Friday, October 24, 2008

ತಿರುಗುತ್ತಲೇ ಬಣ್ಣಗಳನ್ನು ಬಿಚ್ಚಿಡುವ ಬಿ. ಎಂ. ಹನೀಫ್ ಅವರ `ಬಣ್ಣದ ಬುಗುರಿ'


ಮೇಲ್ನೋಟಕ್ಕೆ `ಬಣ್ಣದ ಬುಗುರಿ' ಅಂಕಣ ಬರಹಗಳ ಸಂಕಲನವಾದರು, ಇವುಗಳಲ್ಲಿಯ ಒಂದೊಂದು ವಿಷಯವೂ ಅನುಭವದ ಬರಹಗಳೇ, ಅಂಕಣದ ಬರಹಗಳಾಗಿ ತೆರೆದುಕೊಂಡವುಗಳು. ಈ ಬರಹಗಳಲ್ಲಿ ಸಾಮಾಜಿಕ ಕಳಕಳಿ, ಧರ್ಮ, ಜಾತೀಯತೆಯ ಸೋಗಿನಲ್ಲಿ ನಡೆಯುವ ಮುಗ್ಧ ಜನರ ಶೋಷಣೆ, ಸಮಾಜದಲ್ಲಿ ಎಲ್ಲರಂತೆ ಇದ್ದು ಏನೂ ಇಲ್ಲದೆ ಬದುಕುವ ವಿಭಿನ್ನ ವ್ಯಕ್ತಿಗಳ ನೋವು, ಹತಾಶೆಯನ್ನು ತನ್ನದೇ ಆದ ದೃಷ್ಟಿಯಲ್ಲಿ ಕಾಣುತ್ತಾ, ಪರಿಹಾರವನ್ನು ಸೂಚಿಸುತ್ತಾ ಒಂದು ಸುಂದರವಾದ ಸಮಾಜವನ್ನು ಸೃಷ್ಟಿಸ ಹೊರಟಿರುವುದು ಇಲ್ಲಿಯ ಬರಹಗಳ ಮುಖ್ಯ ಅಂಶವಾಗಿದೆ.

ಧಾರ್ಮಿಕ ಮತ್ತು ಜಾತೀಯತೆಯ ಅಂಧತ್ವದಲ್ಲಿ, ನಿಜವಾದ ಕಾರಣ, ಅಲ್ಲಿ ನಡೆಯುವ ವಿದ್ಯಾಮಾನಗಳನ್ನು ಗುರುತಿಸದೆ ಸದಾ ಕತ್ತಿ ಮಸೆಯುವ ಧರ್ಮಾಂಧರಿಗೆ ಇಲ್ಲಿನ ಅಂಕಣಗಳನ್ನು ಓದಿ ತಿಳಿದರೆ ನಿಜದ ಅರಿವಾದಿತು. `ಓ ದೇವರೇ.. ದೇವರನ್ನು ರಕ್ಷಿಸು!', `ಇರುವುದೆಲ್ಲವ ಬಿಟ್ಟು ಇರದುದೆಡೆಗೆ' ಇವುಗಳಲ್ಲಿ ಸ್ವಾಸ್ಥ್ಯ ಸಮಾಜದ ಚಿಂತನೆ ಎಷ್ಟು ಸ್ಪಷ್ಟವಾಗಿ ನಿರೂಪಿತವಾಗಿದೆಯೆಂದರೆ ಒಬ್ಬ ಜನ ಸಾಮಾನ್ಯನಿಗೂ ಅರ್ಥವಾಗುವಂತೆ ಇವೆ. ಸಾಮಾಜದ ಶಾಂತಿಯನ್ನು ಕದಡುವ ಘಟನೆಗಳಿಗೆ ತಿಳಿಗೇಡಿ ಕಾರಣಗಳೇ ಮುಖ್ಯ ಅನ್ನುವುದು ಸ್ಪಷ್ಟವಾಗುತ್ತದೆ. ಇಲ್ಲಿ ಒಬ್ಬನಿಗೊಬ್ಬನನ್ನು ಎತ್ತಿ ಕಟ್ಟುವ, ಮುಗ್ಧ ಜನರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮತ್ತು ವಿಷಯಗಳನ್ನು ತಪ್ಪಾಗಿ ಅರಿತುಕೊಂಡು ಆಗುವ ಅನಾಹುತಗಳನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತದೆ. ಜೊತೆಗೆ ಹಾದಿ ತಪ್ಪುವ ಎಳೆಯರಿಗೆ ಪ್ರೀತಿಯ ದಾರಿಯನ್ನೂ ತೋರಿಸಿದೆ.

ಹೊಸತನವನ್ನು ಹುಡುಕುತ್ತಾ, ಸತ್ಯವನ್ನು ಬಿಚ್ಚಿಡುತ್ತಾ ಸಾಗುವ ಇಲ್ಲಿಯ ಲೇಖನಗಳಲ್ಲಿ ಒಂಟಿ ಪಯಣಿಗನೊಬ್ಬನ ನೂರೆಂಟು ಕನಸುಗಳು, ಕಳಕಳಿಗಳು ಹುಡುಕಾಟದಲ್ಲಿಯೇ ಸಾಗುತ್ತಾ, ಪ್ರಶ್ನೆಗಳನ್ನು ಎದುರಿಸುತ್ತಾ, ಉತ್ತರದ ಶೋಧದಲ್ಲಿಯೇ ಮುಂದುವರಿಯುತ್ತವೆ. ತಣಿಯದ ಕುತೂಹಲದ ಬೆನ್ನೇರಿ ಹೋಗುವ ಸಾಹಸದ ಹಿಂದೆ ಮಾನವೀಯತೆಯ, ಸ್ವಾಸ್ಥ್ಯ ಸಮಾಜದ ಚಿಂತನೆಯೂ ತುಂಬಿಕೊಂಡಿದೆ.ಸ್ವತ: ಲೇಖಕರೆ `ಬದುಕು ಕಪ್ಪು-ಬಿಳುಪಿನಲ್ಲಿ ನೋಡುವುದಲ್ಲ; ಅದರೆಲ್ಲ ಬಣ್ಣಗಳಲ್ಲಿ ಗ್ರಹಿಸಬೇಕಾದದ್ದು. ಬಣ್ಣದ ಬುಗುರಿ ತಿರುಗುವಾಗ ಎಷ್ಟೋ ಸಲ ಒಂದೇ ಬಣ್ಣ ಕಾಣಿಸುತ್ತದೆ. ಆದರೆ ತಿರುಗುವ ಬುಗುರಿ ನಿಂತಾಗ ಅದರಲ್ಲಿ ಎಷ್ಟೊಂದು ಬಣ್ಣಗಳಿವೆಯಲ್ಲ' ಎಂದು ಆಶ್ಚರ್ಯ ಪಡುತ್ತಾರೆ. ಇದಕ್ಕಿಂತಲೂ ಮಿಗಿಲಾಗಿ ಓದುಗನಲ್ಲಿ, `ತಿರುಗುತ್ತಾ, ತಿರುಗುತ್ತಾ, ಹುಡುಕುತ್ತಿರುವ ಸತ್ಯಗಳ, ಸಾಧನೆಗಳ, ವ್ಯಕ್ತಿತ್ವಗಳ, ಬೆಚ್ಚಗೆ ಕುಳಿತಿರಬಹುದಾದ ನೂರಾರು ವಿಷಯಗಳ ಬಿಚ್ಚಿಡುವ ಪುಟಗಳ ನಡುವೆ; ಅವೆಲ್ಲಾ ನಾವಾಗಿ ತಿರುಗುತ್ತಾ, ನಮ್ಮೊಳಗೆ ಇಳಿಯುತ್ತಾ, ತಿರುಗುತ್ತಲೇ ಬಣ್ಣಗಳ ಬಯಲುಗೊಳಿಸುವ ಚೆಂದದ ಬುಗರಿ'ಯಾಗಿ ಕಾಣಿಸುತ್ತದೆ. ಇಲ್ಲಿಯ ಕೆಲವೊಂದು ಲೇಖನಗಳಲ್ಲಿ ಹುಡುಕಾಟದ ನಿರಾಶೆಯಲ್ಲಿ ಆಶಾಭಾವನೆಯ ಧನಾತ್ಮಕ ನಿರೀಕ್ಷೆಯನ್ನೂ ಕಾಣಬಹುದು. ಇವರೆಲ್ಲಾ `ಮಧ್ಯಮರು'ಗಳಾಗಿ, ಸುಮಳಾಗಿ, ಮೇರಿ ಪ್ಯಾರಿ ಬೆಹನಿಯದ ಬ್ಯಾಂಡ್ ಸೆಟ್ಟಿನವರಾಗಿ, ಮದ್ದೂರು ವಡೆಯ ಭಟ್ಟರಾಗಿ, ಊರು ಬಿಟ್ಟು ಬಂದ ಮಾಣಿಗಳಾಗಿ, ದಾದಿಯಾಗಿ, ಸಣ್ಣ ಸಂಬಳಕ್ಕಾಗಿ ದಿನವಿಡೀ ಜೀವ ತೇಯುವ `ಪುಟ್ಟ' ತಾಯಿಯರಾಗಿ ನಮ್ಮನ್ನು ಕಾಡುತ್ತಲೇ ಇರುತ್ತಾರೆ.

`ನಾವಾಡುವ ಭಾಷೆ ಹೀಗಿರಲಿ ಗೆಳೆಯಾ'ದಲ್ಲಿ ಭಾಷೆ ಯಾವ ರೀತಿ ಇರಲಿ ಅನ್ನುವುದನ್ನು ನೇರವಾಗಿ ತಿಳಿಸದಿದ್ದರೂ ಭಾಷಾಭಿಮಾನವನ್ನು `ಪ್ರೆಂಚ'ರ ಭಾಷಾಭಿಮಾನದ ಹಾಗಿರಬೇಕು ಅನ್ನುತ್ತಾ ಅವರ ಗೆಳೆಯನ ಜೊತೆಗೆ, ಫ್ರೆಂಚರಿಗಿರುವ ಭಾಷಾ ವ್ಯಾಮೋಹ ನೋಡಿದ ಮೇಲಾದರೂ ಬೆಂಗಳೂರು ಕನ್ನಡಿಗರು ಕನ್ನಡವನ್ನು ಪ್ರೀತಿಸಬಹುದು ಎಂದು ಹೇಳುತ್ತಾರೆ. ಆಗ ಗೆಳೆಯನ ಉತ್ತರ, "ಅಲ್ಲಿಂದ ಬಂದ ಮೇಲೆ ಬೆಂಗಳೂರಿನಲ್ಲೂ ಫ್ರೆಂಚ್ ಬಳಸಬಹುದೇ ಹೊರತು ಕನ್ನಡ ಮಾತನಾಡಲಿಕ್ಕಿಲ್ಲ" ಹೀಗೆ ವಿಡಂಬನಾತ್ಮಕವಾಗಿ ಸಮಾಜದ ಬಲಹೀನತೆಯನ್ನು ಟೀಕಿಸುತ್ತಾರೆ.

`ಪ್ರೀತಿಯ ತಾಜ್‍ಮಹಲ್ ನಿನ್ನ ಧರ್ಮ ಯಾವುದು?' ಇಲ್ಲಿ ಅಂತರಧರ್ಮಿಯ ವಿವಾಹಗಳ ಬಗ್ಗೆ ಮಾತನಾಡುತ್ತಾ, ಸತ್ಯಗಳನ್ನು ಅರಸುತ್ತಾ, ನಿಜ ಜೀವನದ ಮುಖಾಮುಖಿಯೊಂದಿಗೆ ಸಮಸ್ಯೆಗಳನ್ನೂ, ಅದಕ್ಕಿರುವ ಪರಿಹಾರಗಳನ್ನು ತಮ್ಮದೇ ಆದ ಸಲಹೆಗಳನ್ನು ಕಾಣಿಸುತ್ತ ಸಾಗುವ ಶೈಲಿ ಮುಗ್ಧ ಮತ್ತು ಪರಿಶುದ್ಧ ಮನಸ್ಸಿನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಸಂಬಂಧಗಳ ಸೂಕ್ಷ್ಮ ಎಳೆಯನ್ನು ಅರ್ಥವಾಗುವ ರೀತಿಯಲ್ಲಿ ಬಿಚ್ಚಿಡುವ `ನಿಮಗಿಲ್ಲ ಒಂದು ಹನಿ ಕರುಣಾ' ಇಂದಿನ `ಜಂಕ್' ಬದುಕಿನಲ್ಲಿ ಹೆಣ್ಣು, ಗಂಡಿನ ಅರ್ಥವಿಲ್ಲದ ಸಂಬಂಧದ ಕುರಿತಾಗಿದೆ. ತಿಳಿದೂ ತಿಳಿಯದಂತಹ ಸಂಪ್ರದಾಯ, ಕಟ್ಟಳೆಗಳ ಸೋಜಿಗವನ್ನು ಬಿಚ್ಚಿಡುವ ಕೊರಗರ, ಬ್ಯಾರಿಗಳ, ಮೌಲ್ವಿಗಳ ಬಗೆಯೂ ಹೇಳುತ್ತಾ, ಪರಿಚಯಿಸುತ್ತಾ ಸಾಗುವ ಲೇಖನಗಳು ಓದುಗನ ಮನಸ್ಸುಗಳನ್ನು ಮಿಡಿಯುವುದು ಕೂಡ ಸುಳ್ಳಲ್ಲ.

ಸೃಜನಾತ್ಮಕ ಮಾತ್ರವಲ್ಲ ಸಾಮಾಜಿಕ ಕಳಕಳಿಯ, ಆರೋಗ್ಯ ಪೂರ್ಣ ಕಾಳಜಿಯಿರುವ ಹನೀಫ್ ರವರ `ಬಣ್ಣದ ಬುಗುರಿ', ವಿದ್ಯಾಮಾನಗಳನ್ನು ತಮ್ಮದೇ ಶೈಲಿಯಲ್ಲಿ ಬಿಚ್ಚಿಡುತ್ತಾ, ಓದುಗರನ್ನು ಆಲೋಚಿಸುವಂತೆ ಮಾಡುವುದಲ್ಲದೆ, ಸಮಾಜವನ್ನು ಅರ್ಥೈಸುವಂತೆ ಕೂಡ ಮಾಡುತ್ತದೆ. ಇಲ್ಲಿಯ ಲೇಖನಗಳನ್ನು ಓದಿಯೇ ಆನಂದಿಸಬೇಕು.
`ಬಣ್ಣದ ಬುಗುರಿ'ಗೆ ಪ್ರೊ. ಅರವಿಂದ ಮಾಲಗತ್ತಿಯವರ ತೂಕದ ಮುನ್ನುಡಿ ಮತ್ತು ಕಲಾವಿದ ಶ್ರೀಕಂಠಮೂರ್ತಿಯವರ ಆಕರ್ಷಕ ಮುಖಪುಟವಿದೆ.

ಈ ಪುಸ್ತಕವನ್ನು ಸಂವಹನ, ನಂ. ೧೨/೧, ಈವ್‍ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ ಮೈಸೂರು - ೫೭೦ ೦೦೧ ಇವರು ಪ್ರಕಟಿಸಿದ್ದಾರೆ.

Read more!

Monday, October 13, 2008

ಕಾಣದ ದಾರಿಯಲ್ಲಿ ನಕ್ಷತ್ರಗಳ ಹುಡುಕುತ್ತಾ...

ಕತ್ತಲೆಯಲ್ಲಿ ಹೀಗೆ ನಡೆಯುವಾಗಲೆಲ್ಲಾ ದಾರಿ ತೋರಿಸುತ್ತಿದ್ದ ಕಿರು ದೀಪಗಳ ಸಾಲುಗಳಲ್ಲದ ಸಾಲುಗಳನ್ನು ಎಣಿಸುತ್ತಾ ಸಾಗುವ ಬದುಕಿನ ಅಂತ್ಯ, ಆದಿಯನ್ನೂ ತಿಳಿಯದೆ ಮುಖವೆತ್ತಿದರೆ ಕಾಣುವ, ಕಾಡುವ ನಕ್ಷತ್ರಗಳ ಬೆಳಕೇ ದೊಡ್ಡದೆನಿಸುತ್ತದೆ. ನೋಡುತ್ತಿದ್ದಂತೆ ಕಣ್ಣು ಮಿಟುಕಿಸುತ್ತಲೋ, ದುತ್ತೆಂದೋ ಇನ್ನೆಲ್ಲೋ ಗೋಚರಿಸಿದಂತೆ ಕಣ್ಣು ಮುಚ್ಚಾಲೆಯಾಡುವ ನಕ್ಷತ್ರಗಳ ಲೋಕ, ಭಾವನೆಗಳನ್ನೂ, ಬದುಕಿನಲ್ಲಿ ಒಂದು ಆಶಯವನ್ನೂ ಹುಟ್ಟಿಸಿ ದಾರಿಯನ್ನು ತೋರಿಸುವಾಗ, ಉಂಡ ಮನದ ನೋವುಗಳೆಲ್ಲಾ ಅರಗಿ, ಆಶಾ ದೀಪವೊಂದು ಬೆಳಗಿದಂತೆ ಹೊಸ ಬದುಕು ಪಡೆಯುವ ತವಕ ಉಕ್ಕುತ್ತದೆ.
ಎಲ್ಲರೂ ನನ್ನವರು, ಎಲ್ಲವೂ ನನ್ನವೇ ಅನ್ನುವ ನಕ್ಷತ್ರಗಳ ಮಿಡಿತ, ಮಿನುಗುವ, ಮಿನುಗುತ್ತಲೇ ಕಾಡುವ ಅವುಗಳಲ್ಲಿ ನಾನು ಒಂದಾಗುವ ಕನಸು. ಸ್ವೀಕರಿಸಬಹುದೇ ನನ್ನನ್ನು ತಮ್ಮ ಲೋಕಕ್ಕೆ. ಅಂಧಕಾರವೇ ತುಂಬಿರುವಾಗ ಬೆಳಕನ್ನೇ ಉಣಬಡಿಸಿದೆ; ನನಗೂ ಒಂದು ಸ್ಥಾನವಿರಬಹುದು. ಒಮ್ಮೆಯಾದರೂ ಅಲ್ಲಿದ್ದರೆ ಜಂಜಡಗಳಲ್ಲೆಲ್ಲಾ ಕರಗಿ ಎದೆಯ ಹಾಡು ಮಾರ್ದನಿಸಬಹುದು. ಮತ್ತೆ ಉಲ್ಕೆಯಾಗಿ ಉರಿದು ಹೋದರೂ ಬೇಸರವಿಲ್ಲ. ನಕ್ಷತ್ರಗಳೇ ಬರಬಹುದೆ ನಿಮ್ಮರಮನೆಗೆ? ಕೇಳಿಸಿತೇ ನನ್ನ ಕೂಗು? ಕಾಡುವಾಗಲೊಮ್ಮೆ ಕೇಳಿಯೇ ಬಿಡುವ ತವಕ ನನಗೂನು.
ಬೆಳೆದಾಗ ಬೆಳೆಯದೆ ಬೆಳೆದಂತೆ ಭಾವಿಸಿ, ಹೊತ್ತು, ಹೆತ್ತು ಸಾಕಿದ ಜನನಿ, ಜನ್ಮದಾತ ಮತ್ತೆ ನಕ್ಷತ್ರವಾಗಿ ಕಾಡಿದರೇಕೋ? ಆದರೆ ಸಿಗಲಿಲ್ಲ ಒಂದೂ ಗೆಳೆಯರೆಂಬ ನಕ್ಷತ್ರಗಳು. ಈ ನೋವಿದೆ. ಮುಗುಳ್ನಗು ಹೊರಗೆ, ಒಳಗೆ ಬೇಯುವ ಬೇಗೆ. ಕೈಚಾಚಿದರೆ ಕೈ ಹಿಸುಕಿ, ಕೈಯನ್ನೇ ನುಂಗುವ ಗೆಳೆಯರೆಂದು ಹೇಳಿಕೊಳ್ಳುವ ಗೆಳೆಯರು, ನಿಜ ಗೆಳೆಯರೇ? ಕಾಡಿದ್ದಿದೆ. ನಂಬುವುದು ಹೆಚ್ಚಲ್ಲ; ನಂಬಿಕೆಯೇ ಮೋಸವಾದಾಗ ಅಳುವುದೊಂದೇ ಉಳಿದಿರುವುದು. ಆಗ ಬೇಕಲ್ಲಾ ಕಣ್ಣೊರೆಸುವ ಮೃದು ಹಸ್ತಗಳು. ನೀಡಬಹುದು ಆಕ್ರಂದನದ ನೋವು ಅಳಿಸುವ, ಅಳುವ ಕಣ್ಣುಗಳ ನೀರು ಒರೆಸುವ ಮುದ್ದಿನ ನಕ್ಷತ್ರಗಳು.
ವಾಸ್ತವತೆಯ ಕಹಿಯಲ್ಲಿ, ಕನಸಿನ ಲೋಕವೂ ನನ್ನದಲ್ಲ; ನಾನಿರುವ ತಾಣವೂ ಶಾಶ್ವತವಲ್ಲ. ಹಾಗಿರುವಾಗ ಬೆಳಕು ಕಳೆದು ಮುಗಿಲ ನಡುವೆಯೂ, `ಅಳಬೇಡ, ಅಳಿಸುವರ್‍ಯಾರು ನಿನ್ನ?' ಅನ್ನುತ್ತಾ ನಗುವ ಸಾವಿರ ಕಣ್ಣಿನ ಆಕಾಶದ ಮುದ್ದು ನಕ್ಷತ್ರಗಳ ಸೆಳೆತ ಬತ್ತದ, ಕೊನೆಯಾಗದ ಆಯಸ್ಕಾಂತದ ಕಾಂತವು. ಹೀಗೆ ನೋಡುವವರಿಗೆ ನಾನೂ ದು:ಖಿಯಲ್ಲ, ಆದರೆ ಹೊರಗೆ ತಾರಸಿಯಲ್ಲಿ ಕುಳಿತಿರುವಾಗ ಮನಸ್ಸಿನ ದು:ಖಕ್ಕೆ ಸಾಂತ್ವನದ ಸೆರಗು ಹಾಸುವ ಗಾಳಿ, ಗಾಳಿಯ `ಹಾಯ್'; `ಹಾಯ್'‍ಗೆ ಹಾಯಿಯಾಗುವ ಚುಕ್ಕಿಗಳ ಮಿನುಗು ಅರ್ಥೈಸಿಕೊಳ್ಳುತ್ತವೆ ನನ್ನ ಮನಸ್ಸಿನ ಕಣ್ಣೀರನ್ನು. `ತುಟಿ ಬಿರಿದು ನಗು ತೋರು, ಆ ನಗುವಿನಲ್ಲೂ ನಾವಿದ್ದೇವಲ್ಲಾ? ಬೆಳಗಾದರೇನೂ ನಮ್ಮ ಬಿಂಬವೇ ನಿನ್ನ ತುಟಿಗಳಲ್ಲಿ' ಅನ್ನುವ ನಕ್ಷತ್ರಗಳ ಉತ್ತೇಜನವೇ ನನಗೆ ಸಾಕು.
ನೋವಾದಾಗಲೆಲ್ಲಾ ಕೇಳುತ್ತೇನೆ, `ನಕ್ಷತ್ರಗಳೇ ನನ್ನ ತುಟಿಗಳಲ್ಲಿ ನೀವಿರುವಿರಲ್ಲಾ?' ಕಣ್ಣು ಮಿಟುಕಿಸುತ್ತವೆ, ಮತ್ತೆ `ನಾಳೆ ಬರುತ್ತೇವೆ' ಅನ್ನುತ್ತವೆ. ಇದಕ್ಕಿಂತಲೂ ಹೆಚ್ಚಿನ ಗೆಳೆಯರು ಬೇಕೆ?

Read more!