Tuesday, January 26, 2010

ಭೃಂಗದ ಬೆನ್ನೇರಿ... ಕಲ್ಪನಾವಿಲಾಸ - ‘ಮದಾಂ ಬೊವಾರಿ’


ಪ್ರೆಂಚ್ ಕಾದಂಬರಿಗಾರ ಗುಸ್ತಾವ್ ಫ್ಲಾಬೇರ್ನ ಜನಪ್ರಿಯ ಕಾದಂಬರಿ ‘ಮದಾಂ ಬೊವಾರಿ’. ಮಧ್ಯಮ ವರ್ಗದ ಹೆಣ್ಣೊಬ್ಬಳು ಆಸೆ ಆಕಾಂಕ್ಷೆಗಳನ್ನು ಹೊತ್ತು, ಸಾಮಾನ್ಯ ವ್ಯಕ್ತಿತ್ವದವನನ್ನು ಮದುವೆಯಾಗಿ ತನ್ನ ಕನಸುಗಳಿಗೆ ತೆರೆ ಹಾಕಿಕೊಳ್ಳುತ್ತಾಳೆ. ಆದರೆ ಅವಳ ಬದುಕು ಅಲ್ಲಿಗೆ ಅಂತ್ಯವಾಗುವುದಿಲ್ಲ. ತಾನು ಕಂಡ ಕನಸಿನಂತೆ ಬದುಕು ರೂಪಿಸಬೇಕೆನ್ನುವಾಗ ಪ್ರೇಮಿಯೊಬ್ಬನ ತೆಕ್ಕೆಗೆ ಜಾರುತ್ತಾಳಾದರೂ ಅದೆಲ್ಲಾ ಕ್ಷಣಿಕ ಮತ್ತು ಸ್ವಾರ್ಥವೇ ತುಂಬಿರುವ ಜನರಿಗೆ ಸುಖದ ಮಹಲು. ಅವರ ಸಾಂಗತ್ಯದಲ್ಲಿ ತನ್ನ ಆಸೆಗಳೆಲ್ಲಾ ಕೈಗೂಡದೆನ್ನುವ ನಿರಾಶೆ ಕಾಡುತ್ತಲೇ ಇರುತ್ತದೆ. ಹೀಗೆ ಭೃಂಗದ ಬೆನ್ನೇರಿ ಕಲ್ಪನಾವಿಲಾಸದಲ್ಲಿ ತೇಲುವ ಬೊವಾರಿಗೆ ಕನಸುಗಳೇ ಬದುಕಾಗುತ್ತವೆ. ಕಂಡ ಕನಸುಗಳೆಲ್ಲಾ ಬರೀ ಭ್ರಮೆಯೆನಿಸುತ್ತದೆ. ವಾಸ್ತವದ ಅರಿವಾಗುವ ಹೊತ್ತಿಗೆ ಬದುಕು ಇಷ್ಟೇನಾ? ಅನ್ನುವ ಕಟು ಸತ್ಯ, ಉನ್ಮಾದದಿಂದ ಎತ್ತಿ ನೆಲಕ್ಕೆ ಅಪ್ಪಳಿಸುತ್ತದೆ."

ಈ ಕಾದಂಬರಿಯ ಮುಖ್ಯ ಪಾತ್ರ ಬೊವಾರಿಯಾದರೂ ಕಾದಂಬರಿ ಆರಂಭವಾಗುವುದು ಚಾರ್ಲ್ಸ್ ಬೊವಾರಿ ಎಂಬ ಹುಡುಗನಿಂದ. ಕುಡುಕ ಮತ್ತು ಜವಾಬ್ದಾರಿಗಳಿಲ್ಲದ ತಂದೆಯ ಮಗನಾದರೂ, ಮಗನ ಉನ್ನತಿಗಾಗಿ ಹಪಹಪಿಸುವ ತಾಯಿಯ ಕನಸಿನಂತೆ ಉನ್ನತ ಶಿಕ್ಷಣ ಪಡೆದ ಚಾರ್ಲ್ಸ್ ವೃತ್ತಿಯಲ್ಲಿ ವೈದ್ಯನಾಗುತ್ತಾನೆ.

ಹೀಗೆ ತನ್ನ ವೃತ್ತಿಯಲ್ಲಿ ಹೆಸರುಗಳಿಸಿಕೊಂಡ ಚಾರ್ಲ್ಸಗೆ ಲೊಬರ್ಟೊದ ಹೊಲಮನೆಯ ಮಾಲೀಕ ರುವೊಲ್ಟ್ಗೆ ಚಿಕಿತ್ಸೆ ನೀಡುವ ಸಂದರ್ಭ ಎದುರಾಗುತ್ತದೆ. ಆತನ ಮಗಳು ಎಮ್ಮಳ ಉಪಚಾರಿಕೆ ಪ್ರೇಮಕ್ಕೆ ತಿರುಗಿ, ವೈದ್ಯನ ಹೆಂಡತಿಯಾಗಿ ಕನಸುಗಳ ಮೂಟೆಯನ್ನೇ ಹೊತ್ತುಕೊಂಡು ‘ಮೆದಾಂ ಬೊವಾರಿ’ಯಾಗಿ ಬರುತ್ತಾಳೆ.

ಚಾರ್ಲ್ಸ್ನಿಗೆ ತನ್ನ ವೃತ್ತಿಯಿಂದಾಗಿ ಶ್ರೀಮಂತರ ಪಾರ್ಟಿಗಳಲ್ಲಿ ಭಾಗವಹಿಸುವ ಅವಕಾಶ ದೊರಕುತ್ತದೆ. ಆತ ತಾನು ಅತೀಯಾಗಿ ಪ್ರೀತಿಸುವ ಎಮ್ಮಳ ಜೊತೆಗೆ ಆಹ್ವಾನಗಳಿಗೆ ಹೋಗುತ್ತಾನಾದರೂ, ಅವಳು ಅವನನ್ನು ಮತ್ತು ಅವನ ಅಭಿರುಚಿಗಳನ್ನು ನಿಂದಿಸುತ್ತಾಳೆ. ಆತ ತನ್ನ ವೃತ್ತಿಗೆ ತಕ್ಕುದಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಅನ್ನುವ ನೋವು ಅವಳನ್ನು ಕಾಡುತ್ತಲೇ ಇರುತ್ತದೆ. ಅದೇ ಮುಂದೆ ಗಂಡನ ವೃತ್ತಿಯನ್ನು ವ್ಯವಹಾರದ ಮಟ್ಟಕ್ಕೆ ಇಳಿಸಿ, ರೋಗಿಗಳಿಂದ ಬಾಕಿ ಇರುವ ಹಣವನ್ನು ವಸೂಲಿ ಮಾಡಿಕೊಂಡು, ಐಶರಾಮದ ಜೀವನಕ್ಕೆ ನಾಂದಿ ಹಾಡುತ್ತಾಳೆ. ಆ ಸಮಯದಲ್ಲಿ ಅವಳು ತುಂಬು ಗರ್ಭಿಣಿ.

