Tuesday, August 9, 2011

ಕಲಾ ಮೇಳ ಮತ್ತು ಸಂಸಾರದ ಧೀಂಗಿಣ

ಕಾದಂಬರಿಗಳಿಗೆ ಪ್ರಾದೇಶಿಕ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರಭಾಕರ ನೀರ್ಮಾರ್ಗ ಅವರು ಎತ್ತಿದ ಕೈ. ಅವರು ಪ್ರಾದೇಶಿಕ ಹಿನ್ನಲೆಯಲ್ಲಿ ತಮ್ಮ ಕಾದಂಬರಿಗಳಿಗೆ ಕಥನ ರೂಪವನ್ನು ಕೊಡುವಲ್ಲಿ ಯಶಸ್ವಿಯಾದವರು. ಈ ಹಿಂದೆ ಅವರು ರಚಿಸಿದ `ತಿಲ್ಲಾನ’ ಕಾದಂಬರಿಯಲ್ಲಿ ಅವಿಭಾಜಿತ ದಕ್ಷಿಣ ಕನ್ನಡದ ಸಂಸ್ಕೃತಿಯ ಪ್ರತೀಕದಂತಿರುವ `ಭೂತದ ಕೋಲ’ ಮತ್ತು `ಭೂತ ಕಟ್ಟುವವರ’ ಬಗೆ ಚೆನ್ನಾಗಿ ಅಧ್ಯಯನ ಮಾಡಿ ಬರೆದಿದ್ದಾರೆ. ಅದೇ ರೀತಿ ಅವರ ಇನ್ನೊಂದು ಕೃತಿ `ಧೀಂಗಿಣ’, ದಕ್ಷಿಣ ಕನ್ನಡದ ಗಂಡು ಮೆಟ್ಟಿನಕಲೆ ಯಕ್ಷಗಾನವನ್ನ ಕೇಂದ್ರಿಕರಿಸಿ ಬರೆದಿರುವ ಕೃತಿ.


ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ ಯಕ್ಷಗಾನ ಕಲೆಯ ಬಗೆ ಆಳವಾಗಿ ಇಳಿಯದೆ, ಯಕ್ಷಗಾನ ಮೇಳವನ್ನು ಕಟ್ಟಿ ಅದನ್ನು ಒಪ್ಪಿಕೊಂಡು ಮತ್ತು ಮುಂದುವರಿಸಿಕೊಂಡು ಹೋಗುವಾಗಿನ ಸಂಕಟಗಳ ಕುರಿತಾಗಿ ಸವಿವರವಾಗಿ ಬರೆದಿರುವುದೆನ್ನುವುದು ಮುಖ್ಯ. ಪ್ರಾದೇಶಿಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಸಂಸಾರಿಕ ಜೀವನವನ್ನು ಚಿತ್ರಿಸುತ್ತಾ ಒಂದು ಕಲೆಯ ಬಗೆ ಕಾಳಜಿಯನ್ನು ಇರಿಸಿಕೊಂಡು ಬರೆದ ಶೈಲಿಯಲ್ಲಿ ಎಲ್ಲೂ ಪದಗಳ ಭಾರವಾಗಲಿ, ಉಪಮೆಯ ಹೊರೆಯಾಗಲಿ ಓದುಗನನ್ನು ಕಾಡುವುದಿಲ್ಲ. ಪ್ರಾದೇಶಿಕ ಭಾಷೆ ಎಷ್ಟು ಸುಲಲಿತವೋ ಅಷ್ಟೇ ಸರಳ ಪದಗಳ ಬಳಕೆ ಕೂಡ ಇಲ್ಲಿದೆ. ಇನ್ನೊಂದು ಬಹಳ ಮುಖ್ಯವಾದ ಅಂಶವೆಂದರೆ ಈ ಕಾದಂಬರಿಯನ್ನು ಓದುತ್ತಿರುವಾಗ ನಿಮಗೆ ಒಂದು ಪ್ರಾದೇಶಿಕ ವ್ಯವಸ್ಥೆಯನ್ನು ಅದು ಕಟ್ಟಿಕೊಡುತ್ತದೆಯೆ ಹೊರತು ಜಾತೀಯತೆಯನ್ನು ಎಲ್ಲೂ ಎತ್ತಿ ಹಿಡಿಯುವುದಿಲ್ಲ. ಅದೇ ನೀವು ಮುನ್ನುಡಿಯನ್ನು ಓದಿದ ಬಳಿಕ ಕಾದಂಬರಿಯನ್ನು ಓದಿದರೆ `ಜಾತೀಯತೆ’ ಇಲ್ಲಿ ಉದ್ಭವಿಸಿದೆಯೆನಿಸಿದರೂ ಹೆಚ್ಚಲ್ಲ. ಒಟ್ಟಾರೆಯಾಗಿ ಮುನ್ನುಡಿಯನ್ನು ಬಿಟ್ಟು ಕಾದಂಬರಿಯನ್ನು ಗಮನಿಸಿದರೆ ಒಂದು ಸಂಸಾರದ ಮತ್ತು ಒಂದು ಕಲೆಯ ಏಳುಬೀಳಿನ ಚಿತ್ರಣವನ್ನ ಈ ಕಾದಂಬರಿ ತೆರೆದಿಡುತ್ತದೆ.

ಕಾದಂಬರಿ ಆರಂಭವಾಗುವುದು ಮಾಣೂರಿನ ಚಿತ್ರಣದೊಂದಿಗೆ. ಒಂದು ಪ್ರಾದೇಶಿಕ ಕಥನಕ್ಕೆ ಪೂರಕವಾದ ಒಂದು ಹಳ್ಳಿಯ ಚಿತ್ರಣ. ಹಳ್ಳಿಯೆಂದರೆ ಹೀಗೆ ಇರಬೇಕೆನ್ನುವ ಸಿದ್ಧ ಸೂತ್ರವನ್ನು ಮುರಿದು ಅಲ್ಲಿಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಸ್ಥಿತಿಯನ್ನು ವಿವರಿಸುತ್ತಾ ಜನರ ಮುಗ್ಧತೆ ಮತ್ತು ಇನ್ನೂ ಆಧುನಿಕತೆಯ ಢಂಬಾಚಾರಗಳು ಸೋಕದಿರುವುದನ್ನು ಓದುತ್ತಾ, ಓದುಗನಿಗೆ ಒಂದು ಹೊಸ ಪರಿಸರದ ಕಲ್ಪನೆಯನ್ನು ನೀಡುತ್ತದೆ. ಕಾದಂಬರಿಯ ಮುಖ್ಯ ಅಂಶ ಕೂಡ ಇದಾಗಿದೆ. ಈಗಲೂ ಹಳ್ಳಿಯಲ್ಲಿ ಕೋಲ, ಯಕ್ಷಗಾನದಂತಹ ಸಾಂಸ್ಕೃತಿಕ ಕಲೆಗಳೆಂದರೆ ಅಲ್ಲಿಯ ಕಳೆಯೇ ವಿಭಿನ್ನವಾದದ್ದು. ಪ್ರತೀಯೊಬ್ಬ ಜನಸಾಮಾನ್ಯನು ಅದನ್ನು ಒಂದು ಹಬ್ಬದಂತೆ ಮತ್ತು ಸಂತೋಷದ ಸ್ಥಿತಿಯಂತೆ ಅನುಭವಿಸುವುದು ಅವರಲ್ಲಿ ಉಳಿದುಕೊಂಡಿರುವ ಸಾಂಸ್ಕೃತಿಕ ಆರಾಧನೆಗೆ ಸಾಕ್ಷಿಯಾಗಿದೆ. ಯಕ್ಷಗಾನವೆಂದರೆ ರಾತ್ರಿಯಿಂದ ಆರಂಭವಾಗಿ ಮುಂಜಾವಿನ ತನಕವೂ ನಡೆಯುವುದು ಪರಿಪಾಠ. ಆದರೆ ಇತ್ತೀಚೆಗೆ ಆ ಸಂಪ್ರದಾಯ ನಾಶವಾಗುತ್ತಾ ಗಂಟೆಗಳ ಸೀಮಿತಕ್ಕೆ ಪ್ರದರ್ಶನ ಬಂದು ನಿಂತಿರುವುದು ಕಲೆಯೊಂದರ ದುರಂತ. ಆದರೆ `ಧೀಂಗಿಣ’ದಲ್ಲಿ ರಾತ್ರಿಯಿಂದ ಹಗಲಾಗುವವರೆಗೂ ಯಕ್ಷಗಾನ ನಡೆಯುತ್ತದೆ. ಆ ಚೆಂಡೆ, ಮದ್ದಳೆ, ಭಾಗವತಿಕೆಯ ಮತ್ತು ಪಾತ್ರಗಳ ಗುಂಗು ಪ್ರೇಕ್ಷಕನ ತಲೆಯೊಳಗೆ ಮೊರೆಯುತ್ತಿರುವಂತೆಯೇ ಓದುಗನನ್ನೂ ಆ ಸ್ಥಿತಿಗೆ ಸೆಳೆಯುತ್ತದೆ.

ಈ ಕಾದಂಬರಿಯ ಮುಖ್ಯ ಪಾತ್ರ ಸುಬ್ಬಣ್ಣ. ಪ್ರಾದೇಶಿಕ ಪದಗಳಲ್ಲಿಯೇ ಹೇಳುವುದಾದರೆ ಸುಬ್ಬಣ್ಣನಿಗೆ ಯಕ್ಷಗಾನದಲ್ಲಿ `ಭಯಂಕರ’ ಆಸಕ್ತಿ. ಹವ್ಯಾಸಿ ಕಲಾವಿದನಾಗಿ ಆ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಮುಂದೊಂದು ದಿನ ತಾನೂ ಒಂದು ಮೇಳವನ್ನು ಕಟ್ಟಿಕೊಳ್ಳಬೇಕೆನ್ನುವ ಇರಾದೆಯಿರುವವನು. ಅವನ ಆಸಕ್ತಿಗೆ ನೀರೆರೆಯುವವನು ಬಾಲು ಅನ್ನುವ ಕಲಾವಿದ. ಇದಕ್ಕೆ ಪೂರಕವಾಗಿರುವುದು ರಾಘಣ್ಣನವರ ಬೆಂಬಲ. ಇವೆಲ್ಲವನ್ನೂ ಮನಸಿನಲ್ಲಿಯೇ ಪುನರುಚ್ಚರಿಸುತ್ತಾ, ಮುಂದೊಂದು ದಿನ ಸುಬ್ಬಣ್ಣ ಬಾಲುವಿನ ಸಹಾಯದಿಂದ ಅವನತಿಯತ್ತ ಸಾಗಿದ ಒಂದು ಮೇಳವನ್ನು ಖರೀದಿಸಿ, ಅದನ್ನು ಪೋಷಿಸುತ್ತಾನೆ. ಮಾತ್ರವಲ್ಲ, ತನ್ನಿಂದ ಸ್ಥಾಪಿಸಲ್ಪಟ್ಟ ಮಾಣೂರಿನ ಮೇಳವನ್ನು ಪ್ರಸಿದ್ಧಿಗೆ ತರುತ್ತಾನೆ.

ಕಲೆಯನ್ನು ನೆಚ್ಚಿಕೊಂಡವನು ಸಂಸಾರಿಕವಾಗಿ ಸೋಲುತ್ತಾನೆನ್ನುವುದು ಇಲ್ಲಿಯ ಕೆಲವು ಪಾತ್ರಗಳಿಂದ ಚಿತ್ರಿಸಿದ್ದರೂ, ವಾಸ್ತವ ಹಾಗಿರದೆ ಇದು ಕೇವಲ ಕಾದಂಬರಿಯ ಬೆಳವಣಿಗೆಗೆ ಒಂದು ಸೂತ್ರವನ್ನು ಬಳಸಿಕೊಂಡಂತೆ ಕಾಣುತ್ತದೆ. ಬ್ರಹ್ಮಾಚಾರಿಯಾಗಿಯೇ ಉಳಿಯುವ ಮನಸ್ಸಿನವ ಸುಬ್ಬಣ್ಣ. ಅವನ ಈ ತ್ಯಾಗ ಏನಿದೆ ಅದು ಕಲೆಯ ಆರಾಧನೆಗಾಗಿ ಅನ್ನುವುದು ಮುಖ್ಯ. ತಾನು ಊರೂರು ಅಲೆಯುವವನು ಸಂಸಾರಿಯಾದರೆ ಕಲೆಯನ್ನು ನಿರ್ಲಕ್ಷಿಸುವೆನೆನ್ನುವ ಭಯ ಅವನನ್ನು ಕಾಡುವುದೇನೋ? ಯಾರ ಒತ್ತಾಯಕ್ಕೂ ಮಣಿಯದೆ ತಾನು ನೆಚ್ಚಿಕೊಂಡ ಕಲೆಯನ್ನು ಆರಾಧನಾಭಾವದಿಂದ ಮುಂದುವರಿಸಿಕೊಂಡು ಹೋಗುತ್ತಾನೆ. ಆದರೆ ಅವನು ಒತ್ತಾಯದ ಅನಿವಾರ್ಯತೆಗೆ ಮಣಿದು ಸಂಸಾರಿಯಾಗುತ್ತಾನೆ. ಇದು ಅವನ ಅಧ:ಪತನ ಮಾತ್ರವಲ್ಲ ಅವನು ಸ್ಥಾಪಿಸಿದ ಕಲೆಯೊಂದರ ಅವನತಿಯ ಹಾದಿಯಾಗುವುದು ಕೂಡ ಒಂದು ದುರಂತ.

