Friday, April 13, 2012

ಹಚ್ಚಿಟ್ಟ ಹಣತೆಯ ಬೆಳಕಿನೆಡೆಗೆ


ಕವಿತೆಗಳಿಗೆ ಬಹಳ ದೊಡ್ಡದಾದ ಒಂದು ಕ್ಯಾನ್‌ವಸ್ ಇರುವುದರಿಂದ ಅವುಗಳನ್ನು ವಾಚಿಸುವಾಗ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯದಾದ ಅರ್ಥವನ್ನು ಕೊಡುತ್ತವೆ. ಒಂದು ಕವಿತೆಯನ್ನು ಆಯ್ದುಕೊಂಡರೆ ಅವುಗಳ ಒಳ ಹೂರಣ ಒಂದು ನೀಳ್ಗತೆಯೋ ಅಥವಾ
ಮಹಾನ್ ಕಾದಂಬರಿಯೋ ಆಗಬಲ್ಲುದು. ಹಾಗಾಗಿ ಕವಿತೆಗಳಿಗೆ ಚೌಕಟ್ಟನ್ನು ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವು ತೆರೆದಿಡುವ ಅರ್ಥವ್ಯಾಪ್ತಿ ವಿಸೃತವಾದದ್ದು. ಇವುಗಳ ಜೊತೆಗೆನೆ ಕವಿತೆ ಸ್ಫುರಿಸುವ ಮಾದುರ್ಯತೆ ಓದುಗನ ಮನದಾಳಕ್ಕೆ ಇಳಿದು ಅಲ್ಲಿಯೇ ರಿಂಗಣಿಸಿ ಇನ್ನಷ್ಟು ಭಾವಲೋಕಕ್ಕೊಯ್ಯುವ ಧೀಮಂತಿಕೆ ಕೂಡ ಕವಿತೆಗಳಿಗಿವೆ. ಹಾಗಾಗಿ ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಲಿ ಕರೆಯಿತು' ಕೆ. ಎಸ್. ನರಸಿಂಹಸ್ವಾಮಿ ಅವರ `ಸಿರಿಗೆರೆಯ ನೀರಿನಲಿ ಅರಳು ತಾವರೆಯಲಿ' ಎಚ್. ಎಸ್. ಶಿವಪ್ರಕಾಶರ `ನನ್ನ ಚಲ್ಲಾಟದ ಮಲ್ಲಿಗೆ ತೋಟದ ಹಕ್ಕಿ ಈ ನಿಮಿಷಕೆ ಹಾರಿ ಬಂತು' ಕವಿತೆಗಳಾಗಲಿ, ಕುವೆಂಪುರವರ ಕವಿತೆಗಳಾಗಲಿ ಇಂದಿಗೂ ಕೂಡ ನಮಗೆ ಶ್ರೇಷ್ಠವೆನಿಸುತ್ತವೆ. ಈ ಕವಿತೆಗಳ ಮರು ಓದು ಮತ್ತು ಹೊಸ ಪೀಳಿಗೆಯ ಓದು ಮುಖ್ಯವಾಗುತ್ತಲೇ ಅವುಗಳಲ್ಲಿಯೂ ನವ್ಯೋತ್ತರದ ಕವಿತೆಗಳು ಹುಟ್ಟು ಹಾಕುವ ಬೆರಗು ಪ್ರಸ್ತುತ ಮುಖ್ಯವೆನಿಸುತ್ತದೆ. ಅಂತಹ ಹೊಸ ಪೀಳಿಗೆಯ ಕವಿತೆಗಳಲ್ಲಿ ಧನಂಜಯ ಕುಂಬ್ಳೆ ಅವರ `ಹಣತೆ ಹಾಡು' ಕೂಡ ಗುರುತಿಸಿಕೊಳ್ಳುತ್ತದೆ.

ಧನಂಜಯ ಕುಂಬ್ಳೆಯವರ ಈ ಕವನ ಸಂಕಲನ ಎರಡು ರೀತಿಯಲ್ಲಿ ಬಹಳ ಮುಖ್ಯವೆನಿಸುತ್ತದೆ. ಒಂದು ೨೦೧೧ ರ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಅನ್ನುವುದಕ್ಕೆ, ಮತ್ತೊಂದು ಇದು ಗಡಿನಾಡಿನ ಕನ್ನಡಿಗನೊಬ್ಬನ ಕವಿತೆಗಳೆನ್ನುವುದಕ್ಕೆ. ಅದಲ್ಲದೆ `ಹಣತೆ ಹಾಡು' ನವಿರಾದ ಕಾವ್ಯಗಳ ಗುಚ್ಛ ಮತ್ತು ಕೆಎಸ್‌ಎನ್ ಅವರ ಕವನಗಳನ್ನು ನೆನಪಿಸುವ ಪ್ರೇಮಕಾವ್ಯದಿಂದ ಹಿಡಿದು ದೇಶಪ್ರೇಮವನ್ನು ಸೂಸುವ ಕವನಗಳವರೆಗೂ ಇವು ಕಂಪ ಬೀರುತ್ತವೆ.

ಪ್ರೀತಿ, ಪ್ರೇಮ ಭಾಷ್ಯೆಗಳಿಗೆ ಹೇಗೆ ಅಂತ್ಯವೆನ್ನುವುದಿಲ್ಲವೋ ಹಾಗೆಯೇ ಕಾವ್ಯದ ಪರಿಭಾಷೆಯಲ್ಲಿ ಬಳೆಕೆಯಾಗುವ ಕೊಳಲು, ಗಿರಿಕಂದರದಂತಹ ಪದಗಳು ಮತ್ತೆ ಮತ್ತೆ ಉದಯಿಸಿ ಜೀವನ್ಮುಖಿ ಉಲ್ಲಾಸವನ್ನ ಪ್ರಸ್ತುತಪಡಿಸುವುದರಿಂದ ಇಲ್ಲಿಯ ನಾಲ್ಕು ಕವಿತೆಗಳಲ್ಲಿ ಬರುವ ಕೊಳಲು, ಒಂದೊಂದು ಕವಿತೆಯಲ್ಲೂ ಬೇರೆಯದೇ ಆದ ಮಾದುರ್ಯತೆಯನ್ನು ಹೊರಡಿಸುತ್ತದೆ. ಕನ್ನಡದ ಕಾವ್ಯ ಪದಗಳಿಗೆ `ಔಟ್ ಡೇಟೆಡ್' ಅನ್ನುವಂತದ್ದು ಇಲ್ಲ. ಇದು ಗದ್ಯ ಪ್ರಕಾರದಲ್ಲಿ ಬಳಸಬಹುದಾದ ಪದವಾದರೂ ಕಾವ್ಯದಲ್ಲಿ ಎಷ್ಟು ಕವಿಗಳು ಬರೆದರೂ ಬತ್ತದ ಚಿಲುಮೆಯ ಪದಗಳೇ ಪ್ರೀತಿ, ಪ್ರೇಮ, ಕೊಳಲು, ಕೊರಳು... ಇವು ಸವಕಲಾಗಿ ಕಾಣುವುದು ಪ್ರೀತಿ ಕಳೆದುಕೊಂಡ ಮನಸ್ಸುಗಳಲ್ಲಿ ಮಾತ್ರ! ಹಾಗಾಗಿ ಮೈಸೂರು ಮಲ್ಲಿಗೆಯ ಕವಿತೆಗಳಲ್ಲಿ ಕಂಪಿರುವಂತೆ ಹಣತೆಯಲ್ಲಿ ಆರಲಾರದ ಬೆಳಕು ಪಸರಿಸಿರುವುದನ್ನು ಕಾಣಬಹುದು.

ಈ ಸಂಕಲನದ ಎಲ್ಲಾ ಕವಿತೆಗಳು ಗುನುಗುನಿಸುವಂತಿದೆ. ಭಾವದೀಪ್ತಿಯ ಈ ಕವಿತೆಗಳೆಲ್ಲವೂ ಗಾಯನವಾಗಿಯೂ ಮಾಧುರ್ಯ ತುಂಬಬಲ್ಲವು. ಹಾಗಾಗಿ ಇಲ್ಲಿ ಬರುವ ಕೊಳಲು ಕವಿತೆಯ `ಚೈತನ್ಯ ತುಂಬಿದ ಕೊಳಲು'; ಮೊನಾಲಿಸಾದ `ಡಾವೆನ್ಸಿ ಕುಂಚದ ಎಳೆಯ ಜೀವ ತಂತು'; ದಿವ್ಯಾರ್ಪಣೆಯ `ಬಳುಕು ಸೊಗಸಿನ ತಂಪು ಗಾಳಿಯಲಿ'; ಜೀವಚೀಲದ ಬೇರು ಕವಿತೆಯ `ಮೊಗ್ಗು ಚಿಗುರಾಗಿ ಎಲೆ ಹಸುರಾಗಿ'; ಒಂಟಿ ಮನಸು ಅರಳುವ ಸಮಯದ `ಸುರಿವ ಪರಿಮಳಕೆ ಮುಖವೊಡ್ಡಿ ನಿಂತಾಗ'; ಶಿಲ್ಪದ `ತನ್ಮತೆಯ ಪೆಟ್ಟಿಗುದುರುವ ಶಬ್ದಕ್ಕೂ ಅರ್ಥವಿದೆ ಲಯವಿದೆ ಪ್ರಾಸವಿದೆ'; `ಕಾಡಿದ ಕೊಳಲು'ವಿನ `ಅರಳಿದ ಹೂಗಳ ಮಡಿಲಲಿ ಕುಳಿತು ಕಂಪಿನ ನೀರನು'; `ಕನಸ ಹಕ್ಕಿಗಳು ಹಾಡುತಿವೆ'ಯ `ಜೇನನು ಹೀರಲು ಹಾರುವ ದುಂಬಿ ಹೂವಿನ ಕರೆಗೆ'; `ಸ್ಪಂದನ'ದ `ಕರೆಯ ಕಂಪಿನಲಿ ಕರಗಿ ನೀನಾಗಬಲ್ಲೆ'; `ಹಣತೆಯ ಹಾಡು'ವಿನ `ಹೃದಯ ಹೃದಯಗಳ ತಳದಲ್ಲಿ ಕನಸಿಹುದು' ಈ ಕವಿತೆಗಳಲ್ಲಾ ತೆರೆದಿಡುವಂತಹುದು ಜೀವನ್ಮುಖಿಯ ಆಶಯಗಳನ್ನ, ಪ್ರೀತಿ ಪ್ರೇಮಗಳನ್ನ. ಇವೆಲ್ಲವೂ ಪಲುಕು ಪಲುಕು ಒಲವನ್ನ ಮಿಡಿಯುವಂತದ್ದು. ಬದುಕು ಇಲ್ಲವೆಂದುಕೊಂಡು ನೆನಪು ಕಾಡುವಾಗ ತ್ಯಾಗದ ಬೆಲೆ ಅರಿತು ಮನಸ್ಸು ಮಿಡಿದು ಅರ್ಪಣೆಯ ಭಾವವನ್ನುದಯಿಸುವ `ಪ್ರತಿಧ್ವನಿ' ತನ್ನ ತಾನು ಸುರುಟಿಕೊಳ್ಳುತ್ತಾ ಬದುಕನ್ನೂ ಸುರುಟಿಕೊಳ್ಳುವ ಸ್ವಾಭಿಮಾನದ `ಬೀಡಿ ಕಟ್ಟುವ ಹುಡುಗಿಗೆ' ಯಾರಿಗೂ ಬೇಡವಾದ ಅಬ್ಬಲಿಗೆ ಅಮೂರ್ತತೆಯ ವಿಷಬಟ್ಟಲು, ಗೊತ್ತಿದ್ದು ಗೊತ್ತಿಲ್ಲದೆ ಮಾಡಿದ `ಮೊದಲ ಪಾಪ' ನಿಶ್ಯಬ್ದದ ರೌದ್ರತೆಯ ನಡುವೆಯೂ, ದೇಶಭಿಮಾನದ ಕಾರ್ಗಿಲ್ ಗೆಳೆಯನಿಗೆ...
`ಹೇ ಗೆಳೆಯ ನಿನಗಿದೋ ನಮ್ಮ ಹೂವ ತೊಡುಗೆ
ಹೂಗಳಿಗೆ ಪರಿಮಳ ಅದು ನಿನ್ನ ಕೊಡುಗೆ'
ಹೀಗೆ ಇಲ್ಲಿಯ ಎಲ್ಲಾ ಕವನಗಳಲ್ಲಿಯೂ ಒಂದು ಆಸೆ, ಅದಕ್ಕೆ ವ್ಯತಿರೀಕ್ತವಾಗಿ ನಿರಾಸೆ ಮತ್ತೆ ನಿರಾಸೆಯನ್ನು ಮೆಟ್ಟಿ ನಿಲ್ಲುವ ಮತ್ತೊಂದು ಆಶಾಭಾವನೆಯಿರುವುದು ಕವಿಯ ಕನಸುಗಳು.

`ಗೊತ್ತೇನ್ರಿ ನಿಮಗ' ಕವಿತೆಯ ರಾಜನ ಮುಗ್ಧತೆ `ನಾನು' ಕವಿತೆಯ `ಧನು'ವಿನ ಮುಗ್ಧತೆ ಕಾವ್ಯದೋದುಗನ ತುಟಿಯನ್ನು ಬಿರಿಯುವ ಕವಿತೆಗಳು. ಹಾಗಾಗಿ ಈ ಸಂಕಲನದ ಕವಿತೆಗಳಲ್ಲಿ ನವರಸಗಳು ತುಂಬಿರುವುದರಿಂದಲೇ ಒಂದು ಸುಂದರವಾದ ಕಾವ್ಯಾನಂದವನ್ನು ಇವು ಹರಿಯಬಿಡುತ್ತವೆ.
ಇದು ಧನಂಜಯ ಕುಂಬ್ಳೆಯವರ ಮೂರನೆಯ ಕವನ ಸಂಕಲನವೂ ಹೌದು. ವೈದೇಹಿಯವರ ಮುನ್ನುಡಿಯಿರುವ ಈ ಕವನಸಂಕಲನ ಓದುಗರ ಪ್ರೀತಿಯನ್ನು ಗಳಿಸುವುದರಲ್ಲಿ ಎರಡು ಮಾತಿಲ್ಲ.

No comments: