Wednesday, August 31, 2011

ರಂಗಭೂಮಿಯ ಚರಿತ್ರೆ


ದೃಶ್ಯ ಮಾಧ್ಯಮಗಳು ವಿಷಯಗಳನ್ನು ಬಹಳ ಬೇಗನೆ ಜನಮಾನಸಕ್ಕೆ ತಲುಪಿಸುತ್ತವೆ ಅನ್ನುವುದು ಅಕ್ಷರಶ: ಸತ್ಯವಾದ ಮಾತು. ಸಿನಿಮಾ, ದೂರದರ್ಶನಗಳಂತು ವೀಕ್ಷಕವರ್ಗವನ್ನು ಮೋಡಿ ಮಾಡಿರುವುದು ಎಲ್ಲರೂ ಒಪ್ಪಬೇಕಾದ ವಾಸ್ತವ. ಆಯಾಯ ಕಾಲಕ್ಕೆ ಬದಲಾಗುತ್ತಿರುವ ಅಭಿರುಚಿಯನ್ನು ಅವಲಂಭಿಸಿ ಬದಲಾವಣೆಗಳನ್ನು ಮಾಧ್ಯಮಗಳು ಉಣಿಸುತ್ತಿರುವುದು ಎಲ್ಲದಕ್ಕೂ ಸಾಕ್ಷಿಯಂತಿದೆ. ದೃಶ್ಯ ಮಾಧ್ಯಮದಲ್ಲಿ ಕೇವಲ ಪ್ರತಿರೂಪಗಳನ್ನೇ ನೆಚ್ಚಿಕೊಂಡು ಖುಷಿ ಪಡುವ ವೀಕ್ಷಕನಿಗೆ ಅದೊಂದು ಕೇವಲ ಪ್ರತಿರೂಪ (ಇಮೇಜ್) ಅನ್ನುವುದು ನೆನಪಾಗುವುದೇ ಇಲ್ಲ. ಆದರೆ ಇದಕ್ಕೆ ಇಂದಿಗೂ ವ್ಯತಿರೀಕ್ತವಾಗಿರುವ ವ್ಯವಸ್ಥೆಯೆ ರಂಗಭೂಮಿ. ದೃಢವಾದ ಚಿಂತನೆ ಮತ್ತು ಚಲನಶೀಲವಾದ ಸ್ಥಿತಿಗಳ ನಡುವಿನ ನಿರೂಪಣಾ ತಂತ್ರದಿಂದಾಗಿ ವೀಕ್ಷಕವರ್ಗವನ್ನು ಹಿಡಿದಿಡುವ ಪ್ರಯತ್ನ ನಾಟಕಗಳದ್ದು. ದೃಶ್ಯಮಾಧ್ಯಮ ಮತ್ತು ರಂಗಭೂಮಿಗೆ ಭಾಷೆಯೊಂದೇ ಮುಖ್ಯ ಅನಿಸುವುದಿಲ್ಲ. ಭಾಷೆಗಿಂತಲೂ ಅಭಿನಯಕ್ಕೆ ಪ್ರಾಧಾನ್ಯತೆ ಹೆಚ್ಚು. ಇಲ್ಲಿ ಪಾತ್ರಧಾರಿ ಮತ್ತು ಪ್ರೇಕ್ಷಕರ ನಡುವೆ ಆತ್ಮೀಯ ಮತ್ತು ನೇರ ಸಂಬಂಧವಿರುವುದರಿಂದ (ಲೈವ್), ಸಂವಹನಕ್ಕೆ ಅವಕಾಶಗಳಿಗೆ. ಹಾಗಾಗಿ ಅಭಿನಯಗಾರರಿಗೆ ಪ್ರತಿಕ್ರಿಯೆ ಕೂಡಲೆ ಸಿಗುತ್ತವೆ. ಇದರಿಂದಾಗಿ ರಂಗಕಲಾವಿದರೂ ಇಂದಿಗೂ ದೃಶ್ಯ ಮಾಧ್ಯಮಗಳಿಗಿಂತ ರಂಗಭೂಮಿಯನ್ನು ಹೆಚ್ಚು ಇಷ್ಟಪಡುವುದನ್ನು ಕಾಣಬಹುದು. ಮಾತ್ರವಲ್ಲ, ಒಬ್ಬ ನಿಜವಾದ ಕಲಾವಿದ ರಂಗಭೂಮಿಯ ಅಭಿನಯವನ್ನು ಎಂದಿಗೂ ನಿರಾಕರಿಸುವುದಿಲ್ಲ.

ರಂಗಭೂಮಿಯನ್ನು ಕುರಿತು ಅದೆಷ್ಟೋ ಕೃತಿಗಳು ಬೆಳಕು ಕಂಡಿವೆಯಾದರೂ, ಕಾದಂಬರಿ ಲೋಕದಲ್ಲಿ ಕೇವಲ ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ನಾವು ಕಾಣಬಹುದು. ಅವುಗಳಲ್ಲಿ ಹೆಸರಿಸಬಹುದಾದ ಕೃತಿಗಳೆಂದರೆ ‘ನಟಸಾರ್ವಭೌಮ’; ‘ಶಾಂತಲ’; ‘ರಂಗನಾಯಕಿ’; ‘ನಟಿ’; ‘ಬಣ್ಣದ ಜಿಂಕೆ’ ಮತ್ತು ‘ಸಾಂವಿ’."

ಈ ಕೃತಿಗಳು ಚಾರಿತ್ರಿಕವಾಗಿ ಏನನ್ನೂ ಹೇಳುವುದಿಲ್ಲವಾದರೂ ರಂಗ ಕಲಾವಿದರ ಬದುಕನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಬಿಂಬಿಸಿದ ಕಾದಂಬರಿಗಳು ಇವು. ಇತ್ತೀಚೆಗೆ ಕನ್ನಡದಲ್ಲಿ ರಂಗಭೂಮಿಯ ಬಗ್ಗೆ ಆಳವಾದ ವಿಷಯಗಳನ್ನೊಳಗೊಂಡ ಅಪರೂಪದ ಕಾದಂಬರಿಯೊಂದು ಪ್ರಕಟವಾಗಿರುವುದು ಹೆಮ್ಮೆಯ ವಿಷಯ. ಅದುವೆ ಗಂಗಾಧರ ಗಾಡ್ಗೀಳರ ಮರಾಠಿ ಮೂಲ ಕಾದಂಬರಿ ‘ಗಂಧರ್ವಯುಗ’.

ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಚಂದ್ರಕಾಂತ ಪೋಕಳೆ ಅವರು ಅನುವಾದಕರ ಮಾತಿನಲ್ಲಿ, ‘ಈ ಕಾದಂಬರಿಯು ಮರಾಠಿಯಷ್ಟೇ ಕನ್ನಡದ ರಂಗಭೂಮಿಯ ದೃಷ್ಟಿಯಿಂದಲೂ ಮಹತ್ವದ್ದು’ ಅಂದಿದ್ದಾರೆ. ಇದು ಸಹಜವೂ ಹೌದು. ಯಾಕೆಂದರೆ ದೃಶ್ಯ ಮಾಧ್ಯಮ ಮತ್ತು ಸಾಹಿತ್ಯ ದೃಷ್ಟಿಯಿಂದ ಶ್ರೇಷ್ಠ ಕೃತಿಗಳಿಗೆ ಭಾಷೆಯ ಹಂಗಿಲ್ಲ. ಇವತ್ತಿಗೂ ಅನುವಾದಿತ ಕೃತಿಗಳನ್ನು ಸಾರಸ್ವತ ಲೋಕ ಸ್ವೀಕರಿಸುತ್ತಾ ನಮ್ಮ ಭಾಷೆಯ ಸಂಸ್ಕೃತಿ ಮತ್ತು ಸದಾಚಾರಗಳನ್ನು ಕೊಂಡುಕೊಳ್ಳುವಿಕೆಗೆ ಒಳಪಡಿಸಿದೆ. ಇದು ಓದುಗನೊಬ್ಬನಿಗೆ ಅಪಾರ ಜ್ಞಾನ ಭಂಡಾರವನ್ನು ಒದಗಿಸಬಲ್ಲ ಕಾರ್ಯವೂ ಆಗಿರುವುದರಿಂದ ಇವಕ್ಕೆ ತಡೆ ಇಲ್ಲವೆನ್ನುವುದು ನನ್ನ ನಂಬಿಕೆ.

ಈ ಕಾದಂಬರಿಯು ಮರಾಠಿ ರಂಗಭೂಮಿಯ ಲೋಕೊತ್ತರದ ರಂಗಚೇತನ ಬಾಲಗಂಧರ್ವ ಅವರ ಬದುಕಿನ ಕೃತಿಯಾಗಿರುವುದರಿಂದ, ಇದನ್ನು ಚಾರಿತ್ರಿಕ ಕಾದಂಬರಿಯೆಂದು ಗುರುತಿಸಿರುವುದು ಗಮನಾರ್ಹ. ಕೇವಲ ಬಾಲಗಂಧರ್ವರ ವ್ಯಕ್ತಿ ಚಿತ್ರಣ ಮಾತ್ರವಲ್ಲ ಅದರ ಜೊತೆಗೆನೆ ರಂಗಭೂಮಿಯ ಏಳುಬೀಳುಗಳನ್ನು ಅಧ್ಯಯನ ಮಾಡಿ ಬರೆದಿರುವುದರಿಂದ ಇದೊಂದು ಅಪರೂಪದ ಕೃತಿಯೆಂದರೆ ತಪ್ಪಾಗಲಾರದು. ಕೃತಿಯನ್ನು ಓದುತ್ತಿರುವಂತೆ ಜೀವನ ಚರಿತ್ರೆಯಾಗಿಯೂ ಮತ್ತು ನಾನ್ ಫಿಕ್ಷನ್ ಕೃತಿಯಂತೆಯೂ ಗುರುತಿಸಿಕೊಳ್ಳುವ ‘ಗಂಧರ್ವಯುಗ’ ಕನ್ನಡ ಮಟ್ಟಿಗಂತೂ ಹೊಸತೆನ್ನಬಹುದು.

ಈ ಕೃತಿಯನ್ನು ಚಾರಿತ್ರಿಕ ಹಿನ್ನಲೆಯಲ್ಲಿ ರಚಿಸಿರುವುದರಿಂದ ಆಗಿನ ರಂಗಭೂಮಿಯ ಕಲಾವಿದರ ಬದುಕು, ಸಾಧನೆ, ಹೋರಾಟಗಳನ್ನು ಬಹಳ ಕೂಲಂಕಷವಾಗಿ ಚಿತ್ರಿಸಲಾಗಿದೆ. ಮರಾಠಿ ರಂಗಭೂಮಿ ಇಂದಿಗೂ ತನ್ನ ಹಿಂದಿನ ಛಾಪನ್ನು ಉಳಿಸಿಕೊಂಡಿರುವುದರಿಂದ ನಾಟಕಗಳ ಶ್ರೀಮಂತಿಕೆ ಇನ್ನೂ ಅದೇ ರೀತಿಯಲ್ಲಿ ಮುಂದುವರೆದಿದೆಯೆನ್ನಬಹುದು.

ಇದೊಂದು ಅನುವಾದಿತ ಕೃತಿಯಾದರೂ ಸಾಹಿತ್ಯದಲ್ಲಿ ಅನುವಾದವೆನ್ನುವುದು ಒಂದು ಪ್ರತ್ಯಭಿಜ್ಞಾನವಿದ್ದಂತೆ. ಇದರಿಂದ ಸಾಂಸ್ಕೃತಿಕ ವಿನಿಮಯದ ಸಾಧ್ಯತೆಗಳಿಗೆ. ಹಾಗಾಗಿ ಈ ಕೃತಿಯಲ್ಲಿಯೂ ಅದು ಒಂದು ಪ್ರದೇಶದ ಸಂಸ್ಕೃತಿ, ಪರಿಸರಗಳನ್ನು ಒಳಗೊಂಡಿದ್ದರೂ ಅದರ ಒಳನೋಟವಿರುವುದು ಎಲ್ಲಾ ಕಲಾವಿದರ ಬದುಕನ್ನ ಬಿಂಬಿಸುವಂತೆಯೆ. ಪೋಕಳೆಯವರ ಪರಿಣಾಮಕಾರಿಯಾದ ಅನುವಾದವೂ ಇದಕ್ಕೆ ಪೂರಕವಾಗಿದೆ.

ಬಾಲಗಂಧರ್ವ ಮರಾಠಿ ರಂಗಭೂಮಿಯ ಶ್ರೇಷ್ಠ ಕಲಾವಿದ. ಇವರ ರಂಗಭೂಮಿಯ ಬದುಕನ್ನು ಸಮಗ್ರವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಿರುವುದಲ್ಲದೆ, ಚಾರಿತ್ರಿಕ ಒಳನೋಟವನ್ನು ವ್ಯಕ್ತಪಡಿಸುವ ಕೃತಿಯಾಗಿ, ವ್ಯಕ್ತಿಗತವಾದ ಸಂಕಟ, ಅಸಹಾಯಕತೆ, ತೊಳಲಾಟಗಳ ಮೂಲಕ ರಂಗಭೂಮಿಯ ನೇಪಥ್ಯವನ್ನ ಎತ್ತುವ ಪ್ರಯತ್ನವೂ ಇಲ್ಲಿ ನಡೆದಿದೆ. ಇದರ ಜೊತೆಗೆ ಬಾಲಗಂಧರ್ವರ ಸಮಕಾಲೀನರಾದ ಕೃಷ್ಣರಾವ, ಗಣಪತರಾವ ಬೋಡಸ, ಕೇಶವರಾವ ಭೋಸಲೆ ಮುಂತಾದ ರಂಗಕರ್ಮಿಗಳ ಜೊತೆಗೆ ಕೋಲ್ಹಟಕರ, ಗಡಕರಿಯವರಂತಹ ನಾಟಕಕಾರರ ಬದುಕನ್ನು ಕೂಡ ಸೂಕ್ಷಮವಾಗಿ ತೆರೆದಿಡುವ ಪ್ರಯತ್ನ ಇಲ್ಲಿದೆ.

ವೃತ್ತಿ ಮಾತ್ಸರ್ಯ ಅಳಿಸಲಾಗದ ಮತ್ತು ಸಹಿಸಲಾಗದ ಅನಾರೋಗ್ಯಕರ ಬೆಳವಣಿಗೆಯಿಂದಾಗಿ ಸಾಮಾನ್ಯನ ಬದುಕು ದುಸ್ತರದತ್ತ ಸಾಗುವುದು ಲೋಕರೂಢಿ. ಈ ರೀತಿಯ ಮತ್ಸರ ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ, ಒಟ್ಟು ಸಾಮಾಜಿಕ ವ್ಯವಸ್ಥೆಯನ್ನು ಮೀರಿಯೂ ನಡೆಯಬಹುದು. ರಂಗಭೂಮಿ ಕೂಡ ಈ ವೃತ್ತಿ ಮಾತ್ಸರ್ಯದಿಂದ ಹೊರತಾಗಿಲ್ಲ. ಇದು ಒಂದೊಂದು ಕಡೆ ಆರೋಗ್ಯಕರವಾಗಿಯೂ ಪರಿಣಿಮಿಸುವುದಿದೆ. ಬಾಲಗಂಧರ್ವರಂತಹ ದಿಗ್ಗಜರನ್ನು ಕೂಡ ಇದು ರಂಗಭೂಮಿಗೆ ಕೊಟ್ಟಿರುವುದು ಉಲ್ಲೇಖಾರ್ಹ.

ತಿಲಕರ ವಾತ್ಸಲ್ಯ ಮತ್ತು ಪ್ರೋತ್ಸಾಹದಿಂದ ಬಲಕ ನಾರಾಯಣ ಹಾಡುಗಾರನಾಗಿ ಮತ್ತು ನಟನಾಗಿ ರಂಗಭೂಮಿಗೆ ಕಾಲಿಟ್ಟದ್ದು ಮರಾಠಿ ರಂಗಭೂಮಿಯಲ್ಲಿ ದೈತ್ಯ ಅಲೆಯೊಂದು ಆವರ್ತವಾದಂತಾಯಿತು. ಬಾಬಾ ಮಹಾರಾಜರು ನಾರಾಯಣನ ಹಾಡನ್ನು ಮೆಚ್ಚಿ ಮುಂದೆ ಅಂದಿನ ಖ್ಯಾತ ನಾಟಕ ಕಂಪನಿ ‘ಕಿರ್ಲೋಸ್ಕರ್’ಗೆ ಸೇರಿಸಿದರು. ಆ ಸಮಯದಲ್ಲಿ ಹೆಣ್ಣಿನ ಪಾತ್ರ ಮಾಡುವುದಕ್ಕೆ ಅಗತ್ಯವಾಗಿ ಒಬ್ಬ ನಟನ ಅಗತ್ಯವಿತ್ತು. ಆ ಸ್ಥಾನವನ್ನು ತುಂಬಿದವರು ನಾರಾಯಣರು. ಕ್ರಮೇಣ ಆತನ ಪ್ರಸಿದ್ಧಿ ಎಲ್ಲಿಯವರೆಗೆ ಹಬ್ಬಿತ್ತೆಂದರೆ, ಅವನ ಅಭಿನಯಕ್ಕೆ ಮನಸೋತ ರಂಗಾಸಕ್ತರೆಲ್ಲ – ತಮ್ಮ ಹೆಂಡದಿರು ಕೂಡ ಆತನ ಸ್ತ್ರೀ ಪಾತ್ರದಂತೆ ವರ್ತಿಸಬೇಕೆಂದು ಅಪೇಕ್ಷೆ ಪಡುತ್ತಿದ್ದರು.

ಒಬ್ಬ ಆಪ್ಪಟ ನಟನಾಗಿ ಗುರುತಿಸಿಕೊಂಡ ನಾರಾಯಣ ಮುಂದೆ ‘ಬಾಲಗಂಧರ್ವ’ನೆಂದೆ ಖ್ಯಾತರಾದರು. ಇದು ರಂಗಭೂಮಿಯ ಘನತೆಯನ್ನೂ ಹೆಚ್ಚಿಸಿತಾದರೂ, ಅಲ್ಲಿ ನಡೆಯುವ ವೈಷಮ್ಯ, ತೀವ್ರ ಸ್ಪರ್ಧೆ, ಮತ್ಸರದ ಬೇರುಗಳ ಜೊತೆಗೆ ಜೀಕುವುದು ಮತ್ತು ರಂಗಭೂಮಿಯ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಹೆಣಗಾಡಬೇಕಾಯಿತು. ಕೌಟುಂಬಿಕ ಬದುಕು, ಆಘಾತ, ಮಾನಸಿಕ ಹೊಡೆತಗಳನ್ನು ಎದುರಿಸುತ್ತಲೇ, ರಂಗಾಯಣದಲ್ಲಿಯೂ ಸಮತೋಲನವನ್ನು ಕಾಯ್ದುಕೊಂಡು ಬರುವ ಅನಿವಾರ್ಯತೆಯಿಂದ, ಯಾವುದಕ್ಕೂ ಕುಂದು ಬಾರದಂತೆ ಅದರ ಏಳಿಗೆಗಾಗಿ ಶ್ರಮಿಸಿದವರು ಬಾಲಗಂಧರ್ವರು. ಇದು ಅವರ ರಂಗದ ಬಗೆಗಿನ ನಿಸ್ಸೀಮ ಪ್ರೀತಿಯನ್ನು ತೋರಿಸುತ್ತದೆ. ಅವರಿಗೆ ಬೇರೆ ಜವಾಬ್ದಾರಿಗಳಿದ್ದರೂ ನಟನೆಯೇ ಮುಖ್ಯವಾಗಿತ್ತು. ಇದರಿಂದಾಗಿ ಮನೆ ಮನೆಯಲ್ಲಿ ಅವರ ಭಾವಚಿತ್ರವನ್ನು ತೂಗುಹಾಕುವಷ್ಟರ ಎತ್ತರಕ್ಕೆ ಬೆಳೆದರು.

ಮುಂದೆ ಕೆಲವೊಂದು ಬಾಲಗಂಧರ್ವರು ಅವರದಲ್ಲದ ಆಪಾದನೆಯನ್ನು ಹೊತ್ತುಕೊಂಡು ಕಂಪನಿಯನ್ನು ಬಿಟ್ಟು ಹೊರಗೆ ಬರಬೇಕಾಯಿತು. ಆನಂತರ ‘ಗಂಧರ್ವ ನಾಟಕ ಮಂಡಳಿ’ಯ ಸ್ಥಾಪನೆಯಆಗಿ ಅಲ್ಲಿಯೂ ನಾಟಕಗಳೆಲ್ಲವೂ ಜಯಭೇರಿ ಸಾಧಿಸುವಂತೆ ಮಾಡಿದರು. ಹೊಸ ಕಂಪನಿಯನ್ನು ಕಟ್ಟುವಾಗಿನ ಏಳುಬೀಳುಗಳನ್ನು ಕೂಡ ಈ ಕಾದಂಬರಿ ಸೂಕ್ಷ್ಮವಾಗಿ ತಿಳಿಸುವುದಲ್ಲದೆ, ಕಲಾವಿದರ ಬದುಕು ಮತ್ತು ಅದು ರಂಗಚಟುವಟಿಕೆಗಳಲ್ಲಿ ಹೇಗೆ ಅನ್ಯೋನ್ಯವಾಗಿರುತ್ತದೆಯೆನ್ನುವುದನ್ನು ಈ ಕಾದಂಬರಿ ಬಹಳ ಮಾರ್ಮಿಕವಾಗಿ ಚಿತ್ರಿಸಿದೆ. ಇದು ಒಂದು ಚಾರಿತ್ರಿಕ ಕೃತಿಯಾಗಿರುವುದರಿಂದಲೇ ಸಹಜತೆಯನ್ನು ಉಳಿಸಿಕೊಂಡಿದೆ.
ಬಾಲಗಂಧರ್ವರು ಮಗಳನ್ನು ಕಳೆದುಕೊಂಡರೂ ರಂಗಭೂಮಿಯಿಂದ ವಿಮುಖರಾದವರಲ್ಲ. ಅದೇ ಅವರ ಜೀವಾಳವಾಗಿತ್ತು. ಕೊನೆಗೆ ಕಂಪನಿಯನ್ನು ನಡೆಸಲಾರದೆ ಸಾಲದಲ್ಲಿ ಮುಳುಗಿದಾಗ, ಕಂಪನಿಯ ಮಾಲಕತ್ವವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ತಾವು ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನಷ್ಟೇ ವಹಿಸಿಕೊಂಡರು. ಆನಂತರ ಖರ್ಚುಗಳನ್ನು ನಿಯಂತ್ರಿಸಲಾರದೆ ಸಾಲದ ಹೊರೆಯಲ್ಲಿ ಮುಳುಗಿದರು. ಆದರೂ ಧೃತಿಗೆಡದೆ ರಂಗಭೂಮಿಯಲ್ಲಿಯೇ ಮುಂದುವರೆದರು. ರಂಗವೃತ್ತಿಯನ್ನೇ ನಂಬಿ ಬದುಕಿದ ಬಾಲಗಂಧರ್ವರು, ರಂಗಭೂಮಿಯ ಸುವರ್ಣಯುಗ’ವನ್ನು ಸ್ಥಾಪಿಸಿದರು.
ಹೀಗೆ ನಟನೊಬ್ಬನ ಏಳುಬೀಲಿನ ಜೊತೆಗೆ ರಂಗಭೂಮಿಯ ಬೆಲವಣಿಗೆ ಮತ್ತು ನಿರೂಪಣೆಗಳನ್ನು ಕಾದಂಬರಿ ದಾಖಲೆಗಳೊಂದಿಗೆ ಪುನರ್ ಸೃಷ್ಟಿಸಿರುವುದರಿಂದ, ಇಂತಹ ಚಾರಿತ್ರಿಕ ಕಾದಂಬರಿಗಳು ರಂಗಾಭ್ಯಾಸಕತರಿಗೆ ಅಧ್ಯಯನಕ್ಕೆ ಆಧಾರ ಕೃತಿಯಾಗಿಯೂ ಉಪಯೋಗವಾಗುವಂತಹುದು.
ಇದೊಂದು ಓದಿ ಪಕ್ಕಕ್ಕಿಡುವ ಕೃತಿಯಲ್ಲ. ಗಂಭೀರ ಓದುವಿಕೆಯ ಮಹತ್ವದ ಕೃತಿಯಾಗಿರುವ ಇದನ್ನು ಬೆಳದಿಂಗಳು ಪ್ರಕಾಶನ, ಬೆಳಗಾವಿ ಇವರು ಪ್ರಕಟಿಸಿದ್ದಾರೆ.

No comments: