Friday, November 27, 2009

ಶಾಪ


3 ದಿನಗಳಿಂದಲೂ ಒಂದೇ ತೆರನಾಗಿ ಬೀಳುವ ಮಳೆಯನ್ನೂ ಲೆಕ್ಕಿಸದೆ ಜಾನಕಿ ಕೊರಂಬು ತಲೆಗೇರಿಸಿ, ಮೊಣಗಂಟಿನವರೆಗೂ ಸೀರೆಯನ್ನು ಮೇಲಕ್ಕೆತ್ತಿ, ಲೋಟ ಹಿಡಿದ ಕೈಗಳನ್ನು ಚಳಿಗೆ ಎದೆಯ ಒಳಗಿರಿಸಿಕೊಂಡು ವೆಂಕಟ ಭಟ್ಟರ ಜಾರುವ ಅಂಗಳಕ್ಕೆ ಕಾಲಿಟ್ಟಾಗ ಮುಸ್ಸಂಜೆಯ ಹೊತ್ತು ಹಲಸಿನ ಹಪ್ಪಳ ಮೆಲ್ಲುತ್ತಿದ್ದ ಭಟ್ಟರಿಗೆ ಆಶ್ಚರ್ಯವಾಯಿತು. ತಮ್ಮ ಪಕ್ಕದಲ್ಲಿಯೆ ಕುಳಿತು ಕರಿದ ತೆಳುವಾದ ಹಪ್ಪಳಗಳನ್ನು ಆರಿಸುತ್ತಿದ್ದ ಮಗನಿಗೆ ಹೇಳಿದರು.
"ಮಾಣಿ, ಹೋಗು ಆ ಕೆಳಗಿನ ಮನೆಯ ಹೆಂಗಸು ಬಂದಿದೆ. ಚಳಿಗೆ ನಡುಗುತ್ತಾ ನಿಂತಿದೆ. ಅದಕ್ಕೆ ಕೇಳಿ ತೆಗೆದುಕೊಳ್ಳುವುದಕ್ಕೆ ಹೊತ್ತು ಗೊತ್ತು ಇಲ್ಲ. ಬಾಗಿಲು ತೆಗಿ" ಭಟ್ಟರ ಮಗ ರಮಣ ಆರಿಸಿದ ಹಪ್ಪಳವನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಮಳೆಗೆ ಗಚ್ಚನೆ ಮುಚ್ಚಿದ ಬಾಗಿಲಿನ ಚಿಲಕ ತೆಗೆದು ಎಳೆದ.


ಚಳಿಗೆ ನಡುಗುತ್ತಿದ್ದ ಹೆಂಗಸು, " ಮಾಣಿ, ಅಮ್ಮ ಮನೆಯಲ್ಲಿ ಇಲ್ವಾ?" ಅಂದಾಗ ರಮಣ, "ಇದ್ದಾರೆ" ಅನ್ನುತ್ತಾ ಇಡೀ ಹಪ್ಪಳಕ್ಕೆ ಬಾಯಿ ಹಚ್ಚಿದ.
ಒಳಗೆ ಬಂದು ಗೋಡೆಗೆ ಒರೆಸಿಕೊಂಡಂತೆ ಕುಕ್ಕರುಗಾಲಿನಲ್ಲಿ ಕುಳಿತ ಹೆಂಗಸು, ಹಪ್ಪಳ ಕರಿದ ತೆಂಗಿನೆಣ್ಣೆಯ ಪರಿಮಳ ಮೂಗಿಗೆ ನಾಟುತ್ತಲೇ, ಅಡುಗೆ ಮನೆಯತ್ತ ಮುಖ ಹೊರಳಿಸಿತು.
"ಏನು ಜಾನಕಮ್ಮ, ಈ ಹೊತ್ತಿನಲ್ಲಿ? ಮಳೆಗೆ ತಲೆ ಹೊರಗೆ ಹಾಕುವುದು ಬೇಡ ಅನ್ನುವಷ್ಟು ಬೇಜಾರು. ಮೈ, ಕೈಯೆಲ್ಲಾ ಒದ್ದೆ ಮಾಡಿಕೊಂಡು ಬಂದಿದ್ದೀರಲ್ಲಾ, ಏನು ಕಥೆ?" ಹಪ್ಪಳದ ತಟ್ಟೆಯನ್ನು ಮಗನ ಕಡೆಗೆ ನೂಕಿ ಕುಳಿತಿದ್ದ ಹೆಂಗಸನ್ನು ಕೇಳಿದರು ಭಟ್ಟರು.
"ಭಟ್ರೆ, ಒಲೆ ಉರಿಸೋದೆ ಕಷ್ಟ ಆಗಿದೆ. ಒಟ್ಟು ಮಾಡಿಟ್ಟ ಕಟ್ಟಿಗೆಗೆ ಪಸೆ ಬಂದಿದೆ. ಗಂಜಿಯೇನೋ ಬೇಯಿಸಿ ಬಂದೆ. ಪದಾರ್ಥ ಮಾಡೋದಿಕ್ಕೆ ಸಾಧ್ಯವಿಲ್ಲ. ಸ್ವಲ್ಪ ಮಜ್ಜಿಗೆ ಇದ್ದಿದ್ರೆ ಚೆನ್ನಾಗಿರ್ತಿತ್ತು"
ಭಟ್ಟರಿಗೂ ಹೆಂಗಸಿನ ಮೇಲೆ ಕನಿಕರ ಬಂತು. ತಮ್ಮ ಮಡದಿ ವನಜಾಕ್ಷಿಯನ್ನು ಕರೆದರು."
"ಇಕಳ್ಳೇ... ಅವರಿಗೆ ಮಜ್ಜಿಗೆ ಬೇಕಂತೆ, ಕೊಡು"
ಅಡುಗೆ ಮನೆಯಲ್ಲಿ ಎಣ್ಣೆಯ ಬಾಣಲೆಯನ್ನು ಒಲೆಯಿಂದ ಕೆಳಗಿರಿಸಿ, ತೂಗು ಬಲೆಯಿಂದ ಮಜ್ಜಿಗೆಯ ಪಾತ್ರೆ ತೆಗೆದು, ಲೋಟಕ್ಕೆ ಸುರುವಿ, ಒಂದು ಹಸಿ ಮೆಣಸಿನ ಕಾಯಿಯನ್ನು ಅದಕ್ಕೆ ಹಾಕಿ ಹೊರಗೆ ಬಂದ ವನಜಾಕ್ಷಿ, ಜೊತೆಗೆ ಒಂದು ಕರಿದ ಹಪ್ಪಳವನ್ನು ಜಾನಕಿಯ ಕೈಯಲ್ಲಿಟ್ಟು ಅವರ ಲೋಟಕ್ಕೆ ಮಜ್ಜಿಗೆಯನ್ನು ಸುರಿದರು. ಹಪ್ಪಳವನ್ನು ಮುರಿದ ಹೆಂಗಸು, "ಅಕ್ಕೋರೆ, ಏನಾದರೂ ವಿಶೇಷ ಉಂಟಾ?" ಅಂದಾಗ ವನಜಾಕ್ಷಿಗೆ ನಗು ಬಂತು.
"ಮಳೆಗಾಲದಲ್ಲಿ ಏನು ವಿಶೇಷ ಜಾನಕಮ್ಮ?"
"ಅಲ್ಲ, ನಾನು ಅದು ಕೇಳಿದಲ್ಲ"
"ಮತ್ತೆಂತ ವಿಶೇಷ? ಮದುವೆಯಾಗಿ ಹತ್ತು ವರ್ಷವಾಯಿತು. ಮಗನಿಗೆ ಎಂಟು ವರ್ಷವಾಯಿತು. ಇನ್ನೆಂತಹ ವಿಶೇಷ?" ನಕ್ಕು ನುಡಿದ ವನಜಾಕ್ಷಿ0ು ಮಾತಿನಲ್ಲಿ ನೋವಿನ ಎಳೆಯಿರುವುದನ್ನು ಗುರುತಿಸಿದ ಹೆಂಗಸು, "ಏನೇ ಹೇಳಿ... ನಾಲ್ಕೈದು ಹೆಣ್ಣು ಮಕ್ಕಳು ಓಡಾಡಿಕೊಂಡಿದ್ದ ಮನೆ ಇದು. ನಿಮಗೂ ಒಂದು ಹೆಣ್ಣು ಸಂತಾನ ಇದ್ದಿದ್ರೆ ಚೆನ್ನಾಗಿರ್ತಿತ್ತು" ಅಂದಾಗ ಅವರ ಮುಖ ಸಂಪೂರ್ಣ ಬಾಡಿದಂತಾಯಿತು.
ವೆಂಕಟ ಭಟ್ಟರಿಗೆ ಹೆಂಗಸಿನ ಮಾತು ಕೇಳಿ, " ಈ ಹೆಂಗಸಿನ ಬುದ್ಧಿಯೆ ಇಷ್ಟಾ?" ಅಂದುಕೊಂಡರು.
ವನಜಾಕ್ಷಿಯ ನೋವಿಗೆ ಒಂದಷ್ಟು ತುಪ್ಪ ಸುರಿದು, ಕೊರಂಬು ಹಿಡಿದು ನಡು ಬಾಗಿಸುತ್ತಾ ಅಂಗಳಕ್ಕೆ ಕಾಲಿಟ್ಟಿತು ಹೆಂಗಸು. ವನಜಾಕ್ಷಿ ಬಾಗಿಲು ಸರಿಸಿ, ಚಿಲಕ ಸೇರಿಸಿ ಹಿಂತಿರುಗಿದರು.
"ಅಲ್ವೇ, ಆ ಹೆಂಗಸಿಗೆಂತ ಅಧಿಕ ಪ್ರಸಂಗ? ನಮ್ಮ ಮನೆಯ ವಿಚಾರಕ್ಕೆ ಮೂಗು ತೂರಿಸೋದಕ್ಕೆ ಅದಕ್ಕೇನಿದೆ ಹಕ್ಕು?"
ವೆಂಕಟ ಭಟ್ಟರ ಮಾತು ವನಜಾಕ್ಷಿಗೆ ಸರಿ ಕಾಣಲಿಲ್ಲ.
"ಅವರು ಹೇಳಿದ್ರಲ್ಲಿ ತಪ್ಪೇನಿದೆ? ಈ ಮನೆಯಲ್ಲಿ ನಿಮ್ಮ ಅಕ್ಕಂದಿರು, ತಂಗೀಂತ ನಾಲ್ಕೈದು ಜನ ಇರ್ಲಿಲ್ವಾ? ನಮಗೂ ಒಂದು ಹೆಣ್ಣು ಮಗು ಆಗ್ಲೀಂತ ಆಸೆಯಿಂದ ಹೇಳಿತು. ಅದಕ್ಕೇನಂತೆ?"
"ನಿನಗೆ ಗೊತ್ತೇ ಇದೆ ಇವಳೆ... ನಮ್ಮ ಮನೆ ಹೆಣ್ಣು ಮಕ್ಕಳು ಯಾರು ಸುಖದಲ್ಲಿದ್ದಾರೆ ಹೇಳು? ಎಲ್ಲರೂ ಹೊಕ್ಕ ಮನೆಯಲ್ಲಿ ಕಷ್ಟ ಕಷ್ಟ ಕಷ್ಟವೆ. ಒಂದು ಸೀರೆ ಬೇಕಿದ್ರೂ ಅವು ನಮ್ಮತ್ರ ಬಂದು ಸಂಕೋಚದಿಂದ ಕೇಳ್ತಾವೆ"
"ಅದಕ್ಕೆ ಏನಂತೆ? ನಾವು ಈಗ ನೆಮ್ಮದಿಯಿಂದ ಇಲ್ವಾ? ನಮಗೊಂದು ಹೆಣ್ಣು ಮಗುವಾದ್ರೆ ಅದನ್ನು ಸಾಕುವಷ್ಟು ನಮ್ಮಲ್ಲಿ ಇಲ್ವಾ?"
"ನಮತ್ರ ಈಗ ಬೇಕಾದಷ್ಟು ಇದೆ. ಇಲ್ಲಾಂತ ನಾನು ಹೇಳೋದಿಲ್ಲ. ಆದರೆ ನಮ್ಮ ಸಂತಾನಕ್ಕೆ ಶಾಪ ಇದೇಂತ ನನ್ನ ಅನಿಸಿಕೆ"
"ಏನು ಶಾಪರೀ? ಇದ್ದ ಬದ್ದ ಉಳುಮೆಯ ಗದ್ದೆಯನ್ನೆಲ್ಲಾ ನಿಮ್ಮಪ್ಪ ಒಕ್ಕಲಿಗನಿಗೆ ಮಾಡಿದ್ರು. ಅವನು ಖುಷಿಯಲ್ಲಿಯೆ ಇದ್ದಾನೆ. ಒಂದು ಚೂರು ಯಾರ ಆಸ್ತಿಗೂ, ವಸ್ತುವಿಗೂ ಅತ್ತೆ, ಮಾವ ಆಸೆ ಪಟ್ಟವರಲ್ಲ. ಇದ್ದಷ್ಟು ಕೈಯೆತ್ತಿ ಕೊಟ್ಟಿದ್ದಾರೆ. ಹಾಗಿರುವಾಗ ನಮಗೆ ಶಾಪ ಯಾರ್ದೂಂತ?"
"ನೋಡು, ನಿನಗೆ ಅರ್ಥವಾಗ್ತದ ಇಲ್ವಾಂತ ನನಗೆ ಗೊತ್ತಿಲ್ಲ. ನನ್ನ ಅಣ್ಣಂದಿರಿಗಾಗಲಿ, ತಮ್ಮನಿಗಾಗಲಿ ಹೆಣ್ಣು ಸಂತಾನ ಉಂಟಾ? ನನ್ನ ಅಪ್ಪ, ಅಮ್ಮನಿಗೆ ತಮ್ಮ ಹೆಣ್ಣು ಮಕ್ಕಳ ಕಣ್ಣೀರು ನೋಡಿ, ಮುಂದಿನ ಸಂತಾನಕ್ಕೆ ಹೆಣ್ಣು ಆಗೋದೇ ಬೇಡಾಂತ ಅಂದುಕೊಂಡಿರಬಹುದಲ್ವಾ?"
"ಹಾಗೆ ನೋಡಿದ್ರೆ ನಿಮ್ಮ ಅಕ್ಕಂದಿರಿಗೆ, ತಂಗಿಗೆ ಹೆಣ್ಣು ಸಂತಾನವಿಲ್ವಾ? ನೀವ್ಯಾಕೆ ಹಿರಿಯರ ಶಾಪವಿದೇಂತ ಹೇಳ್ತೀರಾ?"
"ಅವರು ಕೊಟ್ಟು ಹೋದವರು. ಗಂಡು ಮಕ್ಕಳಿಗೆ ಮಾತ್ರ ಹೆಣ್ಣು ಸಂತಾನ ಬೇಡಾಂತ ಅವರ ಮನಸ್ಸಿನಲ್ಲಿದ್ದಿರಬಹುದು"
ಗಂಡನ ಮಾತು ವನಜಾಕ್ಷಿಗೆ ಹಿಡಿಸಲಿಲ್ಲ. ತಮ್ಮ ಸ್ವಂತ ಮಕ್ಕಳಿಗೆ ಯಾರಾದರೂ ಶಾಪ ಕೊಡುತ್ತಾರೆಯೆ? ಅನ್ನುವುದು ಅವಳಿಗೆ ರುಚಿಸದ ಮಾತಾಗಿತ್ತು.
ವೆಂಕಟ ಭಟ್ಟರಿಗೆ ಮಾತ್ರ ತಲೆಯಲ್ಲಿ ಅದು ಅಡರಿ ಹೋಗಿತ್ತು. ಹೆಂಡತಿಯ ಹಾಗೆ ಆತನಿಗೂ ಹೆಣ್ಣು ಮಗು ಬೇಕೆನ್ನುವ ಆಸೆಯಿದ್ದರೂ ಮನಸ್ಸಿನಲ್ಲಿ ಅದೇ ವಿಷಯ ಗಟ್ಟಿಯಾಗಿ ಕುಳಿತಿತ್ತು. ಇಲ್ಲವಾದರೆ ಮಡದಿ, ರಮಣ ಹುಟ್ಟಿದ ನಂತರ 3 ಬಾರಿ ಗರ್ಭಿಣಿಯಾದರೂ, ಎರಡು ಸಲ ಗಂಡು ಮಗು ಬೇಡವೆಂದು ಗರ್ಭ ತೆಗೆಸಿದ್ದಾಯಿತು. ಮೂರನೆ ಬಾರಿ ಗರ್ಭ ಹೋದಾಗ ಅದೆಷ್ಟು ಬೇಸರವಾಗಿತ್ತು. ನಂತರ ಗರ್ಭ ನಿಂತೇ ಇಲ್ಲವೇಕೆ?
"ನೀನು ಏನೆ ಹೇಳು ಆ ಹೆಂಗಸು ಸರಿಯಿಲ್ಲ. ನಮ್ಮ ಮನೆಯ ವಿಷಯಗಳನ್ನೆಲ್ಲಾ ಇನ್ನೊಂದು ಮನೆಗೆ ಹೇಳಿ ಹಿಂದಿನಿಂದ ನಗಾಡುತ್ತೆ ಅಷ್ಟೆ. ಇಲ್ಲಾಂದ್ರೆ ಎದುರು ಮನೆಯ ಶಾಂತಕ್ಕ ನಮ್ಮ ಜೊತೆಗೆ ಜಗಳ ಕಾಯೋಕಿತ್ತಾ? ಮೂರು ಹೊತ್ತು ಗದ್ದೆ ಕೆಲಸ ಮಾಡಿಕೊಂಡು ನಾವು ಕೊಡ್ತಿದ್ದ ಊಟ ತಿಂದುಕೊಂಡು ಒಳ್ಳೆಯ ರೀತಿಯಲ್ಲಿ ಇರಲಿಲ್ವಾ?"
"ಅದಕ್ಕೆಂತ ಮಾಡೋದು? ಅವರ ಮಗ ಬೊಂಬಾಯಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾನೆ. ತಾಯಿಯನ್ನು ಕೆಲಸಕ್ಕೆ ಹೋಗುವುದು ಬೇಡ ಅಂದಿದ್ದಾನೆ. ಅವರು ಕೆಲಸ ನಿಲ್ಲಿಸಿದ್ದಾರೆ. ಆ ಹೆಂಗಸು ಬರ್ಲಿಲ್ಲಾಂತ ನಮ್ಮ ಮನೆ ಕೆಲಸ ನಿಂತಿದಾ? ನಾವು ಮಾಡಿಕೊಂಡು ಹೋಗ್ತಾ ಇಲ್ವಾ?"
"ನೀನು ಗದ್ದೆಗೆ ಇಳಿಯುವ ಹಾಗಾಗಿದ್ದು ಅದೇ ಹೆಂಗಸಿನಿಂದ ಅಲ್ವಾ? ಈ ಜಾನಕಮ್ಮ ಆ ಹೆಂಗಸಿಗೆ ಏನೋ ಕಿವಿಯೂದಿದೆ. ಅದಕ್ಕೆ ಆ ಹೆಂಗಸು ಇದ್ದಕ್ಕಿದ್ದಂತೆ ಜಗಳ ಮಾಡ್ಕೊಂಡು ಕೆಲಸ ಬಿಡ್ತು ನೋಡು"
"ನಾನು ನಿಮಗೆ ಹೇಳ್ತಾ ಇಲ್ವಾ... ಈ ಜಾಗ ಮಾರಿ ಎಲ್ಲಾದ್ರೂ ಪಟ್ಟಣದ ಕಡೆಗೆ ಹೋಗೋಣಾಂತ. ನೀವು ಕೇಳ್ತಾ ಇಲ್ಲ. ನಮ್ಮ ಮಣ್ಣಿನ ಋಣ ಇಲ್ಲೆ ಇದೆ. ಇದ್ದದನ್ನು ನಾವೆ ಮಾಡ್ಕೊಂಡು ಹೋಗುವುದು ಚೆಂದ ಅಲ್ವಾ?"
"ಈ ಜಾಗನ ಬಿಟ್ಟು ಹೋಗುವುದು ಕಷ್ಟಾಂತ ನಿನಗೆ ಗೊತ್ತಿಲ್ವಾ? ನನ್ನ ಅಪ್ಪಯ್ಯ ಎಷ್ಟು ಕಷ್ಟ ಪಟ್ಟು ಈ ಜಾಗಾನ ತೆಗೆದುಕೊಂಡಿದ್ದಾರೇಂತ ನಿನಗೆ ಗೊತ್ತಿಲ್ವಾ? ಅಂತದ್ರಲ್ಲಿ ಮಾರುವ ಮಾತುಂಟಾ ಅಥವಾ ನಾವು ಅದನ್ನು ಯೋಚಿಸುವುದೂ ತಪ್ಪಲ್ವಾ?"
ಮಾತು ಮುಂದುವರಿಸಲು ಇಚ್ಛಿಸದೆ ವನಜಾಕ್ಷಿ ತಟ್ಟೆ, ಲೋಟಗಳನ್ನು ಎತ್ತಿಕೊಂಡು ಅಡುಗೆ ಕೋಣೆಯೊಳಗೆ ನಡೆದರು.

***
ಎಪ್ಪತ್ತರ ದಶಕದಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿಯಾದಾಗ ಶ್ರೀನಿವಾಸರಿಗೆ ತಾವು ಮಧುರೈ0ುಲ್ಲಿ ನಡೆಸುತ್ತಿದ್ದ ಹೊಟೇಲು ಹೆಚ್ಚು ಸಮಯ ಮುಂದುವರಿಯಲಾರದೆನಿಸಿತು. ತಮ್ಮನ್ನೇ ನಂಬಿರುವ ತಮ್ಮಂದಿರಾದ ಗಿರೀಶ ಮತ್ತು ಜಗನ್ನಾಥರನ್ನು ಕರೆದು ತಮ್ಮ ಸಮಸ್ಯೆಯನ್ನು ಮುಂದಿಟ್ಟರು.

"ಇನ್ನು ಈ ಪುಢಾರಿಗಳ ಉಪಟಳದಿಂದ ಹೊಟೇಲು ಮುಂದುವರಿಸಿಕೊಂಡು ಹೋಗುವುದು ತುಂಬಾ ಕಷ್ಟ. ಅವರುಗಳು ದಿನಕ್ಕೊಂದು ತಗಾದೆ ತೆಗೆದು, ಹಫ್ತಾ ವಸೂಲಿಗೂ ಮುಂದಾಗುತ್ತಿದ್ದಾರೆ. ನಾವು ಮರ್ಯಾದೆಯಿಂದ ಬಾಳುವುದು ಕಷ್ಟವೇ. ಇನ್ನು ಮುಂದೆ ಏನು ಮಾಡುವುದು? ನೀವೂ ಯೋಚಿಸಿ... ಒಂದು ನಿರ್ಧಾರಕ್ಕೆ ಬರೋಣ"
ಶ್ರೀನಿವಾಸರ ಹಾಗೇ ಗಿರೀಶ ಹಾಗೂ ಜಗನ್ನಾಥರಿಗೂ ಎಂಟು ಹತ್ತು ಮಕ್ಕಳು. ಇದ್ದಕ್ಕಿದಂತೆ ಹೊಟೇಲು ಮುಚ್ಚಿ, ಸಂಸಾರವನ್ನು ನಡು ಬೀದಿಯಲ್ಲಿ ನಿಲ್ಲಿಸುವ ಪರಿಸ್ಥಿತಿ ಎದುರಾದರೆ? ಎಂಬ ಆತಂಕ ತಮ್ಮಂದಿರಿಬ್ಬರಲ್ಲು ಮೂಡಿತು. ಅವರೊಂದು ನಿರ್ಧಾರಕ್ಕೆ ಬಂದು, "ಅಣ್ಣಾ, ಕಷ್ಟನೋ ಸುಖನೋ ನಮ್ಮ ಜೀವನ ಇಲ್ಲೇ ಸಾಗಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ" ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಾಗ, ಶ್ರೀನಿವಾಸರಿಗೆ ನಿಜವಾಗಿಯೂ ಇರುಸು ಮುರಿಸಿನ ಪರಿಸ್ಥಿತಿಯಾಯಿತು. ಎಲ್ಲಾ ಜವಾಬ್ದಾರಿಯನ್ನು ತಾವೇ ಹೊತ್ತು ಕೊಂಡು ಹೇಗೋ ಹೊಟೇಲನ್ನು ನಡೆಸಿಕೊಂಡು ಹೋಗಿದ್ದರು. ಅವರಿಗಂತೂ ಮುಂದುವರಿಸುವ ಯೋಚನೆಯಿಲ್ಲ. ತಮ್ಮಂದಿರಿಬ್ಬರಿಗೆ ಜವಾಬ್ದಾರಿಯನ್ನು ಬಿಟ್ಟು ಹೊಗುವ ನಿರ್ಧಾರ ಕೈಗೊಂಡರು.
"ನಾನು ನಿರ್ಧಾರ ತೆಗೆದುಕೊಂಡಾಯಿತು. ಇನ್ನು ಕಷ್ಟನೋ ಸುಖನೋ ನಾನು ಊರಿಗೆ ಹೋಗಿ ಸೆಟಲ್ ಆಗಿ ಬಿಡ್ತೀನಿ. ಹೊಟೇಲನ್ನು ನೀವು ನಿಭಾಯಿಸಿಕೊಂಡು ಹೋಗ್ತೀರೀಂತ ನನಗೆ ಧೈರ್ಯ ಇದೆ"
ಶ್ರೀನಿವಾಸನ ಮಾತುಗಳನ್ನು ಕೇಳಿ ತಮ್ಮಂದಿರೇನು ಹೌಹಾರಲಿಲ್ಲ. ಸಂತೋಷದಿಂದ ಒಪ್ಪಿಕೊಂಡರು.
"ನನ್ನ ಪಾಲಿನ ಹಣವನ್ನು ನಾನು ಹಿಂತೆಗೆ0ುಬಹುದಲ್ಲಾ?" ಶ್ರೀನಿವಾಸರು ಸಂಕೋಚದಿಂದ ಕೇಳುವಾಗ ತಮ್ಮಂದಿರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
"ಎಲ್ಲ ಹಣ ನೀನು ತೆಗೆದುಕೊಂಡು ಹೋದರೆ ನಮಗೆ ನಿಭಾಯಿಸಲು ಕಷ್ಟವಾಗುತ್ತದೆ. ಹೇಗೂ ನೀನು ಇಲ್ಲಿಗೆ ನಮ್ಮನ್ನು ನೋಡೋದಿಕ್ಕೆ ಬರುತ್ತಿಯಲ್ಲಾ. ಆಗ ಸ್ವಲ್ಪ ಸ್ವಲ್ಪವೇ ಹಣ ಹೊಂದಿಸಿ ಕೊಡುತ್ತೇವೆ" ಎಂದು ಹೇಳುವಾಗ ಒಪ್ಪಿಕೊಳ್ಳವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.
ಅಂತೂ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳ ಜೊತೆಗೆ ಕೈ ಹಿಡಿದವಳನ್ನು ಕರೆದುಕೊಂಡು ಮೂರು ದಿನ ರೈಲಿನ ಪ್ರಯಾಣ ಜೊತೆಗೆ ಒಂದು ದಿನ ಬಸ್ಸಿನಲ್ಲಿ ಪ್ರಯಾಣ ಮುಗಿಸಿ, ಊರಿಗೆ ಬರುವಾಗ ಅಣ್ಣ ಅನಂತರಾಮ ಬಹಳ ಸಂತೋಷದಿಂದಲೇ ಸ್ವಾಗತಿಸಿದ್ದ. ಅನಂತರಾಮನಿಗೂ ಹತ್ತು ಜನ ಮಕ್ಕಳು. ಜೊತೆಗೆ ಶ್ರೀನಿವಾಸನ ಎಂಟು ಮಕ್ಕಳು ಮನೆಯಲ್ಲಿ ನಿತ್ಯ ಗಲಾಟೆಯೆ. ಶ್ರೀನಿವಾಸನ ಮಕ್ಕಳಿಗೆ ಕನ್ನಡ, ತುಳು ಭಾಷೆ ಅಷ್ಟಾಗಿ ಬರುತ್ತಿರಲಿಲ್ಲವಾದುದರಿಂದ ಅವುಗಳು ತಮಿಳಿನಲ್ಲಿಯೆ ಏನೇನೋ ಅಂದುಕೊಂಡು ಸುಮ್ಮನಾಗುತ್ತಿದ್ದವು.

