Saturday, October 2, 2010

ಹರಿಚಿತ್ತ ಸತ್ಯ


ವಸುಧೇಂದ್ರರ ‘ಹರಿಚಿತ್ತ ಸತ್ಯ’ ಅವರ ಪ್ರಬಂಧ ಮತ್ತು ಕಥೆಗಳ ಹಾಗೆಯೇ ಸುಲಲಿತವಾಗಿ ಓದಿಸಿಕೊಂಡು ಹೋಗುವ ಸರಳ, ಸುಂದರ ಕಥನಕದ ಕಾದಂಬರಿ.

ರಂಗಮ್ಮ ಮತ್ತು ಪದ್ದಿ ಪಾತ್ರಗಳ ಮೂಲಕ ಲವಲವಿಕೆಯಿಂದ ಆರಂಭವಾಗುವ ಕಾದಂಬರಿ ವ್ಯಂಗ್ಯ ಮತ್ತು ವಿನೋಧದ ಸಂಭಾಷಣೆಗಳಿಂದ ಓದಿಸಿಕೊಂಡು ಹೋಗುತ್ತದೆ. ಬಳ್ಳಾರಿಯ ಇಂದಿನ ಸ್ಥಿತಿಗತಿಗಳನ್ನು ತಿಳಿದುಕೊಂಡಿರುವವರಿಗೆ ಇದು ಸದ್ಯದ ವಿದ್ಯಮಾನಗಳೊಳಗೆ ನಡೆಯುವ ಸಂಗತಿಯೇನೋ ಅನಿಸಿದರೆ ತಪ್ಪಲ್ಲ. ಆದರೆ ಬಳ್ಳಾರಿಯ ಕಾದ ಬಾಣಲೆಯಂತಹ ಬಿಸಿಲು, ಕೆಂಪು ನೀರಿನ ಹಳ್ಳಗಳ ಚಿತ್ರಣ ವಾಸ್ತವದ ಬಳ್ಳಾರಿಯನ್ನು ನೆನಪಿಸಿದರೂ ಕಥೆ ನಡೆಯುವುದು ವಾಸ್ತವದಲ್ಲವೆಂದು ತಿಳಿಯುವುದು ಅದನ್ನು ಓದುತ್ತಾ ಹೋದಂತೆ. "

ಇಲ್ಲಿಯ ಕಥನವು ನವಿರಾದ ನಿರೂಪಣೆಯ ಜೊತೆಗೆ ಗಟ್ಟಿ ಸಂಬಂಧಗಳನ್ನು ಬೆಸೆಯುತ್ತಾ ಪಾತ್ರಗಳ ಮುಗ್ಧತೆ, ಸಾಚಾತನ ಮತ್ತು ಮೌಢ್ಯಗಳೊಳಗೆ ಹುದುಗಿಕೊಳ್ಳುವುದನ್ನು ತೆರೆದಿಡುತ್ತದೆ. ಅವರ ಪ್ರಬಂಧಗಳಲ್ಲಿ ಅಥವಾ ಕಥೆಗಳಲ್ಲಿ ಇರುವಂತೆ ಲೇಖಕರು ಕಾದಂಬರಿಯ ಮೊದಲಾರ್ಧದಲ್ಲಿ ಅಂತಹ ಪ್ರಯತ್ನವನ್ನು ಮಾಡಿರುವುದು ಕಥೆಯ ಓಟಕ್ಕೆ ಕಾರಣವಾಗಿದೆ. ಕಾದಂಬರಿ ಸಾಂಪ್ರದಾಯಿಕ ಚೌಕಟ್ಟಿನೊಳಗೆ ತಿರುಗುತ್ತಾ, ಆಧುನಿಕತೆಯ ಸಣ್ಣ ಬಾರ್ಡರನ್ನು ಹಚ್ಚಿ ಮುಂದೇನು ಅನ್ನುವ ಕುತೂಹಲವನ್ನು ಉಳಿಸಿಕೊಳ್ಳುತ್ತದೆ.

ಮಗಳು ಪದ್ಮಾವತಿ (ಪದ್ದಿ)ಗೆ ಮದುವೆ ಮಾಡಲು ಸಾಹಸ ಪಡುವ ರಂಗಮ್ಮ, ಅವರ ಮಾತನ್ನು ತಳ್ಳಿ ಹಾಕದ ಮಗಳು ಪದ್ದಿಯ ಪಾತ್ರಗಳು ಒಂದಕ್ಕೊಂದು ಪೂರಕವಾಗಿಯೂ, ನಡತೆಯಲ್ಲಿ ವಿರುದ್ಧವಾಗಿಯೂ ಮುಂದುವರಿಯುವುದು ಹಳೆ ಬೇರು ಹೊಸ ಚಿಗುರು ಸೇರಿ ಮರ ಸೊಬಗಾದಂತೆ ಕಾದಂಬರಿಯ ಸೊಬಗಿನಲ್ಲಿ ನವಿರಾದ ಸಂಘರ್ಷವನ್ನು ತೋರಿಸುತ್ತದೆ.

ಹೀಗೆ ಲವಲವಿಕೆಯಿಂದ ಸಾಗುವ ಕಾದಂಬರಿ ತಿರುವು ಪಡೆದುಕೊಳ್ಳುವುದು ಪದ್ದಿಯ ಮಾನಸಿಕ ಸ್ಥಿತ್ಯಂತರದಿಂದ. ಕಾದಂಬರಿಯ ಈ ಭಾಗ ತ್ರಿವೇಣಿಯವರ ಶರಪಂಜರ, ಮುಚ್ಚಿದ ಬಾಗಿಲುಗಳ ಸನ್ನಿವೇಶಗಳನ್ನು ನೆನಪಿಸಿದರೂ ಅದು ಎಲ್ಲವೂ ತಾನು ಅಂದುಕೊಂಡಂತೆ ನಡೆಯುತ್ತದೆ ಅನ್ನುವ ಭ್ರಮೆಯೊಳಗೆ ಬೀಳುತ್ತಾ, ಯಾವುದೂ ನಡೆಯದೆನ್ನುವ ಹತಾಶೆಯ ದಾರಿ ಹಿಡಿಯುತ್ತಾ ಮಾನಸಿಕವಾಗಿ ಕುಗ್ಗುವ ಒಂದು ಸ್ಥಿತಿಯಾಗಿಯೇ ಉಳಿಯುತ್ತದೆ. ತನ್ನ ಹಾಗೂ ತಾನು ಕೈ ಹಿಡಿಯುವ ಯುವಕನ ಜೊತೆಗಿನ ಪರಿಸ್ಥಿತಿಯನ್ನು ತುಲನಾತ್ಮಕವಾಗಿ ಪರಿಗಣಿಸುತ್ತಾ ಅವನಿಗಿಂತ ತಾನು ಮಿಗಿಲು ಅನ್ನುವ ವಾಸ್ತವನ್ನು ಒಪ್ಪಿಕೊಂಡು ತನ್ನ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಳ್ಳುವ ಪದ್ದಿ ವೇದನೆಯಿಂದ ಚಡಪಡಿಸುತ್ತಾಳೆ. ಇಲ್ಲಿ ಕಾರಂತರ ಮತ್ತು ತೇಜಸ್ವಿಯವರ ಕಾದಂಬರಿಗಳಲ್ಲಿ ವ್ಯತಿರೀಕ್ತಗಳಿಗೆ ವೈಜ್ಞಾನಿಕವಾದ ಹಿನ್ನಲೆಯನ್ನು ನೀಡುವಂತೆ ಲೇಖಕರು ಬಹಳ ಜಾಣ್ಮೆಯಿಂದ ಅವಳು ಮಾನಸಿಕ ಯಾತನೆಗೆ ಸಿಲುಕಿದ್ದರೂ ಅದರಿಂದ ಹೊರಗೆ ಬರುವುದನ್ನು ಸುಂದರವಾಗಿ ನಿರೂಪಿಸಿದ್ದಾರೆ.

ಇದನ್ನು ಓದುತ್ತಾ ಓದುತ್ತಾ ನಮ್ಮನ್ನು ಹಠಾತ್ತನೆ ಅರವತ್ತು, ಎಪ್ಪತ್ತರ ದಶಕಕ್ಕೆ ಕೊಂಡೊಯ್ದು ನಿಲ್ಲಿಸುವ ಅಪರೂಪದ ಕಾದಂಬರಿಯೆಂದರೆ ತಪ್ಪಲ್ಲ. ಮಹಿಳಾ ಸಮಸ್ಯೆ ಮತ್ತು ಮಹಿಳಾ ಪ್ರಧಾನವೆನ್ನುವುದಕ್ಕಿಂತಲೂ ಒಂದು ಸಾಂಪ್ರದಾಯಿಕ ಹಿನ್ನಲೆಯಲ್ಲಿ ಮೂಡಿ ಬಂದಿರುವ ಸರಳವಾದ ಕೃತಿ ಇದು.

ಇತ್ತೀಚಿನ ಸಾಹಿತ್ಯ ವಲಯದಲ್ಲಿಯ ಹೆಚ್ಚಿನ ಕಾದಂಬರಿಗಳು ಗಂಭೀರವಾದ ವಿಷಯಗಳನ್ನೊಳಗೊಂಡು ವಾಸ್ತವತೆಗೆ ಒತ್ತು ಕೊಟ್ಟಿರುವುದನ್ನು ಗಮನಿಸಬಹುದಾದರೂ ‘ಹರಿಚಿತ್ತ ಸತ್ಯ’ ವಾಸ್ತವತೆಯಲ್ಲಿಯೆ ನವಿರಾದ ಸನ್ನಿವೇಶಗಳನ್ನು ಸೃಷ್ಟಿಸುತ್ತಾ ಬಹಳ ಆಪ್ತವಾಗುತ್ತದೆ. ಅದರಲ್ಲೂ ವಧುಪರೀಕ್ಷೆಯ ಘಟನೆಯನ್ನು ಹಾಸ್ಯಮಯವಾಗಿ ಚಿತ್ರಿಸುತ್ತಾ ಕೊನೆಗೆ ಪರೀಕ್ಷೆಗೊಡ್ಡುವವನನ್ನೆ ಓಡಿಸುವ ಜಾಣ ಹುಡುಗಿಯಾಗಿ ಪದ್ದಿ ಕಾಣಿಸಿಕೊಳ್ಳುತ್ತಾಳೆ. ಅವಳು ವರನನ್ನು ಬಿಳಿ ತಲೆಗೂದಲು ಇರುವವನೆಂದು ನಿರಾಕರಿಸುವುದು ಮಾತ್ರ ಕ್ಷುಲ್ಲಕವೆನಿಸುತ್ತದೆ.

ಅವಳು ನಿರಾಕರಿಸಿದ ಹುಡುಗ ರಾಘವೇಂದ್ರ, ಸುಧಾ ಅನ್ನುವ ಹುಡುಗಿಯೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಾನೆ. ಅವನ ಸಂಸಾರ ಸುಖಿ ಸಂಸಾರವಾದರೂ ಗಂಡು ಮಗುವಿನ ಅಭೀಪ್ಸೆಯಲ್ಲಿ ಹುಟ್ಟುವ ಕುರುಡು ಮಗುವಿನ ಚಿತ್ರಣ ಅಂತರಂಗವನ್ನು ಕಲಕುತ್ತದೆ. ಗಂಡು ಮಗುವಿಗಾಗಿ ಹಂಬಲಿಸುವ ಮನೆಯವರು, ಮಗು ಹುಟ್ಟು ಕುರುಡನಾದಾಗ ಅದರ ಬಗೆ ತಿರಸ್ಕಾರದ ಮಾತುಗಳನ್ನಾಡುವಾಗ ಸುಧಾ ಸಹಿಸದಾಗುತ್ತಾಳೆ. ಅವಳ ಮಾತುಗಳಲ್ಲಿ ಹೆತ್ತವಳಿಗೆ ಹೆಗ್ಗಣ ಮುದ್ದು ಅನ್ನುವುದಕ್ಕಿಂತಲೂ ಮಾನವೀಯತೆಯ ಮಮತೆ ಅಲ್ಲಿರುವುದು ಗೋಚರಿಸುತ್ತದೆ. ಇಂತಹುದೇ ಸನ್ನಿವೇಶವೊಂದು ಖ್ಯಾತ ಲೇಖಕ ಡಾ. ಬಾಳಾಸಾಹೇಬ ಲೋಕಾಪುರ ಅವರ ‘ಹುತ್ತ’ ಕಾದಂಬರಿಯನ್ನು ನೆನಪಿಸುತ್ತದೆ. ಆ ಕಾದಂಬರಿಯಲ್ಲಿ ಹೆಣ್ಣು ಜೀವವನ್ನು ಉಳಿಸುವ ಹೋರಾಟದಲ್ಲಿ ನವಜಾತ ಶಿಶು ಇರುವೆಗಳಿಗೆ ಆಹುತಿಯಾಗಿ ಕಣ್ಣು ಕಳೆದುಕೊಂಡಿರುತ್ತದೆ. ಅಂತಹುದೇ ಹುಟ್ಟು ಕುರುಡು ಮಗುವಿನ ಘಟನೆ ಇಲ್ಲಿ ಕಂಡರೂ ಆ ಮಗುವಿನ ಮುಗ್ಧತೆ ಮತ್ತು ಶೂನ್ಯತ್ವದಿಂದ ಪಡೆದ ದೈಹಿಕ ಶಕ್ತಿ, ಮುಂದೆ ಅದೇ ಮಗು ಸಂಭ್ರಮಿಸುತ್ತಾ ತಾನು ಕಾಣಲು ಸಾಧ್ಯವಿರದ ತೆಪ್ಪದಲ್ಲಿ ವಿಹರಿಸುತ್ತಾ ದುರ್ಘಟನೆಗೊಳಗಾದಾಗ ಸುಧಾಳಾಗಲಿ, ಅವಳ ಹೆಣ್ಣು ಮಗುವಾಗಲಿ ಅಥವಾ ಇನ್ನೊಬ್ಬ ಪ್ರಯಾಣಿಕರಾಗಲಿ ಅನುಕಂಪ ಹುಟ್ಟಿಸುವುದಿಲ್ಲ. ಅನುಕಂಪ ಹುಟ್ಟಿಸುವುದು ಏನೂ ತಿಳಿಯದ ಲೋಕದಲ್ಲಿದ್ದು ಲೋಕವನ್ನು ಕಾಣದಿರುವ ಕುರುಡು ಮಗು ಪ್ರಕಾಶ. ಈ ಘಟನೆ ಒಂದು ಕ್ಷಣ ಓದುಗನನ್ನು ಮೌನಕ್ಕೆ ತಳ್ಳುತ್ತದೆ. ಮತ್ತು ಈ ಅಂತ್ಯ ಬೇಕಿತ್ತೆ? ಅನಿಸುತ್ತದೆ.

ಕಾದಂಬರಿಯ ಕೊನೆಯಲ್ಲಿ ರಾಘವೇಂದ್ರನಿಗೆ ಎರಡನೆ ಸಂಬಂಧವಾಗಿ ಹೋಗುವ ಪದ್ದಿ ಅವನ ಜೊತೆಗೆ ಸಂಸಾರಕ್ಕಿಳಿಯುತ್ತಾಳೆ. ಹೀಗೆ ತಾನು ನಿರಾಕರಿಸಿದವನನ್ನೇ ಅನಿವಾರ್ಯವಾಗಿ ಮದುವೆಯಾಗಿ ಅವನ ನೋವುಗಳನ್ನು ಮರೆಸುವಲ್ಲಿ ಯಶಸ್ವಿಯಾಗುತ್ತಾ ಕಾದಂಬರಿ ಸುಖಾಂತದಲ್ಲಿ ಮುಗಿಯುತ್ತದೆ.

ಗಂಭೀರ ಚಿತ್ರಣಗಳಿಗಿಂತ ವಿಭಿನ್ನವಾದ ಕೃತಿ ಇದು. ಒಮ್ಮೆಯಾದರೂ ಇದನ್ನು ಓದಲೇಬೇಕು. ಈ ಪುಸ್ತಕವನ್ನು ವಸು ತಮ್ಮ ಛಂದ ಪುಸ್ತಕದ ಮೂಲಕ ಪ್ರಕಟಿಸಿದ್ದಾರೆ. ಮುಖ ಪುಟ ವಿನ್ಯಾಸ ರಘು ಅಪಾರ ಅವರದ್ದು ಮತ್ತು ಇದರ ಬೆಲೆ ರೂ. 95 ಮಾತ್ರ. ಪುಸ್ತಕಗಳಿಗಾಗಿ ಮೊ.ಸಂ. 98444 22782 ನ್ನು ಸಂಪರ್ಕಿಸಬಹುದು.

Read more!