Saturday, May 22, 2010
ಸಾಮಾಜಿಕ ಸ್ಥಿತ್ಯಂತರಗಳ - ಅನಿಕೇತನ
‘ಅನಿಕೇತನ’ ಬಿ. ಜನಾರ್ಧನ ಭಟ್ ಅವರ ಮೂರನೆಯ ಕಾದಂಬರಿ. ‘ಉತ್ತರಾಧಿಕಾರ’ ಮತ್ತು ‘ಹಸ್ತಾಂತರ’ ಕಾದಂಬರಿಗಳಂತೆ ‘ಅನಿಕೇತನ’ ಕಾದಂಬರಿಯ ಘಟನೆಗಳು ನಡೆಯುವುದು ನಡುಕಣಿ ಅನ್ನುವ ಗ್ರಾಮವೊಂದರಲ್ಲಿ. ಹಿಂದಿನ ಎರಡು ಕಾದಂಬರಿಗಳಂತೆ ಇದು ಕೂಡ ಸಮಾಜವೊಂದರ ಸ್ಥಳಾಂತರ ಮತ್ತು ಆ ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಪಲ್ಲಟವನ್ನು ದಾಖಲಿಸುತ್ತದೆ. ಸಂಸ್ಕೃತಿಯ ನಾಶವನ್ನು ಪರಿಸರ ನಾಶದ ಮೂಲಕ ಪ್ರತಿಬಿಂಬಿಸುತ್ತಾ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಕೃತಿಕ ವಿನಾಶವನ್ನು ಸೂಕ್ಷಮವಾಗಿ ತೆರೆದಿಡುತ್ತಾ ನಡುಕಣಿ ಗ್ರಾಮ ನೆಹರೂನಗರವಾಗಿ ಪರಿವರ್ತಿತವಾಗುವುದನ್ನು ತೋರಿಸುತ್ತದೆ.
ಉತ್ತರಾಧಿಕಾರದಂತೆ ಇಲ್ಲಿಯೂ ಮೂರು ತಲೆಮಾರುಗಳಲ್ಲಿ ನಡೆಯುವ ಘಟನೆಗಳನ್ನು ನಮ್ಮ ಮುಂದೆ ಸುಬ್ರಾಯ ಸರಳಾಯರು, ಮಧುಸೂದನ ಸರಳಾಯರು ಮತ್ತು ಕೇಶವ ಪಾತ್ರಗಳ ಮೂಲಕ ಪ್ರತಿಬಿಂಬಿಸುತ್ತದೆ ಈ ಅನಿಕೇತನ.
ಪಟ್ಟಣದಲ್ಲಿದ್ದು ಹೊಟೇಲು ನಡೆಸುವ ಉದ್ದೇಶದಿಂದ ಹಳ್ಳಿಗೆ ಬರುವ ಮಧುಸೂದನ ಸರಳಾಯರ ಸಂಸಾರಕ್ಕೆ ಬಂಧನದ ಅನುಭವವಾಗುತ್ತದೆ. ಹಿರಿಯ ಮಗ ಕೇಶವನಿಗೆ ತನ್ನ ಓದಿನ ಜೊತೆಗೆ ಜವಾಬ್ದಾರಿಗಳ ಹೊರೆಯೂ ಇರುತ್ತದೆ. ಆದರೂ ಅಲ್ಲಿಯ ಪರಿಸ್ಥಿತಿಗೆ ಒಗ್ಗಿಕೊಂಡು ಪಲಾಯನ ಮಾಡದೆ ಪ್ರತಿಯೊಂದು ತೊಂದರೆಗಳನ್ನು ಎದುರಿಸುತ್ತಾ ಸಾಗುತ್ತದೆ ಮಧು ಭಟ್ಟರ ಸಂಸಾರದ ರಥ.
ಊರಿನಲ್ಲಿ ವ್ಯವಹಾರಗಳ ನಡುವೆ ಬಲಾಬಲಗಳ ಪ್ರಯೋಗ ಸೇರಿ, ರಾಘವ ಸೇನರು ಮಾರ್ಮಾರ್ ದಣಿಗಳ ಎದುರಾಳಿಯಾಗಬೇಕಾಗುತ್ತದೆ. ಕ್ಷುಲ್ಲಕ ವಿಷಯಗಳಿಗೆ ಈಡಾಗಿ ಎರಡು ಗುಂಪುಗಳು ಹುಟ್ಟಿಕೊಂಡು ವಿನಾಶದ ದಾರಿಗೆ ನಾಂದಿಯಾಗುವುದನ್ನು ತಿಳಿಸುವ ಈ ಕಾದಂಬರಿಯಲ್ಲಿ ನಡೆಯುವ ವಿದ್ಯಮಾನಗಳೆಲ್ಲಾ ಅರವತ್ತು ಎಪ್ಪತ್ತರ ದಶಕದಲ್ಲಿ ನಡೆಯುವಂತದ್ದೆನ್ನುವುದನ್ನು ಗಮದಲ್ಲಿರಿಸಿಕೊಳ್ಳಬೇಕಾಗುತ್ತದೆ. ಮಧ್ಯೆ ಎಲ್ಲೋ ಹಠಾತ್ತನೆ ಇತ್ತೀಚಿನ ಘಟನೆಗಳನ್ನು ಕಾದಂಬರಿ ಒಳಗೊಂಡಂತೆ ಕಂಡರೂ, ಅವು ಆಗಿನ ಕಾಲದಲ್ಲಿಯೂ ಇದ್ದವುಗಳೇ ಈಗಲೂ ಮುಂದುವರಿಯುತ್ತಿವೆ ಅನ್ನುವುದು ಸತ್ಯವೆನಿಸುತ್ತದೆ.
