Thursday, April 14, 2011

ಶೂದ್ರ ತಪಸ್ವಿ - ಕುವೆಂಪು ನಾಟಕ


ಕುವೆಂಪು ಅವರ ಸಾಹಿತ್ಯ ಸೃಷ್ಟಿ ಗಟ್ಟಿನೆಲೆ ಪಡೆದದ್ದೇ ಅವರ ನಾಟಕಗಳಿಂದಾಗಿ. ಅವರು ಒಟ್ಟು 14 ನಾಟಕಗಳನ್ನು ಬರೆದಿದ್ದಾರೆ. ಸೃಜನಶೀಲ ಪ್ರತಿಭೆ ಕಾವ್ಯಕ್ಕಿಂತಲೂ ಹೆಚ್ಚಾಗಿ ನಾಟಕದಲ್ಲಿಯೇ ಕಾಣಿಸಿಕೊಳ್ಳುತ್ತದೆ ಎಂಬುವುದಕ್ಕೆ ಕುವೆಂಪುರವರೇ ಸಾಕ್ಷಿಯಾಗಿದ್ದಾರೆ.

ಕುವೆಂಪು ಅವರು ಕನ್ನಡಕ್ಕೆ ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ಮತ್ತು ಬಲಿದಾನ ಎಂಬ ಮೂರು ಮಹತ್ವದ ನಾಟಕಗಳನ್ನು ಕೊಟ್ಟಿದ್ದಾರೆ. ಮಾನವೀಯ ಅಂತ:ಕರಣದ ವೈಚಾರಿಕ ನಿಲುವು ಈ ನಾಟಕಗಳ ಪ್ರಧಾನ ಅಂಶ. ಪ್ರಧಾನ ಸಂಸ್ಕೃತಿಯ ಧಾರೆಗೆ ಪ್ರತಿಕ್ರಿಯೆಯಾಗಿ ಪರ್ಯಾಯ ಸಂಸ್ಕೃತಿ ನಿರ್ಮಾಣಗೊಂಡಿರುವ ವಿಧಾನ ಇಲ್ಲಿನ ಮುಖ್ಯ ಬೆಳವಣಿಗೆ.

ಶೂದ್ರ ತಪಸ್ವಿ ನಾಟಕದಲ್ಲಿ ಪ್ರತಿಭಟನಾತ್ಮಕ ನೆಲೆ ಸ್ಪಷ್ಟವಾಗಿ ರೂಪುಗೊಂಡಿದೆ. ಹೊಸ ಸಾಮಾಜಿಕ ಮೌಲ್ಯಗಳನ್ನು ಸಮಕಾಲೀನ ವಿದ್ಯಮಾನಗಳಿಗೆ ಹೋಲಿಸಿ ನೋಡುವ ಕ್ರಮವನ್ನು ಕುವೆಂಪು ಇಲ್ಲಿ ಎತ್ತಿ ಹಿಡಿದಿದ್ದಾರೆ. ‘ಶೂದ್ರ ತಪಸ್ವಿ’ ಎಂಬ ಹೆಸರೇ ಒಂದು ಸಮರ್ಥ ಪ್ರತಿಮೆಯಾಗಿ ಕಾಣುತ್ತದೆ. ಅದಲ್ಲದೆ, ಈ ಶೀರ್ಷಿಕೆಯೇ ಬಹು ಬಗೆಯ ಅರ್ಥಗಳನ್ನು ಹೊರಡಿಸುತ್ತದೆ. ‘ಶೂದ್ರ’ ಹಾಗೂ ‘ತಪಸ್ವಿ’ ಎಂಬ ಸ್ಥಾಪಿತ ಪದಗಳ ವಿರುದ್ಧಾರ್ಥಕಗಳನ್ನು ಬುಡಮೇಲು ಮಾಡಿ ಹೊಸ ಬಗೆಯ ಅರ್ಥವನ್ನು ಹೊರಡಿಸಲು ಇವು ಪ್ರಯತ್ನಿಸುತ್ತವೆ. ಈ ಅರ್ಥ ‘ರಾಮ’ ಅಥವಾ ‘ಧರ್ಮಶ್ರದ್ಧೆ’ಯನ್ನು ಸಂಪೂರ್ಣವಾಗಿ ತ್ಯಜಿಸಿದ ಸೃಜನಶೀಲ ದೃಷ್ಟಿಯೂ ಆಗಿರಬಹುದೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇದಕ್ಕಾಗಿ ನಾವು ಕುವೆಂಪು ಅವರ ಬದುಕು ಮತ್ತು ಕೃತಿಗಳನ್ನು ಅವುಗಳ ಬಾಹುಳ್ಯದಲ್ಲಿಯೇ ಕಾಣಬೇಕಾಗಿರುವ ಅನಿವಾರ್ಯತೆಯಿದೆ.

