Wednesday, April 6, 2011

ಕಂಬಾರರ - ಜೀಕೆ ಮಾಸ್ತರರ ಪ್ರಣಯ ಪ್ರಸಂಗ


ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ ಎಷ್ಟೊಂದು ಬರೆದರು ಮುಗಿಯದ ಅಗಾಧತೆ ಆ ಪದಗಳಿಗಿವೆ. ಕಾಳಿದಾಸನಿಂದ ಹಿಡಿದು ಇಲ್ಲಿಯವರೆಗೂ ಅದೇಷ್ಟೋ ಹೊಸ ಹೊಸ ವ್ಯಾಖ್ಯಾನಗಳು ಆ ಶಬ್ದಗಳನ್ನು ಅಲಂಕರಿಸಿವೆ. ಅದೇ ರೀತಿಯ ಒಂದು ಹೊಸ ಪ್ರಸಂಗ ಚಂದ್ರಶೇಖರ ಕಂಬಾರರ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’. ಹೆಸರೇ ಸೂಚಿಸುವಂತೆ ಇದೊಂದು ಪ್ರೇಮ ಕಥೆಯಾದರೂ ಇಲ್ಲಿರುವ ಹೊಸತನ ಒಬ್ಬ ವಯಸ್ಸಾದ ವ್ಯಕ್ತಿ ಪ್ರೀತಿಗೆ ಸಿಲುಕುವ ಪೇಚಿನ ಪ್ರಸಂಗವಾಗಿರುವುದು. ಪ್ರೀತಿ ಹಂಚಿಕೊಳ್ಳುವುದಕ್ಕಾಗಿಯೇ ನೋವುಂಡ ಹೃದಯಗಳು ಸದಾ ಮಿಡಿಯುತ್ತಿರುತ್ತವೆಯೆನ್ನುವಂತೆ ಇಲ್ಲಿ ಮಾಸ್ತರರು ಪ್ರೀತಿಗೆ ಶರಣಾಗತರಾಗುವುದು ವಿಪರ್ಯಾಸ. ಪ್ರೀತಿಗೆ ಮಣಿಯದವರಿಲ್ಲವೆನ್ನುವುದು ಜ್ಞಾನಿಯೊಬ್ಬನ ಅನುಭವದ ಮಾತು. ಅನುಭಾವದ ನೆಲೆಯಲ್ಲಿ ಮತ್ತು ಜಂಜಡದ ಬಲೆಯಲ್ಲಿ ಮನುಷ್ಯ ಒಂದು ಹಿಡಿ ಪ್ರೀತಿಗಾಗಿ ಸದಾ ಪರಿತಪಿಸುತ್ತಾ ಇರುತ್ತಾನೆ.

ಇಲ್ಲಿ ಚಂದ್ರಶೇಖರ ಕಂಬಾರರ ಕಿರು ಕಾದಂಬರಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ದಲ್ಲಿ ಜೀಕೆ ಮಾಸ್ತರರು ಬಹಳ ಕಟ್ಟುನಿಟ್ಟಿನ ಮನುಷ್ಯ ಮತ್ತು ತಾನು ಹೇಳಿದ್ದೆ ಆಗಬೇಕು ಅನ್ನುವ ಮನಸ್ಥಿತಿಯಾತ. ಅವರ ಕಠೋರ ಶಿಸ್ತು ನಿಯಮಾವಳಿಗೆ ಮಗನನ್ನೇ ಬಲಿಕೊಡಬೇಕಾದ ಪ್ರಸಂಗ ಎದುರಾಗುತ್ತದೆ. ಮಗನ ಸಾವಿನ ಬಳಿಕ ಅವರ ಮಡದಿ ಮಾಸ್ತರರನ್ನು ಕೇರ್ ಮಾಡದ ಸ್ವಭಾವದವಳಾಗುತ್ತಾಳೆ.

ಜೀಕೆ ಮಾಸ್ತರರು ಶಾಲೆಯಲ್ಲಿಯೂ ಬಹಳ ಕಟ್ಟುನಿಟ್ಟಿನ ಮನುಷ್ಯ. ಸ್ವಲ್ಪವೂ ಅಶಿಸ್ತನ್ನು ಬಯಸದವರು. ಅವರ ಕೆಂಗಣ್ಣಿಗೆ ಗುರಿಯಾಗುವವನು ಆ ಶಾಲೆಯ ವಿದ್ಯಾರ್ಥಿ ಗಿರೆಪ್ಪ. ಜೀಕೆ ಮಾಸ್ತರರ ನಿಯತ್ತಿನ ಚೇಲ ಎನ್.ಟಿ. ಅವನು ಘಟನೆಗಳಿಗೆ ಸದಾ ಬಣ್ಣಕಟ್ಟಿ ಹೇಳುವವನು. ಅವನ ಬಾಯಿಯಲ್ಲಿ ಗಿರೆಪ್ಪನ ತುಂಟತನ ಮತ್ತು ಕೀಟಲೆಗಳು ಒಂದಲ್ಲ ಒಂದು ವಿಧದಲ್ಲಿ ಮಾಸ್ತರರನ್ನು ಕೆರಳಿಸುತ್ತಲೇ ಇರುತ್ತದೆ. ಅಂತಹ ಪೋಕರಿಗೆ ರೋಜಾಳಂತಹ ಹುಡುಗಿಯ ಜೊತೆಗೆ ಸಲುಗೆಯಿರುತ್ತದೆಯೆನ್ನುವುದು ಕೇಳಿ ಮಾಸ್ತರರ ಮೈ ಉರಿಯುತ್ತದೆ. ಅವನನ್ನು ಕರೆದು ಬುದ್ದಿವಾದ ಹೇಳಿದರೂ ಅವನು ಕೇಳಿಸದ ಒರಟು ಬುದ್ಧಿಯವನು. ಇದರಿಂದ ನೊಂದ ಮಾಸ್ತರರು ಅವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಲೇಬೇಕೆನ್ನುವ ಹಠಕ್ಕೆ ಬೀಳುತ್ತಾರೆ.

ಇಷ್ಟಕ್ಕೂ ಅವರಿಗೆ ಅಂತಹ ಪಡ್ಡೆ ಗಿರೆಪ್ಪನಿಗೆ ಗಂಟು ಬಿದ್ದ ಹುಡುಗಿ ರೋಜಾ ಯಾರು ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲ. ಅವರು ಆ ಕ್ಲಾಸಿಗೆ ಬಂದಾಗ ಅಟೆಂಡೆನ್ಸ್ ಕರೆಯುತ್ತಾ ಅವಳನ್ನು ನೋಡುತ್ತಾರೆ. ಆ ಕ್ಷಣದಲ್ಲಿ ಅವಳ ನೋಟವೂ ಮಾಸ್ತರರ ಮೇಲಿರುತ್ತದೆ. ಇದನ್ನೇ ಕಂಡು ಚಕಿತರಾದ ಮಾಸ್ತರರು ಒಳಗೊಳಗೆ ಪುಳಕಿತರಾಗುತ್ತಾ ರೋಜಾಳೆನ್ನುವ ಚೆಲುವಿಯ ಪ್ರೀತಿಗೆ ಸಿಲುಕುತ್ತಾರೆ. ಮೊದಲ ಬಾರಿಗೆ ಅವಳಿಂದ ಪ್ರೇಮ ಪತ್ರ ಪಡೆದುಕೊಂಡು ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವವರೆಗೂ ಮುಂದುವರಿಯುತ್ತದೆ ಅವರ ಪ್ರಣಯದಾಟ.

ರೋಜಾಳಿಗಾದರೂ ಮಾಸ್ತರರನ್ನು ಗೆದ್ದ ಸಂಭ್ರಮ. ಇದರಿಂದ ತನಗೆ ಬೇಕಾದ ಮಾರ್ಕ್ಸ್ಗಳು ದೊರಕಿಸಿಕೊಳ್ಳುವುದಲ್ಲದೆ, ತನ್ನ ಫ್ರೆಂಡ್ಗೂ ಒಳ್ಳೆಯ ಮಾರ್ಕ ಸಿಗುವ ಹಾಗೆ ಮಾಡುವ ಚಾಣಾಕ್ಷೆ. ಇದು ಮಾಸ್ತರರು ಹೆಂಡತಿ ಹಾಸಿಗೆ ಹಿಡಿದ ಮೇಲೆ ರೋಜಾಳನ್ನು ಮನೆಗೆ ಕರೆದಾಗ ನಡೆದ ಸಂಚು. ಇದರಿಂದ ಮಾಸ್ತರರ ಮನಸ್ಸಿನಲ್ಲಿ ರೋಜಾ ಗಟ್ಟಿಯಾಗಿ ನಿಂತು ಗಿರೆಪ್ಪನೆನ್ನುವ ಪಡ್ಡೆಯನ್ನು ಗೆದ್ದೆನೆನ್ನುವ ಖುಷಿಯಲ್ಲಿರುತ್ತಾರೆ. ಅವರಲ್ಲಿ ಬತ್ತದ ಲವಲವಿಕೆ ತುಂಬಿರುವುದು ಅವರ ವಯಸ್ಸಿಗೂ ಮೀರಿ. ಇಲ್ಲಿ ಗಿರೆಪ್ಪನಿಗೂ ಮಾಸ್ತರರಿಗೂ ಕೆಲವೊಂದು ಸ್ಪರ್ಧೆಗಳು ನಡೆದು ಕೊನೆಗೂ ಮಾಸ್ತರರೇ ಗೆದ್ದಂತೆ ಬೀಗುತ್ತಾರೆ. ಆದರೆ ಇವೆಲ್ಲಾ ರೋಜಾ ಮತ್ತು ಗಿರೆಪ್ಪ ಇಬ್ಬರೂ ಸೇರಿ ಮಾಡಿದ ನಾಟಕವೆನ್ನುವುದು ಮಾಸ್ತರರಿಗೆ ಅರಿವಾಗುವಾಗ ಅವರು ಬದುಕಿನಲ್ಲಿ ತಾನು ಕಳೆದುಕೊಂಡದ್ದೆಲ್ಲವನ್ನೂ ನೆನಪಿಸಿಕೊಂಡು ಕೊರಗುತ್ತಾ ಎಲ್ಲದರಿಂದಲು ದೂರವಾಗ ಬಯಸುತ್ತಾರೆ. ಅವರೊಳಗಿದ್ದ ಆ ಶಿಸ್ತಿನ ಮಾಸ್ತರರು ಸತ್ತು ಅವರು ಹೊಸ ವ್ಯಕ್ತಿಯಾಗಿ ಕಾಣಿಸುತ್ತಾರೆ.

ಕಾದಂಬರಿಯ ಅಂತ್ಯ ಬೇಸರವೆನಿಸಿದರೂ ಅವರು ತಮ್ಮ ಉದಾರತೆಯಿಂದ ರೋಜಾ ಹಾಗು ಗಿರೆಪ್ಪನವರನ್ನು ಕ್ಷಮಿಸಿ ಅವರ ಬದುಕಿಗೆ ಒಂದು ದಾರಿಯನ್ನು ಮಾಡಿಕೊಡುತ್ತಾರೆ.

ಒಟ್ಟಾರೆಯಾಗಿ ಒಂದು ವಿಭಿನ್ನ ಕಥಾವಸ್ತುವನ್ನೊಳಗೊಂಡ ‘... ಮಾಸ್ತರರ ಪ್ರಣಯ ಪ್ರಸಂಗ’ ಓದುಗನಲ್ಲಿ ತಣಿಯದ ಕುತೂಹಲ ಹುಟ್ಟಿಸಿ, ಅಂತ್ಯದಲ್ಲಿ ತುಟಿಯಲ್ಲಿ, ಛೆ ಛೆ ಅನ್ನುವ ಪಶ್ಚಾತ್ತಾಪದ ಸದ್ದು ಹೊರಡಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಹೆಚ್ಚಿಸಬಲ್ಲ ಒಂದು ವಿನೂತನ ಕಾದಂಬರಿಯೆಂದರೆ ತಪ್ಪಾಗಲಾರದು.

No comments: