Tuesday, August 23, 2011

ಸಲಾಂ ಟು `ಮುತ್ತೆತ್ತೂರಿನ ದರ್ಗಾ'


ಕಿದೂರು ವೇಣುಗೋಪಾಲ ಶೆಟ್ಟಿ ಅವರ ಕಥಾಸಂಕಲನ `ಮುತ್ತೆತ್ತೂರಿನ ದರ್ಗಾ’ ಒಂದು ವಿಭಿನ್ನ ಹಾಗೂ ಆಕರ್ಷಕ ಶೀರ್ಷಿಕೆಯ ಕೃತಿ. ಇಲ್ಲಿಯ ಕಥೆಗಳನ್ನು ಓದುತ್ತಲೇ ಕಥೆಗಾರನ ಪ್ರಬುದ್ಧತೆಯು ನಮಗೆ ತಿಳಿಯುತ್ತದೆ. ಪರಿಪಕ್ವವಾದ ಮತ್ತು ಗಟ್ಟಿ ಹಂದರವನ್ನು ಒಳಗೊಂಡಿರುವ ಇಲ್ಲಿಯ ಕಥೆಗಳೆಲ್ಲವೂ ವೈಯಕ್ತಿಕವಾಗಿ ಪಾತ್ರಗಳ ಆಂತರಿಕ ತುಮುಲವನ್ನು ಮತ್ತು ಸಮಾಜದ ಒಟ್ಟು ವ್ಯವಸ್ಥೆಯನ್ನು ಓದುಗರಿಗೆ ತಲುಪಿಸುತ್ತದೆ. ಇಲ್ಲಿಯ ಕಥಾ ನಿರೂಪಣಾ ಶೈಲಿ, ಪಾತ್ರಗಳ ಒಳಮನಸ್ಸನ್ನು ಬಗೆಯುವ ರೀತಿ ಎಲ್ಲವೂ ಬೇರೆಯದಾಗಿಯೆ ಇದ್ದು, ನಾವು ಸುತ್ತಮುತ್ತಲು ಕಂಡಂತಹ ಬದುಕನ್ನು ಮತ್ತೊಂದು ನೆಲೆಯಲ್ಲಿ ತೆರೆದಿಡುವುದೇ ಆಗಿದೆ. ಆದರೆ ಇಲ್ಲಿ ಯಾವ ಇಸಂಗಳಿಗೆ ಈಡಾಗದೆ, ನೇರವಾಗಿ ಮತ್ತು ಧೈರ್ಯವಾಗಿ ಕಥೆಗಳನ್ನು ಹೆಣೆದಿರುವುದು ಮೆಚ್ಚತಕ್ಕದ್ದು."

ಇಲ್ಲಿಯ ಹೆಚ್ಚಿನ ಕಥೆಗಳೆಲ್ಲವೂ ನೇರ ನಿರೂಪಣೆಯಲ್ಲಿ, ಸರಳ ಮತ್ತು ಸುಂದರವಾದ ಪ್ರಾದೇಶಿಕ ಭಾಷೆಯಲ್ಲಿ ಬಿಚ್ಚಿಡುತ್ತಾ ಓದುಗನಿಗೆ ಆಪ್ತವೆನಿಸುವಂತಹವುಗಳು. ಕಥೆ ಹೀಗೆ ಇರಬೇಕೆನ್ನುವ ಯಾವ ಕಟ್ಟುಪಾಡುಗಳಿಗೂ ಒಳಗಾಗದೆ ಬರೆದಿರುವುದರಿಂದ ಕೆಲವೊಮ್ಮೆ ಇವು ವಾಸ್ತವದಲ್ಲಿ ನಡೆದ ಮತ್ತು ನಡೆಯುತ್ತಿರುವ ಸಂಗತಿಗಳೇನೋ ಅನಿಸದಿರದು. ಕೇವಲ ವಾಸ್ತವದ ವಿಷಯವನ್ನು ಕಥೆಯಾಗಿ ಕಟ್ಟಿಕೊಡುವುದಿಲ್ಲ; ಅದರ ಜೊತೆ ಜೊತೆಗೆನೆ ಅನುಭವಗಳನ್ನು ಲೇಖಕ ಪಾತ್ರಗಳ ಮೂಲಕ ಹಂಚಿಕೊಳ್ಳುವುದರಿಂದ, ಕಾಲ್ಪನಿಕತೆಯಿಂದ ಹೊರಗೆ ಬಂದಂತಹ ಅನುಭವವಾದರೆ ಅತಿಶಯೋಕ್ತಿಯಲ್ಲ. ಕೋಮು ಸೌಹಾರ್ದತೆ, ಸಂಕಟ, ನೋವು, ಯಾತನೆಗಳ ನಡುವೆ ಬೆಳೆಯುವ ಪಾತ್ರ ಚಿತ್ರಣಗಳು ಆದರ್ಶಪ್ರಾಯವಾಗಿ ಕಾಣಿಸುತ್ತವೆ. ಕೆಲವೊಮ್ಮೆ ಒಂದು ಸ್ವಸ್ಥ ಸಮಾಜದ ಪರಿಕಲ್ಪನೆ ಕೂಡ ಈ ಸಂಕಲನದ ಕಥೆಗಳಲ್ಲಿ ಕಾಣಸಿಗುತ್ತದೆ.

ಈ ಕಥಾಸಂಕಲನದ ಮತ್ತೊಂದು ವಿಶೇಷ ಅಂಶವೆಂದರೆ ಹೆಚ್ಚಿನ ಕಥೆಗಳೆಲ್ಲಾ ಲೇಖಕನೇ `ಫಸ್ಟ್ ಪರ್ಸನ್’ ಆಗಿ ಕಥೆಯನ್ನು ಪ್ರಸೆಂಟ್ ಮಾಡುವಂತೆ ಕಂಡರೂ ಕಥೆಯ ಆಳಕ್ಕೆ ಇಳಿಯುತ್ತಲೇ ಅಲ್ಲಿಯ ಒಂದು ಪಾತ್ರವೇ ಆ ಫಸ್ಟ್ ಪರ್ಸನ್ ನಿರೂಪಣೆ ಮಾಡುವುದನ್ನು ತಿಳಿಯುತ್ತದೆ. ಇದಕ್ಕೆ ಉತ್ತಮ ಉದಾಹರಣೆಯನ್ನು ಕೊಡುವುದಿದ್ದರೆ ಮುಸಡಾ ಅನ್ನುವ ಬಣ್ಣದ ಎಲೆಗಳನ್ನು ಬಿಡುವ ಗಿಡ, ಚಿಟ್ಟೆಗಳಿಗೆ ಹೂವೆನ್ನುವ ಹಾಗೆ ಭ್ರಮೆ ಹುಟ್ಟಿಸಿ ತನ್ನತ್ತ ಆಕರ್ಷಿಸುವಂತೆ ಮಾಡುವುದಿದೆಯಲ್ಲ ಹಾಗೇನೆ ಇಲ್ಲಿಯ ಕಥೆಗಳು ಓದುಗನನ್ನು ಒಳಕ್ಕೆ ಎಳೆದುಕೊಳ್ಳುತ್ತವೆ.

ಮಾನವೀಯತೆಯ ನೆಲೆಗಟ್ಟಿನಲ್ಲಿ ರಚಿಸಿದ `ಮುಸ್ಲಿಯಾರ್’; `ನಾನು ಕೊಂದ ಅಜ್ಜಿ’; ಮುಂತಾದ ಕಥೆಗಳು ಮತ್ತು ಕೋಮು ಸೌಹಾರ್ದತೆಯನ್ನು ಬಿಂಬಿಸುವ `ಮುತ್ತೆತ್ತೂರಿನ ದರ್ಗಾ’; ನವಿರು ಹಾಸ್ಯದ ಶೈಲಿಯಲ್ಲಿ ಕಟ್ಟಿಕೊಡುವ `ಅಜ್ಜನ ಕೊನೆಯ ದಿನ ಕೊನೆಯಾದದ್ದು’; `ಏಕೆ ಹೀಗೆ...’; `ಅಪ್ಪಾ ಭಟ್ಟರ ಮನೆತನ’ ಮತ್ತು `ಸಿದ್ಧಾರ್ಥ’ ಕಥೆಗಳು, `ಸೋಲು’; `ಅಕ್ಟೋಪಸ್’; `ಮರೆಯ ನೆರಳಿನಲ್ಲಿ’ ಯಂತಹ ಗಂಭೀರ ಚಿಂತನೆಯ ವಸ್ತುಗಳು ಕೂಡ ಸುಲಭವಾಗಿ ಕಿದೂರರ ಲೇಖನಿಯಿಂದ ಪರಿಣಾಮಕಾರಿಯಾಗಿ ಮೂಡಿ ಬಂದಿವೆ.

ಈ ಕಥಾಸಂಕಲನದ `ಮುಸ್ಲಿಯಾರ್’, `ಅಜ್ಜನ ಕೊನೆಯ ದಿನ ಕೊನೆಯಾದದ್ದು’ ಮತ್ತು `ಮುತ್ತೆತ್ತೂರಿನ ದರ್ಗಾ’ ಕಥೆಗಳಲ್ಲಿ ಕೋಮುಸೌಹಾರ್ದತೆ ಮೂಡಿಬಂದಿರುವುದು ಒಂದು ಸ್ವಸ್ಥ ಸಮಾಜದ ಪರಿಕಲ್ಪನೆಯಲ್ಲಿ ಮಾತ್ರವಲ್ಲ, ಅವು ಸಹಜವಾಗಿ ಒಂದೊಮ್ಮೆ ನಮ್ಮ ಸುತ್ತ ಮುತ್ತಲಿದ್ದ ಸಮಾಜವೇ ಅನ್ನುವುದನ್ನು ಸಾಭೀತುಪಡಿಸುತ್ತದೆ. ಈ ಎರಡು ಕಥೆಗಳಲ್ಲಿಯೂ ವರ್ತಮಾನದ ಸಮಸ್ಯೆಗಳನ್ನು ಮುಖಾಮುಖಿಯಾಗಿಸುತ್ತಾ, ಸಹಬಾಳ್ವೆಯ ಆರೋಗ್ಯಕರ ಚಿಂತನೆಯನ್ನು ಮುಂದಿಡುತ್ತವೆ.

`ಮುಸ್ಲಿಯಾರ್’ ಕಥೆಯ ಮುಸ್ಲಿಯಾರ್, ಎಲ್ಲರಿಗೂ ಬೇಕಾದ ವ್ಯಕ್ತಿ. ಆತ ತುಂಬಾ ನಾಜೂಕಿನ ಮನುಷ್ಯ. ಅವರು ಹೊರಗೆ ಹೊರಟಾಗ ಎಂತಹ `ಹರಾಮೇ’ಯಾದರೂ ಅವರಿಗೆ ಸೊಂಟ ಬಗ್ಗಿಸಿ ನಮಸ್ಕರಿಸಲೇ ಬೇಕು. ಅಂತಹ ಮುಸ್ಲಿಯಾರರಿಗೆ ಜಾತಿ ಮತದ ಕಟ್ಟುಪಾಡುಗಳು ಇಲ್ಲವಾಗಿ ಅವರ `ಭಸ್ಮ’ದ ಮಹಿಮೆ ಎಲ್ಲರಿಗೂ ಅವಶ್ಯಕವಾಗಿತ್ತು. ಮುಸ್ಲಿಯಾರಜ್ಜ ಅದೇ ಭಾಂದವ್ಯವನ್ನು ಮುನ್ನಡೆಸಿಕೊಂಡು ಬರುತ್ತಾರಾದರೂ ಆ ನಿರೀಕ್ಷೆ ಮುಂದೆ ಅವರಿಗೆ ನಿರೀಕ್ಷೆಯಾಗಿ ಉಳಿಯುವುದಿಲ್ಲ. ತಾವೆ ಭಸ್ಮದಿಂದ ಕೆಲವೊಂದು ಮಕ್ಕಳನ್ನು ಸ್ವಸ್ಥ್ಯರನ್ನಾಗಿಸಿದವರು. ಈಗ ಅದೇ ಮಕ್ಕಳು ತಮ್ಮ ಕಣ್ಣೆದುರಿಗೆ ಬೆಳೆದು ನಿಂತು, ಪದೇ ಪದೇ ಅವರು ಮನೆಗೆ ಬರುವುದನ್ನು ಪ್ರಶ್ನಿಸುವ ರೀತಿಯಲ್ಲಿ ಅಸಹನೀಯ ನೋವನ್ನುಂಟು ಮಾಡುವಾಗ ಊರನ್ನು ತೊರೆಯುತ್ತಾರೆ. ಆದರೆ ಅವರ ಮಹತ್ವದ ಅರಿವಾಗುವುದು ಕೊನೆಯಲ್ಲಿ ಆ ವ್ಯಕ್ತಿಯ ಮಗುವಿಗೆ ಅಸೌಖ್ಯ ಕಾಡಿದಾಗ. ಹೀಗೆ ಜಾತೀಯತೆಗಿಂತ ಮಿಗಿಲಾದ ಒಂದು ಭಾಂದವ್ಯವನ್ನು ಮುಸ್ಲಿಯಾರಜ್ಜ ಉಳಿಸಿರುತ್ತಾರೆ. ಇದು ನಿಜವಾಗಿಯೂ ಇಂದಿನ ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದೆಯೆನ್ನುವುದು ಓದುಗನ ಅಭಿಪ್ರಾಯವೂ ಆಗುತ್ತದೆ.

ಇನ್ನೊಂದು ಕಥೆ `ಮುತ್ತೆತ್ತೂರಿನ ದರ್ಗಾ’. ಇಲ್ಲಿಯ ದರ್ಗಾದ ವಿಶೇಷತೆಯೆಂದರೆ ಸಮುದ್ರ ತೀರದಲ್ಲಿ ಅರಬ್ಬಿಯೊಬ್ಬನ ದೇಹದ ಒಂದು ಭಾಗವನ್ನು ಹಾಗೇ ನಿರ್ಲಕ್ಷಿಸದೆ ಅದನ್ನು ತಂದು ಹೂಳುವ ಬೆಸ್ತರಿಗೆ, ಆ ಅರಬ್ಬಿಕಾಕನೆ ಅಮೂರ್ತ ರೂಪದಲ್ಲಿ ಕಾಣಿಸಿ(ಇಲ್ಲಿ ಸೂಟೆಯ ರೂಪದಲ್ಲಿ ಕಾಣಿಸಿ) ಅವರು ತನಗಾಗಿ ನಿರ್ಮಿಸಿದ ದರ್ಗಾವನ್ನು ನೋಡಿಕೊಳ್ಳುವಂತೆ ಸೂಚಿಸುತ್ತಾನೆ. ಇಲ್ಲಿಯ ಪ್ರಾಮುಖ್ಯತೆಯಿರುವುದು ಸತ್ತ ಹೆಣವನ್ನು ಮಾನವೀಯ ಅಂತ:ಕರಣವಿರುವ ವ್ಯಕ್ತಿಗಳು ಅದಕ್ಕೊಂದು ಸಂಸ್ಕಾರವನ್ನು ಮಾಡುವುದು. ಆಗ ಜಾತೀಯತೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಅನಂತಮೂರ್ತಿಯವರ `ಸಂಸ್ಕಾರ’ದಲ್ಲಿ ಮುಸಲ್ಮಾನನೊಬ್ಬ ಹೆಣದ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತಹ ಸನ್ನಿವೇಶವೇ ಮುತ್ತೆತ್ತೂರಿನ ದರ್ಗಾ ಕಥೆಯಲ್ಲಿದೆ. ಆದರೆ ಅದನ್ನು ಕಥೆಯ ಹೈಲಟಾಗಿಸದೆ ಸರಳವಾಗಿ ಹೇಳಿ ಮುಗಿಸುವ ಲೇಖಕರಿಗೆ ಅದಕ್ಕಿಂತಲೂ ಮಿಗಿಲಾದ ಭಾವಕ್ಯತೆಯ ಬಗೆ ಹೇಳುವ ಆದರ್ಶ ಎದ್ದು ಕಾಣುತ್ತದೆ. ಇಲ್ಲಿ ವರ್ಷದ ಉರೂಸ್ ನಡೆಯುವ ಸಂದರ್ಭದಲ್ಲಿ ಅದನ್ನು ಬಿಟ್ಟುಕೊಟ್ಟು ಉಳಿದಂತೆ ಅದರ ರಕ್ಷಣೆ ಬೆಸ್ತರದ್ದು. ಇಲ್ಲಿ ಕಾಣುವ ಸಮಾಜ ಕೂಡ ಬಹಳ ಸ್ವಸ್ಥ ಸಮಾಜ. ಉರೂಸ್ ನಡೆಯುವ ಸಂದರ್ಭದಲ್ಲಿಯಂತು ಅದನ್ನು ನೋಡುವವನಿಗೂ ಎಂತಹ ಅನ್ಯೋನ್ಯತೆ ಅನಿಸದಿರದು. ಆ ಕೋಮು ಸೌಹಾರ್ದತೆಯ ದೃಶ್ಯವನ್ನು ನೋಡಲು ಬರುವ ಹಯಗ್ರೀವ ಮತ್ತು ಹನೀಫ ಇಬ್ಬರೂ ಆಪ್ತ ಸ್ನೇಹಿತರು. ಆ ದರ್ಗಾವನ್ನು ನೋಡಿಕೊಳ್ಳುವುದಕ್ಕೆ ಒಬ್ಬ ಅನಾಥ, ಭಿಕ್ಷುಕನ ರೂಪದಲ್ಲಿ ಬಂದು ಅದರ ಏಳಿಗೆಯನ್ನು ನೋಡಿಕೊಳ್ಳುವಂತೆ ಊರಿನವರಿಗೆ ಭಾಸವಾದರೂ ಆತನ ಜಾತೀಯತೆಯ ಪ್ರಶ್ನೆ ಎಲ್ಲೂ ಬರುವುದಿಲ್ಲ. ಕೆಲವರಿಗೆ ಅವನು ಮುಸ್ಲಿಂನಂತೆ ಕಂಡರೂ ಇನ್ನುಳಿದವರ ದೃಷ್ಟಿಯಲ್ಲಿ ಆತ ಅರಬ್ಬಿಕಾಕನ ರಕ್ಷಣೆಗೆ ಬಂದವನೆಂದೇ ತಿಳಿಯುತ್ತಾರೆ. ಹೀಗೆ ಊರು ಅನ್ಯೋನ್ಯತೆಯಿಂದಿರುವಾಗ ಆಧುನಿಕತೆಯ ಕರಾಳ ಛಾಯೆ ಮುತ್ತೆತ್ತೂರಿಗೂ ಬಂದು ವೈಮನಸ್ಸು ಉಂಟಾಗಿ ರಕ್ತಪಾತವೂ ನಡೆಯುತ್ತದೆ. ಅದರ ಪರಿಣಾಮವಾಗಿ ಮುತ್ತೆತ್ತೂರು ಕೋಮು ಗಲಭೆಗೆ ನಾಂದಿಯಾಗುತ್ತದೆ. ಆ ಘಟನೆಯಿಂದ ತೀವ್ರ ಗಾಯಗೊಂಡ ಹಯಗ್ರೀವನನ್ನು ಹನೀಫ ಆದರಿಸಿ ಹಿಡಿಯುವುದರೊಂದಿಗೆ ಕಥೆ ಅಂತ್ಯವಾಗುತ್ತದೆ. ಹೀಗೆ ಅನ್ಯೋನ್ಯತೆ ಕೇವಲ ಜಾತೀಯತೆಯ ಮರುಸೃಷ್ಟಿ ಪಡೆದು ಇಡೀ ಸಮಾಜವನ್ನು ಹೇಗೆ ಕಂಗೆಡಿಸುತ್ತದೆಯೆನ್ನುವುದರ ಜೊತೆಗೆ ಸ್ನೇಹದ ತೀವ್ರತೆಯನ್ನು ಕೂಡ ಈ ಕಥೆ ಚೆನ್ನಾಗಿ ನಿರೂಪಿಸಿದೆ.

`ನಾನು ಕೊಂದ ಅಜ್ಜಿ’ ಬದುಕಿನ ಕೊನೆಯ ದಿನಗಳಲ್ಲಿ ಸಾಮಾನ್ಯವಾಗಿ ನರಳುವ ವಯೋವೃದ್ದೆಯ ಕಥೆಯಾದರೂ ಇಲ್ಲಿ ಗಮನಿಸಬೇಕಾಗಿರುವುದು ಎಲ್ಲವೂ ಇದ್ದು ಎಲ್ಲವನ್ನೂ ತೊರೆದ ಅಸಹಾಯಕತೆಯ ಪ್ರತಿಬಿಂಬವನ್ನು. ತನ್ನ ಕೊನೆಗಾಲದಲ್ಲಿ ತಾನು ಯಾರ ಜೊತೆಗಿರುವುದೆನ್ನುವ ದೊಡ್ಡ ಸಮಸ್ಯೆ ಎದುರಾಗಿ ಆಕೆ ತನ್ನ ಮಗನ ಸಮಾನನಾದ ನಿರೂಪಕ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಾಳೆ. ಆಗ ಅವಳಿಗೊಂದು ಪರಿಹಾರ ಸೂಚಿಸುವ ನಿರೂಪಕ ಕೊನೆಗೆ ಯಾವ ನಿರ್ಧಾರವನ್ನೂ ತಳೆಯಲಾರದೆ ಅವಳಿಗೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ, `ಇದ್ದದ್ದನ್ನು ಇದ್ದ ಹಾಗೆ ಎದುರಿಸುವುದೊಂದೆ ದಾರಿ’ಯೆನ್ನುತ್ತಾನೆ. ಈ ಮಾತು ಹೇಳಿದ್ದೆ ಆ ವೃದ್ದೆಗೆ ಏನನಸಿತೊ ಬದುಕನ್ನೆ ಅಂತ್ಯಗೊಳಿಸಿಕೊಳ್ಳುತ್ತಾಳೆ. ಅದನ್ನು ಕೇಳಿದ ನಿರೂಪಕನಿಗೆ ಅಪರಾಧಿ ಭಾವನೆ ಕಾಡುತ್ತದೆ. ಈ ಕಥೆಯಲ್ಲಿ ಬರುವ ಸಮಸ್ಯೆ ಇಳಿವಯಸ್ಸಿನಲ್ಲಿರುವ ಎಲ್ಲರದ್ದು. ಮಾನಸಿಕವಾಗಿ ಅಂತಹ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳುವುದು ಹೇಳಿದಷ್ಟು ಸುಲಭದ ಮಾತಲ್ಲ. ತಾನೊಂದು ಹೊರೆಯೆನ್ನುವ ಕೀಳರಿಮೆಯ ಜೊತೆಗೆ ತನ್ನನ್ನಾರು ನೋಡಿಕೊಳ್ಳುವುದಿಲ್ಲವೆನ್ನುವ ಭಯ ಇನ್ನಷ್ಟು ಮಾನಸಿಕ ಖಿನ್ನತೆಗೆ ತಳ್ಳುತ್ತದೆ. ಅದಕ್ಕಾಗಿಯೆ ರೋಗಿ ಮತ್ತು ಅಸಹಾಯಕರಿಗೆ ಧೈರ್ಯ ತುಂಬುವ `ಪ್ರೀತಿ’ ಬೇಕೇಬೇಕು. ಆ ಪ್ರೀತಿಯ ಕೊರತೆಯಲ್ಲಿಯೇ ಅಜ್ಜಿಯ ಸಾವು ಸಮಸ್ಯೆಯೊಂದಕ್ಕೆ ಪರಿಹಾರವಿಲ್ಲದೆ ಋಣಾತ್ಮಕದತ್ತ ಚಲಿಸುತ್ತದೆ.

ಪ್ರತಿಭಾವಂತ ವಿದ್ಯಾರ್ಥಿ ಪ್ರವೀಣ ಸಾಮಾಜಿಕ ಪಿಡುಗುಗಳ ವಿರುದ್ಧ ದನಿಯೆತ್ತುವ `ಅಕ್ಟೋಪಸ್’ ಕಥೆಯ ಬಿಸಿ ರಕ್ತದ ತರುಣ. ತನ್ನ ಕಾಲೇಜು ದಿನಗಳಲ್ಲಿಯೇ ಪಿಡುಗಗಳ ವಿರುದ್ಧ ಭಾಷಣಗಳನ್ನು ಮಾಡಿ ಎಲ್ಲರನ್ನೂ ಗೆದ್ದುಕೊಂಡಿದ್ದರೂ, ಮಾತಿನಿಂದ ಏನೂ ಸಾಧಿಸಲಾಗಲಿಲ್ಲವೆನ್ನುವುದನ್ನು ಅರಿತುಕೊಳ್ಳುತ್ತಾನೆ. ಅವನ ಈ ರೀತಿಯ ದನಿಗೆ ಕಾರಣವೂ ಇಲ್ಲದಲ್ಲ. ವರದಕ್ಷಿಣೆಯಂತಹ ಪಿಡುಗಿಗೆ ಅವನ ಅಕ್ಕ ಬಲಿಯಾಗಿರುತ್ತಾಳೆ. ಅದೇ ಅವನನ್ನು ಮೋಸ, ವಂಚನೆ, ಲಂಚ, ಲಲಾಸೆಗಳ ವಿರುದ್ಧವೂ ಹೋರಾಡಲು ಪ್ರಚೋದಿಸುತ್ತದೆ. ಆದರೆ ವಾಸ್ತವದಲ್ಲಿ ಅವೆಲ್ಲವೂ ಏನೂ ಆಗದೆ ಹಾಗೆ ಇದ್ದು ಬಿಡುವಂತಹವುಗಳು ಮತ್ತು ಮುಂದುವರಿಯುತ್ತಾ ಅಕ್ಟೋಪಸ್ನ ಹಾಗೆ ಬಿಗಿ ಹಿಡಿತದಲ್ಲಿರುವವುಗಳು ಅನ್ನುವ ಸತ್ಯ ಗೋಚರವಾಗುತ್ತದೆ. ಅವನ್ನು ಏನೂ ಮಾಡಲಾಗದ ಅಸಹಾಯಕತೆಯನ್ನು ಮುಂದೊಂದು ದಿನ ಅವನೂ ಅವುಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಅಂತಹ ಅಕ್ಟೋಪಸ್ನ ಬಾಹುಗಳಲ್ಲಿ ಅವನೂ ಸೇರಿಕೊಳ್ಳುವುದು ಕಥೆಯ ಅಂತ್ಯದಲ್ಲಿ ಕಾಣಬಹುದು. ನಿಜವಾಗಿಯೂ ಅದು ಅವನ ಮನಸ್ಸಿನ ವಿರುದ್ಧವಾದರೂ ಪ್ರವಾಹದ ಎದುರು ಈಜುವ ಸಾಹಸವು ಎಲ್ಲದಕ್ಕೂ ಪರಿಹಾರವಲ್ಲವೆನ್ನುವ ನಿಜವನ್ನು ತೋರಿಸುತ್ತದೆ.

`ಅಜ್ಜನ ಕೊನೆಯ ದಿನ ಕೊನೆಯಾದದ್ದು’ ಕಥೆ ಮೇಲ್ನೋಟಕ್ಕೆ ಸ್ವಲ್ಪ ನವಿರಾದ ಹಾಸ್ಯವನ್ನು ಬಿಂಬಿಸುವಂತೆ ಕಂಡರೂ ನಿರೂಪಕನಿಗೆ ಎದುರಾಗುವ ದೊಡ್ಡ ಸಮಸ್ಯೆಯ ನಡುವೆಯೂ ಅಜ್ಜನಿಗೆ ಸೀರಿಯಸ್ ಆದಾಗ ಒಂದು ಕಡೆ ಹಿಂದೂ- ಮುಸ್ಲಿಂ ಗಲಭೆ ಆರಂಭವಾಗಿ ಪ್ರೀತಿಯ ಅಜ್ಜನನ್ನು ನೋಡುವುದಕ್ಕೂ ಅಸಾಧ್ಯವಾಗುತ್ತದೆ. ಆದರೂ ಎಲ್ಲಿಂದಲೋ ರಾತ್ರಿಯ ಹೊತ್ತು ಊರು ಸೇರುವಾಗ ಇದಿರಾಗುವ ಮೊಯಿಂನಿ ಬ್ಯಾರಿಯ ಸಾಂತ್ವನ ನಿರೂಪಕನಿಗೆ ಸಮಾಧಾನ ತರುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ಬಾಂಧವ್ಯವಿದೆಯಲ್ಲ ಅದು ಒಂದು ಕಡೆ ಹತ್ತಿ ಉರಿಯುವ ಜಾತೀಯತೆಯ ದಳ್ಳುರಿ, ಇನ್ನೊಂದೆಡೆ ಜಾತೀಯತೆಯನ್ನು ಮೀರಿದ ಮಾನವೀಯತೆಯ ಮತ್ತು ಬಾಂಧವ್ಯದ ನಂಟು. ಇವೆಲ್ಲವೂ `ಮುಸ್ಲಿಯಾರ್’ ಮತ್ತು `ಮುತ್ತೆತ್ತೂರಿನ ದರ್ಗಾ’ ಕಥೆಯಲ್ಲಿರುವಂತೆಯೇ ಓದುಗನನ್ನು ಬಾಂಧವ್ಯದ ನೆಲೆಯಲ್ಲಿ ಕಟ್ಟಿ ಹಾಕುತ್ತದೆ.

ಇದೇ ಕಥೆಯ ರೀತಿಯಲ್ಲಿ ಬರೆದ ಇನ್ನೆರಡು ಕಥೆಗಳು, `ಅಪ್ಪಾ ಭಟ್ಟರ ಮನೆತನ’ ಮತ್ತು `ಸಿದ್ಧಾರ್ಥ’. ಅಪ್ಪಾ ಭಟ್ಟರ ಮನೆತನ ಕಥೆಯಲ್ಲಿ `ಮಣ್ಣಲ್ಲಿ ಮುಚ್ಚಿದೆ ಎನ್ನುವುದಾದರೆ ಹೆಣ ಹೂತಲ್ಲಿಯೂ ಮನೆ ಕಟ್ಟಿ ಕುಳಿತುಕೊಳ್ಳಬಹುದಲ್ಲವೆ?’ ಅನ್ನುವ ಪಾರಕ್ಕನ ಮಾತುಗಳು; ಲೇಖಕ ಒಂದು ಪಾತ್ರದ ಅಂತರಾಳಕ್ಕೆ ಇಳಿದು ವಿಷಯಗಳನ್ನು ನಿರೂಪಿಸುವ ಕಥನ ಶೈಲಿಯನ್ನು ಎತ್ತಿ ತೋರಿಸುತ್ತದೆ. ಮತ್ತು ಈ ಸಂಕಲನದ ಎಲ್ಲಾ ಕಥೆಗಳಲ್ಲಿರುವಂತೆ ಒಂದು ಚಿತ್ರಣದಿಂದ ಇನ್ನೊಂದು ಕಥನ ಚಿತ್ರಣಕ್ಕೆ ಸ್ಕಿಪ್ ಮಾಡುವಾಗ ಓದುಗನಿಗೆ ಗೊಂದಲವಾಗದಂತೆ ಸರಾಗವಾಗಿ ಬರೆದಿರುವ ರೀತಿ ಆಪ್ತವೆನಿಸುತ್ತದೆ. ಕಥೆಯ ಕೊನೆಯಲ್ಲಿ ಮಾವಿನ ಮರಕ್ಕೆ ಬೀಳುವ ಕೊಡಲಿಯೇಟು ಪಾರಕ್ಕನ ಅಂತ್ಯವನ್ನು ಸೂಚಿಸುವ ತಂತ್ರವಾಗಿ ಬಳಸಿರುವುದನ್ನು ಕಾಣಬಹುದು. ಈ ಕಥೆಯಲ್ಲಿ ಮುದ್ರಾರಾಕ್ಷಸನ ತೊಂದರೆಯಿಂದಾಗಿ ರಮಾಕಾಂತನ ಹೆಸರು ಕೆಲವೊಂದು ಕಡೆ ರಮಾನಂದನಾಗಿಯೂ, ರಮೇಶನಾಗಿಯೂ ಓದುಗನನ್ನು ಸ್ವಲ್ಪ ಕನ್ಫ್ಯೂಸ್ಗೆ ತಳ್ಳುತ್ತದೆ.

ಇನ್ನು `ಸಿದ್ಧಾರ್ಥ’ ಕಥೆಯಲ್ಲಿ ಕಥಾನಾಯಕ ಸಿದ್ಧಾರ್ಥ ಪ್ರಕೃತಿಯ ವೈಚಿತ್ರವನ್ನು ಪರಾಮರ್ಶಿಸಿಕೊಳ್ಳುವ ಕಥೆಯಾಗಿ ಉಳಿಯದೆ, ನಿಗೂಢವೊಂದರ ನಿಗೂಢತೆಯನ್ನು ನಿಗೂಢವಾಗುಳಿಸದೆ ಒಂದು ಆಶಾಭಾವನೆಯನ್ನು ಹುಟ್ಟು ಹಾಕಿ ವಿರಮಿಸುತ್ತದೆ. ಇಲ್ಲಿ ಹೂ ಬಿಡದೆ ಉಳಿಯುವ ಬರಡು ಮಾವಿನ ಮರ ಮುಂದಿನ ವರ್ಷವಾದರೂ ಫಲ ಕೊಡಬಹುದೆ? ಅನ್ನುವ ಪ್ರಶ್ನೆಯೆ ಒಂದು ಆಶಾಭಾವನೆಯನ್ನು ಮೂಡಿಸುತ್ತದೆ. ಹಿಂದಿನ ಕಾಲದಲ್ಲಿ ರಕ್ತಾಶೋಕ ವೃಕ್ಷ ಹೂಬಿಡಲು ಕನ್ಯೆಯೊಬ್ಬಳಿಂದ ಧೋಹದ ಕಾರ್ಯವನ್ನು ಮಾಡಿಸುತ್ತಿದ್ದರಂತೆ. ಹೆಣ್ಣಿನ ಸುಕೋಮಲವಾದ ಪಾದ ಸ್ಪರ್ಶದಿಂದ ಆ ಮರ ಹೂ ಬಿಡುತ್ತಿತ್ತಂತೆ. ಅದೇ ಕಾರ್ಯ ಈ ಕಥೆಯಲ್ಲಿ ನಿಂಗಿಯ ಜೊತೆಗೆ ಸಿದ್ಧಾರ್ಥನ ಮಿಲನವೇ ಬರಡು ಮರ ಫಲವನ್ನು ಬಿಡುವಂತೆ ಮಾಡಬಹುದೇನೋ?

ಈ ಸಂಕಲನದ ಗಂಭೀರ ಚಿಂತನೆಯ ಎರಡು ಕಥೆಗಳು, `ಸೋಲು’ ಮತ್ತು `ಮರೆಯ ನೆರಳಿನಲ್ಲಿ’. ಸೋಲು ಕಥೆಯಲ್ಲಿ ಶಿಸ್ತಿನ ಸಿಪಾಯಿಯಂತಿರುವ ರಾಜಾರಾಯರ ಸುರ್ಪದಿಯಲ್ಲಿ ಬೆಳೆಯುವ ಮಕ್ಕಳಿಬ್ಬರಿಗೆ ಸ್ವಾತಂತ್ರ್ಯ ಸಿಗುವುದು ತಂದೆ ಮನೆಯಲ್ಲಿಲ್ಲದಾಗ. ಅವರೆಷ್ಟೇ ಸ್ಟ್ರಿಕ್ಟ್ ಅನಿಸಿದರೂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದೂ ಅಲ್ಲಿ ಮಕ್ಕಳನ್ನು ಶಿಸ್ತಿನಿಂದ ನೋಡಿಕೊಳ್ಳುವಲ್ಲಿ ಸೋಲುತ್ತಾರೆ. ಒಂದು ಕಡೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಮಕ್ಕಳನ್ನು ಬೆಳೆಸುವ ರೀತಿ, ಮತ್ತೊಂದೆಡೆ ಕಾಲೇಜಿನಲ್ಲಿ ಅವರ ಶಿಸ್ತನ್ನು ಮೀರಿ ನಡೆಯುವ `ಪ್ರೇಮ ಪ್ರಕರಣ’ ಅವರ ಶಿಸ್ತನ್ನು ಅಧ:ಪತನಕ್ಕಿಳಿಸುತ್ತದೆ. ಇದು ಅವರ ಬದುಕಿನಲ್ಲಾದ `ಸೋಲು’ ಮಾತ್ರವಲ್ಲ, ಆ ಪ್ರಕರಣದ ತಿರುವು ಅವರನ್ನು ತಲೆಯೆತ್ತದಂತೆ ಮಾಡುತ್ತದೆ.

`ಮರೆಯ ನೆರಳಿನಲ್ಲಿ’ ಈ ಸಂಕಲನದ ಎಲ್ಲಾ ಕಥೆಗಳನ್ನು ಮೀರಿ ನಿಲ್ಲುವ ಕಥೆ. ಒಂದನೆಯದಾಗಿ ಇದು ಒಂದು ಗಂಭೀರ ಚಿಂತನೆಯ ಹಂದರವಿರುವ ಕಥೆ. ಎರಡನೆಯದಾಗಿ ಇಲ್ಲಿ ಬಳಸಿಕೊಂಡಿರುವ `ಫ್ಲ್ಯಾಷ್ ಬ್ಯಾಕ್’ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅಂತಪ್ಪ ದಿನನಿತ್ಯದ ಕಾಯಕದಲ್ಲಿ ಮುಳುಗಿರುವಾಗ ದೇವಕಿಯ ಸಾವಿನ ಸುದ್ದಿಯನ್ನು ಹೇಳುವ ಕೊಗ್ಗು, ಅವನಲ್ಲಿ ದೇವಕಿಯ `ಶಾಶ್ವತ ನಿರ್ಗಮನ’ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದ ಯೌವನದ ದಿನಗಳನ್ನು ನೆನಪಿಸುತ್ತದೆ. ಆ ನೆನಪಿನಲ್ಲಿ ದೇವಕಿಯ ಪಾತ್ರ ಹಿರಿದು. ಸಾಕು ಮಗಳಾಗಿ, ತನ್ನದಲ್ಲದ ಮನೆಯೊಂದರ ಜವಾಬ್ದಾರಿಯನ್ನು ಹೊತ್ತು ಒಂದು ಹನಿ ಪ್ರೀತಿಗಾಗಿ ಹಂಬಲಿಸಿ ಅದೂ ಫಲಿಸದೆ ಒಂಟಿಯಾಗಿಯೇ ಉಳಿದು ಹೋದ ಹೆಣ್ಣು ಮಗಳೊಬ್ಬಳ ಸಂವೇದನಾಶೀಲತೆಗಿಂತಲೂ, ಯುವಕನೊಬ್ಬನ ವಿರಹದ ದನಿಯಾಗಿ ಈ ಕಥೆ ನಿಲ್ಲುತ್ತದೆ.

ಇನ್ನುಳಿದಂತೆ `ಏಕೆ ಹೀಗೆ...?’ ಹೆಣ್ಣೊಬ್ಬಳು ಅನಿವಾರ್ಯವಾಗಿ ಒಂಟಿ ಜೀವನ ನಡೆಸಬೇಕಾದ ಸಂದರ್ಭದಲ್ಲಿ ಸಮಾಜದ ದೃಷ್ಟಿಯಲ್ಲಿ ಅವಳ ಅಂತರಂಗದ ಕಲ್ಪನೆಗಳೇನು ಅನ್ನುವುದನ್ನು ಪ್ರಕೃತಿಯ ಜೊತೆಗೆ ತುಲನೆ ಮಾಡಿ ನಿರೂಪಿಸುವ ಕಥೆ. ಆದರೆ ಈ ಕಥೆಯಲ್ಲಿ ಎಲ್ಲಿಯೂ ಹೆಣ್ಣಿನ ಪಾತ್ರ ಪರಿಧಿಯನ್ನು ಮೀರಿ ಹೋಗದಿರುವುದರಿಂದ ಕಥೆಗೆ ಎಲ್ಲೂ ಮೋಸವಾಗುವುದಿಲ್ಲ. ಪ್ರಕೃತಿ ಕಲಿಸುವ ಪಾಠದಿಂದ ಮತ್ತು ಸುತ್ತಲ ನೋಟದಿಂದ ಅವಳ ಅಂತರಂಗದ ಬಯಕೆಗಳೆಂದೂ ಹೆಡೆಯೆತ್ತುವುದಿಲ್ಲ. ಇದು ಕಥೆಯ ಪ್ಲಸ್ ಪಾಯಿಂಟ್. ಒಂದು ವೇಳೆ ಪ್ರಕೃತಿಯ ಸಹಜ ಕ್ರಿಯೆಗೆ ಅವಳು ಸ್ಪಂದಿಸಿದ್ದರೆ ಅವಳು ಅವಳದ್ದಲ್ಲದ ದಾರಿ ಹಿಡಿಯುವ ಸಾಧ್ಯತೆಯಿತ್ತು. ಆದರೆ ಅವಳ ವಿಲ್ ಪವರ್ ಅಷ್ಟೊಂದು ಗಟ್ಟಿಯಾಗಿರುವುದರಿಂದ ಎಲ್ಲವನ್ನೂ ಮತ್ತು ಎಲ್ಲರನ್ನೂ ಹಗುರವಾಗಿ ತೇಲಿಸಿ ಬಿಡುತ್ತಾಳೆ.

2005ರಲ್ಲಿ ಪ್ರಥಮ ಆವೃತಿಯಾಗಿ ಬಿಡುಗಡೆಯಾಗಿರುವ ಈ ಪುಸ್ತಕ, `ಪುಸ್ತಕ ನಿಧಿ’, ಕುಂದಾಪುರ ಇವರ ಪ್ರಕಟಣೆಯಾಗಿದೆ. ಪ್ರಿಂಟಿಂಗ್ ಟೆಕ್ನಾಲಜಿ ಸುಧಾರಿತ ಈ ಕಾಲದಲ್ಲಿ `ಮುತ್ತೆತ್ತೂರಿನ ದರ್ಗಾ’ವನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಪ್ರಕಟಿಸಬಹುದಿತ್ತು ಅನಿಸುತ್ತದೆ. ಈ ನ್ಯೂನತೆಯನ್ನು ಮರೆ ಮಾಚುವಂತೆ ಇಲ್ಲಿಯ ಕಥೆಗಳೆಲ್ಲವೂ ಸಮೃದ್ಧವಾಗಿ ಮೂಡಿ ಬಂದಿವೆ. ಕಥೆಗಳು ಹೇಗಿರಬೇಕು ಅನ್ನುವುದಕ್ಕೆ ಒಂದು ಸೀಮಿತ ಚೌಕಟ್ಟಿನಲ್ಲಿ ಬೆಳೆಯುವ ಇಲ್ಲಿಯ ಕಥೆಗಳೇ ಸಾಕ್ಷಿಯಾಗುತ್ತವೆ. ಭರವಸೆಯ ಕಥೆಗಾರರಾಗಿರುವ ಕಿದೂರು ವೇಣುಗೋಪಾಲ ಶೆಟ್ಟಿಯವರಿಂದ ಇನ್ನಷ್ಟು ಕಥೆಗಳನ್ನು ನಿರೀಕ್ಷಿಸಬಹುದು.

No comments: