Sunday, April 17, 2011

ಸಾಂಸ್ಕೃತಿಕ ಸ್ಥಾನ ಪಲ್ಲಟದ ‘ತಿಲ್ಲಾನ’


ಪ್ರಾದೇಶಿಕ ಕಥನ ಪರಂಪರೆಗೆ ಅದರದೇ ಆದ ಮಹತ್ವವಿದೆ. ಆಯಾ ಪ್ರದೇಶದ ಸಾಂಸ್ಕೃತಿಕ, ಪರಂಪರಾತ್ಮಕ ಆಗುಹೋಗುಗಳನ್ನು ಸವಿವರವಾಗಿ ದಾಖಲಿಸುವ ಕಥನ ಶೈಲಿ ಆಯಾಯ ಪರಿಸರದಲ್ಲಿ ಬೆಳೆದು ಬಂದ ಲೇಖಕರ ಸಂಶೋಧನಾತ್ಮಕ ಅಭ್ಯಾಸವನ್ನು ಆದರಿಸಿದೆ. ಅವಿಭಾಜಿತ ದಕ್ಷಿಣಕನ್ನಡ ತುಳುನಾಡಿನ ಅನೇಕ ಸಾಂಸ್ಕೃತಿಕ ಮತ್ತು ಸಾಹಿತ್ಯಕ ರೋಚಕತೆಯನ್ನು ಪಡೆದಿರುವ ಪ್ರದೇಶ. ಇಲ್ಲಿಯ ಪ್ರತೀಯೊಂದು ಸಂಸ್ಕೃತಿಗೂ ಅದರದೇ ಆದ ವೈಶಿಷ್ಟ್ಯತೆಯಿದೆ. ಈ ವೈಶಿಷ್ಟ್ಯವೇ ಇಂದಿಗೂ ಈ ಪ್ರದೇಶದ ಜನರ ನಂಬಿಕೆ, ಆಶಾಭಾವನೆ, ಭಯ ಭಕ್ತಿಯ ಮತ್ತು ಮುಂದುವರೆಸಿಕೊಂಡು ಬಂದಿರುವ ಜೀವನ ಕ್ರಮವನ್ನು ಒಂದು ಸಿದ್ಧ ಮಾದರಿಯಾಗಿ ರೂಪಿಸಿಕೊಂಡು ಬಂದಿರುವುದು ಆಶ್ಚರ್ಯವೇನಲ್ಲ.

‘ತಿಲ್ಲಾನ’ ಕಾದಂಬರಿಯ ಹೆಸರೇ ಆಕರ್ಷಕ ಮತ್ತು ಇಂಪು. ಪ್ರಭಾಕರ ನೀರ್ಮಾರ್ಗ ಅವರ ನಾಲ್ಕನೆಯ ಕೃತಿಯಾದ ಇದು ದಕ್ಷಿಣಕನ್ನಡದ ಸಾಂಸ್ಕೃತಿಕ ಪರಂಪರೆಯೊಂದಿಗಿನ ತಲ್ಲಣವನ್ನು ಮತ್ತು ಮಾರ್ಪಾಡಾಗುತ್ತಿರುವ ಅನಾದಿಕಾಲದ ಆಚರಣೆಗಳನ್ನು ಅಳಿವಿನಂಚಿಗೆ ಸಾಗಿಸುತ್ತೇವೇನೋ ಅನ್ನುವ ಆತಂಕದೊಂದಿಗೆ ಬರೆದಿರುವಂತೆ ಮಾತ್ರವಲ್ಲ, ಸಮಾಜದಲ್ಲಿಯ ಅಂಧಾನುಕರಣೆಯ ‘ವಿಶ್ವವ್ಯಾಪಿ ಪರಿವರ್ತನಾ ಪಿಡುಗು’ ಹಬ್ಬುತ್ತಲೇ ಎಲ್ಲವನ್ನೂ ಸ್ವ್ಯಾಪ್ ಮಾಡಿಕೊಂಡು ಬಿಡುತ್ತದೆಯೆನ್ನುವುದಕ್ಕೆ ಉದಾಹರಣೆಯಂತೆ ಕಾಣುತ್ತದೆ.

ಈ ಕೃತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಅಪೂರ್ವ ಸಂಸ್ಕೃತಿಯಾದ ಭೂತಾರಾಧನೆಯ ಮತ್ತು ಭೂತ ಕಟ್ಟುವವರ ಬಗ್ಗೆ ಸವಿವರವಾದ ವಿಷಯಗಳನ್ನು ದಾಖಲಿಸಲಾಗಿದೆ. ಭೂತಾರಾಧನೆಯೆ ಬದುಕಿನ ಅವಿಭಾಜ್ಯ ಅಂಗವಾಗಿ ಇಂದಿಗೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಎಷ್ಟೋ ಕುಟುಂಬಗಳ ಆಂತರಿಕ ತುಮುಲ, ಒಳಗೊಳಗೆ ನಡೆಯುವ ರಾಜಕೀಯ, ವಿಶ್ವವ್ಯಾಪಿಗೆ ತೆರೆದುಕೊಳ್ಳುವಾಗಿನ ಭಯ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾರದ ಅಸಹಾಯಕತೆ ಇವೆಲ್ಲವನ್ನೂ ಕಾದಂಬರಿ ಬಹಳ ಮಾರ್ಮಿಕವಾಗಿ ತೆರೆದಿಡುತ್ತದೆ. ಸಂಸ್ಕೃತಿಯ ಸೊಗಡು, ಪಾಡ್ದನ, ಅರದಾಲ, ನರ್ತನಗಳ ಮೂಲಕ ಸಮಷ್ಟಿ ಕಲೆಯೆನಿಸಿದ ‘ಭೂತಾರಾಧನೆ’ ಇಂದಿಗೂ ಜನರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ನೆಲೆಸಿದೆಯೆಂದರೆ ಅತಿಶಯೋಕ್ತಿಯಲ್ಲ. ಈ ರೀತಿಯ ಒಂದು ಪ್ರದೇಶದ ಕಲೆಯನ್ನು ಕಾದಂಬರಿಯಾಗಿಸುವಾಗ ಅನೇಕ ವಾಸ್ತವ ಸಂಗತಿಗಳನ್ನು ಕಲೆಹಾಕಬೇಕಾಗಿರುವ ಅವಶ್ಯಕತೆ ಲೇಖಕನಿಗಿದೆ. ಈ ಕಾದಂಬರಿಯಲ್ಲಿ ಆ ರೀತಿಯ ಸಂಶೋಧನಾತ್ಮಕ ರಚನೆ ಎದ್ದು ಕಾಣುತ್ತದೆ.

ಜಾಗತೀಕರಣದ ರಣಕಹಳೆ ಹಳ್ಳಿಯನ್ನೂ ಕಬಳಿಸಿ, ಅಲ್ಲಿಯ ಸಂಸ್ಕೃತಿಯನ್ನು ವಿನಾಶದ ಅಂಚಿಗೆ ಅಥವಾ ಆಧುನಿಕತೆಗೆ ಪರಿವರ್ತಿಸಿ ಮೂಲ ಧಾತುವನ್ನೇ ಬದಲಿಸುವುದು ಸರ್ವೇಸಾಮಾನ್ಯ. ಅಂತಹ ಒಂದು ಕುಸಂಸ್ಕೃತಿಗೆ ಬಲಿಯಾಗುವ ತುಳುನಾಡಿನ ಭೂತಾರಾಧನೆಯನ್ನು ಆಧಾರವಾಗಿಟ್ಟುಕೊಂಡು, ಭೂತ ಕಟ್ಟುವವರ ಜೀವನವನ್ನು ತೆರೆದಿಡುವ ಕಾದಂಬರಿಯ ಮುಖ್ಯ ವಾಹಿನಿಯಲ್ಲಿ ಹಿರಿಯನಂತಹ ಆದರ್ಶ ವ್ಯಕ್ತಿಯೊಬ್ಬ ಕಾಣಿಸಿಕೊಳ್ಳುತ್ತಾನೆ. ಒಳಗೊಳಗೆ ನಡೆಯುವ ರಾಜಕೀಯದಂತಹ ದೊಂಬರಾಟದಲ್ಲಿ ಗುರುವ ಮತ್ತು ಜೋಯಿಸರಂತಹ ವ್ಯಕ್ತಿಗಳೇ ಸಾಂಸ್ಕೃತಿಕ ನೆಲೆಯನ್ನು ಗುರಿತಪ್ಪಿಸುವ ಕಾರ್ಯಕ್ಕೂ ಇಳಿಯುತ್ತಾರೆ. ಒಟ್ಟಿನಲ್ಲಿ ತನಗೆ ಪರಂಪರಾಗತವಾಗಿ ಬಂದಿರುವ ಭೂತಕಟ್ಟುವ ಕಾಯಕವನ್ನು ತನ್ನ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕೆನ್ನುವುದು ಹಿರಿಯನಂತಹ ವ್ಯಕ್ತಿಯ ಆಸೆ. ಆದರೆ ಆಧುನಿಕತೆಗೆ ತಕ್ಕಂತೆ ಜೀವನ ಶೈಲಿಯನ್ನು ಒಪ್ಪಿಕೊಳ್ಳುವಾಗ ಆಗುವ ಬದಲಾವಣೆಗಳನ್ನು ಸ್ವೀಕರಿಸುತ್ತಾ ಸಮಸ್ಯೆಗಳತ್ತ ಮುಖ ಮಾಡುವುದು ಇಲ್ಲಿಯ ಮುಖ್ಯ ತಲ್ಲಣ. ಮಕ್ಕಳಿಬ್ಬರೂ ಪೇಟೆಯ ಬದುಕನ್ನು ನೆಚ್ಚಿಕೊಂಡು ಹಿರಿಯನ ಆಸೆಗಳಿಗೆ ತಣ್ಣೀರೆರೆಚಿ ಅಲ್ಲೂ ತಮ್ಮನ್ನು ಗುರುತಿಸಿಕೊಳ್ಳದೆ ಹೋಗುವುದು ಅಡ್ಡ ದಾರಿ ಹಿಡಿದವರಿಗೆ ತಕ್ಕುದಾದ ಶಾಸ್ತಿಯೆನ್ನುವಂತೆ ಕಾಣುತ್ತದೆ. ಇತ್ತ ಮಗಳನ್ನು ಕೂಡ ವಿದ್ಯಾವಂತಳನ್ನಾಗಿಸಿದ ಹಿರಿಯ ಅವನ ವಿರೋಧವಾಗಿ ಅವಳು ಬೇರೆ ಜಾತಿಯವನೊಬ್ಬನನ್ನು ಮದುವೆಯಾಗುತ್ತೇನೆನ್ನುವುದು ಮತ್ತೊಂದು ಆಘಾತಕಾರಿ ಬೆಳವಣಿಗೆಯಾಗಿ ತೋರಿ ಅವನು ವಿರೋಧ ವ್ಯಕ್ತಪಡಿಸುತ್ತಾನೆ. ತನ್ನ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲು ಅಂಗರನೆನ್ನುವ ಒಬ್ಬ ತನ್ನದೇ ಜಾತಿಯ ಹುಡುಗನನ್ನು ಕರೆಸಿಕೊಂಡು ತನ್ನ ವೃತ್ತಿಯ ಸಮಸ್ತವನ್ನು ಅವನಿಗೆ ಧಾರೆಯೆರೆಯುತ್ತಾನೆ. ಹಾಗೆಯೇ ಮಗಳನ್ನು ಅವನಿಗೆ ಕೊಟ್ಟು ತನ್ನ ಪರಂಪರೆಯೊಂದನ್ನು ಅಳಿಯನಾಗುವವನ ಮೂಲಕ ಮುಂದುವರೆಸಿಕೊಂಡು ಹೋಗಲು ಬಯಸುತ್ತಾನೆ. ಆದರೆ ಮಗಳು ಕಲಿತು ಪ್ರೀತಿಯೆನ್ನುವ ಕೂಪಕ್ಕೆ ಬಿದ್ದಿರುತ್ತಾಳೆ. ಕೊನೆಗೂ ಹಿರಿಯನ ಆಸೆಗಳು ಕೈಗೂಡುವುದೇ ಇಲ್ಲ. ಇದು ಗಟ್ಟಿ ಕಥಾಹಂದರವಾದರೆ ಕೆಲವೊಂದು ಕಡೆ ಘಟನೆಗಳು, ವಿಷಯಗಳು ಪುನರಾವರ್ತನೆಯಾಗಿರುವುದು ಓದುಗನನ್ನು ತಾಳ್ಮೆ ತಪ್ಪಿಸುತ್ತವೆ. ಕೆಲವೊಮ್ಮೆ ಪುಟಭರ್ತಿಗಾಗಿ ಬರೆದವೇನೋ ಅನ್ನುವ ಸಂಗತಿಗಳು ಇವೆ.

ಅರ್ಧದವರೆಗೂ ಕಾದಂಬರಿ ಆಸಕ್ತಿಯಿಂದ ಓದಿಸಿಕೊಂಡು ಹೋಗುವುದಲ್ಲದೆ ಮಾಹಿತಿಪೂರ್ಣವಾಗಿದೆ. ಆದರೆ ಬಳಿಕ ಇಲ್ಲಿ ಕೆಲವೊಂದು ವ್ಯತಿರೀಕ್ತಗಳು ಕಾದಂಬರಿಯನ್ನು ಸ್ವೀಕರಿಸುವಲ್ಲಿ ತೊಡಕಾಗಿದೆ. ಉದಾಹರಣೆಗೆ ಹಿರಿಯನ ಮಗಳು ಚೋಮಿಲಿ, ಪೇಟೆ ಹೈದ ಕೃಷ್ಣ ಆಲಿಯಾಸ್ ಕಿಟ್ಟಿಯ ಕಣ್ಣಿಗೆ ಬೀಳುತ್ತಲೇ ಶ್ಯಾಮಿಲಿಯಾಗುವುದು ಒಂದು ರೀತಿಯ ಅಸಂಗತವೆನಿಸುತ್ತದೆ. ಚೋಮಿಲಿಯೆನ್ನುವ ಹೆಸರೇ ಇದ್ದಿದ್ದರೆ ಕೃಷ್ಣನಿಗೆ ಪ್ರೀತಿ ಉಂಟಾಗುತ್ತಿರಲಿಲ್ಲವೇನೋ! ಚೋಮಿಲಿಯನ್ನು ಒಪ್ಪಿಕೊಂಡ ಓದುಗನಿಗೆ ಇದೊಂದು ಕೃತಕ ಬೆಳವಣಿಗೆ ಅನಿಸದಿರದು. ಇನ್ನು ಎರಡನೆಯದಾಗಿ ಕೆಲವೊಂದು ಪಾತ್ರಗಳು ಧುತ್ತನೆ ಪ್ರತ್ಯಕ್ಷವಾಗಿ ಅನಗತ್ಯ ಅವುಗಳ ಬಗ್ಗೆ ಕಥೆಯಿಂದ ಹೊರಗೆ ಬೆಳವಣಿಗೆಯನ್ನು ಪಡೆದು ಕಾದಂಬರಿಯ ಓದಿಗೆ ಅಡ್ಡಿಯೆನಿಸುತ್ತವೆ. ಇಲ್ಲೂ ಲೇಖಕರು ಅನಗತ್ಯ ವಿಚಾರಗಳನ್ನು ಆ ಪಾತ್ರಗಳ ಮೂಲಕ ಓದಿಸುತ್ತಾರೆಂದು ಓದುಗನಿಗೆ ಅನಿಸುತ್ತದೆ. ಉದಾಹರಣೆಗೆ ಕೃಷ್ಣನ ಪಾತ್ರ. ಆತ ಪೋಲಿಯಾಗಿದ್ದು ತನ್ನ ಶ್ರೀಮಂತಿಕೆಯಿಂದಲೇ ವಿದ್ಯೆ ಗಳಿಸಿಕೊಂಡವನು. ಚೋಮಿಲಿ (ಶ್ಯಾಮಿಲಿ)ಯನ್ನು ನೋಡುತ್ತಲೇ ಅವನು ಅವಳನ್ನು ಅಪಾರ್ಥಮಾಡಿಕೊಂಡು ಸುಖ ಪಡಬೇಕೆಂದುಕೊಂಡವನು. ಆದರೆ ಅನಿರೀಕ್ಷಿತವೆನ್ನುವಂತೆ ಅವಳನ್ನು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಳ್ಳುವುದು ಕೂಡ ಕಥೆ ಜಾಳುಜಾಳಾದಂತೆ ಭಾಸವಾಗುತ್ತದೆ.

ಇಂತಹ ಆಭಾಸಗಳ ನಡುವೆಯೂ ‘ತಿಲ್ಲಾನ’ ಕಾದಂಬರಿ ಪ್ರಾದೇಶಿಕ ಸೊಗಡನ್ನು ನಿರೂಪಿಸುತ್ತಾ ಬೆಳವಣಿಗೆ ಪಡೆಯುವುದು ಒಂದು ರೀತಿಯಲ್ಲಿ ಒಂದು ಪ್ರದೇಶದ ಸಾಂಸ್ಕೃತಿಕ ಚಟುವಟಿಕೆಯ ಬಗ್ಗೆ ಮಾಹಿತಿ ಒದಗಿಸಿದಂತೆ ಮತ್ತು ಅಲ್ಲಿಯ ಸೊಬಗನ್ನು ತಿಳಿಸಿಕೊಡುವಂತೆ ಕಾಣಿಸುತ್ತದೆ. ಒಂದು ಪ್ರಾದೇಶಿಕ ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾದರೂ ಇಂತಹ ಕೃತಿಗಳನ್ನು ಓದಲೇಬೇಕು.

Read more!

Thursday, April 14, 2011

ಶೂದ್ರ ತಪಸ್ವಿ - ಕುವೆಂಪು ನಾಟಕ


ಕುವೆಂಪು ಅವರ ಸಾಹಿತ್ಯ ಸೃಷ್ಟಿ ಗಟ್ಟಿನೆಲೆ ಪಡೆದದ್ದೇ ಅವರ ನಾಟಕಗಳಿಂದಾಗಿ. ಅವರು ಒಟ್ಟು 14 ನಾಟಕಗಳನ್ನು ಬರೆದಿದ್ದಾರೆ. ಸೃಜನಶೀಲ ಪ್ರತಿಭೆ ಕಾವ್ಯಕ್ಕಿಂತಲೂ ಹೆಚ್ಚಾಗಿ ನಾಟಕದಲ್ಲಿಯೇ ಕಾಣಿಸಿಕೊಳ್ಳುತ್ತದೆ ಎಂಬುವುದಕ್ಕೆ ಕುವೆಂಪುರವರೇ ಸಾಕ್ಷಿಯಾಗಿದ್ದಾರೆ.

ಕುವೆಂಪು ಅವರು ಕನ್ನಡಕ್ಕೆ ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ಮತ್ತು ಬಲಿದಾನ ಎಂಬ ಮೂರು ಮಹತ್ವದ ನಾಟಕಗಳನ್ನು ಕೊಟ್ಟಿದ್ದಾರೆ. ಮಾನವೀಯ ಅಂತ:ಕರಣದ ವೈಚಾರಿಕ ನಿಲುವು ಈ ನಾಟಕಗಳ ಪ್ರಧಾನ ಅಂಶ. ಪ್ರಧಾನ ಸಂಸ್ಕೃತಿಯ ಧಾರೆಗೆ ಪ್ರತಿಕ್ರಿಯೆಯಾಗಿ ಪರ್ಯಾಯ ಸಂಸ್ಕೃತಿ ನಿರ್ಮಾಣಗೊಂಡಿರುವ ವಿಧಾನ ಇಲ್ಲಿನ ಮುಖ್ಯ ಬೆಳವಣಿಗೆ.

ಶೂದ್ರ ತಪಸ್ವಿ ನಾಟಕದಲ್ಲಿ ಪ್ರತಿಭಟನಾತ್ಮಕ ನೆಲೆ ಸ್ಪಷ್ಟವಾಗಿ ರೂಪುಗೊಂಡಿದೆ. ಹೊಸ ಸಾಮಾಜಿಕ ಮೌಲ್ಯಗಳನ್ನು ಸಮಕಾಲೀನ ವಿದ್ಯಮಾನಗಳಿಗೆ ಹೋಲಿಸಿ ನೋಡುವ ಕ್ರಮವನ್ನು ಕುವೆಂಪು ಇಲ್ಲಿ ಎತ್ತಿ ಹಿಡಿದಿದ್ದಾರೆ. ‘ಶೂದ್ರ ತಪಸ್ವಿ’ ಎಂಬ ಹೆಸರೇ ಒಂದು ಸಮರ್ಥ ಪ್ರತಿಮೆಯಾಗಿ ಕಾಣುತ್ತದೆ. ಅದಲ್ಲದೆ, ಈ ಶೀರ್ಷಿಕೆಯೇ ಬಹು ಬಗೆಯ ಅರ್ಥಗಳನ್ನು ಹೊರಡಿಸುತ್ತದೆ. ‘ಶೂದ್ರ’ ಹಾಗೂ ‘ತಪಸ್ವಿ’ ಎಂಬ ಸ್ಥಾಪಿತ ಪದಗಳ ವಿರುದ್ಧಾರ್ಥಕಗಳನ್ನು ಬುಡಮೇಲು ಮಾಡಿ ಹೊಸ ಬಗೆಯ ಅರ್ಥವನ್ನು ಹೊರಡಿಸಲು ಇವು ಪ್ರಯತ್ನಿಸುತ್ತವೆ. ಈ ಅರ್ಥ ‘ರಾಮ’ ಅಥವಾ ‘ಧರ್ಮಶ್ರದ್ಧೆ’ಯನ್ನು ಸಂಪೂರ್ಣವಾಗಿ ತ್ಯಜಿಸಿದ ಸೃಜನಶೀಲ ದೃಷ್ಟಿಯೂ ಆಗಿರಬಹುದೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇದಕ್ಕಾಗಿ ನಾವು ಕುವೆಂಪು ಅವರ ಬದುಕು ಮತ್ತು ಕೃತಿಗಳನ್ನು ಅವುಗಳ ಬಾಹುಳ್ಯದಲ್ಲಿಯೇ ಕಾಣಬೇಕಾಗಿರುವ ಅನಿವಾರ್ಯತೆಯಿದೆ.

ಈ ನಾಟಕ ‘ಸೆಕ್ಯುಲಾರಿಸಂ’ಗೆ ತುತ್ತಾಗಿದ್ದುದು ಮಾತ್ರ ವಿಷಾದನೀಯ. ಸ್ವತ: ಕುವೆಂಪುರವರೆ ಮಾರ್ನುಡಿಯಲ್ಲಿ ಈ ವಿಷಾದವನ್ನು ತೋಡಿಕೊಂಡು ನಾಟಕದ ಹಿನ್ನಲೆ ಯಾವ ರೀತಿಯಲ್ಲಿ ‘ಜಾತಿಗರ್ವಾಂಧತೆ’ಯನ್ನು ಮೀರಿ ನಿಂತಿದೆಯೆನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಕುವೆಂಪು ಅವರ ಹುಡುಕಾಟದ ವಸ್ತುಗಳೆಲ್ಲ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನಾಧರಿಸಿದ್ದು. ಇಂತಹ ಮಹಾನ್ ಕೃತಿಗಳು ಮೌಲ್ಯ ಸಂಘರ್ಷಗಳು, ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧಗಳು ಮತ್ತು ಮುಖ್ಯವಾಗಿ ಪುರೋಹಿತಶಾಹಿಯ ನಿಯಂತ್ರಣಗಳನ್ನೆಲ್ಲಾ ಮನುಷ್ಯನ ಬದುಕಿಗೆ ಅನಿವಾರ್ಯವೆಂಬತೆ ರೂಪುಗೊಂಡಿರುವುದು ಅಚ್ಚರಿಯ ವಿಷಯ.

ಪ್ರಸ್ತುತ ‘ಶೂದ್ರ ತಪಸ್ವಿ’ ನಾಟಕವು ವಾಲ್ಮೀಕಿ ರಾಮಾಯಣದ ‘ಉತ್ತರ ಕಾಂಡ’ದಿಂದ ಆಯ್ಕೆಗೊಂಡಿರುವಂತದ್ದು. ಇಲ್ಲಿನ ‘ಶಂಬೂಕ ಪ್ರಸಂಗ’ವನ್ನು ನಾಟಕದಲ್ಲಿ ಸಮಕಾಲಿನ ಸಮಸ್ಯೆಯೊಂದರ ಮರುಸೃಷ್ಟಿಯೆನ್ನುವಂತೆ ಬದಲಾಯಿಸಿ ಸಮಾಜಮುಖಿ ಸಮಸ್ಯೆಯನ್ನು ಸರಳೀಕರಿಸಿದ್ದಾರೆ. ಇದರಿಂದಾಗಿ ಸಮಕಾಲೀನ ಸಮಸ್ಯೆಯೊಂದಕ್ಕೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡಿದ್ದಾರೆಂದರೆ ಸುಳ್ಳಲ್ಲ.

ಶೂದ್ರ ತಪಸ್ವಿಯಲ್ಲಿ ಮೂರು ದೃಶ್ಯಗಳಿವೆ. ಮೊದಲ ದೃಶ್ಯದಲ್ಲಿ ಶಂಬೂಕ ಋಷಿಯ ಆಶ್ರಮಕ್ಕೆ ಕಾವಲು ನಿಂತ ವೃಕ್ಷ ಭೈರವ ಮತ್ತು ಮೃತ್ಯು ದೇವತೆಯ ಮುಖಾಮುಖಿಯ ಚಿತ್ರಣವಿದೆ. ಎರಡನೆ ದೃಶ್ಯ ಅಯೋಧ್ಯೆಯಲ್ಲಿ ನಡೆಯುವ ಪ್ರಸಂಗ. ಇಲ್ಲಿ ಬ್ರಾಹ್ಮಣನೋರ್ವ ಅಳುತ್ತಾ ತನ್ನ ಮಗನ ದಾರುಣ ಸಾವು ರಾಮರಾಜ್ಯದಲ್ಲಿ ಸೋಜಿಗವನ್ನು, ವಿಷಾದವನ್ನು ಮತ್ತು ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎನ್ನುವ ಸಂಕಟದಲ್ಲಿ ಹೇಳುತ್ತಾನೆ. ರಾಮ ಈ ಮಾತನ್ನು ಕೇಳಿ ಬ್ರಾಹ್ಮಣನ ಜೊತೆಗೆ ಮಾತಿಗಿಳಿಯುತ್ತಾನೆ. ಆಗ ಶೂದ್ರನೊಬ್ಬ ತಪ್ಪಸಿಗೆ ಕುಳಿತಿರುವುದೇ ಅಧರ್ಮಕ್ಕೆ ಕಾರಣವಾಗಿದೆ, ಹಾಗಾಗಿಯೆ ತನ್ನ ಮಗನ ದಾರುಣ ಸಾವು ಸಂಭವಿಸಿದೆ ಎಂದು ಆರೋಪಿಸುತ್ತಾನೆ.

ಮೂಲ ರಾಮಾಯಣದ ಕಥೆಯಲ್ಲಿ ಇಂತಹ ವಿಷಯವನ್ನು ಕೇಳಿ ತಕ್ಷಣ ರಾಮ ಮಂತ್ರಿ ಮಂಡಲದ ಸಭೆಯನ್ನು ಕರೆಯುತ್ತಾನೆ. ಬ್ರಾಹ್ಮಣನ ಅತ್ಯಾರೋಪದ ದೂರಿನ ಬಗ್ಗೆ ಸಭೆಯಲ್ಲಿ ವಿಚಾರಿಸುತ್ತಾನೆ. ಆಗ ನಾರದರಿಂದ ಶೂದ್ರನೊಬ್ಬನ ತಪ್ಪಸಿನ ಬಗ್ಗೆ ತಿಳಿಯುತ್ತದೆ. ರಾಮ ಶೂದ್ರ ತಪಸ್ವಿಯನ್ನು ಹುಡುಕುತ್ತಾ ಹೋಗುತ್ತಾನೆ. ಅಲ್ಲಿ ಶಂಬೂಕನೆನ್ನುವ ಶೂದ್ರನು ತಪಸ್ಸಿಗೆ ಕುಳಿತಿರುವುದು ತಿಳಿಯುತ್ತದೆ. ಅವನನ್ನು ವಿಚಾರಿಸುವಾಗ ಅವನು ಶೂದ್ರನೆಂದು ತಿಳಿಯುತ್ತದೆ. ರಾಮನ ಖಡ್ಗ ಅವನ ತಲೆಯನ್ನು ಕಡಿದುರುಳಿಸುತ್ತದೆ. ಶಂಬೂಕ ಸಾಯುತ್ತಾನೆ.

ಆದರೆ ಕುವೆಂಪು ನಾಟಕದಲ್ಲಿ ಶಂಬೂಕನ ಪಾತ್ರಕ್ಕೆ ಸರಿಯಾದ ರೀತಿಯಲ್ಲಿ ಮಾನವೀಯ ನೆಲೆಯಲ್ಲಿ ನ್ಯಾಯ ಒದಗುತ್ತದೆ. ವರ್ಣಭೇದ ನೀತಿಯನ್ನು ಸಮಾಜಮುಖಿಯಾದ ಸಮಸ್ಯೆಯೊಂದಕ್ಕೆ ಪರಿಹಾರವೆಂಬಂತೆ ಬ್ರಾಹ್ಮಣ ಸಮೇತನಾಗಿ ಎಲ್ಲರೂ ಶೂದ್ರ ತಪಸ್ವಿಯನ್ನು ಒಪ್ಪಿಕೊಳ್ಳುವಂತೆ ಚಿತ್ರಿಸಿದ್ದಾರೆ. ಅದು ಶೂದ್ರ ತಪಸ್ವಿಯ ಬಳಿ ಹೋದ ಮೃತ್ಯು ಶಾಂತ ರೀತಿಯಲ್ಲಿ ಅವನಿಗೆ ವಂದಿಸಿ ಮತ್ತೆ ಬ್ರಾಹ್ಮಣನತ್ತ ತಿರುಗುತ್ತದೆ. ಆಗ ಬ್ರಾಹ್ಮಣ, ‘ಗತಿಯೇನು ಬಟ್ಟೆದೋರೆಯ್’ ಎಂದು ಕೇಳುವಾಗ ರಾಮ, ‘ನೀನು ಯಾರನ್ನು ಆವಾಜ್ಞೆಗೈದೆಯೋ, ಅವನನ್ನೇ ಕೇಳು. ಸನ್ಮತಿಯ ಸತ್ಕೃತಿಗೆ ಶಾಸ್ತ್ರದ ನೆರವು ಬೇಕಿಲ್ಲ. ಎಲ್ಲವನ್ನೂ ಯುಕ್ತಾ ಯುಕ್ತತೆಯಿಂದ ಆಲೋಚಿಸಿದರೆ ತಿಳಿಯುತ್ತದೆ’ ಅನ್ನುತ್ತಾನೆ. ಇದು ಮೂರನೆ ದೃಶ್ಯದಲ್ಲಿ ನಡೆಯುವ ಘಟನೆ.

ಇಲ್ಲಿ ಸೀತೆಯನ್ನು ಪರಿತ್ಯಜಿಸಿದ ರಾಮ, ಬ್ರಾಹ್ಮಣನ ಮಾತಿನ ನಿಂದನೆಯನ್ನು ಸಹಿಸಿಕೊಳ್ಳದೆ ಅವನ ಪರವಾಗಿ ನಿಲ್ಲುತ್ತಾನೆ. ಶಂಬೂಕ ತಪಸ್ವಿಯ ಆಶ್ರಮವಿರುವ ಕಾಡೇ ರಾಮನಿಗೆ ಸೀತೆಯಾಗಿ ಗೋಚರಿಸುತ್ತದೆ. ತುಂಬು ಬಸುರಿಯಾದ ಸೀತೆಯನ್ನು ಕಾಡಿಗಟ್ಟಿದ ಕೈ ಮತ್ತು ಶಂಬೂಕನನ್ನು ಕೊಲ್ಲಬೇಕಾದ ಬಲಗೈಗೆ ಕರುಣೆಯಿದೆಯೆ? ಎಂದು ರಾಮ ಪ್ರಶ್ನಿಸುವುದು ಭವಭೂತಿಯ ‘ಉತ್ತರ ರಾಮ ಚರಿತ’ ನಾಟಕದಲ್ಲಿ. ಇದು ಭವಭೂತಿಯ ಅಹಿಂಸಾಪರ ವಾದವಾದರೆ ಕುವೆಂಪು ನಾಟಕದಲ್ಲಿ ಸಮಕಾಲೀನ ಸಮಸ್ಯೆಗೆ ಮುಖಾಮುಖಿಯಾಗಿ ವರ್ಣತಾರತಮ್ಯವನ್ನು ಮಾಡದೆ ನ್ಯಾಯ ಒದಗುವಂತೆ ಮಾಡಲಾಗಿದೆ.

ಇಡೀ ಕೃತಿಯು ಹಳೆಗನ್ನಡದಲ್ಲಿದೆ ಮತ್ತು ಛಂದೋಬದ್ಧವಾಗಿದ್ದು ಸಶಬ್ದವಾಗಿ ಓದಿಕೊಂಡು ಪದಪದಗಳನ್ನು ಆಸ್ವಾದಿಸಬಹುದು. ಕುವೆಂಪು ಅವರು ಬಿನ್ನವಿಸಿಕೊಳ್ಳುವಂತೆ ಈ ನಾಟಕವನ್ನು ವರ್ಣಬೇಧದಡಿಯಲ್ಲಿಟ್ಟು ಓದುವ ಬದಲು ಶುದ್ಧ ಬುದ್ಧಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಓದಿದರೆ ಕೃತಿಗೂ, ಕೃತಿಕಾರನಿಗೂ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹೇಳುತ್ತಾರೆ.

ಈ ನಾಟಕವು ಮಂಜುನಾಥ್ ಬಡಿಗೇರ ಅವರ ದಕ್ಷ ನಿರ್ದೇಶನದಲ್ಲಿ ‘ನಿನಾಸಂ’ ತಿರುಗಾಟದ ನಾಟಕವಾಗಿ ಯಶಸ್ವೀ ನಾಟಕಗಳಲ್ಲೊಂದಾಗಿರುವುದು ಶ್ಲಾಘನೀಯ. ಹಳೆಗನ್ನಡದಲ್ಲಿಯೇ ಸಂಭಾಷಣೆಯನ್ನು ಹೇಳುವ ಸ್ಪಷ್ಟತೆ ಜನಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿದೆ. ಪ್ರತೀಯೊಬ್ಬ ಕಲಾವಿದನು ಪಾತ್ರಕ್ಕೆ ಜೀವ ತುಂಬಿದ್ದಾನೆ. ನಾಟಕ ನೋಡುವುದಕ್ಕೂ ಓದುವುದಕ್ಕೂ ಯಾವುದೇ ಅಭಾಸ ಇಲ್ಲಿ ಕಾಣುವುದಿಲ್ಲ.

Read more!

Wednesday, April 6, 2011

ಕಂಬಾರರ - ಜೀಕೆ ಮಾಸ್ತರರ ಪ್ರಣಯ ಪ್ರಸಂಗ


ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ ಎಷ್ಟೊಂದು ಬರೆದರು ಮುಗಿಯದ ಅಗಾಧತೆ ಆ ಪದಗಳಿಗಿವೆ. ಕಾಳಿದಾಸನಿಂದ ಹಿಡಿದು ಇಲ್ಲಿಯವರೆಗೂ ಅದೇಷ್ಟೋ ಹೊಸ ಹೊಸ ವ್ಯಾಖ್ಯಾನಗಳು ಆ ಶಬ್ದಗಳನ್ನು ಅಲಂಕರಿಸಿವೆ. ಅದೇ ರೀತಿಯ ಒಂದು ಹೊಸ ಪ್ರಸಂಗ ಚಂದ್ರಶೇಖರ ಕಂಬಾರರ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’. ಹೆಸರೇ ಸೂಚಿಸುವಂತೆ ಇದೊಂದು ಪ್ರೇಮ ಕಥೆಯಾದರೂ ಇಲ್ಲಿರುವ ಹೊಸತನ ಒಬ್ಬ ವಯಸ್ಸಾದ ವ್ಯಕ್ತಿ ಪ್ರೀತಿಗೆ ಸಿಲುಕುವ ಪೇಚಿನ ಪ್ರಸಂಗವಾಗಿರುವುದು. ಪ್ರೀತಿ ಹಂಚಿಕೊಳ್ಳುವುದಕ್ಕಾಗಿಯೇ ನೋವುಂಡ ಹೃದಯಗಳು ಸದಾ ಮಿಡಿಯುತ್ತಿರುತ್ತವೆಯೆನ್ನುವಂತೆ ಇಲ್ಲಿ ಮಾಸ್ತರರು ಪ್ರೀತಿಗೆ ಶರಣಾಗತರಾಗುವುದು ವಿಪರ್ಯಾಸ. ಪ್ರೀತಿಗೆ ಮಣಿಯದವರಿಲ್ಲವೆನ್ನುವುದು ಜ್ಞಾನಿಯೊಬ್ಬನ ಅನುಭವದ ಮಾತು. ಅನುಭಾವದ ನೆಲೆಯಲ್ಲಿ ಮತ್ತು ಜಂಜಡದ ಬಲೆಯಲ್ಲಿ ಮನುಷ್ಯ ಒಂದು ಹಿಡಿ ಪ್ರೀತಿಗಾಗಿ ಸದಾ ಪರಿತಪಿಸುತ್ತಾ ಇರುತ್ತಾನೆ.

ಇಲ್ಲಿ ಚಂದ್ರಶೇಖರ ಕಂಬಾರರ ಕಿರು ಕಾದಂಬರಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ದಲ್ಲಿ ಜೀಕೆ ಮಾಸ್ತರರು ಬಹಳ ಕಟ್ಟುನಿಟ್ಟಿನ ಮನುಷ್ಯ ಮತ್ತು ತಾನು ಹೇಳಿದ್ದೆ ಆಗಬೇಕು ಅನ್ನುವ ಮನಸ್ಥಿತಿಯಾತ. ಅವರ ಕಠೋರ ಶಿಸ್ತು ನಿಯಮಾವಳಿಗೆ ಮಗನನ್ನೇ ಬಲಿಕೊಡಬೇಕಾದ ಪ್ರಸಂಗ ಎದುರಾಗುತ್ತದೆ. ಮಗನ ಸಾವಿನ ಬಳಿಕ ಅವರ ಮಡದಿ ಮಾಸ್ತರರನ್ನು ಕೇರ್ ಮಾಡದ ಸ್ವಭಾವದವಳಾಗುತ್ತಾಳೆ.

ಜೀಕೆ ಮಾಸ್ತರರು ಶಾಲೆಯಲ್ಲಿಯೂ ಬಹಳ ಕಟ್ಟುನಿಟ್ಟಿನ ಮನುಷ್ಯ. ಸ್ವಲ್ಪವೂ ಅಶಿಸ್ತನ್ನು ಬಯಸದವರು. ಅವರ ಕೆಂಗಣ್ಣಿಗೆ ಗುರಿಯಾಗುವವನು ಆ ಶಾಲೆಯ ವಿದ್ಯಾರ್ಥಿ ಗಿರೆಪ್ಪ. ಜೀಕೆ ಮಾಸ್ತರರ ನಿಯತ್ತಿನ ಚೇಲ ಎನ್.ಟಿ. ಅವನು ಘಟನೆಗಳಿಗೆ ಸದಾ ಬಣ್ಣಕಟ್ಟಿ ಹೇಳುವವನು. ಅವನ ಬಾಯಿಯಲ್ಲಿ ಗಿರೆಪ್ಪನ ತುಂಟತನ ಮತ್ತು ಕೀಟಲೆಗಳು ಒಂದಲ್ಲ ಒಂದು ವಿಧದಲ್ಲಿ ಮಾಸ್ತರರನ್ನು ಕೆರಳಿಸುತ್ತಲೇ ಇರುತ್ತದೆ. ಅಂತಹ ಪೋಕರಿಗೆ ರೋಜಾಳಂತಹ ಹುಡುಗಿಯ ಜೊತೆಗೆ ಸಲುಗೆಯಿರುತ್ತದೆಯೆನ್ನುವುದು ಕೇಳಿ ಮಾಸ್ತರರ ಮೈ ಉರಿಯುತ್ತದೆ. ಅವನನ್ನು ಕರೆದು ಬುದ್ದಿವಾದ ಹೇಳಿದರೂ ಅವನು ಕೇಳಿಸದ ಒರಟು ಬುದ್ಧಿಯವನು. ಇದರಿಂದ ನೊಂದ ಮಾಸ್ತರರು ಅವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಲೇಬೇಕೆನ್ನುವ ಹಠಕ್ಕೆ ಬೀಳುತ್ತಾರೆ.

ಇಷ್ಟಕ್ಕೂ ಅವರಿಗೆ ಅಂತಹ ಪಡ್ಡೆ ಗಿರೆಪ್ಪನಿಗೆ ಗಂಟು ಬಿದ್ದ ಹುಡುಗಿ ರೋಜಾ ಯಾರು ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲ. ಅವರು ಆ ಕ್ಲಾಸಿಗೆ ಬಂದಾಗ ಅಟೆಂಡೆನ್ಸ್ ಕರೆಯುತ್ತಾ ಅವಳನ್ನು ನೋಡುತ್ತಾರೆ. ಆ ಕ್ಷಣದಲ್ಲಿ ಅವಳ ನೋಟವೂ ಮಾಸ್ತರರ ಮೇಲಿರುತ್ತದೆ. ಇದನ್ನೇ ಕಂಡು ಚಕಿತರಾದ ಮಾಸ್ತರರು ಒಳಗೊಳಗೆ ಪುಳಕಿತರಾಗುತ್ತಾ ರೋಜಾಳೆನ್ನುವ ಚೆಲುವಿಯ ಪ್ರೀತಿಗೆ ಸಿಲುಕುತ್ತಾರೆ. ಮೊದಲ ಬಾರಿಗೆ ಅವಳಿಂದ ಪ್ರೇಮ ಪತ್ರ ಪಡೆದುಕೊಂಡು ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವವರೆಗೂ ಮುಂದುವರಿಯುತ್ತದೆ ಅವರ ಪ್ರಣಯದಾಟ.

ರೋಜಾಳಿಗಾದರೂ ಮಾಸ್ತರರನ್ನು ಗೆದ್ದ ಸಂಭ್ರಮ. ಇದರಿಂದ ತನಗೆ ಬೇಕಾದ ಮಾರ್ಕ್ಸ್ಗಳು ದೊರಕಿಸಿಕೊಳ್ಳುವುದಲ್ಲದೆ, ತನ್ನ ಫ್ರೆಂಡ್ಗೂ ಒಳ್ಳೆಯ ಮಾರ್ಕ ಸಿಗುವ ಹಾಗೆ ಮಾಡುವ ಚಾಣಾಕ್ಷೆ. ಇದು ಮಾಸ್ತರರು ಹೆಂಡತಿ ಹಾಸಿಗೆ ಹಿಡಿದ ಮೇಲೆ ರೋಜಾಳನ್ನು ಮನೆಗೆ ಕರೆದಾಗ ನಡೆದ ಸಂಚು. ಇದರಿಂದ ಮಾಸ್ತರರ ಮನಸ್ಸಿನಲ್ಲಿ ರೋಜಾ ಗಟ್ಟಿಯಾಗಿ ನಿಂತು ಗಿರೆಪ್ಪನೆನ್ನುವ ಪಡ್ಡೆಯನ್ನು ಗೆದ್ದೆನೆನ್ನುವ ಖುಷಿಯಲ್ಲಿರುತ್ತಾರೆ. ಅವರಲ್ಲಿ ಬತ್ತದ ಲವಲವಿಕೆ ತುಂಬಿರುವುದು ಅವರ ವಯಸ್ಸಿಗೂ ಮೀರಿ. ಇಲ್ಲಿ ಗಿರೆಪ್ಪನಿಗೂ ಮಾಸ್ತರರಿಗೂ ಕೆಲವೊಂದು ಸ್ಪರ್ಧೆಗಳು ನಡೆದು ಕೊನೆಗೂ ಮಾಸ್ತರರೇ ಗೆದ್ದಂತೆ ಬೀಗುತ್ತಾರೆ. ಆದರೆ ಇವೆಲ್ಲಾ ರೋಜಾ ಮತ್ತು ಗಿರೆಪ್ಪ ಇಬ್ಬರೂ ಸೇರಿ ಮಾಡಿದ ನಾಟಕವೆನ್ನುವುದು ಮಾಸ್ತರರಿಗೆ ಅರಿವಾಗುವಾಗ ಅವರು ಬದುಕಿನಲ್ಲಿ ತಾನು ಕಳೆದುಕೊಂಡದ್ದೆಲ್ಲವನ್ನೂ ನೆನಪಿಸಿಕೊಂಡು ಕೊರಗುತ್ತಾ ಎಲ್ಲದರಿಂದಲು ದೂರವಾಗ ಬಯಸುತ್ತಾರೆ. ಅವರೊಳಗಿದ್ದ ಆ ಶಿಸ್ತಿನ ಮಾಸ್ತರರು ಸತ್ತು ಅವರು ಹೊಸ ವ್ಯಕ್ತಿಯಾಗಿ ಕಾಣಿಸುತ್ತಾರೆ.

ಕಾದಂಬರಿಯ ಅಂತ್ಯ ಬೇಸರವೆನಿಸಿದರೂ ಅವರು ತಮ್ಮ ಉದಾರತೆಯಿಂದ ರೋಜಾ ಹಾಗು ಗಿರೆಪ್ಪನವರನ್ನು ಕ್ಷಮಿಸಿ ಅವರ ಬದುಕಿಗೆ ಒಂದು ದಾರಿಯನ್ನು ಮಾಡಿಕೊಡುತ್ತಾರೆ.

ಒಟ್ಟಾರೆಯಾಗಿ ಒಂದು ವಿಭಿನ್ನ ಕಥಾವಸ್ತುವನ್ನೊಳಗೊಂಡ ‘... ಮಾಸ್ತರರ ಪ್ರಣಯ ಪ್ರಸಂಗ’ ಓದುಗನಲ್ಲಿ ತಣಿಯದ ಕುತೂಹಲ ಹುಟ್ಟಿಸಿ, ಅಂತ್ಯದಲ್ಲಿ ತುಟಿಯಲ್ಲಿ, ಛೆ ಛೆ ಅನ್ನುವ ಪಶ್ಚಾತ್ತಾಪದ ಸದ್ದು ಹೊರಡಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಹೆಚ್ಚಿಸಬಲ್ಲ ಒಂದು ವಿನೂತನ ಕಾದಂಬರಿಯೆಂದರೆ ತಪ್ಪಾಗಲಾರದು.

Read more!

Saturday, April 2, 2011

ಹೊತ್ತಿ ಉರಿವ ಒಡಲ ಕಾಮದ - ಕಾಡಿನ ಬೆಂಕಿ


ಕಾಡಿನ ಬೆಂಕಿ ಹೊತ್ತಿಕೊಂಡರೆ ಕಾಡು ಉಳಿಯದು; ಒಡಲಿಗೆ ಹೊತ್ತಿ ಕೊಂಡ ಕಾಮದ ಬೆಂಕಿ ಅನೂಹ್ಯವಾಗಿ ದೇಹವನ್ನು ಸುಟ್ಟು ಉಳಿಸದು.

ಖ್ಯಾತ ಕಾದಂಬರಿಕಾರ ನಾ. ಡಿಸೋಜ ಅವರ ‘ಕಾಡಿನ ಬೆಂಕಿ’ ಇದು ಎಂಬತ್ತರ ದಶಕದಲ್ಲಿ ‘ತರಂಗ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದ ಕಾದಂಬರಿ. ಮನುಷ್ಯನ ಲೈಂಗಿಕ ಸಮಸ್ಯೆಯ ಸುತ್ತಾ ಹೆಣೆದ ಕಥೆಯಾದರೂ ಇದನ್ನು ಬರೆದ ಶೈಲಿ ಬಹಳ ಸೊಗಸಾಗಿದೆ. ಕೇವಲ ಸಮಸ್ಯೆಯೊಂದರ ಮುಖಾಮುಖಿಯಾಗದೆ ನಿಧಾನವಾಗಿ ಸಮಸ್ಯೆಯನ್ನು ಬಿಚ್ಚಿಡುತ್ತಾ ಸಂಸಾರಿಕ ಮತ್ತು ಕಾಡಿನ ಶ್ರೀಮಂತಿಕೆಯನ್ನು ಕಥೆ ಹೆಣೆದುಕೊಂಡಿರುವುದು. ಇದೊಂದು ಒಂದೇ ವರ್ಗಕ್ಕೆ ಸೀಮಿತವಾದ ಕಾದಂಬರಿಯಾಗದೆ ಎಲ್ಲರೂ ಓದಬಹುದಾದ ಕೃತಿಯಾಗಿ ಮೂಡಿ ಬಂದಿರುವುದು ಹಿರಿಯ ಲೇಖಕರೊಬ್ಬರು ಇದನ್ನು ಬರೆದಿರುವುದರಿಂದ ಅನ್ನುವುದು ನನ್ನ ಅನಿಸಿಕೆ.

ಹೌದು, ನಿಜವಾಗಿಯೂ ಕಾದಂಬರಿ ಕೇವಲ ಲೈಂಗಿಕ ವಿಷಯದ ಸುತ್ತಾ ಗಿರಕಿಹೊಡೆಯದೆ, ಅರಣ್ಯ ಇಲಾಖೆಯ ಪ್ರತೀಯೊಬ್ಬ ಸಿಬ್ಬಂದಿಯ ಸಮಸ್ಯೆಗಳತ್ತ ಮತ್ತು ಅವರ ಜೀವನ ಶೈಲಿಯತ್ತ ಮುಖ ಮಾಡಿರುವುದು ಗೋಚರಿಸುತ್ತದೆ. ಕಾಡಿನ ನಡುವೆ ಬದುಕುವ ದುಸ್ತರ ಮತ್ತು ವ್ಯವಸ್ಥೆಗಳೇ ಇಲ್ಲದ ಸವಾಲಿನ ಕೆಲಸಗಳನ್ನು ಕಥೆ ವಿವರಿಸುತ್ತದೆ. ಕಾನುಮರಡಿ ಹೆಸರೇ ಸೂಚಿಸುವಂತೆ ಅರಣ್ಯ ಇಲಾಖೆಗೆ ಸೇರಿದ ಜನವಸತಿಯಿಲ್ಲದ ಪ್ರದೇಶ ಓದುಗನ ಕಣ್ಣಿನಲ್ಲಿ ಸುಂದರವಾಗಿ ಚಿತ್ರಿತವಾಗುವಂತೆ ಕಾದಂಬರಿಯನ್ನು ಬರೆಯಲಾಗಿದೆ.

ಎರಡು ಮನಸ್ಸುಗಳನ್ನು ಬೆಸೆಯುವ ಪ್ರೇಮ ಮತ್ತು ಎರಡು ದೇಹಗಳನ್ನು ಬೆಸೆಯುವ ಕಾಮ, ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಇವುಗಳಲ್ಲಿಯ ಅಸಮತೋಲನ ಸಂಸಾರದ ಮೇಲೆ ವ್ಯತಿರೀಕ್ತ ಪರಿಣಾಮ ಬೀರಬಲ್ಲದು. ಮಾತ್ರವಲ್ಲ, ಕ್ಲಿಷ್ಟಕರವಾದ ಸಮಸ್ಯೆಯನ್ನು ತಂದೊಡ್ಡಬಲ್ಲದು.

ಇಲ್ಲಿಯ ಕಥಾನಾಯಕ ರಘುರಾಮ ತುಂಬು ಸಂಸಾರದಲ್ಲಿ ಜನಿಸಿದವನು. ಅವನ ತಂದೆ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು, ದಿನನಿತ್ಯ ಮನೆಯಲ್ಲಿ ಜಗಳ, ದಬ್ಬಾಳಿಕೆ, ಬೈಗುಳಗಳು. ಇದನ್ನೆಲ್ಲಾ ಬೆರಗುಗಣ್ಣಿನಿಂದ ನೋಡುವ ಪುಟ್ಟ ಬಾಲಕ ರಘುರಾಮನಿಗೆ ಬೆಳೆದಂತೆ ಅದೇನೋ ಅಸಂಗತ ಮತ್ತು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದಕ್ಕೆ ಪೂರಕವಾಗಿ ಮನೋಹರಿ ಮಹದೇವನೆನ್ನುವವನನ್ನು ಎರಡನೆ ಮದುವೆಯಾಗಿ ಮಗುವಿನ ನಿರೀಕ್ಷೆಯಲ್ಲಿರುತ್ತಾಳೆ. ಆದರೆ ಆತ ನಿಷ್ಪ್ರಯೋಕಜನೆನ್ನುವ ದೃಷ್ಟಿ ಮನೋಹರಿಯದ್ದು. ಮನೋಹರಿಯ ಮನೋಲಹರಿಯನ್ನು ಅರಿಯದ ರಘುರಾಮ ಅವಳ ಜೊತೆಗೆ ಅನೈತಿಕ ಸಂಬಂಧವನ್ನು ಬೆಳೆಸುತ್ತಾನೆ. ಇದು ಮನೋಹರಿಗೆ ವರವಾಗಿಯೂ ರಘುರಾಮನಿಗೆ ಸಮಸ್ಯೆಯೊಂದರ ಪ್ರಪಾತವಾಗಿಯೂ ತೆರೆದುಕೊಳ್ಳುತ್ತದೆ. ಇದು ರಘುರಾಮನ ಮಡದಿ ಯಶೋದೆಗೆ ತಿಳಿಯುತ್ತಲೇ ಅವಳು ಅವನಿಂದ ದೂರವಾಗುತ್ತಾಳೆ. ಆದರೆ ರಘುರಾಮ ಕೆಟ್ಟವನಲ್ಲವಾದರೂ ಅವನ ಲೈಂಗಿಕತೆಯ ಬಗ್ಗೆ ಇರುವ ಅಜ್ಞಾನ ಯಶೋದಾಳಂತಹ ಹೆಣ್ಣನ್ನು ಬಲಿತೆಗೆದುಕೊಳ್ಳುವವರೆಗೆ ಮುಂದುವರಿಯುತ್ತದೆ.

ಇಂತಹ ಮಾನಸಿಕ ವಿಕಾರಕ್ಕೆ ಸಿಲುಕಿ ನರಳುವ ಅದೆಷ್ಟೋ ಯುವಜನಾಂಗಕ್ಕೆ ಇಂದಿಗೂ ಲೈಂಗಿಕ ಅಜ್ಞಾನವಿರುವುದನ್ನು ಕಾಣುತ್ತಲೇ ಇರುತ್ತೇವೆ. ಇಂತಹ ಅಜ್ಞಾನಗಳೇ ಮುಂದೆ ವಿಪರೀತ ಸಮಸ್ಯೆಗಳನ್ನು ಸೃಷ್ಟಿಸಿ ಬದುಕು ಸಾವಾಗುವ ಪರಿಸ್ಥಿತಿ ಎದುರಾಗುವುದು ಖಚಿತ. ಪ್ರತೀಯೊಂದು ಸಮಸ್ಯೆಗೂ ಪರಿಹಾರವಿದೆ. ಹಾಗೇನೆ ಲೈಂಗಿಕ ಸಮಸ್ಯೆಗೂ ಪರಿಹಾರವಿದೆ. ಮನುಷ್ಯ ತನ್ನ ಸಂಕೋಚ ಮನೋಭಾವನೆಯನ್ನು ತೊರೆದು ಇಂತಹ ಸಮಸ್ಯೆಗಳಿಗೆ ಮನೋಚಿಕಿತ್ಸಕರ ಬಳಿ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ಮನುಷ್ಯನ ವಿಕೃತ ಕೃತ್ಯಗಳಿಗೆ ಇಂತಹ ಅಜ್ಞಾನಗಳು ಕಾರಣವಾಗಿರಬಹುದು. ‘ಲೈಫ್ ಈಸ್ ಸ್ಟ್ರೇಂಜರ್ ದ್ಯಾನ್ ಫಿಕ್ಷನ್’ ಅನ್ನುವ ಹಾಗೆ ಈ ಕೃತಿಯೂ ಕೂಡ ವಿಭಿನ್ನವಾದ ಸಮಸ್ಯೆಯೊಂದನ್ನು ಮುಂದಿಡುತ್ತದೆ. ಇದರಿಂದ ಕೆಲವರಾದರೂ ತಮ್ಮ ಸಂಕೋಚ ಮನೋಭಾವನೆಯನ್ನು ಬಿಟ್ಟು ಮುಕ್ತವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಉತ್ತಮವೆನ್ನುವುದು ಈ ಲೇಖಕರ ಉದ್ದೇಶ ಕೂಡ ಆಗಿದೆ. ಈ ಕಥೆಯತ್ತ ಗಮನಸೆಳೆದವರು ಖ್ಯಾತ ಮಾನಸಿಕ ತಜ್ಞ ದಂಪತಿಗಳಾದ ಡಾಕ್ಟರ್ ಅಶೋಕ್ ಪೈ ಮತ್ತು ಡಾಕ್ಟರ್ ರಜನಿ ಪೈಯವರು.

ಕಾಡಿನ ಬೆಂಕಿಯನ್ನು ಓದುಗರು ಮೆಚ್ಚಿಕೊಂಡಿರುವುದು ಅದರ ಶೈಲಿಗಾಗಿ. ಎಲ್ಲಿಯೂ ಸಮಸ್ಯೆಯನ್ನು ವೈಭವೀಕರಿಸದೆ ಸ್ಪುಟವಾಗಿ ಮತ್ತು ಕಲಾತ್ಮಕವಾಗಿ ಬರೆದಿರುವುದರಿಂದ ಇದು ಮುಜುಗರವಿಲ್ಲದೆ ಓದುವುದಕ್ಕೆ ಸಹಾಯವಾಗಿದೆ. ಇಂತಹ ವಿಶಿಷ್ಟ ಕಾದಂಬರಿಯನ್ನು ಕೇವಲ ಓದುವ ಖುಷಿಗಾಗಿ ಓದದೆ, ಸಮಸ್ಯೆಯತ್ತ ಮುಖ ಮಾಡಿರುವ ರಘುರಾಮನಂತಹ ವ್ಯಕ್ತಿಗಳ ಅಜ್ಞಾನವನ್ನು ತೊಡೆಯುವಂತಾದರೆ ಓದು ಸಾರ್ಥಕವಾದಿತು.

ಇಂತಹ ಕೃತಿಯನ್ನು ರಚಿಸಿದ ಲೇಖಕ ನಾ. ಡಿಸೋಜ ಅವರಿಗೆ ಮತ್ತು ಇದನ್ನು ಬರೆಯುವಂತೆ ಪ್ರೇರೇಪಿಸಿದ ಸಂತೋಷ್ ಕುಮಾರ್ ಗುಲ್ವಾಡಿ ಅವರಿಗೆ ಕೃತಜ್ಞತೆಯನ್ನು ಹೇಳಬೇಕು. ಈ ಕೃತಿ ಈಗ ಎರಡನೆ ಮುದ್ರಣವಾಗಿ ಪ್ರಕಟವಾಗಿದೆ.

Read more!