Saturday, February 27, 2010

ಖಾಸನೀಸರ ಕಥೆಗಳು


ಖಾಸನೀಸರ ಕಥೆಗಳು: ಸ್ವಾರಸ್ಯಕರ, ಕುತೂಹಲ ಮತ್ತು ಕೆಲವೊಂದು ಜೀವನ ಮೌಲ್ಯಗಳನ್ನು ತಿಳಿಸುವ ಅಪರೂಪದ ಕಥಾ ಗುಚ್ಛ. ಇಲ್ಲಿಯ ಐದು ಕಥೆಗಳು ಸರ್ವೆ ಸಾಮಾನ್ಯ ನೀಳ್ಗತೆಗಳೆ. ಪುಟಗಳ ಪರಿಮಿತಿಯಿಲ್ಲದೆ ಬೆಳೆದ ಈ ಕಥೆಗಳು ಎಲ್ಲೂ ಬೋರ್ ಹೊಡೆಸುವುದಿಲ್ಲ. ಬದಲಾಗಿ ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಇಲ್ಲಿಯ ‘ಅಪಘಾತ’ ಕಥೆಯ ರಾಮನಾಥ, ‘ಹೀಗೂ ಇರಬಹುದು’ ಕಥೆಯ ಲಕ್ಷ್ಮಣ, ‘ತಬ್ಬಲಿಗಳು’ ಕಥೆಯ ತಂದೆ, ತಾಯಿ, ತಮ್ಮ ಮತ್ತು ತಂಗಿ ಪಾತ್ರಗಳು, ‘ಅಲ್ಲಾಉದ್ದೀನನ ಅದ್ಭುತ ದೀಪ’ ಕಥೆಯ ವಾಸು ಮತ್ತು ‘ಮೋನಾಲೀಸಾ’ ಕಥೆಯ ಪೆರ್ರೂಗಿ ಪಾತ್ರಗಳು ಕಥೆಗಳಿಗೆ ಜೀವಂತಿಕೆ ತುಂಬಿವೆ.

‘ಅಪಘಾತ’ ಕಥೆಯ ನಾಯಕ ಸಾವಿಗೆ ಅರ್ಥವಿಲ್ಲದ ಮುಂಬೈನ ಜೀವನದಲ್ಲಿ ಸ್ವಾಲಂಬಿಯಾಗಿ ಬದುಕುತ್ತಿರುವವನು ವಕೀಲ ರಾಮನಾಥ. ಒಮ್ಮೆ ತನ್ನ ಬಾಲ್ಯದ ನೆನಪುಗಳಲ್ಲಿ ಸೋತು ಹೋದ ನಿರ್ವೀಣ್ಯ ಮನೋಸ್ಥಿತಿಯಲ್ಲಿದ್ದಾಗಲೇ ಅತೀ ಶುಭ್ರ ಪಾರದರ್ಶಕ ಬಟ್ಟೆ ಧರಿಸಿದ್ದ ಯುವತಿಯನ್ನು ನೋಡುತ್ತಾನೆ. ಅವಳೂ ಪರಿಚಿತಳಂತೆ ನಗು ಬೀರುತ್ತಾಳೆ. ಮಾತ್ರವಲ್ಲ ಕಾಮುಕ ದೃಷ್ಟಿಯಿಂದ ಅವನನ್ನು ಸೆಳೆಯಲು ಪ್ರಯತ್ನಿಸುತ್ತಾಳೆ. ಅದೇ ಯುವತಿ ರೈಲಿನಲ್ಲಿಯು ಎದುರಾಗುತ್ತಾಳೆ. ಆಗ ಆ ಕಂಪಾರ್ಟ್ ಮೆಂಟ್ನಲ್ಲಿ ಅವರಿಬ್ಬರೇ ಇರುತ್ತಾರೆ. ತನ್ನ ತೆಕ್ಕೆಗೆ ಬೀಳದ ವ್ಯಕ್ತಿಯೊಬ್ಬನಿದ್ದಾನೆ ಅನ್ನುವ ಅಸಹನೀಯ ವಿಚಾರ ಅವಳ ಮನಸ್ಸನ್ನು ಕೆಡಿಸುತ್ತದೆ. ಅವಳು ಅವನನ್ನು ಇಕ್ಕಟಿಗೆ ಸಿಲುಕಿಸಿ ಅವರ ಹಣವನ್ನು ದೋಚುವ ಪ್ರಯತ್ನ ಮಾಡುತ್ತಾಳೆ. ಅದಕ್ಕೆಲ್ಲಾ ಜಗ್ಗದ ರಾಮನಾಥನಿಗೆ, ‘ತನ್ನನ್ನು ಬಲಾತ್ಕರಿಸಲು ಬಂದ’ನೆನ್ನುವ ಆರೋಪವನ್ನು ಹೊರಿಸಿ ಪೊಲೀಸರಿಗೂ ತಿಳಿಸುತ್ತಾಳೆ. ಆದರೆ ಇದರಿಂದ ವಿಚಲಿತನಾಗದ ಆತ ತಾನು ನಿರಪರಾಧಿ ಅನ್ನುವುದಕ್ಕೆ ಸಾಕ್ಷಿಯೆನ್ನುವಂತೆ ಎಲ್ಲರ ಸಮಕ್ಷಮದಲ್ಲಿ ತನ್ನ ಕೋಟನ್ನು ತೆಗೆಯುತ್ತಾನೆ. ಆತನಿಗೆ ಎರಡು ಕೈಗಳಿರುವುದಿಲ್ಲ. ಹಾಗಿರುವಾಗ ಬಲಾತ್ಕರಿಸುವ ಪ್ರಮೆಯವಿದೆಯೇ?

ಸಾಮಾಜಿಕ ನಿಯಮ- ನಿರ್ಬಂಧಗಳ ಮೂಲಕ ಹೆಣ್ಣು ಗಂದಿನ ಸಂಬಂಧ ವಿಷಯಕವಾದ ತೊಡಕುಗಳು ತಲೆದೋರುತ್ತವೆ. ‘ಹೀಗೂ ಇರಬಹುದು’ ಕಥೆಯಲ್ಲಿ ಇಳಿವಯಸ್ಸಿನಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ನಾಯಕರು, ಕಚ್ಚೆ ಸಡಿಲು ಅಚ್ಚಂಭಟ್ಟರ ಸಹವಾಸದಿಂದ ಅಂಭಕ್ಕನನ್ನು ಮದುವೆಯಾಗುತ್ತಾರೆ. ವಾರನ್ನಕ್ಕೆ ಬರುವ ಪುರೋಹಿತರ ಹುಡುಗ ಶ್ಯಾಮ ಅವರ ಮನೆಯಲ್ಲಿಯೇ ಒಬ್ಬನಾಗುತ್ತಾನೆ. ನಾಯಕರ ಹಿರಿ ಮಗ ರಾಮಣ್ಣ ಅಮೆರಿಕಾದಲ್ಲಿದ್ದು ಅಲ್ಲಿಯೆ ಸಂಸಾರಸ್ಥನಾಗುತ್ತಾನೆ. ಕಿರಿಯವನು ಲಕ್ಷ್ಮಣ ವೃತ್ತಿಯಲ್ಲಿ ವಕೀಲ. ಇದು ಇಷ್ಟು ಫ್ಲ್ಯಾಷ್ ಬ್ಯಾಕ್. ಕಥೆ ಆರಂಭವಾಗುವುದು ತನ್ನ ತಂದೆಯ ಸಾವಿನ ತಂತಿಯನ್ನು ಲಕ್ಷ್ಮಣ ಪಡೆದುಕೂಳ್ಳುವಲ್ಲಿಂದ. ನಾಯಕರಂತ ವ್ಯಕ್ತಿಗೆ ಈ ರೀತಿಯ ಸಾವು ಅಸಹನೀಯವೆಂದು ತಿಳಿದ ಮೇಲೆ ಲಕ್ಷ್ಮಣ ಆ ಸಾವಿನ ಹಿನ್ನಲೆಯನ್ನು ಹಿಡುಕೊಂಡು ಹೋಗುತ್ತಾನೆ. ಅವರದ್ದು ಆತ್ಮಹತ್ಯೆ ಹೌದು! ಕಾರಣ ಶ್ಯಾಮ ಹಾಗು ಅವರ ಎರಡನೆ ಹೆಂಡತಿ ಅಂಭಕ್ಕನಿಗೆ ಅನೈತಿಕ ಸಂಬಂಧವಿರುವುದು ತಿಳಿಯುತ್ತದೆ. ಅದಕ್ಕಾಗಿಯೇ ಶ್ಯಾಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಥೆಯ ತಿರುವು ಪಡೆಯುವುದು ಅಂಭಕ್ಕ ಬಸುರಿ ಅನ್ನುವ ವಿಷಯದಲ್ಲಿ. ಲಕ್ಷ್ಮಣ ವೈದ್ಯರನ್ನು ಭೇಟಿಯಾಗಿ ತನ್ನ ತಂದೆ ತನ್ನ ತಾಯಿ ಹೆರಲು ಅಸಮರ್ಥಳೆಂದು ತಿಳಿದಾಗ ಮಕ್ಕಳಾಗದಂತೆ ಅಪರೇಷನ್ ಮಾಡಿಕೊಂಡಿರುತ್ತಾರೆ. ಹಾಗೆ ಅಂಭಕ್ಕನ ಬಸುರಿಗೆ ಕಾರಣ ತಿಳಿಯುತ್ತದೆ. ಹಾಗೆ ಲಕ್ಷ್ಮಣನಿಗೆ ತನ್ನ ತಂದೆಯ ಸಾವಿನ ಹಿನ್ನಲೆಯೂ ತಿಳಿಯುತ್ತದೆ.

ವಿಭಿನ್ನ ಕಥಾವಸ್ತು ಮತ್ತು ನಿರೂಪಣೆಯಿರುವ ಕಥೆ ‘ತಬ್ಬಲಿಗಳು’ ಇಲ್ಲಿಯ ಪಾತ್ರಗಳು ತಂದೆ, ತಾಯಿ. ತಮ್ಮ, ತಂಗಿ ಮತ್ತು ಸೊಸೆ. ಮನೆಯ ಚುಕ್ಕಾಣಿ ಹಿಡಿದ ತಾಯಿ ಬಾಯಿ ಬಡಕಿ. ಅವಳ ಮಾತಿಗೆ ಯಾರ ದನಿಯೂ ನಿಲ್ಲಲಾರದು. ಸೊಸೆಯನ್ನು ನೆಮ್ಮದಿಯಿಂದ ಇರಗೊಡದವಳು. ಆದರೆ ಸೊಸೆ ಧೈರ್ಯವಂತೆ. ಅತ್ತೆ ಸಾಯುತ್ತೇನೆಂದಾಗ ಧೈರ್ಯವಾಗಿ ‘ಸಾಯುವವರು ಯಾರೂ ತಾನು ಸಾಯುತ್ತೇನೆ ಎಂದು ಹೇಳುವುದಿಲ್ಲ. ಸಾಯುವುದಕ್ಕೂ ಧೈರ್ಯವಿರಬೇಕು’ ಅನ್ನುವವಳು. ಅವಳೇ ಮುಂದೊಂದು ದಿನ ರೈಲಿನ ಗಾಲಿಗಳಿಗೆ ತಲೆಯೊಡ್ಡುತ್ತಾಳೆ. ತಂಗಿಗೆ ಹುಚ್ಚು ಕಾಯಿಲೆ ಹಿಡಿದಾಗ ತನ್ನ ಸೊಸೆಯೇ ಸತ್ತು ಪೀಡಿಸುತ್ತಾಳೆ ಎಂದು ಊರೀಡಿ ಹೇಳಿಕೊಳ್ಳುವ ಹೆಂಗಸು ತಾಯಿ. ತಮ್ಮನ ಹೆಂಡತಿ ಸತ್ತ ಮೇಲೆ ಅವನು ಮಲ್ಲಿಗೆ ಹೂವುಗಳ ಪರಿಮಳದ ಹಿಂದೆ ಮುಖ ಹೊರಳಿಸಿದವನು. ತಂಗಿಗೆ ಹಿಡಿದ ಕಾಯಿಲೆ ಗುಣವಾಗಲೆಂದು ಮಂತ್ರಾಲಯಕ್ಕೆ ಬರುವ ಕುಟುಂಬದ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಲೋಚಿಸುತ್ತಾ ದೂರವಾಗ ಬಯಸುತ್ತಾರೆ. ಇಲ್ಲಿ ಕುಟುಂಬದ ಜವಬ್ದಾರಿಯನ್ನು ಹೊರಲಾರದ ತಂದೆ, ಮಡದಿಯನ್ನು ಕಳೆದುಕೊಂಡ ಹದಿಹರೆಯದ ವಿಧುರ ತಮ್ಮ, ಹುಚ್ಚು ಹಿಡಿದ ತಂಗಿ ವಟವಟಿಸುತ್ತಾ ಸಂಸಾರ ನಡೆಸುವ ತಾಯಿ. ಕೊನೆಗೂ ರಥೋತ್ಸವದ ದಿನ ಅವರೆಲ್ಲಾ ಬೇರೆಬೇರೆಯಾಗಿ ತಬ್ಬಲಿಗಳಾಗುತ್ತಾರೆ. ಕಥೆಯನ್ನು ನಿರೂಪಿಸಿದ ಶೈಲಿ ನಾನಾ ರೀತಿಯಿಂದ ಚಿಂತನೆಗೆ ಹಚ್ಚುತ್ತದೆ.

‘ಅಲ್ಲಾಉದ್ದೀನನ ಅದ್ಭುತ ದೀಪ’ ಕಥೆಯಲ್ಲಿ ವಾಸು ತನ್ನ ತಾಯಿಯ ಕೋರಿಕೆಯಂತೆ ಕಕ್ಕ ಸತ್ಯಬೋಧನನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಒಂದು ರಾತ್ರಿಯಲ್ಲಿ ಪಾಪದ ಬೀಜ ಬಿತ್ತಿದ ಕಕ್ಕ ಒಳ್ಳೆಯವನೆ. ಅಂಬಕ್ಕನೇ ಆತನನ್ನು ಅಡ್ಡ ದಾರಿಗೆ ಎಳೆದರೂ ತನ್ನ ತಪ್ಪು ಇಲ್ಲದಿದ್ದರೂ ಸತ್ಯವನ್ನು ದನಿ ಏರಿಸಿ ಹೇಳದೆ ಮನೆ ಬಿಟ್ಟು ಹೋಗುತ್ತಾನೆ. ಅವನು ಮರಳಿ ಬಾರದಿದ್ದರೆ ಆ ಮನೆಯಲ್ಲಿ ತಮಗೆ ಅಸ್ಥಿತ್ವವೇ ಇಲ್ಲ, ಅದಕ್ಕಾಗಿ ಆಕಾಶ ಭೂಮಿ ಒಂದಾದರೂ ಸರಿಯೇ ಅವನನ್ನು ಹುಡುಕಿಕೊಂಡು ಬರುವಂತೆ ಒತ್ತಾಯಿಸುತ್ತಾಳೆ ವಾಸುವಿನ ತಾಯಿ. ಆದರೆ ಅದು ಅಲ್ಲಾಉದ್ದೀನನ ಅದ್ಭುತ ದೀಪವನ್ನು ಅರಸಿ ಹೊರಟಂತೆ ಆಗುತ್ತದೆ. ಕಥೆ ಅಪೂರ್ಣವೆನಿಸಿದರೂ ಅದನ್ನು ನಾನಾ ಕೋನಗಳಿಂದ ಆಲೋಚಿಸಲು ಓದುಗನಿಗೆ ಬಿಟ್ಟಿರುವುದು ಕಥೆಯ ಪ್ಲಸ್ ಪಾಯಿಂಟ್.

ವಾಸ್ತವದ ಎಳೆಯಿಂದನ್ನು ಹಿಡಿದು ಬರೆದ ಕಥೆ ‘ಮೋನಾ ಲೀಸಾ’. ಇಲ್ಲಿ ಪುನರ್ಜನ್ಮದ ಅನುಭಾವಾತೀತ ಸತ್ಯವನ್ನು ಪ್ರತಿಪಾದಿಸುವ ಹಿನ್ನಲೆಯಿದ್ದರೂ ಕೋರ್ಟು 400 ವರ್ಷಗಳ ಹಿಂದಿನ ಮೋನಾ ಲೀಸಾ ಹಾಗು ತಾನು ಉಪಚರಿಸಿದ ಮೆಟಿಲ್ಡಾಳ ನಡುವಿನ ಸಾಮ್ಯತೆಯನ್ನು ನಿರಾಕರಿಸಿ, ಮೋನಾಲೀಸಾ ಕಲಾಕೃತಿಯನ್ನು ಕದ್ದೊಯ್ದ ಆರೋಪದಲ್ಲಿ ಪೆರ್ರೂಗಿಯನ್ನು ಬಂಧಿಸುತ್ತದೆ. ತನ್ನ ಪ್ರೇಯಸಿಯನ್ನು ಮೋನಾಲೀಸಾಳಿಗೆ ಹೋಲಿಸುತ್ತ ಭಾವನೆಗಳನ್ನು ನವಿರಾಗಿ ಚಿತ್ರಿಸುತ್ತಾ ಪುನರ್ಜನ್ಮವನ್ನು ಕೆದಕುತ್ತ ಸಾಗುತ್ತದೆ ಕಥೆ.

ಸೃಜನಶೀಲತೆಯ, ಚಿಂತನಾ ವೈಖರಿಯಿರುವ ಖಾಸನೀಸರ ಕಥೆಗಳನ್ನು ಒಮ್ಮೆಯಾದರೂ ಓದಲೇಬೇಕು.

Read more!

Friday, February 26, 2010

ವಿವೇಕ ಶಾನಭಾಗ ಅವರ ಆಯ್ದ ಕಥೆಗಳು


ಸರಳವಾದ ಶೈಲಿಯಲ್ಲಿ ಮನಮುಟ್ಟುವಂತೆ ಬರೆಯುವ ವಿವೇಕ ಶಾನಭಾಗ ಅವರ ಕಥೆಗಳನ್ನು ಓದಿಯೇ ಆಸ್ವಾದಿಸಬೇಕು. ಇಲ್ಲಿಯ ಹೆಚ್ಚಿನ ಕತೆಗಳಲ್ಲಿ ಉತ್ತರ ಕನ್ನಡದ ಪಾತ್ರ ಚಿತ್ರಣಗಳಿವೆ. ಕೆ.ವಿ. ಸುಬ್ಬಣ್ಣ ಅವರ ನೆನಪಿನ ‘ಮೊದಲ ಓದು’ ಪುಸ್ತಕ ಮಾಲಿಕೆಯಲ್ಲಿ ಹೊರ ಬಂದಿರುವ ವಿವೇಕರ ಆಯ್ದ ಕಥೆಗಳ ಸಂಗ್ರಹಯೋಗ್ಯ ಕೃತಿ ಇದು.

ಕಂತು ನೀಳ್ಗತೆ ಸೇರಿದಂತೆ ಏಳು ಕಥೆಗಳಿರುವ ಈ ಕೃತಿಯ ಇತರ ಕಥೆಗಳು ಲಂಗರು, ಅಂತ:ಪಟ, ಹುಲಿ ಸವಾರಿ, ಸಶೇಷ, ಮತ್ತೊಬ್ಬನ ಸಂಸಾರ ಮತ್ತು ಶರವಣ ಸರ್ವಿಸಸ್."

ಲಂಗರು ಕಥೆಯಲ್ಲಿ ಮಚವೆಯ ಪ್ರಾಮುಖ್ಯತೆ ಕಡಿಮೆಯಾದಂತೆ ರಘುವೀರನ ಜೀವನವೂ ಹದಗೆಡುವಾಗ ಊರಿನವರ ದೃಷ್ಟಿಯಲ್ಲಿ ಭೋಳೇ ಸ್ವಭಾವದವನು ಅನಿಸಿಕೊಳ್ಳಬೇಕಾಗುತ್ತದೆ. ಆದರೆ ಆತ ಮುಗ್ಧ, ಎಲ್ಲರಿಂದಲೂ ಪಕ್ಕನೆ ಮೋಸಕ್ಕೆ ಒಳಗಾಗುವವ ಮತ್ತು ಸಂಬಂಧಗಳಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸದ ಉದಾರ ಮನಸ್ಸಿನವ. ಹಾಗಾಗಿಯೇ ಅವನು ಅಣ್ಣ ಅನಂತನಿಂದಲೂ ಮೋಸಕ್ಕೊಳಗಾಗಿ ಆಸ್ತಿಯ ಪಾಲಾಗಿ ಮಚವೆಯನ್ನು ಪಡೆದವನು. ಇದು ಅವನ ಮಡದಿಯ ಆರೋಪವೂ ಹೌದು. ಓದಿನಲ್ಲಿ ಅನಂತನಿಗಿಂತಲು ಜಾಣ. ಆದರೆ ವ್ಯವಹಾರದಲ್ಲಿ ಅಣ್ಣನ ಸೂತ್ರವಿರುವಾಗ ಅದರ ಒಳಗುಟ್ಟುಗಳನ್ನು ಅರಿಯುವಲ್ಲಿ ವಿಫಲನಾದವನು. ಮಚವೆಯ ಏರಿಳಿತದಲ್ಲಿ ಅಲೌಕಿಕದ ಬೆನ್ನು ಹಿಡಿದವನಿಗೆ ಶರಾವತಿ ನದಿಗೆ ಸೇತುವೆಯಾದಾಗ ಮಚವೆಯ ಪ್ರಾಮುಖ್ಯತೆ ಹೋಗಿ, ಒಂದು ಅಸ್ಥಿಪಂಜರವಾಗುವ ಸ್ಥಿತಿಯಂತೆ, ಮಡದಿಯ ಆಸ್ತಿಯ ಬೇಡಿಕೆಯಲ್ಲಿ ಮೌನವಾಗುತ್ತಾನೆ.

ಲಂಗರು ಕಥೆಯ ರಘುವೀರನಂತೆ ಅಂತ:ಪಟ ಕಥೆಯ ಮಹಾದೇವ. ಆತ ಕೆಲಸ ಮಾಡುತ್ತಿದ್ದ ಬಟ್ಟೆಯ ಮಿಲ್ಲು ಮುಚ್ಚಿದ ಬಳಿಕ ದರ್ಜಿಯ ಕೆಲಸಕ್ಕೆ ಬರುತ್ತಾನೆ. ಅಲ್ಲಿ ರಾಮಣ್ಣನಿಂದ ಎಲ್ಲವನ್ನೂ ಕಲಿತುಕೊಳ್ಳುತ್ತಾನಾದರೂ ಅಳತೆ ತೆಗೆಯುವ ಕೆಲಸ ಮಾತ್ರ ಕಲಿಯಲು ಅವಕಾಶವಿರುವುದಿಲ್ಲ. ಮದುವೆಯ ಅನಂತರ ಜೀವನ ಸುಸೂತ್ರವಾಗಿ ನಡೆದು, ಮಾವನ ಆಸ್ತಿಗೂ ಭಾದ್ಯಸ್ಥನಾಗುತ್ತಾನೆ. ಹೊಸ ಬದುಕಿಗೆ ಹೊಂದಿಕೊಳ್ಳುವಾಗ ರಾಗಿಣಿಯ ಪರಿಚಯವಾಗುತ್ತದೆ. ಗಂಡನಿಂದ ದೂರವಿರುವ ಅವಳು ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಾಳೆ. ಅವಳ ಸಾನಿಧ್ಯ, ತನ್ನ ಸಂಬಂಧ ನೂನ್ಯತೆಯ ಹೊಳೆಯದಿದ್ದ ಮನಸಿನಲ್ಲಿ ಹೊಸ ಪುಳಕ ಹುಟ್ಟಿಸುತ್ತದೆ. ಈ ಸಂಬಂಧ ಕಾಮಾತಿರೇಕ ತಲುಪಿ, ಈ ದೇಹಗಳ ಮೂಲಕ ಹೊಸ ದಾರಿಯನ್ನು ಹುಡುಕುತ್ತಿದ್ದೇನೆ ಅನಿಸುತ್ತದೆ. ಆದರೆ ಅವಳ ನಿರ್ಧಾರವನ್ನು ಕೇಳಿ ಅಸಾಧ್ಯದ ನಿರ್ಣಯ ನೀಡುತ್ತಾನೆ.

‘ಕಂತು’ ಗ್ರಹಣಕ್ಕೆ ಸಂಬಂಧಿಸಿದ ಒಂದು ಅತ್ಯುತ್ತಮ ಕಥೆ. ಮಾವಿನೂರಿನಲ್ಲಿ ಪೂರ್ಣ ಗ್ರಹಣ ಗೋಚರಿಸುವುದೆನ್ನುವಾಗ ದೇಶ ವಿದೇಶದಿಂದ ಜನರು ಅಲ್ಲಿಗೆ ಬರುತ್ತಾರೆ. ಸದಾನಂದ ಮಾಸ್ತರರಿಗೆ ಗ್ರಹಣದ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡು ಊರವರಿಗೆ ತಿಳಿಸುವ ಧ್ಯೇಯವಿದ್ದರೂ, ಎಷ್ಟೇ ಸರಳವಾಗಿ ವಿವರಿಸ ಹೋದರೂ ಮತ್ತಷ್ಟು ಕಗ್ಗಂಟಾಗಿ ಆ ವಿವರಗಳು ತಮ್ಮನ್ನೇ ಸುತ್ತಿಕೊಂಡಂತಾಗುತ್ತದೆ. ಗ್ರಹಣದ ಸಂಗತಿ ನಡೆಯುತ್ತಿರುವಾಗಲೇ ಆ ಊರು ಮುಳುಗಡೆಯಾಗುವಾಗ ದೇವಸ್ಥಾನದ ಜವಾಬ್ದಾರಿಯಿರುವ ಗಂಗಾಧರ ನಿಧಿಯನ್ನು ಹುಡುಕಿ ಲಾಭಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಮಾತ್ರವಲ್ಲ ಊರಿನ ಜನರೆಲ್ಲಾ ತಮ್ಮ ತಮ್ಮ ಮುಳುಗಡೆಯಾಗಲಿರುವ ಮನೆಗಳನ್ನು ಗ್ರಹಣ ವೀಕ್ಷಿಸಲು ಬರುವವರಿಗೆ ಬಾಡಿಗೆಗೆ ನೀಡಿ ಹಣ ಗಳಿಸುವ ತಂತ್ರ ಹೂಡುತ್ತಾರೆ. ಜಗನ್ನಾಥ ಮತ್ತು ಆತನ ಅಣ್ಣನ ಮಗ ಪಾಂಡುರಂಗ ಕೂಡ ಇದರಿಂದ ಹೊರತಾಗಿರುವುದಿಲ್ಲ. ಊರಿನವರಿಗೆ ಹಣದ ಅಮಲು ಹತ್ತಿಸಿ ಅವರ ಮನ ಓಲೈಸುವ ಸರಕಾರ ಆ ಜನರ ಮುಗ್ಧತೆಯ ಪ್ರತಿಬಿಂಬದಂತೆ ಕಾಣುತ್ತದೆ.

ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ವ್ಯವಸ್ಥಿತ ರೀತಿಯಲ್ಲಿ ಚಿತ್ರಿಸುವ ಕಥೆ ‘ಹುಲಿ ಸವಾರಿ’. ಮಾನವೀಯ ಮೌಲ್ಯಗಳೆಲ್ಲಾ ವ್ಯವಹಾರಿಕವಾಗಿ ಮನುಷ್ಯನ ಸ್ಥಿರತೆಯನ್ನು ವಿಭಿನ್ನವಾಗಿ ತಿಳಿಸುತ್ತದೆ.

ಆರ್ಥಿಕ ಉದಾರಿಕರಣದ ಇನ್ನೊಂದು ಉತ್ತಮ ಕಥೆ ‘ಸಶೇಷ’. ನಂಬಿಯಾರ್ ಮಧ್ಯಮವರ್ಗದಿಂದ ಬಂದರೂ ಓದಿ ಒಳ್ಳೆಯ ಕೆಲಸ ಹಿಡಿದು ದುಬೈಗೆ ತೆರಳಿ ಡಾಲರ್ಗಳಲ್ಲಿ ಸಂಬಳ ಎಣಿಸುತ್ತಾನೆ. ಆದರೆ ಆತ ಒಂದು ಸಾಲದ ಸಮಸ್ಯೆಯಲ್ಲಿ ಬೀಳುತ್ತಾನೆ. ಆ ಸಾಲ ಎಷ್ಟೆಂದರೆ ‘ಹನ್ನೆರಡು ರೂಪಾಯಿಗಳು’. ತನ್ನ ಅಜ್ಜನಿಂದ ಬಂದ ಖರ್ಚುವೆಚ್ಚಗಳನ್ನು ಬರೆದಿಡುವ ಅಭ್ಯಾಸ, ಈ ಸಮಸ್ಯೆಯನ್ನು ಎತ್ತಿ ಹಿಡಿಯುತ್ತದೆ. ಈ ಅಭ್ಯಾಸ ನಾವು ಗಳಿಕೆಯ ಮಿತಿಯಲ್ಲಿದ್ದೇವೆ ಮತ್ತು ವ್ಯಯಿಸಿದ್ದು ಸಕಾರಣಕ್ಕಾಗಿ ಅನ್ನುವ ಉದ್ದೇಶದಿಂದಾಗಿ ಮಾತ್ರ ಅನ್ನುವುದಕ್ಕಾಗಿ. ಕೊನೆಗೂ ಗೆಳೆಯನ ಮಾತಿನಂತೆ ಖರ್ಚು ಬರೆಯುವುದನ್ನು ನಿಲ್ಲಿಸಿದ ನಂಬಿಯಾರ್ ದಂಪತಿಗಳಿಗೆ ಏನೋ ನಿಯಮ ಮುರಿದ ಅಳುಕು ಇರುತ್ತದೆ.

ಒಂದೇ ಹೆಸರಿನ ಇಬ್ಬರು ಹುಡುಗರ ತಂದೆಯ ಹೆಸರೂ ಒಂದೇ ಮತ್ತು ಅವರಿಬ್ಬರ ಇನಿಶಿಯಲ್ ಕೂಡ ಒಂದೇ! ಆ ಹುಡುಗರನ್ನು ಗುರುತಿಸಬಹುದಾದ ಒಂದೇ ಒಂದು ವ್ಯತ್ಯಾಸವೆಂದರೆ ಒಬ್ಬ ಆರ್ಟ್ಸ್ ಮತ್ತೊಬ್ಬ ಸಾಯನ್ಸ್ ವಿದ್ಯಾರ್ಥಿ. ಸೆಲ್ಸ್ ಮನ್ ಜಾನಕೀರಾಮನಿಗೆ ಎರಡು ಸಂಸಾರವಿದೆಯೆನ್ನುವುದು ಊರಿನ ತುಂಬಾ ಬಿರುಗಾಳಿಯಂತೆ ಹರಡಿದ ಸುದ್ದಿ. ಕೊನೆಗೂ ಓದುಗನಿಗೆ ನಿರ್ಧರಿಸಲು ಬಿಟ್ಟಂತೆ ‘ಮತ್ತೊಬ್ಬನ ಸಂಸಾರ’ ಕಥೆ ಕೊನೆಗೊಳ್ಳುವುದರಿಂದ ‘ಹೌದೋ? ಅಲ್ಲವೋ?’ ಅನ್ನುವುದು ಕಾಡುತ್ತಲೇ ಇರುತ್ತದೆ.

ಈ ಪುಸ್ತಕದ ಇನ್ನೊಂದು ಅತ್ಯುತ್ತಮ ಕಥೆ ‘ಶರವಣ ಸರ್ವಿಸಸ್’ ವೇಗದ ಬದುಕಿನಲ್ಲಿ ಎಲ್ಲವನ್ನೂ ಮನೆಯ ಬಾಗಿಲಿನವರೆಗೆ ತಲುಪಿಸುವುದನ್ನು ನಿರೀಕ್ಷಿಸುವ ಜನರ ದಿನನಿತ್ಯದ ಜಂಜಾಟವನ್ನು ಬಿಚ್ಚಿಡುತ್ತದೆ ಈ ಕಥೆ. ವ್ಯವಹಾರದ ಬೆನ್ನು ಹಿಡಿದ ಮೇಲೆ ಶರವಣನಿಗೆ ಸಂಸಾರದಿಂದ ದೂರವಾಗುವ ಸನ್ನಿವೇಶದಲ್ಲಿ ಎಲ್ಲವನ್ನೂ ಕಳೆದುಕೊಂಡ ಭಾವನೆ ಎದುರಾಗುತ್ತದೆ. ಆದರೂ ವ್ಯವಹಾರವನ್ನು ಬಿಡಲಾರದ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಈ ಕಥೆಯ ಪ್ಲಸ್ ಪಾಯಿಂಟ್ ಶರವಣನ ಫ್ಲ್ಯಾಷ್ಬ್ಯಾಕ್ ಆತನ ಮಾತಿನಿಂದಲೇ ಹೇಳಿಸುವ ತಂತ್ರ. ಇದು ಹೊಸತನವೂ ಹೌದು ಮತ್ತು ಕಥೆಗೆ ಮೆರುಗನ್ನೂ ನೀಡಿರುವುದು ಸತ್ಯ. ಹಾಗಾಗಿ ಈ ಕಥೆ ಬಹಳ ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.

ಈ ಕೃತಿಯ ಏಳು ಕಥೆಗಳೂ ಕನ್ನಡ ಸಾಹಿತ್ಯವನ್ನು ಪ್ರವೇಶಿಸುವವರಿಗೆ ಅಪೂರ್ವ ಕೊಡುಗೆಯೆಂದರೆ ತಪ್ಪಾಗಲಾರದು. ಇಲ್ಲಿಯ ಕಥೆಗಳನ್ನು ಓದಿಯೇ ಆನಂದಿಸಬೇಕು.

Read more!

Monday, February 22, 2010

ಬಾಳಾಸಾಹೇಬ ಲೋಕಾಪುರ ಅವರ ‘ನೀಲಗಂಗಾ’ - ಒಂದು ಪ್ರೇಮ ಕಥೆ


‘ಉಧೊ! ಉಧೊ!’, ‘ಬಿಸಿಲುಪುರ’ ಮತ್ತು ‘ಹುತ್ತ’ ಕಾದಂಬರಿಗಳ ಮೂಲಕ ಚಿರಪರಿಚಿತರಾಗಿರುವ ಬಾಳಾಸಾಹೇಬ ಲೋಕಾಪುರ ಅವರ ಇನ್ನೊಂದು ಕೃತಿ ‘ನೀಲಗಂಗಾ’. ಉತ್ತರ ಕರ್ನಾಟಕದ ಅಪ್ಪಟ ಗ್ರಾಮ್ಯ ಭಾಷಾ ಶ್ರೀಮಂತಿಕೆಯ ಪ್ರೇಮಗಾಥೆಯಿರುವ ಈ ಕೃತಿ ಹದಿ ಹರೆಯದ ಮನಸ್ಸುಗಳ ಭಾವನೆಯ ಪ್ರವಾಹದ ವೇಗವೂ, ಓದಿನ ಸುಖ ನೀಡುವ ಉನ್ಮಾದ ಲಹರಿಯೂ ಹೌದು.

ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯೆನಿಸಿದರೂ ಕಾದಂಬರಿಯ ಶ್ರೀಮಂತಿಕೆಯಿರುವುದು ಕಥೆಗಿಂತಲೂ ಅದನ್ನು ಬರೆದ ಶೈಲಿಯಲ್ಲಿ. ಆಡು ಭಾಷೆಯ ಸೊಗಸು ಆಡುವುದಕ್ಕಿಂತಲೂ, ಓದುವುದರಲ್ಲಿಯೇ ಹೆಚ್ಚು ಆಪ್ತವೆನಿಸುತ್ತದೆ. ಪಂಚಯ್ಯ, ನೀಲಗಂಗಾ ಮತ್ತು ಸ್ವರೂಪರಾಣಿ ಪಾತ್ರಗಳ ಮೂಲಕ ಸ್ವಗತವಲ್ಲದೆ ಆಯಾಯ ಪಾತ್ರ ಚಿತ್ರಣದ ಮೂಲಕ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ."

ತುತ್ತು ಕೂಳಿಗೂ ಗತಿಯಿಲ್ಲದ ಬಡ ಹುಡುಗ ಪಂಚಯ್ಯ. ಮನೆಯವರ ಅನಾಧಾರದಲ್ಲಿ ಅನಾಥನಾಗಿ ಆಶ್ರಮ ಸೇರಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಕವಿ ಹೃದಯದ ಆತ ಪ್ರಬುದ್ದನಾಗಿ ಬೆಳೆದು ಸಾರಸ್ವತ ಲೋಕದ ‘ಮೃತ್ಯುಂಜಯ’ ಆಗಿ ಕಾಲೇಜ್ನಲ್ಲಿ ಪ್ರೊಫೆಸರೂ ಆಗುತ್ತಾನೆ.

ನೀಲಗಂಗಾ, ವೇದಮೂರ್ತಿ ‘ಮಲ್ಲಯ್ಯ’ನವರ ಮಗಳು. ಹೆಡೆದವ್ವನ ಪ್ರೀತಿಯಿಂದ ವಂಚಿತಳಾದ ಅವಳಿಗೆ ಹೆತ್ತಬ್ಬೆಯ ಪ್ರೀತಿಯ ಜೊತೆಗೆ ಜವಾಬ್ದಾರಿಯ ತಂದೆಯಾಗಿ ಅವೆರಡು ತಾವೇ ಆಗಿ ಅವಳನ್ನು ಬೆಳೆಸುತ್ತಾರೆ ಮಲ್ಲಯ್ಯ. ಕೊರ್ಯಾಣ ಹಿಡಿದು ಬದುಕುವ ಅವರ ಮನೆ ಬಡತನದ, ಬಟ್ಟಾ ಬಯಲಿನಂತೆ ಬಾಗಿಲುಗಳಿಲ್ಲದ ತೆರೆದ ಜಾಗ. ಹೀಗೆ ಬಡತನದಲ್ಲಿಯೇ ಬೆಳೆಯುತ್ತಾ ಕೃಷ್ಣೆಯಷ್ಟೆ ಮುಗ್ಧಳಾಗಿರುವ ನೀಲಗಂಗಾಳಿಗೆ ಓದಿ, ಪ್ರೊಫೆಸರ್ ಆಗಿರುವ ಪಂಚಯ್ಯನ ಮೇಲೆ ಹೇಳಿಕೊಳ್ಳಲಾರದಷ್ಟು ಪ್ರೀತಿ. ಅವನು ಮಾತನಾಡದಿದ್ದರೆ ಏನೋ ಕಳೆದುಕೊಳ್ಳುವ ತಳಮಳ. ಅಂತೊಂದು ಕಾತುರದ ದಿನ ಕೃಷ್ಣೆಯ ಬಳಿ ಅವನ ಭೇಟಿಯಾದಾಗ ಮಾತನಾಡಿದರೂ, ನಿರ್ಲಕ್ಷಿತನಂತೆ ಮೌನೊದೊಳಗೆ ನುಸುಳಿ ಹೋದ ಪಂಚಯ್ಯ ಮಲ್ಲಯ್ಯನವರು ಇಲ್ಲದ ಸಮಯದಲ್ಲಿ ನೀಲಗಂಗಾಳನ್ನು ಹುಡುಕಿಕೊಂಡು ಬರುತ್ತಾನೆ. ಹದಿಹರೆಯದ ಕನಸುಗಳ ಬೆಚ್ಚನೆಯ ಮುಸುಕೊಳಗೆ ಅರಿಯದೆ ನೀಲಗಂಗಾಳ ಕತ್ತಲ ಬದುಕಿಗೆ ನಾಂದಿ ಹಾಡುತ್ತಾನೆ.

ನೀಲಗಂಗಾಳ ಬದಲಾದ ಭಾವಕ್ಕೆ ಕಾರಣ ತಿಳಿದ ಮಲ್ಲಯ್ಯ ‘ಎಲ್ಲಾ ಶಿವನಿಚ್ಛೆ’ಯೆನ್ನುವ ದೈವ ಭಕ್ತ. ಮಗಳಿಗಾದ ಅನ್ಯಾಯವನ್ನು ಸಂಬಂಧ ಪಟ್ಟವರಿಗೆ ತಿಳಿಸಿದರೂ, ಅವರುಗಳ ಅಸಹಾಯಕತೆ, ಗೌಡರ ವಿಳಂಬ ನಿರ್ಧಾರ, ಕೊನೆಗೂ ಕೆಟ್ಟ ಸುದ್ದಿಯಾಗಿಯೇ ಎದುರಾಗುತ್ತದೆ. ಪಂಚಯ್ಯನನ್ನು ಹುಡುಕಿಕೊಂಡು ಬರುವಾಗ ಅವನು ಸ್ವರೂಪರಾಣಿಯೆನ್ನುವ ಅವನ ಅಭಿಮಾನಿಯಾದ ವೈದ್ಯೆಯ ಜೊತೆಗೆ ಮದುವೆಯಾಗಿ ಹನಿಮೂನಿಗೆ ಹೊರಟಿರುವುದು ತಿಳಿಯುತ್ತದೆ. ಇದರಿಂದ ನೊಂದ ಮಲ್ಲಯ್ಯ ಊರಿನವರಿಂದಲೂ ನಿಂದೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿ ನೀಲಗಂಗಾಳನ್ನು ನಿರ್ಗತಿಕಳನ್ನಾಗಿಸುತ್ತಾನೆ.

ಮುಂದೆ ಗಂಡು ಕೂಸಿಗೆ ಜನ್ಮವಿತ್ತ ನೀಲಗಂಗಾ ಎಲ್ಲದರಲ್ಲಿಯೂ ನಿರಾಸಕ್ತಳಾಗಿ, ಇನ್ನೊಂದೆಡೆ ತನ್ನ ತಂದೆಯ ಸಾವಿಗೆ ಕಾರಣನಾದೆನಲ್ಲಾವೆನ್ನುವ ದು:ಖ ಅವಳನ್ನು ಅಂತರ್ಮುಖಿಯನ್ನಾಗಿಸುತ್ತದೆ. ಬದುಕಿನಲ್ಲಿ ಸತ್ವವನ್ನೇ ಕಳೆದುಕೊಂಡ ಅವಳು ಅನ್ನಕ್ಕೂ ತಾತ್ವರ ಪಡುತ್ತಾಳೆ. ಕೊನೆಗೆ ತನ್ನ ಮೇಲೆ ಅನುಕಂಪ ತೋರಿದ ನಾಗವ್ವನೇ ಅವಳನ್ನು ನಿಂದಿಸುತ್ತಾಳೆ. ಆದರೆ ಹಸಿದ ಒಡಲಿನ ಜೊತೆಗೆ ಎಳೆ ಕೂಸಿನ ಮಮತೆ ಅವರ ಮುಂದೆ ಕೈಯೊಡ್ಡುತ್ತದೆ. ಅಲ್ಲಿ ನಾಗವ್ವನಿಂದ ಅವಮಾನಿತಳಾದ ಅವಳು ಹೆಣ್ಣು ಮಕ್ಕಳಿಗೆ ಕೊರ್ಯಣದ ಹಕ್ಕು ಇಲ್ಲದಿದ್ದರೂ ತನ್ನ ಗಂಡುಮಗುವಿಗೆ ಆ ಹಕ್ಕಿದೆಯೆಂದು ಹೊರಟಾಗ ನಾಗಮ್ಮ, ‘... ಈ ಜೋಳಿಗೆ ಐತಲ್ಲಾ ಅದು ಭಿಕ್ಷಾ ಬೇಡು ವಸ್ತು ಅಲ್ಲ. ಅದು ಶಿವನ ಸಂಕೇತ... ನಿನಗಾ ಧರ್ಮ ಸೂಕ್ಷ್ಮ ಕಲಿಸಿಕೊಡಬೇಕಾಗಿಲ್ಲ’ ಅನ್ನುವಾಗ ಸತ್ಯದ ಅರಿವಾಗಿ ಹಿಂದಕ್ಕೆ ಬರುತ್ತಾಳೆ ನೀಲಗಂಗಾ.

ಕವಿ ಹೃದಯದ ಪಂಚಯ್ಯನನ್ನು ಭೇಟಿಯಾಗಿ ತನ್ನ ತಾಯಿಯ ಮಾತನ್ನೂ ಮೀರಿ ಮದುವೆಯಾದ ಸ್ವರೂಪರಾಣಿ, ಓದುಗರನ್ನು ಭ್ರಾಮಾಲೋಕಕ್ಕೆ ಕರೆದೊಯುವ ಕವಿ, ವಾಸ್ತವದ ಬಗ್ಗೆ ಸ್ಪಷ್ಟವಾಗಿ ಮತ್ತು ನಿಷ್ಟುರವಾಗಿ ತನ್ನ ಮಡದಿಗೆ ಹೇಳುವಾಗ ತಾನು ಭಾವಿಸಿದೆಲ್ಲಾ ಸುಳ್ಳೇ ಅನಿಸುತ್ತದೆ ಅವಳಿಗೆ. ಅವಳನ್ನು ನಿರಾಶೆ ಆವರಿಸಿ, ಅವನ ಮೇಲೆ ಬೇಸರ ಮೂಡಿದರೂ, ಅದು ಪ್ರೀತಿಯ ಉನ್ಮಿಲಿತವೆನಿಸುತ್ತದೆ. ಅವನ ಬಗ್ಗೆ ವ್ಯತಿರೀಕ್ತವಾದ ಭಾವನೆಯೊಂದು ಉದಯಿಸುತ್ತದೆ. ಆದರೂ ಅವಳ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ.

ಒಮ್ಮೆ ಪಂಚಯ್ಯ ತನ್ನ ಮುಖ್ಯ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೊರಟಾಗ ಆತ ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾನೆ ಅನ್ನುವ ಸಂಶಯ ಸ್ವರೂಪರಾಣಿಗೆ ಮೂಡುತ್ತದೆ. ಅವನು ಬೆಂಗಳೂರಿಗೆ ಹೊರಟ ಮೇಲೆ ತಾನು ಉತ್ತರಭಾರತದ ಪ್ರವಾಸ ಕೈಗೊಂಡು ಅವನಿಗೆ ವಿಸ್ಮಯ ಮೂಡಿಸುವ ಹವಣಿಕೆಯಲ್ಲಿರುತ್ತಾಳೆ.

ಆದರೆ ಕಥೆ ತಿರುವು ಪಡೆಯುವುದು ಅಲ್ಲಿಯೆ. ಪಂಚಯ್ಯನ ಊರಿನವನೇ ಆದ ವಿದ್ಯಾರ್ಥಿಯೊಬ್ಬ ನೀಲಗಂಗಾಳಿಗೆ ಪಂಚಯ್ಯನಿಂದ ಆದ ಅನ್ಯಾಯವನ್ನು ಸ್ವರೂಪರಾಣಿಗೆ ತಿಳಿಸುತ್ತಾನೆ. ತಾನು ಕೈ ಹಿಡಿದಾತನ ಬಣ್ಣ ಬದಲಾದಾಗ ಹತಾಶಳಾದರೂ ತನ್ನ ಕಾರಿನಲ್ಲಿಯೇ ಪಂಚಯ್ಯನ ಊರಿಗೆ ಬರುತ್ತಾಳೆ. ನೀಲಗಂಗಾಳಿಗಾದ ಅನ್ಯಾಯವನ್ನು ತಿಳಿದು ಅವಳ ಇಚ್ಛೆಯಂತೆಯೇ ತನ್ನ ಜೊತೆಗೆ ಕರೆದುಕೊಂಡು ಬರುತ್ತಾಳೆ.

ಇತ್ತ ಪಂಚಯ್ಯ ಬೆಂಗಳೂರಿನಿಂದ ಮರಳಿದವನು ಸ್ವರೂಪರಾಣಿ ತನ್ನ ಊರಿಗೆ ಹೊರಟಿರುವುದು ತಿಳಿದು ಅವನು ಹುಡುಕಿಕೊಂಡು ಅಲ್ಲಿಗೆ ಬರುವಾಗ ಅವನ ತಾಯಿ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತದೆ. ಆತನ ಅಕ್ಕ ನಾಗವ್ವ ತಮ್ಮನಿಂದ ನೀಲಗಂಗಾಳಿಗಾದ ಮೋಸವನ್ನು ಕೇಳಿ ಸಿಟ್ಟಾಗುತ್ತಾಳೆ. ಆದರೂ ಅವಳಿಗೆ ಆತ ನಿರ್ದೋಶಿಯೆನ್ನುವುದು ಬೇಕು. ಆದರೆ ಪಂಚಯ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ನಾಗವ್ವ ನಿಷ್ಠುರವಾಗಿ ಮಾತನಾಡಿ ಒಂದು ಅಮಾಯಕ ಹೆಣ್ಣಿಗಾದ ನೋವನ್ನು ಪ್ರತಿಭಟಿಸುತ್ತಾಳೆ. ಪಂಚಯ್ಯ ಅಲ್ಲಿ ಸ್ವರೂಪರಾಣಿ ಮತ್ತು ನೀಲಗಂಗಾಳನ್ನು ಕಾಣದೆ ಹುಡುಕುತ್ತ ಬರುವಾಗ ಅವನಿಗೆ ಒಮ್ಮೆ ಸ್ವರೂಪರಾಣಿ ಹೇಳಿದ ಮಾತುಗಳು ನೆನಪಾಗಿ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಅವಳನ್ನು ಭೇಟಿಯಾದರೂ ಸ್ವರೂಪರಾಣಿಯ ದೃಢ ನಿರ್ಧಾರದ ಮುಂದೆ ತಲೆ ತಗ್ಗಿಸುತ್ತಾನೆ. ಆಕೆಯೇ ನೀಲಗಂಗಾಳ ಜೊತೆಗೆ ಊರಿಗೆ ಹೋಗು ಅನ್ನುತ್ತಾಳೆ. ಪಂಚಯ್ಯ ಕ್ಷಮಾಪಣೆ ಕೇಳಿಕೊಂಡು ಮಗುವಿನ ಜೊತೆಗೆ ನೀಲಗಂಗಾಳನ್ನು ಕರೆದುಕೊಂಡು ಊರಿಗೆ ಹಿಂತಿರುಗುತ್ತಾನೆ.

ಹೀಗೆ ಕಥೆ ಮುಗಿದರೂ ಆ ಕಥಾಭಾಷೆಯ ಸವಿ ಕೃತಿಯನ್ನು ಮಗದೊಮ್ಮೆ ಓದುವಂತೆ ಪ್ರೇರೇಪಿಸುತ್ತದೆ. ಅದೇ ಲಹರಿ, ಪದಗಳ ಸಿಹಿಯನ್ನು ಅಸ್ವಾದಿಸುವ ಮನಸ್ಸು ತನ್ನಿಂದ ತಾನೆ ಖುಷಿಪಡುತ್ತದೆ. ಈ ಕೃತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ರೂಪ ಪ್ರಕಾಶನ, 2406, 2407/ ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ, ಮೈಸೂರು - 570 004.

Read more!