Thursday, September 15, 2011

ಸ್ವಾಭಿಮಾನಿಯೊಬ್ಬನ ದಿಟ್ಟ ಪರಪಂಚ


ಅಂದಿನ ಮಲೆನಾಡಿನ ಭವ್ಯತೆಯನ್ನು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನುರು ಹೆಗ್ಗಡಿತಿ ಮತ್ತು ಇತರ ಕೃತಿಗಳಲ್ಲಿ ಯತ್ತೇಚ್ಛವಾಗಿ ಕಾಣಸಿಗುವುದಾದರೂ, ಅವರು ಕೃತಿಗಳಲ್ಲಿ ಕಟ್ಟಿಕೊಡುವ ಆ ಮಲೆನಾಡು ಈಗ ಕಾಣಸಿಗಲಾರದು. ಆದರೂ ಮಲೆನಾಡಿನ ದೃಗ್ ದಿಗಂತದ ದೃಶ್ಯ ಸಾದೃಶ ಯಾರನ್ನಾದರೂ ಸೆಳೆಯದಿರದು. ಕುವೆಂಪು ಆನಂತರದ ಬಹಳಷ್ಟು ಲೇಖಕರು ಕೂಡ `ಮೆರೆದ’ ಮಲೆನಾಡನ್ನ ಕೃತಿಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅವರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಕೃತಿಗಳಲ್ಲಿ ಬದುಕಿನ ಜೊತೆಜೊತೆಗೆನೆ ಜೀವ ಸಂಕುಲಗಳು, ಅವುಗಳ ವೈಜ್ಞಾನಿಕ ವಿಶೇಷತೆಗಳನ್ನು ಕೂಡ ನಮಗೆ ತಿಳಿಸಿಕೊಡುತ್ತಾರೆ. ಆನಂತರ ಮಲೆನಾಡಿನ ಬಗ್ಗೆ ಅದೆಷ್ಟೋ ಲೇಖಕರು ಬರೆದರೂ, ಇತ್ತೀಚೆಗೆ ಪ್ರಕಟಗೊಂಡ ಕೆಲವು ಕೃತಿಗಳಲ್ಲಿ ಗಿರಿಮನೆ ಶಾಮರಾವ್ ಅವರ `ಕಾಫಿ ನಾಡಿನ ಕಿತ್ತಳೆ’ ಮತ್ತು ಬಿಳುಮನೆ ರಾಮದಾಸ್ ಅವರ `ಮಲೆಯ ಪ್ರಬಂಧಗಳು’ ಮರೆಯಾದ ಮಲೆನಾಡಿನ ಒಳಹೊರಗನ್ನು ಪ್ರತಿಬಿಂಬಿಸಿದೆ. ಓದುಗನ ಕಣ್ಣಿನಲ್ಲಿ ಇಂದಿಗೂ ಅಂದಿನ ಮಲೆನಾಡು ಇಲ್ಲಿ ಇನ್ನೂ ಸಮೃದ್ಧವಾಗಿಯೇ ಉಳಿದಿದೆ."

ಈ ರೀತಿಯಲ್ಲಿ ಮಲೆನಾಡನ್ನು ತೊರೆದು ಬಾಲ್ಯದ ನೆನಪುಗಳನ್ನು ಜೀವಂತವಾಗಿರಿಸಿಕೊಂಡು ಆಗಿನ ಮಲೆನಾಡಿನ ಸ್ಥಿತಿಗತಿ ಮತ್ತು ಅಲ್ಲಿಯ ಬದುಕಿನ ಪುಟಗಳನ್ನು ಕಟ್ಟಿಕೊಡುವವರಲ್ಲಿ ಲಕ್ಷ್ಮಣ ಕೊಡಸೆಯವರನ್ನು ಹೆಸರಿಸಬಹುದು. `ಪಯಣ’ದಂತಹ ಕಾದಂಬರಿಯನ್ನು ಬರೆದ ಕೊಡಸೆಯವರು, `ಊರು- ಮನೆ’ಯ ಮೂಲಕ ಮಲೆನಾಡಿನ ಪರಿಸರವನ್ನು ನೆನಪಿನಲ್ಲಿ ಜಾಗೃತವಾಗಿರಿಕೊಂಡು ಲೇಖನಿಯಿಂದ ಅಕ್ಷರಕ್ಕೆ ಇಳಿಸಿದ ಪ್ರಯತ್ನ ಅವರದ್ದು. ಅವರ ಇತ್ತೀಚಿನ ಕೃತಿ `ಅಪ್ಪನ ಪರಪಂಚ’ದಲ್ಲಿಯೂ ಮಲೆನಾಡಿನ ಬದುಕು, ಜೀವಸಂಕುಲಗಳ ವೈವಿಧ್ಯ ಮತ್ತು ಆಗಿನ ಮಲೆನಾಡಿನ ಪರಿಸರವನ್ನ ಬಹಳ ಸುಂದರವಾಗಿ ಬಳಸಿಕೊಂಡಿರುವುದು ಓದುಗನಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ.

`ಅಪ್ಪನ ಪರಪಂಚ’ ಒಂದು ಕಾದಂಬರಿಯಂತೆ ಕಂಡರೂ ಅಲ್ಲಿರುವುದು ಒಂದು ವ್ಯಕ್ತಿ ಚಿತ್ರಣ ಅಥವಾ `ಜೀವನಗಾಥೆ’. ಆದರೂ, ಇದನ್ನು ಒಂದು `ನಾನ್ ಫಿಕ್ಷನ್’ ಅಂದರೆ ತಪ್ಪಾಗಲಾರದು.

ಈ ಕೃತಿಯಲ್ಲಿ ತಂದೆ ಮತ್ತು ಮಗನ ಬಾಂಧವ್ಯಕ್ಕಿಂತಲೂ, ತಂದೆ ಬದುಕಿಗಾಗಿ ಪಡುವ ಹೋರಾಟವನ್ನು `ವನ್ ಮ್ಯಾನ್ ಆರ್ಮಿ’ಯಾಗಿ ಚಿತ್ರಿಸುತ್ತಾ, ಮಗ ತಂದೆಯ `ನೆಗೆಟಿವ್’ಗಳನ್ನು ಹೇಳುವಂತೆ ಕಂಡರೂ, ಅಲ್ಲಿ ಮಗನಿಗೆ ತಂದೆಯ ಮೇಲಿರುವ ಅವ್ಯಕ್ತವಾದ ಪ್ರೀತಿಯನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. ಇದರ ಜೊತೆಗೆ ಆಗಿನ ಒಟ್ಟು ವ್ಯವಸ್ಥೆಯನ್ನು, ಆ ಪರಿಸರದಲ್ಲಿ ಬೆಳೆದವರ ಮುಗ್ಧತೆಯನ್ನು ಕೂಡ ಪರಪಂಚದಲ್ಲಿ ದೃಶಿಸಿರುವುದು ಕಣ್ಣಿಗೆ ಕಟ್ಟಿದ ಹಾಗೆ ಮೂಡಿ ಬಂದಿದೆ. ಅಡಿಕೆಯ ಸಿಪ್ಪೆ ಸುಲಿಯುತ್ತಲೇ ಮಕ್ಕಳ ಬಗ್ಗೆ ಅಪಾರ ಪ್ರೀತಿಯಿರುವ ತಂದೆ, ಮಕ್ಕಳ ಓದಿನ ಬಗೆಯೂ ಕಾಳಜಿವಹಿಸಿ ಬದುಕು ಬದಲಿಸಿಕೊಳ್ಳುವ ನೋವು ಮತ್ತು ಪ್ರೀತಿಯಲ್ಲಿ ಅವರ `ಭವಿಷ್ಯ’ವನ್ನು ರೂಪಿಸಿಕೊಡುವುದು ಮಕ್ಕಳ ಮೇಲಿನ ದ್ವೇಷದಿಂದಲ್ಲ, ಬರೀ ಪ್ರೀತಿಯಿಂದ ಮಾತ್ರ. ತಂದೆಯಾದವನ ಜವಾಬ್ದಾರಿ ಮತ್ತು ಅದನ್ನು ಡಿಸ್ಚಾರ್ಜ್ಗೊಳಿಸುವ ಹಾದಿ ಸುಗಮವಾದುದಲ್ಲವಾದರೂ, ಈ ಕೃತಿಯಲ್ಲಿ ಇದ್ದದ್ದರಲ್ಲೇ ಪ್ರಪಂಚವನ್ನು ಕಂಡುಕೊಳ್ಳುವ ಗಟ್ಟಿ ಮಲೆನಾಡಿಗನೊಬ್ಬನ ಹೋರಾಟವಿದೆ.

ಆಯುಷ್ಯ ಏರುತ್ತಿದ್ದಂತೆ ಹುಟ್ಟಿಕೊಳ್ಳುವ ಜೀವನ ಪ್ರೀತಿ, ಅಸಹಾಯಕತೆಯ ನಡುವೆಯೂ ಮನಸ್ಸಿಗೆ ಮೀರಿದ ಸಾಹಸದ ಕೆಲಸಗಳನ್ನು ಮಾಡಲು ಪ್ರೇರೇಪಿಸುವಂತೆ ಇಳಿವಯಸಿನಲ್ಲಿಯೂ `ನೀರಾ’ ತೆಗೆದು, ಅದನ್ನು ಗಡಿಗೆಯಲ್ಲಿ ಹೊತ್ತುಕೊಂಡು ಹೋಗುವ ಕೆಲಸ ಸಾಮಾನ್ಯವಾದುದಲ್ಲ. ಇಲ್ಲಿ ಹಠಮಾರಿತನಕ್ಕಿಂತಲೂ ಸ್ವಾಭಿಮಾನವಿದೆ. ಮಕ್ಕಳ ಮುಂದೆ ಕ್ಷುಲ್ಲಕ ವಿಷಯಕ್ಕೂ ಕೈಯೊಡ್ಡಬೇಕಾದ ಪರಿಸ್ಥಿತಿಯಲ್ಲಿ ಅದನ್ನು ನಿಬಾಯಿಸಿ ಬದುಕುವ ಹಳ್ಳಿಗನೊಬ್ಬನ ಜೀವನಗಾಥೆಯಿದೆ. ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಶೆಂದಿಯನ್ನು ತೆಗೆದು, ಮಾರುವ ದೃಶ್ಯವನ್ನು ಕಾಣುತ್ತೇವೆ. ಅದೇ ದೃಶ್ಯ ಕೊಡಸೆಯವರ ಈ ಕೃತಿಯಲ್ಲಿ ಕೂಡ ಪಾತ್ರವೊಂದರ ಅವಿಭಾಜ್ಯ ಅಂಗದಂತೆ ಮೂಡಿಬಂದಿದೆ.

`ಅಪ್ಪನ ಪರಪಂಚ’ದಲ್ಲಿ, ಅಪ್ಪ ರಾಜಕೀಯವನ್ನು ಅನಿವಾರ್ಯವಾಗಿ ಪ್ರವೇಶಿಸುವುದು, ಬಿಳುಮನೆಯವರ `ಮಲೆಯ ಪ್ರಬಂಧಗಳು’ವಿನಲ್ಲಿ `ಶಾಂತವೇರಿ ಗೋಪಾಲಗೌಡರು- ನೆನಪುಗಳು’ ಪ್ರಬಂಧವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ರಾಜಕೀಯದ ನಡುವೆ ಇಳಿವಯಸ್ಸಿನಲ್ಲಿಯೂ ಸಮಾಜಸೇವೆಗೆ ಟೊಂಕಕಟ್ಟಿ ನಿಲ್ಲುವ ಉತ್ಸಾಹ ಅಪ್ಪನ ಪರಸೇವೆಯ ಪ್ರಪಂಚವಾಗಿಯು ಕಾಣಿಸುತ್ತದೆ. ಚುನಾವಣೆಯಲ್ಲಿ ಸೋತರೂ ಬತ್ತದ ಸಮಾಜಸೇವೆಯ ನಂಟು ರಿಪ್ಪನ್ ಪೇಟೆಯಲ್ಲಿರುವ ಸಮೂದಾಯ ವಿದ್ಯಾರ್ಥಿನಿಲಯದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಶಿಕ್ಷಣದ ಹಂಬಲದಲ್ಲಿರುವ ಮಕ್ಕಳ ಕಾಳಜಿಯನ್ನು ಹೊತ್ತುಕೊಂಡು ಪರಿಸ್ಥಿತಿಯನ್ನು ಎದುರಿಸುವುದು ಸುಲಭದ ಮಾತಲ್ಲವೆನ್ನುವುದು ಓದುಗನಿಗೆ ತಿಳಿಯುತ್ತದೆ.

ಇಷ್ಟೆಲ್ಲಾ ತಾಕತ್ತಿದ್ದರೂ ಮಕ್ಕಳು ಪ್ರಾಯಕ್ಕೆ ಬಂದಾಗ ಅವರಿಗೆ ಜವಾಬ್ದಾರಿಯನ್ನು ಹೊರೆಸಿ, ಬದುಕಿನ ವ್ಯಾಪ್ತಿಯನ್ನು ತೆರೆದಿಡುವ ಉದ್ದೇಶವೇ ಅವನಿಗೆ ಇದ್ದಿರಬಹುದೆಂದೆನಿಸುತ್ತದೆ. ಇಲ್ಲವಾದರೆ ಮಕ್ಕಳಿಗೆ ಆಯಾಯ ಸಂದರ್ಭದಲ್ಲಿ ಏನೇನು ಆಗಬೇಕೆಂದುಕೊಳ್ಳುತ್ತಾನೋ ಅವುಗಳ ಜೊತೆಗೆ ಅವರವರ ಜವಾಬ್ದಾರಿಯನ್ನು ಈ ಮೂಲಕ ಹೇಳುತ್ತಿರಬಹುದು. ಅಷ್ಟೇ ಅಲ್ಲದೆ, ಸರೀಕರ ಜೊತೆಗೆ `ಯಜಮಾನ’ ಅನಿಸಿಕೊಂಡವನು ಬಾಂಧವ್ಯಗಳನ್ನು ಉಳಿಸಿಕೊಂಡು ಒಬ್ಬ `ರೋಲ್ ಮಾಡೆಲ್’ ಆಗಿ ಗೋಚರಿಸಿದರೂ ಹೆಚ್ಚಲ್ಲ. ಈ ರೀತಿಯ ಗೌರವಕ್ಕೆ ಪಾತ್ರವಾಗಬೇಕಾದರೆ ಆತನ ಕಾರ್ಯವೈಖರಿ, ಆದರ್ಶಗಳು ಇತರರಿಗೆ ಮಾದರಿಯಾಗಿರಬೇಕು. ಹಾಗಿನ ವ್ಯಕ್ತಿತ್ವ ಈ ಕೃತಿಯಲ್ಲಿ ಬರುವ ಅಪ್ಪನದು. ಬೆನ್ನುಡಿಯಲ್ಲಿ ಸರ್ಜಾಶಂಕರ ಹರಳಿಮಠ ಅವರು ಹೇಳುವಂತೆ, `ಇಲ್ಲಿ ಅಪ್ಪನ ಬಗ್ಗೆ ಮಾತ್ರ ಹೇಳುತ್ತಿಲ್ಲ. ಅಪ್ಪನ ಕಾಲಘಟ್ಟವನ್ನು ನಿಷ್ಠುರವಾಗಿ ಚಿತ್ರಿಸುವ ಕೃತಿ `ಅಪ್ಪನ ಪರಪಂಚ’.

ಮಕ್ಕಳ ಮನೆಯಲ್ಲಿ ಆರಾಮವಾಗಿ ಜೀವನ ನಡೆಸಬಹುದಾದ ಅವಕಾಶಗಳಿದ್ದರೂ ಅದು ಅಸಹನೀಯವಾಗುವ ಸ್ಥಿತಿಯೇ ಒಬ್ಬನ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಅಂತಹ ಕ್ರಿಯಾಶೀಲತೆಯಿಂದಿರುವ ವ್ಯಕ್ತಿಯು ಪ್ರತೀ ಕೆಲಸದಲ್ಲಿಯೂ ಗುಣಾತ್ಮಕವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾನೆ. ಹಾಗಾಗಿ ಇಲ್ಲಿಯ ಅಪ್ಪ ತನ್ನದೇ ಆದ ಒಂದು ಪ್ರಪಂಚವನ್ನು ಕಟ್ಟಿಕೊಂಡಿದ್ದಾನೆ.

ಮಕ್ಕಳಿಗೆ ರೋಲ್ ಮಾಡೆಲ್ ಆಗುವ ಅಪ್ಪಂದಿರ ಬಗ್ಗೆ ಆಗಿನ ಕಾಲದಲ್ಲಿ ಏನನ್ನೂ ಗುರುತಿಸಲಾರದೆ, ಸ್ವತ: ತನಗೆ ಜವಾಬ್ದಾರಿಗಳ ಆಳದ ಅರಿವಾದಾಗ ಮಗ, ಅಪ್ಪನ ಕಾರ್ಯವೈಖರಿಯನ್ನು ಒಂದು `ಬೆರಗು’ ಅನ್ನುವಂತೆ ಇಲ್ಲಿ ಕಾಣುತ್ತಾನೆ. ಆ ಬೆರಗು ಅಸಹಾಯಕತೆಯಿಂದ ಪಾರ್ಶ್ವವಾಯು ಪೀಡಿತನಾಗಿ ಮಲಗಿದಾಗ ಕ್ರಿಯಾಶೀಲತೆಯ ಚುರುಕು ಜೀವವೊಂದನ್ನು ಆ ರೀತಿಯಲ್ಲಿ ಕಲ್ಪಿಸಿಕೊಳ್ಳುವುದಕ್ಕೂ ಬೇಸರವಾಗುತ್ತದೆ. ಮುಂದೇ ಅದು ಸಾವಿನಲ್ಲಿ ಅಂತ್ಯ ಕಂಡಾಗ ಅಪ್ಪನನ್ನು ನೋಡಲಾಗದ ಅಸಹಾಯಕತೆಯಲ್ಲಿ ಉಳಿದು ಬಿಡುವ ಮಗನ ಅಂತ:ಕರಣದ ಸೊಲ್ಲು ಮತ್ತು ಅವನ ಆಶೆಗಳೆಲ್ಲಾ ದೂರ ಮಾಡಿಕೊಂಡ ನಿರ್ಲಿಪ್ತತೆ ಯಾರ ಮನಸ್ಸನಾದರೂ ಕಲಕದಿರದು. ಇನ್ನೊಂದು ಮನಕಲಕುವ ದೃಶ್ಯ, ಮಕ್ಕಳ ಒತ್ತಾಯಕ್ಕೆ ಹಸಿರು ಬಳೆ ತೊಟ್ಟು, ಕನಕಾಂಬರ ಮುಡಿಗೇರಿಸಿ, ಹಣೆಗೆ ಕುಂಕುಮವಿಟ್ಟು ಕಾರಿನತ್ತ ಹೆಜ್ಜೆ ಹಾಕುವ ತಾಯಿಯ ಸನ್ನಿವೇಶ ಓದುಗನ ಕಣ್ಣನ್ನು ಒದ್ದೆ ಮಾಡದಿರದು.

`ಅಪ್ಪನ ಪರಪಂಚ’ ಒಬ್ಬ ಆದರ್ಶ ಪ್ರಾಯ ತಂದೆಯ ಜೀವಿತ ಮತ್ತು ಆತನ ಸ್ವಾಭಿಮಾನದ, ಶಿಸ್ತಿನ ಬದುಕು ಎಲ್ಲರಿಗೂ ಮಾದರಿಯೆಂದರೆ ಅತಿಶಯೋಕ್ತಿಯಲ್ಲ. ನಿಜವಾಗಿಯೂ ತಂದೆಯೊಬ್ಬ ಮಕ್ಕಳ ದೃಷ್ಟಿಯಲ್ಲಿ `ರಿಯಲ್ ಹೀರೋ’ ಅಂದರೂ ತಪ್ಪಲ್ಲ. ಹಾಗಾಗಿ ಲಕ್ಷ್ಮಣ ಕೊಡಸೆ ಅವರ ಈ ಕೃತಿ ಕೇವಲ ಒಂದು ಕುಟುಂಬದ ಅಥವಾ ವರ್ಗದ ಓದುಗರಿಗೆ ಮಾತ್ರ ಸೀಮಿತವಲ್ಲ. ಸಹಜ ಬದುಕಿನ ಏರಿಳಿತಗಳು ಓದುಗರಿಗೂ ಆದರ್ಶಪ್ರಾಯವೆಂದೆನಿಸಬಹುದು. ಈ ಕೃತಿಯಲ್ಲಿ ಮನೋಹರ್ ಅವರ ಮುಖಪುಟದ ಕಲೆ ಕೂಡ ಕೃತಿಯಷ್ಟೇ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

Read more!

Sunday, September 4, 2011

ಗ್ರಾಮೀಣ ಜೀವನದಲ್ಲಿ ‘ಗಾಂಧೀಜಿ’ಯರು


ನಾ. ಮೊಗಸಾಲೆಯವರು ಒಂದು ಕಡೆ ಹೇಳುತ್ತಾರೆ, ‘ಈಗಿನ ಕತೆಗಳು ಕತೆಗಳಾಗಿ ಉಳಿದಿಲ್ಲ’. ಅವರ ಅನುಭವದ ಈ ಮಾತು ನೂರಕ್ಕೆ ನೂರು ಸತ್ಯ. ಪತ್ರಿಕೆಗಳು ಇವತ್ತು ಕೇಳುತ್ತಿರುವುದು ಪೇಜ್ ಲಿಮಿಟ್‌ನ ಕತೆಗಳನ್ನು. ಇದು ಕತೆಗಾರನ ಸೃಜನಶೀಲತೆಗೆ ಸವಾಲಾದರೂ ಒಂದು ಸಣ್ಣ ಚೌಕಟ್ಟಿನೊಳಗೆ ಕತೆಯನ್ನು ಹಿಡಿದಿಡುವುದು ಸೃಜನಶೀಲತೆಯಲ್ಲ; ಬದಲಾಗಿ, ಫಿಜ್ಜಾ ಬರ್ಗರ್, ಚಾಟ್ ಐಟಂ ನಂತಹ ರುಚಿಯಿಲ್ಲದ, ಸತ್ವವಿಲ್ಲದ ಮತ್ತು ಅನಾರೋಗ್ಯಕರ ಹಳಸಲು ತಿಂಡಿಗಳಂತೆ. ಹಿಂದಿನ ತಲೆಮಾರಿನ ಕತೆಗಾರರೆಲ್ಲ ಚೌಕಟ್ಟು ಹಾಕದೆ ಕತೆಗಳನ್ನು ಬರೆದಿರುವುದು ಅವರಲ್ಲಿ ಸೃಜನಶೀಲತೆಯಿಲ್ಲದೆಯೆ? ಉದಾಹರಣೆಗೆ ರಾಘವೇಂದ್ರ ಖಾಸನೀಸರ ಕತೆಗಳನ್ನು ಕೈಗೆತ್ತಿಕೊಂಡರೆ ಅವುಗಳನ್ನು ಓದುವುದೇ ಒಂದು ಚೇತೋಹಾರಿ ಅನುಭವ. ಅವರ ಕತೆಗಳಾವುವು ಪುಟವ್ಯಾಪ್ತಿಯನ್ನು ಹಾಕಿಕೊಂಡು ಬರೆದವಲ್ಲ. ಅವುಗಳನ್ನು ನೀಳ್ಗತೆಗಳೆಂದು ಕರೆದರೂ ತಪ್ಪಲ್ಲ. ಆ ಕತೆಗಳನ್ನು ಇಂದಿಗೂ ಉಸಿರು ಬಿಗಿ ಹಿಡಿದು ಓದಿಸಿವುದು ಪುಟ ಮಿತಿಯಲ್ಲದ ಕತೆಯೆಂದೆ? ಇದು ನಾವು ಇಂದು ಕತೆಗಳ ಬಗ್ಗೆ ಮಾತನಾಡುವಾಗ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿರುವ ಪ್ರಶ್ನೆ."

ಅಂತಹ ಪುಟವ್ಯಾಪ್ತಿಗೆ ಒಗ್ಗದೆ ಬರೆದ ಕತೆಗಳ ಸಮುಚ್ಚಯ ನಾ. ಮೊಗಸಾಲೆಯವರ, ಇತ್ತೀಚೆಗೆ ಬೆಳಕುಕಂಡ ಕತೆಗಳ ಸಂಕಲನ ‘ಸೀತಾಪುರದಲ್ಲಿ ಗಾಂಧೀಜಿ’. ಇಲ್ಲಿಯ ಕತೆಗಳಲ್ಲಿ ಕೇವಲ ಗಾಂಧೀಜಿಯನ್ನು ಹುಡುಕ ಹೊರಟರೆ ಆತ ನಿಮಗೆಲ್ಲೂ ಗೋಚರಿಸುವುದಿಲ್ಲ. ಬದಲಾಗಿ ಗಾಂಧೀಜಿಯಂತಹ ಕೆಲವೊಂದು ವ್ಯಕ್ತಿತ್ವಗಳನ್ನು ಕಾಣಬಹುದೆನ್ನುವುದು ಸುಳ್ಳಲ್ಲ. ಇದನ್ನು ಮುನ್ನುಡಿಯಲ್ಲಿ ಎಸ್. ಆರ್ ವಿಜಯಶಂಕರ್ ಅವರು ಕೂಡ ಗುರುತಿಸಿದ್ದಾರೆ.

ಆರ್. ಕೆ. ನಾರಾಯಣರ ಕತೆಗಳಲ್ಲಿ ಬರುವ ‘ಮಾಲ್ಗುಡಿ’ಯಂತೆ ಮೊಗಸಾಲೆಯವರ ಕತೆಗಳಲ್ಲಿ ಕಾಣಸಿಗುವ ‘ಸೀತಾಪುರ’ ಒಂದು ಮಾದರಿ ಗ್ರಾಮದಂತೆ ನಮಗೆ ಗೋಚರವಾಗುತ್ತದೆ. ಇಲ್ಲಿಯ ಕತೆಗಳೆಲ್ಲವೂ ಸೀತಾಪುರದ ಸುತ್ತಮುತ್ತಲೂ ನಡೆಯುವ ಘಟನೆಗಳು ಮತ್ತು ಇಲ್ಲಿಯ ಕತೆಗಳನ್ನು ಓದುವಾಗ ಒಂದು ಕಾದಂಬರಿಯನ್ನು ಓದಿದ ಅನುಭವವೂ ನಮಗಾಗದಿರದು. ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಲೋಕ’ದಂತಹ ಕೃತಿಗಳನ್ನು ಓದುವಾಗ ಅದನ್ನು ನೀವು ಯಾವ ಅಧ್ಯಾಯದಿಂದ ಆರಂಭಿಸಿದರೂ ನಿಮಗೆ ದಕ್ಕುವ ಅನುಭವವು ಬೇರಯದೆ. ಹಾಗೆ ಇಲ್ಲಿಯ ಕತೆಗಳು ಕೂಡ, ಒಂದೇ ಪರಿಸರದಲ್ಲಿ ಘಟಿಸುವುದರಿಂದ ಕತೆಗಳೆಲ್ಲ ಆಪ್ತವೆನಿಸುತ್ತವೆ. ಸೀತಾಪುರ, ಕುಪ್ಪಣ್ಣ ಇಂತಹ ಪ್ರದೇಶ, ವ್ಯಕ್ತಿಗಳು ಪದೇ ಪದೇ ಎಲ್ಲಾ ಕತೆಗಳಲ್ಲಿ ಮರುಸೃಷ್ಟಿ ಪಡೆದುಕೊಳ್ಳುವುದರಿಂದ ‘ಸೀತಾಪುರದಲ್ಲಿ ಗಾಂಧೀಜಿ’ ಒಂದು ಸುಂದರ ಮತ್ತು ಸರಳ ಕಾದಂಬರಿಯಂತೆಯೂ ಕಾಣುತ್ತದೆ. ಇದಲ್ಲದೆ, ಕುಪ್ಪಣ್ಣಯ್ಯ ಪ್ರತೀಯೊಂದು ಸಮಸ್ಯೆಯಲ್ಲಿಯೂ ಮುಖಾಮುಖಿಯಾಗುತ್ತಾ ಅವನ್ನು ನಿರಾಳವಾಗಿ ಪರಿಹರಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಆದರ್ಶಪ್ರಾಯರಾಗಿ ಕಾಣಿಸುತ್ತಾರೆ.

‘ಸೀತಾಪುರದಲ್ಲಿ ಗಾಂಧೀಜಿ’, ಎಂದೋ ಒಮ್ಮೆ ಸೀತಾಪುರಕ್ಕೆ ಗಾಂಧೀಜಿ ಬಂದಿದ್ದಾರೆನ್ನುವುದಕ್ಕಿಂತ ಅವರ ಬಂದಿರುವಿಕೆಯ ಪ್ರಭಾವ ಆ ಊರಿನ ಜನರ ಮೇಲೆ ಹೇಗೆ ಆಗಿದೆ ಅನ್ನುವುದನ್ನು ಕೆಲವೊಂದು ಪಾತ್ರಗಳ ಮೂಲಕ ತಿಳಿಯುತ್ತದೆ. ಈ ಸಂಕಲನ ಗಾಂಧೀಜಿಯ ಕಾಲಕ್ಕೆ ಸೀಮಿತವಾಗದೆ ಇಂದಿನ ವಾಸ್ತವ ಚಿತ್ರಣವನ್ನ ಕಟ್ಟಿಕೊಡುವುದಲ್ಲದೆ, ಸಮಾಜಮುಖಿಯಾದ ಸಮಸ್ಯೆಗಳನ್ನು ಎತ್ತಿ ಹಿಡಿದು ಧ್ವನಿಸುತ್ತದೆ. ‘ಸುಣ್ಣ ಎದ್ದು ಹೋದ ಗೋಡೆ’ಯಲ್ಲಿ ಕನ್ನಡ ಶಾಲೆಗಳ ದುಸ್ಥಿತಿಯನ್ನು ಕತೆಯ ಮೂಲಕ ಜಾಗೃತಗೊಳಿಸುವ ಪ್ರಯತ್ನ ಮೊಗಸಾಲೆಯವರದ್ದು. ಅದೇ ರೀತಿ ವಿಮಾನ ದುರಂತದ ಚಿತ್ರಣವಿರುವ ‘ಭೂಮಿ ಮತ್ತು ಆಕಾಶ’ ಕತೆಯಲ್ಲಿ ದುರಂತದ ಜೊತೆಗೇನೇ ನಿರುದ್ಯೋಗದ ಮತ್ತು ಪ್ರತಿಭಾ ಪಲಾಯನದ ಕುರಿತು ಕತೆ ಧ್ವನಿಸುವುದನ್ನು ಗಮನಿಸಬಹುದು. ಇದು ಮೊಗಸಾಲೆಯವರಿಗಿರುವ ಸಾಮಾಜಿಕ ಕಳಕಳಿಯನ್ನು ಕೂಡ ತೋರಿಸುತ್ತದೆ.

ಇನ್ನು ಇಲ್ಲಿಯ ಕತೆಗಳ ಬಗ್ಗೆ ಹೇಳುವುದಾದರೆ ಮೊದಲ ಕತೆ, ‘ಸೀತಾಪುರದಲ್ಲಿ ಗಾಂಧೀಜಿ’ ಸಂಕಲನದ ಉಳಿದ ಕತೆಗಳಿಗೆಲ್ಲ ಮುನ್ನುಡಿಯಾಗಿಯೂ ಮತ್ತು ಸೀತಾಪುರದ ಬಹುತೇಕ ಎಲ್ಲಾ ವರ್ಣನೆಗಳನ್ನೊಳಗೊಂಡು ಓದುಗನ ಮನಸ್ಸಿನಲ್ಲಿ ಒಂದು ಅಚ್ಚಳಿಯದ ಪರಿಸರವನ್ನು ನಿರ್ಮಿಸಿ ಬಿಡುತ್ತದೆಯೆನ್ನುವುದು ನನ್ನ ಅನುಭವ. ಸೀತಾಪುರದ ರಥಬೀದಿ, ಕುಪ್ಪಣ್ಣನ ಹೊಟೇಲು, ಸಮಯ ಸಮಯಕ್ಕೆ ಓಡಾಡುವ ಬಸ್ಸು, ಕೋಮುಸೌಹಾರ್ದತೆಯ ಬಾಂಧವ್ಯ ಇವೆಲ್ಲಾ ಕೊನೆಯ ಕತೆಯನ್ನು ಓದಿದ ಬಳಿಕವೂ ಮನಸ್ಸಿನಲ್ಲಿ ಉಳಿದು ಬಿಡುತ್ತವೆ. ಈ ಕತೆಯಲ್ಲಿ ಗ್ರಾಮಸೇವಕನಾಗಿ ಬರುವ ಅಶ್ವತ್ಥನಾರಾಯಣನಿಗೆ ಕತೆ ಬರೆಯುವ ಗೀಳು. ನಾಗಪ್ಪನ ಬಗ್ಗೆ ಪತ್ರಿಕೆಯಲ್ಲಿ ಬರೆದಿರುವವನು ಅವನೇ ಅನ್ನುವ ಗುಮಾನಿಯೆದ್ದು, ಅವನ ಮೇಲೆ ಹಲ್ಲೆ ನಡೆಯುತ್ತದೆ. ಇದಕ್ಕೆ ಕುಪ್ಪಣ್ಣಯ್ಯ ಬೆನ್ನೆಲುಬಾಗಿ ನಿಂತು ಕೇಸು ಕೋರ್ಟಿನವರೆಗೂ ತಲುಪುತ್ತದೆ. ಈ ಹೋರಾಟದಲ್ಲಿ ನ್ಯಾಯ ಬೇಕಾಗಿರುತ್ತದೆ. ಕೇಸು ರಾಜಿಪಂಚಾತಿಕೆಯಲ್ಲಿ ಕೊನೆಗೊಳ್ಳುವುದು ಬೇರೆ ಪ್ರಶ್ನೆ. ಆದರೆ ಇಲ್ಲಿಯ ಹೋರಾಟ ಗಾಂಧೀಜಿಯನ್ನು ನೆನಪಿಸುತ್ತದೆ. ಹಾಗೆ ಗಾಂಧೀಜಿಯನ್ನು ನೆನಪಿಸುವ ಕೆಲವೊಂದು ಪಾತ್ರಗಳು ಇಲ್ಲಿಯ ಕತೆಗಳಲ್ಲಿ ಕಾಣಸಿಗುತ್ತದೆ.

ಈ ಸಂಕಲನದ ಇನ್ನೊಂದು ಕತೆ, ‘ನುಗ್ಗೆ ಗಿಡ’. ವಾರದ ಸಂತೆಗೆ ಹೋಗಲು ಬಸ್ಸು ತಪ್ಪಿ, ತನಗೆ ವಹಿಸಿರುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದೆ ನುಗ್ಗೆ ಕೋಡನ್ನು ಸಂತೆಯಿಂದ ತರಲಾಗದೆ ಚಡಪಡಿಸುವ ಕುಪ್ಪಣ್ಣಯ್ಯನಿಗೆ ತನಗೆ ಅದನ್ನು ತರಲು ಹೇಳಿದವರ ಮನೆಯ ಮುಂದೆಯೇ ನುಗ್ಗೆಗಿಡವಿರುವುದನ್ನು ಕಂಡು ಆಶ್ಚರ್ಯವಾಗುತ್ತದೆ. ಆದರೆ ಈ ಕತೆಯಲ್ಲಿ ದನಿಯಿರುವುದು ನಾಟಿವೈದ್ಯೆ ಪ್ರೇಮಕ್ಕ ಸರ್ಪಸುತ್ತು ಕಾಯಿಲೆಗೆ ಕೊಡುವ ಔಷಧದಲ್ಲಿ. ಉಸ್ಮಾನನ ಕಾಯಿಲೆಯನ್ನು ನೋಡಿ ಔಷಧಕೊಡಲು ಮುಂದಾದ ಆಕೆಗೆ ಕಸಾಯಿಖಾನೆಗೆ ಹೋದ ತನ್ನ ಗಡಸು ದನದ ವಿಷಯ ತಿಳಿಯುತ್ತದೆ. ಅದರಿಂದ ಒಮ್ಮೆ ಆಕೆ ಆಘಾತಕೊಳ್ಳಗಾದರೂ ಅವಳ ಅಂತ:ಕರಣದಲ್ಲಿ ಮಾನವೀಯತೆಯ ಸೆಲೆಯಿರುತ್ತದೆ. ಹೀಗೆ ಸಾಗುವ ಈ ಕತೆ ನಿಜಕ್ಕೂ ಪ್ರೇಮಕ್ಕನ ಮಾನವೀಯತೆಯನ್ನ ಎತ್ತಿಹಿಡಿಯುವುದಲ್ಲದೆ, ಸೌಹಾರ್ದತೆಯ ದನಿಯಾಗಿಯೂ ಕಾಣಿಸುತ್ತದೆ.

‘ದನಕರು’ ಕೂಡ ಇಂತಹುದೇ ಸೌಹಾರ್ದತೆಯ ಕತೆಯಾದರೂ ಒಂದು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಬರೆದ ಕತೆಯೆನಿಸುತ್ತದೆ. ಗಂಡು ಕರುಗಳನ್ನು, ಗೊಡ್ಡು ಮತ್ತು ಮುದಿ ದನಗಳನ್ನು ಸಾಕಾಲಾರದೆ ಜಬರ್ದಸ್ಥಿಯಿಂದ ಮಾರಬೇಕಾದ ಪರಿಸ್ಥಿತಿಯಲ್ಲಿ ಅವನ್ನು ಏನು ಮಾಡಬೇಕೆನ್ನುವುದು ಒಂದು ಸಮಸ್ಯೆ. ಆ ಸಮಸ್ಯೆಗಳಿಗೆ ಉತ್ತರವನ್ನು ಕಾಣುವ ಪ್ರಯತ್ನವಿದೆಯಾದರೂ ಅಲ್ಲಿಯೂ ಕೆಲವೊಂದು ನ್ಯೂನತೆಗಳಿರುವುದನ್ನು ಈ ಕತೆ ಧ್ವನಿಸುತ್ತದೆ. ಇದು ಒಟ್ಟು ಸಮಾಜದ ಪರಿಹಾರ ಕಾಣದ ಸಮಸ್ಯೆಯಂತೆಯೂ ಗೋಚರಿಸುತ್ತದೆ. ಮನುಷ್ಯ ಕೇವಲ ಲಾಭಿಯನ್ನು ಮಾತ್ರ ಚಿಂತಿಸಿದರೆ ಸಮಸ್ಯೆ ಪರಿಹಾರ ಕಾಣುವುದಿಲ್ಲವೆನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.

ಇಂದಿನ ವಾಸ್ತವ ಸಂಗತಿಯನ್ನು ತೆರೆದಿಡುವ ಕತೆ ‘ಸುಣ್ಣ ಎದ್ದು ಹೋದ ಗೋಡೆ’. ಈ ಕತೆಯಲ್ಲಿ ಅದ:ಪತನಕ್ಕೊಳಗಾಗುತ್ತಿರುವ ಕನ್ನಡ ಶಾಲೆಗಳ ಕಾಳಜಿಯಿರುವ ದುಗ್ಗಪ್ಪ ಮಾಸ್ತರರಿಗೆ ತಾವೇ ಆರಂಭಿಸಿದ ಕನ್ನಡ ಶಾಲೆಯನ್ನು ಮುಚ್ಚುವಾಗಿನ ನೋವು ಲೇಖಕನ ದನಿಯಾಗಿಯೂ ಮೂಡಿ ಬಂದಿರುವುದು ಕತೆಯ ಸಹಜತೆಗೆ ಕಾರಣವಾಗಿದೆ. ಕನ್ನಡ ಶಾಲೆಗಳಲ್ಲಿ ಸೌಲಭ್ಯಗಳಿದ್ದರೂ ವಿದ್ಯಾರ್ಥಿಗಳಿಲ್ಲದೆ ಮುಚ್ಚಬೇಕಾದ ಅನಿವಾರ್ಯತೆ ಪ್ರಸಕ್ತ ಸಮಸ್ಯೆ. ಅದನ್ನು ಪರಿಹರಿಸಲಾರದ್ದು ಮೇಷ್ಟ್ರ ಸಾವಿನ ಸಾಂಕೇತವಷ್ಟೆ. ಅವರು ಉಳಿಸಿದ ಶಾಲೆ ಮತ್ತು ಅವರು ಕಲಿಸಿದ ವಿದ್ಯಾರ್ಥಿಗಳು ಮೇಷ್ಟ್ರನ್ನ ನೆನಪಿಸಿಕೊಳ್ಳದಿರುವುದಿಲ್ಲ. ಅಲ್ಲಿ ಕಲಿತ ವಿದ್ಯಾರ್ಥಿಗಳಿಗೆ ‘ಕನ್ನಡ ಶಾಲೆ’ ಎಂದು ಅದನ್ನು ಅಭಿಮಾನದಿಂದ ನೆನಪಿಸಿಕೊಳ್ಳುವುದು ಮರೆಯಲಾರದ್ದು. ಆದರೆ ಆಧುನಿಕ ಶಿಕ್ಷಣ ನೀತಿಗೆ ಬದಲಾಗಬೇಕಾದ ಅನಿವಾರ್ಯತೆಯೊಂದು ತಲೆಯೆತ್ತಿರುವುದರಿಂದ ಅದು ಪರಿಹಾರವಿಲ್ಲದೆ ಕೊನೆಯಾಗಬೇಕಾಗುತ್ತದೆ.

ಸುಂದರರಾಯರು ತನ್ನದ್ದಲ್ಲದ ಹಣವನ್ನು ಪ್ರಮಾಣಿಕರಾಗಿ ಪೊಲೀಸ್ ಸ್ಟೇಶನ್‌ಗೆ ಕೊಂಡೊಯ್ಯುವಾಗಲೂ ಅಲ್ಲಿ ಅದನ್ನು ತಿಮ್ಮಪ್ಪನ ಹುಂಡಿಗೆ ಹಾಕಲು ಹೇಳುತ್ತಾರೆ. ಅದನ್ನು ಹಾಗೆ ವಾಪಾಸು ತಂದು ಕುಪ್ಪಣ್ಣಯ್ಯನವರಲ್ಲಿ ಏನು ಮಾಡಬೇಕೆಂದು ಅವರು ಕೇಳಿದರೆ ಕುಪ್ಪಣ್ಣಯ್ಯ ಅದನ್ನು ಸ್ಕಾಲರ್ ಶಿಪ್‌ಗೆ ಉಪಯೋಗಿಸಿಕೊಳ್ಳುವಂತೆ ತಿಳಿಸುತ್ತಾರೆ. ಆದರೆ ಸುಂದರರಾಯರಿಗೆ ಅದು ಹೊರೆಯಾಗಿ ಕಾಣುತ್ತದೆ. ಇದು ‘ಒದ್ದೆಯಾದ ಆಕಾಶ’ ಕತೆಯ ಉತ್ತರಾರ್ಧ. ಪೂರ್ವಾರ್ಧದಲ್ಲಿ ಇದೇ ಸುಂದರರಾಯರು ಸಮುದ್ರ ತೀರದಲ್ಲಿ ತಮ್ಮೆಲ್ಲಾ ಚಿನ್ನದೊಡವೆಗಳನ್ನು ಕಳೆದುಕೊಂಡಿದ್ದರೂ ಅದು ದೇವರೇ ಮಾಡಿದನೆನ್ನುವ ನಿರಾಳತೆಯಿಂದಿರುತ್ತಾರೆ. ಆದರೆ ತಮಗೆ ಸಿಕ್ಕ ಹಣವನ್ನು ದೇವರು ಕೊಟ್ಟದ್ದೆಂದು ಅದನ್ನು ಉಪಯೋಗಿಸಿಕೊಳ್ಳುವುದಿಲ್ಲ. ಬದಲಾಗಿ ಪ್ರಾಮಾಣಿಕರಾಗಿ ಅದನ್ನು ಸ್ಟೇಶನ್‌ಗೆ ಕೊಡೊಯ್ಯುವಾಗಲೂ ಅಲ್ಲಿಯೂ ಎಂತಹ ಪ್ರಮಾಣಿಕತೆ ನೋಡಿ. ಇಲಾಖೆಯವರೂ ಅದನ್ನು ವಾಪಾಸುತೆಗೆದುಕೊಂಡು ಹೋಗಲು ತಿಳಿಸುತ್ತಾರೆ. ಈ ಕತೆಯಲ್ಲಿ ಎಲ್ಲೂ ಕ್ಲ್ಯಾಶ್‌ಗಳಾಗಲಿ, ಆಶೆಬುರುಕರಾಗಲಿ ಕಾಣಿಸಿಗುವುದಿಲ್ಲ. ಪ್ರಾಮಾಣಿಕತೆಯಿಂದ ಅದನ್ನು ಒಳ್ಳೆಯದಕ್ಕೆ ಉಪಯೋಗಿಸಲು ತಿಳಿಸುತ್ತಾರೆ. ಇಲ್ಲಿ ಸುಂದರರಾಯರಿಗೆ ಕಳೆದುಕೊಂಡ ತನ್ನ ಒಡವೆಗಳು ಹಣದ ರೂಪದಲ್ಲಿ ದೊರಕಿದವೆಂದು ಸುಮ್ಮನಿರಬಹುದಿತ್ತು. ಆದರೆ ಅವರು ಹಾಗೆ ಮಾಡದಿರುವುದರಿಂದ ಗಾಂಧೀಜಿಯನ್ನು ನೆನಪಿಸುತ್ತಾರೆ.

‘ಭೂಮಿ ಮತ್ತು ಆಕಾಶ’ ಆಧುನಿಕತೆಯ ದುರಂತ ಚಿತ್ರಣದ ಕತೆಯಾದರೂ ಕತೆ ನಡೆಯುವುದೆಲ್ಲ ಸೀತಾಪುರದ ಸುತ್ತಮುತ್ತಲ ಮನಸ್ಸುಗಳಲ್ಲಿ. ಕಥೆಯಲ್ಲಿ ಬರುವ ಗೆಂದಗಿಡಿ ಕೋಳಿಯ ಕೂಗು ಮತ್ತು ಸರಿಯಾದ ಸಮಯಕ್ಕೆ ಆಕಾಶದಲ್ಲಿ ಹಾರುವ ವಿಮಾನ, ಸೂರ‍್ಯ ಪೂರ್ವದಲ್ಲಿ ಹುಟ್ಟುವ ಹಾಗೆ ನಿಖರವಾಗಿ ನಡೆಯುವ ಪ್ರಕ್ರಿಯೆಗಳು. ಇದು ಹಳ್ಳಿಯ ಜನರ ಮುಗ್ಧತೆಯನ್ನೂ ಕೂಡ ಎತ್ತಿ ಹಿಡಿಯುವುದನ್ನು ನಾವು ಗಮನಿಸಬಹುದು. ಈ ಕತೆಯಲ್ಲಿ ವಿಮಾನ ದುರಂತದ ಬಳಿಕ ನಡೆಯುವ ವಿಶ್ಲೇಷಣೆಯೇ ಇದರ ಜೀವಾಳ. ಬದಲಾದ ಪರಿಸ್ಥಿತಿಗೆ ಮುಖ್ಯ ಕಾರಣವೇ ಭಾವನೆಗಳು. ಇದರಿಂದಾಗಿಯೇ ಮುಳಿಹುಲ್ಲಿನ ಮನೆಗಳೆಲ್ಲಾ ತಾರಸಿಯಾದುದು ಎಂಬಂತಹ ಮಾತುಗಳನ್ನು ಅಲ್ಲಗಳೆಯುವಂತಿಲ್ಲ. ಮುಂದೆ ದುರಂತದಲ್ಲಿ ಮಡಿದ ಸತೀಶ ತನ್ನ ತಮ್ಮ ದಿನೇಶನಿಗೂ ದುಬೈಯಲ್ಲಿ ಕೆಲಸಕ್ಕೆ ಅವಕಾಶ ಮಾಡಿಸಿರುವ ವಿಷಯ ಅವನ ಸಾವಿನ ಆನಂತರ ತಿಳಿಯುತ್ತದೆ. ಆದರೆ ದಿನೇಶನಿಗೆ ಅಲ್ಲಿಗೆ ಹೋಗುವ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಇತ್ತ ಅಜ್ಜಿ ಹೋಗಬೇಡವೆಂದರೂ ಒಬ್ಬ ಮಗನನ್ನು ಕಳೆದುಕೊಂಡ ದು:ಖಿತ ತಂದೆ ಮಗನನ್ನು ಹೋಗು ಅನ್ನುವ ಮಾತುಗಳು ಕತೆಯಲ್ಲಿ ಬಹಳ ಪ್ರಭಾವಶಾಲಿಯಾಗಿ ಮೂಡಿದೆ. ಕತೆಯ ಅಂತ್ಯವನ್ನು ಓದುಗನೇ ಊಹಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಈ ಕತೆ ಓದುಗನಲ್ಲಿಯೇ ಉಳಿದು ಬಿಡುತ್ತದೆ. ಇಲ್ಲಿ ಕುಪ್ಪಣ್ಣಯ್ಯ ಆಕಾಶವನ್ನು ನೋಡುವಲ್ಲಿ ಅವರಿಗೆ ಸಾವಿನಲ್ಲಿರುವ ನಿರ್ಲಿಪ್ತತೆಯನ್ನು ಕೂಡ ತಿಳಿಸುತ್ತದೆಯೆನಿಸುತ್ತದೆ.

ಅಂತರ್‌ಜಾತೀಯ ವಿವಾಹ ಸಮಸ್ಯೆಯನ್ನು ಬಹಳಷ್ಟು ಮಾರ್ಮಿಕವಾಗಿ ಚಿತ್ರಿಸುವ ಕತೆ, ‘ಮಳೆಯ ನೀರು ಮತ್ತೆ ಸಮುದ್ರಕ್ಕೆ’. ಇದೊಂದು ಜಾತ್ಯಾತೀತ ರಾಷ್ಟ್ರದಲ್ಲಿ ಪ್ರತಿಯೊಬ್ಬನೂ ಎದುರಿಸಬೇಕಾಗಿರುವ ಸಮಸ್ಯೆಯೊಂದರ ಮುಖಾಮುಖಿಯನ್ನು ತೋರಿಸುತ್ತದೆ. ರಮೇಶ ತಂದೆಗೆ ವಿರುದ್ಧವಾಗಿ ರೋಸಿಯನ್ನು ಮದುವೆಯಾಗಿ ದೂರವೇ ಇದ್ದು ಬಿಡುತ್ತಾನೆ. ಅಲ್ಲಿಯವರೆಗೆ ಅವನಿಗೆ ಜಾತೀಯತೆಯೇನೂ ಸಮಸ್ಯೆಯನ್ನು ತಂದೊಡ್ಡುವುದಿಲ್ಲ. ಆದರೆ ಅವರ ಮಗಳು ಬೆಳೆದು ಒಬ್ಬ ಕ್ರಿಶ್ಚಿಯನ್ ಹುಡುಗನ ಪ್ರೀತಿಯಲ್ಲಿ ಬಿದ್ದಾಗ ಅವನಿಗೆ ದೊಡ್ಡ ಸಮಸ್ಯೆಯೊಂದು ಎದುರಾಗುತ್ತದೆ. ಆದರೆ ಅವನ ತಾಯಿ ಅಂತಕ್ಕ ಅದನ್ನು ವಿರೋಧಿಸದೆ ಮೊಮ್ಮಗಳನ್ನು ಚರ್ಚ್‌ಗೆ ಕರೆದುಕೊಂಡು ಹೋಗಿ ಕ್ರಿಸ್ತನ ಆಶೀರ್ವಾದವನ್ನು ಪಡೆದುಕೊಳ್ಳಲು ಮಗನಿಗೆ ಹೇಳುತ್ತಾರೆ. ಮೇಲ್ನೋಟಕ್ಕೆ ಸರಳ ಕತೆಯೆನಿಸಿದರೂ ಅದು ಎದುರಿಸುವ ಸವಾಲು ಬಹಳ ದೊಡ್ಡದು.

ಮಗಳಿಗೆ ತನ್ನ ನಾಟಿವೈದ್ಯ ವಿದ್ಯೆಯನ್ನು ಧಾರೆಯೆರೆದು ಅವಳಿಗೆ ಮದುವೆಮಾಡಿಕೊಟ್ಟು ಸೋತ ತಂದೆಯೊಬ್ಬನ ಅಂತರಾಳದ ಮತ್ತು ಹಠಮಾರಿತನವನ್ನು ತೆರೆದಿಡುವ ನಯವಾದ ಹಾಸ್ಯದಲ್ಲಿ ಬೆಳೆಯುವ ಕತೆ ‘ಅದು ಅದೂ ಅಲ್ಲ, ಇದು ಇದೂ ಅಲ್ಲ!’. ಇದರ ಒಳಗೆ ಇನ್ನೊಂದು ಕತೆಯಾಗಿ ಡಾ. ತಿಮ್ಮಪ್ಪಯ್ಯನವರ ಘಟನೆ ಬೆಳೆಯುತ್ತದೆ. ಇದು ಫ್ಲ್ಯಾಶ್ ಬ್ಯಾಕ್‌ನಲ್ಲಿದ್ದರೂ ಎಲ್ಲೂ ಓದಿಗೆ ಅಡ್ಡಿ ಪಡಿಸದೆ ಮುಂದೆ ಸಾಗುತ್ತದೆ. ಇಲ್ಲಿಯ ಪ್ಲಸ್ ಪಾಯಿಂಟ್ ಕೋರ್ಟ್‌ನಲ್ಲಿ ನಡೆಯುವ ತೀರ್ಪಿನ ಭಾಗ ಮೆಚ್ಚುವಂತದ್ದು.

ಸಂಕಲನದ ಕೊನೆಯ ಕತೆ, ‘ಚಾರಣ’ ದಿಟ್ಟ ಮಹಿಳೆಯೊಬ್ಬಳ ಸುತ್ತಾ ಹೆಣೆದಿರುವಂತದ್ದು. ಹಳ್ಳಿಯಲ್ಲಿ ಶೋಷಣೆಗೆ ಒಳಗಾಗುತ್ತಾ ಬದುಕುವ ಅದೆಷ್ಟೋ ಹೆಣ್ಣುಗಳಿಗೆ ತುಂಬಕ್ಕೆ ಒಬ್ಬ ಮಾದರಿ ಹೆಣ್ಣಾಗಿ ನಿಲ್ಲುತ್ತಾರೆ. ಕೇವಲ ಹಳ್ಳಿಯವರಿಗಷ್ಟೇ ಅಲ್ಲ ಆಧುನಿಕ ಮಹಿಳೆಯರಿಗೂ ಆಕೆ ಮಾದರಿಯಾಗಿರುವುದರಿಂದ ತಾಹಶೀಲ್ದಾರನ ಹೆಂಡತಿ ಉಪನ್ಯಾಸಕಿ ಸರಸ್ವತಿ ಕೂಡ ಆಕೆಯ ವ್ಯಕ್ತಿತ್ವಕ್ಕೆ ಮನಸೋತು ಆಕೆಯ ಕಾಲಿಗೆರಗುತ್ತಾಳೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಡತನದ ಅನಿವಾರ‍್ಯತೆಯಿಂದ ಕಚ್ಚೆಹರುಕ ಶೀನಪ್ಪನ ಕೈಯಲ್ಲಿ ಸಿಕ್ಕಿಹಾಕಿಕೊಂಡು ಅವರನ್ನು ಎದುರಿಸುವ ದಿಟ್ಟತನ ಗಂಡಸಿನ ದೌರ್ಜನ್ಯಕ್ಕೆ ಕಡಿವಾಣವೊಡ್ಡುವುದನ್ನು ತೋರಿಸಿದರೂ, ಅದಕ್ಕಿಂತಲೂ ಬಳಿಕ ಶೀನಪ್ಪನವರ ಮೊಮ್ಮಗನೆ ತಹಶೀಲ್ದಾರನಾಗಿ ಅಲ್ಲಿಗೆ ಬರುವುದು ಓದುಗನಿಗೆ ಕುತೂಹಲವನ್ನು ಹುಟ್ಟಿಸುತ್ತದೆ.

ಇಲ್ಲಿಯ ಕತೆಗಳೆಲ್ಲ ಒಂದಕ್ಕಿಂತ ಒಂದು ಭಿನ್ನವಾಗಿದ್ದು ಅವುಗಳೆಲ್ಲಾ ಜೀವನೋತ್ಸಾಹವನ್ನು ತುಂಬಿಸುತ್ತವೆ. ಮಾತ್ರವಲ್ಲ, ಸೀತಾಪುರದ ಸನ್ನಿವೇಶಗಳೆಲ್ಲಾ ಮನಸ್ಸಿನಲ್ಲಿ ಬಹಳ ಕಾಲ ಓದುಗನಲ್ಲಿ ಉಳಿದು ಬಿಡುತ್ತದೆ. ಇದೊಂದು ಅಪರೂಪದ ಕತೆಗಳ ಸಂಕಲವಾಗಿರುವುದರಿಂದ ಸಂಗ್ರಹಯೋಗ್ಯವೂ ಆಗಿದೆ.

Read more!