ಈ ನಾಟಕ ‘ಸೆಕ್ಯುಲಾರಿಸಂ’ಗೆ ತುತ್ತಾಗಿದ್ದುದು ಮಾತ್ರ ವಿಷಾದನೀಯ. ಸ್ವತ: ಕುವೆಂಪುರವರೆ ಮಾರ್ನುಡಿಯಲ್ಲಿ ಈ ವಿಷಾದವನ್ನು ತೋಡಿಕೊಂಡು ನಾಟಕದ ಹಿನ್ನಲೆ ಯಾವ ರೀತಿಯಲ್ಲಿ ‘ಜಾತಿಗರ್ವಾಂಧತೆ’ಯನ್ನು ಮೀರಿ ನಿಂತಿದೆಯೆನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಕುವೆಂಪು ಅವರ ಹುಡುಕಾಟದ ವಸ್ತುಗಳೆಲ್ಲ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನಾಧರಿಸಿದ್ದು. ಇಂತಹ ಮಹಾನ್ ಕೃತಿಗಳು ಮೌಲ್ಯ ಸಂಘರ್ಷಗಳು, ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧಗಳು ಮತ್ತು ಮುಖ್ಯವಾಗಿ ಪುರೋಹಿತಶಾಹಿಯ ನಿಯಂತ್ರಣಗಳನ್ನೆಲ್ಲಾ ಮನುಷ್ಯನ ಬದುಕಿಗೆ ಅನಿವಾರ್ಯವೆಂಬತೆ ರೂಪುಗೊಂಡಿರುವುದು ಅಚ್ಚರಿಯ ವಿಷಯ.

ಪ್ರಸ್ತುತ ‘ಶೂದ್ರ ತಪಸ್ವಿ’ ನಾಟಕವು ವಾಲ್ಮೀಕಿ ರಾಮಾಯಣದ ‘ಉತ್ತರ ಕಾಂಡ’ದಿಂದ ಆಯ್ಕೆಗೊಂಡಿರುವಂತದ್ದು. ಇಲ್ಲಿನ ‘ಶಂಬೂಕ ಪ್ರಸಂಗ’ವನ್ನು ನಾಟಕದಲ್ಲಿ ಸಮಕಾಲಿನ ಸಮಸ್ಯೆಯೊಂದರ ಮರುಸೃಷ್ಟಿಯೆನ್ನುವಂತೆ ಬದಲಾಯಿಸಿ ಸಮಾಜಮುಖಿ ಸಮಸ್ಯೆಯನ್ನು ಸರಳೀಕರಿಸಿದ್ದಾರೆ. ಇದರಿಂದಾಗಿ ಸಮಕಾಲೀನ ಸಮಸ್ಯೆಯೊಂದಕ್ಕೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡಿದ್ದಾರೆಂದರೆ ಸುಳ್ಳಲ್ಲ.

ಶೂದ್ರ ತಪಸ್ವಿಯಲ್ಲಿ ಮೂರು ದೃಶ್ಯಗಳಿವೆ. ಮೊದಲ ದೃಶ್ಯದಲ್ಲಿ ಶಂಬೂಕ ಋಷಿಯ ಆಶ್ರಮಕ್ಕೆ ಕಾವಲು ನಿಂತ ವೃಕ್ಷ ಭೈರವ ಮತ್ತು ಮೃತ್ಯು ದೇವತೆಯ ಮುಖಾಮುಖಿಯ ಚಿತ್ರಣವಿದೆ. ಎರಡನೆ ದೃಶ್ಯ ಅಯೋಧ್ಯೆಯಲ್ಲಿ ನಡೆಯುವ ಪ್ರಸಂಗ. ಇಲ್ಲಿ ಬ್ರಾಹ್ಮಣನೋರ್ವ ಅಳುತ್ತಾ ತನ್ನ ಮಗನ ದಾರುಣ ಸಾವು ರಾಮರಾಜ್ಯದಲ್ಲಿ ಸೋಜಿಗವನ್ನು, ವಿಷಾದವನ್ನು ಮತ್ತು ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎನ್ನುವ ಸಂಕಟದಲ್ಲಿ ಹೇಳುತ್ತಾನೆ. ರಾಮ ಈ ಮಾತನ್ನು ಕೇಳಿ ಬ್ರಾಹ್ಮಣನ ಜೊತೆಗೆ ಮಾತಿಗಿಳಿಯುತ್ತಾನೆ. ಆಗ ಶೂದ್ರನೊಬ್ಬ ತಪ್ಪಸಿಗೆ ಕುಳಿತಿರುವುದೇ ಅಧರ್ಮಕ್ಕೆ ಕಾರಣವಾಗಿದೆ, ಹಾಗಾಗಿಯೆ ತನ್ನ ಮಗನ ದಾರುಣ ಸಾವು ಸಂಭವಿಸಿದೆ ಎಂದು ಆರೋಪಿಸುತ್ತಾನೆ.

ಮೂಲ ರಾಮಾಯಣದ ಕಥೆಯಲ್ಲಿ ಇಂತಹ ವಿಷಯವನ್ನು ಕೇಳಿ ತಕ್ಷಣ ರಾಮ ಮಂತ್ರಿ ಮಂಡಲದ ಸಭೆಯನ್ನು ಕರೆಯುತ್ತಾನೆ. ಬ್ರಾಹ್ಮಣನ ಅತ್ಯಾರೋಪದ ದೂರಿನ ಬಗ್ಗೆ ಸಭೆಯಲ್ಲಿ ವಿಚಾರಿಸುತ್ತಾನೆ. ಆಗ ನಾರದರಿಂದ ಶೂದ್ರನೊಬ್ಬನ ತಪ್ಪಸಿನ ಬಗ್ಗೆ ತಿಳಿಯುತ್ತದೆ. ರಾಮ ಶೂದ್ರ ತಪಸ್ವಿಯನ್ನು ಹುಡುಕುತ್ತಾ ಹೋಗುತ್ತಾನೆ. ಅಲ್ಲಿ ಶಂಬೂಕನೆನ್ನುವ ಶೂದ್ರನು ತಪಸ್ಸಿಗೆ ಕುಳಿತಿರುವುದು ತಿಳಿಯುತ್ತದೆ. ಅವನನ್ನು ವಿಚಾರಿಸುವಾಗ ಅವನು ಶೂದ್ರನೆಂದು ತಿಳಿಯುತ್ತದೆ. ರಾಮನ ಖಡ್ಗ ಅವನ ತಲೆಯನ್ನು ಕಡಿದುರುಳಿಸುತ್ತದೆ. ಶಂಬೂಕ ಸಾಯುತ್ತಾನೆ.

ಆದರೆ ಕುವೆಂಪು ನಾಟಕದಲ್ಲಿ ಶಂಬೂಕನ ಪಾತ್ರಕ್ಕೆ ಸರಿಯಾದ ರೀತಿಯಲ್ಲಿ ಮಾನವೀಯ ನೆಲೆಯಲ್ಲಿ ನ್ಯಾಯ ಒದಗುತ್ತದೆ. ವರ್ಣಭೇದ ನೀತಿಯನ್ನು ಸಮಾಜಮುಖಿಯಾದ ಸಮಸ್ಯೆಯೊಂದಕ್ಕೆ ಪರಿಹಾರವೆಂಬಂತೆ ಬ್ರಾಹ್ಮಣ ಸಮೇತನಾಗಿ ಎಲ್ಲರೂ ಶೂದ್ರ ತಪಸ್ವಿಯನ್ನು ಒಪ್ಪಿಕೊಳ್ಳುವಂತೆ ಚಿತ್ರಿಸಿದ್ದಾರೆ. ಅದು ಶೂದ್ರ ತಪಸ್ವಿಯ ಬಳಿ ಹೋದ ಮೃತ್ಯು ಶಾಂತ ರೀತಿಯಲ್ಲಿ ಅವನಿಗೆ ವಂದಿಸಿ ಮತ್ತೆ ಬ್ರಾಹ್ಮಣನತ್ತ ತಿರುಗುತ್ತದೆ. ಆಗ ಬ್ರಾಹ್ಮಣ, ‘ಗತಿಯೇನು ಬಟ್ಟೆದೋರೆಯ್’ ಎಂದು ಕೇಳುವಾಗ ರಾಮ, ‘ನೀನು ಯಾರನ್ನು ಆವಾಜ್ಞೆಗೈದೆಯೋ, ಅವನನ್ನೇ ಕೇಳು. ಸನ್ಮತಿಯ ಸತ್ಕೃತಿಗೆ ಶಾಸ್ತ್ರದ ನೆರವು ಬೇಕಿಲ್ಲ. ಎಲ್ಲವನ್ನೂ ಯುಕ್ತಾ ಯುಕ್ತತೆಯಿಂದ ಆಲೋಚಿಸಿದರೆ ತಿಳಿಯುತ್ತದೆ’ ಅನ್ನುತ್ತಾನೆ. ಇದು ಮೂರನೆ ದೃಶ್ಯದಲ್ಲಿ ನಡೆಯುವ ಘಟನೆ.

ಇಲ್ಲಿ ಸೀತೆಯನ್ನು ಪರಿತ್ಯಜಿಸಿದ ರಾಮ, ಬ್ರಾಹ್ಮಣನ ಮಾತಿನ ನಿಂದನೆಯನ್ನು ಸಹಿಸಿಕೊಳ್ಳದೆ ಅವನ ಪರವಾಗಿ ನಿಲ್ಲುತ್ತಾನೆ. ಶಂಬೂಕ ತಪಸ್ವಿಯ ಆಶ್ರಮವಿರುವ ಕಾಡೇ ರಾಮನಿಗೆ ಸೀತೆಯಾಗಿ ಗೋಚರಿಸುತ್ತದೆ. ತುಂಬು ಬಸುರಿಯಾದ ಸೀತೆಯನ್ನು ಕಾಡಿಗಟ್ಟಿದ ಕೈ ಮತ್ತು ಶಂಬೂಕನನ್ನು ಕೊಲ್ಲಬೇಕಾದ ಬಲಗೈಗೆ ಕರುಣೆಯಿದೆಯೆ? ಎಂದು ರಾಮ ಪ್ರಶ್ನಿಸುವುದು ಭವಭೂತಿಯ ‘ಉತ್ತರ ರಾಮ ಚರಿತ’ ನಾಟಕದಲ್ಲಿ. ಇದು ಭವಭೂತಿಯ ಅಹಿಂಸಾಪರ ವಾದವಾದರೆ ಕುವೆಂಪು ನಾಟಕದಲ್ಲಿ ಸಮಕಾಲೀನ ಸಮಸ್ಯೆಗೆ ಮುಖಾಮುಖಿಯಾಗಿ ವರ್ಣತಾರತಮ್ಯವನ್ನು ಮಾಡದೆ ನ್ಯಾಯ ಒದಗುವಂತೆ ಮಾಡಲಾಗಿದೆ.

ಇಡೀ ಕೃತಿಯು ಹಳೆಗನ್ನಡದಲ್ಲಿದೆ ಮತ್ತು ಛಂದೋಬದ್ಧವಾಗಿದ್ದು ಸಶಬ್ದವಾಗಿ ಓದಿಕೊಂಡು ಪದಪದಗಳನ್ನು ಆಸ್ವಾದಿಸಬಹುದು. ಕುವೆಂಪು ಅವರು ಬಿನ್ನವಿಸಿಕೊಳ್ಳುವಂತೆ ಈ ನಾಟಕವನ್ನು ವರ್ಣಬೇಧದಡಿಯಲ್ಲಿಟ್ಟು ಓದುವ ಬದಲು ಶುದ್ಧ ಬುದ್ಧಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಓದಿದರೆ ಕೃತಿಗೂ, ಕೃತಿಕಾರನಿಗೂ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹೇಳುತ್ತಾರೆ.

ಈ ನಾಟಕವು ಮಂಜುನಾಥ್ ಬಡಿಗೇರ ಅವರ ದಕ್ಷ ನಿರ್ದೇಶನದಲ್ಲಿ ‘ನಿನಾಸಂ’ ತಿರುಗಾಟದ ನಾಟಕವಾಗಿ ಯಶಸ್ವೀ ನಾಟಕಗಳಲ್ಲೊಂದಾಗಿರುವುದು ಶ್ಲಾಘನೀಯ. ಹಳೆಗನ್ನಡದಲ್ಲಿಯೇ ಸಂಭಾಷಣೆಯನ್ನು ಹೇಳುವ ಸ್ಪಷ್ಟತೆ ಜನಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿದೆ. ಪ್ರತೀಯೊಬ್ಬ ಕಲಾವಿದನು ಪಾತ್ರಕ್ಕೆ ಜೀವ ತುಂಬಿದ್ದಾನೆ. ನಾಟಕ ನೋಡುವುದಕ್ಕೂ ಓದುವುದಕ್ಕೂ ಯಾವುದೇ ಅಭಾಸ ಇಲ್ಲಿ ಕಾಣುವುದಿಲ್ಲ.

No comments: