Friday, December 18, 2009

ಬಣ್ಣದ ಚಿಟ್ಟೆಯ ರಂಗಿನ ಬದುಕಲ್ಲ ಈ ‘ಪ್ಯಾಪಿಲಾನ್’.


‘ಪ್ಯಾಪಿಲಾನ್’ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆಯವರ ಸಂಗ್ರಹಾನುವಾದದ ಕಾದಂಬರಿ. ಈ ಬೃಹತ್ ಕಾದಂಬರಿಯ ಮೂಲ ಲೇಖಕ ಹೆನ್ರಿ ಛಾರೇರೆ. ಈ ಕಾದಂಬರಿ ಎರಡು ಭಾಗಗಳಲ್ಲಿ ಪ್ರಕಟಗೊಂಡಿದೆ. ಇದೊಂದು ಸಾಹಸದ ಕಥೆಯಾದರೂ ಖೈದಿಯೊಬ್ಬನ ಪಲಾಯ್ನ, ಸ್ವಾತಂತ್ರ್ಯ ಪೂರ್ವದಲ್ಲಿ ಪ್ರೆಂಚ್ ಸರಕಾರದ ದುರವಸ್ಥೆ, ನ್ಯಾಯಾಂಗ ಮತ್ತು ನ್ಯಾಯಾಂಗ ವಿತರಣೆಯ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ.

ಇಲ್ಲಿ ಭೂಗತ ಜಗತ್ತಿನ ಅನಾವರಣವಿದ್ದರೂ ಅಪರಾಧಿಯಲ್ಲದ ಮನುಷ್ಯನೊಬ್ಬ ಸ್ವತಂತ್ರನಾಗಲು ಹೋರಾಡುವ ಮೈ ರೋಮಾಂಚನಗೊಳಿಸುವ ಸಾಹಸದ ಕಥೆಯೂ ಅಹುದು."

‘ಪ್ಯಾಪಿಲಾನ್’ ಅಂದರೆ ‘ಚಿಟ್ಟೆ’ (ತೆಳು ನೀಲಿ ರೆಕ್ಕೆಗಳ ಮೇಲೆ ಪುಟ್ಟ ಗೆರೆಗಳಿರುವ ಚಿಟ್ಟೆ) ಎಂಬ ಅರ್ಥವಿದ್ದರೂ ಇಲ್ಲಿಯ ನಿರಪರಾಧಿ ಖೈದಿ ಪ್ಯಾಪಿಯ ಬದುಕು ಚಿಟ್ಟೆಯಷ್ಟು ಸುಂದರ ಮತ್ತು ಸ್ವೇಚ್ಛೆಯಿಂದ ಕೂಡಿಲ್ಲ. ಹಲವು ಬಾರಿ ಬಂಧಿಖಾನೆಯಿಂದ ತಪ್ಪಿಸಿಕೊಂಡರೂ ಮತ್ತೆ ಮತ್ತೆ ಅಂತಹುದೇ ಕಾರಾಗೃಹಗಳಲ್ಲಿ ಕರಾಳ ದಿನಗಳನ್ನು ಕಳೆಯಬೇಕಾಗುತ್ತದೆ. ಯಾವುದೇ ಅಪರಾಧವೆಸಗದ ವ್ಯಕ್ತಿಯನ್ನು ಪೊಲೀಸರು, ಲಾಯರುಗಳು ಸೇರಿ ನಿಷ್ಕಾರುಣವಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತೆ ಮಾಡಿ ಅವನನ್ನು ಕತ್ತಲ ಕಾರಾಗೃಹವಿರುವ ದ್ವೀಪಕ್ಕೆ ಗಡಿಪಾರು ಮಾಡುತ್ತಾರೆ. ಭೂಮಿಯ ಮೇಲಿನ ನರಕವಾಗಿರುವ ಆ ದ್ವೀಪದಲ್ಲಿ ಎಲ್ಲರೂ ಅಧಿಕಾರಿಗಳೇ. ಯಾವ ಜನ್ಮದ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಅಲ್ಲಿ ಅಧಿಕಾರಿಗಳಾಗಿ ನಿಯುಕ್ತಿಯಾಗಿದ್ದಾರೋ, ಅಂತಹವರ ಕೈಯಲ್ಲಿ ಸಿಲುಕಿ ಬದುಕೇ ಮುಗಿಯಿತೇನೋ ಅನ್ನುವ ಹೊತ್ತಿಗೆ ಹೊಸ ಹೊಸ ಸಾಹಸಗಳನ್ನು ಮಾಡಲು ಮುಂದಾಗುತ್ತಾನೆ ಪ್ಯಾಪಿ. ಸಮಾನತೆ, ನ್ಯಾಯ, ಸ್ವಾತಂತ್ರ್ಯಕ್ಕೆ ಹೆಸರಾದ ಪ್ರೆಂಚ್ ಸರಕಾರದಲ್ಲಿಯೇ ಈ ರೀತಿಯ ಅವ್ಯವಸ್ಥೆಯನ್ನು ಕಣ್ಣ ಮುಂದೆ ಬಿಚ್ಚಿಡುತ್ತಾ ಹೋಗುತ್ತದೆ ಈ ಕಾದಂಬರಿ.

ಪ್ಯಾಪಿ ಕಾರಾಗೃಹ ಸೇರಿದ ಬಳಿಕ ಅಲ್ಲಿಯ ಖೈದಿಗಳ ಜೊತೆಗೆ ಸೇರಿ ಹಲವು ಬಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ ಕ್ರೂರ ಕಾನೂನು ವ್ಯವಸ್ಥೆ ಮತ್ತು ಪೊಲೀಸರ ಎದುರು ತನ್ನ ಸಾಹಸಗಳೆಲ್ಲಾ ನಿರರ್ಥಕವಾಗುತ್ತದೆ. ಆದರೆ ಸೇಡು ತೀರಿಸಿಕೊಳ್ಳಲು ಕಾದಿರುವ ಪ್ಯಾಪಿ ಅಲ್ಲಿಯ ಅಧಿಕಾರಿಗಳ ಮನಗೆದ್ದು ಅಲ್ಪಾವಧಿಯ ಶಿಕ್ಷೆಯನ್ನು ಮುಗಿಸಿ ಬಿಡುಗಡೆಯಾಗುವ ಸಂದರ್ಭಗಳಿದ್ದರೂ ಅವೆಲ್ಲವನ್ನೂ ದಿಕ್ಕರಿಸಿ ಎಲ್ಲಾ ಕಡೆಯಲ್ಲೂ ಸೋಲುಣ್ಣುತ್ತಾನೆ. ಅವನ ಮನದಲ್ಲಿ ಕುದಿಯುತ್ತಿರುವ ಸೇಡು ಅವನನ್ನು ಮಹಾಪರಾಧಿಯೊಬ್ಬ ಅನುಭವಿಸಬೇಕಾದ ಎಲ್ಲಾ ಶಿಕ್ಷೆಗಳಿಗೂ ಗುರಿಯಾಗಿಸುತ್ತದೆ. ಸೇಡು ತೀರಿಸಿಕೊಳ್ಳುವ ಆತುರ ಅವನಲ್ಲಿ ಅಷ್ಟೊಂದು ಮಡುಗಟ್ಟಿರುತ್ತದೆ.

ಗಯಾನ ದ್ವೀಪದ ಜೈಲುಗಳಿಗೆ ಹೋಗಿ ಅಲ್ಲಿಂದ ತಪ್ಪಿಸಿಕೊಳ್ಳುವುದು ಸುಲಭವೆಂದು ತಿಳಿದ ಪ್ಯಾಪಿಗೆ ಆತನ ಸಹಖೈದಿ ಅಲ್ಲಿಯ ನರಕಸದೃಶ ಜೈಲುಗಳು, ಮಾರಕ ರೋಗಗಳಿಗೆ ತುತ್ತಾಗಿ ಸಾಯುವ ಖೈದಿಗಳ ಅವಸ್ಥೆಯನ್ನು ತಿಳಿಸುತ್ತಾನೆ. ಹಠ ಬಿಡದ ಪ್ಯಾಪಿ ಗಯಾನ ಜೈಲು ಸೇರಿ ಅಲ್ಲಿಂದ ತಪ್ಪಿಸಿಕೊಂಡು ಅಲ್ಲಿಯ ಜನರ ಜೊತೆಗೆ ಸೇರಿ ಸಂಸಾರವೆನ್ನುವ ಕೂಪದಲ್ಲಿ ಬೀಳುತ್ತಾನೆ. ಲಾಲಿ ಮತ್ತು ಅವಳ ಸಹೋದರಿ ಲೋರಿಯಾ ಎಂಬ ಕನ್ಯೆಯರನ್ನು ಮದುವೆಯಾಗಿ ಸುಖಮಯವಾದ ಸಂಸಾರ ನಡೆಸಬಹುದಾಗಿದ್ದರೂ ಅವನೊಳಗಿದ್ದ ಸೇಡು ಭುಗಿಲೆದ್ದು ತನ್ನ ಸಾಹಸ ಯಾತ್ರೆಯನ್ನು ಮುಂದುವರಿಸುವಂತೆ ಪ್ರೇರೇಪಿಸುತ್ತದೆ.

ಜೈಲಿನಲ್ಲಿರುವ ಖೈದಿಗಳು ದ್ವೀಪದಲ್ಲಿಯೂ ಅಪರಾಧವೆಸಗಿದರೆ ಅಥವಾ ಪಲಾಯನಕ್ಕೆ ಪ್ರಯತ್ನಿಸಿದರೆ ಅಂತಹವರನ್ನು ಏಕಾಂತ ಶಿಕ್ಷೆ ವಿಧಿಸಿ ಅವರನ್ನು ಒಳ್ಳೆಯವರಾಗಲು ಅವಕಾಶ ಕೊಡದೆ, ನಿಷ್ಪ್ರಯೋಜಕರನ್ನಾಗಿಸಿ ಅಲ್ಲಿಯೇ ಸಾಯುವಂತೆ ಮಾಡುವುದೇ ಕ್ರೂರ ಶಿಕ್ಷೆ. ಕತ್ತಲೆಯ ಬಂಧಿಖಾನೆಯಲ್ಲಿ ಕೈ ತೂರುವುದಕ್ಕೆ ಮಾತ್ರ ಇರುವ ಕಿಂಡಿಯ ಬೆಳಕಿನಲ್ಲಿ ಅರೆ ಜೀವವಾಗಿ, ಉಸಿರಾಟಕ್ಕೂ ಹಪಹಪಿಸುವ ಆ ರೌದ್ರ, ಭೀಕರ ಬದುಕಿನಲ್ಲೂ ಪ್ಯಾಪಿಗೆ ಉಳಿದಿರುವುದು ತನ್ನನ್ನು ಅನಗತ್ಯ ಅಪರಾಧಿಯನ್ನಾಗಿಸಿದವರ ಮೇಲಿನ ದ್ವೇಷವೊಂದೇ. ಅಂತಹ ಕೂಪದಲ್ಲಿ ಖೈದಿ ಬದುಕುಳಿಯುವುದೇ ಆಶ್ಚರ್ಯ. ಆದರೂ ಪ್ಯಾಪಿ ಛಲಗಾರ ಅಲ್ಲಿಂದಲೂ ತಪ್ಪಿಸಿಕೊಳ್ಳುತ್ತಾನೆ.

ಸಲಿಂಗಕಾಮ, ಜೈಲರ್ಗಳ ಮನಗೆಲ್ಲಲು ಹಣವನ್ನು ಸಣ್ಣ ಟಾರ್ಚುಗಳಲ್ಲಿರಿಸಿ ಗುದದೊಳಗೆ ಅದನ್ನು ಇಟ್ಟುಕೊಳ್ಳುವುದು, ಸಿಗರೇಟು, ಕುಡಿತಕ್ಕಾಗಿ ಹಪಹಪಿಸುವುದು, ಜೈಲಿನಲ್ಲಿ ನೀಡುವ ಕೆಲಸಗಳನ್ನು ಮಾಡಲು ನಿಶಕ್ತರಾಗಿ ಕ್ರೂರ ಶಿಕ್ಷೆಗೆ ಗುರಿಯಾಗುವುದು ಮನುಷ್ಯ ಜಾತಿಗೆ ಬೇಡವಾದ ಕಷ್ಟ ಕೋಟಲೆಗಳು. ಆದರೆ ಧೈರ್ಯಗೆಡದೆ ಪ್ಯಾಪಿ ತಾನು ಸೇಡು ತೀರಿಸಿಯೇ ಕೊಳ್ಳುತ್ತೇನೆ ಅನ್ನುತ್ತಾ ಹದಿಮೂರು ವರ್ಷಗಳನ್ನು ಜೈಲಿನಲ್ಲಿಯೇ ಕಳೆಯುತ್ತಾನೆ.

ಒಬ್ಬ ಸಹಖೈದಿಯ ಕೊಲೆಯಾದಾಗ ಖೈದಿಗಳ ಬದುಕು ನಾಯಿಪಾಡಿಗಿಂತಲೂ ಕಡೆಯೇ? ಸರಕಾರಕ್ಕೆ ಅದನ್ನು ಸರಿಮಾಡಲು ಸಾಧ್ಯವಿಲ್ಲವೇ? ಅನ್ನುವ ಪ್ರಶ್ನೆಯೊಂದಿಗೆ ‘ಪ್ಯಾಪಿಲಾನ್’ನ ಮೊದಲ ಭಾಗ ಮುಗಿಯುತ್ತದೆ. ಇಲ್ಲಿ ಖೈದಿಯೊಬ್ಬನ ಸಾಹಸಯಾತ್ರೆ ಮಾತ್ರವಲ್ಲ, ರೋಮಾಂಚನಗೊಳಿಸಬಲ್ಲ ಸಾವು- ಬದುಕು- ಹೋರಾಟ-ಸೇಡಿನ ಜ್ವಾಲೆಯೂ

Read more!

Sunday, December 6, 2009

ಋಣ


ಆಕಾಶವೇ ತೂತಾದಂತೆ ಒಂದೆ ಸಮನೆ ಸುರಿಯುತ್ತಿದ್ದ ಕುಂಭದ್ರೋಣ ಮಳೆಗೆ, ಚಳಿಯೆನ್ನದೆ ಬೇಗನೆ ಎದ್ದ ಸಾವಿತ್ರಿಗೆ ದಳಿಯ ಬಾಗಿಲು ತೆರೆದು ಹೊರಗಿನ ದೀಪ ಹಾಕುವಾಗ, ಅಂಗಳದಲ್ಲಿ ನಿಂತಿದ್ದ ನೀರನ್ನು ಕಂಡು ಹೆದರಿಕೆಯಾಯಿತು.
“ಓ ದೇವರೆ! ಇದೆಂತ ಹೀಗೆ, ಅಂಗಳದಲ್ಲಿ ಈ ನಮುನೆ ನೀರು ನಿಂತಿದೆ?” ತನ್ನಷ್ಟಕ್ಕೆ ಹೇಳಿಕೊಂಡಳಾದರೂ, ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿಕೊಂಡು ಬಂದ ಸುಬ್ರಾಯ ಭಟ್ಟರಿಗೆ ಮಾತ್ರ ಆಶ್ಚರ್ಯವಾದಂತೆ ಇರಲಿಲ್ಲ. ಅವರು ಮಡದಿಯ ಬಳಿ ನಿಂತು ಹೊರಗೆ ನೋಡಿದರು.

“ಮೂರು ದಿವಸದಿಂದ ಹೀಗೆ ಮಳೆ ಸುರಿಯುತ್ತಿದ್ದರೆ ಅಂಗಳದಲ್ಲಿಯಲ್ಲ ಮನೆಯ ಒಳಗೂ ನೀರು ಬರುವುದು ಖಂಡಿತ” ಹಾಗಂದ ಗಂಡನತ್ತ ತಿರುಗಿದ ಸಾವಿತ್ರಿ, “ನೀವು ಎಂತದು ಹೇಳುವುದು? ನಾವು ಮನೆ ಕಟ್ಟಿ ನಾಲಕ್ಕು ವರ್ಷವಾಯಿತಲ್ಲ. ಇಷ್ಟರವರೆಗೆ ಹೀಗಾದದ್ದಿಲ್ಲ. ಅಥವಾ ಹೀಗೆ ಮಳೆ ಬಂದಿಲ್ಲವ ಹೇಗೆ?” ಆತಂಕದಿಂದ ನುಡಿದಾಗ ಸುಬ್ರಾಯ ಹಿಂದಕ್ಕೆ ಸರಿದು, “ಮಳೆ ಬಂದಿಲ್ಲವಾ? ಇದಕ್ಕಿಂತಲೂ ಹೆಚ್ಚೇ ಮಳೆ ಸುರಿದಿತ್ತು. ಆದರೆ ಈ ತರ ನೀರು ಅಂಗಳದಲ್ಲಿ ನಿಂತದ್ದಿಲ್ಲ” ಅಂದ.

“ನಾನೂ ಅದನ್ನೇ ಹೇಳಿದ್ದು. ಹೀಗೆ ಮಳೆಯ ನೀರು ನಿಂತರೆ ತೆಂಗಿನ ಗಿಡಗಳು, ಅಡಿಕೆ ಗಿಡಗಳು ಏನಾಗಬೇಡ? ಇಷ್ಟು ನೀರು ಎಲ್ಲಿಂದ ಬರುವುದಪ್ಪಾ ಇದು? ನಮ್ಮನ್ನು ಲಗಾಡಿ ತೆಗೆಯುವುದಕ್ಕೆ ಬರುವುದಾ?” ಗಂಡನಿಗೆ ಹೇಳುತ್ತಾ ಸೀರೆಯ ತುದಿಯನ್ನು ಸೊಂಟಕ್ಕೆ ಸೇರಿಸಿ, ಅಂಗಳಕ್ಕೆ ಇಳಿದಳು.

ಸರಿಯಾಗಿ ಮೊಣಗಂಟಿನವರೆಗೂ ನೀರಿತ್ತು. ಹೆದರಿ ಹಿಂದಕ್ಕೆ ಬಂದ ಅವಳು ಗಂಡನನ್ನು ಕರೆದು, “ಅಲ್ಲೇ ಮಂಚದ ಪಕ್ಕದಲ್ಲಿ ಕೊರಂಬು ಇದೆ; ಕೊಡಿ” ಅಂದಳು. ಸುಬ್ರಾಯ ಕೊರಂಬನ್ನು ತೆಗೆದು ಮೆಟ್ಟಿಲಿನ ಬಳಿ ಇಟ್ಟ. ಅವಳು ಅದನ್ನು ತಲೆಗೆ ಇಟ್ಟುಕೊಂಡು ಬಚ್ಚಲಿನ ಒಲೆಗೆ ಬೆಂಕಿ ಹಾಕಲು ಬಂದಳು. ಅವಳ ಆತಂಕವೊಂದೇ, ನಾಲ್ಕು ವರ್ಷದ ತೆಂಗಿನ ಗಿಡಗಳು ನೀರು ನಿಂತು ಹಾಳಾದರೆ ಏನು ಮಾಡುವುದು? ಅವುಗಳನ್ನು ನೆಡಲು ಅಷ್ಟು ಖರ್ಚು ಮಾಡಿಯೂ ಏನೂ ಉಪಯೋಗವಾಗುವುದಿಲ್ಲವಲ್ಲಾ ಅನ್ನುವ ನೋವು. "

ಒಂದು ಕಡೆಗೆ ಮನೆಯ ಗೋಡೆ ಏರುತ್ತಿದ್ದಂತೆ ಗಂಡನಿಗೆ ಹೇಳಿ, ಅವರಿವರ ಬಳಿ ಇಪ್ಪತ್ತು ತೆಂಗಿನ ಗಿಡ, ಹದಿನಾಲ್ಕು ಕಂಗಿನ ಗಿಡಗಳನ್ನು ತಂದು ನೆಟ್ಟಿದ್ದು ಸುಮ್ಮನೆಯಲ್ಲ. ದೂರಾಲೋಚನೆಯಿರುವ ಕಷ್ಟ ಸಹಿಷ್ಣು ಜೀವಿ ಅವಳು. ಆಗ ಬಾವಿಯೂ ಇರಲಿಲ್ಲ. ಹಾಗಂತ ಸುಮ್ಮನಿದ್ದರೆ ನೆಟ್ಟ ಗಿಡಗಳು ಏನಾಗಬೇಡ? ಅನ್ನುತ್ತಾ ಎರಡು ಗದ್ದೆ ಇಳಿದು, ಮೂರು ಪುಣಿಯನ್ನು ದಾಟಿ, ಮಲ್ಲ ಸೋಜಾರ ಹಳ್ಳದಿಂದ ನೀರು ಹೊತ್ತು ಹಾಕಿದ್ದೆ ಅವುಗಳು ತಲೆಯೆತ್ತುವುದಕ್ಕೆ ಕಾರಣವಾಗಿದ್ದು. ಇದು ನಾಲ್ಕು ವರ್ಷಗಳ ಕೆಳಗಿನ ಮಾತು. ಇನ್ನೆರಡು ವರ್ಷ ಕಳೆದರೆ ಒಂದೆರಡು ತೆಂಗಿನ ಮರಗಳಲ್ಲಿಯೂ ಫಲ ಶುರುವಾಗಬಹುದು. ಈಗ ಈ ರೀತಿ ನೀರು ನಿಂತರೆ, ಕಾಂಡ ಕೊಳೆತು ಹೋದರೆ; ಎಲ್ಲಾ ಗೋವಿಂದಾ.

ಒಲೆಗೆ ಬೆಂಕಿ ಹಿಡಿದಾಗ ಒಂದೆರಡು ಕೊತ್ತಳಿಗೆಯನ್ನು ತುರುಕಿ, ಹೊರಗೆ ಬರುವಾಗ ಮಳೆಯಿಂದಾಗಿ ಸರಿ ಬೆಳಕಾಗದಿದ್ದರೂ, ಅತ್ತಿತ್ತ ಹೋಗುವುದಕ್ಕೆ ಏನೂ ತೊಂದರೆಯಿರಲಿಲ್ಲ. ಅಲ್ಲೇ ಪಕ್ಕದಲ್ಲಿಟ್ಟಿದ್ದ ಕೊರಂಬನ್ನು ತಲೆಗೇರಿಸಿ ಅಂಗಳಕ್ಕೆ ಇಳಿದ ಸಾವಿತ್ರಿ, ಗದ್ದೆಯ ಪುಣಿಯನ್ನು ಹಿಡಿದು ಹೊರಟಳು.

ಹಿಂದಕ್ಕೆ ಮೂರು ಕೊಯ್ಲು, ಮನೆಯ ಮುಂದೆ ನಾಲ್ಕು ಕೊಯ್ಲು ಗದ್ದೆ. ಎಡಕ್ಕೆ ತೆಂಗಿನ ತೋಟ, ಬಲಕ್ಕೆ ಬಾಳೆ ಮತ್ತು ಕಂಗಿನ ತೋಟ, ಮನೆಯ ಎದುರಿಗೆ ಬಾವಿ. ಆದ್ದರಿಂದ ಒಂದು ಗದ್ದೆಯ ಪುಣಿಯನ್ನು ಹಿಡಿದು ಹೊರಟರೆ ಅದು ಮತ್ತೆ ಬಂದು ಸೇರುವುದು ಬಾವಿಕಟ್ಟೆಯ ಬಳಿಗೆ.

ತೆಂಗಿನ ತೋಟದಿಂದ ಕೆಳಗೆ ದೊಡ್ಡ ಜರೆ. ಅದರ ಕೆಳಗಿರುವುದು ಸಾಂತಕ್ಕನ ಮಜಲು ಗದ್ದೆ. ತೋಟದಲ್ಲಿ ನೀರು ತುಂಬಿ ಜರೆಯಿಂದ ನೀರು ಜಲಪಾತದಂತೆ ದುಮುಕುತ್ತಿತ್ತು.

‘ಇದೆಂತ, ಬೆಟ್ಟುಗದ್ದೆಗಳಲ್ಲಿ ಈ ತರ ನೀರು? ನೆರೆ ಬಂದರೆ ಬೈಲು ಗದ್ದೆಗಳಿಗೆ ನೆರೆ ಬರುವುದಿತ್ತೇ ಹೊರತು ಹೀಗೆ ಬೆಟ್ಟು ಗದ್ದೆಗಳಿಗಲ್ಲ. ಈ ತರ ನೀರು ಜರೆಯಲ್ಲಿ ಇಳಿದರೆ ಪುಣಿ ಕಡಿದು, ಜರೆ ಜರಿದು ಹೋಗುವುದಿಲ್ಲವೆ?’ ಎಂದು ಚಿಂತಿಸುತ್ತಾ ನೀರು ಹೋಗುವುದಕ್ಕೆ ಬೇರೆ ದಾರಿಯಿದೆಯೇ ಎಂದು ನೋಡುತ್ತಾ ನಡೆಯುತ್ತಿದ್ದಳು.

ಅವಳು ಹಿಂಬದಿಯ ಗದ್ದೆಯತ್ತ ಬರುವಾಗ ಕಾಡಿನ ಒಡ್ಡದ ನೀರು ಗುದ್ದಳಿಸಿ ಬರುತ್ತಿರುವುದು ಕಾಣಿಸಿತು. ಊರಿಗೆ ಬಂದು ನಾಲ್ಕು ವರ್ಷವಾದರೂ ಆ ತರಹ ನೀರು ಹರಿಯುವುದನ್ನು ಇಲ್ಲಿಯವರೆಗೆ ನೋಡಿಯೇ ಇರಲಿಲ್ಲ. ಆಗ, ಆಸ್ತಿ ತೆಗೆದುಕೊಂಡ ನಂತರ ಬೆಟ್ಟು ಗದ್ದೆಯಲ್ಲಿಯೇ ಮನೆ ಮಾಡಿ ನಿಂತದ್ದು ದೊಡ್ಡ ಸಾಹಸ. ಅಕ್ಕ ಪಕ್ಕದ ಮನೆಯವರೆಲ್ಲಾ ಏನೋ ಹೇಳಿ ಹೆದರಿಸಿದ್ದಿದೆ. ಕಾಡಿನ ಪಕ್ಕದಲ್ಲಿಯೇ ಇರುವ ಆ ಬೆಟ್ಟು ಗದ್ದೆಯಲ್ಲಿ ಹುಲಿ ಕೂಡ ತಿರುಗಾಡುತ್ತದೆಯಂತೆ. ಆದರೆ ಈಗ ಹುಲಿ ಎಲ್ಲಿ? ಅನ್ನುವ ಧೈರ್ಯದಿಂದ ಅಲ್ಲಿಯೇ ಮನೆ ಕಟ್ಟಿದ್ದಾಯಿತು. ಅದಲ್ಲದೆ ಆ ಗದ್ದೆಯ ಪಕ್ಕದಲ್ಲಿಯೇ ಬೈಕಾಡ್ತಿ ಭೂತದ ಬನವಿರುವುದರಿಂದ ದೈವ ಏನೂ ಮಾಡಲಿಕ್ಕಿಲ್ಲ ಅನ್ನುವ ನಂಬಿಕೆಯೂ ಇತ್ತು.

ಆದರೆ ಈಗ ಅದೇ ನೇರಕ್ಕೆ ಹಿಂದೆ ಪುರುಷರ ಮನೆ, ಮುಂದಕ್ಕೆ ನೀಲಕ್ಕನ ಮನೆ ಎದ್ದಿದೆ. ಹಾಗಾಗಿ ಕಾಡಿನ ನೀರು ಇಳಿಯುತ್ತಿದ್ದ ತೋಡಿಗೆ ಅಲ್ಲಲ್ಲಿ ಅಡೆತಡೆಯಿರಬೇಕು ಅಂದುಕೊಂಡು ತೋಡಿನ ಬದಿಗೆ ನಡೆದು ಹೋದಳು.

ಕಾಡಿನ ಒಡ್ಡ ನೀರಿಗಾಗಿ ಒಂದು ಕಾಲದಲ್ಲಿ ಜಗಳವಾಗುತ್ತಿತ್ತಂತೆ. ಸುಗ್ಗಿಯ ಬೆಳೆಗೆ ಒಡ್ಡ ನೀರು ಇಲ್ಲದಿದ್ದರೆ ಗದ್ದೆಗಳೆಲ್ಲಾ ಒಣಗಬೇಕಾಗುತ್ತಿತ್ತು. ಒಡ್ಡ ನೀರಿನ ತೋಡು ಅವರಿಗೆ ಇವರಿಗೆ ಎಂದು ಅಲ್ಲಲ್ಲಿ ಬಾಯಿ ತೆರೆದು ಗದ್ದೆಗಳಿಗೆ ನೀರು ಹೋಗುವಂತಾಗಿತ್ತು. ಈಗ, ಮಳೆಗಾಲಕ್ಕೆ ಆ ನೀರು ಯಾರಿಗೂ ಬೇಡ. ಎಲ್ಲರೂ ಅವರವರು ತೆಗೆದ ಕಡಿಯನ್ನು ಮುಚ್ಚಿದ್ದೆ ನೀರೆಲ್ಲಾ ಹೀಗೆ ಬೆಟ್ಟುಗದ್ದೆಗಳಿಗೆ ಇಳಿದು ಅಂಗಳ, ತೋಟವೆಲ್ಲಾ ನೀರಲ್ಲಿ ಮುಳುಗಿರುವುದು.

ಸಾವಿತ್ರಿ ಮನೆಗೆ ಬಂದವಳೇ, ಗಂಡನಿಗೆ ಹೇಳಿ, ಕೊಟ್ರೆ(ಹಾರೆ) ತೆಗೆದುಕೊಂಡು ಹೋಗಿ ಒಡ್ಡ ನೀರಿನ ತಡೆಗಳನ್ನು ತೆರೆದು ಸಾಂತಕ್ಕನ ಗದ್ದೆಗೂ, ಹಿಂದೆ ಪುರುಷರ ಗದ್ದೆಗೂ ನೀರು ಬಿಟ್ಟು ಬಂದಳು.

ಮಳೆ ಸುರಿಯುತ್ತಿದ್ದರೂ ಸುಮಾರು ಮಧ್ಯಾಹ್ನದ ಹೊತ್ತಿಗೆ ಅಂಗಳದ ನೀರು ಇಳಿದು ಹೋಯಿತು. ಸುಬ್ರಾಯರು ಹೊರಗೆ ಬಂದಾಗ ಆಶ್ಚರ್ಯವಾಯಿತು.

“ನೋಡೆ, ನೀರೆಲ್ಲಾ ಇಳಿದು ಹೋಗಿದೆ” ಮಡದಿಯನ್ನು ಕರೆದು ಅಂದರು.

“ಒಡ್ಡ ನೀರು ಎಲ್ಲಾ ಕಡೆಗೂ ಸರಿಯಾಗಿ ಹೋಗುವ ಹಾಗೆ ಮಾಡಿದೆ. ಅವರಿಗೆ ಇನ್ನೊಬ್ಬರ ಮೇಲೆ ಕನಿಕರ ಊಂಟಾ? ಸುಮ್ಮನ್ನೆ ನಮ್ಮನ್ನು ಹಾಳಾಗಬೇಕೂಂತ ಮಾಡುವುದಲ್ಲವಾ? ನೋಡುವಾ, ನಮಗೆ ದೇವರಿದ್ದಾನೆ” ಅಂದು ನೆರೆಕರೆಯವರ ಬಗ್ಗೆ ಅಸಮಾಧಾನದಿಂದ ನುಡಿದರು.

ನೆರೆಕರೆಯವರೆಲ್ಲಾ ಏನಾದರೂ ಬೇಕಾದರೆ ಸಹಾಯ ಕೇಳಿಕೊಂಡು ಸಾವಿತ್ರಿಯ ಬಳಿ ಬರುತ್ತಿದ್ದರು. ತನ್ನ ಬಳಿ ಸಾಕಷ್ಟು ಇಲ್ಲದಿದ್ದರೂ ಕೈಯೆತ್ತಿ ಕೊಡುವ ಅನ್ನಪೂರ್ಣೆ ಅವಳು. ಗಂಡ ಆ ವಿಷಯದಲ್ಲಿ ಅಸಮಾಧಾನ ತೋರಿಸಿದರೆ, “ಎಂತದು ನೀವು. ಪಾಪ ಅವರಿಗೆ ಸರಿಯಾಗಿ ಮೂರು ಹೊತ್ತು ತಿನ್ನುವುದಕ್ಕೆ ಉಂಟೋ, ಇಲ್ಲವೋ? ಸಣ್ಣ ಸಣ್ಣ ಮಕ್ಕಳಿರುವ ಹೆಂಗಸಲ್ಲವಾ? ಹೊಟ್ಟೆ ತುಂಬಾ ತಿನ್ನಲಿ” ಎಂದು ಅವನನ್ನು ಸಾಂತ್ವನಿಸುತ್ತಿದ್ದಳು.

ಇದೇ ಈ ಸಾಂತಕ್ಕನಿಗೆ ಸೌಖ್ಯವಿಲ್ಲದಾಗ ಹಾಲು, ಮೊಸರು, ಮಜ್ಜಿಗೆಂತ ಅವಳ ಮಗ ಈಸ್ವರ ಬಂದು ಕೇಳುವಾಗ ಕೊಟ್ಟಿದ್ದಳು. ಆದರೆ ಈಗ ಒಡ್ದ ನೀರಿಗೆ ತಡೆ ಹಾಕಿ, ಎಲ್ಲಾ ನೀರು ತನ್ನ ಮನೆಯತ್ತ ಹರಿಯಬಿಟ್ಟಿದು ಮಾತ್ರ ನ್ಯಾಯವಲ್ಲ ಅಂದುಕೊಂಡಳು.

ಮರುದಿನ ಎದ್ದಾಗ ಮತ್ತೆ ಅಂಗಳದಲ್ಲಿ ನೀರು ಮೊಣಗಂಟಿನವರೆಗೂ ನಿಂತಿತ್ತು.

“ಇಲ್ಲ, ಅವರು ನಮ್ಮನ್ನು ಬದುಕುವುದಕ್ಕೆ ಬಿಡುವುದಿಲ್ಲ. ಗದ್ದೆಯ ಕೆಸರೆಲ್ಲಾ ಸಾಂತಕ್ಕನ ಗದ್ದೆಗೆ ಹೋಗಿಯಾಯಿತು. ಇನ್ನು ನೇಜಿ ಕೂಡ ಎದ್ದು ಹೋದರೆ ಈ ವರ್ಷ ಅಂಗಡಿಯಿಂದಲೇ ಐದು ಮುಡಿ ಅಕ್ಕಿ ತೆಗೆದುಕೊಳ್ಳಬೇಕು” ಎಂದು ತನ್ನ ಮನಸ್ಸಿನಲ್ಲಿದ್ದ ನೋವನ್ನು ಗಂಡನಿಗೆ ಹೇಳುವಾಗ ಅವಳ ಕಣ್ಣಿನಲ್ಲಿ ನೀರು ಇಳಿಯಿತು.

“ನೀನೆಂತ ಮಾರಾಯ್ತಿ, ಹೀಗೆ ಬೆಳಿಗೆದ್ದು ಕಣ್ಣೀರು ಹಾಕುವುದು? ಅವರು ಮತ್ತೆ ಕಟ್ಟ ಹಾಕಿ ಬಂದರೂಂತ ಕಾಣ್ತದೆ. ಇರಲಿ ಮಾಡಿಕೊಳ್ಳಲಿ. ನೀನೆ ಹೇಳಿದ್ದಲ್ಲವಾ; ದೇವರಿದ್ದಾನೆ ನಮಗೆ” ಎಂದು ಮಡದಿಯನ್ನು ಸಮಾಧಾನಿಸಿದರಾದರೂ ಅವರಿಗೂ ನೆರೆಕರೆಯವರ ಮೇಲೆ ಬೇಸರವಾಯಿತು.

“ಹೌದು, ನೀವು ಎಷ್ಟು ಸುಲಭದಲ್ಲಿ ಹೇಳುತ್ತೀರಿ. ನಾವು ಅದಕ್ಕೆ ಪಟ್ಟ ಶ್ರಮ ಗೊತ್ತುಂಟಲ್ಲಾ? ಈಗಿನ ಕಾಲದಲ್ಲಿ ಗದ್ದೆಗಳನ್ನು ಇನ್ನೊಬ್ಬರಿಂದ ಉಳುಸುವುದು, ಆಳುಗಳನ್ನು ಹುಡುಕುವುದು ಎಷ್ಟು ಕಷ್ಟಾಂತ ಗೊತ್ತಿಲ್ಲವ ನಿಮಗೆ? ಅವರೆಲ್ಲಾ ಹೀಗೆ ಹೊಟ್ಟೆ ಉರಿಸಿದ್ರೆ ನಾವೆಂತ ಮಾಡುವುದು ಹೇಳಿ?” ಅವಳು ಸೀರೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡು, “ಯಾವುದಕ್ಕೂ ನಾನು ಸಾಂತಕ್ಕನನ್ನು ಮಾತನಾಡಿಸಿಯೇ ಬರುತ್ತೇನೆ” ಎಂದು ಅಂಗಳಕ್ಕೆ ಇಳಿದಳು.

ಹೊರಗೆ ಸುರಿಯುವ ಮಳೆಗೆ ಮನೆಯ ಹೆಬ್ಬಾಗಿಲಿನಲ್ಲಿಯೇ ನಿಂತು ಮೂಗಿನ ಸಿಂಬಳವನ್ನು ತೆಗೆದು ಕೈಯನ್ನು ಒದರಿದ ಸಾಂತಕ್ಕನಿಗೆ ಸಾವಿತ್ರಿ ಬಂದಿದ್ದು ತಿಳಿಯಲಿಲ್ಲ. ಅವಳ ಕೈಯಿಂದ ಹಾರಿದ ಸಿಂಬಳ ಸಾವಿತ್ರಿಯ ಕೊರಂಬಿನ ಮೇಲೆ ಬಿದ್ದು ಕೆಳಗೆ ಇಳಿಯಿತು. ಸಾವಿತ್ರಿಯನ್ನು ಕಂಡೊಡನೆ ಸಾಂತಕ್ಕ ಕೈಯನ್ನು ಒರೆಸುತ್ತಾ ಒಳಗೆ ನಡೆದಳು. ಸಾವಿತ್ರಿ ಕೊರಂಬನ್ನು ತೆಗೆದು ಕೆಳಗಿಟ್ಟು, “ಸಾಂತಕ್ಕ” ಎಂದು ಕರೆದಳು. ಸಾಂತಕ್ಕ ಅವಳನ್ನು ಕಂಡೇ ಇಲ್ಲವೆನ್ನುವಂತೆ ಹೊರಗೆ ಬರುತ್ತಾ, “ಏನು ಅಮ್ಮೋರೆ, ಈ ಮಳೆಗೆ ಹೀಗೆ ಬಂದಿರಲ್ಲಾ?” ಎಂದು ಆಶ್ಚರ್ಯ ತೋರಿಸುತ್ತಾ ಪಕ್ಕದಲ್ಲಿದ್ದ, ಪಸೆಗೆ ಬೂಸ್ಟ್ ಬಂದಿದ್ದ ಮರದ ಕುರ್ಚಿಯನ್ನು ಒರೆಸುತ್ತಾ ಅವಳ ಕಡೆಗೆ ಇಟ್ಟು, “ಬನ್ನಿ ಒಳಗೆ” ಎಂದು ಆಹ್ವಾನಿಸಿದಳು.

ಸಾವಿತ್ರಿ ಹೊರಗೆ ನಿಂತು, “ಸಾಂತಕ್ಕ, ಇದು ಎಂತ ನೀವು? ನಮ್ಮನ್ನು ಬದುಕಲು ಬಿಡುವುದಿಲ್ಲವಾ, ಹೇಗೆ?” ಎಂದು ಕೇಳಲು, ಸಾಂತಕ್ಕ, “ಯಾಕೆ ಹಾಗನ್ನುತ್ತೀರಿ? ನಾನೇನು ಮಾಡಿದೆ?” ಎಂದು ಬೆರಗಿನಿಂದ ಕೇಳಿದಳು. ಸಾವಿತ್ರಿ ಒದ್ದೆ ಕಾಲುಗಳನ್ನು ಕಾಲು ಒರೆಸಲು ಹಾಕಿದ ಗೋಣಿಯ ಚೀಲಕ್ಕೆ ತಿಕ್ಕುತ್ತಾ ಒಳಗೆ ಬಂದು, “ನೋಡಿ, ಆ ಕಾಡಿನ ಒಡ್ಡ ನೀರು ಎಲ್ಲಾ ನಮ್ಮ ತೋಟಕ್ಕೆ ಬಂದು, ತೋಟದಲ್ಲಿ ಮಾತ್ರ ಅಲ್ಲ, ಇಡೀ ಅಂಗಳ, ಗದ್ದೆಯಲ್ಲೆಲ್ಲಾ ಬೊಳ್ಳ ಬಂದ ಹಾಗೆ ಆಗಿದೆ. ಹೀಗೆ ನೀರು ನಿಂತ್ರೆ ತೆಂಗಿನ ಗಿಡಗಳೆಲ್ಲಾ ಏನಾಗಬೇಡ? ಆ ನಿಮ್ಮ ಗದ್ದೆಯ ಪಕ್ಕದ ಪುಣಿಯ ಬರೆಯುಂಟಲ್ಲಾ ಅದು ಜರಿದು ಬಿದ್ರೆ ಏನು ಮಾಡುವುದು?” ಎಂದು ಹೇಳುತ್ತಾ ಕಣ್ಣೀರನ್ನು ಒರೆಸಿಕೊಂಡಳು. ಸಾಂತಕ್ಕನಿಗೆ ಏನನಿಸಿತೋ ಅವಳು, “ಅಲ್ಲಾ, ಅಲ್ಲಿ ಹಿಂದೆ ಪುರುಷರ ಮನೆಯವರು ಅವರ ಗದ್ದೆಗೆ ನೀರು ಬರದ ಹಾಗೆ ಕಟ್ಟ ಹಾಕಿದ್ದಾರೆ. ಕಾಡಿನಿಂದ ಗುದ್ದಳಿಸಿ ಬರುವ ನೀರು ನಮ್ಮ ಗದ್ದೆಗಲ್ಲವಾ ಬರುವುದು? ಆ ನಮನಿ ನೀರು ಬಂದ್ರೆ ಮೊನ್ನೆ ನೆಟ್ಟ ನೇಜಿಯೆಲ್ಲಾ ಹಾಳಾಗುವುದಿಲ್ಲವಾ?”

ಅವರ ಮಾತು ಕೇಳಿ ಸಾವಿತ್ರಿಗೆ ಕೋಪವೂ ಬಂತು. ಅವಳು, “ಹಾಗಾದ್ರೆ ನಿಮ್ಮ ಗದ್ದೆಯ ನೇಜು ಹಾಳಾಗುತ್ತದೆಯಲ್ಲವಾ? ನಮ್ಮ ಗದ್ದೆ, ತೋಟ ಹಾಳಾದ್ರೂ ಪರವಾಗಿಲ್ಲ, ನಿಮ್ಮದು ಏನೂ ಆಗಬಾರದಲ್ಲಾ. ಇರಲಿ, ದೇವರು ನೋಡಿಕೊಳ್ಳಲಿ. ನಾನು ಇನ್ನು ಮಾತನಾಡುವುದಕ್ಕೆ ಬರುವುದಿಲ್ಲ” ಎಂದು ಹೊರಗೆ ಬಂದವಳೇ ಕೊರಂಬು ಹಿಡಿದು ಆ ಮಳೆಯಲ್ಲಿಯೂ ಬಿರಬಿರನೆ ನಡೆದು ಮನೆಗೆ ಬಂದಳು. ಅವಳ ಗಂಡ ಹೊರಗೆ ಮಳೆಯ ನೀರನ್ನೇ ನೋಡುತ್ತಾ ನಿಂತಿದ್ದ.

“ಏನಂತೆ, ಅವರು ಕಟ್ಟ ಹಾಕಿದ್ದಾರಂತೆಯ?” ಆತ ಕೇಳುವಾಗ ಸಾವಿತ್ರಿ, “ಅವರವರದ್ದು ಆದ್ರೆ ಮುಗಿಯಿತು. ಉಳಿದವರ ಚಿಂತೆ ಅವರಿಗೆಂತದು. ಅವರ ಗದ್ದೆಯ ಪೈರು ಹಾಳಾಗುತ್ತದೆಯಂತೆ. ಅವರ ಹಾಗೆ ನಾವೂ ಕಷ್ಟದಿಂದ ನೆಟ್ಟದ್ದಲ್ವಾ? ಯಾಕೆ ಹೀಗೆ ಮಾಡ್ತಾರಾ?” ಎಂದು ನಿಟ್ಟುಸಿರು ಚೆಲ್ಲಿದವಳೇ ಕೊರಂಬನ್ನು ಮೆಟ್ಟಿಲಿನ ಮೇಲೆ ಇಟ್ಟು ಒಳಗೆ ಬಂದಳು.


ಹೀಗೆ ಆವತ್ತು ಕೂಡ ಕುಂಭದ್ರೋಣ ಮಳೆ ಸುರಿದ ನೆನಪು. ಸುಬ್ರಾಯನ ಅಣ್ಣ ದೇವರಾಯ ಭಟ್ಟ ಕಡಾಖಂಡಿತವಾಗಿ ಮಾತು ತೆಗೆಯದೆ ಇರುತ್ತಿದ್ದರೆ ಇನ್ನೂ ಆ ಹಿರಿಯರ ಮನೆಯಲ್ಲಿ ಜೀತದಾಳಿನಂತೆ ದುಡಿಯುವ ಕರ್ಮ ಸುಬ್ರಾಯನಿಗೂ, ಅವನ ಹೆಂಡತಿ ಸಾವಿತ್ರಿಗೂ ತಪ್ಪುತ್ತಿರಲಿಲ್ಲ.

“ಅವರು ಹೇಳಿದರಲ್ಲ, ಇನ್ನು ನಾವು ಇಲ್ಲಿ ನಿಂತರೆ ಮರ್ಯಾದೆ ಉಂಟಾ? ಹೋಗುವ ಎಲ್ಲಿಯಾದರೂ ಬೇಡಿಯಾದರೂ ತಿನ್ನುವ” ಸಾವಿತ್ರಿಯ ಮಾತಿಗೆ ಸುಬ್ರಾಯನಿಗೆ ರೇಗಿತಾದರೂ ಅವಳು ಹೇಳುವುದರಲ್ಲಿ ಸುಳ್ಳಿಲ್ಲವಾದ್ದರಿಂದ, “ನೀನು ಹೀಗೆ ಅವಸರ ಮಾಡಿದರೆ ಹೇಗೆ? ಅಣ್ಣ ಏನೋ ಕೋಪದಿಂದ ಒಂದು ಮಾತು ಅಂದ. ಅದಕ್ಕೆ ಬಾವಿಗೆ ಹಾರಿದರೆ ಆದೀತಾ? ಸ್ವಲ್ಪ ಸಮಯ ಹೋಗಲಿ, ನಾವು ಬೇರೆ ಮನೆ ಮಾಡೋಣ” ಅಂದ ಅವನ ಮಾತು ಸಾವಿತ್ರಿಗೆ ರುಚಿಸಲಿಲ್ಲ. ದಿನಾ ಬೆಳಗಾದರೆ ದನದ ಸೆಗಣಿ ತೆಗೆಯುವುದರಿಂದ ಹಿಡಿದು, ಅವುಗಳ ಹಾಲು ಕರೆದು, ಕಷಾಯ ಮಾಡಿ ತುಂಬಿದ ಮನೆಯಲ್ಲಿರುವ ಎಲ್ಲರಿಗೂ ರುಚಿ ರುಚಿಯಾಗಿ ಮಾಡಿ ಹಾಕುವವರೆಗೆ ಎಲ್ಲಾ ಕೆಲಸಗಳ ಹೊರೆ ಅವಳ ಮೇಲಿತ್ತು. ಕೆಲಸದ ಹೊರೆಯಿಂದಾಗಿ ಕೈಯ ಉಗುರುಗಳ ನಡುವೆ ತುಂಬಿರುವ ಕೊಳಕನ್ನೂ ಶುಚಿಗೊಳಿಸುವಷ್ಟು ಪುರುಸೊತ್ತು ಸಾವಿತ್ರಿಗಿರುತ್ತಿರಲಿಲ್ಲ. ಜೊತೆಗೆ ಅವಳ ಓರಗಿತ್ತಿ ರೋಹಿಣಿಯದ್ದು ಒಂದೇ ಹುಕುಂಗಳು. ‘ಆ ಕೆಲಸ ಆಗ್ಲಿಲ್ಲ, ಈ ಕೆಲಸ ಆಗಿಲ್ಲ; ಅದೆಲ್ಲಾ ಮಾಡೋದು ಯಾರು?’

“ಹೌದು, ಅವರು ಬಾಯಿಗೆ ಬಂದ ಹಾಗೆ ಮಾತನಾಡಲಿ, ನಾವು ಅದನ್ನು ಕೇಳಿಕೊಂಡು ಸುಮ್ಮನಿರುವುದಾ? ಅವರೀಗ ಏನದಂರು, ನಿಮ್ಮ ಕೈಯಲ್ಲಿ ಆಗುವುದಿಲ್ಲವೆಂದದ್ದಲ್ವಾ? ಅವರು ನಿಮ್ಮನ್ನು ಅಷ್ಟೊಂದು ತುಚ್ಛವಾಗಿ ಮಾತನಾಡಿದ್ರೆ ನಾನು ಸುಮ್ಮನಿರುತ್ತೇನಾ? ಇನ್ನು ಮುಂದೆ ನಾನು ಈ ಮನೆಯಲ್ಲಿ ಕೆಲಸ ಮಾಡುವುದಿಲ್ಲ. ಅವರಿಗೆ ಎಲ್ಲಾ ಗೊತ್ತಾಗಲಿ. ನೀವು ಮೊದಲು ಎಲ್ಲಾದರೂ ಸ್ವಲ್ಪ ಜಾಗ ತೆಗೆದು ಹಾಕಿ. ಜೋಪಡಿಯಾದರೂ ಆದೀತು ಕಟ್ಟಿ ಕುಳಿತುಕೊಳ್ಳುವ. ಆದರೆ ಈ ರೀತಿ ಅವರ ಮಾತುಗಳನ್ನು ಕೇಳುವುದು ಬೇಡ” ಎಂದು ಸಾವಿತ್ರಿ ಗಂಡನನ್ನು ಕೇಳಿದಳಾದರೂ, ಮನೆಯನ್ನು ಬಿಟ್ಟು ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸ್ವತ: ಸುಬ್ರಾಯನ ತಾಯಿಯೇ ಬೊಳ್ಳದಲ್ಲಿ ಕೊಚ್ಚಿ ಹೋಗುವ ಮೊದಲ ದಿವಸ ಅವನನ್ನು ಕರೆದು, “ನಿನ್ನ ಅತ್ತಿಗೆ ರೋಹಿಣಿ ಸಾಮಾನ್ಯದ ಹೆಣ್ಣಲ್ಲ. ನೋಡು ನೀನು ಹೀಗೆ ಮೂಕ ಪಶುವಿನ ಹಾಗೆ ಸುಮ್ಮನಿದ್ದರೆ ನಿನ್ನ ಹೆಂಡತಿಯನ್ನು ದುಡಿಸಿಯೇ ತಿನ್ನುತ್ತಾಳೆ. ನಿನಗೂ ಸಂತಾನಾಂತ ನಾಲಕ್ಕು ಮಕ್ಕಳಿದ್ದಾರಲ್ಲಾ? ಅವರನ್ನು ನೀನು ಸಾಕುವುದು ಬೇಡವಾ? ಇಲ್ಲೇ ಗುಡ್ಡದಲ್ಲಿ ಮನೆ ಕಟ್ಟಿ ಕುಳಿತು ಬಿಡು. ಎಲ್ಲಾ ನಾನಿರುವಾಗಲೇ ಆಗಲಿ. ಮತ್ತೆ ದೇವರಾಯ ಕೂಡ ನಿನ್ನ ಮೂಸುವುದಿಲ್ಲ. ಅವನು ದಿಲ್ದಾರ್ ಮನುಷ್ಯ” ಹೇಳಿದ್ದೇ ಮರುದಿವಸ ಎಲ್ಲಿಂದ ಬಂದಿತ್ತೋ ಮಳೆ. ತೋಡಿನಲ್ಲಿ ಹೋಗುತ್ತಿದ್ದ ತೆಂಗಿನ ಕಾಯಿ ಹಿಡಿಯುವುದಕ್ಕೆ ಗದ್ದೆಯ ಬುಡಕ್ಕೆ ಇಳಿದ ಹೆಳೆ, ಅವನ ತಾಯಿಯನ್ನೇ ನೆರೆ ಎಳೆದುಕೊಂಡು ಹೋಗಿತ್ತು. ಅಂದಿಗೆ ಆ ಮನೆಯಲ್ಲಿ ಸುಬ್ರಾಯನ ಸಂಸಾರವನ್ನು ವಹಿಸಿ ಮಾತನಾಡುವವರೆ ಇಲ್ಲವಾಯಿತು. ಸಣ್ಣ ಮಕ್ಕಳನ್ನು ಹಿಡಿದುಕೊಂಡು ಎಲ್ಲಿಗೆ ಹೋಗುವುದು? ಎಂದುಕೊಂಡು ಅವನು ಅಣ್ಣನ ಬೈಗುಳ, ಅತ್ತಿಗೆಯ ಕೊಂಕು ಮಾತುಗಳನ್ನು ಸಹಿಸಿಕೊಂಡು ಕಾಲ ಕಳೆಯುತ್ತಿದ್ದ.

ಆದರೆ ಈಗ ಅದು ಸಾಧ್ಯವಿಲ್ಲವೆನಿಸಿತು. ಸಾವಿತ್ರಿಯದ್ದೂ ಮೊಂಡು ಹಠ. ಎಲ್ಲಿಗೆ ಹೋಗುವುದು? ಯಾರನ್ನು ಕೇಳುವುದು? ಕೈಯಲ್ಲಿ ಅಲ್ಪಸ್ವಲ್ಪ ದುಡ್ಡು ಬಿಟ್ಟರೆ, ಮನೆ ಕಟ್ಟಿ ಕುಳಿತುಕೊಳ್ಳುವಷ್ಟು ಇಲ್ಲ.

“ಸಾವಿತ್ರಿ, ನಾವು ಈ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಜೋಪಡಿಯಲ್ಲಿ ಬದುಕುವುದಕ್ಕೆ ಸಾಧ್ಯ ಉಂಟಾ? ಅವುಗಳಿಗೊಂದು ಸರಿಯಾದ ಬಟ್ಟೆ, ಬರೆ ಉಂಟಾ? ಈಗಲಾದರೆ ಏನೋ ಅಣ್ಣಯ್ಯ, ಅತ್ತಿಗೆ ಅಲ್ಪಸ್ವಲ್ಪ ಕೊಡ್ತಾರೆ. ಇನ್ನು ಮುಂದೆ ಅದನ್ನೆಲ್ಲಾ ನಾವೇ ಮಾಡಿಕೊಂಡು ಹೋಗಬೇಡ್ವಾ?” ತನ್ನ ಸಂಕಟವನ್ನು ತೆರೆದಿಟ್ಟ ಸುಬ್ರಾಯ ಸಣ್ಣ ಮಕ್ಕಳಂತೆ ಅತ್ತೇ ಬಿಟ್ಟ. ಸಾವಿತ್ರಿಗೆ ಅದನ್ನು ಸಹಿಸಲಿಕ್ಕೆ ಆಗಲಿಲ್ಲ.
“ನೀವೆಂತ ಸಣ್ಣ ಮಕ್ಕಳ ಹಾಗೆ ಅಳುವುದು? ನಮ್ಮ ಅಸಹಾಯಕತೆಗೆ ನಾನು ಅಳಬೇಕು. ಅಳಬೇಕಾದವಳೇ ಧೈರ್ಯದಿಂದ ಇದ್ದೇನೆ. ನೀವು ಅಳುವುದು ಸಲ್ಲ. ಸಾಧ್ಯವುಂಟಾ? ನೀವು ಶಾನುಭೋಗರ ಮನೆಗೆ ಹೋಗಿ ಬನ್ನಿ. ಅವರದ್ದು ಕೆಲವು ಗದ್ದೆಗಳನ್ನು ಮಾರುವುದಕ್ಕೆ ಉಂಟಂತ್ತಲ್ವಾ? ಹಾಗಂತ ಉಳುವುದಕ್ಕೆ ಬರುತ್ತಾನಲ್ಲ ಜಯರಾಮ, ಅವನೇ ಅಂದಿದ್ದ” ಎಂದು ಗಂಡನನ್ನು ಸಮಾಧಾನ ಪಡಿಸಿದ ಸಾವಿತ್ರಿ ಮಾಡಲಾರೆನೆಂದ ಮನೆ ಕೆಲಸಗಳನ್ನು ಮಾಡುವುದಕ್ಕೆ ಹೊರಟಳು.
ರಾತ್ರಿ ಹೊತ್ತು ಚಿಮಣಿ ದೀಪದಲ್ಲಿ ಕುಳಿತು ಹೂಬತ್ತಿ ಹೆಣೆಯುತ್ತಿದ್ದ ಸಾವಿತ್ರಿಯ ಬಳಿ ಬಂದ ಸುಬ್ರಾಯ, “ನೀನು ಹೇಳುವುದು ಸರಿ, ಆಸ್ತಿ ತೆಗೆದುಕೊಳ್ಳುವಷ್ಟು ದುಡ್ಡು ನಮ್ಮತ್ರ ಎಲ್ಲಿದೆ? ಸುಮ್ಮನೆ ದಾರಿಯಲ್ಲಿ ಬಿದ್ದು ಸಾಯುವುದಾ?” ಅಂದ ಅವನನ್ನು ನೋಡಿ, ತನ್ನ ಓರಗಿತ್ತಿ ಮತ್ತು ಭಾವನ ಕಿವಿಗೆ ಬೀಳದಂತೆ ಅತ್ತಿತ್ತ ನೋಡಿ ಮೆಲು ದನಿಯಲ್ಲಿ, “ನಿಮ್ಮತ್ರ ಸ್ವಲ್ಪ ಉಂಟಲ್ಲಾ? ನನ್ನತ್ರ ಸ್ವಲ್ಪ ಡಬ್ಬಿಯಲ್ಲಿ ಹಾಕಿಟ್ಟದ್ದು ಉಂಟು. ಉಳಿದದ್ದನ್ನ ತಿಂಗಳಿಗೆ ಇಂತಿಷ್ಟೂಂತ ಕೊಡುವ ಆಗಲಿಕ್ಕಿಲ್ಲವಾ?” ಎಂದು ಗಂಡನಿಗೆ ಹೇಳಿ ಅವನಲ್ಲಿ ಧೈರ್ಯ ತುಂಬಿಸಿದಳು.

ಒಂದು ಒಳ್ಳೆಯ ದಿನ ನೋಡಿ ಸುಬ್ರಾಯ, ಶಾನುಭೋಗರ ಮನೆಗೆ ಬಂದ. ಶಾನುಭೋಗರು ಉದ್ದನೆಯ ಆರಾಮ ಕುರ್ಚಿಯಲ್ಲಿ ಕುಳಿತು ಯಾವುದೋ ಹಳೇಯ ಕಾದಂಬರಿಯನ್ನು ಓದುತ್ತಿದ್ದರು. ಸುಬ್ರಾಯ ಅಳುಕುತ್ತಲೇ ಅವರ ಅಂಗಳಕ್ಕೆ ಕಾಲಿಡುವಾಗ ಅವರ ಮಗ ಸತ್ಯವಂತ ಹೊರಗೆ ಬಂದ. ಸುಬ್ರಾಯನನ್ನು ಕಾಣುತ್ತಲೇ, “ಬನ್ನಿ, ಹೀಗೆ ಬಂದಿರೇನು?” ಎಂದು ಕೇಳಿದ.

“ಹೌದು, ಶಾನುಭೋಗರಲ್ಲಿ ಮಾತನಾಡುವುದಿದೆ. ಅವರು ಇದ್ದಾರೇನು?” ಅವರು ಒಳಗಿರುವುದನ್ನು ಗಮನಿಸಿದವನು ಕೇಳುವಾಗ, ಸತ್ಯವಂತ, “ಹೌದು, ಬನ್ನಿ” ಎಂದು ಅವನನ್ನು ಕರೆದು ಜಗುಲಿಯತ್ತ ಕೈ ತೋರಿಸಿದ.
ಬಿಳಿಯ ದೋತರದಲ್ಲಿ ಕಚ್ಚೆ ಬಿಗಿದು, ಕರಿಯ ಕೋಟನ್ನು ಹಾಕಿಕೊಂಡು ಓದುತ್ತಿದ್ದ ಶಾನುಭೋಗರು ಎಲ್ಲಿಗೋ ಹೊರಟಿರುವಂತೆ ಕಂಡರು. ಸುಬ್ರಾಯನನ್ನು ನೋಡುತ್ತಲೇ ಕೈಯಲ್ಲಿದ್ದ ಪುಸ್ತಕಕ್ಕೆ ಒಂದು ಗುರುತು ಇಟ್ಟು, ಅದನ್ನು ಮೇಜಿನ ಮೇಲೆ ಎಸೆದರು.

“ಯಾರು ಇದು?” ಅಂದು, ಮಗ ಸತ್ಯವಂತನನ್ನು ಕರೆದು, “ಸತ್ಯಾ, ಬಂದವರಿಗೆ ನೀರು ಕೇಳಿದಿಯಾ?” ಅಂದರು. ಸುಬ್ರಾಯ ಅಳುಕುತ್ತಲೇ ನಿಂತಿರುವಾಗ ಸತ್ಯವಂತ, “ನೀರು ತರುತ್ತೇನೆ” ಎಂದು ಒಳಗೆ ಹೋದಾಗ ಅವರು ಸುಬ್ರಾಯನತ್ತ ತಿರುಗಿ, “ಹೇಳಿ, ತಾವು ಯಾರು?” ಅಂದರು.

ಸುಬ್ರಾಯ ತನ್ನ ಪರಿಚಯ ಹೇಳಿಕೊಂಡ ಬಳಿಕ, “ಹೋ... ಹೋ... ಗೊತ್ತಾಯಿತು ಬಿಡಿ. ನೀವು ನಮ್ಮ ದೇವರಾಯನ ತಮ್ಮನಲ್ಲವೆ? ಸಾವಿತ್ರಿ ನಿಮ್ಮ ಮಡದಿಯಲ್ಲವೆ? ಹೇಗಿದ್ದಾಳೆ ಅವಳು?” ಎಂದು ಅವರು ತನ್ನ ಮಡದಿಯನ್ನು ಕುರಿತು ಕೇಳುವಾಗ ಸುಬ್ರಾಯನಿಗೆ ಎದೆ ಧಸಕ್ಕೆಂದಿತು.

ಶಾನುಭೋಗರ ವಿಷಯ ತಿಳಿಯದವನೇನಲ್ಲ. ಮೈಯಲ್ಲಿ ಸುಕ್ಕುಗಳು ಮೂಡಿದ್ದರೂ ತನಗಿನ್ನೂ ಮೂವತ್ತಾರು ಅನ್ನುವ ವ್ಯಕ್ತಿ. ಊರಿನ ಎಲ್ಲಾ ಮನೆಯ ಹೆಂಗಸರ ಹೆಸರು ಅವರ ನಾಲಿಗೆಯ ತುದಿಯಲ್ಲಿತ್ತು. ಎಲ್ಲೇ ಸಮಾರಂಭಗಳಾಗಲಿ ಅವರಿಗೆ ಕಾಣುತ್ತಿದ್ದುದು, ಪಟ್ಟೆ ಸೀರೆಯುಟ್ಟು ಅತ್ತಿತ್ತ ಹೋಗುವ ಹೆಂಗಸರು. ಅವರನ್ನು ಕೈಯಲ್ಲಿ ಹಿಡಿದು ನಿಲ್ಲಿಸಿ ಮಾತನಾಡುವುದು ಅವರ ಜಾಯಮಾನ. ಕೆಲವರಿಗೆ ಅದು ಆಗದಿದ್ದರೂ ಹಿರಿಯರು ಅನ್ನುವ ಗೌರವದಿಂದ ನಿಂತು ಮಾತನಾಡುತ್ತಿದ್ದರು. ಯಾರಾದರೂ ಸ್ವಲ್ಪ ಹೆಚ್ಚಿಗೆ ನಡೆದುಕೊಂಡರೆ, “ಇವತ್ತು ಮನೆಯ ಕಡೆಗೆ ಬರುತ್ತೇನೆ” ಅನ್ನುವ ಅಸಾಮಿ. ಅಂತವರ ಬಾಯಿಯಿಂದ ಈ ರೀತಿಯ ಮಾತು ಬಂದಾಗ ಅವನಿಗೆ ಹೆದರಿಕೆಯಾಯಿತು. ಅವನು ಮೆಲ್ಲನೆ, “ತಾವು ಗದ್ದೆಗಳನ್ನು ಮಾರುವುದು ಇದೆಯಂತೆ” ಅಂದು ಅವರ ಮುಖವನ್ನು ನೋಡಿದ. ಅವರ ಮುಖ ಬದಲಾಯಿತು.

“ಹಾಗಂತ ಯಾರಂದರು ನಿನಗೆ?” ದರ್ಪದಿಂದ ಅವರು ಕೇಳುವಾಗ ಸುಬ್ರಾಯ ಉಚ್ಚೆ ಹೊಯ್ಯುವುದೊಂದೇ ಬಾಕಿಯಾಗಿತ್ತು. ಅದಲ್ಲದೆ ಸಾವಿತ್ರಿಯ ಮೇಲೆ ಕೋಪವೂ ಬಂತು.

“ಅದು... ಅದು... ಸಾವಿತ್ರಿನೇ ಹೇಳಿದ್ದು” ಎಂದು ಅವನು ಅಳುಕುತ್ತಲೇ ಹೇಳುವಾಗ ಆರಾಮ ಕುರ್ಚಿಯಿಂದ ಎದ್ದು ಅವನಿಗೆ ಎದುರಾಗಿ ಮರದ ಕುರ್ಚಿಯಲ್ಲಿ ಕುಳಿತವರೇ ಸೊಗಸಾಗಿ ನಕ್ಕರು.

“ಸಾವಿತ್ರಿಗೆ ಎಲ್ಲಾ ವಿಷಯ ಗೊತ್ತಾಗುತ್ತದೆ ಅನ್ನು. ಅವಳು ಹೇಳಿದ್ದು ಸರಿ. ನೀನು ಅವಳ ಕೂಡಿಕೊಂಡೇ ಬರಬಹುದಿತ್ತಲ್ಲಾ? ಒಬ್ಬನೆ ಬಂದದ್ದು ಯಾಕೆ?” ಎಂದು ಅವರು ಹೇಳುವಾಗ ಸುಬ್ರಾಯನಿಗೆ ಉಗುಳು ನುಂಗುವಂತಾಯಿತು. ‘ಛೆ, ಇಂತಹ ಕಚ್ಚೆ ಹರುಕ ವ್ಯಕ್ತಿಯ ಬಳಿ ಕ್ರಯವಿಕ್ರಯದ ಮಾತನಾಡುವುದಕ್ಕೆ ಬಂದ್ದದ್ದು ತಪ್ಪಾಯಿತು’ ಅಂದುಕೊಂಡ.

“ಸರಿ, ನಿನ್ನತ್ರ ಆಸ್ತಿ ತೆಗೆದುಕೊಳ್ಳುವಷ್ಟು ದುಡ್ಡು ಉಂಟಾ ಮಾರಾಯಾ? ಅಲ್ಲ, ನಿನ್ನ ಅಣ್ಣ ದೇವರಾಯ ನಿನಗೆ ಪಾಲು ಕೊಡುವುದಿಲ್ಲಾಂತ ಹೇಳಿದ್ದಾನಾ, ಹೇಗೆ?” ಎಂದು ಅವರು ಪ್ರಶ್ನಿಸಲು ಸುಬ್ರಾಯನಿಗೆ ಏನು ಹೇಳುವುದೆಂದು ತೋಚಲಿಲ್ಲ. ಅವನು ತಲೆ ತಗ್ಗಿಸಿಕೊಂಡು, “ಅಣ್ಣಯ್ಯನೇ ಮನೆ ಬಿಟ್ಟು ಹೋಗು ಅಂದ. ಆಸ್ತಿ ಕೇಳಿದರೆ ಇಲ್ಲ ಅನ್ನುತ್ತಾನೆ. ಅದಕ್ಕೆ ಏನಾದರೂ ಮಾಡಿ ಸ್ವಲ್ಪ ಜಾಗ ತೆಗೆದುಕೊಳ್ಳುವುದೆಂದು ಬಂದೆ” ಅಂದಾಗ ಅವರು ಗಹಗಹಿಸಿ ನಕ್ಕರು.

“ಅಂತೂ ಒಂದು ನಿರ್ಧಾರಕ್ಕೆ ಬಂದೇ ಇಲ್ಲಿಗೆ ಬಂದಿದ್ದೀಯಾ ಅನ್ನು. ಸರಿ” ಎಂದು ಅವನತ್ತ ಬಾಗಿ ಮೆಲ್ಲನೆ ಗುಟ್ಟಿನಲ್ಲಿ, “ಎಷ್ಟು ಹಣ ಉಂಟನಾ ನಿನ್ನತ್ರ? ಹೇಗೆ ಹಣ ಹೊಂದಿಸ್ತೀಯಾ? ಸಾವಿತ್ರಿ ಏನಾದರೂ...” ಅಂದವರೇ ಮೈ ಕುಲುಕಿಸಿ ನಕ್ಕರು. ಸುಬ್ರಾಯನ ಮೈ ಉರಿದು ಹೋಯಿತು. ‘ಎಂತದು, ಇವರು ಈ ರೀತಿ ಮಾತನಾಡುವುದು. ಸಾವಿತ್ರಿ ಹೇಳಿದ ಹಾಗೆ ನಾನು ಪಾಪದವನೂಂತ ಈ ರೀತಿ ಮಾತನಾಡುತ್ತಾರಾ ಹೇಗೆ?’ ಎಂದು ಯೋಚಿಸಿದ ಸುಬ್ರಾಯ, “ಶಾನುಭೋಗರೆ, ಕೈಯಲ್ಲಿ ಹಣ ಇರುವುದರಿಂದಲೇ ಇಲ್ಲಿಗೆ ಬಂದಿದ್ದೇನೆ. ತಾವು ದಯವಿಟ್ಟು ದೊಡ್ಡ ಮನಸ್ಸು ಮಾಡಿ ಒಂದೆರಡು ಗದ್ದೆಗಳನ್ನು ಕೊಟ್ಟರೆ ಉಪಕಾರವಾದೀತು” ಎಂದು ಧೈರ್ಯ ತಂದುಕೊಂಡು ನುಡಿದ. ಶಾನುಭೋಗರ ಮುಖ ವಿವರ್ಣವಾಯಿತು. ಏನೋ ಆಲೋಚಿಸಿದವರು ಒಮ್ಮೆಲೆ ಗಂಭೀರವಾಗಿ ಕುಳಿತರು.

“ನೋಡು, ಸಾವಿತ್ರಿ ಹೇಳಿದ್ದಾಳೆಂದ ಮೇಲೆ ಮುಗಿಯಿತು. ಎರಡು ಗದ್ದೆ ನಾನು ಮಾರುತ್ತೇನೆ. ಹಣದ ಜೊತೆಗೆ ಬಂದರೆ ಎಲ್ಲಾ ಇತ್ಯರ್ಥ ಮಾಡಿ ಬಿಡುವ. ಈಗ ಹೋಗು. ಸತ್ಯಾ, ನೀರು ಎಲ್ಲಿಟ್ಟೆ? ನೋಡು ಅವನು ಹೊರಡುತ್ತಾನೆ. ನೀರು ಕೊಡು” ಅಂದಾಗ ಸತ್ಯವಂತ ಕಂಚಿನ ತಂಬಿಗೆಯಲ್ಲಿ ನೀರು ತಂದು ಅವನ ಕೈಯಲ್ಲಿಟ್ಟ. ಸುಬ್ರಾಯ ನೀರು ಕುಡಿದು ಜಾಗ ಖಾಲಿ ಮಾಡಿದ.

ಸುಬ್ರಾಯ ಮನೆಗೆ ಬಂದವನೇ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ಸಾವಿತ್ರಿಯ ಮುಂದೆ ಹೇಳಿದ. ಅವಳಿಗಾದರು ಶಾನುಭೋಗರು ಒಪ್ಪಿಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿತ್ತು.

ಅವಳು ಒಂದು ದಿನ ತನ್ನ ಬಳಿಯಿದ್ದ ಸ್ವಲ್ಪ ಹಣ, ಗಂಡನ ಬಳಿಯಿದ್ದ ಹಣವನ್ನು ಸೀರೆಯ ತುದಿಗೆ ಗಂಟು ಹಾಕಿಕೊಂಡು ಸುಬ್ರಾಯನ ಜೊತೆಗೆ ಶಾನುಭೋಗರ ಮನೆಗೆ ಬರುವಾಗ ಅವರು ಕುರ್ಚಿಯಿಂದ ಎದ್ದು ಬಂದು ಅವರನ್ನು ಸ್ವಾಗತಿಸಿದರು. ಮನೆಯಲ್ಲಿ ಮಗ ಇಲ್ಲದಿರುವುದು ಅವರಿಗೆ ಅನುಕೂಲವೇ ಆಗಿತ್ತು.

“ಬಾ ಸಾವಿತ್ರಿ ಬಾ... ತುಂಬಾ ಸೊರಗಿ ಹೋಗಿರೋ ಹಾಗಿದೆ. ನಿನ್ನ ಓರಗಿತ್ತಿಯ ಕಾಟ ಅತಿಯಾಯಿತು ಅಂತ ಕಾಣುತ್ತದೆ. ಇರಲಿ ಬಿಡು, ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದೀಯಾ. ನಿನಗೆ ಎಂತಹ ಗದ್ದೆ ಬೇಕು ಹೇಳು? ನಿನಗೆ ಬಡಗು ಮನೆ ಗೊತ್ತಲ್ಲಾ? ಅವರ ಮನೆಯ ಹತ್ತಿರ ಎರಡು ಒಳ್ಳೆಯ ಗದ್ದೆಗಳಿವೆ. ಅದನ್ನು ಕೊಡುತ್ತೇನೆ. ಅದೂ ನಿನಗೆ ಕಡಿಮೆಯ ಬೆಲೆಯಲ್ಲಿಯೇ ಕೊಡುತ್ತೇನೆ” ಅಂದವರು ಇಬ್ಬರಿಗೂ ಕುಳಿತುಕೊಳ್ಳಲು ಸೂಚಿಸಿದರು. ಅವರಿಬ್ಬರೂ ಮರದ ಬೆಂಚಿನಲ್ಲಿ ಕುಳಿತು ಸುಧಾರಿಸುವಾಗ ಮನೆ ಕೆಲಸದ ಹೆಂಗಸು ಉದ್ದನೆಯ ಲೋಟದಲ್ಲಿ ಶರಬತ್ತು ತಂದು ಅವರಿಬ್ಬರ ಕೈಯಲ್ಲಿಟ್ಟರು.

ಶರಬತ್ತು ಕುಡಿದ ಬಳಿಕ ಶಾನುಭೋಗರು ಹೊರಟು ಬಂದವರೇ, “ಬನ್ನಿ, ಆ ಜಾಗ ತೋರಿಸುತ್ತೇನೆ” ಎಂದು ಅವರನ್ನು ಕರೆದುಕೊಂಡು ಬಡಗು ಮನೆಯತ್ತ ಬಂದರು. ಎರಡು ಗದ್ದೆಗಳನ್ನು ತೋರಿಸಿ, “ಒಟ್ಟು ಹತ್ತು ಕೊಯ್ಲು ಗದ್ದೆಗಳಿವು” ಎಂದು ತಮ್ಮ ಗದ್ದೆಯನ್ನು ತೋರಿಸಿದರು. ಸುತ್ತಮುತ್ತಲು ಮನೆಗಳಿಲ್ಲದಿದ್ದರೂ ಸಾವಿತ್ರಿಗೆ ಗದ್ದೆಗಳು ಹಿಡಿಸಿದವು. ಪಕ್ಕದಲ್ಲಿ ಕಾಡು, ಗದ್ದೆಯ ಬದಿಗೆ ಭೂತದ ಬನವು ಇತ್ತು. ಜೊತೆಗೆ ಎತ್ತರ ಎತ್ತರದ ತೇಗದ ಮರಗಳು ಇದ್ದವು. ಮನೆ ಕಟ್ಟಿಸುವುದಿದ್ದರೆ ಬೇಕಾದ ಮರಗಳು ಇರುವುದರಿಂದ ಕಣ್ಣು ಮುಚ್ಚಿಯೇ ಸಾವಿತ್ರಿ ಒಪ್ಪಿಕೊಂಡಳು.

“ಹೇಗಿದೆ ಜಾಗ? ಹಿಡಿಸಿತಾ...?” ಶಾನುಭೋಗರು ಸಾವಿತ್ರಿಯನ್ನು ಕೇಳುವಾಗ ಅವಳು, “ತುಂಬಾ ಚೆನ್ನಾಗಿದೆ. ನಮಗಂತೂ ಹಿಡಿಸಿದೆ” ಎಂದು ಆ ವಿಷಯವನ್ನು ಮುಗಿಸುವಂತೆ ಹೇಳಿದಳು.

ಅಂತೂ ಕೈಯಲ್ಲಿದ್ದ ಹಣವನ್ನು ಕೊಟ್ಟು, ಉಳಿದ ಹಣವನ್ನು ಹೊಂದಿಸಿ, ಒಂದೆರಡು ವಾರದಲ್ಲಿ ಹತ್ತು ಕೊಯ್ಲಿನ ಎರಡು ಗದ್ದೆಗಳು ಸುಬ್ರಾಯ ಹೆಸರಿಗೆ ಮಾಡಿಯಾಗಿತ್ತು.

ಸ್ವತ: ಶಾನುಭೋಗರೇ ಅವರನ್ನು ಕರೆದುಕೊಂಡು ಗದ್ದೆಯನ್ನು ಅದಕ್ಕೆ ಸಂಬಂಧಪಟ್ಟ ಕ್ರಯಪತ್ರಗಳನ್ನು ಅವರ ಕೈಯಲ್ಲಿಟ್ಟು, “ಉತ್ತರೋತ್ತರ ಅಭಿವೃದ್ಧಿಯಾಗಲಿ. ಈ ಜಾಗದ ದೈವ ಕೂಡ ನಿಮಗೆ ಒಳ್ಳೆಯದನ್ನು ಮಾಡಲಿ” ಎಂದವರೆ ತಮ್ಮ ಕರಿಯ ಕೋಟನ್ನು ಅಗಲಕ್ಕೆ ಬಿಡಿಸಿ, ಮರದ ಬೊಡ್ಡೆಯ ಬಳಿ ಕುಳಿತರು.

ಸಾವಿತ್ರಿಗೆ ಆಶ್ಚರ್ಯವಾಯಿತು. ಅವರು ಕುಳಿತಿದ್ದಕ್ಕೆ ಅಲ್ಲ. ಬದಲಾಗಿ ಅವಳು ಮನೆ ಕಟ್ಟಲು ಮರಗಳನ್ನು ಯಾವಾಗ ನೋಡಿದ್ದಳೋ ಆ ತೇಗದ ಮರಗಳು ಒಂದು ವಾರದಲ್ಲಿ ಮಾಯವಾಗಿದ್ದವು!

“ಅಲ್ಲಾ, ಇಲ್ಲಿದ್ದ ಅಷ್ಟು ದೊಡ್ಡ ತೇಗದ ಮರಗಳು ಏನಾದವು?” ಎಂದು ಅವಳು ಶಾನುಭೋಗರನ್ನು ಕೇಳುವಾಗ ಅವರು ಕುಳಿತಲ್ಲಿಂದಲೇ, “ಎಲ್ಲಿ... ಎಲ್ಲಿ...? ಇಲ್ಲಿ ಮರಗಳೇ ಇರಲಿಲ್ಲವಲ್ಲ” ಎಂದು ಮರದ ಬೊಡ್ಡೆ ಕಾಣದಂತೆ ಮತ್ತೊಮ್ಮೆ ತಮ್ಮ ಕೋಟನ್ನು ಸರಿಪಡಿಸಿಕೊಂಡು ಕುಳಿತರು. ಹೀಗೆ ಕಣ್ಣೆದುರೇ ಮಾಯವಾದ ಮರಗಳನ್ನು ನೆನೆದು ಅವಳಿಗೆ ಸಂಕಟವಾಯಿತು. ಏನಿಲ್ಲವೆಂದರೂ ಎರಡು ಮನೆ ಕಟ್ಟುವಷ್ಟು ಮರಗಳಿದ್ದವು. ಕತ್ತಲೆಯವರೆಗೂ ಅಲ್ಲೇ ಕುಳಿತಿದ್ದ ಅವರು ಹೊರಟ ಬಳಿಕ ಸಾವಿತ್ರಿ ಗಂಡನಿಗೆ, “ಆಯ್ತಲ್ಲಾ ಇನ್ನು ಮುಂದೆ ಗುಡಿಸಲೋ, ಅರಮನೆಯೋ ಇಲ್ಲೇ ಇರೋಣ” ಅಂದಳು.

ಕೂಡಲೇ ಸಾಲ ಸೋಲ ಮಾಡಿ ಮನೆಯನ್ನು ಕಟ್ಟಿ ಮುಗಿಸುವುದೆಂದು ನಿರ್ಧರಿಸಿ ಆಗಿತ್ತು.

ದೇವರಾಯ ಮನೆಗೆ ಬಂದವನೇ ತಮ್ಮನನ್ನು ಕರೆದು, “ಏನು, ನೀನು ಶಾನುಭೋಗರ ಮನೆಗೆ ಹೋಗಿದ್ದೀಯಂತೆ. ನ್ಯಾಯ ಕೇಳುವುದಕ್ಕಾ? ನಿನಗೆ ನಾನು ಆಸ್ತಿ ಕೊಡುವುದಿಲ್ಲವೆಂದು ಹೋದದ್ದಾ? ನಿನಗೆ ಊರಿನವರೆ ಮುಖ್ಯವಾದರೆ ನಾನು ಆಸ್ತಿ ಕೊಡುವುದೇ ಇಲ್ಲ. ಶಾನುಭೋಗರಲ್ಲ, ಪಟೇಲರಾದರೂ ಬರಲಿ” ಎಂದು ಸಿಟ್ಟು ಕಾರಿಕೊಂಡಾಗ ಸಾವಿತ್ರಿ ಕೆಲಸ ನಿಲ್ಲಿಸಿ ಹೊರಗೆ ಬಂದವಳೇ, “ನಾವು ಹೋಗಿದ್ದು ನ್ಯಾಯ ಕೇಳುವುದಕ್ಕಲ್ಲ. ಬಡಗು ಮನೆಯ ಹತ್ತಿರದ ಗದ್ದೆಗಳನ್ನು ಮಾರುತ್ತಾರೆಂತ ಹೇಳಿದ್ರು. ಅದನ್ನು ತೆಗೆದುಕೊಳ್ಳುವುದಕ್ಕೆ ಹೋಗಿದ್ದೆವು” ಅನ್ನುವಾಗ ದೇವರಾಯ ಸಾವಿತ್ರಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ.

“ಅಂದ್ರೆ, ಮನೆ ಬಿಟ್ಟು ಹೋಗುವ ನಿರ್ಧಾರವಾ? ಇಲ್ಲಿ ಉಣ್ಣುವುದಕ್ಕೆ, ತಿನ್ನುವುದಕ್ಕೆ ಏನು ಕಡಿಮೆಯಿತ್ತು? ಹೋಗಿ, ಹಾಳಾಗಿ ಹೋಗಿ. ನಿಮಗೆ ಬುದ್ಧಿ ಬರಲಿ” ಎಂದು ಕಾಲು ಜಾಡಿಸಿ ಎದ್ದ ದೇವರಾಯ, ತಮ್ಮನ ಕಡೆಗೆ ಕೆಂಡದಂತ ನೋಟ ಬೀರಿದ. ಸುಬ್ರಾಯನ ಕೈ, ಕಾಲುಗಳು ನಡುಗಿದವು. ಅವನು ಸಾವಿತ್ರಿಯತ್ತ ನೋಡುವಾಗ ರೋಹಿಣಿ ಹೊರಗೆ ಬಂದವಳೇ, “ಅಂತು ನೀನು ಗಟ್ಟಿಗತ್ತಿಂತ ತೋರಿಸಿದಿ. ಅಲ್ಲಿ ಹೋಗಿ ದುಡಿಯುವಾಗ ನಿನಗೆ ತಿಳಿಯುತ್ತದೆ” ಎಂದು ಹೂಂಕರಿಸಿ ಹೋದಾಗ ಸಾವಿತ್ರಿಗೂ ನಡುಕ ಶುರುವಾಯಿತು. ‘ಅವರೆಲ್ಲ ಹೆದರಿಸುತ್ತಿದ್ದಾರಾ? ಅಥವಾ ಬೇರೆ ಹೋಗಿ ಸಂಸಾರ ಮಾಡುವುದಕ್ಕೆ ಆಗುವುದಿಲ್ಲವೆಂದು ಬುದ್ಧಿ ಹೇಳುತ್ತಿದ್ದಾರ?’ ಎಂದು ತಿಳಿಯಲಿಲ್ಲ.

ಕೊನೆಗೂ ಧೈರ್ಯದಿಂದ ಗದ್ದೆಯ ನಡುವೆ ಮಾಡು ಬಗ್ಗಿಸಿ ಕುಳಿತಿದ್ದಾಯಿತು. ಪಕ್ಕಕ್ಕೆ ತೋಟಗಳು, ಹಿಂದೆ ಮುಂದೆ ಭತ್ತದ ಗದ್ದೆಗಳನ್ನು ಬಿಟ್ಟು, ಮನೆಯ ಎದುರಿಗೆ ಒಂದು ಬಾವಿ ತೋಡಿ, ಸಂಸಾರ ಹೂಡಿದ್ದಾಯಿತು. ಕೈಲಾಗದ ಕೆಲಸವೆಂದು ಸುಮ್ಮನೆ ಕುಳಿತಿರದೆ, ಅವರಿವರ ಮನೆಯ ನಾಟಿ, ಕೊಯ್ಲು ಕೆಲಸಕ್ಕೂ ಹೋಗಿ ಬರುತ್ತಿದ್ದ ಸಾವಿತ್ರಿ ಮತ್ತು ಸುಬ್ರಾಯರ ಬದುಕು ಅಂತು ಒಂದು ಅರ್ಥ ಪಡೆದುಕೊಂಡು ನೆಮ್ಮದಿಯಿಂದ ಇರುವಂತಾಗಿತ್ತು.

ಆದರೆ ಈಗ ಎಂದೂ ಇಲ್ಲದ ಹೊಸ ಸಮಸ್ಯೆಯೊಂದು ಉದ್ಭವಿಸಿದ್ದು ಆತಂಕಕ್ಕೆ ಕಾರಣವಾಗಿತ್ತು. ಗದ್ದೆಯ ನಡುವಿನ ಮನೆ ಬೇರೆ. ಮಳೆ ನೀರು ನಿಂತರೆ ಕೇಳುವುದಕ್ಕೆ ಉಂಟಾ? ಪಂಚಾಂಗದೊಳಗೆ ನೀರು ಹೋದರೆ ಹೇಗೆ? ರಾತ್ರಿ ಹಗಲು ನಿದ್ದೆಯಿಲ್ಲದೆ ತೊಳಲಾಡುವಂತಾಯಿತು. ಮಳೆ ಬೇರೆ ನಿಲ್ಲುವ ಸೂಚನೆಯಿಲ್ಲ.ಆಕಾಶವೇ ತೂತಾಗಿದೆಯೋ ಏನೋ? ಹೀಗೆ ದಿನಗಳು ಕಳೆಯುತ್ತಿದ್ದವು.

ಸಾವಿತ್ರಿ ಅಕ್ಕಿ ಆರಿಸಿ, ಕುದಿಯುವ ನೀರಿಗೆ ಹಾಕಿ ಹೊರಗೆ ಬರುವಷ್ಟರಲ್ಲಿ ಸಾಂತಕ್ಕ ಓಡಿಕೊಂಡು ಬರುತ್ತಿರುವುದು ಕಾಣಿಸಿತು. ಅವಳು ಹೊರಕ್ಕೆ ಇಣುಕುವಾಗ ಸುಬ್ರಾಯ ಅವಸರವಸರವಾಗಿ ಒಳಗೆ ಬಂದು, “ಇಕ್ಕಳೆ, ನಿಂಗೆ ವಿಷಯ ಗೊತ್ತುಂಟಾ? ಅವ ಸಾಂತಕ್ಕನ ಮಗ ಈಸ್ವರ ನೆರೆಯಲ್ಲಿ ಮೀನು ಹಿಡಿಯುವುದಕ್ಕೆ ಹೋಗಿದ್ದಂತೆ. ಅವನು ಬೊಳ್ಳದಲ್ಲಿ ಬಿದ್ದಿದ್ದಾನೆಂತ ಹೇಳ್ತಿದ್ದಾರೆ” ಅನ್ನುವಾಗ ಸಾವಿತ್ರಿಗೆ ಜೀವವೇ ಕೈಯಲ್ಲಿ ಬಂದಂತಾಯಿತು. ಎಷ್ಟೆಂದರೂ ಕಷ್ಟಕ್ಕಾಗುವವಳು ಅವಳು. ಗಂಡನಿಗೆ ಒಲೆಯನ್ನು ನೋಡಿಕೊಳ್ಳಲು ಹೇಳಿ ಹಿರಿಯ ಮಗನನ್ನು ಕರೆದುಕೊಂಡು ನೆರೆಯ ಕಡೆಗೆ ಧಾವಿಸಿದಳು. ಆಗಲೆ ರಾಮ, ಗೋವಿಂದ, ಚೀಂಕ್ರ ಎಲ್ಲಾ ಸೇರಿದ್ದರೂ ಸುಳಿಯಿರುವ ಬೊಳ್ಳಕ್ಕೆ ಇಳಿಯುವ ಸಾಹಸ ಯಾರೂ ಮಾಡಿರಲಿಲ್ಲ. ಸಾವಿತ್ರಿ ಅತ್ತಿತ್ತ ನೋಡಿ ಮೆಲ್ಲನೆ ಗದ್ದೆಯ ನೀರಿನಲ್ಲಿ ಇಳಿದು ಈಜುತ್ತಾ ಸಾಗುವಾಗ ಈಸ್ವರ ಕೇದಗೆಯ ಬನದಲ್ಲಿ ಸಿಕ್ಕಿ ಬಿದ್ದಿರುವುದು ಕಾಣಿಸಿತು. ಅವಳು ಈಸ್ವರನನ್ನು ಹಿಡಿದು ಮೇಲಕ್ಕೆ ಎಳೆದುಕೊಂಡು ಬರುವಾಗ ನಿಂತಿದ್ದ ಗಂಡಸರ ಮುಖ ನಾಚಿಕೆಯಿಂದ ತಗ್ಗಿತು.

“ಅಮ್ಮೋರೆ, ನನ್ನ ಮಗನ ಪ್ರಾಣ ಉಳಿಸಿದಿರಿ. ನಿಮ್ಮ ಋಣ ಹೇಗೆ ತೀರಿಸುವುದು?” ಅನ್ನುತ್ತಾ ಸಾಂತಕ್ಕ ಅವಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಳು. “ಸಾಂತಕ್ಕ , ಇದೆಲ್ಲಾ ಎಂತ? ನೆರೆ ಕರೆಯೆಂದರೆ ಇಷ್ಟು ಮಾಡದಿದ್ದರೆ ಹೇಗೆ?” ಅಂದು ಜನರಿಂದ ಬಿಡಿಸಿಕೊಂಡು ಮನೆಗೆ ಬರುವಾಗ ಹಿಂದಿನ ಮನೆಯವರು ನಿಂತಿದ್ದರು. ಅವರು ಸಾವಿತ್ರಿಗೆ ಕೈ ಮುಗಿದು, “ತಾಯಿ, ನಮ್ಮಿಂದ ದೊಡ್ಡ ತಪ್ಪಾಗಿದೆ. ದಯವಿಟ್ಟು ಮನ್ನಿಸಬೇಕು” ಅಂದಾಗ ಅವನ ಮಾತು ಅರ್ಥವಾಗಲಿಲ್ಲ. ಅವಳು ಅವರನ್ನೇ ನೋಡುತ್ತಿರಬೇಕಾದರೆ ಅವನು, “ಕಾಡಿನ ಒಡ್ಡ ನೀರಿಗೆ ಕಟ್ಟ ಹಾಕಿದ್ದೇ ಈಗ ನಮ್ಮ ದೊಡ್ಡ ಬರೆ ಜರಿದು ಬಿತ್ತು. ಇದ್ದ ಬೆಳೆಯೆಲ್ಲಾ ಮಣ್ಣು ಬಿದ್ದು ಹಾಳಾಯಿತು” ಅನ್ನುವಾಗ ಅವಳು, “ನೋಡಿ, ನಮ್ಮ ಸಂಕಟ ಯಾರ ಹತ್ತಿರ ಹೇಳುವುದು? ಮನೆಯ ಪಂಚಾಂಗಕ್ಕೂ ನೀರು ಹೋಗಿ ಮನೆಯೇ ಕುಸಿಯುವ ಪರಿಸ್ಥಿತಿಯಾಗಿದೆ. ಕಂಗು, ತೆಂಗೆಲ್ಲಾ ಹಾಳಾದ ಹಾಗೆ. ನೀವು ಅರ್ಥ ಮಾಡಿಕೊಳ್ಳಲಿಲ್ಲ. ಸಾಂತಕ್ಕನಿಗೂ ಅರ್ಥವಾಗಲಿಲ್ಲ. ಇರಲಿ ದೇವರುಂಟು” ಅಂದು ನಿಟ್ಟುಸಿರಿಟ್ಟಾಗ ಏನೋ ಭಾರೀ ಸದ್ದಾಯಿತು. ಅವಳು ಹೊರಗೆ ಧಾವಿಸಿ ಬರುವಷ್ಟರಲ್ಲಿ ಮನೆಯ ಒಂದು ಗೋಡೆ ಕುಸಿದು ಬಿತ್ತು. ಸುಬ್ರಾಯ ತಲೆ ಚಚ್ಚಿಕೊಂಡು ಅತ್ತರೆ ಅವಳು, “ಎಂತ ಇದು ನೀವು? ಮನೆ ಬಿದ್ದಿಲ್ಲವಲ್ಲಾ, ಅದಕ್ಕೆ ಸಮಾಧಾನ ಪಡಬೇಕು” ಎಂದು ಮಕ್ಕಳನ್ನು ಕರೆದು ಅತ್ತ ಹೋಗದಂತೆ ಹೇಳಿದಳು.

ಅಲ್ಲೇ ನಿಂತಿದ್ದ ಹಿಂದಿನ ಮನೆಯ ಗಂಡಸು, “ಅಮ್ಮೋರೆ, ನಿಮ್ಮ ಮನೆಯನ್ನು ಸರಿಮಾಡಿಕೊಡುವ ಕೆಲಸ ನಾನು ಮಾಡುತೇನೆ. ನೀವು ನಮಗೆ ಮನೆ ಕಟ್ಟುವುದಕ್ಕೆ ಜಾಗ ಬಿಟ್ಟುಕೊಟ್ಟಿದ್ದೀರಿ. ನಿಮ್ಮ ಋಣವನ್ನು ತಿರಿಸಿದ ಹಾಗಾಗುತ್ತದೆ” ಅಂದಾಗ ಸಾವಿತ್ರಿಗೆ ಆಶ್ಚರ್ಯವಾಯಿತು. ಆಗ ಆ ಗಂಡಸೆ, “ನಾವು ಮನೆ ಕಟ್ಟಿ ಕುಳಿತಿರುವ ಜಾಗ ಉಂಟಲ್ಲಾ ಅದು ನಿಮ್ಮದಂತೆ. ನಾವು ಪಂಚಾಯತಿಯಲ್ಲಿ ವಿಚಾರಿಸಿದಾಗ ಗೊತ್ತಾಯಿತು. ನಿಮ್ಮ ಹತ್ತು ಕೊಯ್ಲು ಜಾಗದ್ದೇ ಒಂದು ಭಾಗ ಅದು” ಅಂದಾಗ ಅವಳಿಗೆ ಏನು ಹೇಳಬೇಂದೇ ತಿಳಿಯದಾಯಿತು. ಶ್ಯಾನುಬೋಗರು ಕೂಡ ಅದನ್ನು ಹೇಳದಿರುವುದು ಅವಳಿಗೆ ಆಶ್ಚರ್ಯವಾಗಿತ್ತು.

“ಆಗಲಿ, ಯಾರೂ ಯಾರ ಋಣದಲ್ಲಿ ಬೀಳುವುದು ಬೇಡ” ಅಂದವಳೆ ಅವರನ್ನು ಕಳುಹಿಸಿ ಮಕ್ಕಳಿಗೆ ಊಟಕ್ಕೆ ತಯಾರಿ ಮಾಡಿದಳು.

Read more!

Tuesday, December 1, 2009

‘ಇಂಗ್ಲಿಷ್ ಮಂಗ’ ಸುಲಲಿತ ಕಥೆಗಳ ಸಂಕಲನ


ಸಲೀಸಾಗಿ ಓದಿಸಿಕೊಂಡು ಹೋಗುವುದು ಕಥೆಯ ಮುಖ್ಯ ಲಕ್ಷಣ. ಶಾಂತರಾಮ ಸೋಮಯಾಜಿ ಅವರ ‘ಇಂಗ್ಲಿಷ್ ಮಂಗ’ ಕಥಾಸಂಕಲನದಲ್ಲಿರುವ ಕಥೆಗಳಿಗೆ ಅಂತಹ ಲಕ್ಷಣವಿರುವುದರಿಂದ ಓದುಗನಿಗೆ ಅವುಗಳು ಆಪ್ತವೆನಿಸುತ್ತವೆ. ಬಹಳ ಸರಳವಾದ ಶೈಲಿ, ಭಾಷೆಯ ಮಿತವಾದ ಬಳಕೆಯಿಂದಾಗಿ ಇಲ್ಲಿನ ಕಥೆಗಳು ಇಷ್ಟವಾಗುತ್ತವೆ. ಎಲ್ಲಾ ಕಥೆಗಳಲ್ಲಿಯೂ ದಕ್ಷಿಣ ಕನ್ನಡ ಮತ್ತು ಉಡುಪಿಯ ಪರಿಸರದಲ್ಲಿರುವ ಸನ್ನಿವೇಶ, ಆಡು ಭಾಷೆಯ ಬಳಕೆ ಸುಂದರವಾಗಿ ಚಿತ್ರಿತವಾಗಿದೆ.
‘ಕಥಾ ಸೃಷ್ಟಿ ನನಗೆ ಅತ್ಯಂತ ಆನಂದ ಕೊಡುವ ಚಟ. ನನ್ನ ಪಾಲಿಗೆ ಅದೊಂದು ಅಡ್ವೆಂಚರ್. ಚಾಲೆಂಜ್ನೊಟ್ಟಿಗೆ ಅಗಾಧ ಸಂತೋಷ ತೃಪ್ತಿ ತಂದುಕೊಡುವ ಗೀಳು’ ಇದು ಲೇಖಕರ ಮಾತು. ಈ ಮಾತಿನಲ್ಲಿ ಅತಿಶೋಯಕ್ತಿ ಇರಲಾರದು. ಇಲ್ಲಿನ ಎಲ್ಲಾ ಕಥೆಗಳಲ್ಲಿಯೂ ವಿಭಿನ್ನ ಶೈಲಿಯನ್ನು ಬಳಸಿಕೊಂಡಿರುವುದು ಲೇಖಕನ ಜಾಣ್ಮೆಯನ್ನು ಮತ್ತು ಕಥೆ ಬರೆಯುವಲ್ಲಿರುವ ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ.
‘ಇಂಗ್ಲಿಷ್ ಮಂಗ’ ಕಥಾಸಂಕಲನದಲ್ಲಿ ಒಟ್ಟು 21 ಕಥೆಗಳಿದ್ದು ಪ್ರತಿಯೊಂದು ಕಥೆಯೂ ಸರಳ, ಸುಂದರವಾಗಿ ಮೂಡಿ ಬಂದಿದೆ. ಗುಜ್ಜೆಗಟ್ಟಿ, ಮನಸ್ಸಿನ ಧರ್ಮ, ಅದೃಷ್ಟದ ಅನ್ನ, ಸ್ವಲ್ಪ ಸ್ವಲ್ಪ, ಇಂಗ್ಲಿಷ್ ಮಂಗ, ಮಠದ ತೋಡು, ಸೀರೆಯ ಜಾತಿ ಕಥೆಗಳು ಹೆಚ್ಚು ಆಪ್ತವೆನಿಸುತ್ತವೆ. ಎಲ್ಲಾ ಕಥೆಗಳು ತಿಳಿ ಹಾಸ್ಯದೊಡೆ ಇದ್ದರೂ, ಕೆಲವೊಂದು ಕಡೆ ಗಂಭೀರ ಸಮಸ್ಯೆಯನ್ನು ಎದುರಿಸುತ್ತಾ, ಕಥೆಗೆ ತಿರುವನ್ನು ನೀಡುತ್ತಾ, ಮತ್ತದೆ ಸುಲಲಿತವಾದ ಉತ್ತರವನ್ನು ಹೇಳುತ್ತಾ ಮುಂದೆ ಸಾಗುತ್ತದೆ."
‘ಗುಜ್ಜೆಗಟ್ಟಿ’ಯಲ್ಲಿ ಸಾವಿನ ಬಗ್ಗೆಗಿರುವ ಮತ್ತು ಸತ್ತ ನಂತರದ ಸ್ವಗತ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಯಾವತ್ತೊ ಒಮ್ಮೆ ಕಂಡ ರುಚಿಯನ್ನು ಮೆಲುಕು ಹಾಕುತ್ತಾ ಆ ವಸ್ತುವಿಗಾಗಿ ಪರದಾಡಿ, ಕೊನೆಗೂ ಅದರಿಂದ ತೃಪ್ತಿ ಪಡುವುದು ಮನುಷ್ಯನ ಸಹಜ ಗುಣ. ಅದರಂತೆ ಇಲ್ಲಿಯ ಕಥಾನಾಯಕ ದೇವಣ್ಣ ಪೆಲ್ಯರು ಒಂದು ಹಲಸಿನ (ಗುಜ್ಜೆ) ಹಣ್ಣಿಗಾಗಿ ಊರೂರು ಅಲೆಯ ಬೇಕಾಗುವ ಪ್ರಸಂಗ ಎದುರಾಗುತ್ತದೆ.
ಧರ್ಮ ಮತ್ತು ಮನುಷ್ಯನ ಮನಸಿನ ಕುರಿತು ಬರೆದಿರುವ ಕಥೆ ‘ಮನಸ್ಸಿನ ಧರ್ಮ’. ಜಾತೀಯತೆಯ ಪ್ರಶ್ನೆ ಎದುರಾದಾಗ ಅದಕ್ಕೆ ಬಹಳ ಜಾಣ್ಮೆಯಿಂದ ಉತ್ತರ ನೀಡುತ್ತಾ ಸಾಗುವ ಈ ಕಥೆಯು “ಅವನಿಗೆ ಹೇಳಿದೆ, ನೋಡಪ್ಪ ನಾನು ಯುನಿವರ್ಸಿಟಿಯಲ್ಲಿ 36 ವರ್ಷ ಪಾಠ ಮಾಡಿದವನು. ಯಾವುದೇ ಜಾತಿ, ಧರ್ಮ, ಗಂಡು ಹೆಣ್ಣು ಭೇಧ ಭಾವ ಇಲ್ದೆ ಕಲಿಸಿದ್ದೇನೆ. ವಿಧ್ಯಾರ್ಥಿ ಹಿಂದೂ ಆಗಿರ್ಲಿ ಮುಸ್ಲಿಂ ಆಗಿರ್ಲಿ ಕ್ರಿಶ್ಚಿಯನ್ ಆಗಿರ್ಲಿ ಯಾರೇ ಆಗರ್ಲಿ ಎಲ್ರಿಗೂ ಒಂದೇ ಪಾಠ ಮಾಡ್ತಾ ಇದ್ದವ್ನು ಹಾಗಿದ್ದೇರೆ ಅನ್ಯಧರ್ಮಿಯರ ಮೇಲೆ ನನ್ನಲ್ಲಿ ದ್ವೇಷ ಹೇಗೆ ಸಾಧ್ಯ?” ಮನುಷ್ಯನ ಒಳ್ಳೆಯತನವನ್ನು ಗುರುತಿಸಿಕೊಳ್ಳುವುದಕ್ಕೆ ಇದಕ್ಕಿಂತ ಮಿಗಿಲಾದ ಮಾತುಗಳು ಬೇಕಾಗಿಲ್ಲ.
ಶ್ರೀಮಂತಿಕೆಯ ವೈಭವವನು ನವಿರಾಗಿ ಚಿತ್ರಿಸುತ್ತಾ ಅಲ್ಲೂ ಇರುವ ನೋವನ್ನು ಹತಾಶೆಗಳನ್ನು ತೆರೆದಿಡುವ ಕಥೆ ‘ಅದೃಷ್ಟದ ಅನ್ನ’ ಹೆಣ್ಣಿನ ನೋವು ತನಗೆ ತೆಗೆದುಕೊಳ್ಳಲು ಇರುವ ‘ಚಾಯ್ಸ್’ ನಲ್ಲಿ ಗೊಂದಲಗಳನ್ನು ಹೇಳುತ್ತಾ ಸುಖಾಂತ್ಯದಲ್ಲಿ ಕೊನೆಗೊಳ್ಳುವ ಕಥೆ ‘ಒಳ್ಳೆಯವಳು’
ಮನುಷ್ಯನ ಚಹರೆ ಮತ್ತು ಹವ್ಯಾಸಗಳ ಬಗ್ಗೆ ಹೇಳುತ್ತಾ ಸಾಗುವ ಕಥೆ ‘ಸ್ವಲ್ಪ ಸ್ವಲ್ಪ’ ಉಳಿದ ಎಲ್ಲಾ ಕಥೆಗಳಿಗಿಂತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಓದುಗನನ್ನು ಬಾಲ್ಯಕ್ಕೆ ಕರೆದುಕೊಂಡು ಹೋಗಿ ಹಿಂದಿನ ದಿನಗಳನ್ನು ಕೆದಕಿಬಿಡುತ್ತದೆ. ವಾಸ್ತವಿಕತೆಯಿಂದ ಪ್ಯಾಂಟಿಸಿಯತ್ತ ಜಾರುವ ಕಥೆ ‘ಇಂಗ್ಲಿಷ್ ಮಂಗ’. ಈಗಿನ ಪೀಳಿಗೆಯಾಂತ್ರಿಕ ಬದುಕು ಮತ್ತು ಹೊರಗಿನ ಆಕರ್ಷಣೆಗೆ ತಪ್ಪು ಹೆಜ್ಜೆಗಳನ್ನು ಇಡುವುದನ್ನು ಇಲ್ಲಿ ನವಿರಾಗಿ ನಿರೂಪಿಸಿದ್ದಾರೆ. ಅದೇ ಕೊನೆಗೆ ಆಪ್ತವೆನಿಸಬಹುದಾದ ಸಂದಿಗ್ದತೆ. ಇವೆಲ್ಲಾವನ್ನೂ ‘ಇಂಗ್ಲಿಷ್ ಮಂಗ’ ದ ಜೊತೆಗೆ ಸೇರಿಸಿ ಬರೆದಿರುವ ಉತ್ತಮ ಕಥೆ.
‘ಮಠದ ತೋಡು’ ಕಥೆಯಲ್ಲಿ ಜಾಗ ತೆಗೆದುಕೊಂಡು ಮನೆ ಕಟ್ಟಿಸಿಯೂ ವಾಸವಾಗಲಾರದೆ ಪರವೂರಿಗೆ ಹಿಂತಿರುಗುವ ಸಂಸಾರದ ಕಥೆಯಾದರೆ, ಅಲ್ಲಿ ನಡೆಯುವ ಕುಟಿಲತೆ, ಮೋಸ, ಕೊಲೆಗೆ ಹೇತುವಾಗುವ ವಿಷಯಗಳು ಮಠದ ತೋಡಿನ ಹಾಗೇ ಕೊಳಕಾಗಿ ಹರಿಯುತ್ತಿರುತ್ತದೆ. ಜಾತೀಯತೆಯೆನ್ನುವ ನೀರೀಗ ‘ಹಂದಿಯ ಮೈಯಂತೆ ಕಪ್ಪಾಗಿದೆ.... ಕೊಳೆತ ಮೀನಿನಂತೆ ನಾರುತ್ತಿದೆ. ಒಂದಲ್ಲ ನೂರು ಹೆಣ್ಣು ಮಕ್ಕಳನ್ನು ಮುಳುಗಿಸಿ ಕೊಂದರೂ ಆ ಹೆಣಗಳು, ಮನುಷ್ಯರ ಕಣ್ಣಿಗೆ ಕಾಣಿಸದಷ್ಟು ಕೊಳಕಾಗಿದೆ ಆ ತೊಡಿನ ನೀರು’ ಅನ್ನುವ ಕಥೆಯ ಕೊನೆಯ ವಾಕ್ಯಗಳು ಅಸ್ವಸ್ಥ್ಯ ಸಮಾಜದ ಚಿತ್ರಣವನ್ನು ತೆರೆದಿಡುತ್ತದೆ’
‘ಸೀರೆಯ ಜಾತಿ’ ಮಕ್ಕಳ ಮುಗ್ಧತೆ ಮತ್ತು ಹಿರಿಯಲ್ಲಿರುವ ಜನಾಂಗೀಯಾ ತಾರತಮ್ಯಗಳ ತುಲನೆಯ ಒಂದು ಒಳ್ಳೆಯ ಕಥೆ. ಮಕ್ಕಳಾಗಿರುವಾಗ ಜಾತಿ, ದ್ವೇಷಗಳ ಪ್ರಶ್ನೆಯೇ ಇರುವುದಿಲ್ಲ. ಅದನ್ನು ಕ್ರಮೇಣ ಹಿರಿಯರಿಂದಾಗಿ ಕಲಿತುಕೊಳ್ಳುವ ಮಕ್ಕಳ ಮುಗ್ಧತೆಯನ್ನು ತೆರೆದಿಡುತ್ತದೆ ಈ ಕಥೆ.
ಫ್ಯಾಂಟಸಿಯಂತೆ ಮೂಡಿ ಬಂದಿರುವ ಈಜುವಿದ್ಯೆ; ಪರೀಕ್ಷೆಯ ಆತಂಕ ಸೋಲಿನ ನಡುವೆ ಸಾಕುಪ್ರಾಣಿಯ ಕಡೆಗಿರುವ ಕಾಳಜಿ, ಸ್ನೇಹದ ಕಥೆ ‘ಪರೀಕ್ಷೆ’
‘ಇನಿಯನಿಗೊಂದು ಪತ್ರ’ ವಿರಹಿಯೊಬ್ಬಳ ಅಂತರಂಗದ ತುಮುಲಗಳನ್ನು ಬಿಚ್ಚಿಟ್ಟು ಪರಿಧಿಯಳೊಗೆ ಬೇಯುತ್ತಾ ಬದುಕುವ ಹೆಣ್ಣಿನ ಚಿತ್ರಣ.
‘ಚೇರಂಟೆ’ ಇಂದಿನ ದಿನಗಳಲ್ಲಿ ನಡೆಯುವ ಮೋಸ ವಂಚನೆಯ ಬಗ್ಗೆಯಿದ್ದು ನಾವು ಯಾರನ್ನು ನಂಬಿ ಬಿಡುತ್ತೇವೊ ಅವರಿಂದಲೆ ಮೋಸ ಹೋಗುವ ಸ್ಥಿತಿ ಎದುರಾಗುವ ಕಥೆ.
‘ಗೊಂಬೆಯಾಟ’ ಪ್ರೀತಿ, ಸ್ನೇಹ, ಗೌರವವಿರದ ಬದುಕಿಗೆ ರೋಸಿ ಹೋದ ಅಸಹಾಯಕ ಹೆಣ್ಣಿನ ದನಿಯಾದರೆ, ಪವಾಡ ಸ್ವಾಮೀಜಿಯ ಕಥೆ ‘ಪವಾಡಪುರುಷರು’, ‘ಅಜ್ಜಿ ಮತ್ತು ಬೆಕ್ಕು’, ‘ಚಿಕ್ಕಪ್ಪ’, ‘ಅಕ್ಷರಾಭ್ಯಾಸ’, ‘ಮೀನಾಳ ಗುಟ್ಟು’, ‘ಮಹಾಬಾಲಯ’, ‘ಗುಪ್ತ ಪ್ರತಿಭೆ’ ಮತ್ತು ‘ಪ್ರೀತಿಯಿಂದ’ ಓದಿಸಿಕೊಂಡು ಹೋಗುವ ಇತರ ಕಥೆಗಳು.
ಇತ್ತೀಚಿಗೆ ಪುಟಗಳ ಮಿತಿಗೆ ಇಳಿದಿರುವ ಕಥೆಗಳ ಅವಸ್ಥೆಯಿಂದ ಹೊರಗೆ ಬಂದು ಹುಡುಕಾಡಿದರೆ ‘ಇಂಗ್ಲಿಷ್ ಮಂಗ’ ದಂತಹ ಒಳ್ಳೆಯ ಕಥಾಸಂಕಲನಗಳು ದೊರೆಕಬಹುದು. ಈ ಕೃತಿಯನ್ನು ಹೊರತಂದವರು ಹೇಮಂತ ಸಾಹಿತ್ಯ, ಬೆಂಗಳೂರು ಇವರು.

Read more!