ಕಾದಂಬರಿ ಆರಂಭವಾಗುವುದು ಕೇಶವ ಹದಿನೈದು ವರ್ಷಗಳ ಬಳಿಕ ತನ್ನ ಊರಾದ ನಡುಕಣಿಗೆ ಬರುವಲ್ಲಿಂದ. ಅಲ್ಲಿಯ ಬದಲಾವಣೆಗಳು ಅವನನ್ನೇ ಗೊಂದಲಕ್ಕೆ ಸಿಲುಕಿಸಿ, ಧುತ್ತನೆ ಫ್ಲ್ಯಾಶ್ ಬ್ಯಾಕಿಗೆ ಓದುಗನನ್ನು ಕೊಂಡೊಯ್ಯುತ್ತದೆ. ಅದೇ ಸನ್ನಿವೇಶ, ಕಥನಕ ಸ್ವಲ್ಪ ವಿಭಿನ್ನವಾಗಿ ಘಟಿಸುತ್ತಾ ಆಗಿನ ಆಗು ಹೋಗುಗಳನ್ನು ತಿಳಿಸುತ್ತದೆ ಇಲ್ಲಿನ ಕಥಾ ವಸ್ತು.
ಫ್ಲ್ಯಾಶ್ ಬ್ಯಾಕ್‌ನಲ್ಲಿ ಮಧುಸೂದನ ಭಟ್ಟರು ತನ್ನ ತಂದೆ ಸುಬ್ರಾಯ ಭಟ್ಟರು ಅರ್ಚಕರಾಗಿ ಸೇವೆಸಲ್ಲಿಸುತ್ತಿದ್ದ ಮಹಾಲಿಂಗೇಶ್ವರ ದೇವಸ್ಥಾನವಿದ್ದ ನಡುಕಣಿಗೆ ಬಂದರೂ ಅಲ್ಲಿ ನೆಲೆನಿಲ್ಲುವುದಕ್ಕೂ ತಾತ್ವಾರ ಪಡಬೇಕಾಗುತ್ತದೆ. ಸರಳ, ಮುಗ್ಧತೆಯ ಸ್ವಭಾವದ ಅವರಿಗೆ ಮುಕುಂದ ಭಟ್ಟರಿಗೆ ವಿರುದ್ಧವಾಗಿ ತಾನು ಹೊಟೇಲು ಆರಂಭಿಸುತ್ತಿದ್ದೇನೆ ಅನ್ನುವ ಅಳುಕಿದ್ದರೂ ಬದುಕಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಅದನ್ನು ಮಾರ್ಮಾರ್ ದಣಿಗಳ ಕಟ್ಟಡದಲ್ಲಿ ಆರಂಭಿಸುತ್ತಾರೆ. ಎಲ್ಲವೂ ಕಾಲಘಟ್ಟದಲ್ಲಿ ಲೀನವಾದಾಗ ನಿರೀಕ್ಷಿಸಿದಷ್ಟನ್ನು ಪಡೆಯಲಾಗದಿದ್ದರೂ ಬದುಕುವುದಕ್ಕೆ ಅಸಾಧ್ಯವೆನಿಸುವುದಿಲ್ಲ. ಮಣ್ಣು, ಮಣ್ಣಿನ ಸಂಸ್ಕೃತಿಯನ್ನು ನಿಚ್ಚಳವಾಗಿ ಚಿತ್ರಿಸುತ್ತಾ, ಒಟ್ಟಾರೆ ಆ ಸುಂದರ ಪರಿಸರದ ಅಧ:ಪತನವನ್ನು ದಾಖಲಿಸುತ್ತದೆ ಈ ಕಾದಂಬರಿ.
ಕಾದಂಬರಿಗೆ ಜೀವಾಳವಾಗುವ ಇನ್ನೊಂದು ಬಹುಮುಖ್ಯ ಪಾತ್ರ ಗೂರಲ ಗೋಪಾಲ ದಾಸರು. ತಮ್ಮಷ್ಟಕ್ಕೆ ತಾವಿದ್ದುಕೊಂಡು ಜನರಲ್ಲಿ ಭಕ್ತಿ ಭಾವನೆಯನ್ನು ಮೂಡಿಸುವವರು, ಇದ್ದಕ್ಕಿದ್ದಂತೆ ಊರು ತೊರೆದು ಹೋದರೂ ಮರಳಿ ಬರುವ ಅವರಿಗೆ ಒಂದು ಸಣ್ಣ ಶಾಕ್ ಅನ್ನು ಕೂಡ ತಡೆದುಕೊಳ್ಳುವ ಶಕ್ತಿಯಿರುವುದಿಲ್ಲ. ಇಲ್ಲಿ ಅವರ ಅಂತ್ಯ ಅನ್ನುವುದು ಊರಿನ ಅಂತ್ಯವೆನ್ನುವುದರ ಪರಿಕಲ್ಪನೆಯಿರುವುದು ಕಾದಂಬರಿಯ ಪ್ಲಸ್ ಪಾಯಿಂಟ್.
ಶಂಕರರಾಯರು, ದೊಡ್ಡು ನಾಯಕರು, ವೆಂಕಟ್ರಮಣ ಭಟ್ಟರು, ವಸಂತ, ಪೂವಯ್ಯ ಹೀಗೆ ಬೇರೆ ಬೇರೆ ಪಾತ್ರಗಳು ಕಾದಂಬರಿಯ ಬೆಳವಣಿಗೆಗೆ ಪೂರಕವಾಗಿ ನಿಂತಿವೆ. ದೊಡ್ಡು ನಾಯಕರ ಹಿನ್ನಲೆ, ವೆಂಕಟ್ರಮಣ ಭಟ್ಟರ ದಾರ್ಪಿಷ್ಟತೆ, ಮಾರ್ಮಾರ್ ದಣಿಗಳ ಅಹಂ, ರಾಘವ ಸೇನರ ಉದ್ದಟತನ ದ್ವೇಷದ ಕಿಡಿಯನ್ನು ಹೊತ್ತಿಸುತಾ, ಧಗಿಸುತ್ತಾ, ತಣ್ಣಗಾಗುತ್ತಾ ಸಾಗುವಾಗಲೇ, ಇನ್ನೊಂದು ಏನೋ ವ್ಯತಿರೀಕ್ತ ನಡೆದು ಆ ಪಾತ್ರಗಳೇ ಸೋಲನ್ನನುಭವಿಸಿ, ಶಾಂತವಾಗುತ್ತಾ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ತೆಪ್ಪಗಿದ್ದು ಬಿಡುತ್ತವೆ.
ಕಾದಂಬರಿಯ ಇನ್ನೊಂದು ಮುಖ್ಯ ಆಕರ್ಷಣೆ ಕಥೆಯ ಆರಂಭ. 1975 ರ ರಾಕ್ಷಸ ನಾಮ ಸಂವತ್ಸರ ಫಲದಲ್ಲಿ ಘಟಿಸಬಹುದಾದ ಸಂಭಾವ್ಯಗಳನ್ನು ಕಾದಂಬರಿಯಲ್ಲಿ ವ್ಯಕ್ತಪಡಿಸಿರುವ ರೀತಿ ನವ್ಯತರದ್ದು.
ಈ ಕಾದಂಬರಿಯ ಮುಖ್ಯ ಕಥಾವಸ್ತು ಸಮಾಜವೊಂದರ ಸ್ಥಳಾಂತರ ಮತ್ತು ಸಂಸ್ಕೃತಿಯ ಪಲ್ಲಟವನ್ನು ಪ್ರತಿಬಿಂಬಿಸುವುದಲ್ಲದೆ ಕನ್ನಡಕ್ಕೆ ಹೊಸತೆನ್ನುವ, ಒಂದೇ ಪ್ರದೇಶದಲ್ಲಿ ನಡೆಯುವ ಘಟನೆಗಳನ್ನು ಮೂರು ಕಾದಂಬರಿಗಳಲ್ಲಿ ಬಳಸಿಕೊಂಡಿರುವ ರೀತಿ. ಮೂರನೆಯ ಕಾದಂಬರಿ ‘ಅನಿಕೇತನ’ದ ಹಿಂದಿನ ಭಾಗಗಳಲ್ಲದಿದ್ದರೂ ಈ ಹಿಂದೆ ಪ್ರಕಟವಾದ ‘ಉತ್ತರಾಧಿಕಾರ’ ಮತ್ತು ‘ಹಸ್ತಾಂತರ’ದ ಒಂದು ಭಾಗದಂತೆ ಈ ‘ಅನಿಕೇತನ’ ಕಂಡರೂ, ಮೊದಲ ಎರಡು ಕಾದಂಬರಿಗಳನ್ನು ಓದದೆಯೇ ಇದನ್ನು ಓದಬಹುದು. ಈ ತ್ರಿವಳಿಗಳು ಒಂದು ಕಾಲಘಟ್ಟದ ಅದ್ಭುತ ಚಿತ್ರಣಗಳೆಂದರೆ ತಪ್ಪಲ್ಲ.
ಈ ಕಾದಂಬರಿಯನ್ನು ಸ್ವಂತ ಪ್ರಕಾಶನ, ಅಕ್ಷರ, ದೇವಸ್ಥಾನ ರಸ್ತೆ, ಬೆಳ್ಮಣ್ಣು - 576 111 ಇವರು ಪ್ರಕಟಿಸಿದ್ದು, ಬೆಲೆ ರೂ.90 ಮಾತ್ರ.
Read more!
Subscribe to:
Posts (Atom)