Tuesday, August 4, 2009
ಮೂರನೇ ದಾರಿ (ಪತ್ತೇದಾರಿ ಕಥೆ)
ಬೆನ್ನಿನ ಮೇಲೆ ಹರಡಿದ್ದ ಕೂದಲುಗಳನ್ನು ಒಟ್ಟು ಸೇರಿಸಿ ಬಿಗಿದು, ಕೆನ್ನೆಯ ಮೇಲುರುಳಲು ಸಜ್ಜಾದ ಕಣ್ಣೀರನ್ನು ಸೆರಗಿನ ತುದಿಯಿಂದ ಒರೆಸಿಕೊಂಡಳು ಚೆಲುವೆ ಬಾಧುರಿ.
"ದಯವಿಟ್ಟು ತಪ್ಪು ತಿಳ್ಕೊಳ್ಬೇಡಿ. ನಿಮ್ಮನ್ನು ಪ್ರಶ್ನಿಸೋದು ಅನಿವಾರ್ಯವಾಗಿತ್ತು"
ಎದುರಿಗಿದ್ದವನ ಮಾತಿಗೆ ಸಮಾಧಾನವೆನಿಸಿದರೂ, ಬಾಯಿ ತೆರೆಯುವುದು ಸರಿಯೆನಿಸಿತು.
"ನನ್ನ, ನಿವೇದನ್‍ನ ಸಂಬಂಧ ಏನೂಂತ ನಿಮಗೆ ಚೆನ್ನಾಗಿ ಗೊತ್ತು. ಮತ್ತೆ ಮತ್ತೆ ಅವನ ಬಗ್ಗೆ ಕೇಳಿ ನನ್ನನ್ನು ಹಿಂಸಿಸ್ತಾ ಇದ್ದೀರಿ"
"ಕ್ಷಮಿಸಿ ಬಾಧುರಿಯಾವರೆ, ನಿವೇದನ್ ನಿಮ್ಮ ಭಾವಿ ಪತಿಯಾಗಿರಬಹುದು. ಆತ ನನ್ನ ಸ್ನೇಹಿತ ಅನ್ನೋದನ್ನು ಮರಿಬೇಡಿ. ನನ್ನ ಸ್ನೇಹಿತನಿಗೋಸ್ಕರ ನಾನು ಕೇಳೋದು ಇಷ್ಟೆ, ಅವನು ಕಾಣೆಯಾದ ದಿನ ನಿಮ್ಮ ಬಳಿ ಏನಾದ್ರೂ ಹೇಳಿದ್ನೆ?"
ದೀರ್ಘ ಉಸಿರೆಳೆದುಕೊಂಡವಳ ಕಣ್ಣುಗಳಲ್ಲಿ ಧೈರ್ಯದ ನೋಟ ಕಂಡಾಗ ಮೂಗು ಅರಳಿ ನಿಟ್ಟುಸಿರು ಹೊರ ಬಂತು.
ಎದುರಿಗಿದ್ದ ನಿವೇದನ್‍ನ ಸ್ನೇಹಿತ ಅಂದುಕೊಂಡ ವ್ಯಕ್ತಿ, ಅವಳ ನೋಟವನ್ನು ಎದುರಿಸಲಾರದೆ ಮೇಜಿನ ಮೇಲೆ ದೃಷ್ಟಿ ಹರಡಿದ. ಮೇಜಿನ ಮೇಲಿದ್ದ ಯಾವುದೋ ಕಾಗದಗಳು ಗಾಳಿಗೆ ಅಲ್ಲಾಡುತ್ತಿದ್ದವು.
"ಇಲ್ಲ, ನಿವೇದನ್ ನಂಗೇನೂ ಹೇಳ್ಲಿಲ್ಲ. ಆದ್ರೆ ಯಾಕೋ ಮಂಕಾಗಿದ್ದ"
"ಅವನಿಗೇನಾದ್ರೂ ಆ ದಿವಸ ಮುಖ್ಯವಾದ ಕೆಲಸವಿತ್ತೆ?"
"ಇಲ್ಲ"
"ಯಾರಿಂದಲಾದ್ರೂ ಕರೆ ಬಂದಿತ್ತೆ?"
ಸ್ನೇಹಿತನ ಮಾತುಗಳಿಗೆ ತಟ್ಟನೆ ಮುಖ ಹೊರಳಿಸಿದವಳು, ಅವನನ್ನು ಅಳೆಯುವಂತೆ ದೃಷ್ಟಿಸಿದಳು. ಅವಳ ಮುಖದಲ್ಲಿ ಮೂಡಿದ್ದು ಸಂಶಯ!
ಮೆಲ್ಲನೆ ಮಾತು ಹೊರಳಿಸಿದಳು.
"ಅವನಿಗೆ... ಒಂದು ... ಕರೆ ಬಂದಿತ್ತು"
ಸ್ನೇಹಿತನ ಕಿವಿಗಳು ನಿಮಿರಿ ನಿಂತವು.
"ಯಾವಾಗ? ಯಾರ ಕರೇಂತ ಹೇಳ್ಬಹುದೆ?" ಆತುರ ಪಡಿಸಿದ.
"ಕರೆ ಬಂದಿರೋದು `ರಾಕ್ ಸೈಡ್' ಪಬ್ಬ್‍ನಿಂದ... ಅದೂ ಸರಿ ರಾತ್ರಿ ಹೊತ್ತು"
"ರಾಕ್ ಸೈಡ್!!??"
"ನಿಮಗೆ ಗೊತ್ತೆ?"
ಸ್ನೇಹಿತ ದೀರ್ಘ ಆಲೋಚನೆಯಲ್ಲಿ ಮುಳುಗುತ್ತಲೆ `ಇಲ್ಲ' ವೆನ್ನುವಂತೆ ತಲೆಯಾಡಿಸಿದ.
"ಕರೆ ಬಂದಿರೋ ಸಮಯ ಸುಮಾರು...?"
"ನಿಖರವಾಗಿ ಹೇಳಲಾರೆ. ಸುಮಾರು ಮಧ್ಯರಾತ್ರಿ ಹೊತ್ತಿಗೆ. ಕರೆ ಯಾರ್ದೂಂತ ಕೇಳ್ದೆ. ಏನೋ ಬೆದರಿದವನಂತೆ ಕಾಣಿಸ್ದ. ಅವನ ಮಾತಿನಲ್ಲಿ ತೊದಲಿಕೆಯಿತ್ತು"
"ಕರೆ ಮಾಡಿರೋದು ಯಾರೂಂತ ಹೇಳಿದ್ನೆ?"
"ಅದನ್ನೇ ಕೇಳಿದೆ. `ರಾಕ್ ಸೈಡ್'ನಿಂದ ಅಂದ. ರಾತ್ರಿ ಪಬ್ಬ್‍ನಲ್ಲಿ ಹಾಡೋದಿಕ್ಕೆ ಕರೆದಿದ್ದಾರಂತೆ. ಸಂಗೀತದ ಹುಚ್ಚು ಹಚ್ಚಿಸ್ಕೊಂಡಿರೋನು ಅವಕಾಶಕ್ಕಾಗಿ ಕಾಯ್ತ ಇದ್ದ. ನಾಳೆಯಿಂದ ಅಲ್ಲಿಗೆ ಹಾಡೋದಿಕ್ಕೆ ಹೋಗ್ತೀನಿಂದ. ಅವನ ಮಾತಿಗೆ ರೇಗಿದೆ. `ಆಗೋದಿಲ್ಲಾಂತ ಹೇಳ್ಬಿಡು. ಮದುವೆಗೆ ಮುಂಚೆ ಇದೆಲ್ಲಾ ಸರಿ. ಮದುವೆಯಾದ ನಂತರವೂ ಹಾಡೋದು ಮುಂದುವರಿದ್ರೆ ಕಷ್ಟ' ಅಂತ ದಬಾಯಿಸ್ದೆ. ನನ್ನ ಸಮಾಧಾನಕ್ಕೆ `ಸರಿ' ಅಂದ...."
ಸ್ನೇಹಿತನಿಗೆ ಮತ್ತೇನೋ ಸಂಶಯ ಕಾಡಿತು. ತಟ್ಟನೆ ಮಧ್ಯೆ ಬಾಯಿ ಹಾಕ್ದ.
"ಕರೆ ಮಾಡ್ದೋನು ತನ್ನ ಹೆಸರು ಹೇಳ್ಲಿಲ್ಲಾಂತ ಕಾಣ್ಸುತ್ತೆ?"
"ಕರೆ ಮಾಡಿರೋದು ಹುಡುಗ ಅಲ್ಲ... ಹುಡುಗಿ..."
"ಹುಡುಗಿ!?"
"ಹೌದು, ನಿಖರವಾಗಿ ಹೇಳಬಲ್ಲೆ. ಆದ್ರೆ ಆತ ನನ್ನನ್ನಲ್ಲದೆ ಬೇರಾವ ಹೆಣ್ಣಿನ ಬಗ್ಗೆ ಮಾತನಾಡಿದ್ದಿಲ್ಲ. ಅವನಿಗೆ ನನ್ನ ಮೇಲೆ ಎಷ್ಟೋಂದು ಪ್ರೀತಿ ಅಂದ್ರೆ... ಅದಕ್ಕೆ ಸಾಕ್ಷಿ..." ಮೇಜಿನ ಮೇಲೆ ಹರಡಿದ್ದ ಪತ್ರಗಳನ್ನು ತಂದು ತೋರಿಸಿದಳು ಚೆಲುವೆ ಬಾಧುರಿ.
ಎತ್ತರದ ನಿಲುವಿನ ಶ್ರೀಮಂತಿಕೆ ಛಾಪು ಹೊಂದಿರೋ ಬಾಧುರಿ, ನಿವೇದನ್‍ಗೆ ಎಲ್ಲಾ ವಿಧದಲ್ಲೂ ಸರಿಯಾದ ಜೋಡಿ! ಅವಳು ನೀಡಿದ ಪತ್ರಗಳನ್ನು ಪರಿಶೀಲಿಸುವಂತೆ ನೋಡಿದ.
"ನೀವು ನಿವೇದನ್‍ನ ಎಲ್ಲಾ ಆಸ್ತಿಗೂ ಬಾಧ್ಯಸ್ಥರು"
"ಹೌದು, ಆದ್ರೆ ನಿವೇದನ್ ಯಾಕೆ ಹೀಗೆ ಮಾಡ್ದಾಂತ ಮಾತ್ರ ತಿಳಿದಿಲ್ಲ. ತಾನಾಯಿತು ತನ್ನ ಕೆಲಸವಾಯ್ತೂಂತ ಇದ್ದ. ಅವನಿಗೆ ಹೆಣ್ಣಿನಿಂದ ಕರೆ ಬಂದಿದೆಯೆಂದರೆ ನಂಬೋಕೆ ಆಗ್ತಾ ಇಲ್ಲ"
"ನೀವು ಹೇಳ್ತಾ ಇರೋದು ವಿಚಿತ್ರವಾಗಿದೆ. ರಾತ್ರಿ ಒಂದು ಹುಡುಗಿಯಿಂದ ಕರೆ ಬಂದಿತ್ತೂಂತಿರಿ, ಬೆಳಗ್ಗೆ ನೋಡಿದ್ರೆ ಆತನೆ ಕಾಣೆಯಾಗಿದ್ದಾನೆ!"
ದು:ಖದ ಒಸರು ಮತ್ತೆ ಕಣ್ಣುಗಳಲ್ಲಿ ಕಾಣಿಸಿಕೊಂಡಿತು.
"ಸಮಾಧಾನ ತಂದ್ಕೊಳ್ಳಿ ಬಾಧುರಿಯವರೆ. ನಾನು ನಿವೇದನ್‍ನನ್ನು ಭೇಟಿಯಾಗದೆ ಮೂರ್ನಾಲ್ಕು ತಿಂಗಳುಗಳೇ ಕಳೆದುಹೋದ್ವು. ಕಾಲೇಜ್ ದಿನಗಳಲ್ಲಿ ನಾವು ಹುಟ್ಟು ಹಾಕಿರೋ `ಉದಯ ನಕ್ಷತ್ರ' ಹವ್ಯಾಸಿ ಸಂಗೀತ ಸಂಸ್ಥೆಯೀಗ ಛಿಧ್ರವಾಗೋಯ್ತು. ಆದ್ರೆ... ಆತ ಮಾತ್ರ ಸಂಗೀತದ ಹುಚ್ಚಿಗೆ ಅಂಟಿಕೊಂಡ್ಬಿಟ್ಟ. ಈಗ ನೋಡಿದ್ರೆ ಅವನು ಕಾಣೆಯಾಗಿದ್ದಾನೆ!"
"ಹೌದು, ಆತನ ಸಂಗೀತದ ಹುಚ್ಚು ನಮ್ಮ ಪ್ರೇಮಕ್ಕೆ ನಾಂದಿಯಾಗಿತ್ತು. ಅದೇ ಸಂಗೀತ ಈಗ ಮುಳುವಾಯಿತು"
"ಹಾಗನ್ಬೇಡಿ ಬಾಧುರಿಯವರೆ, ನಿವೇದನ್‍ಗೆ ಏನೂ ಆಗಿರಲಾರದು. ಹೇಗೂ ಪೊಲೀಸರಿಗೆ ತಿಳಿಸಿದ್ದೀರಿ. ನಾನೂ ನಿಮ್ಮ ಸಹಾಯಕ್ಕಿದ್ದೀನಿ. ಅಗತ್ಯ ಬಿದ್ದಾಗ ಮತ್ತೆ ನಿಮ್ಮನ್ನು ಬಂದು ಕಾಣ್ತೀನಿ" ಎದ್ದು ನಿಂತು ಕೈ ಮುಗಿದ. ಕೈ ಮುಗಿದವಳು ತಟ್ಟನೆ ಏನೋ ಕೇಳಲೆಂದು ಬಾಯ್ತೆರೆದಳು. ಅದನ್ನು ಅರ್ಥೈಸಿಕೊಂಡವನು, "ಕಲಾಕಿರಣ್" ಅಂದು ಅಲ್ಲಿಂದ ಹೊರಗೆ ಬಂದ.
***
ಕಲಾಕಿರಣ್ ಖಾಲಿಯಾಗಿದ್ದ ಮೇಜಿನ ಬಳಿ ಬಂದು ಕುಳಿತು ಮಂದ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡ. ಕಮಟುವಾಸನೆ ಮೂಗಿಗೆ ಬಡಿಯಿತು. ಕಿವಿಗಡಚಿಕ್ಕುವ ಲೈವ್ ಬ್ಯಾಂಡ್‍ನ ಸದ್ದು, ನಶೆ ಏರಿಸಿಕೊಂಡವರಿಗೆ `ಕಿಕ್' ನೀಡಿದರೆ ಆತನಿಗೆ ತಲೆ ಚಿಟ್ಟು ಹೊಡೆಯುವಂತಾಯಿತು. ಬಣ್ಣ ಬಣ್ಣದ ನಿಯಾನ್ ದೀಪಗಳಡಿಯಲ್ಲಿ ರೆಕ್ಕೆ ಕಟ್ಟಿಕೊಂಡಂತೆ ಕೃತಕ ನಗು ತರಿಸಿಕೊಂಡು, ಸಂಗೀತ ನುಡಿಸುವವರನ್ನೊಮ್ಮೆ ನೋಡಿದ. ನಿವೇದನ್ ಇಂತಹ ಸ್ಥಳದಲ್ಲಿ ಹಾಡು ಹೇಳಲು ಒಪ್ಪಿಕೊಂಡಿದ್ದಾನೆಂದ್ರೆ ಆಶ್ಚರ್ಯ!
"ಸರ್" ಬ್ಯಾರರ್ ಬಂದು ನಿಂತ.
"ಒಂದು ಚಿಲ್ಡ್ ಕೆ.ಎಫ಼್ ಸ್ಟ್ರಾಂಗ್, ತಿನ್ನೋದಿಕ್ಕೆ ಚಿಪ್ಸ್, ಪೀನಟ್"
ಎರಡು ನಿಮಿಷಗಳಲ್ಲಿ ಬೇರರ್ ಎಲ್ಲವನ್ನೂ ತಂದು ಅವನ ಇದುರಿಗೆ ಜೋಡಿಸಿದ. ಬಿಯರ್ ಬಾಟಲನ್ನು ಎತ್ತಿಕೊಂಡು, ಗ್ಲಾಸನ್ನು ಓರೆಯಾಗಿ ಹಿಡಿದು ತುಂಬಿಸಿದ. ಮೆಲ್ಲನೆ ಗ್ಲಾಸನ್ನು ಎತ್ತಿಕೊಂಡು ತುಟಿಗಿರಿಸಿದ.
"ಕೋಯಿ ಫೂಲ್ ಔರ್ ಪಂಚಿಯೋಂಕೋ ನ..." ಗಾಯಕನ ಹಾಡು ಸಂಗೀತದ ಅಬ್ಬರದ ಮಧ್ಯೆ ನುಸುಳಿದಾಗ ಕಿವಿ ನಿಮಿರಿಸಿಕೊಂಡ ಸ್ನೇಹಿತ. ಬಾಧುರಿಯ ಮಾತುಗಳು ನೆನಪಾದವು.
`... ನಿವೇದನ್ ಎಂದೂ ಹುಡುಗಿಯರ ಬಗ್ಗೆಯಾಗಲಿ, ಹೆಣ್ಣಿನ ಬಗ್ಗೆಯಾಗಲಿ ಮಾತನಾಡಿದ್ದಿಲ್ಲ'
ದೂರದಲ್ಲಿ ನಿಂತಿದ್ದ ಬ್ಯಾರರ್‍ನನ್ನು ಕರೆದ.
"ಇನ್ನೊಂದು ಸ್ಟ್ರಾಂಗ್ ತರಲೇನು?"
"ಬೇಡ" ತಲೆಯಾಡಿಸಿದ. "ನಿನ್ನಿಂದ ಒಂದು ಸಹಾಯವಾಗ್ಬೇಕಿದೆ"
"ಏನ್ ಸಾರ್?"
"ನಿವೇದನ್ ಜೊತೆಗೆ ಮಾತಾಡ್ಬೇಕಿದೆ"
"ನಿವೇದನ್?!" ಬ್ಯಾರರ್ ಆಶ್ಚರ್ಯದಿಂದ ನಶೆ ಏರಿಸಿಕೊಂಡವನನ್ನು ನೋಡಿದ.
"ಅದೇ ಅಲ್ಲಿ ಹಾಡ್ತಾ ಇದ್ದಾನಲ್ಲ ಅವನು..." ಬೆರಳು ತೋರಿಸಿದ ಕಲಾಕಿರಣ್‍ನನ್ನು ವಿಚಿತ್ರವಾಗಿ ದಿಟ್ಟಿಸಿದ.
"ಒಂದು ಬಾಟಲ್ ಬಿಯರ್‍ನಿಂದ ನಶೆ ಏರೊಲ್ಲಾಂತ ತಿಳ್ಕೊಂಡಿದ್ದೀನಿ ಅಥವಾ ನೀವು ಮೊದಲ ಬಾರಿಗೆ ಕುಡಿತ್ತಿದ್ದೀರಿ?"
ಈಗ ಆಶ್ಚರ್ಯವಾಗುವ ಸರದಿ ಕಲಾಕಿರಣ್‍ನದ್ದು!
"ನೀನು ಏನು ಹೇಳ್ತಾ ಇದ್ದಿ?"
"ಅಲ್ಲಿ ಹಾಡ್ತಿರೋನು ನಿವೇದನ್ ಅಲ್ಲ. ಈ ಪಬ್ಬ್‍ನ ಮಾಲೀಕ ಪ್ರಭಾತ್ ರಂಜನ್"
"ಪಬ್ಬ್‍ನ ಮಾಲೀಕ!"
"ಹೌದು, ಇಲ್ಲಿ ಖಾಯಂ ಆಗಿ ಹಾಡ್ತಿದ್ದ ಪ್ರೇಮ್ ಕೈಕೊಟ್ಟ. ಲೈವ್ ಬ್ಯಾಂಡ್ ಇದ್ದಕ್ಕಿದ್ದಂತೆ ನಿಂತು ಹೋಯ್ತು. ಗಿರಾಕಿಗಳು ಕಡಿಮೆಯಾದ್ರು. ಅದಕ್ಕೆ ಬದಲಿ ಜನ ಸಿಗುವವರೆಗೂ ಮಾಲೀಕನೆ ಹಾಡ್ತಾನೆ" ಅಭಿಮಾನದಿಂದ ಹೇಳಿಕೊಂಡವನನ್ನು ದೃಷ್ಟಿಸಿದ.
"ತುಂಬಾ ಚೆನ್ನಾಗಿ ಹಾಡ್ತಾರೆ. ಅವರನ್ನು ಅಭಿನಂದಿಸ್ಬೇಕು"
"ಹಾಗಾದರೆ ನೀವು ಸ್ವಲ್ಪ ಸಮಯ ಕಾದಿರಿ. ಹನ್ನೊಂದು ಗಂಟೆಗೆಲ್ಲಾ ಸಂಗೀತ ನಿಲ್ಲುತ್ತೆ. ಮತ್ತೆ ಆಫೀಸ್‍ನಲ್ಲಿ ಭೇಟಿಯಾಗಬಹುದು"
"ಹನ್ನೊಂದು ಗಂಟೆಗೆ!" ಉದ್ಗಾರ ತೆಗೆದವನಿಗೆ ಕಾಯುವುದು ಅನಿವಾರ್ಯವಾಯ್ತು. ಬಿಲ್ಲು ಪಾವತಿಸಿ ಕೌಂಟರ್ ಬಳಿ ಬಂದು ನಿಂತಾಗ ಸಂಗೀತ ನಿಂತಿತ್ತು. ನೇರವಾಗಿ ಪ್ರಭಾತ್ ರಂಜನ್‍ನ ರೂಂಗೆ ನುಗ್ಗಿದ. ಅನಿರೀಕ್ಷಿತವಾಗಿ ಬಂದ ಆಗಂತುಕನನ್ನು ಕಂಡು ದಣಿದಿದ್ದ ಗಾಯಕ ಚಕಿತನಾಗಿ ದಿಟ್ಟಿಸಿದ!
"ತಾವು ಯಾರು?"
"ನಾನು ಕಿರಣ್, ನಿಮ್ಮನ್ನು ಅಭಿನಂದಿಸೋದಿಕ್ಕೆ ಬಂದೆ. ನೀವು ತುಂಬಾ ಚೆನ್ನಾಗಿ ಹಾಡ್ತೀರಿ" ತೊದಲುತ್ತಲೆ ಹೇಳಿದ ಸ್ನೇಹಿತ.
"ಏನು ಮಾಡೋದು? ನಾನು ಹಾಡ್ಲೇ ಬೇಕಾದ ಪರಿಸ್ಥಿತಿ. ಲೈವ್ ಬ್ಯಾಂಡ್ ಇಲ್ಲಾಂದ್ರೆ ಬಿಸಿನಸ್ ಇಲ್ಲ. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು"
ವಿದೇಶಿ ಮಾಲನ್ನು ಗ್ಲಾಸಿಗೆ ಬಗ್ಗಿಸುತ್ತಾ ಹೇಳಿ ಅವನು ಹೊರಡಬಹುದೆಂಬ ದೃಷ್ಟಿಯಿಂದ ನೋಡಿದ.
ಕಲಾಕಿರಣ್ ಎದುರಿನ ಚೇರನ್ನು ಎಳೆದು ಕುಳಿತ.
"ಕೋಯಿ ಫೂಲ್ ಔರ್ ಪಂಚಿಯೋಂಕೋ.... ಹಾಡು ತುಂಬಾ ಚೆನ್ನಾಗಿತ್ತು. ನಿವೇದನ್ ಯಾವಾಗ್ಲೂ ಅದನ್ನು ಹಾಡ್ತಾ ಇದ್ದ"
ನಿವೇದನ್‍ನ ಹೆಸರು ಕೇಳುತ್ತಲೇ ಮಾಲೀಕನ ಮುಖ ಕಪ್ಪಿಟ್ಟಿತು.
"ಅವನೊಬ್ಬ ಮೋಸಗಾರ. ಕೊಟ್ಟಿರೋ ಒಳ್ಳೆ ಅವಕಾಶನ ಕಳ್ಕೊಂಡ. ಅರ್ಜೆಂಟಾಗಿ ಬಂದು ಹಾಡು ಅಂದ್ರೆ... ಕೈ ಕೊಟ್ಟ. ಇನ್ನು ಆತ ಬಂದ್ರೂ ಹಾಡೋದಿಕ್ಕೆ ಬಿಡಲಾರೆ"
ಕಲಾಕಿರಣ್‍ಗೆ ಏನೋ ಹೊಳೆಯಿತು. ಸೂಕ್ಷ್ಮವಾಗಿ ಮಾಲೀಕನನ್ನು ಗಮನಿಸುತ್ತಿದ್ದ.
"ಆತನನ್ನು ಪರಿಚಯಿಸಿಕೊಟ್ಟವಳು ನನ್ನ ಹೆಂಡತಿ. ಒಳ್ಳೆಯ ಹಾಡುಗಾರ ಆತ ಅಂದಿದ್ದಕ್ಕೆ ಅವಕಾಶ ನೀಡ್ದೆ. ಬರ್ತೀನಿ ಅಂದೋನು ಪತ್ತೆ ಇಲ್ಲ"
ನಿವೇದನ್‍ಗೆ ಮಾಲೀಕನ ಹೆಂಡತಿ ಪರಿಚಯಸ್ಥೆ!
"ಅಂದ ಹಾಗೇ ನಿವೇದನ್ ನಿಮಗೆ ಹೇಗೆ ಪರಿಚಯ?"
"ನಮ್ಮೂರಲ್ಲಿ `ಉದಯ ನಕ್ಷತ್ರ' ಅನ್ನೋ ಸಂಗೀತ ಸಂಸ್ಥೆಯನ್ನ ಹುಟ್ಟು ಹಾಕಿ ಹಾಡ್ತಿದ್ದ. ಒಳ್ಳೆ ಗಾಯಕಾಂತ ಬಲ್ಲೆ"
"ಓಹೋ, ನೀವು ಅವನ ಅಭಿಮಾನಿ? ಅವನು ಇಲ್ಲಿ ಬಂದಿರ್ಬೋದೂಂತ ನೀವು ಹುಡುಕಿಕೊಂಡು ಬಂದಿರಬೇಕು" ಹುಬ್ಬುಗಳನ್ನು ಕುಗ್ಗಿಸಿ ಕೇಳಿದ ಮಾಲೀಕ.
"ಇಲ್ಲ, ನಾನು ಇಲ್ಲಿಯ ಖಾಯಂ ಗಿರಾಕಿ. ನೀವು ಹಾಡಿದ್ದನ್ನು ಕೇಳಿಸಿಕೊಂಡು ನಿಮ್ಮನ್ನು ಅಭಿನಂದಿಸೋದಿಕ್ಕೆ ಇಲ್ ಬಂದೆ. ನಾನಿನ್ನು ಬರ್ತೀನಿ, ನಿಮ್ಮ ಅಭ್ಯಂತರವಿಲ್ಲದಿದ್ದರೆ ಮತ್ತೆ ಭೇಟಿಯಾಗ್ತೀನಿ"
ಮಾಲೀಕನಿಗೇನೋ ಸಂಶಯ ಸುಳಿದಾಡಿತು. ಅಭಿಮಾನಿ ಎಂದುಕೊಂಡವನು ಹೊರಗೆ ಹೋಗುವುದನ್ನೇ ನೋಡುತ್ತಲೇ ಗ್ಲಾಸುಗಳನ್ನು ತುಟಿಗೆ ಸೇರಿಸಿದ.
***
ಮನೆಯ ಬಾಗಿಲನ್ನು ವಿಶಾಲವಾಗಿ ತೆರೆದು, ಕಣ್ಣುಗಳನ್ನು ಅಗಲಗೊಳಿಸಿ ಎದುರಿಗೆ ನಿಂತಿದ್ದ ಅಪರಿಚಿತನನ್ನು ನೋಡುತ್ತಿದ್ದಳು ಪ್ರಿಯಲ್.
"ನಮಸ್ಕಾರ, ನಾನು ಕಿರಣ್.... ಕಲಾಕಿರಣ್. ನಿವೇದನ್‍ನ ಸ್ನೇಹಿತ"
ಅವಳು ಬಾಗಿಲ ಬಳಿ ನಿಂತಿದ್ದಂತೆ ಸವರಿಕೊಂಡು ಒಳಗೆ ಬಂದು ಸುತ್ತಲೂ ದೃಷ್ಟಿಸಿದ.
ನಿವೇದನ್‍ನ ಹೆಸರು ಕೇಳುತ್ತಲೆ ಮುಖದ ಬಿಗು ಕಡಿಮೆಗೊಳಿಸಿ ಹಿಂದಕ್ಕೆ ಸರಿದು ಅವನನ್ನು ಕುಳಿತುಕೊಳ್ಳುವಂತೆ ಹೇಳಿದಳು. ಅವಳಿಗೆ ಉಪಕಾರವೆನ್ನುತ್ತಾ ಸೋಫಾದ ಮೇಲೆ ಕುಳಿತ.
"ನಿವೇದನ್ ನಿಮಗೆ ತುಂಬಾ ಪರಿಚಿತನಿರಬೇಕಲ್ವಾ?"
ಆಗಂತುಕನ ನೇರ ಪ್ರಶ್ನೆಗೆ ಪ್ರತಿಕ್ರಿಯಿಸಲಾರದೆ, ತಡೆದು ಹೌದೆನ್ನುವಂತೆ ಗೋಣು ಆಡಿಸಿದಳು.
"ನಿಮ್ಮ ಸ್ನೇಹ ಯಾವ ತರಹದ್ದೂಂತ ಹೇಳಬಹುದೆ?" ಕೇಳುತ್ತಿದ್ದವನ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ತಿಳಿಯದೆ ಮತ್ತೊಮ್ಮೆ ತಬ್ಬಿಬ್ಬಾದಳು. ಅಪರಿಚಿತ ವ್ಯಕ್ತಿಗೆ ನಿವೇದನ್ ಹಾಗೂ ತನ್ನ ಸ್ನೇಹದ ಬಗ್ಗೆ ತಿಳಿದುಕೊಳ್ಳವ ತವಕ!
"ನೀವು ಯಾಕೆ ಈ ರೀತಿ ಕೇಳ್ತಾ ಇದ್ದೀರಿ?" ಅನುಮಾನದಿಂದ ಮರು ಪ್ರಶ್ನೆ ಎಸೆದಳು.
"ನನ್ನ ಸ್ನೇಹಿತನಿಗೆ ಸಹಾಯ ಮಾಡೊದಿಕ್ಕೆ ನಿಮ್ಮಿಂದ ಕೆಲವು ಮಾಹಿತಿಗಳು ಬೇಕು. ನೀವು ಅವರನ್ನು ಕಾಲೇಜ್‍ನಿಂದ ಬಲ್ಲವರು"
"ನಿಮಗೆ ನನ್ನ ಬಗ್ಗೆ ಎಲ್ಲಾ ಗೊತ್ತಿದೆ!?"
"ಹೌದು, ಒಮ್ಮೆ ನೀವು ನಿವೇದನ್‍ನ ತುಂಬಾ ಪ್ರೀತಿಸ್ದೋರೂಂತ ಚೆನ್ನಾಗಿ ಬಲ್ಲೆ"
"ನಿಮ್ಮ ಮಾತಿನ ಅರ್ಥ?"
"ನಿವೇದನ್ ಕಾಣೆಯಾಗಿದ್ದಾನೆ. ಒಂದು ರೀತಿಯಲ್ಲಿ ಹೇಳುವುದಾದರೆ ಆತನನ್ನು ಯಾರೋ ಕೊಲೆ ಮಾಡಿದ್ದಾರೆಂತ ಅನಿಸ್ತಿದೆ"
"ಏನು? ನಿವೇದನ್‍ನ ಕೊಲೆ!? ನನಗೆ ನಂಬೋಕೆ ಆಗ್ತಾ ಇಲ್ಲ" ಪ್ರಿಯಲ್‍ಳ ಕಣ್ಣುಗಳು ತುಂಬಿ ಬಂದವು.
"ನಂಗೂ ನಂಬಿಕೆ ಬರ್ಲಿಲ್ಲ. ಪ್ರಿಯಲ್, ನಿಜ ಹೇಳಿ ನೀವು ಯಾವುದೋ ಮಹತ್ತರವಾದ ವಸ್ತುವನ್ನು ಅವನಿಂದ ನಿರೀಕ್ಷಿಸ್ತಾ ಇದ್ರೀಂತ ಬಲ್ಲೆ"
ಅವನ ಮಾತುಗಳಿಗೆ ತತ್ತರಿಸಿದಳು. ತಾನು ಯಾವುದನ್ನು ರಹಸ್ಯವಾಗಿ ಉಳಿಸಿಕೊಳ್ಳಬೇಕೆಂದು ಕೊಂಡಿದ್ದಳೋ ಅದು ಮೂರನೆಯವನಿಗೆ ತಿಳಿದಿದೆ! ಧೈರ್ಯ ತಂದುಕೊಂಡವರಂತೆ ಕಣ್ಣುಗಳು ಹೊಳೆದವು. ದೀರ್ಘ ಉಸಿರೊಂದು ಬಾಯಿಯಿಂದ ಹೊರಬಿತ್ತು.
"ನಿಮ್ಮ ಮಾತಿನಿಂದ ನಿವೇದನ್‍ಗೆ ಎಷ್ಟು ಆತ್ಮೀಯರೂಂತ ತಿಳಿಯಬಲ್ಲೆ. ದಯವಿಟ್ಟು ನನ್ನ ನಿವೇದನ್‍ನ ಸಂಬಂಧ ಉಳಿದವರಿಗೆ ತಿಳಿಯೋದು ಬೇಡ" ಮೆತ್ತನೆಯ ಮಾತಿನಲ್ಲಿ ಹೇಳಿ ಸಹಾಯ ಯಾಚಿಸುವವರಂತೆ ಹೇಳಿದಳು.
"ಪ್ರಿಯಲ್, ನೀವು ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ನನಗೆ ತಿಳಿಸಿದರೆ, ಪೊಲೀಸರಿಂದ ನಿಮಗೆ ರಕ್ಷಣೆ ನೀಡ ಬಲ್ಲೆ. ಈಗಾಗಲೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ"
ದು:ಖಿತಳ ಬೆನ್ನ ಹುರಿಯಲ್ಲಿ ಚಳಿ ಹರಿದಂತಾಯಿತು.
"ಹೇಳ್ತೀನಿ, ಎಲ್ಲಾ ನಿಮ್ಮ ಬಳಿ ಹೇಳ್ತೀನಿ. ನಾನು ಕಾಲೇಜ್ ದಿನಗಳಿಂದ ನಿವೇದನ್‍ನ ಪ್ರೀತಿಸ್ದವಳು"
"ಅದು ನನಗೆ ಚೆನ್ನಾಗಿ ಗೊತ್ತು. ಆದ್ರೆ ಪೊಲೀಸರಿಗೆ ಈ ಕೊಲೆಯ ಹಿಂದೆ ಒಬ್ಬಳು ಹುಡುಗಿ ಇದ್ದಾಳೆಂದು ತಿಳಿದಿದೆ"
"ಇಲ್ಲ, ನಿವೇದನ್‍ನ ಪ್ರೀತಿಸ್ದೋಳು ನಾನು, ಅವನನ್ನು ಕೊಲೆ ಮಾಡುವಷ್ಟು ನೀಚಳಲ್ಲ"
"ನಿಮ್ಮ ಬಗ್ಗೆ ನಾನು ಹೇಳ್ತಾ ಇಲ್ಲ. ನಿವೇದನ್ ಕಾಣೆಯಾಗುವ ದಿನ, ಸರಿ ರಾತ್ರಿಗೆ ಒಂದು ಕರೆ ಬಂದಿತ್ತು. ಅದೂ ಹೆಣ್ಣಿನ ಕರೆ"
"ಆ ಕರೆ ಮಾಡ್ದೋಳು ನಾನೇ"
"ನೀವು!? ಅವನನ್ನು ಕರೆ ಮಾಡಿ ಯಾವುದೋ ವಿಚಾರದಲ್ಲಿ ಹೆದರಿಸಿದ್ರಿ?"
"ಇಲ್ಲ"
"ಹಾಗಂತ ಬಾಧುರಿ ಪೊಲೀಸ್‍ರಿಗೂ ತಿಳಿಸಿದ್ಲು"
"ನಾನು ನಿವೇದನ್ ಬಗ್ಗೆ ಏನೆಲ್ಲಾ ಆಸೆ ಇಟ್ಕೊಂಡಿದ್ದೆ. ಆದ್ರೆ ಆತ ನನ್ನನ್ನ ನಿರಾಕರಿಸ್ದ, ನಿರಾಶಳಾದೆ. ನಂತರ ನಾನು ಮನೆಯವರ ಒತ್ತಾಯಕ್ಕೆ ಮದುವೆಯ ಮಾಲೆಗೆ ಕೊರಳೊಡ್ಡಿದೆ. ನನ್ನ ಗಂಡನ ಮನೆಯಲ್ಲಿ ಶ್ರೀಮಂತಿಕೆಯಿದ್ದರೂ ಪ್ರೀತಿಯ ಕೊರತೆಯಿತ್ತು. ಒಮ್ಮೆ ಅಚಾನಕ್ಕಾಗಿ ನಿವೇದನ್‍ನ ಭೇಟಿಯಾದೋಳು ಅವನ ಸ್ನೇಹ ಮುಂದುವರಿಸ್ದೆ. ಒಂದೇ ಒಂದು ಬಾರಿ ಅವನನ್ನು ನೋಡ್ಬೇಕೆಂಬ ಆಸೆ ಮುಂದಿಟ್ಟೆ. ತನಗೆ ಮದುವೆ ಫಿಕ್ಸ್ ಆಗಿದೆ. ಖಂಡಿತವಾಗಿಯೂ ಮದುವೆಗೆ ಕರೆಯೋದಕ್ಕೆ ಬರುತ್ತೇನೆಂದು ತಿಳಿಸ್ದ. ಹಾಗೆ ನನಗೆ ಕರೆಯೋಲೆ ಕೊಡಲು ಬಂದಿದ್ದ. ಅವನನ್ನು ಕಳ್ಕೊಂಡ ನಾನು ಹುಚ್ಚಳಾಗಿ ಬಿಟ್ಟೆ. ಅವನ ಪ್ರೀತಿ ಇನ್ನೊಬ್ಬಳಿಗೆ ಮೀಸಲಾಗುವುದು ನನಗೆ ಬೇಡ. ಆಗ ನನ್ನಲ್ಲಿ ಒಂದು ಆಸೆ ಅಂಕುರಿಸಿತು. ನಿವೇದನ್‍ನನ್ನು ದಿನಾ ಕರೆ ಮಾಡಿ ಭೇಟಿ ಮಾಡಲಾರಂಬಿಸ್ದೆ. ನನ್ನ ಹುಚ್ಚು ಆಸೆಯೊಂದನ್ನು ಅವನ ಮುಂದೆ ಬಿಚ್ಚಿಟ್ಟೆ. ಅದನ್ನು ಕೇಳಿ ಆತ ದಿಗ್ಬ್ರಾಂತನಾದ. ಈ ರಹಸ್ಯವನ್ನು ಯಾರ ಬಳಿಯೂ ಹೇಳೊದಿಲ್ಲವೆಂದು ಭಾಷೆ ನೀಡ್ದೆ. ಆದ್ರೂ ಆತ ಹೆದರಿದ. ಈ ವಿಷಯ ನನ್ನ ಗಂಡನಿಗೆ ಗೊತ್ತಾದ್ರೆ ರದ್ಧಾಂತವಾಗುವುದೆಂದು ಹೇಳಿದ. ನಾನು ನನ್ನ ಹಠ ಬಿಡಲಿಲ್ಲ. ಅದಕ್ಕೆ ಬೇಕಿದ್ದ ಅಗತ್ಯತೆಗಳನ್ನೆಲ್ಲಾ ನಾನೇ ಮಾಡ್ದೆ. ಆದ್ರೂ ಕೊನೆಗೆ ಆತ ನನ್ನ ನಿರಾಶೆಗೊಳಿಸ್ದ"
ಸೋತ ಹೆಣ್ಣು ಕತ್ತು ಬಾಗಿಸಿದಳು.
"ನೀವು ಇಷ್ಟು ಹೇಳಿದ ಮೇಲೂ ನಿಮ್ಮ ಆಸೆ ಏನೂಂತ ಮಾತ್ರ ಹೇಳ್ಲಿಲ್ಲ"
"ನನ್ನ ನೀವು ಹುಚ್ಚಿ ಅಂದ್ಕೊಂಡ್ರೂ ಪರವಾಗಿಲ್ಲ. ಆ ವಿಷಯಾನ ನಿಮ್ಮತ್ರ ಹೇಳ್ತೀನಿ" ಎತ್ತಿದ ತಲೆಯನ್ನು ಮತ್ತೆ ತಗ್ಗಿಸಿದಳು. ಹೇಳಲೋ ಬೇಡವೋ ಅನ್ನುವ ಸಂದಿಗ್ಧತೆಯಿತ್ತು ಅವಳ ಮುಖದಲ್ಲಿ. ತುಸು ಮೌನದ ನಂತರ ಮತ್ತೆ ಮುಂದುವರಿಸಿದಳು, "...ನಿವೇದನ್‍ನಿಂದ ನನ್ನೊಡಲಲ್ಲಿ ಹುಟ್ಟೋ ಮಗೂನ ಬಯಸ್ದೆ. ಅದಕ್ಕಾಗಿ ಒಂದು ವಾರ ನಾವಿಬ್ರೂ ಊಟಿಗೆ ಹೋಗಿ, ಅಲ್ಲಿ ನಿಲ್ಲೋದೂಂತ ಹೋಟೆಲ್‍ನಲ್ಲಿ ರೂಂ ಬುಕ್ ಮಾಡ್ದೆ. ಆತ ನನ್ನನ್ನು ನಿರಾಶೆಗೊಳಿಸ್ದ. ಅವನು ಮೋಸ ಮಾಡಿದ್ದಕ್ಕಾಗಿ ಹತಾಶಳಾಗಿ ಅವನಿಗೆ ರಾತ್ರಿ ಹೊತ್ತು ಕರೆ ಮಾಡ್ದೆ" ಅವಳ ಕಥೆ ಕೇಳಿದ ಮೇಲೆ ದೀರ್ಘ ನಿಟ್ಟುಸಿರೊಂದು ಹೊರ ಬಂತು.
"ಪ್ರಿಯಲ್, ನಿಮ್ಮಿಂದ ತುಂಬಾ ಉಪಕಾರವಾಯಿತು. ಎಲ್ಲವನ್ನೂ ನನ್ನ ಮುಂದೆ ಬಿಚ್ಚಿಟ್ಟಿದ್ದಕ್ಕೆ ಧನ್ಯವಾದಗಳು. ಇನ್ನೇನಾದರೂ ಮಾಹಿತಿ ಬೇಕಿದ್ದಲ್ಲಿ ನಿಮ್ಮನ್ನು ಮತ್ತೆ ಭೇಟಿಯಾಗ್ತೀನಿ"
"ದಯವಿಟ್ಟು ಈ ರಹಸ್ಯ ಮೂರನೆಯವರಿಗೆ ತಿಳಿಸ್ಬೇಡಿ"
"ಖಂಡಿತವಾಗಿಯೂ ಅದರ ಬಗ್ಗೆ ನಿಶ್ಚಿಂತರಾಗಿ"
ಅವಳಿಗೆ ವಂದಿಸಿ ಹೊರಗೆ ಬರುವಾಗ ಪ್ರಭಾತ್ ರಂಜನ್‍ನ ಕಾರು ಬಂದು ನಿಂತಿತ್ತು!
ಕಲಾಕಿರಣ್ ಸರಕ್ಕನೆ ಸರಿದು ಮರೆಯಲ್ಲಿ ನಿಂತ!
ಪ್ರಭಾತ್ ರಂಜನ್! ಪಬ್ಬ್‍ನ ಮಾಲೀಕ ಪ್ರಿಯಲ್‍ಳ ಗಂಡ!
ತಲೆ ತಿರುಗಿದಂತಾಗಿ ಪಕ್ಕದ ಮರವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡ.
***
ಪ್ರಭಾತ್ ರಂಜನ್‍ನನ್ನು ಕಂಡು ತಲ್ಲಣಗೊಂಡಿದ್ದ ಕಲಾಕಿರಣ್‍ಗೆ ತಾತ್ಕಾಲಿಕ ಉತ್ತರ ದೊರೆತಂತಾಗಿತ್ತು!
ಪ್ರಭಾತ್ ರಂಜನ್, ಪ್ರಿಯಲ್‍ಳ ಗಂಡ! ನಿವೇದನ್ ಬಗ್ಗೆ ಹುಚ್ಚು ಹಿಡಿಸಿಕೊಂಡಿರೋ ಪ್ರಿಯಲ್, ಸಂಗೀತದ ಗೀಳು ತುಂಬಿಕೊಂಡಿರುವವನಿಗೆ ತನ್ನ ಗಂಡನಿಗೆ ದಂಬಾಲು ಬಿದ್ದು ಅವಕಾಶ ನೀಡಿದ್ದಾಳೆ! ಆದರೆ ಪ್ರಿಯಲ್‍ಳ ಉದ್ದೇಶ ಅರಿತ ಪಬ್ಬ್‍ನ ಮಾಲೀಕ, ನಿವೇದನ್‍ನನ್ನು ತನ್ನ ಪಬ್ಬ್‍ನಲ್ಲಿ ಹಾಡಲು ಬರುವಂತೆ ಹೇಳಿ ಕೊಲೆ ಮಾಡಿರಬಹುದು!!
ಅಲೋಚನೆಯ ಗುಂಗಿನಲ್ಲಿದ್ದವನು ಬಾಧುರಿಯ ಮನೆಯ ಗೇಟನ್ನು ತೆರೆಯಲಿದ್ದಾಗ, ಯಾಂತ್ರಿಕವಾಗಿ ಅವನ ದೃಷ್ಟಿ ಪಕ್ಕದ ಮನೆಯ ಕಡೆಗೆ ಹೊರಳಿತು. ಜೋಡಿ ಕಣ್ಣುಗಳು ಅವನನ್ನೇ ನೋಡುತ್ತಿದ್ದವು!
ತಟ್ಟನೆ ಆ ಕಣ್ಣುಗಳು ಕಿಟಕಿಗೆ ಹಾಕಿದ ಪರದೆಯ ಹಿಂದೆ ಸರಿದವು!
ಬಾಧುರಿ!
ಬಾಧುರಿಗೆ ಪಕ್ಕದ ಮನೆಯಲ್ಲೇನು ಕೆಲಸ? ಮೊನ್ನೆ ಮೊನ್ನೆಯಷ್ಟೆ ನಿವೇದನ್ ಕಟ್ಟಿಸಿರೋ ಮನೆ. ಅದರ ಒಡತಿಗೆ ಇಷ್ಟು ಬೇಗನೆ ಪಕ್ಕದ ಮನೆಯವರ ಸ್ನೇಹ!? ತನ್ನನ್ನೇ ತಾನು ನಂಬದವನಂತೆ ಒಂದು ಕ್ಷಣ ನಿಂತು ಬಿಟ್ಟ. ಕೂಡಲೇ ಎಚ್ಚೆತ್ತವನ ಕಾಲುಗಳು ಪಕ್ಕದ ಮನೆಯತ್ತ ಹೊರಳಿದವು.
ಕರೆಗಂಟೆ ಅದುಮುತ್ತಲೆ ಬಾಗಿಲು ತೆರೆದುಕೊಂಡಿತು. ಬಾಗಿಲು ತೆರೆದ ಸುಂದರ ಯುವತಿಯ ಮುಖಕ್ಕೆ ರಕ್ತ ನುಗ್ಗಿದಂತೆ ಕೆಂಪಾಯಿತು. ಕಲಾಕಿರಣ್ ಅವಳನ್ನೇ ನೋಡುತಲಿದ್ದ.
ಅದೇ ಕಣ್ಣುಗಳು! ಕಿಟಕಿಯ ಪರದೆಯ ಹಿಂದೆ ಸರಿದ ಜೋಡಿ ಕಣ್ಣುಗಳು!
ಅದರೂ ಸಂಶಯದಿಂದ ಕೇಳಿದ "ಬಾಧುರಿ?"
ಚೇತರಿಸಿಕೊಂಡ ಸುಂದರ ಯುವತಿ ತಲೆ ಅಡ್ಡಲಾಗಿ ಆಡಿಸಿ ಇಲ್ಲವೆಂದಳು. ತಪ್ಪಿತಸ್ಥನಂತೆ ಮುಖ ಹೊರಳಿಸಿ ಧೈರ್ಯ ತಂದುಕೊಂಡ.
"ನಾನು ಒಳ ಬರಬಹುದೆ?"
"ಬನ್ನಿ," ಸರಿದು ನಿಂತಳು ಸುಂದರ ಯುವತಿ.
"ನಾನು ಪಕ್ಕದ ಮನೆಯವರ ಬಗ್ಗೆ ತಿಳ್ಕೊಳ್ಳೊದಿಕ್ಕೆ ಬಂದಿದ್ದೀನಿ" ಅವನ ಮಾತುಗಳಿಗೆ ಸ್ಪಂದಿಸಿದವಳ ಹಣೆಯಲ್ಲಿ ಬೆವರಿನ ಮುತ್ತುಗಳು ಮೂಡಿದವು.
"ಇಲ್ಲ, ಅವರ ಬಗ್ಗೆ ನಂಗೇನೂ ಗೊತ್ತಿಲ್ಲ" ತೀರ ಬೆದರಿದವಳಂತೆ ಹೇಳಿದಳು. ಮೈ ಸಣ್ಣಗೆ ನಡುಗುತ್ತಿತ್ತು. ಆಸರೆಗಾಗಿ ಸೋಫಾದ ಅಂಚನ್ನು ಗಟ್ಟಿಯಾಗಿ ಹಿಡಿದವಳು ದೊಪ್ಪನೆ ಕುಸಿದು ಕುಳಿತಳು.
"ದಯವಿಟ್ಟು ಹೊರಟು ಹೋಗಿ. ನಂಗೆ ಅವರ ಬಗ್ಗೆ ಏನೂ ಗೊತ್ತಿಲ್ಲ"
ಯುವಕ ಎದ್ದು ನಿಂತು ಕೈ ಜೋಡಿಸಿ `ಕ್ಷಮಿಸಿ' ಅಂದ. ಬಾಗಿಲವರೆಗೆ ಹೊರಳಿದವನು ನಿಂತ. ಅದೇ ಬೆದರಿಕೆಯ ನೋಟ!
"ನೀವು ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ಹೆಸರು ಹೇಳಿದ್ರೆ ಉಪಕಾರವಾಗ್ತಿತ್ತು"
"ಪ್ರಜಕ್ತಾ" ಮೆಲ್ಲನೆ ಉಸುರಿದಳು.
ಅಲ್ಲಿಂದ ಹೊರ ಬಂದವನು ಬೇರೆಲ್ಲೂ ಹೋಗಲು ಮನಸ್ಸಿಲ್ಲದೆ ನೇರವಾಗಿ ತನ್ನ ರೂಂ ಸೇರಿಕೊಂಡ ಕಲಾಕಿರಣ್.
ಮೂರು ದಾರಿಗಳಲ್ಲಿ ಹೊರಟವನಿಗೆ ಮೂರನೆ ದಾರಿ ತೆರೆದುಕೊಂಡಂತೆ ಕಂಡಿತು.!
ಆದರೆ ಎರಡನೆ ದಾರಿ ಸ್ಪಷ್ಟ ಚಿತ್ರಣ ನೀಡಿದೆ. ನಿವೇದನ್‍ನ ಕೊಲೆಯ ಹಿಂದೆ ಪ್ರಭಾತ್ ರಂಜನ್‍ನ ಕೈವಾಡವಿದೆ! ಇಲ್ಲಿ ಮೋಸವಾಗಿರೋದು ಬಾಧುರಿಯಂತಹ ಮುಗ್ಧ ಹುಡುಗಿಗೆ!
ಮೂರು ದಾರಿಗಳ ದೂರ ತಿಳಿದುಕೊಂಡವನು ಒಂದು ನಿರ್ಧಾರಕ್ಕೆ ಬಂದ.
***
ಒಂದು ವಾರದಲ್ಲಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದ. ಒಮ್ಮೆ ಸರಿ ರಾತ್ರಿಗೆ ತಟ್ಟನೆ ಎಚ್ಚರಗೊಂಡವನು ಎದ್ದು ಕುಳಿತ.
ಹೊರಗಿನಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಮುಖ ತೊಳೆದು ಆತುರಾತುರವಾಗಿ ಮಳೆಯ ನಿಲುವಂಗಿ, ಟೋಪಿ ಧರಿಸಿ ಕತ್ತಲೆಯಲ್ಲಿ ಹೆಜ್ಜೆಯಿಡುತ್ತಾ ಮನೆಯ ಬಳಿ ಬಂದು ಕರೆಗಂಟೆಯೊತ್ತಿದ.
ತಟ್ಟನೆ ಎಚ್ಚರಗೊಂಡವಳು ಗಡಿಯಾರ ನಿರುಕಿಸಿದಳು. ಎರಡು ಗಂಟೆ! ಉಸಿರು ಬಿಗಿ ಹಿಡಿದು ನಿಧಾನಕ್ಕೆ ಹೊರ ಬಂದಾಗ ಮತ್ತೊಮ್ಮೆ ಕರೆಗಂಟೆಯ ಸದ್ದಾಯಿತು. ಮೆಲ್ಲನೆ ಕಿಟಕಿಯ ಪರದೆಯನ್ನು ಸರಿಸಿ ನೋಡಿದಳು.
ಕಲಾಕಿರಣ್!
ಈ ಅಪರಾತ್ರಿಯಲ್ಲಿ ಇಲ್ಲಿಗೇಕೆ ಬಂದ? ಮತ್ತೊಮ್ಮೆ ಬಾಗಿಲು ಬಡಿದ. ದೀಪ ಬೆಳಗಿಸಿ ಬಾಗಿಲು ತೆರೆದಳು. ಹೊರಗಿನ ತಂಪು ಗಾಳಿ ಮುಖಕ್ಕೆ ನುಗ್ಗುತ್ತಲೇ ಎರಡೆರಡು ಬಾರಿ ಸೀನು ಹಾಕಿದಳು. ಆತ ದಢಾರನೆ ಬಾಗಿಲು ಮುಚ್ಚಿದ.
"ಪ್ರಜಕ್ತಾ, ನೀವು ವಿಷಯಾನ ನನ್ನಿಂದ ಮುಚ್ಚಿಟ್ಟಿದ್ದೇಕೆ?"
ಅವನ ಪ್ರಶ್ನೆಗೆ ಅವಳ ನಿದ್ದೆಯ ಮಂಪರು ಹಾರಿ ಹೋಯಿತು. ಕಣ್ಣುಗಳನ್ನು ಉಜ್ಜಿಕೊಂಡು ಚಕಿತಳಾಗಿ ಅವನನ್ನು ನೋಡುತ್ತಿದ್ದಳು.
"ಹಕ್ಕಿ ಹಾರಿ ಹೋಗೋ ಮೊದ್ಲು ಹಿಡಿಬೇಕೂಂತ ಬಂದೆ"
"ಇಲ್ಲ, ನನ್ನ ನೀವು ತಪ್ಪಾಗಿ ತಿಳ್ಕೊಂಡಿದ್ದೀರಿ" ತಟ್ಟನೆ ಅಳುಕಿನಿಂದ ಹೇಳಿ ಹಿಂದಕ್ಕೆ ಸರಿದಳು.
"ಸರಿಯಾಗಿ ಹೇಳಿದ್ರಿ. ಮೊದ್ಲು ತಪ್ಪಾಗಿ ತಿಳ್ಕೊಂಡಿದ್ದೆ. ಆದ್ರೆ ಈಗ ನಿಜ ಏನೂಂತ ತಿಳಿದಿದೆ. ಅದಕ್ಕೆ ನಿಮ್ಮನ್ನ ಕೇಳ್ತಿರೋದು ನಿಜಾನ ಯಾಕೆ ಮುಚ್ಚಿಟ್ರಿ?"
"ಹೇಳ್ತೀನಿ. ಆವತ್ತು ನಿವೇದನ್‍ನ ಯಾರೋ ಕೊಲೆ ಮಾಡೊದಿಕ್ಕೆ ಬಂದಿದ್ರು. ಮೈಯೆಲ್ಲಾ ರಕ್ತಸಿಕ್ತವಾಗಿತ್ತು. ಕಂಪೌಂಡ್ ಹಾರಿ ಹಿಂದಿನಿಂದ ಬಂದು ಬಾಗಿಲು ಬಡಿದ್ರು. ಅವರನ್ನು ಒಳ ಸೇರಿಸ್ದೆ. ಆಶ್ರಯ ಕೊಡುವಂತೆ ಕೇಳಿದ್ರು. ಅವರನ್ನು ನಾನು ಚೆನ್ನಾಗಿ ಬಲ್ಲೆನಾದ್ರಿಂದ, ಅವರಿಗೆ ಆಶ್ರಯ ನೀಡ್ದೆ. ಅವರು ನನಗೆ ಹೇಗೆ ಪರಿಚಿತರೂಂದ್ರೆ, ಇಲ್ಲಿ ಸ್ಥಳ ಖರೀದಿಸಿ ಮನೆ ಕಟ್ಟೋಕೆ ಶುರು ಮಾಡುವಾಗಲಿಂದ ನಾನು ಅವರನ್ನು ಹಚ್ಕೊಂಡು ಬಿಟ್ಟೆ. ಪ್ರತಿ ಬಾರಿ ಫೋನು ಮಾಡೊದಿಕ್ಕೆ ಮನೆಗೆ ಬರ್ತ್ತಿದ್ರು. ಅವರ ಆಕರ್ಷಕ ವ್ಯಕ್ತಿತ್ವಕ್ಕೆ ಮರುಳಾಗಿ ಪ್ರೀತಿಸೋದಿಕ್ಕೆ ಆರಂಭಿಸ್ದೆ.... ನನ್ನ ಪ್ರೀತಿ ಮೌನವಾಗಿತ್ತು. ಅದೇ ಸಮಯಕ್ಕೆ ಅವರಿಗೊಬ್ಳು ಪ್ರೇಯಸಿಯಿದ್ದಾಳೆಂತ ತಿಳಿಯಿತು. ಅವಳು ಯಾವಾಗಲೂ ಅವರ ಜೊತೆಗೆ ಬರ್ತಿದ್ಲು. ಇದರಿಂದ ನಾನು ನಿರಾಶೆ ಹೊಂದಿದೆ ನಿಜ. ಆದ್ರೆ ಅವರನ್ನು ಕೊಲೆ ಮಾಡೋಷ್ಟು ಕೆಟ್ಟ ಮನಸ್ಸಿನೋಳಲ್ಲ ನಾನು" ಗದ್ಗದಿತಳಾದಳು.
"ಸಮಾಧಾನ ಮಾಡ್ಕೊಳ್ಳಿ. ನಿವೇದನ್‍ನ ಕೊಲೆಯಾಗ್ಲಿಲ್ಲಾಂತ ಗೊತ್ತಾ?"
ತೀರಾ ಕಂಗೆಟ್ಟಿದ್ದವಳು ಆಶ್ಚರ್ಯದಿಂದ ಇಲ್ಲವೆನ್ನುವಂತೆ ಗೋಣು ಆಡಿಸಿದಳು.
"ಆವರಿಗೆ ಆಶ್ರಯ ಕೊಟ್ಟಿದ್ರೂ, ಆತ ಆ ದಿನ ನನ್ನ ಹೇಳದೆ ಕೇಳದೆ ಇಲ್ಲಿಂದ ಹೊರಟು ಹೋದ್ರು"
"ಅವನನ್ನು ಕೊಲೆ ಮಾಡಲು ಪ್ರಯತ್ನ ನಡೆದಿತ್ತು. ಅದೂ ಒಂದು ಹೆಣ್ಣಿನಿಂದ ಅದು ನಿಮಗೆ ಗೊತ್ತಿರ್ಬೇಕಲ್ಲ?"
ತುಸು ಮೌನದ ನಂತರ ಹೌದೆನ್ನುವಂತೆ ತಲೆಯಾಡಿಸಿದಳು.
"ಅವಳು ಯಾರೂಂತ ಗೊತ್ತಾ?"
"ಇಲ್ಲ. ಅವರನ್ನು ಕೊಲ್ಲೋದಿಕ್ಕೆ ಪ್ರಯತ್ನ ಪಟ್ಟಿದ್ದು ಒಬ್ಳು ಹೆಣ್ಣೂಂತ ಮಾತ್ರ ನನ್ನ ಬಳಿ ಹೇಳ್ಕೊಂಡಿದ್ರು. ಆದ್ರೆ ಅವಳ ಹೆಸರು ಹೇಳ್ಲಿಲ್ಲ"
"ಆತನನ್ನು ಪ್ರೀತಿಸ್ದೋಳು... ಅಲ್ಲಲ್ಲ ಆತನಿಂದ ಏನನ್ನೋ ಪಡೆಯೋ ಹುಚ್ಚುತನ ಮಾಡ್ದೋಳು"
"ಅಂದ್ರೆ?"
"ಅಂದ್ರೆ... ಅವನ ಜೊತೆ ಸುತ್ತಾಡ್ತಿದ್ಲಲ್ಲ, ಆ ಹುಡುಗಿ.... ಬಾಧುರಿಂತ. ಅವಳಿಗೆ ನಿವೇದನ್‍ನ ಆಸ್ತಿ ಮೇಲೆ ಕಣ್ಣು. ಅವನಿಗೆ ಮೋಸ ಮಾಡಿ ಎಲ್ಲಾ ಆಸ್ತಿಗೂ ತಾನೆ ಬಾಧ್ಯಸ್ಥೆಂತ ಮಾಡ್ಕೊಂಡಿದ್ಲು. ಆ ಆಧಾರದ ಮೇಲೆ ನಾನು ಅವಳನ್ನು ಹಿಡಿದ್ಬಿಟ್ಟೆ"
ಪ್ರಜಕ್ತಾ ಮೂಗಿನ ಮೇಲೆ ಬೆರಳಿತ್ತಳು.
"ನಿವೇದನ್‍ಗೆ ಇನ್ನು ಅಪಾಯ ಇಲ್ಲಾಂತ ಬಾವಿಸ್ತೀನಿ"
"ಖಂಡಿತವಾಗಿಯೂ, ಆತ ಕ್ಷೇಮವಾಗಿದ್ದಾನೆ. ಬಾಧುರಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ನಾನು ಅವನ ಪರವಾಗಿ ಪೊಲೀಸರಿಗೆ ತಿಳಿಸೋದಿಕ್ಕೆ ಹೋದಾಗ ಅಲ್ಲಿ ಆತ ಎಲ್ಲಾ ಕಥೆಯನ್ನು ಪೊಲೀಸರಿಗೆ ತಿಳಿಸ್ತಿದ್ದ. ನಾನು ಅವನ ಪರವಾಗಿ ಪತ್ತೆ ಕಾರ್ಯ ನಡೆಸಿದ್ದಕ್ಕೆ ನನ್ನನ್ನು ಪೊಲೀಸರ ಮುಂದೆ ಪ್ರಶಂಸಿದ. ನೀವು ಆತನಿಗೆ ನೀಡ್ದ ಆಶ್ರಯಕ್ಕಾಗಿ ನಿಮ್ಮ ಉಪಕಾರನ ಮೆಚ್ಕೊಂಡ ಮಾತ್ರವಲ್ಲ ನಿಮ್ಮನ್ನೂ..."
ಅವಳ ನೋಟ ಪ್ರಶ್ನಾರ್ಥಕವಾಗಿತ್ತು.
"ಅಂದ್ರೆ.... ಇನ್ನು ಮುಂದೆ ಆತನ ಜೀವನಕ್ಕೆ ನೀವು ಬಾಧ್ಯಸ್ಥರಂತೆ"
ಪ್ರಜಕ್ತಾಳ ಕಣ್ಣುಗಳಲ್ಲಿ ಹೊಳಪು ತುಂಬಿತು.
Read more!
Subscribe to:
Posts (Atom)