಕ್ಕರೆ ಅದು ಅವರನ್ನೇ ಶಿಕ್ಷಾರ್ಹರೆಂದು ಬೆಟ್ಟು ಮಾಡಿ ತೋರಿಸುವ ಸನ್ನಿವೇಶವೇ ಎದುರಾಗುತ್ತದೆ. ಹೀಗೆ ಆಧುನಿಕ ಸಮಾಜ ವ್ಯವಸ್ಥೆಯಲ್ಲಿ ಕಾನೂನು ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ಮತ್ತು ಅದು ಯಾವ ರೀತಿ ದುರುಪಯೋಗವಾಗುತ್ತದೆಯೆನ್ನುವುದು ಇಡೀ ಕಾದಂಬರಿಯಲ್ಲಿ ಅಡಕವಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಕಾನೂನನ್ನು ತಿಳಿದುಕೊಳ್ಳುವುದಕ್ಕಾದರೂ ಒಮ್ಮೆ ಈ ಕಾದಂಬರಿಯನ್ನು ಓದಲೇಬೇಕು.

No comments: