Tuesday, August 4, 2009

ಮೂರನೇ ದಾರಿ (ಪತ್ತೇದಾರಿ ಕಥೆ)


ಬೆನ್ನಿನ ಮೇಲೆ ಹರಡಿದ್ದ ಕೂದಲುಗಳನ್ನು ಒಟ್ಟು ಸೇರಿಸಿ ಬಿಗಿದು, ಕೆನ್ನೆಯ ಮೇಲುರುಳಲು ಸಜ್ಜಾದ ಕಣ್ಣೀರನ್ನು ಸೆರಗಿನ ತುದಿಯಿಂದ ಒರೆಸಿಕೊಂಡಳು ಚೆಲುವೆ ಬಾಧುರಿ.
"ದಯವಿಟ್ಟು ತಪ್ಪು ತಿಳ್ಕೊಳ್ಬೇಡಿ. ನಿಮ್ಮನ್ನು ಪ್ರಶ್ನಿಸೋದು ಅನಿವಾರ್ಯವಾಗಿತ್ತು"
ಎದುರಿಗಿದ್ದವನ ಮಾತಿಗೆ ಸಮಾಧಾನವೆನಿಸಿದರೂ, ಬಾಯಿ ತೆರೆಯುವುದು ಸರಿಯೆನಿಸಿತು.
"ನನ್ನ, ನಿವೇದನ್‍ನ ಸಂಬಂಧ ಏನೂಂತ ನಿಮಗೆ ಚೆನ್ನಾಗಿ ಗೊತ್ತು. ಮತ್ತೆ ಮತ್ತೆ ಅವನ ಬಗ್ಗೆ ಕೇಳಿ ನನ್ನನ್ನು ಹಿಂಸಿಸ್ತಾ ಇದ್ದೀರಿ"
"ಕ್ಷಮಿಸಿ ಬಾಧುರಿಯಾವರೆ, ನಿವೇದನ್ ನಿಮ್ಮ ಭಾವಿ ಪತಿಯಾಗಿರಬಹುದು. ಆತ ನನ್ನ ಸ್ನೇಹಿತ ಅನ್ನೋದನ್ನು ಮರಿಬೇಡಿ. ನನ್ನ ಸ್ನೇಹಿತನಿಗೋಸ್ಕರ ನಾನು ಕೇಳೋದು ಇಷ್ಟೆ, ಅವನು ಕಾಣೆಯಾದ ದಿನ ನಿಮ್ಮ ಬಳಿ ಏನಾದ್ರೂ ಹೇಳಿದ್ನೆ?"
ದೀರ್ಘ ಉಸಿರೆಳೆದುಕೊಂಡವಳ ಕಣ್ಣುಗಳಲ್ಲಿ ಧೈರ್ಯದ ನೋಟ ಕಂಡಾಗ ಮೂಗು ಅರಳಿ ನಿಟ್ಟುಸಿರು ಹೊರ ಬಂತು.
ಎದುರಿಗಿದ್ದ ನಿವೇದನ್‍ನ ಸ್ನೇಹಿತ ಅಂದುಕೊಂಡ ವ್ಯಕ್ತಿ, ಅವಳ ನೋಟವನ್ನು ಎದುರಿಸಲಾರದೆ ಮೇಜಿನ ಮೇಲೆ ದೃಷ್ಟಿ ಹರಡಿದ. ಮೇಜಿನ ಮೇಲಿದ್ದ ಯಾವುದೋ ಕಾಗದಗಳು ಗಾಳಿಗೆ ಅಲ್ಲಾಡುತ್ತಿದ್ದವು.
"ಇಲ್ಲ, ನಿವೇದನ್ ನಂಗೇನೂ ಹೇಳ್ಲಿಲ್ಲ. ಆದ್ರೆ ಯಾಕೋ ಮಂಕಾಗಿದ್ದ"
"ಅವನಿಗೇನಾದ್ರೂ ಆ ದಿವಸ ಮುಖ್ಯವಾದ ಕೆಲಸವಿತ್ತೆ?"
"ಇಲ್ಲ"
"ಯಾರಿಂದಲಾದ್ರೂ ಕರೆ ಬಂದಿತ್ತೆ?"
ಸ್ನೇಹಿತನ ಮಾತುಗಳಿಗೆ ತಟ್ಟನೆ ಮುಖ ಹೊರಳಿಸಿದವಳು, ಅವನನ್ನು ಅಳೆಯುವಂತೆ ದೃಷ್ಟಿಸಿದಳು. ಅವಳ ಮುಖದಲ್ಲಿ ಮೂಡಿದ್ದು ಸಂಶಯ!
ಮೆಲ್ಲನೆ ಮಾತು ಹೊರಳಿಸಿದಳು.
"ಅವನಿಗೆ... ಒಂದು ... ಕರೆ ಬಂದಿತ್ತು"
ಸ್ನೇಹಿತನ ಕಿವಿಗಳು ನಿಮಿರಿ ನಿಂತವು.
"ಯಾವಾಗ? ಯಾರ ಕರೇಂತ ಹೇಳ್ಬಹುದೆ?" ಆತುರ ಪಡಿಸಿದ.
"ಕರೆ ಬಂದಿರೋದು `ರಾಕ್ ಸೈಡ್' ಪಬ್ಬ್‍ನಿಂದ... ಅದೂ ಸರಿ ರಾತ್ರಿ ಹೊತ್ತು"
"ರಾಕ್ ಸೈಡ್!!??"
"ನಿಮಗೆ ಗೊತ್ತೆ?"
ಸ್ನೇಹಿತ ದೀರ್ಘ ಆಲೋಚನೆಯಲ್ಲಿ ಮುಳುಗುತ್ತಲೆ `ಇಲ್ಲ' ವೆನ್ನುವಂತೆ ತಲೆಯಾಡಿಸಿದ.
"ಕರೆ ಬಂದಿರೋ ಸಮಯ ಸುಮಾರು...?"
"ನಿಖರವಾಗಿ ಹೇಳಲಾರೆ. ಸುಮಾರು ಮಧ್ಯರಾತ್ರಿ ಹೊತ್ತಿಗೆ. ಕರೆ ಯಾರ್ದೂಂತ ಕೇಳ್ದೆ. ಏನೋ ಬೆದರಿದವನಂತೆ ಕಾಣಿಸ್ದ. ಅವನ ಮಾತಿನಲ್ಲಿ ತೊದಲಿಕೆಯಿತ್ತು"
"ಕರೆ ಮಾಡಿರೋದು ಯಾರೂಂತ ಹೇಳಿದ್ನೆ?"
"ಅದನ್ನೇ ಕೇಳಿದೆ. `ರಾಕ್ ಸೈಡ್'ನಿಂದ ಅಂದ. ರಾತ್ರಿ ಪಬ್ಬ್‍ನಲ್ಲಿ ಹಾಡೋದಿಕ್ಕೆ ಕರೆದಿದ್ದಾರಂತೆ. ಸಂಗೀತದ ಹುಚ್ಚು ಹಚ್ಚಿಸ್ಕೊಂಡಿರೋನು ಅವಕಾಶಕ್ಕಾಗಿ ಕಾಯ್ತ ಇದ್ದ. ನಾಳೆಯಿಂದ ಅಲ್ಲಿಗೆ ಹಾಡೋದಿಕ್ಕೆ ಹೋಗ್ತೀನಿಂದ. ಅವನ ಮಾತಿಗೆ ರೇಗಿದೆ. `ಆಗೋದಿಲ್ಲಾಂತ ಹೇಳ್ಬಿಡು. ಮದುವೆಗೆ ಮುಂಚೆ ಇದೆಲ್ಲಾ ಸರಿ. ಮದುವೆಯಾದ ನಂತರವೂ ಹಾಡೋದು ಮುಂದುವರಿದ್ರೆ ಕಷ್ಟ' ಅಂತ ದಬಾಯಿಸ್ದೆ. ನನ್ನ ಸಮಾಧಾನಕ್ಕೆ `ಸರಿ' ಅಂದ...."
ಸ್ನೇಹಿತನಿಗೆ ಮತ್ತೇನೋ ಸಂಶಯ ಕಾಡಿತು. ತಟ್ಟನೆ ಮಧ್ಯೆ ಬಾಯಿ ಹಾಕ್ದ.
"ಕರೆ ಮಾಡ್ದೋನು ತನ್ನ ಹೆಸರು ಹೇಳ್ಲಿಲ್ಲಾಂತ ಕಾಣ್ಸುತ್ತೆ?"
"ಕರೆ ಮಾಡಿರೋದು ಹುಡುಗ ಅಲ್ಲ... ಹುಡುಗಿ..."
"ಹುಡುಗಿ!?"
"ಹೌದು, ನಿಖರವಾಗಿ ಹೇಳಬಲ್ಲೆ. ಆದ್ರೆ ಆತ ನನ್ನನ್ನಲ್ಲದೆ ಬೇರಾವ ಹೆಣ್ಣಿನ ಬಗ್ಗೆ ಮಾತನಾಡಿದ್ದಿಲ್ಲ. ಅವನಿಗೆ ನನ್ನ ಮೇಲೆ ಎಷ್ಟೋಂದು ಪ್ರೀತಿ ಅಂದ್ರೆ... ಅದಕ್ಕೆ ಸಾಕ್ಷಿ..." ಮೇಜಿನ ಮೇಲೆ ಹರಡಿದ್ದ ಪತ್ರಗಳನ್ನು ತಂದು ತೋರಿಸಿದಳು ಚೆಲುವೆ ಬಾಧುರಿ.
ಎತ್ತರದ ನಿಲುವಿನ ಶ್ರೀಮಂತಿಕೆ ಛಾಪು ಹೊಂದಿರೋ ಬಾಧುರಿ, ನಿವೇದನ್‍ಗೆ ಎಲ್ಲಾ ವಿಧದಲ್ಲೂ ಸರಿಯಾದ ಜೋಡಿ! ಅವಳು ನೀಡಿದ ಪತ್ರಗಳನ್ನು ಪರಿಶೀಲಿಸುವಂತೆ ನೋಡಿದ.
"ನೀವು ನಿವೇದನ್‍ನ ಎಲ್ಲಾ ಆಸ್ತಿಗೂ ಬಾಧ್ಯಸ್ಥರು"
"ಹೌದು, ಆದ್ರೆ ನಿವೇದನ್ ಯಾಕೆ ಹೀಗೆ ಮಾಡ್ದಾಂತ ಮಾತ್ರ ತಿಳಿದಿಲ್ಲ. ತಾನಾಯಿತು ತನ್ನ ಕೆಲಸವಾಯ್ತೂಂತ ಇದ್ದ. ಅವನಿಗೆ ಹೆಣ್ಣಿನಿಂದ ಕರೆ ಬಂದಿದೆಯೆಂದರೆ ನಂಬೋಕೆ ಆಗ್ತಾ ಇಲ್ಲ"
"ನೀವು ಹೇಳ್ತಾ ಇರೋದು ವಿಚಿತ್ರವಾಗಿದೆ. ರಾತ್ರಿ ಒಂದು ಹುಡುಗಿಯಿಂದ ಕರೆ ಬಂದಿತ್ತೂಂತಿರಿ, ಬೆಳಗ್ಗೆ ನೋಡಿದ್ರೆ ಆತನೆ ಕಾಣೆಯಾಗಿದ್ದಾನೆ!"
ದು:ಖದ ಒಸರು ಮತ್ತೆ ಕಣ್ಣುಗಳಲ್ಲಿ ಕಾಣಿಸಿಕೊಂಡಿತು.
"ಸಮಾಧಾನ ತಂದ್ಕೊಳ್ಳಿ ಬಾಧುರಿಯವರೆ. ನಾನು ನಿವೇದನ್‍ನನ್ನು ಭೇಟಿಯಾಗದೆ ಮೂರ್ನಾಲ್ಕು ತಿಂಗಳುಗಳೇ ಕಳೆದುಹೋದ್ವು. ಕಾಲೇಜ್ ದಿನಗಳಲ್ಲಿ ನಾವು ಹುಟ್ಟು ಹಾಕಿರೋ `ಉದಯ ನಕ್ಷತ್ರ' ಹವ್ಯಾಸಿ ಸಂಗೀತ ಸಂಸ್ಥೆಯೀಗ ಛಿಧ್ರವಾಗೋಯ್ತು. ಆದ್ರೆ... ಆತ ಮಾತ್ರ ಸಂಗೀತದ ಹುಚ್ಚಿಗೆ ಅಂಟಿಕೊಂಡ್ಬಿಟ್ಟ. ಈಗ ನೋಡಿದ್ರೆ ಅವನು ಕಾಣೆಯಾಗಿದ್ದಾನೆ!"
"ಹೌದು, ಆತನ ಸಂಗೀತದ ಹುಚ್ಚು ನಮ್ಮ ಪ್ರೇಮಕ್ಕೆ ನಾಂದಿಯಾಗಿತ್ತು. ಅದೇ ಸಂಗೀತ ಈಗ ಮುಳುವಾಯಿತು"
"ಹಾಗನ್ಬೇಡಿ ಬಾಧುರಿಯವರೆ, ನಿವೇದನ್‍ಗೆ ಏನೂ ಆಗಿರಲಾರದು. ಹೇಗೂ ಪೊಲೀಸರಿಗೆ ತಿಳಿಸಿದ್ದೀರಿ. ನಾನೂ ನಿಮ್ಮ ಸಹಾಯಕ್ಕಿದ್ದೀನಿ. ಅಗತ್ಯ ಬಿದ್ದಾಗ ಮತ್ತೆ ನಿಮ್ಮನ್ನು ಬಂದು ಕಾಣ್ತೀನಿ" ಎದ್ದು ನಿಂತು ಕೈ ಮುಗಿದ. ಕೈ ಮುಗಿದವಳು ತಟ್ಟನೆ ಏನೋ ಕೇಳಲೆಂದು ಬಾಯ್ತೆರೆದಳು. ಅದನ್ನು ಅರ್ಥೈಸಿಕೊಂಡವನು, "ಕಲಾಕಿರಣ್" ಅಂದು ಅಲ್ಲಿಂದ ಹೊರಗೆ ಬಂದ.

***

ಕಲಾಕಿರಣ್ ಖಾಲಿಯಾಗಿದ್ದ ಮೇಜಿನ ಬಳಿ ಬಂದು ಕುಳಿತು ಮಂದ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡ. ಕಮಟುವಾಸನೆ ಮೂಗಿಗೆ ಬಡಿಯಿತು. ಕಿವಿಗಡಚಿಕ್ಕುವ ಲೈವ್ ಬ್ಯಾಂಡ್‍ನ ಸದ್ದು, ನಶೆ ಏರಿಸಿಕೊಂಡವರಿಗೆ `ಕಿಕ್' ನೀಡಿದರೆ ಆತನಿಗೆ ತಲೆ ಚಿಟ್ಟು ಹೊಡೆಯುವಂತಾಯಿತು. ಬಣ್ಣ ಬಣ್ಣದ ನಿಯಾನ್ ದೀಪಗಳಡಿಯಲ್ಲಿ ರೆಕ್ಕೆ ಕಟ್ಟಿಕೊಂಡಂತೆ ಕೃತಕ ನಗು ತರಿಸಿಕೊಂಡು, ಸಂಗೀತ ನುಡಿಸುವವರನ್ನೊಮ್ಮೆ ನೋಡಿದ. ನಿವೇದನ್ ಇಂತಹ ಸ್ಥಳದಲ್ಲಿ ಹಾಡು ಹೇಳಲು ಒಪ್ಪಿಕೊಂಡಿದ್ದಾನೆಂದ್ರೆ ಆಶ್ಚರ್ಯ!
"ಸರ್" ಬ್ಯಾರರ್ ಬಂದು ನಿಂತ.
"ಒಂದು ಚಿಲ್ಡ್ ಕೆ.ಎಫ಼್ ಸ್ಟ್ರಾಂಗ್, ತಿನ್ನೋದಿಕ್ಕೆ ಚಿಪ್ಸ್, ಪೀನಟ್"
ಎರಡು ನಿಮಿಷಗಳಲ್ಲಿ ಬೇರರ್ ಎಲ್ಲವನ್ನೂ ತಂದು ಅವನ ಇದುರಿಗೆ ಜೋಡಿಸಿದ. ಬಿಯರ್ ಬಾಟಲನ್ನು ಎತ್ತಿಕೊಂಡು, ಗ್ಲಾಸನ್ನು ಓರೆಯಾಗಿ ಹಿಡಿದು ತುಂಬಿಸಿದ. ಮೆಲ್ಲನೆ ಗ್ಲಾಸನ್ನು ಎತ್ತಿಕೊಂಡು ತುಟಿಗಿರಿಸಿದ.
"ಕೋಯಿ ಫೂಲ್ ಔರ್ ಪಂಚಿಯೋಂಕೋ ನ..." ಗಾಯಕನ ಹಾಡು ಸಂಗೀತದ ಅಬ್ಬರದ ಮಧ್ಯೆ ನುಸುಳಿದಾಗ ಕಿವಿ ನಿಮಿರಿಸಿಕೊಂಡ ಸ್ನೇಹಿತ. ಬಾಧುರಿಯ ಮಾತುಗಳು ನೆನಪಾದವು.
`... ನಿವೇದನ್ ಎಂದೂ ಹುಡುಗಿಯರ ಬಗ್ಗೆಯಾಗಲಿ, ಹೆಣ್ಣಿನ ಬಗ್ಗೆಯಾಗಲಿ ಮಾತನಾಡಿದ್ದಿಲ್ಲ'
ದೂರದಲ್ಲಿ ನಿಂತಿದ್ದ ಬ್ಯಾರರ್‍ನನ್ನು ಕರೆದ.
"ಇನ್ನೊಂದು ಸ್ಟ್ರಾಂಗ್ ತರಲೇನು?"
"ಬೇಡ" ತಲೆಯಾಡಿಸಿದ. "ನಿನ್ನಿಂದ ಒಂದು ಸಹಾಯವಾಗ್ಬೇಕಿದೆ"
"ಏನ್ ಸಾರ್?"
"ನಿವೇದನ್ ಜೊತೆಗೆ ಮಾತಾಡ್ಬೇಕಿದೆ"
"ನಿವೇದನ್?!" ಬ್ಯಾರರ್ ಆಶ್ಚರ್ಯದಿಂದ ನಶೆ ಏರಿಸಿಕೊಂಡವನನ್ನು ನೋಡಿದ.
"ಅದೇ ಅಲ್ಲಿ ಹಾಡ್ತಾ ಇದ್ದಾನಲ್ಲ ಅವನು..." ಬೆರಳು ತೋರಿಸಿದ ಕಲಾಕಿರಣ್‍ನನ್ನು ವಿಚಿತ್ರವಾಗಿ ದಿಟ್ಟಿಸಿದ.
"ಒಂದು ಬಾಟಲ್ ಬಿಯರ್‍ನಿಂದ ನಶೆ ಏರೊಲ್ಲಾಂತ ತಿಳ್ಕೊಂಡಿದ್ದೀನಿ ಅಥವಾ ನೀವು ಮೊದಲ ಬಾರಿಗೆ ಕುಡಿತ್ತಿದ್ದೀರಿ?"
ಈಗ ಆಶ್ಚರ್ಯವಾಗುವ ಸರದಿ ಕಲಾಕಿರಣ್‍ನದ್ದು!
"ನೀನು ಏನು ಹೇಳ್ತಾ ಇದ್ದಿ?"
"ಅಲ್ಲಿ ಹಾಡ್ತಿರೋನು ನಿವೇದನ್ ಅಲ್ಲ. ಈ ಪಬ್ಬ್‍ನ ಮಾಲೀಕ ಪ್ರಭಾತ್ ರಂಜನ್"
"ಪಬ್ಬ್‍ನ ಮಾಲೀಕ!"
"ಹೌದು, ಇಲ್ಲಿ ಖಾಯಂ ಆಗಿ ಹಾಡ್ತಿದ್ದ ಪ್ರೇಮ್ ಕೈಕೊಟ್ಟ. ಲೈವ್ ಬ್ಯಾಂಡ್ ಇದ್ದಕ್ಕಿದ್ದಂತೆ ನಿಂತು ಹೋಯ್ತು. ಗಿರಾಕಿಗಳು ಕಡಿಮೆಯಾದ್ರು. ಅದಕ್ಕೆ ಬದಲಿ ಜನ ಸಿಗುವವರೆಗೂ ಮಾಲೀಕನೆ ಹಾಡ್ತಾನೆ" ಅಭಿಮಾನದಿಂದ ಹೇಳಿಕೊಂಡವನನ್ನು ದೃಷ್ಟಿಸಿದ.
"ತುಂಬಾ ಚೆನ್ನಾಗಿ ಹಾಡ್ತಾರೆ. ಅವರನ್ನು ಅಭಿನಂದಿಸ್ಬೇಕು"
"ಹಾಗಾದರೆ ನೀವು ಸ್ವಲ್ಪ ಸಮಯ ಕಾದಿರಿ. ಹನ್ನೊಂದು ಗಂಟೆಗೆಲ್ಲಾ ಸಂಗೀತ ನಿಲ್ಲುತ್ತೆ. ಮತ್ತೆ ಆಫೀಸ್‍ನಲ್ಲಿ ಭೇಟಿಯಾಗಬಹುದು"
"ಹನ್ನೊಂದು ಗಂಟೆಗೆ!" ಉದ್ಗಾರ ತೆಗೆದವನಿಗೆ ಕಾಯುವುದು ಅನಿವಾರ್ಯವಾಯ್ತು. ಬಿಲ್ಲು ಪಾವತಿಸಿ ಕೌಂಟರ್ ಬಳಿ ಬಂದು ನಿಂತಾಗ ಸಂಗೀತ ನಿಂತಿತ್ತು. ನೇರವಾಗಿ ಪ್ರಭಾತ್ ರಂಜನ್‍ನ ರೂಂಗೆ ನುಗ್ಗಿದ. ಅನಿರೀಕ್ಷಿತವಾಗಿ ಬಂದ ಆಗಂತುಕನನ್ನು ಕಂಡು ದಣಿದಿದ್ದ ಗಾಯಕ ಚಕಿತನಾಗಿ ದಿಟ್ಟಿಸಿದ!
"ತಾವು ಯಾರು?"
"ನಾನು ಕಿರಣ್, ನಿಮ್ಮನ್ನು ಅಭಿನಂದಿಸೋದಿಕ್ಕೆ ಬಂದೆ. ನೀವು ತುಂಬಾ ಚೆನ್ನಾಗಿ ಹಾಡ್ತೀರಿ" ತೊದಲುತ್ತಲೆ ಹೇಳಿದ ಸ್ನೇಹಿತ.
"ಏನು ಮಾಡೋದು? ನಾನು ಹಾಡ್ಲೇ ಬೇಕಾದ ಪರಿಸ್ಥಿತಿ. ಲೈವ್ ಬ್ಯಾಂಡ್ ಇಲ್ಲಾಂದ್ರೆ ಬಿಸಿನಸ್ ಇಲ್ಲ. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು"
ವಿದೇಶಿ ಮಾಲನ್ನು ಗ್ಲಾಸಿಗೆ ಬಗ್ಗಿಸುತ್ತಾ ಹೇಳಿ ಅವನು ಹೊರಡಬಹುದೆಂಬ ದೃಷ್ಟಿಯಿಂದ ನೋಡಿದ.
ಕಲಾಕಿರಣ್ ಎದುರಿನ ಚೇರನ್ನು ಎಳೆದು ಕುಳಿತ.
"ಕೋಯಿ ಫೂಲ್ ಔರ್ ಪಂಚಿಯೋಂಕೋ.... ಹಾಡು ತುಂಬಾ ಚೆನ್ನಾಗಿತ್ತು. ನಿವೇದನ್ ಯಾವಾಗ್ಲೂ ಅದನ್ನು ಹಾಡ್ತಾ ಇದ್ದ"
ನಿವೇದನ್‍ನ ಹೆಸರು ಕೇಳುತ್ತಲೇ ಮಾಲೀಕನ ಮುಖ ಕಪ್ಪಿಟ್ಟಿತು.
"ಅವನೊಬ್ಬ ಮೋಸಗಾರ. ಕೊಟ್ಟಿರೋ ಒಳ್ಳೆ ಅವಕಾಶನ ಕಳ್ಕೊಂಡ. ಅರ್ಜೆಂಟಾಗಿ ಬಂದು ಹಾಡು ಅಂದ್ರೆ... ಕೈ ಕೊಟ್ಟ. ಇನ್ನು ಆತ ಬಂದ್ರೂ ಹಾಡೋದಿಕ್ಕೆ ಬಿಡಲಾರೆ"
ಕಲಾಕಿರಣ್‍ಗೆ ಏನೋ ಹೊಳೆಯಿತು. ಸೂಕ್ಷ್ಮವಾಗಿ ಮಾಲೀಕನನ್ನು ಗಮನಿಸುತ್ತಿದ್ದ.
"ಆತನನ್ನು ಪರಿಚಯಿಸಿಕೊಟ್ಟವಳು ನನ್ನ ಹೆಂಡತಿ. ಒಳ್ಳೆಯ ಹಾಡುಗಾರ ಆತ ಅಂದಿದ್ದಕ್ಕೆ ಅವಕಾಶ ನೀಡ್ದೆ. ಬರ್ತೀನಿ ಅಂದೋನು ಪತ್ತೆ ಇಲ್ಲ"
ನಿವೇದನ್‍ಗೆ ಮಾಲೀಕನ ಹೆಂಡತಿ ಪರಿಚಯಸ್ಥೆ!
"ಅಂದ ಹಾಗೇ ನಿವೇದನ್ ನಿಮಗೆ ಹೇಗೆ ಪರಿಚಯ?"
"ನಮ್ಮೂರಲ್ಲಿ `ಉದಯ ನಕ್ಷತ್ರ' ಅನ್ನೋ ಸಂಗೀತ ಸಂಸ್ಥೆಯನ್ನ ಹುಟ್ಟು ಹಾಕಿ ಹಾಡ್ತಿದ್ದ. ಒಳ್ಳೆ ಗಾಯಕಾಂತ ಬಲ್ಲೆ"
"ಓಹೋ, ನೀವು ಅವನ ಅಭಿಮಾನಿ? ಅವನು ಇಲ್ಲಿ ಬಂದಿರ್ಬೋದೂಂತ ನೀವು ಹುಡುಕಿಕೊಂಡು ಬಂದಿರಬೇಕು" ಹುಬ್ಬುಗಳನ್ನು ಕುಗ್ಗಿಸಿ ಕೇಳಿದ ಮಾಲೀಕ.
"ಇಲ್ಲ, ನಾನು ಇಲ್ಲಿಯ ಖಾಯಂ ಗಿರಾಕಿ. ನೀವು ಹಾಡಿದ್ದನ್ನು ಕೇಳಿಸಿಕೊಂಡು ನಿಮ್ಮನ್ನು ಅಭಿನಂದಿಸೋದಿಕ್ಕೆ ಇಲ್ ಬಂದೆ. ನಾನಿನ್ನು ಬರ್ತೀನಿ, ನಿಮ್ಮ ಅಭ್ಯಂತರವಿಲ್ಲದಿದ್ದರೆ ಮತ್ತೆ ಭೇಟಿಯಾಗ್ತೀನಿ"
ಮಾಲೀಕನಿಗೇನೋ ಸಂಶಯ ಸುಳಿದಾಡಿತು. ಅಭಿಮಾನಿ ಎಂದುಕೊಂಡವನು ಹೊರಗೆ ಹೋಗುವುದನ್ನೇ ನೋಡುತ್ತಲೇ ಗ್ಲಾಸುಗಳನ್ನು ತುಟಿಗೆ ಸೇರಿಸಿದ.

***

ಮನೆಯ ಬಾಗಿಲನ್ನು ವಿಶಾಲವಾಗಿ ತೆರೆದು, ಕಣ್ಣುಗಳನ್ನು ಅಗಲಗೊಳಿಸಿ ಎದುರಿಗೆ ನಿಂತಿದ್ದ ಅಪರಿಚಿತನನ್ನು ನೋಡುತ್ತಿದ್ದಳು ಪ್ರಿಯಲ್.
"ನಮಸ್ಕಾರ, ನಾನು ಕಿರಣ್.... ಕಲಾಕಿರಣ್. ನಿವೇದನ್‍ನ ಸ್ನೇಹಿತ"
ಅವಳು ಬಾಗಿಲ ಬಳಿ ನಿಂತಿದ್ದಂತೆ ಸವರಿಕೊಂಡು ಒಳಗೆ ಬಂದು ಸುತ್ತಲೂ ದೃಷ್ಟಿಸಿದ.
ನಿವೇದನ್‍ನ ಹೆಸರು ಕೇಳುತ್ತಲೆ ಮುಖದ ಬಿಗು ಕಡಿಮೆಗೊಳಿಸಿ ಹಿಂದಕ್ಕೆ ಸರಿದು ಅವನನ್ನು ಕುಳಿತುಕೊಳ್ಳುವಂತೆ ಹೇಳಿದಳು. ಅವಳಿಗೆ ಉಪಕಾರವೆನ್ನುತ್ತಾ ಸೋಫಾದ ಮೇಲೆ ಕುಳಿತ.
"ನಿವೇದನ್ ನಿಮಗೆ ತುಂಬಾ ಪರಿಚಿತನಿರಬೇಕಲ್ವಾ?"
ಆಗಂತುಕನ ನೇರ ಪ್ರಶ್ನೆಗೆ ಪ್ರತಿಕ್ರಿಯಿಸಲಾರದೆ, ತಡೆದು ಹೌದೆನ್ನುವಂತೆ ಗೋಣು ಆಡಿಸಿದಳು.
"ನಿಮ್ಮ ಸ್ನೇಹ ಯಾವ ತರಹದ್ದೂಂತ ಹೇಳಬಹುದೆ?" ಕೇಳುತ್ತಿದ್ದವನ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ತಿಳಿಯದೆ ಮತ್ತೊಮ್ಮೆ ತಬ್ಬಿಬ್ಬಾದಳು. ಅಪರಿಚಿತ ವ್ಯಕ್ತಿಗೆ ನಿವೇದನ್ ಹಾಗೂ ತನ್ನ ಸ್ನೇಹದ ಬಗ್ಗೆ ತಿಳಿದುಕೊಳ್ಳವ ತವಕ!
"ನೀವು ಯಾಕೆ ಈ ರೀತಿ ಕೇಳ್ತಾ ಇದ್ದೀರಿ?" ಅನುಮಾನದಿಂದ ಮರು ಪ್ರಶ್ನೆ ಎಸೆದಳು.
"ನನ್ನ ಸ್ನೇಹಿತನಿಗೆ ಸಹಾಯ ಮಾಡೊದಿಕ್ಕೆ ನಿಮ್ಮಿಂದ ಕೆಲವು ಮಾಹಿತಿಗಳು ಬೇಕು. ನೀವು ಅವರನ್ನು ಕಾಲೇಜ್‍ನಿಂದ ಬಲ್ಲವರು"
"ನಿಮಗೆ ನನ್ನ ಬಗ್ಗೆ ಎಲ್ಲಾ ಗೊತ್ತಿದೆ!?"
"ಹೌದು, ಒಮ್ಮೆ ನೀವು ನಿವೇದನ್‍ನ ತುಂಬಾ ಪ್ರೀತಿಸ್ದೋರೂಂತ ಚೆನ್ನಾಗಿ ಬಲ್ಲೆ"
"ನಿಮ್ಮ ಮಾತಿನ ಅರ್ಥ?"
"ನಿವೇದನ್ ಕಾಣೆಯಾಗಿದ್ದಾನೆ. ಒಂದು ರೀತಿಯಲ್ಲಿ ಹೇಳುವುದಾದರೆ ಆತನನ್ನು ಯಾರೋ ಕೊಲೆ ಮಾಡಿದ್ದಾರೆಂತ ಅನಿಸ್ತಿದೆ"
"ಏನು? ನಿವೇದನ್‍ನ ಕೊಲೆ!? ನನಗೆ ನಂಬೋಕೆ ಆಗ್ತಾ ಇಲ್ಲ" ಪ್ರಿಯಲ್‍ಳ ಕಣ್ಣುಗಳು ತುಂಬಿ ಬಂದವು.
"ನಂಗೂ ನಂಬಿಕೆ ಬರ್ಲಿಲ್ಲ. ಪ್ರಿಯಲ್, ನಿಜ ಹೇಳಿ ನೀವು ಯಾವುದೋ ಮಹತ್ತರವಾದ ವಸ್ತುವನ್ನು ಅವನಿಂದ ನಿರೀಕ್ಷಿಸ್ತಾ ಇದ್ರೀಂತ ಬಲ್ಲೆ"
ಅವನ ಮಾತುಗಳಿಗೆ ತತ್ತರಿಸಿದಳು. ತಾನು ಯಾವುದನ್ನು ರಹಸ್ಯವಾಗಿ ಉಳಿಸಿಕೊಳ್ಳಬೇಕೆಂದು ಕೊಂಡಿದ್ದಳೋ ಅದು ಮೂರನೆಯವನಿಗೆ ತಿಳಿದಿದೆ! ಧೈರ್ಯ ತಂದುಕೊಂಡವರಂತೆ ಕಣ್ಣುಗಳು ಹೊಳೆದವು. ದೀರ್ಘ ಉಸಿರೊಂದು ಬಾಯಿಯಿಂದ ಹೊರಬಿತ್ತು.
"ನಿಮ್ಮ ಮಾತಿನಿಂದ ನಿವೇದನ್‍ಗೆ ಎಷ್ಟು ಆತ್ಮೀಯರೂಂತ ತಿಳಿಯಬಲ್ಲೆ. ದಯವಿಟ್ಟು ನನ್ನ ನಿವೇದನ್‍ನ ಸಂಬಂಧ ಉಳಿದವರಿಗೆ ತಿಳಿಯೋದು ಬೇಡ" ಮೆತ್ತನೆಯ ಮಾತಿನಲ್ಲಿ ಹೇಳಿ ಸಹಾಯ ಯಾಚಿಸುವವರಂತೆ ಹೇಳಿದಳು.
"ಪ್ರಿಯಲ್, ನೀವು ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ನನಗೆ ತಿಳಿಸಿದರೆ, ಪೊಲೀಸರಿಂದ ನಿಮಗೆ ರಕ್ಷಣೆ ನೀಡ ಬಲ್ಲೆ. ಈಗಾಗಲೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ"
ದು:ಖಿತಳ ಬೆನ್ನ ಹುರಿಯಲ್ಲಿ ಚಳಿ ಹರಿದಂತಾಯಿತು.
"ಹೇಳ್ತೀನಿ, ಎಲ್ಲಾ ನಿಮ್ಮ ಬಳಿ ಹೇಳ್ತೀನಿ. ನಾನು ಕಾಲೇಜ್ ದಿನಗಳಿಂದ ನಿವೇದನ್‍ನ ಪ್ರೀತಿಸ್ದವಳು"
"ಅದು ನನಗೆ ಚೆನ್ನಾಗಿ ಗೊತ್ತು. ಆದ್ರೆ ಪೊಲೀಸರಿಗೆ ಈ ಕೊಲೆಯ ಹಿಂದೆ ಒಬ್ಬಳು ಹುಡುಗಿ ಇದ್ದಾಳೆಂದು ತಿಳಿದಿದೆ"
"ಇಲ್ಲ, ನಿವೇದನ್‍ನ ಪ್ರೀತಿಸ್ದೋಳು ನಾನು, ಅವನನ್ನು ಕೊಲೆ ಮಾಡುವಷ್ಟು ನೀಚಳಲ್ಲ"
"ನಿಮ್ಮ ಬಗ್ಗೆ ನಾನು ಹೇಳ್ತಾ ಇಲ್ಲ. ನಿವೇದನ್ ಕಾಣೆಯಾಗುವ ದಿನ, ಸರಿ ರಾತ್ರಿಗೆ ಒಂದು ಕರೆ ಬಂದಿತ್ತು. ಅದೂ ಹೆಣ್ಣಿನ ಕರೆ"
"ಆ ಕರೆ ಮಾಡ್ದೋಳು ನಾನೇ"
"ನೀವು!? ಅವನನ್ನು ಕರೆ ಮಾಡಿ ಯಾವುದೋ ವಿಚಾರದಲ್ಲಿ ಹೆದರಿಸಿದ್ರಿ?"
"ಇಲ್ಲ"
"ಹಾಗಂತ ಬಾಧುರಿ ಪೊಲೀಸ್‍ರಿಗೂ ತಿಳಿಸಿದ್ಲು"
"ನಾನು ನಿವೇದನ್ ಬಗ್ಗೆ ಏನೆಲ್ಲಾ ಆಸೆ ಇಟ್ಕೊಂಡಿದ್ದೆ. ಆದ್ರೆ ಆತ ನನ್ನನ್ನ ನಿರಾಕರಿಸ್ದ, ನಿರಾಶಳಾದೆ. ನಂತರ ನಾನು ಮನೆಯವರ ಒತ್ತಾಯಕ್ಕೆ ಮದುವೆಯ ಮಾಲೆಗೆ ಕೊರಳೊಡ್ಡಿದೆ. ನನ್ನ ಗಂಡನ ಮನೆಯಲ್ಲಿ ಶ್ರೀಮಂತಿಕೆಯಿದ್ದರೂ ಪ್ರೀತಿಯ ಕೊರತೆಯಿತ್ತು. ಒಮ್ಮೆ ಅಚಾನಕ್ಕಾಗಿ ನಿವೇದನ್‍ನ ಭೇಟಿಯಾದೋಳು ಅವನ ಸ್ನೇಹ ಮುಂದುವರಿಸ್ದೆ. ಒಂದೇ ಒಂದು ಬಾರಿ ಅವನನ್ನು ನೋಡ್ಬೇಕೆಂಬ ಆಸೆ ಮುಂದಿಟ್ಟೆ. ತನಗೆ ಮದುವೆ ಫಿಕ್ಸ್ ಆಗಿದೆ. ಖಂಡಿತವಾಗಿಯೂ ಮದುವೆಗೆ ಕರೆಯೋದಕ್ಕೆ ಬರುತ್ತೇನೆಂದು ತಿಳಿಸ್ದ. ಹಾಗೆ ನನಗೆ ಕರೆಯೋಲೆ ಕೊಡಲು ಬಂದಿದ್ದ. ಅವನನ್ನು ಕಳ್ಕೊಂಡ ನಾನು ಹುಚ್ಚಳಾಗಿ ಬಿಟ್ಟೆ. ಅವನ ಪ್ರೀತಿ ಇನ್ನೊಬ್ಬಳಿಗೆ ಮೀಸಲಾಗುವುದು ನನಗೆ ಬೇಡ. ಆಗ ನನ್ನಲ್ಲಿ ಒಂದು ಆಸೆ ಅಂಕುರಿಸಿತು. ನಿವೇದನ್‍ನನ್ನು ದಿನಾ ಕರೆ ಮಾಡಿ ಭೇಟಿ ಮಾಡಲಾರಂಬಿಸ್ದೆ. ನನ್ನ ಹುಚ್ಚು ಆಸೆಯೊಂದನ್ನು ಅವನ ಮುಂದೆ ಬಿಚ್ಚಿಟ್ಟೆ. ಅದನ್ನು ಕೇಳಿ ಆತ ದಿಗ್ಬ್ರಾಂತನಾದ. ಈ ರಹಸ್ಯವನ್ನು ಯಾರ ಬಳಿಯೂ ಹೇಳೊದಿಲ್ಲವೆಂದು ಭಾಷೆ ನೀಡ್ದೆ. ಆದ್ರೂ ಆತ ಹೆದರಿದ. ಈ ವಿಷಯ ನನ್ನ ಗಂಡನಿಗೆ ಗೊತ್ತಾದ್ರೆ ರದ್ಧಾಂತವಾಗುವುದೆಂದು ಹೇಳಿದ. ನಾನು ನನ್ನ ಹಠ ಬಿಡಲಿಲ್ಲ. ಅದಕ್ಕೆ ಬೇಕಿದ್ದ ಅಗತ್ಯತೆಗಳನ್ನೆಲ್ಲಾ ನಾನೇ ಮಾಡ್ದೆ. ಆದ್ರೂ ಕೊನೆಗೆ ಆತ ನನ್ನ ನಿರಾಶೆಗೊಳಿಸ್ದ"
ಸೋತ ಹೆಣ್ಣು ಕತ್ತು ಬಾಗಿಸಿದಳು.
"ನೀವು ಇಷ್ಟು ಹೇಳಿದ ಮೇಲೂ ನಿಮ್ಮ ಆಸೆ ಏನೂಂತ ಮಾತ್ರ ಹೇಳ್ಲಿಲ್ಲ"
"ನನ್ನ ನೀವು ಹುಚ್ಚಿ ಅಂದ್ಕೊಂಡ್ರೂ ಪರವಾಗಿಲ್ಲ. ಆ ವಿಷಯಾನ ನಿಮ್ಮತ್ರ ಹೇಳ್ತೀನಿ" ಎತ್ತಿದ ತಲೆಯನ್ನು ಮತ್ತೆ ತಗ್ಗಿಸಿದಳು. ಹೇಳಲೋ ಬೇಡವೋ ಅನ್ನುವ ಸಂದಿಗ್ಧತೆಯಿತ್ತು ಅವಳ ಮುಖದಲ್ಲಿ. ತುಸು ಮೌನದ ನಂತರ ಮತ್ತೆ ಮುಂದುವರಿಸಿದಳು, "...ನಿವೇದನ್‍ನಿಂದ ನನ್ನೊಡಲಲ್ಲಿ ಹುಟ್ಟೋ ಮಗೂನ ಬಯಸ್ದೆ. ಅದಕ್ಕಾಗಿ ಒಂದು ವಾರ ನಾವಿಬ್ರೂ ಊಟಿಗೆ ಹೋಗಿ, ಅಲ್ಲಿ ನಿಲ್ಲೋದೂಂತ ಹೋಟೆಲ್‍ನಲ್ಲಿ ರೂಂ ಬುಕ್ ಮಾಡ್ದೆ. ಆತ ನನ್ನನ್ನು ನಿರಾಶೆಗೊಳಿಸ್ದ. ಅವನು ಮೋಸ ಮಾಡಿದ್ದಕ್ಕಾಗಿ ಹತಾಶಳಾಗಿ ಅವನಿಗೆ ರಾತ್ರಿ ಹೊತ್ತು ಕರೆ ಮಾಡ್ದೆ" ಅವಳ ಕಥೆ ಕೇಳಿದ ಮೇಲೆ ದೀರ್ಘ ನಿಟ್ಟುಸಿರೊಂದು ಹೊರ ಬಂತು.
"ಪ್ರಿಯಲ್, ನಿಮ್ಮಿಂದ ತುಂಬಾ ಉಪಕಾರವಾಯಿತು. ಎಲ್ಲವನ್ನೂ ನನ್ನ ಮುಂದೆ ಬಿಚ್ಚಿಟ್ಟಿದ್ದಕ್ಕೆ ಧನ್ಯವಾದಗಳು. ಇನ್ನೇನಾದರೂ ಮಾಹಿತಿ ಬೇಕಿದ್ದಲ್ಲಿ ನಿಮ್ಮನ್ನು ಮತ್ತೆ ಭೇಟಿಯಾಗ್ತೀನಿ"
"ದಯವಿಟ್ಟು ಈ ರಹಸ್ಯ ಮೂರನೆಯವರಿಗೆ ತಿಳಿಸ್ಬೇಡಿ"
"ಖಂಡಿತವಾಗಿಯೂ ಅದರ ಬಗ್ಗೆ ನಿಶ್ಚಿಂತರಾಗಿ"
ಅವಳಿಗೆ ವಂದಿಸಿ ಹೊರಗೆ ಬರುವಾಗ ಪ್ರಭಾತ್ ರಂಜನ್‍ನ ಕಾರು ಬಂದು ನಿಂತಿತ್ತು!
ಕಲಾಕಿರಣ್ ಸರಕ್ಕನೆ ಸರಿದು ಮರೆಯಲ್ಲಿ ನಿಂತ!
ಪ್ರಭಾತ್ ರಂಜನ್! ಪಬ್ಬ್‍ನ ಮಾಲೀಕ ಪ್ರಿಯಲ್‍ಳ ಗಂಡ!
ತಲೆ ತಿರುಗಿದಂತಾಗಿ ಪಕ್ಕದ ಮರವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡ.

***

ಪ್ರಭಾತ್ ರಂಜನ್‍ನನ್ನು ಕಂಡು ತಲ್ಲಣಗೊಂಡಿದ್ದ ಕಲಾಕಿರಣ್‍ಗೆ ತಾತ್ಕಾಲಿಕ ಉತ್ತರ ದೊರೆತಂತಾಗಿತ್ತು!
ಪ್ರಭಾತ್ ರಂಜನ್, ಪ್ರಿಯಲ್‍ಳ ಗಂಡ! ನಿವೇದನ್ ಬಗ್ಗೆ ಹುಚ್ಚು ಹಿಡಿಸಿಕೊಂಡಿರೋ ಪ್ರಿಯಲ್, ಸಂಗೀತದ ಗೀಳು ತುಂಬಿಕೊಂಡಿರುವವನಿಗೆ ತನ್ನ ಗಂಡನಿಗೆ ದಂಬಾಲು ಬಿದ್ದು ಅವಕಾಶ ನೀಡಿದ್ದಾಳೆ! ಆದರೆ ಪ್ರಿಯಲ್‍ಳ ಉದ್ದೇಶ ಅರಿತ ಪಬ್ಬ್‍ನ ಮಾಲೀಕ, ನಿವೇದನ್‍ನನ್ನು ತನ್ನ ಪಬ್ಬ್‍ನಲ್ಲಿ ಹಾಡಲು ಬರುವಂತೆ ಹೇಳಿ ಕೊಲೆ ಮಾಡಿರಬಹುದು!!
ಅಲೋಚನೆಯ ಗುಂಗಿನಲ್ಲಿದ್ದವನು ಬಾಧುರಿಯ ಮನೆಯ ಗೇಟನ್ನು ತೆರೆಯಲಿದ್ದಾಗ, ಯಾಂತ್ರಿಕವಾಗಿ ಅವನ ದೃಷ್ಟಿ ಪಕ್ಕದ ಮನೆಯ ಕಡೆಗೆ ಹೊರಳಿತು. ಜೋಡಿ ಕಣ್ಣುಗಳು ಅವನನ್ನೇ ನೋಡುತ್ತಿದ್ದವು!
ತಟ್ಟನೆ ಆ ಕಣ್ಣುಗಳು ಕಿಟಕಿಗೆ ಹಾಕಿದ ಪರದೆಯ ಹಿಂದೆ ಸರಿದವು!
ಬಾಧುರಿ!
ಬಾಧುರಿಗೆ ಪಕ್ಕದ ಮನೆಯಲ್ಲೇನು ಕೆಲಸ? ಮೊನ್ನೆ ಮೊನ್ನೆಯಷ್ಟೆ ನಿವೇದನ್ ಕಟ್ಟಿಸಿರೋ ಮನೆ. ಅದರ ಒಡತಿಗೆ ಇಷ್ಟು ಬೇಗನೆ ಪಕ್ಕದ ಮನೆಯವರ ಸ್ನೇಹ!? ತನ್ನನ್ನೇ ತಾನು ನಂಬದವನಂತೆ ಒಂದು ಕ್ಷಣ ನಿಂತು ಬಿಟ್ಟ. ಕೂಡಲೇ ಎಚ್ಚೆತ್ತವನ ಕಾಲುಗಳು ಪಕ್ಕದ ಮನೆಯತ್ತ ಹೊರಳಿದವು.
ಕರೆಗಂಟೆ ಅದುಮುತ್ತಲೆ ಬಾಗಿಲು ತೆರೆದುಕೊಂಡಿತು. ಬಾಗಿಲು ತೆರೆದ ಸುಂದರ ಯುವತಿಯ ಮುಖಕ್ಕೆ ರಕ್ತ ನುಗ್ಗಿದಂತೆ ಕೆಂಪಾಯಿತು. ಕಲಾಕಿರಣ್ ಅವಳನ್ನೇ ನೋಡುತಲಿದ್ದ.
ಅದೇ ಕಣ್ಣುಗಳು! ಕಿಟಕಿಯ ಪರದೆಯ ಹಿಂದೆ ಸರಿದ ಜೋಡಿ ಕಣ್ಣುಗಳು!
ಅದರೂ ಸಂಶಯದಿಂದ ಕೇಳಿದ "ಬಾಧುರಿ?"
ಚೇತರಿಸಿಕೊಂಡ ಸುಂದರ ಯುವತಿ ತಲೆ ಅಡ್ಡಲಾಗಿ ಆಡಿಸಿ ಇಲ್ಲವೆಂದಳು. ತಪ್ಪಿತಸ್ಥನಂತೆ ಮುಖ ಹೊರಳಿಸಿ ಧೈರ್ಯ ತಂದುಕೊಂಡ.
"ನಾನು ಒಳ ಬರಬಹುದೆ?"
"ಬನ್ನಿ," ಸರಿದು ನಿಂತಳು ಸುಂದರ ಯುವತಿ.
"ನಾನು ಪಕ್ಕದ ಮನೆಯವರ ಬಗ್ಗೆ ತಿಳ್ಕೊಳ್ಳೊದಿಕ್ಕೆ ಬಂದಿದ್ದೀನಿ" ಅವನ ಮಾತುಗಳಿಗೆ ಸ್ಪಂದಿಸಿದವಳ ಹಣೆಯಲ್ಲಿ ಬೆವರಿನ ಮುತ್ತುಗಳು ಮೂಡಿದವು.
"ಇಲ್ಲ, ಅವರ ಬಗ್ಗೆ ನಂಗೇನೂ ಗೊತ್ತಿಲ್ಲ" ತೀರ ಬೆದರಿದವಳಂತೆ ಹೇಳಿದಳು. ಮೈ ಸಣ್ಣಗೆ ನಡುಗುತ್ತಿತ್ತು. ಆಸರೆಗಾಗಿ ಸೋಫಾದ ಅಂಚನ್ನು ಗಟ್ಟಿಯಾಗಿ ಹಿಡಿದವಳು ದೊಪ್ಪನೆ ಕುಸಿದು ಕುಳಿತಳು.
"ದಯವಿಟ್ಟು ಹೊರಟು ಹೋಗಿ. ನಂಗೆ ಅವರ ಬಗ್ಗೆ ಏನೂ ಗೊತ್ತಿಲ್ಲ"
ಯುವಕ ಎದ್ದು ನಿಂತು ಕೈ ಜೋಡಿಸಿ `ಕ್ಷಮಿಸಿ' ಅಂದ. ಬಾಗಿಲವರೆಗೆ ಹೊರಳಿದವನು ನಿಂತ. ಅದೇ ಬೆದರಿಕೆಯ ನೋಟ!
"ನೀವು ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ಹೆಸರು ಹೇಳಿದ್ರೆ ಉಪಕಾರವಾಗ್ತಿತ್ತು"
"ಪ್ರಜಕ್ತಾ" ಮೆಲ್ಲನೆ ಉಸುರಿದಳು.
ಅಲ್ಲಿಂದ ಹೊರ ಬಂದವನು ಬೇರೆಲ್ಲೂ ಹೋಗಲು ಮನಸ್ಸಿಲ್ಲದೆ ನೇರವಾಗಿ ತನ್ನ ರೂಂ ಸೇರಿಕೊಂಡ ಕಲಾಕಿರಣ್.
ಮೂರು ದಾರಿಗಳಲ್ಲಿ ಹೊರಟವನಿಗೆ ಮೂರನೆ ದಾರಿ ತೆರೆದುಕೊಂಡಂತೆ ಕಂಡಿತು.!
ಆದರೆ ಎರಡನೆ ದಾರಿ ಸ್ಪಷ್ಟ ಚಿತ್ರಣ ನೀಡಿದೆ. ನಿವೇದನ್‍ನ ಕೊಲೆಯ ಹಿಂದೆ ಪ್ರಭಾತ್ ರಂಜನ್‍ನ ಕೈವಾಡವಿದೆ! ಇಲ್ಲಿ ಮೋಸವಾಗಿರೋದು ಬಾಧುರಿಯಂತಹ ಮುಗ್ಧ ಹುಡುಗಿಗೆ!
ಮೂರು ದಾರಿಗಳ ದೂರ ತಿಳಿದುಕೊಂಡವನು ಒಂದು ನಿರ್ಧಾರಕ್ಕೆ ಬಂದ.

***

ಒಂದು ವಾರದಲ್ಲಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದ. ಒಮ್ಮೆ ಸರಿ ರಾತ್ರಿಗೆ ತಟ್ಟನೆ ಎಚ್ಚರಗೊಂಡವನು ಎದ್ದು ಕುಳಿತ.
ಹೊರಗಿನಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಮುಖ ತೊಳೆದು ಆತುರಾತುರವಾಗಿ ಮಳೆಯ ನಿಲುವಂಗಿ, ಟೋಪಿ ಧರಿಸಿ ಕತ್ತಲೆಯಲ್ಲಿ ಹೆಜ್ಜೆಯಿಡುತ್ತಾ ಮನೆಯ ಬಳಿ ಬಂದು ಕರೆಗಂಟೆಯೊತ್ತಿದ.
ತಟ್ಟನೆ ಎಚ್ಚರಗೊಂಡವಳು ಗಡಿಯಾರ ನಿರುಕಿಸಿದಳು. ಎರಡು ಗಂಟೆ! ಉಸಿರು ಬಿಗಿ ಹಿಡಿದು ನಿಧಾನಕ್ಕೆ ಹೊರ ಬಂದಾಗ ಮತ್ತೊಮ್ಮೆ ಕರೆಗಂಟೆಯ ಸದ್ದಾಯಿತು. ಮೆಲ್ಲನೆ ಕಿಟಕಿಯ ಪರದೆಯನ್ನು ಸರಿಸಿ ನೋಡಿದಳು.
ಕಲಾಕಿರಣ್!
ಈ ಅಪರಾತ್ರಿಯಲ್ಲಿ ಇಲ್ಲಿಗೇಕೆ ಬಂದ? ಮತ್ತೊಮ್ಮೆ ಬಾಗಿಲು ಬಡಿದ. ದೀಪ ಬೆಳಗಿಸಿ ಬಾಗಿಲು ತೆರೆದಳು. ಹೊರಗಿನ ತಂಪು ಗಾಳಿ ಮುಖಕ್ಕೆ ನುಗ್ಗುತ್ತಲೇ ಎರಡೆರಡು ಬಾರಿ ಸೀನು ಹಾಕಿದಳು. ಆತ ದಢಾರನೆ ಬಾಗಿಲು ಮುಚ್ಚಿದ.
"ಪ್ರಜಕ್ತಾ, ನೀವು ವಿಷಯಾನ ನನ್ನಿಂದ ಮುಚ್ಚಿಟ್ಟಿದ್ದೇಕೆ?"
ಅವನ ಪ್ರಶ್ನೆಗೆ ಅವಳ ನಿದ್ದೆಯ ಮಂಪರು ಹಾರಿ ಹೋಯಿತು. ಕಣ್ಣುಗಳನ್ನು ಉಜ್ಜಿಕೊಂಡು ಚಕಿತಳಾಗಿ ಅವನನ್ನು ನೋಡುತ್ತಿದ್ದಳು.
"ಹಕ್ಕಿ ಹಾರಿ ಹೋಗೋ ಮೊದ್ಲು ಹಿಡಿಬೇಕೂಂತ ಬಂದೆ"
"ಇಲ್ಲ, ನನ್ನ ನೀವು ತಪ್ಪಾಗಿ ತಿಳ್ಕೊಂಡಿದ್ದೀರಿ" ತಟ್ಟನೆ ಅಳುಕಿನಿಂದ ಹೇಳಿ ಹಿಂದಕ್ಕೆ ಸರಿದಳು.
"ಸರಿಯಾಗಿ ಹೇಳಿದ್ರಿ. ಮೊದ್ಲು ತಪ್ಪಾಗಿ ತಿಳ್ಕೊಂಡಿದ್ದೆ. ಆದ್ರೆ ಈಗ ನಿಜ ಏನೂಂತ ತಿಳಿದಿದೆ. ಅದಕ್ಕೆ ನಿಮ್ಮನ್ನ ಕೇಳ್ತಿರೋದು ನಿಜಾನ ಯಾಕೆ ಮುಚ್ಚಿಟ್ರಿ?"
"ಹೇಳ್ತೀನಿ. ಆವತ್ತು ನಿವೇದನ್‍ನ ಯಾರೋ ಕೊಲೆ ಮಾಡೊದಿಕ್ಕೆ ಬಂದಿದ್ರು. ಮೈಯೆಲ್ಲಾ ರಕ್ತಸಿಕ್ತವಾಗಿತ್ತು. ಕಂಪೌಂಡ್ ಹಾರಿ ಹಿಂದಿನಿಂದ ಬಂದು ಬಾಗಿಲು ಬಡಿದ್ರು. ಅವರನ್ನು ಒಳ ಸೇರಿಸ್ದೆ. ಆಶ್ರಯ ಕೊಡುವಂತೆ ಕೇಳಿದ್ರು. ಅವರನ್ನು ನಾನು ಚೆನ್ನಾಗಿ ಬಲ್ಲೆನಾದ್ರಿಂದ, ಅವರಿಗೆ ಆಶ್ರಯ ನೀಡ್ದೆ. ಅವರು ನನಗೆ ಹೇಗೆ ಪರಿಚಿತರೂಂದ್ರೆ, ಇಲ್ಲಿ ಸ್ಥಳ ಖರೀದಿಸಿ ಮನೆ ಕಟ್ಟೋಕೆ ಶುರು ಮಾಡುವಾಗಲಿಂದ ನಾನು ಅವರನ್ನು ಹಚ್ಕೊಂಡು ಬಿಟ್ಟೆ. ಪ್ರತಿ ಬಾರಿ ಫೋನು ಮಾಡೊದಿಕ್ಕೆ ಮನೆಗೆ ಬರ್ತ್ತಿದ್ರು. ಅವರ ಆಕರ್ಷಕ ವ್ಯಕ್ತಿತ್ವಕ್ಕೆ ಮರುಳಾಗಿ ಪ್ರೀತಿಸೋದಿಕ್ಕೆ ಆರಂಭಿಸ್ದೆ.... ನನ್ನ ಪ್ರೀತಿ ಮೌನವಾಗಿತ್ತು. ಅದೇ ಸಮಯಕ್ಕೆ ಅವರಿಗೊಬ್ಳು ಪ್ರೇಯಸಿಯಿದ್ದಾಳೆಂತ ತಿಳಿಯಿತು. ಅವಳು ಯಾವಾಗಲೂ ಅವರ ಜೊತೆಗೆ ಬರ್ತಿದ್ಲು. ಇದರಿಂದ ನಾನು ನಿರಾಶೆ ಹೊಂದಿದೆ ನಿಜ. ಆದ್ರೆ ಅವರನ್ನು ಕೊಲೆ ಮಾಡೋಷ್ಟು ಕೆಟ್ಟ ಮನಸ್ಸಿನೋಳಲ್ಲ ನಾನು" ಗದ್ಗದಿತಳಾದಳು.
"ಸಮಾಧಾನ ಮಾಡ್ಕೊಳ್ಳಿ. ನಿವೇದನ್‍ನ ಕೊಲೆಯಾಗ್ಲಿಲ್ಲಾಂತ ಗೊತ್ತಾ?"
ತೀರಾ ಕಂಗೆಟ್ಟಿದ್ದವಳು ಆಶ್ಚರ್ಯದಿಂದ ಇಲ್ಲವೆನ್ನುವಂತೆ ಗೋಣು ಆಡಿಸಿದಳು.
"ಆವರಿಗೆ ಆಶ್ರಯ ಕೊಟ್ಟಿದ್ರೂ, ಆತ ಆ ದಿನ ನನ್ನ ಹೇಳದೆ ಕೇಳದೆ ಇಲ್ಲಿಂದ ಹೊರಟು ಹೋದ್ರು"
"ಅವನನ್ನು ಕೊಲೆ ಮಾಡಲು ಪ್ರಯತ್ನ ನಡೆದಿತ್ತು. ಅದೂ ಒಂದು ಹೆಣ್ಣಿನಿಂದ ಅದು ನಿಮಗೆ ಗೊತ್ತಿರ್ಬೇಕಲ್ಲ?"
ತುಸು ಮೌನದ ನಂತರ ಹೌದೆನ್ನುವಂತೆ ತಲೆಯಾಡಿಸಿದಳು.
"ಅವಳು ಯಾರೂಂತ ಗೊತ್ತಾ?"
"ಇಲ್ಲ. ಅವರನ್ನು ಕೊಲ್ಲೋದಿಕ್ಕೆ ಪ್ರಯತ್ನ ಪಟ್ಟಿದ್ದು ಒಬ್ಳು ಹೆಣ್ಣೂಂತ ಮಾತ್ರ ನನ್ನ ಬಳಿ ಹೇಳ್ಕೊಂಡಿದ್ರು. ಆದ್ರೆ ಅವಳ ಹೆಸರು ಹೇಳ್ಲಿಲ್ಲ"
"ಆತನನ್ನು ಪ್ರೀತಿಸ್ದೋಳು... ಅಲ್ಲಲ್ಲ ಆತನಿಂದ ಏನನ್ನೋ ಪಡೆಯೋ ಹುಚ್ಚುತನ ಮಾಡ್ದೋಳು"
"ಅಂದ್ರೆ?"
"ಅಂದ್ರೆ... ಅವನ ಜೊತೆ ಸುತ್ತಾಡ್ತಿದ್ಲಲ್ಲ, ಆ ಹುಡುಗಿ.... ಬಾಧುರಿಂತ. ಅವಳಿಗೆ ನಿವೇದನ್‍ನ ಆಸ್ತಿ ಮೇಲೆ ಕಣ್ಣು. ಅವನಿಗೆ ಮೋಸ ಮಾಡಿ ಎಲ್ಲಾ ಆಸ್ತಿಗೂ ತಾನೆ ಬಾಧ್ಯಸ್ಥೆಂತ ಮಾಡ್ಕೊಂಡಿದ್ಲು. ಆ ಆಧಾರದ ಮೇಲೆ ನಾನು ಅವಳನ್ನು ಹಿಡಿದ್ಬಿಟ್ಟೆ"
ಪ್ರಜಕ್ತಾ ಮೂಗಿನ ಮೇಲೆ ಬೆರಳಿತ್ತಳು.
"ನಿವೇದನ್‍ಗೆ ಇನ್ನು ಅಪಾಯ ಇಲ್ಲಾಂತ ಬಾವಿಸ್ತೀನಿ"
"ಖಂಡಿತವಾಗಿಯೂ, ಆತ ಕ್ಷೇಮವಾಗಿದ್ದಾನೆ. ಬಾಧುರಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ನಾನು ಅವನ ಪರವಾಗಿ ಪೊಲೀಸರಿಗೆ ತಿಳಿಸೋದಿಕ್ಕೆ ಹೋದಾಗ ಅಲ್ಲಿ ಆತ ಎಲ್ಲಾ ಕಥೆಯನ್ನು ಪೊಲೀಸರಿಗೆ ತಿಳಿಸ್ತಿದ್ದ. ನಾನು ಅವನ ಪರವಾಗಿ ಪತ್ತೆ ಕಾರ್ಯ ನಡೆಸಿದ್ದಕ್ಕೆ ನನ್ನನ್ನು ಪೊಲೀಸರ ಮುಂದೆ ಪ್ರಶಂಸಿದ. ನೀವು ಆತನಿಗೆ ನೀಡ್ದ ಆಶ್ರಯಕ್ಕಾಗಿ ನಿಮ್ಮ ಉಪಕಾರನ ಮೆಚ್ಕೊಂಡ ಮಾತ್ರವಲ್ಲ ನಿಮ್ಮನ್ನೂ..."
ಅವಳ ನೋಟ ಪ್ರಶ್ನಾರ್ಥಕವಾಗಿತ್ತು.
"ಅಂದ್ರೆ.... ಇನ್ನು ಮುಂದೆ ಆತನ ಜೀವನಕ್ಕೆ ನೀವು ಬಾಧ್ಯಸ್ಥರಂತೆ"
ಪ್ರಜಕ್ತಾಳ ಕಣ್ಣುಗಳಲ್ಲಿ ಹೊಳಪು ತುಂಬಿತು.

Read more!

Tuesday, July 28, 2009

ಸಂಗಾತಿ (ಪತ್ತೇದಾರಿ ಕಥೆ)


ಸರೀ ರಾತ್ರಿಯ ಹೊತ್ತು ಓದುವ ದೀಪದ ಮುಂದೆ ಕೆಲಸದಲ್ಲಿ ತಲ್ಲೀನನಾಗಿದ್ದ ಶಿವಚಂದ್ರನಿಗೆ ವಿದ್ಯುತ್ ಕೈ ಕೊಡುತ್ತದೆಯೆನ್ನುವ ಅರಿವಿರಲಿಲ್ಲ. ತಟ್ಟನೆ ದೀಪ ಆರಿ ಹೋಗಿ ಕತ್ತಲು ಕವಿಯುತ್ತಲೇ ಕಿಟಕಿಯ ಹೊರಗೆ ದೃಷ್ಟಿ ಹೊರಳಿಸಿದ. ಸ್ವಲ್ಪ ಹೊತ್ತು ಮುಂಚೆ ಆಕಾಶದಲ್ಲಿ ಚಂದ್ರನ ಶುಭ್ರ ಬೆಳಕು ಹಾಲಿನಂತೆ ಚೆಲ್ಲಿದ್ದನ್ನು ಕಂಡಿದ್ದ. ಆದರೆ ಈಗ ಎಲ್ಲಿಂದಲೋ ಹಾರಿ ಬಂದ ಮೋಡಗಳು ಚಂದ್ರನನ್ನು ನುಂಗಿದ್ದೇ ಕತ್ತಲ ಕರಾಳ ಛಾಯೆ ಭಯದ ವಾತಾವರಣವನ್ನು ಸೃಷ್ಟಿಸಿತು. ನೋಡುತ್ತಿದ್ದಂತೆ ಸಣ್ಣ ಚುಕ್ಕಿಯೊಂದು ವಾಹನದ ಹೆಡ್ ಲೈಟಿನ ಬೆಳಕಿನಂತೆ ಅಗಲವಾಗುತ್ತಾ ಕಿಟಕಿಯತ್ತ ಹೊರಳುವುದು ಕಂಡಿತು. ಅದು ಬೆಳಕಲ್ಲ! ಗಾಳಿಗೆ ಸೀರೆಯ ಸೆರಗನ್ನು ಹಾರಲು ಬಿಟ್ಟು ತನ್ನತ್ತಲೇ ಬರುತ್ತಿರುವ ಒಂದು ಹೆಣ್ಣಿನ ಆಕೃತಿ!

ಶಿವಚಂದ್ರ ಮಿಂಚಿನ ವೇಗದಲ್ಲಿ ಕಿಟಿಕಿಯತ್ತ ಸರಿದು ಬಾಗಿಲು ಎಳೆಯುವಾಗ ಕೈಗಳನ್ನು ಗಟ್ಟಿಯಾಗಿ ಹಿಡಿಯಿತು ಹೆಣ್ಣು! ಕೈ ಹಿಂದಕ್ಕೆ ಎಳೆದುಕೊಂಡ ಶಿವಚಂದ್ರ ನೋವಿನಿಂದ ಮುಲುಗಿದ. ಕಿಟಕಿಯ ಸರಳು ಕೈಯ ಮೇಲೆ ಗೀರು ಗಾಯ ಮೂಡಿಸಿತು.
`ಸಂಗಾತಿ' ಬಂದಷ್ಟೇ ವೇಗವಾಗಿ ಮಾಯವಾದ ಹೆಣ್ಣಿನ ತುಟಿಗಳಲ್ಲಿ ಉದುರಿದ ಇಂಪಾದ ಪದ ಅದು.ಇದು ತನ್ನ ಭ್ರಮೆ? ಆಘಾತ ತಟ್ಟಿದಂತೆ ಕುಳಿತಿದ್ದ ಯುವಕನ ತಲೆಯಲ್ಲಿ ಎರಡು ದಿವಸಗಳ ಹಿಂದೆ ಭೇಟಿಯಾದ ಹೆಂಗಸಿನ ನೆನಪು ಸುಳಿಯಿತು.
***
ಕೆದರಿದ ಕೂದಲು, ಮಾಸಲು ಸೀರೆ, ಹಣೆಯಲ್ಲಿ ರೂಪಾಯಿಯ ಪಾವಲಿಯಷ್ಟು ದೊಡ್ಡದಾದ ಕುಂಕುಮ ಬೆವರಿನಲ್ಲಿ ತೋಯ್ದು ಮುಖದ ಮೇಲೆ ವಿಚಿತ್ರವಾಗಿ ಕಾಣುತ್ತಿತ್ತು. ಆ ಮುಖದಲ್ಲಿಯೂ ಒಂದು ಭೀತಿಯ ಎಳೆಯನ್ನು ಗುರುತಿಸಿದ ಶಿವಚಂದ್ರ. ಹೆಂಗಸನ್ನು ಮೊದಲು ಸಮಾಧಾನಿಸುವುದು ಅಗತ್ಯವೆನಿಸಿತು.
"ಸುಧಾರಿಸಿಕೊಳ್ಳಿ"
ಹೆಂಗಸಿನ ತೆರೆದ ತುಟಿಗಳು ಮುಚ್ಚಿಕೊಂಡು ಉಗುಳು ಗಂಟಲಿನಿಂದ ಇಳಿಯಿತು. ಅವಕಾಶವಿಲ್ಲದಂತೆ ಕೈಯಲ್ಲಿದ್ದ ಚರ್ಮದ ಚೀಲಕ್ಕೆ ಕೈ ತೂರಿಸಿ ಒಂದು ಬಣ್ಣದ ಲಕೋಟೆಯನ್ನು ಎಳೆಯಿತು. ಶಿವಚಂದ್ರನ ನೋಟ ಹೆಂಗಸನ್ನು ಗಮನಿಸುತ್ತಲೇ ಇತ್ತು. ಲಕೋಟೆಯ ಮೇಲೆ ಬರೆದ ಶಾಯಿ ಪೆನ್ನಿನ ಮಾಸಲು ಅಕ್ಷರ ಸ್ಪಷ್ಟವಾಗಿ ಗೋಚರಿಸಿತು. `ಕಾವೇರಮ್ಮ, ಕೊಂಡಪಲ್ಲಿ'.
ಹೆಂಗಸಿನ ಹೆಸರು ಕಾವೇರಮ್ಮ. ಕೊಂಡಪಲ್ಲಿಯಿಂದ ಇಷ್ಟು ದೂರಕ್ಕೆ ತನ್ನನ್ನು ಕಾಣಲು ಬಂದಿರುವುದು! ಕಣ್ಣು ಸೂಕ್ಷ್ಮವಾಗಿ ಎದುರಿಗೆ ಕುಳಿತಿದ್ದವಳನ್ನು ಅಳೆಯಿತು. ಇಪ್ಪತ್ತು ವರ್ಷಗಳ ಹಿಂದೆ ಜಾತ್ರೆಯಲ್ಲಿ ಅಮ್ಮನ ಕೈಯಿಂದ ತಪ್ಪಿ ಹೋದ ಅಕ್ಕ, ವರದಾ ಇವಳೇನಾ? ಮನಸ್ಸು ಹದ್ದು ಮೀರಿ ಕುಣಿಯಿತು.
ಹೆಂಗಸು ಲಕೋಟೆಯನ್ನು ಬಿಚ್ಚಿ, ಎರಡು ಬಣ್ಣದ ಫೋಟೋಗಳನ್ನು ಮೇಜಿನ ಮೇಲೆ ಇರಿಸಿತು. ಒಂದು ಮೂವತ್ತರ ಅಂಚಿನ ಸುಂದರ ತರುಣ! ಸಿನಿಮಾದ ನಾಯಕನಿಗಿಂತ ಕಡಿಮೆಯಿಲ್ಲ. ಇದು ಅವಳ ಪ್ರಿಯತಮ! ಇನ್ನೊಂದು ಮೂರು ವರ್ಷದ ಹೆಣ್ಣು ಮಗುವಿನ ಭಾವಚಿತ್ರ! ಬಕೆಟ್‍ನಲ್ಲಿದ್ದ ನೀರಿಗೆ ಕೈ ಹಾಕಿ ಸಂಭ್ರಮಿಸುತ್ತಿರುವುದು ಈಕೆಯ ಮಗು!
ತನಗಿಂತಲೂ ವಯಸ್ಸಿನಲ್ಲಿ ಕಿರಿಯವನಾದ ಪ್ರಿಯತಮ ಮಗುವಿನ ಜೊತೆಗೆ ಕಾಣೆಯಾಗಿದ್ದಾನೆ! ಅವನನ್ನು ಹುಡುಕಿಸಿಕೊಡಲು ಇಲ್ಲಿಯವರೆಗೂ ಬಂದಿದೆ ಹೆಂಗಸು. ಇಲ್ಲ, ಇದು ತನ್ನ ವೃತ್ತಿಯಲ್ಲ. ಕುಂಚಗಳ ಜೊತೆಗೆ ಆಟವಾಡುವ ತನಗೆ ಈ ಪತ್ತೇದಾರಿಕೆ ಕೆಲಸ ಅನಗತ್ಯ.
ಕಾವೇರಮ್ಮನ ಕಣ್ಣುಗಳು ಹನಿಗೂಡಿದವು. ಮಾತು ಮೆಲ್ಲನೆ ಹೊರಳಿತು."ನಿನ್ನಿಂದ ಉಪಕಾರವಾಗ್ಬೇಕು" ಮಾತು ನಿಂತಿತು. ವರದಾ ತನ್ನನ್ನು ಗುರುತಿಸಿದ್ದಾಳೆ. ಅವಳ ಸಹಾಯಕ್ಕೆ ತಾನು ನಿಲ್ಲಬೇಕು."ನೀನು ವರದಾ...?"ಪ್ರಶ್ನೆ ಹೆಂಗಸಿನ ಮುಖದಲ್ಲಿ ಗೊಂದಲ ಮೂಡಿಸಿತು."ಅಲ್ಲ, ನಾನು ಕಾವೇರಮ್ಮಾ ಅಂತ. ಇಲ್ಲೇ ಪಕ್ಕದ ಬಡಾವಣೆಗೆ ಬಂದು ಒಂದು ವಾರವಾಯ್ತು. ಯಾರೋ ನಿಮ್ಮ ಪರಿಚಯ ಹೇಳಿದ್ರು. ಅದಕ್ಕೆ ಬಂದೆ"ಕಲಾವಿದನ ಮುಖದಲ್ಲಿ ನಿರಾಶೆ ಸುಳಿಯಿತು."ಏನಾಗ್ಬೇಕು ಹೇಳಿ?"
ಹೆಂಗಸು ಎರಡು ಫೋಟೋಗಳ ಕಥೆಯನ್ನು ಬಿಚ್ಚಿಟ್ಟಿತು. ಹೆಂಗಸಿಗೆ ಹುಚ್ಚು ಅಂದುಕೊಂಡ ಶಿವಚಂದ್ರ. ಆದರೂ ಅವನಿಗೆ ಸಂಶಯವೆ. ಕಾವೇರಮ್ಮ ಕಳೆದು ಹೋದ ತನ್ನ ಅಕ್ಕ ವರದಾನೆ. ಸತ್ಯಾನ್ವೇಷಣೆಗೆ ತೊಡಗಬೇಕಿತ್ತು. ಅದಕ್ಕಾಗಿ ರಾತ್ರಿಯಿಡೀ ಕುಳಿತು ಕೆಲಸ ಪೂರೈಸಿ ಕಾವೇರಮ್ಮನ ಮನೆಗೆ ಹೋಗಬೇಕು. ಸತ್ಯವನ್ನು ಕಂಡು ಹಿಡಿಯಬೇಕು. ಕೊಂಡಪಲ್ಲಿಯಿಂದ ಇಲ್ಲಿಗೆ ಬಂದು ತನ್ನನ್ನೇ ಹುಡುಕಿಕೊಂಡು ಬರುವ ಪ್ರಮೇಯವೇನು? ಮನಸ್ಸು ಹೊಯ್ದಾಡಿತು."ಸರಿ, ನಿಮ್ಮ ಕೆಲಸ ಸಾಧ್ಯವಾದಷ್ಟು ಬೇಗನೆ ಮುಗಿಸುತ್ತೇನೆ" ಭರವಸೆಯನ್ನಿತ್ತ ಕಲಾವಿದ. ಹೆಂಗಸು ಎದ್ದು ಕೈ ಮುಗಿದು ಹೊರಗೆ ನಡೆಯಿತು.
***
ಶಿವಚಂದ್ರನಿಗೆ ಕೆಲಸ ಮುಂದುವರೆಯದೆ ತಡೆಯಾಗಿತ್ತು. ತಾನು ಕಲ್ಪಿಸಿದ ಹೆಣ್ಣಿನ ಮುಖ ಕಾಗದದ ಮೇಲೆ ಸುಂದರವಾಗಿ ಮೂಡಿ ಬಂದಿತ್ತಾದರೂ ಭ್ರಮೆಯೊಳಗೆ ದೂಡುವ ಒಂದು ಹೆಣ್ಣಿನ ರೂಪ ಕತ್ತಲಲ್ಲಿ ಗೋಚರಿಸಿ ತಳಮಳಗೊಳಿಸುತ್ತಿತ್ತು. ತಾನು ರಚಿಸಿದ ಹುಡುಗಿಯೇ ಅವಳು? ಕಾವೇರಮ್ಮನನ್ನು ಕಾಣದೆ ಸಾಧ್ಯವಿಲ್ಲವೆಂದುಕೊಂಡ ಬಳಿಕ ಅವಳಿರುವ ಬಡಾವಣೆಗೆ ಹೋಗಿ ಬರುವುದೆಂದು ನಿರ್ಧರಿಸಿದ.
ಅಟೋರಿಕ್ಷಾ ಇಳಿದು ರಾಜರಾಜೇಶ್ವರಿ ಬಡಾವಣೆಯ ಅಪಾರ್ಟ್ ಮೆಂಟಿಗೆ ಬರುವಾಗ ಅರ್ಧ ಗಂಟೆ ಮೀರಿತ್ತು. ವಾರದ ಕೆಳಗೆ ಹೊಸದಾಗಿ ಬಂದಿರುವ ಕಾವೇರಮ್ಮನ ಪರಿಚಯ ಯಾರಿಗಿದೆ? ಯಾರನ್ನು ಕೇಳಬೇಕೆನ್ನುವ ಗೊಂದಲವಿತ್ತು. ಅಲ್ಲೇ ಹತ್ತಿರದಲ್ಲಿದ್ದ ಗಂಡಸನ್ನು ಕೇಳಿದ.
"ಇಲ್ಲಿಗೆ ಹೊಸದಾಗಿ ಬಂದಿರೋ ಕಾವೇರಮ್ಮನ ಮನೆ ಎಲ್ಲಿ?"ಎದುರಿಗೆ ನಿಂತಿದ್ದ ವ್ಯಕ್ತಿ ಮಿಂಚು ಹೊಡೆದಂತೆ ಕ್ಷಣ ಕಾಲ ತಟಸ್ಥನಾದ. ತಕ್ಷಣ ಮಾತು ಹೊರಳದೆ ತಳಮಳಿಸಿದ. ಶಿವಚಂದ್ರನಿಗೆ ವಿಚಿತ್ರವೆನಿಸಿತು. ಐವತ್ತರ ಹರೆಯದ ವ್ಯಕ್ತಿ ತೊದಲಿದ."ಕಾವೇರಮ್ಮ ನಿಮಗೆ ಹೇಗೆ ಗೊತ್ತು?"
ಸಂಬಂಧ ಪಡದ ವ್ಯಕ್ತಿ ಜೊತೆಗೆ ಎಲ್ಲವನ್ನೂ ಹೇಳಿಕೊಳ್ಳುವುದು ಸರಿಯಲ್ಲವೆನಿಸಿತು. ಆದರೆ ಎದುರಿಗೆ ನಿಂತಿರುವ ವ್ಯಕ್ತಿಗೆ ಏನಾದರೂ ಹೇಳಲೇ ಬೇಕಿತ್ತು. ಹೇಳಿದ.
"ಎರಡು ದಿವಸಗಳ ಹಿಂದೆ ಅವರು ಫೋಟೊಗಳನ್ನು ಬರೆಸಿಕೊಳ್ಳುವುದಕ್ಕೆ ನನ್ನಲ್ಲಿಗೆ ಬಂದಿದ್ರು""ನೀವು?" ಎದುರಿನ ವ್ಯಕ್ತಿ ಪ್ರಶ್ನೆ ಹಾಕಿ ತಬ್ಬಿಬ್ಬುಗೊಳಿಸಿದ ಅವನನ್ನು. ಕಲಾವಿದನಿಗೆ ಎಲ್ಲವನ್ನೂ ಹೇಳದೆ ವಿಧಿಯಿರಲಿಲ್ಲ.
"ನಾನೊಬ್ಬ ಆರ್ಟಿಸ್ಟ್. ಶಿವಚಂದ್ರಾಂತ ನನ್ನ ಹೆಸರು. ಎರಡು ದಿನಗಳ ಹಿಂದೆ ಕಾವೇರಮ್ಮ ಎರಡು ಫೋಟೊಗಳನ್ನು ತಂದು ಅದನ್ನು ಬರೆದುಕೊಡುವಂತೆ ಹೇಳಿದ್ರು. ಆದರೆ..." ಅವನ ಮಾತು ಮುಂದುವರಿಯುವ ಮೊದಲೇ ಎದುರಿಗೆ ನಿಂತಿದ್ದ ವ್ಯಕ್ತಿ ಬಿಕ್ಕಳಿಸಿ ನುಡಿದ.
"ಆದ್ರೆ... ಬೆಳಗಿನಿಂದ ಕಾವೇರಮ್ಮಾನೇ ಕಾಣಿಸ್ತಿಲ್ಲ. ಆ ಫೋಟೋಗಳ ಬಗ್ಗೆ ವಿಪರೀತ ತಲೆಕೆಡಿಸಿಕೊಂಡಿದ್ಲು. ಸತ್ತವರು ಮತ್ತೆ ಬರ್‍ತಾರ್‍ಆ ಶಿವಚಂದ್ರ?"ಹೆಗಲಿಗೆ ಸೇರಿಸಿದ ವಸ್ತ್ರದಿಂದ ಮೂಗಿನ ತುದಿಯನ್ನು ಒರೆಸಿಕೊಂಡ ವ್ಯಕ್ತಿ ಕಣ್ಣನ್ನೂ ಒತ್ತಿಕೊಂಡಿತು.
"ಅಂದ್ರೆ... ಅಂದ್ರೆ... ನೀವು... ಅವರಿಗೇನಾಗಬೇಕು?"
"ನಾನು ಅವಳ ಗಂಡ. ಪೊನ್ನಪ್ಪಾಂತ ನನ್ನ ಹೆಸರು. ಪೊಲೀಸರಿಗೆ ದೂರು ಕೊಡೋಣಾಂತ ಹೊರಟೆ. ಆದ್ರೆ ನೀವು ಬಂದ್ರಿ. ಕಾವೇರಿ ನಿಮ್ಮಲ್ಲಿ ಮತ್ತೇನಾದರೂ ವಿಷಯ ತಿಳಿಸಿದ್ಲೆ?" ಆಶಾ ಭಾವನೆಯೊಂದು ನೊಂದವನ ಮುಖದಿಂದ ಹೊರ ಹೊಮ್ಮಿತು. ಶಿವಚಂದ್ರ ಸ್ವಲ್ಪ ಹೊತ್ತು ಸುಮ್ಮನಿದ್ದು ರಾತ್ರಿಯ ಘಟನೆಯನ್ನು ನೆನಪಿಸಿಕೊಂಡು ಬಲಗೈಯ ಗೀರು ಗಾಯದತ್ತ ನೋಡಿದ. ಗಾಯವಿನ್ನೂ ಹಸಿಯಾಗಿಯೇ ಇತ್ತು.
"ಸತ್ತವರು ಮತ್ತೆ ಹುಟ್ಟಿ ಬರೋದು ಗೊತ್ತಿಲ್ಲ ಪೊನ್ನಪ್ಪ. ಆದ್ರೆ ಆಗಾಗ ಕಾಣಿಸಿಕೊಳ್ತಾರೇಂತ ಕೇಳಿದ್ದೀನಿ. ನಿನ್ನೆ ರಾತ್ರಿನೂ ಹಾಗೆ ಆಯ್ತು" ಮಾತು ನಿಲ್ಲಿಸಿದ.
ಪೊನ್ನಪ್ಪನ ಮುಖದಲ್ಲಿ ಬೆವರೊಡೆಯಿತು. ಮತ್ತೆ ಹೆಗಲಿನ ವಸ್ತ್ರವನ್ನು ಮುಖದ ಮೇಲಾಡಿಸಿ ಶಿವಚಂದ್ರನನ್ನು ಕರೆದುಕೊಂಡು ತನ್ನ ಮನೆಗೆ ಬಂದ.
"ಕಾಣೆಯಾಗೊ ಮುಂಚಿನ ರಾತ್ರಿ ಅವಳೂ ಇದೇ ಮಾತು ಹೇಳಿದ್ಲು. ಶಿವಚಂದ್ರ, ದಯವಿಟ್ಟು ನಿನ್ನೆ ರಾತ್ರಿ ನೀವೇನು ನೋಡಿದ್ರಿ ಹೇಳಿ?" ಅವನ ಕೈಯನ್ನು ಹಿಡಿದುಕೊಂಡು ಒತ್ತಾಯಿಸಿದ ಪೊನ್ನಪ್ಪ. ಶಿವಚಂದ್ರ ಕೈ ಬಿಡಿಸಿಕೊಂಡು ಕೈಯಲ್ಲಾದ ಗೀರು ಗಾಯವನ್ನು ತೋರಿಸಿ ರಾತ್ರಿ ಕಂಡ ಹುಡುಗಿಯನ್ನು ವಿವರಿಸಿದ."ಅಂದ್ರೆ, ನೀವು ರಚಿಸಿರೋ ಹುಡುಗಿನೇ ಜೀವಂತವಾಗಿ ಬಂದಿದ್ಲಾ, ಶಿವಚಂದ್ರ?"ಕಲಾವಿದ ತಲೆಯನ್ನು ಅಡ್ಡಡ್ಡಲಾಗಿ ಆಡಿಸಿದ. ನಿಧಾನವಾಗಿ ಪದಗಳನ್ನು ಹೊರಳಿಸಿದ.
"ಜೀವಂತವಾಗಿ ನೋಡಿದ್ದಲ್ಲ. ಕಂಡ ಬೆಳಕಿನಲ್ಲಿ ಗೋಚರಿಸಿದ ಹೆಣ್ಣು ನನ್ನ ಭ್ರಮೆ ಅಂದುಕೊಂಡೆ. ಆದರೆ ನೀವು ಹೇಳುತ್ತಿರುವುದು ನೋಡಿದ್ರೆ ನನಗೂನು ಸಂಶಯ. ಕಾವೇರಮ್ಮ ಹೇಳಿರೋ ಹಾಗೆ ಇದೆಂತ ಸಂಪ್ರದಾಯ?"ಹತಾಶೆಯ ಮುಖ ಹೊತ್ತಿದ್ದ ಪೊನ್ನಪ್ಪ ನಿಟ್ಟುಸಿರಿಟ್ಟು ತಲೆ ತಗ್ಗಿಸಿ ಕುಳಿತ. ಸಂಪ್ರದಾಯವೊಂದು ಈ ರೀತಿಯಾಗಿ ಶಿಕ್ಷಿಸುತ್ತದೆಯೆಂದು ತಿಳಿದಿರಲಿಲ್ಲ.
"ಶಿವಚಂದ್ರ, ನಾನು ಹಳ್ಳಿಯಿಂದ ಬಂದೋನು. ನಮ್ಮದು ಸಂಸ್ಕೃತಿ, ಸಂಪ್ರದಾಯಗಳ ನೆಲೆವೀಡೂಂತ ನಿಮಗೆ ತಿಳಿದಿದೆ. ನಮ್ಮಲ್ಲಿ ಇದು ಒಂದು ಸಂಪ್ರದಾಯ. ಅಪ್ರಾಪ್ತ ವಯಸ್ಸಿಗೆ ಸತ್ತವರು, ಬದುಕಿರುವ ಹತ್ತಿರದ ಬಂಧುಗಳಿಗೆ ಅದರಲ್ಲೂ ಮದುವೆಯಾಗದವರಿಗೆ ಉಪಟಳ ನೀಡುತ್ತಾರಂತೆ. ಅದಕ್ಕಾಗಿ ನಮ್ಮಲ್ಲೇ ಸತ್ತ ಹುಡುಗ ಮತ್ತು ಹುಡುಗಿಗೆ ನಾವು ಮದುವೆ ಮಾಡುವ ಸಂಪ್ರದಾಯವಿದೆ. ಕಾವೇರಿ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮೆಚ್ಚಿಕೊಂಡವಳು. ಅವಳಿಗೆ ಮೊದಲನೆಯ ಆಘಾತ ತಟ್ಟಿದ್ದು, ಅವಳ ತಂಗಿ ಪೂರ್ಣ ಸತ್ತಾಗ. ಆ ಸಾವು ಸಂಭವಿಸಿದ್ದು ಮೂರು ವರ್ಷದ ನಮ್ಮ ಸತ್ತ ಮಗುವಿನಿಂದ ಅನ್ನೋದು ಅವಳ ಬಲವಾದ ನಂಬಿಕೆ. ಅದಕ್ಕಾಗಿ ನಾವು ಇಪ್ಪತ್ತು ವರ್ಷಗಳ ಹಿಂದೆ ಸತ್ತ ನಮ್ಮ ಮಗು ಪ್ರಿಯಾಗೆ ನಮ್ಮ ಕಾವೇರಿಯ ಚಿಕ್ಕಪ್ಪನ ಮಗ ವಿಕ್ರಾಂತ ಅಂದ್ರೆ... ಎರಡು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಸತ್ತವನಿಗೆ ಮದುವೆ ಮಾಡುವುದಾಗಿ ನಿರ್ಧರಿಸಿದ್ದೇವೆ. ಅದನ್ನೇ ಅವಳು ಮನಸ್ಸಿಗೆ ಹಚ್ಚಿಕೊಂಡಿದ್ಲು. ಆ ಮೂರು ವರ್ಷದ ಹುಡುಗಿಯ ಭಾವಚಿತ್ರವೇ ನಮ್ಮ ಮಗಳು ಪ್ರಿಯಾಂದು. ಆ ಮೂವತ್ತರ ಹುಡುಗನೇ ವಿಕ್ರಾಂತ" ಕಥೆ ಹೇಳಿ ನಿಲ್ಲಿಸಿದ ಪೊನ್ನಪ್ಪನ ಮುಖದಲ್ಲಿ ಇನ್ನೂ ಭೀತಿ ಮಾಯವಾಗಿರಲಿಲ್ಲ. ಕಲಾವಿದ ಶಿವಚಂದ್ರನಿಗೂ ಎಲ್ಲಾ ವಿಚಿತ್ರವಾಗಿ ಕಂಡಿತು.
***
ಶಿವಚಂದ್ರ ತಾನು ಹಿಡಿದ ಕೆಲಸಕ್ಕೊಂದು ಅಂತಿಮ ರೂಪ ಕೊಟ್ಟ. ಮೂರು ವರ್ಷದ ಹೆಣ್ಣು ಮಗುವಿನ ಚಿತ್ರವನ್ನು ಆಧರಿಸಿ ಇಪ್ಪತ್ತು, ಇಪ್ಪತ್ತೊಂದು ಹರೆಯದ ಹುಡುಗಿಯ ಚಿತ್ರವನ್ನು ಬಿಡಿಸುವುದು ಅವನ ವೃತ್ತಿಗೊಂದು ಸವಾಲಾಗಿತ್ತು. ಒಂದೇ ಚೌಕಟ್ಟಿನಲ್ಲಿ ಇಬ್ಬರ ಚಿತ್ರವನ್ನು ರಚಿಸಿ ನೆಮ್ಮದಿಯ ನಿಟ್ಟುಸಿರಿಟ್ಟ ಕಲಾವಿದನನ್ನು ಎಚ್ಚರಿಸುವಂತೆ ಕರೆ ಗಂಟೆ ಮೊಳಗಿತು.ಎದ್ದು ಬಾಗಿಲು ತೆರೆದ.ಪ್ರಿಯಾ!
ತಾನು ರಚಿಸಿದ ಇಪ್ಪತ್ತೊಂದರ ಹುಡುಗಿಯೇ ಜೀವಂತವಾಗಿ ಎದುರು ನಿಂತಂತೆ ಕಂಡಿತು."ಒಳಗೆ ಬರಬಹುದೆ?" ಪ್ರಶ್ನೆ ಆದರಪೂರ್ವಕವಾಗಿರಲಿಲ್ಲ. ಶಿವಚಂದ್ರ ಪಕ್ಕಕ್ಕೆ ಜರುಗಿ ನಿಂತು ಆಹ್ವಾನಿಸಿದ.ಅವಳು ಉಪಚರಿಸಿಕೊಳ್ಳದೆ ಮೆತ್ತಗಿನ ಕುರ್ಚಿಯೊಂದನ್ನು ಎಳೆದು ಕುಳಿತಳು. ಶಿವಚಂದ್ರ ಚಿತ್ರವನ್ನು ಅಟ್ಟಣಿಗೆಯಿಂದ ತೆಗೆದು ಕಿಟಕಿಯ ಪಕ್ಕಕ್ಕಿಟ್ಟ.
"ಹೇಳಿ, ತಾವ್ಯಾರು?" ಅವಳ ಪಕ್ಕದ ಕುರ್ಚಿಯನ್ನು ಎಳೆದು ಎದುರಿಗೆ ಕುಳಿತ. ಹುಡುಗಿಯ ಮುಖವಿನ್ನೂ ಬಿಗಿದುಕೊಂಡೇ ಇತ್ತು."ಕಾವೇರಮ್ಮ ನಿಮ್ಮ ಬಳಿ ಬಂದಿದ್ದು ನನಗೆ ಗೊತ್ತು. ಜೀವಂತವಾಗಿರುವವರಿಗೆ ಮದುವೆ ಮಾಡಿಸೋದಿಕ್ಕೆ ಅಡ್ಡಿ ಮಾಡಿದೋರು ಸತ್ತವರಿಗೆ ಮದುವೆ ಮಾಡಿಸೋದು ತಮಾಷೆ ಅನಿಸ್ತಿದೆ ಶಿವಚಂದ್ರ" ನಸು ನಗುವಿತ್ತು ಮಾತಿನಲ್ಲಿ. ಕಲಾವಿದನಿಗೆ ಆಶ್ಚರ್ಯವಾಯಿತು. ಪ್ರಿಯಾಳನ್ನೇ ಹೋಲುತ್ತಿದ್ದಾಳೆ! ಇವಳು ಪ್ರಿಯಾ?!"ತಾವು ಯಾರೂಂತ ಹೇಳಿ?" ಅದನ್ನು ತಿಳಿದುಕೊಳ್ಳದೆ ಮುಂದಿನದು ಬಗೆಹರಿಯದೆನ್ನುವ ಸಾಮಾನ್ಯ ಪ್ರಜ್ಞೆಯೊಂದು ಹಾಗೇ ಪ್ರಶ್ನಿಸಿತು.
"ನಾನು..." ಮಾತು ನಿಲ್ಲಿಸಿ ಶಿವಚಂದ್ರನನ್ನೇ ತೀಕ್ಷ್ಣ ನೋಟದಿಂದ ನೋಡಿದಳು. ಮತ್ತೆ ಮುಂದುವರಿಸಿದಳು."...ನಾನು ಅಪ್ಸರಾ. ವಿಕ್ರಾಂತನನ್ನು ತುಂಬಾ ಇಷ್ಟಪಟ್ಟೋಳು. ಅವನ ಜೊತೆಗೆ ನನ್ನ ಮದುವೆ ಕೂಡ ನಿಷ್ಕರ್ಷವಾಗಿತ್ತು. ಹಾಗಿರುವಾಗ ಅವನ ಜೊತೆಗೆ ಯಾವ ಹೆಣ್ಣನ್ನೂ ನಾನು ಸಹಿಸೋದಿಲ್ಲ. ನೀವು ಒಪ್ಪಿಕೊಂಡಿರೋ ಕೆಲಸವನ್ನು ದಯವಿಟ್ಟು ನಿಲ್ಲಿಸಿ. ಇಲ್ಲಾಂದ್ರೆ ಪರಿಣಾಮ ಚೆನ್ನಾಗಿರೋದಿಲ್ಲ" ಅವಳು ತಟ್ಟನೆ ಎದ್ದು ಕಿಟಕಿಯ ಬಳಿಯಿದ್ದ ಚಿತ್ರವನ್ನು ತದೇಕ ದೃಷ್ಟಿಯಿಂದ ನೋಡುತ್ತಾ ನಿಂತಳು.
"ಓಹೋ! ಅಷ್ಟು ಬೇಗ ನಿಮ್ಮ ಕೆಲಸ ಮುಗಿಸಿದ್ರಾ?" ಅವನು ಎದ್ದು ನಿಲ್ಲುವಷ್ಟರಲ್ಲಿ ಅವಳು ಎರಡು ಫೋಟೊಗಳ ಜೊತೆಗೆ ಅದನ್ನೂ ಹಿಡಿದುಕೊಂಡು ಹೊರಗೆ ಧಾವಿಸಿದಳು. ಶಿವಚಂದ್ರ ಅಸಹಾಯಕನ ಹಾಗೆ ನಿಂತೇ ಇದ್ದ.
***
ಪೊಲೀಸ್ ಠಾಣೆಯ ಒಳಗೆ ನಡೆದ ಶಿವಚಂದ್ರ ಪೊನ್ನಪ್ಪನನ್ನೂ ಕರೆದ. ವಿಧೇಯನಂತೆ ನಡು ಬಾಗಿಸಿ ಅಧಿಕಾರಿಗೆ ವಂದಿಸಿದ ಪೊನ್ನಪ್ಪನ ದೇಹ ಮೆಲ್ಲಗೆ ಕಂಪಿಸುತ್ತಿತ್ತು. ಹೀಗೆ ಜೀವನದಲ್ಲಿ ಠಾಣೆಯ ಮೆಟ್ಟಿಲು ಹತ್ತುವೆನೆಂಬ ಆಲೋಚನೆಯೇ ಇರಲಿಲ್ಲ. ಮನಸ್ಸು ಕೆಡಿಸಿಕೊಂಡ ಕಾವೇರಿಯ ಕಣ್ಮರೆ ದಿಗಿಲು ಹುಟ್ಟಿಸಿತ್ತು.
ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತ ಇಬ್ಬರೂ ತಮ್ಮ ತಮ್ಮ ಸಮಸ್ಯೆಯನ್ನು ಮುಂದಿಟ್ಟರು. ಇಬ್ಬರ ಸಮಸ್ಯೆಯೂ ಒಂದೇ ದಾರಿಯಲ್ಲಿ ಸಾಗುತ್ತಿರುವುದನ್ನು ಗುರುತಿಸಿದ ಅಧಿಕಾರಿ ದೂರು ಸಲ್ಲಿಸುವಂತೆ ಹೇಳಿ, ಎಫ್.ಐ.ಆರ್ ಸಿದ್ಧಪಡಿಸಿದ.ಅವನಿಗೆ ಸಂಶಯವಿದ್ದದ್ದು ಪೊನ್ನಪ್ಪನ ಮೇಲೆ!
ಎರಡು ದಿನಗಳ ಅಂತರದಲ್ಲಿ ಪೊನ್ನಪ್ಪನನ್ನು ಹುಡುಕಿಕೊಂಡು ಬಂದ ಅಧಿಕಾರಿ ಅವನ ತಲೆಯನ್ನು ಕೊರೆದ. ಅದಕ್ಕೆ ಕಾರಣವೂ ಇತ್ತು.
ವಿಕ್ರಾಂತನ ಸಾವು ಸಹಜವಾದುದ್ದಲ್ಲ ಅನ್ನುವ ಅನುಮಾನ ಹತ್ತಿಕೊಂಡ ಬಳಿಕ ಅಧಿಕಾರಿ ಸುಭಾಷ, ಅದಕ್ಕೆ ಸಂಬಂಧ ಪಟ್ಟ ಫೈಲನ್ನು ತರಿಸಿಕೊಂಡ.
ಕಾರು ಅಪಘಾತವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ. ಅದೂ ಮುಂಜಾನೆಯ ನಸುಕಿನ ವೇಳೆಯಲ್ಲಿ. ಕೊಂಡಪಲ್ಲಿಯಿಂದ ಅರವತ್ತು ಕಿಲೋ ಮೀಟರ್ ದೂರದಲ್ಲಿ ಅಪಘಾತ ನಡೆದಿರುವುದು. ಆದರೆ ಪೊನ್ನಪ್ಪ ಅಪಘಾತ ನಡೆದು ಐದು ನಿಮಿಷದಲ್ಲಿಯೇ ಅಲ್ಲಿ ಪ್ರತ್ಯಕ್ಷನಾಗಿದ್ದ. ಈ ಹೇಳಿಕೆ ಫೈಲಿನಲ್ಲಿತ್ತು! ಅಪಘಾತದ ಸುದ್ಧಿ ತಲುಪಿದ ಕೂಡಲೇ ಅರವತ್ತು ಕಿಲೋಮೀಟರ್ ದಾರಿಯನ್ನು ಅಷ್ಟು ಬೇಗನೆ ಕ್ರಮಿಸುವುದು ಅಸಾಧ್ಯ!
"ಪೊನ್ನಪ್ಪ, ಈಗ ಹೇಳಿ... ನಿಮ್ಮ ನಾದಿನಿ ಪೂರ್ಣ ಸತ್ತ ಬೆನ್ನಿಗೆ, ಅಂದ್ರೆ... ಒಂದು ತಿಂಗಳಿನಲ್ಲಿ ವಿಕ್ರಾಂತ ಕೂಡ ಸತ್ತಿದ್ದಾನೆ. ಅವನ ಸಾವು ಅಸಹಜವಾದುದು" ಅಧಿಕಾರಿ ಸಂಶಯದ ನೋಟ ಚೆಲ್ಲಿದ. ಪೊನ್ನಪ್ಪನ ಮುಖ ಬಿಳಚಿಕೊಂಡಿತು.
"ನಮ್ಮ ಪೂರ್ಣ ವಿಕ್ರಾಂತನನ್ನು ತುಂಬಾ ಮೆಚ್ಚಿಕೊಂಡಿದ್ಲು. ಅವರಿಬ್ಬರಿಗೆ ಮದುವೆ ಮಾಡುವೂದೂಂತ ನಿರ್ಧಾರವಾಗಿತ್ತು. ಆದರೆ ಪೂರ್ಣಳನ್ನ ಮದುವೆಯಾಗುವುದಕ್ಕೆ ವಿಕ್ರಾಂತ ತಯಾರಾಗಿರಲಿಲ್ಲ. ಇದರಿಂದ ನೊಂದ ಪೂರ್ಣ ಆತ್ಮಹತ್ಯೆ ಮಾಡಿಕೊಂಡ್ಲು""ಇಲ್ಲ, ಪೂರ್ಣಾಳ ಆತ್ಮಹತ್ಯೆಯ ಹಿಂದೆ ವಿಕ್ರಾಂತನ ಸಾವು ಸಂಭವಿಸಿದೆ. ಈ ಸಾವು ಅಪಘಾತದಿಂದಾದದ್ದಲ್ಲ. ಇದೊಂದು ಪೂರ್ವ ನಿಯೋಜಿತ ಕೊಲೆ"
ಪೊನ್ನಪ್ಪ ಉಗುಳು ನುಂಗಿಕೊಂಡು ಅಧಿಕಾರಿಯತ್ತ ಆತಂಕದ ನೋಟ ಹರಿಸಿ ಹೇಳಿದ."ತನ್ನ ತಂಗಿ ಪೂರ್ಣ ಸತ್ತ ನಂತರ ಕಾವೇರಿಗೆ ಮತಿಭ್ರ್‍ಅಮಣೆಯಾಗಿ, ನಮ್ಮ ಸತ್ತ ಮಗುವೇ ಇದಕ್ಕೆ ಕಾರಣಾಂತ ತಿಳಿದುಕೊಂಡ್ಲು..."
ಅಧಿಕಾರಿ ಅವನ ಮಾತನ್ನು ಅರ್ಧಕ್ಕೆ ನಿಲ್ಲಿಸಿದ.
"ಅದು ಆಮೇಲಿನ ಮಾತು. ಪೂರ್ಣ ಹಾಗೂ ವಿಕ್ರಾಂತನ ಮದುವೆಯ ಕನಸು ಕಂಡಿದ್ದ ಕಾವೇರಮ್ಮಾ... ವಿಕ್ರಾಂತ ಇನ್ನೊಂದು ಹೆಣ್ಣಿನ ಜೊತೆಗೆ ಓಡಾಡುವುದನ್ನು ಸಹಿಸಲಿಲ್ಲ. ಪೂರ್ಣನ ಮುಂದಿಟ್ಟುಕೊಂಡು ಅಪ್ಸರಾನ ಅವನಿಂದ ದೂರ ಮಾಡೋ ಪ್ರಯತ್ನ ಮಾಡಿದ್ಲು. ಆದರೆ ಇದರಿಂದ ಬೇಸತ್ತ ಪೂರ್ಣ ಆತ್ಮಹತ್ಯೆ ಮಾಡಿಕೊಂಡ್ಲು. ಇದೆಲ್ಲಾ ಆಗಿದ್ದು ವಿಕ್ರಾಂತನಿಂದಾಂತ ತಿಳಿದ ನೀವು ಅಪ್ಸಾರನನ್ನು ಅವನಿಂದ ಬೇರ್ಪಡಿಸುವುದಕ್ಕೆ ಅವನನ್ನೇ ಕಾರು ಅಪಘಾತಾಂತ ಮಾಡಿ ಮುಗಿಸಿದ್ರಿ"
"ಇಲ್ಲ, ಅವನ ಸಾವಿನ ಹಿಂದೆ ಆ ಹುಡುಗಿಯದ್ದೆ ಕೈವಾಡವಿತ್ತು"
"ಹಾಗಾದ್ರೆ ಅವಳು ಹುಚ್ಚು ಹಿಡಿದ ನಿಮ್ಮ ಕಾವೇರಿಯನ್ನು ಯಾಕೆ ಉಪಚರಿಸುತ್ತಿದ್ಲು?"ಪೊನ್ನಪ್ಪ ಆಶ್ಚರ್ಯದಿಂದ ಅಧಿಕಾರಿಯತ್ತ ನೋಡಿದ. ಅಧಿಕಾರಿ ಮುಂದುವರಿಸಿದ.
"ನೋಡಿ ಪೊನ್ನಪ್ಪ, ನೀವು ಸತ್ಯವನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಕಾವೇರಮ್ಮನ್ನೇ ಸತ್ಯವನ್ನು ಅಪ್ಸರಾಳ ಮುಂದೆ ಹೇಳಿದ್ದಾಳೆ. ಮನಸ್ಸಿನ ನೆಮ್ಮದಿ ಹಾಳಾಗಿದೇಂತ ಅವಳನ್ನೇ ಆಶ್ರಯಿಸಿದ್ದಾಳೆ. ಅವಳು ಉಪಚರಿಸಿದ್ದು ಮಾತ್ರವಲ್ಲ, ಶಿವಚಂದ್ರನಿಂದ ಹಾರಿಸಿಕೊಂಡು ಹೋಗಿರೋ ಚಿತ್ರವನ್ನೂ ಹಿಂದಕ್ಕೆ ಕೊಟ್ಟಿದ್ದಾಳೆ. ಆದ್ರೆ ಆ ಹುಡುಗಿ ಈಗಲೂ ಹೇಳೋದೇನು ಗೊತ್ತಾ? ವಿಕ್ರಾಂತನ ಜೊತೆಗೆ ಯಾವ ಹುಡುಗಿಯೂ `ಸಂಗಾತಿ'ಯಾಗೋದನ್ನು ಅವಳು ಇಚ್ಛಿಸೋದಿಲ್ಲವಂತೆ. ಅದಕ್ಕೆ ಅವಳದ್ದೇ ಭಾವಚಿತ್ರದ ಜೊತೆಗೆ ವಿಕ್ರಾಂತನ ಚಿತ್ರ ಬರಿಬೇಕೂಂತ ಹಠ ಹಿಡಿದ್ದಿದ್ದಾಳೆ. ಕಲಾವಿದ ಒಪ್ಪಿಕೊಂಡಿದ್ದಾನೆ. ಈಗ ಕಾನೂನಿನ ಪ್ರಕಾರ ನೀವು ಅಪರಾಧಿ ಪೊನ್ನಪ್ಪ"
ಪೊನ್ನಪ್ಪ ತಲೆ ತಗ್ಗಿಸಿ ಕುಳಿತ.

Read more!

Thursday, July 23, 2009

ಇಂಗ್ಲೀಷ್‍ನ ಥ್ರಿಲ್ಲರ್ ಕಾದಂಬರಿಗಾರ - ಜೆಫ್ರಿ ಆರ್ಚರ್


ಇಂಗ್ಲೀಷ್ ಸಾಹಿತ್ಯದಲ್ಲಿ ಪತ್ತೇದಾರಿ ಮತ್ತು ಥ್ರಿಲ್ಲರ್ ಕಾದಂಬರಿಗಳಿಗೆ ಅದರದೇ ಆದ ಸ್ಥಾನವಿದೆ. ಜೇಮ್ಸ್ ಹ್ಯಾಡ್ಲಿ ಚೇಸ್, ಅಗಾಥ ಕ್ರಿಸ್ಟಿ, ಅರ್ಲಿ ಸ್ಟಾನ್ಲಿ, ಸಿಡ್ನಿ ಶೆಲ್ಡನ್, ಜಾನ್ ಗ್ರೀಶಮ್, ಆರ್ಥರ್ ಹೇಲಿ... ಹೀಗೆ ಉದ್ದಕ್ಕೆ ಸಾಗುತ್ತದೆ ಪಟ್ಟಿ. ಸದ್ಯ ಥ್ರಿಲ್ಲರ್‍‍ಗಳನ್ನು ಬರೆಯುವವರಲ್ಲಿ ಪ್ರಚಲಿತದಲ್ಲಿರುವ ಹೆಸರು `ಜೆಫ್ರಿ ಆರ್ಚರ್'. ೧೯೪೫ ರಲ್ಲಿ ಲಂಡನಿನಲ್ಲಿ ಜನಿಸಿದ ಆರ್ಚರ್ ಸುಮಾರು ೧೮ ಕಾದಂಬರಿಗಳನ್ನು ರಚಿಸಿದ್ದಾರೆ. ೨೦೦೯ರ ಮಾರ್ಚ್ ಮೂರರಂದು ಬಿಡಿಗಡೆಯಾದ ಇವರ ಕಾದಂಬರಿ `ದಿ ಪಾಥ್ ಆಫ್ ಗ್ಲೋರಿ'

ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಕಾದಂಬರಿಯನ್ನು ರಚಿಸುವ ಆರ್ಚರ್ ಮೂಲತ: ಒಬ್ಬ ರಾಜಕಾರಿಣಿ. ಕನ್ಸರ್ವೇಟಿವ್ ಪಾರ್ಟಿಯ ಮುಂದಾಳಾಗಿರುವ ಇವರು ಅಧ್ಯಾಪಕ, ನಾಟಕಕಾರ, ನಟನಾಗಿಯೂ ಹೆಸರುಗಳಿಸಿದವರು. ರಾಜಕೀಯ ಡೊಂಬರಾಟದಲ್ಲಿ ವಿರೋಧಗಳ ನಡುವೆ ನಲುಗಿ ಅಪರಾಧದ ಆರೋಪದಲ್ಲಿ ಬದುಕಬೇಕಾದಾಗ, ರಾಜಕೀಯಕ್ಕೆ ವಿದಾಯ ಸೂಚಿಸಿದವರು. ತಮ್ಮ ವಿದ್ಯಾಭ್ಯಾಸ ಮುಗಿದ ಬಳಿಕ ಭೂಸೇನೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ತರಬೇತು ಪಡೆದು ಮುಂದೆ ಅದು ತನಗೆ ಒಗ್ಗದೆಂದು ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಸೇರಿದರು.
ಆಕ್ಸ್‍ಫರ್ಡ್‍ನಲ್ಲಿ ಉನ್ನತ ಶಿಕ್ಷಣ ಮುಗಿಸಿದ ಆರ್ಚರ್ ನಂತರ ಬಾಳ ಸಂಗಾತಿಯಾಗಿ ವಿಜ್ಞಾನಿ, ಮೇರಿ ಆರ್ಚರ್‍‍ರನ್ನು ಮದುವೆಯಾದರು. ಬಳಿಕ ಸಣ್ಣ ಉದ್ಯೋಗ ಹಿಡಿದ ಅವರು ಅದರಿಂದ ಸಮಾಧಾನಿತರಾಗದೆ ಸ್ವತ: ತಾವೇ ಅಂತಹ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಸ್ಥೆಯಿಂದ ಒಂದು ಆರ್ಟ್ ಗ್ಯಾಲರಿಯನ್ನು ತೆರೆದು ಆಧುನಿಕ ಕಲೆಗಾರಿಕೆಗೆ ಪ್ರೋತ್ಸಾಹ ನೀಡಿದರು. ಆದರೆ ಸಂಸ್ಥೆ ನಷ್ಟದಲ್ಲಿ ನಡೆಯಬೇಕಾದಾಗ ಪರಿಸ್ಥಿತಿ ಎದುರಾದಾಗ ಅದನ್ನು ಮಾರಬೇಕಾಯಿತು. ತನ್ನ ೨೯ನೇ ವರ್ಷದಲ್ಲಿ ರಾಜಕೀಯ ಪ್ರವೇಶಿಸಿದ ಆರ್ಚರ್, ತಮ್ಮ ಪಾರ್ಟಿಯ ಕಾರ್ಯನೀತಿಗೆ ವಿರೋಧವಾಗಿ ನಡೆದು ಅಲ್ಲಿಂದ ಹೊರಗೆ ಬರಬೇಕಾಯಿತು.
ರಾಜಕೀಯ ನಂಟು ಅವರನ್ನು ಅಷ್ಟು ಸುಲಭವಾಗಿ ಬಿಡುವಂತೆ ಕಾಣಲಿಲ್ಲ. ರಾಜಕೀಯದ ಜೊತೆಗೂ ಅವರು ಸಾಹಿತ್ಯದತ್ತ ಒಲವು ತೋರಿಸಿದರು. ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ಆಧರಿಸಿಕೊಂಡೇ ತಮ್ಮ ಮೊದಲ ಕಾದಂಬರಿ `ನಾಟ್ ಎ ಪೆನ್ನಿ ಮೋರ್, ನಾಟ್ ಎ ಪೆನ್ನಿ ಲೆಸ್ಸ್' ಅನ್ನುವ ಕಾದಂಬರಿಯನ್ನು ಬರೆದರು. ಮೊದಲ ಬಾರಿಗೆ ಅಮೆರಿಕಾದ ಪುಸ್ತಕ ಪ್ರಕಾಶನವೊಂದು ಕಾದಂಬರಿಯನ್ನು ಪ್ರಕಟಿಸಿತು. ಮೊದಲ ಕೃತಿಯೇ ಜಯಭೇರಿ ಗಳಿಸಿತು. ತದ ನಂತರ ಅದನ್ನು ಬ್ರಿಟನ್ ಪುಸ್ತಕ ಸಂಸ್ಥೆಯೂ ಪ್ರಕಟಿಸಿ ಅವರಿಗೆ ಹೆಸರನ್ನು ತಂದು ಕೊಟ್ಟಿತು. ೧೯೮೦ರ ದಶಕದ ಮೊದಲಲ್ಲಿ ಟೆಲಿ ಮತ್ತು ಬಾನುಲಿಗಳಲ್ಲಿಯೂ ಅದು ಪ್ರಸಾರವಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಟ್ಟಿತು. ಅದೇ ಸಮಯದಲ್ಲಿ ಟೊರೆಂಟೋದ ಅಕ್ವಾ ಬ್ಲಾಸ್ಟ್ ಕೇಸ್‍ನ ಸಾಕ್ಷಿಯಾಗಿದ್ದ ಆರ್ಚರ್ ಅಪರಾಧಿ ಸ್ಥಾನದಲ್ಲಿ ನಿಂತು ಅದನ್ನು ಎದುರಿಸಬೇಕಾಯಿತು. ಕೊನೆಗೆ ಅದನ್ನು ಧೈರ್ಯದಿಂದ ಎದುರಿಸಿ ನಿರಪರಾಧಿಯಾಗಿ ಹೊರಗೆ ಬಂದು `ಕೇನ್ ಅಂಡ್ ಎಬಲ್' ಅನ್ನುವ ಜನಪ್ರಿಯ ಕಾದಂಬರಿಯನ್ನು ಬರೆದರು. ಆ ಕಾದಂಬರಿ ಕೂಡ ಟೆಲಿ ಧಾರಾವಾಹಿಯಾಗಿ ಪ್ರಸಾರವಾಯಿತು. ಮುಂದೆ ನಾಲ್ಕು ಜನ ಯುವಕರು ಮತ್ತು ಪ್ರದಾನ ಮಂತ್ರಿಯಾಗುವ ಅವರ ಹುಡುಕಾಟ ಇದರ ಸುತ್ತಾ ಹೆಣೆದ ಕಥಾಹಂದರವಿರುವ `ಫಸ್ಟ್ ಎಮಾಂಗ್ ಈಕ್ವಲ್ಸ್' ಪ್ರಕಟವಾಯಿತು. ತಮ್ಮ ಸಮಯವನ್ನು ಬರೆಯುವುದು ಮತ್ತು ಮರು ಬರೆಯುವುದರಲ್ಲಿಯೇ ತೊಡಗಿಸಿಕೊಂಡ ಆರ್ಚರ್ ನಂತರದ ದಿನಗಳಲ್ಲಿ ದಿ ಪ್ರೊಡಿಗಲ್ ಡಾಟರ್, ಎ ಮ್ಯಾಟರ್ ಆಫ್ ಆನರ್, ಬಿಯಾಂಡ್ ರೀಸನೇಬಲ್ ಡೌಟ್, ಆಸ್ ದಿ ಕ್ರೊ ಫ್ಲೈಸ್, ದಿ ಇಲವೆಂಥ್ ಕಮಾಂಡ್‍ಮೆಂಟ್, ಎ ಪ್ರಿಸಿನರ್ ಆಫ್ ಬರ್ಥ್ ಮುಂತಾದ ಕಾದಂಬರಿಗಳಲ್ಲದೆ ದಿ ಫೋರ್ಥ್ ಎಸ್ಟೇಟ್ ನಂತಹ ಪುಸ್ತಕವನ್ನೂ ಬರೆದಿದ್ದಾರೆ. ಜೊತೆಗೆ ಐದು ಕಥಾ ಸಂಕಲನಗಳು ಕೂಡ ಹೊರ ಬಂದಿವೆ.
ಬರವಣಿಗೆಯ ಜೊತೆಗೆ ವಿವಾದಗಳನ್ನೂ ಎದುರಿಸುತ್ತಾ ಬಂದಿರುವ ಆರ್ಚರ್ ಸಾಹಿತ್ಯರಂಗದಲ್ಲಿ ಬಲವಾಗಿ ತಳವೂರಿದವರು. ಅನೇಕ ನಾಟಕಗಳು, ಮಕ್ಕಳ ಕಾದಂಬರಿಗಳನ್ನು ಬರೆದಿರುವ ಇವರು ವರ್ಷಕ್ಕೊಂದರಂತೆ ಕೃತಿಗಳನ್ನು ರಚಿಸುತ್ತಿದ್ದಾರೆ.
ಕಳೆದ ಮಾರ್ಚ್ ಮೂರರಂದು ಬಿಡುಗಡೆಯಾದ ಇವರ ಕಾದಂಬರಿ `ದಿ ಪಾಥ್ ಆಫ್ ಗ್ಲೋರಿ'. ನೈಜ್ಯ ಘಟನೆಯೊಂದನ್ನು ಆಧರಿಸಿ ಬರೆದ ಕಾದಂಬರಿ ಇದು. ಈ ಕಾದಂಬರಿಯ ಮುಖ್ಯ ಕಥಾವಸ್ತು ಮೌಂಟ್ ಎವರೆಸ್ಟನ್ನು ಏರುವ ಸಾಹಸಿ ಜೋರ್ಜ್ ಮೆಲೊರಿ ಕುರಿತಾಗಿದೆ. ಇಬ್ಬರು ಹುಡುಗಿಯರ ಪ್ರೀತಿಯಲ್ಲಿ ಬಿದ್ದು ತನ್ನ ಗುರಿ ಸಾಧಿಸದೆ ಮರೆಯಾಗುವ ಯುವಕ. ಆ ಇಬ್ಬರಲ್ಲಿ ಯಾರೋ ಅವನ ಕೊಲೆ ಮಾಡಿರುತ್ತಾರೆ. ಆ ಕಥೆ ಬಿಚ್ಚಿಕೊಳ್ಳುವುದು ಅವನ ಸತ್ತು ಎಷ್ಟೋ ವರ್ಷಗಳ ಅನಂತರ. ಈ ಕಾದಂಬರಿಯನ್ನು ಓದಿ ಮುಗಿಸಿದ ಬಳಿಕ ಆತನ ಹೆಸರು ಐತಿಹ್ಯದಲ್ಲಿ ಸೇರಬಹುದೆ? ಅನ್ನುವ ಜಿಜ್ಞಾಸೆ ಮೂಡುತ್ತದೆ. ಇದು ಓದುಗರಿಗೆ ಆಪ್ತವೆನಿಸಬಹುದಾದ ಕಾದಂಬರಿ. ಪ್ರಸ್ತುತ ಕನ್ನಡದಲ್ಲಿಯೂ ಆರ್ಚರ್‍‍ರವರ ಕಾದಂಬರಿಗಳು ಪ್ರಕಟವಾಗಿವೆ.ತನ್ನ ಬದುಕೆ ಒಂದು ಕಾದಂಬರಿಯಂತಿರುವ ಜೆಫ್ರಿ ಆರ್ಚರ್‍‍ರವರಿಂದ ಇನ್ನಷ್ಟು ಕಾದಂಬರಿಗಳು ಮೂಡಿ ಬರಲಿ ಎಂದು ಆಶಿಸೋಣ.

Read more!

Thursday, February 26, 2009

ಡಬಲ್ ಸಿಮ್!!


ರಾತ್ರಿ ಸರಿ ಸುಮಾರು ಹನ್ನೊಂದುವರೆ ಗಂಟೆಯ ಸಮಯ! ಪನ್ನಾಲಾಲ್ ತನ್ನದೇ ವ್ಯವಹಾರಿಕ ಲೋಕದಲ್ಲಿ ಮುಳುಗಿದ್ದಾನೆ. ಖರ್ಚು ವೆಚ್ಚಗಳ ರಶೀದಿ, ವೋಚರ್‍‍ಗಳನ್ನು ಜರ್ನಲ್ ಪುಸ್ತಕದಲ್ಲಿ ನಮೂದಿಸಿ, ಲೆಡ್ಜರ್ ಪುಸ್ತಕಕ್ಕೆ ವರ್ಗಾಯಿಸಿ, ನಗದು, ಬ್ಯಾಂಕ್ ಬ್ಯಾಲೆನ್ಸ್‍ಗಳು ತಾಳೆಯಾಗುವವರೆಗೆ ನೆಮ್ಮದಿ ಅನಿಸುತ್ತಿರಲಿಲ್ಲ. ಜಮಾ ಮಾಡಿದ ನಂತರ ಬಂದ ಶಿಲ್ಕು ಮುಂದಿನ ತಾರೀಖಿಗೆ ಬರೆದು ಲೆಕ್ಕದ ಪುಸ್ತಕಗಳನ್ನು ಮುಚ್ಚುವಾಗ ಶ್ರೀವಿದ್ಯಾ ಸಣ್ಣಗೆ ಗೊರಕೆ ಹೊಡೆಯುತ್ತಿರುತ್ತಾಳೆ. ಹೆಂಡತಿಗೆ ತೊಂದರೆಯಾಗದಂತೆ ಟೇಬಲ್ ಲ್ಯಾಂಪ್ ಆರಿಸಿ, ಬೆಡ್ ಸೇರಬೇಕೆಂದಿರುವಾಗ ಆತನ ಮೊಬೈಲ್ ಕೂಗಿತು!ಗಡಿಯಾರದ ಕಡೆಗೆ ಕಣ್ಣು ಹೊರಳಿಸಿದ. ಸಮಯ ಹನ್ನೆರಡು ಮೀರಿದೆ! ಈ ಅಪರಾತ್ರಿಯಲ್ಲಿ ಕರೆ ಮಾಡಿರುವವರು ಯಾರು?ಕುತೂಹಲದಿಂದ ವ್ಯಾಪಾರಿ ಮೊಬೈಲ್‍ನಲ್ಲಿ ಮೂಡಿದ್ದ ಅಪರಿಚಿತ ನಂಬರನ್ನು ತೆರೆದು ಕಿವಿಗೆ ಹಚ್ಚಿ ಮಾಮೂಲು ಪದ ಬಳಸಿದ."ಹಲೋ! ಚೆನ್ನಾಗಿದ್ದೀರಾ? ನಿಮಗೆ ಇನ್ನೂ ನಿದ್ದೆ ಬಂದಿಲ್ಲಾಂತ ಗೊತ್ತು. ಅದಕ್ಕೆ ಕರೆ ಮಾಡ್ದೆ" ಅತ್ತಲಿನಿಂದ ಬಂದ ಹುಡುಗಿಯ ಮಧುರ ಕಂಠಕ್ಕೆ ಇಡೀ ಮೈ ಬೆವರುವಂತಾಯಿತು.

ದೃಷ್ಟಿ ಅನಾಯಾಸವಾಗಿ ನಿದ್ರೆಯ ಆಳಕ್ಕೆ ಇಳಿದ ಶ್ರೀವಿದ್ಯಾಳ ಕಡೆಗೆ ಚಲಿಸಿತು. ಓರೆಯಾಗಿದ್ದ ಬಾಗಿಲನ್ನು ಸಂಪೂರ್ಣ ಮುಚ್ಚಿ ಮೇಜಿನ ಅಂಚನ್ನು ಹಿಡಿದು ನಿಂತ! ಕೈ, ಕಾಲುಗಳು ನಡುಗುತ್ತಿದ್ದುದನ್ನು ಸ್ವರ ಸ್ಪಷ್ಟವಾಗಿ ಸೂಚಿಸಿತು. ತುಟಿಗಳು ಅದುರಿ ಮಾತು ಹೊರಗೆ ಬಂತು."ಯಾರು ನೀನು?""ಅಷ್ಟು ಬೇಗ ಮರ್‍ತು ಬಿಟ್ರಾ? ನಿನ್ನೆ ಸಂಜೆ... ಹಳದಿ, ಪರ್ಪಲ್ ಅಂಚಿನ ಗಾಗ್ರ ಚೋಲಿ... ನೀವೇ ಹೇಳಿದ್ರಿ ಅದು ನನ್ನ ಮೈ ಬಣ್ಣಕ್ಕೆ ಸರಿ ಹೋಗುತ್ತೇಂತಾ... ನನ್ನ ಮೈಮೇಲೆಲ್ಲಾ ಕೈ ಆಡಿಸಿದ್ರಿ ನೀವು..."ತಟ್ಟನೆ ಮಾತು ನಿಂತಿತು.ಪನ್ನಾಲಾಲ್ ಸಂಪೂರ್ಣ ಬೆವತಿದ್ದ! ತೊಟ್ಟಿದ್ದ ರಾತ್ರಿಯುಡುಗೆಯನ್ನು ಬೆವರಿನ ಮೇಲೆ ಸರಿಸಿ ಮೊಬೈಲನ್ನು ಮೇಜಿನ ಮೇಲಿರಿಸಿದ.ಹಿಂದಿನ ದಿನ ಸಂಜೆ ಬಂದ ಗಿರಾಕಿಗಳ ಮುಖವನ್ನು ಒಂದೊಂದಾಗಿಯೆ ನೆನಪಿಸಿಕೊಂಡ. ಯುವತಿ... ಗಾಗ್ರಚೋಲಿ... ನೆನಪು ಮೆಲುಕು ಹಾಕಿಕೊಂಡ. ಎಷ್ಟೋ ಗಿರಾಕಿಗಳಿಗೆ ಹೇಳುವುದಿದೆ, `ಈ ಬಣ್ಣ ನಿಮ್ಮ ಮೈ ಬಣ್ಣಕ್ಕೆ ಸರಿ ಹೊಂದುತ್ತೆ'`ಪನ್ನಾಲಾಲ್ ಗುಜರಾತಿ ವಸ್ತ್ರ ಮಳಿಗೆ' ಆ ಲೊಕ್ಯಾಲಿಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಕಾಲೇಜು ಹುಡುಗಿಯರ ದಿಂಡೇ ಅಲ್ಲಿಗೆ ಬರುತ್ತಿತ್ತು. ಬರುತ್ತಿದ್ದ ಗಿರಾಕಿಗಳ ಕಡೆಗೆ ಕನ್ನಡಕವನ್ನು ಮೂಗಿನ ತುದಿಗೆ ಜಾರಿಸಿ ನೋಡುತ್ತಿದ್ದ. ಆದರೆ... ಸಂಪೂರ್ಣ ವ್ಯವಹಾರದಲ್ಲಿ ಮುಳುಗಿದ್ದವನಿಗೆ ಹೆಂಡತಿಯ `ಬೇಕು' `ಬೇಡ'ಗಳನ್ನೂ ತಲೆಗೆ ತೆಗೆದುಕೊಳ್ಳುವಷ್ಟು ಸಮಯವಿರಲಿಲ್ಲ.ರಾತ್ರಿ ದಿಂಬಿಗೆ ತಲೆಯಾನಿಸಿ ಕಣ್ಣು ಮುಚ್ಚಿದರೂ ನಿದ್ದೆ ಆವರಿಸುವ ಸೂಚನೆಯೆ ಕಾಣಲಿಲ್ಲ. ನಡು ನಡುವೆ ಶ್ರೀವಿದ್ಯಾ ಅತ್ತಿತ್ತ ಹೊರಳುವಾಗ ಕಣ್ಣುಗಳನ್ನು ಅಗಲಕ್ಕೆ ತೆರೆದು ಮುಚ್ಚುತ್ತಿದ್ದ.ಯಾರು ಆ ಹುಡುಗಿ? ತನ್ನ ಮೊಬೈಲ್ ನಂಬರು ತಿಳಿದಿದ್ದಾದರೂ ಹೇಗೆ? ಇದು ತನ್ನ ವೈಯಕ್ತಿಕ ನಂಬರ್. ಶ್ರೀವಿದ್ಯಾಳಿಗೆ ಬಿಟ್ಟರೆ... ಮತ್ಯಾರಿಗೂ ತಿಳಿಯುವ ಹಾಗಿಲ್ಲ. ಕೂಡಲೆ ನೆನಪಾಯಿತು...!ರಿಪೇರಿಗೆಂದು ಮೊಬೈಲನ್ನು ಅಂಗಡಿಯ ಕೆಲಸದಾತ ಚರಣ್‍ನ ಕೈಯಲ್ಲಿ ಕಳುಹಿಸಿದ್ದ! ಆದರೆ... ಚರಣ್ ನಂಬರನ್ನು ತಿಳಿದುಕೊಳ್ಳುವಷ್ಟು ಚುರುಕಿನ ಹುಡುಗನಲ್ಲ. ಮತ್ತೆ... ತಿಳಿದಿರುವ ಸಾಧ್ಯತೆಯಿರುವುದು ರಿಪೇರಿಯ ಅಂಗಡಿಯಾತನಿಗೆ.ಹಾಗಾದರೆ ಆ ರಿಪೇರಿಯ ಅಂಗಡಿಯ ಹುಡುಗಿ ನಂಬರನ್ನು ಗುರುತಿಸಿಕೊಂಡು ಕಾಲ ಕಳೆಯಲು ಫೋನ್ ಮಾಡಿರಬಹುದು. ಅಂತಹ ಧೈರ್ಯದ ಹುಡುಗಿ ಯಾರು? ತಾನೆ ಖುದ್ದಾಗಿ ಅಲ್ಲಿಗೆ ಹೋಗಿ ನೋಡಬೇಕು. ಕತ್ತಲೆಯಲ್ಲಿ ತೆರೆದಿದ್ದ ಕಣ್ಣುಗಳು ಮೆಲ್ಲನೆ ಮುಚ್ಚಿಕೊಂಡವು. ಆ ಕೋಣೆಯೊಳಗೆ ಮತ್ತೊಂದು ಗೊರಕೆ ಫ಼್ಯಾನಿನ ಗಾಳಿಯ ಜೊತೆಗೆ ಬೆರೆಯಿತು.
***ಮರುದಿನ ಪನ್ನಾಲಾಲ್ ಕಾರನ್ನೇರಿ ಮೊದಲು ಭೇಟಿ ನೀಡಿದ್ದು ಮೊಬೈಲ್ ರಿಪೇರಿಯ ಅಂಗಡಿಯವನನ್ನು. ಅಂಗಡಿಯಾತ ಆದರದಿಂದಲೇ ಬರಮಾಡಿಕೊಂಡ."ಬನ್ನಿ ಸಾಬ್, ಏನಾದ್ರೂ ಹೊಸ ಸೆಟ್ ಬೇಕಿತ್ತೇನೋ?""ಇಲ್ಲ..." ಹುಡುಗಿಗಾಗಿ ಸುತ್ತಲೂ ಕಣ್ಣಾಡಿಸಿದ ಪನ್ನಾಲಾಲ್. ಅಂಗಡಿಯ ಮಾಲೀಕ ಮುಂದೆ ಬಂದ."ಸಾಬ್, ಏನಾದ್ರೂ..." ಮಾಲೀಕನ ಮಾತುಗಳು ಮುಗಿಯುವ ಮೊದಲೇ ಕಿಸೆಯಿಂದ ಮೊಬೈಲ್ ಹೊರಗೆ ತೆಗೆದ."ಈ ಮೊಬೈಲ್ ರಿಪೇರಿ ಮಾಡಿರೋದು ಇಲ್ಲಿಯೆ ತಾನೆ?"ಮಾಲೀಕ ಅದನ್ನು ತೆಗೆದುಕೊಂಡು, ಬಿಲ್ ಪುಸ್ತಕವನ್ನು ಪರಿಶೀಲಿಸಿ `ಹೌದು' ಅನ್ನುವಂತೆ ತಲೆಯಲುಗಿಸಿದ."ಯಾಕೆ ಸೆಟ್ ಸರಿಯಾಗಿಲ್ವೆ?""ಸರಿ ಇದೆ... ಇದನ್ನು ಸರಿ ಮಾಡಿರೋ ಹುಡುಗಿ ಯಾರು?" ನೋಟ ನೆಲಕ್ಕೆ ಅಂಟಿಕೊಂಡ ಶೋಕೇಸ್‍ನ ಹಿಂದಕ್ಕೆ ಸರಿದಾಡಿತು."ಹುಡುಗಿನಾ... ಏನು ಹೇಳ್ತಾ ಇದ್ದೀರಾ ಸಾಬ್...?"ಬೋಳು ತಲೆಯ ಮೇಲೆ ಬಡಿದಂತಾಯಿತು ಪನ್ನಾಲಾಲ್‍ಗೆ. ಅಚಾತುರ್ಯದ ಪ್ರಶ್ನೆ ಕೇಳಬಾರದೆನಿಸಿ ತಲೆಯನ್ನು ಒರೆಸಿಕೊಂಡ."ನಿನ್ನೆ ಯಾರೋ ಹುಡುಗಿ ಫೋನ್ ಮಾಡಿದ ನೆನಪು"ಮಾಲೀಕನ ಮುಖದಲ್ಲಿ ವ್ಯಂಗ್ಯದ ನಗು ಸುಳಿಯಿತು. ಬಟ್ಟೆ ವ್ಯಾಪಾರಿಗೆ ಅವಮಾನವಾದಂತಾಯಿತು."ಸಾಬ್, ಯಾರೋ ಹುಡುಗಿ ಫೋನ್ ಮಾಡಿದ್ರೆ... ನೀವು ಆ ನಂಬರಿನ ಕಂಪನಿಯ ಸರ್ವಿಸ್ ಸೆಂಟರ್‍‍ಗೆ ಹೋಗ್ಬೇಕು. ಮೊಬೈಲ್ ರಿಪೇರಿ ಅಂಗಡಿಗಲ್ಲ" ಮಾಲೀಕನ ಮಾತಿಗೆ ಕ್ಷಮಾಪಣೆಯ ಪದ ಬಳಸಿ ಮೆಟ್ಟಿಲುಗಳನ್ನು ಇಳಿದು ಕಾರನ್ನೇರಿದ. ತನ್ನದು ಆತುರದ ತನಿಖೆ!ಆತ ಅಂಗಡಿಗೆ ಬರುವಾಗ ಒಂದೆರಡು ಗಿರಾಕಿಗಳು ಕಾದು ನಿಂತಿದ್ದರು. ಕೆಲಸದಾಳು ಚರಣ್‍ನ ಕೈಯಲ್ಲಿ ಕೀಲಿಯನ್ನು ಕೊಟ್ಟು ಬಾಗಿಲು ತೆರೆದ. ದೇವರ ಮುಂದೆ ಊದಿನ ಕಡ್ಡಿ ಹಚ್ಚಿ ಕ್ಯಾಶ್ ಕೌಂಟರ್‍‍ಗೆ ಬರುವಾಗ ಗಿರಾಕಿಗಳು ಹಣ ಪಾವತಿಸಲು ಬಂದರು. ಮೊದಲ ಗಿರಾಕಿಯ ಹಣವನ್ನು ಕಣ್ಣಿಗೆ ಒತ್ತಿಕೊಂಡು ನಗದು ಪೆಟ್ಟಿಗೆಗೆ ಸೇರಿಸಿ ಮಾಮೂಲು ನಗು ಬೀರಿದ. ಗಿರಾಕಿಗಳು ಹೆಚ್ಚುತ್ತಿದ್ದಂತೆ, ಹಿಂದಿನ ದಿನ ಬಂದ ಕರೆಯನ್ನು ಮರೆತ ವ್ಯಾಪಾರಿ.ಏಕಾಏಕಿ ಎದುರಿಗಿದ್ದ ಟೆಲಿಫೋನ್ ರಿಂಗಣಿಸಿತು. ತನ್ನ ಮಾಮೂಲು ಸ್ವರದಲ್ಲಿ ಹೇಳಿದ."ಪನ್ನಾಲಾಲ್ ಹಿಯರ್...""ಏನ್ರೀ... ನೀವು ಮೊಬೈಲನ್ನು ಮರ್‍ತು ಬಿಟ್ಟು ಹೋದ್ರಾ? ಯಾರೋ ಗಿರಾಕಿಯೊಬ್ಬಳು ಫೋನ್ ಮಾಡಿದ್ಲು. ಮೊನ್ನೆ ಕೊಂಡು ಹೋಗಿದ್ದ ಹಳದಿ-ಪರ್ಪಲ್ ಗಾಗ್ರಚೋಲಿ ಏನೋ ಡಿಫ಼ೆಕ್ಟ್ ಇದೆಯಂತೆ. ಇವತ್ತು ಹಿಂದಕ್ಕೆ ತರ್‍ತಾಳಂತೆ" ಶ್ರೀವಿದ್ಯಾಳ ಮಾತು ಇಡೀ ಮೈಯನ್ನು ಬೆವರುವಂತೆ ಮಾಡಿತು! ಯಾರು ಆ ಗಿರಾಕಿ?"ಸರಿ ... ಮತ್ತೇನೂ ಹೇಳಿಲ್ಲ ತಾನೆ?" ವ್ಯಾಪಾರಿಯ ಸ್ವರ ನಡುಗಿತು. ರಾತ್ರಿಯ ಹಾಗೇ ಅಸಂಬದ್ದ ಮಾತುಗಳನ್ನು ಹೇಳಿದರೆ ಶ್ರೀವಿದ್ಯಾ ಏನೆಂದು ಕೊಂಡಾಳು? ಮೊಬೈಲ್ ಬಿಟ್ಟು ಬಂದಿದ್ದು ತನ್ನ ಮರೆವಿಗೊಂದು ಸಾಕ್ಷಿ!"ಬೇರೆ ಏನು ಹೇಳೋದು? ನೀವು ನನಗಲ್ಲದೆ ಬೇರೆ ಯಾರಿಗೂ ನಿಮ್ಮ ನಂಬರು ಕೊಟ್ಟಿಲ್ಲಾಂತ ಹೇಳಿದ್ರಿ. ಈಗ ನೋಡಿದ್ರೆ...?""ಅದು ಹ್ಯಾಗೆ ಗೊತ್ತಾಯ್ತೋ ನಂಗೆ ಗೊತ್ತಿಲ್ಲ. ನೀನು ಅದನ್ನು ಸ್ವಿಚ್ ಆಫ಼್ ಮಾಡಿಬಿಡು" ಮಡದಿಗೆ ಹೇಳಿ ಫೋನ್ ಇಟ್ಟು, ಕೈ ಬಟ್ಟೆಯಿಂದ ಮುಖ ಒರೆಸಿಕೊಂಡು ಫ಼್ಯಾನ್‍ನ ಗುಂಡಿಯನ್ನು ಅದುಮಿದ."ಚರಣ್" ಹುಡುಗನನ್ನು ಹತ್ತಿರಕ್ಕೆ ಕರೆದ."ಹಳದಿ, ಪರ್ಪಲ್ ಬಣ್ಣದ ಗಾಗ್ರ ತೆಗೆದುಕೊಂಡಿರೋ ಗಿರಾಕಿ ಯಾರೂಂತ ನಿನಗೆ ಗೊತ್ತಾ?""ಸಾಬ್, ಯಾವ ರೇಂಜ್‍ನದ್ದೂಂತ ಹೇಳಿ?""ಗೊತ್ತಿಲ್ಲ... ನೀನೇ ನೋಡಿ ಹೇಳು"ಉದ್ದನೆಯ ರ್‍ಯಾಕ್ ಕಡೆಗೆ ಹೋದ ಹುಡುಗ ಒಂದೊಂದೆ ಬಟ್ಟೆಗಳ ಮೇಲೆ ಕೈಯಾಡಿಸುತ್ತಾ ಏನೋ ತಿಳಿದವರಂತೆ ಕಣ್ಣುಗಳನ್ನು ಅಗಲಿಸಿ ನಿಂತ."ಸಾಬ್, ಗೊತ್ತು... ನಿಮ್ಮ ಮನೆಯ ಎದುರಿನ ಮನೆ ಹುಡುಗಿ. ಪೂಜಾಂತ ಅವಳ ಹೆಸರು"ವ್ಯಾಪಾರಿ ಚಿಂತೆಗೊಳಗಾದ. ಎದುರು ಮನೆಯ ಹುಡುಗಿ! ಹಾಗಿದ್ದರೆ ಶ್ರೀವಿದ್ಯಾಳಿಗೆ ತಿಳಿದಿರುತ್ತಿತ್ತು. ಅವಳೇ ಫೋನ್ ಮಾಡಿ ಹೇಳಿರುವಾಗ... ಹೆಂಡತಿಯನ್ನೇ ಕೇಳಿದರೆ ಹೇಗೆ? ಇದು ತಪ್ಪು ಹೆಜ್ಜೆ... ತಲೆಯ ಮೇಲೆ ಮೊಟಕಿಕೊಂಡ ಪನ್ನಾಲಾಲ್. ಆ ದಿನ ಹಿಂದಕ್ಕೆ ಬರಲಿರುವ ಹಳದಿ-ಪರ್ಪಲ್ ಗಾಗ್ರದ ಹುಡುಗಿಗಾಗಿ ಕಾದ. ಅವಳು ಬರಲೇ ಇಲ್ಲ!ರಾತ್ರಿ ಮನೆಗೆ ಬಂದವನು ಮೊದಲು ಎತ್ತಿಕೊಂಡಿದ್ದು ಮೊಬೈಲನ್ನು. ತನ್ನ ಮಾತನ್ನು ಶಿರಸಾವಹಿಸಿ ಪಾಲಿಸಿದ್ದಾಳೆ ಶ್ರೀವಿದ್ಯಾ. ಖರ್ಚು ವೆಚ್ಚಗಳ ಪುಸ್ತಕಗಳ ಮುಂದೆ ಕುಳಿತು ಮೊಬೈಲ್‍ಗೆ ಜೀವ ತಂದ. ಸಧ್ಯ ಯಾವುದೇ ಮಿಸ್ ಕಾಲಗಳಿಲ್ಲವೆನ್ನುವ ನೆಮ್ಮದಿಯ ಉಸಿರು ದಬ್ಬಿದ. ತನ್ನ ದಿನದ ವಹಿವಾಟಿನ ಬರವಣಿಗೆಯಲ್ಲಿ ತೊಡಗಿದ.ಅದೇ ಸಮಯ... ಹನ್ನೆರಡು ಗಂಟೆ ಐದು ನಿಮಿಷ! ಫೋನ್ ಮೊಳಗಿತು."ಸಾಬ್, ನಾನು... ನೆನಪಾಯ್ತಾ? ಮಧ್ಯಾಹ್ನ ಫೋನ್ ಮಾಡಿದ್ದೆ... ಅರ್ಜೆಂಟ್ ನಿಮ್ಮನ್ನು ಭೇಟಿಯಾಗಬೇಕು. ಕಾರು ತರ್‍ತೀರಾ? ನವನೀತ್ ಲಾಡ್ಜ್ ಹತ್ತಿರ ನಿಂತಿರ್‍ತೀನಿ"ಪನ್ನಾಲಾಲ್ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಬೆವತು ನೀರಾದ. ಶ್ರೀವಿದ್ಯಾ ಗೊರಕೆ ಹೊಡೆಯದೆ ಕುತೂಹಲ ತುಂಬಿದವರಂತೆ ಬಾಗಿಲಿನ ಉದ್ದಕ್ಕೂ ನಿಂತಿದ್ದಳು!ಆತ ಕರೆಯನ್ನು ತುಂಡರಿಸಿ ತಲೆ ತಗ್ಗಿಸಿ ನಿಂತ."ರೀ... ನಿಮ್ಮ ಹೆಣ್ಣು ಗಿರಾಕಿ... ಅದೇ ಹಳದಿ... ಪರ್ಪಲ್ ಗಾಗ್ರ?" ಅವಳ ಮಾತಿನಲ್ಲಿ ವ್ಯಂಗ್ಯ ತುಂಬಿತ್ತು. ವ್ಯಾಪಾರಿ ಉತ್ತರಿಸದೆ ಸುಮ್ಮನೆ ನಿಂತಿದ್ದ."ಹೇಳ್ರಿ... ಯಾರು ಆ ಹೆಣ್ಣು ಗಿರಾಕಿ?" ಉದ್ವೇಗದ ನುಡಿಗೆ ತಲ್ಲಣಿಸಿದ."ನಂಗೆ ಗೊತ್ತಿಲ್ಲ...""ಗೊತ್ತಿಲ್ಲಾಂದ್ರೆ ಏನು? ನಿಮ್ಮ ಪರ್ಸನಲ್ ನಂಬರ್ ಕೊಡುವಷ್ಟು ದೊಡ್ಡ ಗಿರಾಕಿನಾ ಅವಳು? ಅದಲ್ಲದೆ ಇದು ಯಾವ ಸಮಯಾಂತ ಫೋನ್ ಮಾಡೋದಿಕ್ಕೆ?" ಏರಿಳಿತವಿತ್ತು ಮಾತಿನಲ್ಲಿ."ನಂಗೊತ್ತಿಲ್ಲ ಕಣೆ... ಯಾರೋ ಏನೋ... ನಾನು ಪೊಲೀಸ್ ಕಂಪ್ಲೇಂಟ್ ಮಾಡ್ತೀನಿ""ನಂಜೊತೆಗೆ ನಾಟಕ ಮಾಡ್ಬೇಡಿ. ಎಷ್ಟು ಸಮಯದಿಂದ ನಡಿತಾ ಇದೆ ಈ ನಾಟಕ?""ಏನು ನಾಟಕ?""ಆ ಹುಡುಗಿ ಜೊತೆಗೆ ನಿಮ್ಮ ಸರಸ""ನೀನು ನನ್ನ ಮಾತು ನಂಬೋದಿಲ್ವಾ? ಅವಳು ಯಾರೂಂತ ನನ್ಗೆ ಗೊತ್ತಿಲ್ಲ. ಮಧ್ಯಾಹ್ನ ನೀನೇ ಮಾತಾಡ್ದೆ. ಯಾರೂಂತ ಕೇಳಿಲ್ವಾ?""ನನ್ನಲ್ಲೇನು ಹೇಳ್ತಾಳೆ? ನೀವೇ ಬೇಕೂಂತ ಹಠ ಹಿಡಿದ್ಲು. ಮತ್ತೆ ಫೋನ್ ಮಾಡ್ತೀನಿಂತ ಹೇಳಿದ್ಲು. ಅದಕ್ಕೆ ನಾನು ಕಾಯ್ತಾ ಇದ್ದೆ. ನಿಮ್ಮ ಬಣ್ಣ ಬಯಲಾಯ್ತು. ನನ್ನ ಯಾಕೆ ದೂರ ಮಾಡ್ತಾ ಇದ್ದೀರೀಂತ ಈಗ ಗೊತ್ತಾಯ್ತು" ಹೆಣ್ಣಿನ ಸಹಜ ದು:ಖ ಕಣ್ಣೀರಾಗಿ ಹೊರಗೆ ಬಂತು.ಪನ್ನಾಲಾಲ್ ಮೊಬೈಲನ್ನು ಮೇಜಿನ ಮೇಲಿರಿಸಿ ಹಿಂತಿರುಗಿದ.ಮೊಬೈಲ್ ಮತ್ತೆ ರಿಂಗಣಿಸಿತು. ಶ್ರೀವಿದ್ಯಾ ಅವನಿಗೆ ಅವಕಾಶ ಕೊಡದವರಂತೆ ಹಾರಿ ಫೋನನ್ನು ಕೈಗೆತ್ತಿಕೊಂಡಳು."ಹಲೋ..." ಅಂದವಳ ಮುಖದಲ್ಲಿ ಸಿಟ್ಟು ತುಂಬಿತ್ತು. ಏಕಾಏಕಿ ಅತ್ತಲಿಂದ ಬಂದ ದನಿಗೆ ಅವಳ ಮುಖ ಬಿಳಚಿಕೊಂಡಿತು! ಫೋನ್ ಹಿಡಿದ ಕೈಯನ್ನು ಗಂಡನ ಕಡೆಗೆ ಚಾಚಿದಳು. ಪನ್ನಾಲಾಲ್ ಹೆದರುತ್ತಲೇ ಮೊಬೈಲನ್ನು ಕಿವಿಗೆ ಹಚ್ಚಿದ! ಅತ್ತಲಿಂದ ಬಂದ ಮಾತುಗಳನ್ನು ಕೇಳುತ್ತಾ ನಿಶ್ಚೇಟಿತನಂತೆ ನಿಂತ!!!
***ವಿಶಾಲವಾದ ಮೇಜಿನ ಮುಂದೆ ಕುಳಿತಿದ್ದ ಅಧಿಕಾರಿಯ ಮುಖದಲ್ಲಿ ಗಂಭೀರತೆ ತುಂಬಿ ಎದುರಿಗೆ ಕುಳಿತಿದ್ದವರಲ್ಲಿ ಭೀತಿ ಹುಟ್ಟಿಸಿತು."ನಿಮಗೆ ವೃಥಾ ತೊಂದರೆ ಕೊಡೋದಿಕ್ಕೆ ನಾನು ನಿಮ್ಮನ್ನು ಇಲ್ಲಿಗೆ ಕರೆಸಿಲ್ಲಾ ಮಿಸ್ಟರ್ ಪನ್ನಾಲಾಲ್. ಪವಿತ್ರ್‍ಆ ಅನ್ನೋ ಹುಡುಗಿ ಹೊಸ ಹಳದಿ ಬಣ್ಣದ ಗಾಗ್ರ ಚೋಲಿ ಹಾಕಿಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ. ಅವಳ ಕೈಯಲ್ಲಿದ್ದ ಚೀಟಿಯಲ್ಲಿ ನಿಮ್ಮ ಹೆಸರು ಇತ್ತು. ಅದಲ್ದೆ ಅವಳ ಮೊಬೈಲ್‍ನಲ್ಲಿ ನಿಮ್ಮ ಮೊಬೈಲ್ ನಂಬರಿತ್ತು!"ಅಧಿಕಾರಿಯ ಮಾತಿಗೆ ಪನ್ನಾಲಾಲ್‍ಗೆ ಉಗುಳು ನುಂಗುವಂತಾಯಿತು. ಶ್ರೀವಿದ್ಯಾ ಗಂಡನ ಕಡೆಗೆ ಅಸಹ್ಯ ನೋಟ ಬೀರಿದಳು."ಸಾರ್, ನೀವೇನು ಹೇಳ್ತಾ ಇದ್ದೀರಾ? ನನಗೆ ಪವಿತ್ರಾ ಅನ್ನೋ ಹುಡುಗಿಯ ಬಗ್ಗೆ ಏನೂ ಗೊತ್ತಿಲ್ಲ." ಅಸಹಾಯಕತೆಯಿಂದ ಕೈ ತಿರುವಿದ."ಪನ್ನಾಲಾಲ್, ನಿಮ್ಮನ್ನು ನಾನು ಆರೋಪಿಸ್ತಾ ಇಲ್ಲ. ಆ ಹುಡುಗಿಯ ಮೊಬೈಲ್‍ನಲ್ಲಿರುವ ಎಲ್ಲಾ ನಂಬರುಗಳನ್ನೂ ಕಾಂಟ್ಯಾಕ್ಟ್ ಮಾಡ್ತಾ ಇದ್ದೀವಿ. ನನ್ನಿಂದ ಯಾವುದನ್ನೂ ಮುಚ್ಚಿಡ್ಬೇಡಿ. ಮಿಸ್ಸೆಸ್ ಪನ್ನಾಲಾಲ್, ತಾವು ದಯವಿಟ್ಟು ಒಂದು ಹತ್ತು ನಿಮಿಷ ಹೊರಗೆ ಕುಳಿತಿರಿ. ನಾನು ಮತ್ತೆ ನಿಮ್ಮನ್ನು ಕರೆಸ್ತೀನಿ"ಗಂಡನ ಮೇಲೆ ರೇಜಿಗೆ ಪಟ್ಟುಕೊಂಡ ಹೆಣ್ಣು ತಲೆ ತಗ್ಗಿಸಿಕೊಂಡು ಹೊರಗೆ ನಡೆಯಿತು. ಪನ್ನಾಲಾಲ್ ತಲೆಗೆ ಕೈ ಹಚ್ಚಿ ಅಧಿಕಾರಿಯ ಮುಂದಿನ ಪ್ರಶ್ನೆಯನ್ನು ಎದುರಿಸುವುದಕ್ಕೆ ಸಿದ್ಧನಾದ."ಮುಚ್ಚು ಮರೆಯಿಲ್ಲದೆ ಈಗ ಹೇಳಿ... ನಿಮ್ಗೆ ಆ ಹುಡುಗಿ ಹೇಗೆ ಪರಿಚಯಾಂತ?" ಅಧಿಕಾರಿಯ ಪ್ರಶ್ನೆಗೆ ಆಶ್ಚರ್ಯದ ನೋಟ ಬೀರಿದ ಪನ್ನಾಲಾಲ್."ಸಾರ್, ಆ ಹುಡುಗಿ ಯಾರೂಂತ ನನಗೆ ನಿಜವಾಗ್ಲೂ ಗೊತ್ತಿಲ್ಲ""ಹಾಗಾದ್ರೆ... ನೀವು ಆ ಹುಡುಗಿಗೆ ಕರೆ ಮಾಡ್ಲಿಲ್ಲಾಂತ ಹೇಳ್ತೀರಾ?""ನಾನು ಯಾವತ್ತೂ ನನ್ನ ಹೆಂಡತಿಗೆ ಬಿಟ್ರೆ... ಬೇರೆ ಯಾರಿಗೂ ಮೊಬೈಲ್ ನಂಬರನ್ನು ಕೊಡ್ಲಿಲ್ಲ""ನಿಮ್ಮ ಮಾತು ನಂಬ್ತೀನಿ""ನಿಜಾನೇ ಹೇಳ್ತಾ ಇದ್ದೀನಿ" ಮೊಬೈಲನ್ನು ಅಧಿಕಾರಿಯತ್ತ ಹಿಡಿದ. ಅಧಿಕಾರಿ ಮುಗುಳ್ನಕ್ಕ."ಸರಿ, ಇದ್ಯಾಕೆ?" ಮೊಬೈಲನ್ನು ತನ್ನ ಕಡೆಗೆ ಹಿಡಿದಿದ್ದನ್ನು ಕಂಡು ಅಧಿಕಾರಿ ಕೇಳಿದ."ಸಾರ್, ಇದರಲ್ಲಿ ನಾನು ಕರೆ ಮಾಡಿರಬಹುದಾದ ನಂಬರುಗಳು ಇದೆ""ಆ ಹುಡುಗಿಯ ನಂಬರನ್ನು ನೀವು ಡಿಲೀಟ್ ಮಾಡಿರಬಹುದು...""ಇಲ್ಲ, ನಾನು ಯಾವುದನ್ನೂ ಡಿಲೀಟ್ ಮಾಡಿಲ್ಲ""ಪರವಾಗಿಲ್ಲ... ಅದನ್ನು ನಾನು ಬೇರೆ ಮೂಲದಿಂದ ಹುಡುಕ್ತೀನಿ" ಅಧಿಕಾರಿಯ ನೋಟ ತೀಕ್ಷಣವಾಗಿತ್ತು. ಪನ್ನಾಲಾಲ್‍ಗೆ ತಾನು ಯಾವುದೋ ಬಲೆಯೊಳಗೆ ಸಿಕ್ಕಿಬಿದ್ದಂತಾಯಿತು."ಪನ್ನಾಲಾಲ್, ನಿಮಗೆ ಕೊನೆಯದಾಗಿ ಹುಡುಗಿಯಿಂದ ಕರೆ ಬಂದಿರೋದು ಯಾವಾಗ?"ಆತ ಕ್ಷಣ ಹೊತ್ತು ಆಲೋಚನೆಗೊಳಗಾದ. ಇದು ಅಧಿಕಾರಿ ತನ್ನ ಬಾಯಿ ಬಿಡಿಸುವ ತಂತ್ರ!"ನಿನ್ನೆ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಐದು ನಿಮಿಷಕ್ಕೆ...""ಅದಲ್ಲ... ಆ ಹುಡುಗಿಯಿಂದ...""ಅದೇ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಐದು ನಿಮಿಷಕ್ಕೆ""ಅದು ಆ ಹುಡುಗಿಯ ಕರೆಯಲ್ಲ. ಅದು ನಮ್ಮ ಇಲಾಖೆಯಿಂದಲೆ ಮಾಡಿರೋ ಕರೆ..." ಪನ್ನಾಲಾಲ್ ಆಶ್ಚರ್ಯ ತೋರಿದ. ಅಧಿಕಾರಿ ಮುಂದುವರಿಸಿದ."ಆ ಕರೆ... ಅದರ ಮುಂದಿನ ಎರಡು ಕರೆಗಳನ್ನು ಮಾಡಿರೋದು ನಾವೇ... ಆ ಹುಡುಗಿ ಪವಿತ್ರಾ ಸೂಸೈಡ್ ಮಾಡ್ಕೊಂಡಿಲ್ಲ. ಅವಳ ಕೊಲೆಯಾಗಿದೆ. ಅದಕ್ಕಾಗಿ ನಮ್ಮ ಇಲಾಖೆ ಆಕೆಯ ನಂಬರಿಗೆ ಬಂದಿರೋ ಕರೆಗಳನ್ನು ಗುರುತಿಸಿ ಆ ನಂಬರುಗಳಿಗೆಲ್ಲಾ ಕರೆ ಮಾಡಿ ವಿಚಾರಿಸ್ತಿದ್ದೀವಿ. ಕೊನೆಗೆ ಎಲ್ಲಾ ಕರೆಗಳ ವಿವರಗಳನ್ನು ಪರಿಶೀಲಿಸಿ ಕೊಲೆಗಾರನನ್ನು ಪತ್ತೆ ಹಚ್ತೀವಿ""ನಿಮಗೆ ನನ್ನ ಮೇಲೆ ಸಂಶಯ?""ಇದು ಸಂಶಯವಲ್ಲ. ನಮ್ಮ ಕರ್ತವ್ಯ ನಾವು ಮಾಡ್ಬೇಕಲ್ವಾ ಮಿಸ್ಟರ್ ಪನ್ನಾಲಾಲ್. ನೋಡೋಣ ಈ ಕೊಲೆ ಪ್ರಕರಣ ಯಾರನ್ನು ಬೆಟ್ಟು ಮಾಡಿ ತೋರಿಸುತ್ತೇಂತ"ಪನ್ನಾಲಾಲ್‍ಗೆ ಒಳಗೊಳಗೆ ಹೆದರಿಕೆ. ಯಾರಿಗೂ ತನ್ನ ಮೊಬೈಲ್ ನಂಬರ್ ನೀಡದಿದ್ದರೂ ತಾನು ಈ ಇಕ್ಕಟ್ಟಿನಲ್ಲಿ ಹೇಗೆ ಸಿಲುಕಿಕೊಂಡೆ?"ಸಾರ್, ನಾನಂತೂ ಯಾರ ವಿಷಯಕ್ಕೂ ತಲೆ ಹಾಕಿದೋನಲ್ಲ. ನೀವು ರಾತ್ರಿ ಮಾಡಿರೋ ಕರೆಯಿಂದಾಗಿ ನನ್ನ ಹೆಂಡತಿಗೆ ನನ್ನ ಮೇಲೆ ಸಂಶಯ... ನಾನು ಆ ಹುಡುಗಿಯ ಜೊತೆಗೆ ಸಂಬಂಧ ಇಟ್ಕೊಂಡಿದ್ದೀನೀಂತ""ಹೇಗೆ ಹೇಳೋದು? ನೀವು ನಿಮ್ಮ ಹೆಂಡತಿಗೆ ಮೋಸ ಮಾಡ್ಲಿಲ್ಲಾಂತ ತಿಳಿತೀನಿ""ಅಂದ್ರೆ... ನಿಮ್ಗೂ ನನ್ನ ಮೇಲೆ...""ನೋ... ನೋ... ನಾನು ಹಾಗೆ ತಿಳ್ಕೊಂಡಿಲ್ಲ. ಇನ್ನು ಒಂದೆರಡು ದಿನ ಕಳೆಯಲಿ. ಈ ಕೊಲೆ ಮಾಡ್ದೋರು ಯಾರೂಂತ ತಿಳಿಯುತ್ತೆ"ಅಧಿಕಾರಿ ಪಕ್ಕದಲ್ಲಿ ನಿಂತಿದ್ದ ಪೇದೆಯನ್ನು ಕರೆದು ಹೊರಗೆ ಕುಳಿತಿದ್ದ ಶ್ರೀವಿದ್ಯಾಳನ್ನು ಕರೆಯುವಂತೆ ಹೇಳಿದ.ಗಂಡನ ಕಡೆಗೆ ಅನುಮಾನದ ನೋಟ ಬೀರಿ, ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತಳು."ಮಿಸೆಸ್ ಪನ್ನಾಲಾಲ್, ನಾವು ಒಂದು ಕೊಲೆ ಬಗ್ಗೆ ತನಿಖೆ ನಡೆಸ್ತಾ ಇದ್ದೀವಿ. ನಿನ್ನೆ ರಾತ್ರಿ, ಮಧ್ಯಾಹ್ನ ನೀವು ರಿಸೀವ್ ಮಾಡಿರೋ ಕರೆಗಳು ನಮ್ಮ ಡಿಪಾರ್ಟ್ ಮೆಂಟ್‍ನಿಂದ ಮಾಡಿರೋ ಕರೆಗಳು. ಆ ನಂಬರ್ ಮಾತ್ರ ಕೊಲೆಯಾಗಿರೋ ಹುಡುಗಿ ಪವಿತ್ರಾಂದು"ಶ್ರೀವಿದ್ಯಾಳಿಗೆ ಸಮಾಧಾನವಾದರೂ ಗಂಡನ ಮೇಲೆ ಅನುಮಾನ ಪರಿಹಾರವಾಗಲಿಲ್ಲ."ಆದ್ರೆ... ಇವರ ನಂಬರ್ ಆ ಹುಡುಗಿಗೆ ಹೇಗೆ ಸಿಕ್ತು?"ಅಧಿಕಾರಿ ಸಶಬ್ದ ನಗು ಹೊರಡಿಸಿದ."ಆತುರ ಪಡ್ಬೇಡಿ ಮಿಸೆಸ್ ಪನ್ನಾಲಾಲ್... ನೋಡಿ... ಒಂದೆರಡು ದಿನಗಳಲ್ಲಿ ತಿಳಿಯುತ್ತೆ. ನೀವಿನ್ನು ಹೋಗಬಹುದು. ಮತ್ತೆ ನಾನು ಕರೆಯುವಾಗ ನೀವು ಹಾಜರಾಗ್ಬೇಕು" ಅಧಿಕಾರಿಯ ಮಾತು ಕೇಳಿ ಇಬ್ಬರೂ ಎದ್ದು ನಿಂತು ಅವನಿಗೆ ವಂದಿಸಿದರು.
***ಒಂದು ದಿನ ಮಧ್ಯಾಹ್ನದ ಹೊತ್ತು, ಗಿರಾಕಿಗಳು ಯಾರೂ ಇಲ್ಲವೆನ್ನಬಹುದು. ಶ್ರೀವಿದ್ಯಾ ಗಂಡನನ್ನು ನೋಡುವುದಕ್ಕಾಗಿ ಅಂಗಡಿಗೆ ಬಂದವಳು ಹೊಸ ಸೀರೆಗಳನ್ನು ನೋಡುತ್ತಿದ್ದಳು."ನಮಸ್ಕಾರ..." ಏಕಾಏಕಿ ಬಂದ ಮಾತಿಗೆ ಹಿಂತಿರುಗಿದವಳಿಗೆ ಆಶ್ಚರ್ಯವಾಯಿತು. ಪೊಲೀಸ್ ಅಧಿಕಾರಿ ಪನ್ನಾಲಾಲ್‍ನ ಎದುರಿಗೆ ಮುಗುಳ್ನಗು ಬೀರಿ ನಿಂತಿದ್ದ! ಅವಳಿಗೆ ನಡುಕ... ತನ್ನ ಗಂಡನೇ ಕೊಲೆಗಾರನೆ?!ಪನ್ನಾಲಾಲ್ ಹೆಂಡತಿಯತ್ತ ಪೇಚು ಮೋರೆ ಹಾಕಿ ನೋಡಿದ. ಅವಳು ಅಧೈರ್ಯದಿಂದಲೇ ಹತ್ತಿರ ಬಂದು ಅಧಿಕಾರಿಗೆ ವಂದಿಸಿದಳು."ಕೊಲೆಗಾರ ಸಿಕ್ಕಿದ್ದಾನೆ ಮಿಸ್ಟರ್ ಪನ್ನಾಲಾಲ್" ಅಧಿಕಾರಿಯ ಮಾತಿಗೆ ಇಬ್ಬರಿಗೂ ಆಶ್ಚರ್ಯದ ಜೊತೆಗೆ ಆತಂಕ."ಹೌದಾ, ಯಾರೂಂತ ಹೇಳ್ತೀರಾ?""ಹೇಳ್ತೀನಿ...""ಬನ್ನಿ ಸಾರ್, ಒಳಗೆ..." ಪನ್ನಾಲಾಲ್ ಕೆಲಸದವರ ಗಮನ ತನ್ನ ಕಡೆಗೆ ಇರುವುದನ್ನು ನೋಡಿ ಅಧಿಕಾರಿಯನ್ನು ಒಳಗೆ ಕರೆದು ಕುಳ್ಳಿರಿಸಿದ."ನೋಡಿ ಪನ್ನಾಲಾಲ್, ಆ ಹುಡುಗಿ ಕೊಲೆಯಾಗಿರೋದು ಸತ್ಯ. ನಿಮ್ಮ ಹೆಸರು ಕೂಡ ಅಲ್ಲಿ ಬಂದಿರೋದು ಸತ್ಯ. ನೀವು ನಿಮ್ಮ ಮೊಬೈಲನ್ನು ಒಮ್ಮೆ ನೀಡಿದ್ರೆ... ನಾನು ನಡೆದುದನ್ನು ನಿಖರವಾಗಿ ಹೇಳ್ತೀನಿ"ಪನ್ನಾಲಾಲ್ ಅಂಜುತ್ತಲೇ ಮೊಬೈಲನ್ನು ನೀಡಿದ. ಅಧಿಕಾರಿ ಮೊಬೈಲನ್ನು ಸ್ವಿಚ್ ಆಫ಼್ ಮಾಡಿ ತೆರೆದ! ಮತ್ತೆ ಅದನ್ನು ಮುಚ್ಚಿ ಹಿಂತಿರುಗಿಸಿದ. ಪನ್ನಾಲಾಲ್‍ಗೆ ಅರ್ಥವಾಗಲಿಲ್ಲ."ನೀವು ನಿಮ್ಮ ಸೆಟ್‍ಗೆ ಎರಡು ಸಿಮ್ ಹಾಕಿರೋ ಉದ್ದೇಶ ಏನು?"ಶ್ರೀವಿದ್ಯಾ ಗಂಡನ ಮುಖ ನೋಡಿದಳು. ಅವನ ಮುಖದಲ್ಲೂ ಆಶ್ಚರ್ಯ!"ಎರಡು ಸಿಮ್! ಅಂದ್ರೇನು ಸಾರ್?""ಅದೇನೂಂತ ನನ್ನನ್ನೇ ಕೇಳ್ತಿದ್ದೀರಿ. ನಿಮ್ಮ ಮೊಬೈಲ್ ತೆರೆದು ನೋಡಿ. ಅದಲ್ಲದೆ ನಿಮ್ಮ ಮೊಬಲ್‍ನಲ್ಲಿರೋ ಹೆಚ್ಚುವರಿ ಬಟನ್ ನೋಡಿ"ಪನ್ನಾಲಾಲ್ ಪರೀಕ್ಷಿಸಿದ. ಒಂದು ಸಿಮ್ ಇರುವ ಬದಲು ಎರಡು ಸಿಮ್‍ಗಳು!"ಹೇಗೆ ಸಾಧ್ಯ?""ಹೇಗೆ ಸಾಧ್ಯಾಂದ್ರೆ...? ತಂತ್ರಜ್ಞಾನ ಮುಂದುವರಿದಿದೆ ಪನ್ನಾಲಾಲ್. ನೀವು ಒಂದು ಸಿಮ್ ಹಾಕಿಸಿದ್ರಿ... ಅದನ್ನೇ ಉಪಯೋಗಿಸ್ತಿದ್ರಿ. ಆದರೆ ನಿಮ್ಮ ಮೊಬೈಲ್‍ಗೆ ಇನ್ನೊಂದು ಸಿಮ್ ಹೇಗೆ ಬಂತೂಂತ ಆಶ್ಚರ್ಯ ತಾನೆ?""ಹೌದು""ಹಾಂ! ಇಲ್ಲೇ ಕೊಲೆಗಾರ ತನ್ನ ಚಾಣಾಕ್ಷತನ ತೋರಿಸಿದ್ದಾನೆ. ಮೊನ್ನೆ ಅಲ್ಲ... ಕೆಲವು ವಾರಗಳ ಹಿಂದೆ ನಿಮ್ಮ ಮೊಬೈಲ್ ಹಾಳಾಗಿತ್ತು. ನೀವು ಅದನ್ನು ರಿಪೇರಿ ಮಾಡ್ಸೋದಿಕ್ಕೆ ಕಳುಹಿಸಿದ್ರಿ. ಆ ದಿನ ಪವಿತ್ರ್‍ಆ ಅನ್ನೋ ಹುಡುಗಿ ನಿಮ್ಮ ಅಂಗಡಿಗೆ ಬಂದಿದ್ಲು. ನಿಮ್ಮಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಿದ್ಲು. ಅದೇ ದಿನ ಕೊಲೆಗಾರ ಅವಳ ಬೆನ್ನು ಬಿದ್ದ. ಅವಳನ್ನು ಅನುಸರಿಸಿ ಅವಳ ಬಗ್ಗೆ ತಿಳಿದುಕೊಂಡ. ತಾನೆ ಪನ್ನಾಲಾಲ್ ಅಂದುಕೊಂಡು ಅಂಗಡಿಯ ಬಗ್ಗೆ ವಿವರ ನೀಡಿದ. ಜೊತೆಗೆ ನಿಮ್ಮ ಮೊಬೈಲ್ ನಂಬರನ್ನೂ ನೀಡಿದ. ನೀವು ಮಧ್ಯಾಹ್ನದ ಹೊತ್ತು ಮನೆಗೆ ಹೋಗ್ತಾ ಇದ್ದಾಗ ಮೊಬೈಲನ್ನು ಬಿಟ್ಟು ಹೋಗ್ತಾ ಇದ್ರಿ. ಅದು ಕೊಲೆಗಾರನಿಗೆ ಅನುಕೂಲವಾಯ್ತು. ಆ ಸಮಯದಲ್ಲಿ ನಿಮ್ಮ ಮೊಬೈಲ್‍ನಿಂದ ಹುಡುಗಿಗೆ ಎರಡನೆ ಸಿಮ್‍ನಿಂದ ಕರೆ ಮಾಡ್ತಿದ್ದ. ಕೆಲವೊಮ್ಮೆ ಆ ಹುಡುಗಿಯೇ ಅವನಿಗೆ ಕರೆ ಮಾಡ್ತಿದ್ಲು. ಆದ್ರೆ ಅದು ನಿಮ್ಮ ನಂಬರಿಗೆ ಬರ್‍ತಿತ್ತು. ಅವಳಿಗೆ ಬರ್‍ತಿದ್ದ ಕರೆ ಮತ್ತು ಅವಳು ಮಾಡ್ತಿದ್ದ ಕರೆಗಳನ್ನು ನೋಟ್ ಮಾಡಿಕೊಂಡು ತನಿಖೆ ನಡೆಸಿದ್ವಿ. ಎರಡು ಕರೆಗಳು ಒಂದೇ ಸೆಂಟರ್‍‍ನಿಂದ ಬರ್‍ತಿದ್ದವು. ತನಿಖೆ ಮುಂದುವರಿಯಿತು. ನಿಮ್ಮ ನಂಬರಿನ ಕಂಪನಿಯನ್ನು ಭೇಟಿ ಮಾಡಿದಾಗ ಡಬಲ್ ಸಿಮ್ ಇರುವ ಸಾಧ್ಯತೆಯ ಬಗ್ಗೆ ತಿಳಿಯಿತು. ಅದರಿಂದಾಗಿ ನಿಮ್ಮ ಮೇಲೆ ಸಂಶಯ ಹೊಂದಬೇಕಾಯಿತು. ಅದಕ್ಕೆ ನಾವೇ ಆ ಹುಡುಗಿಯ ನಂಬರ್ ಉಪಯೋಗಿಸಿಕೊಂಡು ಕಾಲ್ ಮಾಡಿದೆವು. ನಿಮ್ಮಿಂದ ನಮಗೆ ಬೇಕಾದ ಮಾಹಿತಿ ಸಿಗಲಿಲ್ಲ. ಕೊನೆಗೆ ನಾನು ಬಟ್ಟೆ ಕೊಂಡುಕೊಳ್ಳುವ ನೆಪದಿಂದ ಅಂಗಡಿಗೆ ಬಂದು ಕಾದೆ. ಮಧ್ಯಾಹ್ನದ ಹೊತ್ತು ಕೊಲೆಗಾರ ನಿಮ್ಮ ಮೊಬೈಲ್‍ನಿಂದ ಕರೆ ಮಾಡ್ತಾ ಇದ್ದ... ಹಾಗೆ ಮುಂದುವರಿಯಿತು ತನಿಖೆ""ಅಂದ್ರೆ... ನೀವು ಹೇಳ್ತಾ ಇರೋದು ಕೊಲೆಗಾರ ಇಲ್ಲೇ ಇದ್ದಾನೇಂತನಾ?"ಅಧಿಕಾರಿ ಶ್ರೀವಿದ್ಯಾಳ ಕಡೆಗೆ ತೀಕ್ಷ್ಣ ನೋಟ ಬೀರಿ ನಕ್ಕ. ಅವಳು ಕಂಪಿಸಿದಳು!"ಹೌದು""ಕೊಲೆ ಮಾಡೋ ಉದ್ದೇಶವೇನಿತ್ತು?""ಹೆಣ್ಣಿನ ಸಂಗ ಬೇಕಿತ್ತು! ಆ ಹುಡುಗಿ ಒಪ್ಲಿಲ್ಲ... ಅದಕ್ಕೆ...""ಯಾರಾತ... ಕೊಲೆ ಮಾಡಿರೋನು?" ತಲೆ ಚಿಟ್ಟು ಹಿಡಿದವರಂತೆ ಕಿರುಚಿದ ಪನ್ನಾಲಾಲ್. ಅಧಿಕಾರಿ ಎದ್ದು ನಿಂತು ಹೊರಗೆ ದೃಷ್ಟಿ ಹಾಯಿಸಿದ. ಕೆಲಸದವರೆಲ್ಲಾ ಪನ್ನಾಲಾಲ್‍ನ ಕಡೆಗೆ ನೋಡುತ್ತಿದ್ದರು!ಅಧಿಕಾರಿ ಏಕಾಏಕಿ ಓಡು ನಡುಗೆಯಲ್ಲಿ ಹೊರಗೆ ಬಂದ. ಬಾಗಿಲ ಮರೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ತಟ್ಟನೆ ಹಿಡಿದು ನಿಲ್ಲಿಸಿದ!ಪನ್ನಾಲಾಲ್‍ಗೆ ಆಶ್ಚರ್ಯ! ಶ್ರೀವಿದ್ಯಾ ಬೆದರು ನೋಟ ಬೀರಿದಳು. ಚರಣ್ ಅಧಿಕಾರಿಯ ಕೈಗೆ ಸಿಕ್ಕಿ ಬಿದ್ದಿದ್ದ!!ಶ್ರೀವಿದ್ಯಾ ನೆಮ್ಮದಿಯ ನಿಟ್ಟುಸಿರಿಟ್ಟು ಪನ್ನಾಲಾಲ್‍ನನ್ನು ಗಟ್ಟಿಯಾಗಿ ಹಿಡಿದುಕೊಂಡಳು.
****

Read more!

Saturday, February 14, 2009

ಬಿಳಿಕಾಗೆ (ಕಥೆ)


ಮಧ್ಯಾಹ್ನದ ಊಟ ಮುಗಿಸಿ, ಚೇರ್‍‍ನಲ್ಲಿ ಹಿಂದಕ್ಕೊರಗಿ ಕುಳಿತಿದ್ದ ಸೊನಾಲಿ ಅಂತರ್ಜಾಲದ ಪುಟಗಳ ಮೇಲೆ ಕಣ್ಣಾಡಿಸಿದಳು. ಕಂಪ್ಯೂಟರ್‍‍ನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಂಡು ಸೋಜಿಗದಿಂದ ಮತ್ತೊಮ್ಮೆ ಓದಿಕೊಂಡಳು. ಅವಳ ನಿರೀಕ್ಷೆಗೂ ಮೀರಿದ ವಾಕ್ಯ ಅದು. ಕೂಡಲೆ ಪರದೆಯನ್ನು ಮುಚ್ಚಿ, ಅತ್ತಿತ್ತ ದೃಷ್ಟಿ ಹಾಯಿಸಿದಳು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದ ಮೇಲೆ ಸಮಾಧಾನವೆನಿಸಿತು. ಯಾರೋ ಕುಚೋದ್ಯಕ್ಕೆ ಕಳುಹಿಸಿದ ಇ-ಮೇಲ್ ಅದು! ಆದರೆ ಸ್ಪಷ್ಟವಾಗಿ ಬರೆದಿತ್ತು. `ಸೊನಾಲಿ, ಸಂಜೆ ಆಫೀಸು ಮುಗಿಸಿ ನೇರವಾಗಿ ಟಾರಸಿಗೆ ಬಾ. ಹೇಳಿದಷ್ಟು ಮಾಡದಿದ್ದರೆ ಪರಿಣಾಮ ನೆಟ್ಟಗಾಗಿರೋದಿಲ್ಲ' ಅದನ್ನು ನೆನೆಯುತ್ತಲೇ ಅಂಗೈ ಕೂಡ ಬೆವರಿತು.

ಈ ಹೊತ್ತಿನಲ್ಲಿ ತಾನು ಇ-ಮೇಲ್ ತೆರೆದು ನೋಡುವ ವಿಷಯ ಗೊತ್ತಿರುವುದು ಕೆಲವರಿಗೆ ಮಾತ್ರ. ಅದರಲ್ಲೂ ಮೀಸೆ ಬೋಳಿಸಿ, ಹೆಣ್ಣಿನ ವೇಷ ತೊಡಿಸಿದ ಹಾಗಿರುವ ಕಂಪ್ಯೂಟರ್‍‍ನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವ ಹೆಣ್ಣು ವಾಸಂತಿಗೆ! ಆ ವಿಷಯದಲ್ಲಿ ತನಗಿಂತ ಬೇರೆಯವರಿಗೆ ಹೆಚ್ಚು ತಿಳಿಯಬಾರದು ಅನ್ನುವ ಸಣ್ಣ ಬುದ್ಧಿಯ ಹೆಣ್ಣು ಅವಳು. ಅಂತರ್ಜಾಲ ನೋಡುವುದೇ ದೊಡ್ಡ ಅಪರಾಧವೆಂದು, ಆ ವಿಷಯವನ್ನು ಮೇಲಧಿಕಾರಿಗೂ ತಿಳಿಸಿದ್ದಳು. ಸ್ವಂತ ಬುದ್ಧಿ ಇಲ್ಲದ ಮೇಲಧಿಕಾರಿ ವಾಸಂತಿಯ ಮಾತನ್ನು ಕೇಳಿ, ಸೋನಾಲಿಯನ್ನು ಕರೆದು ಚೆನ್ನಾಗಿ ಬೈದಿದ್ದ. ಹೆಣ್ಣು ವೇಷದ ಹೆಣ್ಣಿನಂತೆ ಹಲ್ಲು ಪ್ರದರ್ಶಿಸಿ ಅಧಿಕಾರಿಯ ಮನಸ್ಸು ಗೆಲ್ಲುತ್ತಿದ್ದರೆ ಸುಮ್ಮನಿರುತ್ತಿದ್ದನೇನೋ?ಅವಳೇ ಏಕೆ ಈ ಪತ್ರವನ್ನು ಕಳುಹಿಸಿರಬಾರದು. ಸೊನಾಲಿ ಎದ್ದು ಒಮ್ಮೆ ಅತ್ತ ನೋಡಿದಳು. ಹೊಟ್ಟೆಕಿಚ್ಚಿನ ಹೆಣ್ಣು ಅಲ್ಲಿರಲಿಲ್ಲ. ಮೇಲ್ ಕಳುಹಿಸಿದವರು ಯಾರು? ಇಷ್ಟಕ್ಕೂ ಟಾರಸಿಯ ಮೇಲೆ ಬರುವಂತೆ ತನ್ನನ್ನು ಕರೆದಿರುವುದು ಏಕೆ? ಟಾರಸಿಯ ಮೇಲೆ ಬರುವಂತೆ ಕರೆದಿರುವುದರಿಂದ ಇಲ್ಲಿಯೇ ಯಾರದೋ ಕೈವಾಡ! ಅನುಮಾನ ಬಲವಾಯಿತು. ಪ್ರತಿಯೊಂದು ಮೇಜಿನ ಮುಂದೆ ಕುಳಿತಿರುವ ವ್ಯಕ್ತಿಯ ಮೇಲೆ ಸಂಶಯದ ನೋಟ ಹರಿಸಿದಳು. ಯಾರ ಮೇಲೂ ಗಾಢವಾದ ಅನುಮಾನ ಸುಳಿಯಲಿಲ್ಲ.ತಟ್ಟನೆ ನೆನಪಾಯಿತು. ಎರಡು ದಿವಸಗಳ ಹಿಂದೆ ಹೀಗೆ ಟಾರಸಿ ಹತ್ತಿ ಹೋಗಿದ್ದನ್ನು ಯಾರೋ ಗಮನಿಸಿದ್ದಾರೆ. ಆ ಕಿಡಿಗೇಡಿಗಳದ್ದೇ ಕೆಲಸ.ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದ ವಿಷಯ ಮನಸ್ಸನ್ನೂ ಆಕರ್ಷಿಸಿತ್ತು. ಎದುರಿಗೆ ಗಗನಕ್ಕೆ ಮುಖವೆತ್ತಿ ನಿಂತಿರುವ ನಕ್ಷತ್ರ ಹೋಟೇಲು ಅದು. ಅಲ್ಲಿ ಮೂರನೇ ಅಂತಸ್ತಿನಲ್ಲಿ, ಅಂದರೆ ಆಫೀಸಿನ ಕಟ್ಟಡದ ಟಾರಸಿಯ ನೇರಕ್ಕೆ ಸಿನೆಮಾನದ ಶೂಟಿಂಗ್! ಅದು ಶುಭಾಶ್ರೀ ತಿಳಿಸಿದ ಸಂಗತಿ. ಕುತೂಹಲಕ್ಕೆ ಟಾರಸಿ ಹತ್ತಿ ಹೋದಾಗ ಕ್ಯಾಮರಾ ಮೆನ್‍ನ ಕಣ್ಣು ತನ್ನ ಮೇಲೆ ಸುಳಿದಿದ್ದರ ಅರಿವಿರಲಿಲ್ಲ. ಸಂಜೆಯ ಹೊತ್ತು ಆಫೀಸು ಮುಗಿಸಿ ಕೆಳಗಿಳಿದು ಬರುವಾಗ ಕಾದು ನಿಂತಿದ್ದ!ಸೊನಾಲಿ ಸೀರೆಯ ಸೆರಗನ್ನು ಹಾರಿಸಿಕೊಂಡು ರಸ್ತೆಗಿಳಿದಾಗ ಧುತ್ತೆಂದು ಎದುರು ಬಂದು ನಿಂತ. ತಲೆಯ ಮೇಲೆ ಮಧ್ಯಾಹ್ನ ಕಂಡಿದ್ದ ಬಿಳಿಯ ಟೊಪ್ಪಿ ಮಾಯವಾಗಿತ್ತು. ಅವನನ್ನು ಗುರುತಿಸುವುದು ಕಷ್ಟವಾಯಿತು."ಕ್ಷಮಿಸಿ, ನೇರವಾಗಿ ಹೇಳ್ತೀನಿ. ಈ ತಿಳಿ ಗುಲಾಬಿ ರಂಗಿನ ಸೀರೆಯಲ್ಲಿ ಯಾವ ನಾಯಕಿಗಿಂತಲೂ ನೀವು ಕಡಿಮೆಯಿಲ್ಲ. ನಿಮಗೆ ಸೌಂದರ್ಯ ಒಂದು ವರವಾಗಿದೆ. ಅದನ್ನು ಬಳಸಿಕೊಳ್ಳಿ" ಏಕಾಏಕಿ ಪ್ರಶಂಸೆಯ ಮಾತನಾಡಿ ಅವಳ ಚಿತ್ತವನ್ನು ಕದಡಿದ್ದ.ಸೇಲಂಗೆ ಹೋಗಿ ಬರುತ್ತೇನೆಂದ ಪ್ರಮೀಳಾ ಮಧುರೈವರೆಗೂ ಹೋಗಿ ತನಗಾಗಿ ತಂದಿದ್ದ ಗುಲಾಬಿ ರಂಗಿನ ಸೀರೆ ಅದು. ಆಫೀಸಿಗೆ ಬೇಗನೆ ಹೊರಟಿದ್ದಕ್ಕೆ ಸೀರೆಯುಟ್ಟು, ಅದಕ್ಕೊಪ್ಪುವ ಸ್ಲೀವ್ ಲೆಸ್ ಕುಪ್ಪಸ ತೊಟ್ಟು, ಅದೇ ಬಣ್ಣದ ಗುಲಾಬಿ ಹೂವನ್ನು ತುರುಬಿಗೆ ಸಿಕ್ಕಿಸಿದ್ದು, ತಾನು ಇಷ್ಟೊಂದು ಆಕರ್ಷಕವಾಗಿ ಕಾಣಲು ಸಾಧ್ಯವಾಗಿದ್ದೇ?"ಅನಗತ್ಯ ಹೊಗಳ್ತಾ ಇದ್ದೀರಿ. ಇಷ್ಟಕ್ಕೂ ನೀವು ಯಾರು?" ಅನುಮಾನದ ನೋಟ ಅವನತ್ತ ಹರಿಸಿ ಕೇಳಿದಳು. ಅವನು ತುಂಬಾ ಚೆನ್ನಾಗಿ ನಕ್ಕಿದ್ದ."ನೀವು ನನ್ನ ಗಮನಿಸಲಿಲ್ಲ ಅನ್ನಿ. ಇವತ್ತು ಮಧ್ಯಾಹ್ನ ನಿಮ್ಮನ್ನು ಟಾರಸಿಯ ಮೇಲೆ ನೋಡಿದೆ. ನನ್ನ ಕ್ಯಾಮರಾ ನಿಮ್ಮ ರೂಪವನ್ನು ಹಿಡಿದಿಟ್ಟಿದೆ. ಜೊತೆಗೆ ನನ್ನ ಕಣ್ಣೂ..." ಅವನ ಮಾತು ಉಪೇಕ್ಷೆಯೆನಿಸಿತು. ಅವಳು ಕಣ್ಣುಗಳನ್ನು ಅರಳಿಸಿ ಅಷ್ಟೇ ಮುಗ್ಧತೆಯಿಂದ ಕೇಳಿದಳು."ನೀವು... ಸಿನಿಮಾದವರು...?" ಏನನ್ನೋ ಹುಡುಕುವ ನೋಟ ಅವಳದ್ದಾಗಿತ್ತು. ಸಿನಿಮಾದವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದಳಷ್ಟೆ. ಹೀಗೆ, ನೇರವಾಗಿ ನೋಡಿರಲಿಲ್ಲ. ಅದೇ ಕುತೂಹಲ ಅವಳನ್ನು ಆ ಸುಡು ಬಿಸಿಲಿನಲ್ಲಿಯೂ ಟಾರಸಿಯ ಮೆಟ್ಟಿಲುಗಳನ್ನು ಏರುವಂತೆ ಪ್ರಚೋದಿಸಿದ್ದು."ಹೌದು" ಅವನು ಒಪ್ಪಿಕೊಂಡು ನುಡಿದ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಮುಗಿದು ಹೋಗುತ್ತದೆ ಅನ್ನುವ ಸತ್ಯವನ್ನು ಹೇಳಿದ್ದ. ಜೊತೆಗೆ ಅವಳಿಗೆ ಸಿನಿಮಾದಲ್ಲಿ ಅವಕಾಶವನ್ನು ನೀಡುವ ದೊಡ್ಡ ಮನಸ್ಸೂ ಮಾಡಿದ್ದ. ಆದರೆ ಅನಾಯಾಸವಾಗಿ ಬಂದ ಅವಕಾಶವನ್ನು ನಿರಾಕರಿಸಿದ್ದಳು. ಸಿನಿಮಾದಲ್ಲಿ ಅಭಿನಯಿಸುವುದು ಪ್ರತಿಷ್ಟೆಯ ಕೆಲಸವಲ್ಲ. ಹೀಗೆ ಆಫೀಸಿನಲ್ಲಿ ಕೆಲಸ ಮಾಡಿಕೊಂಡು ತಿಂಗಳ ಕೊನೆಗೆ ಸಂಬಳ ಎಣಿಸುವುದೇ ಸಂತೋಷದ ವಿಷಯ ಎಂದು ಚಿಂತಿಸುವ ಸಾಮಾನ್ಯ ಹುಡುಗಿಯೊಬ್ಬಳ ಅಭಿಮತದಂತೆ ಅವಳದ್ದೂ ಆಗಿತ್ತು. ಅದನ್ನು ಅವನಿಗೆ ಹೇಳಿಯೂ ಇದ್ದಳು. ಸೌಂದರ್ಯಕ್ಕೆ ಮಾರುಹೋದವನು ಭರವಸೆಯ ಮಾತುಗಳನ್ನು ಹೇಳಿ ಅವಳಿಂದ ಸಂಕ್ಷಿಪ್ತ ಪಟ್ಟಿಯನ್ನು ಪಡೆದುಕೊಂಡಿದ್ದ."ಮುಂದೆ ಅಗತ್ಯವಾಗಿಯೂ ನಿಮಗೆ ಒಳ್ಳೆಯ ಕೆಲಸವನ್ನು ಕೊಡಿಸುವೆ" ಅವನು ಭರವಸೆಯಿತ್ತಿದ್ದ.ಆದರೆ ಶೂಟಿಂಗ್ ಪ್ಯಾಕ್ ಅಪ್ ಆಗಿ ಒಂದೆರಡು ತಿಂಗಳುಗಳು ಕಳೆದರೂ ಅವನಿಂದ ಉತ್ತರವಿರಲಿಲ್ಲ. ಆತನ ವಿಷಯ ಅಪರೂಪಕ್ಕೊಮ್ಮೆ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅಷ್ಟಕ್ಕೇ ಸಿನಿಮಾದವರ ಮೇಲಿದ್ದ ಅಲ್ಪಸ್ವಲ್ಪ ಒಳ್ಳೆಯ ಭಾವನೆಯೂ ಹೋಗಿತ್ತೆನ್ನುವಾಗ ಪತ್ರ ಕಳುಹಿಸಿದ್ದ.ಕುಲುಮನಾಲಿಯ ಸುಂದರ ತಾಣಗಳಲ್ಲಿ ಬಿಡುವಿಲ್ಲದ ಚಿತ್ರೀಕರಣದಿಂದಾಗಿ ಸಂಪರ್ಕವಿಟ್ಟುಕೊಳ್ಳಲು ಸಾಧ್ಯಾವಾಗಿಲ್ಲದಕ್ಕೆ ಕ್ಷಮಾಪಣೆಯನ್ನು ಕೇಳಿ ಬರೆದಿದ್ದ ಪತ್ರ ಅದು. ಜೊತೆಗೆ ಮುಂದಿನ ವಾರ ಅವಳನ್ನು ಭೇಟಿಯಾಗುವುದಕ್ಕೆ ಬರುತ್ತಿರುವುದಾಗಿ ತಿಳಿಸಿದ್ದ. ಅವಳು ಕಾದಿದ್ದೆ ಬಂತು. ಅವನು ಮತ್ತೆ ಶೆಡ್ಯೂಲ್ ಬದಲಾಗಿದೆಯೆಂದು ಪತ್ರ ಕಳುಹಿಸಿ ನಿರಾಶೆಗೊಳಿಸಿದ್ದ.ಶುಭಾಶ್ರೀ ಆ ದಿನ ಮಂಕಾಗಿದ್ದ ಸೊನಾಲಿಯನ್ನು ಆಫೀಸಿನ ಕಿಟಕಿಯ ಪಕ್ಕ ಕರೆದೊಯ್ದಿದ್ದಳು."ನೋಡಲ್ಲಿ ಬಿಳಿಕಾಗೆ" ತೋರು ಬೆರಳನ್ನು ಮುಂದಕ್ಕೆ ಹಿಡಿದು ಹೇಳಿದಳು.ಸೊನಾಲಿಗೆ ಗೆಳತಿಯ ಮಾತು ಕೇಳಿ ಆಶ್ಚರ್ಯ.ಬಿಳಿಕಾಗೆ!ಅವಳು ಕಟ್ಟಡಗಳ ಅಂಚಿಗೆಲ್ಲಾ ದೃಷ್ಟಿ ಹಾಯಿಸಿ ನೋಡಿದರೂ ಎಲ್ಲೂ ಕಾಣಿಸಲಿಲ್ಲ. ಬಿಳಿಕಾಗೆ ಇದೆಯೆಂದು ನಂಬಿದ್ದೆ ತನ್ನ ಮೂರ್ಖತನ. ಗೆಳತಿಗೆ ಬೈದು ಹಿಂದಕ್ಕೆ ಹೊರಳಿದಳು.ಶುಭಾಶ್ರೀ ಬಿಡಲಿಲ್ಲ. ಕುತೂಹಲ ತೋರಿಸುವೆನೆಂದು ಅವಳನ್ನು ಎಳೆದುಕೊಂಡು ಟಾರಸಿಯಲ್ಲಿ ನಿಲ್ಲಿಸಿದಳು. ಮೂರಂತಸ್ತಿನ ಕೆಳಗೆ ಕಿಟಕಿಯ ಪಕ್ಕ ನಿಂತು ಎತ್ತಲೋ ನೋಡುತ್ತಿತ್ತು ಬಿಳಿಕಾಗೆ! ಕಾಕ ದೃಷ್ಟಿ ಟಾರಸಿಯಲ್ಲಿ ನಿಂತಿದ್ದ ಇಬ್ಬರತ್ತಲೂ ಸುಳಿದಾಗ, ಶುಭಾಶ್ರೀ ಪಕ್ಕಕ್ಕೆ ಸರಿದರೆ, ಸೊನಾಲಿ ಪೂರ್ತಿಯಾಗಿ ಗೋಚರಿಸಿದಳು. ಏನೂ ಮಾಡಲಾಗದೆ ಹಾಗೆ ನಿಂತಿದ್ದಳು. ಬಿಳಿಕಾಗೆ ಕೈ ಎತ್ತರಿಸಿ ಸಂಜ್ಞೆ ಮಾಡಿತು.ಹಿಂದಕ್ಕೆ ಜಿಗಿದ ಸೊನಾಲಿ ಗೆಳತಿಯ ತಲೆಗೊಂದು ಮೊಟಕಿದಳು."ಮೋಸ ಮಾಡ್ದೆ ನೀನು... ಹೀಗಂತ ಗೊತ್ತಿದ್ರೆ ನಾನು ಅಲ್ಲಿಗೆ ಬರ್‍ತಾ ಇರ್‍ಲಿಲ್ಲ. ನಿನ್ನದು ಅತಿಯಾಯ್ತು" ಗೆಳತಿಯತ್ತ ಸಿಡುಕು ತೋರಿಸಿ ಕೆಳಗಿಳಿದು ಬಂದಳು.ತನ್ನ ಸೀಟ್‍ನಲ್ಲಿ ಕುಳಿತು ತಲೆಗೆ ಕೈ ಹಚ್ಚಿದಳು. ಶುಭಾಶ್ರೀಯ ತುಂಟತನಕ್ಕೆ ಯಾವ ತೊಂದರೆಯನ್ನು ಎದುರಿಸಬೇಕೋ? ತಿಳಿಯದೆ ಕಂಗಾಲಾಗಿದ್ದಳು."ಆ ಬಿಸಿಲಿಗೆ ಟಾರಸಿಯಲ್ಲಿ ನಿಲ್ಲೋದನ್ನು ಬಿಡುವುದಿಲ್ಲ ನೀವು" ನಕ್ಕು ಹೇಳಿದವನ ಮಾತಿಗೆ ಬೆಚ್ಚಿ, ಎದ್ದು ನಿಂತಳು.ಹಿತೇಶ ನಿಂತಿದ್ದ. ಸದಾ ಕ್ಯಾಮರಕ್ಕೆ ಕಣ್ಣು ಹಚ್ಚಿ, ತನ್ನನ್ನು ತಾನು ಅದರ ಜೊತೆಗೆ ಹೊಂದಿಸಿಕೊಂಡಿದ್ದ ಸಿನಿಮಾದ ವ್ಯಕ್ತಿ; ಹೀಗೆ ಏಕಾಏಕಿ ಬಂದು ನಿಲ್ಲುವನೆನ್ನುವ ನಿರೀಕ್ಷೆಯನ್ನೂ ಅವಳು ಮಾಡಿರಲಿಲ್ಲ."ತಲೆಗೆ ಕೈ ಹಚ್ಚಿಕೊಂಡಿದ್ರಿ, ತಲೆ ನೋವೆ? ಈ ಸುಡು ಬಿಸಿಲಿಗೆ ಟಾರಸಿಯ ಮೇಲೆ ನಿಂತ್ರೆ ಮತ್ತೇನು ಬರುತ್ತೆ?" ವ್ಯಂಗ್ಯವಾಗಿರಲಿಲ್ಲ ಮಾತು.ಸೊನಾಲಿಗೆ ಅವನನ್ನು ವಿಚಾರಿಸುವಷ್ಟು ಕೂಡ ವಿವೇಕವಿರಲಿಲ್ಲ. ಅವಳ ಸಹಾಯಕ್ಕೆ ಶುಭಾಶ್ರೀಯೇ ಬರಬೇಕಾಯಿತು. ನಿಂತೇ ಇದ್ದ ಅವನನ್ನು ಕುಳಿತುಕೊಳ್ಳುವಂತೆ ಹೇಳಿದ ಶುಭಾಶ್ರೀ, ಸೊನಾಲಿಯತ್ತ ತಿರುಗಿ ಕಣ್ಣು ಮಿಟುಕಿಸಿದಳು."ಸಿನಿಮಾವೆಂದ್ರೆ ಜೀವ ಬಿಡ್ತೀಯಾ. ಇವರು ಸಿನಿಮಾದವರೆ. ಸ್ಟಾರ್ ಹೋಟೇಲ್‍ನಲ್ಲಿ ಶೂಟಿಂಗ್ ಆಗ್ತಿತ್ತು ನೆನಪಿದೆಯಾ? ಅದರ ಕ್ಯಾಮರಾಮನ್ ಹಿತೇಶ್ ಅಂತ" ಅವಳು ಎದುರಿಗಿದ್ದವನನ್ನು ಪರಿಚಯಿಸುವಾಗ ಸೊನಾಲಿ ಮುಖದಲ್ಲಿ ನಗು ತಂದುಕೊಂಡಳು.ಹಿತೇಶ ಹೀಗೆ ಎರಡು ಮೂರು ಬಾರಿ ಬಂದಿದ್ದ. ಅವನ ಒಡನಾಟ ಮುಂದೆ ಪ್ರೀತಿಸುವಲ್ಲಿಯವರೆಗೂ ತಲುಪಿತು. ಪ್ರೀತಿ ಪರಾಕಾಷ್ಠೆ ತಲುಪಿದಾಗ ಹಿತೇಶ ಹೇಳ ಹೆಸರಿಲ್ಲದೆ ದೂರವಾದ. ಅವನಿಗೇನು ಒಡಕು ಕಂಡಿತೋ? ಸೊನಾಲಿಯ ಎದೆಯಲ್ಲಿಯೂ ನೋವಿನ ಬಡಿತ. ಅದಕ್ಕೆ ಬರೆಯೆಳೆಯುವಂತೆ ಬಿಳಿಕಾಗೆ ಅವಳ ಹಿಂದೆ ಬಿದ್ದಿತ್ತು.ಒಮ್ಮೆ ಮೇಲಧಿಕಾರಿ ಅವಳನ್ನು ಕರೆದು ವಿಚಾರಿಸಿದ."ಹೀಗೆ ಮಂಕಾಗಿ ಕೂತ್ರೆ ಕೆಲಸ ಸಾಗೋದಿಲ್ಲ. ಇಲ್ಲಿ ಮನಸ್ಸಿಲ್ಲದಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡು" ಪದೇ ಪದೇ ಒತ್ತಾಯಿಸಿದಾಗ ಕಣ್ಣೀರಿಟ್ಟು ಕ್ಷಮೆ ಕೇಳಿ ಹೊರಗೆ ಬಂದಿದ್ದಳು. ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಅವಳನ್ನು ದಿನಾ ಗೋಳು ಹೊಯ್ಸಿಕೊಂಡ. ಸುಲಭವಾಗಿ ಯಾವುದಕ್ಕೂ ಒಪ್ಪದ ಅವಳನ್ನು ಮೇಲ್ ಮಾಡಿ ಹೆದರಿಸಿದ್ದು ಇದೆ. ಈಗ ಟಾರಸಿಗೆ ಕರೆದಿರುವುದು ಕೂಡ ಅವನೇ!? ಅನುಮಾನ ಬಲವಾಯಿತು.ಶುಭಾಶ್ರೀಯನ್ನು ಕರೆದು ಮೇಲ್‍ನ ವಿಷಯವನ್ನು ತಿಳಿಸಿದಳು. ಮೇಲ್ ಐಡಿ ಕೂಡ ಯಾರದೋ ಏನೋ? ಅವಳ ಮುಖದಲ್ಲಿಯೂ ಗೊಂದಲವಿತ್ತು. ಅದನ್ನು ನಿರಾಕರಿಸಿದಳು. ಆದರೆ ಇನ್ನೊಂದು ವಿಷಯ ಸ್ಪಷ್ಟವಾಗಿತ್ತು. ಬಿಳಿಕಾಗೆಗೆ ಪಾರಿವಾಳಗಳ ಬೆನ್ನಟ್ಟುವ ಬಲಹೀನತೆ. ಯಾವುದೋ ಪಾರಿವಾಳದ ಜೊತೆಗೆ ಸುತ್ತಾಡುವುದಕ್ಕೆ ಹೋಗಿತ್ತು ಕಾಗೆ."ಬಿಳಿಕಾಗೆ ಮೇಲೆ ನಂಗೆ ಅನುಮಾನ. ನಿನಗೆ ಮೇಲ್ ಕಳುಹಿಸಿ ಕಾಗೆ ಎಲ್ಲೋ ಹಾರಿ ಹೋಗಿದೆ. ಇವತ್ತು ಅಲ್ಲಿ ಕಾಣಿಸ್ತಿಲ್ಲ" ಕಿಟಿಕಿಯ ಪಕ್ಕಕ್ಕೆ ನಿಂತು ಉದ್ಗಾರವೆಳೆದ ಶುಭಾಶ್ರೀಯ ಮಾತಿಗೆ ಕೆಂಡ ತುಳಿದಂತಾಯಿತು. ಕಾಕ ದೃಷ್ಟಿ ತನ್ನ ಮೇಲೆ?"ಏನಾದರಾಗಲಿ ಧೈರ್ಯವಾಗಿ ಹೋಗು. ನಾನು ಬರಬೇಕೆಂದಿದ್ದೆ. ಆದರೆ ಇವತ್ತು ಸಾಧ್ಯವಿಲ್ಲ. ಸಂದೇಶ್ ನನಗಾಗಿ ಬಿಗ್ ಬಜಾರ್‍‍ನಲ್ಲಿ ಕಾಯ್ತಿರ್‍ತಾನೆ. ಬೇಕಾದಲ್ಲಿ ರಾಮಯ್ಯನನ್ನು ಕರೆದುಕೊಂಡು ಹೋಗು" ಗೆಳತಿಯ ಮಾತಿಗೆ ಬೆದರು ಕಣ್ಣುಗಳನ್ನು ಮತ್ತಷ್ಟು ತೆರೆದಳು. ವಿಷಯ ಸಂಪೂರ್ಣ ತಿಳಿಯದೆ ಸುದ್ದಿ ಹರಡುವುದು ಬೇಡವಾಗಿತ್ತು."ಬೇಡ, ನಾನೇ ನಿಭಾಯಿಸ್ತೀನಿ" ಮೊಂಡು ಧೈರ್ಯ ತಂದುಕೊಂಡು ಸಂಜೆ ಆಫೀಸು ಮುಗಿಯುತ್ತಲೇ ನಡುಗುವ ಹೆಜ್ಜೆಗಳನ್ನು ಟಾರಸಿಯ ಮೆಟ್ಟಿಲುಗಳತ್ತ ಹೊರಳಿಸಿದಳು.ಟಾರಸಿಯ ಮೇಲೆ ಬಂದಾಗ ಸಂಜೆಯ ಸೂರ್ಯ ಕೆಂಪಗೆ ಮುಖ ಮಾಡಿದ್ದ. ಗಗನಚುಂಬಿ ಕಟ್ಟಡಗಳ ನೆರಳು ಟಾರಸಿಯ ಮೇಲೆ ಬಿದ್ದಿತ್ತು. ಸುತ್ತಲೂ ದೃಷ್ಟಿ ಹಾಯಿಸಿದವಳಿಗೆ ಯಾರೂ ಕಾಣಿಸದಿದ್ದದ್ದು ಸೋಜಿಗವೆನಿಸಿತು. ಇದು ತನ್ನ ಅವಿವೇಕಿತನ. ಯಾರದೋ ಸುಳ್ಳು ಮೇಲ್ ನೋಡಿ ಇಲ್ಲಿಗೆ ಬಂದ ತಾನೆಂಥವಳು?ಹಿಂದಕ್ಕೆ ತಿರುಗಿ ಹೆಜ್ಜೆ ಎತ್ತಿಟ್ಟವಳನ್ನು ನಿಲ್ಲಿಸಿತು ಕಾಗೆಯ ಕೂಗು. ತಟ್ಟನೆ ನಿಂತು ಉಸಿರು ಬಿಗಿ ಹಿಡಿದಳು. ಕಾಲ ಬುಡದಲ್ಲಿಯೇ ಅಂಗಾತವಾಗಿ ಬಿದ್ದಿತ್ತು ಬಿಳಿಯ ಕಾಗೆ!ಅವಳ ಬಾಯಿಯಿಂದ ಚಿತ್ಕಾರ ಹೊರಟಿತು!
***
ಜನ ನಿಬಿಡ ಪ್ರದೇಶದ ಅತಿ ವಾಹನ ಸಂಚಾರದ ರಸ್ತೆಯನ್ನು ಮಿಂಚಿನ ವೇಗದಲ್ಲಿ ದಾಟಿ, ಜನಜಂಗುಳಿಯ ನಡುವೆ ಸೇರಿಕೊಂಡ ಸೊನಾಲಿಗೆ ಕೈ ಗಡಿಯಾರವನ್ನು ನೋಡುವಷ್ಟೂ ಸಮಯವಿರಲಿಲ್ಲ. ಬೆಳಗ್ಗೆ ಬೇಗನೆ ಎದ್ದು ಹೊರಟಿದ್ದರೂ ಸಮಯಕ್ಕೆ ಸರಿಯಾಗಿ ಬರದ ಬಸ್ಸು, ಅವಳಲ್ಲಿ ಆತಂಕವನ್ನು ಸೃಷ್ಟಿಸಿತು. ಇನ್ನು ಅರ್ಧ ಗಂಟೆಯಲ್ಲಿ ಗಮ್ಯ ತಲುಪುವುದು ಸಾಧ್ಯವೆ? ಅನುಮಾನ ಬಲವಾಯಿತು. ಆದರೆ ಹಿಂದೆ ಸರಿಯುವಂತೆ ಇಲ್ಲ. ಅದು ಬದುಕಿನಲ್ಲಿ ಬಹು ನಿರೀಕ್ಷೆಯಿಂದ ಮುಂದಿಟ್ಟ ದೊಡ್ಡ ಹೆಜ್ಜೆ.ಅವಳು ಸುಸಜ್ಜಿತವಾದ ಹೊಟೇಲನ್ನು ತಲುಪುವಾಗ ಮುಖದ ಮೇಲೆ ಬೆವರು ಇಳಿಯುತ್ತಿತ್ತು. ಸಂದರ್ಶನ ನಡೆಯುವ ಕೋಣೆಯನ್ನು ತಲುಪುವಾಗ ಅಲ್ಲಿ ಸಣ್ಣದೊಂದು ಸರತಿಯ ಸಾಲು ನಿಂತಿತ್ತು. ಅವಳು ಬ್ಯಾಗ್‍ನಲ್ಲಿದ್ದ ಕಾಗದ, ಪತ್ರಗಳನ್ನು ತೆಗೆದು ಸರದಿಯ ಕೊನೆಯಲ್ಲಿ ತಾನೂ ಸೇರಿಕೊಂಡಳು. ಸರದಿಯಲ್ಲಿ ನಿಂತಿರುವವರು ಯಾಕಾಗಿ ನಿಂತಿರುವರೆಂಬ ಅರಿವು ಅವಳಿಗಿರಲಿಲ್ಲ. ಮುಂದೆ ನಿಂತಿದ್ದ ಅಭ್ಯರ್ಥಿಯನ್ನು ಕೇಳಿದಳು."ಇದು ಸಂದರ್ಶನಕ್ಕಾಗಿ ಕಾದಿರೋ ಸರದಿಯಲ್ಲವೆ?"ಅವಳನ್ನು ಕೂಲಂಕಷವಾಗಿ ಗಮನಿಸಿದ ಅವನು ಮುಖ ಸಿಂಡರಿಸಿ ತಲೆಯಲುಗಿಸಿದ."ಇದು ಏರ್ ಹೊಸ್ಟೇಸ್ ಹುದ್ದೆಗೆ ಕಾದಿರೋ ಸರದಿ. ನೀವು...?" ಅವಳತ್ತ ಅನುಮಾನದ ನೋಟ ಹರಿಸಿದ. ಸೊನಾಲಿ ಭೂಮಿಗಿಳಿದು ಹೋದಳು. ತಾನು ತಪ್ಪು ಸಾಲಿನಲ್ಲಿ ಕಾದಿರುವೆ."ಕ್ಷಮಿಸಿ" ಅವಳು ಉತ್ತರಿಸದೆ ನೇರವಾಗಿ ಕೆಳಗಿಳಿದು ರಿಸೆಪ್ಷನ್‍ಗೆ ಬಂದಳು. ತನ್ನ ಸಂದರ್ಶನದ ಆಹ್ವಾನ ಪತ್ರವನ್ನು ತೋರಿಸಿದಳು. ರಿಸೆಪ್ಷನ್ ಹುಡುಗಿ ಕೈ ತೋರಿಸಿದತ್ತ ನಡೆದಳು. ಕೋಣೆ ಮುಚ್ಚಿತ್ತು. ನಯವಾಗಿ ಕೋಣೆಯ ಮೇಲೆ ಬಡಿದಾಗ ಒಳಗಿನಿಂದ ದನಿ ಕೇಳಿಸಿತು. ಮೆಲ್ಲನೆ ಬಾಗಿಲು ತೆರೆದು ಒಳಗೆ ನಡೆದಳು.ಒಮ್ಮೆಲೆ ಮುಖಕ್ಕೆ ನುಗ್ಗಿದ ಹವಾನಿಯಂತ್ರಿತ ಗಾಳಿ ಮೈಯನ್ನು ಅದುರಿಸಿತು. ಒಳಗಿರಬಹುದಾಗ ವ್ಯಕ್ತಿಗಳ ಬಗ್ಗೆ ನಿರೀಕ್ಷಿಸಿದವಳಿಗೆ ಆಶ್ಚರ್ಯ. ಒಂದು ಮಧ್ಯ ವಯಸ್ಸಿನ ಹೆಣ್ಣು, ಅವಳ ಪಕ್ಕದಲ್ಲಿ ಬಿಳಿಯ ವಸ್ತ್ರವನ್ನು ಧರಿಸಿದ್ದ ಐವತ್ತರ ಅಂಚಿನ ವ್ಯಕ್ತಿ. ನೋಡಲು ವಿಚಿತ್ರವಾದ ಬಾಹ್ಯಚಹರೆ. ನೇರಕ್ಕೆ ಚಾಚಿಕೊಂಡ ಮೂಗು. ಅವನ ಉಡುಪಿಗೂ, ಮೈ ಬಣ್ಣಕ್ಕೂ ತಾಳೆಯಾಗುತ್ತಿತ್ತು. ಅವಳು ಕೈ ಜೋಡಿಸಿದಳು. ಬಿಳಿಯ ವಸ್ತ್ರದ ವ್ಯಕ್ತಿ ಕನ್ನಡಕದ ಒಳಗಿನಿಂದ ಅವಳನ್ನು ಗಮನಿಸಿದ.ಅವಳು ಕೈಯಲ್ಲಿದ್ದ ಪತ್ರವನ್ನು ಮುಂದೆ ಹಿಡಿದಳು. ಪಕ್ಕದಲ್ಲಿ ಕುಳಿತಿದ್ದ ಮಧ್ಯವಯಸ್ಸಿನ ಹೆಣ್ಣು ಕುಳಿತುಕೊಳ್ಳುವಂತೆ ಸೂಚಿಸಿದಳು.ಆ ಹೆಣ್ಣು ಸೊನಾಲಿಯ ಅರ್ಹತಾ ಪತ್ರ, ಕಾಗದಗಳನ್ನು ಓದಿದ ಬಳಿಕ ಮೆಚ್ಚುಗೆಯಿಂದ ಅವುಗಳನ್ನು ನೇರ ಮೂಗಿನ ವ್ಯಕ್ತಿಯ ಕಡೆಗೆ ಹಿಡಿದಳು. ಅವನ ದೃಷ್ಟಿ ಸೊನಾಲಿಯಿಂದ ಸರಿಯಲಿಲ್ಲ. ಕಣ್ಣುಗಳೇ ಎಲ್ಲವನ್ನೂ ಪರಿಶೀಲಿಸಿದವು. ಸೊನಾಲಿ ಮುಜುಗರದಿಂದ ಮುದುರಿಕೊಂಡಳು."ವಯಸ್ಸೇನು?" ಅನಗತ್ಯ ಪ್ರಶ್ನೆ ಎದುರಾದಾಗ ತಡವರಿಸಿತು."ಇಪ್ಪತ್ತೊಂದು""ಕೆಲಸವನ್ನು ಮಾಡುವ ಛಲವಿದೆಯಾ?""ಹೌದು""ಸರಿ, ನಾಳೆಯಿಂದ ಬರಬಹುದು"ಸಂದರ್ಶನ ಇಷ್ಟೇನಾ? ಇದಕ್ಕೆ ಇಂತಹ ನಕ್ಷತ್ರ ಹೊಟೇಲು ಅಗತ್ಯವಿತ್ತೆ? ಎದ್ದು ಹೊರಗೆ ಬಂದಳು. ಅಷ್ಟರಲ್ಲಿ ಮಧ್ಯ ವಯಸ್ಸಿನ ಹೆಣ್ಣೂ ಹೊರಗೆ ಬಂದಳು."ನಿಲ್ಲು, ಇದು ನಿನ್ನ ನಿಯುಕ್ತಿಯ ಪತ್ರ. ಇದರಲ್ಲಿರೋ ವಿಳಾಸಕ್ಕೆ ನಾಳೆ ಬಂದು ಬಿಡು. ಇಲ್ಲಿ ಶಿಸ್ತು ಮುಖ್ಯ" ಅವಳು ಕೊಟ್ಟ ನಿಯುಕ್ತಿಯ ಪತ್ರವನ್ನು ತೆಗೆದುಕೊಂಡು ರಸ್ತೆಗಿಳಿದಳು.ಮರು ದಿನ ಆ ವಿಳಾಸಕ್ಕೆ ಬಂದಾಗ ತನ್ನಂತೆ ಹಲವು ಜನ ಅಲ್ಲಿರುವುದು ಕಂಡು ನೆಮ್ಮದಿಯೆನಿಸಿತು. ಅವರ ಜೊತೆಗೆ ಕೂಡಲೇ ಬೆರೆತು ಹೋದಳು. ಅದರಲ್ಲೂ ಶುಭಾಶ್ರೀಯ ತುಂಟತನ ಅವಳನ್ನು ಬಹುವಾಗಿ ಸೆಳೆದಿತ್ತು. ನೇರ ಮೂಗಿನ ವ್ಯಕ್ತಿಯನ್ನು ಅವಳು ಕುಚೋದ್ಯಕ್ಕೆ ಕರೆಯುತ್ತಿದ್ದುದ್ದೇ ಬಿಳಿಕಾಗೆ!ಆ ಆಫೀಸಿಗೆ ಅವಳು ಬೇಗನೆ ಹೊಂದಿಕೊಂಡಿದ್ದು ಬಿಳಿಕಾಗೆಗೆ ಸಂತೋಷ ತಂದಿತ್ತು. ಆದರೆ ಬಿಳಿಕಾಗೆಯ ದೃಷ್ಟಿ ಅವಳ ಮೇಲೆ ಹರಿದಾಗ ಸೊನಾಲಿಗೆ ತಿಳಿದಿರಲಿಲ್ಲ. ಶುಭಾಶ್ರೀಯೇ ಅವಳಿಗೆ ತಿಳಿಸಬೇಕಾಯಿತು."ನೀನು ಅದೃಷ್ಟವಂತೆ, ಕಾಕ ದೃಷ್ಟಿ ನಿನ್ನ ಮೇಲೆ ಬಿದ್ದಿದೆ. ನಿನಗೆ ಅದೃಷ್ಟದ ಬಾಗಿಲು ತೆರೆದಿದೆ. ಕಾಗೆಯನ್ನು ಅಂಗೈಯಲ್ಲಿ ಹಿಡಿದು ಆಡಿಸಿ ಬಿಡು" ಕೆಣಕುವ ಮಾತಿಗೆ ಸೊನಾಲಿ ಉರಿದು ಹೋದಳು."ನಾನು ಮರ್‍ಯಾದಸ್ಥ ಮನೆಯ ಹುಡುಗಿ. ನೀನು ಬಾಯಿಗೆ ಬಂದಂತೆ ಮಾತನಾಡಿದರೆ ಕೆಲಸ ಬಿಟ್ಟು ಬಿಡ್ತೀನಿ" ಕಣ್ಣಾಲಿಗಳು ತುಂಬಿ ಬಂದಿದ್ದವು. ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಶುಭಾಶ್ರೀ ಅವಳನ್ನು ಕರೆದುಕೊಂಡು ತೆರೆದ ಹೊಟೇಲಿಗೆ ಬಂದಳು."ಕ್ಷಮಿಸು ನನ್ನ, ನೀನು ಬುದ್ಧಿ ಬೆಳೆದಿರೋ ಹುಡುಗಿ. ಇಂತಹ ಆಫೀಸಿನಲ್ಲಿ ಕೆಲಸ ಮಾಡೋವಾಗ ಅಧಿಕಾರಿಗಳ, ಅದರಲ್ಲೂ ಮಾಲೀಕನ ಪ್ರಭಾವವಿದ್ದರೆ, ನೀನು ಬದುಕಿನಲ್ಲಿ ಬಯಸಿದ್ದನ್ನು ಪಡೆದುಕೊಳ್ಳಬಹುದು"ಗೆಳತಿ ಅಂದುಕೊಂಡವಳ ಮಾತುಗಳಿಗೆ ಕಿವಿ ಮುಚ್ಚಿಕೊಳ್ಳುವ ಸ್ಥಿತಿ. ಹೆಣ್ಣು ಇಷ್ಟು ಕೆಳ ಮಟ್ಟದಲ್ಲಿ ಯೋಚಿಸಬಲ್ಲಳೇ? ಮಾವ ಕೂಡ ಇದೇ ರೀತಿ ಹೇಳಿದ್ದ."ಸೋನು, ನಿನಗೆ ದಂತದ ಹಾಗೆ ಮೈಬಣ್ಣವಿದೆ. ಜೊತೆಗೆ ಚೆಲುವೆ. ನೀನ್ಯಾಕೆ ಸಿನಿಮಾಕ್ಕೆ ಸೇರಬಾರದು?"ಕೆನ್ನೆಗೆ ಹೊಡೆಯುವಂತೆ ಅರಚಿದ್ದಳು."ನನ್ನ ಏನೂಂತ ತಿಳ್ಕೊಂಡಿದ್ದಿಯಾ? ನನ್ನ ಸೌಂದರ್ಯಾನ ಬಿಚ್ಚಿಟ್ಟು ದುಡ್ಡು ಸಂಪಾದನೆ ಮಾಡುವ ಆಲೋಚನೆಯಾ ನಿನಗೆ?"ಹಿಂದೆ ಮುಂದೆ ಯಾರೂ ಇಲ್ಲದ ನಿರ್ಗತಿಕಳೆಂದು ಉಪೇಕ್ಷೆ ಮಾಡಿದವನನ್ನು ಚೆನ್ನಾಗಿ ಚಾಳಿಸಿದ ನಂತರ ಅಲ್ಲಿ ನಿಲ್ಲದೆ ಕೆಲಸ ಹುಡುಕಿಕೊಂಡು ಪಟ್ಟಣ ಸೇರಿದಳು. ಪಟ್ಟಣ ಸೇರಿದರೂ ಅಷ್ಟೇ. ಎಲ್ಲೆಲ್ಲೂ ಕಾಕ ದೃಷ್ಟಿಯೆ. ಕೊನೆಗೆ ಒಂದು ಕೆಲಸ ಹಿಡಿಯಬೇಕಾದರೆ ಅಲೆಯದ ರಸ್ತೆಗಳಿಲ್ಲ, ತುಳಿಯದ ಮೆಟ್ಟಿಲುಗಳಿಲ್ಲ. ಎಲ್ಲೆಲ್ಲೂ ಬಾಹ್ಯಚಹರೆ, ಅಂತಸ್ತು ಇವುಗಳದ್ದೇ ಮಾನದಂಡ. ಕೊನೆಗೆ ಉಳಿದ ದಾರಿಯೊಂದೆ ಸೌಂದರ್ಯವನ್ನು ಜಮಾಯಿಸುವುದು. ಆದರೆ ಅದೇ ಒಂದು ಇಕ್ಕಟ್ಟಿನಲ್ಲಿ ಸಿಲುಕಿಸುತ್ತದೆಯೆನ್ನುವ ಅರಿವಿರಲಿಲ್ಲ.
***
ಮಧ್ಯಾಹ್ನದ ಹೊತ್ತಿಗೆ ಸಬ್ ಇನ್ಸ್‍ಪೆಕ್ಟರ್ ಸನ್ನಿಧಿ ತನ್ನ ನೀಲಿ ಮೋಟಾರು ಬೈಕಿಗೆ ಸೈಡ್ ಸ್ಟಾಂಡ್ ಹಾಕಿ ನಿಲ್ಲಿಸಿ, ಮೂರು ಅಂತಸ್ತಿನ ಕಟ್ಟಡವನ್ನು ತಲೆಯೆತ್ತಿ ನೋಡಿದ. ಅವನನ್ನು ಯಾವಾಗಲೂ ಕಾಡುವ ಅನುಮಾನವೇ ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಿದ್ದುದು. ಎರಡು ದಿನಗಳ ಹಿಂದೆ ಅದೇ ಕಟ್ಟಡವನ್ನು ಪ್ರವೇಶಿಸಿ ಎಲ್ಲರಿಂದಲೂ ಅಭಿಮತ ಸಂಗ್ರಹಿಸಿದ್ದ. ಅಷ್ಟಾಗಿಯೂ ಯಾವ ನಿರ್ಧಾರಕ್ಕೂ ಬರಲು ಸಾಧ್ಯವಾಗಲಿಲ್ಲ.ಮೆಟ್ಟಿಲುಗಳನ್ನು ಟಕಟಕನೆ ಏರಿ ಆಫೀಸಿನ ಬಾಗಿಲು ತೆರೆದು ನಿಂತ. ಅವನ ದೃಷ್ಟಿ ಸೊನಾಲಿಯ ಕಡೆಗೆ ಹರಿದು ಅಲ್ಲೇ ತಟಸ್ಥವಾಯಿತು. ಕೆಲಸದ ನಡುವೆ ತಲೆಯೆತ್ತಿದವಳ ನೋಟ ಪೆಡಂಭೂತದಂತೆ ಎದುರು ನಿಂತಿದ್ದ ಅಧಿಕಾರಿಯತ್ತ ಹೊರಳಿತು. ಭಯದ ಕರಿ ನೆರಳಿನ ಜೊತೆಗೆ ಒಂದು ಉದ್ಗಾರ ಬಾಯಿಯಿಂದ ಹೊರಗೆ ಬಿತ್ತು.ಅವಳ ಸ್ಥಿತಿಯನ್ನು ಕಂಡವನೇ ಅವಳ ಎದುರು ನಿಂತ. ಎದ್ದು ನಿಂತು ತಲೆ ತಗ್ಗಿಸಿದಳು. ಅವನು ಹ್ಯಾಟ್ ತೆಗೆದು ಕೈಯಲ್ಲಿದ್ದ ಬೆತ್ತದ ಜೊತೆಗೆ ಹಿಡಿದ."ನಿನ್ನ ಅಧಿಕಾರಿಯನ್ನು ನೋಡುವುದಿದೆ" ಅವಳ ಎದೆಯಲ್ಲಿ ಕುಟ್ಟುವ ನಿಶ್ಶಬ್ದ ಸದ್ದು ವೇಗ ಪಡೆದು ಸಶ್ಶಬ್ದವಾಯಿತು."ಅವರು... ಅವರು..." ಕ್ಯಾಬಿನ್‍ನತ್ತ ದೃಷ್ಟಿ ಹರಿಸಿದವಳಿಗೆ ಅಧಿಕಾರಿ ಕಾಣಿಸಲಿಲ್ಲ. ಪೊಲೀಸ್ ಅಧಿಕಾರಿ ಅವಳತ್ತ ಕ್ರೂರ ನೋಟ ಹರಿಸಿ ಮುಂದೆ ನಡೆದ. ಮಾಲೀಕನ ಆಪ್ತ ಸಲಹೆಗಾರ್ತಿ ಅಂಬಿಕಾ ಅವನನ್ನು ಎದುರುಗೊಂಡಳು."ನನಗೆ ಕೆಲವೊಂದು ಅನುಮಾನಗಳಿವೆ. ನಿಮ್ಮ ಕೈಯಲ್ಲಿ ಅದನ್ನು ಬಗೆಹರಿಸೋದಿಕ್ಕೆ ಸಾಧ್ಯನಾ?"ಸಲಹೆಗಾರ್ತಿ ಒಪ್ಪಿಗೆಯಿತ್ತು ಅವನನ್ನು ಒಳಗೆ ಕೂರಿಸಿದಳು."ಕೇಳಿ"ಅಧಿಕಾರಿ ಎದುರಿನ ಗೋಡೆಯತ್ತ ನೋಡುತ್ತಾ ಹ್ಯಾಟ್ ಮತ್ತು ಕೋಲನ್ನು ಮೇಜಿನ ಮೇಲಿರಿಸಿದ."ನಿಮ್ಮ ಮಾಲೀಕ ಅಂದರೆ ಭಗವಂತರಾಯರ ಹೆಣ ನೋಡಿದೋರು ಯಾರಂದ್ರಿ? ಅವರನ್ನು ಕರೆಸೋದು ಸಾಧ್ಯವೇ?"ಅಧಿಕಾರಿಯ ಮಾತಿಗೆ ತಲೆಯಲುಗಿಸಿ, ಬಜ಼ರ್ ಒತ್ತಿದಳು ಸಲಹೆಯ ಹೆಣ್ಣು. ಮರದ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದ ಅಟೆಂಡರ್ ರಾಮಯ್ಯ."ರಾಮಯ್ಯ, ಸಾರ್‍‍ಗೆ ಕುಡಿಯೋದಿಕ್ಕೆ ತಂಪು ಪಾನೀಯ ತಾ. ಹಾಗೇ ಸೊನಾಲಿನ ಒಳಗೆ ಕಳುಹಿಸು"ಅಧಿಕಾರಿಯ ಮುಖ ಗಂಭೀರವಾಗಿತ್ತು. ಅವನು ಮತ್ತೊಂದಷ್ಟು ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುವ ಹೊತ್ತಿಗೆ ಸೊನಾಲಿ ಬಾಗಿಲು ತೆರೆದು ಅನುಮತಿಯೊಂದಿಗೆ ಒಳಗೆ ಬಂದಳು. ಅಧಿಕಾರಿಯ ಬದಲಾಗದ ನೋಟ ಅವಳನ್ನು ಅಡಿಯಿಂದ ಮುಡಿಯವರೆಗೂ ಅಳೆಯಿತು. ಉದ್ದಕ್ಕೆ ಕೈ ತೋರಿಸಿ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ. ಅಳುಕುತ್ತಲೇ ಕುಳಿತ ಸೊನಾಲಿ ಸಲಹಾಗಾರ್ತಿಯತ್ತ ನೋಟ ಹರಿಸಿದಳು. ಅವಳ ಮುಖದಲ್ಲಿ ಗೊಂದಲದ ಛಾಯೆಯಿತ್ತು."ಆಫೀಸು ಬಿಟ್ಟು ನೇರವಾಗಿ ಮನೆ ಸೇರೋ ನೀವು ಆ ದಿನ ಸಂಜೆ ಯಾಕೆ ಟಾರಸಿ ಹತ್ತಿದ್ರಿ?" ಪೊಲೀಸ್ ಅಧಿಕಾರಿಯ ಅನಿರೀಕ್ಷಿತ ಪ್ರಶ್ನೆಗೆ ತಡವರಿಸಿತು. ಮೌನವಾಗಿಯೆ ಕುಳಿತಿದ್ದಳು."ನಿನ್ನನ್ನೇ ಪ್ರಶ್ನಿಸ್ತಿರೋದು... ಟಾರಸಿ ಹತ್ತಿ ಹೋಗುವ ಪ್ರಮೇಯವೇನಿತ್ತು?"ತುಟಿಗಳನ್ನು ಕಚ್ಚಿ ಹಿಡಿದು ಕುಳಿತವಳ ಬಿಗಿತ ಸಡಿಲವಾಯಿತು. ಮೆಲ್ಲಗೆ ತುಟಿಗಳು ಅದುರಿದವು."ಅವತ್ತು ಮಧ್ಯಾಹ್ನ ನನಗೊಂದು ಇ-ಮೇಲ್ ಬಂದಿತ್ತು....." ಕಥೆ ಮುಂದುವರಿದು ನಡೆದ ಘಟನೆಯನ್ನೆಲ್ಲಾ ಚಾಚೂ ತಪ್ಪದೆ ಅಧಿಕಾರಿಯ ಮುಂದೆ ಬಿಚ್ಚಿಟ್ಟಳು. ಅವಳು ಹೇಳಿದನ್ನೆಲ್ಲಾ ಕೇಳಿದ ಬಳಿಕ ಅಧಿಕಾರಿಯ ತುಟಿ ಅರಳಿತು."ತುಂಬಾ ಉಪಕಾರವಾಯಿತು. ನೀವಿನ್ನು ಹೋಗಬಹುದು" ಸೊನಾಲಿ ಆ ಮಾತಿಗೆ ಕಾದಿದ್ದವರಂತೆ ನಡುಗುವ ಹೆಜ್ಜೆಗಳಿಂದ ಹೊರಗೆ ಧಾವಿಸಿದಳು. ರಾಮಯ್ಯ ಜ್ಯೂಸ್‍ನ ಗ್ಲಾಸ್ ಹಿಡಿದುಕೊಂಡು ಒಳಗೆ ನಡೆದ. ಅಧಿಕಾರಿಯ ಮುಂದೆ ಹಿಡಿದ. ಅಧಿಕಾರಿ ಅದನ್ನು ತೆಗೆದುಕೊಳ್ಳುತ್ತಲೇ ಕಂಪ್ಯೂಟರ್‍‍ನ ಹೆಣ್ಣು ವಾಸಂತಿಯನ್ನು ಕರೆಯುವಂತೆ ತಿಳಿಸಿದ.ಅಧಿಕಾರಿ ಜೂಸ್ ಕುಡಿದು ಮುಗಿಸುವಷ್ಟರಲ್ಲಿ, ಗಂಡಸಿನ ಮುಖದ ಹೆಣ್ಣು, ವಾಸಂತಿ ಒಳಗೆ ಬಂದಳು. ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತು ಹಲ್ಲು ಕಿಸಿದಳು. ಸೊನಾಲಿ ಹೇಳಿದ ಕಥೆಯನ್ನು ಪುನರುಚ್ಚರಿಸಿದ ಅಧಿಕಾರಿ."ಆ ಹುಡುಗಿಗೆ ಮೇಲ್ ಕಳಿಸಿದವರು ಯಾರು ಅನ್ನುವುದು ಗೊತ್ತೆ?" ಗಂಡಸಿನ ಮುಖದ ಆ ಹೆಣ್ಣು ಆಲೋಚನೆಗೆ ಬಿದ್ದವರಂತೆ ಕುಳಿತಳು. ಕ್ಷಣದಲ್ಲಿಯೇ ಏನನ್ನೋ ಯೋಚಿಸಿ ತೋರುಬೆರಳನ್ನು ಎತ್ತಿ ಉದ್ಗರಿಸಿದಳು."ಆ ದಿನ ಸೊನಾಲಿಗೆ ಮೇಲ್ ಬಂದಿತ್ತು. ಅದು ಅದು... ಬಿಳಿಕಾಗೆ ಅನ್ನುವ ಇ-ಮೇಲ್ ಅಡ್ರೆಸ್‍ನಿಂದ""ಬಿಳಿಕಾಗೆ!" ಅಧಿಕಾರಿ ಆಶ್ಚರ್ಯದಿಂದ ಹೇಳಿಕೊಂಡ. ಸಲಹಾಗಾರ್ತಿ ಅವನ ಸಹಾಯಕ್ಕೆ ಧಾವಿಸಿದಳು."ಹೌದು, ಭಗವಂತರಾಯರನ್ನು ಜನ `ಬಿಳಿಕಾಗೆ' ಅನ್ನೋ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಆತ ಸಾಧು ಮನುಷ್ಯ. ಯಾರದೋ ಕುಹಕಕ್ಕೆ ಆ ಹೆಸರು ಬಂತು"ಬಿಳಿಕಾಗೆ ಪೊಲೀಸ್ ಅಧಿಕಾರಿಯ ತಲೆಯ ಒಳಗೆಲ್ಲಾ ಹಾರಾಡಿತು. ಅವನು ಗೊಂದಲಕ್ಕೆ ಬಿದ್ದು ವಾಸಂತಿಯನ್ನು ಹೊರಗೆ ಕಳುಹಿಸಿದ. ಸುಮಾರು ಹೊತ್ತು ಸಲಹಾಗಾರ್ತಿಯ ಜೊತೆಗೆ ಮಾತನಾಡಿ ಹೊರಗೆ ಬಂದಾಗ ಸೊನಾಲಿ ಅಲ್ಲಿರಲಿಲ್ಲ!ಅವನು ಮೆಟ್ಟಲುಗಳನ್ನು ಇಳಿದು ಕೆಳಗೆ ಬರುವಾಗ ಮೆಟ್ಟಿಲುಗಳ ಸಂಧಿಯಲ್ಲಿ ಯಾರದೋ ಪಿಸು ಮಾತುಗಳು ಕೇಳಿಸಿದವು. ಅವು ಎರಡು ಹೆಣ್ಣುಗಳ ದನಿ! ಒಂದು ಸೊನಾಲಿಯದ್ದೇ ದನಿ! ಸೊನಾಲಿ ಯಾರೊಂದಿಗೆ ಹೀಗೆ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದಾಳೆ? ಕುತೂಹಲ ಕೆರಳಿತು. ಸ್ವಲ್ಪ ಹೊತ್ತು ಮರೆಯಲ್ಲಿ ಕಾದು ನಿಂತ. ಇನ್ನೊಂದು ಹೆಣ್ಣು ಅಸ್ಪಷ್ಟವಾಗಿ ಗೋಚರಿಸಿತು. ವಾಸಂತಿ! ಅಥವಾ ಸಲಹಾಗಾರ್ತಿ!? ಇಬ್ಬರಲ್ಲಿ ಯಾರೋ ಒಬ್ಬರು!
***
ಮರುದಿನ ಅಧಿಕಾರಿ ಸ್ಟೇಶನ್‍ನಿಂದ ನೇರವಾಗಿ ಭಗವಂತರಾಯರ ಸಲಹಾಗಾರ್ತಿಯ ಮನೆಗೆ ಬಂದ. ಭಗವಂತರಾಯರ ಮಕ್ಕಳು ದೂರದ ಅಮೆರಿಕಾದಲ್ಲಿರುವ ವಿಷಯ ತಿಳಿದಿದ್ದ ಅಧಿಕಾರಿ ಆ ರೀತಿ ನಿರ್ಧಾರ ತೆಗೆದುಕೊಂಡ."ಏನಾದರೂ ಸುಳಿವು...?" ಅಂಬಿಕಾಳ ಪ್ರಶ್ನೆಗೆ ಅಧಿಕಾರಿ ನಗು ತೋರಿಸಿದ."ಹೌದು, ಭಗವಂತರಾಯರ ಆಸ್ತಿಗೆ ಬಾಧ್ಯಸ್ಥರು ಯಾರು? ಅವರ ಮಕ್ಕಳಿಗೆ ತಂದೆಯ ಆಸ್ತಿಯ ಮೇಲೆ ಮೋಹವಿಲ್ಲ"ಸಲಹಾಗಾರ್ತಿಯ ಮುಖ ಬಿಳಿಚಿಕೊಂಡಿತು. ಅಧಿಕಾರಿ ಅದನ್ನು ಗುರುತಿಸಿಕೊಂಡ."ನಿಮಗೆ ಅವರ ಆಸ್ತಿಯ ಮೇಲೆ....?""ನೋ, ನೋ... ನಾನು ಯಾವತ್ತು ಅವರ ಆಸ್ತಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ" ಅಧಿಕಾರಿಯ ಮಾತನ್ನು ತಡೆದು ಹೇಳಿದಳು."ನಿಮ್ಮನ್ನು ಪರೀಕ್ಷಿಸ್ತಾ ಇಲ್ಲ. ಸತ್ಯ ತಿಳಿದುಕೊಳ್ಳುವುದಕ್ಕೆ ಕೇಳಿದೆ""ಇಲ್ಲ. ಖಂಡಿತವಾಗಿಯೂ ನಾನು ಅವರ ಆಸ್ತಿಗೆ ಆಸೆ ಪಟ್ಟವಳಲ್ಲ"ಅಧಿಕಾರಿ ನಕ್ಕು ನುಡಿದ."ಸರಿ, ನಿಮ್ಮ ಮಾತು ನಂಬ್ತೀನಿ. ನೀವು ಈಗಲೇ ಆಫೀಸಿಗೆ ಬಂದು ಬಿಡಿ. ಕೊಲೆಗಾರ ಅಲ್ಲಿಯೇ ಇದ್ದಾನೇಂತ ನನ್ನ ಅನುಮಾನ"ಅಧಿಕಾರಿಯ ಮಾತಿಗೆ ತಡಬಡಿಸಿ ತಯಾರಾದ ಸಲಹಾಗಾರ್ತಿ ಅಂಬಿಕಾ ಆಫೀಸಿಗೆ ಧಾವಿಸಿದಳು. ಆಫೀಸಿನಲ್ಲಿ ಅಧಿಕಾರಿ ಅವಳ ಬರುವಿಕೆಗಾಗಿ ಕಾದು ಕುಳಿತಿದ್ದ. ಎಲ್ಲಾ ಉದ್ಯೋಗಿಗಳತ್ತ ನೋಡಿದ. ನೇರವಾಗಿ ಸೊನಾಲಿಯ ಟೇಬಲ್‍ನ ಹತ್ತಿರ ನಿಂತು ಹೇಳಿದ."ಮಿಸ್ ಸೊನಾಲಿ, ಭಗವಂತರಾಯರಿಗೆ ನಿಮ್ಮ ಮೇಲೆ ಅಭಿಮಾನ, ವಿಶ್ವಾಸವಿತ್ತು. ಆ ದಿನ ನಿಮ್ಮನ್ನು ಸಂದರ್ಶನಕ್ಕೆ ಕರೆಸಿದ್ದು ಕೆಲಸ ಕೊಡಿಸುವ ಉದ್ದೇಶದಿಂದ ಅಲ್ಲ. ಬದಲಾಗಿ ತನ್ನ ಎಲ್ಲಾ ಆಸ್ತಿಗೂ ಒಬ್ಬ ನಂಬಿಕಸ್ಥ ವ್ಯಕ್ತಿಯ ಅಗತ್ಯವಿತ್ತು. ಆ ಅರ್ಹತೆ ನಿಮ್ಮಲ್ಲಿತ್ತು. ನೇರವಾಗಿ ಅದನ್ನು ನಿಮಗೆ ಹೇಳಿದ್ರೆ ನೀವು ಅದನ್ನು ನಿರಾಕರಿಸುತ್ತೀರಿ ಅನ್ನುವ ಉದ್ದೇಶದಿಂದ ಅವರ ಆಫೀಸಿನಲ್ಲಿ ಕೆಲಸ ಕೊಡಿಸಿದ್ರು. ಆದ್ರೆ ನೀವು ಅವರನ್ನು ಕೆಟ್ಟದಾಗಿ ತಿಳಿದುಕೊಂಡ್ರಿ. ನೋಡಿ, ಅವರು ತಮ್ಮ ಸಮಸ್ತ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದಿದ್ದಾರೆ. ಆದ್ರೆ ಈಗ ಅವರ ಕೊಲೆಯಾಗಿದೆ" ಸೊನಾಲಿ ತಲೆ ತಗ್ಗಿಸಿದಳು. ಅಧಿಕಾರಿಯ ಮಾತು ಆಶ್ಚರ್ಯದ ಜೊತೆಗೆ ನಾಚಿಕೆ ತರಿಸಿತು. ಹೂ ಮನಸ್ಸಿನ ಮಾಲೀಕನನ್ನು ಅಪಾರ್ಥ ಮಾಡಿಕೊಂಡಿದ್ದಳು."ಇಷ್ಟಕ್ಕೂ ಅವರ ಕೊಲೆ ಮಾಡಿದೋಳು ನಾನಲ್ಲ""ನೀವು ಕೊಲೆ ಮಾಡಿದ್ದೀರಿಂತ ನಾನು ಹೇಳ್ತಾ ಇಲ್ಲ. ಕೊಲೆ ಮಾಡಿರೋದು ಸಿನಿಮಾ ಜಗತ್ತಿನ ಬಗ್ಗೆ ಕುತೂಹಲ ಹೊಂದಿರೋ ವ್ಯಕ್ತಿ. ಇದರಲ್ಲಿ ಸಿನಿಮಾದ ವ್ಯಕ್ತಿಯ ಪಾಲು ಇದೆ"ಸೊನಾಲಿಗೆ ಅರ್ಥವಾಗದೆ ತಲೆ ಎತ್ತಿದಳು. ಆ ಕ್ಷಣದಲ್ಲಿ ಎಲ್ಲರ ನೋಟ ಅಧಿಕಾರಿಯ ಕಡೆಗಿತ್ತು."ಬಿಳಿಕಾಗೆ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡಿರೋ ವ್ಯಕ್ತಿ, ಅವನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸುವುದಕ್ಕೆ ಯತ್ನಿಸಿದೆ. ಆ ದಿನ ಭಗವಂತರಾಯರು ಸ್ಟಾರ್‍ ಹೊಟೇಲ್‍ನಲ್ಲಿ ಇದ್ದಾಗ ಆ ವ್ಯಕ್ತಿ ಅವರನ್ನು ಒತ್ತಾಯಿಸಿತು. ಆದ್ರೆ ಅವರು ತಮ್ಮ ಸಮಸ್ತ ಆಸ್ತಿಗೂ ಹೊಸದಾಗಿ ನಿಯುಕ್ತರಾಗಿರೋ ನೀವೇ ಬಾಧ್ಯಸ್ಥೆ ಅಂತ ಹೇಳಿದ್ರು. ಅದೇ ಹೊತ್ತು ಆ ವ್ಯಕ್ತಿ ನಿರಾಸೆಯಿಂದ ನಿಮಗೆ ಬಿಳಿಕಾಗೆ ಅನ್ನೋ ಐಡಿಯಿಂದ ಮೇಲ್ ಕಳುಹಿಸಿ, ನಿಮಗೆ ಬಿಳಿಕಾಗೆಯನ್ನು ತೋರಿಸಿತು. ನೀವು ಅದ್ಭುತ ನೋಡುವವರಂತೆ ಟಾರಸಿಗೆ ಹೋದ್ರಿ. ಆದ್ರೆ ಅಲ್ಲಿ ನಿಮ್ಮನ್ನು ನೋಡಿದ ಮಾಲೀಕ ಸಂತೋಷದಿಂದ ಕೈ ತೋರಿಸಿದ್ರು. ನೀವು ಅಪಾರ್ಥ ಮಾಡಿಕೊಂಡ್ರಿ""ಅಂದ್ರೆ... ಅಂದ್ರೆ...""ಅಂದ್ರೆ... ನಿಮ್ಮ ಗೆಳತಿ ಶುಭಾಶ್ರೀನೇ ನಿಮಗೆ ಬಿಳಿಕಾಗೆ ಅನ್ನೋ ಐಡಿಯಿಂದ ಮೇಲ್ ಕಳುಹಿಸಿರುವುದು. ಅಚಾನಕ್ಕಾಗಿ ಅದರ ಒಂದು ಪ್ರತಿ ಮಾಲೀಕ ಭಗವಂತರಾಯರ ಮೇಲ್ ಐಡಿಗೂ ಹೋಗಿದೆ. ಒಂದೊಮ್ಮೆ ನಿಮ್ಮನ್ನು ಅಗಾಧವಾಗಿ ಪ್ರೀತಿಸೋ ನಾಟಕ ಮಾಡಿದ ಕ್ಯಾಮರಾ ಮೆನ್ ಹಿತೇಶನೇ ಕೊಲೆ ಮಾಡಿರೋದು. ನೆನಪಿದೆಯಾ ನಿಮಗೆ, ಆ ದಿನ ಸಂದೇಶ್‍ನನ್ನು ಭೇಟಿಯಾಗೊದಿಕ್ಕೆ ಬಿಗ್ ಬಜಾರ್‍‍ಗೆ ಹೋಗೋದಿದೆ... ಟಾರಸಿಗೆ ನೀನೇ ಹೋಗೂಂತ ಒತ್ತಾಯಿಸಿದ ನಿಮ್ಮ ಗಳತಿ, ನೇರವಾಗಿ ಹೋಗಿದ್ದು ಸ್ಟಾರ್‍ ಹೋಟೇಲ್‍ಗೆ. ಅಲ್ಲಿದ್ದ ಹಿತೇಶನನ್ನು ಭೇಟಿಯಾಗೊದಿಕ್ಕೆ. ಆ ದಿನ ಟಾರಸಿ ಹತ್ತಿದ ನಿಮ್ಮನ್ನು ಮುಗಿಸುವ ತಂತ್ರ ಹೂಡಿದ ನಿಮ್ಮ ಗೆಳತಿ, ಅಲ್ಲಿ ಭಗವಂತರಾಯರನ್ನು ನೋಡಿ ತನ್ನ ಯೋಜನೆಯೆಲ್ಲಾ ತಿಳಿದು ಹೋಯಿತೂಂತ ಅವರನ್ನೇ ಮುಗಿಸುವಂತೆ ಹಿತೇಶನಿಗೆ ಹೇಳಿದ್ಲು. ಹಾಗೆ ಸ್ಟಾರ್ ಹೊಟೇಲ್‍ನ ಮೂರನೆ ಅಂತಸ್ತಿನಿಂದ ಹಿತೇಶ ಹಾರಿಸಿದ ಗುಂಡಿಗೆ ಅವರು ಬಲಿಯಾದ್ರು"ಕಥೆ ಕೇಳಿದ ಸೊನಾಲಿಯ ಕಣ್ಣುಗಳಲ್ಲಿ ನೀರು ಇಳಿಯಿತು. ಮೆಲ್ಲಗೆ ಕಣ್ಣಿಗೆ ಸೆರಗು ಒತ್ತಿಕೊಂಡಳು. ಅವಳು ಹಿಂತಿರುಗುವಷ್ಟರಲ್ಲಿ ಅಧಿಕಾರಿ ಶುಭಾಶ್ರೀಯ ಮುಂದೆ ನಿಂತಿದ್ದ."ಅತಿಯಾಸೆ ಗತಿಗೇಡು. ನೀವು ವಿಷಯ ತಿಳಿದ ನಂತರವೂ ಮೆಟ್ಟಿಲುಗಳ ಹತ್ತಿರ ಸೊನಾಲಿಯನ್ನು ಕರೆದು ಬೆದರಿಕೆ ಹಾಕಿದ್ರಿ. ಒಂದು ವಿಷಯ ನಿಮಗಿನ್ನೂ ಗೊತ್ತಿಲ್ಲಾಂನ್ಸುತ್ತೆ. ಹಿತೇಶ ನಮ್ಮ ಸುರ್ಪದಿಯಲ್ಲಿದ್ದಾನೆ. ನೀವೂ ಜೊತೆಗೂಡಿ"ಶುಭಾಶ್ರೀ ತಲೆತಗ್ಗಿಸಿ ಅಧಿಕಾರಿಯ ಹಿಂದೆ ನಡೆದಾಗ ಅಧಿಕಾರಿ ಗೆಲುವಿನ ನಗೆಯೊಂದಿಗೆ ಆಫೀಸಿನ ಮುಂದಿನ ಬಾಧ್ಯಸ್ಥೆ, ಸೊನಾಲಿಯ ಬಳಿ ಬಂದು ಶುಭ ಹಾರೈಸಿದ.

Read more!

Saturday, February 7, 2009

ಸಾಹಸಿ ಪಯಣಿಗರ ನೂರೆಂಟು ಗಂಟುಗಳು


ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅವನ ಅನುಭವದ ಮೂಟೆಯಾಗಬಹುದು ಅಥವಾ ಮುಂದಿನ ಪೀಳಿಗೆಯ ಊಹನೆಯೂ ಆಗಿರಬಹುದು. ಇಂತಹ ಅದೆಷ್ಟೋ ಕಥನಕಗಳು ನಮಗೆ ದೊರೆಯುತ್ತವೆ. ಅದರಲ್ಲೂ ಪಾಶ್ಚಾತ್ಯರು ಸಾಹಸಿಗಳು ಮತ್ತು ಧೈರ್ಯಶಾಲಿಗಳು. ಅವರ ಒಂದೊಂದು ಸಾಹಸಗಳೂ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯೂ ಹೌದು. ಅಂತಹ ಅನುಭವ ಕಥನಗಳು ಓದುಗನಲ್ಲಿಯೂ ಕುತೂಹಲ ಮೂಡಿಸಿ, ಹೊಸದೊಂದು ಅನುಭವವನ್ನು ಬಿಚ್ಚಿಡುತ್ತವೆ.
ಅಂತಹ ಪಯಣದ, ಅದರಲ್ಲೂ ಸಮುದ್ರಯಾನದ ಪ್ರಯಾಣವನ್ನು `ಪಶ್ಚಿಮದ ಪಯಣಿಗರು' ಅನ್ನುವ ಪುಸ್ತಕದ ಮೂಲಕ ಕನ್ನಡಿಗರಿಗಾಗಿ ಅನುವಾದಿಸಿರುವವರು ಬಿ. ಎಸ್. ವಿದ್ಯಾರಣ್ಯರವರು.

ಈ ಬೃಹತ್ ಪುಸ್ತಕದಲ್ಲಿ ಯೂರೋಪಿನ ಲೇಖಕರು ಬರೆದಿರುವ ಮೂರು ವಿಭಿನ್ನ ರೀತಿಯ ಪ್ರಯಾಣದ ಕಾದಂಬರಿಗಳಿವೆ. ಮೂಲ ಕಾದಂಬರಿಯನ್ನು ಓದಿದಷ್ಟೇ ಆಪ್ತವೆನಿಸುವ ಇಲ್ಲಿಯ ಕಾದಂಬರಿಗಳೆಲ್ಲಾ ಬೇರೆ ಬೇರೆ ಭೌಗೋಳಿಕ ಹಿನ್ನಲೆಯಿರುವ ಜನರ, ಸಮಾಜದ, ಸಂಸ್ಕೃತಿಯ ಮತ್ತು ಅಲ್ಲಿನ ಮೌಲ್ಯಗಳನ್ನು ಎದುರಿಸುವ ಮತ್ತು ಅಲ್ಲಿ ತನ್ನ ಸರ್ವಾಧಿಕಾರ ಸಾಧಿಸಲು ಪ್ರಯತ್ನಿಸುವ ಅಧಿಕಾರ ಶಾಹಿ ವರ್ಗವನ್ನು ವಿಢಂಬನಾತ್ಮಕವಾಗಿ ತೆರೆದಿಡುವುದಲ್ಲದೆ ಮುಂದೆ ನಡೆಯಬಹುದಾದ ಸರ್ವಾಧಿಕಾರ ಧೋರಣೆಗಳನ್ನು ಸೂಕ್ಷ್ಮವಾಗಿ ಪರಿಚಯಿಸುತ್ತವೆ.
ಈ ಪುಸ್ತಕದಲ್ಲಿ ಕಾದಂಬರಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ಜೋನಥಾನ್ ಸ್ವಿಫ್ಟ್‍ನ `ಗಲಿವರಾಯಣ', ಎರಡನೆ ವಿಭಾಗದಲ್ಲಿ ಡೇನಿಯಲ್ ಡೀಫೋನ `ರಾಬಿನ್‍ಸನ್ ಕ್ರುಸೋ' ಮತ್ತು ಮೂರನೆ ವಿಭಾಗದಲ್ಲಿ ಜೂಲ್ಸ್ ವರ್ನ್‍ನ ` 80 ದಿನಗಳಲ್ಲಿ ಭೂಪ್ರದಕ್ಷಿಣೆ' ಕಾದಂಬರಿಗಳಿವೆ.
ಗಲಿವರಾಯಣದಲ್ಲಿ ಮೂರು ಕಾದಂಬರಿಗಳಿವೆ. ನಮಗೆಲ್ಲಾ ಗೊತ್ತಿರುವ ಗಲಿವರಾಯಣದ ಕಥೆ ಲಿಲಿಪುಟ್‍ಗಳ ದೇಶದ ಕಥೆ. ಸಾಧಾರಣವಾಗಿ ಪ್ರಾಥಮಿಕ ಶಾಲೆಯಿಂದಲೇ ಈ ಕಥೆಯನ್ನು ಓದಿರುತ್ತೇವಾದರೂ ಇಡೀ ಕಥೆಯನ್ನು ಆಸ್ವಾಧಿಸಬೇಕಾದರೆ ಗಲಿವರಾಯಣದ ಮೊದಲ ಕಾದಂಬರಿ `ಲಿಲಿಪುಟ್‍ಗಳ ನಾಡಿನಲ್ಲಿ' ಅನ್ನು ಓದಲೇಬೇಕು.
ಗಲಿವರ್ ಒಬ್ಬ ವೈದ್ಯನಾಗಿ ನಾವಿಕನಾಗುವ ಕನಸು ಕಾಣುತ್ತಾನೆ. ಅವನು ಹಡಗಿನಲ್ಲಿ ವೈದ್ಯನಾಗಿಯೂ ಸೇರುತ್ತಾನೆ. ಅಲ್ಲಿಂದ ಅವನ ಸಮುದ್ರಯಾನ ಆರಂಭವಾಗುತ್ತದೆ. ಅವನ ಹಡಗು ಅಲೆಗಳ ಹೊಡೆತಕ್ಕೆ ಸಿಕ್ಕಿ ಅಪಘಾತವಾಗುತ್ತದೆ. ಅಲ್ಲಿಂದ ಬದುಕುಳಿದ ತನ್ನ ಸಹಪ್ರಯಾಣಿಕರ ಜೊತೆಗೆ ದೋಣಿಯಲ್ಲಿ ಕುಳಿತು ದಡ ತಲುಪುವ ಪ್ರಯತ್ನ ಮಾಡುತ್ತಾನೆ. ದೋಣಿ ಕೂಡ ದುರಂತಕ್ಕೀಡಾಗಿ ಅವನೊಬ್ಬನೇ ಅಪರಿಚಿತ ನಾಡಿಗೆ ಬರುತ್ತಾನೆ. ಅವನಿಗೆ ಬೆಳಿಗ್ಗೆ ಎಚ್ಚರವಾದಾಗ ಇರುವೆಯಂತ ಪುಟಾಣಿ ವೀರರು ಅವನನ್ನು ಬಂಧಿಸಿರುತ್ತಾರೆ. ಆ ಲಿಲಿಪುಟ್‍ಗಳ ಭಾಷೆ ಅರ್ಥವಾಗದೆ ಸನ್ನೆಯಲ್ಲಿ ತನ್ನ ಬಾಯಾರಿಕೆ, ಹಸಿವುಗಳನ್ನು ತಿಳಿಸುತ್ತಾನೆ. ಅವನ ಸನ್ನೆಯನ್ನು ಅರ್ಥೈಸಿಕೊಂಡು ಅವನಿಗೆ ಬೇಕಾದ ಆಹಾರ, ಪಾನೀಯಗಳನ್ನು ಒದಗಿಸುತ್ತಾರೆ. ಆ ದೇಶದ ರಾಜನ ವಿಶ್ವಾಸ ಗೆದ್ದು ಅವರಲ್ಲಿಯೇ ಒಬ್ಬನಾಗುತ್ತಾನೆ ಗಲಿವರ್. ಆದರೂ ಅಲ್ಲಿಯ ಅರಸನಿಗೆ ಗಲಿವರನ ಮೇಲೆ ಸಂಶಯವಿರುತ್ತದೆ. ಇದಕ್ಕೆ ಕಾರಣ ಆತ ಒಮ್ಮೆ ಲಿಲಿಪುಟ್ ಜನರಿಂದ ತಪ್ಪಿಸಿಕೊಂಡು ಬ್ಲೆಫೆಸ್ಕೋದ ಜನರನ್ನು ಭೇಟಿಯಾಗಿರುತ್ತಾನೆ. ಬ್ಲೆಫೆಸ್ಕೋ ಅರಸನ ವಿರೋಧಿಯಾಗಿರುವ ಲಿಲಿಪುಟ್ ಅರಸ ಮುಂದೆ ಗಲಿವರನ ಸಹಾಯದಿಂದ ಅವನನ್ನು ಎದುರಿಸಲು ಸಿದ್ಧವಾಗುತ್ತಾನೆ. ಆದರೆ ಆ ಎರಡು ದೇಶಗಳ ನಡುವೆ ಶಾಂತಿ, ಸಂಧಾನಕ್ಕೆ ನೆರವಾಗುತ್ತಾನೆ ಗಲಿವರ್. ಕೊನೆಗೆ ತನ್ನ ದೇಶಕ್ಕೆ ಹಿಂತಿರುಗಬೇಕೆನ್ನುವ ಅವನ ತುಡಿತದಂತೆ ಗಲಿವರ ಬ್ಲೆಫೆಸ್ಕೋದ ಅರಸನ ಸಹಾಯದಿಂದ ತನ್ನ ದೇಶಕ್ಕೆ ಮರಳುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಹಿರಿ ಕಿರಿಯರಿಂದ ಎಲ್ಲರಿಗೂ ಆಪ್ತವೆನಿಸುತ್ತದೆ ಈ ಕಾದಂಬರಿ.
ಗಲಿವರನ ಮುಂದಿನ ಪಯಣ ಬ್ರಾಬ್ಡಿಂಗ್‍ನ್ಯಾಗ್ ನಾಡಿನ ಪ್ರವಾಸ. ಅಲ್ಲಿ ಲಿಲಿಪುಟ್‍ಗಳ ಹಾಗೇ ಆದರೆ ವ್ಯತಿರಿಕ್ತವಾಗಿರುವ ದೈತ್ಯ ಜನರ ದರ್ಶನವಾಗುತ್ತದೆ. ಒಬ್ಬ ರೈತನ ಕೈಗೆ ಸಿಕ್ಕಿ, ಅವನ ಕೈಗೊಂಬೆಯಾಗುತ್ತಾನೆ. ಆ ರೈತ ಅವನನ್ನು ಒಬ್ಬ ಜೋಕರ್‍‍ನ ಹಾಗೆ ನಡೆಸಿಕೊಳ್ಳುತ್ತಾನೆ. ಮಾತ್ರವಲ್ಲ, ಅವನನ್ನು ಪ್ರದರ್ಶನಕ್ಕಿಟ್ಟು ಹಣಗಳಿಸುತ್ತಾನೆ. ಇದರಿಂದ ಅವನಿಗೆ ತುಂಬಾ ಬೇಸರವಾಗುತ್ತದೆ. ಬಂಧನದಿಂದ ಮುಕ್ತಿ ಹೊಂದಬೇಕೆನ್ನುವ ಅದಮ್ಯ ಬಯಕೆಯಿರುತ್ತದೆ. ಆದರೆ ಆ ರೈತ, ತನಗೆ ಅವನು ಇನ್ನು ಉಪಯೋಗವಿಲ್ಲವೆನ್ನುವ ನಿರ್ಧಾರಕ್ಕೆ ಬಂದು ಅವನನ್ನು ಆ ನಾಡಿನ ರಾಜನಿಗೆ ಮಾರುತ್ತಾನೆ. ಇವನ ಮೋಜನ್ನು ಮೆಚ್ಚಿಕೊಳ್ಳುವ ರಾಜನ ಪರಿವಾರ ಅವನೊಂದಿಗೆ ಅನ್ಯೋನ್ಯವಾಗಿರುತ್ತದೆ. ಅಲ್ಲಿಯ ಭಾಷೆಯನ್ನು ಕಲಿತು ರಾಣಿಯ ಮನಸ್ಸನ್ನೂ ಗೆದ್ದು ಅರಮನೆಯಲ್ಲಿ ಉಳಿಯುತ್ತಾನೆ. ಕೊನೆಗೆ ತಾನು ಸ್ವತಂತ್ರವಾಗಿ ಜೀವಿಸಲು ಹಾತೊರೆದು ಅಲ್ಲಿಂದ ಹೊರಗೆ ಬರುತ್ತಾನೆ. ಬಲಶಾಲಿಗಳ ಮುಂದೆ ಬಲಹೀನರ ಪಾಡನ್ನು ತೆರೆದಿಡುತ್ತದೆ ಈ ಕಾದಂಬರಿ.
ಇನ್ನು ಮೂರನೆಯ ಕಾದಂಬರಿ `ಹ್ವಿನಿಮ್ ನಾಡಿನ ಪ್ರವಾಸ'; ಬಹಳ ಕುತೂಹಲಕರವಾಗಿಯೂ, ವಿಚಿತ್ರವಾದ ಅನುಭವಕ್ಕೂ ಒದಗುವ ಕಥೆ. ಹ್ವಿನಿಮ್‍ಗಳ ನಾಡಿನಲ್ಲಿ ಮನುಷ್ಯರೇ ಇಲ್ಲ! (ಈ ಕಲ್ಪನೆಯೇ ವಿಚಿತ್ರವಾಗಿದೆ) ಬದಲಾಗಿ ಅಲ್ಲಿ ಹ್ವಿನಿಮ್ (ಕುದುರೆ)ಗಳದ್ದೇ ಕಾರುಬಾರು. ಬುದ್ಧಿಜೀವಿಗಳೆಂದು ತಮ್ಮನ್ನು ತಾವು ಗುರುತಿಸಿರುವ ಆ ಹ್ವಿನಿಮ್‍ಗಳು ಯಾಹು (ಗೋರಿಲ್ಲಗಳನ್ನು ನೆನಪಿಸುವಂತ ಪ್ರಾಣಿ) ಗಳನ್ನು ತಮ್ಮ ಅಡಿಯಾಳನ್ನಾಗಿ ಮಾಡಿಕೊಂಡಿರುತ್ತವೆ. ಆ ಯಾಹುಗಳು ಎಷ್ಟು ಗಲೀಜಾಗಿರುತ್ತವೆಯೆಂದರೆ ಯಾರೂ ಅವುಗಳ ಹತ್ತಿರ ಸುಳಿಯುವುದಿಲ್ಲ! ಇಲ್ಲಿ ಶೋಷಿತ ವರ್ಗವನ್ನು ನೆನಪಿಸುವ ಯಾಹುಗಳು ಮತ್ತು ಅಧಿಕಾರಿ ವರ್ಗದ ಹ್ವಿನಿಮ್‍ಗಳು ಅಲ್ಲಿಗೆ ಬರುವ ನಾಯಕ ಗಲಿವರನನ್ನು ವಿಚಿತ್ರವಾಗಿ ಕಾಣುತ್ತವೆ. ಯಾಹುಗಳಂತೆ ಕಾಣುವ ಅವನನ್ನು ಹ್ವಿನಿಮ್‍ಗಳು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಅವನ ಬುದ್ಧಿವಂತಿಕೆಯನ್ನು ಕಂಡು ಅವನಿಗೆ ಬೇಕಾಗುವ ಎಲ್ಲಾ ಸಹಾಯವನ್ನೂ ಮಾಡುತ್ತವೆ. ಮುಂದೆ ನಾಯಕ ಅವನು ಅಲ್ಲಿಯ ಭಾಷೆಯನ್ನು ಕಲಿತು, ಅಲ್ಲಿನ ರೀತಿ ನೀತಿಗಳನ್ನು ತನಗರಿವಿಲ್ಲದಂತೆ ತನ್ನ ಬದುಕಿನಲ್ಲೂ ಒಗ್ಗಿಸಿಕೊಂಡಿರುತ್ತಾನೆ. ಅವನ ಈ ಬದಲಾವಣೆ ಅವನಿಗೆ ಹಡಗಿನಲ್ಲಿ ಮರಳಿ ತನ್ನ ನಾಡಿಗೆ ಬರುವಾಗ ಅನುಭವಕ್ಕೆ ಬರುತ್ತದೆ.
ಈ ಮೂರು ಕಾದಂಬರಿಗಳಲ್ಲಿಯೂ ಕಾಣುವ ಸಾಮಾನ್ಯ ವಿಷಯವೆಂದರೆ ಬಲಶಾಲಿಯಾದ ಮನುಷ್ಯ ತನ್ನ ಅಧಿಕಾರದಿಂದ ಬಲಹೀನರನ್ನು ಶೋಷಣೆ ಮಾಡುತ್ತಾ ಅವರನ್ನು ತನ್ನ ಸ್ವಾಧೀನಕ್ಕೆ ಒಳಪಡಿಸುತ್ತಾನೆ. ಅಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಾನೆ.
ಡೇನಿಯಲ್ ಡೀಫೋನ ಕಾದಂಬರಿ ರಾಬಿನ್ ಕ್ರೂಸೋದಲ್ಲಿ ಪಾಶ್ಚಿಮಾತ್ಯರ ಸಾಹಸಗಾಥೆಯನ್ನು ತೆರೆದಿಡುತ್ತದೆ. ರಾಬಿನ್ ಕ್ರೂಸೋ ತನ್ನ ಅನ್ವೇಷಣಾ ಬುದ್ಧಿಯಿಂದ ತಾನು ಪ್ರಯಾಣಿಸುತ್ತಿರುವ ಹಡಗು ಅಪಘಾತವಾದಾಗ ಒಬ್ಬಂಟಿಯಾಗಿ ದ್ವೀಪಕ್ಕೆ ಬಂದು ಅಲ್ಲಿ ತನಗೆ ಬೇಕಾದ ಹಾಗೆ ಬದುಕುತ್ತಾನೆ. ಮೇಲ್ನೋಟಕ್ಕೆ ಮನುಷ್ಯನ ಏಕಮುಖವನ್ನು ಪರಿಚಯಿಸಿದರೂ ಇಲ್ಲಿ ಮನುಷ್ಯ ಹೇಗೆ ಒಂದು ಕಡೆ ನೆಲೆ ನಿಂತು ತನಗೆ ಬೇಕಿದ್ದವುಗಳನ್ನು ತನ್ನ ಸುತ್ತಮುತ್ತಲಿಂದ ಗಳಿಸಿಕೊಳ್ಳುತ್ತಾನೆ ಅನ್ನುವುದನ್ನು ಚಿತ್ರಿಸಿದೆ ಈ ಕಾದಂಬರಿ. ಮಾತ್ರವಲ್ಲ, ಅಲ್ಲಿ ಎದುರಾಗುವ ಭೌಗೋಳಿಕ ಅನಾಹುತಗಳು, ಸಮಸ್ಯೆಗಳು, ತೊಂದರೆಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಎದುರಿಸಿ ಭದ್ರವಾಗಿ ನೆಲೆಯೂರುತ್ತಾನೆನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಇನ್ನು ಮೂರನೆಯ ವಿಭಾಗದಲ್ಲಿರುವ ಕಾದಂಬರಿ ಜೂಲ್ಸ್ ವರ್ನ್‍ನ ` 80 ದಿನಗಳಲ್ಲಿ ಭೂ ಪ್ರದಕ್ಷಿಣೆ' ಕುತೂಹಲ ಭರಿತ ಕಾದಂಬರಿ. ಶ್ರೀಮಂತ, ಪ್ರಾಮಾಣಿಕ ಮತ್ತು ಗಂಭೀರ ವ್ಯಕ್ತಿತ್ವದ ಒಬ್ಬಂಟಿ ಫಿಲಿಯಾಸ್ ಫಾಗ್ ತನ್ನ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿ ಭೂ ಪ್ರದಕ್ಷಿಣೆ ಮಾಡಿಕೊಂಡು ಬರುವ ಕಥಾ ವಸ್ತುವಿರುವ ಈ ಕಾದಂಬರಿ ಕೊನೆಯವರೆಗೂ ಉಸಿರು ಬಿಗಿ ಹಿಡಿದು ಓದುವಂತೆ ಪ್ರೇರೆಪಿಸುತ್ತದೆ. ಆಗಿನ ಕಾಲದಲ್ಲಿ ಹಡುಗು ಮತ್ತು ರೈಲುಗಳ್ಳಲ್ಲಿಯೇ ಭೂ ಪ್ರದಕ್ಷಿಣೆ ಮಾಡುವುದೆಂದರೆ ಊಹೆಗೂ ನಿಲುಕದ ವಿಷಯ. ಫಾಗ್ ತನ್ನ ಹೊಸ ಕೆಲಸದಾಳು ಪಾಸ್ ಪರೋತನ ಜೊತೆಗೆ ಲಂಡನ್‍ನಿಂದ ತಮ್ಮ ಪ್ರಯಾಣ ಆರಂಭಿಸುತ್ತಾರೆ. ಆ ಸಮಯದಲ್ಲಿ ಲಂಡನ್‍ನ ಬ್ಯಾಂಕೊಂದರಲ್ಲಿ ದರೋಡೆಯಾಗಿರುತ್ತದೆ. ಫಾಗ್ ಭೂ ಪ್ರದಕ್ಷಿಣೆ ಹೊರಡುವುದನ್ನು ತಿಳಿದಿರುವ ಪತ್ತೇದಾರ ಫಿಕ್ಸ್, ಅಷ್ಟೊಂದು ಹಣವನ್ನು ಖರ್ಚು ಮಾಡಿಕೊಂಡು ಭೂ ಪ್ರದಕ್ಷಿಣೆ ಹೊರಟ ಫಾಗೇ ಬ್ಯಾಂಕ್‍ನ ಹಣ ಕದ್ದಿರುವ ವ್ಯಕ್ತಿಯೆಂದು ಅವರನ್ನು ಹಿಂಬಾಲಿಸಿ ಬರುತ್ತಾನೆ. ಅವರನ್ನು ಬಂಧಿಸುವಲ್ಲಿ ವಾರಂಟ್ ಬರದೆ ಪ್ರತೀ ಪ್ರಯಾಣದಲ್ಲಿಊ ವಿಳಂಭವಾಗುತ್ತದೆ. ಬ್ರಿಟಿಷರ ವಸಹಾತಿನಲ್ಲೇ ಅವರನ್ನು ಬಂಧಿಸಬೇಕೆಂದು ತುದಿಗಾಲಲ್ಲಿ ನಿಂತಿರುತ್ತಾನೆ. ಆದರೆ ವಾರೆಂಟ್ ಅವನ ಕೈ ಸೇರುವಲ್ಲಿ ವಿಳಂಭವಾಗಿರುತ್ತದೆ. ತಮ್ಮ ನಿಗಧಿತ ಸಮಯದಂತೆ ಪ್ರಯಾಣ ಮುಂದುವರಿಸುವಲ್ಲಿ ಫಾಗ್‍ರವರಿಗೆ ಅಡೆತಡೆಗಳಾಗುತ್ತವೆ. ಭಾರತದಲ್ಲಿ ಸತಿಗೆ ಹೋಗಬೇಕಿರುವ ಹೆಣ್ಣು ಔದಾಳನ್ನು ರಕ್ಷಿಸಲು ಹೋಗಿ ತಾವೇ ಆಪತ್ತಿನಲ್ಲಿ ಸಿಲುಕುತ್ತಾರೆ. ನಂಬಿಕಸ್ಥ ಆಳು ಪಾಸ್ ಪರೋತನ ಚಾಣಾಕ್ಷ ಬುದ್ಧಿಯಿಂದ ಪ್ರತಿಯೊಂದು ಸಂಕಂಟದಿಂದಲೂ ಪಾರಾಗುತ್ತಾರೆ. ಆಯಾ ದೇಶಗಳಿಗನುಗುಣವಾಗಿ ತಮ್ಮ ಕೈ ಗಡಿಯಾರದ ಸಮಯವನ್ನು ಬದಲಾಯಿಸುವ ಫಾಗ್ ಮತ್ತು ತಾನು ಹೊರಟಲ್ಲಿಂದ ಸಮಯವನ್ನು ಸರಿಹೊಂದಿಸದ ಪಾಸ್ ಪರೋತ, ಸತಿಯ ಹೆಣ್ಣು ಔದಾ, ಪತ್ತೇದಾರ ಫಿಕ್ಸ್ ಎಲ್ಲರೂ ತಮ್ಮ ತಮ್ಮ ಗುರಿ ತಲುಪುದನ್ನೇ ಕಾಯುತ್ತಿರುತ್ತಾರೆ. ಕೊನೆಗೂ ಬ್ರಿಟನ್ ತಲುಪುವ ಮೊದಲೇ ಪತ್ತೇದಾರ ಫಿಕ್ಸ್ ಅವರನ್ನು ಬಂಧಿಸುತ್ತಾನೆ. ಆದರೆ ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ. ಇದರಿಂದಾಗಿ ಎರಡು ದಿವಸಗಳಷ್ಟು ತಡವಾಗಿ ತಮ್ಮ ಗಮ್ಯ ತಲುಪುತ್ತಾರೆ ಫಾಗ್. ನೊಂದ ಅವರು ತನ್ನನ್ನು ನಂಬಿ ಬಂದ ಔದಾಳಿಗೂ ಏನಾದರೊಂದು ದಾರಿ ಮಾಡಿಕೊಡುವುದೆಂದು ನಿರ್ಧರಿಸುವಾಗ ಅವಳು ತನ್ನ ಮನಸ್ಸಿನಲ್ಲಿರುವುದನ್ನು ಹೇಳುತ್ತಾಳೆ. ಅವಳನ್ನು ಮದುವೆಯಾಗಲು ಮುಂದಾಗುವ ಫಾಗ್ ಮದುವೆಯ ದಿನವನ್ನು ನಿರ್ಧರಿಸಲು ಪಾಸ್ ಪರೋತನನ್ನು ಚರ್ಚಿಗೆ ಕಳುಹಿಸುತ್ತಾರೆ. ಆಗ ಶನಿವಾರದಂದು ಮದುವೆ ಸಾಧ್ಯವಿಲ್ಲವೆಂದು ಹಿಂದಕ್ಕೆ ಬರುತ್ತಾನೆ ಪಾಸ್ ಪರೋತ. ಸತ್ಯದ ಅರಿವಾಗುವುದು ಆಗ. ಸಮಯ ಬದಲಾಯಿಸದ ಪಾಸ್ ಪರೋತನ ಗಡಿಯಾರ ಸತ್ಯವನ್ನು ಬಿಚ್ಚಿಡುತ್ತದೆ. ಅವರಿಗೆ ಆಶ್ಚರ್ಯವಾಗಿ ದಿನಗಳನ್ನು ಲೆಕ್ಕ ಹಾಕುತ್ತಾರೆ. ಪಂದ್ಯ ಮುಗಿಯಲು ಇನ್ನೂ ಕೆಲವೇ ಕ್ಷಣಗಳಿದ್ದಾಗ ಫಾಗ್ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಅಲ್ಲಿಗೆ ಹೋಗುತ್ತಾರೆ. ಪಂದ್ಯದಲ್ಲಿ ಗೆದ್ದ ಅವರನ್ನು ಸ್ನೇಹಿತರೆಲ್ಲಾ ಅಭಿನಂದಿಸುತ್ತಾರೆ. ಈ ಬೃಹತ್ ಪುಸ್ತಕದ ಐದು ಕಾದಂಬರಿಗಳಲ್ಲಿಯೂ ತುಂಬಾ ಆಪ್ತವೆನಿಸುವ ಕಾದಂಬರಿ ಇದು. ಅದಕ್ಕೆ ಕಾರಣ ಫಾಗ್‍ರವರ ಪ್ರಯಾಣ ಭಾರತದ ಮೂಲಕ ನಡೆಯುವುದು ಆಗಿರಬಹುದು. ಇಲ್ಲಿನ ಭೌಗೋಳಿಕ ಹಿನ್ನಲೆ, ಪದ್ಧತಿಗಳು, ಆಚಾರ ವಿಚಾರಗಳು ಈ ಕಾದಂಬರಿಯಲ್ಲಿ ಕಾಣಸಿಗುತ್ತದೆ.
ಹೀಗೆ ಈ ಮೂರು ವಿಭಾಗಳಲ್ಲಿಯೂ ವಿಭಿನ್ನ ಕಾದಂಬರಿಗಳಿದ್ದು ಎಲ್ಲವೂ ಒಂದೊಂದು ರೀತಿಯ ಪ್ರಯಾಣದ ಅನುಭವವನ್ನು ನೀಡುತ್ತವೆ. ಇಲ್ಲಿ ಆಪ್ಯವೆನಿಸುವುದು ವಿದ್ಯಾರಣ್ಯರ ಭಾಷಾ ಹಿಡಿತ. ಮೂಲ ಕಾದಂಬರಿಯನ್ನು ಓದಿದಷ್ಟೇ ಸುಖ ಇಲ್ಲಿದೆ. ನಿಜವಾಗಿಯೂ ಕನ್ನಡಕ್ಕೆ ಈ ಕಾದಂಬರಿಗಳನ್ನು ತುರ್ಜುಮೆ ಮಾಡಿರುವ ಲೇಖಕರು ಅಭಿನಂದನಾರ್ಹರು.
ಈ ಕಾದಂಬರಿ ಚಾರುಮತಿ ಪ್ರಕಾಶನ, 12, 10ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು - 560 050; ಫೋ.ಸಂ.94428 35553 ಇವರು ಪ್ರಕಟಿಸಿದ್ದಾರೆ. ಪುಸ್ತಕದ ಬೆಲೆ ರೂ. 280/- ಮಾತ್ರ. ಪುಟಗಳು - 552

Read more!

Saturday, January 31, 2009

ಚಿಣ್ಣರ ಲೋಕಕ್ಕೆ ಬಣ್ಣದ ಬುಗರಿ- ಬೇಬ್ಲೇಡ್


"3...2...1...LET IT RIP"ಆಧುನಿಕ ಯುಗದಲ್ಲಿ ಮಕ್ಕಳ ಮೆದುಳಿಗೆ ಕಸರತ್ತು ನೀಡಲು ಅದೆಷ್ಟೋ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಆಟಿಕೆಗಳು ಮತ್ತು ಅದರಿಂದ ಆಡುವ ಆಟಗಳು ಪುರಾತನ ಕಾಲದಲ್ಲಿಯೇ ಭಾರತದಲ್ಲಿದ್ದವೆಂದು ನಮ್ಮ ಪುರಾಣಗಳಿಂದ ತಿಳಿದು ಬರುತ್ತದೆ. ಪಗಡೆಯಾಟ, ಬಿಲ್ಲು ಬಾಣ, ಬುಗರಿಯಾಟ ಮುಂತಾದವುಗಳನ್ನು ನಾವು ಬಹಳ ಹಿಂದಿನಿಂದಲೆ ಬಲ್ಲವರಾಗಿದ್ದೇವೆ. ಇಂತಹ ಆಟಗಳು ಇಂದಿನ ಮಕ್ಕಳನ್ನೂ ಆಕರ್ಷಿಸುತ್ತಿವೆ ಎನ್ನುವುದಕ್ಕೆ ಉದಾಹರಣೆಗಳನ್ನು ನೀಡಬಹುದು. ಟಿ.ವಿ.ಯಲ್ಲಿ ರಾಮಾಯಣ ಧಾರಾವಾಹಿ ಆರಂಭವಾದಾಗ ಅದರಲ್ಲಿನ ಬಿಲ್ಲು ಬಾಣಗಳನ್ನು ನೋಡಿ ಮಕ್ಕಳು ಅಂತಹ ಆಟಿಕೆಗಳಿಗೆ ಆಕರ್ಷಿತರಾಗಿದ್ದರು.

ಟಿ.ವಿ. ಮಾಧ್ಯಮವು ಮಕ್ಕಳನ್ನು ಹೆಚ್ಚು ಆಕರ್ಷಿಸಲು ಮುಖ್ಯ ಕಾರಣ ಫ್ಯಾಂಟಸಿ ತುಂಬಿರುವ ಕಾರ್ಟೂನ್ ಚಿತ್ರಗಳು. ಟಾಮ್ ಅಂಡ್ ಜೆರಿ, ವಾಲ್ಟ್ ಡಿಸ್ನೆ, ಡೂಫಿ ಡಕ್‍ಗಳಂತಹ ಅನಿಮೆಟೆಡ್ ಕಾರ್ಟೂನ್ ಚಿತ್ರಗಳು ಬಹು ಬೇಗನೆ ಮಕ್ಕಳ ಮನಸ್ಸನ್ನು ಸೆಳೆಯುವಲ್ಲಿ ಸಫಲವಾಗಿವೆ. ಈಗ ಕಾರ್ಟೂನ್ ಲೋಕಕ್ಕೆ ಹೊಸ ಸೇರ್ಪಡೆಯೆಂದರೆ ಪೋಕೆಮಾನ್ Pokemon. ಯಾವುದೇ ಒಂದು ಪ್ರಾಣಿ ಅಥವಾ ಪಕ್ಷಿಗಳ ಪ್ರತಿರೂಪದಂತಿರುವ ಈ ಹೊಸ ತಳಿಯ ಕಾರ್ಟೂನ್‍ಗಳು ರೂಪಕ್ಕೆ ತಕ್ಕಂತೆ ಆಯಾ ಪ್ರಾಣಿ ಅಥವಾ ಪಕ್ಷಿಯ ಹೆಸರನ್ನು ಹೊಂದಿರುತ್ತವೆ. ಈ ಪೋಕೆಮಾನ್ ಕಾರ್ಟೂನ್‍ಗಳಲ್ಲಿ ನೈಜತೆ ಇರುವುದರಿಂದ ಮಕ್ಕಳು ಮನಸೋತಿರುವುದು ಸಹಜ.
ಇಂತಹ ಅನಿಮೆಟೆಡ್ ಚಿತ್ರಗಳು ಮತ್ತು ಕಾರ್ಟೂನ್‍ಗಳು ಮಕ್ಕಳನ್ನು ಹೊಸದೊಂದು ಲೋಕಕ್ಕೆ ಎಳೆದೊಯ್ಯುತ್ತವೆ. ಮಕ್ಕಳು ಕಣ್ಣು ರೆಪ್ಪೆಗಳನ್ನು ಮುಚ್ಚದೆ ಕುತೂಹಲದಿಂದ ಟಿ.ವಿ.ಯನ್ನು ನೋಡುವಂತೆ ಮಾಡುತ್ತದೆ. ಈ ಕಾರ್ಟೂನ್‍ಗಳನ್ನು ಬಿತ್ತರಿಸುವ ಚಾನೆಲ್‍ಗಳು ನಮ್ಮಲ್ಲಿ ಕಡಿಮೆಯೇನಿಲ್ಲ! ಅದರಲ್ಲೂ ಕಾರ್ಟೂನ್ ನೆಟ್‍ವರ್ಕ್ ಮಕ್ಕಳನ್ನು ಟಿ.ವಿ.ಯ ಮುಂದೆ ಮಾತ್ರವಲ್ಲ ಆಟದ ಬಯಲಿನವರೆಗೂ ಬರುವಂತೆ ಮಾಡಿದೆಯೆಂದರೆ ತಪ್ಪಾಗಲಾರದು. ಇದುವೇ ಕಾರ್ಟೂನ್ ನೆಟ್‍ವರ್ಕ್ ಮೊದಲ ಬಾರಿಗೆ ಚಿಣ್ಣರ ಲೋಕಕ್ಕೆ ಬಣ್ಣದ ಬುಗುರಿ- ಬೇಬ್ಲೇಡನ್ನು ಪರಿಚಯಿಸಿತು.
ಈ ಬೇಬ್ಲೇಡುಗಳೆಂದರೇನು?ಬೇಬ್ಲೇಡ್ ಎಂದರೆ ಬುಗರಿ. ಈ ಆಟವನ್ನು ನಿರ್ದಿಷ್ಟ ಆಟಿಕೆಯಿಂದ ಆಡುವಂತಹುದು. ಇದರಲ್ಲಿ ನಾಜೂಕಿನ (ಸೊಫೊಸ್ಟಿಕೇಟೆಡ್) ಬುಗರಿ (ಬೇಬ್ಲೇಡ್)ಗಳನ್ನು ಗನ್ ಲಾಂಚರ್‍‍ಗಳ ಮೂಲಕ ಹಾರಿಸಿ, ಬುಗರಿಯನ್ನು ತಿರುಗುವಂತೆ ಮಾಡಲಾಗುತ್ತದೆ. ಈ ಹೆಸರು ಕೇಳುವಾಗಲಂತು ನಮಗೆ ವಿಪರೀತ ಕಲ್ಪನೆ ಬರುವುದು ಸಹಜ. ಆದರೆ ಈ ಬೇಬ್ಲೇಡುಗಳು ಬುಗರಿಗಳ ಮಾದರಿಯೆ!ಕಾಲ ಬದಲಾದಂತೆಲ್ಲಾ ಹೊಸ ಹೊಸ ತಂತ್ರಜ್ಞಾನಕ್ಕೆ ಮನುಷ್ಯ ಹೊಂದಿಕೊಳ್ಳುವಂತೆಯೆ, ಈಗ ಚಿಣ್ಣರಿಗೂ ಹೊಸ ಹೊಸ ಆಟಿಕೆಗಳು ಬರುತ್ತಿವೆ. ಮರದ ಬುಗರಿಗೆ ನೂಲು ಸುತ್ತಿ, ಎಳೆದು ನೆಲದ ಮೇಲೆ ತಿರುಗುವಂತೆ ಮಾಡುವ ಬುಗರಿಯಾಟ ಮಕ್ಕಳಲ್ಲಿ ಆಸಕ್ತಿಯನ್ನು ಕಡಿಮೆ ಮಾಡಿದೆ. ಆದರೆ ಈ ಬೇಬ್ಲೇಡುಗಳು, ಕಿಕ್ ಹೊಡೆಯದೆ, ಬಟನ್ ಒತ್ತಿದ ಕೂಡಲೆ ಸ್ಟಾರ್ಟಾಗುವ ಬೈಕ್‍ಗಳಂತೆ. ಒಮ್ಮೆ ಫಿಕ್ಸ್ ಮಾಡಿ ಗನ್ ಲಾಂಚರ್‍‍ಗೆ ಸೇರಿಸಿ ಟ್ರಿಗರ್ ಒತ್ತಿದರೆ ಕೆಳಗೆ ಬಿದ್ದು ಗಿರ್ರನೆ ಸುತ್ತುತ್ತವೆ. ಈ ಬಣ್ಣದ ಬುಗರಿಗಳನ್ನು ನೋಡುವುದೇ ಒಂದು ಥ್ರಿಲ್!
ಬೇಬ್ಲೇಡ್‍ಗಳ ಮೂಲ ಇತ್ತೀಚಿನದಲ್ಲ. ಈ ಬೇಬ್ಲೇಡ್‍ಗಳು ಹದಿನೇಳನೆಯ ಶತಮಾನದಲ್ಲಿಯೆ ಚಾಲ್ತಿಯಲ್ಲಿದ್ದವು. ಆ ಕಾಲದಲ್ಲಿ ತಿರುಗುವ ಬುಗರಿಗಳನ್ನು `ಬೆಗೋಮಸ್'(Beigomas) ಎಂದು ಕರೆಯುತ್ತಿದ್ದರು. ಈ ಬೆಗೋಮಸ್‍ಗಳನ್ನು ಸಮುದ್ರದ ಸತ್ತ ಚಿಪ್ಪು ಮೀನು (Spiral Sea Shell) ಗಳ ಒಳಗೆ ಮರಳು ತುಂಬಿಸಿ ಆಡುತ್ತಿದ್ದರು. ಆಗಿನ ಕಾಲದಲ್ಲಿ ಬೆಗೋಮಸ್‍ಗಳು ಜಗದ್ವಿಖ್ಯಾತಿಯನ್ನು ಹೊಂದಿದ್ದವು. ಆದರೆ ಎರಡನೆ ಜಾಗತಿಕ ಯುದ್ಧದಿಂದ ತಲ್ಲಣಗೊಂಡ ಜನರು ಈ ಆಟದಲ್ಲಿ ಆಸಕ್ತಿಯನ್ನು ಕಳೆದುಕೊಂಡರೆನ್ನಬಹುದು.
ಈ ಬೆಗೋಮಸ್‍ಗಳು ಇತ್ತೀಚಿನ ನಾಲ್ಕೈದು ವರ್ಷಗಳ ಹಿಂದೆಯಷ್ಟೆ ಮರುಜನ್ಮ ಪಡೆದುಕೊಂಡು ಬಕುಟೆನ್ ಶೂಟ್ ಎನ್ನುವ ಹೊಸ ಹೆಸರಿನೊಂದಿಗೆ ಜನರನ್ನು ಆಕರ್ಷಿಸತೊಡಗಿದವು. ಈ ಬಕುಟೆನ್ ಶೂಟ್‍ಗಳೆ ಶಾರ್ಟ್ ಅಂಡ್ ಸ್ವೀಟಾಗಿ ಬೇಬ್ಲೇಡ್‍ಗಳೆಂದು ಕರೆಯಲ್ಪಡುತ್ತಿವೆ.
ಬೇಬ್ಲೇಡ್‍ಗಳು ಮೊದಲು ತಯಾರಾಗಿ ಜನಪ್ರಿಯಗೊಂಡಿದ್ದು ಜಪಾನ್ ದೇಶದಲ್ಲಿ. ತದ ನಂತರ ಯು.ಕೆ., ಯು.ಎಸ್.ಎ. ಮತ್ತು ಜಗತ್ತಿನ ಇತರೆ ರಾಷ್ಟ್ರಗಳಿಗೆ ಇದರ ಜನಪ್ರಿಯತೆ ವ್ಯಾಪಿಸಿತು. ಈಗ ಇದರ ಜನಪ್ರಿಯತೆ ಎಷ್ಟೆಂದರೆ ಹಳ್ಳಿಯ ಮಕ್ಕಳನ್ನು ಸೆಳೆಯುತ್ತಿದೆಯೆಂದರೆ ಆಶ್ಚರ್ಯವಿಲ್ಲ. ಇವುಗಳು ಜಗತ್ತಿನ ಮಕ್ಕಳನ್ನು ಆಕರ್ಷಿಸಿ ಪೂರ್ಣ ಪ್ರಮಾಣದ ಆಟಿಕೆ (ಆಟ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಈ ಜನಪ್ರಿಯತೆಯ ಹೆಗ್ಗಳಿಕೆ ಬೇಬ್ಲೇಡ್ 2000, V-Force ಮತ್ತು G-Revolution ಅನ್ನುವ ಮೂರು ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ ಕಾರ್ಟೂನ್ ನೆಟ್ ವರ್ಕ‍ಗೆ ಸಲ್ಲುತ್ತದೆ. ಈ ಆಟಿಕೆಯನ್ನು ಪರಿಚಯಿಸಿದ್ದು ಮಾತ್ರವಲ್ಲ ಅದನ್ನು ಆಡುವ ರೀತಿ ಹಾಗೂ ಅದರಲ್ಲಿಯ ಹೊಸ ಹೊಸ ತಂತ್ರಜ್ಞಾನಗಳನ್ನು ಮತ್ತು ಅವಿಷ್ಕಾರಗಳನ್ನೂ ಈ ಧಾರಾವಾಹಿಗಳ ಮೂಲಕ ಕಾರ್ಟೂನ್ ನೆಟ್‍ವರ್ಕ್ ಪ್ರಸಾರ ಮಾಡುತ್ತಿದೆ.
ಈ ಬೇಬ್ಲೇಡ್‍ಗಳನ್ನು ಹೇಗೆ ಮತ್ತು ಎಲ್ಲಿ ಆಡಬಹುದು?ಸಾಮಾನ್ಯವಾಗಿ ಈ ಆಟವನ್ನು ಮಕ್ಕಳು ಮನೆಯ ಟಾರಸಿಯಲ್ಲೋ ಅಥವಾ ನಯವಾದ ನೆಲದ ಮೇಲೋ ಆಡುತ್ತಾರೆ. ಆದರೆ ಈ ಆಟವನ್ನು ಆಡಲು ನಿರ್ದಿಷ್ಟವಾದ ಸ್ಟೇಡಿಯಂ(Stadium) ಕೂಡ ಇದೆ. ಈ ಸ್ಟೇಡಿಯಂಗಳು ಬೇಬ್ಲೇಡಿಗಿಂತಲೂ ಹೆಚ್ಚು ಬೆಲೆಬಾಳುವುದರಿಂದ ಅದರ ಬದಲು, ಮೇಲ್ತಳದ (ಗುಂಡಿಯಿಲ್ಲದ) ಅಗಲ ಪಾತ್ರೆಯಲ್ಲಿಯೋ, ಟೀ ಟ್ರೇಯಲ್ಲಿಯೋ ಆಡಬಹುದು. ಬೇಬ್ಲೇಡ್‍ಗಳನ್ನು ಸ್ಟೇಡಿಯಂ (ಪೋರ್‍ಟೆಬಲ್ ಪ್ಲೇಗ್ರೌಂಡ್) ಗಳಲ್ಲಿಯೆ ಆಡಿದರೆ ಉತ್ತಮ. ಒಂದು ವೇಳೆ ಈ ಸ್ಟೇಡಿಯಂಗಳಲ್ಲಿ ಆಟ ಆಸಕ್ತಿಯನ್ನು ನೀಡದಿದ್ದರೆ, ಈ ಕೆಳಗೆ ಹೇಳಿದ ಕೆಲವು ರೀತಿಗಳಲ್ಲಿ ಆಡಬಹುದು.
೧. ಸ್ಟೇಡಿಯಂನ ಬದಲು ನಯವಾದ ನೆಲದ ಮೇಲೆ ಆಡಬಹುದು. ತುಂಬಾ ಜನರಿರುವಾಗ ಇದು ಸಶಕ್ತ ಸ್ಥಳವಾಗಿರುತ್ತದೆ. ಎಲ್ಲರೂ ನಿಂತು ಅಥವಾ ಆರಾಮವಾಗಿ ಕುಳಿತು ಆಟವನ್ನು ವೀಕ್ಷಿಸಬಹುದು.೨. ಸಣ್ಣಗಿನ ಅಂಚಿರುವ ಟೀ ಟ್ರೇ ಅಥವಾ ಮೇಲ್ತಳವಿರುವ ಅಗಲವಾದ ಪಾತ್ರೆಯಲ್ಲಿಯೂ ಇದನ್ನು ಆಡಬಹುದು.೩. ಸ್ಟೇಡಿಯಂನ ಮಧ್ಯದಲ್ಲಿರುವ ಪ್ಲಾಸ್ಟಿಕನ್ನು ಹಿಂದಕ್ಕೆ ಸರಿಸಿ (ಈ ಸೌಲಭ್ಯ ಎಲ್ಲಾ ಸ್ಟೇಡಿಯಂಗಳಲ್ಲೂ ಇಲ್ಲ) ಅದನ್ನು ಕವಚಿ ಹಾಕಿ ಅದರಲ್ಲಿಯೂ ಆಡಬಹುದು.೪. ಮಧ್ಯಮ ಗಾತ್ರದ ಅಗಲ ಬಾಯಿಯ ಪಾತ್ರೆಯಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ, ಹಿಂದಿನ ದಿನ ಫ್ರೀಜರ್‍‍ನಲ್ಲಿಟ್ಟು ಮರುದಿನ ತೆಗೆದಾಗ ನೀರು ಐಸ್ ಆಗಿರುತ್ತದೆ. ಇದರ ಮೇಲೂ ಆಡಬಹುದು.೫. ಎರಡು ಕ್ರಿಕೆಟ್ ಸ್ಟಂಪ್ (ಪೋಲ್)ಗಳನ್ನು ಸ್ವಲ್ಪ ಅಂತರದಲ್ಲಿ ನಿಲ್ಲಿಸಿ ಪೆನಲ್ಟಿ ಸ್ಪಾಟ್‍ಗಳನ್ನು ಗುರುತಿಸಿಕೊಂಡು ಮಧ್ಯೆ ಹಗುರವಾದ ಬಾಲ್‍ಗಳನ್ನು ಇಟ್ಟು ಬೇಬ್ಲೇಡ್‍ಗಳನ್ನು ಬಾಲ್‍ಗೆ ತಾಗುವಂತೆ ಮಾಡಿ ಬಾಲ್‍ಗಳು ಪೆನಲ್ಟಿ ಸ್ಪಾಟ್‍ನತ್ತ ಸಾಗುವಂತೆ ಆಡಬಹುದು. ಇದು ಬೇಬ್ಲೇಡಿನಿಂದ ಆಡಬಹುದಾದ ಆಟದ ಒಂದು ಮಾದರಿ.೬. ಬೇಬ್ಲೇಡನ್ನು ಸ್ಟೇಡಿಯಂನ ಬದಿಯಿಂದ ಹರಿಸಿ, ಬೇಬ್ಲೇಡ್ ಮಧ್ಯೆ ಬರುವವರೆಗೆ ಕಾದು, ಡಿಫೆನ್ಸ್ ಬ್ಲೇಡನ್ನು ಸ್ಟೇಡಿಯಂನಲ್ಲಿ ಕಾಯುವಂತೆ ಮಾಡಬಹುದು.೭. ಒಂದೇ ಸ್ಟೇಡಿಯಂನಲ್ಲಿ ಒಂದು ಬಾರಿಗೆ ಎರಡು ಬೇಬ್ಲೇಡ್‍ಗಳನ್ನು ಹಾರಿಸಿ, ಸ್ಪರ್ಧಾತ್ಮಕವಾಗಿಯೂ ಆಡಬಹುದು. ಈ ರೀತಿ ಆಡುವಾಗ ಮುಖವನ್ನು ನಿರ್ದಿಷ್ಟ ಅಂತರದಲ್ಲಿಟ್ಟು ಹಾರಿಸಬೇಕು. ಈ ರೀತಿ ಎರಡು ಬ್ಲೇಡ್‍ಗಳು ಒಂದು ಸ್ಟೇಡಿಯಂನಲ್ಲಿರುವಾಗ ಮುಖ ಹತ್ತಿರವಿಟ್ಟು ನೋಡುವುದಾಗಲಿ ಮಾಡಬಾರದು. ಯಾಕೆಂದರೆ ಸ್ಟೇಡಿಯಂನಲ್ಲಿ ಎರಡು ಬ್ಲೇಡುಗಳು ಸುತ್ತುವಾಗ ಒಂದಕ್ಕೊಂದು ತಾಗಿ ರಪ್ಪನೆ ಹೊರಗೆ ಜಿಗಿಯುವ ಸಾಧ್ಯತೆಗಳಿವೆ.
ಬೇಬ್ಲೇಡ್‍ಗಳನ್ನು ಖರೀದಿಸುವಾಗ ಯಾವ ಬೇಬ್ಲೇಡುಗಳು ಉತ್ತಮವೆಂದು ನಿರ್ಧರಿಸುವುದು ಕಷ್ಟ. ಸಿ.ಡಿ, ಕ್ಯಾಸೆಟ್‍ಗಳು ಪೈರೆಟ್ ಆಗುವಂತೆ ಇಲ್ಲೂ ಡೂಪ್ಲಿಕೇಟ್ ಬೇಬ್ಲೇಡ್‍ಗಳು ಲಭ್ಯ! ಇವು ಮೆಟಲ್ ಹಾಗೂ ಪ್ಲಾಸ್ಟಿಕ್ ಎರಡರಲ್ಲೂ ದೊರೆಯುತ್ತವೆ. ಒರಿಜಿನಲ್ ಬೇಬ್ಲೇಡ್‍ಗಳು ಸುಮಾರು ಇನ್ನೂರೈವತ್ತಕ್ಕಿಂತ ಮೇಲ್ಪಟ್ಟು ದರಗಳಲ್ಲಿ ದೊರೆಯುತ್ತವೆ. ಅದಲ್ಲದೆ ಐವತ್ತು ರೂಪಾಯಿಗಳಿಗೂ ದೊರೆಯುತ್ತವೆ. ಇವು ಪ್ಲಾಸ್ಟಿಕ್‍ನವುಗಳದಾಗಿದ್ದು ಆಕರ್ಷಕವಾಗಿಯೂ ಇರುತ್ತವೆ. ಇದರ ಸ್ಟೇಡಿಯಂ ಬೆಲೆ ಮುನ್ನೂರೈವತ್ತು ರೂಪಾಯಿಗಳಾಗಿರುತ್ತದೆ. ಮಕ್ಕಳು ಈ ಆಟವನ್ನು ಆಡುವಾಗ `ಬ್ಯಾಟಲ್ ಫೀಲ್ಡ್' ಎಂದೆ ಹೇಳುತ್ತಾರೆ. ಇದರ ಜನಪ್ರಿಯತೆಗೆ ಈ ಶಬ್ದವೇ ನಿದರ್ಶನ!
ಬೇಬ್ಲೇಡ್‍ಗಳ ಗುಣಮಟ್ಟವನ್ನು ಅವುಗಳ ರೇಟಿಂಗ್ ಮೇಲೆ ನಿರ್ಧರಿಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಡ್ರಾಗನ್ (G) rating 8.8/10, ಡ್ರಿಗರ್ V2 8.5/20, ಗೆಲನ್ ಅಟ್ಯಾಕರ್ 7.2/10, ಡ್ರಾಗನ್ V 8.4/10 ಮತ್ತು ಡ್ರಿಗರ್ F 7/10 ಡ್ರಾನ್‍ಜ಼ರ್, ಡ್ರೆಸಿಲ್‍ಗಳು ಅತ್ಯುತ್ತಮವಾದವುಗಳು.
ಬೇಬ್ಲೇಡ್‍ಗಳಲ್ಲಿ ಮುಖ್ಯವಾಗಿ ಬ್ಲೇಡ್, ಲಾಂಚರ್ (ಶೂಟರ್) ಮತ್ತು ವೈಂಡರ್ ಅನ್ನುವ ವಿವಿಧ ಭಾಗಗಳಿವೆ. ಬೇಬ್ಲೇಡ್‍ಗಳ ಬಿಡಿಬಿಡಿಯಾದ ಭಾಗಗಳಾದ ಬ್ಲೇಡ್ ಬೇಸ್, ವ್ಹೈಟ್ ಡಿಸ್ಕ್, ಅಟ್ಯಕ್ ರಿಂಗ್, ಬಿಟ್ ಚಿಪ್ ಮತ್ತು ಸ್ಪಿನ್ ಗೇರ್‍ಗಳನ್ನು. ಸೇರಿಸಿ, ಸ್ಕ್ರೂ ಹಾಕಬೇಕು. ನಂತರ ಲಾಂಚರ್ ಅಥವಾ ಶೂಟರ್‍‍ನಲ್ಲಿರುವ ಉದ್ದನೆಯ ಹುಕ್ಸ್‍ಗಳಿಗೆ ಫಿಕ್ಸ್ ಮಾಡಬೇಕು. ಲಾಂಚರ್‍‍ನ ಎರಡು ತುದಿಗಳಿಗಿರುವ ತೂತಿನ ಮೂಲಕ ನಿರ್ದಿಷ್ಟವಾದ ರೀತಿಯಲ್ಲಿ ವೈಂಡರನ್ನು ಈ ತೂತಿಗೆ ಸೇರಿಸಿ, "3-2-1 let it Rip" ಎಂದು ಹೇಳುತ್ತಾ ವೈಂಡರನ್ನು ಬಲವಾಗಿ ಎಳೆದಾಗ ಬೇಬ್ಲೇಡ್‍ಗಳು ಸ್ಟೇಡಿಯಂ ಮೇಲೆ ಬಿದ್ದು ತಿರುಗುತ್ತವೆ.
ಬೇಬ್ಲೇಡ್‍ಗಳನ್ನು ಆಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಅವುಗಳೆಂದರೆ-೧. ಈ ಬೇಬ್ಲೇಡ್‍ಗಳನ್ನು ಎಲ್ಲೆಂದರಲ್ಲಿ ಆಡಬಾರದು. ದೊರಗು ನೆಲದ ಮೇಲೆ ಅಥವಾ ಮಣ್ಣಿನ ನೆಲದ ಮೇಲೆ ಆಡಿದರೆ ಇವು ಹಾಳಾಗುತ್ತವೆ.೨. ಇವುಗಳನ್ನು ನೀರಿನಲ್ಲಿ ಆಡಬಾರದು.೩. ಅತೀ ಎತ್ತರದಿಂದ ಬೇಬ್ಲೇಡ್‍ಗಳನ್ನು ಹಾರಿಸಬರದು. ಇವು ತುಂಬಾ ನಾಜೂಕಾಗಿರುವುದರಿಂದ ಬೇಬ್ಲೇಡುಗಳು ಹಾಳಾಗಬಹುದು.೪. ಬೇಬ್ಲೇಡ್‍ಗಳನ್ನು ನೆಲಕ್ಕೆ ಉಜ್ಜಬಾರದು. ಇದರಿಂದ ತುದಿ (Top point) ತುಂಡಾಗುವ ಸಾಧ್ಯತೆಗಳಿವೆ.೫. ಒಂದು ಬೇಬ್ಲೇಡ್‍ನ ವೈಂಡರ್, ಲಾಂಚರ್‍‍ಗಳನ್ನು ಇನ್ನೊಂದು ಬೇಬ್ಲೇಡ್‍ಗೆ ಹೊಂದಿಸಬಾರದು. ಇದರಿಂದ ಲಾಂಚರ್, ಬೇಬ್ಲೇಡ್ ಹಾಗೂ ವೈಂಡರ್‍‍ಗಳು ಹಾಳಾಗುವ ಸಾಧ್ಯತೆಗಳಿವೆ.೬. ಬೇಬ್ಲೇಡನ್ನು ತಲೆಕೆಳಗೆ ಮಾಡಿ ಆಡಬಾರದು.೭. ತಮಾಷೆಗಾಗಿಯಾದರೂ ಇದನ್ನು ಇನ್ನೊಬ್ಬರ ಮೇಲೆ ಹಾರಿಸಬಾರದು. ಅದರ ಡಿಸೈಂಡ್ ತುದಿಗಳು ಶಾರ್ಪ್ ಆಗಿರುತ್ತವೆ. ಎಂಟು ವರ್ಷದ ಕೆಳಗಿನ ಮಕ್ಕಳು ಇದನ್ನು ಆಡುವಾಗ ದೊಡ್ಡವರು ಯಾರಾದರೂ ಗಮನಿಸುವುದು ಅಗತ್ಯ.
ಇವುಗಳೇನೆ ಇದ್ದರೂ ಈ ಬಣ್ಣದ ಬುಗುರಿ ಮುಂಬರುವ ದಿನಗಳಲ್ಲಿ ಜನಪ್ರಿಯ ಒಳಾಂಗಣ ಕ್ರೀಡೆಯಾಗಿ ಗುರುತಿಸುವುದು ಖಂಡಿತ. ಈಗಾಗಲೇ ಬೇಬ್ಲೇಡ್‍ಗಳ ಪಂದ್ಯಾಟಗಳು ನಡೆಯುತ್ತಿರುವುದು ಇದರ ಜನಪ್ರಿಯತೆಗೆ ಉತ್ತಮ ಉದಾಹರಣೆಯಾಗಿದೆ.

Read more!

Thursday, December 18, 2008

ಮಳೆ ಹನಿಯ ಹೂವು


(ಕನ್ನಡ ಪ್ರಭದಲ್ಲಿ ಪ್ರಕಟವಾದ ಕಥೆ)
ಎತ್ತರದ ಮರಗಳ ನೆರಳಿನಾಸರೆಯ ಹಿಡಿದು ಸಾಗಿದವಳನ್ನು ಸ್ವಾಗತಿಸಿದ್ದು ಬೆಟ್ಟಗಳ ಮರೆಯಿಂದ ಹಾದು ಹಸಿರು ಹುಲ್ಲಿನ ಮೇಲೆ ಸ್ಪಷ್ಟ ಬೆಳಕು ಚೆಲ್ಲಿದ ಮುಂಜಾವಿನ ಸೂರ್ಯನ ಹಿತವಾದ ಕಿರಣಗಳು.ತಲೆಯೆತ್ತಿ ಬೆಟ್ಟದ ತುದಿಯವರೆಗೂ ನೋಟ ಬೀರಿದ ಮುಗ್ಧ ಹುಡುಗಿ ರಶ್ಮಿ ಒಂದು ಕ್ಷಣ ಕಣ್ಣು ಮುಚ್ಚಿ ತೆರೆದಳು.ದೂರದ ಬೆಟ್ಟ ಕಾಣೋದಿಕ್ಕೆ ನುಣ್ಣಗೆ!ಇದೇ ಬೆಟ್ಟದಲ್ಲಿ ಮರೆಯಾಗಿ ಹೋಗಿದ್ದು ತನ್ನ ಕನಸು! ಮುಗ್ಧ ಹುಡುಗಿಗೆ ಅರಿವಿಲ್ಲದಂತೆ ಕಣ್ಣಂಚಿನಿಂದ ನೀರು ಇಳಿದು ಬಂತು.ಬೆಟ್ಟದ ಪಾಚಿ ಹಿಡಿದ ಬಂಡೆಗಳ ಮೇಲಿನಿಂದ ಹರಿದ ಮಳೆಯ ನೀರು ಉದ್ದಕ್ಕೂ ಕಂದು ಬಣ್ಣದ ರೇಖೆಯನ್ನು ಎಳೆದಂತೆ ಕಾಣುತ್ತಿತ್ತು. ಅಲ್ಲೊಂದು ಇಲ್ಲೊಂದು ಮೋಡಗಳು ಬೆಟ್ಟದ ಹಸಿರು ಮರಗಳನ್ನು ಮರೆಯಾಗಿಸುವಂತೆ ಅವಚಿ ಹಿಡಿದಿದ್ದವು.ಕಣ್ಣಿನಿಂದ ಇಳಿದ ನೀರಿಗೆ ಸೀರೆಯ ಸೆರಗನ್ನು ಒತ್ತಿ ಹಿಡಿದು ಬೆಟ್ಟದ ಮೇಲೆ ಒತ್ತೊತ್ತಾಗಿ ಕುಳಿತ ಮೋಡಗಳನ್ನು ನೋಡುತ್ತಿದ್ದಳು.ಇದೇ ಮೋಡಗಳು ತನ್ನ ಕನಸನ್ನು ಮುತ್ತಿಕೊಂಡು ಭಗ್ನಗೊಳಿಸಿದ್ದು!ಆ ದಿನ ರೇಡಿಯೋದ ಮುಂದೆ ಕುಳಿತಿದ್ದ ಅವಳನ್ನು ಎತ್ತಿ ಪ್ರಪಾತಕ್ಕೆ ಎಸೆದಿದ್ದು ಇದೇ ಮೋಡಗಳು."ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ......." ರಾಗವಾಗಿ ಹಾಡುತ್ತಾ, ಹೊರಗೆ ಸುರಿಯುವ ಮಳೆಗೆ ಕಿಟಕಿಯಿಂದ ಮುಖ ತೂರಿಸಿ, ನೆಲದ ಮೇಲೆ ಬಿದ್ದ ಮಳೆ ಹನಿಯ ಹೂವುಗಳನ್ನು ಎಣಿಸುತ್ತಿದ್ದಳು. ಹನಿ ಚೆಲ್ಲಿ ಹೋಗುವ ಮೋಡಗಳಿಗೆ ಎಷ್ಟೊಂದು ಶಕ್ತಿ?ನಿರಂತರವಾಗಿ ಉಲಿಯುತ್ತಿದ್ದ ರೇಡಿಯೋ ಕರ ಕರ ಸದ್ದಿನೊಂದಿಗೆ ಅವಳನ್ನು ಎಚ್ಚರಿಸಿತ್ತು.ನೆಲ ಬಿರಿದು ಹೋಗುವಂತೆ ಗುಡುಗಿನ ಆರ್ಭಟ!ರೇಡಿಯೋದಲ್ಲಿ ಬಿತ್ತರವಾದ ಅಪಶಕುನದ ವಾರ್ತೆ!ಬೆಟ್ಟದ ತುದಿಯಲ್ಲಿ ಕ್ಷಣ ಬೆಂಕಿಯುಂಡೆಯಾಗಿ ಉರಿದು ಪುಡಿ ಪುಡಿಯಾಗಿ ನೆಲ ಸೇರಿತು!ಕನಸೂ!
***

ಮರಗಳ ಮರೆಯಲ್ಲಿದ್ದ ಮರದ ಕಾಟೇಜ್‍ನ ಮುಂದಿದ್ದ ಅಟ್ಟಣಿಗೆಯನ್ನು ಏರಿ ದೂರದವರೆಗೂ ದೃಷ್ಟಿ ಹೊರಳಿಸಿದಳು ರಶ್ಮಿ. ಒತ್ತೊತ್ತಾಗಿ ಬೆಳೆದಿದ್ದ ದೈತ್ಯಾಕಾರದ ಮರಗಳ ನಡುವಿನಿಂದಲೂ ಎದುರಿಗಿದ್ದ ಬೆಟ್ಟ ಸುಂದರವಾಗಿ ಕಾಣುತ್ತಿತ್ತು. ಕಣ್ಣರಳಿಸಿ ಕುತೂಹಲದ ನೋಟ ಬೀರುತ್ತಿದ್ದವಳನ್ನು ಎಚ್ಚರಿಸಿದ್ದು ಅಟ್ಟಣಿಗೆಯ ಮೇಲಿಂದ ಇಳಿದು ಕಾಲಿನ ಬಳಿ ಸರಿದ ಕಪ್ಪಗಿನ ಹಲ್ಲಿ!ಅಟ್ಟಣಿಗೆಯ ಅಂಚನ್ನು ಹಿಡಿದ ಕೈಗಳು ಸಡಿಲಗೊಂಡು, ಸೀರೆಯ ನೆರಿಗೆಯನ್ನು ಮೇಲಕ್ಕೇರಿಸಿ ಮೆಟ್ಟಲುಗಳನ್ನು ಹಾರಿ ಕೆಳಗಿಳಿದು ಕಾಟೇಜ್‍ನ ಮುಂದೆ ಎದೆಗೆ ಕೈ ಹಚ್ಚಿ ನಿಂತು ದೀರ್ಘ ಉಸಿರು ದಬ್ಬಿದಳು.ಅಟ್ಟಣಿಗೆಯ ದಡ ದಡ ಸದ್ದಿಗೆ ಹೊರಗೆ ಬಂದಿದ್ದ ಅಡುಗೆಯ ಆಳು ನರಂಗ ಆತಂಕದ ದೃಷ್ಟಿ ಬೀರಿದ. ಅವನನ್ನು ನೋಡುತ್ತಲೇ ಮತ್ತೊಮ್ಮೆ ಕಣ್ಣು ಮುಚ್ಚಿ ನಿಟ್ಟುಸಿರಿಟ್ಟಳು."ಏನಿಲ್ಲಾ, ಕಪ್ಪು ಹಲ್ಲಿ"ನರಂಗನ ತುಟಿಗಳಲ್ಲಿ ಕಿರು ನಗು ಕಾಣಿಸಿಕೊಂಡಿತು."ಅಯ್ಯೋ, ಒಂದು ಸಣ್ಣ ಹಲ್ಲಿಗೆ ಇಷ್ಟೊಂದು ಹೆದರೋದಾ? ಅಡುಗೆ ಮನೆಯ ಗೋಡೆಯಲ್ಲೆಲ್ಲಾ ಅವುಗಳದ್ದೇ ಸಾಮ್ರ್‍ಆಜ್ಯ""ನಿನ್ನ ಅಡುಗೆ ಮನೆಯ ಹಲ್ಲಿ ಅಲ್ಲ ಅದು. ಕಪ್ಪು ಹಲ್ಲಿ""ಅಂದ್ರೆ.... ದೈತ್ಯ ಹಲ್ಲಿನಾ?""ಓಹೋ! ನಿನ್ನಲ್ಲೆಂತಾ ಮಾತು. ಹೋಗು ನಿನ್ನ ಕೆಲ್ಸ ನೀನು ನೋಡ್ಕೊ"ಕಣ್ಣಗುಡ್ಡೆಗಳು ಹೊರಗೆ ಬರುವಷ್ಟು ಅಗಲಕ್ಕೆ ಕಣ್ಣುಗಳನ್ನು ಅಗಲಗೊಳಿಸಿ ಅವಳ ಹತ್ತಿರ ಬಂದು ಮಾತು ಹೊರಳಿಸಿದ."ನಿಮಗೆ ಗೊತ್ತಿಲ್ಲಮ್ಮಾ. ನೀವು ಹಲ್ಲಿಗಳ ಬಗ್ಗೆ ಹೆದರ್ತೀರಿ... ನಿಮ್ಮ ತಂದೆಗೆ ಹುಚ್ಚು. ಅರಣ್ಯಾಧಿಕಾರಿಂತ ಇಂತಹ ಭಯ ಹುಟ್ಟಿಸೋ ಕಾಡಿನ ಮಧ್ಯೆ ಇರೋ ಕಾಟೇಜ್‍ಗೆ ಬರೋದೆ? ಈ ಕಾಡಿನಲ್ಲಿ ರಾಕ್ಷಸರೂ ಇದ್ದಾರಂತೆ. ಎದುರಿಗೆ ಕಾಣಿಸೋ ಆ ಬೆಟ್ಟವಿದ್ಯಲ್ಲಾ. ಅದರಲ್ಲಿ ಅವರಿರೋದಂತೆ. ನರ ಬಲೀಂದ್ರೆ ಅವರಿಗೆ ಪಂಚ ಪ್ರಾಣವಂತೆ""ಇದೇನು ರಾಕ್ಷಸರಿರೋ ಯುಗಾನಾ? ಹೋಗಯ್ಯಾ ನಿನ್ನ ಕೆಲ್ಸ ಮಾಡು" ಅವನ ಮಾತನ್ನು ತಳ್ಳಿ ಹಾಕುವಂತೆ ಹೇಳಿದಳಾದರೂ ರಶ್ಮಿಯ ಎದೆ ಸಣ್ಣಗೆ ಬಡಿದುಕೊಳ್ಳಲಾರಂಭಿಸಿತು.ಮರಗಳೆಡೆಯಿಂದ ಕಾಣುತ್ತಿದ್ದ ಸುಂದರ ಬೆಟ್ಟವೀಗ ಭಯ ತರಿಸುವ ರಾಕ್ಷಸನಂತೆ ಕಂಡಿತು.ಏಕಾಏಕಿ ಚದುರಿದ್ದ ಮೋಡಗಳು ಬೆಟ್ಟದ ಮೇಲೆ ಒತ್ತೊತ್ತಾಗಿ ಕುಳಿತು ಇನ್ನೇನು ಮಳೆ ಹೊಯ್ಯುವಂತೆ ಕಂಡವು. ತಟ್ಟನೆ ಕಾಟೇಜ್‍ನ ಕಡೆಗೆ ಕಾಲು ಸರಿಸಿದಳು ಹುಡುಗಿ.ಎದುರಿಗಿನ ಬೆಟ್ಟ ಸಂಪೂರ್ಣ ಮೋಡಗಳಿಂದ ಮರೆಯಾಗಿತ್ತು. ಮುಸ್ಸಂಜೆಯ ಹೊತ್ತು ಮಳೆಯ ಹನಿ ತೀವ್ರತೆ ಪಡೆದು ಧಾರಕಾರವಾಗಿ ಸುರಿಯಲಾರಂಭಿಸಿತು.ತೂಗು ಹಾಕಿದ್ದ ಲಾಂದ್ರಕ್ಕೆ ಎಣ್ಣೆ ಸೇರಿಸಿದ ಅಡುಗೆಯ ಆಳು. ರಶ್ಮಿ ಬೆಂಕಿ ಪೊಟ್ಟಣ ತಂದು ಕಡ್ಡಿ ಗೀರಿ ಲಾಂದ್ರದ ಗಾಜನ್ನು ಏರಿಸಿ ಹಚ್ಚಿದವಳು, ಬೆಂಕಿ ಕಡ್ಡಿಯ ಬಿಸಿ ಕೈಗೆ ತಾಗುತ್ತಲೇ ಕಡ್ಡಿಯನ್ನು ದೂರಕ್ಕೆಸೆದು ಗಾಜನ್ನು ಕೆಳಗಿಳಿಸಿದಳು. ನರಂಗ ಲಾಂದ್ರವನ್ನು ಛಾವಣಿಯಿಂದ ಇಳಿ ಬಿದ್ದಿದ್ದ ಕೊಕ್ಕೆಗೆ ಸೇರಿಸಿದ. ಮಳೆಯ ಜೊತೆಗಿನ ಗಾಳಿಯ ರಭಸಕ್ಕೆ ಲಾಂದ್ರದ ದೀಪ ಒಂದೇ ದಿಕ್ಕಿಗೆ ಸರಿಯಿತು."ನರಂಗ, ಮುಂಬಾಗಿಲನ್ನು ಹಾಕಿ ಬಿಡು. ಗಾಳಿ, ಮಳೆ ಜೋರಾಗಿದೆ"ನರಂಗ ಎದ್ದು ಬಾಗಿಲನ್ನು ಹಾಕಿ ಚಿಲಕ ಸರಿಸಿದ. ಗೋಡೆಗೆ ತೂಗು ಹಾಕಿದ್ದ ಗಂಟೆ ಏಳು ಬಡಿಯುತ್ತಲೇ, ರಶ್ಮಿ ಕಣ್ಣನ್ನು ಗೋಡೆಯ ಕಡೆಗೆ ಹೊರಳಿಸಿದಳು."ನರಂಗ, ಅಪ್ಪಯ್ಯ ಎಲ್ಲೋ ಈ ಮಳೆಗೆ ಸಿಕ್ಕಿ ಹಾಕಿಕೊಂಡಿರಬೇಕು"ಹೊರಗೆ ಒಂದೇ ತೆರನಾಗಿ ಸುರಿಯುವ ಮಳೆಗೆ ದೇಹ ತಂಡಿ ಹಿಡಿದಂತಾಗಿ ದಪ್ಪನೆಯ ಉಣ್ಣೆಯ ಕೋಟು ಏರಿಸಿಕೊಂಡ ನರಂಗ."ನೀವು ಹೇಳೋದು ಸರಿಯಾಗಿದೆ. ಗಾಳಿ ನಿಲ್ಲದೆ ಅವರು ಜೀಪು ಓಡಿಸೋದು ಅಸಾಧ್ಯ. ಮಳೆ ಹಿಡಿದಿರೋದು ನೋಡಿದ್ರೆ ಪಕ್ಕನೆ ಬಿಡಲಾರದೂಂತ ಅನಿಸ್ತಿದೆ"ನರಂಗ ಮಾತುಗಳಿಗೆ ಆತಂಕದ ನೋಟ ಬೀರಿದಳು.ಆಗೊಮ್ಮೆ ಈಗೊಮ್ಮೆ ಸುಳಿಯುವ ಮಿಂಚಿನ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡು ಕಿಟಕಿಯ ಬಾಗಿಲುಗಳನ್ನು ತಳ್ಳಿ ಕಾಟೇಜ್‍ನ ಎದುರಿಗೆ ದೃಷ್ಟಿ ಹಾಯಿಸಿದಳು. ಏನೊಂದು ಕಾಣಿಸದಷ್ಟು ಕಪ್ಪು ಕತ್ತಲು!ಕಾಟೇಜ್‍ನ ಮುಂದಿನ ದಾರಿಯನ್ನು ಹುಡುಕುವುದು ವ್ಯರ್ಥ ಪ್ರಯತ್ನ. ಒಂದೇ ಸಮನೆ ಸುರಿಯುವ ಮಳೆಯ ರಾಗ. ಮಿಂಚಿನ ಬೆಳಕಿನಲ್ಲಿ ದಾರಿಯನ್ನು ತುಂಬಿ ನಿಂತ ಮಳೆಯ ನೀರು ಅಸ್ಪಷ್ಟವಾಗಿ ಕಾಣುತ್ತಿತ್ತು. ತಟ್ಟನೆ ದೂರದಲ್ಲಿ ಮಿಣುಕು ದೀಪ ಕಾಣಿಸಿತು!ರಸ್ತೆಯನ್ನು ನುಗ್ಗಿದ ನೀರು, ಜೀಪು ತರೋದಕ್ಕೆ ಅಡ್ಡಿಯಾಗಿರಬೇಕು. ಅದಕ್ಕಾಗಿ ಅಪ್ಪಯ್ಯ ನಡೆದುಕೊಂಡು ಬರುತ್ತಿರಬೇಕು!"ನರಂಗ, ಅಪ್ಪಯ್ಯ ಬರುತ್ತಿರೋ ಹಾಗಿದೆ. ಇನ್ನೊಂದು ಟಾರ್ಚ್ ಹಿಡಿದು ಹೋಗು" ಕಿಟಕಿಯ ಬಾಗಿಲು ಮುಚ್ಚುತ್ತಾ ಮೂಲೆಯಲ್ಲಿ ಮುದುರಿ ಕುಳಿತಿದ್ದ ಅಡುಗೆಯಾಳನ್ನು ಕರೆದು ಹೇಳಿದಳು.ಚಳಿಗೆ ಜಡ ಹಿಡಿದಿದ್ದ ದೇಹವನ್ನು ನಿಧಾನಕ್ಕೆ ಅಲುಗಿಸಿ ಎದ್ದು ನಿಂತ ನರಂಗ.ಮರದ ಅಲಂಕಾರಿಕ ಬೀರುವಿನಲ್ಲಿದ್ದ ಉದ್ದನೆಯ ಟಾರ್ಚ್‍ನ್ನು ತೆಗೆದು ಅವನ ಕೈಗೆ ನೀಡಿದಳು.ಅಗಲಕ್ಕೆ ಬಾಯಿಯನ್ನು ತೆರೆದು ಆಕಳಿಸಿ, ಹೆಜ್ಜೆಯನ್ನು ಹೊರಳಿಸಿದ. ಎದುರಿಗಿನ ಗೋಡೆಯ ಮೊಳೆಗೆ ತೂಗಿಸಿದ್ದ ಮಳೆಯ ನಿಲುವಂಗಿಯನ್ನು ತೆಗೆದು ಧರಿಸಿಕೊಂಡ. ತಲೆಗೆ ಸೇರಿಸಿದ ಟೋಪಿಯನ್ನು ಕಿವಿಯವರೆಗೆ ಎಳೆದು, ಕಾಲಿಗೆ ಗಮ್ ಬೂಟುಗಳನ್ನು ಸೇರಿಸಿದ.ಎದುರಿಗಿನ ಬಾಗಿಲನ್ನು ತೆರೆಯುತ್ತಲೇ ನೀರಿನ ತೇವದ ಗಾಳಿ ಮುಖಕ್ಕೆ ತಟ್ಟುತ್ತಲೇ ಎರಡೆರಡು ಬಾರಿ ಸೀನು ಹಾಕಿದ. ಎಡಗೈಯಿಂದ ಮೂಗನ್ನು ಒರೆಸಿಕೊಂಡು ದಾರಿಯುದ್ದಕ್ಕೂ ನೋಟ ಹರಿಸಿದ. ರಶ್ಮಿ ಕೂಡ ಬಾಗಿಲ ಬಳಿ ನಿಂತಳು.ಸಣ್ಣಗಿನ ಬೆಳಕಿಗಾಗಿ ದೂರದವರೆಗೆ ದೃಷ್ಟಿ ಹಾಯಿಸಿದವಳಿಗೆ ಆಶ್ಚರ್ಯ!ರಸ್ತೆಯ ನೇರ ದಾರಿ ಬಿಟ್ಟು, ಬೆಳಕು ಮರಗಳ ಮಧ್ಯೆ ಕಾಣಿಸಿದಂತಾಯ್ತು. ನರಂಗ ಅದಾಗಲೇ ಕಾಟೇಜ್‍ನ ಎದುರಿಗಿನ ರಸ್ತೆಯಲ್ಲಿ ಅರ್ಧದವರೆಗೂ ಸಾಗಿದ್ದ.ಯಾವುದೋ ಆತಂಕ ಅವಳನ್ನು ಆವರಿಸಿದಂತಾಯಿತು. ಬಾಗಿಲನ್ನು ಸರಿಸಿ ಚಿಲಕ ಹಾಕಿ ಕಿಟಕಿಯಾಚೆಗೆ ಸರಿದಳು.ಗಂಟೆ ಒಂದೇ ಸಮನೇ ಓಡುತಲಿತ್ತು.ತಾನು ತಿಳಿದುಕೊಂಡಂತೆ ದೂರದಲ್ಲಿ ಕಂಡ ಬೆಳಕು ಅಪ್ಪಯ್ಯನದಾಗಿದ್ದರೆ ಇಷ್ಟರಲ್ಲಿ ಆತ ಕಾಟೇಜ್ ತಲುಪಬೇಕಿತ್ತು!ಹಾಗಲ್ಲ! ರಸ್ತೆಯುದ್ದಕ್ಕೂ ನೀರು ತುಂಬಿದೆ. ಅದನ್ನು ತಪ್ಪಿಸಿ ಮರಗಳ ಕಡೆಯಿಂದ ಅಡ್ಡ ದಾರಿ ಹಿಡಿದು ಬರುತ್ತಿರಬಹುದು.ಕಿಟಕಿಯ ಗಾಜುಗಳನ್ನು ಮುಚ್ಚಿ ಲಾಂದ್ರದ ಬೆಳಕಿನಲ್ಲಿ ಮೂಡಿದ್ದ ನೆರಳನ್ನೇ ನೋಡುತ್ತಿದ್ದಳು. ತಟ್ಟನೆ ಲಾಂದ್ರದ ಬೆಳಕಿಗೆ ಸೋತ ಕೀಟ ಅವಳ ಮುಖವನ್ನು ಮುದ್ದಿಸಿತು. ಬೆಚ್ಚಿ ಹಿಂದೆ ಸರಿದು ನಿಂತಳು.ಮತ್ತೊಮ್ಮೆ ಮುಖಕ್ಕೆ ಏನೋ ಬಡಿದಂತಾಯಿತು.ಅಲ್ಲ! ಅದು ಮುಖಕ್ಕೆ ಬಡಿದ ಕೀಟದ ಸದ್ದಲ್ಲ!ಯಾರೋ ಬಾಗಿಲ ಮೇಲೆ ಬಡಿಯುವ ಸದ್ದು!ಒಂದೇ ಉಸುರಿಗೆ ಹಾರಿ, ಬಾಗಿಲಿನ ಚಿಲಕ ಜಾರಿಸಿದಳು.ಬಾಗಿಲು ಇದ್ದಕ್ಕಿದಂತೆ ಬಲವಾಗಿ ತಳ್ಳಿ ಒಳಗೆ ಬಂದ ವ್ಯಕ್ತಿ!ರಶ್ಮಿ ಚಿಟ್ಟನೆ ಚೀರಿ ಹಿಂದಕ್ಕೆ ಹಾರಿದಳು.ಆತ ಚಿಲಕ ಸಿಕ್ಕಿಸಿ ತಲೆಗೆ ಸುತ್ತಿದ್ದ ಬಟ್ಟೆಯ ನೀರನ್ನು ಹಿಂಡಿ ಮುಖ ಒರೆಸಿಕೊಂಡು ಸುತ್ತಲೂ ಪರೀಕ್ಷಕ ನೋಟ ಬೀರಿದ.ಸುಮಾರು ಆರಡಿ ಎತ್ತರದ ಅಜಾನು ಬಾಹು ವ್ಯಕ್ತಿ! ಮೂವತ್ತರ ಆಚೆ ಈಚೆ ವಯಸ್ಸಿರಬಹುದು. ಉಟ್ಟಿದ ಬಟ್ಟೆಯೆಲ್ಲಾ ತೊಯ್ದು ತೊಪ್ಪೆಯಾಗಿ ನೀರು ಇಳಿಯುತ್ತಿತ್ತು. ಹೆಗಲಿಗೇರಿಸಿದ ನಾಡಕೋವಿಯನ್ನು ಕೆಳಗಿಳಿಸಿ ಬಟ್ಟೆಯಿಂದ ಒರೆಸಿದ."ಮನೆಯಲ್ಲಿ ಬೇರ್‍ಯಾರಿದ್ದಾರೆ?" ಗಡಸು ಕಂಠಕ್ಕೆ ಬೆದರಿ ನಿಂತವಳನ್ನು ಮತ್ತಷ್ಟು ಮೂಲೆಗೆ ಸರಿಸಿತು ಮಾತು."ನಾನು ನಿನ್ನನ್ನೇ ಕೇಳ್ತಾ ಇರೋದು. ಇಲ್ಲಿ ಬೇರ್‍ಯಾರು ಇದ್ದಾರೆ?"ಅವನ ಕಂಠ ಇನ್ನಷ್ಟು ಗಡುಸಾಯಿತು."ಯಾರು ...ಇಲ್ಲ... ಯಾರು... ಇಲ್ಲ..." ನಡುಗುವ ದನಿಯಿಂದ ಮಾತು ಹೊರಗೆ ಬಂತು.ಒದ್ದೆ ಬಟ್ಟೆಯ ಕಿಸೆಗೆ ಕೈ ತೂರಿಸಿ ಪ್ಲಾಸ್ಟಿಕ್ ಚೀಲ ತೆಗೆದ. ಒಳಗೆ ಬೆಚ್ಚಗೆ ಕುಳಿತಿದ್ದ ಸಿಗರೇಟಿನ ಪಾಕೆಟನ್ನು ಹೊರ ತೆಗೆದು ತುಟಿಗಿರಿಸಿಕೊಂಡ."ಬೆಂಕಿ ಕಡ್ಡಿ ಬೇಕು" ಮಾತಿನಲ್ಲಿ ನಯವಿರಲಿಲ್ಲ.ಸರಕ್ಕನೆ ಸರಿದು ಸ್ಟಾಂಡ್‍ನ ಮೇಲಿದ್ದ ಬೆಂಕಿ ಪೆಟ್ಟಿಗೆ ನೀಡಿದಳು. ಒಂದು ಕಡ್ಡಿಯನ್ನು ಎರಡೆರಡು ಬಾರಿ ಗೀರಿದ."ಹಾಳಾದ ಮಳೆ, ಹಾಕಿದ ಯೋಜನೆಯೆಲ್ಲಾ ಹಾಳಾಯ್ತು" ಬೆಂಕಿ ಗಡ್ಡಿ ಉರಿಯುತ್ತಲೇ ಸಿಗರೇಟಿಗೆ ಸೋಕಿಸಿ ಒಂದೆರಡು ಧಂ ಎಳೆದು ಹೊಗೆಯುಗುಳಿದ."ತಿನ್ನೊದಿಕ್ಕೆ ಏನಾದ್ರೂ ಇದೆಯಾ?" ಬಲಕೈಯ ಬೆರಳ ತುದಿಗಳನ್ನು ಒಟ್ಟು ಸೇರಿಸಿ ತುಟಿಯ ಬಳಿ ಎರಡೆರಡು ಬಾರಿ ಸರಿಸಿ ಕೇಳಿದ."ಹಾಂ.. ಇಲ್ಲ......ಇಲ್ಲ...."ಹಲ್ಲಿಯ ಹಾಗೆ ಗೋಡೆಗೆ ಅಂಟಿಕೊಂಡಂತೆ ನಿಂತಳು.ಕೋವಿಯನ್ನು ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಅಡುಗೆ ಮನೆಯೊಳಗೆ ಹೋದ. ರಶ್ಮಿ ಬಿಟ್ಟ ಕಣ್ಣು ಬಿಟ್ಟಂತೆ ನಿಂತೇ ಇದ್ದಳು.ಒಂದೊಂದೇ ಪಾತ್ರೆಯ ಮುಚ್ಚಳ ಸರಿಸಿ ನೋಡುತ್ತಿದ್ದ. ಹೂಜಿಯಲ್ಲಿ ತುಂಬಿದ್ದ ನೀರನ್ನು ಗಟಗಟನೆ ಕುಡಿದು ಹೊರಗೆ ಬಂದ."ನಂಗೆ ಸುಳ್ಳು ಹೇಳ್ತೀಯಾ?" ಒರಟಾಗಿ ಬಂದ ಮಾತಿನ ಜೊತೆಗೆ ಕೋವಿಯ ತುದಿಯನ್ನು ಅವಳ ಕುತ್ತಿಗೆಯ ಬಳಿ ಹಿಡಿದ."ನಡಿ, ಇರೋದೆಲ್ಲವನ್ನೂ ಒಂದು ತಟ್ಟೆಗೆ ಹಾಕಿ ತಾ. ಇನ್ನು ಹೆಚ್ಚು ಸಮಯ ನಾನು ಇಲ್ಲಿ ನಿಲ್ಲೋದಿಲ್ಲ" ಕೋವಿಯ ತುದಿ ಕೆಳಗಿಳಿಯುತ್ತಲೇ ಹೇಳಿದ ಮಾತುಗಳಿಗೆ ಅವಳ ಕಾಲುಗಳು ಮಿಂಚಿನ ವೇಗ ಪಡೆದುಕೊಂಡವು.ಸರಸರನೆ ನಡೆದು ದೊಡ್ಡ ಬಟ್ಟಲಿಗೆ ಒಂದಷ್ಟು ಅನ್ನ, ಸಾಂಬಾರು ಸುರಿದು ಅವನ ಮುಂದೆ ಹಿಡಿದಳು.ಕೋವಿಯನ್ನು ಹೆಗಲಿಗೇರಿಸಿ ಬಿಗಿದುಕೊಂಡ. ಅವಳ ಕೈಯಲ್ಲಿದ ತಟ್ಟೆಯನ್ನು ಎಳೆದುಕೊಂಡ. ಬಲಗೈಯನ್ನು ಪ್ಯಾಂಟ್‍ನ ಹಿಂಬದಿಗೆ ಒರೆಸಿಕೊಂಡು ಗಬಗಬನೆ ತಿನ್ನಲಾರಂಭಿಸಿದ.ಒಂದೆರಡು ನಿಮಿಷದಲ್ಲಿ ತಟ್ಟೆಯನ್ನು ಬರಿದು ಮಾಡಿ ಸರಸರನೆ ನಡೆದು ಮಳೆಯ ಸದ್ದಿನೊಂದಿಗೆ ಕರಗಿ ಹೋದ.
***
ಘಟನೆ ನಡೆದು ವಾರಗಳು ಕಳೆದರೂ ಮಂಕಾಗಿಯೇ ಇರುತ್ತಿದ್ದಳು ರಶ್ಮಿ. ಮಗಳ ಮಂಕುತನಕ್ಕೆ ಬೇರೇನೋ ಕಲ್ಪನೆ ಕೊಟ್ಟ ಅರಣ್ಯ ಅಧಿಕಾರಿ ಮಲ್ಲಯ್ಯ."ನಿನಗೇನಾಗಿದೆ ಹೇಳ್ಬಿಡು? ಹೀಗೆ ಮಂಕಾಗಿ ಕುಳಿತಿರೋದ್ರಲ್ಲಿ ಅರ್ಥವಿಲ್ಲ"ಬರೀ ಕಣ್ಣ ಗುಡ್ಡೆಗಳನ್ನು ಅಧಿಕಾರಿಯ ಕಡೆಗೆ ತಿರುಗಿಸಿ, ಮಾತನಾಡದೆ ಎದ್ದು ನಿಂತಳು. ಅಧಿಕಾರಿ ಮಗಳ ಹಿಂದೆಯೇ ಎದ್ದು ಬಂದ. ಅವಳು ಕಿಟಕಿಗೆ ಆತು ನಿಂತಳು.ಮೂವತ್ತರ ಆಚೀಚೆ ವಯಸ್ಸಿನ, ತೊಯ್ದು ತೊಪ್ಪೆಯಾಗಿದ್ದ ವ್ಯಕ್ತಿ ಕಣ್ಣೆದುರು ಬಂದು ನಿಂತಂತಾಯಿತು. ಒಂದು ಕ್ಷಣ ನರಗಳಲ್ಲಿ ಭಯ ತುಂಬಿ ಮೈ ಅಲುಗಿಸಿದಳು."ಇನ್ನೇಷ್ಟು ದಿನ ಇಲ್ಲಿರ್ಬೆಕು?" ಮಾತಿನಲ್ಲಿ ನಡುಕ ತುಂಬಿತ್ತು."ಓಹೋ! ಹೀಗಾ?... ಈ ಮಲೆನಾಡಿನ ಮಳೆಯೇ ಹೀಗೆ, ಸುರಿದ್ರೆ ವಾರಾನುಗಟ್ಲೆ ಸುರಿತಾ ಇರುತ್ತೆ. ನಾನು ಒಂದು ಕೆಲಸ ಮಾಡ್ತೀನಿ. ನಾಳೆ ಸಿಟಿಗೆ ಹೋದೋನು ವಿಶಾಲುಗೆ ಫೋನ್ ಮಾಡ್ತೀನಿ. ನೀನು ಬೆಂಗಳೂರಿಗೆ ಹೋಗ್ಬಿಡು. ಮಳೆಗಾಲ ಮುಗಿದ ನಂತರ ಬಂದ್ಬಿಡು"ತಂದೆಯ ಮಾತಿಗೆ ಆಶ್ಚರ್ಯವಾಯಿತು.ಆ ವ್ಯಕ್ತಿ ಮತ್ತೊಮ್ಮೆ ಇಲ್ಲಿಗೆ ಬರಬಹುದು. ಅವನಿಂದ ತಪ್ಪಿಸಿಕೊಳ್ಳೋದಿಕ್ಕೆ ಇರೋದು ಒಂದೇ ದಾರಿ. ತಾನು ವಿಶಾಲು ಜೊತೆಗೆ ಬೆಂಗಳೂರು ಸೇರಿ ಬಿಡಬೇಕು.ಮನೆಗೆ ಬಂದಿದ್ದ ಅಪರಿಚಿತ ವ್ಯಕ್ತಿಯ ಬಗ್ಗೆ ಅಪ್ಪಯ್ಯನಿಗೆ ಹೇಳಿಬಿಡಬೇಕೆಂಬ ಇಚ್ಛೆ ಇದ್ದರೂ ಆ ವಿಷಯ ಅವಳಲ್ಲೇ ಉಳಿದು ಹೋಯಿತು. ಆದಷ್ಟು ಒಂಟಿಯಾಗಿರದೆ ನರಂಗನನ್ನು ಎಲ್ಲೂ ಹೋಗಗೊಡದೆ ಇದ್ದಳು.ಕಿಟಕಿಯ ಬಳಿ ನಿಂತವಳ ಕಣ್ಣುಗಳು ಯಾಂತ್ರಿಕವಾಗಿ ಬೆಟ್ಟದ ಕಡೆಗೆ ಚಲಿಸಿದವು. ಆಕಾಶದಲ್ಲಿ ಮೋಡಗಳು ತುಂಬಿದ್ದರೂ, ಮಳೆ ಸುರಿಯಲು ಮರೆತಂತಿತ್ತು.ಕಾಲಿಗೆ ಜೋಡುಗಳು ಜೊತೆಯಾಗಿ, ಒದ್ದೆ ನೆಲವನ್ನು ಸ್ಪರ್ಶಿಸಿದವು. ಎಲ್ಲೆಡೆ ಹೊಸ ಚಿಗುರುಗಳು ಪ್ರಕೃತಿಗೆ ಮೆರುಗು ತಂದಂತಿದ್ದವು. ದೂರಕ್ಕೂ ನಡೆದು ಕಳ್ಳಿ ಬೇಲಿಯ ಬಳಿ ನಿಂತಳು ಹುಡುಗಿ. ಕರ್ಕೊಟ್ಟೆಯ ಮುಳ್ಳು ಕಿತ್ತು ಕಳ್ಳಿಯ ಗಿಡಕ್ಕೆ ಚುಚ್ಚಿದಳು. ಕಣ್ಣಿನಲ್ಲಿಳಿದ ನೀರಿನಂತೆ ಕಳ್ಳಿ ಗಿಡದ ಬಿಳಿಯ ಸುನೆ ತಟತಟನೆ ನೆಲಕ್ಕೆ ಬಿಳುತ್ತಿತ್ತು. ತಟ್ಟನೆ ಒದ್ದೆ ತರಗೆಲೆಯ ಚರಪರ ಸದ್ದಿಗೆ ಹಿಂತಿರುಗಿದಳು.ಆರಡಿ ಎತ್ತರದ ಅದೇ ಅಜಾನುಬಾಹು ವ್ಯಕ್ತಿ ನಿಂತಿದ್ದ!ಭಯದಿಂದ ಎದೆಗೆ ಕೈ ಹಚ್ಚಿ ಮೆಲ್ಲ ಮೆಲ್ಲನೆ ಹಿಂದಕ್ಕೆ ಸರಿದಳು. ಆತ ಒಮ್ಮೆ ಅತ್ತಿತ್ತ ಕಣ್ಣಾಡಿಸಿದ."ನಿಂತ್ಕೋ" ಅದೇ ಗಡಸು ಕಂಠ!ಬಾಯಿಯಿಂದ `ಹಾಂ!' ಉದ್ಗಾರದೊಂದಿಗೆ ಕಾಲಿಗೆ ತಡೆ ಬಿದ್ದಿತು. ಬೆದರಿಕೆಯ ನೋಟದಿಂದ ಬಾಯಗಲಿಸಿ ಅವನನ್ನೇ ನೋಡುತ್ತಿದ್ದಳು.ಹೆಗಲಿನಲ್ಲಿ ಕೋವಿಯ ಬದಲು ಉದ್ದನೆಯ ಬಟ್ಟೆಯ ಚೀಲ ಇಳಿ ಬಿದ್ದಿತ್ತು! ಕೆನ್ನೆ, ಗಲ್ಲಗಳನ್ನು ಮರೆ ಮಾಡುವಂತೆ ಗಡ್ಡ ಬೆಳೆದಿತ್ತು. ಕಣ್ಣಿನಲ್ಲಿ ಮಾತ್ರ ಅದೇ ಚುರುಕುತನ!ಉಟ್ಟಿದ್ದ ಮುದ್ದೆ ಮುದ್ದೆಯಾದ ಬಟ್ಟೆ ಅವನಿಗೆ ಒಪ್ಪುವಂತೆ ಇತ್ತು. ಅವಳ ಕಣ್ಣುಗಳು ಮತ್ತೊಮ್ಮೆ ಅವನ ಹೆಗಲಿನ ಕಡೆಗೆ ಸರಿಯಿತು. ಗಂಟಲಿನಲ್ಲಿ ತಡೆಯಂತಿದ್ದ ಉಗುಳು ನುಂಗಿಕೊಂಡು ಯಾಂತ್ರಿಕವಾಗಿ ಬಾಯಿ ಮುಚ್ಚಿಕೊಂಡಿತು. ಆಸರೆಗಾಗಿ ಮರದ ಕೊಂಬೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು, ತನ್ನ ಭಾರವನ್ನೆಲ್ಲಾ ಅದರ ಮೇಲೆ ಹಾಕಿ ನಿಂತಳು.ಆತ ಅವಳನ್ನು ಓದಿದವರಂತೆ ತುಟಿ ಬಿರಿದು ನಕ್ಕ."ಮತ್ತೆ ನೀನು ಸಿಕ್ಕಿರೋದು ನನ್ನ ಅದೃಷ್ಟ" ಅವನ ಮಾತಿನಲ್ಲಿ ಹಿಂದಿನ ಗಡಸುತನವಿರಲಿಲ್ಲ."ನಿನ್ನ ಜೊತೆಗೆ ಬೇರ್ಯಾರಾದರೂ ಇದ್ದಾರಾ?" ತಗ್ಗಿದ ದನಿಯಲ್ಲಿ ಅತ್ತಿತ್ತ ನೋಟ ಹರಿಸಿ ಕೇಳಿದ."ಊಹುಂ..." ಕುಸಿದು ಬೀಳುವಂತಿತ್ತು ಅವಳ ಸ್ವರ."ನನಗೆ ಹಸಿವಾಗ್ತಿದೆ. ತಿನ್ನೋದಿಕ್ಕೆ ಏನಾದ್ರು ತಂದು ಕೊಡ್ತೀಯಾ?" ಅವಳು ಆಸರೆಗಾಗಿ ಹಿಡಿದಿದ್ದ ಕೊಂಬೆಯನ್ನು ಬಿಟ್ಟು ಕೈಯಲ್ಲಿ ಹಸಿರು ಎಲೆಯನ್ನು ಹಿಡಿದು ಸಣ್ಣ ಸಣ್ಣ ಚೂರುಗಳಾಗಿ ಮಾಡುತ್ತಿದ್ದಳು. ಅವನಿಂದ ತಪ್ಪಿಸಿಕೊಳ್ಳೋದಿಕ್ಕೆ ಇದೊಂದೇ ದಾರಿ!"ಏನು ಆಲೋಚಿಸ್ತಿದ್ದೀಯಾ? ನಿನ್ನ ಹೆದರಿಸೋದಿಕ್ಕೆ ನನ್ನ ಕೈಯಲ್ಲಿ ಕೋವಿಯಿಲ್ಲ. ನಾನು ಅದನ್ನ ಕೆಳಗಿಟ್ಟಿದೀನಿ. ನನಗೆ ಮೋಸ ಮಾಡ್ಬೇಡ. ಕೂಡ್ಲೆ ಬಂದು ಬಿಡು. ನೀನೇನಾದ್ರೂ ಬರದಿದ್ರೆ ನಿನ್ನ ಕಾಟೇಜ್ ಎಲ್ಲಿದೇಂತ ನನಗೆ ಗೊತ್ತು. ಅಲ್ಲಿಗೆ ಬರ್ತೀನಿ"ಆತನ ಮಾತು ಮುಗಿಯುತ್ತಿದ್ದಂತೆ ಹಾರು ನಡಿಗೆಯಲ್ಲಿ ಕಾಟೇಜ್‍ನ ಕಡೆಗೆ ಧಾವಿಸಿದಳು.ಕಾಟೇಜ್‍ಗೆ ನುಗ್ಗುತ್ತಲೇ ಬಾಗಿಲನ್ನು ತಟಕ್ಕನೆ ಮುಚ್ಚಿ ಚಿಲಕ ಸಿಕ್ಕಿಸಿ, ಬಾಗಿಲಿಗೆ ಒರಗಿ ನಿಂತಳು.ಬಾಗಿಲು ಮುಚ್ಚಿದ ಸದ್ದಿಗೆ ನರಂಗ ಹೊರಗೆ ಬಂದ."ಏನಾಯ್ತು? ಮತ್ತೆ ಕಪ್ಪು ಹಲ್ಲಿನ ನೋಡಿ ಹೆದರ್ಕೊಂಡ್ಬಿಟ್ರಾ?" ವ್ಯಂಗ್ಯ ತುಂಬಿದ ದನಿಯಲ್ಲಿ ಕೇಳಿದ.ಕಣ್ಣುಗಳನ್ನು ವಿಶಾಲಗೊಳಿಸಿ ಸಿಟ್ಟು ಪ್ರದರ್ಶಿಸಿದಳು."ನಿಂಗೆ ಎಲ್ಲವೂ ತಮಾಷೆ""ತಮಾಷೆ ಮಾಡದೆ ಇನ್ನೇನು ಮಾಡ್ಲಿ. ವಾರದ ಹಿಂದೆ ಮಿಂಚುಹುಳದ ಬೆಳಕು ಕಂಡು ಅಪ್ಪಯ್ಯ ಬಂದ್ರೂಂತ ನನ್ನ ಆ ಜಡಿ ಮಳೆಗೆ ಅಟ್ಟಿದ್ರಿ..." ಮಾತು ಮುಗಿಯುವ ಮೊದಲೇ ಗಹಗಹಿಸಿ ನಕ್ಕ."ನರಂಗ, ನಿಲ್ಸು..."ಅವಳ ಮಾತಿನ ತೀವ್ರತೆಗೆ ಹೆಗಲ ಮೇಲಿದ್ದ ಬಟ್ಟೆಯನ್ನು ಬಾಯಿಗೆ ಹಿಡಿದು ನಗು ನಿಯಂತ್ರಿಸಿಕೊಂಡ. ಅವನ ಕಣ್ಣುಗಳು ಗಂಭೀರತೆ ಪಡೆದವು."ಅಪ್ಪಯ್ಯ ಎಲ್ಲಿದ್ದಾರೆ?""ಈಗಷ್ಟೆ ಜೀಪು ತಕ್ಕಂಡು ಹೋದ್ರು"ಸೋತವರಂತೆ ಕುಸಿದು ಕುಳಿತಳು. ನರಂಗನಿಗೆ ಯಾಕೋ ಸಂಶಯ ಸುಳಿಯಿತು."ಮತ್ತೆ ಆ ರಾಕ್ಷಸನ್ನ ನೋಡಿದ್ರಾ?"ಯಾವುದೇ ಪ್ರತಿಕ್ರಿಯೆಯಿಲ್ಲದೆ ಕ್ಷಣ ಕಾಲ ಕುಳಿತಿದ್ದವಳು ಮೆಲ್ಲಗೆ ತಲೆ ಅಲುಗಿಸಿದಳು. ನರಂಗನ ಮುಖದಲ್ಲೂ ಬೆದರಿಕೆಯ ಛಾಪು ತುಂಬಿತು."ನೀನು ಅಪ್ಪಯ್ಯಂಗೆ ಆ ವಿಷಯ ಹೇಳಿದ್ದೀಯಾ? ನಾನು ನಿನಗೆ ಹೇಳ್ಬೇಡಾಂತ ತಿಳಿಸಿದ್ದೆ...""ಇಲ್ಲ... ನಾನು ಆ ವಿಷಯ ಅವರಿಗೆ ತಿಳಿಸಿಲ್ಲ"ನೆಮ್ಮದಿಯ ಉಸಿರು ದಬ್ಬಿ ಎದ್ದು ನಿಂತಳು."ನಾವು ತಪ್ಪು ಮಾಡಿದ್ವಿ. ಅವನು ಮನೆಗೆ ಬಂದು ಹೋದ ವಿಷಯ ಅಪ್ಪಯ್ಯನಿಗೆ ತಿಳಿಸಿಬೇಕಿತ್ತು. ಮತ್ತೆ ಅವನ ಭೇಟಿಯಾಗುತ್ತೇಂತ ನಾನು ಅಂದ್ಕೊಂಡಿರಲಿಲ್ಲ""ಮತ್ತೆಲ್ಲಿ ಅವನ್ನ ಕಂಡ್ರಿ?" ಕುತೂಹಲದಿಂದ ಮುಖ ಮುಂದೆ ತಂದ ನರಂಗ."ಕಳ್ಳಿಯ ಬೇಲಿಯ ಹತ್ತಿರ. ಅವನಿಗೆ ತಿನ್ನೋದಿಕ್ಕೆ ಏನಾದ್ರೂ ಬೇಕಂತೆ""ತಿನ್ನೋದಿಕ್ಕಾ? ಮಾಡಿಟ್ಟ ಆಡುಗೆ ಮಧ್ಯಾಹ್ನಕ್ಕೆ ಖಾಲಿಯಾಗಿದೆ. ರಾತ್ರಿಯ ತಯಾರಿ ಇನ್ನು ಆಗ್ಬೇಕಿದೆ. ಬೇಕಿದ್ರೆ ನಿನ್ನೆ ತಂದಿದ್ದ ಒಣ ಬ್ರೆಡ್ ಇದೆ" ನರಂಗನ ದನಿಯಲ್ಲಿ ಕಂಪನವಿತ್ತು."ನೀನೊಂದು ಕೆಲ್ಸ ಮಾಡು. ನಾನು ಕಾಟೇಜ್‍ನಲ್ಲಿರ್ತೀನಿ. ನೀನು ಆ ಬ್ರೆಡನ್ನು ಅವನಿಗೆ ಕೊಟ್ಬಿಟ್ಟು ಬಾ. ಆತ ಇನ್ನೂ ಆ ಕಳ್ಳಿಯ ಬೇಲಿ ಹತ್ರ ಕಾಯ್ತಿರಬಹುದು""ನ... ನಾ...ನು... ಇಲ್ಲ... ನೀವೇ ಹೋಗ್ಬನ್ನಿ" ನಿರಾಕರಿಸಿದ ನರಂಗ.ರಶ್ಮಿಯ ಎದೆಯೊಳಗೆ ಸಣ್ಣಗೆ ಒರೆ ಕಲ್ಲಿಗೆ ಕುಟ್ಟುವ ಹಾಗೇ ಸದ್ದು."ನೀವು ಸುಮ್ನಿರಿ. ಅವನೇನು ಮಾಡ್ತಾನೆ? ಅಲ್ಲಿಗೆ ಹೋಗೋದು ಬೇಡ" ನರಂಗ ಹೇಳುವುದರಲ್ಲಿ ಸತ್ಯವಿದೆಯೆನಿಸಿತು. ಅವನನ್ನು ಯಾಕೆ ಉಪಚರಿಸಬೇಕು?`...ನೀನು ಬರದಿದ್ರೆ ನಿನ್ನ ಕಾಟೇಜ್‍ಗೆ ಬಂದು ಬಿಡ್ತೀನಿ' ಅವನ ಮಾತುಗಳು ಎಚ್ಚರಿಸಿದವು."ನರಂಗ, ನೀನೂ ನನ್ನ ಜೊತೆಗೆ ಬಂದು ಬಿಡು. ನಾನು ಅವನಿಗೆ ತಿನ್ನೋದಿಕ್ಕೆ ಕೊಡದಿದ್ರೆ... ಆತ ಮತ್ತೆ ಇಲ್ಲಿ ಬಂದು ತೊಂದ್ರೆ ಕೊಟ್ಟಾನು"ನರಂಗ ಅಡುಗೆ ಕೋಣೆಗೆ ನುಗ್ಗಿ ಬ್ರೆಡನ್ನು ಒಂದು ಪ್ಲಾಸ್ಟಿಕ್ ಚೀಲಕ್ಕೆ ಸೇರಿಸಿ ಅಷ್ಟೇ ವೇಗದಲ್ಲಿ ಹೊರಗೆ ಬಂದ. ಯೋಚಿಸುವಷ್ಟು ಸಮಯವಿಲ್ಲ. ಎದೆ ಬಡಿತ ಏರುತ್ತಿದ್ದಂತೇ ಇಬ್ಬರೂ ಕಲ್ಲುಗಳ ಮೇಲೆ ಕಾಲೂರಿಕೊಂಡು ಕಳ್ಳಿಯ ಗಿಡದ ಬೇಲಿಯ ಬಳಿ ಬಂದು ಮರದ ಮರೆಗೆ ನಿಂತರು."ನೀನು ಮುಂದೆ ಹೋಗು. ಅದನ್ನ ಅವನಿಗೆ ಕೊಟ್ಬಿಡು"ನರಂಗ ಹೆದರುತ್ತಲೇ ಕಳ್ಳಿಯ ಬೇಲಿಯ ಬಳಿ ನಡೆದು ಸುತ್ತಲೂ ನೋಡಿದ. ಅಲ್ಲಿ ಆ ವ್ಯಕ್ತಿ ಇರಲಿಲ್ಲ!ನರಂಗ ಧೈರ್ಯ ತಂದುಕೊಂಡು ಬೇಲಿಯ ಬದಿಯಿಂದ ಕಾಲು ಸರಿಸಿದ. ಮರೆಯಲ್ಲಿ ನಿಂತಿದ್ದ ರಶ್ಮಿ ಇಣುಕಿ ನರಂಗನನ್ನೇ ಗಮನಿಸುತ್ತಿದ್ದಳು.ಏಕಾಏಕಿ ಅವಳ ಭುಜಗಳ ಮೇಲೆ ಬಲವಾದ ಕೈಗಳು ಬಿದ್ದವು!ಬೆಚ್ಚಿ ಹಿಂತಿರುಗಿದವಳು ಕಿಟಾರನೆ ಕಿರುಚಿದಳು."ಕೊಟ್ಬಿಡು... ಬೇಗ ಕೊಟ್ಬಿಡು... ನಾನು ಅದನ್ನು ತಿಂದು ದೂರ ಹೋಗ್ತೀನಿ. ಇಲ್ಲಾಂದ್ರೆ... ಅವರು ನನ್ನ ಸಾಯಿಸಿ ಬಿಡ್ತಾರೆ..."ಹಣೆಯ ಭಾಗದಿಂದ ರಕ್ತ ಸುರಿದು ಎಡ ಕಣ್ಣಿನಿಂದ ಇಳಿದು ಕೆನ್ನೆಯನ್ನೆಲ್ಲಾ ತೋಯಿಸಿತ್ತು. ಯಾರೋ ಅವನ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದಂತಿತ್ತು.ನರಂಗ ಅಲ್ಲಿಗೆ ಓಡು ನಡುಗೆಯಲ್ಲಿ ಬಂದ. ಆ ವ್ಯಕ್ತಿ ರಶ್ಮಿಯ ಹೆಗಲಿಗೆ ಮುಖವಿರಿಸಿದಂತೆ ನಿಂತಿದ್ದ! ರಶ್ಮಿ ಚೇತರಿಸಿಕೊಂಡು ಅವನನ್ನು ನಿಧಾನಕ್ಕೆ ಹಿಂದಕ್ಕೆ ಸರಿಸಿದಳು. ಆತ ಬಲಹೀನನಂತೆ ತನ್ನ ಭಾರವನ್ನೆಲ್ಲ ಅವಳ ಮೇಲೆ ಹಾಕಿದ್ದ. ಅವನ ಕಿಸೆಯಿಂದ ಕಾಗದದ ತುಂಡೊಂದು ಕೆಳಗೆ ಬಿತ್ತು."ನರಂಗ, ಹಿಡ್ಕೋ... ನಿಧಾನಕ್ಕೆ... ಕೂರಿಸ್ಬಿಡು" ರಶ್ಮಿ ಹೇಳುತ್ತಾ ಕೆಳಬಿದಿದ್ದ ಕಾಗದದ ತುಂಡನ್ನು ಎತ್ತಿಕೊಂಡಳು.ನರಂಗನ ಸಹಾಯದಿಂದ ಆತ ಕಲ್ಲು ನೆಲದ ಮೇಲೆ ಕುಳಿತ. ತೊಟ್ಟಿದ್ದ ಬಟ್ಟೆಗಳು ಚಿಂದಿಯಾಗಿ ಅಲ್ಲಲ್ಲಿ ರಕ್ತ ಒಸರುತ್ತಿದ್ದವು. ನರಂಗ ಕೈಯಲ್ಲಿದ್ದ ಬ್ರೆಡನ್ನು ಅವನಿಗೆ ನೀಡಿದ. ಹಸಿದು ಕಂಗಾಲಾಗಿದ್ದ ವ್ಯಕ್ತಿ ಗಬ ಗಬ ತಿನ್ನಲಾರಂಭಿಸಿದ. ಆತನ ಕಣ್ಣುಗಳಲ್ಲಿ ಧನ್ಯತೆಯ ಭಾವ ತುಂಬಿತ್ತು. ಚೀಲದಿಂದ ನೀರಿನ ಸೀಸೆಯನ್ನು ತೆರೆದು ಗಟಗಟನೆ ಕುಡಿದು ಸೆಟೆದು ಕುಳಿತ."ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ" ಇಬ್ಬರಿಗೂ ಕೈ ಮುಗಿದು ಚೈತನ್ಯ ತುಂಬಿದವರಂತೆ ಎದ್ದು ನಿಂತ.ಅವರು ನೋಡುತ್ತಿದ್ದಂತೆ ಕಲ್ಲು, ಮುಳ್ಳುಗಳ ಕೊರಕಲು ದಾರಿಯ ಇಳಿಜಾರಿಗೆ ನಡೆದು ಹೋದ.ಕಾಟೇಜ್‍ಗೆ ಮರಳಿದ ರಶ್ಮಿಗೆ ಅವನೊಬ್ಬ ವಿಚಿತ್ರವಾಗಿ ಕಂಡ. ಯಾವುದೋ ಮೋಸದ ಜಾಲದಲ್ಲಿ ಸಿಕ್ಕಿ ಬಿದ್ದಿರಬಹುದು! ಅಥವಾ ಯಾರದೋ ಕೈಯ ಸಾವಿನಿಂದ ತಪ್ಪಿಸಿಕೊಂಡು ಬಂದಿರಬಹುದು!"ನರಂಗ, ಈ ವಿಷಯ ಅಪ್ಪಯ್ಯನಿಗೆ ಹೇಳ್ಬೇಡ. ಹಾಗಂತ ಪ್ರಾಮಿಸ್ ಮಾಡು. ನಾನು ಹೇಗಿದ್ರೂ ಇವತ್ತು ರಾತ್ರಿಗೆ ಬೆಂಗಳೂರಿಗೆ ಹೊರಡ್ತೀನಿ" ಯಾಕೋ ಆ ಏಟು ತಿಂದಿದ್ದ ವ್ಯಕ್ತಿಯ ಬಗ್ಗೆ ಮರುಕ ಹುಟ್ಟಿತು ರಶ್ಮಿಗೆ."ನೀವು ಈ ವಿಷಯಾನ ಮುಚ್ಚಿಟ್ರೆ... ಮತ್ತೊಂದು ದಿನ ನಮಗೇ ಅಪಾಯವಾಗ್ಬಹುದು. ನಾನು ಹೇಳಿದ್ನಲ್ಲ ಈ ಬೆಟ್ಟದಲ್ಲಿ ರಾಕ್ಷಸರಿದ್ದಾರೇಂತ... ನಿಮ್ಮ ಅಪ್ಪಯ್ಯನಿಗೆ ಹೇಳಿದ್ರೆ ಏನಾದರೊಂದು ಪರಿಹಾರ ಸೂಚಿಸ್ಬಹುದು"ರಶ್ಮಿಗೇಕೋ ನರಂಗನ ಮಾತು ಹಿಡಿಸಲಿಲ್ಲ."ನರಂಗ, ನೀನು ಪ್ರಾಮಿಸ್ ಮಾಡಿದ್ದೀಯಾ. ಈ ವಿಷಯ ಯಾರಿಗೂ ತಿಳಿಸ್ಬೇಡಾ" ಅವನನ್ನು ಎಚ್ಚರಿಸುವಂತೆ ಹೇಳಿದಳು.ಪೆಟ್ಟು ತಿಂದಿದ್ದ ಅಜಾನುಬಾಹು ವ್ಯಕ್ತಿಯ ಬಗ್ಗೆ ಏನೋ ನವಿರು ಭಾವನೆ ರಶ್ಮಿಯ ಎದೆಯಲ್ಲಿ!
***
ಅಂದು ರಾತ್ರಿ ಅಪ್ಪಯ್ಯನಿಗೆ ಹೇಳಿ ಬೆಂಗಳೂರಿಗೆ ಹೊರಟು ನಿಂತಳು. ಜೀಪು ಕಾಡಿನ ಮಧ್ಯದ ಮಣ್ಣು ರಸ್ತೆಯನ್ನು ಹೆಡ್‍ಲೈಟ್‍ನ ಬೆಳಕಿನಲ್ಲಿ ಸೀಳಿಕೊಂಡು ಕುಲುಕುತ್ತಾ ಸಾಗುತ್ತಿತ್ತು.ಅರಣ್ಯ ಅಧಿಕಾರಿ ಮಲ್ಲಯ್ಯ ಮಗಳ ಕಡೆಗೊಮ್ಮೆ ದೃಷ್ಟಿ ಬೀರಿ ಜೀಪಿನ ವೇಗವನ್ನು ಹೆಚ್ಚಿಸಿದ. ರಶ್ಮಿ ಸೀಟ್‍ಗೆ ಸರಿದು ಕುಳಿತು ಎದುರಿನ ಕಬ್ಬಿಣದ ಪಟ್ಟಿಯನ್ನು ಗಟ್ಟಿಯಾಗಿ ಹಿಡಿದುಕೊಂಡಳು.ಹಣೆಗೆ ಕೈಯೊತ್ತಿಕೊಂಡಂತೆ ವ್ಯಕ್ತಿಯೊಬ್ಬ ರಪ್ಪನೆ ಜೀಪಿಗೆ ಅಡ್ಡ ನಿಂತ!ರಶ್ಮಿ ಕಣ್ಣುಗಳನ್ನು ಕಿರಿದುಗೊಳಿಸಿ ನೋಡಿದಳು. ಸಂಶಯವೇ ಇಲ್ಲ, ಕಳ್ಳಿಯ ಬೇಲಿ ಬದಿಗೆ ಕಂಡ ವ್ಯಕ್ತಿ!"ಸರ್, ಆ ಕಡೆಗೆ ಹೋಗೋದಿಕ್ಕೆ ಆಗ್ತಾ ಇಲ್ಲ. ಸೇತುವೆ ಕುಸಿದು ಬಿದ್ದಿದೆ"ಆತ ಹೇಳಿ ಅಲ್ಲಿ ನಿಲ್ಲದೆ ರಸ್ತೆಯಂಚಿನಿಂದ ಕಾಡಿನೊಳಗೆ ತೂರಿಕೊಂಡ."ಅವನ್ಯಾರು... ನಾನು ಈಗ ತಾನೇ ಸಿಟಿಯಿಂದ ಬಂದೆ" ಆಶ್ಚರ್ಯ ತೋರಿಸಿದ ಅರಣ್ಯಾಧಿಕಾರಿ.ರಶ್ಮಿಯ ತಲೆಗೇನೋ ಹೊಳೆಯಿತು."ಅಪ್ಪಯ್ಯ, ಹಿಂದಕ್ಕೆ ಹೋಗೋಣ"ಅಧಿಕಾರಿ ಮತ್ತೊಮ್ಮೆ ಮಗಳ ಕಡೆಗೆ ನೋಡಿದ. ಅವಳ ಮುಖದಲ್ಲಿ ಭೀತಿ ತುಂಬಿದಂತಿತ್ತು.ಕಾಟೇಜ್‍ಗೆ ಮರಳುವಷ್ಟರಲ್ಲಿ ಮಳೆ ಹನಿಯಲಾರಂಭಿಸಿತು. ಕೈಯಲ್ಲಿದ್ದ ಬ್ಯಾಗನ್ನು ದಡಕ್ಕನೆ ಜಗಲಿಯ ಮೇಲೆ ಎಸೆದು ನಿಂತವಳಿಗೆ ಏನೋ ಭಾರಿ ಸದ್ದು ಕೇಳಿಸಿತು.ಅಧಿಕಾರಿಯೂ ಮುಖ ಹೊರಕ್ಕೆ ತೂರಿಸಿ ನೋಡಿದ.ಸೇತುವೆಯಾಚೆಯಿಂದ ಕೇಳಿಸಿದ ಭಾರಿ ಸ್ಫೋಟ!ಅಂದರೆ ಸೇತುವೆ ಸ್ಫೋಟಗೊಂಡಿದೆ!ತಲ್ಲಣಿಸಿ ಹೋದವರಿಗೆ ಬೆಳಾಗಾಗುವವರೆಗೆ ನಿದ್ದೆ ಸುಳಿಯಲಿಲ್ಲ. ಅಧಿಕಾರಿ ಜೀಪು ಹಿಡಿದುಕೊಂಡು ಸೇತುವೆಯ ಕಡೆಗೆ ಹೊರಟ.ರಶ್ಮಿ ರೇಡಿಯೋ ಹಚ್ಚಿದಳು.ಗುಡುಗೊಂದು ಬೆಟ್ಟದ ತುದಿಯಲ್ಲಿ ಸ್ಫೋಟಿಸಿದಂತಾಯಿತು. ರೇಡಿಯೋ ಕರಕರ ಸದ್ದು ಹೊರಟಿಸಿತು. ವಾರ್ತೆ ಮಾತ್ರಾ ಮುಂದುವರಿದಿತ್ತು."ಆತ ಹೋರಾಟಗಾರನಾಗಿರಬೇಕು. ಸೇತುವೆ ಸ್ಫೋಟಗೊಂಡಿದ್ದು ಅವನಿಂದನೇ...""ನರಂಗ, ನನಗೆಲ್ಲಾ ಗೊತ್ತು. ನೋಡು ಈ ಕಾಗದ. ಅವನ ಕಿಸೆಯಿಂದ ಬಿದ್ದಿರೋದು. ಆತ ನಕ್ಸಲೇಟ್ ಆಗಿದ್ದ. ಆದ್ರೆ... ಅವರೊಳಗೆ ಮನಸ್ತಾಪ ಬಂದು ಅವರಿಂದ ಬೇರೆಯಾಗಿದ್ದ. ತಾನು ಒಳ್ಳೆ ವ್ಯಕ್ತಿ ಆಗ್ಬೇಕೂಂತ ಏನೆಲ್ಲಾ ಯೋಜನೆ ಹಾಕಿದ್ನಂತೆ. ಆದ್ರೆ... ಆ ಧೂರ್ತರು ಅವನನ್ನು ಬಿಡಲಿಲ್ಲ ಕಾಣ್ಬೇಕು. ಎಲ್ಲಿ ತಮ್ಮ ಯೋಜನೆಗಳೆಲ್ಲವನ್ನೂ ಸರಕಾರಕ್ಕೆ ತಿಳಿಸುತ್ತಾನೋ ಏನೋಂತ ಅವನನ್ನು ಮುಗಿಸ್ಲಿಕ್ಕೆ ನೋಡಿದ್ರು... ಆತ ನಾವು ನೆನ್ನೆ ರಾತ್ರಿಗೆ ಬೆಂಗಳೂರಿಗೆ ಹೊರಟಾಗ ಸೇತುವೆ ಕುಸಿದಿದೇಂತ ಸುಳ್ಳು ಹೇಳಿದ್ದ. ಅಂದ್ರೆ ಆತನಿಗೆ ಸೇತುವೆಯನ್ನು ಸ್ಫೋಟಗೊಳಿಸುವ ವಿಷಯ ತಿಳಿದಿತ್ತೂಂತ ಕಾಣ್ಸುತ್ತೆ. ನಮ್ಮನ್ನು ಸಾವಿನ ದವಡೆಯಿಂದ ಪಾರು ಮಾಡ್ದ. ಹೀ ಈಸ್ ಗ್ರೇಟ್... ಆದ್ರೆ ಆ ಧೂರ್ತರು ಅವನು ಒಳ್ಳೆಯವನಾಗೋದಿಕ್ಕೆ ಬಿಡ್ಲಿಲ್ಲ... ನನ್ನ ಕನಸುಗಳನ್ನೂ... ಅವನ್ನ ಸಾಯಿಸಿದ್ರು...." ಕುಸಿದು ಕುರ್ಚಿಯಲ್ಲಿ ಕುಳಿತು ಮೇಜಿನ ಮೇಲೆ ತಲೆಯಿರಿಸಿದಳು. ಕಣ್ಣಂಚಿನಿಂದ ನೀರಿನ ಹನಿಗಳು ಆತ ಬರೆದಿದ್ದ ಪತ್ರದ ಮೇಲೆ ಬೀಳುತ್ತಿತ್ತು....ನೆನಪಿನಾಳದಿಂದ ಹೊರ ಬಂದವಳನ್ನು ಕರಗಿದ ಮೋಡದ ಹನಿಗಳು ಸ್ವಾಗತಿಸಿದವು.

Read more!

Tuesday, December 9, 2008

ಹಸಿರು ಮಿಡತೆ


(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕಥೆ)

ಮೇಜಿನ ಮೇಲಿದ್ದ ದೀಪದ ಜೊತೆಗೆ ಆಟವಾಡುತ್ತಾ ತಟ್ಟನೆ ಏನೋ ನೆನಪಿಸಿಕೊಂಡು ಮೈ ಅದುರಿಸಿದಳು ರಚನಾ!ರಾತ್ರೋ ರಾತ್ರಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಆವರಣ ಗೋಡೆಯ ಹಿಂದಿರುವುದೇನು? ಅನ್ನುವ ಕುತೂಹಲ ಇನ್ನೂ ತಣಿದಿರಲಿಲ್ಲ! ಗೇಟ್‍ನ ಸಂಧಿಗೆ ಕಣ್ಣುಗಳನ್ನು ತೂರಿಸಿ ಹುಡುಕುವ ಪ್ರಯತ್ನ ಮಾಡುತ್ತಿದ್ದಳು.ತಾನು ಓಡಾಡಿದ ಸ್ಯಾಮ್ ಅಂಕಲ್‍ನ ಎಸ್ಟೇಟ್ ಅದು! ಕಿತ್ತಳೆ ಹಣ್ಣುಗಳನ್ನು ಕಿತ್ತು, ಸ್ಯಾಮ್ ಅಂಕಲ್‍ನ ಜೊತೆಗೆ ಎಸ್ಟೇಟ್‍ನ ಹುಲ್ಲುಗಳ ಮೇಲೆ ನಡೆದಾಡಿದ್ದಳು. ಕೈಯಲ್ಲಿ ಕೋವಿ ಹಿಡಿದುಕೊಂಡೆ ಆತ ಜೀಪನ್ನೇರುತ್ತಿದ್ದ!ಕಿತ್ತಳೆಯ ಸಿಪ್ಪೆ ಸುಲಿದು ಅದೆಷ್ಟೋ ಬಾರಿ ಅದರ ರಸವನ್ನು ಅವನ ಕಣ್ಣಿಗೆ ಹಾರಿಸಿದ್ದಳು.

"ನೀನು ಬಾರಿ ಚಾಲಾಕಿನ ಹುಡುಗಿ. ಹಸಿರು ಮಿಡತೆ ತರಹ ಚುರುಕಾಗಿದ್ದಿಯಾ. ನೀನು ಈ ಎಸ್ಟೇಟ್‍ಗೆ ಮಗಳಾಗಿ ಬರ್ತೀಯಾ? ಈ ಎಸ್ಟೇಟ್‍ಗೆ ನಿನಗಿಂತ ಒಳ್ಳೆ ವಾರ್‍ಅಸುದಾರರು ಬೇರಾರು ಸಿಗಲಿಕ್ಕಿಲ್ಲ. ನೀನೇ ಸರಿಯಾದ ಒಡತಿ" ಮಕ್ಕಳಿಲ್ಲದ ಸ್ಯಾಮ್ ಅಂಕಲ್‍ನ ಕಣ್ಣುಗಳಲ್ಲಿ ಆಸೆಯ ದೀಪವಿತ್ತು.

"ಅಂಕಲ್, ನೀವು ನನ್ನ ಛೇಡಿಸ್ತಿದ್ದೀರಾ?... ಇಷ್ಟು ದೊಡ್ಡ ಎಸ್ಟೇಟ್‍ನ ನಾನು ನಿಭಾಯಿಸಲಾರೆ. ನಿಮ್ಮ ಜೊತೆಗೆ ಸುತ್ತಾಡೋದಿಕ್ಕೆ ನಾನು ಬರ್ತೀನಿ.."ಸ್ಯಾಮ್‍ನ ಕಣ್ಣುಗಳು ಹನಿಗೂಡಿದವು.

"ವೈಶಾಲಿ ಹೋದ ನಂತರ ನನ್ನ ಆಸಕ್ತಿಯೆಲ್ಲಾ ಬಿದ್ದೋಯ್ತು. ನಿನ್ನ ತಂದೆ ಗಿರಿಯಪ್ಪನ ಕೇಳ್ದೆ. `ನನಗಿರೋಳು ಒಬ್ಳೆ ಮಗಳು. ಹೇಗಯ್ಯಾ ನಿನ್ನ ಎಸ್ಟೇಟ್‍ಗೆ ಕಳುಹಿಸ್ಲಿ?' ಅಂದು ನಿರಾಕರಿಸಿ ಬಿಟ್ಟ. ಎಸ್ಟೇಟನ್ನು ಮಾರೋದಿಕ್ಕೆ ನಂಗೆ ಇಷ್ಟವಿಲ್ಲ. ನಿನ್ನಂತಹ ಚುರುಕಿನ ಹುಡುಗಿ ನನ್ನ ಎಸ್ಟೇಟಿಗೆ ಬೇಕಿತ್ತು"

"ಅಂಕಲ್, ನಾನು ಯಾವತ್ತೂ ನಿಮ್ಮ ಜೊತೆಗಿರ್ತೀನಿ. ಆದರೆ ಎಸ್ಟೇಟ್‍ನ ವಾರಸುದಾರಿಕೆ ಬೇಡ"ಅವಳ ಮಾತಿಗೆ ಪ್ರೀತಿಯಿಂದ ಮೈದಡವಿದ್ದ...ಆಲೋಚನೆಯ ಗುಂಗಿನಲ್ಲಿರುವಾಗಲೇ ಅವಳಿಗೆ ಗೋಚರಿಸಿತ್ತು, ಗೋಡೆಯ ಮೇಲೆ ಬಿದ್ದ ನೆರಳು!

ಸಂಧಿನಿಂದ ಕಣ್ಣುಗಳನ್ನು ಹಿಂದಕ್ಕೆಳೆದುಕೊಂಡು ತನ್ನ ತಲೆಗೆ ಕುಟ್ಟಿಕೊಂಡಳು. ತನ್ನದೇ ನೆರಳನ್ನು ಕಂಡು ಹೆದರುವ ತಾನೊಬ್ಬಳು ಎಂತಹ ಧೈರ್ಯವಂತೆ!ಆದರೆ.. ಈಗ ಅವಳಿಗೆ ಸ್ಪಷ್ಟವಾಯಿತು. ಅದು ತನ್ನ ನೆರಳಲ್ಲ!ಗೋಡೆಗೆ ಹತ್ತಿರವಾಗಿರುವಾಗ ನೆರಳು ಹಾಗೇ ಬೀಳಲಾರದು! ಅಂದರೆ... ತನ್ನನ್ನು ಯಾವುದೋ ವ್ಯಕ್ತಿ ಹಿಂಬಾಲಿಸಿದ್ದ! ಇನ್ನು ಸ್ವಲ್ಪ ಸಮಯ ತಾನು ಅಲ್ಲಿರುವ ಹಾಗಿದ್ದರೆ ಆ ವ್ಯಕ್ತಿ ಗೋಚರಿಸುತ್ತಿದ್ದ! ಆದರೆ ತಾನು ಯಾರದೋ ಪಿಸು ಮಾತುಗಳನ್ನು ಕೇಳಿ ದಾಪುಗಾಲು ಹಾಕಿ ಮನೆ ಸೇರಿದ್ದೆ! ಆ ಮಾತುಗಳು ಈಗಲೂ ನೆನಪಿದೆ...

"ಆ ಹುಡುಗಿ ಇದ್ದಾಳಲ್ಲ... ಹಸಿರು ಮಿಡತೆ... ಈಗ ಇಲ್ಲಿ ಕಾಣಿಸ್ಕೊಂಡಿದ್ಲು.. ತಿರುಗಿ ನೋಡ್ತೀನಿ ಸುಯ್ಯಂತ ಹಾರಿ ಹೋದ್ಲು"ತಾನು ಗೋಡೆಯ ಸುತ್ತಲೂ ಮಾರು ದೂರ ನಡೆದಿದ್ದನ್ನು ಎಸ್ಟೇಟಿನ ಒಳಗಿದ್ದ ವ್ಯಕ್ತಿ ಗಮನಿಸಿದ್ದಾನೆ! ಇನ್ನೊಬ್ಬ ವ್ಯಕ್ತಿ ತನ್ನನ್ನು ಹಿಂಬಾಲಿಸಿದ್ದಾನೆ! ಆ ವ್ಯಕ್ತಿಯ ನೆರಳನ್ನು ತಾನು ಕಂಡಿದ್ದು!ಮೈ ಬೆವರಿತು! ಸ್ವಿಚ್ ಹಿಡಿದ ಕೈ ತರತರ ಕಂಪಿಸಿತು.ಕಣ್ಣು ಮುಚ್ಚಿಕೊಂಡು ಮತ್ತೊಮ್ಮೆ ನೆನಪಿಸಿಕೊಂಡಳು ರಚನಾ. ನೆರಳು ಗೋಡೆಯ ಮೇಲೆ ಸ್ಪಷ್ಟವಾಗಿ ಮೂಡಿತ್ತು. ಆದರೆ ಅರ್ಧದಷ್ಟು ಮಾತ್ರ!ಅಂದರೆ ವ್ಯಕ್ತಿ ದೂರದಲ್ಲಿದ್ದ!

`ಬೆಳಗ್ಗಿನ ಮತ್ತು ಸಂಜೆಯ ಸೂರ್ಯಕಿರಣಗಳು ಭೂಮಿಗೆ ವಕ್ರವಾಗಿ ಬೀಳುವುದರಿಂದ ನೆರಳು ಉದ್ದವಾಗಿ ಕಾಣುತ್ತದೆ'ಅಂದರೆ... ವ್ಯಕ್ತಿ ದೂರದಲ್ಲಿರಲಿಲ್ಲ... ತನ್ನ ಹತ್ತಿರದಲ್ಲೆ ಇದ್ದ!ಆ ವ್ಯಕ್ತಿ ತನ್ನನ್ನು ಹಿಂಬಾಲಿಸಿ ತನಗೆ ಅಪಾಯವನ್ನು ಮಾಡಲಿದ್ದಾನೆ! ದೀಪ ಆರಿಸಿ ಬಂದು ಹಾಸಿಗೆ ಸೇರಿದವಳಿಗೆ ಏನೇನೋ ವಿಚಿತ್ರ ಕನಸುಗಳು.
***

ಉದ್ದಕ್ಕೂ ಹರಡಿಕೊಂಡಿದ್ದ ಮುಳ್ಳು ಬೇಲಿಯನ್ನು ಆದರಿಸಿ ಇಬ್ಬನಿ ತುಂಬಿದ ಹುಲ್ಲು ಹಾದಿಯ ಮೇಲೆ, ಸೀರೆಯನ್ನು ಎತ್ತಿ ಹಿಡಿದು ನಡೆಯುತ್ತಿದ್ದಳು ರಚನಾ. ಗೋಡೆಯಾಚೆ ನಡೆಯುವ ವಿದ್ಯಮಾನವಿನ್ನೂ ಅಸ್ಪಷ್ಟ. ಮುಂಜಾನೆಯ ಹೊತ್ತಿಗೆ ಅಲ್ಲಿ ಯಾರೂ ಇರಲಾರೆಂಬ ಧೈರ್ಯದಿಂದ ಸಾಹಸಕ್ಕೆ ಇಳಿದಿದ್ದಳು.`ಯಾರೋ ಅಸಾಮಿ... ಎಸ್ಟೇಟನ್ನು ಮಾರ್ತೀರಾಂತ ಕೇಳ್ದ. ಇಲ್ಲಾಂದೆ.. ಬೆದರಿಸಿ.. ನೋಡ್ಕೋತಿನಿ.. ಅಂತ ಹೇಳಿ ಹೋದ. ನನಗೆ ಅಪಾಯ ತಪ್ಪಿದ್ದಲ್ಲ' ಸ್ಯಾಮ್ ಅಂಕಲ್‍ನ ಮಾತುಗಳು.ಅದೇ ತನ್ನ ಹಾಗೂ ಸ್ಯಾಮ್ ಅಂಕಲ್‍ನ ಕೊನೆಯ ಭೇಟಿ! ಸ್ಯಾಮ್ ಅಂಕಲ್ ಎಲ್ಲಿ ಹೋದ್ರು? ಏನಾದ್ರೂ? ಯಾವುದೂ ತಿಳಿದಿಲ್ಲ. ಆ ಆಗಂತುಕ ಅವರಿಗೆ ಅಪಾಯ ತಂದಿರಬಹುದು!ಗೇಟಿನ ಸಂಧಿಯಲ್ಲಿ ಒಳಗೆ ದೃಷ್ಟಿ ಹರಿಸಿದಳು. ಆವರಣದ ಗೋಡೆಯಷ್ಟು ಎತ್ತರಕ್ಕಿರುವ ಗೇಟಿನ ಬಾಗಿಲುಗಳು ಬೀಗ ಜಡಿದು ಭದ್ರವಾಗಿವೆ!ಅದಾಗಲೇ ಯಾವುದೋ ವಾಹನದ ಯಂತ್ರದ ಮೊರೆತದ ಸದ್ದು ಕೇಳಿಸಿತು! ಒಂದೆ ಉಸುರಿಗೆ ಗೇಟಿನ ಬಳಿಯಿಂದ ಹಾರಿ ಪೊದೆಯ ಹಿಂದೆ ಅವಿತು ಕುಳಿತಳು. ಇಬ್ಬನಿಯಲ್ಲಿ ತೊಳೆದ ಜೇಡರ ಬಲೆಯೊಂದು ಮುಖಕ್ಕೆ ಅಂಟಿಕೊಂಡಾಗ ಅಸಹ್ಯವೆನಿಸಿತು.ಅದೇ ಸಮಯಕ್ಕೆ ವಾಹನ ಬಂದು ನಿಂತಿತು. ಯಂತ್ರದ ಸದ್ದೂ ನಿಂತಿತು. ದಪ್ಪನೆಯ ಕುಳ್ಳಗಿನ ವ್ಯಕ್ತಿ ವಾಹನದಿಂದ ಇಳಿದು ಬೀಗ ತೆರೆದ. ಮತ್ತೆ ವಾಹನವೇರಬೇಕೆನ್ನುವಾಗ ಅವನಿಗೆ ಸಂಶಯ ಬಂದವರಂತೆ ನೋಡುತ್ತಿದ್ದ. ಗೇಟಿನ ಬಳಿಯಿಂದ ಪೊದೆಯವರೆಗೆ ದೃಷ್ಟಿ ಹಾಯಿಸಿದ. ಯಾರೋ ನಡೆದು ಕೊಂಡು ಹೋದಂತೆ ಹುಲ್ಲಿನ ಮೇಲಿನ ಇಬ್ಬನಿ ಕರಗಿತ್ತು! ಪೊದೆಯ ಬಳಿ ಹೆಜ್ಜೆ ಹಾಕಲಾರಂಭಿಸಿದ.ರಚನಾಳ ಎದೆ ಬಡಿತ ತೀವ್ರವಾಯಿತು. ತಾನೀಗ ಆತನ ಕೈಗೆ ಸಿಕ್ಕಿ ಬೀಳಲಿದ್ದೇನೆ!! ಉಸಿರು ಬಿಗಿ ಹಿಡಿದಳು.ಆತ ತಟ್ಟನೆ ನಿಂತು ಬಿಟ್ಟ. ಒಂದೆರಡು ಬಾರಿ ವಿಸಿಲ್ ಹಾಕಿದ. ಮುಖ ಹೊರಳಿಸಿದಳು ರಚನಾ. ದೂರದಲ್ಲಿ ಕಂಪೌಂಡಿನ ಅಂಚಿಗೆ ಸರಿದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕಾಣಿಸಿದ! ಸಧ್ಯ ತನ್ನನ್ನು ಕುಳ್ಳಗಿನ ವ್ಯಕ್ತಿ ನೋಡಿಲ್ಲ! ಸಮಾಧಾನದ ಉಸಿರು ದಬ್ಬಿದಳು.ಆತ ಮತ್ತೆ ವಾಹನವೇರಿ ಯಂತ್ರವನ್ನು ಚಾಲನೆಗೆ ತಂದು, ಮುಂದಕ್ಕೋಡಿಸಿದ. ಮತ್ತೆ ವಾಹನ ನಿಂತ ಸದ್ದು!ತಟ್ಟನೆ ಪೊದೆಗಳಿಂದ ಹೊರಗೆ ಬಂದು ಎಸ್ಟೇಟಿನ ಒಳಗೆ ದೃಷ್ಟಿ ಹಾಯಿಸಿದಳು. ಹಳದಿ ಬಣ್ಣದ ಮರಳ ರಾಶಿ!ಗೇಟಿನ ಬಾಗಿಲುಗಳು ಮುಚ್ಚಿಕೊಳ್ಳುತ್ತಲೆ ಸರಿದು ಮರೆಯಾಗಿ ನಿಂತಳು. ಇನ್ನು ಸ್ವಲ್ಪ ಹೊತ್ತು ತಾನು ಅಲ್ಲಿ ನಿಂತಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೆ! ವೇಗದ ನಡುಗೆಯಲ್ಲಿ ಮುಂದೆ ಸರಿದಳು. ಗೋಡೆಯ ಅಂಚಿಗೆ ಸರಿದು ಹೋಗುತ್ತಿದ್ದ ವ್ಯಕ್ತಿಯನ್ನು ನೋಡಿ ಅತ್ತ ಹೆಜ್ಜೆ ಸರಿಸಿದಳು. ಇವಳು ನೋಡುತ್ತಿದ್ದಂತೆಯೇ ಆತ ಇಳಿಜಾರಿಗೆ ಇಳಿದು ಮಾಯವಾದ! ಸ್ವಲ್ಪದರಲ್ಲೆ ತಪ್ಪಿದ ಅವಕಾಶ! ಆ ವ್ಯಕ್ತಿಯನ್ನು ನಿಲ್ಲಿಸಿ ಬಾಯಿ ಬಿಡಿಸುತ್ತಿದ್ದರೆ, ಎಸ್ಟೇಟಿನಲ್ಲಿ ನಡೆಯುವ ವಿಷಯವನ್ನು ತಿಳಿದುಕೊಳ್ಳಬಹುದಿತ್ತು. ಅಲ್ಲಿಂದ ಪಕ್ಕಕ್ಕೆ ಹೊರಳಿದವಳಿಗೆ ಕಂಡಿತು...!ಆವರಣದ ಗೋಡೆಗೆ ತಾಗಿಕೊಂಡಿರುವ ಸಣ್ಣಗಿನ ಮರ!ಅದನ್ನು ಹತ್ತಿದರೆ ನಿರಾಯಾಸವಾಗಿ ಗೋಡೆಯ ಮೇಲೆ ನಿಂತು ಒಳಗೆ ನೋಡಬಹುದು! ಆಲೋಚನೆ ಬರುತ್ತಲೇ ಮರ ಹತ್ತಿದಳು. ಅಲ್ಲಿಂದ ನಿಧಾನಕ್ಕೆ ಗೋಡೆಯ ಮೇಲೆ ನಿಂತವಳಿಗೆ ಬೆಳಗ್ಗಿನ ತಂಡಿಗೆ ಎರಡೆರಡು ಬಾರಿ ಸೀನು ಬಂತು. ಆಯ ತಪ್ಪಿ ಗೋಡೆಯ ಮೇಲಿನಿಂದ ದೊಪ್ಪನೆ ಕೆಳಗೆ ಬಿದ್ದಳು! ಸಣ್ಣ ಚಿತ್ಕಾರವೊಂದು ಅವಳ ಬಾಯಿಯಿಂದ ಹೊರಟಿತು. ಏನಾಯಿತೆಂದು ತಿಳಿಯುವಷ್ಟು ಸಮಯವಿಲ್ಲ. ಎದ್ದು ಸುತ್ತಲೂ ನಿರುಕಿಸಿದಳು. ಯಾರಾದರೂ ತನ್ನನ್ನು ಗಮನಿಸಿಯಾರೆಂಬ ಹೆದರಿಕೆಯಿತ್ತು.ಅನಪೇಕ್ಷಿತವಾಗಿ ಚಕ್ರವ್ಯೂಹದೊಳಗೆ ನುಗ್ಗಿದಂತಾಯಿತು. ತಟ್ಟನೆ ಯಂತ್ರದ ಮೊರೆತದ ಸದ್ದು ಕೇಳಿಸಿತು. ಹುಲ್ಲು ಮೆದೆಯಲ್ಲಿ ಬಾಗಿ ನಿಂತಳು. ತಾನು ಕಂಡ ವಾಹನ ಸರಿದು ಹೋಗುತ್ತಿರಬಹುದು! ಯಂತ್ರದ ಸದ್ದು ಅಡಗುತ್ತಲೇ ನಿಧಾನವಾಗಿ ಹೆಜ್ಜೆಗಳನ್ನು ಸರಿಸಿ ರಸ್ತೆಯಂಚಿಗೆ ಬಂದಳು. ಅಲ್ಲೆಲ್ಲಾ ತಾನು ಸ್ಯಾಮ್ ಅಂಕಲ್‌ನ ಜೊತೆಗೆ ಓಡಾಡಿದ್ದನ್ನು ನೆನಪಿಸಿಕೊಂಡಳು. ಎಸ್ಟೇಟಿನ ಮೂಲೆ ಮೂಲೆಯೂ ಅವಳಿಗೆ ಪರಿಚಿತ!ತಟ್ಟನೆ ಕಾಲುಗಳು ಸ್ಥಗಿತಗೊಂಡವು!ವಾಹನ ಇನ್ನೂ ಅಲ್ಲೇ ಇದೆ!ತಾನೆಂದುಕೊಂಡಂತೆ ಅದು ಸರಿದು ಹೋಗಿಲ್ಲ. ಹಳದಿ ಮರಳು ರಾಶಿಯ ಬಳಿ ನಿಂತಿದೆ! ರಸ್ತೆಯಂಚಿಗೆ ಒಂದೇ ಉಸುರಿಗೆ ಹಾರಿ ಮರದ ಕಡೆಗೆ ನಡೆದಳು. ಗೋಣಿ ಚೀಲದಲ್ಲಿ ಹಳದಿ ಮರಳನ್ನು ತುಂಬಿಸಿ ವಾಹನಕ್ಕೆ ಏರಿಸುತ್ತಿದ್ದರು.ಹಳದಿ ಮರಳು! ವಿಚಿತ್ರವೆನಿಸಿತು.ಎಲ್ಲಾ ಮೂಟೆಗಳನ್ನು ವಾಹನಕ್ಕೆ ತುಂಬಿಸಿಯಾದ ಬಳಿಕ, ದಪ್ಪ ಕುಳ್ಳನೆಯ ವ್ಯಕ್ತಿ ಜಿಗಿದು ವಾಹನವೇರಿ ಮತ್ತೆ ಯಂತ್ರವನ್ನು ಚಾಲನೆಗೆ ತಂದ. ವಾಹನ ಗೇಟಿನವರೆಗೂ ಸಾಗಿ ನಿಂತಿತು. ಕುಳ್ಳನೆಯ ವ್ಯಕ್ತಿ ವಾಹನದಿಂದ ಇಳಿದು ಗೇಟನ್ನು ತೆರೆದ. ಮತ್ತೆ ವಾಹನವನ್ನು ಮುಂದಕ್ಕೋಡಿಸಿದ. ಅದೇ ಸಮಯಕ್ಕೆ ಇಳಿಜಾರಿಗೆ ಇಳಿದು ಹೋದ ವ್ಯಕ್ತಿ ಕಾಣಿಸಿದ! ಮುಖ್ಯದ್ವಾರದ ಪಕ್ಕದಲ್ಲಿದ್ದ ಸಣ್ಣಗಿನ ಗೇಟನ್ನು ತೆರೆದುಕೊಂಡು ಒಳಗೆ ಬರುತ್ತಿದ್ದ!ಕಣ್ಣುಗಳನ್ನು ಕಿರಿದುಗೊಳಿಸಿ ನೋಡುತ್ತಿದ್ದಳು. ಮುಖದ ತುಂಬಾ ಗಡ್ಡ ಬೆಳೆಸಿದ್ದ ಆ ವ್ಯಕ್ತಿ ಹತ್ತಿರವಾಗುತ್ತಿದ್ದಂತೆ ಅವಳ ಬಾಯಿಯಿಂದ ಉದ್ಗಾರ ಬಂತು.ಸ್ಯಾಮ್ ಅಂಕಲ್!ಆತ ರಸ್ತೆಯಂಚಿಗೆ ನಡೆದು ಕಾಟೇಜನ್ನು ದಾಟಿ ಮುಂದಕ್ಕೆ ಹೋದ!ಮೆಲ್ಲನೆ ಅವನನ್ನು ಹಿಂಬಾಲಿಸಿ ನಡೆದಳು. ಆತ ನಡೆದು ಕಿತ್ತಳೆ ಹಣ್ಣಿನ ಮರಗಳ ನಡುವೆಯಿದ್ದ ಸಣ್ಣ ಗುಡಿಸಲನ್ನು ಸೇರ್‍ಇಕೊಂಡ.ಎಸ್ಟೇಟಿನ ಮಾಲೀಕನಿಗೆ ಗುಡಿಸಲಿನಲ್ಲೇನು ಕೆಲಸ? ಕುತೂಹಲ ತಡೆಯಲಾರದೆ ಅತ್ತಿತ್ತ ದೃಷ್ಟಿ ಹೊರಳಿಸಿ ತಟಕ್ಕನೆ ಗುಡಿಸಲಿನೊಳಗೆ ನುಗ್ಗಿದಳು.ಮಫ್ಲರನ್ನು ಬಿಚ್ಚಿ ಗೋಡೆಗಾನಿಸಿದ ಆತ , ಸದ್ದಿಗೆ ತಿರುಗಿ ನೋಡಿ ಉದ್ಗರಿಸಿದ.

"ನಿನ್ಯಾರು?"

"ಸ್ಯಾಮ್ ಅಂಕಲ್?!"

"ಅಲ್ಲ... ನಾನು ಸ್ಯಾಮ್ ಅಂಕಲ್ ಅಲ್ಲ... ನೀನು ಇಲ್ಲಿ ಬರ್ಬೇಡ..." ಆತ ಅರಚಿದಾಗ ರಚನಾ ಬೆವತು ಹೋದಳು.

"ಅಂಕಲ್, ನನ್ನ ಮಗಳೂಂತ ಕರೆದ್ರಿ... ಆ ಪ್ರೀತಿ ಎಲ್ಲಿ ಹೋಯ್ತು? ಅಂಕಲ್, ನೀವು ಏನೋ ನನ್ನಿಂದ ಮುಚ್ಚಿಡ್ತಾ ಇದ್ದೀರಿ. ಏನಿದೆಲ್ಲಾ ಎತ್ತರದ ಆವರಣ... ಹಳದಿ ಮರಳು... ಈ ಗುಡಿಸಲು...?" ಸ್ಯಾಮ್‍ನ ಕಣ್ಣುಗಳಲ್ಲಿ ನೀರು ಜಿನುಗಿತು. ನಾಲಗೆಯಿಂದ ತುಟಿಯನ್ನು ಸವರಿಕೊಂಡು ರಚನಾಳ ಕೈ ಹಿಡಿದು ಕಣ್ಣುಗಳಿಗೆ ಒತ್ತಿಕೊಂಡ.

"ಅಂಕಲ್, ಏನಿದೆಲ್ಲಾ?""ಹೇಳ್ತಿನಮ್ಮಾ, ಈ ಎಸ್ಟೇಟ್ ಈಗ ನನ್ನ ಕೈಯಲಿಲ್ಲಮ್ಮಾ. ಆ ಧೂರ್ತ ನನ್ನಿಂದ ಇದನ್ನೆಲ್ಲ ಕಿತ್ತುಕೊಂಡು ಬಿಟ್ಟ"

"ಏನು ಹೇಳ್ತ ಇದ್ದೀರಾ ಅಂಕಲ್?""ನಿಂಗಿದೆಲ್ಲಾ ಅರ್ಥವಾಗೊದಿಲ್ಲ.. " ಸ್ಯಾಮ್ ಅಂಕಲ್ ಗೋಡೆಯಾಚೆಗೆ ಮುಖ ಹೊರಳಿಸಿ ಕೈಯನ್ನು ಗೋಡೆಗೆ ಆನಿಸಿ ನಿಂತ.

"ಅಂಕಲ್, ನನ್ಗೆ ಅರ್ಥವಾಗದ ವಿಷಯಗಳು ತುಂಬಾ ಇವೆ. ಏನೂಂತ ಸರಿಯಾಗಿ ಹೇಳಿ.... ಆ ಹಳದಿ ಮರಳು... ಈ ಗುಡಿಸಲಲ್ಲಿ ನೀವು?"

"ಅದು ಹಳದಿ ಮರಳಲ್ಲ. ಅದು ರಾಸಾಯನಿಕ ಗೊಬ್ಬರ. ಆ ವ್ಯಕ್ತಿ ನನ್ನಿಂದ ಜಬರ್ದಸ್ತಿಯಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ಮಾಡ್ಕೊಂಡ. ಈ ಎಸ್ಟೇಟ್‍ನಲ್ಲಿ ಬಂಗಾರ ಬೆಳೆಸ್ತೇನೇಂತ ಅದೆಲ್ಲಿಂದಲೋ ಕೃತಕ ಗೊಬ್ಬರವನ್ನು ತಂದು ಹಾಕಿದ್ದಾನೆ. ಇಲ್ಲಿ ನಡೆಯೋ ವಿದ್ಯಮಾನಗಳು ಯಾರಿಗೂ ತಿಳಿಬಾರ್ದೂಂತ ಎತ್ತರಕ್ಕೆ ಆವರಣ ಹಾಕಿಸ್ದ. ಈಗ ನೋಡಿದ್ರೆ... ಎಸ್ಟೇಟ್‍ನ ಬೆಳೆಗಳೆಲ್ಲಾ ಸರಿಯಾದ ಆರೈಕೆಯಿಲ್ಲದೆ ಸೊರಗಿ ಹೋಗಿವೆ. ನಂಗೂ ಕಾವಲು ಹಾಕಿ ಕಾಯ್ತಾ ಇದ್ದಾನೆ. ನೀನು ನನಗೆ ಸಹಾಯ ಮಾಡಲಾರೆ...ನಾನು ಇಳಿಜಾರಿಗೆ ಹೋಗುವಾಗಲೆಲ್ಲ ನಿನ್ನ ಹುಡುಕ್ತಿದ್ದೆ""ಇಳಿಜಾರಿಗೆ ಹೋಗುವಾಗ ಯಾರೂ ನಿಮ್ಮನ್ನು ಗಮನಿಸುವುದಿಲ್ವೆ?"

"ಅಲ್ಲೂ ನನ್ನ ಹಿಂಬಾಲಿಸ್ತಾರೆ"ತಟ್ಟನೆ ಅವಳಿಗೆ ನೆನಪಾಯಿತು. ಬೆಳಗ್ಗೆ ವಾಹನ ಬಂದಿರುವ ಹೊತ್ತಲ್ಲಿ ತಾನು ಕಂಡಿದ್ದು ಸ್ಯಾಮ್ ಅಂಕಲ್‍ನನ್ನು! ಅಂದರೆ ಸ್ಯಾಮ್ ಅಂಕಲ್‍ನ ಕಾವಲುಗಾರ ತನ್ನನ್ನು ನೋಡಿದ್ದಾನೆ!ಆಗಲೆ ಕಾರಿನ ಸದ್ದು ಕೇಳಿಸಿತು. ಎಚ್ಚೆತ್ತುಕೊಂಡಳು ರಚನಾ!

"ಒಂದೇ ಒಂದು ಸಹಾಯ ಮಾಡ್ತೀಯಾ?"

"ಹೇಳಿ ಅಂಕಲ್.."

"ನನ್ನ ಇಲ್ಲಿಂದ ಕರೆದುಕೊಂಡು ಹೋಗು.."

"ಖಂಡಿತವಾಗಿಯೂ ಆದ್ರೆ ಇಲ್ಲಿಯ ಪ್ರತಿಯೊಂದು ವಿಷಯವನ್ನು ತಿಳ್ಕೊಂಡ ನಂತರ"ಕಪ್ಪು ಬಣ್ಣದ ಕಾರು ಕಾಟೇಜ್ ಬಳಿ ನಿಲ್ಲುತ್ತಲೇ ಅಂಕಲ್ ಅವಳನ್ನು ಅವಸರಿಸಿದ."ಓಡು ಇಲ್ಲಿಂದ. ಆತ ಈಗ ಈ ಕಡೆಗೆ ಬರ್ತಾನೆ"

"ಯಾರಾತ?" ಅವಳಿಗೆ ಯೋಚಿಸುವಷ್ಟು ಸಮಯ ನೀಡದೆ ಅವಳನ್ನು ದೂಡಿದ. ಅವಳು ಮರಗಳ ಮರೆಯಲ್ಲಿ ಸಾಗಿ ಸಣ್ಣ ಗೇಟಿನ ಮೂಲಕ ಹೊರಗೆ ಬಂದು ನಿಟ್ಟುಸಿರಿಟ್ಟಳು.ಎಲ್ಲವೂ ವಿಚಿತ್ರವಾಗಿ ಕಂಡಿತು. ವ್ಯಕ್ತಿ, ಸ್ಯಾಮ್ ಅಂಕಲ್‍ನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡು ಅವರನ್ನು ಮೂಲೆ ಗುಂಪು ಮಾಡಿ, ಅವರನ್ನು ಆಳುತ್ತಿದ್ದಾನೆ! ಅಂಕಲ್ ಆ ವ್ಯಕ್ತಿ ಯಾರೆಂದು ಹೇಳಲೂ ಹೆದರುತ್ತಿದ್ದಾರೆ! ನಿಧಾನಕ್ಕೆ ಹೆಜ್ಜೆ ಸರಿಸುತ್ತಿದ್ದವಳು, ಹಿಂದಿನಿಂದ ಯಾರದೋ ನಡುಗೆಯ ಸದ್ದು ಕೇಳುತ್ತಲೇ ನಡಿಗೆಯ ವೇಗವನ್ನು ಹೆಚ್ಚಿಸಿ ಮನೆಯ ಕಡೆಗೆ ಹೊರಟಳು.
***

ಮನೆಯ ಮುಂದೆ ಹಳೇ ಕಾಲದ ಕಪ್ಪು ಕಾರು ನಿಂತಿತ್ತು! ಅದನ್ನು ಕಾಣುತ್ತಲೇ ತಲೆ ಕೊಡವಿಕೊಂಡಳು. ಈ ಕಾರನ್ನು ತಾನು ನೋಡಿದ್ದು ಸ್ಯಾಮ್ ಅಂಕಲ್‍ನ ಎಸ್ಟೇಟ್‍ನಲ್ಲಿ! ಇಲ್ಲಿಗೆ ಹ್ಯಾಗೆ ಬಂತು? ವ್ಯಕ್ತಿ ತಾನು ಅಂಕಲ್ ಜೊತೆಗೆ ಮಾತನಾಡಿದ್ದನ್ನು ಗಮನಿಸಿ ತನ್ನನ್ನು ಹಿಂಬಾಲಿಸಿ ಬಂದಿದ್ದಾನೆ! ಹೆಜ್ಜೆ ಮುಂದಿರಿಸ ಹೋದವಳು ತಟ್ಟನೆ ನಿಂತಳು. ಕಾರು ಮರಳುವವರೆಗೆ ತಾನು ಮನೆಗೆ ತೆರಳಬಾರದು. ಹಿಂದೆ ಹೆಜ್ಜೆ ಹಾಕಲಿದ್ದವಳನ್ನು ತಡೆದು ನಿಲ್ಲಿಸಿದ್ದು ಕೋವಿ ಹಿಡಿದು ನಿಂತಿದ್ದ ವ್ಯಕ್ತಿ!ಅಪ್ಪಾ! ಅನಾಯಸವಾಗಿ ಅವಳ ಬಾಯಿಯಿಂದ ಉದ್ಗಾರ ಹೊರಟಿತು.

"ಹೌದಮ್ಮಾ, ನಾನೆ... ನಿನ್ನ ಅಪ್ಪ. ಸ್ಯಾಮ್ ಈಗಷ್ಟೆ ಎಸ್ಟೇಟ್‍ನಿಂದ ತಪ್ಪಿಸಿಕೊಂಡು ಬಿಟ್ಟ. ನೀನು ಅವನ ಜೊತೆಗೆ ಇದ್ದಿದ್ದನ್ನು ನಮ್ಮ ಡ್ರೈವರ್... ಅಂದರೆ ಕುಳ್ಳಗಿನ ವ್ಯಕ್ತಿ ನೋಡಿದ್ದಾನೆ. ನಿಜ ಹೇಳು ಸ್ಯಾಮ್ ಅಂಕಲ್ ಎಲ್ಲಿದ್ದಾನೆ?" ಕೋವಿಯ ತುದಿಯನ್ನು ಮಗಳ ಕಡೆಗೆ ಗುರಿಯಿಟ್ಟ ಗಿರಿಯಪ್ಪ.

"ಅಪ್ಪಾ, ನಂಗೊತ್ತಿಲ್ಲ..."

"ಸುಳ್ಳು ಹೇಳ್ಬೇಡ. ನಿನ್ನ ಅಂಕಲ್ ಎಷ್ಟೊಂದು ಔದಾರ್ಯವಂತ. ನಿನ್ನನ್ನು ಎಸ್ಟೇಟ್‍ನ ವಾರಸುದಾರಳನ್ನಾಗಿ ಮಾಡುತ್ತೇನೆಂದ. ನಾಳೆ ನೀನು ಮದುವೆಯಾಗಿ ಹೋದರೆ ಆಸ್ತಿನೂ ನಿನ್ನ ಜೊತೆಗೆ ಹೊರಟು ಹೋಗುತ್ತದೆ. ಅದಕ್ಕೆ ಇದು ನನ್ನ ಉಪಾಯ. ಮೊದಲೇ ಸ್ಮಗ್ಲಿಂಗ್ ಗುಂಪಿನೊಂದಿಗೆ ಸಂಪರ್ಕವಿರುವ ನನಗೆ... ಈಗ ಬಾಸ್ ಪಟ್ಟ. ಎಸ್ಟೇಟ್ ಈಗ ನನ್ನ ಕಾರ್ಯ ಸ್ಥಾನ" ನಗಲಾರಂಭಿಸಿದ.ರಚನಾ ಬೆದರಿದ ಹುಲ್ಲೆಯಂತೆ ತರ ತರ ಕಂಪಿಸಿದಳು. ಇದು ಅನಿರೀಕ್ಷಿತ! ತನ್ನ ತಂದೆ ಸ್ಮಗ್ಲಿಂಗ್ ಗುಂಪಿಗೆ ಸೇರಿದವರು! ಆ ಮಾತುಗಳನ್ನು ಅರಗಿಸಿಕೊಳ್ಳಲಾಗಲಿಲ್ಲ.

"ಏಯ್, ಆ ಸ್ಯಾಮ್ ಎಲ್ಲಿದ್ದಾನೆ ಹೇಳು?..." ಗಿರಿಯಪ್ಪ ಗದರಿಸಿದ.

"ಇಲ್ಲೆ ಇದ್ದೇನೆ ಗಿರಿಯಪ್ಪ... ಈ ಸ್ಯಾಮ್‍ನನ್ನು ಯಾರು ಅಷ್ಟು ಸುಲಭದಲ್ಲಿ ಮೋಸ ಮಾಡೋದಿಕ್ಕೆ ಸಾಧ್ಯವಿಲ್ಲ" ಸ್ಯಾಮ್‍ನ ಮಾತುಗಳು ಬಂದಾಗ ಗಿರಿಯಪ್ಪ ಹಿಂತಿರುಗಿದ.ಅವನ ಹಿಂದೆ ಪೊಲೀಸ್ ಅಧಿಕಾರಿ ನಿಂತು ಗಿರಿಯಪ್ಪನ ಕಡೆಗೆ ರಿವಾಲ್ವರನ್ನು ಗುರಿಯಿಟ್ಟಿದ್ದರು.

"ಗಿರಿಯಪ್ಪ ನಿನ್ನ ಆಟ ಇನ್ನು ನಡೆಯೋದಿಲ್ಲ. ನೀನು ಅವಸರದಲ್ಲಿ ಹೊರಟವನು ಮೊಬೈಲ್ ಫೋನನ್ನು ಬಿಟ್ಟು ಹೋಗಿದ್ದಿಯಾ. ಸ್ಯಾಮ್ ಅದರಿಂದ ನಮಗೆ ಫೋನ್ ಮಾಡಿ ತಿಳಿಸ್ದ. ಅದರಿಂದಾಗಿ ನಿನ್ನ ತಂಡವನ್ನು ಈಗಾಗ್ಲೆ ಹಿಡಿದಿದ್ದೇವೆ" ಅಧಿಕಾರಿಯ ಮಾತಿಗೆ ಗಿರಿಯಪ್ಪ ಅಸಹಾಯಕನಾಗಿ ಕೋವಿಯನ್ನು ಕೆಳಗೆ ಹಾಕಿದ.ಅಧಿಕಾರಿಯ ಸಹಾಯಕರು ಅವನನ್ನು ಬಂಧಿಸಿದರು.ರಚನಾಳ ಕಣ್ಣುಗಳಲ್ಲಿ ನೀರು ಹನಿಗೂಡಿತು.ಸ್ಯಾಮ್ ಅಂಕಲ್ ಅವಳ ಬಳಿ ಬಂದು ತಲೆ ನೆವರಿಸಿದ.

"ರಚನಾ ನೀನು ನನ್ನ ಮಗಳಮ್ಮಾ..." ಎಂದು ಪ್ರೀತಿಯಿಂದ ಹೇಳಿದ.

"ಹೌದಮ್ಮಾ, ಇನ್ನು ಮುಂದೆ ಎಸ್ಟೇಟಿಗೂ ನೀನೇ ವಾರಸುದಾರಳು" ಎಂದು ಅಧಿಕಾರಿ ಸ್ಯಾಮ್ ಅಂಕಲ್ ನೀಡಿದ್ದ ಪತ್ರಗಳನ್ನು ಅವಳ ಕೈಯಲ್ಲಿಟ್ಟರು. ಸ್ಯಾಮ್ ಅಂಕಲ್, ರಚನಾ ಇಬ್ಬರೂ ಅಧಿಕಾರಿಗೆ ವಂದಿಸಿ ಎಸ್ಟೇಟ್‍ಗೆ ನಡೆದರು.

Read more!