ಚಾರ್ಲ್ಸ್ ತನ್ನ ವೃತ್ತಿಯನ್ನು ಯಾನ್ಪಿಲ್ ಪಟ್ಟಣಕ್ಕೆ ಸ್ಥಳಾಂತರಿಸುತ್ತಾನೆ. ಅಲ್ಲಿ ಒಮ್ಮೆ ಬೊವಾರಿ ದಂಪತಿಗಳನ್ನು ಪಾರ್ಟಿಗೆ ಆಹ್ವಾನಿಸುತ್ತಾನೆ ಒಮೇ. ಆ ಪಾರ್ಟಿಯಲ್ಲಿ ಎಮ್ಮ ಬೊವಾರಿಗೆ ಲಿಯಾನ್ ದುಪ್ವಿ ಎಂಬ ಯುವಕನ ಪರಿಚಯವಾಗುತ್ತದೆ. ಶ್ರೀಮಂತಿಕೆಯ ಕನಸು ಕಾಣುತ್ತಿದ್ದ ಎಮ್ಮಳಿಗೆ ಆತನ ಸಾಂಗತ್ಯ, ಹಾವಭಾವ, ಮಾತು, ಮೌನಗಳು ತುಂಬಾ ಇಷ್ಟವಾಗುತ್ತವೆ. ಅವಳಿಗೆ ತಾನು ಮದುವೆಯಾದ ಹೆಣ್ಣು ಅನ್ನುವ ಮಾನಸಿಕ ಪರಿಧಿಯಿದ್ದರೂ ಅದನ್ನು ಮೀರಿ ಕನಸುಗಳ ನಾಗಲೋಟ ಸಾಗುತ್ತದೆ. ಎಮ್ಮಳ ಪ್ರೀತಿಗೆ ಲಿಯಾನ್ ಕೂಡ ಬಿದ್ದಿರುತ್ತಾನೆ. ಅವಳ ಬಗೆಗಿರುವ ತನ್ನ ಪ್ರೀತಿಯನ್ನು ತೆರೆದಿಡುವ ಹಂಬಲವಿದ್ದರೂ ತೋರಿಸಿಕೊಳ್ಳಲಾರದೆ ಅಸಹಾಯಕನಾಗುತ್ತಾನೆ.

ಎತನ್ಮಧ್ಯೆ ಎಮ್ಮ ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಆ ಮಗು ಅವಳಿಗೆ ಕುರೂಪಿಯಾಗಿ ಕಾಣುತ್ತದೆ. ತನ್ನ ಸೌಂದರ್ಯದ ಎದುರು ಮಗುವನ್ನು ದೂರ ತಳ್ಳುವ ನಿರ್ಧಯಿ ತಾಯಿಯಾಗುತ್ತಾಳೆ. ತನಗೆ ಇದುವರೆಗೂ ಇದ್ದೇ ಇರುವ ನಿಸ್ಸಾಯಕತೆಗೆ ಅವಳಲ್ಲಿ ಗಂಡು ಮಗುವೇ ಬೇಕೆನ್ನುವ ಹಂಬಲ. ಗಂಡಾದರೆ ದೇಶಾಂತರಗಳ ಮತ್ತು ಎಲ್ಲಾ ಭಾವನೆಗಳ ಶೋಧಕ್ಕೂ ಕೈ ಹಾಕಬಲ್ಲನೆಂಬ ಆಶಯವಿರುತ್ತದೆ. ಆದರೆ ಹೆಣ್ಣು ಹೆಜ್ಜೆ ಹೆಜ್ಜೆಗೂ ಹಿಮ್ಮೆಟ್ಟಬೇಕು. ದೈಹಿಕ ದುರ್ಬಲತೆ, ಕಾನೂನಿಗನುಗುಣವಾಗಿ ಅಧೀನತೆ, ಸಂಪ್ರದಾಯಿಕ ನಿರ್ಬಂಧ ಇವೆಲ್ಲದರ ಬಂಧಿಯಾಗಿಯೇ ಉಳಿಯಬೇಕಾದಿತ್ತೆನ್ನುವ ಭಯವೂ ಇರುತ್ತದೆ.

ಹಾಗೆ ಸುಖದ ಬೆನ್ನು ಹತ್ತಿ ಹೊರಟ ಅವಳಿಗೆ ಲಿಯಾನ್ ಆತ್ಮೀಯನಾಗುತ್ತಾನೆ. ಚಾರ್ಲ್ಸನಲ್ಲಿಲ್ಲದ ಗುಣಗಳನ್ನು, ಬಯಕೆಗಳನ್ನು ಲಿಯಾನ್ ತನ್ನ ಪ್ರೇಮಿ ಎಂಬ ಭ್ರಮೆಯಲ್ಲಿ ಕಂಡುಕೊಳ್ಳುತ್ತಾಳೆ. ಅವನಿಗೆ ಉಡುಗೊರೆಗಳನ್ನು ನೀಡುತ್ತಾಳೆ. ಆದರೂ ತನ್ನ ಉದ್ದುದ್ದ ಭಾವನೆಗಳನ್ನು ಅದುಮಿಟ್ಟು ಸಚ್ಚರಿತ್ರಳೆಂದುಕೊಳ್ಳುವ ಹೆಮ್ಮೆಯೂ ಅವಳೀಗೆ ಬೇಕು. ಹೀಗೆ ತನ್ನ ಗಂಡನನ್ನು ಮಗುವನು ನಿರ್ಲಕ್ಷಿಸಿದ ಅವಳು ಲಿಯಾನ್ನಂತೆಯೇ ಮೂವತ್ತು ವರ್ಷ ವಯಸ್ಸಾದರೂ, ಮದುವೆಯಿಲ್ಲದ ಒಳ್ಳೆಯ ವರಮಾನವಿರುವ, ಗಟ್ಟಿ ಹೃದಯದ, ಚತುರ ಮನುಷ್ಯ ರುದೊಲ್ಪ್ನ ತೆಕ್ಕೆಗೆ ಜಾರುತ್ತಾಳೆ. ಹಸಿದ ರುದೊಲ್ಪ್ಗೆ ಹೆಣ್ಣೆಂದರೆ ಮೋಜು ಮಾತ್ರ. ಅದನ್ನು ತಿಳಿಯದ ಎಮ್ಮ ಅವನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಅವನ ಸುಖದ ರುಚಿಕೊಂಡ ಅವಳು ಅವನಿಲ್ಲದೆ ಬದುಕೇ ಇಲ್ಲವೆನ್ನುವವರೆಗೂ ಬರುತ್ತಾಳೆ. ಆದರೆ ರುದೊಲ್ಫ್ ಹೆಣ್ಣಿಗ. ನಿಂತ ನೀರಾಗಲಾರ. ಎಮ್ಮಳನ್ನು ದೂರವಿಡುತ್ತಾನೆ. ಇದನ್ನು ಅರಿತ ಎಮ್ಮ ತಾನು ಆವನಿಗೆ ಒಲಿದುದ್ದಕ್ಕಾಗಿ ಪಶ್ಚಾತ್ತಾಪವಿದೆಯೇ ಅಥವಾ ಅವನನ್ನು ಇನ್ನಷ್ಟು ಪ್ರೀತಿಸಬೇಕೆ ಎಂಬ ಜಿಜ್ನಾಸೆಗೆ ಬೀಳುತ್ತಾಳೆ. ಪ್ರೇಮ, ಪ್ರಣಯ ಎನ್ನುವ ಸರಳ ಪ್ರಮೇಯದಲ್ಲಿ ಗೊಂದಲವೆಲ್ಲ ಏಕೆ? ಅನ್ನುವ ರೂದೊಲ್ಫ್ ಕೇವಲ ಅವಳನ್ನು ಒಲಿಸಿಕೊಳ್ಳಲು ಪತ್ರ ಬರೆದಿದ್ದ ಮತ್ತು ಅದು ಹೃದಯದಿಂದ ಅಲ್ಲ. ಸತ್ಯದ ಅರಿವಾಗಿ ಅವಳಲ್ಲಿಯ ಕಾವು, ಕನಸುಗಳೆಲ್ಲಾ ಮುರಿದು ಬಿದ್ದು ಹತಾಶಳಾಗುತ್ತಾಳೆ.

ಎಮ್ಮ ಮತ್ತೆ ಭ್ರಂಗದ ಬೆನ್ನೇರಿ ಸಾಗುತ್ತಾಳೆ. ಲಿಯಾನ್ ಅವಳಿಗಾಗಿ ಕಾದಿರುತ್ತಾನೆ. ತನ್ನ ಬಾಲ್ಯದ ನೆನಪುಗಳನ್ನು ಕೆದಕಿಕೊಂಡು ತಾನು ಕಟ್ಟಿದ ಗೋಪುರವನ್ನು ಇನ್ನಷ್ಟು ಜೀವಂತವಾಗಿಸುತ್ತಾಳೆ. ‘ನಿನ್ನ ಎಲ್ಲಾ ಪ್ರೇಮಿಗಳನ್ನು ತೊರೆದು ನನ್ನಲಿಯೇ ಅನುರಕ್ತನಾಗು’ ಎಂದು ಲಿಯಾನ್ನನ್ನು ಕಾಡುತ್ತಾಳೆ. ಅವಳಿಂದ ಸುಖ ಉಂಡ ಲಿಯಾನ್ ಕೊನೆಗೂ ನಮ್ಮಿಬ್ಬರ ಸಂಬಂಧ ಬಿರುಕು ಬಿಡುವಂತೆ ಏನಾದರೊಂದು ಘಟಿಸಬಾರೆದೆ? ಎಂದು ಹಲುಬುತ್ತಾನೆ.

ಎಮ್ಮ ಪ್ರತಿ ಗುರುವಾರವೂ ಲಿಯಾನ್ಗಾಗಿ ಹೋಟೇಲ್ನಲ್ಲಿ ಉಳಿದು ಅವನಿಂದ ಸುಖ ಅನುಭವಿಸುತ್ತಾಳಾದರೂ ತನ್ನ ಖರ್ಚಿನಿಂದಲೇ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಸಾಲ ಪತ್ರಗಳ ಮೊರೆ ಹೋದವಳು ಸಾಲದ ಹೊರೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಸಾಲದ ಮೇಲೆ ಸಾಲ ಏರಿ ಜೀವನ ಪರ್ಯಂತ ಅದು ಮುಗಿಯುವುದಿಲ್ಲ ಅನ್ನುವ ಹೊತ್ತಿಗೆ ಮನೆಯ ಸಾಮಾನುಗಳೆಲ್ಲಾ ಹರಾಜಗುವ ಸ್ಥಿತಿ ತಲುಪುತ್ತದೆ. ತನ್ನ ಇಬ್ಬರೂ ಪ್ರೇಮಿಗಳ ನಡುವೆ ಹಾದರ ನಡೆಸಿದ ಅವಳು ಹಣಕ್ಕಾಗಿವರ ಮುಂದೆ ಕೈ ಚಾಚುತ್ತಾಳೆ.

‘ಪ್ರೇಮದ ಮೇಲೆ ಬೀಸುವ ಶೀತ ಮಾರುತಗಳಲ್ಲಿ ಅತಿ ಶೀತಲ ಕೊರತೆ ಬರುವುದೆಂದರೆ ಹಣ ಬೇಡಿದಾಗ. ಅದು ಬೇರನ್ನು ಕಿತ್ತೆಸೆಯುತ್ತದೆ’ ಅನ್ನುವ ಸತ್ಯ ಗೋಚರಿಸುತ್ತದೆ.

ಮರೀಚಿಕೆಯ ಬೆನ್ನು ಹಿಡಿದವಳು ಕೊನೆಗೆ ಬದುಕು ಇಷ್ಟೆ ಅನ್ನುವ ಅತೃಪ್ತಿಯಲ್ಲಿ ವಿಷ ಸೇವಿಸಿ ಬದುಕಿಗೆ ವಿದಾಯ ಹೇಳುತ್ತಾಳೆ. ಆ ಸಮಯದಲ್ಲಿ ಚಾರ್ಲ್ಸ್ನೇ ಎಲ್ಲವೂ ಆಗಿ, ತನ್ನ ಹೆತ್ತ ಕುಡಿಯನ್ನು ನೋಡಲು ಇಚ್ಛೆ ಪಡುತ್ತಾಳೆ. ಅವಳು ಉಳಿಸಿದ ಸಾಲದ ಶೂಲದಲ್ಲಿ ಸಿಲುಕಿ ಅವನೂ ಸಾಯುತ್ತಾನೆ. ಮುಂದೆ ಮಗಳು ಬರ್ಥ ಅಜ್ಜಿಯ ಊರಿಗೆ ಹೋದರೂ, ಒಂದು ಜವಳಿ ಕಾರ್ಖಾನೆಯಲ್ಲಿ ಕೂಲಿ ಹೆಣ್ಣಾಗಿ ಕೆಲಸ ಮಾಡುತ್ತಾಳೆ.

ಕಾದಂಬರಿಯ ಪೂರ್ವಾರ್ಧ ನಿಧಾನಗತಿಯಲ್ಲಿ ಸಾಗಿದರೂ ಉತ್ತರಾರ್ಧ ಲವಲವಿಕೆಯಂದ ಮತ್ತು ಕಾವ್ಯಾತ್ಮಕವಾಗಿ, ಸುಂದರ ಪದಗಳ ಜೋಡಣೆಯಿಂದ ಹೆಚ್ಚು ಕುತೂಹಲಕರವಾದ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ.

‘ಮದಾಂ ಬೊವಾರಿ’ ಒಮ್ಮೆ ಓದಲೇ ಬೇಕಾದ ಕೃತಿ. ಇದನ್ನು ಅನುವಾದಿಸಿದ ವಿ. ನಾಗರಾಜ ರಾವ್ ಅವರ ಪ್ರಯತ್ನವನ್ನು ಹೊಗಳಲೇಬೇಕು. ಈ ಪುಸ್ತಕವನ್ನು ಪ್ರಕಟಿಸುವವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು - 2

Read more!

Saturday, January 23, 2010

ಸಮಾಜಕ್ಕೆ ಹಿಡಿದ ‘ಕನ್ನಡಿ’


ಈ ಹಿಂದೆ ‘ಯಾನ’ ಕಥಾಸಂಕಲನದ ಮೂಲಕ ಹೊಸ ಕಥೆಗಳನ್ನು ಸೃಷ್ಟಿಸಿದ ಸೃಜನಶೀಲ ಕಥೆಗಾರ ಪ್ರೇಮಶೇಖರರ ಮತ್ತೊಂದು ಕಥಾಸಂಕಲನ ‘ಕನ್ನಡಿ’. ಪತ್ತೆದಾರಿ, ಫ್ಯಾಂಟಸಿಯ ಮೂಲಕ ಕಥೆಯನ್ನು ನಿರೂಪಿಸುವ ಅವರು ಕನ್ನಡಿಯಲ್ಲಿ ತೀರ ಹೊಸತೆನ್ನಬಹುದಾದ ಮತ್ತು ಸಮಾಜದ ಎಲ್ಲಾ ಸ್ತರಗಳ ಕಗ್ಗಂಟು, ವ್ಯಭಿಚಾರ, ಮೋಸ ಮುಂತಾದವುಗಳಿಗೆ ‘ಕನ್ನಡಿ’ ಹಿಡಿದಿರುವುದು ಅವರ ಸಾಹಿತ್ಯ ಕೃಷಿಯ ಒಳ್ಳೆಯ ಪ್ರಯತ್ನವಾಗಿದೆ.

‘ಕನ್ನಡಿ’ ಕಥಾಸಂಕಲನದಲ್ಲಿ ಹತ್ತು ಕಥೆಗಳಿದ್ದು ಒಂದೊಂದು ಕಥೆಯು ಸಮಾಜದ ಆಗುಹೋಗುಗಳನ್ನು ಕೂಲಂಕಷವಾಗಿ ಬಿಚ್ಚಿಡುತ್ತ ಹೋಗುತ್ತವೆ."


‘ಕನ್ನಡಿ’ ಕಥೆಯಲ್ಲಿ ಅನಿವಾರ್ಯ ಕಾರಣಗಳಿಗೆ ಕಸಾಯಿಖಾನೆಯನ್ನು ನಡೆಸಬೇಕಾದ ಪರಿಸ್ಥಿತಿ ಎದುರಾಗಿ, ಅಲ್ಲಿ ಕುರಿಗಳನ್ನು ಕಡಿಯುವ ವಿಧಾನದ ಬಗ್ಗೆ ಆಕ್ಷೇಪವೆತ್ತುವ ನಾಯಕ ಹೃದಯತಹ ಕಟುಕನಲ್ಲ. ಅವುಗಳನ್ನು ಮಾಂಸಕ್ಕಾಗಿ ಸಾಯಿಸುವ ರೀತಿಯಲ್ಲಿ ಅವುಗಳು ಪಡುವ ಯಾತನೆಯನ್ನು ಗಮನಿಸಿ, ಒಂದೆ ಏಟಿಗೆ ಸಾಯಿಸಲು ಸೂಚಿಸುತ್ತಾನೆ. ಆದರೆ ಒಂದೇ ಏಟಿಗೆ ಅವುಗಳನ್ನು ಸಾಯಿಸುವುದರಿಂದ ಅನುಭವಿಸುವ ನೋವು ಹೆಚ್ಚು ಅನ್ನುವುದನ್ನು ಲೇಖಕರು ವೈಜ್ಞಾನಿಕ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುವುದು ಮನಸ್ಸಿಗೆ ಸಮಾಧಾನ ನೀಡುತ್ತದೆ. ಕಥೆ ಓದಿ ಮುಗಿಸಿದರೂ ಕಸಾಯಿಖಾನೆಯ ರೌದ್ರತೆ ಓದುಗನನ್ನು ಕಾಡುತ್ತಲೇ ಇರುತ್ತದೆ.

ಅಲೆಮಾರಿಗಳ ಬದುಕು ಮತ್ತು ಇಂದಿನ ಸಾಮಾಜಿಕ ಸಮಸ್ಯೆಯಾದ ‘ಭಯೋತ್ಪಾದನೆಯ ಭೀತಿಯನ್ನು ಬಿಂಬಿಸುವ ಕಥೆ ‘ಗಾಯ’. ಮನೆಯ ಎದುರು ಬಂದ ಅಲೆಮಾರಿಗಳ ದಿಂಡು ಖಾಲಿ ಜಾಗದಲ್ಲಿ ಪಿರಮಿಡ್ಡಿನಂತೆ ಮನೆಯನ್ನು ನಿರ್ಮಿಸಿ ಊಹಾ ಪೋಹಗಳಿಗೆ ಎಡೆಯಾಗುವುದು ಚೆನ್ನಾಗಿ ನಿರೂಪಿತವಾಗಿದೆ. ಅಪರಿಚಿತರ ಬಗ್ಗೆ ಅನುಮಾನ ಪಡಬೇಕಾದ ಇಂದಿನ ಪರಿಸ್ಥಿತಿಯಲ್ಲಿ ನೆರೆಕರೆಯವರೆಲ್ಲಾ ಒಂದಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕಥೆಯ ಉತ್ತರಾರ್ಧ ಪ್ಯಾಂಟಸಿಯಲ್ಲಿ ಕೊನೆಯಾಗುವುದು ತುಸು ಗೊಂದಲವೆನಿಸಿದರೂ ಒಳ್ಳೆಯ ಕಥೆ ‘ಗಾಯ’

‘ಸೆಕ್ಯೂಲಿರಿಸಂ’ ಅನ್ನು ವಿಢಂಬನಾತ್ಮಕವಾಗಿ ನಿರೂಪಿಸುವ ಹಾಗೂ ಸರಕಾರ ಮತ್ತು ಧಾರ್ಮಿಕ ಬಂಡುಕೋರರ ನಡುವಿನ ಕದನವಿರಾಮದ ನಂತರದ ಏಳಿಗೆಯ ಕಥೆ ‘ಮುಖಾಮುಖಿ’. ರಾಜಕೀಯದ ಅಧಿಕಾರವಿರುವಾಗ ಜನಪ್ರತಿನಿಧಿಗಳು ಪ್ರಜೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಹೇಗೆ ನಿಯಂತ್ರಿಸುತ್ತಾರೆ ಎನ್ನುವುದನ್ನು ಮನೋಜ್ಞವಾಗಿ ತೆರೆದಿಡುವ ಕಥೆಯಿದು. ‘ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು’ ಕಥೆಯಲ್ಲಿ ಅಭಿವೃದ್ಧಿಯಿಂದ ಕೆಡುಕಾಗಿ ಮತ್ತೆ ಅಭಿವೃದ್ಧಿಯನ್ನೇ ಬಯಸದ ಜನ, ವಿಚಾರವಾದಿ ಸಂಘಟನೆಯ ಎದುರು ನಿಲ್ಲುತ್ತಾರೆ. ಈ ಕಥೆ ಅಭಿವೃದ್ಧಿಯ ಹೆಸರಲ್ಲಿ ನಡೆಯುವ ಆಧ್ವಾನಗಳನ್ನು ಚಿತ್ರಿಸುತ್ತದೆ.
ಸಮಾಜದಲ್ಲಿ ಏನನ್ನು ಬಯಸದ ಮತ್ತು ತನ್ನಷ್ಟಕ್ಕೆ ತಾನಿರುವ ವ್ಯಕ್ತಿ ನಾಗಲಿಂಗಂನ ಹೊಸ ಸಂಬಂಧದ ಕಥೆಯಾಗಿ ಮೂಡಿರುವ ಕಥೆ ‘ಅರ್ಥ’. ಪ್ರೊ. ಸಂಗೊಟೈಯವರ ಮಾತಿನಂತೆ ಅವನನ್ನು ವಿಚಾರಿಸುವ ಕಥಾನಾಯಕನಿಗೆ ಮಾತಾಡಲು ಅವಕಾಶ ನೀಡದ ನಾಗಲಿಂಗಂ ತನ್ನ ಹೆಂಡತಿಯ ಸಾವಿಗೆ ಪರೋಕ್ಷವಾಗಿ ಕಾರಣನಾಗುತ್ತಾನೆ. ಮುಂದೆ ಅವನು ಅರೆಸ್ಟ್ ಆಗಿ ಬಿಡುಗಡೆಯಾದರೂ ತನ್ನ ಹೆಂಡತಿಯನ್ನು ಕೊಲೆ ಮಾಡದೆ ಅವಳಾಗಿಯೇ ದೂರವಾಗುವಂತೆ ಮಾಡಿದ ಅವನ ಚಾಣಾಕ್ಷ ಬುದ್ಧಿಗೆ ಬೆರಗಾಗುತ್ತಾನೆ ನಿರೂಪಕ. ಮಗಳ ಸಾವಿನ ಬಗ್ಗೆ ದೂರು ಕೊಟ್ಟ ಅತ್ತೆಯೇ ದೂರನ್ನು ವಾಪಾಸು ತೆಗೆದುಕೊಂಡು ಕೇಸ್ ಅಲ್ಲಿಗೆ ಮುಚ್ಚಿ ಹೋಗುತ್ತದೆ.

ಬಾಲ್ಯ ಸಖ್ಯದ ಇತಿಮಿತಿಗಳಿಗೊಂದು ಪರಿಶುದ್ಧ ಮನಸುಗಳೆರಡರ ವ್ಯಾಪ್ತಿಯೊಳಗೆ ಸುಂದರವಾಗಿ ಕಟ್ಟಿದ ಕಥೆ ‘ಈ ಕಥೆಗಳಿಗೇಕೆ ಆದಿ ಅಂತ್ಯಗಳಿಲ್ಲ?’ ಏನೋ ನಿರೀಕ್ಷಿಸುವ ಹೊತ್ತಿಗೆ ಏನೂ ನಡೆಯದೆ; ಏನೊ ಆಗದೆನ್ನುವಾಗ ಏನೋ ಘಟಿಸಿ, ನಾವೇ ಆ ಪಾತ್ರಗಳಾಗಿ ಹೋಗುವಷ್ಟು ಮನಸ್ಸನ್ನು ಆವರಿಸುವ ಕಥೆಯಿದು. ಇದೇ ಸಂಕಲನದ ಪ್ಲಸ್ ಪಾಯಿಂಟ್ ಆಗಿರುವ ಈ ಕಥೆ ನಮ್ಮದಲ್ಲದ ಹಾದಿಯಲ್ಲಿ ಬಹುದೂರ ನೆನಪಾಗಿ ಸಾಗುವ ಕಥೆ.

ಈ ಸಂಕಲನದ ಇನ್ನೊಂದು ಉತ್ತಮ ಕಥೆ ‘ಕ್ರೌರ್ಯ’ ಅಸಹಾಯಕ ಮಹಿಳೆಯೊಬ್ಬಳನ್ನು ಅಮಾನುಷವಾಗಿ ಬಳಸಿಕೊಳ್ಳುವ ನೀತಿ ಗೆಟ್ಟ ಯುವಕರು, ಸಮಾಜ ಎತ್ತ ಸಾಗಿದೆ ಅನ್ನುವುದನ್ನು ತಿಳಿಸಿದರೆ, ಇಂತಹ ಅವಮಾನವೀಯ ಸ್ಥಿತಿಯಲ್ಲಿ ದೂರ ನಿಂತು ಪೌರುಷ ತೋರುವ ಇನ್ನೊಬ್ಬ ಯುವಕ, ತನ್ನ ಹೊಟ್ಟೆ ತುಂಬಿಸುವ ವಾಹನವನ್ನೇ ಬಿಟ್ಟು ಓಡುವ ಡ್ರೈವರ್ ಮತ್ತು ಇಡೀ ಪರಿಸ್ಥಿತಿಯನ್ನು ಪ್ರತಿಭಟಿಸುವ ವಯಸ್ಕನ ಪಾತ್ರ ಚಿತ್ರಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಆ ಕೃತ್ಯದ ಬಗ್ಗೆ ಡಿಟೈಲ್ಡ್ ರೀಪೋರ್ಟ್ ತಯಾರಿಸುವುದಕ್ಕೆ ಮಹಿಳೆಯ ಅಸಹಾಯಕ ಪರಿಸ್ಥಿತಿಯ ಚಿತ್ರಗಳನ್ನು ತೆಗೆಯಲು ಮುಂದಾಗುತ್ತಾನೆ ಯುವಕ. ಅಂತಹ ಪರಿಸ್ಥಿತಿಯಲ್ಲಿ ವೃದ್ಧನ ಮಾತುಗಳು ಮತ್ತು ಸಾಂತ್ವನ ಆ ಮಹಿಳೆಗೆ ಮಾತ್ರವಲ್ಲ ಓದುಗನಿಗೂ ‘ಕೊನೆಗೂ ಸಹಾಯಕ್ಕೆ ಒಬ್ಬನಿದ್ದಾನಲ್ಲಾ?’ ಅನ್ನುವ ಸಮಾಧಾನವನ್ನು ನೀಡುತ್ತದೆ.

ಫ್ಯಾಂಟಿಸಿಯ ಲೋಕಕ್ಕೆ ಎಳೆದೊಯ್ಯುವ ‘ಉಗಮ’ ಮತ್ತು ‘ಹುತ್ತ್ತ’ ಕಥೆಯಲ್ಲಿ ಬರುವ ಪ್ರೊಪೆಸರ್ ಮತ್ತು ಬಾಲ್ಕನಿಯ ಒಂಟಿತನದ ಭಾವೊದ್ವೇಗವನ್ನು ಬಹಳ ಹಾಸ್ಯಮಯವಾಗಿ ನಿರೂಪಿಸುವ ಕಥೆ. ಮುಖದಲ್ಲೊಂದಿಷ್ಟು ಮಂದಹಾಸವನ್ನು ಮೂಡಿಸಬಲ್ಲ ಕಥೆ ಇದು.

ಹಾಸ್ಯದಿಂದ ಆರಂಭವಾಗಿ ಬದುಕಿನ ಕಹಿ ಸತ್ಯವನ್ನು ಬಿಚ್ಚಿಡುವ ಕಥೆ ‘ಮೂಡಲ ಸೀಮೆಯ ಮುಸ್ಸಂಜೆ ಸೊಲ್ಲು’ ತನ್ನ ಸ್ವಂತ ಅಕ್ಕನೆಂದು ಭ್ರಮಿಸಿದವನು ಆಕೆ ತನ್ನ ತಾಯಿಯೆನ್ನುವ ನಿಗೂಢತೆಯನ್ನು ಬಿಚ್ಚಿಡುವಾಗಿನ ಆನಂದ ಕೇವಲ ಹುಡುಗನದಲ್ಲ, ಓದುಗರದ್ದೂ.

ಪ್ರೇಮಶೇಖರ ಅವರ ‘ಕನ್ನಡಿ’ ಓದುಗರನ್ನು ಪ್ರತಿಫಲಿಸುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕವನ್ನು ಹೊರತಂದಿರುವವರು ‘ವಿಸ್ಮಯ ಪ್ರಕಾಶನ’ ‘ಮೌನ’ 366, ನವಿಲು ರಸ್ತೆ, ಎ-ಬಿ ಬ್ಲಾಕ್, ಕುವೆಂಪುನಗರ, ಮೈಸೂರು - 570 023 ಇವರು.

Read more!

Wednesday, January 13, 2010

ಪರಿಸರ ಸಂರಕ್ಷಣೆಯ ಮಾರ್ದನಿ - ಪರಿಸರದ ಮರುದನಿಗಳು


ಪರಿಸರದ ಬಗ್ಗೆ ಅದೆಷ್ಟೊ ಕಥೆ ಕಾದಂಬರಿ ಲೇಖನ ಮಾಲೆಗಳನ್ನು ಓದುತ್ತಿದ್ದೆನಾದರೂ ಸಂಪೂರ್ಣವಾಗಿ ನಮ್ಮ ಪರಿಸರ ಜಾಗ್ರತಿಯ ಬಗ್ಗೆ, ಬದಲಾಗುತ್ತಿರುವ ಪರಿಸರದ ಬಗ್ಗೆ ಮಾರ್ದನಿಸುತ್ತಿರುವ ಎಚ್ಚರಿಕೆಯ ಫಂಟಾ ಘೋಷಗಳನ್ನು ತಿಳಿದುಕೊಳ್ಳುತ್ತಾ, ನಮ್ಮ ಒಳಗೂ ಒಬ್ಬ ಪರಿಸರ ಪ್ರೇಮಿ ಹುಟ್ಟಿಕೊಳ್ಳುತ್ತಾ, ಅದರ ಸಂರಕ್ಷಣೆಯ ಬಗ್ಗೆ ಕಿಂಚಿತ್ತು ಅಲೋಚನೆಯನ್ನು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು.

ಈ ದಾರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆಗಳು ನನ್ನನ್ನು ಬಹಳವಾಗಿ ಆಕರ್ಷಿಸಿದ್ದವು, ಮಾತ್ರವಲ್ಲ ಅವರ ಕಥೆಗಳಲ್ಲಿರುವ ನೈಜ್ಯ ಚಿತ್ರಣ, ಪರಿಸರದ ಕಾಳಜಿ, ಪರಿಸರದಲ್ಲಿ ಒಂದಾಗಿ ಹೋಗುವ ಪಾತ್ರ ಚಿತ್ರಣಗಳು ಕಣ್ಣ ಮುಂದೆ ನೈಜತೆಯೆಂಬಂತೆ ದೃಗೋಚರಿಸುತ್ತದೆ. ಪಾತ್ರಗಳ ನೋವು, ಹತಾಶೆಗಳು ಕೊನೆಗೆ ನಮ್ಮಲ್ಲೇ ಉಳಿದು ಬದುಕಿನ ಇಡೀ ಹತಾಶೆಯನ್ನು ಬಿಚ್ಚಿಟ್ಟು ತಲೆಯೊಳಗೆ ಕೊರೆಯುತ್ತಲೇ ಇರುತ್ತವೆ."

ಹೇಗೆ ಪರಿಸರವನ್ನು, ಪರಿಸರದ ಸುತ್ತಾ ನಡೆಯುವ ಮಾನವ ನಿರ್ಮಿತ ವ್ಯವಸ್ಥೆಯೊಳಗೆ ಅದು ನಾಶವಾಗುತ್ತ ಒಂದೊಮ್ಮೆ ‘ಇಲ್ಲ’ವಾಗುವ ಮತ್ತು ‘ಇದ್ದವೆಂಬ’ ಅಂತೆ ಕಂತೆಗಳ ನಡುವೆ ಸುದ್ದಿಯಾಗಬಹುದಾದ ಈ ಪರಿಸರದ ಕಥೆಗಳನ್ನು ಹುಡುಕುತ್ತಿರುವಾಗ ಲೇಖಕ ‘ಶಶಿಧರ ವಿಶ್ವಾಮಿತ್ರ’ ಅವರ ‘ಪರಿಸರದ ಮರುದನಿಗಳು’ ನನ್ನ ಕಣ್ಣಿಗೆ ಬಿತ್ತು. ಕೇವಲ ಕಥೆಯಾಗಿ ಉಳಿಯದೆ ಪರಿಸರ ಜಾಗೃತಿಯ ಅಭಿಯಾನ ರೂಪಿಸುವಲ್ಲಿ ಒಂದು ಪ್ರಯತ್ನವಾಗಬಲ್ಲ ಈ ಸಂಕಲನದಲ್ಲಿ ಸುಮಾರು 8 ಕಥೆಗಳು ಹಾಗೂ 2 ನಿಳ್ಗತೆಗಳು ಇವೆ.

ಪ್ರಾಣಿ, ಪಕ್ಷಿ ಸಂಕುಲದ ಅವನತಿ ಮಾನವ ನಿರ್ಮಿತ ಸಮಾಜದಲ್ಲಿ ಹೇಗೆ ಸಂಭವಿಸುತ್ತದೆಯೆನ್ನುವುದನ್ನು ಇಲ್ಲಿಯ ಕಥೆಗಳು ಸ್ಪಷ್ಟವಾಗಿ ತಿಳಿಸುತ್ತವೆ. ಗುಬ್ಬಚ್ಚಿಯಂತಹ ಹಕ್ಕಿಗಳು ಮೊಬೈಲ್ ಹೊರಸೂಸುವ ವಿಕಿರಣಗಳಿಗೆ ಸಿಲುಕಿ ಮತ್ತು ಮಾದ್ಯಮಗಳ ಭರಾಟೆಯಲ್ಲಿ ಅಪರೂಪವಾಗಿರುವಂತಹ ಸನ್ನಿವೇಶಗಳಂತೆ ಇಲ್ಲಿಯ ಕಥೆಗಳಲ್ಲಿ ನರಿ, ಹಾವು, ಗೀಜಗ, ಕಾಗೆ, ಚಿರತೆಗಳ ಸಂತತಿ ಹೇಗೆ ಅಳಿಯುತ್ತದೆ ಎನ್ನುವುದನ್ನು ಮನ ಮುಟ್ಟುವ ರೀತಿಯಲ್ಲಿ ನಿರೂಪಿಸಲಾಗಿದೆ.

ಮೇಲ್ನೋಟಕ್ಕೆ ಇಲ್ಲಿಯ ಕಥೆಗಳು ಮಕ್ಕಳ ಕಥೆಗಳಂತೆ ಕಂಡರೂ ಅದರಲ್ಲಿರುವ ಕಾಳಜಿ ಮಹತ್ವವಾದವು. ಪ್ರತಿಯೊಂದು ಪ್ರಾಣಿ ಪಕ್ಷಿಯ ಸ್ವಾತಂತ್ರ್ಯಕ್ಕೆ ಮನುಷ್ಯ ಹೇಗೆ ಅಡ್ಡಗಾಲಾಗುತ್ತಾನೆ ಮತ್ತು ಅವುಗಳನ್ನು ಯಾವ ರೀತಿಯಲ್ಲಿ ತನ್ನ ಸ್ವಾರ್ಥಕ್ಕಾಗಿ ನಡೆಸಿಕೊಳ್ಳುತ್ತಾನೆ ಎನ್ನುವುದನ್ನು ಅಧ್ಯಯನ ಮಾಡಿ ಬರೆದಂತೆ ಬಹಳ ಸುಂದರವಾಗಿ ಲೇಖಕರು ಬರೆದಿದ್ದಾರೆ.

ಕೇವಲ ಪ್ರಾಣಿ, ಪಕ್ಷಿ, ಜೀವ ಜಂತುಗಳ ಬಗ್ಗೆ ಮಾತ್ರವಲ್ಲ ಪರಿಸರ ಪ್ರಜ್ಞೆಯಲ್ಲಿ ಮೂಡುವ ಕಾಡು, ನದಿ, ಹಳ್ಳ, ತೊರೆ,ಜಲಪಾತ, ಸಸ್ಯರಾಶಿ, ಸಕಲ ಜೀವ ಸಂಕುಲಗಳ ಬಗ್ಗೆ ಪ್ರೀತಿ ಹುಟ್ಟಿಸುವ ವಿವರಗಳು, ನಾವೇ ಆ ಪರಿಸರದಲ್ಲಿದ್ದೇವೆ ಅನ್ನುವ ಭ್ರಮೆಯನ್ನು ಹುಟ್ಟಿಸುತ್ತದೆ.

‘ಕಡೆಯ ಚಿರತೆ’ ನೀಳ್ಗತೆಯಲ್ಲಿ ಒಂದು ಪಾತ್ರ. ಬೇಟೆಗಾರ ಮಾತ್ರ ಅಲ್ಲ ಬೇಟೆಗಾರರ ಗುರುವೂ ಆಗಿದ್ದೂ ಈಗ ಪರಿಸರದ ಸತ್ಯತೆ ತಿಳಿದ ಆತನ ಮಾತುಗಳು ನಮ್ಮಲ್ಲೂ ಒಂದಷ್ಟು ಪರಿಸರ ಪ್ರಜ್ಞೆಯನ್ನು ಹುಟ್ಟಿಸುತ್ತದೆ.

“ಕಾಡು ಎಂದರೇನು? ಮರಗಿಡಬಳ್ಳಿಗಳೇ? ಹುಲಿ, ಜಿಂಕೆ, ಸಿಂಹ ಇತ್ಯಾದಿ ಮೃಗಗಳೇ? ಮಲೆಗಳೇ? ಇಷ್ಟು ಮಾತ್ರ ಅಲ್ಲ ಎಂದು ನನ್ನ ಅನುಭವ ಸಾರುತ್ತಿದೆ. ಕಾಡೆಂದರೆ ವಾಸ್ತವವಾಗಿ ಮೈ ಬೀಸಿ ಹರಡಿರುವ ಬೆಟ್ಟ, ಗುಡ್ಡ, ಕಣಿವೆ, ಮೈದಾನಗಳಲ್ಲಿ, ತನ್ನಂತೆ ಮೈದಳೆದಿರುವ ಶಾಂತಿಯಲ್ಲಿ, ಮರ, ಗಿಡ, ಪ್ರಾಣಿಗಳು ಸ್ವೇಚ್ಛೆಯಿಂದ ಬಾಳುವ ಬಾಳು ಎನಿಸುತ್ತದೆ. ಹರ್ಷವನ್ನು ಬೀರುವ ಹರಿದ್ವನಗಳಲ್ಲಿ ನಡುರಾತ್ರಿ ಮಿಟುಕುವ ನಕ್ಷತ್ರಗಳ ಮಂದ ಬೆಳಕಿನಲ್ಲಿ ಆಕಾಶ ಹೊದ್ದು ಮಲಗಿರುವ ಕಾಡಿನ ಒಕ್ಕಡೆ ನೀವು ಮಿಸುಕದೆ ಹಾಯ ಕೂತರೆ, ಈಗ ನಾನು ಹೇಳುತ್ತಿರುವ ಶಾಂತಿಯ ಅರ್ಥವೇನು? ಬಾಳಿನ ಸಂಭ್ರಮಕ್ಕೆ ಶಾಂತಿ ಏಕೆ ಬೇಕು? ಎಂದು ಗೊತ್ತಾಗುತ್ತದೆ”

ಈ ಮೇಲಿನ ವಾಕ್ಯಗಳೇ ನಮ್ಮನ್ನು ಪರಿಸರ ಸಂಬಂಧಿ ಪ್ರದೇಶದೊಳಗೆ ಕರೆದೊಯ್ಯುವ ಅತೀತಾತೀತ ಶಕ್ತಿಯೆನಿಸುವುದರಿಂದಲೇ ಪರಿಸರದ ಮೇಲೆ ವ್ಯಾಮೋಹ ಹುಟ್ಟಿಸುತ್ತದೆ.

ಇಲ್ಲಿಯ ಬಹುತೇಕ ಕತೆಗಳು ದುರಂತದಲ್ಲಿಯೇ ಮುಗಿಯುವುದು, ತಿಳಿದೇ ತಿಳಿಯದೆಯೊ ಮನುಷ್ಯನ ಪ್ರಗತಿಯೆಂಬ ಸ್ವಾರ್ಥದಲ್ಲಿಯೇ ನಲುಗಿ ಹೋಗುವ ಜೀವಿಗಳ ದುರಂತಮಯ ಬದುಕು ಸ್ಪಷ್ಟವಾಗಿ ಚಿತ್ರಿತವಾಗಿದೆ. ತಾನು ತನ್ನ ಪರಿಸರವೆಂಬ ಅಭಿಮಾನ, ತನ್ನಂತೆಯೇ ಇತರ ಜೀವ ಜಂತುಗಳು ಬದುಕಲು ಅವಕಾಶ ಕಲ್ಪಿಸಬೇಕೆನ್ನುವ ಪ್ರಜ್ನೆ ಇರುವುದಾದರೆ ಅದೆಷ್ಟೊ ವ್ಯೆವಿದ್ಯಮಯ ಜೀವ ಜಂತನ್ನು ವಿನಾಶದಂಚಿನಿಂದ ತಪ್ಪಿಸಬಹುದು.

ಈ ಪರಿಸರ ಕಥಾ ಸಂಪದದ ನರಿಗಳು, ಗೌಜುಗಗಳ ಅಂಕ, ಗೃಧ್ರಸಂಸಾರ, ದಿಕ್ಕೆಟ್ಟ ಗಜಗಣ, ರೆಕ್ಕೆಮುರುಕ, ಅರಗಿಣಿಗಳ ಪ್ರಸಂಗ, ಮುಸವಗಳ ಜೋಡಿ, ಕಾಡುಬೆಕ್ಕಿನ ಮರಿ ಮತ್ತು ಒಂದಾನೆಯಿತ್ತು ಕಥೆಗಳೆಲ್ಲಾ ಮುಂದಿನ ಪೀಳಿಗೆಗೆ ಒಂದು ಅದ್ಭುತ ಕಥನಕವಾದರೂ ಹೆಚ್ಚಲ್ಲ. ಕಲುಷಿತವಾಗುತ್ತಿರುವ ಪರಿಸರ, ನಶಿಸುತ್ತಿರುವ ಜೀವ ಸಂಕುಲಗಳು ಇಂತಹ ಕಥನಕಗಳಲ್ಲಿಯೇ ಸಿಗುವ ದಿನ ದೂರವಿರಲಾರದು!

ಕಡೆಯ ಚಿರತೆ, ನೀಳ್ಗತೆಯ ಚಿರತೆಗಳ ಅವಸಾನ ಇವತ್ತು ಮಾಯವಾಗಿ ಕೇವಲ ಪ್ರಾಣಿ ಸಂಗ್ರಹಾಲಯದಲ್ಲಿ ನೋಡುವ ಮತ್ತು ಅಳಿವಿನಂಚಿನಲ್ಲಿರುವ ಹುಲಿ ಸಂತತಿಯ ಹಾಗೆ ಚಿರತೆಯ ಸಂತತಿಯೂ ಅಳಿಯುವಲ್ಲಿ ಸಂಶಯವಿಲ್ಲವೆನ್ನುವುದನ್ನು ಬಿಂಬಿಸುತ್ತದೆ. ಈ ಸಂಕಲನದ ಇನ್ನೊಂದು ನೀಳ್ಗತೆ ‘ಕಾಡೊಂದಿತ್ತಲ್ಲ’ ಕಣ್ಣ ಮುಂದೆ ಪ್ರಕೃತಿಯ ಸಮೃದ್ಧ ಚಿತ್ರವನ್ನು, ಕಾಡಿನ ವೈಭವನ್ನೂ ತೆರೆದಿಡುತ್ತದೆ.

ಇಂತಹ ಪರಿಸರದ ಮರುದನಿಗಳು ಸ್ವಲ್ಪ ಮಟ್ಟಿಗಾದರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೆಚ್ಚಿಸಿದರೆ ಅದೇ ಕಾಡು, ಅದೇ ಜೀವ ಸಂಕುಲಗಳು ಉಳಿದಾವೇನೊ?

ಈ ಪುಸ್ತಕವನ್ನು ಭಾಗ್ಯಲಕ್ಷ್ಮಿ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿದ್ದಾರೆ. ಇದರ ಬೆಲೆ ಕೇವಲ 150 ರೂಪಾಯಿಗಳು.

Read more!