ಒಂದು ದಿನ ರಾತ್ರಿ ಒಂದು ಸಣ್ಣ ವಿಷಯದ ಕಿಡಿ ದೊಡ್ಡ ಜ್ವಾಲೆಯಾಗಿ ಹೋಯಿತು. ಶ್ರೀನಿವಾಸನ ದೊಡ್ಡ ಮಗ ತನ್ನ ದೊಡ್ಡಪ್ಪ ಅನಂತರಾಮನ ಎದುರಿಗೆ ಕುರ್ಚಿಯ ಮೇಲೆ, `ಕಾಲಿನ ಮೇಲೆ ಕಾಲು ಹಾಕಿ ಕುಳಿತ' ಅನ್ನುವುದು ಅನಂತರಾಮನಿಗೆ ಆ ಹುಡುಗ `ಮರ್ಯಾದೆ' ಕೊಡಲಿಲ್ಲ ಅನ್ನುವ ಮಟ್ಟಿಗೆ ಬಂದು ನಿಂತಿತು. ರಾತ್ರಿ ಅಂಗಡಿ ಮುಗಿಸಿ ಬಂದ ಶ್ರೀನಿವಾಸನನ್ನು ಊಟ ಮಾಡಲು ಬಿಡದೆ ಜಗಳ ಕಾಯ್ದರು ಅನಂತರಾಮ.
"ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಯಾವುದನ್ನೂ ಹೇಳಿಕೊಡಲಿಲ್ಲ. ದೊಡ್ಡವರು ಅನ್ನುವ ಗೌರವವೇ ನಿನ್ನ ಮಕ್ಕಳಿಗೆ ಇಲ್ಲ"
ಶ್ರೀನಿವಾಸನಿಗೆ ಹಸಿದ ಹೊಟ್ಟೆ ಒಂದು ಕಡೆಯಾದರೆ, ಇನ್ನೊಂದು ಕಡೆ ಅಣ್ಣ ಹೇಳಿದ ಮಾತುಗಳು, ತನ್ನ ಹಿರಿಯ ಮಗನ ಮೇಲೆ ಕೋಪ ಉಕ್ಕಿ ಬರುವಂತೆ ಮಾಡಿತು. ಮಗನನ್ನು ಕರೆದು ಕೆನ್ನೆಗೆ ನಾಲಕ್ಕು ಬಾರಿಸಿ, ಅಗ್ರಜನ ಕಾಲು ಹಿಡಿಸಿದ.
ಶ್ರೀನಿವಾಸನ ಹೆಂಡತಿ ನಳಿನಾಕ್ಷಿಗೆ ಈ ರೀತಿ ತನ್ನ ಹಿರಿಯ ಮಗ ಸುಮ್ಮನೆ ಪೆಟ್ಟು ತಿಂದದ್ದು ಅವಳ ಕಣ್ಣುಗಳಲ್ಲಿ ನೀರು ತರಿಸಿತು.
ರಾತ್ರಿ ಗಂಡ ಹತ್ತಿರ ಬಂದಾಗ, "ರೀ, ಎಷ್ಟು ದಿನಾಂತ ಈ ಮನೆಯಲ್ಲಿ ಜೀವ ತೇಯೋದು? ನಮ್ಮ ಮಕ್ಕಳಿಗಂತೂ ಉಸಿರು ಕಟ್ಟೋ ಹಾಗಾಗಿದೆ. ಕೂತರೆ ತಪ್ಪು, ನಿಂತರೆ ತಪ್ಪು. ನಿಮ್ಮ ಅಣ್ಣನ ಮಕ್ಕಳು ಉಂಡಾಡಿ ಗುಂಡರ ತರಹ ಅಲೆದಾಡಿಕೊಂಡು ಬರ್ತಾರೆ. ನಮ್ಮ ಮಕ್ಕಳು ಅಡುಗೆ ಕೆಲಸದಿಂದ ಹಿಡಿದು ಗದ್ದೆ ಕೆಲಸ ಮಾಡುವವರೆಗೂ ಸಹಾಯ ಮಾಡ್ಬೇಕು. ನಮ್ಮ ಮಕ್ಕಳು ಬೆಳೆದಿರುವುದೆಲ್ಲಾ ಪಟ್ಟಣದಲ್ಲಿ. ಈ ಹಳ್ಳಿಯ ರೀತಿ, ರೀವಾಜು ಅವುಗಳಿಗೆಲ್ಲಾ ಹೇಗೆ ಗೊತ್ತಾಬೇಕು, ಹೇಳಿ? ಇವತ್ತು ಇಷ್ಟು ಸಣ್ಣ ವಿಷಯಕ್ಕೆ ಹೇಗೆ ಹಾರಾಡಿದ್ರು ನೋಡಿದ್ರಾ?" ಅಂದಾಗ
ಹೆಂಡತಿಯ ಮಾತಿಗೆ ತೆಪ್ಪಗೆ ಮುಸುಕೆಳೆದು ಮಲಗಿದ ಶ್ರೀನಿವಾಸನಿಗೆ ಮುಸುಕಿನ ಒಳಗಿಂದಲೇ ಚಿಂತೆ ಕಾಡಿತು. ಇದೇ ರೀತಿ ಮುಂದುವರಿದರೆ, ಒಂದಲ್ಲ ಒಂದು ದಿನ ಅಗ್ರಜ `ಮನೆ ಬಿಟ್ಟು ಹೋಗು' ಅಂದರೆ ಇಷ್ಟು ದೊಡ್ಡ ಸಂಸಾರವನ್ನು ಹಿಡಿದುಕೊಂಡು ಹೋಗುವುದು ಎಲ್ಲಿಗೆ?
ಕೊನೆಗೆ ಹೊರಳಾಡಿ ಹೊರಳಾಡಿ ಒಂದು ನಿರ್ಧಾರಕ್ಕೆ ಬಂದ. ಹೇಗೂ ತನ್ನ ಪಾಲಿನ ಹಣ ತಮ್ಮಂದಿರಿಂದ ಬರುವುದಿದೆ. ಮಧುರೈಗೆ ಹೋಗಿ ಆ ಹಣ ಹಿಡಿದುಕೊಂಡು ಬಂದು ಊರಿನಲ್ಲಿಯೆ ಸ್ವಲ್ಪ ಆಸ್ತಿಯನ್ನು ತೆಗೆದುಕೊಂಡು ಸಣ್ಣ ಮನೆ ಕಟ್ಟಿಕೊಂಡು ಸಂಸಾರ ಹೂಡುವುದು. ನಳಿನಾಕ್ಷಿಗೆ ತನ್ನ ನಿರ್ಧಾರವನ್ನು ತಿಳಿಸಿದ. ಆಕೆಗೆ ಸುತಾರಾಂ ಇಷ್ಟವಿಲ್ಲ.
"ನಮ್ಮ ಮಕ್ಕಳು ಸಿಟಿಯಲ್ಲಿ ಬೆಳೆದವರು. ಪಟ್ಟಣದಲ್ಲಿಯೆ ಒಂದು ಸಣ್ಣ ಮನೆಯನ್ನು ನೋಡಿ. ನೀವೂ ಅಲ್ಲಿ ಸಣ್ಣ ಮಟ್ಟದಲ್ಲಿ ಹೊಟೇಲೋ, ಅಂಗಡಿಯೋ ಇಟ್ಟುಕೊಂಡರೆ ಮನೆ ಖರ್ಚು ನಡೆಯುತ್ತದಲ್ಲಾ?"
"ಪಟ್ಟಣದ ಬದುಕು ಅಷ್ಟು ಸುಲಭ ಅಲ್ಲ. ಪಟ್ಟಣ ಬೆಳೆದ ಹಾಗೇ ನಮ್ಮ ಆದಾಯನೂ ಬೆಳೆಯುವ ಹಾಗಿದ್ದರೆ ಸರಿ, ಇಲ್ಲದಿದ್ದರೆ ಈ ಮಕ್ಕಳನ್ನು ಕಟ್ಟಿಕೊಂಡು ಸಂಸಾರ ನಡೆಸುವುದು ಹೇಗೆ? ಮೊದಲು ಅಣ್ಣನ ಬಳಿ ಮಾತನಾಡುತ್ತೇನೆ. ಅವನು ಏನು ಹೇಳುತ್ತಾನೋ ಹಾಗೆ ಮಾಡೋಣ" ಅಂದಾಗ ನಳಿನಾಕ್ಷಿಗೆ ಮಾತನಾಡುವಂತೆ ಇರಲಿಲ್ಲ. ಅಣ್ಣನ ಮಾತೇ ವೇದವಾಕ್ಯ ಎಂದು ತಿಳಿದ ಶ್ರೀನಿವಾಸನಿಗೆ ಅಣ್ಣನಿಂದಲೇ ಮಾತು ಬಂದಾಗ ಅಧೀರನಾದ.
"ಶ್ರೀನಿವಾಸ, ನಮ್ಮ ಸಂಸಾರಗಳು ದೊಡ್ಡ ಸಂಸಾರಗಳು. ಹಿರಿಯರ ಮನೇಂತ ಇಷ್ಟು ದಿನ ನಿನ್ನನ್ನು ಇಲ್ಲಿ ಇರೂಂತ ಹೇಳಿದೆ. ನನಗೂ ಬೇಸಾಯದಿಂದ ಏನೂ ಸಿಗ್ತಾ ಇಲ್ಲ. ನೀನು ಖರ್ಚಿಗೆ ಕೊಡುವುದು ಕೂಡ ಏನೂ ಸಾಲುವುದಿಲ್ಲ. ಹಿರಿಯರ ಆಸ್ತಿ ಬೇಡಾಂತ ಹೇಳಿ ನೀವುಗಳು ನನ್ನ ಹೆಸರಿಗೆ ಬರೆದು ಕೊಟ್ಟಿದ್ದೀರಿ. ಆದರಿಂದ ನೀನು ಇಲ್ಲೇ ಎಲ್ಲಾದರೂ ಆಸ್ತಿ ಖರೀದಿಸುವುದು ಒಳ್ಳೆಯದು. ಸುಮ್ಮನೆ ನಾವು ನಾವು ಜಗಳ ಮಾಡಿಕೊಂಡು ನಿಷ್ಠುರ ಆಗುವುದಕ್ಕಿಂತ ಮೊದಲೇ ನೀನು ಬೇರೆ ವ್ಯವಸ್ಥೆ ಮಾಡಿಕೋ"
ಅಗ್ರಜನ ಮಾತು ಕೇಳಿದ ನಂತರ ಆ ಮನೆಯಲ್ಲಿ ನಿಂತರೆ ಮರ್ಯಾದೆಯಿಲ್ಲವೆನಿಸಿತು. ಸ್ವಂತ ಅಣ್ಣನ ಮಕ್ಕಳೇ ಹೀಯಾಳಿಸುವಾಗ ಶ್ರೀನಿವಾಸನಿಗೆ ದು:ಖವೇ ಬರುತ್ತಿತ್ತು.
"ಅಣ್ಣಯ್ಯ , ಒಂದೆರಡು ತಿಂಗಳು ಅವಕಾಶ ಕೊಡು. ಎಲ್ಲಾದರೂ ಇದೇ ಊರಿನಲ್ಲಿ ಆಸ್ತಿ ತೆಗೆದುಕೊಂಡು ಸಣ್ಣ ಮನೆ ಕಟ್ಟಿ ಕುಳಿತುಕೊಳ್ಳುತ್ತೇನೆ. ಅಲ್ಲಿಯವರೆಗೆ..."
ಮುಂದೆ ಮಾತನಾಡಲಾರದೆ ಗಂಟಲುಬ್ಬಿ ಬಂತು.
"ಸರಿ, ನಮ್ಮ ಶ್ಯಾನುಭೋಗರದ್ದೆ ಜಾಗ ಮಾರಾಟಕ್ಕಿದೆ. ನೀನು ದುಡ್ಡಿನ ವ್ಯವಸ್ಥೆಯನ್ನು ಮಾಡು. ಮುಂದೆ ನೋಡೋಣ" ಅನ್ನುವಾಗಲಷ್ಟೆ ಶ್ರೀನಿವಾಸನ ಮನಸ್ಸಿಗೆ ನೆಮ್ಮದಿಯೆನಿಸಿದ್ದು.
ಅಂಗಡಿಗೆ ಒಂದು ವಾರ ಬಾಗಿಲು ಹಾಕಿ ಮಧುರೈಗೆ ಹೊರಟ ಶ್ರೀನಿವಾಸ. ತಮ್ಮಂದಿರು ಆಪ್ಯಾಯತೆಯಿಂದ ಬರ ಮಾಡಿಕೊಳ್ಳುತ್ತಾರೆನ್ನುವ ನಿರೀಕ್ಷೆ ಹುಸಿಯಾಯಿತು. ಅಣ್ಣ ಬಂದಿರುವ ವಿಷಯ ಅವರಿಗೆ ಸ್ಪಷ್ಟವಾಗಿತ್ತು. ಅದಕ್ಕಾಗಿಯೇ ಇಬ್ಬರೂ ಮುಖ ಗಂಟಿಕ್ಕಿದಂತೆ ಇದ್ದರು. ಶ್ರೀನಿವಾಸ ಕೇಳಿಯೇ ಬಿಟ್ಟ.
"ನಾನೀಗ ತಾಪತ್ರಯದಲ್ಲಿದ್ದೇನೆ. ನನ್ನ ಪಾಲಿನ ಹಣ ನೀವು ಈಗ ಕೊಡದಿದ್ದರೆ ನನ್ನ ಸಂಸಾರ ಬೀದಿಗೆ ಬೀಳುವ ಸ್ಥಿತಿ" ಪೀಠಿಕೆ ಹಾಕುವಾಗ ಹಿರಿಯ ತಮ್ಮ ಗಿರೀಶ ಒಮ್ಮೆಗೆ ಬಿ.ಪಿ. ಏರಿಸಿಕೊಂಡವರಂತೆ ಶ್ರೀನಿವಾಸನ ಎದುರು ಬಂದು ನಿಂತ.
"ಯಾವುದು ನಿನ್ನ ಹಣ? ನಾವು ಯಾಕೆ ಕೊಡಬೇಕು? ನಮಗೆ ಸಂಸಾರ ಇಲ್ವಾ? ನೀನು ಬಿಟ್ಟು ಹೋದ ನಂತರ ವ್ಯಾಪಾರ ಅಷ್ಟಕಷ್ಟೆ. ನಮಗೂ ಇಲ್ಲಿ ನೆಮ್ಮದಿಯಿಲ್ಲ. ನಾವು ಬಿಟ್ಟು ಬಿಡ್ತಾ ಇದ್ದೇವೆ"
ಗಿರೀಶನ ಮಾತುಗಳನ್ನು ಕೇಳಿ ಶ್ರೀನಿವಾಸನಿಗೆ ಆಕಾಶ ತಲೆಯೆ ಮೇಲೆ ಬಿದ್ದ ಹಾಗಾಯಿತು. ಅದರೂ ಎದೆಗುಂದದೆ ಹೇಳಿದ.
"ನೀವು, ಕೊಟ್ಟ ಮಾತಿಗೆ ತಪ್ತಾ ಇದ್ದೀರಿ. ನಾನು ಹೇಳಿದ್ನಲ್ಲಾ ನೀವುಗಳು ಹಣ ಕೊಡದಿದ್ದರೆ ನನ್ನ ಸಂಸಾರ ಬೀದಿಗೆ ಬರುತ್ತದೆ. ದಯವಿಟ್ಟು ಇಲ್ಲ ಅನ್ಬೇಡಿ" ತಮ್ಮಂದಿರಿಗೆ ಕೈ ಮುಗಿದು ಕೇಳುವ ಸ್ಥಿತಿ ಬಂದಾಗ ಮನಸಿನಲ್ಲಿ ನೋವು ಮಡುಗಟ್ಟಿತು.
ಜಗನ್ನಾಥ ಒಳಗೆ ಹೋದವನೇ ಸಿಹಿತಿಂಡಿ ಕತ್ತರಿಸುವ ಚೂರಿಯನ್ನು ತಂದು ಶ್ರೀನಿವಾಸನ ಮುಂದೆ ನಿಂತ.
"ಏನು ನಿನ್ನ ಹಣ ಬಾಕಿಯಿರೋದು? ಏನೂ ಮಾತನಾಡದೆ ಬಂದ ಹಾಗೆ ಹಿಂದೆ ಹೋಗು. ಇಲ್ಲಾಂದ್ರೆ ನೀನು ಇಲ್ಲಿಗೆ ಬಂದೇ ಇಲ್ಲಾಂತ ಮಾಡ್ತೀನಿ"
ಕಿರಿಯ ತಮ್ಮನೂ ಮಿತಿಮೀರಿ ವರ್ತಿಸಿದಾಗ ಶ್ರೀನಿವಾಸ ಭೂಮಿಗಿಳಿದು ಹೋದ. ಹಣವಿಲ್ಲದೆ ಬರಿಗೈಯಲ್ಲಿ ಹೋದರೆ ಆಗುವ ಹೋಗುವ ವಿಚಾರವಲ್ಲವೆಂದು ತಿಳಿಯಿತು.
ತಾನೇ ಮುಂದೆ ತಂದ ತಮ್ಮಂದಿರು ತಿರುಗಿ ನಿಂತಾಗ ಅಸಹಾಯಕನಂತೆ ಕೈ ಚೆಲ್ಲಿ ಕುಳಿತ.
"ನಾನು ನಿಮ್ಮ ಜೊತೆಗೆ ಜಗಳ ಕಾಯುವುದಕ್ಕೆ ಬಂದಿಲ್ಲ. ನನ್ನ ಹಣ ಕೇಳೊದಿಕ್ಕೆ ಬಂದೆ. ನೀವು ಕೊಡದಿದ್ರೆ ಬೇಡ. ನೀವುಗಳು ಚೆನ್ನಾಗಿರಿ. ಆದರೆ ನಾನು ಬರಿಗೈಯಲ್ಲಿ ಊರಿಗೆ ಹೋದರೆ ಅಣ್ಣನಿಗೂ ನನ್ನ ಮೇಲೆ ಕೋಪ ಬರುತ್ತೆ. ನನಗೆ ಸಾಲದ ರೂಪದಲ್ಲಿ ಒಂದು ಐವತ್ತು ಸಾವಿರ ಹಣ ಕೊಟ್ರೆ... ನಿಮ್ಮ ಕಷ್ಟ ಕಾಲದಲ್ಲಿ ಹಿಂದಿರುಗಿಸ್ತೇನೆ" ಎಂದು ತಮ್ಮಂದಿರನ್ನು ಕೇಳುವಾಗ ಜಗನ್ನಾಥ, ಗಿರೀಶನ ಕಡೆಗೆ ಕಣ್ಣು ಮಿಟುಕಿಸಿದ.
ಗಿರೀಶ ಒಳಗೆ ಗೋದ್ರೇಜ್ನಿಂದ ಐವತ್ತು ಸಾವಿರ ಎಣಿಸಿ, "ಇದು ಜಗನ್ನಾಥನ ಹಣ. ನೀನು ವಾಪಸು ಕೊಡುವಾಗ ಅವನಿಗೆ ಕೊಟ್ಟು ಬಿಡು" ಹಣವನ್ನು ಶ್ರೀನಿವಾಸನ ಕೈಯಲ್ಲಿಟ್ಟಾಗ ಶ್ರೀನಿವಾಸನಿಗೆ ಪರ್ವತ ಸಿಕ್ಕಷ್ಟು ಸಂತಸವಾಯಿತು. ತಮ್ಮಂದಿರ ಮನೆಗೂ ಹೋಗದೆ ನೇರವಾಗಿ ರೈಲು ಹಿಡಿದು ಊರು ತಲುಪಿದ.
ಹೆಂಡತಿಯ ಮಾತು ಕೇಳದೆ ಅವಳನ್ನು ಸಮಾಧನಿಸಿದ.
"ನೋಡು, ಪಟ್ಟಣದ ಬದುಕು ನಮಗೆ ಕಷ್ಟ. ಇಲ್ಲೆ ಶ್ಯಾನುಭೋಗರ ಆಸ್ತಿ ಮಾರೋದಿದೆಯಂತೆ. ಒಳ್ಳೊಳ್ಳೆಯ ಉಳುಮೆಯ ಗದ್ದೆಗಳು. ಆಸ್ತಿ ತೆಗೆದು ಹಾಕಿದರೆ ಮುಂದೆ ಮಕ್ಕಳಿಗೆ ಅನುಕೂಲವಾಗಬಹುದು. ನಾನು ಅಣ್ಣನ ಜೊತೆಗೆ ಹೋಗಿ ನೋಡಿಕೊಂಡು ಬರುತ್ತೇನೆ"
"ಅಲ್ಲ, ಈ ಹಳ್ಳಿಯಲ್ಲಿ ಉಳುಮೆಯ ಆಸ್ತಿ ತೆಗೆದು ಹಾಕಿದ್ರೆ, ನಮ್ಮ ಮಕ್ಕಳು ಏನು ಮಾಡಬೇಕು? ಅವುಗಳಿಗೆ ಗದ್ದೆಯ ಕೆಲಸ ಮಾಡಿ ಗೊತ್ತುಂಟಾ?"
"ನಮಗೆ ಬದುಕ ಬೇಕಾದ್ರೆ ನಮ್ಮ ಮಕ್ಕಳು ಗದ್ದೆಯ ಕೆಲಸ ಅಲ್ಲ... ಯಾವ ಕೆಲಸವನ್ನಾದ್ರೂ ಕಲಿಬೇಕು. ಮತ್ತೆ ಅವರಿಗೂ ಅಭ್ಯಾಸವಾಗುತ್ತದೆ"
ಶ್ರೀನಿವಾಸ ನಳಿನಾಕ್ಷಿಯ ಬಾಯಿ ಮುಚ್ಚಿಸಿದ. ಮರುದಿನ ಅಗ್ರಜನನ್ನು ಕರೆದುಕೊಂಡು ಶ್ಯಾನುಭೋಗರ ಬಳಿ ಮಾತನಾಡಲು ಹೋದ.
ಶ್ಯಾನುಭೋಗರು ಮೊದಲೆ ತಮ್ಮ ಜಾಗ ಮಾರಾಟ ಮಾಡುವುದೆಂದು ನಿರ್ಧರಿಸಿದ್ದರಿಂದ ಉಟ್ಟ ಬಟ್ಟೆಯಲ್ಲಿಯೆ ಗದ್ದೆಗಳನ್ನು ತೋರಿಸಲು ಹೊರಟರು. ಶ್ರೀನಿವಾಸನಿಗೆ ಗದ್ದೆಗಳೆಲ್ಲ ಹಿಡಿಸಿದವು. ಐವತ್ತು ಸಾವಿರಕ್ಕೆ ಎಲ್ಲವೂ ಇತ್ಯರ್ಥವಾಗಿ ಶ್ರೀನಿವಾಸ ಆ ಆಸ್ತಿಯ ಒಡೆಯನಾದ. ಆತ ಮಾಡಿದ ದೊಡ್ಡ ತಪ್ಪೆಂದರೆ ಗೇಣಿಯನ್ನು ಮುಂದುವರಿಸಿಕೊಂಡು ಬಂದಿದ್ದು. ಮನೆ ಕಟ್ಟಿ ಸಂಸಾರವನ್ನು ನೋಡಿಕೊಳ್ಳುವ ಹೊತ್ತಿಗೆ `ಉಳುವವನೆ ಹೊಲದೊಡೆಯ' ಕಾನೂನು ಬಂದಾಗ ಕಷ್ಟದಲ್ಲಿ ತೆಗೆದುಕೊಂಡ ಆಸ್ತಿಯೂ ಕೈ ಬಿಟ್ಟು ಹೋಯಿತು. ಮದುವೆಗೆ ತಯಾರಾಗಿ ನಿಂತ ಹೆಣ್ಣು ಮಕ್ಕಳಿಗೆ ಅದು ಹೇಗೋ ನಳಿನಾಕ್ಷಿ ಮಾಡಿಟ್ಟ ಚಿನ್ನವನ್ನು ಮಾರಿ ಮದುವೆ ಮಾಡಿಸಿದ. ಆ ಹೊತ್ತಿಗೆ ಹಿರಿಯ ಮಗ ಕೆಲಸಕ್ಕೆ ಸೇರಿದ್ದರಿಂದ ಅಷ್ಟಿಷ್ಟು ಮನೆ ಖರ್ಚು ನಡೆಯುತ್ತಿತ್ತು. ಹುಡುಗಿಯರು ಮದುವೆಯಾಗಿ ಹೋದರೂ ಅವರಿಗೆ ನೆಮ್ಮದಿಯಿರಲಿಲ್ಲ. ಹಿರಿ ಮಗಳು ಉಪಾಸನ ಬಡತನದಲ್ಲಿಯೆ ಸಂಸಾರ ಹೂಡುವಂತಾದರೆ, ಎರಡನೆಯ ಮಗಳು ಆರಾಧನ ಮದುವೆಯಾಗಿ ಆರು ತಿಂಗಳಿನಲ್ಲೇ ತವರು ಸೇರುವಂತಾಯಿತು. ಮೂರನೆಯ ಮಗಳು ಅರ್ಚನಾಳ ಗಂಡ ಸ್ಫುರದ್ರೂಪಿ ಯುವಕ. ಸ್ವಲ್ಪ ಹೆಣ್ಣುಗಳ ಜೊತೆಗೆ ಮಾತುಕತೆ ನಡೆದಾಗ ಸಂಶಯ ಹೊಂದಿದ ಅರ್ಚನಾಳಿಗೆ ದಿನ ಅವನ ಜೊತೆಗೆ ಜಗಳ ಕಾಯುವುದೆ ಆಯಿತು. ನಾಲ್ಕನೆಯವಳು ಪೂಜಾ. ಅವಳ ಗಂಡನ ಕೈ ಯಾವಾಗಲೂ ತೂತೆ. ಹಾಗಾಗಿ ಹೆಣ್ಣು ಮಕ್ಕಳ ಗೋಳಿನ ಪತ್ರ ಬಂದಾಗಲೆಲ್ಲಾ ಶ್ರೀನಿವಾಸ ಹೈರಾಣಗುತ್ತಿದ್ದ. ನಳಿನಾಕ್ಷಿಗಂತೂ ಕಣ್ಣೀರು ತಪ್ಪಿದಲ್ಲ. ಕೊನೆಗೆ ಆತ ಹಾಸಿಗೆ ಹಿಡಿದ. ಹಾಸಿಗೆ ಹಿಡಿದ ಎರಡು ವಾರಗಳಲ್ಲಿಯೆ ಆತನ ಸಂಸಾರದ ಗಾಲಿ ಕಳಚಿಕೊಂಡಿತು. ಇನ್ನೆರಡು ವರ್ಷಕ್ಕೆ ನಳಿನಾಕ್ಷಿ ಕೂಡ ಗಂಡನ ಕಡೆಗೆ ನಡೆದದ್ದಾಯಿತು. ಆ ಮನೆಯಲ್ಲಿ ನೆಮ್ಮದಿ ಅಳಿಸಿತು. ಹಿರಿಯ ಮಗ ದೂರವಿದ್ದುದರಿಂದ ಎರಡನೆಯ ಮಗ ಉಳಿದ ಆಸ್ತಿಯ ಜವಾಬ್ದಾರಿಯನ್ನು ಹೊರುವಂತಾಯಿತು.
***
ಹಳೆಯ ನೆನಪುಗಳೆಲ್ಲಾ ಕೆದಕಿ ಆ ರಾತ್ರಿಯಿಡಿ ನಿದ್ದೆ, ವೆಂಕಟಭಟ್ಟನಿಂದ ದೂರವೇ ಉಳಿಯಿತು. ಅಪ್ಪ ಇಷ್ಟು ಕಷ್ಟ ಬಿಟ್ಟು ಮಾಡಿನ ಆಸ್ತಿಯನ್ನು ಮಾರುವ ಮಾತು ಮುಂದೆ ಈ ಮನೆಯಲ್ಲಿ ಬರಬಾರದೆಂಬ ನಿರ್ಧಾರವನ್ನು ತೆಗೆದುಕೊಂಡ. ವನಜಾಕ್ಷಿ ಪಕ್ಕಕ್ಕೆ ಬಂದು ಮಲಗಿದರೂ ಗೋಚರವಾಗಲಿಲ್ಲ. ತದೇಕ ದೃಷ್ಟಿಯಿಂದ ಸೂರನ್ನೇ ದಿಟ್ಟಿಸುತ್ತಾ ಮಲಗಿದ.
"ರೀ" ವನಜಾಕ್ಷಿಗೂ ನಿದ್ದೆ ಸುಳಿಯದೆ ಗಂಡನನ್ನು ಕರೆದಳು.
"ಏನಾಗ್ಬೇಕು?"
"ಅಲ್ಲ... ನೀವಂದ್ರಿ... ನಮ್ಗೆ ಹೆಣ್ಣು ಸಂತಾನ ಅಗೊದು ಬೇಡಾಂತ ನಿಮ್ಮ ತಂದೆ-ತಾಯಿಯ ಶಾಪ ಇದೇಂತ, ಇದು ಸತ್ಯಾನಾ? ಯಾರಾದ್ರೂ ತಮ್ಮ ಸ್ವಂತ ಮಕ್ಕಳಿಗೆ ಆ ರೀತಿ ಶಾಪ ಕೊಡ್ತಾರಾ?"
"ನಾನು ಆಗ್ಲೆ ಹೇಳಿದ್ನಲ್ಲಾ... ನಮ್ಮ ಮನೆ ಹೆಣ್ಣುಗಳ ಕಷ್ಟ ನೋಡಿ ಹಾಗೆ ಅಂದಿರಬಹುದೂಂತ ಹೇಳಿದೆ. ಹಾಗೇ ಇನ್ನೂ ತಿಳಿದುಕೊಳ್ಳುವ ಇಚ್ಛೆ ಇದ್ರೆ ನಾಳೆ ರಾಮ ಜೋಯಿಸರತ್ರ ಹೋಗಿ ಬರೋಣ"
ಗಂಡನ ಮಾತಿನಲ್ಲಿ ವ್ಯಂಗ್ಯವಿದ್ದುದನ್ನು ಗುರುತಿಸಿದ ವನಜಾಕ್ಷಿಗೆ ಮಾತನಾಡಲಾಗದೆ ವಿರುದ್ಧ ದಿಕ್ಕಿಗೆ ಹೊರಳಿ ಮಲಗಿದಳು. ಆದರೆ ಮನಸ್ಸು ತಡೆಯಲಾರದೆ ಮಗ್ಗುಲು ಬದಲಿಸದೆ ಕೇಳಿದಳು.
"ನಮಗೆ ಹೆಣ್ಣು ಮಗು ಆಗೋದಿಲ್ವಾ?"
"ಪದೇ ಪದೇ ಅದನ್ನು ಕೇಳಬೇಡ. ಹೆಣ್ಣು ಮಗು ಆಗದಿದ್ರೆ ದತ್ತು ತೆಗೆದುಕೊಳ್ಳೋಣ. ಈಗ ಸುಮ್ನೆ ಮಲಗು"
"ಹಾಗಂತೀರಾ? ಅದು ನಮ್ಮ ಮಗು ಆಗೊದಿಲ್ವಲ್ಲಾ?"
"ಮನಸ್ಸು ಉದಾರವಾಗಿರಲಿ. 0ಾರದ್ದಾದರೇನು, ಜವಾಬ್ದಾರಿ ನಾವು ತೆಗೆದುಕೊಂಡ ನಂತರ ಅದು ನಮ್ಮದೆ ಮಗು ತಾನೆ?"
"ಹಾಗಾ?"
ಗಂಡನ ಮಾತುಗಳನ್ನು ಮೆಲುಕು ಹಾಕಿಕೊಂಡು ವನಜಾಕ್ಷಿ ಹಾಗೆ ನಿದ್ರೆಗೆ ಜಾರಿದರೆ, ವೆಂಕಟ ಭಟ್ಟರಿಗೂ ಏನೋ ತೃಪ್ತಿಯೆನಿಸಿ ಹಾಗೆ ಕಣ್ಣು ಮುಚ್ಚಿ ನಿದ್ದೆಗೆ ಇಳಿದರು.
****

Read more!

Wednesday, November 25, 2009

ಭೂತದ ಕೋಳಿ (ಮಯೂರದಲ್ಲಿ ಪ್ರಕಟವಾದ ಕಥೆ)


ಬೆಳಿಗ್ಗೆ ಬೇಗನೆ ಎದ್ದು ಬಚ್ಚಲು ಮನೆಯ ಒಲೆಗೆ ಬೆಂಕಿ ಹಾಕಿ, ಒಂದಷ್ಟು ಕೊತ್ತಳಿಗೆಗಳನ್ನು ಒಳಗೆ ತಳ್ಳಿ ಎದ್ದ ಕೇಶವ ಭಟ್ಟರು ಬೈರಾಸನ್ನು ಹೆಗಲಿಗೆ ಸೇರಿಸಿ ಗದ್ದೆಯ ಪುಣಿಯನ್ನು ಹಿಡಿದು ಹೊರಟರು. ಭತ್ತದ ತೆನೆಗಳು ಪಾಯಕಟ್ಟಿ, ಹಸಿರಿನಿಂದ ಬಂಗಾರದ ಬಣ್ಣಕ್ಕೆ ತಿರುಗಿದ್ದವು. ಇನ್ನೊಂದೆರಡು ದಿನ ನೀರು ಹಾಕಿದರೆ ಸಾಕು. ಹೇಗೂ ಹದಿನೈದು ದಿನಗಳೊಳಗೆ ಕೊಯ್ಲು ಆರಂಭಿಸುವುದೇ ಎಂದು ನಿರ್ಧರಿಸಿದವರು, ಪಂಪಿನ ನೀರನ್ನು ಗದ್ದೆಗೆ ತಿರುಗಿಸಿ ಹೆಗಲಿನ ವಸ್ತ್ರದಿಂದ ಕೈ ಒರೆಸಿಕೊಂಡರು.


ಎಲ್ಲಿದ್ದವೋ, ಸೈನಿಕರ ಪಡೆಯಂತೆ ಓಡಿ ಬಂದ ಹತ್ತು ಹದಿನೈದು ಕೋಳಿಗಳು ಹಠಾತ್ತನೆ ದಾಳಿ ಮಾಡುವಂತೆ ಭಟ್ಟರು ನೋಡುತ್ತಿದ್ದಂತೆ ಮಾಗಿದ ತೆನೆಗಳನ್ನು ಕುಕ್ಕಿ, ನುಂಗುತ್ತಿದ್ದವು. ತುಂಬಿದ್ದ ತೆನೆಯ ಅಷ್ಟೇ ಕಾಳುಗಳು ಗದ್ದೆಯನ್ನೂ ಸೇರುತ್ತಿದ್ದವು. ಅವರು ಹೆಗಲಿನ ಬೈರಾಸು ತೆಗೆದು, `ಹೌ.. ಹೌ... ಅಂದರೂ, `ಕೊಕ್ಕೋ.. ಕ್ಕೋ ಎಂದು ಸದ್ದು ಹೊರಡಿಸಿ ತಮ್ಮವರನ್ನೆಲ್ಲ ಎಚ್ಚರಿಸಿದವೆ ಹೊರತು, ರೆಕ್ಕೆ ಬಿಚ್ಚದೆ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿದವು.

ಭಟ್ಟರು ನೇರವಾಗಿ ಮನೆಗೆ ಬಂದವರೇ, ಇಕ್ಕಳ್ಳೇ, ಅಲ್ಲಿ ಒಂದು ದೊಡ್ಡ ಸೈನ್ಯವೇ ಬಂದಿದೆ. ಪೈರೆಲ್ಲಾ ಹಾಳಾಗುತ್ತೆ. ಮಕ್ಕಳಿಗೆ ಹೇಳು ಆ ಗದ್ದೆಯತ್ರ ಕುಳಿತುಕೊಂಡು ಓದಲಿ. ಅವುಗಳನ್ನು ಕಾಯುವುದಕ್ಕೂ ಆಯ್ತು, ಓದುವುದಕ್ಕೂ ಆಯ್ತಲ್ಲ ಅಂದರು.
ಬೆಳಗ್ಗಿನ ಉಪಹಾರ ಮುಗಿಸದೆ ಮಕ್ಕಳು ಪುಸ್ತಕ ಕೈಯಲ್ಲಿ ಹಿಡಿಯುವುದಿಲ್ಲವೆಂದು ಮೀನಾಕ್ಷಮ್ಮನಿಗೆ ಗೊತ್ತು. ದೋಸೆ ಹೊಯ್ಯುತ್ತಿದ್ದವರು ಗಂಡನಿಗೆ, ನೀವು ಪೂಜೆ ಮಾಡಿ ಹೊರಡಿ. ನಾನೇ ನೋಡಿಕೊಳ್ತೇನೆ. ಅವರಿಗೆಲ್ಲಾ ನಮ್ಮ ಮೇಲೆ ಎಂತದ್ದೋ ಹಠ. ಇಲ್ಲಾಂದ್ರೆ ಇಷ್ಟು ಬೇಗನೆ ಆ ಕೋಳಿಗಳನ್ನೆಲ್ಲಾ ಬಿಡೋದಾ? ಅವುಗಳಿಗೆ ನಾಲ್ಕು ಕಾಳು ಹಾಕುವ ಗತಿಯಿಲ್ಲದವರು ಸಾಕುವುದು ಯಾಕೆ? ಆ ಸೇಸಕ್ಕನಿಗೆ ನಾನೇ ಹೇಳಿ ಬರ್ತೇನೆ. ಎಂತದು ಇದು ಇಲ್ಲಾಂದ್ರೆ? ಹೇಳಿದವರೇ ಕಟ್ಟಿಗೆಯ ಒಲೆಯ ಉರಿಯನ್ನು ಕಡಿಮೆ ಮಾಡಿ ತಮ್ಮ ಹಿರಿ ಮಗಳನ್ನು ಕರೆದರು."

ಸಾವಿತ್ರಿ, ಇಲ್ಲಿ ಬಾ. ದೋಸೆ ಕಲ್ಲು ಕಾಯ್ತು. ಒಂದೆರಡು ದೋಸೆ ಹಾಕು. ಆ ಕೋಳಿಗಳನ್ನು ಓಡಿಸಿ ಬರ್ತೇನೆ ಅಂಗಳಕ್ಕಿಳಿದು ಕೈಯಲ್ಲಿ ಒಂದೆರಡು ಮಣ್ಣಿನ ಹೆಂಟೆಗಳನ್ನು ಹಿಡಿದು ನಿಧಾನವಾಗಿ ಗದ್ದೆಯತ್ತ ನಡೆದರು. ಒಮ್ಮೆ ತಲೆಯೆತ್ತಿ ಸದ್ದು ಆಲಿಸಿದ ಕೋಳಿಗಳು, `ಕ್ಕೊಕ್ಕೋ ಅಂದವು. ಗಂಡ ಹೇಳಿದ್ದು ಸುಳ್ಳಲ್ಲ. ಒಂದು, ಎರಡಾ? ಹತ್ತು ಹದಿನೈದು ಕೋಳಿಗಳು. ಗದ್ದೆಯ ನೇರಕ್ಕೆ ನಿಂತು ಮಣ್ಣಿನ ಹೆಂಟೆಗಳನ್ನು ಒಂದರ ಹಿಂದೆ ಒಂದರಂತೆ ಬಿಸಾಡಿದರೆ ತಪ್ಪಿಸಿಕೊಂಡು ತಮಗೆ ಹಾರಲು ಗೊತ್ತಿದೆ ಎಂದು ಎತ್ತರಕ್ಕೆ ಹಾರಿ, `ಕೊಕ್ಕೊಕ್ಕೋ ಅನ್ನುವ ದೊಡ್ಡ ಗದ್ದಲವನ್ನೆಬ್ಬಿಸಿ ಕೆಳಗಿನ ಮನೆಯತ್ತ ಹಾರಿದವು.
ಕೆಳಗೆ ಸೇಸಕ್ಕ, ಗಿರಿಜಕ್ಕ, ಪದ್ರಸನ ಮನೆಗಳು. ಎಲ್ಲರ ಮನೆಯಲ್ಲಿಯೂ ಕೋಳಿಗಳು. ಗಿರಿಜಕ್ಕ ಶಿಸ್ತಿನಲ್ಲಿ ಕೋಳಿಗಳನ್ನು ಕುತ್ತರಿಯೊಳಗೆ ಹಾಕಿಟ್ಟರೆ, ಪದ್ರಸ ಒಂದು ಕೋಳಿಯೂ ಅಂಗಳ ಬಿಟ್ಟು ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದ.

ಆದರೆ ಸೇಸಕ್ಕ ಹಾಗಲ್ಲ. ಅವರ ಮನೆಯಲ್ಲಿ ಬೇಕಾದಷ್ಟಿದ್ದರೂ ಇನ್ನೊಬ್ಬರದಕ್ಕೆ ಆಸೆ ಪಡುವವರು. ಐದು ಗಂಟೆಗೆ ಎದ್ದರೇ ಮೊದಲು ಕೋಳಿಗಳನ್ನು ಬಿಡುವ ಕೆಲಸ ಅವರದ್ದು. ತಮಗೆ ಎಲ್ಲಿ ಆಹಾರ ಸಿಗುತ್ತದೆಯೆಂದು ಅವುಗಳಿಗೂ ಗೊತ್ತು. ನೇರವಾಗಿ ಬರುವುದೇ ಭಟ್ಟರ ಗದ್ದೆಗಳಿಗೆ.
ಕೋಳಿಗಳ ಆರ್ಭಟ ಕೇಳಿ ಮಡಲಿನ ತಟ್ಟಿಯಿಂದ ಹೊರಗೆ ಇಣುಕು ಹಾಕಿದ ಸೇಸಕ್ಕ, ಭಟ್ಟರ ಹೆಂಗಸು, ಮೀನಾಕ್ಷಮ್ಮನನ್ನು ನೋಡುತ್ತಲ್ಲೇ ಹೊರಗೆ ಧಾವಿಸಿ ಬಂದರು. ಎಂತದ್ದು ಇದು? ನಿಮ್ಮ ಜಾತಿಯೆಂತದ್ದು? ನೀವು ಕೋಳಿಗಳನ್ನು ಕೊಲ್ಲುತ್ತೀರಾ? ಪಾಪ... ಪಾಪ ತಟ್ಟುತ್ತದೆ ನಿಮಗೆ ಅಂದದ್ದೇ ಮೀನಾಕ್ಷಿಯವರಿಗೆ ಸಿಟ್ಟು ಬಂತು. ನೀವು ಎಂತದ್ದು ಮಾತನಾಡುವುದು? ನೀವು ಮಾಡಿದ್ದು ಸರಿಯಾ? ಬೆಳಿಗ್ಗೆದ್ದು ಕೋಳಿಗಳನ್ನು ನಮ್ಮ ಗದ್ದೆಗೆ ಮೇಯಲ್ಲಿಕ್ಕೆ ಬಿಡುವುದಾ? ನಿಮಗೆ ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲವಾ? ನಾವೇನು ಅವುಗಳನ್ನು ನಿಮ್ಮ ಗದ್ದೆಗೆ ಬಿಟ್ಟಿದೇವಾ? ಅವುಗಳಿಗೇನು ಗೊತ್ತು? ನೀವು ಹಾಗೆ ಕಲ್ಲು ಬಿಸಾಡಿದರೆ ಅವು ಸಾಯುವುದಿಲ್ಲವಾ?

ಅಷ್ಟು ನಿಮಗೆ ಕಾಳಜಿಯಿದ್ದರೆ ನಿಮ್ಮ ಕೋಳಿಗಳನ್ನು ನೀವೇ ನೋಡಿಕೊಳ್ಳಿ. ಇಲ್ಲಿಗೆ ಎಂತಕ್ಕೆ ಬಿಡುವುದು? ಎಂದು ಹೇಳುತ್ತಲೇ ಮನೆಗೆ ಬಂದರು ಮೀನಾಕ್ಷಮ್ಮ. ಸೇಸಕ್ಕ ಇನ್ನೂ ಗೊಣಗುತ್ತಿರುವುದು ಕೇಳಿಸುತ್ತಿತ್ತು.
ಮೀನಾಕ್ಷಿಯವರು ಕೈ ತೊಳೆದುಕೊಂಡು ಬಂದು ಮಗಳನ್ನು ಎಬ್ಬಿಸಿ ದೋಸೆ ಹೊಯ್ಯಲು ತಾವೇ ಕುಳಿತರು. ಅಷ್ಟರಲ್ಲಿ ಕೇಶವ ಭಟ್ಟರು ಕೂಡ ಪೂಜೆ ಮುಗಿಸಿ ಅಂಗಡಿಗೆ ಹೊರಡಲು ಅನುವಾದರು. ಆ ಹೆಂಗಸೆಂತ ಬೊಬ್ಬೆ ಹಾಕಿದ್ದು? ಬೆಳಗ್ಗೆದ್ದು ಅವುಗಳತ್ರ ಎಂತ ಮಾತಡ್ಲಿಕ್ಕೆ ಹೋಗಿದ್ದು? ಭಟ್ಟರ ಮಾತು ಕೇಳಿ ಮೀನಾಕ್ಷಿಗೆ ರೇಗಿತು.ನೀವೇ ಹೇಳಿದ್ದಲ್ಲ. ಅಲ್ಲಿ ಒಂದು ದೊಡ್ಡ ಪಡೆಯೇ ಇತ್ತು. ಕಲ್ಲು ಬಿಸಾಡಿದ್ದಕ್ಕೆ ಆ ಹೆಂಗಸು ಒದರ್ತು. ಇನ್ನು ಬರ್ಲಿ ಕೊಂದೇ ಹಾಕ್ತೇನೆ ಅಂದಾಗ ಭಟ್ಟರಿಗೆ ಹೆದರಿಕೆಯಾಯಿತು.ಎಂತದು ನೀನು ಹೇಳುವುದು? ಇನ್ನು ಅದೊಂದು ಅಪವಾದ ನಮಗೆ ಬೇಡ. ಅವತ್ತು ಆ ಪದ್ರಾಸ ಮಾಡಿದ್ದು ಗೊತ್ತುಂಟಲ್ಲಾ? ನಮ್ಮನ್ನು ಅವರು ನೆಮ್ಮದಿಯಿಂದ ಬದುಕುವುದಕ್ಕೆ ಬಿಡುವುದಿಲ್ಲ. ಆದ್ರೂ ಇಂತದಕ್ಕೆಲ್ಲಾ ಹೋಗುವುದು ಬೇಡ. ಆದಷ್ಟು ನೋಡಿಕೊಳ್ಳುವ. ಅವುಗಳ ಪಾಲು ಅವುಗಳಿಗೆ ಹೋಗ್ಲಿ ಎಂದು ಮಡದಿಯನ್ನು ಸಮಾಧಾನಿಸಲು ಪ್ರಯತ್ನಿಸಿದರು.


ಆ ಪದ್ರಾಸ ಅಷ್ಟು ಗಲಾಟೆ ಮಾಡಿದ್ರೂ ಈಗ ಸರಿಯಾಗಿಲ್ವಾ? ನೋಡುವಾ... ಈಗ ಅವನ ಕೋಳಿಗಳು ಬರ್ತಾವಾ? ನಾವು ಬ್ರಾಹ್ಮಣರೆಂದರೆ ಅವರಿಗೆಲ್ಲಾ ತಾತ್ಸಾರ. ನಾವು ಯಾರ ತಂಟೆಗೆ ಹೋಗದಿದ್ದರೂ ಸುಮ್ಮನೆ ನಮ್ಮ ಕಾಲು ಏಳಿತಾರೆ. ಇವರೆಲ್ಲಾ ಯಾಕೆ ಮಾತಾಡಿ ಮನಸ್ಸು ನೋಯಿಸ್ತಾರೋ? ಮೀನಾಕ್ಷಿಯ ಮಾತು ಕೇಳಿ ಭಟ್ಟರಿಗೂ ಬೇಸರವೆನಿಸಿತು. ಊರಿಗೆ ಬಂದಾಗಿನಿಂದ ಒಬ್ಬರಲ್ಲ ಒಬ್ಬರು ಹಠ ಹಿಡಿದು ಜಗಳ ಕಾಯುತ್ತಿದ್ದರು. ನೆರೆಕರೆಯೇ ದೊಡ್ಡ ಹೊರೆಯಂತಾಗಿತ್ತು.

ಚುಚ್ಚಿ ಮಾತನಾಡುವವರೂ ಎಲ್ಲೆಲ್ಲಿಯೂ ಇದ್ದಾರೆ. ಅದು ಅವರವರ ಸಣ್ಣತನ. ನಾಲ್ಕು ದೊಡ್ಡ ಜನರ ಸಂಪರ್ಕದಲ್ಲಿರುವ ಒಬ್ಬ ಸಾಮಾನ್ಯ ವ್ಯಕ್ತಿ ತಾನೇ ದೊಡ್ಡ ಮನುಷ್ಯ ಅಂದುಕೊಳ್ಳುತ್ತಾ, ಇತರರನ್ನು ಹಂಗಿಸುತ್ತ, ಬೆನ್ನಿಗೆ ಇರಿಯುತ್ತಲೇ ಇರುತ್ತಾನೆ. ತನಗಿಲ್ಲದ ಸುಖ, ಸಂತೋಷಗಳನ್ನು ಬೇರೆಯವರಲ್ಲಿ ಕಂಡು, ಅನಗತ್ಯವೆನಿಸಿದರೂ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಕೆಟ್ಟದಾಗಿ ನೋಡುತ್ತಾನೆ. ಒಂದಲ್ಲಾ ಒಂದು ದಿನ ಅಂತಹವರೂ ಕೆಳಗೆ ಬೀಳುತ್ತಾರೆಯೇ ಅಂದುಕೊಂಡ ಭಟ್ಟರು ಪದ್ರಾಸ ಆ ದಿನ ಮಾಡಿದ್ದನ್ನು ನೆನೆಸಿಕೊಂಡರು.


ಮನೆ ಕಟ್ಟಿದ ನಂತರ ಮೊದಲ ಬಾರಿಗೆ ಗದ್ದೆ ನೆಟ್ಟಿದ್ದು. ಆ ವರ್ಷವೇ ಪದ್ರಸನ ದೊಡ್ಡ ಹುಂಜ ಗದ್ದೆಯನ್ನು ದಾಟಿ ಭಟ್ಟರ ಅಂಗಳದವರೆಗೂ ಬಂದಿತ್ತು. ಆ ದಿನ ಸರೀ ಬಿಸಿಲು ಇದ್ದದ್ದಕ್ಕೆ ಮೀನಾಕ್ಷಮ್ಮ ರಾಗಿಯ ಸೆಂಡಿಗೆ ಹಾಕಿದ್ದರು. ಸೆಂಡಿಗೆ ಹರಡಿದ್ದ ಬಟ್ಟೆಯ ಮೇಲೆ ರಾಜಾರೋಷವಾಗಿ ಓಡಾಡಿತ್ತು ಅದು. ಕಾಗೆಗಳ ಉಪದ್ರಕ್ಕೆ ಹೆದರಿದ್ದ ಅವರಿಗೆ ಈ ರೀತಿಯಾಗಿ ಕೋಳಿ ಸೆಂಡಿಗೆಯ ಮೇಲೆ ಓಡಾಡುತ್ತದೆಯೆನ್ನುವ ಅಲೋಚನೆಯೇ ಇರಲಿಲ್ಲ. ಪಕ್ಕದಲ್ಲಿಯೇ ಕಾಡು ಇದ್ದದ್ದರಿಂದ ಅವರು ಅದು ಕಾಡು ಕೋಳಿಯೇ ಬಂದಿದೆಯೆಂದು ಮಕ್ಕಳನ್ನು ಕರೆದು ತೋರಿಸಿದರು. ಮಕ್ಕಳು ಅದನ್ನು ನೋಡುವ ಕುತೂಹಲದಿಂದ ಹೊರಗೆ ಬರುವಾಗ ಅದು ಒಂದಷ್ಟು ಕಡೆಗೆ ಇಶ್ಶಿ ಕೂಡ ಮಾಡಿತ್ತು. ಸೆಂಡಿಗೆಯ ಬಣ್ಣಕ್ಕು ಅದಕ್ಕೂ ಪರಕ್ಕೇ ಇರಲಿಲ್ಲ. ಮಕ್ಕಳು ಕರೆದು ಹೇಳುವಾಗ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಬಂದವರೇ ಅದನ್ನು ಅಟ್ಟಿಸಿಕೊಂಡು ಹೋದರು.

ಅದು ಕಾಡಿನ ಕಡೆಗೆ ಓಡುವುದು ಬಿಟ್ಟು ಕೆಳಗಿನ ಮನೆಯತ್ತ ಓಡಿತು. `ಅಯ್ಯೋ ದೇವರೇ! ಇದು ಕಾಡು ಕೋಳಿ ಅಲ್ವಾ? ಮನುಷ್ಯ ಸಾಕಿದ ಕೋಳಿ ಈ ತರ ಇನ್ನೊಬ್ಬರ ಮನೆಗೆ ಹೋಗಿ ಉಪದ್ರ ಮಾಡ್ತದ? ಅಂದವರೇ ಅದು ಯಾರ ಕೋಳಿ ಎಂದು ತಿಳಿಯುವ ಕುತೂಹಲಕ್ಕೆ ಅಲ್ಲಿಯೇ ನಿಂತಿದ್ದ ಪದ್ರಸನ ಮಗನನ್ನು ಕೇಳಿದರು. `ನಮ್ಮ ಕೋಳಿ ಅಂದ ಅವನನ್ನು ಕರೆದು ಹೇಳಿದರು. ನೋಡು, ಮನೆಯಲ್ಲಿ ಹೇಳು... ಕೋಳಿ ಸೆಂಡಿಗೆಯ ಮೇಲೆಲ್ಲ ಇಶ್ಶಿ ಮಾಡಿದೇಂತ. ಇನ್ನು ಇತ್ತ ಕಡೆ ಬಂದ್ರೆ ಕಲ್ಲು ಬಿಸಾಡ್ತೇನೆ

ಪದ್ರಸನ ಮಗ ಹಾಗೇ ಹೋಗಿ ಮನೆಯಲ್ಲಿ ಹೇಳಿರಬೇಕು. ಒಂದೆರಡು ದಿನ ಆ ಹುಂಜ ಕಾಣಿಸಲೇ ಇಲ್ಲ. ಆದರೆ ಮರು ದಿನ ದನದ ಹಟ್ಟಿಯಲ್ಲಿ ಇಟ್ಟಿದ್ದ ಅಕ್ಕಚ್ಚಿಯ ಪಾತ್ರೆಯ ಮೇಲೆ ನಿಂತು ಇಶ್ಶಿ ಮಾಡಿದನ್ನು ಕಣ್ಣಾರೆ ನೋಡಿದ ಮೀನಾಕ್ಷಿಯವರಿಗೆ ರೇಗಿತು. ಮಾತಾಡದೆ ಮೆಲ್ಲ ಬಂದವರೇ ಅದು ಎತ್ತ ಕಡೆಗೆ ಹಾರಿ ಹೋಗುತ್ತದೆಯೆಂದು ತಿಳಿದು ಅತ್ತ ಅಡ್ಡ ನಿಂತು ತೂರಿ ಒಂದು ಕಲ್ಲನ್ನು ಒಗೆದರು. ಕೋಳಿ ಕಂಗಾಲಾಗಿ `ಕೊಕ್ಕೊಕ್ಕೋ ಕೂಗುತ್ತಾ ಕಾಡಿನತ್ತ ಹಾರಿತ್ತು. ಸುಮಾರು ಸಮಯದವರೆಗೂ ಕಾಡಿನ ಮರದ ಮೇಲೆ ಕುಳಿತು ಕೂಗುತ್ತಿದ್ದುದು ಕೇಳುತ್ತಿತ್ತು. ಸಂಜೆಯ ಹೊತ್ತಿಗೆಲ್ಲ ಕೂಗು ನಿಂತಿತ್ತು. ಆದರೆ ಪದ್ರಸನ ಮನೆಯಲ್ಲಿ `ಬೋ... ಬೋ... ಎಂದು ಕೋಳಿಯನ್ನು ಕರೆಯುವ ಕೂಗು ಮಾತ್ರ ಕೇಳುತ್ತಲೇ ಇತ್ತು. ಹೊರಗೆ ಮುಸ್ಸಂಜೆಯ ಹೊತ್ತು ತುಳಸಿಕಟ್ಟೆಗೆ ದೀಪ ಇಡಲು ಬಂದಿದ್ದ ಮೀನಾಕ್ಷಿಯವರಿಗೆ ಅದನ್ನು ಕೇಳಿ ಆತಂಕವಾಯಿತು.

`ಕಾಡಿನಾಚೆ ಹೋದ ಕೋಳಿ ಮನೆಗೆ ಬರಲಿಲ್ಲವಾ? ನಾನೇ ಅದನ್ನು ಓಡಿಸಿದ್ದಲ್ವಾ? ಅಲ್ಲಿ ನರಿ ಗಿರಿಯೇನಾದರೂ ಹಿಡಿಯಿತಾ, ಹೇಗೆ? ಪದ್ರಸನ ಮನೆಯಲ್ಲಿ ನಡೆಯುತ್ತಿರುವ ಆತಂಕದ ದೃಶ್ಯ ಅವರ ಕಣ್ಣ ಮುಂದೆ ಸುಳಿಯುತ್ತಲೇ ಬೆದರಿದರು. ಮನಸ್ಸು ತಡೆಯಲಾರದೆ ಮಗನನ್ನು ಕಳುಹಿಸಿ, `ನಿಮ್ಮ ಕೋಳಿ ಕಾಡಿನ ಹತ್ತಿರ ಕೂಗ್ತಾ ಇತ್ತೂಂತ ಹೇಳು ಅಂದರು. ಮಗ ಪಟ್ಟಾಬಿ ಹಾಗೇ ಪದ್ರಸನ ಮನೆಗೆ ಬಂದು ಹೇಳುವಾಗ ಮತ್ತೂ ಒಂದು ಮಾತು ಹೇಳಿದ್ದ. `ಅಮ್ಮನೇ ಅದನ್ನು ಕಾಡಿಗೆ ಓಡಿಸಿದ್ದು ಅಂತ. ಪದ್ರಾಸ ರಾತ್ರಿಗೆ ಕುಡಿದು ಬಂದವನು ಹುಂಜ ಕಾಣದ್ದಕ್ಕೆ ಏನೇನೋ ಬಯ್ಯುತ್ತಿದ್ದದ್ದು ಕೇಳಿಸುತ್ತಿತ್ತು.
ಮರು ದಿವಸ ಕಾಡಿನ ಬದುವಿನ ಹತ್ತಿರ ಕೋಳಿ ಸತ್ತು ಬಿದ್ದಿದ್ದು ನೋಡಿ, ಪದ್ರಾಸ ಮೀನಾಕ್ಷಿಯಮ್ಮನನ್ನು ಸೇರಿ ಬೈಯ್ಯುತ್ತಿದ್ದ. ಅವರು ಮಕ್ಕಳನ್ನು ಹೊರಗೆ ಹೋಗದ ಹಾಗೇ ನೋಡಿಕೊಂಡರು. ಆದರೂ ಭಯ ಅವರಿಂದ ದೂರವಾಗಲಿಲ್ಲ. ಮಧ್ಯಾಹ್ನದ ಹೊತ್ತು ಕೇಶವ ಭಟ್ಟರು ಅಂಗಡಿಯಿಂದ ಬರುವಾಗ ಪದ್ರಾಸ ಹಡೆ ಮಾತುಗಳನ್ನು ಒದರುತ್ತಾ ಸತ್ತ ಕೋಳಿಯನ್ನು ತಂದು ಭಟ್ಟರ ಮನೆಯಂಗಳಕ್ಕೆ ಬಿಸಾಡಿದ. ಗಿರಿಜಕ್ಕನ ಮನೆಯವರು, ಸೇಸಕ್ಕನ ಮನೆಯವರೆಲ್ಲಾ ಇದನ್ನು ನಾಟಕದಂತೆ ನೋಡುತ್ತಾ ನಿಂತಿದ್ದರು.


ಕಟ್ಟದ ಕೋಳಿ ಅದು. ನಾಲ್ಕೈದು ಬಾರಿಯಾದರೂ ಗೆಲ್ಲುತ್ತಿತ್ತು. ಅದನ್ನೇ ಸಾಯಿಸಿದ್ರಲ್ಲ. ನೀವೇ ತಿನ್ನಿ ಅಂದು ಹಿಡಿ ಶಾಪ ಹಾಕಿ ಹೋದ ಪದ್ರಾಸ. ಮೀನಾಕ್ಷಿಯವರಿಗೆ ಅಳುವೇ ಬಂತು. ಗಂಡ ತಲೆ ತಗ್ಗಿಸಿಕೊಂಡೇ ಒಳಗೆ ಬರುವಾಗ ಅವರಿಗೆ ದು:ಖ ತಡೆಯಲಾಗಲಿಲ್ಲ. ಇಂತದನ್ನೆಲ್ಲಾ ಕೇಳಬೇಕಾಯಿತಲ್ಲ? ಎಂದು ವ್ಯಥೆ ಪಟ್ಟರು. ನಾನು ಹೇಳಿಲ್ವಾ ನಿನಗೆ, ನಮಗೆ ಎಂತಕ್ಕೆ ಬೇಕಿತ್ತು? ನೀನು ಕೊಂದಿಯಾ ಅದನ್ನಾ? ಭಟ್ಟರು ಶಂತವಾಗಿಯೇ ಕೇಳಿದಾಗ ಮೀನಾಕ್ಷಿಯಾವರು ಕಣ್ಣೀರನ್ನು ಒರೆಸಿಕೊಂಡು, ಅಕ್ಕಚ್ಚಿ ಪಾತ್ರೆ ಮೇಲೆ ಕುಳಿತು ಗಲೀಜು ಮಾಡಿತು. ಅದನ್ನು ಇನ್ನು ದನಗಳಿಗೆ ಇಡುವುದಕ್ಕಾಗುತ್ತಾ? ಅದಕ್ಕೆ ಕಾಡಿನತ್ತ ಓಡಿಸಿದೆ. ನಾನೇನು ಅದನ್ನು ಸಾಯಿಸ್ಲಿಲ್ಲ. ಬೇಕಾದ್ರೆ ಮಕ್ಕಳನ್ನು ಕೇಳಿ ಅಂದರು. ಭಟ್ಟರಿಗೆ ಉಭಯಸಂಕಟವಾಯಿತು. ಕೋಳಿಯನ್ನು ಸಾಯಿಸದಿದ್ದರೂ ಸಾಯಿಸಿದ ಆರೋಪ ಹೊತ್ತುಕೊಳ್ಳಬೇಕಾಯಿತಲ್ಲ ಎಂದು ವ್ಯಥೆಪಟ್ಟರು. ಇನ್ನು ಪದ್ರಾಸನನ್ನು ಸಮಾಧಾನ ಮಾಡಿ ಅದನ್ನು ತೆಗೆದುಕೊಂಡು ಹೋಗು ಅನ್ನುವಂತೆ ಇರಲಿಲ್ಲ. ಗಿರಿಜಕ್ಕನ ಮಗನನ್ನು ಕರೆದು ಅದನ್ನು ತೋಟದಲ್ಲಿ ಹುಗಿದು ಹಾಕುವಂತೆ ಹೇಳಿದರು. ಆದರೆ ಪದ್ರಾಸನಿಗೆ ಹೆದರಿದ ಗಿರಿಜಕ್ಕ ಮಗನಿಂದ ಅಂತಹ ಕೆಲಸವನ್ನು ಮಾಡದಂತೆ ತಾಕೀತು ಮಾಡಿದರು.

ಇನ್ನು ತಾನೇ ಅದನ್ನು ಇತ್ಯರ್ಥ ಮಾಡುವುದೆಂದು ಹಾರೆ ಹಿಡಿದುಕೊಂಡು ತೋಟಕ್ಕೆ ಹೊರಟಾಗ ಪದ್ರಾಸನ ಹೆಂಡತಿ ಜಲಜ ತೋಟದ ಬಳಿ ನಿಂತಿರುವುದು ಕಾಣಿಸಿತು. ಭಟ್ರೆ, ನಮ್ಮದು ತಪ್ಪಾಯಿತು. ಅವರೇನೋ ಬೇಸರದಿಂದ ಹೇಳಿದ್ರು, ಕ್ಷಮಿಸಿ ಅಂದವಳೇ ಅವರ ಅಂಗಳದಲ್ಲಿದ್ದ ಕೋಳಿಯನ್ನು ಎತ್ತಿಕೊಂಡು ಬರುವಂತೆ ಮಗನನ್ನು ಕಳುಹಿಸಿದಳು. ಭಟ್ಟರು ಮಾತಾಡದೆ ಸುಮ್ಮನೆ ತಲೆಯಲುಗಿಸಿ ಬಂದ ಹಾಗೆ ಹಿಂದಕ್ಕೆ ನಡೆದರು. ಅದೇ ದಿನ ಸಂಜೆ ಹೊತ್ತು ಸೇಸಕ್ಕನ ಕೋಳಿಯನ್ನು ನರಿಯೊಂದು ಹಿಡಿದುಕೊಂಡು ಹೋಗಿದ್ದನ್ನು ಎಲ್ಲರೂ ಕಣ್ಣಾರೆ ಕಂಡ ಬಳಿಕ ಪದ್ರಾಸನ ಕೋಳಿಯನ್ನು ಕೂಡ ನರಿಯೇ ನುಂಗಿದ್ದು ಎಂದು ತಿಳಿಯಿತು. ಬಳಿಕ ಪದ್ರಾಸನ ಕೋಳಿಗಳು ಎಂದೂ ಅವನ ಅಂಗಳವನ್ನು ದಾಟಿ ಹೋಗಿದ್ದಿಲ್ಲ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಭಟ್ಟರ ಹೆಂಡತಿಯ ಬಳಿ ಬಂದು ಕ್ಷಮಾಪಣೆ ಕೂಡ ಕೇಳಿ ಹೋಗಿದ್ದ.

ಆದರೂ ಮೀನಾಕ್ಷಿಯವರಿಗೆ ನೆರೆಕರೆಯೆಂದರೆ ಹೆದರಿಕೆಯೇ. ಈಗ ಸೇಸಕ್ಕನ ಕೋಳಿಗಳ ಉಪಟಳ. ಮತ್ತೊಮ್ಮೆ ಹಿಂದಿನದರ ಹಾಗೇ ಆದರೆ ಎಂಬ ಆತಂಕವಿದ್ದರೂ ಅವರನ್ನು ಕರೆದು ನಾಲ್ಕು ಮಾತು ಹೇಳುವುದೇ ಸರಿಯೆನಿಸಿತು. ಮೀನಾಕ್ಷಿಯವರಿಗೆ ಮೊದಲಿನ ಹೆದರಿಕೆ ಇರಲಿಲ್ಲ. ಅವರು ಒಂದೆರಡು ದಿನ ನೋಡಿದರು. ಹೇಳಿ ಕಳುಹಿಸಿದರೂ ಕೂಡ ಕೋಳಿಗಳ ಪಡೆ ಬರುವುದು ನಿಲ್ಲಲಿಲ್ಲ. ಸ್ವತ: ತಾವೇ ಸೇಸಕ್ಕನನ್ನು ಹುಡುಕಿಕೊಂಡು ಬಂದರು. ಬಸಳೆ ಗಿಡದ ಬಳಿ ಸಂಜೆಯ ಹೊತ್ತಿಗೆ ಮೀನು ಮೂರುತ್ತಿದ್ದ ಸೇಸಕ್ಕ ಬ್ರಾಹ್ಮಣರ ಹೆಂಗಸು ಬಂದದ್ದನ್ನು ನೋಡಿ ಮೀನನ್ನು ಹಾಗೆ ಬಿಟ್ಟು ಎದ್ದು ನಿಂತರು.
ಮುಸ್ಸಂಜೆ ಹೊತ್ತಿನಲ್ಲಿ ಏನು ಈ ಕಡೆ? ಎಂದು ಕೇಳುವಾಗ ಮೀನಾಕ್ಷಿಯವರು ನೇರವಾಗಿ ಮಾತಿಗೆ ಇಳಿದರು.

ಎಂತ ಸೇಸಕ್ಕ ನೀವು? ನಿಮ್ಮ ಕೋಳಿಗಳು ಬಂದು ಗದ್ದೆ ಹಾಳು ಮಾಡುವುದು ನಿಮಗೆ ಗೊತ್ತುಂಟು. ಆದರೂ ನೀವು ನಮ್ಮ ಗದ್ದೆಗೆ ಅವುಗಳನ್ನು ಅಟ್ಟುತ್ತಿದ್ದೀರಿ. ನಾವು ಎಂತದು ಮಾಡುವುದು ಹೇಳಿ. ಇರುವ ಎರಡು ಕೊಯ್ಲು ಗದ್ದೆಯಲ್ಲಿ ಆಗುವುದೇ ಮೂರು ಮುಡಿ ಅಕ್ಕಿ. ಅದೂ ಹೀಗಾದರೆ ಹೇಗೆ? ಎಂದು ಶಾಂತರಾಗಿಯೇ ನುಡಿದರಾದರೂ ಸೇಸಕ್ಕನಿಗೆ ಸರಿ ಕಾಣಲಿಲ್ಲ.
ನಾವೇನು ಮಾಡಬೇಕು. ಅವುಗಳು ಬಿಟ್ಟ ಕೂಡಲೇ ನಿಮ್ಮ ಗದ್ದೆಗೆ ಬರುತ್ತವಾ? ಇಡೀ ದಿನ ಅವುಗಳನ್ನು ಕಟ್ಟಿಹಾಕುವುದು ನಮಗೂ ಕಷ್ಟವೇ. ಇನ್ನೊಂದೆರಡು ದಿನ, ಎಲ್ಲವನ್ನು ಸಾಟೇ ಮಾಡಿಯಾಗಿದೆ ಎಂದು ಮತ್ತೆ ತಮ್ಮ ಕೆಲಸವನ್ನು ಮುಂದುವರಿಸಿದರು. ಮೀನಾಕ್ಷಿಯವರಿಗೆ ಅಲ್ಲಿ ನಿಲ್ಲಲಾಗದೆ ಹೊರಟು ಬಂದರು. ಸೇಸಿಯಕ್ಕ ಕೋಳಿಗಳ ಬಗ್ಗೆ ಗಮನ ಹರಿಸಲೇ ಇಲ್ಲ. ಅವುಗಳು ಮಾಮೂಲು ಅನ್ನುವಂತೆ ಭಟ್ಟರ ಗದ್ದೆಯನ್ನು ಅರ್ಧಕರ್ಧ ಖಾಲಿ ಮಾಡಿದ್ದವು. ಭಟ್ಟರೂ ಜಗಳಕ್ಕೆ ನಿಲ್ಲಲಿಲ್ಲ. ಅದಲ್ಲದೆ ಹೆಂಡತಿಗೂ ಅವುಗಳ ತಂಟೆಗೆ ಹೋಗದಂತೆ ತಾಕೀತುಮಾಡಿದ್ದರು.
ಎರಡು ದಿನವಲ್ಲ ಎರಡು ವಾರಗಳಾದರೂ ಕೋಳಿಗಳನ್ನು ಸಾಟೆ ಮಾಡಿದವನು ತೆಗೆದುಕೊಂಡು ಹೋಗಲು ಬರಲೇ ಇಲ್ಲ. ಇನ್ನು ಅವುಗಳ ಉಪದ್ರ ತಡೆಯುವುದು ಸಾಧ್ಯವಿಲ್ಲವೆಂದು ತಿಳಿದ ಅನಂತರ ತಮ್ಮ ದೂರದ ಸಂಬಂಧಿ ವಾದಿರಾಜ ಭಟ್ಟರ ಮುಂದೆ ಎಲ್ಲವನ್ನೂ ಹೇಳಿಕೊಂಡರು ಕೇಶವ ಭಟ್ಟರು. ವಾದಿರಾಜಣ್ಣ ಒಂದು ಉಪಾಯ ಸೂಚಿಸಿದರು. ಆದರೆ ಭಟ್ಟರಿಗೆ ಅದರಿಂದ `ಅಪರಾಧಿ ಸ್ಥಾನದಲ್ಲಿ ನಿಂತರೇ? ಅನ್ನುವ ಅನುಮಾನ ಕಾಡಿತು.
ವಾದಿರಾಜಣ್ಣ, ನೀವೇನೋ ಸುಲಭದಲ್ಲಿ ಹೇಳಿದ್ರಿ. ಆದ್ರೆ ಅವುಗಳಿಗೆ ವಿಷ ಇಟ್ಟು ಸಾಯಿಸಿ, ಅದನ್ನು ಅವರ ಮನೆಯವರು ತಿಂದು ನಾನು ಆ ಪಾಪ ಕಟ್ಟಿಕೊಳ್ಳಬೇಕಾ? ಅದು ಸಾಧ್ಯವಿಲ್ಲ... ಬೇರೆ ಏನಾದರೂ ಪರಿಹಾರವಿದ್ದರೆ ತಿಳಿಸಿ ಎಂದ ಕೇಶವ ಭಟ್ಟರ ಮಾತನ್ನು ಕೇಳಿ ವಾದಿರಾಜರು ನಕ್ಕರು.
ನೀನು ಅವರಿವರ ಬಗ್ಗೆ ಅಷ್ಟು ಆಲೋಚಿಸುವುದು ಯಾಕೆ? ಈಗ ನಿನ್ನ ಹೆಂಡ್ತಿ ಅಷ್ಟು ಚೆಂದದಲ್ಲಿ ಅವರಿಗೆ ಹೇಳಿದ್ದಲ್ವಾ? ಅವರು ಏನಾದರೂ ಅದಕ್ಕೆ ಮರ್ಯಾದೆ ಕೊಟ್ರಾ? ಮತ್ತೆ ನೀನ್ಯಾಕೆ ಯೋಚಿಸ್ತೀಯಾ? ಎಂದು ಅವರಿಗೆ ಕೇಳಿದರು. ಆದರೂ ಕೇಶವ ಭಟ್ಟರಿಗೆ ಅದೆಲ್ಲ ಸರಿಯಲ್ಲವೆನಿಸಿತು. ವಾದಿರಾಜಣ್ಣ ಕೂಡ ಆಲೋಚನೆಗೆ ಬಿದ್ದರು.


ನೋಡು, ನಮ್ಮ ಟೈಗರನ್ನೇ ತೆಗೆದುಕೊಂಡು ಹೋಗು ಎಂದ ಅವರ ಮಾತು ಕೇಳಿ ಭಟ್ಟರಿಗೆ ಅದೇ ಸರಿಯಾದ ಪರಿಹಾರವೆಂದು ತಿಳಿಯಿತು. ವಾದಿರಾಜಣ್ಣನ ಮನೆಯ ನಾಯಿಯೆಂದರೆ ಎಲ್ಲರಿಗೂ ಹೆದರಿಕೆಯೆ. ಯಾರಾದರೂ ಅಪರಿಚಿರು ಬಂದರೆ ಎದೆಯ ಮೇಲೆ ಎರಡು ಕಾಲುಗಳನ್ನು ಇಟ್ಟು ನಿಲ್ಲುತ್ತಿದ್ದ ಅದರ ಗಂಭೀರ ಮುಖ, ಎಂತಹ ಎದೆಗಾರಿಕೆಯವರನ್ನೂ ಕ್ಷಣ ಹೊತ್ತು ಅಲ್ಲೋಲ್ಲ ಕಲ್ಲೋಲ ಮಾಡುತ್ತಿತ್ತು.
ಸರಿಯಾಗಿ ಹೇಳಿದೆ ನೋಡು. ಆದರೆ ಅದನ್ನು ತೆಗೆದುಕೊಂಡು ಹೋಗುವುದು ದೊಡ್ಡ ಸಮಸ್ಯೆಯೆ

ನೀನು ಅದಕ್ಕೆ ಯೋಚಿಸುವುದು ಬೇಡ. ನನ್ನ ಸ್ಕೂಟರಿನಲ್ಲಿಯೇ ಅದನ್ನು ನಿನ್ನ ಮನೆಗೆ ತಲುಪಿಸುತ್ತೇನೆ ಅಂದವರೇ ಎರಡೇ ದಿನದಲ್ಲಿ ಅಷ್ಟು ದೊಡ್ಡ ನಾಯಿಯನ್ನು ತಾವೇ ಕೇಶವ ಭಟ್ಟರ ಮನೆಗೆ ತಂದು ಕಟ್ಟಿದರು. ಮೀನಾಕ್ಷಿಯವರಿಗೆ ಅದರ ಹತ್ತಿರ ಹೋಗುವುದಕ್ಕೂ ಹೆದರಿಕೆಯಾಗುತ್ತಿತ್ತು. ಆದರೆ ಕೇಶವ ಭಟ್ಟರನ್ನು ನೋಡಿದ ಕೂಡಲೇ ಬಾಲ ಆಲ್ಲಾಡಿಸುತ್ತಾ ಇತ್ತು. ಅವರೂ ಅರೆ ಬರೆ ಧೈರ್ಯದಿಂದ `ಟೈಗರ್ ಅನ್ನುತ್ತಾ ಅದನ್ನು ಸಮಾಧಾನಿಸಿ ಅದರ ವಿಶ್ವಾಸವನ್ನು ಗೆದ್ದರು. ತದ ನಂತರ ರಾತ್ರಿಯ ಹೊತ್ತು ಅದನ್ನು ತಿರುಗಾಡಾಲು ಬಿಡುತ್ತಿದ್ದರು. ಬೆಳಗಾಗುತ್ತಲೇ ಅದನ್ನು ಕಟ್ಟುತ್ತಿದ್ದರು. ಈ ರೀತಿಯ ಒಪ್ಪಂದಕ್ಕೆ ಅದು ಒಗ್ಗಿಕೊಂಡಿತು.
`ಟೈಗರ್ ಅಂದರೆ ಸಾಕು ತಲೆಯೆತ್ತಿ ಗುರಾಯಿಸಿ ನೋಡುತ್ತಿದ್ದ ನಾಯಿಯನ್ನು ಕಂಡರೆ ಯಾರಾದರೂ ಒಮ್ಮೆ ಹೆದರಲೇ ಬೇಕು. ಅದು ಬೊಗಳಿತೆಂದರೆ ಊರಿನ ನಾಲ್ಕು ಮನೆಗಳಿಗೂ ಕೇಳುವ ಹಾಗೆ ಇತ್ತು. ಭಟ್ಟರು ಬೆಳಿಗ್ಗೆ ಎದ್ದ ಕೂಡಲೇ ಅದನ್ನು ಕರೆದು ಕಟ್ಟುತ್ತಿದ್ದರು. ಆ ದಿನ ಅವರು ಕರೆಯುವಾಗಲೂ ಅದು ಬರಲಿಲ್ಲ. `ಎಲ್ಲಿ ಹೋದ ಇವ? ಅಂದುಕೊಂಡು ತೋಟದ ಕಡೆಗೆ ಬರುವಾಗ ತಾಳೆಯ ಮರದ ಕೆಳಗೆ ಸುಮ್ಮನೆ ಕುಳಿತಿತ್ತು. `ಎಂತಾಯ್ತು ಇವನಿಗೆ? ಯಾರಾದರೂ ವಿಷವೇನಾದರೂ ಹಾಕಿದರಾ ಹೇಗೆ? ಸುಮ್ಮನೆ ಮಲಗಿದ್ದಾನಲ್ಲ? ಅನ್ನುತ್ತಾ ಅದರ ಹತ್ತಿರ ಬಂದು `ಟೈಗರ್ ಅಂದರು. ಅವರ ಕರೆಗೆ ವಿಧೇಯತೆಯಿಂದ `ಕುಯ್ಯುಂ ಕುಯ್ಯುಂ ರಾಗ ಹೊರಡಿಸಿ ತಲೆಯನ್ನು ಮುಂದಕ್ಕೆ ಚಾಚಿ ಮಲಗಿತು. ಭಟ್ಟರಿಗೆ ಇನ್ನಷ್ಟು ಆತಂಕವಾಯಿತು. `ಎಂತದು ಇದು, ಇವನ ವರ್ತನೆ? ಅಂದುಕೊಂಡು ಹತ್ತಿರ ಹೋಗಿ `ಬಾರೋ ಮನೆಗೆ ಅಂದು ಮೆಲ್ಲನೆ ಕೋಲಿನಿಂದ ಬೆನ್ನಿನ ಮೇಲೆ ಮೆಲ್ಲನೆ ಬಾರಿಸಿದರು. ಅವರ ಪೆಟ್ಟಿಗೆ ಹೆದರಿದ ಅದು ಚಂಗನೆ ಎದ್ದು ಹತ್ತಿರದಲ್ಲಿದ್ದ ತನ್ನ ಬೇಟೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡು ಮನೆಯತ್ತ ಓಡಿತು.
`ಎಲಾ! ಇವನಾ? ಇದೆಂತ ಗ್ರಾಚಾರ? ಅವನು ಬಾಯಿಯಲ್ಲಿ ಎಂತ ಹಿಡಿದುಕೊಂಡು ಹೋದದ್ದು? ಅನ್ನುತ್ತಾ ಅದರ ಹೆಸರನ್ನು ಕೂಗುತ್ತಾ ಅದರ ಹಿಂದೆ ಓಡಿದರು. ಅವರು ಕರೆಯುವಾಗ ಅದು ಅಷ್ಟೇ ವೇಗದಿಂದ ಹಿಂದಕ್ಕೆ ಬಂದು ಬಾಯಿಯಲ್ಲಿದ್ದದ್ದನ್ನು ಅವರಿಗೆ ತೋರಿಸುವಂತೆ ನಿಂತಿತು. ಭಟ್ಟರಿಗೆ ತಲೆ ಸುತ್ತು ಬಂದು ಬೀಳುವುದೊಂದೇ ಬಾಕಿ. `ಇವ ಎಂತ ಕೆಲಸ ಮಾಡಿದ ಅಂದುಕೊಂಡು ಕೋಲಿನಿಂದ ರಪ್ಪನೆ ಬಾರಿಸಿ ಅವನನ್ನು ಸರಪಣಿಯತ್ತ ಓಡಿಸಿದರು. ಬಿದ್ದ ಪೆಟ್ಟಿನ ನೋವಿಗೆ ಬಾಯಿಯಲ್ಲಿದ ಕೋಳಿಯನ್ನು ಬಿಟ್ಟು ತನ್ನ ಸ್ಥಾನದಲ್ಲಿ ಹೋಗಿ ನಿಂತಿತು. ದಡದಡನೆ ಬಂದವರು ಅದನ್ನು ಕಟ್ಟಿ ಹಾಕಿ, ಮತ್ತೆರಡು ಪೆಟ್ಟು ಬಿಗಿದರು. `ಕುಯ್ಯೋಂ ಕುಯ್ಯೋಂ ಅನ್ನುತ್ತಾ ಮುದುರಿ ಕುಳಿತಿತು.

`ಛೆ! ಎಂತ ಕೆಲಸ ಆಗೋಯ್ತು? ಅಂದುಕೊಂಡು ಮೀನಾಕ್ಷಿಯನ್ನು ಕರೆದರು. ಅವರು ಗಂಡನ ಕೂಗಿಗೆ ದಿಗಿಲುಗೊಂಡು ಹೊರಗೆ ಬರುವಾಗ ಅಂಗಳದಲ್ಲಿದ್ದ ಸತ್ತ ಕೋಳಿಯನ್ನು ಕಂಡು ಬೆದರಿದರು. ಇದೆಂತ ಕಥೆ? ಅವನನ್ನು ಬಿಟ್ಟದ್ದು ತಪ್ಪಾಯ್ತು ನಾಯಿಯ ಕೆಲಸವನ್ನು ಕಂಡು ಹಾಗೇ ಹೇಳಿದಾಗ ಭಟ್ಟರಿಗೂ ಹಾಗೇ ಅನಿಸಿತು. ಆದರೆ ಯಾವತ್ತೂ ಇಲ್ಲದ್ದು ಇವತ್ತೇ ಹೀಗಾಗಾಬೇಕೆ? ಇರಲಿ ಅಂದುಕೊಂಡು ಮಡದಿಯ ಮುಖ ನೋಡಿದರು.
ಯಾರಿಗೂ ಹೇಳೋದು ಬೇಡ. ಅದನ್ನು ಕಾಡಿನ ಹತ್ತಿರ ಹೂತು ಹಾಕಿ ಬಿಡಿ ಎಂದು ಗಂಡನಿಗೆ ಬಿಟ್ಟಿ ಸಲಹೆ ಮಾಡಿದರು. ಇನ್ನು ಇದನ್ನು ನೋಡಿ ಸೇಸಕ್ಕ ದೊಡ್ಡ ರಾದ್ಧಾಂತ ಮಾಡುವುದು ಬೇಡವೆಂದು ಮಗನನ್ನು ಕರೆದು ಹಾರೆಯಿಂದ ಅದನ್ನು ಬುಟ್ಟಿಯಲ್ಲಿ ಹಾಕಿ, ಕಾಡಿನತ್ತ ನಡೆದರು. ಅಲ್ಲಿ ಸ್ವಲ್ಪ ಮಣ್ಣು ತೆಗೆದು ಅದನ್ನು ಮುಚ್ಚಿ ಹಾಕಿದರು. ಆದರೆ ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರುವುದೆಂದು ಅವರಿಗೆ ತಿಳಿದಿತ್ತು. ಅದಕ್ಕೆ ತಕ್ಕಂತೆ ನರಿಯೋ ನಾಯಿಯೋ ಹೂತು ಹಾಕಿದ್ದ ಕೋಳಿಯನ್ನು ಮೇಲಕ್ಕೆ ಹಾಕಿದ್ದವು. ಬಿಜಕ್ರೆ ತರಲೆಂದು ಕಾಡಿಗೆ ಹೋಗಿದ್ದ ಸೇಸಕ್ಕನ ಕಣ್ಣಿಗೆ ಅದು ಬೀಳಬೇಕೆ? ಮೂರು ದಿನದಿಂದ ಕಾಣೆಯಾಗಿದ್ದ ತನ್ನ ಮೊಟ್ಟೆ ಇಟ್ಟ ಹೆಂಟೆ ಕಾಣೆಯಾಗಿದ್ದಕ್ಕೆ ನರಿಗೆ ಶಾಪ ಹಾಕಿದ್ದರು. ಮೊಟ್ಟೆಗಳೂ ಕಲ್ಲಾಗಿ ಹೋಗಿದ್ದವು. ಆದರೆ ಆ ಕೋಳಿ ಮಣ್ಣಿನಿಂದ ಮೇಲೆ ಬಂದಿರುವಾಗ ಅವರಿಗೆ ಅನುಮಾನವಾಯಿತು.

ಬಿಜಕ್ರೆಯ ತೊಟ್ಟೆಯನ್ನು ಹಾಗೆ ಅಲ್ಲೇ ಬಿಸಾಡಿ ಬಂದವರು. ಮೀನಾಕ್ಷಮ್ಮನಿಗೆ ಶಾಪ ಹಾಕುತ್ತಲೇ ಬಂದರು. ಆ ಸತ್ಯವನ್ನು ಮುಚ್ಚಿ ಹಾಕಲು ಗೊತ್ತಿಲ್ಲದ ಮೀನಾಕ್ಷಮ್ಮ ನಡೆದುದ್ದನ್ನು ಹೇಳಿಯೇ ಬಿಟ್ಟರು. ನಾಯಿಯಿಂದ ಅದನ್ನು ಹಿಡಿಸಿದ್ದು ನೀವೇ ಅನ್ನುವ ಆರೋಪದ ಜೊತೆಗೆ ಕೆಟ್ಟ ಬೈಗುಳನ್ನೂ ಕೇಳಬೇಕಾಗಿದ್ದು ಅವರ ಹಣೆಬರಹವಾಯಿತು. ಆವತ್ತು ಸಂಜೆ ಕೋಳಿ ಸಾಟೆಯ ಪುಟ್ಟನಿಗೆ ಎಂಟು ಕೋಳಿಗಳನ್ನು ಮಾರಿದಲ್ಲದೆ ಉಳಿದ ಮೂರು ಕೋಳಿಗಳನ್ನು ಭೂತಕ್ಕೆ ಬಿಟ್ಟರು. ಆ ವಿಷಯ ಗೊತ್ತಾಗಿದ್ದು ಅವರ ಮಗನಿಂದಲೇ. ಅವನು ಭಟ್ಟರ ಮಗ ಪಟ್ಟಾಬಿಯ ಜೊತೆಗೆ ಶಾಲೆಗೆ ಹೋಗುವಾಗ ಹೇಳಿದನಂತೆ.
ಇನ್ನು ನೀವು ಕೋಳಿಗಳನ್ನು ಏನೂ ಮಾಡುವ ಹಾಗಿಲ್ಲ. ಅದನ್ನೆಲ್ಲಾ ಅಮ್ಮ ಭೂತಕ್ಕೆ ಬಿಟ್ಟಿದ್ದಾರೆ

ಅದನ್ನು ಕೇಳಿದ ಭಟ್ಟರ ಮಗ ಮನೆಗೆ ಬಂದು ಹೇಳಿದ ಮೇಲೆ ಮೀನಾಕ್ಷಿಗೂ ಹೆದರಿಕೆಯಾಗಿತ್ತು. ಅವರು ಗಂಡನನ್ನು ಕರೆದು, ನೋಡಿ, ಇನ್ನು ಊರಿನ ಕೋಲ ಮುಗಿಯುವ ತನಕ ನಾಯಿಯನ್ನು ಬಿಡುವುದು ಬೇಡ. ಅವರು ಕೋಳಿಗಳನ್ನು ಭೂತಕ್ಕೆ ಬಿಟ್ಟಿದ್ದಾರಂತೆ ಎಂದು ಎಚ್ಚರಿಕೆಯ ಮಾತು ಹೇಳಿದರು. ಕೇಶವ ಭಟ್ಟರಿಗೂ ಆತಂಕವಾಗದಿರಲಿಲ್ಲ. ನಾಯಿಯನ್ನು ಕಟ್ಟಿಯೇ ಹಾಕಿದರು. ಅದು ಮಲಗಿದಲ್ಲಿಯೇ ಒಂದು... ಎರಡು... ಮಾಡುವುದನ್ನು ರೂಢಿ ಮಾಡಿಕೊಂಡಿತು. ಇದರಿಂದಾಗಿ ಅದರ ಚಾಕರಿಯೇ ಒಂದು ದೊಡ್ಡ ಹೊರೆಯಾದಾಗ ಅದನ್ನು ವಾಪಾಸು ವಾದಿರಾಜಣ್ಣನಿಗೆ ಕೊಟ್ಟು ಬರುವುದೆಂದು ನಿರ್ಧರಿಸಿದರು. ವಾದಿರಾಜಣ್ಣನ ಒಪ್ಪಿಗೆ ದೊರೆತ ನಂತರ ಒಂದು ದಿನ ರಿಕ್ಷಾದಲ್ಲಿ ಹಾಕಿಕೊಂಡು ಆದನ್ನು ಬಿಟ್ಟು ಬಂದರು.

ಕೋಳಿಗಳನ್ನು ಭೂತಕ್ಕೆ ಬಿಟ್ಟರೂ ಅವುಗಳ ಉಪದ್ರ ನಿಲ್ಲಲಿಲ್ಲ. ಗದ್ದೆಗೆ ಬರುವುದು, ತೋಟದಲ್ಲೆಲ್ಲಾ ಜಾಲಾಡಿಸುವುದು, ಮಣ್ಣನ್ನು ಕಾಲಿನಿಂದ ಎಳೆದು ಹಾಕುವುದು, ಅಂಗಳದಲ್ಲೆಲ್ಲಾ ಹಿಕ್ಕೆ ಹಾಕುವುದು, ಬೈ ಹುಲ್ಲಿನ ಮೇಲೆ ಹಾರಿ ಕುಳಿತುಕೊಳ್ಳುವುದು. ಹೀಗೆ ಉದ್ದಕ್ಕೆ ಅವುಗಳ ಉಪದ್ರ ನಡೆಯುತ್ತಲೇ ಇತ್ತು. ಸೇಸಕ್ಕನ ಮನೆಯವರಿಗಿಂತಲೂ ಅವುಗಳ ಮೇಲೆ ಭಟ್ಟರ ಮನೆಯವರಿಗೆ `ಭೂತಕ್ಕೆ ಬಿಟ್ಟ ಕೋಳಿ ಅನ್ನುವ ಗೌರವವಿತ್ತು. ಅವುಗಳ ಉಪಟಳವನ್ನು ತಡೆದುಕೊಂಡು ಸುಮ್ಮನಾದರು. ಸೇಸಕ್ಕನಿಗೂ ಆತಂಕ ತಪ್ಪಿತು. ಅವರು ಪದೇ ಪದೇ ಭಟ್ಟರ ಮಕ್ಕಳು ಸಿಕ್ಕಿದಾಗಲೆಲ್ಲಾ `ಕೋಳಿಗಳಿಗೆ ಕಲ್ಲು ಬಿಸಾಡ ಬೇಡಿ. ಭೂತಕ್ಕೆ ಬಿಟ್ಟಿದೆ ಅನ್ನೋರು.

ಹೀಗೆ ಭೂತಕ್ಕೆ ಬಿಟ್ಟ ಕೋಳಿಗಳು ಭಟ್ಟರ ಮನೆಯಲ್ಲೆಲ್ಲಾ ಓಡಾಡಿಕೊಂಡು ಸೊಕ್ಕಿ ಹೋದವು. ಭಟ್ಟರಿಗೆ ಧರ್ಮ ಸಂಕಟ. ಒಮ್ಮೆ ಅವರ ಮನೆಗೆ ಸಂಬಂಧಿಕರು ಯಾರೋ ಬಂದವರು, ಏನು, ನೀವೂ ಕೋಳಿಗಳನ್ನು ಸಾಕಿದ್ದೀರಾ? ಅಂದಾಗ ಭಟ್ಟರಿಗೆ ನಾಚಿಕೆಯಾಯಿತು. ಅವರು ಪರಿಸ್ಥಿತಿಯನ್ನು ವಿವರಿಸಿ ಹೇಳಿದ ನಂತರ ಅವರೆಲ್ಲಾ ನಕ್ಕರು. ಭಟ್ಟರು ಈ ಅವಮಾನವನ್ನು ನುಂಗಿಕೊಂಡಿದ್ದರು. ಇದ್ದಕ್ಕಿದ್ದಂತೆ ಕೋಳಿಗಳು ಬರುವುದು ನಿಂತಿತು. ಭಟ್ಟರಿಗೂ ಅವರ ಮನೆಯವರಿಗೂ ಆಶ್ಚರ್ಯ! ಊರಿನ ಕೋಲಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಭೂತಕ್ಕೆ ಬಿಟ್ಟ ಕೋಳಿಗಳೆಲ್ಲಾ ಎಲ್ಲಿ ಹೋದವು? ಸೇಸಕ್ಕನಿಗೆ ಬುದ್ಧಿ ಬಂದಿರಬೇಕು. ಅವುಗಳನ್ನು ಗೂಡಿನಲ್ಲಿ ಹಾಕಿ ಸಾಕುತ್ತಿದ್ದಾರೇನೋ? ಅಂದುಕೊಂಡು ನೆಮ್ಮದಿಯ ನಿಡುಸುಯ್ದರು.

ಆದರೆ ಹಾಗಾಗಲಿಲ್ಲ. ಎರಡು ದಿವಸ ಕಾಣಿಸದ ಕೋಳಿಗಳು ಗದ್ದೆಯ ನಡುವೆ ಓಡಾಡುತ್ತಿದ್ದದ್ದು ಕಾಣಿಸಿತು ಭಟ್ಟರಿಗೆ. `ಎಲಾ ಶಿವನೇ! ಈ ಕೋಳಿಗಳಿಗೂ ಕಳ್ಳ ಬುದ್ಧಿ ಗೊತ್ತುಂಟಾ? ಹೀಗೆ ಯಾರಿಗೂ ಗೊತ್ತಾಗದ ಹಾಗೆ ಗದ್ದೆಯ ನಡುವೆ ಬಂದು ತೆನೆಯನ್ನು ಹಾಳು ಮಾಡುವುದಾ? ಅಂದುಕೊಂಡವರೇ ಒಂದು ಕಲ್ಲನ್ನು ತೆಗೆದು ಬಿಸಾಡಿದರು. ಕಲ್ಲು ಕೋಳಿಯ ಕಾಲಿಗೆ ನಾಟಿರಬೇಕು. ಕೂಗುತ್ತಾ ಎತ್ತರಕ್ಕೆ ಹಾರಿದ ಕೋಳಿ ಗದ್ದೆಯ ಬದಿಗೆ ಬಂದು ಬಿದ್ದು ಒದ್ದಾಡಿತು. ಭಟ್ಟರ ಎದೆ ಝಲ್ಲೆಂದಿತು. `ಇನ್ನೆಂತ ಮಾಡುವುದು? ಎಂದು ತಲೆಗೆ ಕೈ ಹಚ್ಚಿದರು. ಹೊರಗೆ ಬಂದ ಮಡದಿಗೆ ನೀರು ತರುವಂತೆ ಹೇಳಿದರು. ಮೀನಾಕ್ಷಮ್ಮ ನೀರು ತಂದು ಅವರ ಕೈಯಲ್ಲಿ ಕೊಟ್ಟರು. ಕೈಗೆ ನೀರು ಆಪೋಷನ ಮಾಡಿಕೊಂಡು ಕೋಳಿಯ ಮೇಲೆ ಹಾಕಿದರು. ಕೋಳಿ ಸತ್ತೆನೋ, ಬದುಕಿದೆನೋ ಎಂದು ಓಡಿತು. ಅವರು ನಿರುಮ್ಮಳರಾದರು.