ಇಡೀ ಕಾದಂಬರಿಯಲ್ಲಿ ಪ್ರೀತಿ, ಪ್ರೇಮ, ರಾಗ, ದ್ವೇಷಗಳು ಕೂಡ ಹಾಸು ಹೊಕ್ಕಾಗಿ ಕಾದಂಬರಿಯನ್ನು ಬೆಳೆಯುವಂತೆ ಮಾಡುತ್ತದೆಯಾದರೂ ಅದು ಓದಿನ ಓಘಕ್ಕೆ ತಡೆಗಳಂತೆ ನಿರ್ಮಿತವಾಗಿರುವುದು ಸ್ವಲ್ಪ ಮಟ್ಟಿಗೆ ಹೌದೆನಿಸಿದರೂ ಸಂಸಾರದ ಚಿತ್ರಣದಲ್ಲಿ ಕುತೂಹಲ ಮತ್ತು ತಿರುವುಗಳನ್ನು ಇಲ್ಲಿ ಹೇಳಿರುವುದು ಇನ್ನೊಂದು ದೃಷ್ಟಿಕೋನದಿಂದ ಚಿಂತನೆಗೆ ಹಚ್ಚುತ್ತದೆ. ಇದರಿಂದಾಗಿ ಕಾದಂಬರಿ ಎರಡು ರೇಖೆಗಳಲ್ಲಿ ಸಾಗುತ್ತದೆ. ಒಂದು ಸಂಸಾರದ ಚಿತ್ರಣ; ಇನ್ನೊಂದು ಮೇಳದ ಏಳು ಬೀಳುಗಳ ಚಿತ್ರಣ. ಇವೆರಡೂ ಕೊನೆಗೆ ಒಂದೇ ರೇಖೆಗೆ ಬರುವ ಪ್ರಯತ್ನವನ್ನು ಮಾಡುತ್ತಾವಾದರೂ ದುರಂತ ಸಂಭವಿಸುತ್ತಲೇ ಕಾದಂಬರಿಯ ಅಂತ್ಯವನ್ನು ಊಹಿಸಬಹುದಾಗಿದೆ. ಆದರೆ ಕಾದಂಬರಿಯ ಕೊನೆಯ ಪುಟಗಳಲ್ಲಿ ಒಂದು ತಿರುವು ಕಾಣಿಸಿಕೊಂಡು `ಸುಖಾಂತ’ದಲ್ಲಿ ಮುಗಿಯುವುದು ಒಂದು ನಿಟ್ಟುಸಿರಿಗೆ ಸಾಧ್ಯವಾಗುತ್ತದೆ. ಅದೇ, ಸುಬ್ಬಣ್ಣ ಮತ್ತೆ ಮಾಣೂರು ಮೇಳವನ್ನು ಸುಸ್ಥಿತಿಗೆ ತರುವ ಸಂಗತಿ ಅಭಿವ್ಯಕ್ತವಾಗುವುದು ಕಾದಂಬರಿಯ ಕೊನೆಯಲ್ಲಿ, ಓದುಗನಿಗೆ ಸಮಾಧಾನವಾಗುವ ರೀತಿಯಲ್ಲಿ.

ಇನ್ನು ಕಾದಂಬರಿಯಲ್ಲಿ ಬರುವ ಮಹಿಳಾ ಪಾತ್ರಗಳೆಲ್ಲವೂ ಒಂದು ರೀತಿಯ ತೊಳಲಾಟಗಳಲ್ಲಿ ಮುಳುಗಿರುವುದು ಕಾಣಿಸುತ್ತದೆ. ಬಾಲುವಿಗೆ ಮನಸೋತ ರಾಘಣ್ಣನ ಮಗಳು ಕಲ್ಯಾಣಿಯಾಗಲಿ, ಸುಬ್ಬಣ್ಣನನ್ನು ಮದುವೆಯಾಗುವ ಸುಗುಣಳಾಗಲಿ, ಬಾಲುವನ್ನು ಮಾನಸಿಕವಾಗಿ ಆಧಾರವೆಂದು ಬಯಸುವ ಪಾರ್ವತಿಯಾಗಲಿ, ಎಲ್ಲೂ ಒಂದು ಗಟ್ಟಿ ಪಾತ್ರವಾಗದೆ ತಮ್ಮೊಳಗೆ ನ್ಯೂನತೆಗಳನ್ನು ತುಂಬಿಕೊಂಡು ಇನ್ನೊಂದು ಪಾತ್ರವನ್ನು ಕೆಡಿಸಲು ಸೃಷ್ಟಿಯಾದಂತೆ ಕಾಣುತ್ತವೆ. ಸಾಂಸಾರಿಕ ಜಂಜಾಟಗಳಿಗೆ ಮೂಲ ಹೆಣ್ಣು ಅನ್ನುವುದನ್ನು ಇವು ಎತ್ತಿ ಹಿಡಿಯುವಂತೆ ಗೋಚರಿಸುತ್ತವೆ. ಈ ಮೂರು ಪಾತ್ರಗಳಲ್ಲಿ ಪಾರ್ವತಿಯ ಪಾತ್ರಚಿತ್ರಣ ಓದುಗನನ್ನು ಸೆಳೆದರೂ ಅವಳ ಮೇಲೆ ಅನುಕಂಪ ಮೂಡಲಿ ಅನ್ನುವ ದೃಷ್ಟಿಯಿಂದ ಚಿತ್ರಿಸದೆ, ಅವಳು ಅನಾಥೆಯಾಗಿಯೇ ಉಳಿದರೆ ಹೆಚ್ಚು ಪರಿಣಾಮಕಾರಿಯಾಬಹುದೆನ್ನುವ ಅಂಶವನ್ನೂ ಇಲ್ಲಿ ಕಾಣಬಹುದು. ಹಾಗೆಯೇ ಬಾಲುನಂತಹ ಒಬ್ಬ ಆದರ್ಶಪ್ರಾಯದ ಯುವಕ ತನ್ನನ್ನು ಮೆಚ್ಚಿ ಕೈಹಿಡಿದ ರೂಪಸಿಯಾದ ಹೆಣ್ಣು ಕಲ್ಯಾಣಿಯಿದ್ದರೂ ಪಾರ್ವತಿಯ ಅಸಹಾಯಕತೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಬಾಲುವಿನ ಬಗೆಗಿದ್ದ ಒಳ್ಳೆಯ ಭಾವನೆಯನ್ನು ನುಂಗಿ ಬಿಡುತ್ತದೆ. ಇದು ಕಲಾವಿದರಿಗೆ ಇರಬೇಕಾದ ಅರ್ಹತೆಯೋ? ಇಲ್ಲ, ಅವರ ಬಲಹೀನತೆಯೇನೋ? ಅನಿಸದಿರದು.

ಕಾದಂಬರಿಯ ಮೂಲ ತಿರುಳಿರುವುದು ಒಂದು ಕಲೆಯನ್ನು ಉಳಿಸುವಲ್ಲಿ ಏನೆಲ್ಲಾ ಕಷ್ಟಸಾಧ್ಯತೆಗಳಿವೆಯೆನ್ನುವುದನ್ನು ತಿಳಿಸುವುದೇ ಆದರೂ ಮೇಳದ ಆರ್ಥಿಕ ಸ್ಥಿತಿ, ಗತಿಗಳನ್ನೂ ಕೂಡ ತಿಳಿಸುತ್ತದೆ. ಮೇಳವನ್ನು ಕಟ್ಟಿಕೊಂಡು ಒಂದು ಕಲೆಯನ್ನು ಉಳಿಸುವುದಕ್ಕಾಗಿ ಸುಬ್ಬಣ್ಣನಂತಹ ಮಧ್ಯಮವರ್ಗದ ವ್ಯಕ್ತಿ, ರಾಘಣ್ಣ ಮತ್ತು ಬಾಲುವಿನಂತಹ ಉದಾರಿಗಳ ಸಹಾಯದಿಂದ ತನ್ನ ಹಠವನ್ನು ಸಾಧಿಸಿಯೇ ಬಿಡುತ್ತಾನೆ. ಕಲಾವಿದರಿಗೆ ಒಬ್ಬ ನೆಚ್ಚಿನ ವ್ಯವಸ್ಥಾಪಕನಾಗಿ ಕಲೆಯನ್ನು ಪೋಷಿಸುವ ದೃಷ್ಟಿಯಿಂದ ತೊಂದರೆಗಳನ್ನು ಎದುರಿಸುತ್ತಾ ಸುಸೂತ್ರವಾಗಿ ಮೇಳವನ್ನು ಮುನ್ನಡೆಸುತ್ತಾನೆ. ಆದರೆ ಅವನಲ್ಲಿರುವ ಕಲಾಸಕ್ತಿಗೆ ವ್ಯತಿರೀಕ್ತವಾಗಿ ಅವನ ಕೈ ಹಿಡಿದ ಸುಗುಣಳ ಗುಣ. ಪ್ರತೀಯೊಂದನ್ನು ಹಣದಿಂದ ಅಳೆಯುವ ಅವಳು ಕಲಾವಿದರಿಗೆ ದ್ರೋಹಬಗೆಯುವಂತೆ ನಡೆದುಕೊಳ್ಳುತ್ತಾಳೆ. ಐಶರಾಮದ ಜೀವನಕ್ಕೆ ಮಾರು ಹೋಗುವ ಅವಳು ತನಗೆ ಬೇಕಾಗಿರುವುದೆಲ್ಲವನ್ನೂ ಅನುಭವಿಸುತ್ತಾ ಸುಬ್ಬಣ್ಣನ ಬಾಳಿಗೂ ಮುಳ್ಳಾಗುತ್ತಾಳೆ. ಅದಕ್ಕೆ ಬೆನ್ನೆಲುಬಾಗಿ ಅವಳ ತಮ್ಮ ಆನಂದ ನಿಂತಿರುತ್ತಾನೆ. ಅನಗತ್ಯವಾಗಿ ಮೇಳದ ಮೇಲ್ವಿಚಾರಣೆಯಲ್ಲಿ ಮೂಗುತೂರಿಸಿ ಅಲ್ಲಿಯ ವ್ಯಸ್ಥೆಯನ್ನೇ ಕದಡುತ್ತಾನೆ. ಇದರ ಪರ್ಯವಸಾನವಾಗಿ ಕಲಾವಿದರು ಮೇಳವನ್ನು ತೊರೆಯುವುದಲ್ಲದೆ, ಮೇಳಕ್ಕೆ ಹೊಸ ಪ್ರಯೋಗವೆಂಬಂತೆ ಅಶ್ಲೀಲ ಪರಿವರ್ತನೆಗಳನ್ನು ತಂದು ಮುಳುಗಿಸುತ್ತಾನೆ.

ಮುಂದೆ ಸುಗುಣಳು ಕೂಡ ಸುಬ್ಬಣ್ಣನನ್ನು ಮೇಳದ ಕಡೆಗೆ ತಲೆ ಹಾಕದಂತೆ ಮಾಡಿ ಅವನಿಗೆ ಹುಚ್ಚನ ಪಟ್ಟವನ್ನು ಕಟ್ಟಿ ಅವನನ್ನು ಆಸ್ಪತ್ರೆಗೆ ಸೇರಿಸಿ ತಾನು ಕಂಡ ಕಂಡವರ ಜೊತೆಗೆ ಬದುಕನ್ನು ಹಂಚಿಕೊಳ್ಳುತ್ತಾಳೆ. ಆದರೆ ಕೊನೆಗೆ ಅವಳ ಗತಿಯೂ ಕೂಡ ಯಾರಿಗೂ ಬರಬಾರದ ಸ್ಥಿತಿಯಾಗಿ ಅಂತ್ಯವಾಗುವುದು ಕಥನದ ಕೊನೆಯಲ್ಲಿ.

ತಿಲ್ಲಾನ ಕಾದಂಬರಿಯ ರೀತಿಯಲ್ಲಿಯೇ ಸರಳ ಮತ್ತು ಸುಂದರವಾಗಿ ಮೂಡಿ ಬಂದಿರುವ ಧೀಂಗಿಣ ಕಾದಂಬರಿ ಕೂಡ ಪ್ರಾದೇಶಿಕತೆಯನ್ನು ಉಳಿಸಿಕೊಂಡಿರುವ ಕಾದಂಬರಿ. ಆಪ್ತವೆನಿಸುವ ಇಲ್ಲಿಯ ಚಿತ್ರಣಗಳಿಗಾದರೂ ಧೀಂಗಿಣವನ್ನು ಓದಲೇಬೇಕು.

No comments: