Monday, November 24, 2008

ನಾಡ ಕೋವಿ


ಸೀರೆಯ ನೆರಿಗೆಯನ್ನು ಎತ್ತಿ ಹಿಡಿದು ಎರಡೆರಡು ಮೆಟ್ಟಿಲುಗಳನ್ನು ಹಾರಿ ಬಂದು ಏದುಸಿರು ಬಿಡುತ್ತಾ ಕೋಣೆಯ ಬಾಗಿಲನ್ನು ಟಪಾರನೆ ಸರಿಸಿ ಒಳ ಬಂದಳು ಬೆದರಿದ ಹುಲ್ಲೆ ಅಲಕಾ. ಏನು ಮಾಡಬೇಕೆಂದು ತೋಚದೆ ಸ್ನಾನದ ಕೋಣೆಗೆ ನುಗ್ಗಿ ಕನ್ನಡಿ ನೋಡಿಕೊಂಡಳು. ಮೈಯೆಲ್ಲಾ ರಕ್ತ! ಉಟ್ಟ ಬಟ್ಟೆಯನ್ನು ತೋಯಿಸಿದೆ! ಹನಿ ನೀರಿಗೆ ಮೈಯೊಡ್ಡಿದಳು. ಎಷ್ಟೋ ಸಮಯದ ನಂತರ ಉದ್ವೇಗ ಕಡಿಮೆಯಾಗಿ ಮನಸ್ಸು ಸ್ಥಿಮಿತೆಗೆ ಬಂತು. ಮೈ ಒರಸಿ ಹೊರ ಬಂದಾಗ ಇನ್ನೂ ಎಚ್ಚರವಾಗಿಲ್ಲದೆ ಮಲಗೇ ಇದ್ದಳು ವೈಯಾರಿ ನಿಲೀಮಾ!"ಎಷ್ಟೇ ಹೊತ್ತು ಅದು. ಹೊತ್ತು ಗೊತ್ತು ಇಲ್ಲದ ಕೆಲಸ. ಇನ್ನು ಮುಂದೆ ನಿನ್ನ ಬಾಸಿಗೆ ಸರಿಯಾಗಿ ಹೇಳ್ಬಿಡು. ಸಂಜೆ ಆರರ ನಂತರ ಕೆಲಸ ಮಾಡೋದಿಲ್ಲಾಂತ" ವೈಯಾರಿ ನಿದ್ದೆ ಕಣ್ಣಿನಲ್ಲೆ ಹೇಳಿದಳು.
ಅಲಕಾ ಒಮ್ಮೆಲೆ ವೈಯಾರಿಯ ಮಾತಿಗೆ ಬೆಚ್ಚಿ ಬಿದ್ದು ಸಾವರಿಸಿಕೊಂಡಳು. ಏನೋ ವಸ್ತುಗಳಿಗಾಗಿ ವಾರ್ಡ್ ರೋಬ್, ಮೇಜುಗಳನ್ನು ತಡಕಾಡಿದಳು. ತೂಗು ಹಾಕಿದ ಗಾಳಿ ಚೀಲದಲ್ಲಿ ಬೇಕಿದ್ದ ವಸ್ತುಗಳು ದೊರೆತಾಗ ತಟಕ್ಕನೆ ಬಾಗಿಲು ತೆರೆದು ಹೊರ ಬಂದಳು. ವೈಯಾರಿ ನಿದ್ದೆ ಮಂಪರಿನಲ್ಲಿ ಹೊರಳಿ,"ಅಲಕಾ ಆ ವ್ಯಕ್ತಿ..." ಅಂದಳು. ಉತ್ತರವಿಲ್ಲ!ಬೆದರಿದ ಹುಲ್ಲೆ ಮೆಟ್ಟಲಿಳಿದು ಕಾರ್ ಶೆಡ್ಡಿನ ಬಳಿ ಬಂದಳು. ಶೆಡ್ಡಿನ ಬಾಗಿಲು ಕಿರ್ ಸದ್ದಿನೊಂದಿಗೆ ತೆರೆದಾಗ ಉಸಿರು ಬಿಗಿ ಹಿಡಿದು, ಗೋಡೆಗೆ ಅಂಟಿದಂತೆ ನಿಂತಳು. ಯಾರು ಇಲ್ಲದನ್ನು ಗಮನಿಸಿ ಒಳ ಸರಿದು ಬಾಗಿಲು ಸರಿಸಿದಳು. ಹಳೇ ಕಾಲದ ಫೋರ್ಡ್ ಕಾರು ಧೂಳು ತುಂಬಿ ಮಲಗಿತ್ತು. ಬಾನೆಟ್ ಮೇಲೆ ಮಲಗಿಸಿದ್ದ ವ್ಯಕ್ತಿಯ ಮೂಗಿನ ಬಳಿ ಕೈ ಹಿಡಿದಳು. ಇನ್ನೂ ಉಸಿರಾಟವಿದೆ! ತುಂಬು ತೋಳಿನ ಅಂಗಿಯ ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ನೋಡಿದಳು. ರಕ್ತ ಇನ್ನೂ ಜಿನುಗುತಿತ್ತು. ಟಾರ್ಚ್ ಬೆಳಕಿನಲ್ಲಿ ಗಾಯವನ್ನು ನೋಡಿದಳು. ಗುಂಡೇಟಿನಿಂದ ಆದ ಗಾಯ! ಸಧ್ಯ ಅಪಾಯದಿಂದ ಪಾರಾಗಿದ್ದಾನೆ. ನಿಟ್ಟುಸಿರಿಟ್ಟಳು ಅಲಕಾ. ಗಾಯವನ್ನು ಒರಸಿ ಮುಲಾಮು ಹಚ್ಚಿ ಎದೆಯ ಸುತ್ತಾ ಬಟ್ಟೆಯನ್ನು ಬಿಗಿಯಾಗಿ ಕಟ್ಟಿದಳು.ಆತ ಮೆಲ್ಲನೆ ಮುಲುಗಿದ!
"ನಾಡಕೋವಿ.....""ನಾಡ ಕೋವಿ??!!!" ಅಲಕಾ ಬೆಚ್ಚಿದಳು! ನಾಡಕೋವಿಯಿಂದ ಗುಂಡು ಹಾರಿರಬೇಕು! ಹಣೆಗೆ ಕೈ ಹಚ್ಚಿ ನೋಡಿದಳು. ಸುಡುತ್ತಿತ್ತು. ಮಾತ್ರೆಯನ್ನು ಪುಡಿಮಾಡಿ ಅವನ ಬಾಯಿಗೆ ಸುರಿದಳು. ನೋವಿನಿಂದ ಮುಖ ಕಿವುಚಿ ತಲೆ ಹೊರಳಿಸಿ ಮುಲುಗಿದ. ಗೇಟಿನ ಬಳಿ ಸದ್ದಾದಂತಾಗಿ ಕಿವಿ ನಿಮಿರಿಸಿ ಉಸಿರು ಬಿಗಿ ಹಿಡಿದಳು ಅಲಕಾ. ಬಾನೆಟ್ ಮೇಲಿದ್ದ ವ್ಯಕ್ತಿ ಕೊಸರಿಕೊಂಡ. ಅವನ ಬಾಯಿಗೆ ಕೈ ಅಡ್ಡ ಹಿಡಿದಳು. ಸದ್ದು ಮರೆಯಾದಾಗ ಶೆಡ್ಡಿನ ಬಾಗಿಲು ತೆರೆದು ಇಣುಕಿದಳು. ಯಾರು ಇಲ್ಲದನ್ನು ಗಮನಿಸಿಕೊಂಡು ದಡ ದಡನೆ ಮೆಟ್ಟಿಲೇರಿ ಹೋಗಿ ಬಾಗಿಲು ತೆರೆದು ನೋಡಿದಳು. ವೈಯಾರಿಯ ಬೆಡ್ ಖಾಲಿಯಾಗಿತ್ತು! ಅದೇ ವೇಗದಲ್ಲಿ ಕೆಳಗಿಳಿದು ಬಂದಳು. ವಾಹನವೊಂದು ಸರಿದು ಹೋದ ಸದ್ದು! ಅನುಮಾನ ಬಂದು ಶೆಡ್ಡಿನ ಬಾಗಿಲು ತೆರೆದಳು. ಬಾನೆಟ್ ಮೇಲಿದ್ದ ವ್ಯಕ್ತಿ ಮಾಯವಾಗಿದ್ದ! ಬೆದರಿದಳು ಹುಲ್ಲೆ!ವೈಯಾರಿಯ ಬಗ್ಗೆ ಅನುಮಾನ ಬಂದು ಮತ್ತೆ ದಡ ಬಡನೆ ಮೆಟ್ಟಿಲೇರಿ ಬಂದಳು. ಬಾಗಿಲು ತೆರೆದಾಗ ನಿಲೀಮಾ ಬೆಡ್ ಮೇಲೆ ಬೋರಲಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದಳು! ಹಾಗಾದರೆ ವಾಹನದಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಹೋದವರು ಯಾರು?!! ತಲೆಗೆ ಕೈ ಹಚ್ಚಿ ಕುಳಿತಳು ಅಲಕಾ.***ಕಾಫಿ ತೋಟದ ಮಧ್ಯೆ ಹಾವಿನಂತೆ ಮಲಗಿದ್ದ ರಸ್ತೆಯಲ್ಲಿ ಜೀಪು ಓಡಿಸುತ್ತಿದ್ದ ಚೆಲುವ ಮೋಹನ ಚಂದ್ರ. ಕಬ್ಬಿಣದ ಸರಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಚೆಲುವನಿಗೇಕೋ ಮಾತ್ಸರ್ಯವಾಯಿತು. ಗಂಡನನ್ನು ಕಳೆದುಕೊಂಡ ಹದಿಹರೆಯದ ಚೆಲುವೆ. ಕೆಲಸಕ್ಕೆಂದು ಬಂದವಳು ಕೆಲಸದ ಜೊತೆಗೆ ಇದೇ ಊರಿನಲ್ಲಿ ಉಳಿದುಕೊಳ್ಳುವ ಆಸ್ಥೆ ತೋರಿಸಿದ್ದಳು. ಗಂಡನನ್ನು ಕಳೆದುಕೊಂಡವಳೆಂಬ ಅನುಕಂಪದಿಂದ ಕೆಲಸ ಕೊಡಿಸಿದ್ದ ಚೆಲುವ. ಅದೂ ತೋಟದ ಉಸ್ತುವಾರಿಕೆ. ಕೆಲವೆ ದಿನಗಳಲ್ಲಿ ಚೆಲುವನ ಮನಸ್ಸು ಗೆದ್ದವಳು. ಹುಡುಗಿಯರಿಂದ ದೂರವಿರುತ್ತಿದ್ದ ಚೆಲುವ ಮೋಹನ."ನೀವು ಕೆಲಸಕ್ಕಾಗಿ ಕೊಲ್ಕತ್ತದಿಂದ ಇಷ್ಟು ದೂರ ಬರುವ ಅಗತ್ಯವಿತ್ತೆ?""ನನ್ನ ನೋವು ಮರೆಯುವುದಕ್ಕೆ ಎಲ್ಲಿಯಾದರು ದೂರ ಹೋಗ ಬೇಕೆನಿಸಿತು" ಅವಳ ಮಾತಿನಲ್ಲಿ ದು:ಖದ ಛಾಯೆಯಿತ್ತು."ಏನದು ನಿಮ್ಮ ನೋವು?" ಬಾಯಿ ತಪ್ಪಿ ಬಂದ ಮಾತು. ತಟ್ಟನೆ ಗಾಡಿಗೆ ತಡೆ ಹಾಕಿದ."ಚಂದನ್ ನ ಕಳಕೊಂಡ ಮೇಲೆ ಅಲ್ಲಿ ಇರುವುದು ಕಷ್ಟವೆನಿಸಿತು""ಚಂದನ್ ಅಂದ್ರೆ?" ಸಂಶಯ ವ್ಯಕ್ತ ಪಡಿಸಿದ ಚೆಲುವ."ಚಂದನ್ ನನ್ನ ಗಂಡ""ಮನೆಯಲ್ಲಿ ಬೇರೆ ಯಾರು ಇರಲಿಲ್ಲವೇ""ಇದ್ರು. ಅತ್ತೆಗೆ ನಾನೆಂದ್ರೆ ಅಷ್ಟಕಷ್ಟೆ. ಯಾಕೆಂದ್ರೆ ನಾನು ಚಂದನ್ ನ ಮದುವೆಯಾಗಿದ್ದು ಅವರ ವಿರುದ್ಧವಾಗಿ""ಅಂದ್ರೆ?" ಅರ್ಥವಾಗದೆ ಕೇಳಿದ ಮೋಹನ."ಅಂದ್ರೆ ನಮ್ಮದು ಪ್ರೇಮ ವಿವಾಹ. ಚಂದನ್ ಮನೆಯಲ್ಲಿ ಎಲ್ಲರೂ ವಿರೋಧ ವ್ಯಕ್ತ ಪಡಿಸಿದ್ರು. ಆದ್ರೂ ಚಂದನ್ ನನ್ನ ಕೈ ಬಿಡಲಿಲ್ಲ. ಆದರೆ ಏನು ಮಾಡೋದು ಚಂದನ್ ನ ಉಳಿಸಿಕೊಳ್ಳುವ ಭಾಗ್ಯ ನನಗಿರಲಿಲ್ಲ""ಕ್ಷಮಿಸಿ ನಿಮ್ಮ ಮನಸ್ಸು ನೋಯಿಸಿ ಬಿಟ್ಟೆ. ಅಲಕಾ ಇಲ್ಲಿ ನಿಮಗೆ ಹೇಗನಿಸುತ್ತೆ" ಮಾತು ಬೇರೆಡೆಗೆ ತಿರುಗಿಸಿದ ಚೆಲುವ."ತುಂಬಾ ಮೆಚ್ಚಿಕೊಂಡಿರೋ ಸ್ಥಳ. ಪ್ರೀತಿ ತೋರೊ ಕೆಲಸದಾಳುಗಳು" ಮಚ್ಚುಗೆ ವ್ಯಕ್ತಪಡಿಸಿದಳು ಬೆಂಗಾಲಿ ಚೆಲುವೆ."ಕೆಲಸದಾಳುಗಳ ಬಗ್ಗೆ ಎಚ್ಚರವಿರಲಿ. ಅವರೆಲ್ಲಾ ವಿಷ ಸರ್ಪಗಳ ಹಾಗೇ""ಮೋಹನ್ ಚಂದ್ರ ಹಾಗನ್ಬೇಡಿ. ಅವರು ತೋರಿಸೊ ಪ್ರೀತಿಗೆ ನಾನು ಋಣಿ" ಗಂಟಲುಬ್ಬಿ ಬಂತು."ಸರಿ ಕಾಟೇಜ್ ಕಡೆ ಹೋಗೋಣ" ಜೀಪು ಮತ್ತೆ ಧೂಳೆಬ್ಬಿಸುತ್ತಾ ಕಾಟೇಜ್ ಕಡೆ ಸಾಗಿತು.ಪಾತಿ ಮಾಡುತ್ತಿದ್ದ ಕೆಲಸದಾಳು ಪಾಪಯ್ಯ ಜೀಪಿನಿಂದ ಇಳಿದ ಚೆಲುವೆಯನ್ನು ನೋಡಿ ಬೆರೆಗಾದ! ಮೋಹನ್ ಚಂದ್ರನಿಗೆ ಹೆಣ್ಣುಗಳೆಂದರೆ ಅಲರ್ಜಿ! ಒಂಟಿ ಜೀವನ ನಡೆಸೊ ಕಾಫಿ ತೋಟದ ಮಾಲಿಕ! ಮೊದಲ ಬಾರಿ ಹೆಣ್ಣಿನ ಜೊತೆಗೆ ಬರುತ್ತಿರುವುದು! ಕೆಲಸದಾಳಿನ ನೋಟ ಅಲಕಾಳಿಗೆ ವಿಚಿತ್ರವೆನಿಸಿತು. ಮಾಲಿಕನ ಜೊತೆ ಬಂದುದಕ್ಕಾಗಿಯೆ? ಮೋಹನ್ ಚಂದ್ರನ ಒತ್ತಾಯಕ್ಕಾಗಿ ಮೊದಲ ಬಾರಿ ಅವನ ಜೀಪಿನಲ್ಲಿ ಕಾಟೇಜಿಗೆ ಬಂದಿದ್ದಳು.ಕಾಟೇಜಿಗೆ ಬಂದಾಗ ಮೊದಲಿಗೆ ಕಂಡಿದ್ದು ಗೋಡೆಗೆ ತೂಗು ಹಾಕಿದ್ದ ನಾಡ ಕೋವಿ! ನಾಡ ಕೋವಿ ಪದ ಬಳಸಿ ನರಳಿದ್ದ ವ್ಯಕ್ತಿಯ ನೆನಪಾಯಿತು."ಮೋಹನ್ ಚಂದ್ರ ಇದೇನು?!!""ಆಟಿಕೆಯಂತು ಅಲ್ಲ..." ನಗು ತಂದು ಕೊಂಡು ಹೇಳಿದ"ತಮಾಷೆ ಬೇಡ. ನೀವು ಇದನ್ನ ಉಪಯೋಗಿಸ್ತೀರಾ?" ಅನುಮಾನ ಸುಳಿಯಿತು ಬಂಗಾಳಿ ಚೆಲುವೆಗೆ."ಯಾವಗಲಾದರೊಮ್ಮೆ. ಈಗ್ಗೆ ಎರಡು ದಿವಸಗಳಿಂದಷ್ಟೆ ನನ್ನ ಕೈಗೆ ಬಂತು""ಅಂದ್ರೆ?""ಚುನಾವಣೆ ಸಮಯದಲ್ಲಿ ಅದನ್ನ ಸರಕಾರಕ್ಕೆ ಒಪ್ಪಿಸಬೇಕು"ಚುನಾವಣೆ ಮುಗಿದು ಮೂರು ತಿಂಗಳ ನಂತರ ಹಿಂದಕ್ಕೆ ಪಡೆದುಕೊಂಡಿದ್ದಾನೆ!"ಮರಳಿ ತಂದ ನಂತರ ಅದನ್ನ ಉಪಯೋಗಿಸಿದ್ರಾ?" ಬಂಗಾಲಿ ಚೆಲುವೆಗೆ ಅನುಮಾನ ಪರಿಹಾರವಾಗಲಿಲ್ಲ."ಹೌದು. ಎಲ್ಲಾ ಶುಚಿಗೊಳಿಸಿ ಒಮ್ಮೆ ಪರೀಕ್ಷಿಸಿದೆ"ಕಾಫಿ ತೋಟದ ಮಾಲಿಕ ಸುಳ್ಳು ಹೇಳುತ್ತಿದ್ದಾನೆ. ಪರೀಕ್ಷೆಗಾಗಿ ಗುಂಡು ಹಾರಿಸಿದ್ದಲ್ಲ. ಉದ್ದೇಶ ಪೂರ್ವಕವಾಗಿ ಹಾರಿಸಿರಬೇಕು. ನನಗೇನು ತಿಳಿದಿಲ್ಲವೆಂದುಕೊಂಡಿದ್ದಾನೆ ಚೆಲುವ. ಗುಂಡೇಟು ತಗುಲಿ ಸ್ಮೃತಿ ತಪ್ಪಿದ್ದ ವ್ಯಕ್ತಿಯನ್ನು ನೆನಪಿಸಿಕೊಂಡಳು.ಗಾಜಿನ ಕಿಟಕಿಗಳನ್ನು ಸರಿಸಿದ. ಬೆಳಕು ಸಾಕಷ್ಟು ಹರಿಯಿತು. ಕಿಟಕಿಯ ಮೂಲಕ ಇಳಿಜಾರಿಗಿದ್ದ ಕಾಫಿಯ ತೋಟ ಸುಂದರವಾಗಿ ಕಾಣುತಿತ್ತು. ಅಲ್ಲಲ್ಲಿ ಕಾಫಿ ತೋಟದ ಮಧ್ಯದಲ್ಲಿ ನಿಂತ ನೀಲಗಿರಿ ಮರಗಳು. ಸುತ್ತಲೂ ಬೇಲಿಯಂತಿರುವ ಖೋ ಖೋ ಗಿಡಗಳು.ಸೀಸೆಯಲ್ಲಿದ್ದ ವಿಸ್ಕಿಯನ್ನು ಗ್ಲಾಸಿಗೆ ಸುರಿದು ಸೋಡ ಬೆರೆಸಿದ. ಐಸ್ ಕ್ಯೂಬ್ ಗಳನ್ನು ತುಂಬಿಸಿದ.
"ಅಭ್ಯಂತರವಿಲ್ಲದಿದ್ದರೆ......" ಇನ್ನೊಂದು ಗ್ಲಾಸಿಗೆ ಸುರಿದು ಅವಳಿಗೆ ನೀಡಿದ."ಕ್ಷಮಿಸಿ" ನಯವಾಗಿ ನಿರಾಕರಿಸಿದಳು ಅಲಕಾ. ಕರಿದ ಮೀನನ್ನು ತಟ್ಟೆಯಲ್ಲಿ ಜೋಡಿಸಿಟ್ಟ."ಸ್ವಲ್ಪ..." ಮತ್ತೊಮ್ಮೆ ಒತ್ತಾಯಿಸಿದ."ಕ್ಷಮಿಸಿ. ಅದರ ಅಗತ್ಯವಿಲ್ಲ. ನಿಮಗೆ ಕಂಪನಿ ಕೊಡಬೇಕೆಂದರೆ ತಣ್ಣನೆಯ ನೀರು ಸಾಕು" ಒಳಗೆ ಸರಿದ ಚೆಲುವ. ಕೈಯಲ್ಲಿ ತಂಪು ಲಘು ಪಾನೀಯ ತಂದು ಟೀಪಾಯಿ ಮೇಲಿರಿಸಿದ."ಉಪಕಾರವಾಯಿತು" ಎತ್ತಿಕೊಂಡಳು. ತಟ್ಟೆಯಲ್ಲಿ ಜೋಡಿಸಿಟ್ಟಿದ್ದ ಕರಿದ ಮೀನಿನ ಪರಿಮಳ ಅವಳನ್ನು ಸೆಳೆಯಿತು. ಕೈ ಇಕ್ಕಿದಳು ಬಂಗಾಲಿ ಚೆಲುವೆ! ಅವನ ತಲೆಯಲ್ಲಿ ಏನೋ ಹೊಳೆಯಿತು. ಕಿರು ನಕ್ಕ. ಮೀನಿನ ರುಚಿಗೆ ಬಾಯಿ ಚಪ್ಪರಿಸಿ ನಕ್ಕವನನ್ನು ತಲೆ ಎತ್ತಿ ನೋಡಿದಳು. ಇನ್ನೊಂದು ಪೆಗ್ಗು ಏರಿಸಿದವನು ಅವಳನ್ನು ನೋಡಿ ನಕ್ಕ. ಹುಬ್ಬು ಗಂಟಿಕ್ಕಿ ಅವನನ್ನು ನೋಡಿದಳು."ನನ್ನ ಊಹೆ ಸರಿಯಾಯ್ತು" ಗ್ಲಾಸನ್ನು ತುಟಿಗಳಿಗೆ ಸೋಕಿಸುತ್ತಾ ಹೇಳಿದ."ಏನು?""ಏನಿಲ್ಲ""ಮೋಹನ್ ಚಂದ್ರ ನನ್ನನ್ನು ಮರಳಿ ರೂಂಗೆ ತಲುಪಿಸುವಿರಲ್ವೆ?" ಎರಡು ಪೆಗ್ ಏರಿಸಿದವನನ್ನು ಎಚ್ಚರಿಸಿದಳು ಬಂಗಾಲಿ ಚೆಲುವೆ."ಓಹೋ ಅಲಕಾ. ನೀವು ನನ್ನನ್ನು ತಪ್ಪು ತಿಳಿಯೋದು ಬೇಡ. ನಾನು ಎಷ್ಟು ಕುಡಿದರೂ ಧೃತಿ ತಪ್ಪಲಾರೆ" ಭರವಸೆ ಕೊಟ್ಟ ಚೆಲುವ.ಯಾರೋ ಮುಲುಗಿದ ಸದ್ದು! ಏನೂ ಅರ್ಥವಾಗದೆ ಮೋಹನ್ ಚಂದ್ರನನ್ನು ನೋಡಿದಳು."ನಿಮಗೊಂದು ರಹಸ್ಯ ತಿಳಿಸುವುದಿದೆ. ಬನ್ನಿ""ರಹಸ್ಯ!!?""ಹೌದು. ಗಾಯಗೊಂಡು ಬಿದ್ದಿದ್ದ ವ್ಯಕ್ತಿ. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ"ಚೆಲುವ ನಯವಾಗಿ ಸುಳ್ಳು ಹೇಳುತ್ತಿದ್ದಾನೆ. ಗುಂಡೇಟು ತಗುಲಿ ಬಿದ್ದಿದೆ ವ್ಯಕ್ತಿ. ಕಾರಿನ ಶೆಡ್ಡಿನಿಂದ ಸಾಗಿಸಿ ಇಲ್ಲಿ ತಂದಿದ್ದಾನೆ! ತನಗೇನು ಗೊತ್ತಿಲ್ಲವೆಂದು ತಿಳಿದಿದ್ದಾನೆ. ಅನುಮಾನದಿಂದಲೆ ಹಿಂಬಾಲಿಸಿದಳು. ಅದೊಂದು ಸಣ್ಣ ಕೋಣೆ. ಮಂಚದ ಮೇಲೆ ವ್ಯಕ್ತಿಯನ್ನು ಮಲಗಿಸಲಾಗಿತ್ತು! ನಿದ್ರೆಯಲ್ಲಿ ಸಣ್ಣಗೆ ಗೊರೆಕೆ ಹೊಡೆಯುತ್ತಿದ್ದ. ಹತ್ತಿರ ಸರಿದು ನೋಡಿದಳು. ಎದೆಯ ಮೇಲೆ ದೊಡ್ಡ ಬ್ಯಾಂಡೇಜ್ ಹಾಕಲಾಗಿತ್ತು. ಗುಂಡೇಟು ತಿಂದು ಬಿದ್ದಿದ್ದ ವ್ಯಕ್ತಿ! ಕಾರ್ ಶೆಡ್ಡಿನಿಂದ ಮಾಯವಾದ ವ್ಯಕ್ತಿ!ಚಂದನ್!!!!ತಲೆ ಸುತ್ತು ಬಂದವಳು ಮಂಚದ ಅಂಚನ್ನು ಗಟ್ಟಿಯಾಗಿ ಹಿಡಿದು ನಿಂತಳು."ಅಲಕಾ ಏನಾಯ್ತು?"ಸಾವರಿಸಿಕೊಂಡಳು ಬಂಗಾಲಿ ಚೆಲುವೆ."ಏನಿಲ್ಲಾ. ಹೊರಡೋಣ್ವೆ" ಆತುರ ತೋರಿಸಿದಳು. ಕುಡಿದ ನಶೆ ನಿಧಾನವಾಗಿ ಅವನನ್ನು ಆವರಿಸುತಿತ್ತು."ಸರಿ. ಹೊರಡೋಣ" ಅವಳ ಜೊತೆ ಹೆಜ್ಜೆ ಹಾಕಿದ. ಏನೋ ಅನುಮಾನ ಸುಳಿಯಿತು. ಅವಳನ್ನು ನಿಲ್ಲಿಸಿದ ಮೋಹನ್ ಚಂದ್ರ!"ಏನಾಯ್ತು? ಎರಡನೆ ಪೆಗ್ ಏರಿಸುವಾಗಲೆ ಎಚ್ಚರಿಸಿದ್ದೆ. ನಿಮ್ಮ ಸ್ಥಿತಿ ನೋಡುವಾಗ ನನ್ನನ್ನು ಕೋಣೆಗೆ ತಲುಪಿಸಲಾರಿರಿ" ಆತಂಕ ವ್ಯಕ್ತ ಪಡಿಸಿದಳು ಅಲಕಾ."ಅಲಕಾ ನಿಮಗೆ ಡ್ರೈವಿಂಗ್ ಬರುತ್ತದೆಯೇ?""ಇಲ್ಲ""ಒಹೋ! ದಯವಿಟ್ಟು ಕ್ಷಮಿಸಿ. ಈ ದಿನ ಇಲ್ಲೆ ಇದ್ದುಬಿಡಿ...." ತೊದಲಿಕೆಯ ಮಾತು."ಮೋಹನ್ ಚಂದ್ರ ನನ್ನ ಇಕ್ಕಟ್ಟಿಗೆ ಸಿಲುಕಿಸಿದ್ರಿ" ಮುಖದಲ್ಲಿ ದು:ಖದ ಛಾಯೆ ಕಂಡಿತು."ಕ್ಷಮಿಸಿ ಅಂದ್ನಲ್ಲಾ" ಕೈ ಮುಗಿದ. ಕೆಲಸದ ಆಳು ಪಾಪಯ್ಯ ಅವಳಿಗೆ ಒಂದು ಕೋಣೆ ತೋರಿಸಿದ. ಬೇರೆ ದಾರಿ ತೋರದೆ ಹಾಗೆ ಹಾಸಿಗೆಯಲ್ಲಿ ಉರುಳಿಕೊಂಡಳು. ನಡೆದ ಘಟನೆಗಳೆಲ್ಲಾ ತಲೆಯಲ್ಲಿ ಗಿರಗಿರನೆ ಸುತ್ತುತಿತ್ತು. ಯಾರಿಗು ಗೊತ್ತಾಗದಿರಲಿಯೆಂದು ಇಷ್ಟು ದೂರ ಬಂದರೆ ಚಂದನ್ ಹೇಗೆ ಪತ್ತೆ ಹಚ್ಚಿ ಇಲ್ಲಿಯವರೆಗೂ ಬಂದ? ಬಣ್ಣದ ಚಿಟ್ಟೆಗಳ ಹಿಂದೆ ಸರಿದಾಡುವ ರಸಿಕ! ಇರಲಿ ತಾನು ಚಂದನ್ ನನ್ನು ಮಾತನಾಡಿಸಿ ಇಲ್ಲಿಂದ ದೂರ ಹೋಗಬೇಕು.ಎದ್ದು ಕೋಣೆಯ ಬಾಗಿಲು ತೆರೆದಳು. ಕತ್ತು ಹೊರಳಿಸಿ ಯಾರೂ ಇಲ್ಲದನ್ನು ಗಮನಿಸಿ, ಮೆಲ್ಲನೆ ಹೆಜ್ಜೆಯಿಡುತ್ತಾ ಚಂದನ್ ಇದ್ದ ಕೋಣೆಗೆ ಬಂದಳು. ಆತ ಇನ್ನೂ ಗೊರಕೆ ಹೊಡೆಯುತ್ತಿದ್ದ. ಮೆಲ್ಲನೆ ಅವನ ಬಳಿ ಸರಿದು ಅಲುಗಿಸಿದಳು.
"ಚಂದನ್" ಮೆಲ್ಲನೆ ಹೊರಳಿದ ಆತ! ಮತ್ತೊಮ್ಮೆ ಅಲುಗಿಸಿ ಕರೆದಳು. ದೀರ್ಘ ನಿಟ್ಟುಸಿರು ಬಿಟ್ಟು ಮತ್ತೆ ಗೊರಕೆ ಹೊಡೆಯ ಹತ್ತಿದ."ಅವರಿಗೆ ತೊಂದರೆ ಕೊಡಬೇಡಿ" ಮಾತು ಬಂದಾಗ ಬೆಚ್ಚಿ ಬಾಗಿಲ ಕಡೆ ನೋಡಿದಳು. ಮೋಹನ್ ಚಂದ್ರ ನಿಂತಿದ್ದ! ತಪ್ಪಿತಸ್ಥಳಂತೆ ತಲೆ ತಗ್ಗಿಸಿದಳು. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಳು. ನಿಜ ಸಂಗತಿ ತಿಳಿಸದೆ ಉಪಾಯವಿಲ್ಲ."ಚಂದನ್" ಮಂಚದ ಅಂಚು ಹಿಡಿದು ಚೆಲುವನಿಗೆ ಹೇಳಿದಳು."ನನ್ನ ಊಹೆ ಸರಿಯಾಯ್ತು" ಆಶ್ಚರ್ಯವಾಗಿ ತಲೆಯೆತ್ತಿ ನೋಡಿದಳು. ಮುಗುಳ್ನಗುತ್ತಾ ನಿಂತಿದ್ದ. ಮುಖದಲ್ಲಿ ನಶೆಯ ಕುರುಹಿಲ್ಲ! ಚೆನ್ನಾಗಿ ನಾಟಕವಾಡಿದ್ದಾನೆ ಚೆಲುವ!"ನೀನು ಮಾತ್ಸರ್ಯ ತುಂಬಿರೋನು" ಒಮ್ಮೆಲೆ ಆರ್ಭಟಿಸಿದಳು."ರಾತ್ರಿ ಹೊತ್ತು ಕಿರುಚ ಬೇಡಿ" ಸಂಯಮ ಕಳೆದುಕೊಳ್ಳದೆ ಹೇಳಿದ. ಉಸಿರಿನ ತೀವ್ರತೆಯನ್ನು ನಿಧಾನಗೊಳಿಸಿದಳು."ಮೋಹನ್ ಚಂದ್ರ ನೀನು ಹೊಟ್ಟೆ ಕಿಚ್ಚಿನ ಮನುಷ್ಯ""ಅಲಕಾ ಸತ್ಯನಾ ಮುಚ್ಚೋದಕ್ಕೆ ಪ್ರಯತ್ನಿಸ ಬೇಡಿ. ಚಂದನ್ ಸತ್ತು ಹೋದ. ವಿಧವೆ ಅಂದುಕೊಂಡು ಕೆಲಸಕ್ಕಾಗಿ ನನ್ನಲ್ಲಿಗೆ ಬಂದ್ರಿ. ನಿಮ್ಮನ್ನು ನೋಡಿದ್ರೆ ನೀವು ಯಾವುದೋ ಶ್ರೀಮಂತ ಮನೆತನದಿಂದ ಬಂದವರು ಅನಿಸಿತು""ಅದಕ್ಕೆ ನನ್ನ ಮೇಲೆ ಕನಿಕರ ತೋರಿಸೋ ಹಾಗೆ ನಟಿಸಿ. ನನ್ನನ್ನು ಪ್ರೀತಿಸಿ ನಿಮ್ಮ ಸಂಗಾತಿಯಾಗುವಂತೆ ಪ್ರೇರೇಪಿಸಿದ್ರಿ""ಸುಳ್ಳು""ಸತ್ಯ. ಹುಡುಗಿಯರೆಂದರೆ ಮಾರು ದೂರ ಹೋಗುವ ನೀವು ನನ್ನ ಬಗ್ಗೆ ತುಂಬಾ ಆಸ್ಥೆ ತೋರಿಸಿದ್ರಿ. ಕಾರಣ ನಿಮ್ಮ ಸ್ವಾರ್ಥ!""ಇರಬಹುದು. ಆದ್ರೆ ನೀವು ವಿಧವೆ ಅಲ್ಲಾಂತ ತಿಳಿದಿದ್ದು ಚಂದನ್ ಬಂದ ನಂತರ. ಅದೂ ಅಲ್ದೆ ಅದಕ್ಕೆ ಬೇಕಾಗಿದ್ದ ಕುರುಹುಗಳೂ ನಿಮ್ಮಲ್ಲಿದ್ದವು""ಕುರುಹು!!!" ಆಶ್ಚರ್ಯ ವ್ಯಕ್ತಪಡಿಸಿದಳು."ಹೌದು. ನಿಮ್ಮ ಕೈಯಲ್ಲಿರೋ ಶಂಖ. ಅಂದ್ರೆ ಬಿಳಿ ಬಣ್ಣದ ಬಳೆಗಳು. ಬೈತಲೆಯಲ್ಲಿರುವ ಕುಂಕುಮ. ಅದು ಅಲ್ದೆ...." ಮಾತು ನಿಲ್ಲಿಸಿದ."ಮತ್ತೇನಿದೆ?" ಕಣ್ಣು ಕಿರಿದುಗೊಳಿಸಿದಳಾಕೆ."..... ಮೀನು""ಮೀನು?!""ಬೆಂಗಾಲಿ ವಿಧವೆಯರಿಗೆ ಮೀನಿನ ಪದಾರ್ಥ ನಿಷಿದ್ಧ" ಕಣ್ಣಿಗೆ ಕೈ ಹಾಕಿದಂತಿತ್ತು ಅವನ ಮಾತು. ಎಲ್ಲವೂ ಸತ್ಯ. ಬೆಂಗಾಲಿಗಳ ಬಗ್ಗೆ ತುಂಬಾ ತಿಳಿದುಕೊಂಡಿದ್ದಾನೆ. ವಿಷಾದದ ನಗೆ ತೋರಿಸಿದಳು."ಅದಕ್ಕೆ ನೀವು ಚಂದನ್ ನ ಮುಗಿಸೋ ಪ್ರಯತ್ನ ಮಾಡಿದ್ರಿ""ಚಂದನ್ ನಿಮ್ಮನ್ನು ಹುಡುಕಿಕೊಂಡು ದೂರದ ಕೊಲ್ಕತ್ತಾದಿಂದ ಬಂದ. ನೀವು ಅವನ ಕಣ್ಣಿಗೆ ಬಿದ್ರಿ. ನಿಮ್ಮನ್ನ ವಾಪಸು ಬರುವಂತೆ ಒತ್ತಾಯಿಸಿದ. ನೀವು ನಿರಾಕರಿಸಿದ್ರಿ. ಆತ ಜಗಳವಾಡಿದ. ನೀವೂ ಹಠ ಹಿಡಿದ್ರಿ. ಕೊನೆಗೆ ಬೇರೆ ದಾರಿ ಕಾಣದೆ ಅವನನ್ನು ಕೊಲ್ಲೊ ಪ್ರಯತ್ನ ಮಾಡಿದ್ರಿ""ಸುಳ್ಳು, ಶುದ್ಧ ಸುಳ್ಳು. ನೀವೆ ನಾಡ ಕೋವಿಯಿಂದ ಗುಂಡಿಕ್ಕಿ ಕೊಲ್ಲೊ ಪ್ರಯತ್ನ ಮಾಡಿದ್ರಿ""ಇಲ್ಲ""ಹೌದು, ನನ್ನ ಮೇಲಿನ ಆಸೆಯಿಂದ ಗುಂಡು ಹೊಡೆದ್ರಿ""ಅಲಕಾ, ಬಾಯಿ ಮುಚ್ಚಿ""ಸತ್ಯ ಹೇಳಿದ್ರೆ ಕೋಪ ಬರುತ್ತೆ ಅಲ್ವಾ?" ಟೀಕಿಸಿದಳು. "ಮೋಹನ್ ಚಂದ್ರ ನೀವು ಕೋವಿಯನ್ನು ಶುಚಿಗೊಳಿಸಿ ಪರೀಕ್ಷೀಸೊದಕ್ಕೆ ಗುಂಡು ಹಾರಿಸಿದ್ದು ಅಂದ್ರಿ. ಅದು ಸುಳ್ಳು. ನನ್ನ ಹಿಂಬಾಲಿ ಬಂದಿರೋನು ನನ್ನ ಗಂಡ ಅಂದ ಕೂಡಲೇ ನೀವು ಮಾತ್ಸರ್ಯ ಹೊಂದಿದ್ರಿ. ಅಪರಿಚಿತ ಸ್ಥಳ ಬೇರೆ. ಅದಕ್ಕೆ ಸಾಯಿಸೋ ಪ್ರಯತ್ನ ಮಾಡಿದ್ರಿ""ನೀವು ತಪ್ಪು ತಿಳ್ಕೊಂಡಿದ್ದೀರಿ ಅಲಕಾ. ಚಂದನ್ ನ ಕೊಲ್ಲೊ ಹಾಗಿದ್ರೆ ಇಲ್ಲಿ ತಂದು ಯಾಕೆ ಉಪಚರಿಸಬೇಕಿತ್ತು?""ಉಪಚರಿಸದೆ? ಗುಂಡೇಟು ಬಿದ್ದ ವ್ಯಕ್ತಿನಾ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದು ನಾನು. ವ್ಯಕ್ತಿ ಚಂದನ್ ಅಂತ ನನಗೆ ಗೊತ್ತಿರಲಿಲ್ಲ. ನನ್ನನ್ನು ಹಿಂಬಾಲಿಸಿದ ನೀವು ಆತನನ್ನು ಗುರುತಿಸಿ ಜೀಪಿನಿಂದ ಬಂದು ಇಲ್ಲಿಗೆ ಸಾಗಿಸಿದ್ರಿ. ಈಗ ಸಂಬಾವಿತನಂತೆ ನಾಟಕವಾಡುತ್ತಿದ್ದೀರಿ""ಇಲ್ಲ, ಅಲಕಾ ಹಾಗನ್ಬೇಡಿ""ಹಾಗಾದರೆ ಗುಂಡು ಹಾರಿಸಿರೋದು ಯಾರು?""ನಾನು" ಅಚ್ಚರಿಯಿಂದ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಪಾತಿ ಕೆಲಸದಾಳು ಪಾಪಯ್ಯ!"ನೀನು! ನಿನಗೇನು ಇದರಿಂದ ಲಾಭ?""ಧಣಿಯೋರು ಕುಡಿತದ ಚಟ ಬೆಳೆಸ್ಕೊಂಡಿದ್ರು. ನೀವು ತೋಟದ ಉಸ್ತುವಾರಿಕೆಗೆ ಬಂದ ನಂತರ ಅವರ ಕುಡಿತ ಸ್ಥಿಮಿತೆಗೆ ಬಂತು. ಅವರ ಮುಖದಲ್ಲಿ ಸಂತಸ ಮಿನುಗುತಿತ್ತು. ಆದರೆ ಅದೇ ಸಮಯಕ್ಕೆ ನಿಮ್ಮ ಸಂಬಂಧಿಂತ ಹೇಳಿಕೊಂಡು ಚಂದನ್ ಬಂದ್ರು. ಮತ್ತೆ ದಣಿಯೋರು ಮೊದಲಿನಂತಾಗುತ್ತಾರೋ ಎಂದು, ಮನೆಯಲ್ಲಿ ಯಾರು ಇಲ್ಲದಾಗ ಕೋವಿ ತೆಗೆದುಕೊಂಡು ಆ ವ್ಯಕ್ತಿಯನ್ನು ಇಳಿಜಾರಿನಲ್ಲಿ ನಿಲ್ಸಿ ಗುಂಡು ಹಾರಿಸ್ದೆ""ಅವರನ್ನೇಕೆ ಇಳಿಜಾರಿನಲ್ಲಿ ನಿಲ್ಸಿದೆ?""ಅಲಕಾನ ರೂಮ್ ತೋರಿಸೋದಕ್ಕೆ ಹೇಳಿದ್ರು. ನನ್ನ ಯೋಜನೆಯ ಸಂಶಯ ಬರದಂತೆ ಎಚ್ಚರವಹಿಸಿ ಇಳಿಜಾರಿನ ರಸ್ತೆಯಲ್ಲಿ ನಿಲ್ಲಿಸಿದೆ""ಈ ವಿಷಯಾನ ನನಗೆ ತಿಳಿಸ್ದ. ಆದ್ರೆ ಚಂದನ್ ಗಾಗಿರೋದು ಗುಂಡಿನ ಗಾಯ ಅಲ್ಲ""ಮತ್ತೆ?" ಕಣ್ಣರಳಿಸಿ ಕೇಳಿದಳು ಅಲಕಾ."ಚೂರಿಯಿಂದ ತಿವಿದ ಗಾಯ""ಚೂರಿಯಿಂದ ತಿವಿದ ಗಾಯ!!" ಅಲಕಾ ಹುಬ್ಬೇರಿಸಿದಳು."ನಾನು ನೋಡುವಾಗ ಇರಿತದ ಗಾಯದ ಹಾಗೆ ಇರಲಿಲ್ಲ. ಗುಂಡೇಟು ತಗುಲಿದಂತಿತ್ತು. ಅದೂ ಅಲ್ದೆ ಆತ ನಾಡಕೋವಿ ಅಂದಿದ್ದ.""ಅದು ಕತ್ತಲೆಯಲ್ಲಿ ಸಾಗೋದು ಅಪಾಯ. ಪೊದೆಯ ಮಧ್ಯದಲ್ಲಿ ಕಾಡು ಪ್ರಾಣಿಗಳಿರುತ್ತವೆ. ಕೋವಿ ತರುತ್ತೇನೆ ಅಂದಿದ್ದೆ. ಅದಕ್ಕೆ ಹೇಳಿರಬಹುದು" ಪಾಪಯ್ಯ ಹೇಳಿದ."ಸರಿ ಈಗ ಅರ್ಥವಾಯಿತು. ನಾನು ಜೀಪ್ ನಲ್ಲಿ ಬರುತ್ತಿರುವಾಗ ಅವಳು ಎದುರಾಗಿದ್ಲು""ಯಾರು?" ಪಾಪಯ್ಯ, ಅಲಕಾ ಇಬ್ಬರೂ ಉದ್ಗಾರವೆಳೆದರು."ಅದೇ ಬಾಬ್ ಕೂದಲಿನ ಹುಡುಗಿ. ನನ್ನ ನೋಡಿ ಕಾಫಿ ಗಿಡಗಳ ಹಿಂದೆ ಮರೆಯಾದ್ಲು. ನಾನು ನನ್ನ ಪಾಡಿಗೆ ಬಂದೆ""ಯಾರವಳು?""ಸರಿಯಾಗಿ ಹೇಳಿದ್ರಿ. ದೂರದ ಊರಿಂದ ಪ್ರಿಯತಮನನ್ನು ಹುಡುಕಿಕೊಂಡು ಬಂದಿದ್ದೀನಿ ಅಂದಿದ್ಲು. ಕೆಲಸದಾಳುಗಳ ಜೊತೆಗೆ ಜಗಳ ಕಾಯ್ತ ಇದ್ಲು" ಪಾಪಯ್ಯನೆಂದ."ದೂರದ ಊರು!" ರಸಿಕ ಚಂದನ್ ನ ಪ್ರೇಮಿ ಇರಬೇಕು!"ಹೆಸರು ಗೊತ್ತಾ?" ಏನೋ ಅಲೋಚಿಸಿ ಕೇಳಿದಳು ಅಲಕಾ."ಇಲ್ಲ. ಅವಳು ಉಳಕೊಂಡಿದ್ದು ಕಾರ್ ಶೆಡ್ಡಿನ ಬಳಿ""ಶೆಡ್ಡಿನ ಬಳಿ!!" ಉತ್ತರ ದೊರಕಿತವಳಿಗೆ. ಅವಳು ಬೇರಾರು ಅಲ್ಲ. ವೈಯಾರಿ ನಿಲೀಮಾ!!!ಚಂದನ್ ಕಾಣೆಯಾದ ದಿನ ಏನೋ ನಾಟಕವಾಡಿದ್ದಾಳೆ. ನೆನಪಿಸಿಕೊಂಡಳು ಅಲಕಾ."ಯಾರು ನಿಮಗೆ ಗೊತ್ತೆ?" ಮೋಹನ್ ಚಂದ್ರ ಆಲೋಚನೆಯಲ್ಲಿದ್ದ ಅವಳನ್ನು ಕೇಳಿದ."ಹೌದು. ಆಕೆ ನನ್ನ ರೂಂ ಮೇಟ್ ನಿಲೀಮಾ""ಸರಿ. ನಾನು, ಪಾಪಯ್ಯ ಚಂದನ್ ನ ವಿಷಯ ಹೇಳಿದ ನಂತರ ಶೆಡ್ಡ್ ಬಳಿ ಬಂದೆ""ಗಾಯವಾಗಿ ಬಿದ್ದವನನ್ನು ಶೆಡ್ಡಿಗೆ ಸಾಗಿಸಿದೋಳು ನಾನು""ಇರಬಹುದು""ನೀವು ಬಂದಿದ್ದು ಅವನನ್ನು ಕಾಟೇಜಿಗೆ ಸೇರಿಸೋದಿಕ್ಕೆ""ಹೌದು. ಆಗ ಯಾರೋ ಮೆಟ್ಟಿಲಿನ ಮರೆಯಲ್ಲಿ ನಿಂತು ನೋಡುತ್ತಿದ್ದರು""ಸರಿಯಾಗಿ ಹೇಳಿದ್ರಿ. ಅವನಿಗೆ ಪ್ರಥಮ ಚಿಕಿತ್ಸೆ ಮುಗಿಸಿ ನನ್ನ ರೂಂಗೆ ಬಂದಾಗ ನಿಲೀಮಾ ರೂಂನಲ್ಲಿ ಇರಲಿಲ್ಲ""ಕೆಲವು ಬಾರಿ ಕಾಫಿ ತೋಟದಲ್ಲೂ ಕಾಣಿಸ್ಕೊಂಡಿದ್ಲು""ಮೋಹನ್ ಚಂದ್ರ, ವಿಳಂಬ ಮಾಡೋದು ಬೇಡ. ಕೂಡ್ಲೆ ರೂಮಿಗೆ ಹೋಗೋಣ" ಆತುರ ಪಡಿಸಿದಳು ಅಲಕಾ."ಪಾಪಯ್ಯ, ನೀನು ಚಂದನ್ ಬಳಿ ಇರು. ನಾವು ನಿಲೀಮಾನ ವಿಚಾರಿಸ್ತೀವಿ"ಇಬ್ಬರೂ ರೂಮಿಗೆ ಬಂದಾಗ ರೂಮಿಗೆ ಬಾಗಿಲು ಹಾಕಲಾಗಿತ್ತು. ಅಲಕಾ ತನ್ನ ಕೀಲಿಯಿಂದ ಬಾಗಿಲು ತೆರೆದಳು. ರೂಮಿನ ಎಲ್ಲಾ ವಸ್ತುಗಳು ಅಸ್ತವ್ಯಸ್ತವಾಗಿದ್ದವು. ಅಲಕಾಳ ಟೇಬಲ್ ಮೇಲೊಂದು ಪತ್ರ! ತೆರೆದು ನೋಡಿದಳು. ಅವಳ ಮುಖದಲ್ಲಿ ಬದಲಾವಣೆ ಕಂಡಿತು."ಏನಾಯ್ತು?""ಅವಳ ಆ ವ್ಯಕ್ತಿ ಸಿಕ್ಕಿದನಂತೆ. ಆತ ಕಳೆದು ಹೋದ ಅವನ ಹೆಂಡತಿಯನ್ನು ಹುಡುಕಿಕೊಂಡು ಬಂದಿರೋದಂತೆ""ಅವನ ಕಳೆದು ಹೋದ ಹೆಂಡತಿ ಅಂದ್ರೆ ನೀವೆ ತಾನೆ? ಆ ವ್ಯಕ್ತಿ ಚಂದನ್ ತಾನೆ?""ಸರಿಯಾಗಿ ಹೇಳಿದ್ರಿ. ನಿಲೀಮಾ ಚಂದನ್ ನ ಪ್ರೇಯಸಿಯಿರಬೇಕು""ಇರಬಹುದು. ಆದ್ರೆ ಚಂದನ್ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾರೆ""ನೀವು ಹೇಗೆ ಹೇಳಿದ್ರಿ""ಅಷ್ಟು ದೂರದಿಂದ ನಿಮ್ಮನ್ನು ಹುಡುಕಿಕೊಂಡು ಬಂದಿದ್ದಾರೆಂದ್ರೆ..."ಅವಳಿಗೆ ಚಂದನ್ ಬಗ್ಗೆ ಕನಿಕರವಾಯಿತು. ಚಂದನ್ ಬಗ್ಗೆ ತಪ್ಪಾರ್ಥ ಮಾಡಿದ್ದಕ್ಕಾಗಿ ನೊಂದುಕೊಂಡಳು"ಚಂದನ್ ನಿಲೀಮಾಳನ್ನು ನಿರಾಕರಿಸಿದ್ದಕ್ಕಾಗಿ ಅವನನ್ನು ಮುಗಿಸಿದಳಂತೆ" ಪತ್ರದಲ್ಲಿದ್ದದನ್ನು ಮತ್ತೆ ಮುಂದುವರಿಸಿದಳು."ಅವಳು ತಪ್ಪಾಗಿ ತಿಳ್ಕೊಂಡಿದ್ದಾಳೆ. ಚಂದನ್ ಸಾವಿನಿಂದ ಪಾರದ ವಿಷಯ ಅವಳಿಗೆ ತಿಳಿದಿಲ್ಲ.""ಹೌದು. ಈಗ ಅವಳು ತನ್ನ ಕೆಲಸ ಮುಗಿಸಿ ಊರಿಗೆ ವಾಪಾಸಾಗಿರಬಹುದು.""ನಿಮ್ಮ ಊಹೆ ನಿಜವಾಗಿರಬಹುದು""ಮೋಹನ್ ಚಂದ್ರ ನನ್ಗೊಂದು ಸಹಾಯ ಮಾಡಬಲ್ಲಿರಾ?""ಏನದು ಕೇಳಿ?""ಚಂದನ್ ಗುಣಮುಖನಾಗುವವರೆಗೂ ನಿಮ್ಮಲಿ ನಿಲ್ಲಲು ಅನುವು ಮಾಡಿ ಕೊಡಬಲ್ಲಿರಾ?""ಅದಕ್ಕೇನಂತೆ. ನಿಮ್ಮನ್ನು ಒಂದು ಮಾಡಿದ ಪುಣ್ಯ ನನಗಿರಲಿ. ನೀವು ಬಯಸುವಿರಾದರೆ ಚಂದನ್ ಗೂ ಇಲ್ಲೆ ಒಳ್ಳೆ ಕೆಲಸ ಕೊಡಿಸ ಬಲ್ಲೆ. ಈ ಎಸ್ಟೇಟ್ ನಿಮ್ಮದೆಂದೇ ತಿಳಿಯಿರಿ""ಧನ್ಯವಾದಗಳು" ಅಲಕಾ ಕೈ ಜೋಡಿಸಿದಳು."ಬನ್ನಿ ಕಾಟೇಜಿಗೆ ಹೋಗೋಣ"
ಇಬ್ಬರನ್ನೂ ಹೊತ್ತ ಜೀಪು ಕಾಟೇಜ್ ಕಡೆ ಓಡಿತು.***

Read more!

Thursday, November 13, 2008

ಬೋಗಿ ಸಂಖ್ಯೆ ಸಾ.೪


(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಕಥೆ)ಬಾಗಿಲಿನವರೆಗೂ ಉದ್ದಕ್ಕೆ ಇದ್ದ ಸರದಿಯನ್ನು ಸೇರಿಕೊಂಡು ಬಹಳ ಪ್ರಯಾಸದಿಂದ ಕೌಂಟರ್‍‍ನ ಬಳಿ ಬರುವಾಗ ಬೆವತು ಹೋಗಿದ್ದ ಮುಖವನ್ನು ಕರ್ಚಿಪ್‍ನಿಂದ ಒರೆಸಿಕೊಂಡು ಟಿಕೇಟ್‍ಗಾಗಿ ಕೈ ತೂರಿಸಿ, ಪಡೆದುಕೊಂಡು ಹಿಂತಿರುಗಿದ ಸ್ವರಳಿಗೆ ಆತ ಮತ್ತೊಮ್ಮೆ ಕಾಣಿಸಿದ!ಅವಳ ಹಿಂದೆಯೆ ನಿಂತು ಆತ ಟಿಕೇಟು ಖರೀದಿಸಿದ್ದ! ಬಸ್ಸು ಇಳಿದು ರೈಲು ನಿಲ್ದಾಣದವರೆಗೆ ನಡೆದು ಬರುತ್ತಿರುವಾಗಲೂ ಆತ ಹಿಂಬಾಲಿಸಿಕೊಂಡೇ ಬಂದಿದ್ದ!ಅಪರಿಚಿತ ಅವಳನ್ನು ಕಂಡು ಮುಗಳ್ನಕ್ಕ. ಸ್ವರ ಹೆದರಿ ಮೆಲ್ಲಗೆ ಮೈ ಅದುರಿಸಿದಳು. ರೈಲು ಬರಲು ಇನ್ನೂ ಅರ್ಧ ಗಂಟೆಯಿತ್ತು. ಅವನಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯ. ವೇಗದ ನಡುಗೆಯಲ್ಲಿ ಪ್ಲಾಟ್‍ಫಾರಂನಲ್ಲಿ ಹೆಜ್ಜೆ ಸರಿಸುತ್ತಾ ಪುಸ್ತಕದ ಅಂಗಡಿಯ ಮುಂದೆ ನಿಂತು ಹಿಂತಿರುಗಿದಳು. ಅಪರಿಚಿತ ಕಾಣಿಸದಾದಾಗ ನಿಟ್ಟುಸಿರಿಟ್ಟು ಪುಸ್ತಕಗಳ ಕಡೆಗೆ ಗಮನ ಹರಿಸಿದಳು. ಒಂದೆರಡು ವಾರಪತ್ರಿಕೆಗಳನ್ನು ತೆಗೆದುಕೊಂಡು ಸಿಮೆಂಟ್ ಬೆಂಚಿನ ಕಡೆಗೆ ನಡೆಯುವಾಗ ಆತ ಅವಳ ಹಿಂದೆ ಮುಗುಳ್ನಗುತ್ತಾ ನಿಂತಿದ್ದ!ಒಂದು ಕ್ಷಣ ಬೆದರಿದ ಹುಡುಗಿ ಸರಸರನೆ ನಡೆದು ಬಾಗಿಲ ಕಡೆಗಿದ್ದ ರೈಲ್ವೆ ಠಾಣೆಯ ಮುಂದಿನ ಬೆಂಚಿನ ಮೇಲೆ ಕುಳಿತು ನೋಡಿದಳು. ಆತ ಕಾಣಿಸಲಿಲ್ಲ. ನೋಡೋದಿಕ್ಕೆ ಸ್ಫುರದ್ರೂಪಿ ಯುವಕ. ದುಂಡು ಮುಖದ ದಪ್ಪ ಮೀಸೆಯ ಬಿಳಿ ಚಹರೆಯ ಯುವಕ ಆಕರ್ಷಕವಾಗಿದ್ದ. ಅಂತಹ ಸುಂದರ ಯುವಕ ತನ್ನ ಹಿಂದೆ ಬಿದ್ದಿದ್ದೇಕೆ? ಸ್ವರಳಿಗೆ ತಿಳಿಯಲಿಲ್ಲ.ಆತ ಮಲೆಯಾಳಂ ಪತ್ರಿಕೆಯೊಂದನ್ನು ಹಿಡಿದುಕೊಂಡು ಘಳಿಗೆಗೊಮ್ಮೆ ಸ್ವರಳನ್ನು ಗಮನಿಸುತ್ತಿದ್ದ.ಅಲ್ಲಲ್ಲಿ ನೇತು ಹಾಕಿದ್ದ ಟಿ.ವಿ. ಯಲ್ಲಿ ಯಾವುದೋ ಕನ್ನಡದ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ರೈಲ್ವೆ ನಿಲ್ದಾಣದಲ್ಲಿ ಅಷ್ಟೊಂದು ಜನರಿರಲಿಲ್ಲ. ಇನ್ನರ್ಧ ಗಂಟೆಯಲ್ಲಿ ಶೋರ್‍‍ನೂರ್‍‍ಗೆ ಹೊರಡುವ ರೈಲು ಫ್ಲಾಟ್‍ಫಾರಂ ಅನ್ನು ತಲುಪಲಿದೆ ಎಂದು ಉದ್ಗೋಷಕಿ ಹೇಳಿದ್ದರಿಂದ ಸ್ವರ ಅಲ್ಲಿಯೇ ಕುಳಿತಿದ್ದಳು.ಇದ್ದಕ್ಕಿದ್ದಂತೆ ಟಕ್ ಟಕ್ ಸದ್ದಿನೊಂದಿಗೆ ಧ್ವನಿ ವರ್ಧಕದಲ್ಲಿ ಮಾತುಗಳು ಆರಂಭವಾದವು.
"ಪ್ರಯಾಣಿಕರ ಗಮನಕ್ಕೆ. ಮಂಗಳೂರು ಶೋರ್‍‍ನೂರ್‍ ಪ್ಯಾಸೆಂಜರ್ ಗಾಡಿ ಸಂಖ್ಯೆ ೯೮೫೬೭ ಫ್ಲಾಟ್‍ಫಾರಂ ನಂಬರ್ ಒಂದರ ಬದಲಾಗಿ ಫ್ಲಾಟ್‍ಫಾರಂ ನಂಬರ್ ನಾಲ್ಕನ್ನು ಸೇರಲಿದೆ......." ಧ್ವನಿವರ್ಧಕದಲ್ಲಿಯ ಮಾತುಗಳು ಮುಂದುವರಿಯುತ್ತಿದ್ದಂತೆ ಸ್ವರ ತಟ್ಟನೆ ಎದ್ದು, ಆತುರಾತುರವಾಗಿ ಹೆಜ್ಜೆಗಳನ್ನು ಸರಿಸಿ ಓವರ್ ಬ್ರಿಡ್ಜ್‍ನ ಕಡೆಗೆ ನಡೆದಳು. ಕೆಲವರಂತೂ ರೈಲು ಹಳಿಯನ್ನು ದಾಟುತ್ತಲೇ, ಫ್ಲಾಟ್‍ಫಾರಂ ನಾಲ್ಕನ್ನು ತಲುಪಿದ್ದರು. ಅಪರಿಚಿತ ಯುವಕ, ಸ್ವರ ವೇಗವಾಗಿ ಹೋಗುತ್ತಿದ್ದುದನ್ನು ಗಮನಿಸಿ, ತನ್ನ ಕೈಯಲ್ಲಿದ್ದ ಪತ್ರಿಕೆಯನ್ನು ಅವಸರವಸವರವಾಗಿ ಮುಚ್ಚಿದ. ಅದಾಗಲೇ ಹಿಂದಿ ಮತ್ತು ಇಂಗ್ಲೀಷ್‍ನಲ್ಲಿಯೂ ಉದ್ಗೋಷಕಿ ಹೇಳಿದ್ದರಿಂದ ಆತ ಕೂಡ ಫ್ಲಾಟ್ ಫಾರ್‍ಂ ನಾಲ್ಕರ ಕಡೆಗೆ ನಡೆದ.ಸ್ವರ ಗಡಿಯಾರದತ್ತ ದೃಷ್ಟಿ ಹೊರಳಿಸಿದಳು. ರೈಲು ಹೊರಡಲು ಇನ್ನು ಕೇವಲ ಐದು ನಿಮಿಷಗಳು ಉಳಿದಿತ್ತು. ಅವಳು ಓವರ್ ಬ್ರಿಡ್ಜ್‍ನ ಮೇಲೆ ಬಂದಾಗ, ಒಮ್ಮಿದೊಮ್ಮೆಗೆ ನೂಕು ನುಗ್ಗಲಾಗುವಷ್ಟು ಜನ ತುಂಬಿ ಹೋದರು. ಹೆಗಲಿಗೇರಿಸಿ ಕಪ್ಪು ಚರ್ಮದ ಚೀಲವನ್ನು ಇನ್ನೊಂದು ಹೆಗಲಿಗೆ ಬದಲಿಸಿ, ಸೂಟ್‍ಕೇಸ್‍ನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ನಡೆಯುವಾಗ ಮುಗ್ಗರಿಸಿದಂತಾಯಿತು."ಎಕ್ಸ್ ಕ್ಯೂಸ್ ಮಿ" ಹಿಂದಿನಿಂದ ಯುವಕನ ಧ್ವನಿ ಬರುತ್ತಲೇ ಸರಿದು ನಿಂತಳು."ನಾನು ನಿಮಗೆ ಸಹಾಯ ಮಾಡಲೇ?" ಮಲೆಯಾಳಂ ಮಿಶ್ರಿತ ಕನ್ನಡದಲ್ಲಿ ಕೇಳಿದ ಯುವಕನತ್ತ ನೋಡಿದಳು ಸ್ವರ.ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ಯುವಕ!ಸ್ವರಳ ಮುಖಕ್ಕೆ ರಕ್ತ ನುಗ್ಗಿದಂತಾಗಿ ಮೆಲ್ಲನೆ ಬೆವತು ಹೋದಳು. ಆತನತ್ತ ನೋಡದೆ ಸರಸರನೆ ಹೆಜ್ಜೆ ಹಾಕಿ ಮೆಟ್ಟಲುಗಳನ್ನು ಇಳಿದು ಫ್ಲಾಟ್‍ಫಾರಂ ನಂ.೪ನ್ನು ತಲುಪಿದಾಗ, ರೈಲುಗಾಡಿ ಶಿಳ್ಳೆ ಹೊಡೆಯುತ್ತಾ ಬಂದು ನಿಂತಿತು. ಅವಳು ಒಂದು ಕ್ಷಣ ನಿಟ್ಟುಸಿರಿಟ್ಟಳು. ಕಪ್ಪು ಚರ್ಮದ ಚೀಲಕ್ಕೆ ಕೈ ಹಾಕಿ ಟಿಕೇಟ್‍ನ್ನು ಗಮನಿಸಿದಳು.ಬೋಗಿ ಸಂಖ್ಯೆ ಸಾಮಾನ್ಯ ೪!ಅದನ್ನು ಗಮನಿಸುವ ಮೊದಲು ಹಿಂತಿರುಗಿ ನೋಡಿದಳು. ತನ್ನನ್ನು ಮಾತನಾಡಿಸಿದ್ದ ಸುಂದರ ಯುವಕ ಕಾಣಿಸಲಿಲ್ಲ. ಅವಳು ವೇಗದ ನಡುಗೆಯಲ್ಲಿ ನಡೆದು ತನ್ನ ಬೋಗಿಯ ಬಳಿ ಬಂದಳು.ರೈಲು ಹೊರಡುವ ಸೂಚನೆಯನ್ನು ನೀಡುವಂತೆ ಶಿಳ್ಳೆ ಹೊಡೆಯಿತು.ಸೂಟ್‍ಕೇಸ್‍ನ್ನು ರೈಲಿನ ಒಳಗಿಟ್ಟು, ಹತ್ತಿದವಳು ತನ್ನ ಸೀಟಿನಲ್ಲಿ ಕುಳಿತು ದೀರ್ಘ ಉಸಿರು ತೆಗೆದಳು.ಅಪರಿಚಿತ ಬಸ್ಸು ಇಳಿದು ಬಂದಾಗಿನಿಂದ ಅವಳನ್ನು ಅನುಸರಿಸಿ ಬಂದಿದ್ದು ಅವಳಿಗೆ ಭೀತಿ ತರಿಸಿತ್ತು. ಆತ ಯಾರೆಂದು ತಿಳಿಯದೆ ಕಂಗಾಲಾಗಿದ್ದಳು. ಆತ ತನ್ನನ್ನು ಹಿಂಬಾಲಿಸಿ ಬರುತ್ತಿರುವುದಾದರೂ ಏಕೆ? ಪಕ್ಕನೆ ಕುತ್ತಿಗೆಯ ಬಳಿ ತನ್ನ ಕೈ ಸರಿಸಿ ಮುಟ್ಟಿಕೊಂಡಳು. ಚಿನ್ನದ ಸರ ಹಾಗೇ ಇದೆ. ರೈಲು ಪ್ರಯಾಣದಲ್ಲಿ ಕಳ್ಳತನ ಸಾಮಾನ್ಯ. ಆದರೆ ತನ್ನ ಕತ್ತಿನಲ್ಲಿರುವುದು ಒಂದೆಳೆಯ ಚಿನ್ನದ ಸರ. ಅದಕ್ಕಾಗಿ ಆತ ತನ್ನನ್ನು ಹಿಂಬಾಲಿಸಿರಲಾರ. ನೋಡೋದಿಕ್ಕೂ ಸ್ಫುರದ್ರೂಪಿ. ಯಾವ ಹುಡುಗಿಯಾದರೂ ಸುಲಭವಾಗಿ ಅವನ ಬಲೆಗೆ ಬೀಳಬಹುದು. ತನ್ನನ್ನು ಆತನ ಬಲೆಗೆ ಬೀಳಿಸಲು ಅನುಸರಿಸಿ ಬಂದಿರಬಹುದೆ? ಸ್ವರ ಒಮ್ಮೆ ಸುತ್ತಲೂ ದೃಷ್ಟಿ ಹೊರಳಿಸಿದಳು. ಆ ಬೋಗಿಯಲ್ಲಿ ಅಷ್ಟೊಂದು ಜನರಿರಲಿಲ್ಲ. ರೈಲು ಹೊರಡುವವರೆಗೆ ಅವಳಿಗೆ ಆತಂಕವೇ ಇತ್ತು.ರೈಲು ಮತ್ತೊಮ್ಮೆ ಶಿಳ್ಳೆ ಹೊಡೆದು ನಿಧಾನಕ್ಕೆ ಚಲಿಸಲಾರಂಭಿಸಿತು. ಸ್ವರ ಸಮಾಧಾನದ ಉಸಿರು ದಬ್ಬಿದಳು. ಚೀಲದಲ್ಲಿದ್ದ ವಾರಪತ್ರಿಕೆಯೊಂದನ್ನು ತೆಗೆದು ತಿರುವಿ ಹಾಕಲಾರಂಭಿಸಿದಳು.ರೈಲು ಮೆಲ್ಲಗೆ ಕುಲುಕುತ್ತಾ ವೇಗವನ್ನು ಪಡೆಯಲಾರಂಭಿಸಿತು. ತಟ್ಟನೆ ಆತ ಅವಳ ದೃಷ್ಟಿಗೆ ಗೋಚರಿಸಿದ! ಒಂದೊಂದೇ ಬೋಗಿಯ ಕಡೆಗೆ ಕತ್ತು ಉದ್ದ ಮಾಡಿ ನೋಡುತ್ತಿದ್ದ!ಸ್ವರ ಪಕ್ಕನೆ ಮುಖಕ್ಕೆ ಪುಸ್ತಕವನ್ನು ಅಡ್ಡ ಹಿಡಿದಳು. ಅವಳಿಗರಿವಿಲ್ಲದಂತೆ ಅವಳೆದೆ ಢವ ಢವ ಬಡಿಯಲಾರಂಭಿಸಿತು. ರೈಲು ವೇಗ ಪಡೆದುಕೊಂಡಾಗಲೊಮ್ಮೆ ನೆಮ್ಮದಿಯೆನಿಸಿತು. ಮತ್ತೆ ಪುಸ್ತಕ ತೆರೆದು ಅದರಲ್ಲಿಯ ಧಾರಾವಾಹಿಯೊಂದನ್ನು ಓದಲಾರಂಭಿಸಿದಳು.ಪುಸ್ತಕ ಓದುವುದರಲ್ಲಿ ಮುಳುಗಿದ್ದವಳಿಗೆ ಹತ್ತಿರ ಬಂದು ಕುಳಿತವರನ್ನು ಕೂಡ ಗಮನಿಸಿರಲಿಲ್ಲ."ಎಕ್ಸ್ ಕ್ಯೂಸ್ ಮಿ, ಪುಸ್ತಕ ಚೆನ್ನಾಗಿದೆಯಾ?" ಅದೇ ಮಲೆಯಾಳಂ ಮಿಶ್ರಿತ ಕನ್ನಡದಲ್ಲಿ ಕೇಳಿದ ಯುವಕನತ್ತ ಮುಖ ಹೊರಳಿಸಿದಳು.ಹಿಂಬಾಲಿಸಿ ಬಂದಿದ್ದ ಅಪರಿಚಿತ ಚೆಲುವ!ಕಣ್ಣುಗಳನ್ನು ಅಗಲಕ್ಕೆ ತೆರೆದು ಬಾಯಿಗೆ ಕೈ ಅಡ್ಡ ಹಿಡಿದಳು."ಶ್! ಕಿರುಚಿಕೊಳ್ಬೇಡಿ........ ನಾನೇನು ನಿಮ್ಮನ್ನು ಮಾಡೋದಿಲ್ಲ" ತಗ್ಗಿದ ದನಿಯಲ್ಲಿ ಹೇಳಿದ.ಅವಳು ಅತ್ತಿತ್ತ ಕತ್ತು ಹೊರಳಿಸಿ ಹೆದರುತ್ತಲೇ ಕಿಟಕಿಯ ಬದಿಗೆ ಸರಿದಳು."...... ನಿಮ್ಮಿಂದ ನನಗೊಂದು ಉಪಕಾರವಾಗ್ಬೇಕು"ಹೆದರಿದ ಹುಡುಗಿ ಆಶ್ಚರ್ಯದ ನೋಟ ಬೀರಿದಳು."ನಿಮ್ಮನ್ನೆ ಕೇಳ್ತಾ ಇರೋದು, ನೀವು ಶೋರ್‍‍ನೂರ್‍‍ಗೆ ಟಿಕೇಟ್ ತೆಗೆದಿದ್ದೀರಿಂತ ಗೊತ್ತು" ಮಾತು ನಿಲ್ಲಿಸಿ ಹಿಂದೆ ತಿರುಗಿ ನೋಡಿದ.ತನ್ನ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದಾನೆ ಅಪರಿಚಿತ! ಅವನ್ಯಾಕೆ ತನ್ನನ್ನು ಹಿಂಬಾಲಿಸುತ್ತಿದ್ದಾನೆ? ಅರ್ಥವಾಗದ ಪ್ರಶ್ನೆ ತಲೆ ಕೊರೆಯುತ್ತಿತ್ತು.ಆತ ತಟ್ಟನೆ ಎದ್ದು ನಿಂತ. ಅವನ ಕಣ್ಣುಗಳಲ್ಲಿ ಅದೇನೋ ಭೀತಿ ತುಂಬಿದಂತಿತ್ತು."ಅವರು ಬರ್‍ತಿದ್ದಾರೆ..... ಮತ್ತೆ ಭೇಟಿಯಾಗ್ತೀನಿ" ತಗ್ಗಿದ ದನಿಯಲ್ಲಿ ಹೇಳಿ ಸರಸರನೆ ಮುಂದಿನ ಬೋಗಿಗೆ ನಡೆದ.ಸ್ವರ ಅವನು ಹೋದ ನಂತರ ಹಿಂದೆ ತಿರುಗಿ ನೋಡಿದಳು. ಟಿ.ಸಿ. ಟಿಕೇಟುಗಳನ್ನು ಪರಿಶೀಲಿಸುತ್ತಿದ್ದ.ಅಂದರೆ, ಅಪರಿಚಿತ ಟಿಕೇಟ್ ಇಲ್ಲದೆ ಪ್ರಯಾಣಿಸುತ್ತಿದ್ದಾನೆ? ಹಾಗಾದರೆ ಟಿಕೇಟ್ ಖರೀದಿಸುವಾಗ ತನ್ನ ಹಿಂದೆ ನಿಂತಿದ್ದೇಕೆ? ಮನಸ್ಸಿನಲ್ಲಿ ಮೂಡಿದ್ದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ಅಪರಿಚಿತ ಬಾರಿ ಖದೀಮನೆ ಇರಬೇಕು! ಇದು ತನಗೊಳ್ಳೆ ಗ್ರಹಚಾರ!ಸಣ್ಣ ಸ್ಟೇಷನ್ ಬರುತ್ತಲೇ ರೈಲು ನಿಂತಿತು. ಚಹಾ, ತಿಂಡಿ ಮಾರುವವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅತ್ತಿತ್ತ ಕೂಗು ಹಾಕಿಕೊಂಡು ಹೋಗುತ್ತಿದ್ದರು.ರೈಲು ಹೊರಡುವ ಸೂಚನೆ ನೀಡಿತು. ದಪ್ಪ ತುಟಿಯ ದಾಂಡಿಗನೊಬ್ಬ ಸ್ವರಳ ಎದುರಿಗಿನ ಸೀಟಿನಲ್ಲಿ ಕುಳಿತ. ಅವನ ನೋಟ ವಿಚಿತ್ರವಾಗಿತ್ತು! ಸ್ವರ ಅವನ ನೋಟ ಎದುರಿಸಲಾರದೆ ಪುಸ್ತಕದ ಕಡೆಗೆ ಗಮನ ಹರಿಸಿದಳು. ಪುಸ್ತಕದ ಎಡೆಯಿಂದ ಮೆಲ್ಲನೆ ದಪ್ಪ ತುಟಿಯ ವ್ಯಕ್ತಿಯತ್ತ ನೋಟ ಬೀರಿದಳು. ಆತನ ದೃಷ್ಟಿ ಸೂಟ್‍ಕೇಸ್‍ನ ಕಡೆಗಿತ್ತು. ಪುಸ್ತಕವನ್ನು ಮುಖದಿಂದ ಹೊರಳಿಸಿ ಆತನೆಡೆಗೆ ನೋಡಿದಳು.ಆತ ತೋರು ಬೆರಳು ಮುಂದೆ ತಂದು ಸೂಟ್‍ಕೇಸಿನತ್ತ ತೋರಿಸಿದ. ಅರ್ಥವಾಗದೆ ಕಾಲಿನ ಬಳಿಯಿದ್ದ ಸೂಟ್‍ಕೇಸ್‍ನ್ನು ಬಗ್ಗಿ ನೋಡಿದಳು."ಏಯ್ ಹುಡುಗಿ, ಅದು ಯಾರ್‍ದು?" ಗೊಗ್ಗರು ದನಿ ಹೊರ ಬಂತು."ನನ್ನ ..... ನನ್ನದೆ....." ದನಿಯಲ್ಲಿ ಕಂಪನವಿತ್ತು. ಸೂಟ್‍ಕೇಸ್‍ನ್ನು ಸರಿಸಿ ಕಾಲಿನ ಬಳಿ ಇರಿಸಿಕೊಂಡಳು.ಏಕಾಏಕಿ ಅವನ ದೃಷ್ಟಿ ಅವಳ ಬಳಿಯಿದ್ದ ಕಪ್ಪಗಿನ ಚರ್ಮದ ಚೀಲದ ಕಡೆಗೆ ಹೊರಳಿತು. ಆತನನ್ನು ಗಮನಿಸಿದವಳು, ಆತ ಕೇಳುವ ಮೊದಲೇ, "ಇದೂ ನನ್ನದೇ........" ಎಂದು ಅದರ ಕೈಯನ್ನು ಹೆಗಲಿಗೇರಿಸಿದಳು.ಮತ್ತೊಬ್ಬ ಎತ್ತರ ನಿಲುವಿನ ವ್ಯಕ್ತಿ ದಪ್ಪ ತುಟಿಯ ವ್ಯಕ್ತಿಯ ಬಳಿ ಕುಳಿತು ಸ್ವರಳತ್ತ ನೋಡಿದ. ಸ್ವರಳಿಗೆ ಮೂರನೆಯ ವ್ಯಕ್ತಿ ಅಲ್ಲಿರುವುದರಿಂದ ತುಸು ಧೈರ್ಯ ಬಂತು."ಏನಂತೆ ಗುರು? ಹಕ್ಕಿಗೇನು ಗೊತ್ತಿಲ್ವಂತೆಯಾ?"ಎತ್ತರ ನಿಲುವಿನ ವ್ಯಕ್ತಿ ದಾಂಡಿಗ ಗೆಳೆಯ!ತಳೆದುಕೊಂಡ ಧೈರ್ಯವೆಲ್ಲಾ ಗಾಳಿಗೆ ತೂರಿ ಹೋಯಿತು. ಇಬ್ಬರೂ ತನ್ನ ಮೇಲೆ ಆಕ್ರಮಣ ಮಾಡಲಿದ್ದಾರೆ! ಅವಳ ದೃಷ್ಟಿ ಸರಪಳಿಯ ಕಡೆಗೆ ಹರಿಯಿತು. ತನ್ನ ಮೇಲೆ ಆಕ್ರಮಣ ಮಾಡುತ್ತಲೇ ಎಷ್ಟು ವೇಗವಾಗಿ ಅದನ್ನು ಎಳೆಯಬೇಕೆಂದು ಅವಳ ಮನಸ್ಸು ಲೆಕ್ಕ ಹಾಕಿತು. ಆದರೆ......... ಅದನ್ನು ಎಳೆಯುವ ಧೈರ್ಯ ತನಗಿದೆಯ? ಸರಪಳಿ ಎಳೆದ ಕೂಡಲೇ ರೈಲು ನಿಲ್ಲುತ್ತೆ.... ಕಳ್ಳರು ಹಾರಿ ಹೋಗುತ್ತಾರೆ. ಉಳಿದವರೆಲ್ಲಾ ತನ್ನನ್ನೇ ಬೆಟ್ಟು ಮಾಡಿ ತೋರಿಸುತ್ತಾರೆ...... ಅನಗತ್ಯವಾಗಿ ತಾನು ಸರಪಳಿ ಎಳೆದೆನೆಂದು ಪೊಲೀಸರ ಆತಿಥ್ಯ ಪಡೆಯಬೇಕಾಗುತ್ತದೆ...."ಪೈರಾ, ನಾನಿನ್ನು ಕೇಳ್ಲಿಲ್ಲಾ""ಇನ್ನು ತಡ ಮಾಡೋದು ಬೇಡ. ಮುಂದಿನ ಸ್ಟೇಷನ್ ಬರುತ್ತಲೇ ಎಲ್ಲಾ ಮುಗಿಬೇಕು" ಎತ್ತರದ ವ್ಯಕ್ತಿ ಆತುರ ತೋರಿಸಿದ."ಏಯ್ ಹುಡುಗಿ, ನಿಜ ಹೇಳ್ಬಿಡು..... ಆ ಚಂದದ ಹುಡುಗ ಇಲ್ಲಿಗೆ ಬಂದಿದ್ನಾ?"ಸ್ವರಳಿಗೆ ಆಶ್ಚರ್ಯವಾಯಿತು. ಈ ಇಬ್ಬರೂ, ಅಪರಿಚಿತ ಚೆಲುವನ ಬೆನ್ನಟ್ಟಿ ಬಂದವರು? ಚೆಲುವ ತನ್ನ ಹಿಂದೆ ಬಿದ್ದಿದ್ದನ್ನು ಅವರು ಗಮನಿಸಿರಬೇಕು. ಅದಕ್ಕಾಗಿ ತನ್ನನ್ನೇ ಪ್ರಶ್ನಿಸುತ್ತಿದ್ದಾರೆ."ಗೊತ್ತಿಲ್ಲ.... ಯಾರು? ...... ನಾನು ಯಾರನ್ನು ನೋಡಿಲ್ಲ" ತಟ್ಟನೆ ನಾಲಿಗೆ ಹೊರಳಿಸಿ ಅಮಾಯಕಳಂತೆ ನುಡಿದಳು."ಏಯ್, ನಮ್ಮತ್ರ ಎಲ್ಲಾ ನಾಟ್ಕ ಮಾಡ್ಬೇಡ. ಆ ಮುದ್ದು ಕೃಷ್ಣ ಇಲ್ಲಿಗೆ ಬಂದ್ರೆ .... ನಾವ್ ಬಂದಿದ್ದು ತಿಳಿಸ್ಬೇಡ"ಇಬ್ಬರೂ ಎದ್ದು ಹೋದುದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದಳು ಸ್ವರ. ತಾನೇಕೆ ಇಕ್ಕಟ್ಟಿನಲ್ಲಿ ಸಿಲುಕಿಕೊಂಡೆ? ಎದ್ದು ಬೇರೆ ಕಡೆಗೆ ಹೋಗೋಣವೆಂದರೆ ಎಲ್ಲಾ ಸೀಟಿನಲ್ಲಿಯೂ ಗಂಡಸರೇ! ಏನೋ ಒಣ ಧೈರ್ಯದಿಂದ ಅಲ್ಲೇ ಕುಳಿತುಕೊಳ್ಳುವ ನಿರ್ಧಾರ ತಳೆದಳು. ಇನ್ನು ಅವರ್‍ಯಾರು ಬರಲಾರರು. ತಲೆ ಚಿಟ್ಟು ಹಿಡಿದಂತಾಯಿತು. ಪುಸ್ತಕ ಸೀಟಿಗೆ ಎಸೆದು ತಲೆಗೆ ಕೈ ಹಚ್ಚಿಕೊಂಡಳು."ಗರಂ ಗರಂ ... ಚಾಯ್ .... ಯಾರಿಗೆ ಬೇಕು ಚಾಯ್..." ಚಹಾದ ಹುಡುಗನ ಕೂಗು ಕೇಳುತ್ತಲೇ ಪರ್ಸ್‍ನಿಂದ ಹಣ ತೆಗೆದು ತಿರುಗಿದಳು.ಬಿಳಿಯ ಪ್ಲಾಸ್ಟಿಕ್ ಕಪ್‍ನಲ್ಲಿ ಚಹಾ ಹಿಡಿದು ನಿಂತಿದ್ದ ಮುದ್ದು ಕೃಷ್ಣ!"ನೀವು ತುಂಬಾ ಚಿಂತಿತರಂತೆ ಕಾಣ್ತಾ ಇದ್ದೀರಿ. ಅದನ್ನು ಗಮನಿಸಿಯೇ ನಾನು ಚಹಾ ತಂದಿದ್ದು" ಮುಗುಳ್ನಗುತ್ತಾ ಚಹಾದ ಲೋಟ ಮುಂದೆ ಹಿಡಿದ.ಚಹಾದ ಹುಡುಗ ಬಂದನೆಂದರೆ ಚೆಲುವ!"ಬೇಡ" ನಿರಾಕರಿಸಿದವಳಿಗೆ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಚೆಲುವನ ಮೇಲೆ ಸಿಟ್ಟಿತ್ತು."ನಿರಾಕರಿಸ್ಬೇಡಿ..... ನಿಮ್ಮ ತಲೆ ಸಿಡಿತ ದೂರವಾಗಿ ನೆಮ್ಮದಿ ಅನಿಸ್ಬೋದು""ನೀವು ನನ್ನ ನೆಮ್ಮದಿಯನ್ನು ಹಾಳು ಮಾಡಿ ಬಿಟ್ರಿ" ಸಿಟ್ಟಿನಲ್ಲಿ ಬಂದ ಮಾತುಗಳಿಗೆ ಮುಗುಳ್ನಕ್ಕ."ಮೊದ್ಲು ಇದನ್ನು ಕುಡಿದು ಬಿಡಿ... ಆರಿ ಹೋಗುತ್ತೆ. ನನ್ನ ಮೇಲಿನ ಸಿಟ್ಟನ್ನು ಚಹಾದ ಮೇಲೆ ತೋರಿಸ್ಕೊಳ್ಬೇಡಿ"ಆತ ಒತ್ತಾಯಿಸುವಂತೆ ಲೋಟ ಮುಂದೆ ಹಿಡಿದಾಗ ಕೈ ಮುಂದೆ ಚಾಚಿ ನಿಧಾನಕ್ಕೆ ಚಹಾ ಹೀರಿದಳು........ ನೆಮ್ಮದಿಯೆನಿಸಿತು."ನೀವು ಶೋರ್‍‍ನೂರಿಗೆ ಹೋಗ್ತಾ ಇದ್ದೀರಿ?" ಆತನ ಪ್ರಶ್ನೆಗೆ ತಟ್ಟನೆ ಮುಖವೆತ್ತಿದಳು."ಗೊತ್ತಿದ್ದು ಪದೇ ಪದೇ ನೀವು ಅದನ್ನೇ ಕೇಳ್ತಾ ಇದ್ದೀರಿ" ಸಿಡುಕಿನಿಂದ ಬಂದ ಉತ್ತರಕ್ಕೆ ಚೆಲುವ ಉಗುಳು ನುಂಗಿಕೊಂಡ."ಗೊತ್ತಿದೆ ...... ಅದನ್ನು ದೃಢಪಡಿಸಿಕೊಳ್ಳೋದಿಕ್ಕೆ ಕೇಳಿದೆ" ತಡವರಿಸುತ್ತಾ ನಗುವಿನಿಂದಲೇ ಹೇಳಿದ.
"ನೀವ್ಯಾಕೆ ನನ್ನ ಹಿಂದೆ ಬಿದಿದ್ದೀರಾ?" ಅವಳ ಪ್ರಶ್ನೆಯಲ್ಲಿ ನೋವಿನ ಛಾಯೆಯಿತ್ತು."ನಾನೆಲ್ಲಿ ನಿಮ್ಮ ಹಿಂದೆ ಬಿದಿದ್ದೇನೆ? ನಿಮ್ಮ ಎದುರಿಗೆ ಕುಳಿತಿದ್ದೀನಿ ಅಷ್ಟೆ"ಪರಿಸ್ಥಿತಿಯನ್ನು ತಿಳಿಗೊಳಿಸಲು ತೂಗಿ ಪದಗಳನ್ನು ಬಳಸಿದ. ಅವಳಿಂದ ನಿಟ್ಟುಸಿರೊಂದು ಹೊರಟಿತು."ನೀವ್ಯಾರು? ನನ್ನಿಂದ ನಿಮಗೇನಾಗ್ಬೇಕು? ಆ ದಾಂಡಿಗರು ಬೇರೆ ನನ್ನ ಹಿಂದೆ ಬಿದ್ದಿದಾರೆ... ನಿಮ್ಮ ಬಗ್ಗೆ ಕೇಳಿದ್ರು"ಆತನ ಮುಖ ಪೇಲವವಾಯಿತು."ಅವರು ಇಲ್ಲಿಗೆ ಬಂದಿದ್ರಾ? ನಿಮ್ಮನ್ನು ವಿಚಾರಿಸಿದ್ರಾ?""ಹೌದು, ಮುದ್ದು ಕೃಷ್ಣ ಇಲ್ಲಿಗೆ ಬಂದ್ರೆ ನಾವು ಬಂದಿದ್ದು ತಿಳಿಸ್ಬೇಡ ಅಂದ್ರು" ಮಾತುಗಳನ್ನು ಹೇಳಿ ತುಟಿ ಕಚ್ಚಿಕೊಂಡಳು."ಹಾಗಂದ್ರಾ?" ಆತನ ಮುಖದಲ್ಲಿ ಭೀತಿಯ ನೆರಳು ಹಾಗೇ ಇತ್ತು."ಮುದ್ದು ಕೃಷ್ಣ, ನಾನು ನಿಮನ್ನು ಗಮನಿಸ್ತಾ ಇದ್ದೀನಿ...... ನೀವ್ಯಾಕೆ ನನ್ನ ಹಿಂದೆ ಬಿದ್ದಿದ್ರಾ?"ತಟ್ಟನೆ ಅವನ ಮುಖದಲ್ಲಿದ್ದ ಭೀತಿಯ ನಡುವೆಯೂ ನಗು ಸುಳಿಯಿತು."ನನ್ನ ಹೆಸರು ಮುದ್ದು ಕೃಷ್ಣ ಅಲ್ಲ. ಉನ್ನಿಕೃಷ್ಣನ್ ...... ನಿಮ್ಮಿಂದ ನನಗೊಂದು ದೊಡ್ಡ ಉಪಕಾರವಾಗ್ಬೇಕು?" ಮಾತಿನ ಕೊನೆಯಲ್ಲಿ ಯಾಚನೆಯ ದನಿಯಿತ್ತು."ಆಗೊಮ್ಮೆ ಇದೆ ಮಾತನ್ನು ಹೇಳಿದ್ರಿ. ಗಿಡುಗನ ತರಹ ಹಾರಿ ಹೋದ್ರಿ. ನನ್ನಿಂದ ಏನು ಉಪಕಾರವಾಗ್ಬೇಕು?"ಆಲೋಚನೆಯ ಆಳಕ್ಕಿಳಿದಂತಿತ್ತು ಮುಖ. ಅವಳ ಕತ್ತಿನ ಬಳಿಗೆ ದೃಷ್ಟಿ ಹೊರಳಿತು. ಕಣ್ಣು ಪಕ್ಕನೆ ಅವಳ ಕಾಲಿನ ಗೆಜ್ಜೆಯ ಬಳಿ ಹರಿಯಿತು. ಸ್ವರ ಅವನನ್ನೇ ಗಮನಿಸುತ್ತಿದ್ದಳು."ಚೆನ್ನಾಗಿದೆ" ಆಲೋಚನೆಯಿಂದ ಹೊರಗೆ ಬಂದವನು ಮೆಚ್ಚುಗೆಯ ಮಾತು ಹೊರಳಿಸಿದ."ಏನು ಚೆನ್ನಾಗಿದೆ? ನಿಮ್ಮ ತಲೆ..." ಅವಳು ಪಾದ ಮುಚ್ಚುವಂತೆ ಸೀರೆಯನ್ನು ಎಳೆದುಕೊಂಡು ಕುಳಿತು, "ನನ್ನಿಂದ ಉಪಕಾರವಾಗ್ಬೇಕೂಂತ ಕೇಳಿದ್ರಿ, ಏನದು?" ಕುತೂಹಲದಿಂದ ಮುಂದುವರಿಸಿದಳು."ಚೆನ್ನಾಗಿರೋದು ನಿಮ್ಮ ಮಾತು. ಗಿಡುಗ ಅಂದ್ರಿ.... ಪಾರಿವಾಳವನ್ನು ಹೇಗೆ ಹಾರಿಸ್ಕೊಂಡು ಹೋಗೋದೂಂತ ಕಾಯ್ತಾ ಇದ್ದೀನಿ"ಅವನ ಮಾತಿಗೆ ತಟ್ಟನೆ ತುಟಿ ಕಚ್ಚಿಕೊಂಡಳು. ಯುವಕ ತನ್ನ ಹಿಂದೆ ಬಿದ್ದಿದ್ದು ಅವನ ಬಲೆಯೊಳಗೆ ಬೀಳಿಸಲು!"ನೀವು ಏನೇನೋ ಮಾತಾಡಿದ್ರೆ ಕಿರುಚಿಕೊಳ್ತೀನಿ" ಎಚ್ಚರಿಕೆ ಮಾತುಗಳನ್ನು ಹೇಳಿ ಅವನನ್ನು ಇರಿಯುವಂತೆ ನೋಡಿದಳು."ಕ್ಷಮಿಸಿ ಬಿಡಿ" ಕೈಗಳೆರಡನ್ನು ಜೋಡಿಸಿದ."ದಯವಿಟ್ಟು ಶೋರ್‍‍ನೂರ್ ವರೆಗೆ ಆಸರೆ ನೀಡಿ""ಆಸರೇನಾ...? ನಾನಾ...? ಏನಿದು ಒಳ್ಳೆ ತಮಾಷೆಯಾಗಿದೆ?""ಹೌದು, ಆಸರೆ ನೀಡೀಂದೆ .... ನನಗಲ್ಲ......"ಅವನ ಮಾತಿನಲ್ಲಿ ತುಂಟತನವಿರಲಿಲ್ಲ. ಗಂಭೀರವಾಗಿಯೇ ಇದ್ದ."ಅಂದ್ರೆ?""ಅಂದ್ರೆ ಶೋರ್‍‍ನೂರ್ ಇಳಿದ ಕೂಡಲೇ ಹೇಳ್ತೀನಿ. ಅಲ್ಲಿಯವರೆಗೆ ನಾನು ನಿಮ್ಮ ಎದುರಿಗೆ ಕುಳಿತಿರ್‍ತೀನಿ""ನೀವು ಟಿಕೇಟ್ ಇಲ್ಲದೆ ಪ್ರಯಾಣಿಸ್ತಿದ್ದೀರಿ?" ಹುಬ್ಬುಗಳನ್ನು ಹತ್ತಿರ ತಂದು ಪ್ರಶ್ನಿಸಿದಳು."ಇಲ್ಲ" ಪರ್ಸಿನಿಂದ ಟಿಕೇಟ್ ತೆಗೆದು ತೋರಿಸಿದ. ಅವಳ ದೃಷ್ಟಿ ಟಿಕೇಟ್‍ನ ಮೇಲಿತ್ತು. ಬೋಗಿ ಸಂಖ್ಯೆ ಸಾಮಾನ್ಯ ನಾಲ್ಕು! ಅಂದರೆ ತನ್ನದೇ ಬೋಗಿಯಲ್ಲಿ ಟಿಕೇಟು ಖರೀದಿಸಿದ್ದಾನೆ!"ಮತ್ಯಾಕೆ ಟಿ.ಸಿ. ಬರುವಾಗ ಹಾರಿ ಹೋದ್ರಿ?""ಹಾರಿ ಹೋದ್ನಾ? ಇಲ್ಲಾ... ಇಲ್ಲೇ ಬಾಗಿಲ ಬಳಿ ನಿಂತಿದ್ದೆ" ಮುಖದಲ್ಲಿ ನಗು ತಂದುಕೊಂಡು ಹೇಳಿದ."ಉನ್ನಿಕೃಷ್ಣನ್, ಆ ದಾಂಡಿಗರೇಕೆ ನಿಮ್ಮನ್ನು ಹಿಂಬಾಲಿಸ್ಕೊಂಡು ಬಂದಿದ್ರು?""ದಾಂಡಿಗರು ನನ್ನ ಹಿಂಬಾಲಿಸಿ ಬಂದಿದ್ರಾ? ನಾನಾಗಿದ್ರೆ ನಿಮ್ಮನ್ನು ಹಿಂಬಾಲಿಸಿ ಕೊಂಡು ಬಂದಿದ್ದು ಹೌದು""ಯಾಕೆ?" ತಟ್ಟನೆ ಅವನ ಮಾತಿಗೆ ಪ್ರತಿಕ್ರಿಯಿಸಿದಳು."ಶೋರ್‍‍ನೂರ್‍‍ನಲ್ಲಿ ನನ್ನ ತಾತನಿಗೆ ಆಸ್ತಿಯಿದೆ""ಉನ್ನಿ ಕೃಷ್ಣನ್, ನೀವು ಮಾತು ಬೇರೆ ಕಡೆಗೆ ತಿರುಗಿಸ್ತೀದ್ದೀರಿ""ಇಲ್ಲ""ನೀವ್ಯಾಕೆ ನನ್ನ ಹಿಂದೆ ಬಿದ್ದೀದೀರಿ?""ಅದನ್ನೇ ಹೇಳ್ತಾ ಇದ್ದೆ. ನೀವು ತುಂಬಾ ಚೆಲುವೆ .... ನಿಮ್ಮ ಗುಂಗುರು ಕೂದಲು ನೋಡಿಯೇ ನೀವು ಮಲ್ಲು ಅಂದ್ಕೊಂಡೆ"ಅವನ ಮಾತು ಹಾದಿ ತಪ್ಪುತಿದೆಯೆನಿಸಿತು. ಮೂಗಿನ ಹೊಳ್ಳೆಗಳನ್ನು ಅರಳಿಸಿದಳು. ಆತ ನಾಲಗೆ ಕಚ್ಚಿಕೊಂಡ."ಕ್ಷಮಿಸಿ, ನೀವು ಮಲ್ಲು ತಾನೆ? ಅದಕ್ಕೆ ನಿಮ್ಮ ಮೇಲೆ ವಿಶ್ವಾಸವಿಟ್ಟಿದ್ದೀನಿ""ಏನೋ ವಿಚಿತ್ರವಾಗಿ ಮಾತನಾಡ್ತಾ ಇದ್ದೀರಿ. ನೇರವಾಗಿ ವಿಷಯ ಹೇಳ್ಬಿಡಿ""ನಿಮ್ಮ ಹೆಸ್ರು ಕೇಳಿಲ್ಲಾ?""ಸ್ವರ""ಬ್ಯೂಟಿಪುಲ್"ರೈಲು ಏಕಾಏಕಿ ನಿಂತಿತು.
"ಒಂದ್ನಿಮಿಷ ಇರಿ, ಬಂದೆ" ಎದ್ದು ಬಾಗಿಲ ಕಡೆಗೆ ಬಂದು ಇಣುಕಿದ.ಮತ್ತೊಮ್ಮೆ ಅತ್ತಿತ್ತ ದೃಷ್ಟಿ ಹೊರಳಿಸಿ ಅವಳ ಎದುರಿಗೆ ಬಂದು ಕುಳಿತ."ಸಿಗ್ನಲ್ ಸಿಕ್ಕಿಲ್ಲ. ಅದಕ್ಕೆ ನಿಂತು ಬಿಡ್ತು""ಮುಂದೆ ಇರೋದು ಯಾವ ಸ್ಟೇಷನ್?""ಓಹೋ.... ನಿಮಗೆ ಗೊತ್ತಾಗ್ಲಿಲ್ಲಾನ್ನಿ. ಅಂದ್ರೆ ನೀವು ಇಲ್ಲಿಗೆ ಬರೋದು ಅಪರೂಪಾನ್ನಿ""ಹೌದು, ವರ್ಷಕ್ಕೊಮ್ಮೆ ಬರೋದು" ಹೇಳಿ ತುಟಿ ಕಚ್ಚಿಕೊಂಡಳು. ಅವನ ಹತ್ತಿರ ಏನು ಖಾಸಗಿ ಮಾತು?"ಇನ್ನು ಬರೋದು ಶೋರ್‍‍ನೂರ್""ಶೋರ್‍‍ನೂರ್!" ಉದ್ಗರಿಸಿ ಪುಸ್ತಕವನ್ನು ಬ್ಯಾಗ್‍ಗೆ ಸೇರಿಸಿದಳು. ಸೂಟ್‍ಕೇಸ್‍ನ್ನು ಮುಂದಕ್ಕೆಳೆದು ಇಳಿಯಲು ತಯಾರಾದಳು.ಸಿಗ್ನಲ್ ಸಿಕ್ಕಿದಂತೆ ರೈಲು ಮೆಲ್ಲಗೆ ಚಲಿಸಲಾರಂಭಿಸಿತು.ಸ್ವರ ಬಾಗಿಲ ಬಳಿ ಬರುವಾಗ ಉನ್ನಿ ಕೃಷ್ಣನ್ ಇಳಿದು ಹೋಗಿದ್ದ!ನೆಮ್ಮದಿಯ ನಿಟ್ಟುಸಿರು ಬಿಟ್ಟವಳು, ರೈಲು ನಿಲ್ಲುತ್ತಲೇ ರೈಲ್ವೆ ಸ್ಟೇಷನ್‍ನಿಂದ ಹೊರಗೆ ಬಂದು ನಿಂತಳು.ಯಾವುದೋ ಅಟೋಗಳು ಖಾಲಿಯಾಗಿರಲಿಲ್ಲ. ಸ್ವಲ್ಪ ಮುಂದೆ ನಡೆದರೆ ಅಟೋ ಸ್ಟ್ಯಾಂಡ್ ಸಿಗಬಹುದೆಂದು ಹೆಜ್ಜೆ ಹಾಕಿದಳು.ಕಪ್ಪಗಿನ ಟಾರು ರಸ್ತೆ ಉದ್ದಕ್ಕೂ ಹರಡಿಕೊಂಡಿತ್ತು. ರೈಲ್ವೆ ಸ್ಟೇಷನ್‍ನಿಂದ ಒಂದೊಂದೆ ವಾಹನಗಳು ಹೊರಟು ಹೋಗುತ್ತಿದ್ದವು. ಸೂಟ್‍ಕೇಸು ಹಿಡಿದುಕೊಂಡು ನಡೆಯುವುದು ಪ್ರಯಾಸವೆನಿಸಿತು. ಒಂದು ಕ್ಷಣ ಸೂಟ್‍ಕೇಸ್‍ನ್ನು ಕೆಳಗಿಟ್ಟು ನಿಂತಳು."ಸ್ವರ...... ಸ್ವರ.... ಒಂದ್ನಿಮಿಷ ಇರಿ" ಉನ್ನಿಕೃಷ್ಣನ್ ಓಡಿ ಬರುತ್ತಿದ್ದ. ಏದುಸಿರು ಬಿಡುತ್ತಾ ನಿಂತ."ಏನು ಹುಡುಗೀರಿ ನೀವು. ಪಾರಿವಾಳದ ಹಾಗೇ ಹಾರಿ ಹೋಗ್ತಾ ಇದ್ದೀರಿ""ಮತ್ತಿನ್ನೇನು ಮಾಡ್ಬೇಕ್ಕಿತ್ತು?""ನಂಜೊತೆಗೆ ಬನ್ನಿ" ಅವನ ಮಾತು ಮುಗಿಯುವ ಮೊದಲೇ ಸಿಟ್ಟಿನ ನೋಟ ಬೀರಿದಳು. ಆತನ ಮುಖದಲ್ಲಿ ತುಂಟ ನಗುವಿತ್ತು. ಅವಳು ಸುತ್ತಲೂ ನೋಡಿದಳು."ನೀವೇನು ಹೆದರ್ಬೇಡಿ. ಇಲ್ಲಿಗ್ಯಾರು ಬರೋದಿಲ್ಲ. ಕಾಂಡೋಮ್ ಪ್ಯಾಕೇಟ್ ಇದೆ....." ಅವನ ಮಾತು ಮುಗಿಯುವ ಮೊದಲೇ ಭಯ ಸಿಟ್ಟಿನಿಂದ ಕಂಪಿಸುತ್ತಿದ್ದವಳ ಕೈ ಅವನ ಮುಖಕ್ಕೆ ತಟ್ಟಲಿದ್ದಾಗ ಅಟೋ ಬಂದು ನಿಂತಿತು.ಉನ್ನಿ ಕೃಷ್ಣನ್ ಹಿಂದು ಮುಂದು ನೋಡದೆ ಓಡಲಾರಂಭಿಸಿದ.ಸ್ವರ ಚೀಲಕ್ಕೆ ಕೈ ಹಾಕಿದಾಗ ಪ್ಯಾಕೇಟ್ ಸಿಕ್ಕಿತು. ಹೊರ ತೆಗೆದು ನೋಡಿದವಳಿಗೆ ಅಸಹ್ಯವೆನಿಸಿತು.ಕಾಂಡೋಮ್ ಪ್ಯಾಕೇಟ್!ಅಟೋದಿಂದ ಇಳಿದ ವ್ಯಕ್ತಿಗಳಿಬ್ಬರನ್ನೂ ಗುರುತಿಸಿದಳು. ರೈಲಿನಲ್ಲಿ ಕಂಡ ದಾಂಡಿಗರು!ಒಬ್ಬ ಕುಳ್ಳನೆಯ ದಪ್ಪ ತುಟಿಯ ಧಡಿಯಾ! ಇನ್ನೊಬ್ಬ ಎತ್ತರ ನಿಲುವಿನ ವ್ಯಕ್ತಿ!"ಹಕ್ಕಿ ನಿನ್ನ ರೇಟೆಷ್ಟು?" ಎತ್ತರ ನಿಲುವಿನ ವ್ಯಕ್ತಿ ಅವಳ ಕೈಯಲ್ಲಿದ್ದ ಪ್ಯಾಕೇಟ್‍ನ್ನು ಗಮನಿಸಿ ಕೇಳಿದ.ಸ್ವರ ಅದನ್ನು ಬೀಸಿ ಒಗೆದಳು."ಏ! ಅದೆಲ್ಲಾ ನಮಗೆ ಬೇಡ ಪೈರಾ. ಆ ಹುಡುಗ ಇವಳಿಗೆ ಏನಾದ್ರೂ ಕೊಟ್ನಾ ಕೇಳು""ಏಯ್ ಹುಡುಗಿ, ಆತ ಅಡ್ಡಾದಿಡ್ಡಿ ಓಡಿ ಹೋದ್ನಲ್ಲಾ, ನಿನಗೇನಾದ್ರೂ ಕೊಟ್ನಾ?"ಮೊದಲೇ ಬೆದರಿದವಳು ಇಲ್ಲವೆನ್ನುವಂತೆ ಗೋಣು ಆಡಿಸಿದಳು."ಆತ ಬಾರಿ ಚಾಲಾಕಿ ಹುಡುಗ. ಅವನೆಷ್ಟು ಚೆಲುವನೋ ಅಷ್ಟೇ ಬುದ್ಧಿಯೂ ಇದೆ. ಬಾ ಅವನನ್ನು ಹುಡುಕೋಣ"ಅವರಿಬ್ಬರೂ ಹೋದತ್ತಲೇ ನೋಡುತ್ತಾ ನಿಂತಳು.ಇಲ್ಲಿ ಹೆಚ್ಚು ಹೊತ್ತು ನಿಲ್ಲುವಂತಿಲ್ಲ. ಎರಡು ಹೆಜ್ಜೆ ನಡೆದಿದ್ದಳಷ್ಟೆ. ಎದುರಿಗೆ ಉನ್ನಿಕೃಷ್ಣನ್ ನಿಂತಿದ್ದ!"ಅದನ್ನ ಎಲ್ಲಿ ಹಾಕಿದ್ರಿ?" ಆತನ ಮುಖದಲ್ಲಿ ಗಾಬರಿಯಿತ್ತು.ಅವಳು ಪ್ಯಾಕೇಟ್ ಬಿದ್ದ ಕಡೆಗೊಮ್ಮೆ ನೋಡಿದಳು. ಆತ ತಟ್ಟನೆ ಹಾರಿ ಅದನ್ನು ಕೈಯಲ್ಲಿ ತೆಗೆದುಕೊಂಡ.
"ಕ್ಷಮಿಸಿ, ನೀವು ತಪ್ಪು ತಿಳ್ಕೊಂಡಿದ್ದೀರಿ. ಇದರಲ್ಲಿರೋದು ವಜ್ರದ ಬೆಂಡೋಲೆಗಳು. ಅದಕ್ಕಾಗಿಯೇ ಅವರಿಬ್ಬರೂ ನನ್ನನ್ನು ಮಂಗಳೂರಿನಿಂದ ಹಿಂಬಾಲಿಸಿಕೊಂಡು ಬಂದಿರೋದು. ಅವರಿಬ್ಬರೂ ದಾಯಾದಿಗಳು. ಅವರಿಗೆ ಈ ವಜ್ರದ ಓಲೆಗಳು ನನ್ನ ಬಳಿಯಿದೆಯೆಂದು ಗುಮಾನಿಯಿತ್ತು. ಈ ಬೆಂಡೋಲೆಗಳು ನನ್ನ ಅಜ್ಜಿಯ ಕಿವಿಯಲ್ಲಿದ್ದವುಗಳು. ತಾತನ ಆಸ್ತಿ. ಇದನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ರು. ಈ ವಿಷಯ ಗೊತ್ತಾಗಿ ಅದನ್ನು ಮಾರೋ ಪ್ರಯತ್ನ ಮಾಡಿದ್ರು. ತಾತ ಅದನ್ನು ಕೊಡ್ಲಿಲ್ಲ. ತಾತ ಅದರ ಜವಾಬ್ದಾರಿನ ನನಗೆ ವಹಿಸಿದ್ರು. ನಾನು ಅದನ್ನು ಬ್ಯಾಂಕ್ ಲಾಕರ್‍‍ನಲ್ಲಿಡೋದಿಕ್ಕೆ ತೆಗೆದಿದ್ದೆ. ಶೋರ್‍‍ನೂರ್ ನನ್ನ ತಾತನ ಮನೆ. ಅಲ್ಲಿಗೆ ಹೊರಟಿರೋ ನನ್ನ ಅವರಿಬ್ರೂ ಹಿಂಬಾಲಿಸಿದ್ರು. ಇನ್ನು ಬ್ಯಾಂಕ್‍ಗೆ ಹೋದ್ರೆ ಅವರುಗಳಿಗೆ ಸಂಶಯ ಬರುತ್ತೇಂತ ನಾನು ಮೆಡಿಕಲ್‍ನಿಂದ ಕಾಂಡೋಮ್ ತೆಗೆದುಕೊಂಡು ಆ ಪ್ಯಾಕೇಟ್‍ಲ್ಲಿ ಇದನ್ನು ಸೇರಿಸ್ದೆ. ಅವರಿಗೆ ನನ್ನ ಮೇಲೆ ಬಲವಾದ ಸಂಶಯ ಬಂದು ನನ್ನ ಹಿಂಬಾಲಿಸಿದ್ರು. ನಾನು ಓಡಿಕೊಂಡು ಬಂದು ಬಸ್ಸು ಹತ್ತಿದೆ. ನೀವು ಸಿಕ್ಕಿದ್ರಿ. ನಿಮ್ಮ ಹಿಂದೇನೆ ರೈಲ್ವೆ ಸ್ಟೇಷನ್‍ಗೆ ಬಂದು ಟಿಕೇಟ್‍ಗಾಗಿ ಸರದಿಯಲ್ಲಿ ನಿಂತಿದ್ದಾಗ ತಟ್ಟನೆ ನನಗೆ ಉಪಾಯ ಹೊಳೆಯಿತು. ಕಾಂಡೋಮ್‍ನ ಪ್ಯಾಕೇಟ್‍ನ್ನು ಮೆಲ್ಲನೆ ನಿಮ್ಮ ಕಪ್ಪು ಚರ್ಮದ ಚೀಲಕ್ಕೆ ಸೇರಿಸ್ದೆ. ಅದರಿಂದ ಅದು ಜೋಪಾನವಾಗಿ ಇಲ್ಲಿವರೆಗೂ ಬಂತು. ನಿಮಗೆ ಧ್ಯನವಾದಗಳು"ಅವಳು ಬಿಟ್ಟ ಕಣ್ಣು ಬಿಟ್ಟಂತೆ ನಿಂತಿದ್ದಳು. ವಜ್ರದ ಬೆಂಡೋಲೆಯ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ಅವಳ ಮುಖದ ಮೇಲೆ ಬಿದ್ದಾಗ ಎಚ್ಚೆತ್ತುಕೊಂಡಳು."ಸ್ವರ, ನಾನು ನಿಮಗೆ ಟ್ರೀಟ್ ಕೊಡ್ಬೇಕು ಬನ್ನಿ ನಂಜೊತೆ"ಅವನ ಮಾತಿಗೆ ಸ್ವರಳಿಗೆ ನಗು ಬಂತು. ಅವನನ್ನು ಅಪಾರ್ಥ ಮಾಡಿಕೊಂಡಿದ್ದಕ್ಕಾಗಿ ನೊಂದು ಕೊಂಡಳು."ಉನ್ನಿ ಕೃಷ್ಣನ್, ನನ್ನ ಕ್ಷಮಿಸಿ ಬಿಡಿ. ಇನ್ನೂ ನಿಮಗೆ ಅಪಾಯ ತಪ್ಪಿದ್ದಲ್ಲ""ಅದನ್ನು ನಾನು ನಿಭಾಯಿಸ್ತೀನಿ. ಪೊಲೀಸ್ ಠಾಣೆಯವರೆಗೂ ಸುದ್ದಿ ತಲುಪಿಸಿದ್ದೀನಿ"ವಜ್ರಗಳಿದ್ದ ಪ್ಯಾಕೆಟನ್ನು ಕಿಸೆಗೆ ತೂರಿಸಿಕೊಂಡ.ಪಕ್ಕದಲ್ಲಿದ್ದ ತಂಪು ಪಾನೀಯದ ಅಂಗಡಿಯ ಕಡೆಗೆ ಅವಳ ಜೊತೆಗೆ ಹೆಜ್ಜೆ ಹಾಕಿದ.

Read more!

Tuesday, November 11, 2008

ಖಂಡಿತಾ ಮನುಷ್ಯರನ್ನು ನಂಬಬಹುದು!


ಮನುಷ್ಯನ ಜೀವನದ ಪಯಣದಲ್ಲಿ ಎದುರಾಗುವ, ಎದುರಿಸುವ ನೋವು, ನಲಿವುಗಳ ಮತ್ತು ಅವುಗಳಿಗೊಂದು ಸೂಕ್ಷವಾದ ಪರಿಹಾರವನ್ನು ಕೊಡುವ ಪರಿಶುದ್ಧ ಕಥೆಗಳ ಒಂದು ಪ್ರಾಮಾಣಿಕ ಪ್ರಯತ್ನ ಬಿ. ರಮೇಶ ಭಟ್ಟರ `ಮನುಷ್ಯರನ್ನು ನಂಬಬಹುದು'. ಶಿರೋನಾಮೆಯೆ ಸೂಚಿಸುವಂತೆ ಇಲ್ಲಿಯ ಕಥೆಗಳೆಲ್ಲ ಮನುಷ್ಯ ಸಂಬಂಧಗಳ ಎಳೆಯನ್ನು ಹಿಡಿದು ಸಾಗುವಂಥವುಗಳು. ಬಹಳ ಆತ್ಮೀಯವಾಗಿ ಬಿಡುವ, ನಿನ್ನೆ ಮೊನ್ನೆಯೆಲ್ಲೋ ಕಂಡಂತೆ, ಕೇಳಿದಂತೆ, ಅವು ನಮ್ಮನ್ನು ಆವರಿಸುತ್ತವೆ. ಅಲ್ಲಿಯ ಪಾತ್ರಗಳು ನಿಜಕ್ಕೂ ಜೀವಂತ ಮತ್ತು ನಮಗೆ ಪರಿಚಿತ ಅನ್ನುವಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವ ಬೀರುತ್ತವೆ. `ಯಾರನ್ನೂ ನಂಬಬಾರದು' ಅಂದುಕೊಳ್ಳುತ್ತಲೇ ನಾವು ಎಲ್ಲರನ್ನೂ ನಂಬುತ್ತೇವೆ ಮತ್ತು ನಂಬಲೇ ಬೇಕಾಗುತ್ತದೆ, ಇಲ್ಲಿಯ ಕಥೆಗಳ ಹಾಗೆ.
ಸಂಕಲನದ ಮೊದಲ ಕಥೆ `ಮನುಷ್ಯರನ್ನು ನಂಬಬಹುದು', ಒಬ್ಬ ಮನುಷ್ಯನಿಗೆ, ಒಂದು ಅಪರಿಚಿತ ಸ್ಥಳದಲ್ಲಿ ತನ್ನ ಮುಂದಿನ ಪ್ರಯಾಣಕ್ಕೆ ಅನಾನುಕೂಲವಾಗಿ ಅಲ್ಲಿ ಆತನಿಗೆ ಎದುರಾಗುವ ಪರಿಸ್ಥಿತಿಯನ್ನು ಈ ಕಥೆ ಚಿತ್ರಿಸುತ್ತದೆ. ಅಸಾಹಯಕ ಮನುಷ್ಯ ಗಮ್ಯ ತಲುಪುವಲ್ಲಿ ಅವನಿಗಿರುವ ಆತಂಕ ಮತ್ತು ಆ ಸಮಯದಲ್ಲಿ ಯಾವುದೋ ದೂರದ ಸಂಬಂಧವೊಂದನ್ನು ಹೇಳಿಕೊಂಡು ಸಹಾಯ ಯಾಚಿಸುವ ಸ್ಥಿತಿ, ಅನಾಥರಾಗುವ ಪ್ರಜ್ಞೆ, ಯಾರಾದರೂ ಸಹಾಯ ಮಾಡಿಯಾರೆಂಬ ಧನಾತ್ಮಕ ಚಿಂತನೆ, ಹಾಲಾಡಿಯ ಉಡುಪರ ಮೂಲಕ ತೆರೆದುಕೊಳ್ಳುತ್ತದೆ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಶ್ರೀನಿವಾಸ, ಸಹಾಯವನ್ನು ನಿರಾಕರಿಸುವಾಗ ಕಥಾ ನಾಯಕ, ಮನುಷ್ಯ ಮನುಷ್ಯರನ್ನು ನಂಬಲಿಕ್ಕಾಗದ ಕಾಲದಲ್ಲೂ ಅವನ ಸಹಾಯಕ್ಕೆ ನಿಲ್ಲುತ್ತಾನೆ. ಮುಂದೆ ಉಡುಪರು ಅವನಿಂದ ಪಡೆದ ಎಲ್ಲಾ ಸಹಾಯವನ್ನೂ ಪದೇ ಪದೇ ನೆನಪಿಸಿಕೊಳ್ಳುವ ಮೂಲಕ ಮನುಷ್ಯ ಮನುಷ್ಯನನ್ನು ನಂಬಬಹುದು ಅನ್ನುವುದನ್ನು ದೃಢಪಡಿಸುತ್ತಾರೆ.
ನಾವು ಒಳ್ಳೆಯದು ಅಂದುಕೊಂಡು ಆರಂಭಿಸಿದರೆ ಎಲ್ಲವೂ ಒಳ್ಳೆಯದು; ಕೆಟ್ಟದಾದರೆ ಎಲ್ಲವೂ ಕೆಟ್ಟದ್ದೇ ಅನ್ನುವ ಹಾಗೆ ಮನುಷ್ಯನ ಆಂತರ್ಯದಲ್ಲಿ ಮೊಳೆತ ಒಂದು ನಿರ್ಧಾರ ಮುಂದೆ ಬದಲಾಗುವುದು ತನ್ನ ನಂಬಿಕೆಯಿಂದ ಮತ್ತು ಧನಾತ್ಮಕ ಚಿಂತನೆಯಿಂದ ಎನ್ನುವುದನ್ನು ಸಾಬೀತುಪಡಿಸುವ ಕಥೆ `ಜೋಯಿಸರ ಕುರ್ಚಿ'. ಜೋಯಿಸರಿಂದ ನಿಮಿತ್ಯ ಕೇಳಲು ಬರುವ ಜನರಿಗೆ ಅವರ ಕುರ್ಚಿಯ ಮೇಲಿರುವ ಗೌರವ ಮತ್ತು ಆ ಕುರ್ಚಿಯಲ್ಲಿ ಕುಳಿತು ಹೇಳುವವನ ಮಾತು ಎಲ್ಲವೂ ಗೌರವಕ್ಕೆ ಪಾತ್ರವಾದವುಗಳು. ದೂರದ ಊರಿನಿಂದ ಬರುವ ಹೆಂಗಸಿಗೆ, ಜೋಯಿಸರು ಮನೆಯಲ್ಲಿಲ್ಲದ ಸಮಯದಲ್ಲಿ ಕಥಾನಾಯಕನೇ ನಿಮಿತ್ಯವನ್ನು ಹೇಳುತ್ತಾನೆ. ಅವನಿಗೆ ಆ ಹೆಂಗಸಿನ ಪೂರ್ವಾಪರ ತಿಳಿದುಕೊಂಡು, ಅವನು ಹೇಳುವ ನಿಮಿತ್ಯ ಮುಂದೆ ಆ ಹೆಂಗಸಿನ ಸವತಿಯ ಮಗಳ ಬಾಳನ್ನು ಹಸನುಗೊಳಿಸುತ್ತದೆ. ಹೆಣ್ಣಿನ ಹೃದಯವಿದ್ರಾವಕ, ಕಠಿಣ ಪರಿಸ್ಥಿತಿಯನ್ನು ಜಾಣ್ಮೆಯಿಂದ ಪರಿಹರಿಸಿ, ಮುಂದೊಂದು ದಿನ ಅದೇ ಹುಡುಗಿ ಮೈಕೈ ತುಂಬಿಕೊಂಡು, ಸಾಕ್ಷಾತ್ ಲಕ್ಷ್ಮೀಯೇ ಬಂದಂತೆ ಅವನಲ್ಲಿ ತನ್ನ ಕಷ್ಟದ ದಿನಗಳು ದೂರವಾದುದನ್ನು ಹೇಳುತ್ತಾಳೆ. ಇದೊಂದು ಸಂಕಲನದ ಉತ್ತಮ ಕಥೆ ಮತ್ತು ಇದು ಓದುಗರ ಕಣ್ಣಲ್ಲಿ ಒಂದೆರಡು ಹನಿ ಹನಿಸಿದರೂ ಹೆಚ್ಚಲ್ಲ.
ಕತ್ತಲೆಯ ಕೊನೆಯಲ್ಲಿ ಬೆಳಕಿನ ರೇಖೆ ಇದ್ದೇ ಇರುತ್ತದೆಯೆನ್ನುವಂತೆ ತನ್ನ ಸಮಸ್ಯೆಗೂ ಒಂದು ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಿಂದ ಬರುವ ಕೃಷ್ಣಯ್ಯ, ತನ್ನ ಸಹಪಾಠಿ, ಪ್ರಾಣದ ಗೆಳೆಯನನ್ನು ಹುಡುಕಿಕೊಂಡು ಬರುವಾಗ ವಿಧಿ ಲಿಖಿತ ಬೇರೆಯೇ ಇರುತ್ತದೆ. ಗೆಳೆಯ ಪಾರ್ಶ್ವವಾಯು ಪೀಡಿತನಾಗಿ ಮಲಗಿದಲ್ಲಿಯೇ ಇರುವಾಗ ಅವನನ್ನು ಕೇಳಲು ಮನಸ್ಸಾಗದೆ ಹಿಂದಿರುಗಬೇಕೆನ್ನುವಾಗ ಅವರಿಬ್ಬರ ಬಾಲ್ಯದ ಘಟನೆಗಳನ್ನು ಹೇಳಲು ಅವನ ಮಕ್ಕಳೇ ಒತ್ತಾಯಿಸುತ್ತಾರೆ. ಹೀಗೆ ಸುಧಾಮನ (ಇಲ್ಲಿ ಶ್ರೀಮಂತ) ಮನೆಗೆ ಕೃಷ್ಣಯ್ಯ ಬರುವಾಗ ಬಾಲ್ಯದ ಗೆಳತನದಿಂದ ಅವನ ಬದುಕು ಮತ್ತೆ ಚಿಗುರುತ್ತದೆ. ಇದು `ಅಂಟಿನ ನೆಂಟಿನ ಕೊನೆ ಬಲ್ಲವರಾರೆ?' ಕಥೆ.
`ಕುಶಾವರ್ತ' ಒಂದು ತಪ್ಪಿನಿಂದ ಕೈ ಸೋತ ರಾಮಚಂದ್ರರು, ತಮ್ಮ ಮಡದಿಯ ಜೊತೆಗೆ ಕುಶಾವರ್ತಕ್ಕೆ ಬಂದು ಬದುಕು ಸಾಕು ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ತಾವು ಹಿಂದೊಮ್ಮೆ ಸಹಾಯ ಮಾಡಿದ್ದ ಪೇಪರ್ ಹಾಕುವ ಹುಡುಗನೇ ಅಲ್ಲಿ ಅವರನ್ನು ಕಂಡು ಆನಂದತುಂದಿಲನಾಗಿ ಅವರನ್ನು ಆದರಿಸುತ್ತಾನೆ. ಆಗ ಅವರ ಮುಖದಲ್ಲಿ ಹೊಸಕಳೆ ಜಿಗಿತು, ಬದುಕುವ ದಾರಿ ತುಂಬಾ ಇವೆ ಅನ್ನುವ ಅರಿವು ಮೂಡುತ್ತದೆ. ಹೇಗೋ ಬದುಕುತ್ತಿದ್ದ ಹುಡುಗ; ಈಗ ಇಷ್ಟು ಎತ್ತರಕ್ಕೆ ಏರಿರುವಾಗ, ತನಗೂ ಸಾಧ್ಯವಿಲ್ಲವೇ ಅನ್ನುವ ಜ್ಞಾನೋದಯವಾಗುತ್ತದೆ.
ಎರಡು ಸಂಸಾರಗಳ ಪ್ರೀತಿಧಾರೆಯ ನಡುವೆ, ವಿರಹದ ಬೇಗೆಯಲ್ಲಿ ಮಿಂದು ಮತ್ತೆ ಒಬ್ಬರಿಗೊಬ್ಬರು ಎದುರಾಗುವ ಪ್ರೇಮಿಗಳ ಸುತ್ತಾ `ಒಂದು ಪ್ರೇಮದ ಕಥೆ'. ಎಷ್ಟೋ ವರ್ಷಗಳ ಬಳಿಕ ಭೇಟಿಯಾದರೂ ತಮ್ಮ ಪ್ರೀತಿಯನ್ನು ಗೌರವದಿಂದಲೇ ಕಾಣುವ, ಆ ಪರಿಧಿಯಿಂದ ಹೊರಗೆ ಬಂದು ವಾಸ್ತವತೆಯನ್ನು ನೆಚ್ಚಿಕೊಂಡು, ಅಳುಕಿಲ್ಲದೆ, ಮುಚ್ಚುಮರೆಯಿಲ್ಲದೆ ತಿಳಿ ನಗುವಿನಿಂದಲೇ ಪರಿಸ್ಥಿತಿಯನ್ನು ಹದಗೊಳಿಸುವ ಸುಂದರ ಕಥೆ. ಕಳೆದು ಹೋದುದಕ್ಕಾಗಿ ಪರಿತಪಿಸುವುದಿಲ್ಲ. ಆದರೆ ಓದುಗನ ಮನಸ್ಸಿನಲ್ಲಿ ಆ ಭಾವನೆಯನ್ನು ಬಲವಾಗಿ ನಾಟುವಂತೆ ನಿರೂಪಿಸಿರುವ ಇದೊಂದು ಅಪರೂಪದ ಕಥೆ.
ಮನೆಯಲ್ಲಿರುವ ಮುದುಕಿಯರಿಬ್ಬರ ಮನಸ್ಸಮಾಧಾನಕ್ಕಾಗಿ ಮಗನನ್ನು ಕಳೆದುಕೊಂಡ ಸೊಮಯಾಜಿಗಳು ದೆಹಲಿಗೆ ಹೊರಟು, ಅಲ್ಲಿ ತಮ್ಮ ಕೆಲಸ ಕೈಗೂಡದೆ ನಿರಾಶರಾಗಿ ಹಿಂತಿರುಗುತ್ತಾರೆ. ಆ ಸಮಯದಲ್ಲಿ ರೈಲಿನಲ್ಲಿ ತನ್ನ ಬದುಕಿಗೆ ಅಂತ್ಯ ಬರೆಯಲು ಹೊರಟ ಕೈಗೂಸಿರುವ ಹೆಣ್ಣನ್ನು ತಡೆದು, ಆಕೆಯ ಕಥೆ ಕೇಳಿ ಸಹಾಯಕ್ಕೆ ಮುಂದಾಗುತ್ತಾರೆ. ಹಣದ ದಾಹದಲ್ಲಿ ಮುಳುಗಿದ ತನ್ನ ಗಂಡನಿಂದ ಹೊರಬರಲಾಗದ ಹೆಣ್ಣು, ಆತ್ಮಹತ್ಯೆಗೆ ಮುಂದಾಗುತ್ತಾಳೆ. ಇದನ್ನೆಲ್ಲಾ ತಿಳಿದುಕೊಂಡ ಸೊಮಯಾಜಿಯಾವರು ಆ ಮುತೈದೆ ಹೆಣ್ಣನ್ನು, ಮುದಿ ಜೀವಿಗಳ ನೆಮ್ಮದಿಗಾಗಿ ವಿಧವೆ ಸೊಸೆಯಾಗಿ ಬರುವಂತೆ ಕೇಳುವ `ಏನೋ ತೀಡಲು ಏನೋ ತಾಗೀತು' ಮನಕಲಕುವ ಕಥೆಯಾಗಿದೆ.
`ಒಂದು ಪ್ರೇಮದ ಕಥೆ'ಯಂತೆಯೆ ಕಾಲಘಟ್ಟದಲ್ಲಿ ಹುದುಗಿ ಹೋಗುವ ಪ್ರೀತಿಯ ಸಂಘರ್ಷಕ್ಕೆ, ಅಸಹಾಯಕತೆಗೆ ಬದುಕನ್ನೇ ಪಣತೊಟ್ಟು ಸುಗಮ ದಾರಿಯನ್ನು ಕಂಡುಕೊಳ್ಳುವ ನಾಯಕ ಮುಂದೊಂದು ದಿನ ತಾನು ಪ್ರೀತಿಸಿದ ಹೆಣ್ಣು ಎದುರಾದಾಗ ಅನೂಹ್ಯವಾದ ಬೆಳಕು ಆಕೆಯ ಕಣ್ಣುಗಳಲ್ಲಿ ಬೆಳಗುತ್ತದೆ. ಆ ಬೆಳಕಿನಲ್ಲಿ ಸಾವಿರ ಅರ್ಥಗಳು ಕಂಡರೂ, ತನ್ನ ಉದ್ವೇಗವನ್ನು ತಡೆದುಕೊಳ್ಳುವ ನಾಯಕ ತಾನು ಎತ್ತರಕ್ಕೆ ಏರಿದ ಕಾರಣಗಳನ್ನು ಬಿಚ್ಚಿಡುವ ಕಥೆ `ಸಮಾಗಮ'.
ತಾನು ಮದುವೆಯಾಗುವುದು ಎರಡನೆ ಸಂಬಂಧವೆಂದು ತಿಳಿದೂ, ಕೈ ಹಿಡಿಯುವವನ ಬಗ್ಗೆಯೂ ತಿಳಿದ ಪಾರ್ವತಿ, ಅವನ ಮನಸ್ಸಿನೊಳಗೆ ಉಳಿದು ಹೋದ ನೋವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಮುಂದೊಂದು ದಿನ ಅವನ ಕೊರಗನ್ನು ತಿಳಿದುಕೊಂಡು ಅದಕ್ಕೆ ಕಾರಣವನ್ನೂ ತಿಳಿದುಕೊಳ್ಳಲು ಹಂಬಲಿಸುತ್ತಾಳೆ. ಸತ್ಯ ಬೇರೆಯೇ ಇರುತ್ತದೆ. ಅವಳು ತಿಳಿದುಕೊಂಡಂತೆ ಗೆಳಯನ ಜೊತೆಗೆ ಓಡಿ ಹೋದ ಮೊದಲ ಹೆಂಡತಿಯನ್ನು ನೆನೆಯದೆ ಅವಳಿಂದ ತನ್ನ ರಕ್ತ ಹಂಚಿಕೊಂಡ ಮಗುವನ್ನು ನೆನೆದು ವೇದನೆಪಡುತ್ತಾನೆ. ಪಾರ್ವತಿಗೆ ಸತ್ಯದ ಅರಿವಾಗಿ ಮನಸ್ಸಿನೊಳಗೆ ಅಡಗಿದ, ಎಲ್ಲೂ ತೋರಗೊಡದ ಮಾತ್ಸರ್ಯ ಕರಗಿ ಜೀವನೋತ್ಸಾಹ ಮೂಡುತ್ತದೆ `ಮರದೊಳಡಗಿದ ಬೆಂಕಿ'ಯ ಹಾಗೆ. ನಂಬಿಕೆಗೆ ಅರ್ಹನಾದ, ಒಂದು ಕಾಲದಲ್ಲಿ ಎಲ್ಲರಿಂದಲೂ ಅಯೋಗ್ಯ ಅನಿಸಿಕೊಂಡವನು ಪ್ರತೀಕಾರ ತಿರಿಸಿಕೊಳ್ಳಲು ಬರುತ್ತಾನಾದರೂ, ಅಂತಹ ಸನ್ನಿವೇಶವನ್ನು ಸೃಷ್ಟಿಸಿಕೊಂಡರೂ, ತನ್ನ ಸೇಡಿನ ವಿಷಯವನ್ನು ತಾನು ಪ್ರೀತಿಸಿದ ಹುಡುಗಿಯ ಜೊತೆಗೆ ಹೇಳಿಕೊಳ್ಳುತ್ತಾನೆ. ಅವನ ಸೇಡನ್ನು ಅರಿಯದ ಅವಳು ಬೆದರುತ್ತಾಳೆ. ಕೆಟ್ಟವನಲ್ಲದಿದ್ದರೂ, ಅಂತಹ ಹಣೆಪಟ್ಟಿಯನ್ನು ಕಟ್ಟಿಕೊಂಡು ಬದುಕಿನಲ್ಲಿ ಸ್ಥಾನ ಮಾನ ಪಡೆದುಕೊಂಡಾಗ ದೂರಿದ ಜನರೇ ಆದರಿಸುತ್ತಾರೆ. ನೋವುಗಳಿದ್ದರೂ ಸೇಡು ತೀರಿಸಿಕೊಳ್ಳುವ ತುಡಿತವಿದ್ದರೂ ಕೊನೆಗೆ ತನ್ನ ಮನುಷ್ಯತ್ವವನ್ನು ತೋರಿಸುವ ಸುಂದರ ಕಥೆ `ಕೆಂಡ ತುಳಿದವನು'.
`ಅಸಂಬದ್ಧ' ಕಥೆಯಲ್ಲಿ ತಾನು ಬಯಸಿದ ಪ್ರೀತಿಗಾಗಿ ಹಂಬಲಿಸಿ, ಆ ಪ್ರೀತಿ ಮುಂದೆ ಅನಾವರಣಗೊಂಡರೂ ತನ್ನ ನಿರ್ಲಕ್ಷ್ಯದಿಂದ ಶರ್ಮಿಳೆಗೆ ಅದು ದಕ್ಕದೆ ಹೋಗುತ್ತದೆ. ಸಮಾಜದ ಕಟ್ಟು ಕಟ್ಟಳೆಗಳೆಂಬ ಬಂಧನದೊಳಗೆ ಸಿಲುಕಿ, ಸ್ವತಂತ್ರವಾಗಿ ಬದುಕಲು ಹವಣಿಸುವ, ಬದುಕಲಾರದೆ ಚಡಪಡಿಸುವ ಹೆಣ್ಣಿನ ಸುತ್ತಾ ಹೆಣೆದ `ಚಾಚು ಕೈಗಳ ದಾಟು'. ತನ್ನ ಅಂತರಂಗದಲ್ಲಿ ಭುಗಿಲೆದ್ದ ಭಾವನೆಗಳನ್ನು ಪ್ರಶ್ನಿಸುತ್ತಾ, ಉತ್ತರ ಹುಡುಕುತ್ತಾ, ತಾನು ಪ್ರೀತಿಸಿದ ಹುಡುಗನ ಮುಂದೆ ಹೇಳುವ ಕಥೆ.ತಾಯಿಯಾಗಲಿ ಅಥವಾ ಸಂಗಾತಿಯಾಗಲಿ; ಒಂದು ಹೆಣ್ಣಿನ ಮನಸ್ಸನ್ನು ಅರ್ಥಮಾಡಿಕೊಂಡಿರುವ ಮಗ, ಆತ ತೆಗೆದುಕೊಂಡ ನಿರ್ಧಾರಗಳು ಸಮಾಜಕ್ಕೆ ವಿರುದ್ಧವಾದರೂ, ಅದೆಲ್ಲವನ್ನೂ ಅರ್ಥಮಾಡಿಕೊಂಡು ಹೊಸ ಕ್ರಾಂತಿಗೆ ನಾಂದಿಹಾಡುವ ತಾಯಿಯೊಬ್ಬಳ ಅಂತರಂಗದಲ್ಲಿ ಅಡಗಿದ `ಅಪೂರ್ವ ರಾಗಗಳು' ಕಥೆಯಾಗಿ ಮೂಡಿವೆ.
ಈ ಸಂಕಲನದ ಒಂದು ಅಪರೂಪದ ಮತ್ತು ಅತ್ಯುತ್ತಮ ಕಥೆ `ನಿಗೂಢ'. ವಿಭಿನ್ನ ಕಥಾಹಂದರವಿರುವ ಈ ಕಥೆ ಅನೇಕ ಕೌತುಕಗಳನ್ನು ತಿಳಿಸುತ್ತಾ, ಹೊಸತನ್ನು ಬಿಚ್ಚಿಡುತ್ತಾ, ಏನೋ ಇದೆ ಅನ್ನುವಾಗ `ನಿಗೂಢ'ವನ್ನು ಅನಾವರಣಗೊಳಿಸುತ್ತದೆ. ಮದುವೆಯಾಗಿ ಎರಡೇ ದಿನಕ್ಕೆ ವಿಧವೆಯಾಗುವ ನಾಯಕಿ, ತನ್ನನ್ನು ಅಗಾಧವಾಗಿ ಪ್ರೀತಿಸಿದ ನಾಯಕನ ಜೊತೆಗೆ ತನ್ನ ಗಂಡನ ಸಾವಿನ ಹಿಂದಿರುವ ನಿಗೂಢತೆಯನ್ನು ತಿಳಿಸುತ್ತಾಳೆ. ಅವಳು ಹೇಳಿದ ಸತ್ಯ ವಾಸ್ತವತೆಗೆ ಹಿಡಿದ ಕನ್ನಡಿಯಂತೆ ಇದೆ. ಮುಂದೇನೋ ಇದೆ ಅನ್ನುವ ಕುತೂಹಲವಿರುವ ಈ ಕಥೆಯನ್ನು ಓದಿಯೇ ತಿಳಿಯಬೇಕು.
ನಾಯಕ ತನ್ನ ಪ್ರೀತಿಯನ್ನು ತೆರೆದಿಟ್ಟರೂ, ಒಂದೊಮ್ಮೆ ಅವನಿಂದ ಸಾಂತ್ವನ ಬಯಸಿದ ಹೆಣ್ಣು ಕೊನೆಗೆ ಅವನ ಬಡತನವನ್ನು ಎತ್ತಿ ತೋರಿಸಿ ಅವನನ್ನು ನಿರಾಕರಿಸುವ ಕಥೆ `ಹೇಳದೇ ಉಳಿದದ್ದು'. `ಮತ್ತೆ ಬಾರದೆ ಶ್ರಾವಣ'ದಲ್ಲಿ ಎಷ್ಟೋ ವರ್ಷಗಳಿಂದ ಮುರಿದು ಬಿದ್ದಿದ್ದ ತನ್ನ ಗಂಡನೊಂದಿಗಿನ ಸಂಬಂಧ ಮತ್ತೆ ಚಿಗುರಿಕೊಳ್ಳುವ ಹೆಣ್ಣಿನ ಬಾಳಿನ ಚಿತ್ರಣವಿದೆ.
`ಸುಮ್ಮನೆ' ಕಥೆ ಬರೀ ಸುಮ್ಮನೆಯಲ್ಲ. ಆಳವಾದ ಅರ್ಥವಿರುವ ಒಂದು ಅತ್ಯುತ್ತಮ ಕಥೆ. ಒಂದೊಮ್ಮೆ ತಾನು ವಾಸವಾಗಿದ್ದ ಮನೆಯ ಉನ್ನತಿಯನ್ನು ಕಂಡು ಸಂತೋಷ ಪಡುವ ಮುದಿ ಜೀವದ ಸಂತೃಪ್ತ ಮಾತುಗಳ ಹಂದರವಿರುವ ಕಥೆಯಿದು. ಸಣ್ಣ ಕಥೆಯಾದರೂ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಓದುಗರಲ್ಲಿ ಅನುಕಂಪವನ್ನು ಹುಟ್ಟಿಸುತ್ತದೆ.
ಶಾಂತರಾಮ ಸೋಮಯಾಜಿಯವರ ಹುಮ್ಮಸ್ಸಿನ ಮುನ್ನುಡಿ ಮತ್ತು ವಸುಧೇಂದ್ರ ಅವರ ತೂಕದ ಬೆನ್ನುಡಿಯಿರುವ ಈ ಪುಸ್ತಕಕ್ಕೆ ಅಪಾರ ಅವರ ಆಕರ್ಷಕ ಮುಖಪುಟವಿದೆ.
ಈ ಪುಸ್ತಕವನ್ನು ಸುಹಾಸಂ, `ವಾಗ್ದೇವಿ', ಹಯಗ್ರೀವ ನಗರ, ಉಡುಪಿ ಇವರು ಪ್ರಕಟಿಸಿದ್ದಾರೆ. ಬೆಲೆ ರೂ. ೬೦/-

Read more!

Tuesday, November 4, 2008

ಐವತ್ತನೆ ಕಥೆ


ರಾತ್ರಿಯ ನೀರವತೆಯನ್ನೂ ಮೀರಿ ಕೇಳುವ ಸಮುದ್ರದ ಬೋರ್ಗರೆತದ ಸದ್ದು, ಟಾರಸಿಯ ಮೇಲೆ ಕುಳಿರ್ಗಾಳಿಗೆ ಮೈ ಚೆಲ್ಲಿ ಕುಳಿತಿದ್ದವನನ್ನು ಎತ್ತಿ ಒಗೆದಂತಾಯಿತು. ಗೋಧಿ ಹಿಟ್ಟಿನ ಬಣ್ಣದ ಮರಳ ದಂಡೆಯ ಮೇಲೆ ಕಣ್ಣುಗಳು ಏಕಾಏಕಿ ಸರಿದಾಡಿ ಗಾಳಿಮರದ ತೋಪಿನ ಕಡೆಗೆ ಅಚಲವಾಗಿ ನಿಂತಿತು.ಕುರ್ಚಿಯ ಅಂಚಿಗೆ ಹಿಡಿದಿದ್ದ ಅಟ್ಟೆಯ ಜೊತೆಗಿದ್ದ ಕಾಗದಗಳು ಹಾರಿ ಟಾರಸಿಯ ಮೇಲೆ ಬಿದ್ದಾಗ, ಪೆನ್ನು ಜೇಬಿಗೆ ಸೇರಿಸಿ ಎದ್ದ. ಖಾಲಿ ಹಾಳೆಗಳು ಗಾಳಿಯ ಜೊತೆಗೆ ಬೆರೆತು ಅಣಕಿಸಿದಂತಾಯಿತು.ಮುಂಬೈನ ಕಪ್ಪು ಮರಳ ತೀರ, ಕಲುಷಿತ ನೀರಿನ ಸಮುದ್ರ, ಬರೆಯುವ ಉತ್ಸಾಹವನ್ನು ಜರ್ರನೆ ಇಳಿಸಿತ್ತು. ಬಂಡೆಯ ಮೇಲೆ ಕುಳಿತು ನೀರಿಗೆ ಕಾಲು ಇಳಿಸಿದ್ದ ತನುಹಾ ಚೀರಿದ್ದಳು."ನನ್ನಂತ ಒಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳದ ನೀನು ಒಂದಲ್ಲ ಒಂದು ದಿನ ಯಾರಿಗೂ ಗೊತ್ತಾಗದ ಹಾಗೆ ಸತ್ತು ಹೋಗ್ತೀಯಾ. ಆಗ ನಿಂಗಾಗಿ ಅಳೋರು ಯಾರು ಇರೋದಿಲ್ಲ ಸಮೀರ. ಬರಿ... ಇಡೀ ದಿನ ಬರಿತಾನೆ ಇರು... ನಿನ್ನ ಕಥೆ"ಎಲ್ಲಿಂದಲೋ ಹಾರಿ ಬಂದ ದೈತ್ಯ ಅಲೆಯೊಂದು ಬಂಡೆಯ ಮೇಲಿದ್ದವಳನ್ನು ಸೆಳೆದೊಯ್ದಿತ್ತು!"ಆ ಕಥೆಗಾರನ ಜೊತೆಗೆ ಸುತ್ತಾಡ್ತಾ ಇದ್ಲು. ಅವಳ ಸಾವು ಅಸಹಜಾಂತ್ಲೆ ಬರ್ದು ಬಿಡಿ"ಪತ್ರಿಕೆಯ ಪ್ರತಿನಿಧಿಗಳ ಮುಂದೆ ತೋಡಿಕೊಂಡಿದ್ದ ತನುಹಾಳ ಚಿಕ್ಕಪ್ಪ ಬಿಷನ್‍ಲಾಲ್.ನೆನಪುಗಳನ್ನು ಕೊಡವಿ ಕೆಳಗೆ ಬಿದ್ದ ಹಾಳೆಗಳನ್ನೆಲ್ಲಾ ಜೋಡಿಸಿ ಅಟ್ಟೆಯ ಕ್ಲಿಪ್‍ಗೆ ಸೇರಿಸಿದ.ಶುಭ್ರ ನೀಲಿಯ ಆಕಾಶದಲ್ಲಿ ಇದ್ದೂ ಇಲ್ಲದಂತಿದ್ದ ಚಂದಿರನ ಬೆಳಕು ಹರಡಿದ್ದ ಸಮುದ್ರ ದಂಡೆಯತ್ತ ದೃಷ್ಟಿ ಹೊರಳಿಸಿದ.ಇನ್ನೊಂದೆರಡು ಗಂಟೆಯಲ್ಲಿ ಸಮುದ್ರ ಶಾಂತವಾಗುವುದೆಂದು ತಿಳಿದಿತ್ತು. ಟಾರಸಿಯಿಂದ ಇಳಿದು ಹಜಾರಕ್ಕೆ ಬಂದ.ಮುಂಬಾಗಿಲನ್ನು ಸರಿಸಿ ಹೊರಗೆ ಇಣುಕು ಹಾಕಿದ. ಮನೆಯ ಸುತ್ತಾ ಎರಡಾಳಿನ ಎತ್ತರಕ್ಕೂ ಬೆಳೆದಿದ್ದ ಒರಟು ಹುಲ್ಲಿನ ಗರಿಗಳು ಗಾಳಿಗೆ ಕಿಚಾಯಿಸುವಂತೆ ಸದ್ದು ಮಾಡಿದವು. ಅವುಗಳ ನಡುವೆಯಿದ್ದ ಕಾಲುದಾರಿಯಲ್ಲಿ ನಡೆಯುವ ಧೈರ್ಯ ಉಡುಗಿ ಹೋಯಿತು. ಹಿಂದಕ್ಕೆ ಸರಿದು ಮೆಟ್ಟಿಲ ಮೇಲೆ ನಿಂತ.ಹುಲ್ಲುಗಳೆಡೆಯಿಂದ ಸದ್ದು ಕೇಳಿಸಿತು!ಕಿವಿಗಳನ್ನು ತೆರೆದು ಮಂದ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡ."ಯಾರಲ್ಲಿ?" ಬಾಯಿಯಿಂದ ಹೊರಟ ಪ್ರಶ್ನೆ ಗಂಟಲಿನಲ್ಲಿಯೇ ಇಳಿದಂತಾಯಿತು.ಪ್ರತಿಕ್ರಿಯೆ ಇಲ್ಲದಾಗ ಹಜಾರಕ್ಕೆ ನುಗ್ಗಿ, ಮುಂಬಾಗಿಲನ್ನು ಮುಚ್ಚಿ ಚಿಲಕ ಸೇರಿಸಿದ. ಇದ್ದೂ ಇಲ್ಲದಂತೆ ಉರಿಯುತ್ತಿದ್ದ ವಿದ್ಯುತ್ ದೀಪ, ರಾತ್ರಿಗೆ ಕೈ ಕೊಡುವ ಸೂಚನೆಯಿತ್ತಿತ್ತು. ಗೋಡೆಯ ಪಕ್ಕಕ್ಕಿದ್ದ ಲಾಂದ್ರವನ್ನು ಬೆಳಗಿಸಿ ವಿದ್ಯುತ್ ದೀಪದ ಗುಂಡಿ ಆರಿಸಿದ."ಒಳ್ಳೆಯದಾಯಿತು... ನಾನು ರಾತ್ರಿಗೆ ಬರ್‍ತೀನೀಂತ ನಿಮ್ಗೆ ಗೊತ್ತು... ಪಕ್ಕ ಬಾಗಿಲು ತೆಗ್ದು ಬಿಡಿ" ಕಿಟಕಿಯ ಬಳಿಯಿಂದ ಕೇಳಿದ ಪಿಸುದನಿಗೆ ಎದೆಗೆ ಕೈ ಹಚ್ಚಿ ನಿಂತ."ಸಮೀರ, ಬಾಗಿಲು ತೆಗೆಯಿರಿ..." ಕಿಟಿಕಿಯ ಬಳಿಯಿಂದ ಸರಿದು ಮುಂಬಾಗಿಲಿಗೆ ಬಂದು ನಿಂತಿತು ಹೆಣ್ಣು! ಜೊತೆಗೆ ಬಾಗಿಲಿನ ಮೇಲೆ ನಯವಾಗಿ ಗುದ್ದಿತು.ಗೊಣಗುತ್ತಾ ಅಸಹಾಯಕತೆಯಿಂದ ಬಾಗಿಲು ತೆರೆದು ನಿಂತ. ತಟ್ಟನೆ ಒಳಗೆ ಸೇರಿದ ಹೆಣ್ಣು ಬಾಗಿಲು ಮುಚ್ಚಿ ನಿಂತಾಗ ನಿಟ್ಟುಸಿರಿಟ್ಟ."ನಿಂಗೆ ಅದೆಷ್ಟು ಸಲ ಹೇಳಿದ್ದೀನಿ. ಹೀಗೆ ರಾತ್ರಿಗೆಲ್ಲಾ ಬರ್‍ಬೇಡಾಂತ. ನಂಗೆ ಇಷ್ಟವಾಗೋದಿಲ್ಲ"ಲಾಂದ್ರದ ಬೆಳಕಿಗೆ ಮುಖವೊಡ್ಡಿ ನಿಂತ. ಅವನ ದೈತ್ಯ ನೆರಳನ್ನು ನೋಡಿ ಕಿಲಕಿಲನೆ ನಕ್ಕ ಹೆಣ್ಣು ಮೇಜಿನ ಬಳಿ ಸರಿದು ಅಟ್ಟೆಯ ಮೇಲಿದ್ದ ಕಾಗದಗಳನ್ನು ತೆಗೆದು ಬೆಳಕಿಗೆ ಹಿಡಿಯಿತು.ಐವತ್ತನೆ ಕಥೆ!ಹಾಳೆಯ ಮೇಲಿದ್ದ ಶೀರ್ಷಿಕೆಯನ್ನು ಓದಿ ಬಾಯಿಯಿಂದ, `ಪ್ಚ್!' ಸದ್ದು ಹೊರಡಿಸಿತು."ಸಮೀರ, ನಾನು ನಿಮ್ಮ ಅಭಿಮಾನೀಂತ ಹೇಳ್ದೆ. ನಿಮ್ಮ `ಐವತ್ತನೆ ಕಥೆ' ಯಾವಾಗ ಮುಗಿಸ್ತೀರೀಂತ ನನಗೆ ಕಾತುರ. ನೀವು ನೋಡಿದ್ರೆ ಶೀರ್ಷಿಕೆ ಬರೆದು ನಿಲ್ಸಿದ್ದೀರಾ... ನನಗೆ ಕಥೆ ಹೇಳಿದ ವೇಗದಲ್ಲಿಯೆ ಬರೆದು ಮುಗಿಸಿ. ನೀವು ಹೇಳಿದ ಕಥೆ ಕುತೂಹಲವಾಗಿತ್ತು. ಬೇಕಿದ್ರೆ ಇನ್ನೊಂದೆರಡು ದಿನ ನಾನು ಇತ್ತ ತಲೆ ಹಾಕೋದಿಲ್ಲ. ತನುಹಾ ಬಂಡೆ ಜಾರಿ ಬಿದ್ದಿಲ್ಲಾಂತ ಹೇಳಿದ್ರಿ... ಅದು ನನ್ನಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಕಥೆಗೊಂದು ಅಂತ್ಯ ಬರ್‍ದು ಬಿಡಿ"ಹಾಳೆಗಳನ್ನು ಮೇಜಿನ ಮೇಲೆ ಎಸೆದ ಹೆಣ್ಣು ಅವನನ್ನು ತಬ್ಬಿ ಹಿಡಿಯಿತು. ಕೊಸರಾಡಿಕೊಂಡರೂ ಉಪಯೋಗವಿಲ್ಲವೆಂದು ಗೊತ್ತು.ಸಮುದ್ರದ ಬೋರ್ಗರೆತ ನಿಲ್ಲುವ ಸೂಚನೆಯಂತೆ ಗಾಳಿ ಬಲವಾಗಿ ಬೀಸಿತು. ಹುಲ್ಲು ಗರಿಗಳ ಒರೆಸು ಶಬ್ದದೊಂದಿಗೆ ತೂರಿ ಬಂದ ಗಾಳಿ ಲಾಂದ್ರವನ್ನು ಆರಿಸಿತು."ಒಳ್ಳೆಯದಾಯ್ತು ಬಿಡಿ" ಕತ್ತಲು ಆವರಿಸಿದಾಗ ಹೆಣ್ಣು ಪಿಸು ದನಿಯಲ್ಲಿ ನುಡಿಯಿತು. ಸಮುದ್ರ ಶಾಂತವಾದಂತಾಯಿತು. ಎದ್ದು ಕುಳಿತು ಬಾಗಿಲಿನತ್ತ ದೃಷ್ಟಿ ಹಾಯಿಸಿದ. ಹೆಣ್ಣು ಹೊರಟು ಬಾಗಿಲತ್ತ ನಿಂತಿದ್ದಳು."ಸಮೀರ, ಗಾಳಿಮರದ ತೋಪಿನವರೆಗೂ ನನ್ನ ಬಿಟ್ಬಿಡಿ" ದನಿಯಲ್ಲಿ ಆತಂಕ ತುಂಬಿತ್ತು."ಶಾಲಿ, ನಿನಗೆ ನಾನು ಎಷ್ಟು ಸಲ ಹೇಳಿದ್ದೆ. ನೀನು ಕೇಳ್ತಾ ಇಲ್ಲ. ಈಗ ನನ್ನನ್ನು ಸಿಕ್ಕಿ ಹಾಕಿಕೊಳ್ಳೊ ಹಾಗೇ ಮಾಡ್ತಿಯಾ" ಗೊಣಗುತ್ತಲೇ ಅವಳ ಹಿಂದೆ ನಡೆದ.ಹುಲ್ಲುಗಳ ನಡುವಿನ ದಾರಿ ಕ್ರಮಿಸಿ ಗಾಳಿಮರದ ತೋಪಿನ ಬಳಿ ಬರುವವರೆಗೂ ಕಿವಿಗಳಿಗೆ ಗಾಳಿ ಸೇರದಂತೆ ಮುಖಕ್ಕೆ ಸೆರಗು ಸೇರಿಸಿ ನಡೆಯುತ್ತಿದ್ದ ಶಾಲಿನಿ, ಅವನಿಗೆ ಹೇಳದೆ ಹಂಚಿನ ಮನೆಯತ್ತ ಓಡಿದಳು.ಮುಂದೆ ಹೆಜ್ಜೆ ಎತ್ತಿಡಲಿದ್ದವನು ಒಮ್ಮೆ ಸುತ್ತಲೂ ದೃಷ್ಟಿ ಹಾಯಿಸಿದ. ರಬ್ಬರ್ ಪೈಪ್‍ಗಳ ಮೇಲೆ ಲಂಗರು ಹಾಕಿ ನಿಂತ ನಾಡದೋಣಿಗಳ ಬಳಿಯಿಂದ ಪೆಟ್ರೋಮ್ಯಾಕ್ಸ್‍ನ ಬೆಳಕು ಸ್ಪಷ್ಟವಾಗಿ ಗೋಚರಿಸಿತು. ಅಪರೂಪವೇನಲ್ಲ, ಅದೆಷ್ಟೋ ಬಾರಿ ನಡುರಾತ್ರಿಯವರೆಗೂ ಟಾರಸಿಯಲ್ಲಿ ಕುಳಿತು ಬರೆಯುವಾಗ ಕಂಡಿದ್ದ. ಮೊದಮೊದಲು ಕುತೂಹಲವಿತ್ತು. ದೀಪದ ಬೆಳಕಿನ ಸುತ್ತಾ ಕುಳಿತು ಹೊಟ್ಟೆ ಉಬ್ಬೇರಿಸುವಂತೆ ಕುಡಿದು, ಇಸ್ಪೀಟು ಎಲೆಗಳ ಆಟವಾಡುತ್ತಿದ್ದಾರೆಂದು ತಿಳಿದಿದ್ದ. ಶಾಲಿನಿಯ ಪರಿಚಯವಾದ ನಂತರ ಕುತೂಹಲ ಇಳಿದಿತ್ತು. ಅವಳಿಗೂ ಗೊತ್ತಿಲ್ಲದ ಸಂಗತಿ ಅದು!ಮರದ ಸಾಲು ಹಿಡಿದು ವೇಗದ ಹೆಜ್ಜೆ ಹೊರಳಿಸಿದ. ಅಭ್ಯಾಸವಿಲ್ಲದ ಮರಗಳ ದಂಡೆಯ ಮೇಲಿನ ನಡುಗೆ ವೇಗವನ್ನು ನಿಯಂತ್ರಿಸುತ್ತಿತ್ತು.ತೋಪು ಮುಗಿದು ತೆರೆದ ಭಾಗದತ್ತ ಹೆಜ್ಜೆ ಹಾಕುವಾಗ ಗೊಗ್ಗರು ದನಿಯೊಂದು ಕೇಳಿ ಬೆಚ್ಚಿ ಬಿದ್ದ. ಕಾಲು ತಟಸ್ಥವಾಯಿತು."ನೀನು ಇಂತಹ ರಾತ್ರಿಯಲ್ಲಿ ಆ ಹೆಣ್ಣಿನ ಜೊತೆಗೆ ಓಡಾಡೋದು ಒಳ್ಳೆಯದಲ್ಲ. ನಾನು ನಿನ್ನ ಹಿತೈಷಿಯಾಗಿ ಹೇಳ್ತಾ ಇದ್ದೀನಿ"ಮಾತುಗಳು ಬಂದಾಗ ಧೈರ್ಯ ತುಂಬಿತು. ಮುಂಬೈ ತೊರೆದು ದಕ್ಷಿಣದ ಕಡಲತಡಿಗೆ ಬಂದಾಗ ವಿಧೇಯನಂತೆ ನಿಂತು ಉಪಚರಿಸಿದ್ದ ಚಂದ್ರಚೂಢ. ಉಳಿದುಕೊಳ್ಳಲು ಪಾಳು ಬಿದ್ದಂತಿದ್ದ ಅವನ ದೂರದ ಸಂಬಂಧಿಯೊಬ್ಬರ ಮನೆಯನ್ನು ಐದು ನೂರು ರೂಪಾಯಿಗಳ ಬಾಡಿಗೆಗೆ ನೀಡಿದ್ದ."ಚಂದ್ರಚೂಢ, ಬರೋ ಇಚ್ಛೆ ಇರ್‍ಲಿಲ್ಲ. ಆ ಹೆಣ್ಣು ನನ್ನ ಹುಡುಕಿಕೊಂಡು ಬಂದಿದ್ಲು. ಮನೆಯವರೆಗೂ ತಲುಪಿಸೋದಿಕ್ಕೆ ಹೇಳಿದ್ಲು"ಚಂದ್ರಚೂಢ ಒಣ ನಗೆ ನಕ್ಕ."ಅವಳು ಮಹಾ ಕುತಂತ್ರಿ. ನಿನ್ನ ಹೊಸಬಾಂತ ಏಮಾರಿಸಿ ಬಿಡ್ತಾಳೆ" ಚಂದ್ರಚೂಢ ತಟ್ಟನೆ ಮಾತು ನಿಲ್ಲಿಸಿ ಕತ್ತಲಲ್ಲಿ ಹೆಜ್ಜೆ ಹಾಕಿ ಹೊರಟ.ಸಮೀರ ಹುಲ್ಲು ಮೆದೆಯ ಸೀಳು ದಾರಿ ಹಿಡಿದು ನಡೆದ. ಏಕಾಏಕಿ ಹೆಣ್ಣಿನ ಆರ್ತನಾದ ಕೇಳಿಸಿತು. ಎದೆಗೆ ಕೈ ಹಚ್ಚಿ ನಿಂತ!ದೋಣಿಯ ಬಳಿಯಿದ್ದ ಪೆಟ್ರೋಮ್ಯಾಕ್ಸ್ ದೀಪ ಆರಿತು. ಅಲ್ಲಿದ್ದ ಮಂದಿ ಚದುರಿದಂತೆ ಕಂಡರು. ಅಲ್ಲಿ ನಿಂತಿರಲಾರದೆ ವೇಗದ ಹೆಜ್ಜೆಯಿಡುತ್ತಾ ಬಾಗಿಲು ತೆರೆದು ಒಳಗೆ ಸೇರಿಕೊಂಡ.ಸಾವು ಆವರಿಸಿದಂತೆ ಚೀರಿಕೊಂಡಿತ್ತು ಹೆಣ್ಣು!
***
ಸಮುದ್ರ ಕೊರೆತಕ್ಕೆ ತಡೆಗೋಡೆಯಂತೆ ಹಾಕಿದ್ದ ಕಲ್ಲು ರಾಶಿಗಳನ್ನು ಜಿಗಿದು ಗಾಳಿಮರದ ತೋಪಿನಿಂದ ಹಾದು ರಸ್ತೆಯ ಹಾದಿ ಹಿಡಿದ ಕಥೆಗಾರ.ನೆಲದವರೆಗೂ ಇಳಿದಿದ್ದ ಮಂಗಳೂರಿನ ಹಂಚಿನ ಸಣ್ಣ ಮನೆ ಅದು. ಜನ ಸಮೂಹವೆ ಅಲ್ಲಿ ನೆರೆದಿತ್ತು.ಚಂದ್ರಚೂಢ ಗಾಳಿಯಲ್ಲಿ ತೂರಿ ಕಳುಹಿಸಿದ್ದ ಸಂದೇಶ ಅದು! ಹೃದಯ ಕೈಯಲ್ಲಿಯೇ ಹಿಡಿದುಕೊಂಡು ಬಂದಿದ್ದ ಸಮೀರ.ರಾತ್ರಿಗೆ ತನ್ನಿಂದ ಬೀಳ್ಕೊಟ್ಟ ಹೆಣ್ಣು ಶವವಾಗಿದ್ದಾಳೆ?! ಅವಳ ಕೊರಡಿನಂತಹ ದೇಹ ನೋಡುವ ಧೈರ್ಯವಿರಲಿಲ್ಲ. ಹೋಗದಿದ್ದರೆ ಚಂದ್ರಚೂಢನ ವ್ಯಂಗ್ಯದ ಮಾತುಗಳನ್ನು ಎದುರಿಸಬೇಕಾದ ಪರಿಸ್ಥಿತಿ. ಯಾವುದೋ ಅವಿನಾಭಾವ ಸಂಬಂಧ ಬೆಳೆದಿತ್ತು."ನಿಮ್ಮ ಎಲ್ಲಾ ಕಥೆಗಳನ್ನು ಓದಿದ್ದೀನಿ ಸಮೀರ. ಕುತೂಹಲ ಉಳಿಸಿಕೊಂಡು ಅದೇಗೆ ಬರಿತೀರೋ? ನಿಮ್ಮ ಶೈಲಿ ಕೂಡ ವಿಭಿನ್ನ. ಮುಂದೆ ಯಾವ ಕಥೆ ಬರಿತೀರಾ?"ಸಮುದ್ರ ದಂಡೆಯಲ್ಲಿ ಕುಳಿತು ಕಾಗದದ ಮೇಲೆ ಪೆನ್ನು ಆಡಿಸುತ್ತಿದ್ದಾಗ ಅಲೆಗಳ ಜೊತೆಗೆ ಆಟವಾಡುತ್ತಿದ್ದವಳು ಪರಿಚಯ ಮಾಡಿಕೊಂಡು ಆಶ್ಚರ್ಯದಿಂದ ಕೇಳಿದ್ದಳು.ಸ್ಫುಟವಾಗಿ ಶಿಲ್ಪಿ ಕಡೆದ ಶಿಲ್ಪದಂತಿದ್ದ ದೇಹ ಸೌಂದರ್ಯವನ್ನು ಪುರುಷರ ಕಣ್ಣಿಗೆ, ಬಾಣ ಬಿಟ್ಟಷ್ಟೆ ವೇಗವಾಗಿ ಆಕರ್ಷಿಸುತ್ತಿದ್ದಳು.ಕಥೆಗಾರನೆಂಬ ಆತ್ಮೀಯತೆ, ಜೊತೆಗೆ ಒಂಟಿ ಯುವಕ! ಎಲ್ಲರಿಗಿಂತಲೂ ಬಹಳವಾಗಿಯೇ ಹಚ್ಚಿಕೊಂಡಿದ್ದಳು.ಬದುಕಿನ ಕಹಿ ಘಟನೆಯನ್ನು ಬಿಚ್ಚಿಟ್ಟ ಕಥೆಯ ರೂಪದಲ್ಲಿ!"ತನುಹಾಳ ಸಾವು ನಿಜವಲ್ಲಾಂತ ನೀವು ಹೇಗೆ ನಿರೂಪಿಸ್ತೀರಾ?" ಕಥೆ ಕೇಳಿದ ನಂತರ ತೊದಲಿದ್ದಳು."ಅದನ್ನು ನಿನಗೆ ಹೇಳಿದ್ರೆ ಮಜ಼ಾ ಇರೋಲ್ಲ ಶಾಲಿ. ಒಂದು ವಾರದಲ್ಲಿ ಬರೆದು ಮುಗಿಸ್ತೀನಿ. ನೀನೇ ಓದು..."ಶೀರ್ಷಿಕೆಯಲ್ಲಿಯೇ ನಿಂತಿತ್ತು ಕಥೆ. ಹೇಳಲೇ ಬಾರದಿದ್ದ ಬದುಕಿನ ಕಥೆ. ತನುಹಾಳ ಜೊತೆಗಿನ ನಿಜ ಬದುಕು! ತಪ್ಪಿ ನಾಲಗೆ ಒದರಿತ್ತು ಅದನ್ನು.ಜನ ಸಮೂಹದ ನಡುವೆ ತೂರಿಕೊಂಡು ಮನೆಯ ಒಳಗೆ ಇಣುಕು ಹಾಕಿದ. ಸತ್ತವಳ ಮುಖದಲ್ಲಿ ಪ್ರಶಾಂತತೆಯಿರಲಿಲ್ಲ. ಸಾವಿನ ಭೀತಿ ಮುಖದಲ್ಲಿ ವಿಕಾರವಾಗಿತ್ತು. ನುಣುಪು ಹೊಟ್ಟೆಯ ಮೇಲೆ ಬಲವಾಗಿ ಇರಿದಂತೆ ಇತ್ತು ಗಾಯ. ಜಗುಲಿಯ ಉದ್ದಕ್ಕೂ ನೀರು ಹರಿದಂತೆ ಕಾಣುತ್ತಿತ್ತು ರಕ್ತ!ಹೆಚ್ಚು ಹೊತ್ತು ನಿಲ್ಲಲಾರೆನೆನಿಸಿತು. ಹಾಗೇ ಹಿಂದಕ್ಕೆ ತಿರುಗಿದ.ಭುಜದ ಮೇಲೆ ಭಾರವಾದ ಕೈಗಳು ಬಿದ್ದಾಗ ಬೆದರಿದ. ಮುಖ ತಿರುಗಿಸಿ ನೋಡಿದ. ಚಂದ್ರಚೂಢ!ಯಾವೊಂದು ಭಾವನೆಯೂ ಆ ನೋಟದಲ್ಲಿರಲಿಲ್ಲ. ಮುಖ ಮತ್ತಷ್ಟು ಕಳಹೀನವಾಯಿತು."ನಿನ್ನೆ ರಾತ್ರಿಗೆ ನಿನ್ನ ಜೊತೆಗಿದ್ಲು... ಪೊಲೀಸ್ ನಿನ್ನ ಮನೆಯವರೆಗೂ ಬಂದ್ರೂ ಆಶ್ಚರ್ಯವಿಲ್ಲ"ಬಾಂಬ್ ಸಿಡಿಸಿದಂತೆ ಹೇಳಿದ. ಸಂಪೂರ್ಣ ತಿರುಗಿದ ಸಮೀರ ತರತರ ಕಂಪಿಸಿದ. ತಾನಾಗಿ ಮೈ ಮೇಲೆ ಎಳೆದುಕೊಂಡ ಸಮಸ್ಯೆ.ಚಂದ್ರಚೂಢನ ಕೈ ಹಿಡಿದುಕೊಂಡು ತೆಂಗಿನ ತೋಟದ ಮಧ್ಯೆ ಬಂದ. ಕಣ್ಣೀರು ಯಾವ ಕ್ಷಣದಲ್ಲಿಯಾದರೂ ಹೊರಗೆ ಬರುವಂತೆ ಇತ್ತು."ಚಂದ್ರಚೂಢ, ನನ್ನ ಹೆದರಿಸ್ಬೇಡ. ನನ್ನ, ಶಾಲಿನಿಯ ಸಂಬಂಧ ಯಾರಿಗೂ ತಿಳಿಯದಂತೆ ಕಾಪಾಡು" ಆತುರಾತುರವಾಗಿ ಜೇಬಿಗೆ ಕೈಯಿಳಿಸಿ ಐದು ನೂರರ ಒಂದು ನೋಟು ತೆಗೆದು ಅವನ ಕಿಸೆಯಲ್ಲಿಳಿಸಿದ.ಗಂಭೀರ ಚಿಂತೆಗೊಳಗಾದ."ನಿನ್ನ ತಪ್ಪಿಲ್ಲ ಸಮೀರ. ಅವಳು ನಿನ್ನನ್ನ ತುಂಬಾ ಪ್ರೀತಿಸಿದ್ಲು. ನಿನ್ನ ಕಥೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ಲು... ಆದ್ರೆ...""ಆದ್ರೆ... ಏನು? ನನ್ನ ಜೊತೆಗೆ ದೈಹಿಕ ಸಂಬಂಧ ಇತ್ತೂಂತನಾ?" ಅಲುಗಿಸಿ ಕೇಳಿದ. ಚಂದ್ರಚೂಢ ನೆರೆದಿದ್ದ ಜನರ ಕಡೆಗೆ ನೋಡಿದ."ಅಲ್ಲ... ನಿನ್ನ ಐವತ್ತನೆ ಕಥೆ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ಲು. ತನುಹಾ ನಿನ್ನ ಕಲ್ಪನೆಯ ಹೆಣ್ಣಲ್ಲವಂತೆ... ನಿನ್ನ ಬದುಕಿನಲ್ಲಿ ಬಂದ ಹುಡುಗಿಯಂತೆ. ಅವಳ ಸಾವು ನಿನ್ನನ್ನು ಮುಂಬೈ ಬಿಟ್ಟು ಬರುವಂತೆ ಮಾಡಿದೆಯಂತೆ. ನಿಜವೇನಾ?"ತತ್ತರಿಸಿದ ಕಥೆಗಾರ ತಲೆಯ ಮೇಲೆ ಕೈಯಿಟ್ಟು ನಿಂತ. ಚಂದ್ರಚೂಢನ ಸಾಂತ್ವನದ ಕೈಗಳು ಮತ್ತೊಮ್ಮೆ ಭುಜದ ಮೇಲೆ ಬಿದ್ದಾಗ ಕಣ್ಣೀರು ಇಳಿಯಿತು.ಪೊಲೀಸ್ ಜೀಪು ರಸ್ತೆಯ ನಡುವೆ ನಿಂತಾಗ ಎಚ್ಚರಿಸಿದ."ನೀನು ಮನೆ ಸೇರ್‍ಬಿಡು. ನನಗೆ ಗೊತ್ತಿರೋ ವಿಷಯ ನಾನು ಯಾರಿಗೂ ಹೇಳೊದಿಲ್ಲ" ರಸ್ತೆ ದಾಟಿ ಮರಳ ರಾಶಿಯ ಮೇಲೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಮನೆಯತ್ತ ನಡೆದ.ಮುಂಬೈನ ಸಮುದ್ರ ತೀರಕ್ಕಿಂತ ದಕ್ಷಿಣದ ತೀರ ಅಪಾಯವಲ್ಲದ ತಾಣವೆಂದು ತಿಳಿದಿದ್ದ. ನಿರ್ಧಾರ ಬುಡಮೇಲಾಯಿತು.ಶಾಲಿನಿ, ತನುಹಾಳ ಬಗ್ಗೆ ತಲೆಕೆಡಿಸಿಕೊಂಡಿದ್ದಾಳೆ! ತನ್ನಿಂದ ಸತ್ಯ ತಿಳಿದು ಏನೋ ಸಾಧಿಸಲು ಹೊರಟಿದ್ದಾಳೆ! ಅವಳ ಸಾವು ತನಗೆ ಪ್ರತಿಕೂಲವೇ ಆಗಿದೆ!ನಿಡಿದಾದ ಉಸಿರು ದಬ್ಬಿ ಮಂಚಕ್ಕೊರಗಿದ.ಚಂದ್ರಚೂಢ ನಂಬಿಕೆಯ ವ್ಯಕ್ತಿ. ಶಾಲಿನಿಗೆ ಹೇಳಿದ ತನುಹಾಳ ಕಥೆ ಅವನ ಕಿವಿಯ ಮೇಲೂ ಬಿದ್ದಿದೆ. ತಲೆ ಒಂದೇ ಸಮನೆ ಸಿಡಿಯುವ ನೋವು.ಅನಿರೀಕ್ಷಿತವೆಂಬಂತೆ ಬಾಗಿಲ ಮೇಲೆ ಬಡಿತದ ಸದ್ದು! ಜೊತೆಗೆ ಬೂಟುಗಳ ಸದ್ದು! ಆತಂಕದಿಂದ ಎದ್ದು ಕುಳಿತ. ಮೆದುಳು ನಿಷ್ಕ್ರೀಯವಾಯಿತು.ಪೊಲೀಸ್ ಬರದಂತೆ ನಿಗ್ರಹಿಸುತ್ತೇನೆಂದಿದ್ದ ಚಂದ್ರಚೂಢ. ಅವನ ಮೇಲಿರಿಸಿದ ಅತಿಯಾದ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾನೆ. ಬೆದರು ಕೈಗಳಿಂದಲೇ ಬಾಗಿಲು ತೆರೆದು ನಿಂತ.ಅವನನ್ನು ದೂಡಿಕೊಂಡಂತೆ ಬಂದ ಚಂದ್ರಚೂಢ. ಜೊತೆಗೆ ನಡುವಯಸ್ಸಿನ ದಢೂತಿ ಹೆಂಗಸು. ಉಪಚರಿಸುವ ಅಗತ್ಯವಿಲ್ಲದಂತೆ ಬೆನ್ನು ಮುರಿದ ಕುರ್ಚಿಯಲ್ಲಿ ದೊಪ್ಪನೆ ಕುಸಿದು ಕುಳಿತಿತು."ಸಮೀರ, ಇವರು ಈ ಮನೆಯ ಒಡತಿ... ಶಶಿರೇಖಾಂತ. ನೀನು ಎದುರಿಸುತ್ತಿರೋ ಸಮಸ್ಯೆಯಲ್ಲಿ ಇವಳು ಸಿಕ್ಕಿ ಬಿದ್ದಿದ್ದಾಳೆ"ಮೊದಲೇ ಹೆದರಿದವನ ಮೇಲೆ ಚೇಳು ಹಾಕಿದಂತಾಯಿತು. ಗೋಡೆಗೆ ಅಂಟಿದಂತೆ ಒರಗಿದ."ನಾನು ಎದುರಿಸುತ್ತಿರೋ ಸಮಸ್ಯೆ ಯಾವುದು?" ಬೆರಗು ಕಣ್ಣಿನಿಂದ ಕೇಳಿದ ಕಥೆಗಾರ."ನಾನು ಹೇಳಿದ್ನಲ್ಲಾ... ನೀವಿಬ್ರೂ ಒಂದೇ ಸಮಸ್ಯೆನಾ ಎದುರಿಸ್ತಾ ಇದ್ದೀರಿ" ಅರ್ಥವಾಗದೆ ಕುಳಿತಿದ್ದ ಹೆಂಗಸಿನತ್ತ ಮುಖ ಹೊರಳಿಸಿದ. ತಲೆಯ ಮೇಲೆ ಕೈ ಹೊತ್ತು ಕೊಂಡು ಕುಳಿತಿತ್ತು ಹೆಂಗಸು."ಸತ್ತಿರೋ ಶಾಲಿನಿಯ ದೂರದ ಸಂಬಂಧಿ ಈಕೆ. ಶಾಲಿನಿಯ ಕೊಲೆ ಮಾಡಿರೋದು ಇವಳೂಂತ ಶಾಲಿನಿಯ ತಂದೆಯ ಆರೋಪ"ಶಾಲಿನಿಯ ಸಾವಿಗೆ ತಾನು ಕಾರಣವಲ್ಲವೆನ್ನುವ ನೆಮ್ಮದಿ ತುಂಬಿದರೂ, ಅವಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚಂದ್ರಚೂಢನನ್ನು ನಂಬುವಂತಿಲ್ಲ."ಆ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿರೋದು ಹೇಗೆ?" ಕುತೂಹಲವಿತ್ತು ಪ್ರಶ್ನೆಯಲ್ಲಿ. ಶಶಿರೇಖಾ ತಲೆ ಕೆಳಗೆ ಹಾಕಿ ಕುಳಿತಿದ್ದಳು. ಚಂದ್ರಚೂಢ ಅವಳ ಮುಖವನ್ನೊಮ್ಮೆ ದಿಟ್ಟಿಸಿದ. ನಿಸ್ತೇಜಕವಾಗಿತ್ತು ಕಣ್ಣುಗಳು. ಕಥೆಗಾರನಿಗೆ ಉತ್ತರ ಕೇಳುವ ಕಾತುರ."ಹತ್ತು ವರ್ಷಗಳ ಹಿಂದೆ ಬಿಷನ್‍ಲಾಲ್‍ನನ್ನು ಅಗಾಧವಾಗಿ ಪ್ರೀತಿಸಿದ ಹೆಣ್ಣು ಇವಳು. ದಕ್ಷಿಣದ ಮರಳ ದಂಡೆಗೆ ಬಂದವನಿಗೆ ಕೈ ತುಂಬಾ ಹಣ ಸಂಪಾದನೆಯ ದಾರಿ ಸೂಚಿಸಿದವಳೂ ಇವಳೇ. ಇವಳ ನೆನೆಪಿಗಾಗಿ ಈ ಬಂಗ್ಲೆಯನ್ನು ಖರೀದಿಸಿದ್ದ. ಆದರೆ... ಅವನ ವ್ಯವಹಾರ ಅರ್ಧಕ್ಕೆ ನಿಂತು ಹೋಯಿತು. ಹೇಳ ಹೆಸರಿಲ್ಲದೆ ಮುಂಬೈಗೆ ಓಡಿದ"ಬಿಷನ್‍ಲಾಲ್‍ನ ಹೆಸರು ಕೇಳುತ್ತಲೇ ಎದೆ ನಡುಗಿತು. ಚಂದ್ರಚೂಢ ಶಾಲಿನಿಯಿಂದ ಮಾಹಿತಿ ಸಂಗ್ರಹಿಸಿಕೊಂಡು ಸುಳ್ಳು ಕಥೆ ಹೆಣೆಯುತ್ತಿದ್ದಾನೆ. ಅದಕ್ಕೆ ಪೂರಕವಾಗಿ ಅವನು ನೀಡಿರುವ ಉತ್ತರ ಕೂಡ ಸಮಂಜಸವಾದುದಲ್ಲ."ಸಮಸ್ಯೆಗೆ ಸರಿಯಾದ ಉತ್ತರ ನೀಡ್ಲಿಲ್ಲ ನೀನು..."ತಲೆ ಅಡಿಗೆ ಹಾಕಿ ಕುಳಿತಿದ್ದ ಹೆಂಗಸು ಮುಖವೆತ್ತಿ ನೋಡಿತು. ಏನೋ ಹೇಳುವ ಕಾತುರವಿತ್ತು. ಚಂದ್ರಚೂಢ ತಡೆದ."ತಾಳ್ಮೆಯಿಂದ ಕೇಳು. ರಾತ್ರಿ ಇಲ್ಲಿಗೆ ಬರೋ ಸ್ಮಗ್ಲಿಂಗ್ ದೋಣಿಯಲ್ಲಿ ಬಿಷನ್‍ಲಾಲ್ ಆಗಾಗ ಕಾಣಿಸಿಕೊಳ್ತಾನೆ. ಅವನು ತರೋ ವಸ್ತುಗಳಿಗಾಗಿ ಜನ ಮಧ್ಯರಾತ್ರಿಯವರೆಗೂ ಲಂಗರು ಹಾಕಿರೋ ದೋಣಿಯ ಬಳಿ ಕಾಯ್ತಾರೆ"ಆಶ್ಚರ್ಯದಿಂದ ಕಣ್ಣು ಅಗಲವಾಯಿತು. ಬಾಯಿಯಿಂದ ಹೊರಟ ಉದ್ಗಾರ ಗಂಟಲಿನೊಳಗೆ ಸೇರಿತು. "ಅಂದ್ರೆ..." ಉಗುಳು ನುಂಗಿಕೊಂಡ."ಅಂದ್ರೆ... ಹಾಂ... ಹೌದು ಪೆಟ್ರೋಮ್ಯಾಕ್ಸ್ ಹಿಡ್ಕೊಂಡು ದೋಣಿಯ ಬಳಿ ಕಾಯೋದು ಬಿಷನ್‍ಲಾಲ್‍ಗಾಗಿ... ಅವನು ಯಾವಾಗ ಬರ್‍ತಾನೇಂತ ಹೇಳೋಕಾಗೋದಿಲ್ಲ. ಬಂದಾಗಲೆಲ್ಲಾ ಲಕ್ಷಗಟ್ಟಲೆ ಮಾಲು ತರ್‍ತಾನೆ" ನಿಗೂಢವಾಗಿದ್ದ ಒಂದು ಸಂಗತಿ ಬಿಚ್ಚಿಕೊಂಡಾಗ ಆತಂಕ ಕಡಿಮೆಯಾಯಿತು. ಆದರೂ ಅಪಾಯ ತಪ್ಪಿದ್ದಲ್ಲ. ಬಿಷನ್‍ಲಾಲ್... ತನುಹಾಳ ಚಿಕ್ಕಪ್ಪ! ತನಗೆ ಆಸರೆ ನೀಡಿರುವ ಪಾಳು ಬಂಗಲೆ ಅಪಾಯದ ತಾಣ!ಶಶಿರೇಖಾಳನ್ನು ಕಾಣಲು ಬರುವ ಬಿಷನ್‍ಲಾಲ್‍ಗೆ ಸುಲಭವಾಗಿ ಆಹಾರವಾಗಬಹುದು. ಬೆನ್ನ ಹುರಿಯಲ್ಲಿ ಚಳಿಯಾಡಿದಂತಾಯಿತು."ಒಪ್ಪಿಕೊಳ್ತೀನಿ ಚಂದ್ರಚೂಢ. ಆದ್ರೆ... ಶಾಲಿನಿಯ ಕೊಲೆ ಮಾಡ್ದೋರು ಯಾರು? ಯಾಕೇಂತ? ಈ ಸಮಸ್ಯೆಯಲ್ಲಿ ಶಶಿರೇಖಾ ಸಿಕ್ಕಿ ಹಾಕಿಕೊಳ್ಳುವುದು ಹೇಗೆ?""ನಿನ್ನ ಹಾಗೆ..." ತಟ್ಟನೆ ಉತ್ತರಿಸಿದ ಚಂದ್ರಚೂಢ."ಅರ್ಥವಾಗ್ಲಿಲ್ಲ. ಸುಮ್ನೆ ನನ್ನ ಹೆದರಿಸ್ತೀಯಾ?"ಸಮೀರನ ಮಾತಿಗೆ ಕಿಟಕಿಯ ಬಳಿಗೆ ಸರಿದು ನಿಂತು ವ್ಯಂಗ್ಯದ ನಗೆ ನಕ್ಕ."ಅವಳು ನಿನ್ನ ಅಭಿಮಾನೀಂತ ಆವರಿಸಿದ್ಲು... ಇವಳಿಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಮಗಳೂಂತ ಒಪ್ಪಿಕೊಳ್ಳಬೇಕಾಯಿತು"ಸಮಸ್ಯೆಯೊಂದು ನೂರಾರು ಗಂಟುಗಳಾಗಿ ಸಿಕ್ಕಿ ಹಾಕಿಕೊಂಡಂತೆ ಇತ್ತು. ಪ್ರಶ್ನಾರ್ಥಕ ನೋಟ ಬೀರಿದ."ಬಿಷನ್‍ಲಾಲ್‍ನ ಮಗಳು ಅವಳು. ಯಾವುದೋ ಕೆಂಪುದೀಪದ ಏರಿಯಾಕ್ಕೆ ಹೋಗೋ ಹೆಣ್ಣನ್ನು ಕರೆದುಕೊಂಡು ಬಂದು ಇವಳ ಕೈಗೆ ಒಪ್ಪಿಸ್ದ. ಹಿಂದೆ ಮುಂದೆ ಆಲೋಚಿಸದೆ ಅವಳನ್ನು ಸಾಕಿದ್ಲು. ಆದ್ರೆ... ಈಗ..."ಅಲ್ಲಿಯವರೆಗೂ ಸುಮ್ಮನಿದ್ದ ಹೆಂಗಸು ಚೀರಿದಳು."ಚಂದ್ರಚೂಢ, ನೀನು ಢಂಗುರ ಬಾರ್‍ಸಿ ನನ್ನ ಜೈಲು ಸೇರೋ ಹಾಗೆ ಮಾಡ್ತಿದ್ದೀಯಾ"ಚಂದ್ರಚೂಢನ ಮುಖದಲ್ಲಿ ಅದೇ ನಗು!"ಶಶಿರೇಖಾ, ಆತುರ ಪಡ್ಬೇಡಾ. ಇದು ಐವತ್ತನೆ ಕಥೆ. ಕೊನೆಯವರೆಗೂ ಕುತೂಹಲ ಉಳಿಸ್ಕೊಂಡು ಬರೆಯೋ ಕಥೆಗಾರನಿಗೆ ಸಹಾಯವಾಗ್ಲೀಂತ ಹೇಳ್ತಿದ್ದೀನಿ"ಸಹನೆ ಕಳೆದುಕೊಂಡ ಹೆಂಗಸು ಕುರ್ಚಿಯಿಂದ ಎದ್ದು ನಿಂತು ಚಂದ್ರಚೂಢನತ್ತ ಧಾವಿಸಿತು. ಆತ ಕೈ ಅಡ್ಡ ತಂದು ಪಕ್ಕಕ್ಕೆ ತಳ್ಳಿದ. ಸಮತೋಲನ ಕಳೆದುಕೊಂಡಂತೆ ದೊಪ್ಪನೆ ನೆಲದ ಮೇಲೆ ಬಿದ್ದಳು. ಸಮೀರ ಸಹಾಯಕ್ಕೆ ಧಾವಿಸಿದ."ಬಿಟ್ಟು ಬಿಡು ಸಮೀರ. ಶಾಲಿನಿಗೆ ನೀನು ಯಾರೂಂತ ಚೆನ್ನಾಗಿ ಗೊತ್ತಿತ್ತು. ನಿನ್ನ ಮೇಲೆ ಸೇಡು ತೀರಿಸಿಕೊಳ್ಳೋದಿಕ್ಕೆ ಕಾಯ್ತ ಇದ್ಲು. ಅದನ್ನು ಶಶಿರೇಖಾಳ ಮುಂದೆ ಬಿಚ್ಚಿಟ್ಲು"ಶಶಿರೇಖಾಳನ್ನು ಮೇಲಕ್ಕೆತ್ತಿ ಕೂರಿಸಿದವನು ಆಘಾತಕ್ಕೊಳಗಾದವರಂತೆ ನಿಂತ."ಆಶ್ಚರ್ಯ ಅನ್ಸುತ್ತಲ್ಲಾ...? ನಿನ್ನ ಐವತ್ತನೆ ಕಥೆ ಕಲ್ಪನೆಯದಲ್ಲ, ನಿಜ ಕಥೆ... ತನುಹಾ ಕಾಲ್ಪನಿಕ ಪಾತ್ರವಲ್ಲ, ನಿನ್ನ ಪ್ರೀತಿಸಿದ ಹುಡುಗಿ. ಅವಳು ಸತ್ತಿಲ್ಲ, ನೀನೂ ಕೊಲೆ ಮಾಡ್ಲಿಲ್ಲ. ಅವಳನ್ನು ಕೊಂದಿದ್ದು..."ಅವನ ಮಾತು ಪೂರ್ತಿಯಾಗಿರಲಿಲ್ಲ ಹೆಂಗಸು ಎದ್ದು ಪೂತ್ಕರಿಸುತ್ತಾ ಚಂದ್ರಚೂಢನ ಕುತ್ತಿಗೆಯಲ್ಲಿ ಹಿಡಿಯಿತು. ಅಸಹಾಯಕತೆಯಿಂದ ಕೈ ಎತ್ತಿದ. ಕಣ್ಣಗುಡ್ಡೆಗಳು ಹೊರಕ್ಕೆ ಬಂದಂತಾಯಿತು. ಸಮೀರ ಸಹಾಯಕ್ಕೆ ಧಾವಿಸಿ ಹೆಂಗಸನ್ನು ದೂರ ಸರಿಸಿದ. ಸೋತಂತೆ ಕುಸಿದು ಕುಳಿತಳು."ತನುಹಾ ಸಾಯೋದಿಕ್ಕೂ ಕಾರಣ ಇವಳೇ... ಈಗ ಶಾಲಿನಿನ ಕೊಂದಿದ್ದು ಇವಳೇ..."ಸಿಕ್ಕಿನಂತೆ ಜಟಿಲವಾದ ಸಮಸ್ಯೆಯ ಗಂಟು ಮೆಲ್ಲಗೆ ಬಿಚ್ಚಿಕೊಂಡಿತು."ಇವಳು ಬಿಷನ್‍ಲಾಲ್‍ನನ್ನು ಸ್ಮಗ್ಲಿಂಗ್ ಗುಂಪಿಗೆ ಸೇರಿಸಿ ಆಟವಾಡಿಸಿದ್ಲು. ಸಂಸಾರಸ್ಥ ಬಿಷನ್‍ಗೆ ತನ್ನ ಮಕ್ಕಳ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ತನುಹಾ, ತನುಜಾ ಇಬ್ಬರೂ ಅವನ ಮಕ್ಕಳು. ಕೊಲೆಯಾಗಿರೋ ಶಾಲಿನಿನೇ ತನುಜಾ... ತನುಹಾ ಓದಿ, ಪದವಿ ಪಡೆದು ಮುಂದೆ ಬಂದ್ಲು. ಈ ಹೆಂಗಸಿಗೆ ಅದನ್ನು ಸಹಿಸೋದಕ್ಕಾಗ್ಲಿಲ್ಲ. ತಾನು ಬಿಷನ್‍ಲಾಲ್‍ನಿಂದ ಗಳಿಸಿಕೊಂಡಿರೋ ನಗ, ನಗದು, ಆಸ್ತಿಯೆಲ್ಲಾ ಅವನ ಮಕ್ಕಳಿಗೆ ಸೇರುತ್ತೇಂತ ಸಾಯಿಸ್ಲಿಲ್ಲ. ಬದಲಾಗಿ ತನ್ನ ಅಡ್ಡದಾರಿಗೆ ಅವರಿಬ್ಬರನ್ನೂ ಸೇರಿಸೋದಿಕ್ಕೆ ನೋಡಿದ್ಲು. ಅವರಿಬ್ರೂ ಒಪ್ಲಿಲ್ಲ""ತನುಹಾ ಬಂಡೆಯಿಂದ ಅಲೆಗಳ ಹೊಡೆತಕ್ಕೆ ಸಿಕ್ಕಿ, ಬಿದ್ದಿದ್ದನ್ನು ನಾನು ನೋಡಿದ್ದೀನಿ""ಅದು ನೀನು ತಿಳ್ಕೊಂಡಿರೋ ತಪ್ಪು ಸಮೀರ. ಶಶಿರೇಖಾ, ತನುಹಾಳನ್ನು ಮಾನಸಿಕವಾಗಿ ಹಿಂಸಿಸಿದ್ದಾಳೆ. ನೊಂದು ಹೋದ ಅವಳು ನಿನ್ನ ಪ್ರೀತಿಗಾಗಿ ಕಾದ್ಲು. ನೀನು ಸರಿಯಾದ ಉತ್ತರ ಕೊಡ್ಲಿಲ್ಲ. ಹುಚ್ಚಿಯಂತೆ ಬಂಡೆಯೇರಿ ಕುಳಿತಿದ್ಲು. ನೀನು ಅಲ್ಲಿಗೆ ಹೋಗದಿದ್ರೂ ಆ ದಿನ ಅವಳು ನಿರ್ಧರಿಸಿದಂತೆ ಆತ್ಮಹತ್ಯೆ ಮಾಡಿಕೊಳ್ತಾ ಇದ್ಲು. ಅದಕ್ಕೆ ಸಾಕ್ಷಿ ಅವಳು ತನ್ನ ಕೋಣೆಯಲ್ಲಿ ಬರೆದಿಟ್ಟಿರೋ ಪತ್ರ. ಅದನ್ನು ಶಾಲಿನಿ ನನಗೆ ತೋರಿಸಿದ್ಲು. ಅದರಲ್ಲಿ ನಿನ್ನ ಹೆಸರು ಇದ್ದಿದ್ದನ್ನು ನೋಡಿ ಅವಳು, ತನುಹಾಳ ಸಾವಿಗೆ ನೀನೇ ಕಾರಣಾಂತ ತಿಳಿದಿದ್ಲು... ಆದ್ರೆ ನಿನ್ನೆ ರಾತ್ರಿ ಶಾಲಿನಿ ನಿನ್ನ ಭೇಟಿಯಾಗೋದನ್ನು ಕದ್ದು ಹಿಂಬಾಲಿಸಿದ ಇವಳು, ಮನೆಗೆ ಬಂದವಳಿಗೆ ನಿನ್ನ ಭೇಟಿಯಾಗದ ಹಾಗೆ ಷರತ್ತು ಹಾಕಿದ್ಲು. ಮಾತಿಗೆ ಮಾತು ಬೆಳೆದು ಅವಳನ್ನು ಇರಿದ್ಲು... ಇನ್ನೂ ಇವಳನ್ನು ಸುಮ್ನೆ ಬಿಟ್ಟಿರಬೇಕೂಂತ ಹೇಳ್ತೀಯಾ?"ತಲೆ ಸಿಡಿದು ಹೋಗುವಂತೆ ಭಾಸವಾಯಿತು. ಹಣೆಗೆ ಕೈಯೊತ್ತಿಕೊಂಡ ಕಥೆಗಾರ.ಬಾಗಿಲಿನ ಉದ್ದಕ್ಕೂ ಬಿದ್ದ ಪೊಲೀಸ್ ಅಧಿಕಾರಿಯ ನೆರಳಿಗೆ, ಪಶ್ಚಾತ್ತಾಪದ ಕಳೆಯೇ ಇರದ ಹೆಂಗಸು ಸೋತಂತೆ ಕುಸಿದು ಕುಳಿತಿತು.ಐವತ್ತನೆ ಕಥೆಯ ಹಾಳೆಯ ಕೊನೆಯ ಪುಟದಲ್ಲಿ `ಮುಗಿಯಿತು' ಎಂದು ಬರೆದ ಸಮೀರ ನಿಟ್ಟುಸಿರಿಟ್ಟ.


Read more!