ಎಂತದು ನೀವು, ಅದು ಭೂತದ ಕೋಳಿಯಲ್ವಾ? ಅದಕ್ಕೆ ನೀವು ಕಲ್ಲು ಬಿಸಾಡಿದ್ದಾ? ಅದು ಸತ್ತಿದ್ರೆ ನಾವು ಎಂತದು ಮಾಡ್ಬೇಕಿತ್ತು? ಅನ್ನುತ್ತಾ ಭಟ್ಟರ ತಲೆ ಕೊರೆದರು. ಭಟ್ಟರು ಮಾತಾಡದೆ ನೀರಿನ ಪಾತ್ರೆಯನ್ನು ತೆಗೆದುಕೊಂಡು ಮನೆಯತ್ತ ನಡೆದರು.
ಅವರು ಮನೆಯ ಒಳಗೆ ಕಾಲಿಟ್ಟಿದ್ದರಷ್ಟೇ ಸೇಸಕ್ಕನ ಗಂಟಲು `ಟೈಂ ಟೈಂ ಅನ್ನುವುದು ಕೇಳಿಸಿತು. ಭೂತಕ್ಕೆ ಬಿಟ್ಟ ಕೋಳಿಯ ಕಾಲು ಮುರಿದದ್ದೆ ಅದಕ್ಕೆ ಕಾರಣವೆನ್ನುವುದು ತಿಳಿಯಿತು. ಮಾತಿಗೆ ಮಾತು ಬೆಳೆದರೆ ದೊಡ್ಡ ಜಗಳವೇ ಆಗುತ್ತದೆಯೆಂದು ಅವರಿಗೆ ಗೊತ್ತು.
ಕಾಲ ಹಾಗೇ ನಿಲ್ಲುತ್ತದಾ? ಭಟ್ಟರು ರಾತ್ರಿ ಅಂಗಡಿ ಮುಚ್ಚಿ ಮನೆಗೆ ಬಂದಾಗ ಸುಮಾರು ಎಂಟು ಗಂಟೆಯ ಸಮಯ. ಮನೆಯ ಒಳಗೆ ಕಾಲಿಟ್ಟಿದ್ದರಷ್ಟೆ ಕೋಳಿಗಳು ಒಂದೇ ಸಮನೆ `ಕೊಕ್ಕೊಕ್ಕೋ ಎಂದು ಕೂಗುವುದು ಕೇಳಿಸಿತು. ಇಷ್ಟು ಹೊತ್ತಿಗೆ ಕಾಡು ಬೆಕ್ಕೋ, ನರಿಯೋ, ಇಲ್ಲ ಕತ್ತೆಕಿರುಬನೋ ಬಂದಿರಬೇಕೆಂದುಕೊಂಡರು. ಭೂತದ ಕೋಳಿಗಳನ್ನು ಅವು ಏನು ಮಾಡಲಾರವು ಅನ್ನುವ ಮುಗ್ಧತೆ ಭಟ್ಟರ ಮನೆಯವರಿಗೆ.
ಬೆಳಿಗ್ಗೆ ಸೇಸಕ್ಕನ ಮಗ ಸ್ಟೀಲ್ನ ಚೆಂಬು ಹಿಡಿದುಕೊಂಡು ಭಟ್ಟರ ಮನೆಗೆ ಬಂದ. ದೇವರಿಗೆ ಹೂವು ಕೊಯ್ಯುತ್ತಿದ್ದ ಭಟ್ಟರು `ಏನು? ಅಂದರು.
ಹಾಲು ಕೊಡ್ಬೇಕಂತೆ, ಬೊಂಬಾಯಿಯಿಂದ ಅಕ್ಕ, ಭಾವ ಬಂದಿದ್ದಾರೆ ಅಂದ.
ಭಟ್ಟರು ಮಡದಿಯನ್ನು ಕರೆದು ಹಾಲು ಕೊಡುವಂತೆ ಹೇಳಿದವರೆ ಹುಡುಗನ ಬಳಿ, ಅಲ್ಲನಾ, ನಿನ್ನೆ ರಾತ್ರಿ ನಿಮ್ಮ ಕೋಳಿಗಳು ಯಾಕೆ ಹಾಗೆ ಕೂಗಿಕೊಂಡದ್ದಾ? ಅಂದರು.
ಹುಡುಗ ನಗುತ್ತಾ ನಿಂತಿದ್ದ. ಅವನ ವರ್ತನೆ ವಿಚಿತ್ರವಾಗಿತ್ತು.
ನಿಮ್ಮ ಕೋಳಿಯಲ್ವಾ? ಭಟ್ಟರು ಅನುಮಾನದಿಂದ ಮತ್ತೊಮ್ಮೆ ಪ್ರಶ್ನಿಸುವಾಗ ಅವನು ನಗುತ್ತಲೇ, ಅದು ನಿನ್ನೆ ಅಕ್ಕನವರು ಬಂದಿದ್ರಲ್ಲಾ ಅದಕ್ಕೆ... ಅಂದ.
ಅಲ್ಲನಾ, ಅದು ಭೂತಕ್ಕೆ ಬಿಟ್ಟ ಕೋಳಿಯಲ್ವಾ? ಹಾಗೂ ಮಾಡ್ತಾರಾ? ಆಶ್ಚರ್ಯದಿಂದ ಭಟ್ಟರು ಕೇಳುವಾಗ ಅವನು, ಭೂತಕ್ಕೆ ನಾಳೆ ಫಾರಂನಿಂದ ಕೋಳಿಗಳನ್ನು ತರ್ತಾರೆ ಅಂದು ಮೀನಾಕ್ಷಮ್ಮ ಹಾಕಿದ ಹಾಲನ್ನು ತೆಗೆದುಕೊಂಡು ಹೊರಟ. ಮೀನಾಕ್ಷಮ್ಮನಿಗೂ ಆಶ್ಚರ್ಯ.
ಹಾಗೆ ಭೂತಕ್ಕೆ ಬಿಟ್ಟ ಕೋಳಿಯನ್ನು ತಿಂದವರನ್ನು ಸುಮ್ಮನೆ ಬಿಡ್ತದಾ ಅದು? ಮುಗ್ಧತೆಯಿಂದ ಪ್ರಶ್ನಿಸಿದವರನ್ನು ನೋಡಿ ಭಟ್ಟರು ಕೂಡ ಅಷ್ಟೆ ಮುಗ್ಧತೆಯಿಂದ `ಏನೋ, ಗೊತ್ತಿಲ್ಲ ಅನ್ನುವಂತೆ ಕೈ ತಿರುಚಿದರು.

Read more!

Tuesday, November 24, 2009

ಮರದ ಪೆಟ್ಟಿಗೆ


(ಕರ್ಮವೀರದಲ್ಲಿ ಪ್ರಕಟವಾದ ಪತ್ತೇದಾರಿ ಕಥೆ)

ಮರಳ ದಿಣ್ಣೆ ಏರಿ ಮೊಣಕಾಲ ಮೇಲೆ ಗಲ್ಲವಿಟ್ಟು ಸೂರ್ಯ ಮುಳುಗುವವರೆಗು ಕುಳಿತು ಸಮುದ್ರದ ಅಲೆಗಳನ್ನು ನೋಡುತ್ತಿದ್ದಳು ಗಾಜು ಕಣ್ಣಿನ ಚೆಲುವೆ ನಿನಾದ. ಸೂರ್ಯ ಕೆಂಪು ತಟ್ಟೆಯಾಗಿ ಮುಳುಗಿದಾಗ ಸುತ್ತಲೂ ಕತ್ತಲಾವರಿಸಿತು. ಸಮುದ್ರದ ಬೋರ್ಗರೆತದ ಸದ್ದು ಜೋರಾಗುತ್ತಿದ್ದಂತೆ ಅವಳ ಆಲೋಚನೆಗಳೆಲ್ಲಾ ಕಡಿಮೆಯಾದಂತಾಯಿತು. ಅಲೆಗಳನ್ನೇ ನೋಡುತ್ತಾ ಕುಳಿತಿದ್ದವಳನ್ನು ಎಚ್ಚರಿಸಿದ್ದು ಯಾವುದೋ ಅಪರಿಚಿತ ದನಿ!
"ಎಕ್ಸ್ ಕ್ಯೂಸ್ ಮಿ" ವ್ಯಕ್ತಿ ಧ್ವನಿಯಲ್ಲಿ ಮೃದುತ್ವ ಬೆರೆಸಿ ಕೇಳಿದ. ಅಪರಿಚಿತ ದನಿ ಕೇಳಿ ಬೆಚ್ಚಿ ತಲೆ ಎತ್ತಿದಳು ನಿನಾದ. ಅವಳನ್ನು ನೋಡಿ ಮುಗುಳ್ನಕ್ಕ. ಎದ್ದು ನಿಂತು ಸೀರೆಗೆ ಅಂಟಿಕೊಂಡಿದ್ದ ಮರಳನ್ನು ಕೊಡವಿಕೊಂಡಳು.
"ನೀವು ನನಗೆ ಸಹಾಯ ಮಾಡ ಬಲ್ಲಿರಿ?" ಬೇಡಿಕೆಯ ಸ್ವರದಲ್ಲಿ ಕೇಳಿದ ಅಪರಿಚಿತ ಯುವಕ! ಮುಖ ಅಸ್ಪಷ್ಟವಾಗಿ ಕಂಡಿತು. ಯುವಕ ಸಹಾಯ ಹಸ್ತ ಕೇಳುತ್ತಿದ್ದಾನೆ. ಅಪರಿಚಿತನನ್ನು ಅಳೆಯುವಂತೆ ನೋಡಿದಳು."
"ಇಲ್ಲೆ ಅರ್ಧ ಫರ್ಲಾಂಗ್ ದೂರದಲ್ಲಿ ನನ್ನ ಯಾಂತ್ರಿಕ ದೋಣಿ ಲಂಗರು ಹಾಕಿದೆ. ಅದರಿಂದ ವಸ್ತುವನ್ನು ಇಳಿಸಬೇಕಿದೆ. ಇಲ್ಲಿ ಸಹಾಯಕ್ಕೆ ಬೇರೆ ಯಾರು ಕಾಣಿಸ್ತಿಲ್ಲ. ನೀವು ಸಹಾಯ ಮಾಡಬಲ್ಲಿರೀಂತ ಭಾವಿಸ್ತೀನಿ" ಅವಳ ಮೌನವನ್ನು ಅರ್ಥೈಸಿಕೊಂಡಂತೆ ಹೇಳಿದ.
ಅವನು ಹೇಳುವುದು ಸರಿ. ಇಲ್ಲಿ ಬೇರಾವ ವ್ಯಕ್ತಿಯೂ ಕಾಣುತ್ತಿಲ್ಲ. ಸಹಾಯ ಮಾಡುವುದರಲ್ಲಿ ತಪ್ಪೇನಿದೆ. ಯುವಕ ಸಭ್ಯನಂತೆ ಕಾಣುತ್ತಿದ್ದಾನೆ.
"ಸರಿ" ಮರಳ ದಂಡೆಯ ಮೇಲೆ ಹೆಜ್ಜೆ ಮೂಡಿಸುತ್ತಾ ಅವನನ್ನು ಅನುಸರಿಸಿದಳು.
ಲಂಗರು ಹಾಕಿದ ದೋಣಿಯ ಪತಾಕೆ ಗಾಳಿಗೆ ತಟಪಟನೆ ಹಾರಾಡುತ್ತಿತ್ತು. ಅದೊಂದು ಯಾಂತ್ರಿಕ ದೋಣಿ. ಅವಳನ್ನು ಕೆಳಗೆ ನಿಲ್ಲುವಂತೆ ಹೇಳಿ, ಜಿಗಿದು ಯಾಂತ್ರಿಕ ದೋಣಿಯನ್ನೇರಿದ. ಉದ್ದನೆಯ ಎರಡು ಸ್ಲೈಡಿಂಗ್ ಗಳನ್ನು ಒಂದರ ಪಕ್ಕದಲ್ಲೊಂದು ಜೋಡಿಸಿ ದೋಣಿಗೆ ಓರೆಯಾಗಿ ನಿಲ್ಲಿಸಿದ. ಆರಡಿ ಉದ್ದನೆಯ ಮರದ ಪೆಟ್ಟಿಗೆಯನ್ನು ಸ್ಲೈಡಿಂಗ್ ನ ಪಕ್ಕಕ್ಕಿಟ್ಟು ಮೆಲ್ಲನೆ ಜಾರಿಸಿದ.
"ನಿಧಾನವಾಗಿ ಹಿಡಿಯಿರಿ." ಅವಳನ್ನು ಎಚ್ಚರಿಸಿದ. ಮರದ ಪೆಟ್ಟಿಗೆಯ ಇನ್ನೊಂದು ಬದಿಯ ಹಿಡಿಯನ್ನು ಹಿಡಿದು ಮರಳ ದಂಡೆಯ ಮೇಲೆ ಜಾರಿಸಿದಳು. ಆತ ದೋಣಿಯಿಂದ ಇಳಿದು ಪೆಟ್ಟಿಗೆಯನ್ನು ಎಳೆದು, ಸ್ಲೈಡಿಂಗ್ ಗಳನ್ನು ದೋಣಿಯೊಳಗೆ ತೂರಿಸಿದ.
"ಇದು ಪರ್ಸಿಯನ್ ದೋಣಿ ನನ್ನ ಗೆಳೆಯನದ್ದು. ಎರಡು ದಿವಸ ಇಲ್ಲೆ ಲಂಗರು ಹಾಕಿರುತ್ತೆ" ಅನಗತ್ಯ ವಿಚಾರವನ್ನು ಹೇಳುತ್ತಿದ್ದಾನೆ ಯುವಕ.
"ದಯವಿಟ್ಟು ನಿಲ್ಲಿ. ಇಲ್ಲೆ ದಂಡೆಯ ಅಂಚಿಗೆ ನನ್ನ ಕಾರು ನಿಂತಿದೆ. ನೀವು ಏನು ತಿಳ್ಕೊಳಾಂದ್ರೆ ಇದನ್ನು ಅಲ್ಲಿಯವರೆಗೆ ತಲುಪಿಸಲು....." ಹೆಜ್ಜೆ ಮುಂದಿಟ್ಟವಳನ್ನು ಕೇಳಿಕೊಂಡ.
"ಸರಿ"
ಉದ್ದನೆಯ ಪೆಟ್ಟಿಗೆಯ ಹಿಡಿಯನ್ನು ಹಿಡಿದಳು. ಇನ್ನೊಂದು ತುದಿಯಿಂದ ಆತ ಹಿಡಿದ. ಹೆಣ ಭಾರದ ಮರದ ಪೆಟ್ಟಿಗೆ! ಕೈಯ ಬೆರಳುಗಳು ಕಿತ್ತು ಬರುವಂತೆ ನೋಯುತ್ತಿದ್ದವು. ಕಾರಿನ ಬಳಿ ಬರುವಾಗ ಸುಸ್ತಾದಳು ಗಾಜು ಕಣ್ಣಿನ ಚೆಲುವೆ.
ಹಳೇ ಕಾಲದ ಕಾರಿನ ಡಿಕ್ಕಿಯನ್ನು ತೆರೆದು ಪೆಟ್ಟಿಗೆಯನ್ನು ಅದರಲ್ಲಿಟ್ಟ ಯುವಕ. ಕಾರಿನ ಒಳ ತೂರಿ, ದೀಪ ಬೆಳಗಿಸಿದ. ನೋಯುತ್ತಿದ್ದ ಕೈ ಬೆರಳುಗಳನ್ನು ಒರೆಸಿಕೊಂಡಳು ನಿನಾದ.
"ತುಂಬಾ ಉಪಕಾರವಾಯ್ತು. ನನ್ನಿಂದ ಸಹಾಯ ಬೇಕಿದ್ದಲ್ಲಿ ತಿಳಿಸಿ" ಕಡು ನೀಲಿ ಬಣ್ಣದ ಜೀನ್ಸು, ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ ಮುಗುಳ್ನಗುತ್ತಾ ಹೇಳಿದ. ಪರ್ಸಿನಿಂದ ವಿಸಿಟಿಂಗ್ ಕಾರ್ಡ ನೀಡಿದ. ಕೈ ಮುಗಿಯುವ ಸೌಜನ್ಯ ತೋರಿಸಿದಳು ನಿನಾದ. ಆತ ಯಂತ್ರಕ್ಕೆ ಚಾಲನೆ ನೀಡಿದ. ಕಾರು ಕಪ್ಪು ಹೊಗೆಯುಗುಳುತ್ತಾ ಮುಂದಕ್ಕೋಡಿತು. ನಿಧಾನವಾಗಿ ಹೆಜ್ಜೆಯಿಡುತ್ತಾ ರಸ್ತೆಯಂಚಿನಲ್ಲೆ ಸಾಗಿದಳು.
ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದವಳು ಏಕಾಏಕಿ ವರ್ಗವಾಗಿ ಹಳ್ಳಿಗೆ ಬಂದಿದ್ದಳು. ಅಪರಿಚಿತ ಊರು! ನಿಲ್ಲಲು ಬಾಡಿಗೆ ಮನೆ ಕೂಡ ದೊರೆತಿರಲಿಲ್ಲ. ಊರಿನ ಶ್ರೀಮಂತ ಚಿನ್ನದ ವ್ಯಾಪಾರಿ ಪನ್ನಲಾಲ್ ಮಡದಿ ಚಾಂದಿನಿ ಬಾಯಿಯ ಮಾತಿಗೆ ಒಂದು ಸಣ್ಣಗಿನ ಕೋಣೆಯನ್ನು ನೀಡಿದ್ದ. ಸ್ಟೌವ್, ಪಾತ್ರೆಗಳು, ಪುಸ್ತಕಗಳನ್ನು ಜೋಡಿಸಿದ ನಂತರ ಉಳಿದಿದ್ದು ಚಾಪೆ ಹಾಸುವಷ್ಟು ಜಾಗ ಮಾತ್ರ! ಮನಸ್ಸಿಗೆ ಬೇಸರವಾದಾಗ ಚಾಂದಿನಿ ಬಾಯಿಯ ಜೊತೆ ತಾಸು ಗಟ್ಟಲೆ ಮಾತನಾಡಿ ಸಮಯ ಕಳೆಯುತ್ತಿದ್ದಳು. ಅದರೆ ಪನ್ನಲಾಲ್ ಸಂಸಾರ ಸಮೇತ ಗುಜರಾತಿಗೆ ಹೋಗಿದ್ದ. ಮನಸ್ಸಿನ ಬೇಸರ ಕಳೆಯಲು ಸಮುದ್ರ ದಂಡೆಗೆ ಬಂದಳೆಂದರೆ ಕತ್ತಲಾವರಿಸಿದ ನಂತರವೇ ಹಿಂತಿರುಗುತ್ತಿದ್ದಳು.
ಚಂದಿರನ ಮಂದ ಬೆಳಕು ರಸ್ತೆಯಂಚಿನ ಮರಗಳ ಮರೆಯಿಂದ ತೂರಿ ರಸ್ತೆಯ ಮೇಲೆ ನೆರಳು ಬೆಳಕನ್ನು ಚಿತ್ರಿಸಿತ್ತು. ಕೈಯಲ್ಲಿದ್ದ ಪೇಪರನ್ನು ಸುತ್ತಿ ಹೆಬ್ಬೆರಳಿನಿಂದ ಟಕ್ಕನೆ ಮೇಲೆ ಹಾರಿಸಿದಳು. ಅದು ಹಾರಿ ಎಲ್ಲೋ ಬಿದ್ದಿತು. ತಟ್ಟನೆ ನೆನಪಾಯಿತು. ಅದು ಮರಳ ದಂಡೆಯಲ್ಲಿ ಯುವಕ ನೀಡಿದ್ದ ವಿಸಿಟಿಂಗ್ ಕಾರ್ಡ್. ಹೋಗಲಿ ಅದರಿಂದ ತನಗೇನು ಲಾಭ? ಯಾರೋ ಅಪರಿಚಿತ ಸಹಾಯ ಯಾಚಿಸಿದ. ಸಹಾಯ ಮಾಡಿದ್ದಾಯಿತು. ನಡಿಗೆ ವೇಗ ಹೆಚ್ಚಿಸಿ ಕೋಣೆಗೆ ಬಂದಾಗ ಏಕಾಂತ ಅವಳನ್ನು ಕಾಡಿತು. ರೇಡಿಯೋಗೆ ಚಾಲನೆ ಕೊಟ್ಟು ಕಾರ್ಯಕ್ರಮಗಳನ್ನು ಅಲಿಸುತ್ತಿದ್ದಳು. ಹಳ್ಳಿಗೆ ಕತ್ತಲಾಗುವುದು ಬೇಗ! ರಾತ್ರಿಯ ಊಟ ಮುಗಿಸಿ, ಚಾಪೆ ಹಾಸಿಕೊಂಡಳು. ಕ್ಯಾಂಡಲಿನ ಬೆಳಕಿನಲ್ಲಿ ಯಾವುದೋ ಪುಸ್ತಕವನ್ನು ಬಿಡಿಸಿ ಬೋರಲಾಗಿ ಮಲಗಿ ಓದುತ್ತಿದ್ದಳು. ನಿದ್ದೆ ದೂರವಾಗಿತ್ತು. ಪನ್ನಾಲಾಲ್ ನ ಸಂಸಾರ ಬರಲು ಇನ್ನು ಎರಡು ವಾರವಿದೆ. ಅಲ್ಲಿಯವರೆಗೆ ತಾನು ಒಬ್ಬಂಟಿ! ಮನದಲ್ಲಿ ಯಾವುದೋ ಆತಂಕ ತುಂಬಿತ್ತು.
ಕಣ್ಣು ಸೆಳೆಯುತ್ತಿದೆಯೆಂದಾಗ ಬಾಗಿಲಿನ ಚಿಲಕ ಭದ್ರ ಪಡಿಸಿ ಕ್ಯಾಂಡಲ್ ಆರಿಸಿದಳು. ಸೊಳ್ಳೆಗಳ ಕಾಟ ತಪ್ಪಿದಲ್ಲ. ಹೊರಗೆ ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಚಂದಿರನ ಬೆಳಕನ್ನು ನೋಡಿ ಬೊಗಳುತ್ತಿರಬಹುದು.
ಅಲ್ಲ! ಯಾರನ್ನೋ ಅಟ್ಟಿಸಿಕೊಂಡು ಹೋಗುವಂತೆ ಬೊಗಳುತ್ತಿವೆ! ಅಂದರೆ ಯಾರೋ ಕಳ್ಳ ಬಂದಿರಬಹುದು! ಏನೇನೋ ಆಲೋಚನೆಗಳು ಅವಳ ನಿದ್ದೆಯನ್ನು ದೂರಗೊಳಿಸಿದವು. ಎದೆ ಬಡಿತ ತೀವ್ರವಾಯಿತು. ಯಾರೋ ಅಂಗಳದಲ್ಲಿ ಓಡಾಡುವ ಸದ್ದು! ದಿಗ್ಗನೆ ಎದ್ದು ಕುಳಿತಳು. ಟಕ ಟಕ ಬೂಟುಗಾಲಿನ ಸದ್ದು! ಪನ್ನಾಲಾಲ್ ಆಗಿರಲಾರದು! ಆತನ ಸಂಸಾರ ಬರಲು ಇನ್ನೂ ಎರಡು ವಾರಗಳಿವೆ. ಅವನ ಕೆಲಸಾದಾಳುಗಳಿರಬೇಕು! ಚಿನ್ನದ ವ್ಯಾಪಾರಿಯ ಮನೆಗೆ ಕನ್ನ ಹಾಕುವಷ್ಟು ಕೀಳು ದರ್ಜೆಯ ವ್ಯಕ್ತಿಗಳಲ್ಲ. ಚಿತ್ತ ಸಮಾಧಾನಕ್ಕೆ ಎದ್ದು ಬಂದು ಕಿಟಿಕಿಯ ಬಳಿ ಮುಖ ತೂರಿಸಿದಳು. ಆಸ್ಪಷ್ಟ ಅಕೃತಿ! ಬೆಳದಿಂಗಳಿದ್ದರೂ ಸರಿಯಾಗಿ ಕಾಣಲಾರದು. ಗಿಡಗಳ ಮರೆಯಿಂದ ಅವಳ ಕೋಣೆಯ ಕಡೆ ನಡೆದು ಬರುತ್ತಿದ್ದ. ಕಳ್ಳತನದ ಹೆಜ್ಜೆಯಿಂದ ಬರುತ್ತಿಲ್ಲ! ಸರ ಸರನೆ ನಡೆದುಕೊಂಡು ಬರುತ್ತಿದ್ದಾನೆ! ಅವಳಿಗೆ ಸ್ಪಷ್ಟವಾಗಿ ಗೋಚರಿಸಿದ! ಪರದೆ ಬಿಟ್ಟು ಬಾಗಿಲಿನ ಬಳಿ ಬಂದು ಬೆದರಿಕೆಯಿಂದ ನಿಂತಳು.
ಸಂಜೆ ಮರಳ ದಂಡೆಯ ಮೇಲೆ ಕಾಣಿಸಿಕೊಂಡ ವ್ಯಕ್ತಿ! ಕಡು ನೀಲಿ ಪ್ಯಾಂಟ್ ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ! ಇಲ್ಲಿಗೆ ತನ್ನನ್ನು ಹುಡುಕಿಕೊಂಡು ಬಂದಿರಬಹುದು! ಇಲ್ಲ ಅಗಿರಲಾರದು. ತಾನು ಇಲ್ಲಿರುವೆನೆಂದು ಅವನಿಗೆ ತಿಳಿದಿಲ್ಲ. ಹೆಣ ಭಾರದ ಮರದ ಪೆಟ್ಟಿಗೆಯನ್ನು ದೋಣಿಯಿಂದ ಇಳಿಸಿ ಕಾರಿನಲ್ಲಿ ಇಡಲು ಸಹಕರಿಸಿದ್ದಳು. ಆತ ಕಾರನ್ನು ಚಲಾಯಿಸಿಕೊಂಡು ಹೋಗಿದ್ದ. ಮತ್ತೆ ಇಲ್ಲಿ ಹೇಗೆ ಕಾಣಿಸಿಕೊಂಡಿದ್ದಾನೆ?
ಬೂಟುಗಾಲಿನ ಸದ್ದು ನಿಂತಿತು. ಸಮಾಧಾನದ ಉಸಿರೆಳೆದುಕೊಂಡಳು. ಅಂದರೆ ಆ ವ್ಯಕ್ತಿ ಎತ್ತಲೋ ಸರಿದು ಹೋಗಿರಬೇಕು. ಬಾಗಿಲಿನ ಬಳಿಯಿಂದ ಇತ್ತ ಸರಿದವಳಿಗೆ ಕೇಳಿಸಿದ ಸದ್ದಿಗೆ ಬೆಚ್ಚಿ ಬಿದ್ದಳು!
ಬಾಗಿಲಿನ ಮೇಲೆ ನಯವಾಗಿ ಬೆರಳುಗಳಿಂದ ಕುಟ್ಟುವ ಸದ್ದು!
ಆ ವ್ಯಕ್ತಿ ತಾನೆಣಿಸಿದಂತೆ ಸರಿದು ಹೋದುದ್ದಲ್ಲ! ಬಾಗಿಲಿನ ಬಳಿ ನಿಂತು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ! ನಿಶಬ್ದವಾಗಿ ನಿಂತೇ ಇದ್ದಳು.
ಮತ್ತೊಮ್ಮೆ ಬಾಗಿಲಿನ ಮೇಲೆ ಬಡಿದ. ಬಾಗಿಲು ತೆರೆಯದಿದ್ದರೆ ಖಂಡಿತವಾಗಿಯು ಬಾಗಿಲು ಮುರಿದು ಒಳಗೆ ಬರುವ ಯೋಚನೆ ಇರಬಹುದು. ಬಾಗಿಲ ಬಳಿ ಧೈರ್ಯ ಮಾಡಿ ಬಂದಳು. ಹೇಗೂ ಆತ ಪರಿಚಿತ ವ್ಯಕ್ತಿ. ಸಂಜೆಯ ಹೊತ್ತು ಅವನಿಗೆ ಸಹಾಯ ಮಾಡಿದ್ದಾಗಿದೆ. ತನಗೇನು ಮಾಡಲಾರ. ಭಂಡ ಧೈರ್ಯದಿಂದ ಬಾಗಿಲಿನ ಚಿಲಕ ತೆಗೆಯಬೇಕೆನ್ನುವಷ್ಟರಲ್ಲಿ ಮತ್ತೆ ಜೋರಾಗಿ ಬಾಗಿಲು ಕಿತ್ತು ಬರುವಂತೆ ಬಡಿದ!
ತಟಕ್ಕನೆ ಚಿಲಕ ಜಾರಿಸಿದಳು. ಕ್ಯಾಂಡಲ್ ಉರಿಸಿ ದೀಪ ಬೆಳಗಿಸಿದಳು. ಅವಳನ್ನು ಕಂಡು ಸಣ್ಣಗೆ ಉದ್ಗಾರ ತೆಗೆದ.
"ಓಹೋ ನೀವು, ಮತ್ತೆ ನಿಮ್ಮನ್ನು ಕಾಣ್ತೀನೀಂತ ಅಂದುಕೊಂಡಿರಲಿಲ್ಲ" ಅವಳು ಬಾಗಿಲಿಗೆ ಅಡ್ಡವಾಗಿ ನಿಂತಿದ್ದಾಗ ಸರಿದು ಒಳ ಬಂದ. ಅವಳಿಗೆ ಧೈರ್ಯ ಬಂದಿತ್ತಾದರು ತಾನು ಒಬ್ಬಂಟಿಯಾಗಿರುವಾಗ ಬಂದನೆಂದರೆ! ಏನಾದರೂ ಸಂಚು ಹೂಡಿರಬಹುದು!
"ಕ್ಷಮಿಸಿ ನಿಮ್ಮ ನಿದ್ದೇನ ಹಾಳು ಮಾಡ್ದೆ. ನಿಮ್ಮಿಂದ ನನಗೊಂದು ದೊಡ್ಡ ಉಪಕಾರವಾಗಬೇಕಿದೆ" ಮತ್ತೆ ಸಹಾಯ ಹಸ್ತ ಯಾಚಿಸುತ್ತಿದ್ದಾನೆ. ಈಗಾಗಲೆ ಎರಡು ಬಾರಿ ಸಹಾಯ ಮಾಡಿದ್ದಾಯಿತು.
"ಏನದು?" ಕಣ್ಣು ಕಿರಿದುಗೊಳಿಸಿ ಕೇಳಿದಳು ಗಾಜು ಕಣ್ಣಿನ ಚೆಲುವೆ.
"ನನ್ನ ಹೆಸರು ಅನುಪ್ರೀತ್. ಗುಜರಾತಿನಿಂದ ಹುಚ್ಚು ಸಾಹಸ ಮಾಡ್ಕೊಂಡು ಇಲ್ಲಿಯವರೆಗೆ ಬಂದಿದ್ದೀನಿ. ಆದ್ರೆ ನನಗೆ ಬೇಕಾಗಿರೋ ವ್ಯಕ್ತಿ ಊರಿನಲಿಲ್ಲ. ಆತ ಎಲ್ಲೋ ದೂರದೂರಿಗೆ ಹೋಗಿದ್ದಾನಂತೆ. ಮರದ ಪೆಟ್ಟಿಗೆಯನ್ನು ಮರಳಿಸಿ ಹೋಗಲು ಬಂದಿದ್ದೀನಿ. ದಯವಿಟ್ಟು ಇಲ್ಲ ಅನ್ಬೇಡಿ. ಒಂದೆರಡು ದಿವಸದ ಮಟ್ಟಿಗೆ ಆ ಪೆಟ್ಟಿಗೆ ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಉಪಕಾರ ಮಾಡಿದ ಹಾಗೆ"
"ಇಲ್ಲ ಸಾಧ್ಯವಿಲ್ಲ ಅನುಪ್ರೀತ್. ಇಲ್ಲಿ ಸರಿಯಾಗಿ ಕೈ ಕಾಲು ಬಿಟ್ಟು ಮಲಗುವಷ್ಟು ಜಾಗವಿಲ್ಲ. ಪೆಟ್ಟಿಗೆ ಇಟ್ಟರೆ ಕಷ್ಟ. ಅದೂ ಅಲ್ದೆ ಇದು ನನ್ನ ಮನೆಯಲ್ಲ. ನಾನು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೀನಿ. ನಾನು ಬಾಡಿಗೆಗೆ ಪಡೆದಿರೋ ಅಗ್ಗದ ಕೋಣೆ ಇದು. ನಿಮ್ಮ ಪೆಟ್ಟಿಗೆಗೆ ಭದ್ರತೆ ಕೂಡ ಇರಲಾರದು" ನಯವಾಗಿ ನಿರಾಕರಿಸಿದಳು ನಿನಾದ.
"ಭದ್ರತೆಯ ಮಾತು ಬೇಕಾಗಿಲ್ಲ. ನೀವು ಹೊರಗೆ ಹೋಗುವಾಗ ಬಾಗಿಲು ಮುಚ್ಚಿ ಹೋಗುವಿರಲ್ಲವೆ? ಎರಡು ದಿನ ನಿಮ್ಮಲ್ಲಿರಲಿ. ನಾನು ಮರಳುವ ಮೊದಲು ಇಲ್ಲಿಂದ ಅದನ್ನು ಸಾಗಿಸ್ತೀನಿ" ಮತ್ತೆ ಗೋಗರೆದ.
ಯುವಕ ಸಭ್ಯನಂತೆ ಕಾಣುತ್ತಾನೆ! ಹೇಗೂ ಪನ್ನಾಲಾಲ್ ಕೂಡ ಊರಲಿಲ್ಲ. ತನ್ನ ಕೋಣೆಗೆ ಬರುವವರು ಯಾರು ಇಲ್ಲ. ಇರಲಿ ಚಾಪೆ ನೆಲದಲ್ಲಿ ಹಾಸಿ ಮಲಗುವ ಬದಲು ಪೆಟ್ಟಿಗೆ ಮೇಲೆ ಹಾಸಿ ಮಲಗಬಹುದು.
"ಸರಿ, ಅದರೆ ಎರಡು ದಿನದೊಳಗೆ ಮರಳಿ ತೆಗೆದುಕೊಂಡು ಹೋಗಬೇಕು"
ಅವಳ ಒಪ್ಪಿಗೆ ತಿಳಿದು ದಂತ ಪಂಕ್ತಿ ಕಾಣುವಂತೆ ತುಟಿಯಗಲಿಸಿದ. ಅವನ ಮುಖವನ್ನೊಮ್ಮೆ ದಿಟ್ಟಿಸಿದಳು. ತುಂಬಾ ಸುಂದರ ಯುವಕನೆನಿಸಿತು.
"ಬನ್ನಿ ಪೆಟ್ಟಿಗೆ ಇಲ್ಲೆ ಗಿಡಗಳ ಮರೆಯಲ್ಲಿದೆ. ನೀವು ಕೈ ಚಾಚಿದರೆ ಸುಲಭದಲ್ಲಿ ತರಬಹುದು"
ಅವನನ್ನು ಹಿಂಬಾಲಿಸಿ ಗಿಡಗಳ ಬಳಿ ಬಂದಳು. ಪೆಟ್ಟಿಗೆಯನ್ನು ಅವಳ ಕೋಣೆಗೆ ತಂದರು.
"ಉಪಕಾರವಾಯ್ತು ಮಿಸ್..." ಹೆಸರು ತಿಳಿಯದೆ ಮಾತು ನಿಲ್ಲಿಸಿದ.
"ನಿನಾದ"
"ನಿನಾದ... ನಿಮ್ಮ ಉಪಕಾರಾನ ಯಾವತ್ತು ಮರೆಯಲಾರೆ" ಮತ್ತೊಮ್ಮೆ ವಂದಿಸಿ ಬಿರಬಿರನೆ ನಡೆದು ಕತ್ತಲಲ್ಲಿ ಮಾಯವಾದ.
ಬಾಗಿಲು ಮುಚ್ಚಿ ಚಿಲಕ ಸಿಕ್ಕಿಸಿದಳು. ಮರದ ಪೆಟ್ಟಿಗೆಯ ಮೇಲೆ ಚಾಪೆ ಹಾಸಿ ಮಲಗಿದಳು. ನಿದ್ದೆ ಯಾವಾಗ ಅವರಿಸಿತೋ ತಿಳಿಯಲಿಲ್ಲ. ಕೈ ಸೆಳೆಯುತ್ತಿತ್ತು. ನೋವಿನಿಂದ ಹೊರಳಿ ಮಲಗಿದವಳಿಗೆ ತಟ್ಟನೆ ಎಚ್ಚರವಾಯಿತು. ಕಣ್ಣು ಬಿಟ್ಟಾಗ ಸೂರ್ಯನ ಕಿರಣ ಕಿಟಿಕಿಯ ಪರದೆಯನ್ನು ತೂರಿ ಒಳ ಬಂದಿತ್ತು. ಮುಂಜಾನೆಯ ಜಡ ಆವರಿಸಿದ್ದರೂ ಕೆಲಸ ಅನಿವಾರ್ಯ. ಮುಖ ತೊಳೆದು ಬಂದವಳಿಗೆ ಯಾವುದೋ ಕೆಟ್ಟ ವಾಸನೆ ಬಂದಂತಾಗಿ ಹೊಟ್ಟೆ ತೊಳೆಸಿದಂತಾಯಿತು. ಮೂಗಿಗೆ ಕೈ ಹಿಡಿದು ಸುತ್ತಲೂ ದೃಷ್ಟಿಸಿದಳು. ಯಾವುದೋ ಅಸಹ್ಯ ವಾಸನೆ! ಇಲಿಯೋ ಹೆಗ್ಗಣವೋ ಸತ್ತಿರಬಹುದೆಂದು ಪುಸ್ತಕದ ರಾಶಿಯನ್ನು ತೆಗೆದು ನೋಡಿದಳು.
ಇಲ್ಲ!
ತಟ್ಟನೆ ನೆನಪಾಗಿದ್ದು ಆರು ಅಡಿ ಉದ್ದದ ಮರದ ಪೆಟ್ಟಿಗೆ! ಅದರೊಳಗೆ ಕೊಳೆತು ನಾರುವ ವಸ್ತು!!?? ಕುತೂಹಲದಿಂದ ಅದರ ಬಳಿ ಬಂದವಳಿಗೆ ಬವಳಿ ಬಂದಂತಾಯಿತು. ಮೂಗಿಗೆ ಸೆರಗು ಹಿಡಿದು ನಿಂತಳು.
ಪೆಟ್ಟಿಗೆಗೆ ಚಿಲಕ ಮಾತ್ರ ಸಿಕ್ಕಿಸಿದೆ! ಬೀಗ ಜಡಿದಿರಲಿಲ್ಲ!
‘ಯಾವುದೋ ವ್ಯಕ್ತಿಗೆ ತಲುಪಿಸುವುದಿದೆ, ಆ ವ್ಯಕ್ತಿ ಊರಲ್ಲಿಲ್ಲ’ ಅನುಪ್ರೀತ್ ಹೇಳಿದ್ದ. ಯಾವುದೋ ಸಮಸ್ಯೆಯಲ್ಲಿ ತನ್ನನ್ನು ಸಿಲುಕಿಸಿದ್ದಾನೆ ಚೆಲುವ. ಚಿಲಕ ಸರಿಸಿ ಪ್ರಯಾಸದಿಂದ ಬಾಗಿಲು ತೆರೆದಳು. ಕಿಟಾರನೆ ಕಿರುಚಿ ಬಿಕ್ಕಳಿಸಿದಳು.
ಕಣ್ಣುಗಳನ್ನು ತೆರೆದು, ಬಾಯಿ ಅಗಲಿಸಿ ವಿಕಾರ ರೂಪದಲ್ಲಿ ಮಲಗಿದ್ದ ಹೆಂಗಸಿನ ದೇಹ!
ಆ ಮುಖವನ್ನು ಎಲ್ಲೋ ನೋಡಿದ ನೆನಪು!
ತನ್ನೆಣಿಕೆ ಸುಳ್ಳಲ್ಲ! ಚಾಂದಿನಿ ಬಾಯಿ!
ಪನ್ನಲಾಲ್ ನ ಮಡದಿ! ತನಗೆ ಬಾಡಿಗೆ ಮನೆಯನ್ನು ಕೊಡುವ ಸೌಜನ್ಯ ತೋರಿಸಿದೋಳು.
ಪನ್ನಲಾಲ್ ಸಂಸಾರ ಸಮೇತ ರೈಲಿನಲ್ಲಿ ಗುಜರಾತಿಗೆ ತೆರೆಳಿದ್ದಾನೆ. ಅನುಪ್ರೀತ್ ರೈಲಿನಲ್ಲಿ ಒಡವೆ ಹಣಕ್ಕಾಗಿ ಅವಳನ್ನು ಕೊಂದು ಯಾಂತ್ರಿಕ ದೋಣಿಯಲ್ಲಿ ಹೆಣವನ್ನು ಸಾಗಿಸಿದ್ದಾನೆ! ತಾನೀಗ ಸಮಸ್ಯೆಯಲ್ಲಿ ಸಿಕ್ಕಿಬಿದ್ದದಂತಾಗಿದೆ. ಏನೋ ನೆನಪಾಗಿ ರೂಮಿಗೆ ಬೀಗ ಜಡಿದು ಹಾರು ನಡಿಗೆಯಲ್ಲಿ ಸಮುದ್ರದ ದಂಡೆಯ ಬಳಿ ಬಂದಳು. ಅನುಪ್ರೀತ್ ಎಲ್ಲೂ ಹೋಗಿರಲಾರ. ಲಂಗರು ಹಾಕಿ ನಿಂತಿರೋ ದೋಣಿಯಲ್ಲಿ ತಂಗಿರಬಹುದು. ಅಲ್ಲಿ ಬಂದವಳಿಗೆ ನಿರಾಶೆ ಕಾದಿತ್ತು.
ಅಂದರೆ ಅನುಪ್ರೀತ್ ತನ್ನನ್ನು ಇಕ್ಕಟಿನಲ್ಲಿ ಸಿಲುಕಿಸಿ ಪರಾರಿಯಾಗಿದ್ದಾನೆ! ದು:ಖ ಉಮ್ಮಳಿಸಿ ಬಂತು. ಇನ್ನು ಪೋಲಿಸ್ನೋರ ವಿಚಾರಣೆ... ಕೋರ್ಟು ಕಛೇರಿ ಅಲೆದಾಟ... ಸಣ್ಣಗೆ ನಡುಕ ಅರಂಭವಾಯಿತು.
ಒಂದು ವಾರ ಕಳೆದಿರಬಹುದು......
ಪೋಲಿಸ್ ಠಾಣೆಗೆ ಅಲೆದು ಸುಸ್ತಾಗಿದ್ದಳು. ಕೇಳುವ ನೂರಾರು ಪ್ರಶ್ನೆಗಳಿಗೆ ಉತ್ತರಿಸಿ ರೋಸಿ ಹೋಗಿತ್ತು. ಇಂದು ಕೊಲೆಗಾರ ಯಾರೆಂದು ನಿರ್ಧರಿಸಲಾಗುತ್ತದೆ!!? ನಡೆದ ಘಟನೆಯನ್ನೆಲ್ಲಾ ಮುಚ್ಚು ಮರೆಯಿಲ್ಲದೆ ಎಸ್. ಐ. ಭಾರಾಧ್ವಜ್ ಗೆ ತಿಳಿಸಿದ್ದಾಳೆ. ಬಸ್ಸು ಇಳಿದು ಭಾರವಾದ ಹೆಜ್ಜೆಯಿಡುತ್ತಾ ಠಾಣೆಯ ಮೆಟ್ಟಲೇರಿ ಬಂದಳು. ನಗು ಮುಖದಲ್ಲೆ ಎಸ್. ಐ. ಸ್ವಾಗತಿಸಿದರು. ಅವಳಿಗೆ ಆತಂಕವಾಗಿತ್ತು. ಅವರು ತೋರಿಸಿದ ಬೆಂಚಲ್ಲಿ ಕುಳಿತು ಅದರ ಅಂಚನ್ನು ಗಟ್ಟಿಯಾಗಿ ಹಿಡಿದುಕೊಂಡು ಹೃದಯ ಬಡಿತದ ತೀವ್ರತೆಯನ್ನು ನಿಯಂತ್ರಿಸಲೆತ್ನಿಸುತ್ತಿದ್ದಳು.
"ಮಿಸ್ ನಿನಾದ" ಬಾರಧ್ವಜ್ ನ ಕರೆಗೆ ಬೆಚ್ಚಿ ಬಿದ್ದಳು.
"ಕೊಲೆಗಾರ ಸಿಕ್ಕಿ ಬಿದ್ದಿದ್ದಾನೆ"
ಕೊಲೆಗಾರ ಮತ್ತಾರು ಅಲ್ಲ, ಹುಚ್ಚು ಸಾಹಸ ಮಾಡಿ ಗುಜರಾತಿನಿಂದ ಬಂದ ಸುಂದರ ಯುವಕ ಅನುಪ್ರೀತ್! ಚಾಂದಿನಿ ಬಾಯಿಯನ್ನು ಕೊಲೆ ಮಾಡಿ ಒಡವೆಗಳನ್ನು ಅಪಹರಿಸಿದ್ದು ಹುಚ್ಚು ಸಾಹಸ!
ಬಾರಧ್ವಜ್ ಮುಂದುವರಿಸುತಿದ್ದರು, "...ಕೊಲೆಗಾರನಿಗೂ ಚಾಂದಿನಿ ಬಾಯಿಗೂ ಅಗಿಂದಾಗೆ ಜಗಳವಾಗ್ತಾ ಇತ್ತು"
ಅನುಪ್ರೀತ್ ಚಾಂದಿನಿ ಬಾಯಿಗೆ ಪರಿಚಿತ!
"...ಚಾಂದಿನಿ ಬಾಯಿ ಅವನಿಗೆ ಚಿನ್ನದ ವ್ಯಾಪರ ಮಾಡಲು ಪ್ರಚೋದಿಸಿದ್ಲು. ಅದಕ್ಕಾಗೆ ತನ್ನ ಅಣ್ಣನಿಂದ ಸಹಾಯ ಪಡೆದ್ಲು. ಅದ್ರೆ ಕೊಲೆಗಾರ ಅವಳಿಗೆ ದ್ರೋಹ ಮಾಡ್ದ. ಲಕ್ಷಗಟ್ಟಲೆ ಬಾಕಿ ಇರೋ ಹಣಾನ ಕೊಡಲು ನಿರಾಕರಿಸಿದ. ಚಾಂದಿನಿ ಬಾಯಿ ಮೋಸ ಮಾಡಿದಕ್ಕಾಗಿ ಅವನನ್ನು ಕಾನೂನಿನ ಕೈಗೆ ಒಪ್ಪಿಸುವುದಾಗಿ ಬೆದರಿಸಿದ್ಲು. ಕೊಲೆಗಾರ ಶಾಂತನಾದ. ಗುಜರಾತಿಗೆ ಮರಳಿದ ನಂತರ ಬಾಕಿ ಹಣವನ್ನು ಕೊಡುವುದಾಗಿ ಭರವಸೆ ನೀಡಿದ. ಇಬ್ಬರೂ ರೈಲಿನಲ್ಲಿ ಗುಜರಾತಿಗೆ ಹೊರಟರು. ಆತ ಮೊದಲೆ ನಿರ್ಧರಿಸಿದಂತೆ ಅವಳನ್ನು ರೈಲಿನಲ್ಲಿ ಮುಗಿಸ್ದ!"
ಪನ್ನಾಲಾಲ್ ಮತ್ತು ಚಾಂದಿನಿ ಬಾಯಿಯನ್ನು ಕೊಲೆಗಾರ ಅನುಸರಿಸಿ ಹೋಗಿದ್ದಾನೆ. ಪನ್ನಾಲಾಲ್ ಇಲ್ಲದ ಸಮಯ ನೋಡಿ ಚಾಂದಿನಿ ಬಾಯಿಯನ್ನು ಮುಗಿಸಿದ್ದಾನೆ!
"...ಕೊಲೆಗಾರ ಅವಳನ್ನು ಹೊಡೆದು ಸಾಯಿಸಿದ್ದಲ್ಲ. ಅವಳಿಗೆ ಕಾಫಿಯಲ್ಲಿ ವಿಷ ಬೆರೆಸಿ ನೀಡ್ದ. ಅವಳು ಹೊತ್ತಲ್ಲದ ಹೊತ್ತಲ್ಲಿ ಕಾಫಿ ಕುಡಿಯೋದಿಕ್ಕೆ ನಿರಾಕರಿಸಿದ್ಲು. ಆತ ಅವಳನ್ನು ಜಬರ್ದಸ್ತಿಯಿಂದ ಕುಡಿಯುವಂತೆ ಪ್ರಯತ್ನಿಸ್ದ. ಬೋಗಿಯಲ್ಲಿ ಆಗ ಅವರಿಬ್ಬರೆ ಇದ್ದಿದ್ದು! ಬೇರೆ ದಾರಿ ಕಾಣದೆ ಅವಳು ಕಿರುಚಿಕೊಂಡು ಓಡಿ ಬರೋದಕ್ಕೆ ಪ್ರಯತ್ನಿಸಿದ್ಲು. ಅತ ಕಾಲು ಅಡ್ಡ ಹಿಡಿದು ಅವಳನ್ನು ಬೀಳಿಸಿದ. ಅವಳ ತಲೆ ಬಲವಾಗಿ ಬೋಗಿಯ ಕಿಟಕಿಗೆ ಬಡಿಯಿತು. ಉಸಿರು ನಿಂತು ಹೋಯಿತು. ಗುಜರಾತಿನಲ್ಲಿ ರೈಲು ನಿಲ್ಲುತ್ತಲೆ ಕೆಳಗಿಳಿದ. ಅವಳ ಹೆಣವನ್ನು ಸಾಗಿಸೋದಕ್ಕೆ ಯಾರಾದರು ಸಹಾಯಕ್ಕೆ ಬರಬಹುದೆಂದುಕೊಂಡ. ಯಾರು ಕಾಣಲಿಲ್ಲ. ಇನ್ನೇನು ರೈಲು ಮುಂದೆ ಹೊರಡಬೇಕೆನ್ನುವಾಗ ಒಳಗೆ ಹಾರಿ ಬಂದ. ಚಾಂದಿನಿ ಬಾಯಿಯ ಹೆಣ ಕಾಣೆಯಾಗಿತ್ತು"
"ಕಾಣೆಯಾಗಿತ್ತು!!" ಆಶ್ಚರ್ಯ ವ್ಯಕ್ತ ಪಡಿಸಿದಳು ನಿನಾದ.
"ಹೆಣ ಕಾಣೆಯಾದುದಲ್ಲ. ಹೆಣವನ್ನು ಸಾಗಿಸ್ದೋನು ಅನುಪ್ರೀತ್"
"ಅಂದ್ರೆ... ಕೊಲೆಗಾರ ಅನುಪ್ರೀತ್...." ಅವಳ ಮಾತು ಮುಗಿಯುವ ಮೊದಲೆ ಎಸ್. ಐ. ಮುಗುಳ್ನಕ್ಕು "ಅಲ್ಲ" ಅಂದರು. ನಿನಾದಳಿಗೆ ಆಶ್ಚರ್ಯವಾಯಿತು.
"ಅನುಪ್ರೀತ್ ರೈಲ್ವೆಯಲ್ಲಿ ಠಾಣಾಧಿಕಾರಿ. ಕೊಲೆ ಮಾಡ್ದೋನು ಅನುಪ್ರೀತ್ ಅಲ್ಲ. ಪನ್ನಾಲಾಲ್"
"ಪನ್ನಾಲಾಲ್!!!" ಉದ್ಗರಿಸಿದಳು.
"ಹೌದು. ಕಂಪಾರ್ಟ್ ಮೆಂಟಿನಲ್ಲಿ ಗಲಾಟೆ ಅದಾಗ ಯಾರೋ ಅದನ್ನು ನೋಡಿ ಪೋಲಿಸರಿಗೆ ತಿಳಿಸಿದರು. ಅನುಪ್ರೀತ್ ಅಲ್ಲಿಗೆ ಬಂದಾಗ ಪನ್ನಲಾಲ್ ಕಾಣೆಯಾಗಿದ್ದ"
"ಹಾಗಾದ್ರೆ ಅನುಪ್ರೀತ್ ಹೆಣವನ್ನೇಕೆ ಇಲ್ಲಿ ತಂದಿದ್ದು?" ಅವಳ ಬಾಲಿಶವಾದ ಪ್ರಶ್ನೆಗೆ ಬಾರಧ್ವಜಿಗೆ ನಗು ಬಂತು.
"ಎರಡು ದಿನವಾದ್ರೂ ಪನ್ನಾಲಾಲ್ ನ ಪತ್ತೆಯಾಗದಾಗ ತಿಳಿದು ಬಂದ ವಿಷಯ, ಆತ ಯಾವುದೋ ಯಾಂತ್ರಿಕ ದೋಣಿ ಹಿಡಿದು ದಕ್ಷಿಣಕ್ಕೆ ಹೊರಟನೆಂದು. ಹಾಗೆ ಅನುಪ್ರೀತ್ ಹುಚ್ಚು ಸಾಹಸ ಮಾಡ್ಕೊಂಡು ಹೆಣ ಸಮೇತ ಇಲ್ಲಿಗೆ ಬಂದ. ಪನ್ನಾಲಾಲ್ ನ ಮನೆಯಲ್ಲಿ ಯಾರೋ ಇರುವ ಸುದ್ದಿ ತಿಳಿದು ಇಲ್ಲಿಗೆ ಬಂದ. ಅದ್ರೆ ಅಲ್ಲಿದ್ದಿದ್ದು ನೀನು. ನಿನಗೇನಾದರೂ ಸುಳಿವು ತಿಳಿದಿರಬಹುದೆಂದು ಅನುಪ್ರೀತ್ ನಿನ್ನಲ್ಲಿಗೆ ಬಂದ. ಅದೇ ಸಮಯಕ್ಕೆ ಪನ್ನಾಲಾಲ್ ಒಂದು ಅಗ್ಗದ ವಸತಿ ಗೃಹದಲ್ಲಿ ಸಿಕ್ಕಿ ಬಿದ್ದಿದ್ದ. ಕೊಲೆ ಮಾಡ್ದೋನು ತಾನೇಂತ ಒಪ್ಕೊಂಡ"
ಅಗಲೇ ವಾಹನವೊಂದು ಬಂದು ನಿಂತಿತು. ಕತ್ತು ಹೊರಳಿಸಿದಳು ನಿನಾದ.
ಕಡು ನೀಲಿ ಜೀನ್ಸ್, ತಿಳಿ ನೀಲಿ ಬಣ್ಣದ ಟೀ ಶರ್ಟ್ ಧರಿಸಿ ಮೆಟ್ಟಲೇರಿ ಬರುತ್ತಿದ್ದ ಅನುಪ್ರೀತ್....
"ಏನೂ, ಟೀಚರ್ ಶಾಲೆಯಲ್ಲಿ ಪಾಠ ಮಾಡೋದು ಬಿಟ್ಟು ಠಾಣೆಯಲ್ಲಿ ಪಾಠ ಮಾಡಲು ಬಂದಿದ್ದಾರೆಯೆ?" ಅಣಕು ಮಾತಿನಲ್ಲಿ ಕೇಳಿದ.
"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿದ್ರೆ..... ಠಾಣೆಯಲ್ಲಿರುವವರಿಗೆ ಪಾಠ ಕಲಿಸ್ಬೇಕಲ್ಲ"
ಅನುಪ್ರೀತ್, ಬಾರಧ್ವಜ್ ಇಬ್ಬರೂ ಅವಳ ಮಾತಿಗೆ ಗೊಳ್ಳನೆ ನಕ್ಕರು.
"ಕ್ಷಮಿಸಿ ನಿನಾದ..." ಅಂದು ಕೈ ಜೋಡಿಸುವ ಸೌಜನ್ಯ ತೋರಿಸಿದ ಅನುಪ್ರೀತ್.
****

Read more!

Thursday, November 12, 2009

ಕೊಲೆಗಾರ


(ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾದ ಪತ್ತೇದಾರಿ ಕಥೆ)

ಸುಮಾರು ಆರುಗಂಟೆಯ ಸಮಯ. ರಸ್ತೆಯಲ್ಲಿ ವಾಹನ ಸಂಚಾರ ಅತ್ಯಧಿಕವಾಗಿತ್ತು. ಒಮ್ಮೆ ತನ್ನ ದೃಷ್ಟಿಯನ್ನು ಕೈ ಗಡಿಯಾರದತ್ತ ಹೊರಳಿಸಿದ ಗೋಪಾಲಸ್ವಾಮಿ ತನ್ನ ಸಹಾಯಕನನ್ನು ಕರೆದು ಹೋಗುವಂತೆ ಹೇಳಿ, ಮುಖ್ಯವಾದ ಫೈಲೊಂದನ್ನು ಕೈಗೆತ್ತಿಕೊಂಡ. ಮರುದಿನದ ಕೇಸ್‍ಗಳನ್ನು ಅಧ್ಯಯನ ಮಾಡಲು ಸರಿಯಾದ ಸಮಯ ಬೇಕಾಗಿತ್ತು. ರಾತ್ರಿಯ ಹೊತ್ತು ಕ್ಲಾಯಿಂಟ್‍ಗಳು ಬಂದು ತೊಂದರೆ ಕೊಡುವುದಿಲ್ಲವೆಂದು ಗೊತ್ತು. ತದೇಕ ಚಿತ್ತದಿಂದ ಕಡತದ ಮೇಲೆ ಕಣ್ಣಾಡಿಸುತ್ತಿದ್ದ ವಕೀಲ ತನ್ನಷ್ಟಕ್ಕೆ ತಾನು ಸಾಧ್ಯ ಅಸಾಧ್ಯತೆಗಳ ಬಗ್ಗೆ ಪರಾಮರ್ಶಿಸುತ್ತಿದ್ದ. ತಟ್ಟನೆ ಬಾಗಿಲಿನ ಉದ್ದಕ್ಕೂ ಯಾರೋ ನಿಂತಂತಾಯಿತು. ತಲೆಯೆತ್ತಿದ. ಇಪ್ಪತ್ತೈದರ ಆಸುಪಾಸಿನ ಹೆಣ್ಣು ಆತಂಕದ ಮುಖದಿಂದ ವಕೀಲನ ಅನುಮತಿಗಾಗಿ ಕಾದು ನಿಂತಿತ್ತು.
"ನಾನು ಒಳಗೆ ಬರಬಹುದೆ?" ಅನುಮತಿಯ ಪ್ರಶ್ನೆ ತೂರಿದರು ಬಾಗಿಲಿನಲ್ಲಿಯೇ ನಿಂತಿರುವಷ್ಟು ತಾಳ್ಮೆ ಕಾಣಿಸಲಿಲ್ಲ. ನುಣುಪು ನೆಲದ ಮೇಲೆ ಪಾದರಕ್ಷೆಯ ಟಕಟಕ ಸದ್ದು ಆ ಹೊತ್ತು ಸಮಸ್ಯೆಯೊಂದರ ಪೀಠಿಕೆಯಂತೆ ಕಂಡಿತು. ನೋಡುತ್ತಿದ್ದ ಕಡತಕ್ಕೆ ಕಾಗದದ ಚೂರನ್ನು ತುರುಕಿಸಿ ಹಾಗೇ ಮುಚ್ಚಿಟ್ಟ ವಕೀಲ, ಬಲಗೈಯಿಂದ ಸನ್ನೆ ಮಾಡಿ ಹೆಣ್ಣನ್ನು ಕುಳಿತುಕೊಳ್ಳುವಂತೆ ಸೂಚಿಸಿದ.
ಆತುರದಲ್ಲಿದ್ದ ಹೆಣ್ಣು ಒಮ್ಮೆ ವಕೀಲನ ಕಡೆಗೆ ಮತ್ತೊಮ್ಮೆ ಎದುರಿಗಿದ್ದ ಗಡಿಯಾರದ ಕಡೆಗೆ ನೋಟ ಹರಿಸಿ ಮೆಲ್ಲಗೆ ಮಾತು ತೆಗೆಯಿತು."
"ಪೊಲೀಸರಿಂದ ಸಹಾಯ ನಿರೀಕ್ಷಿಸಿದ್ದೆ. ಆದರೆ ಈಗ ಕೊಲೆಗಾರ ತಪ್ಪಿಸಿಕೊಳ್ತಾನೇನೋ ಅನ್ನೋ ಅನುಮಾನ ಕಾಡ್ತಾ ಇದೆ. ಹಾಗಾಗ್ಬಾರ್‍ದು... ಆ ಮೈಲಾರಿನಾ ನೇಣುಗಂಭಕ್ಕೆ ಏರಿಸ್ಬೇಕು. ನಿಮ್ಮ ಸಹಾಯ ನಂಗೆ ಮುಖ್ಯ" ಮುಖದ ಮೇಲೆ ಟಿಸಿಲೊಡೆದ ಬೆವರಿನ ಬಿಂದುಗಳನ್ನು ತೆಳುವಾದ ಸಣ್ಣ ಕರವಸ್ತ್ರದಿಂದ ಒರೆಸಿಕೊಂಡು ಸಹಾಯ ಯಾಚಿಸಿತು ಹೆಣ್ಣು.
"ಪೂರ್ತಿಯಾಗಿ ಹೇಳಿ. ನೀವು ಯಾರು? ಕೊಲೆಯಾಗಿದ್ದು ಯಾರು? ಈ ಮೈಲಾರಿ ಯಾರು? ಪೊಲೀಸರೇಕೆ ಸಹಾಯ ಮಾಡುತ್ತಿಲ್ಲ?" ತಾಳ್ಮೆಯಿಂದ ಕೇಳಿದ ವಕೀಲ.
ಪ್ರಶ್ನೆಗಳ ಉದ್ದ ಸಾಲುಗಳು ಎದುರಾದಾಗ ದೀರ್ಘ ನಿಟ್ಟುಸಿರೊಂದನ್ನು ಚೆಲ್ಲಿದ ಹೆಣ್ಣು ಮೆಲ್ಲಗೆ ನಡೆದ ಘಟನೆಯನ್ನು ಹೇಳಿತು.
"ನನ್ನ ಹೆಸರು ಶಾಂತಿರಾಜು. ರಾಜು ನನ್ನ ಗಂಡ. ನಮ್ಮದೊಂದು ಸಣ್ಣ ಸಿದ್ದ ಉಡುಪುಗಳ ಉದ್ಯಮವಿದೆ. ಮೂರು ತಿಂಗಳ ಹಿಂದೆ ರಾಜುನ ಯಾರೋ ಕೊಲೆ ಮಾಡಿಬಿಟ್ರು. ಆ ಸಮಯದಲ್ಲಿ ನಾನು ಮನೆಯಲ್ಲಿರಲಿಲ್ಲ. ಸೋಫಾದಲ್ಲಿ ಕುಳಿತಂತೆ ಇತ್ತು ರಾಜುನ ದೇಹ. ಮೈ ಮೇಲೆ ಗಾಯಗಳಾಗಲಿ, ರಕ್ತದ ಕಲೆಯಾಗಲಿ ಇಲ್ಲ. ಶವ ಪರೀಕ್ಷೆ ವರದಿ ಕೂಡ ಸ್ಪಷ್ಟವಾಗಿಲ್ಲ. ರಾಜು ಅತೀಯಾಗಿ ಕುಡಿದು ಸತ್ತಿದ್ದಾನೇಂತ ಆ ವರದಿ ಹೇಳುತ್ತೆ. ಆದ್ರೆ ರಾಜು ಯಾವತ್ತು ಕುಡಿದೇ ಇಲ್ಲ. ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿ ಎಫ಼್.ಐ.ಆರ್ ಫೈಲ್ ಮಾಡಿದೆ. ನನ್ನ ಪರವಾಗಿದ್ದ ಪೊಲೀಸರೀಗ ನನಗೆ ವಿರುದ್ಧವಾಗಿದ್ದಾರೆ. ಅಂದ್ರೆ ಇದೊಂದು ಮಾಮೂಲು ಕೇಸು ಅನ್ನೋತರ ಸುಮ್ಮನಾಗಿದ್ದಾರೆ. ಈಗ ರಾಜುನ ಕೊಲೆಯ ಹಿಂದೆ ಒಂದು ಹೆಣ್ಣಿನ ಕೈವಾಡವಿದೆ ಅನ್ನುವುದು ನನ್ನ ಅನುಮಾನ. ಆದರೆ ಪೊಲೀಸರು ಆ ಹೆಣ್ಣನ್ನು ಕರೆದು ವಿಚಾರಿಸುತ್ತಿಲ್ಲ. ಅದಕ್ಕೆ... ಈ ಕೇಸು ಮುಚ್ಚಿ ಹೋಗುತ್ತೇನೋ ಅನ್ನೋ ಅನುಮಾನದಿಂದ ನಿಮ್ಮ ಸಹಾಯ ಯಾಚಿಸಿ ಬಂದಿದ್ದೇನೆ" ಕಥೆ ಹೇಳಿದ ಬಳಿಕ ಮತ್ತೊಮ್ಮೆ ದೀರ್ಘ ಶ್ವಾಸ ಎಳೆದುಕೊಂಡ ಹೆಣ್ಣು ವಕೀಲನ ಮುಖದ ಮೇಲಾಗುತ್ತಿದ್ದ ಬದಲಾವಣೆಗಳನ್ನು ಗಮನಿಸುತ್ತಿತ್ತು.
"ಸರಿಯಾದ ಸಾಕ್ಷಿ, ಪುರಾವೆಗಳಲ್ಲದೆ ಅಪರಾಧಿಯನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸುವುದು ಕಷ್ಟ ಶಾಂತಮ್ಮ" ಕೈಗಡಿಯಾರದತ್ತ ಕಣ್ಣಾಡಿಸಿ ಆಕಳಿಸಿದ ವಕೀಲ, "ಪ್ರಯತ್ನಿಸೋಣ ಶಾಂತಮ್ಮ... ನಾಳೆ ಇದೇ ಹೊತ್ತು ಬನ್ನಿ. ಸಾಧ್ಯವಾದಲ್ಲಿ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಕೂಡ ಒದಗಿಸೋ ಪ್ರಯತ್ನ ಮಾಡಿ" ಅಂದು ಮುಂದಕ್ಕೆ ಜರುಗಿ ಕುಳಿತ.
ಶಾಂತಿರಾಜುವಿನ ಮುಖದಲ್ಲಿ ನಿರಾಸೆಯ ಸೆಲೆಯೊಡೆಯಿತು. ಇಲ್ಲೂ ತನಗೆ ಸೋಲು ಅನ್ನುವ ಆತಂಕ. ಎದ್ದು ನಿಂತು ಕೈ ಮುಗಿದ ಹೆಣ್ಣು ನಾಳೆಯ ಹೊತ್ತು ಬರುವುದಾಗಿ ಹೇಳಿ ಹೊರಟಿತು.
ವಕೀಲ ಗೋಪಾಲಸ್ವಾಮಿ ಮತ್ತೆ ಮುಚ್ಚಿಟ್ಟ ಕಡತ ತೆರೆದು ಮುಳುಗಿ ಹೋದ.

***

ಆ ದಿನ ಶಾಂತಿರಾಜು ಹೇಳಿದ ವಿಷಯವನ್ನು ಮೆಲುಕು ಹಾಕಿದ ಗೋಪಾಲಸ್ವಾಮಿ ಅವಳನ್ನು ನಿರೀಕ್ಷಿಸುತ್ತಾ ಕುಳಿತಿದ್ದ. ಬಾಗಿಲ ಬಳಿಯಿಂದ ಸೌಜನ್ಯದ ಪದಗಳು ಕೇಳಿದಾಗ, "ಬನ್ನಿ, ಶಾಂತಿರಾಜು... ನಿಮ್ಮನ್ನೇ ಕಾಯ್ತಾ ಇದ್ದೆ" ತಲೆಯೆತ್ತದೆ ಹೊರಗೆ ನಿಂತಿದ್ದವಳನ್ನು ಒಳಗೆ ಕರೆದ.
"ಕ್ಷಮಿಸಿ, ನಾನು ಶಾಂತಿರಾಜುವಲ್ಲ... ಅನಘಾರಾಜು... ರಾಜುವಿನ ವಿಧವೆ ಹೆಣ್ಣು ನಾನು. ರಾಜುವನ್ನು ಯಾರೋ ಕೊಲೆ ಮಾಡಿದ್ದಾರೆ. ಸೋಫಾದಲ್ಲಿ ಕುಳಿತಂತೆ ಇತ್ತು ಅವನ ದೇಹ. ಮೈಮೇಲೆ ಗಾಯಗಳಾಗಲಿ, ಇನ್ಯಾವುದೇ ಕುರುಹುಗಳಾಗಲಿ ಇಲ್ಲ. ಆದ್ರೂ ರಾಜುನಾ ಕೊಲೆಯಾಗಿದೆ ಅನ್ನೋದು ನನ್ನ ಅನುಮಾನ. ಪೊಲೀಸರು ಮಾಮೂಲಿ ವಿಚಾರಣೆ ಮುಗಿಸಿ ಹೋಗಿದ್ದಾರೆ. ಇಲ್ಲಿಯವರೆಗೂ ಕೊಲೆಗಾರನ್ನ ಪತ್ತೆ ಹಚ್ಚೋದಕ್ಕೆ ಅವರಿಂದ ಸಾಧ್ಯವಾಗಿಲ್ಲ. ದಯವಿಟ್ಟು ತಾವು ಈ ವಿಷಯದಲ್ಲಿ ನನಗೆ ಸಹಾಯ ಮಾಡ್ಬೇಕು" ಕೈಗಳನ್ನು ಜೋಡಿಸಿದ ಹೆಣ್ಣು ಲಾಯರ್‍‍ನ ಎದುರಿಗಿದ್ದ ಕುರ್ಚಿಯನ್ನು ಏಳೆದು ಕುಳಿತಿತು.
ಗೋಪಾಲಸ್ವಾಮಿಗೆ ಆ ಹೆಣ್ಣು ಹೇಳಿದ್ದನ್ನು ಇನ್ನೂ ಅರಗಿಸಿಕೊಳ್ಳಲಾಗಲಿಲ್ಲ. ಹಿಂದಿನ ದಿನ ಶಾಂತಿರಾಜು ಕೂಡ ಇದೇ ವಿಷಯ ತಿಳಿಸಿದ್ದು! ಮಾತ್ರವಲ್ಲ, ರಾಜುವಿನ ಕೊಲೆಯ ಹಿಂದೆ ಒಂದು ಹೆಣ್ಣಿನ ಕೈವಾಡವಿದೆ ಅನ್ನುವುದನ್ನೂ ಸ್ಪಷ್ಟಪಡಿಸಿದ್ದಾಳೆ. ಆ ಹೆಣ್ಣು ಅನಘಾರಾಜು!
ರಾಜು ಇಬ್ಬರು ಹೆಂಡಿರ ಮುದ್ದಿನ ಗಂಡ!? ಆದರೆ ಎರಡು ಹೆಣ್ಣುಗಳು ಒಂದೇ ಮನೆಯಲ್ಲಿರಲು ಸಾಧ್ಯವಿಲ್ಲ. ಇಬ್ಬರ ಹೇಳಿಕೆಯೂ ಒಂದೇ ತೆರನಾಗಿದೆ. ಹಾಗಾದಲ್ಲಿ ಒಬ್ಬಳು ರಾಜುವಿನ ನಿಜವಾದ ಹೆಂಡತಿ; ಇನ್ನೊಬ್ಬಳು ರಾಜುವಿನ ಪ್ರೇಯಸಿ!!
ಚೇತರಿಸಿಕೊಂಡ ವಕೀಲ ಮೆಲ್ಲಗೆ ಮಾತಿಗಿಳಿದ.
"ಕೊಲೆಯಾದ ರಾಜು ನಿಮಗೇನಾಗ್ಬೇಕು?"
ವಕೀಲನ ಪ್ರಶ್ನೆಗೆ ಹೆಣ್ಣಿನ ಕಣ್ಣುಗಳಲ್ಲಿ ಆಶ್ಚರ್ಯ ಮೂಡಿತು. ತಟ್ಟನೆ ನುಡಿಯಿತು.
"ರಾಜು ನನ್ನ ಗಂಡ. ಐದು ವರ್ಷಗಳ ಹಿಂದೆ ಅವನನ್ನು ಪ್ರೀತಿಸಿ ಮದುವೆಯಾದೋಳು ನಾನು..."
ಹೆಣ್ಣಿನ ಕಂಠದಲ್ಲಿ ದು:ಖದ ಎಳೆಯೊಂದು ಕೇಳಿಸಿತು.
"ಅಂದ್ರೆ ರಾಜು ಸಿದ್ದ ಉಡುಪುಗಳ ವ್ಯವಹಾರ ನಡೆಸ್ತಿದ್ದ. ನೀವು ಸಂಜೆ ಮನೆಗೆ ಬರೋವಷ್ಟರಲ್ಲಿ ಸೋಫಾದ ಕುಳಿತಿದ್ದಂತೆ ಇತ್ತು ಅವನ ದೇಹ. ನೀವು ಪೊಲೀಸರ ಸಹಾಯ ಯಾಚಿಸಿದ್ರಿ. ಶವ ಪರೀಕ್ಷೆಯ ವರದಿಯಲ್ಲಿಯೂ ಕೂಡ ಇದು ಕೊಲೆಯಲ್ಲಾಂತ ಸಾಬೀತಾಯಿತು. ಪೊಲೀಸರು ಆಸಕ್ತಿ ಕಳೆದುಕೊಂಡ್ರು. ಇದು ಕೊಲೆ ಕೇಸ್ ಅಲ್ಲ; ಆತ್ಮಹತ್ಯೆ ಅನ್ನೋ ನಿರ್ಧಾರಕ್ಕೆ ಬಂದ್ರು. ನೀವು ನಿರಾಶಾರಾದ್ರಿ... ಅದಕ್ಕೆ ನನ್ನ ಸಹಾಯ ಯಾಚಿಸಿ ಬಂದ್ರಿ, ಸರಿನಾ?"
ವಕೀಲನ ಮಾತಿಗೆ ಹುಬ್ಬೇರಿಸಿತು ಹೆಣ್ಣು.
"ಇಷ್ಟೊಂದು ಮಾಹಿತಿಗಳು ನಿಮಗೆ ಹೇಗೆ ತಿಳಿಯಿತು?"
ವಕೀಲ ನಕ್ಕು ನುಡಿದ.
"ಯಾವುದೋ ಒಂದು ಪತ್ರಿಕೆಯಲ್ಲಿ ಓದಿದ ನೆನಪು" ಗೋಪಾಲಸ್ವಾಮಿಯ ಚಾಣಾಕ್ಷತನದ ಉತ್ತರ.
"ಅನಘಾರಾಜುರವರೇ, ನಿಮಗೆ ಯಾರ ಮೇಲಾದರೂ ಅನುಮಾನವಿದೆಯೆ?"
ಎದುರಿಗೆ ಕುಳಿತ ಹೆಣ್ಣು ಅಲೋಚನೆಗೊಳಗಾಗಿ ಮೆಲ್ಲಗೆ ತಲೆಯಲುಗಿಸಿತು.
"ರಾಜುಗೆ ದುಶ್ಚಟಗಳು ಯಾವುದೂ ಇರಲಿಲ್ಲ. ಆದ್ರೆ ಒಂದು ಹೆಣ್ಣಿನ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದ... ಆ ವಿಷಯ ನಂಗೆ ಗೊತ್ತಾಗಿದ್ದು ರಾಜು ಕೊಲೆಯಾದ ರಾತ್ರಿ. ರಾಜುನ ಹೆಣ ಶವ ಪರೀಕ್ಷೆಗೆ ಹೋದ ಸಮಯದಲ್ಲಿ ಅವನ ಮೊಬೈಲ್‍ಗೆ ಒಂದು ಕರೆ ಬಂದಿತ್ತು. ನಾನೆ ತೆಗೆದುಕೊಂಡೆ. ‘ರಾಜು, ಇವತ್ತು ಮನೆಗೆ ಹೋಗೋ ಮೊದ್ಲು ನನ್ನ ಭೇಟಿಯಾಗು’ ಅಂತ ಆತುರದಲ್ಲಿದ್ದ ಹೆಣ್ಣು ಹೇಳಿದ್ದು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೆ. ನಾನು ಮಾತಾಡೋದ್ರಷ್ಟ್ರಲ್ಲಿ ಕರೆ ನಿಂತ್ತಿತ್ತು"
"ಅಂದ್ರೆ... ಆ ದಿನ ರಾಜು, ಅಂದ್ರೆ ನಿಮ್ಮ ಗಂಡ ಎಂದಿಗಿಂತಲೂ ಬೇಗನೆ ಮನೆಗೆ ಬಂದಿದ್ನೆ?"
"ಹೌದು, ಆ ದಿನ ನಮ್ಮ ಮದುವೆಯಾದ ದಿನ. ಅದಕ್ಕೆ ವಿಶೇಷ ಅಡುಗೆ ಆಗ್ಬೇಕೆಂದಿದ್ದ. ನಾನು ಮಾರುಕಟ್ಟೆಗೆ ಹೋಗಿ ಬರೋವಷ್ಟರಲ್ಲಿ ರಾಜುನ ಕೊಲೆಯಾಗಿದ್ದ. ನಂಗೆ ಆ ಹೆಣ್ಣಿನ ಮೇಲೆ ಅನುಮಾನ..."
ಅನಘಾಳ ಮಾತು ನಿಂತಿತು. ತಟ್ಟನೆ ವಕೀಲ ಪ್ರಶ್ನಿಸಿದ.
"ಆ ವಿಷಯ ನೀವು ಪೋಲಿಸರಿಗೆ ತಿಳಿಸಿಲ್ವೆ?"
"ತಿಳಿಸ್ದೆ... ಅವರು ಆ ಫೋನ್ ಸಂಖ್ಯೆಯನ್ನು ಪತ್ತೆ ಮಾಡಿದ್ರು. ಆದರೆ ಆ ಸಂಖ್ಯೆ ಚಾಲ್ತಿಯಲ್ಲಿಲ್ಲಾಂತ ಉತ್ತರ ಬಂತು"
ಸ್ವಲ್ಪ ಹೊತ್ತು ಆಲೋಚಿಸಿದ ಬಳಿಕ ಕೇಳಿದ.
"ಆ ಸಂಖ್ಯೆ ನಿಮ್ಮ ಬಳಿಯಿದೆಯೆ?"
"ಇಲ್ಲ, ಅನಗತ್ಯಾಂತ ಅಳಿಸಿ ಹಾಕಿದೆ"
"ಸರಿ, ನಾಳೆ ಬೆಳಿಗ್ಗೆ ನಾನು ಕೋರ್ಟ್‍ಗೆ ಹೋಗೋ ಮೊದಲು ಬನ್ನಿ. ನಿಮಗೆ ಯಾರ ಮೇಲೆ ಅನುಮಾನವಿದೆ ಅವರ ವಿರುದ್ಧ ಕೇಸ್ ಹಾಕೋಣ"
ಕೈಚೀಲ ತಡಕಾಡಿದ ಹೆಣ್ಣು ಐದು ನೂರರ ಒಂದು ನೋಟನ್ನು ತೆಗೆದು ಗೋಪಾಲಸ್ವಾಮಿಯ ಮುಂದೆ ಹಿಡಿಯಿತು.
"ಪರ್ವಾಗಿಲ್ಲ, ಮತ್ತೆ ಕೊಡಿ" ನಿರಾಕರೆಣೆಯಿದ್ದರೂ ನೋಟನ್ನು ತೆಗೆದುಕೊಂಡ ಲಾಯರ್ ಆ ಹೆಣ್ಣನ್ನು ಬೀಳ್ಕೊಟ್ಟು ಸೀಟಿನ ಹಿಂದಕ್ಕೊರಗಿ ಕುಳಿತ. ಕೈಯಲ್ಲಿದ್ದ ನೋಟನ್ನು ದೀಪದ ಬೆಳಕಿಗೆ ಹಿಡಿದು ನೋಡಿದ. ನೋಟಿನ ಮೇಲೆ ಇಂಕ್‍ನಿಂದ ಬರೆದ ಅಕ್ಷರಗಳು ಕಾಣಿಸಿದವು.
‘ಪ್ಲೀಸ್ ಕಾಲ್’ ಜೊತೆಗೆ ಹತ್ತು ಅಂಕಿಗಳ ಒಂದು ಸಂಖ್ಯೆ!
ಗೋಪಾಲಾಸ್ವಾಮಿಯ ಮುಖದಲ್ಲಿ ಗೆಲುವಿನ ನಗುವಿತ್ತು. ಆ ಸಂಖ್ಯೆಯನ್ನು ಡಯಲಿಸಿದ. ಅತ್ತಲಿಂದ ‘ಹಲೋ’ ಅನ್ನುವ ಹೆಣ್ಣು ದನಿ ಕೇಳಿಸಿತು.
"ಹಲೋ, ಮಿಸೆಸ್ ರಾಜು ಮಾತಾಡ್ತಾ ಇದ್ದೀನಿ"
"ಎಸ್, ಶಾಂತಿರಾಜು?" ಅನುಮಾನದ ಪ್ರಶ್ನೆಯ ದನಿಯಲ್ಲಿ ನಿರಾಶೆಯೂ ಇತ್ತು.
"ಕ್ಷಮಿಸಿ, ನಾನು ಅನಘಾರಾಜು"
ಉತ್ತರ ಕೇಳಿ ತಟ್ಟನೆ ರಿಸೀವರ್ ಇಟ್ಟು ತಲೆಗೆ ಕೈ ಹಚ್ಚಿದ ಲಾಯರ್!

***

ಕೋರೆ ಕಲ್ಲಿನ ಬಂಡೆಗಳ ಮೇಲೆ ಹತ್ತಿ ಇಳಿದ ವಕೀಲ ಗೋಪಾಲಸ್ವಾಮಿಯ ಹಳೇಯ ಅಂಬಾಸಿಡರ್ ಕಾರು ದೂರಕ್ಕೆ ನೆಗೆದಂತೆ ಹಾರಿ ಒಂದು ಕಡೆಗೆ ತಟಸ್ಥವಾಯಿತು. ಕಾರಿನ ಗಾಜುಗಳವರೆಗೂ ಮುಖ ದೂಡಿ ಉದ್ಗರಿಸಿದ ಲಾಯರ್.
"ಇನ್ನು ಮುಂದಕ್ಕೆ ದಾರಿ ಕಾಣಿಸ್ತಿಲ್ಲಾ. ಇದು ಕಾರು ಓಡಾಡುವ ಮಾಮೂಲಿ ರಸ್ತೆ ಅಲ್ಲ" ಪಕ್ಕದಲ್ಲಿ ಕುಳಿತಿದ್ದ ಹೆಣ್ಣಿನತ್ತ ಅಸಹಾಯಕ ನೋಟ ಬೀರಿದ.
"ಇಲ್ಲಿಂದ ಬಂಡೆ ಇಳಿದ್ರೆ ನಾನು ಹೇಳಿರೋ ಮನೆ ಸಿಗುತ್ತೆ" ಕಾರಿನಿಂದ ಇಳಿದು ಇಳಿಜಾರಿನತ್ತ ಕೈ ತೋರಿಸಿದ ಶಾಂತಿರಾಜು ಗೋಪಾಲಸ್ವಾಮಿಯೂ ಇಳಿಯುವಂತೆ ಮಾಡಿದಳು. ಅವಳ ತೋರು ಬೆರಳುಗಳು ನಿಂತತ್ತ ದೃಷ್ಟಿ ಹಾಯಿಸಿದ. ಹಂಚು ಮಾಡಿನ ಒಂಟಿ ಮನೆ!
"ಅದು ಕೊಲೆಗಾರನ ಮನೆ ಅಂತೀರಾ?"
ವಕೀಲನ ಮಾತಿಗೆ ಹುಬ್ಬುಗಳನ್ನು ಕೂಡಿಸಿದ ಹೆಣ್ಣು ಕೈಯನ್ನು ಹಿಂದಕ್ಕೆ ಸರಿಸಿತು.
"ಹೌದು!" ಸ್ಪಷ್ಟವಾಗಿತ್ತು ಉತ್ತರ.
ಆಶ್ಚರ್ಯವಿತ್ತು ವಕೀಲನ ಮುಖದಲ್ಲಿ. ಶಾಂತಿರಾಜು ತಪ್ಪಿತಸ್ಥೆಯಂತೆ ನಾಲಗೆ ಕಚ್ಚಿಕೊಂಡು ನುಡಿದಳು.
"ಆ ವ್ಯಕ್ತೀನ ಇಲ್ಲಿ ಒಂದೆರಡು ಬಾರಿ ನೋಡಿದ್ದೆ"
ವಕೀಲ ಹೆಣ್ಣಿನತ್ತ ನೋಟ ಹರಿಸಿದ. ಅಸ್ಪಷ್ಟ ಚಿತ್ರಣವೊಂದು ಅವಳ ಮುಖದಲ್ಲಿ ಮೂಡಿ ಮರೆಯಾಗುತ್ತಿತ್ತು.
"ನಿಮಗೆ ಇಂತ ನಿರ್ಜನ ಪ್ರದೇಶದಲ್ಲಿ ಓಡಾಡೋ ಪ್ರಮೇಯವೇನಿತ್ತು?"
"ನಾನೂ ರಾಜೂ ಬೇಸರವಾದಾಗ ಈ ಕಲ್ಲಿನ ಕೋರೆಯ ಬಳಿ ಕುಳಿತು ಸಮಯ ಕಳೆಯುವುದಿತ್ತು"
ವಕೀಲನ ತಲೆಯಲ್ಲಿ ಬಿಡಿಸಲಾಗದ ಒಂದು ಸಮಸ್ಯೆಗೆ ನಿಖರವಾದ ಉತ್ತರವೊಂದು ಹೊಳೆದಂತಾಯಿತು.
"ಕ್ಷಮಿಸಿ, ನೀವು ನೆನ್ನೆ ದಿನ ಬರ್ತೀನಿಂತ ಹೇಳಿದೋರು ನಾಪತ್ತೆಯಾದ್ರಿ. ನಿಮಗೆ ಕೊಲೆಗಾರನ ಮೇಲೆ ಸಂಶಯವಿದ್ರೆ ಪೊಲೀಸ್ ಅಧಿಕಾರಿಯನ್ನು ಕಂಡು ಎಫ್.ಐ.ಆರ್‍‍ಗೆ ಜೀವ ಬರಿಸಬಹುದು" ವಿಷಯ ಬದಲಿಸಿದ ಗೋಪಾಲಾಸ್ವಾಮಿ.
ಶಾಂತಿರಾಜುವಿನ ಕಣ್ಣುಗಳಲ್ಲಿ ಹೊಳಪು ಮೂಡಿತು.
"ಕೊಲೆಗಾರನಿಗೆ ಶಿಕ್ಷೆ ನೀಡೋದಿಕ್ಕೆ ಸಾಧ್ಯಾನಾ?"
"ಅಧಿಕಾರಿ ಒಳ್ಳೆಯವನಾಗಿದ್ರೆ ಮತ್ತೊಮ್ಮೆ ತನಿಖೆ ಆರಂಭಿಸಬಹುದು. ಇಲ್ಲವಾದ್ರೆ..."
"ಇಲ್ಲಾಂದ್ರೆ ಏನು ಮಾಡೋಕಾಗುತ್ತೆ?"
"ತನಿಖೆ ಸರಿಯಾಗಿಲ್ಲಾಂತ ಹೇಳಿ, ನ್ಯಾಯಾಲಯದ ಅನುಮತಿ ಪಡೆದು ಮರು ತನಿಖೆ ನಡೆಸಿ ಕೊಲೆಗಾರನನ್ನು ಹಿಡಿಯಬಹುದು"
"ತನಿಖೆ ಮುಗಿದಿದೆ ಲಾಯರ್‍ ಸಾಹೇಬ್ರೆ. ನೀವು ಕೊಲೆಗಾರನ ಹೇಗಾದರೂ ಮಾಡಿ ಶಿಕ್ಷೆಗೆ ಗುರಿ ಪಡಿಸ್ಬೇಕು"
ಗೋಪಾಲಸ್ವಾಮಿ ಆಲೋಚನೆಗೊಳಗಾದವನು ಕಾರಿನತ್ತ ನಡೆದು ಹೇಳಿದ.
"ನೀವು ಮೊನ್ನೆ ದಿನ ಮೈಲಾರಿ ಅನ್ನೋ ವ್ಯಕ್ತಿಯ ಹೆಸರು ಹೇಳಿದ್ರಿ? ಅವನು ಯಾರು?"
ಶಾಂತಿಯ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.
"ಮೈಲಾರಿ ನನ್ನ ಗಂಡನನ್ನು ತಪ್ಪು ದಾರ್‍ಇಗೆ ಎಳೆಯುತ್ತಿದ್ದವನು. ನಿಯತ್ತಿನಿಂದ ದುಡಿಯುತ್ತಿದ್ದ ರಾಜುವನ್ನು ಕಂಡ್ರೆ ಅವನಿಗೆ ಹೊಟ್ಟೆಯುರಿ. ಯಾವಾಗಲೂ ರಾಜುನನ್ನು ಕೆಣಕ್ತಾ ಇದ್ದ. ಅದಕ್ಕೆ ಸರಿಯಾಗಿ ಆ ಹುಡುಗಿ ಕೂಡ ಎಲ್ಲೆ ಮೀರಿ ವರ್ತಿಸೋದಿಕ್ಕೆ ಪ್ರಯತ್ನಿಸುತ್ತಿದ್ಲು"
ವಕೀಲ ಬಾಗಿಲು ತೆರೆದು ಸೀಟಿನಲ್ಲಿದ್ದ ಬಟ್ಟೆಯನ್ನು ತೆಗೆದು ಮುಖ ಒರೆಸಿಕೊಂಡ. ಅಲ್ಲಿಯೇ ಪಕ್ಕದಲ್ಲಿಟ್ಟಿದ್ದ ನೀರಿನ ಬಾಟಲಿ ತೆಗೆದು ಕುಡಿದ. ಶಾಂತಿ ಕಾರಿನ ಇನ್ನೊಂದು ಪಾರ್ಶ್ವಕ್ಕೆ ನಡೆದಾಗ ನೀರಿನ ಬಾಟಲಿ ಇಟ್ಟು, ಕಾರಿನ ಎದುರಿನ ಚಕ್ರಕ್ಕೆ ತಡೆಯಾಗಿಟ್ಟಿದ್ದ ಕಲ್ಲನ್ನು ತೆಗೆದು ಕಾರಿನೊಳಗೆ ಕುಳಿತ. ಶಾಂತಿ ಮುಂದಿನ ಸೀಟನ್ನು ಆಕ್ರಮಿಸಿದಳು.
ಕಾರನ್ನು ಚಾಲನೆಗೆ ತರುವ ಮೊದಲು ವಕೀಲ ಪ್ರಶ್ನೆಯೊಂದನ್ನು ಎಸೆದ.
"ಶಾಂತಿ, ನೇರವಾಗಿ ಹೇಳ್ಬಿಡಿ. ರಾಜು ನಿಮಗೇನಾಬೇಕು?" ಶಾಂತಿ ಆಶ್ಚರ್ಯದಿಂದ ವಕೀಲನ ಮುಖವನ್ನು ನೋಡಿದಳು. ಅನಗತ್ಯ ಪ್ರಶ್ನೆ ಅನಿಸಿತು.
"ರಾಜು ನನ್ನ ಮದುವೆಯಾದೋನು. ನನ್ನ ಗಂಡಾಂತ ಈ ಮೊದ್ಲೇ ತಿಳಿಸಿದ್ದೆ. ಲಾಯರಪ್ನೋರೆ ನೀವು ಈ ರೀತಿ ಪ್ರಶ್ನೆ ಕೇಳೋದ್ರಲ್ಲಿ ಅರ್ಥವಿಲ್ಲ" ಅವಳ ಮಾತಿನಲ್ಲಿ ಅಸಹನೆ ತುಂಬಿತ್ತು.
ವಕೀಲನ ತುಟಿಗಳಲ್ಲಿ ಕಿರು ನಗೆಯೊಂದು ಸುಳಿಯಿತು.
"ಕ್ಷಮಿಸಿ, ಶಾಂತಿಯವರೆ... ಒಂದು ಅನುಮಾನದ ಎಳೆಯಿಂದಾಗಿ ಕೇಳಿದ ಪ್ರಶ್ನೆಯನ್ನೇ ಕೇಳಬೇಕಾಗಿದೆ. ದಯವಿಟ್ಟು ತಾಳ್ಮೆ ಕಳ್ಕೊಳ್ಬೇಡಿ" ಕಾರು ಸದ್ದು ಹೊರಟಿಸಿತು. ಸ್ವಲ್ಪ ಮುಂದಕ್ಕೆ ಹೊರಳಿ ಸವೆದ ಟಯರುಗಳ ಗಿರಗಿರ ಸದ್ದಿನೊಂದಿಗೆ ಹಿಮ್ಮುಖವಾಗಿ ಚಲಿಸಿ ಬಂಡೆಯ ಮೇಲೆ ಹರಿಯಿತು.
"ಅದೇನು ಕೇಳ್ತೀರೋ ನಂಗೊಂದೂ ಅರ್ಥವಾಗ್ತಾ ಇಲ್ಲ. ನನ್ನ ರಾಜುವನ್ನು ಕೊಂದವರನ್ನು ಸುಮ್ಮನೆ ಬಿಡಬಾರದು. ಅದಕ್ಕಾಗಿ ನಾನು ನಾಳೆ ನಿಮ್ಮಲ್ಲಿಗೆ ಬರ್‍ತೀನಿ. ಕೊಲೆಗಾರನ ವಿರುದ್ಧ ದಾವೆ ಹೂಡಬೇಕು"
"ಸರಿ, ಅದಕ್ಕಿಂತ ಮೊದಲು ನೀವು ಫೈಲ್ ಮಾಡಿರೋ ಎಫ್.ಐ.ಆರ್ ಸಂಖ್ಯೆ ನನಗೆ ಬೇಕಿದೆ. ಪೊಲೀಸ್ ಅಧಿಕಾರಿಯನ್ನು ಕಂಡು ಮಾತನಾಡಿ ಕಡತವನ್ನು ಹೊರ ತೆಗೆಯೋದಿದೆ"
ಕಾರಿನ ವೇಗದ ಚಲನೆಯನ್ನು ನಿರ್ಲಕ್ಷಿಸಿದ ಹೆಣ್ಣು ಪರ್ಸ್‍ನಿಂದ ರಶೀದಿಯನ್ನು ತೆಗೆದು ವಕೀಲನತ್ತ ಚಾಚಿತು.
ಅದನ್ನು ಪಡೆದುಕೊಂಡು ಒಮ್ಮೆ ಕಣ್ಣಾಡಿಸಿದ ಗೋಪಾಲಸ್ವಾಮಿ.
ಈ ಎಫ್.ಐ.ಆರ್. ಸಂಖ್ಯೆಗೂ ಅನಘಾರಾಜುವಿನ ಎಫ್.ಐ.ಆರ್.ಗೂ ತಾಳೆಯಾದರೆ ಕೊಲೆಗಾರ ಸುಲಭದಲ್ಲಿ ಸಿಕ್ಕಿಬೀಳುತ್ತಾನೆ. ಮನಸ್ಸಿನಲ್ಲಿಯೇ ಲೆಕ್ಕ ಹಾಕಿಕೊಂಡ ಗೋಪಾಲಸ್ವಾಮಿ ಶಾಂತಿಯನ್ನು ಮನೆಯ ಹತ್ತಿರ ಇಳಿಸಿ ಕಚೇರಿಯ ಕಡೆಗೆ ಕಾರನ್ನು ಓಡಿಸಿದ.

***

ಪೊಲೀಸ್ ಅಧಿಕಾರಿ ಸುಬ್ರಹ್ಮಣಿ, ಗೋಪಾಲಸ್ವಾಮಿಯನ್ನು ಆದರದಿಂದಲೇ ಒಳಗೆ ಕರೆದ. ದಫೇದಾರ್‍‍ನನ್ನು ಕರೆದು ಎರಡು ಲೋಟ ಚಹಾ ತರುವಂತೆ ಹೇಳಿದ.
"ಲಾಯರ್ ಸಾಹೇಬ್ರು ಬಹಳ ಅಪರೂಪವಾಗ್ಬಿಟ್ರಿ"
ಅಧಿಕಾರಿಯ ಮಾತಿಗೆ ಗೋಪಾಲಸ್ವಾಮಿ ನಕ್ಕ.
"ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದ ಮೇಲೆ ನನ್ನಂತಹ ಲಾಯರ್‍‍ಗಳಿಗೆ ಪೊಲೀಸ್ ಠಾಣೆ ಹತ್ತುವಂತ ಪ್ರಮೆಯವೇನಿರುತ್ತೆ ಸಾರ್..." ರಾಗವೆಳೆದ ವಕೀಲ ಗಹಗಹಿಸಿ ನಕ್ಕ.
"ಅಂದ್ರೆ... ಈಗ ನಾವು ಕರ್ತವ್ಯ ವಿಮುಖರಾಗಿದ್ದೇವೆ. ಯಾರೋ ನಿಮ್ಮ ಕ್ಲೈಂಟ್ ಹಾಗಂತ ಕಂಪ್ಲೆಂಟ್ ಕೊಟ್ಟಿದ್ದಾರೆ. ಅದಕ್ಕಾಗಿ ‘ಸಾರ್, ನಿಮ್ಮ ತನಿಖೆ ಸರಿಯಾಗಿಲ್ಲ. ಇನ್ನೊಮ್ಮೆ ಆ ಕಡತವನ್ನು ಪರಿಶೀಲಿಸಿ’ ಅನ್ನೋದಕ್ಕೆ ನೀವು ಬಂದಿರೋದು?" ನಗುತ್ತಲೇ ಅಧಿಕಾರಿ ಕೇಳಿದಾಗ ವಕೀಲನ ಮುಖದಲ್ಲಿ ಬದಲಾವಣೆ ಕಾಣಿಸಿತು.
"ನಿಮ್ಮ ಊಹೆ ಸರಿಯಾಗಿದೆ. ನಾನು ಬಂದಿರೋದು ರಾಜು ಕೊಲೆ ಕೇಸನ್ನು ವಿಚಾರಿಸುವುದಕ್ಕೆ. ಕೊಲೆಯಾದ ರಾಜುವಿನ ಹೆಂಡತಿ ಶಾಂತಿಗೆ ಯಾರ ಮೇಲೋ ಅನುಮಾನವಿದೆ. ಆ ಕಡತವನ್ನು ಮತ್ತೊಮ್ಮೆ ಹೊರ ತೆಗೆಯುವುದಕ್ಕೆ ಒತ್ತಾಯಿಸುತ್ತಿದ್ದಾಳೆ. ನನ್ನ ಕ್ಲೈಂಟ್‍ಗೆ ನ್ಯಾಯ ಸಿಗಬೇಕು ಮಿಸ್ಟರ್ ಸುಬ್ರಹ್ಮಣಿ"
ಅಧಿಕಾರಿಯ ಮುಖ ಸಂಪೂರ್ಣವಾಗಿ ಬದಲಾಯಿತು. ಮುಖದಲ್ಲಿ ಗಂಭೀರತೆ ತುಂಬಿಕೊಂಡಿತು.
"ಲಾಯರ್ ಸಾರ್, ನಿಮಗೆ ಬೇಕಾಗಿರೋದು ರಾಜುವಿನ ಕಡತ ತಾನೆ?"
ಬಿಸಿಬಿಸಿ ಚಹಾದ ಲೋಟವನ್ನು ಇಬ್ಬರ ಮುಂದೆಯೂ ಹಿಡಿದ ದಫೇದಾರ್‍.
"ನೋಡಿ ವೆಂಕಟ್ರಮಣ, ಮಧುಸೂದನ್‍ಗೆ ರಾಜುವಿನ ಫೈಲ್ ತರೋದಿಕ್ಕೆ ಹೇಳಿ"
ಎರಡೇ ನಿಮಿಷದಲ್ಲಿ ಸಹಾಯಕ ಅಧಿಕಾರಿ ಮಧುಸೂದನ್ ಫೈಲ್ ತಂದು ಮೇಜಿನ ಮೇಲಿರಿಸಿ ಗೋಪಾಲಸ್ವಾಮಿಯ ಕಡೆಗೆ ನೋಡಿದ.
ಫೈಲನ್ನು ಎತ್ತಿಕೊಂಡ ಅಧಿಕಾರಿ.
"ರೀ, ಮಧುಸೂದನ್... ಈ ಫೈಲ್ ಅನಘಾರಾಜುಂದು. ಇವರಿಗೆ ಬೇಕಾಗಿರೋದು ಶಾಂತಿರಾಜುವಿನ ಫೈಲ್" ಅಂದಾಗ ವಕೀಲ ಕುರ್ಚಿಯಿಂದ ಎದ್ದು ನಿಂತ.
"ಅಂದ್ರೆ, ಇಬ್ಬರು ರಾಜುಗಳ ಕೊಲೆಯಾಗಿದೆಯೇ!!?" ಉದ್ಗರಿಸಿ ಫೈಲ್‍ನತ್ತ ನೋಡಿದ.
"ಹೌದು, ಸಾರ್. ನಮ್ಗೂ ನಿಮ್ಮ ಹಾಗೇ ಆಶ್ಚರ್ಯವಾಗಿತ್ತು. ಒಂದೇ ದಿವಸ ಒಂದೇ ಹೆಸರಿನ ಇಬ್ಬರ ಕೊಲೆ. ಅದೂ ಒಂದೇ ಠಾಣಾ ವ್ಯಾಪ್ತಿಯಲ್ಲಿ"
"ಸಾರ್, ನಾನು ಇಬ್ಬರ ಫೈಲ್‍ಗಳನ್ನು ಪರಿಶೀಲಿಸಬಹುದೆ?"
ಕ್ಷಣ ಹೊತ್ತು ಆಲೋಚಿಸಿದ ಅಧಿಕಾರಿ ಕಡತವನ್ನು ಗೋಪಾಲಸ್ವಾಮಿಯ ಮುಂದೆ ಹಿಡಿದ. ಸಹಾಯಕ ಅಧಿಕಾರಿ ಇನ್ನೊಂದು ಕಡತವನ್ನು ತಂದು ಮೇಜಿನ ಮೇಲೆ ಇಟ್ಟ. ಬಳಿಕ ಎರಡು ಫೈಲುಗಳನ್ನು ಪರಿಶೀಲಿಸಿದ ವಕೀಲ ಒಂದು ನಿರ್ಧಾರಕ್ಕೆ ಬಂದ.

***

ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಒಂದೇ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದಾರೆ. ಅದೂ ಇಬ್ಬರ ಕೊಲೆಯೂ ಒಂದೆ ಮಾದರಿಯಾಗಿದೆ. ಸೋಫಾದಲ್ಲಿ ಕುಳಿತಂತೆ! ಗಾಯಗಳಿಲ್ಲದೆ!! ರಕ್ತದ ಕಲೆಗಳಿಲ್ಲದೆ!!! ಇಬ್ಬರದ್ದೂ ಕೊಲೆಯೇ ಆಗಿದ್ದರೆ ಆ ಇಬ್ಬರನ್ನು ಕೊಂದವನು ಒಬ್ಬನೇ!!!!...
ಲೇಖನಿ ಮತ್ತು ಬಿಳಿಯ ಹಾಳೆಯನ್ನು ತೆಗೆದುಕೊಂಡ ವಕೀಲ ಮುಖ್ಯವಾದ ವಿಷಯಗಳನ್ನು ಗುರುತಿಸಿಕೊಂಡ. ತನ್ನ ಬಳಿಯಿದ್ದ ಅನಘಾಳ ಸಂಖ್ಯೆಗೆ ಕರೆ ಮಾಡಿದ.
"ಹೌದು, ಸುಳಿವು ದೊರಕಿದೆ. ಇವತ್ತೇ ಬರಬೇಕು" ವಕೀಲನ ಮಾತಿನಲ್ಲಿ ಆತುರವಿರುವುದನ್ನು ಗಮನಿಸಿದ ಅನಘಾ ನಿಂತ ಮೆಟ್ಟಿಗೆ ಆಫೀಸಿಗೆ ಬಂದಾಗ ವಕೀಲ ಸ್ವಾಗತಿಸಿದ.
"ಮಿಸೆಸ್ ರಾಜುರವರೇ, ನನ್ಗೆ ನೀವು ಕೊಟ್ಟಿರೋ ಐದು ನೂರರ ನೋಟು ಎಲ್ಲಿಂದ ಸಂಪಾದಿಸಿದಿರಿ?" ಏದುಸಿರು ಬಿಡುತ್ತಿದ್ದವಳನ್ನು ಕೇಳಿದ.
ಕೊಲೆಯ ವಿಚಾರ ಮಾಡುತ್ತಾನೆಂದು ತಿಳಿದವಳಿಗೆ ತೀವ್ರ ನಿರಾಶೆಯಾಯಿತು.
"ಅದು ನಕಲಿ ನೋಟಲ್ಲಾಂತ ಭಾವಿಸ್ತೀನಿ"
"ಅದು ಅಸಲಿ ನೋಟೇ. ಆದ್ರೆ ಅದು ನಿಮ್ಮ ಕೈಗೆ ಹೇಗೆ ಬಂತು?" ಮಾರ್ಮಿಕವಾಗಿತ್ತು ಪ್ರಶ್ನೆ.
"ರಾಜು ಸತ್ತ ದಿವಸ ಅವನ ಅಂಗಿಯ ಜೇಬಿನಲ್ಲಿತ್ತು"
"ಪೊಲೀಸರು ತನಿಖೆ ನಡೆಸುವ ಮೊದಲೇ ಅದನ್ನು ತೆಗೆದುಕೊಂಡ್ರಾ?"
ಅನಘಾಳ ಮುಖದಲ್ಲಿ ಭೀತಿ ಕಾಣಿಸಿತು. ಕಣ್ಣುಗಳನ್ನು ಅಗಲಕ್ಕೆ ತೆರೆದು ತಲೆಗೆ ಕೈ ಹಚ್ಚಿಕೊಂಡು ಜ್ಞಾಪಿಸಿಕೊಂಡಳು.
"ಆ ನೋಟು ಜೇಬಿನಿಂದ ಹೊರಗೆ ಬೀಳುವಂತೆ ಇತ್ತು. ಅದಕ್ಕೆ ಅದನ್ನು ತೆಗೆದುಕೊಂಡೆ"
"ನೀವು ಅದನ್ನು ಗಮನಿಸಿದ್ರಾ?"
"ಯಾವುದನ್ನು?" ಮುಗ್ಧತೆಯಿತ್ತು ಪ್ರಶ್ನೆಯಲ್ಲಿ.
"ಆ ಐದು ನೂರರ ನೋಟನ್ನು"
ಇಲ್ಲವೆನ್ನುವಂತೆ ತಲೆಯಲುಗಿಸಿದವಳು ಅನುಮಾನದಿಂದ ವಕೀಲನ ಮುಖವನ್ನೇ ನೋಡುತ್ತಿದ್ದಳು.
"ಆ ನೋಟಿನ ಮೇಲೆ ನಿಮ್ಮ ಮೊಬೈಲ್ ಫೋನ್‍ನ ಸಂಖ್ಯೆ ಇದೆ" ಅದ್ಭುತವೆನ್ನುವಂತೆ ಹುಬ್ಬೇರಿಸಿದಳು.
"ನನ್ನ ಬಳಿ ಇರೋದು ರಾಜುನ ಮೊಬೈಲ್. ನಾನು ಆ ನೋಟನ್ನು ಅಷ್ಟಾಗಿ ಗಮನಿಸ್ಲಿಲ್ಲ"
"ಸರಿ, ಮುಚ್ಚಿ ಹೋಗಿರೋ ತನಿಖೆಯನ್ನು ಜೀವಗೊಳುಸುವುದಕ್ಕೆ ಕೋರ್ಟ್‍ಗೆ ಮನವಿ ಸಲ್ಲಿಸಿದ್ದೀನಿ. ಇನ್ನೇನು ಎರಡು ಮೂರು ದಿನಗಳೊಳಗೆ ಅನುಮತಿ ದೊರಕುತ್ತೆ. ಕೂಡಲೇ ಮರು ತನಿಖೆ ನಡೆಸೋಣ. ಈಗ ನೀವು ನನ್ನ ಜೊತೆಗೆ ಬನ್ನಿ. ಈ ಕೇಸ್‍ಗೆ ಸಂಬಂಧ ಪಟ್ಟ ಇನ್ನೊಬ್ಬ ವ್ಯಕ್ತಿಯನ್ನು ಭೇಟಿ ಮಾಡಿಸುವುದಿದೆ"
ಫೋನ್ ತಿರುವಿ ಯಾರೊಂದಿಗೊ ಮಾತನಾಡಿದ ವಕೀಲ. ಇಬ್ಬರೂ ಕೆಳಗೆ ಬರುವಾಗ ಅವನ ಅಂಬಾಸಿಡರ್ ಕಾರು ಹಲ್ಲು ಕಿರಿಯುತ್ತಾ ನಿಂತಿತ್ತು.

***

ಹಜಾರಕ್ಕೆ ಹಾಸಿದ ಕೆಂಪು ಜಮಖಾನೆಯ ಮೇಲೆ ಮೃದು ಹೆಜ್ಜೆಗಳನ್ನು ಹಾಕುತ್ತಾ ಒಳಗೆ ಬಂದವರನ್ನು ಕಂಡು ಶಾಂತಿಗೆ ಆಶ್ಚರ್ಯವಾಯಿತು. ವಕೀಲನ ಜೊತೆಗೆ ಹರೆಯದ ಹೆಣ್ಣನ್ನು ನಿರೀಕ್ಷಿಸಿರಲಿಲ್ಲ.
"ಬನ್ನಿ ಲಾಯರ್ ಸಾಹೇಬ್ರೆ, ಕುಳಿತಿರಿ. ಈಕೆ...?" ಅನಘಾಳತ್ತ ಅಪರಿಚಿತ ನೋಟ ಹರಿಸಿದಾಗ ವಕೀಲ ಚುಟುಕಾಗಿ ಪರಿಚಯಿಸಿದ.
ಅನಘಾ ಗೋಪಾಲಸ್ವಾಮಿಯ ಪಕ್ಕದಲ್ಲಿಯೇ ಕುಳಿತಳು.
ಎರಡು ಲೋಟಗಳಲ್ಲಿ ಕಿತ್ತಳೆಯ ಹಣ್ಣಿನ ರಸವನ್ನು ತಂದು ಇಬ್ಬರತ್ತಲೂ ಹಿಡಿದಳು. ಏಕಾಏಕಿ ಛಾವಣಿಯಲ್ಲಿ ತಿರುಗುತ್ತಿದ್ದ ಫ್ಯಾನ್ ನಿಂತಿತು! ಶಾಂತಿಯ ಕಣ್ಣುಗಳಲ್ಲಿ ನಿರಾಶೆ ಸುಳಿಯಿತು.
"ಕರೆಂಟ್ ಹೋಯ್ತು. ಕುಳಿತಿರಿ ಬಂದೆ..." ಆತುರಾತುರವಾಗಿ ಒಳಗೆ ನಡೆದವಳು ಧಾವಿಸುತ್ತಲೇ ಹೊರಗೆ ಬಂದು ಅನಘಾಳ ಮೇಲೆರಗಿದಳು!
ಅನಿರೀಕ್ಷಿತ ದಾಳಿಯಿಂದ ತತ್ತರಿಸಿದ ಅನಘಾ ವಕೀಲನ ಕಡೆಗೆ ವಾಲಿದಳು. ವಕೀಲ ಮಿಂಚಿನ ವೇಗದಲ್ಲಿ ಶಾಂತಿಯನ್ನು ಹಿಂದಕ್ಕೆ ತಳ್ಳಿದ! ಶಾಂತಿಯ ಕೈಯಲ್ಲಿ ಮಿರಿಮಿರಿ ಮಿಂಚುವ ಚೂರಿ ಇತ್ತು!
"ಶಾಂತಿ, ಹಾಗೆ ಇರು. ಮೇಲಕ್ಕೆದ್ರೆ ಶೂಟ್ ಮಾಡ್ತೀನಿ" ಲಾಯರ್‍‍ನ ಕೈಯಲ್ಲಿ ರಿವಾಲ್ವರ್ ಇತ್ತು.
ಶಾಂತಿ ಅಸಹಾಯಕತೆಯಿಂದ ನೆಲದ ಮೇಲೆಯೇ ಇದ್ದಳು.
"ನಿನ್ನ ಪ್ಲಾನೆಲ್ಲಾ ನಂಗೆ ಗೊತ್ತಾಗಿಯೇ ಅನಘಾನ ಇಲ್ಲಿಗೆ ಕರ್ಕೊಂಡು ಬಂದೆ. ಅನಘಾಳ ಗಂಡ ರಾಜುಗೆ ‘ಮೈಲಾರಿ’ ಅನ್ನೊ ಹೆಸರು ಕೊಟ್ಟು ಅವನನ್ನು ನಿನ್ನ ಗಂಡನನ್ನು ತಪ್ಪು ದಾರಿಗೆ ಏಳೆಯುತ್ತಿದ್ದಾನೆಂತ ಸಾಯಿಸ್ದೆ"
ವಕೀಲನ ಮಾತು ಕೇಳಿ ಅನಘಾ ಆಶ್ಚರ್ಯ ತೋರಿಸಿದಳು.
"ನಿನ್ನ ಗಂಡ ರಾಜು, ಸಿದ್ದ ಉಡುಪುಗಳನ್ನು ತಯಾರಿಸೋ ಉದ್ಯಮ ಮಾಡ್ತಾ ಇದ್ದ. ಅಲ್ಲಿರೋ ಬಡ ಹುಡುಗಿಯರ ಮೇಲೆ ಸಣ್ಣತನ ತೋರಿಸ್ತಿದ್ದ. ಅಲ್ಲಿ ಕೆಲಸ ಮಾಡುತ್ತಿದ್ದ ಅನಘಾಳ ಗಂಡ ರಾಜು ಬುದ್ಧಿವಾದ ಹೇಳಿದ್ರೆ ಅವನನ್ನೇ ಕೆಟ್ಟವನನ್ನಾಗಿ ಚಿತ್ರಿಸಿದ. ಪದೇ ಪದೇ ಅನಘಾನ ಮನೆಗೆ ಹೋಗ್ತಿದ್ದ. ನಿನ್ನ ಗಂಡನ ಮೇಲೆ ಅನುಮಾನ ಬಂದು ಒಂದು ದಿವಸ ಹಿಂಬಾಲಿಸ್ದೆ ನೀನು. ಆ ದಿನ ದುರಾದೃಷ್ಟವಶಾತ್ ಅನಘಾ ಒಬ್ಳೇ ಮನೆಯಲ್ಲಿದ್ಲು. ನೀನು ಅಪಾರ್ಥ ಮಾಡ್ಕೊಂಡೆ"
"ಇಲ್ಲ, ರಾಜೂನ ಅಲ್ಲಿಂದ ಕೆಲಸ ಬಿಡಿಸ್ದೆ ನಾನು. ಆದ್ರೂ ಮಾಲೀಕ ಆಗಾಗ್ಗೆ ನಮ್ಮ ಮನೆಗೆ ಬಂದು ಬೆದರಿಕೆ ಹಾಕ್ತಿದ್ದ. ನನ್ನ ಕೆಟ್ಟದಾಗಿ ನೋಡ್ತಿದ್ದ" ಅನಘಾ ಅಲ್ಲಿಯವರೆಗೂ ಮುಚ್ಚಿಟ್ಟಿದ್ದ ವಿಷಯವನ್ನು ತೆರೆದಳು.
"ಆ ದಿನ ಕೊಲೆಗಾರನನ್ನ ಹುಡುಕಿಕೊಂಡು ನಿಮ್ಮ ಮನೆ ಹತ್ತಿರ ಬಂದಿದ್ದೆವು. ಆನಂತರ ನಾನೇ ಖುದ್ದಾಗಿ ಶಾಂತಿಯವರನ್ನು ಹುಡುಕಿಕೊಂಡು ಬಂದೆ. ಆ ಸಮಯದಲ್ಲಿ ಶಾಂತಿಯವರು ಮನೆಯಲ್ಲಿರಲಿಲ್ಲ. ಆದರೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಒಳಗೆ ಬಂದೆ. ಅವರ ಫ್ಯಾಕ್ಟರಿಯ ವಿದ್ಯುತ್ ಕೆಲಸಗಾರ ಮುರಾರಿ ಕೆಲಸ ಮಾಡ್ತಿದ್ದ. ಅವನಿಂದ ಒಂದು ಮುಖ್ಯ ಕುರುಹು ದೊರಕಿತು"
ಶಾಂತಿರಾಜು ಮೆಲ್ಲಗೆ ಎದ್ದು ಕುಳಿತಾಗ ವಕೀಲ ಎಚ್ಚರಿಸಿದ.
"ಈಗೆ ನಿನ್ನ ಗಂಡನ್ನ ತನ್ನ ಮನೆಗೆ ಆಹ್ವಾನಿಸಿದ್ಲು. ಆದರೆ ನಿನ್ನ ಗಂಡ ಇಲ್ಲಿಗೆ ಬರೋ ಮೊದ್ಲೇ ಅವಳ ಗಂಡನೇ ಮನೆಗೆ ಬಂದ. ಟೀವಿ ಹಾಕಿಕೊಂಡು ಸೋಫಾದಲ್ಲಿ ಕುಳಿತವನು ಹಾಗೇ ಕೊಲೆಯಾಗ್ಬಿಟ್ಟ. ಆ ಸಮಯದಲ್ಲಿ ಶಾಂತಿ ಮನೆಯಲ್ಲಿರಲಿಲ್ಲ. ಅವಳಿಗೆ ಫ್ಯಾಕ್ಟರಿಯಿಂದ ತುರ್ತು ಕರೆ ಬಂದಿತ್ತು"
"ಅರ್ಥವಾಗ್ಲಿಲ್ಲ" ಅನಘಾಳ ಮುಖದಲ್ಲಿ ಗೊಂದಲವಿತ್ತು.
"ಅಂದ್ರೆ, ನಾವು ಕೂತಿರೋ ಸೋಫಾಕ್ಕೊಂದು ವಿಶೇಷತೆಯಿದೆ"
ಅನಘಾಳ ದೃಷ್ಟಿ ಸೋಫಾದತ್ತ ಸರಿಯಿತು. ಶಾಂತಿ ತಲೆ ತಗ್ಗಿಸಿ ಕುಳಿತಿದ್ದಳು.
"ನಿಮಗೆ ಅದನ್ನ ಸ್ಪಷ್ಟ ಪಡಿಸ್ತೇನೆ" ಕೈಯಲ್ಲಿದ್ದ ಫ್ಯೂಸ್‍ನ ಕಟೌಟನ್ನು ಕೈಯಲ್ಲಿ ಹಿಡಿದು ತೋರಿಸಿದ ವಕೀಲ ಹೊರಗೆ ನಿಂತಿದ್ದ ಮುರಾರ್‍ಇಯನ್ನು ಕರೆದ.
"ಇವನೇ ಇಲೆಕ್ಟ್ರೀಶನ್ ಮುರಾರ್‍ಇ. ಈ ಕಬ್ಬಿಣದ ಅಂಚಿರೋ ಸೋಫಾಕ್ಕೆ ವಿದ್ಯುತ್ ಹರಿಯೋ ಹಾಗೇ ಮಾಡಿರೋನು. ಛಾವಣಿಯ ಫ್ಯಾನ್‍ಗೂ ಈ ಸೋಫಾಕ್ಕೆ ಹರಿಯೋ ವಿದ್ಯುತ್‍ಗೂ ಒಂದೇ ಸ್ವಿಚ್"
ಅನಘಾ ಗೋಡೆಯತ್ತ ದೃಷ್ಟಿ ಹಾಯಿಸಿದಾಗ ವಕೀಲ ಮುಂದುವರಿಸಿದ.
"ಆ ದಿನ ಗುಂಡಿ ಹಾಕಿ ನಿನ್ನ ಗಂಡನನ್ನ ಕರೆದು ಸೋಫಾದಲ್ಲಿ ಕುಳ್ಳಿರಿಸೋ ಪ್ಲಾನ್ ಮಾಡಿದ್ಲು ಶಾಂತಿ. ಆದ್ರೆ ಆ ಸೋಫಾದಲ್ಲಿ ಅವಳ ಗಂಡನೇ ಕುಳಿತ. ಅದರಲ್ಲಿ ಹರಿಯೋ ವಿದ್ಯುತ್‍ನ ಆಘಾತಕ್ಕೆ ಸಿಲುಕಿ ಸತ್ತ. ಈ ವಿಷಯ ಪೊಲೀಸ್ನೋರಿಗೂ ಗೊತ್ತಾಗ್ಲಿಲ್ಲ. ಶವಪರೀಕ್ಷೆ ವರದಿಯಲ್ಲಿ ವಿದ್ಯುತ್ ಆಘಾತದಿಂದ ಸಾವು ಸಂಭವಿಸಿದೆ ಅಂದ್ರೂ ಯಾರಿಗೂ ನಂಬೋಕೆ ಆಗ್ಲಿಲ್ಲ. ಪೊಲೀಸರಿಗೆ ಹಣ ಕೊಟ್ಟು ಕೇಸನ್ನು ಅಲ್ಲಿಯೇ ಮುಚ್ಚಿ ಹಾಕಿದ್ಲು ಶಾಂತಿ. ಆದ್ರೆ ಮುರಾರ್‍ಇ ಈಗ ಅವಳನ್ನೇ ಬ್ಲಾಕ್ ಮೇಲ್ ಮಾಡ್ತಿದ್ದಾನೆ. ಅದಕ್ಕೆ ಮುಚ್ಚಿ ಹೋಗಿರೋ ಕಡತವನ್ನು ತೆರೆಯೋದಿಕ್ಕೆ ನನ್ನ ಸಹಾಯ ಯಾಚಿಸಿ ಬಂದಿದ್ಲು. ಇದೆಲ್ಲಾ ಗೊತ್ತಾಗಿದ್ದು ಇಬ್ಬರ ಫೈಲ್‍ಗಳನ್ನು ಪರಿಶೀಲಿಸಿದ ನಂತರ"
"ಅಂದ್ರೆ, ನನ್ನ ಗಂಡ ಕೂಡಾ ಸತ್ತಿರೋದು...!"
"ಇಲ್ಲ ಅನಘಾರವರೆ, ನಿಮ್ಮ ಗಂಡ ಸತ್ತಿರೋದು ವಿದ್ಯುದಾಘಾತದಿಂದಲ್ಲ. ಅವರನ್ನು ಉಸಿರುಗಟ್ಟಿಸಿ ಸಾಯಿಸಿರೋದು. ಸೋಫಾದಲ್ಲಿ ಕುಳಿತಿದ್ದಂತೆ ರಾಜುನ ಪ್ರಾಣ ಹೋಗಿಲ್ಲ. ಅವನನ್ನು ಸಾಯಿಸಿ ಸೋಫಾದಲ್ಲಿ ಕುಳ್ಳಿರಿಸಿದ್ದು. ಸರಿಯಾಗಿ ಗಮನಿಸಿದ್ರೆ ನಿಮ್ಗೆ ಗೊತ್ತಾಗ್ತಿತ್ತು. ರಾಜೂನ ದೇಹ ವಾಲಿದಂತೆ ಸೋಫಾದಲ್ಲಿತ್ತು. ಕಾಲುಗಳು ಉದ್ದಕ್ಕೆ ಚಾಚಿದಂತೆ ಇತ್ತು. ಸತ್ತ ಮೇಲೆ ಸೋಫಾದಲ್ಲಿ ಅವನನ್ನು ಕುಳ್ಳಿರಿಸೋದಿಕ್ಕೆ ಶಾಂತಿ ತುಂಬಾ ಹೆಣಗಾಡಿದ್ಲು. ಈ ವಿಷಯನೂ ಫೈಲ್‍ನಲ್ಲಿ ಸ್ಪಷ್ಟವಾಗಿತ್ತು"
"ನೀವು ಹೇಳಿದ್ರಲ್ಲಾ... ಈ ಎರಡು ಕೊಲೆಯೂ ಒಂದೇ ಮಾದರಿಯಾಗಿದೇಂತ. ಪೋಲಿಸ್ ಕೂಡ ಯಾಕೆ ಈ ನಿರ್ಧಾರಕ್ಕೆ ಬಂದ್ರು?" ಅನಘಾರಾಜುವಿನ ಪ್ರಶ್ನೆಯಲ್ಲಿ ಸಂಶಯವಿತ್ತು.
"ಅಂದ್ರೆ, ಎರಡು ಕೊಲೆನೂ ಮೇಲ್ನೋಟಕ್ಕೆ ಒಂದೇ ಮಾದರಿಯಾಗಿತ್ತು. ಅದಕ್ಕಾಗಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿತ್ತು ಈ ಕೊಲೆ ಕೇಸ್‍ಗಳು"
ಮುರಾರ್‍ಇ ಕೂಡ ತಪ್ಪಿತಸ್ಥನಂತೆ ನಿಂತಿದ್ದ.
"ಮುರಾರ್‍ಇ, ನೀನೂ ಕೂಡ ಈ ಕೊಲೆ ಕೇಸ್‍ನಲ್ಲಿ ಶಾಮೀಲಾಗಿದ್ದೀಂತನೇ ಆಗುತ್ತೆ. ಅನಘಾರವರೇ ಆ ದಿನ ನೀವು ಕೊಟ್ಟ ನೋಟ್‍ನಲ್ಲಿ ಫೋನ್ ನಂಬರಿತ್ತಲ್ಲ... ಅದು ಶಾಂತಿಯವರೆ ಬರೆದಿರೋದು. ನಿಮಗೆ ಆಶ್ಚರ್ಯವಾಗುತ್ತಲ್ಲಾ? ಅದು ಹೇಗಾಯ್ತೂಂದ್ರೆ... ಆ ದಿನ ನಿಮ್ಮ ಗಂಡನಿಗೆ ಮನೆಗೆ ಫೋನ್ ಮಾಡಿ ಅವರ ಮೊಬೈಲ್ ನಂಬರು ಕೇಳಿದ್ರು. ಆ ಸಮಯದಲ್ಲಿ ತನ್ನ ಕೈಯಲ್ಲಿದ್ದ ನೋಟ್ ಮೇಲೆ ನಿಮ್ಮ ಗಂಡನ ಮೊಬೈಲ್ ನಂಬರ್ ಬರೆದು, ಸುಮಾರು ಸಂಜೆ ಆರು ಗಂಟೆ ಹೊತ್ತಿಗೆ ನೀವು ಹೊರಗೆ ಹೋದ ಸಮಯದಲ್ಲಿ ನಿಮ್ಮ ಮನೆಗೆ ಬಂದ ಶಾಂತಿ ನಿಮ್ಮ ಗಂಡನ್ನ ವಿಚಾರಿಸಿದ್ಲು. ನನ್ನ ಕೈಯಲ್ಲಿ ದುಡ್ಡಿಲ್ಲ ಅದಕ್ಕೆ ಬರ್‍ಲಿಲ್ಲಾಂತ ನಿಮ್ಮ ಗಂಡ ಸುಳ್ಳು ಸಬೂಬು ನೀಡ್ದಾಗ ತನ್ನ ಬಳಿಯಿದ್ದ ಆ ನೋಟನ್ನೇ ನಿಮ್ಮ ಗಂಡನ ಜೇಬಿಗೆ ಸೇರಿಸಿದೋಳು ಇವಳೆ. ಆಗ ನಿಮ್ಮ ಗಂಡ ರಾಜು ತಾನು ಮನೆಗ ಬರೋದಿಕ್ಕೆ ಸಾಧ್ಯವಿಲ್ಲಾಂತ ಕಡಾಖಂಡಿತವಾಗಿ ಹೇಳಿದ ಮೇಲೆ ಬೇರೆ ದಾರಿ ಕಾಣದೆ ಅವರನ್ನು ಸಾಯಿಸಿದ್ಲು"
ಅನಘಾ ಮುಖದ ಮೇಲೆ ಮೂಡಿದ ಬೆವರ ಹನಿಗಳನ್ನು ಒರೆಸಿಕೊಂಡು ಶಾಂತಿಯತ್ತ ಭಯದ ನೋಟ ಬೀರಿದಳು.
ಆ ಹೊತ್ತಿಗೆ ಹೊರಗೆ ಪೊಲೀಸ್ ಜೀಪು ಬಂದು ನಿಂತ ಸದ್ದಾಯಿತು.

Read more!

Wednesday, November 11, 2009

ಸಿಹಿ ಸಮಯ
ಕವಿ ಡಾ. ಚೆನ್ನವೀರ ಕಣವಿ ಅವರಿಂದ ‘ವೇಣುಗಾನ’ ಕಾದಂಬರಿಯ ಬಿಡುಗಡೆ. ಉಪಸ್ಥಿತಿ ಫ್ರೊ. ಎಸ್. ಪ್ರಭಾಕರ್, ಕಾರ್ಯದರ್ಶಿಗಳು, ಎಸ್.ಡಿ.ಎಂ. ಟ್ರಸ್ಟ್, ಉಜಿರೆ ಮತ್ತು ಡಾ. ಸಂಪತ್ ಕುಮಾರ್, ಮುಖ್ಯಸ್ಥ, ಕನ್ನಡ ವಿಭಾಗ, ಎಸ್.ಡಿ.ಏಂ.ಸಿ. ಉಜಿರೆ.
ಪುಸ್ತಕ ಬಿಡುಗಡೆಯಲ್ಲಿ ಕವಿ ಚೆನ್ನವೀರ ಕಣವಿ ಅವರೊಂದಿಗೆ
ಕಣವಿ ಅವರ ಜೊತೆಗೆ ಒಂದು ಕ್ಷಣ
Read more!