Thursday, February 26, 2009

ಡಬಲ್ ಸಿಮ್!!


ರಾತ್ರಿ ಸರಿ ಸುಮಾರು ಹನ್ನೊಂದುವರೆ ಗಂಟೆಯ ಸಮಯ! ಪನ್ನಾಲಾಲ್ ತನ್ನದೇ ವ್ಯವಹಾರಿಕ ಲೋಕದಲ್ಲಿ ಮುಳುಗಿದ್ದಾನೆ. ಖರ್ಚು ವೆಚ್ಚಗಳ ರಶೀದಿ, ವೋಚರ್‍‍ಗಳನ್ನು ಜರ್ನಲ್ ಪುಸ್ತಕದಲ್ಲಿ ನಮೂದಿಸಿ, ಲೆಡ್ಜರ್ ಪುಸ್ತಕಕ್ಕೆ ವರ್ಗಾಯಿಸಿ, ನಗದು, ಬ್ಯಾಂಕ್ ಬ್ಯಾಲೆನ್ಸ್‍ಗಳು ತಾಳೆಯಾಗುವವರೆಗೆ ನೆಮ್ಮದಿ ಅನಿಸುತ್ತಿರಲಿಲ್ಲ. ಜಮಾ ಮಾಡಿದ ನಂತರ ಬಂದ ಶಿಲ್ಕು ಮುಂದಿನ ತಾರೀಖಿಗೆ ಬರೆದು ಲೆಕ್ಕದ ಪುಸ್ತಕಗಳನ್ನು ಮುಚ್ಚುವಾಗ ಶ್ರೀವಿದ್ಯಾ ಸಣ್ಣಗೆ ಗೊರಕೆ ಹೊಡೆಯುತ್ತಿರುತ್ತಾಳೆ. ಹೆಂಡತಿಗೆ ತೊಂದರೆಯಾಗದಂತೆ ಟೇಬಲ್ ಲ್ಯಾಂಪ್ ಆರಿಸಿ, ಬೆಡ್ ಸೇರಬೇಕೆಂದಿರುವಾಗ ಆತನ ಮೊಬೈಲ್ ಕೂಗಿತು!ಗಡಿಯಾರದ ಕಡೆಗೆ ಕಣ್ಣು ಹೊರಳಿಸಿದ. ಸಮಯ ಹನ್ನೆರಡು ಮೀರಿದೆ! ಈ ಅಪರಾತ್ರಿಯಲ್ಲಿ ಕರೆ ಮಾಡಿರುವವರು ಯಾರು?ಕುತೂಹಲದಿಂದ ವ್ಯಾಪಾರಿ ಮೊಬೈಲ್‍ನಲ್ಲಿ ಮೂಡಿದ್ದ ಅಪರಿಚಿತ ನಂಬರನ್ನು ತೆರೆದು ಕಿವಿಗೆ ಹಚ್ಚಿ ಮಾಮೂಲು ಪದ ಬಳಸಿದ."ಹಲೋ! ಚೆನ್ನಾಗಿದ್ದೀರಾ? ನಿಮಗೆ ಇನ್ನೂ ನಿದ್ದೆ ಬಂದಿಲ್ಲಾಂತ ಗೊತ್ತು. ಅದಕ್ಕೆ ಕರೆ ಮಾಡ್ದೆ" ಅತ್ತಲಿನಿಂದ ಬಂದ ಹುಡುಗಿಯ ಮಧುರ ಕಂಠಕ್ಕೆ ಇಡೀ ಮೈ ಬೆವರುವಂತಾಯಿತು.

ದೃಷ್ಟಿ ಅನಾಯಾಸವಾಗಿ ನಿದ್ರೆಯ ಆಳಕ್ಕೆ ಇಳಿದ ಶ್ರೀವಿದ್ಯಾಳ ಕಡೆಗೆ ಚಲಿಸಿತು. ಓರೆಯಾಗಿದ್ದ ಬಾಗಿಲನ್ನು ಸಂಪೂರ್ಣ ಮುಚ್ಚಿ ಮೇಜಿನ ಅಂಚನ್ನು ಹಿಡಿದು ನಿಂತ! ಕೈ, ಕಾಲುಗಳು ನಡುಗುತ್ತಿದ್ದುದನ್ನು ಸ್ವರ ಸ್ಪಷ್ಟವಾಗಿ ಸೂಚಿಸಿತು. ತುಟಿಗಳು ಅದುರಿ ಮಾತು ಹೊರಗೆ ಬಂತು."ಯಾರು ನೀನು?""ಅಷ್ಟು ಬೇಗ ಮರ್‍ತು ಬಿಟ್ರಾ? ನಿನ್ನೆ ಸಂಜೆ... ಹಳದಿ, ಪರ್ಪಲ್ ಅಂಚಿನ ಗಾಗ್ರ ಚೋಲಿ... ನೀವೇ ಹೇಳಿದ್ರಿ ಅದು ನನ್ನ ಮೈ ಬಣ್ಣಕ್ಕೆ ಸರಿ ಹೋಗುತ್ತೇಂತಾ... ನನ್ನ ಮೈಮೇಲೆಲ್ಲಾ ಕೈ ಆಡಿಸಿದ್ರಿ ನೀವು..."ತಟ್ಟನೆ ಮಾತು ನಿಂತಿತು.ಪನ್ನಾಲಾಲ್ ಸಂಪೂರ್ಣ ಬೆವತಿದ್ದ! ತೊಟ್ಟಿದ್ದ ರಾತ್ರಿಯುಡುಗೆಯನ್ನು ಬೆವರಿನ ಮೇಲೆ ಸರಿಸಿ ಮೊಬೈಲನ್ನು ಮೇಜಿನ ಮೇಲಿರಿಸಿದ.ಹಿಂದಿನ ದಿನ ಸಂಜೆ ಬಂದ ಗಿರಾಕಿಗಳ ಮುಖವನ್ನು ಒಂದೊಂದಾಗಿಯೆ ನೆನಪಿಸಿಕೊಂಡ. ಯುವತಿ... ಗಾಗ್ರಚೋಲಿ... ನೆನಪು ಮೆಲುಕು ಹಾಕಿಕೊಂಡ. ಎಷ್ಟೋ ಗಿರಾಕಿಗಳಿಗೆ ಹೇಳುವುದಿದೆ, `ಈ ಬಣ್ಣ ನಿಮ್ಮ ಮೈ ಬಣ್ಣಕ್ಕೆ ಸರಿ ಹೊಂದುತ್ತೆ'`ಪನ್ನಾಲಾಲ್ ಗುಜರಾತಿ ವಸ್ತ್ರ ಮಳಿಗೆ' ಆ ಲೊಕ್ಯಾಲಿಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಕಾಲೇಜು ಹುಡುಗಿಯರ ದಿಂಡೇ ಅಲ್ಲಿಗೆ ಬರುತ್ತಿತ್ತು. ಬರುತ್ತಿದ್ದ ಗಿರಾಕಿಗಳ ಕಡೆಗೆ ಕನ್ನಡಕವನ್ನು ಮೂಗಿನ ತುದಿಗೆ ಜಾರಿಸಿ ನೋಡುತ್ತಿದ್ದ. ಆದರೆ... ಸಂಪೂರ್ಣ ವ್ಯವಹಾರದಲ್ಲಿ ಮುಳುಗಿದ್ದವನಿಗೆ ಹೆಂಡತಿಯ `ಬೇಕು' `ಬೇಡ'ಗಳನ್ನೂ ತಲೆಗೆ ತೆಗೆದುಕೊಳ್ಳುವಷ್ಟು ಸಮಯವಿರಲಿಲ್ಲ.ರಾತ್ರಿ ದಿಂಬಿಗೆ ತಲೆಯಾನಿಸಿ ಕಣ್ಣು ಮುಚ್ಚಿದರೂ ನಿದ್ದೆ ಆವರಿಸುವ ಸೂಚನೆಯೆ ಕಾಣಲಿಲ್ಲ. ನಡು ನಡುವೆ ಶ್ರೀವಿದ್ಯಾ ಅತ್ತಿತ್ತ ಹೊರಳುವಾಗ ಕಣ್ಣುಗಳನ್ನು ಅಗಲಕ್ಕೆ ತೆರೆದು ಮುಚ್ಚುತ್ತಿದ್ದ.ಯಾರು ಆ ಹುಡುಗಿ? ತನ್ನ ಮೊಬೈಲ್ ನಂಬರು ತಿಳಿದಿದ್ದಾದರೂ ಹೇಗೆ? ಇದು ತನ್ನ ವೈಯಕ್ತಿಕ ನಂಬರ್. ಶ್ರೀವಿದ್ಯಾಳಿಗೆ ಬಿಟ್ಟರೆ... ಮತ್ಯಾರಿಗೂ ತಿಳಿಯುವ ಹಾಗಿಲ್ಲ. ಕೂಡಲೆ ನೆನಪಾಯಿತು...!ರಿಪೇರಿಗೆಂದು ಮೊಬೈಲನ್ನು ಅಂಗಡಿಯ ಕೆಲಸದಾತ ಚರಣ್‍ನ ಕೈಯಲ್ಲಿ ಕಳುಹಿಸಿದ್ದ! ಆದರೆ... ಚರಣ್ ನಂಬರನ್ನು ತಿಳಿದುಕೊಳ್ಳುವಷ್ಟು ಚುರುಕಿನ ಹುಡುಗನಲ್ಲ. ಮತ್ತೆ... ತಿಳಿದಿರುವ ಸಾಧ್ಯತೆಯಿರುವುದು ರಿಪೇರಿಯ ಅಂಗಡಿಯಾತನಿಗೆ.ಹಾಗಾದರೆ ಆ ರಿಪೇರಿಯ ಅಂಗಡಿಯ ಹುಡುಗಿ ನಂಬರನ್ನು ಗುರುತಿಸಿಕೊಂಡು ಕಾಲ ಕಳೆಯಲು ಫೋನ್ ಮಾಡಿರಬಹುದು. ಅಂತಹ ಧೈರ್ಯದ ಹುಡುಗಿ ಯಾರು? ತಾನೆ ಖುದ್ದಾಗಿ ಅಲ್ಲಿಗೆ ಹೋಗಿ ನೋಡಬೇಕು. ಕತ್ತಲೆಯಲ್ಲಿ ತೆರೆದಿದ್ದ ಕಣ್ಣುಗಳು ಮೆಲ್ಲನೆ ಮುಚ್ಚಿಕೊಂಡವು. ಆ ಕೋಣೆಯೊಳಗೆ ಮತ್ತೊಂದು ಗೊರಕೆ ಫ಼್ಯಾನಿನ ಗಾಳಿಯ ಜೊತೆಗೆ ಬೆರೆಯಿತು.
***ಮರುದಿನ ಪನ್ನಾಲಾಲ್ ಕಾರನ್ನೇರಿ ಮೊದಲು ಭೇಟಿ ನೀಡಿದ್ದು ಮೊಬೈಲ್ ರಿಪೇರಿಯ ಅಂಗಡಿಯವನನ್ನು. ಅಂಗಡಿಯಾತ ಆದರದಿಂದಲೇ ಬರಮಾಡಿಕೊಂಡ."ಬನ್ನಿ ಸಾಬ್, ಏನಾದ್ರೂ ಹೊಸ ಸೆಟ್ ಬೇಕಿತ್ತೇನೋ?""ಇಲ್ಲ..." ಹುಡುಗಿಗಾಗಿ ಸುತ್ತಲೂ ಕಣ್ಣಾಡಿಸಿದ ಪನ್ನಾಲಾಲ್. ಅಂಗಡಿಯ ಮಾಲೀಕ ಮುಂದೆ ಬಂದ."ಸಾಬ್, ಏನಾದ್ರೂ..." ಮಾಲೀಕನ ಮಾತುಗಳು ಮುಗಿಯುವ ಮೊದಲೇ ಕಿಸೆಯಿಂದ ಮೊಬೈಲ್ ಹೊರಗೆ ತೆಗೆದ."ಈ ಮೊಬೈಲ್ ರಿಪೇರಿ ಮಾಡಿರೋದು ಇಲ್ಲಿಯೆ ತಾನೆ?"ಮಾಲೀಕ ಅದನ್ನು ತೆಗೆದುಕೊಂಡು, ಬಿಲ್ ಪುಸ್ತಕವನ್ನು ಪರಿಶೀಲಿಸಿ `ಹೌದು' ಅನ್ನುವಂತೆ ತಲೆಯಲುಗಿಸಿದ."ಯಾಕೆ ಸೆಟ್ ಸರಿಯಾಗಿಲ್ವೆ?""ಸರಿ ಇದೆ... ಇದನ್ನು ಸರಿ ಮಾಡಿರೋ ಹುಡುಗಿ ಯಾರು?" ನೋಟ ನೆಲಕ್ಕೆ ಅಂಟಿಕೊಂಡ ಶೋಕೇಸ್‍ನ ಹಿಂದಕ್ಕೆ ಸರಿದಾಡಿತು."ಹುಡುಗಿನಾ... ಏನು ಹೇಳ್ತಾ ಇದ್ದೀರಾ ಸಾಬ್...?"ಬೋಳು ತಲೆಯ ಮೇಲೆ ಬಡಿದಂತಾಯಿತು ಪನ್ನಾಲಾಲ್‍ಗೆ. ಅಚಾತುರ್ಯದ ಪ್ರಶ್ನೆ ಕೇಳಬಾರದೆನಿಸಿ ತಲೆಯನ್ನು ಒರೆಸಿಕೊಂಡ."ನಿನ್ನೆ ಯಾರೋ ಹುಡುಗಿ ಫೋನ್ ಮಾಡಿದ ನೆನಪು"ಮಾಲೀಕನ ಮುಖದಲ್ಲಿ ವ್ಯಂಗ್ಯದ ನಗು ಸುಳಿಯಿತು. ಬಟ್ಟೆ ವ್ಯಾಪಾರಿಗೆ ಅವಮಾನವಾದಂತಾಯಿತು."ಸಾಬ್, ಯಾರೋ ಹುಡುಗಿ ಫೋನ್ ಮಾಡಿದ್ರೆ... ನೀವು ಆ ನಂಬರಿನ ಕಂಪನಿಯ ಸರ್ವಿಸ್ ಸೆಂಟರ್‍‍ಗೆ ಹೋಗ್ಬೇಕು. ಮೊಬೈಲ್ ರಿಪೇರಿ ಅಂಗಡಿಗಲ್ಲ" ಮಾಲೀಕನ ಮಾತಿಗೆ ಕ್ಷಮಾಪಣೆಯ ಪದ ಬಳಸಿ ಮೆಟ್ಟಿಲುಗಳನ್ನು ಇಳಿದು ಕಾರನ್ನೇರಿದ. ತನ್ನದು ಆತುರದ ತನಿಖೆ!ಆತ ಅಂಗಡಿಗೆ ಬರುವಾಗ ಒಂದೆರಡು ಗಿರಾಕಿಗಳು ಕಾದು ನಿಂತಿದ್ದರು. ಕೆಲಸದಾಳು ಚರಣ್‍ನ ಕೈಯಲ್ಲಿ ಕೀಲಿಯನ್ನು ಕೊಟ್ಟು ಬಾಗಿಲು ತೆರೆದ. ದೇವರ ಮುಂದೆ ಊದಿನ ಕಡ್ಡಿ ಹಚ್ಚಿ ಕ್ಯಾಶ್ ಕೌಂಟರ್‍‍ಗೆ ಬರುವಾಗ ಗಿರಾಕಿಗಳು ಹಣ ಪಾವತಿಸಲು ಬಂದರು. ಮೊದಲ ಗಿರಾಕಿಯ ಹಣವನ್ನು ಕಣ್ಣಿಗೆ ಒತ್ತಿಕೊಂಡು ನಗದು ಪೆಟ್ಟಿಗೆಗೆ ಸೇರಿಸಿ ಮಾಮೂಲು ನಗು ಬೀರಿದ. ಗಿರಾಕಿಗಳು ಹೆಚ್ಚುತ್ತಿದ್ದಂತೆ, ಹಿಂದಿನ ದಿನ ಬಂದ ಕರೆಯನ್ನು ಮರೆತ ವ್ಯಾಪಾರಿ.ಏಕಾಏಕಿ ಎದುರಿಗಿದ್ದ ಟೆಲಿಫೋನ್ ರಿಂಗಣಿಸಿತು. ತನ್ನ ಮಾಮೂಲು ಸ್ವರದಲ್ಲಿ ಹೇಳಿದ."ಪನ್ನಾಲಾಲ್ ಹಿಯರ್...""ಏನ್ರೀ... ನೀವು ಮೊಬೈಲನ್ನು ಮರ್‍ತು ಬಿಟ್ಟು ಹೋದ್ರಾ? ಯಾರೋ ಗಿರಾಕಿಯೊಬ್ಬಳು ಫೋನ್ ಮಾಡಿದ್ಲು. ಮೊನ್ನೆ ಕೊಂಡು ಹೋಗಿದ್ದ ಹಳದಿ-ಪರ್ಪಲ್ ಗಾಗ್ರಚೋಲಿ ಏನೋ ಡಿಫ಼ೆಕ್ಟ್ ಇದೆಯಂತೆ. ಇವತ್ತು ಹಿಂದಕ್ಕೆ ತರ್‍ತಾಳಂತೆ" ಶ್ರೀವಿದ್ಯಾಳ ಮಾತು ಇಡೀ ಮೈಯನ್ನು ಬೆವರುವಂತೆ ಮಾಡಿತು! ಯಾರು ಆ ಗಿರಾಕಿ?"ಸರಿ ... ಮತ್ತೇನೂ ಹೇಳಿಲ್ಲ ತಾನೆ?" ವ್ಯಾಪಾರಿಯ ಸ್ವರ ನಡುಗಿತು. ರಾತ್ರಿಯ ಹಾಗೇ ಅಸಂಬದ್ದ ಮಾತುಗಳನ್ನು ಹೇಳಿದರೆ ಶ್ರೀವಿದ್ಯಾ ಏನೆಂದು ಕೊಂಡಾಳು? ಮೊಬೈಲ್ ಬಿಟ್ಟು ಬಂದಿದ್ದು ತನ್ನ ಮರೆವಿಗೊಂದು ಸಾಕ್ಷಿ!"ಬೇರೆ ಏನು ಹೇಳೋದು? ನೀವು ನನಗಲ್ಲದೆ ಬೇರೆ ಯಾರಿಗೂ ನಿಮ್ಮ ನಂಬರು ಕೊಟ್ಟಿಲ್ಲಾಂತ ಹೇಳಿದ್ರಿ. ಈಗ ನೋಡಿದ್ರೆ...?""ಅದು ಹ್ಯಾಗೆ ಗೊತ್ತಾಯ್ತೋ ನಂಗೆ ಗೊತ್ತಿಲ್ಲ. ನೀನು ಅದನ್ನು ಸ್ವಿಚ್ ಆಫ಼್ ಮಾಡಿಬಿಡು" ಮಡದಿಗೆ ಹೇಳಿ ಫೋನ್ ಇಟ್ಟು, ಕೈ ಬಟ್ಟೆಯಿಂದ ಮುಖ ಒರೆಸಿಕೊಂಡು ಫ಼್ಯಾನ್‍ನ ಗುಂಡಿಯನ್ನು ಅದುಮಿದ."ಚರಣ್" ಹುಡುಗನನ್ನು ಹತ್ತಿರಕ್ಕೆ ಕರೆದ."ಹಳದಿ, ಪರ್ಪಲ್ ಬಣ್ಣದ ಗಾಗ್ರ ತೆಗೆದುಕೊಂಡಿರೋ ಗಿರಾಕಿ ಯಾರೂಂತ ನಿನಗೆ ಗೊತ್ತಾ?""ಸಾಬ್, ಯಾವ ರೇಂಜ್‍ನದ್ದೂಂತ ಹೇಳಿ?""ಗೊತ್ತಿಲ್ಲ... ನೀನೇ ನೋಡಿ ಹೇಳು"ಉದ್ದನೆಯ ರ್‍ಯಾಕ್ ಕಡೆಗೆ ಹೋದ ಹುಡುಗ ಒಂದೊಂದೆ ಬಟ್ಟೆಗಳ ಮೇಲೆ ಕೈಯಾಡಿಸುತ್ತಾ ಏನೋ ತಿಳಿದವರಂತೆ ಕಣ್ಣುಗಳನ್ನು ಅಗಲಿಸಿ ನಿಂತ."ಸಾಬ್, ಗೊತ್ತು... ನಿಮ್ಮ ಮನೆಯ ಎದುರಿನ ಮನೆ ಹುಡುಗಿ. ಪೂಜಾಂತ ಅವಳ ಹೆಸರು"ವ್ಯಾಪಾರಿ ಚಿಂತೆಗೊಳಗಾದ. ಎದುರು ಮನೆಯ ಹುಡುಗಿ! ಹಾಗಿದ್ದರೆ ಶ್ರೀವಿದ್ಯಾಳಿಗೆ ತಿಳಿದಿರುತ್ತಿತ್ತು. ಅವಳೇ ಫೋನ್ ಮಾಡಿ ಹೇಳಿರುವಾಗ... ಹೆಂಡತಿಯನ್ನೇ ಕೇಳಿದರೆ ಹೇಗೆ? ಇದು ತಪ್ಪು ಹೆಜ್ಜೆ... ತಲೆಯ ಮೇಲೆ ಮೊಟಕಿಕೊಂಡ ಪನ್ನಾಲಾಲ್. ಆ ದಿನ ಹಿಂದಕ್ಕೆ ಬರಲಿರುವ ಹಳದಿ-ಪರ್ಪಲ್ ಗಾಗ್ರದ ಹುಡುಗಿಗಾಗಿ ಕಾದ. ಅವಳು ಬರಲೇ ಇಲ್ಲ!ರಾತ್ರಿ ಮನೆಗೆ ಬಂದವನು ಮೊದಲು ಎತ್ತಿಕೊಂಡಿದ್ದು ಮೊಬೈಲನ್ನು. ತನ್ನ ಮಾತನ್ನು ಶಿರಸಾವಹಿಸಿ ಪಾಲಿಸಿದ್ದಾಳೆ ಶ್ರೀವಿದ್ಯಾ. ಖರ್ಚು ವೆಚ್ಚಗಳ ಪುಸ್ತಕಗಳ ಮುಂದೆ ಕುಳಿತು ಮೊಬೈಲ್‍ಗೆ ಜೀವ ತಂದ. ಸಧ್ಯ ಯಾವುದೇ ಮಿಸ್ ಕಾಲಗಳಿಲ್ಲವೆನ್ನುವ ನೆಮ್ಮದಿಯ ಉಸಿರು ದಬ್ಬಿದ. ತನ್ನ ದಿನದ ವಹಿವಾಟಿನ ಬರವಣಿಗೆಯಲ್ಲಿ ತೊಡಗಿದ.ಅದೇ ಸಮಯ... ಹನ್ನೆರಡು ಗಂಟೆ ಐದು ನಿಮಿಷ! ಫೋನ್ ಮೊಳಗಿತು."ಸಾಬ್, ನಾನು... ನೆನಪಾಯ್ತಾ? ಮಧ್ಯಾಹ್ನ ಫೋನ್ ಮಾಡಿದ್ದೆ... ಅರ್ಜೆಂಟ್ ನಿಮ್ಮನ್ನು ಭೇಟಿಯಾಗಬೇಕು. ಕಾರು ತರ್‍ತೀರಾ? ನವನೀತ್ ಲಾಡ್ಜ್ ಹತ್ತಿರ ನಿಂತಿರ್‍ತೀನಿ"ಪನ್ನಾಲಾಲ್ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಬೆವತು ನೀರಾದ. ಶ್ರೀವಿದ್ಯಾ ಗೊರಕೆ ಹೊಡೆಯದೆ ಕುತೂಹಲ ತುಂಬಿದವರಂತೆ ಬಾಗಿಲಿನ ಉದ್ದಕ್ಕೂ ನಿಂತಿದ್ದಳು!ಆತ ಕರೆಯನ್ನು ತುಂಡರಿಸಿ ತಲೆ ತಗ್ಗಿಸಿ ನಿಂತ."ರೀ... ನಿಮ್ಮ ಹೆಣ್ಣು ಗಿರಾಕಿ... ಅದೇ ಹಳದಿ... ಪರ್ಪಲ್ ಗಾಗ್ರ?" ಅವಳ ಮಾತಿನಲ್ಲಿ ವ್ಯಂಗ್ಯ ತುಂಬಿತ್ತು. ವ್ಯಾಪಾರಿ ಉತ್ತರಿಸದೆ ಸುಮ್ಮನೆ ನಿಂತಿದ್ದ."ಹೇಳ್ರಿ... ಯಾರು ಆ ಹೆಣ್ಣು ಗಿರಾಕಿ?" ಉದ್ವೇಗದ ನುಡಿಗೆ ತಲ್ಲಣಿಸಿದ."ನಂಗೆ ಗೊತ್ತಿಲ್ಲ...""ಗೊತ್ತಿಲ್ಲಾಂದ್ರೆ ಏನು? ನಿಮ್ಮ ಪರ್ಸನಲ್ ನಂಬರ್ ಕೊಡುವಷ್ಟು ದೊಡ್ಡ ಗಿರಾಕಿನಾ ಅವಳು? ಅದಲ್ಲದೆ ಇದು ಯಾವ ಸಮಯಾಂತ ಫೋನ್ ಮಾಡೋದಿಕ್ಕೆ?" ಏರಿಳಿತವಿತ್ತು ಮಾತಿನಲ್ಲಿ."ನಂಗೊತ್ತಿಲ್ಲ ಕಣೆ... ಯಾರೋ ಏನೋ... ನಾನು ಪೊಲೀಸ್ ಕಂಪ್ಲೇಂಟ್ ಮಾಡ್ತೀನಿ""ನಂಜೊತೆಗೆ ನಾಟಕ ಮಾಡ್ಬೇಡಿ. ಎಷ್ಟು ಸಮಯದಿಂದ ನಡಿತಾ ಇದೆ ಈ ನಾಟಕ?""ಏನು ನಾಟಕ?""ಆ ಹುಡುಗಿ ಜೊತೆಗೆ ನಿಮ್ಮ ಸರಸ""ನೀನು ನನ್ನ ಮಾತು ನಂಬೋದಿಲ್ವಾ? ಅವಳು ಯಾರೂಂತ ನನ್ಗೆ ಗೊತ್ತಿಲ್ಲ. ಮಧ್ಯಾಹ್ನ ನೀನೇ ಮಾತಾಡ್ದೆ. ಯಾರೂಂತ ಕೇಳಿಲ್ವಾ?""ನನ್ನಲ್ಲೇನು ಹೇಳ್ತಾಳೆ? ನೀವೇ ಬೇಕೂಂತ ಹಠ ಹಿಡಿದ್ಲು. ಮತ್ತೆ ಫೋನ್ ಮಾಡ್ತೀನಿಂತ ಹೇಳಿದ್ಲು. ಅದಕ್ಕೆ ನಾನು ಕಾಯ್ತಾ ಇದ್ದೆ. ನಿಮ್ಮ ಬಣ್ಣ ಬಯಲಾಯ್ತು. ನನ್ನ ಯಾಕೆ ದೂರ ಮಾಡ್ತಾ ಇದ್ದೀರೀಂತ ಈಗ ಗೊತ್ತಾಯ್ತು" ಹೆಣ್ಣಿನ ಸಹಜ ದು:ಖ ಕಣ್ಣೀರಾಗಿ ಹೊರಗೆ ಬಂತು.ಪನ್ನಾಲಾಲ್ ಮೊಬೈಲನ್ನು ಮೇಜಿನ ಮೇಲಿರಿಸಿ ಹಿಂತಿರುಗಿದ.ಮೊಬೈಲ್ ಮತ್ತೆ ರಿಂಗಣಿಸಿತು. ಶ್ರೀವಿದ್ಯಾ ಅವನಿಗೆ ಅವಕಾಶ ಕೊಡದವರಂತೆ ಹಾರಿ ಫೋನನ್ನು ಕೈಗೆತ್ತಿಕೊಂಡಳು."ಹಲೋ..." ಅಂದವಳ ಮುಖದಲ್ಲಿ ಸಿಟ್ಟು ತುಂಬಿತ್ತು. ಏಕಾಏಕಿ ಅತ್ತಲಿಂದ ಬಂದ ದನಿಗೆ ಅವಳ ಮುಖ ಬಿಳಚಿಕೊಂಡಿತು! ಫೋನ್ ಹಿಡಿದ ಕೈಯನ್ನು ಗಂಡನ ಕಡೆಗೆ ಚಾಚಿದಳು. ಪನ್ನಾಲಾಲ್ ಹೆದರುತ್ತಲೇ ಮೊಬೈಲನ್ನು ಕಿವಿಗೆ ಹಚ್ಚಿದ! ಅತ್ತಲಿಂದ ಬಂದ ಮಾತುಗಳನ್ನು ಕೇಳುತ್ತಾ ನಿಶ್ಚೇಟಿತನಂತೆ ನಿಂತ!!!
***ವಿಶಾಲವಾದ ಮೇಜಿನ ಮುಂದೆ ಕುಳಿತಿದ್ದ ಅಧಿಕಾರಿಯ ಮುಖದಲ್ಲಿ ಗಂಭೀರತೆ ತುಂಬಿ ಎದುರಿಗೆ ಕುಳಿತಿದ್ದವರಲ್ಲಿ ಭೀತಿ ಹುಟ್ಟಿಸಿತು."ನಿಮಗೆ ವೃಥಾ ತೊಂದರೆ ಕೊಡೋದಿಕ್ಕೆ ನಾನು ನಿಮ್ಮನ್ನು ಇಲ್ಲಿಗೆ ಕರೆಸಿಲ್ಲಾ ಮಿಸ್ಟರ್ ಪನ್ನಾಲಾಲ್. ಪವಿತ್ರ್‍ಆ ಅನ್ನೋ ಹುಡುಗಿ ಹೊಸ ಹಳದಿ ಬಣ್ಣದ ಗಾಗ್ರ ಚೋಲಿ ಹಾಕಿಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ. ಅವಳ ಕೈಯಲ್ಲಿದ್ದ ಚೀಟಿಯಲ್ಲಿ ನಿಮ್ಮ ಹೆಸರು ಇತ್ತು. ಅದಲ್ದೆ ಅವಳ ಮೊಬೈಲ್‍ನಲ್ಲಿ ನಿಮ್ಮ ಮೊಬೈಲ್ ನಂಬರಿತ್ತು!"ಅಧಿಕಾರಿಯ ಮಾತಿಗೆ ಪನ್ನಾಲಾಲ್‍ಗೆ ಉಗುಳು ನುಂಗುವಂತಾಯಿತು. ಶ್ರೀವಿದ್ಯಾ ಗಂಡನ ಕಡೆಗೆ ಅಸಹ್ಯ ನೋಟ ಬೀರಿದಳು."ಸಾರ್, ನೀವೇನು ಹೇಳ್ತಾ ಇದ್ದೀರಾ? ನನಗೆ ಪವಿತ್ರಾ ಅನ್ನೋ ಹುಡುಗಿಯ ಬಗ್ಗೆ ಏನೂ ಗೊತ್ತಿಲ್ಲ." ಅಸಹಾಯಕತೆಯಿಂದ ಕೈ ತಿರುವಿದ."ಪನ್ನಾಲಾಲ್, ನಿಮ್ಮನ್ನು ನಾನು ಆರೋಪಿಸ್ತಾ ಇಲ್ಲ. ಆ ಹುಡುಗಿಯ ಮೊಬೈಲ್‍ನಲ್ಲಿರುವ ಎಲ್ಲಾ ನಂಬರುಗಳನ್ನೂ ಕಾಂಟ್ಯಾಕ್ಟ್ ಮಾಡ್ತಾ ಇದ್ದೀವಿ. ನನ್ನಿಂದ ಯಾವುದನ್ನೂ ಮುಚ್ಚಿಡ್ಬೇಡಿ. ಮಿಸ್ಸೆಸ್ ಪನ್ನಾಲಾಲ್, ತಾವು ದಯವಿಟ್ಟು ಒಂದು ಹತ್ತು ನಿಮಿಷ ಹೊರಗೆ ಕುಳಿತಿರಿ. ನಾನು ಮತ್ತೆ ನಿಮ್ಮನ್ನು ಕರೆಸ್ತೀನಿ"ಗಂಡನ ಮೇಲೆ ರೇಜಿಗೆ ಪಟ್ಟುಕೊಂಡ ಹೆಣ್ಣು ತಲೆ ತಗ್ಗಿಸಿಕೊಂಡು ಹೊರಗೆ ನಡೆಯಿತು. ಪನ್ನಾಲಾಲ್ ತಲೆಗೆ ಕೈ ಹಚ್ಚಿ ಅಧಿಕಾರಿಯ ಮುಂದಿನ ಪ್ರಶ್ನೆಯನ್ನು ಎದುರಿಸುವುದಕ್ಕೆ ಸಿದ್ಧನಾದ."ಮುಚ್ಚು ಮರೆಯಿಲ್ಲದೆ ಈಗ ಹೇಳಿ... ನಿಮ್ಗೆ ಆ ಹುಡುಗಿ ಹೇಗೆ ಪರಿಚಯಾಂತ?" ಅಧಿಕಾರಿಯ ಪ್ರಶ್ನೆಗೆ ಆಶ್ಚರ್ಯದ ನೋಟ ಬೀರಿದ ಪನ್ನಾಲಾಲ್."ಸಾರ್, ಆ ಹುಡುಗಿ ಯಾರೂಂತ ನನಗೆ ನಿಜವಾಗ್ಲೂ ಗೊತ್ತಿಲ್ಲ""ಹಾಗಾದ್ರೆ... ನೀವು ಆ ಹುಡುಗಿಗೆ ಕರೆ ಮಾಡ್ಲಿಲ್ಲಾಂತ ಹೇಳ್ತೀರಾ?""ನಾನು ಯಾವತ್ತೂ ನನ್ನ ಹೆಂಡತಿಗೆ ಬಿಟ್ರೆ... ಬೇರೆ ಯಾರಿಗೂ ಮೊಬೈಲ್ ನಂಬರನ್ನು ಕೊಡ್ಲಿಲ್ಲ""ನಿಮ್ಮ ಮಾತು ನಂಬ್ತೀನಿ""ನಿಜಾನೇ ಹೇಳ್ತಾ ಇದ್ದೀನಿ" ಮೊಬೈಲನ್ನು ಅಧಿಕಾರಿಯತ್ತ ಹಿಡಿದ. ಅಧಿಕಾರಿ ಮುಗುಳ್ನಕ್ಕ."ಸರಿ, ಇದ್ಯಾಕೆ?" ಮೊಬೈಲನ್ನು ತನ್ನ ಕಡೆಗೆ ಹಿಡಿದಿದ್ದನ್ನು ಕಂಡು ಅಧಿಕಾರಿ ಕೇಳಿದ."ಸಾರ್, ಇದರಲ್ಲಿ ನಾನು ಕರೆ ಮಾಡಿರಬಹುದಾದ ನಂಬರುಗಳು ಇದೆ""ಆ ಹುಡುಗಿಯ ನಂಬರನ್ನು ನೀವು ಡಿಲೀಟ್ ಮಾಡಿರಬಹುದು...""ಇಲ್ಲ, ನಾನು ಯಾವುದನ್ನೂ ಡಿಲೀಟ್ ಮಾಡಿಲ್ಲ""ಪರವಾಗಿಲ್ಲ... ಅದನ್ನು ನಾನು ಬೇರೆ ಮೂಲದಿಂದ ಹುಡುಕ್ತೀನಿ" ಅಧಿಕಾರಿಯ ನೋಟ ತೀಕ್ಷಣವಾಗಿತ್ತು. ಪನ್ನಾಲಾಲ್‍ಗೆ ತಾನು ಯಾವುದೋ ಬಲೆಯೊಳಗೆ ಸಿಕ್ಕಿಬಿದ್ದಂತಾಯಿತು."ಪನ್ನಾಲಾಲ್, ನಿಮಗೆ ಕೊನೆಯದಾಗಿ ಹುಡುಗಿಯಿಂದ ಕರೆ ಬಂದಿರೋದು ಯಾವಾಗ?"ಆತ ಕ್ಷಣ ಹೊತ್ತು ಆಲೋಚನೆಗೊಳಗಾದ. ಇದು ಅಧಿಕಾರಿ ತನ್ನ ಬಾಯಿ ಬಿಡಿಸುವ ತಂತ್ರ!"ನಿನ್ನೆ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಐದು ನಿಮಿಷಕ್ಕೆ...""ಅದಲ್ಲ... ಆ ಹುಡುಗಿಯಿಂದ...""ಅದೇ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಐದು ನಿಮಿಷಕ್ಕೆ""ಅದು ಆ ಹುಡುಗಿಯ ಕರೆಯಲ್ಲ. ಅದು ನಮ್ಮ ಇಲಾಖೆಯಿಂದಲೆ ಮಾಡಿರೋ ಕರೆ..." ಪನ್ನಾಲಾಲ್ ಆಶ್ಚರ್ಯ ತೋರಿದ. ಅಧಿಕಾರಿ ಮುಂದುವರಿಸಿದ."ಆ ಕರೆ... ಅದರ ಮುಂದಿನ ಎರಡು ಕರೆಗಳನ್ನು ಮಾಡಿರೋದು ನಾವೇ... ಆ ಹುಡುಗಿ ಪವಿತ್ರಾ ಸೂಸೈಡ್ ಮಾಡ್ಕೊಂಡಿಲ್ಲ. ಅವಳ ಕೊಲೆಯಾಗಿದೆ. ಅದಕ್ಕಾಗಿ ನಮ್ಮ ಇಲಾಖೆ ಆಕೆಯ ನಂಬರಿಗೆ ಬಂದಿರೋ ಕರೆಗಳನ್ನು ಗುರುತಿಸಿ ಆ ನಂಬರುಗಳಿಗೆಲ್ಲಾ ಕರೆ ಮಾಡಿ ವಿಚಾರಿಸ್ತಿದ್ದೀವಿ. ಕೊನೆಗೆ ಎಲ್ಲಾ ಕರೆಗಳ ವಿವರಗಳನ್ನು ಪರಿಶೀಲಿಸಿ ಕೊಲೆಗಾರನನ್ನು ಪತ್ತೆ ಹಚ್ತೀವಿ""ನಿಮಗೆ ನನ್ನ ಮೇಲೆ ಸಂಶಯ?""ಇದು ಸಂಶಯವಲ್ಲ. ನಮ್ಮ ಕರ್ತವ್ಯ ನಾವು ಮಾಡ್ಬೇಕಲ್ವಾ ಮಿಸ್ಟರ್ ಪನ್ನಾಲಾಲ್. ನೋಡೋಣ ಈ ಕೊಲೆ ಪ್ರಕರಣ ಯಾರನ್ನು ಬೆಟ್ಟು ಮಾಡಿ ತೋರಿಸುತ್ತೇಂತ"ಪನ್ನಾಲಾಲ್‍ಗೆ ಒಳಗೊಳಗೆ ಹೆದರಿಕೆ. ಯಾರಿಗೂ ತನ್ನ ಮೊಬೈಲ್ ನಂಬರ್ ನೀಡದಿದ್ದರೂ ತಾನು ಈ ಇಕ್ಕಟ್ಟಿನಲ್ಲಿ ಹೇಗೆ ಸಿಲುಕಿಕೊಂಡೆ?"ಸಾರ್, ನಾನಂತೂ ಯಾರ ವಿಷಯಕ್ಕೂ ತಲೆ ಹಾಕಿದೋನಲ್ಲ. ನೀವು ರಾತ್ರಿ ಮಾಡಿರೋ ಕರೆಯಿಂದಾಗಿ ನನ್ನ ಹೆಂಡತಿಗೆ ನನ್ನ ಮೇಲೆ ಸಂಶಯ... ನಾನು ಆ ಹುಡುಗಿಯ ಜೊತೆಗೆ ಸಂಬಂಧ ಇಟ್ಕೊಂಡಿದ್ದೀನೀಂತ""ಹೇಗೆ ಹೇಳೋದು? ನೀವು ನಿಮ್ಮ ಹೆಂಡತಿಗೆ ಮೋಸ ಮಾಡ್ಲಿಲ್ಲಾಂತ ತಿಳಿತೀನಿ""ಅಂದ್ರೆ... ನಿಮ್ಗೂ ನನ್ನ ಮೇಲೆ...""ನೋ... ನೋ... ನಾನು ಹಾಗೆ ತಿಳ್ಕೊಂಡಿಲ್ಲ. ಇನ್ನು ಒಂದೆರಡು ದಿನ ಕಳೆಯಲಿ. ಈ ಕೊಲೆ ಮಾಡ್ದೋರು ಯಾರೂಂತ ತಿಳಿಯುತ್ತೆ"ಅಧಿಕಾರಿ ಪಕ್ಕದಲ್ಲಿ ನಿಂತಿದ್ದ ಪೇದೆಯನ್ನು ಕರೆದು ಹೊರಗೆ ಕುಳಿತಿದ್ದ ಶ್ರೀವಿದ್ಯಾಳನ್ನು ಕರೆಯುವಂತೆ ಹೇಳಿದ.ಗಂಡನ ಕಡೆಗೆ ಅನುಮಾನದ ನೋಟ ಬೀರಿ, ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತಳು."ಮಿಸೆಸ್ ಪನ್ನಾಲಾಲ್, ನಾವು ಒಂದು ಕೊಲೆ ಬಗ್ಗೆ ತನಿಖೆ ನಡೆಸ್ತಾ ಇದ್ದೀವಿ. ನಿನ್ನೆ ರಾತ್ರಿ, ಮಧ್ಯಾಹ್ನ ನೀವು ರಿಸೀವ್ ಮಾಡಿರೋ ಕರೆಗಳು ನಮ್ಮ ಡಿಪಾರ್ಟ್ ಮೆಂಟ್‍ನಿಂದ ಮಾಡಿರೋ ಕರೆಗಳು. ಆ ನಂಬರ್ ಮಾತ್ರ ಕೊಲೆಯಾಗಿರೋ ಹುಡುಗಿ ಪವಿತ್ರಾಂದು"ಶ್ರೀವಿದ್ಯಾಳಿಗೆ ಸಮಾಧಾನವಾದರೂ ಗಂಡನ ಮೇಲೆ ಅನುಮಾನ ಪರಿಹಾರವಾಗಲಿಲ್ಲ."ಆದ್ರೆ... ಇವರ ನಂಬರ್ ಆ ಹುಡುಗಿಗೆ ಹೇಗೆ ಸಿಕ್ತು?"ಅಧಿಕಾರಿ ಸಶಬ್ದ ನಗು ಹೊರಡಿಸಿದ."ಆತುರ ಪಡ್ಬೇಡಿ ಮಿಸೆಸ್ ಪನ್ನಾಲಾಲ್... ನೋಡಿ... ಒಂದೆರಡು ದಿನಗಳಲ್ಲಿ ತಿಳಿಯುತ್ತೆ. ನೀವಿನ್ನು ಹೋಗಬಹುದು. ಮತ್ತೆ ನಾನು ಕರೆಯುವಾಗ ನೀವು ಹಾಜರಾಗ್ಬೇಕು" ಅಧಿಕಾರಿಯ ಮಾತು ಕೇಳಿ ಇಬ್ಬರೂ ಎದ್ದು ನಿಂತು ಅವನಿಗೆ ವಂದಿಸಿದರು.
***ಒಂದು ದಿನ ಮಧ್ಯಾಹ್ನದ ಹೊತ್ತು, ಗಿರಾಕಿಗಳು ಯಾರೂ ಇಲ್ಲವೆನ್ನಬಹುದು. ಶ್ರೀವಿದ್ಯಾ ಗಂಡನನ್ನು ನೋಡುವುದಕ್ಕಾಗಿ ಅಂಗಡಿಗೆ ಬಂದವಳು ಹೊಸ ಸೀರೆಗಳನ್ನು ನೋಡುತ್ತಿದ್ದಳು."ನಮಸ್ಕಾರ..." ಏಕಾಏಕಿ ಬಂದ ಮಾತಿಗೆ ಹಿಂತಿರುಗಿದವಳಿಗೆ ಆಶ್ಚರ್ಯವಾಯಿತು. ಪೊಲೀಸ್ ಅಧಿಕಾರಿ ಪನ್ನಾಲಾಲ್‍ನ ಎದುರಿಗೆ ಮುಗುಳ್ನಗು ಬೀರಿ ನಿಂತಿದ್ದ! ಅವಳಿಗೆ ನಡುಕ... ತನ್ನ ಗಂಡನೇ ಕೊಲೆಗಾರನೆ?!ಪನ್ನಾಲಾಲ್ ಹೆಂಡತಿಯತ್ತ ಪೇಚು ಮೋರೆ ಹಾಕಿ ನೋಡಿದ. ಅವಳು ಅಧೈರ್ಯದಿಂದಲೇ ಹತ್ತಿರ ಬಂದು ಅಧಿಕಾರಿಗೆ ವಂದಿಸಿದಳು."ಕೊಲೆಗಾರ ಸಿಕ್ಕಿದ್ದಾನೆ ಮಿಸ್ಟರ್ ಪನ್ನಾಲಾಲ್" ಅಧಿಕಾರಿಯ ಮಾತಿಗೆ ಇಬ್ಬರಿಗೂ ಆಶ್ಚರ್ಯದ ಜೊತೆಗೆ ಆತಂಕ."ಹೌದಾ, ಯಾರೂಂತ ಹೇಳ್ತೀರಾ?""ಹೇಳ್ತೀನಿ...""ಬನ್ನಿ ಸಾರ್, ಒಳಗೆ..." ಪನ್ನಾಲಾಲ್ ಕೆಲಸದವರ ಗಮನ ತನ್ನ ಕಡೆಗೆ ಇರುವುದನ್ನು ನೋಡಿ ಅಧಿಕಾರಿಯನ್ನು ಒಳಗೆ ಕರೆದು ಕುಳ್ಳಿರಿಸಿದ."ನೋಡಿ ಪನ್ನಾಲಾಲ್, ಆ ಹುಡುಗಿ ಕೊಲೆಯಾಗಿರೋದು ಸತ್ಯ. ನಿಮ್ಮ ಹೆಸರು ಕೂಡ ಅಲ್ಲಿ ಬಂದಿರೋದು ಸತ್ಯ. ನೀವು ನಿಮ್ಮ ಮೊಬೈಲನ್ನು ಒಮ್ಮೆ ನೀಡಿದ್ರೆ... ನಾನು ನಡೆದುದನ್ನು ನಿಖರವಾಗಿ ಹೇಳ್ತೀನಿ"ಪನ್ನಾಲಾಲ್ ಅಂಜುತ್ತಲೇ ಮೊಬೈಲನ್ನು ನೀಡಿದ. ಅಧಿಕಾರಿ ಮೊಬೈಲನ್ನು ಸ್ವಿಚ್ ಆಫ಼್ ಮಾಡಿ ತೆರೆದ! ಮತ್ತೆ ಅದನ್ನು ಮುಚ್ಚಿ ಹಿಂತಿರುಗಿಸಿದ. ಪನ್ನಾಲಾಲ್‍ಗೆ ಅರ್ಥವಾಗಲಿಲ್ಲ."ನೀವು ನಿಮ್ಮ ಸೆಟ್‍ಗೆ ಎರಡು ಸಿಮ್ ಹಾಕಿರೋ ಉದ್ದೇಶ ಏನು?"ಶ್ರೀವಿದ್ಯಾ ಗಂಡನ ಮುಖ ನೋಡಿದಳು. ಅವನ ಮುಖದಲ್ಲೂ ಆಶ್ಚರ್ಯ!"ಎರಡು ಸಿಮ್! ಅಂದ್ರೇನು ಸಾರ್?""ಅದೇನೂಂತ ನನ್ನನ್ನೇ ಕೇಳ್ತಿದ್ದೀರಿ. ನಿಮ್ಮ ಮೊಬೈಲ್ ತೆರೆದು ನೋಡಿ. ಅದಲ್ಲದೆ ನಿಮ್ಮ ಮೊಬಲ್‍ನಲ್ಲಿರೋ ಹೆಚ್ಚುವರಿ ಬಟನ್ ನೋಡಿ"ಪನ್ನಾಲಾಲ್ ಪರೀಕ್ಷಿಸಿದ. ಒಂದು ಸಿಮ್ ಇರುವ ಬದಲು ಎರಡು ಸಿಮ್‍ಗಳು!"ಹೇಗೆ ಸಾಧ್ಯ?""ಹೇಗೆ ಸಾಧ್ಯಾಂದ್ರೆ...? ತಂತ್ರಜ್ಞಾನ ಮುಂದುವರಿದಿದೆ ಪನ್ನಾಲಾಲ್. ನೀವು ಒಂದು ಸಿಮ್ ಹಾಕಿಸಿದ್ರಿ... ಅದನ್ನೇ ಉಪಯೋಗಿಸ್ತಿದ್ರಿ. ಆದರೆ ನಿಮ್ಮ ಮೊಬೈಲ್‍ಗೆ ಇನ್ನೊಂದು ಸಿಮ್ ಹೇಗೆ ಬಂತೂಂತ ಆಶ್ಚರ್ಯ ತಾನೆ?""ಹೌದು""ಹಾಂ! ಇಲ್ಲೇ ಕೊಲೆಗಾರ ತನ್ನ ಚಾಣಾಕ್ಷತನ ತೋರಿಸಿದ್ದಾನೆ. ಮೊನ್ನೆ ಅಲ್ಲ... ಕೆಲವು ವಾರಗಳ ಹಿಂದೆ ನಿಮ್ಮ ಮೊಬೈಲ್ ಹಾಳಾಗಿತ್ತು. ನೀವು ಅದನ್ನು ರಿಪೇರಿ ಮಾಡ್ಸೋದಿಕ್ಕೆ ಕಳುಹಿಸಿದ್ರಿ. ಆ ದಿನ ಪವಿತ್ರ್‍ಆ ಅನ್ನೋ ಹುಡುಗಿ ನಿಮ್ಮ ಅಂಗಡಿಗೆ ಬಂದಿದ್ಲು. ನಿಮ್ಮಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಿದ್ಲು. ಅದೇ ದಿನ ಕೊಲೆಗಾರ ಅವಳ ಬೆನ್ನು ಬಿದ್ದ. ಅವಳನ್ನು ಅನುಸರಿಸಿ ಅವಳ ಬಗ್ಗೆ ತಿಳಿದುಕೊಂಡ. ತಾನೆ ಪನ್ನಾಲಾಲ್ ಅಂದುಕೊಂಡು ಅಂಗಡಿಯ ಬಗ್ಗೆ ವಿವರ ನೀಡಿದ. ಜೊತೆಗೆ ನಿಮ್ಮ ಮೊಬೈಲ್ ನಂಬರನ್ನೂ ನೀಡಿದ. ನೀವು ಮಧ್ಯಾಹ್ನದ ಹೊತ್ತು ಮನೆಗೆ ಹೋಗ್ತಾ ಇದ್ದಾಗ ಮೊಬೈಲನ್ನು ಬಿಟ್ಟು ಹೋಗ್ತಾ ಇದ್ರಿ. ಅದು ಕೊಲೆಗಾರನಿಗೆ ಅನುಕೂಲವಾಯ್ತು. ಆ ಸಮಯದಲ್ಲಿ ನಿಮ್ಮ ಮೊಬೈಲ್‍ನಿಂದ ಹುಡುಗಿಗೆ ಎರಡನೆ ಸಿಮ್‍ನಿಂದ ಕರೆ ಮಾಡ್ತಿದ್ದ. ಕೆಲವೊಮ್ಮೆ ಆ ಹುಡುಗಿಯೇ ಅವನಿಗೆ ಕರೆ ಮಾಡ್ತಿದ್ಲು. ಆದ್ರೆ ಅದು ನಿಮ್ಮ ನಂಬರಿಗೆ ಬರ್‍ತಿತ್ತು. ಅವಳಿಗೆ ಬರ್‍ತಿದ್ದ ಕರೆ ಮತ್ತು ಅವಳು ಮಾಡ್ತಿದ್ದ ಕರೆಗಳನ್ನು ನೋಟ್ ಮಾಡಿಕೊಂಡು ತನಿಖೆ ನಡೆಸಿದ್ವಿ. ಎರಡು ಕರೆಗಳು ಒಂದೇ ಸೆಂಟರ್‍‍ನಿಂದ ಬರ್‍ತಿದ್ದವು. ತನಿಖೆ ಮುಂದುವರಿಯಿತು. ನಿಮ್ಮ ನಂಬರಿನ ಕಂಪನಿಯನ್ನು ಭೇಟಿ ಮಾಡಿದಾಗ ಡಬಲ್ ಸಿಮ್ ಇರುವ ಸಾಧ್ಯತೆಯ ಬಗ್ಗೆ ತಿಳಿಯಿತು. ಅದರಿಂದಾಗಿ ನಿಮ್ಮ ಮೇಲೆ ಸಂಶಯ ಹೊಂದಬೇಕಾಯಿತು. ಅದಕ್ಕೆ ನಾವೇ ಆ ಹುಡುಗಿಯ ನಂಬರ್ ಉಪಯೋಗಿಸಿಕೊಂಡು ಕಾಲ್ ಮಾಡಿದೆವು. ನಿಮ್ಮಿಂದ ನಮಗೆ ಬೇಕಾದ ಮಾಹಿತಿ ಸಿಗಲಿಲ್ಲ. ಕೊನೆಗೆ ನಾನು ಬಟ್ಟೆ ಕೊಂಡುಕೊಳ್ಳುವ ನೆಪದಿಂದ ಅಂಗಡಿಗೆ ಬಂದು ಕಾದೆ. ಮಧ್ಯಾಹ್ನದ ಹೊತ್ತು ಕೊಲೆಗಾರ ನಿಮ್ಮ ಮೊಬೈಲ್‍ನಿಂದ ಕರೆ ಮಾಡ್ತಾ ಇದ್ದ... ಹಾಗೆ ಮುಂದುವರಿಯಿತು ತನಿಖೆ""ಅಂದ್ರೆ... ನೀವು ಹೇಳ್ತಾ ಇರೋದು ಕೊಲೆಗಾರ ಇಲ್ಲೇ ಇದ್ದಾನೇಂತನಾ?"ಅಧಿಕಾರಿ ಶ್ರೀವಿದ್ಯಾಳ ಕಡೆಗೆ ತೀಕ್ಷ್ಣ ನೋಟ ಬೀರಿ ನಕ್ಕ. ಅವಳು ಕಂಪಿಸಿದಳು!"ಹೌದು""ಕೊಲೆ ಮಾಡೋ ಉದ್ದೇಶವೇನಿತ್ತು?""ಹೆಣ್ಣಿನ ಸಂಗ ಬೇಕಿತ್ತು! ಆ ಹುಡುಗಿ ಒಪ್ಲಿಲ್ಲ... ಅದಕ್ಕೆ...""ಯಾರಾತ... ಕೊಲೆ ಮಾಡಿರೋನು?" ತಲೆ ಚಿಟ್ಟು ಹಿಡಿದವರಂತೆ ಕಿರುಚಿದ ಪನ್ನಾಲಾಲ್. ಅಧಿಕಾರಿ ಎದ್ದು ನಿಂತು ಹೊರಗೆ ದೃಷ್ಟಿ ಹಾಯಿಸಿದ. ಕೆಲಸದವರೆಲ್ಲಾ ಪನ್ನಾಲಾಲ್‍ನ ಕಡೆಗೆ ನೋಡುತ್ತಿದ್ದರು!ಅಧಿಕಾರಿ ಏಕಾಏಕಿ ಓಡು ನಡುಗೆಯಲ್ಲಿ ಹೊರಗೆ ಬಂದ. ಬಾಗಿಲ ಮರೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ತಟ್ಟನೆ ಹಿಡಿದು ನಿಲ್ಲಿಸಿದ!ಪನ್ನಾಲಾಲ್‍ಗೆ ಆಶ್ಚರ್ಯ! ಶ್ರೀವಿದ್ಯಾ ಬೆದರು ನೋಟ ಬೀರಿದಳು. ಚರಣ್ ಅಧಿಕಾರಿಯ ಕೈಗೆ ಸಿಕ್ಕಿ ಬಿದ್ದಿದ್ದ!!ಶ್ರೀವಿದ್ಯಾ ನೆಮ್ಮದಿಯ ನಿಟ್ಟುಸಿರಿಟ್ಟು ಪನ್ನಾಲಾಲ್‍ನನ್ನು ಗಟ್ಟಿಯಾಗಿ ಹಿಡಿದುಕೊಂಡಳು.
****

No comments: