Sunday, April 17, 2011

ಸಾಂಸ್ಕೃತಿಕ ಸ್ಥಾನ ಪಲ್ಲಟದ ‘ತಿಲ್ಲಾನ’


ಪ್ರಾದೇಶಿಕ ಕಥನ ಪರಂಪರೆಗೆ ಅದರದೇ ಆದ ಮಹತ್ವವಿದೆ. ಆಯಾ ಪ್ರದೇಶದ ಸಾಂಸ್ಕೃತಿಕ, ಪರಂಪರಾತ್ಮಕ ಆಗುಹೋಗುಗಳನ್ನು ಸವಿವರವಾಗಿ ದಾಖಲಿಸುವ ಕಥನ ಶೈಲಿ ಆಯಾಯ ಪರಿಸರದಲ್ಲಿ ಬೆಳೆದು ಬಂದ ಲೇಖಕರ ಸಂಶೋಧನಾತ್ಮಕ ಅಭ್ಯಾಸವನ್ನು ಆದರಿಸಿದೆ. ಅವಿಭಾಜಿತ ದಕ್ಷಿಣಕನ್ನಡ ತುಳುನಾಡಿನ ಅನೇಕ ಸಾಂಸ್ಕೃತಿಕ ಮತ್ತು ಸಾಹಿತ್ಯಕ ರೋಚಕತೆಯನ್ನು ಪಡೆದಿರುವ ಪ್ರದೇಶ. ಇಲ್ಲಿಯ ಪ್ರತೀಯೊಂದು ಸಂಸ್ಕೃತಿಗೂ ಅದರದೇ ಆದ ವೈಶಿಷ್ಟ್ಯತೆಯಿದೆ. ಈ ವೈಶಿಷ್ಟ್ಯವೇ ಇಂದಿಗೂ ಈ ಪ್ರದೇಶದ ಜನರ ನಂಬಿಕೆ, ಆಶಾಭಾವನೆ, ಭಯ ಭಕ್ತಿಯ ಮತ್ತು ಮುಂದುವರೆಸಿಕೊಂಡು ಬಂದಿರುವ ಜೀವನ ಕ್ರಮವನ್ನು ಒಂದು ಸಿದ್ಧ ಮಾದರಿಯಾಗಿ ರೂಪಿಸಿಕೊಂಡು ಬಂದಿರುವುದು ಆಶ್ಚರ್ಯವೇನಲ್ಲ.

‘ತಿಲ್ಲಾನ’ ಕಾದಂಬರಿಯ ಹೆಸರೇ ಆಕರ್ಷಕ ಮತ್ತು ಇಂಪು. ಪ್ರಭಾಕರ ನೀರ್ಮಾರ್ಗ ಅವರ ನಾಲ್ಕನೆಯ ಕೃತಿಯಾದ ಇದು ದಕ್ಷಿಣಕನ್ನಡದ ಸಾಂಸ್ಕೃತಿಕ ಪರಂಪರೆಯೊಂದಿಗಿನ ತಲ್ಲಣವನ್ನು ಮತ್ತು ಮಾರ್ಪಾಡಾಗುತ್ತಿರುವ ಅನಾದಿಕಾಲದ ಆಚರಣೆಗಳನ್ನು ಅಳಿವಿನಂಚಿಗೆ ಸಾಗಿಸುತ್ತೇವೇನೋ ಅನ್ನುವ ಆತಂಕದೊಂದಿಗೆ ಬರೆದಿರುವಂತೆ ಮಾತ್ರವಲ್ಲ, ಸಮಾಜದಲ್ಲಿಯ ಅಂಧಾನುಕರಣೆಯ ‘ವಿಶ್ವವ್ಯಾಪಿ ಪರಿವರ್ತನಾ ಪಿಡುಗು’ ಹಬ್ಬುತ್ತಲೇ ಎಲ್ಲವನ್ನೂ ಸ್ವ್ಯಾಪ್ ಮಾಡಿಕೊಂಡು ಬಿಡುತ್ತದೆಯೆನ್ನುವುದಕ್ಕೆ ಉದಾಹರಣೆಯಂತೆ ಕಾಣುತ್ತದೆ.

ಈ ಕೃತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಅಪೂರ್ವ ಸಂಸ್ಕೃತಿಯಾದ ಭೂತಾರಾಧನೆಯ ಮತ್ತು ಭೂತ ಕಟ್ಟುವವರ ಬಗ್ಗೆ ಸವಿವರವಾದ ವಿಷಯಗಳನ್ನು ದಾಖಲಿಸಲಾಗಿದೆ. ಭೂತಾರಾಧನೆಯೆ ಬದುಕಿನ ಅವಿಭಾಜ್ಯ ಅಂಗವಾಗಿ ಇಂದಿಗೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಎಷ್ಟೋ ಕುಟುಂಬಗಳ ಆಂತರಿಕ ತುಮುಲ, ಒಳಗೊಳಗೆ ನಡೆಯುವ ರಾಜಕೀಯ, ವಿಶ್ವವ್ಯಾಪಿಗೆ ತೆರೆದುಕೊಳ್ಳುವಾಗಿನ ಭಯ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾರದ ಅಸಹಾಯಕತೆ ಇವೆಲ್ಲವನ್ನೂ ಕಾದಂಬರಿ ಬಹಳ ಮಾರ್ಮಿಕವಾಗಿ ತೆರೆದಿಡುತ್ತದೆ. ಸಂಸ್ಕೃತಿಯ ಸೊಗಡು, ಪಾಡ್ದನ, ಅರದಾಲ, ನರ್ತನಗಳ ಮೂಲಕ ಸಮಷ್ಟಿ ಕಲೆಯೆನಿಸಿದ ‘ಭೂತಾರಾಧನೆ’ ಇಂದಿಗೂ ಜನರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ನೆಲೆಸಿದೆಯೆಂದರೆ ಅತಿಶಯೋಕ್ತಿಯಲ್ಲ. ಈ ರೀತಿಯ ಒಂದು ಪ್ರದೇಶದ ಕಲೆಯನ್ನು ಕಾದಂಬರಿಯಾಗಿಸುವಾಗ ಅನೇಕ ವಾಸ್ತವ ಸಂಗತಿಗಳನ್ನು ಕಲೆಹಾಕಬೇಕಾಗಿರುವ ಅವಶ್ಯಕತೆ ಲೇಖಕನಿಗಿದೆ. ಈ ಕಾದಂಬರಿಯಲ್ಲಿ ಆ ರೀತಿಯ ಸಂಶೋಧನಾತ್ಮಕ ರಚನೆ ಎದ್ದು ಕಾಣುತ್ತದೆ.

ಜಾಗತೀಕರಣದ ರಣಕಹಳೆ ಹಳ್ಳಿಯನ್ನೂ ಕಬಳಿಸಿ, ಅಲ್ಲಿಯ ಸಂಸ್ಕೃತಿಯನ್ನು ವಿನಾಶದ ಅಂಚಿಗೆ ಅಥವಾ ಆಧುನಿಕತೆಗೆ ಪರಿವರ್ತಿಸಿ ಮೂಲ ಧಾತುವನ್ನೇ ಬದಲಿಸುವುದು ಸರ್ವೇಸಾಮಾನ್ಯ. ಅಂತಹ ಒಂದು ಕುಸಂಸ್ಕೃತಿಗೆ ಬಲಿಯಾಗುವ ತುಳುನಾಡಿನ ಭೂತಾರಾಧನೆಯನ್ನು ಆಧಾರವಾಗಿಟ್ಟುಕೊಂಡು, ಭೂತ ಕಟ್ಟುವವರ ಜೀವನವನ್ನು ತೆರೆದಿಡುವ ಕಾದಂಬರಿಯ ಮುಖ್ಯ ವಾಹಿನಿಯಲ್ಲಿ ಹಿರಿಯನಂತಹ ಆದರ್ಶ ವ್ಯಕ್ತಿಯೊಬ್ಬ ಕಾಣಿಸಿಕೊಳ್ಳುತ್ತಾನೆ. ಒಳಗೊಳಗೆ ನಡೆಯುವ ರಾಜಕೀಯದಂತಹ ದೊಂಬರಾಟದಲ್ಲಿ ಗುರುವ ಮತ್ತು ಜೋಯಿಸರಂತಹ ವ್ಯಕ್ತಿಗಳೇ ಸಾಂಸ್ಕೃತಿಕ ನೆಲೆಯನ್ನು ಗುರಿತಪ್ಪಿಸುವ ಕಾರ್ಯಕ್ಕೂ ಇಳಿಯುತ್ತಾರೆ. ಒಟ್ಟಿನಲ್ಲಿ ತನಗೆ ಪರಂಪರಾಗತವಾಗಿ ಬಂದಿರುವ ಭೂತಕಟ್ಟುವ ಕಾಯಕವನ್ನು ತನ್ನ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕೆನ್ನುವುದು ಹಿರಿಯನಂತಹ ವ್ಯಕ್ತಿಯ ಆಸೆ. ಆದರೆ ಆಧುನಿಕತೆಗೆ ತಕ್ಕಂತೆ ಜೀವನ ಶೈಲಿಯನ್ನು ಒಪ್ಪಿಕೊಳ್ಳುವಾಗ ಆಗುವ ಬದಲಾವಣೆಗಳನ್ನು ಸ್ವೀಕರಿಸುತ್ತಾ ಸಮಸ್ಯೆಗಳತ್ತ ಮುಖ ಮಾಡುವುದು ಇಲ್ಲಿಯ ಮುಖ್ಯ ತಲ್ಲಣ. ಮಕ್ಕಳಿಬ್ಬರೂ ಪೇಟೆಯ ಬದುಕನ್ನು ನೆಚ್ಚಿಕೊಂಡು ಹಿರಿಯನ ಆಸೆಗಳಿಗೆ ತಣ್ಣೀರೆರೆಚಿ ಅಲ್ಲೂ ತಮ್ಮನ್ನು ಗುರುತಿಸಿಕೊಳ್ಳದೆ ಹೋಗುವುದು ಅಡ್ಡ ದಾರಿ ಹಿಡಿದವರಿಗೆ ತಕ್ಕುದಾದ ಶಾಸ್ತಿಯೆನ್ನುವಂತೆ ಕಾಣುತ್ತದೆ. ಇತ್ತ ಮಗಳನ್ನು ಕೂಡ ವಿದ್ಯಾವಂತಳನ್ನಾಗಿಸಿದ ಹಿರಿಯ ಅವನ ವಿರೋಧವಾಗಿ ಅವಳು ಬೇರೆ ಜಾತಿಯವನೊಬ್ಬನನ್ನು ಮದುವೆಯಾಗುತ್ತೇನೆನ್ನುವುದು ಮತ್ತೊಂದು ಆಘಾತಕಾರಿ ಬೆಳವಣಿಗೆಯಾಗಿ ತೋರಿ ಅವನು ವಿರೋಧ ವ್ಯಕ್ತಪಡಿಸುತ್ತಾನೆ. ತನ್ನ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲು ಅಂಗರನೆನ್ನುವ ಒಬ್ಬ ತನ್ನದೇ ಜಾತಿಯ ಹುಡುಗನನ್ನು ಕರೆಸಿಕೊಂಡು ತನ್ನ ವೃತ್ತಿಯ ಸಮಸ್ತವನ್ನು ಅವನಿಗೆ ಧಾರೆಯೆರೆಯುತ್ತಾನೆ. ಹಾಗೆಯೇ ಮಗಳನ್ನು ಅವನಿಗೆ ಕೊಟ್ಟು ತನ್ನ ಪರಂಪರೆಯೊಂದನ್ನು ಅಳಿಯನಾಗುವವನ ಮೂಲಕ ಮುಂದುವರೆಸಿಕೊಂಡು ಹೋಗಲು ಬಯಸುತ್ತಾನೆ. ಆದರೆ ಮಗಳು ಕಲಿತು ಪ್ರೀತಿಯೆನ್ನುವ ಕೂಪಕ್ಕೆ ಬಿದ್ದಿರುತ್ತಾಳೆ. ಕೊನೆಗೂ ಹಿರಿಯನ ಆಸೆಗಳು ಕೈಗೂಡುವುದೇ ಇಲ್ಲ. ಇದು ಗಟ್ಟಿ ಕಥಾಹಂದರವಾದರೆ ಕೆಲವೊಂದು ಕಡೆ ಘಟನೆಗಳು, ವಿಷಯಗಳು ಪುನರಾವರ್ತನೆಯಾಗಿರುವುದು ಓದುಗನನ್ನು ತಾಳ್ಮೆ ತಪ್ಪಿಸುತ್ತವೆ. ಕೆಲವೊಮ್ಮೆ ಪುಟಭರ್ತಿಗಾಗಿ ಬರೆದವೇನೋ ಅನ್ನುವ ಸಂಗತಿಗಳು ಇವೆ.

ಅರ್ಧದವರೆಗೂ ಕಾದಂಬರಿ ಆಸಕ್ತಿಯಿಂದ ಓದಿಸಿಕೊಂಡು ಹೋಗುವುದಲ್ಲದೆ ಮಾಹಿತಿಪೂರ್ಣವಾಗಿದೆ. ಆದರೆ ಬಳಿಕ ಇಲ್ಲಿ ಕೆಲವೊಂದು ವ್ಯತಿರೀಕ್ತಗಳು ಕಾದಂಬರಿಯನ್ನು ಸ್ವೀಕರಿಸುವಲ್ಲಿ ತೊಡಕಾಗಿದೆ. ಉದಾಹರಣೆಗೆ ಹಿರಿಯನ ಮಗಳು ಚೋಮಿಲಿ, ಪೇಟೆ ಹೈದ ಕೃಷ್ಣ ಆಲಿಯಾಸ್ ಕಿಟ್ಟಿಯ ಕಣ್ಣಿಗೆ ಬೀಳುತ್ತಲೇ ಶ್ಯಾಮಿಲಿಯಾಗುವುದು ಒಂದು ರೀತಿಯ ಅಸಂಗತವೆನಿಸುತ್ತದೆ. ಚೋಮಿಲಿಯೆನ್ನುವ ಹೆಸರೇ ಇದ್ದಿದ್ದರೆ ಕೃಷ್ಣನಿಗೆ ಪ್ರೀತಿ ಉಂಟಾಗುತ್ತಿರಲಿಲ್ಲವೇನೋ! ಚೋಮಿಲಿಯನ್ನು ಒಪ್ಪಿಕೊಂಡ ಓದುಗನಿಗೆ ಇದೊಂದು ಕೃತಕ ಬೆಳವಣಿಗೆ ಅನಿಸದಿರದು. ಇನ್ನು ಎರಡನೆಯದಾಗಿ ಕೆಲವೊಂದು ಪಾತ್ರಗಳು ಧುತ್ತನೆ ಪ್ರತ್ಯಕ್ಷವಾಗಿ ಅನಗತ್ಯ ಅವುಗಳ ಬಗ್ಗೆ ಕಥೆಯಿಂದ ಹೊರಗೆ ಬೆಳವಣಿಗೆಯನ್ನು ಪಡೆದು ಕಾದಂಬರಿಯ ಓದಿಗೆ ಅಡ್ಡಿಯೆನಿಸುತ್ತವೆ. ಇಲ್ಲೂ ಲೇಖಕರು ಅನಗತ್ಯ ವಿಚಾರಗಳನ್ನು ಆ ಪಾತ್ರಗಳ ಮೂಲಕ ಓದಿಸುತ್ತಾರೆಂದು ಓದುಗನಿಗೆ ಅನಿಸುತ್ತದೆ. ಉದಾಹರಣೆಗೆ ಕೃಷ್ಣನ ಪಾತ್ರ. ಆತ ಪೋಲಿಯಾಗಿದ್ದು ತನ್ನ ಶ್ರೀಮಂತಿಕೆಯಿಂದಲೇ ವಿದ್ಯೆ ಗಳಿಸಿಕೊಂಡವನು. ಚೋಮಿಲಿ (ಶ್ಯಾಮಿಲಿ)ಯನ್ನು ನೋಡುತ್ತಲೇ ಅವನು ಅವಳನ್ನು ಅಪಾರ್ಥಮಾಡಿಕೊಂಡು ಸುಖ ಪಡಬೇಕೆಂದುಕೊಂಡವನು. ಆದರೆ ಅನಿರೀಕ್ಷಿತವೆನ್ನುವಂತೆ ಅವಳನ್ನು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಳ್ಳುವುದು ಕೂಡ ಕಥೆ ಜಾಳುಜಾಳಾದಂತೆ ಭಾಸವಾಗುತ್ತದೆ.

ಇಂತಹ ಆಭಾಸಗಳ ನಡುವೆಯೂ ‘ತಿಲ್ಲಾನ’ ಕಾದಂಬರಿ ಪ್ರಾದೇಶಿಕ ಸೊಗಡನ್ನು ನಿರೂಪಿಸುತ್ತಾ ಬೆಳವಣಿಗೆ ಪಡೆಯುವುದು ಒಂದು ರೀತಿಯಲ್ಲಿ ಒಂದು ಪ್ರದೇಶದ ಸಾಂಸ್ಕೃತಿಕ ಚಟುವಟಿಕೆಯ ಬಗ್ಗೆ ಮಾಹಿತಿ ಒದಗಿಸಿದಂತೆ ಮತ್ತು ಅಲ್ಲಿಯ ಸೊಬಗನ್ನು ತಿಳಿಸಿಕೊಡುವಂತೆ ಕಾಣಿಸುತ್ತದೆ. ಒಂದು ಪ್ರಾದೇಶಿಕ ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾದರೂ ಇಂತಹ ಕೃತಿಗಳನ್ನು ಓದಲೇಬೇಕು.

1 comment:

ragat paradise said...

nice..

visit my blog @ http://ragat-paradise.blogspot.com

RAGHU