Sunday, March 20, 2011

ಪಿ. ಲಂಕೇಶ್ ಅವರ ‘ಅಕ್ಕ’


ಅಕ್ಕ ದೇವೀರಿಗೆ ಮೈಮೇಲೆ ಪ್ರೀತಿ ಬಂತೆಂದ್ರೆ ಅವ್ವನ ಹಾಗೆ ಎದೆಗೆ ತಬ್ಬ್ಕೊಂಡು ಮುತ್ತಿಡ್ತಾಳೆ; ಸಿಟ್ಟು ಬಂದ್ರೆ ಲಾತನೂ ಕೊಡ್ತಾಳೆ. ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ನನ್ನಕ್ಕ ನಾಲ್ಕು ದಿನದಿಂದ ಎಲ್ಲಿಗೆ ಹೋದ್ಲೋ?... ಇದು ಕ್ಯಾತ ಉರುಫ್ ಕೃಷ್ಣನ ಅಳಲು. ದಾರಿ ಹೋಕ ನೋಡುವ, ಚಿಂತಿಸುವ, ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ರೆ ಅವನಿಗೆ ಒಂದಲ್ಲ ಒಂದು ದಿನ ಈ ಕ್ಯಾತ ಅಥವಾ ಕೃಷ್ಣ ಸಿಕ್ಕೇ ಸಿಗುತ್ತಾನೆ. ಈ ಕ್ಯಾತನ ಹಟ್ಟಿ, ಅವನ ಅಕ್ಕ, ಅವರಿಬ್ಬರನ್ನು ಸುತ್ತುವರಿದ ರಾಜಕೀಯ - ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತೆ. ಕ್ಯಾತ ಕಂಡದ್ದನ್ನು ಹೇಳುವ ಈ ಪುಟ್ಟ ಕಾದಂಬರಿ ನಿಜಕ್ಕೂ ರಾಜಕೀಯ ಕಾದಂಬರಿ. ಇದು ಬೆನ್ನುಡಿಯಲ್ಲಿ ಲಂಕೇಶ್ ಅವರ ಮಾತುಗಳು. ಅರಿಕೆಯಲ್ಲಿಯೂ ಪುಟ್ಟ ಹುಡುಗನ ಮಾತಿನಲ್ಲಿಯೇ ಕಥೆಯನ್ನು ಸಿದ್ಧಪಡಿಸಿರುವುದಾಗಿ ಲಂಕೇಶ್ ಹೇಳಿಕೊಳ್ಳುತ್ತಾರೆ. ಹಾಗಾಗಿ ಇಡೀ ಕಾದಂಬರಿಯಲ್ಲಿ ಕ್ಯಾತನ ಶೈಲಿಯ ಅಲ್ಪಪ್ರಾಣ, ಮಹಾಪ್ರಾಣದ ಮಿಶ್ರಣ, ಸಕಾರ ಶಕಾರ ಷಕಾರದ ಅನಿಶ್ಚಯತೆಯನ್ನು ಹಾಗೆ ಇಟ್ಟುಕೊಂಡಿರುವುದು ಕಾದಂಬರಿಯ ವಿಶಿಷ್ಟತೆಯಾಗಿದೆ.

ನಿಷ್ಠುರವಾಗಿ ರಾಜಕೀಯದ ಬಗ್ಗೆ, ವ್ಯಕ್ತಿಗಳ ಬಗ್ಗೆ ಬರೆಯುತ್ತಿದ್ದ ಲಂಕೇಶ್ ಅವರ ವಿಶಿಷ್ಟ ಶೈಲಿಯ, ದೇಸಿ ಸೊಗಡಿನ, ಸ್ಲಂ ಏರಿಯಾದ ಹೀರೋನೊಬ್ಬನ ಭಾಷೆಯಲ್ಲಿಯೇ ಕಾದಂಬರಿಯಾಗಿಸುವ ‘ಅಕ್ಕ’ ರಾಜಕೀಯ ಮತ್ತು ಸಿನಿಮಾ ಜಗತ್ತಿನ ಗಬ್ಬು ನಾತವನ್ನು ಸ್ಲಂ ಏರಿಯಾದ ನಾತಕ್ಕಿಂತಲೂ ಕಟುವಾಗಿ ಹೊರಗೆಳೆಯುವ ಚಿತ್ರಣವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಕೇವಲ ಕ್ಯಾತ ಮಾತ್ರವಲ್ಲ, ಅಲ್ಲಿಯ ಪರಿಸರದ ನೂರಾರು ಕ್ಯಾತರುಗಳ ಅನಾಥ ಪ್ರಜ್ಞೆ, ಹಸಿವು, ಅಸಹಾಯಕತೆ, ನೋವು, ಅನಿವಾರ್ಯತೆಗಳನ್ನು ಮತ್ತು ಸಂಭಾವಿತರ ಬದುಕಿನ ಇನ್ನೊಂದು ಮುಖವನ್ನು ತೆರೆದಿಡುವ ಈ ಕಥನಕದ ನಿರೂಪಣಾ ಶೈಲಿಯಾಗಲಿ, ಬಳಸಿದ ಭಾಷೆಯಾಗಲಿ ಎಲ್ಲೂ ದೋಷವೆನಿಸದೆ ಸ್ವತಂತ್ರವಾಗಿ ಓದಿಸಿಕೊಂಡು ಹೋಗುವುದಲ್ಲದೆ; ಬದುಕಿಲ್ಲದೆ ಬದುಕುವವರ ಬವಣೆಗಳನ್ನು ಮನಮುಟ್ಟುವಂತೆ ದಾಖಲಿಸಿದೆ.

ಈ ಕಾದಂಬರಿಯಲ್ಲಿ ಕ್ಯಾತ, ‘ಅಕ್ಕ’ ದೇವೀರಿಯ ಬಗ್ಗೆ ಹೇಳುತ್ತಾ ತಾನು ಬೆಳೆದು ಬಂದ ಪರಿಸರ; ಅಲ್ಲಿಯ ಅಸಹಾಯಕತೆ, ಇನ್ನೊಬ್ಬರಿಗೆ ಬಲಿಯಾಗುವ ಅನಿವಾರ್ಯತೆ ಎಲ್ಲವನ್ನೂ ಸಹಿಸಿಕೊಂಡು ಮುಂದೊಂದು ದಿನ ಒಳ್ಳೆಯದಾಗಬಹುದೆನ್ನುವ ಆಶಾದಾಯಕ ನಿಲುವನ್ನು ಹೊಂದಿರುವವ.

ಬಾಲ್ಯದ ದಿನಗಳಲ್ಲಿ ದೇವೀರಿಯ ಕಾರ್ಯವೈಖರಿಗಳು ಏನೆಂದು ಅರಿಯದ ಕ್ಯಾತನಿಗೆ ತಾನು ವಯಸ್ಸಿಗೆ ಬಂದಾಗ ಅವಲೋಕನ ನಡೆಸಿದಾಗ ಅವಳು ಯಾವ ಒತ್ತಡಕ್ಕೆ ಸಿಲುಕಿ ಎಂತಹ ಕೆಲಸಕ್ಕೆ ಇಳಿದಿದ್ದಾಳೆನ್ನುವುದು ಅರಿವಾಗುತ್ತಲೇ ಅವಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದರಲ್ಲಿಯೂ ಅವನಿಗೆ ‘ಅಕ್ಕ’ನ ಮೇಲೆ ಪ್ರೀತಿಯೇ ಇದೆ. ಸ್ಲಂ ಏರಿಯಾದಲ್ಲಿ ಬೆಳೆದು ಜೀವನ ಹೋರಾಟದ ಅನಿವಾರ್ಯತೆಯಲ್ಲಿ ದಾರಿ ತಪ್ಪಿಸುವ ಮತ್ತು ಅಡ್ಡ ದಾರಿ ಹಿಡಿಯುವುದಕ್ಕೆ ಪ್ರೇರೇಪಿಸುವ ಕ್ಷುದ್ರ ಶಕ್ತಿಗಳ ನಡುವೆ ಬದುಕಿನ ದಾರಿಯೆನೆಂದು ತಿಳಿಯದೆ ಅದನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಆ ಗಬ್ಬು ನಾತ, ಸೊಳ್ಳೆಗಳು, ರೋಗಗಳು, ವಾಸನೆಗಳಲ್ಲಿಯೇ ಬದುಕು ಸುಖಮಯವಾಗಿರುವುದು ಅಲ್ಲಿಯ ಜನರಿಗೆ.

ದೇವೀರಿ ಕೊಳಕು ದಂಧೆಯಲ್ಲಿ ಸಿಲುಕಿಕೊಂಡಿದ್ದರೂ ಅವಳು ಸಬಲೆ, ಯಾರನ್ನಾದರೂ ಎದುರಿಸಬಲ್ಲ ಧೀರೆ ಅನ್ನುವ ಅಭಿಮಾನದ ಜೊತೆಗೆ ಅವಳು ಲಕ್ಷಣವಾಗಿ ಆಫೀಸಿನಲ್ಲೋ, ಇನ್ಯಾವುದೋ ಕಚೇರಿಯಲ್ಲೋ ದುಡಿದು ಬರುವವಳು ಅಥವಾ ಗಾರೆ ಕೆಲಸಕ್ಕೆ ಹೋಗಿ ಸುಸ್ತಾಗಿ ಬರುವವಳೆನ್ನುವ ಕ್ಯಾತನ ತಿಳುವಳಿಕೆ ಬುಡಮೇಲಾಗುವುದು ಅವನನ್ನು ಸಿಂಗಾರ ಸೆಟ್ಟಿಯ ಮನೆ ಕೆಲಸಕ್ಕೆ ಹಚ್ಚಿ, ರಮಿಸಿ ಅವಳು ಅಟೋ ಹತ್ತಿ ಹೋದ ಬಳಿಕ. ಅದೇ ಕೊನೆಯ ದಿನ, ಮತ್ತೆಂದೂ ಅವನು ಅಕ್ಕನನ್ನು ನೋಡಲಿಲ್ಲ. ಅವಳು ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ಯಾರ ಮನೆಯಲ್ಲಿರುವಳೋ? ಯಾರ ಜೊತೆಗಿರುವಳೋ? ಒಂದೂ ಕ್ಯಾತನಿಗೆ ತಿಳಿದಿಲ್ಲ. ಆದರೆ ಅಕ್ಕನ ಬಗ್ಗೆ ಯೋಚಿಸುತ್ತಲೇ ಇದ್ದಾನೆ.

ಈ ಕಾದಂಬರಿಯಲ್ಲಿ ದೇವೀರಿಯನ್ನು ಕ್ಯಾತನ ಕಣ್ಣಿನಿಂದ ನೋಡುವುದರ ಜೊತೆಗೆ ಅವಳ ಪರಿಸ್ಥಿತಿಯನ್ನು ಅರಿಯಬೇಕಾಗಿರುವುದು ಮುಖ್ಯ. ತಾಯಿ ತಂದೆಯನ್ನು ಕಳೆದುಕೊಂಡ ಬಳಿಕ ತಂದೆಯ ಹೂವಿನ ಅಂಗಡಿಯೂ ಮುಚ್ಚಿ ನಿರ್ಗತಿಕ ಸ್ಥಿತಿ ತಲುಪುವ ಹೊತ್ತಿಗೆ ರಾಮಪ್ಪನವರ ಸಹಾಯದಿಂದ ನರಸಿಂಹ ಮೇಸ್ತ್ರಿಯ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಬದುಕುತ್ತಿರುವಾಗಲೇ ಪದೇ ಪದೇ ಅವಳ ಮನೆಗೆ ಬರುವ ನಾಗ್ರಾಜ ಮತ್ತು ಖಡವಾ ಅವಳ ಬಾಡಿಗಾರ್ಡುಗಳಂತೆ ಕಂಡರೂ, ಅವರೂ ಕೂಡ ದೇವೀರಿಯನ್ನು ಶೋಷಣೆಗೆ ತಳ್ಳುವವರೆ. ಶೋಷಣೆಯ ವಿರುದ್ಧ ದನಿ ಎತ್ತುವ ದೇವೀರಿ ಪರಿಸ್ಥಿತಿಯ ಕೈಗೊಂಬೆಯಾಗಿ ಬೇಡದ ಬದುಕನ್ನು ನೆಚ್ಚಿಕೊಳ್ಳಲೇಬೇಕಾಗುತ್ತದೆ.

ತಟಕ್ಕನೆ ಮನೆ ಕೆಲಸಗಳನ್ನು ಮುಗಿಸಿ ಅಲಂಕರಿಸಿಕೊಂಡು ಎಲ್ಲೋ ಮರೆಯಾಗುವ ಅವಳ ವೃತ್ತಿ ಏನು ಅನ್ನುವುದು ಓದುಗನನ್ನು ಕಾಡುವುದಾದರೂ ಅಲ್ಲಿ ಅವಳ ಹತಾಶೆ, ಸಿಟ್ಟು, ಕೋಪದ ಪ್ರದರ್ಶನವಾಗುವುದು ಕ್ಯಾತನ ಮೇಲೆ. ಅಕ್ಕ ಮುದ್ದಿಸುವುದರ ಜೊತೆಗೆ ಗುದ್ದು ಕೊಡುತ್ತಾಳಾದರೂ ಅವಳ ದಯನೀಯ ಸ್ಥಿತಿಗೆ ಮರುಗುವ ಎಳೆ ಮನಸ್ಸು, ಮುಗ್ಧತೆಯಿಂದ ರಾತ್ರಿ ಮಲಗುವಾಗ ಅವಳ ಬೆಚ್ಚಗಿನ ದೇಹದವನ್ನು ಅಪ್ಪಿಕೊಂಡು ಅವ್ವನ ನೆನಪು ಕಾಡುತ್ತಾ ಮತ್ತದೇ ಮುಗ್ಧತೆಯ ಪ್ರಶ್ನೆಗಳನ್ನು ಕೇಳುವಾಗಲೂ ಎಂತಹ ಕಲ್ಲು ಹೃದಯ ಕೂಡ ಕರಗಬೇಕು. ಇಲ್ಲಿ ರಾಜಕೀಯದ ದುರ್ನಾತಕ್ಕಿಂತಲೂ ಅಸಹಾಯಕ ಜನರ ಕೂಗು ಮಾರ್ದನಿಸುವುದನ್ನು ಗುರುತಿಸಬಹುದು. ರಾಜಕೀಯ ವ್ಯಕ್ತಿಗಳ ಸ್ವಾರ್ಥ ಮತ್ತು ಸ್ಲಂ ಜನರ ಬದುಕಿನ ಅಸಹಾಯಕ ಕೂಗು ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಡದು.

ದೇವೀರಿಯ ಆ ಸ್ಥಿತಿಗೆ ರಾಜಕೀಯ ವ್ಯಕ್ತಿಗಳೇ ಕಾರಣವೆನ್ನುವುದು ಸ್ಪಷ್ಟವಾಗುತ್ತದೆ. ನಿಜವಾಗಿಯೂ ದೇವೀರಿಗೆ ತಾನೊಬ್ಬ ನಟಿಯಾಗಬೇಕೆನ್ನುವ ಬಯಕೆಯಿರುತ್ತದೆ. ಆದರೆ ಅವಳು ನಟನೆಗೆ ಇಳಿದರೆ ತಮಗೆ ದಕ್ಕುವುದಿಲ್ಲವೆಂದು ತಿಳಿದು ರಾಮಪ್ಪನೆಂಬ ಪುಢಾರಿ ನಾಗ್ರಾಜ ಮತ್ತು ಖಡವಾರನ್ನು ಅವಳ ಕಾವಲಿಗೆ ಬಿಡುತ್ತಾರೆ. ಅದೇ ರೀತಿ ನರಸಿಂಹ ಮೇಸ್ತ್ರಿಯೂ ಅವಳನ್ನು ದುರುಪಯೋಗ ಪಡಿಸಿಕೊಂಡವ. ಇಂತಹ ವ್ಯಕ್ತಿಗಳ ನಡುವೆ ಅವಳು ಬೆಳೆದು ಕೆಲವೊಮ್ಮೆ ಪ್ರತಿಭಟಿಸುವುದನ್ನು ಕಲಿತುಕೊಂಡವಳು.

ಕ್ಯಾತನಿಗೆ ಅಕ್ಕನ ಮೇಲೆ ಸಿಟ್ಟಿದ್ದರೂ ಅವನಿಗೆ ಖುಷಿ ಕೊಡುವ ಸಂಗತಿಗಳೆಂದರೆ ಸಿನಿಮಾದಲ್ಲಿ ನಟಿಸುವ ಪದ್ದಿ ಮತ್ತು ಆಕೆಯ ಆತ್ಮೀಯತೆ ಹಾಗೂ ಸುಧೀರನ ಗೆಳೆತನ. ಸುಧೀರ ತನಗಿಂತಲೂ ಸುಸ್ಥಿತಿಯಲ್ಲಿರುವವನು ಹಾಗೆಯೇ ಪದ್ದಿ ಸದಾ ಸಿನಿಮಾ ಮಂದಿಯೊಂದಿಗೆ ಬೆರೆಯುತ್ತಾ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವವಳು.

ಒಮ್ಮೆ ರಾಮಪ್ಪನ ಮನೆಗೆ ಹೋಗಿ ಬಾಡಿಗೆ ವಿಷಯ ಮಾತನಾಡಬೇಕಾದ ಕ್ಯಾತ, ದೇವೀರಿ ಹೇಳಿದರೂ ಅಲ್ಲಿ ಹೋಗದೆ ಹೋಗಿದ್ದೇನೆಂದು ಸುಳ್ಳು ಹೇಳುತ್ತಾನೆ. ದೇವೀರಿಗೆ ಅವನು ಸುಳ್ಳು ಹೇಳುವುದು ಮನದಟ್ಟಾಗಿರುತ್ತದೆ. ಅವನನ್ನು ಚೆನ್ನಾಗಿ ಹೊಡೆದು ಬಡಿದು ಮಾಡುವಷ್ಟರಲ್ಲಿ ರಂಗಜೆಟ್ಟಿ ಅವನನ್ನು ಬಿಡಿಸಿಕೊಂಡು ಹೋಗುತ್ತಾನೆ. ಇಷ್ಟಾದರೂ ರಾತ್ರಿ ಹೊತ್ತು ಅನಾಥ ಹುಡುಗ ಕ್ಯಾತ ಓದುವ ನೆಪದಲ್ಲಿ ಪುಸ್ತಕವನ್ನು ಹಿಡಿದುಕೊಂಡು ಕುಳಿತಿರಬೇಕಾದರೆ ದೇವೀರಿ ಶಾಂತವಾದ ದನಿಯಿಂದ ಅವನನ್ನು ಮಲಗುವಂತೆ ಹೇಳುತ್ತಾಳೆ. ಕ್ಯಾತನಿಗೆ ಅಚ್ಚರಿ ಆ ಸಮಯದಲ್ಲಿ ಅವನಾಡುವ ಮಾತುಗಳು ಯಾರನ್ನಾದರೂ ಭಾವುಕನನ್ನಾಗಿ ಮಾಡದಿರದು.

‘ದೇವೀರಿ ದುಪ್ಪಟಿ ಎಳೆದುಕೊಂಡು ಮಲಗಲು ರೆಡಿಯಾದಳು. ಕ್ಯಾತ ಪಾಟಿನ ಚೀಲ ಎಳೆದುಕೊಂಡ. ದೇವೀರಿ ಸುಮ್ಮನೆ ಇದ್ದಳು. ಆದ್ರೂ ಯಾಕೋ ಆಕೆ ಮನಸ್ಸಿನಾಗೆ ಅಳ್ತಿದ್ದಂಗಿತ್ತು. ದೇವೀರಿ ದೀಪ ಆರಿಸಿದಳು. ಸುತ್ತ ಕತ್ತಲು ಸಾರ್. ಬೇಜಾನ್ ಕತ್ತಲು. ಎಲ್ಲೂ ಒಂದು ಚೂರು ಗದ್ಲ ಇಲ್ಲ. ದೇವೀರಿ ಕ್ಯಾತನ್ನ ಮಗುವನ್ನು ಎತ್ತಿಕಂಡಂಗೆ ಉಸೇವಕ್ಕೆ ಎತ್ತಿಕೊಂಡು ಪಕ್ಕಕ್ಕೆ ಮಲಗಿಸಿಕೊಂಡಳು. ಹಂಗೇ ಬರ್ತಿದ್ದ ನಿದ್ರೆ ಹೊಂಟೋಯ್ತು ಸಾರ್, ನಮ್ಮವ್ವ ನನ್ನ ಮಲಗಿಸಿಕಂಡಂಗೆ ಸೊಂಟದ ಸುತ್ತ ಕೈ ಹಾಕಿ ಎಳಕೊಂಡು ಎದೆಗೆ ಅಪ್ಪಿಕೊಂಡ್ಳು ದೇವೀರಿ. ಬೆಚ್ಚಗೆ. ಎಷ್ಟು ಬೆಚ್ಚಗೆ, ಮೆತ್ತಗಿದ್ಲು ದೇವೀರಿ. ನಂಗೆ ತಡಿಯಾಕಾಗ್ದಷ್ಟು ಅಳು ಬಂತು. ಅತ್ತರೆ ಮತ್ತೆ ದೊಡ್ಡ ಗಲಾಟೆ ಆಗ್ತದೆ ಅಂತ ತಡಕಂಡೆ. ಆದರೆ ದೇವೀರಿ ಅಳಾಕೆ ಶುರುಮಾಡಿದ್ಲು ಸಾರ್.’ ಇಡೀ ಪ್ಯಾರಾದಲ್ಲಿ ದೇವೀರಿಯ ನೋವು ಓದುಗನನ್ನು ತಟ್ಟುವುದಲ್ಲದೆ ಒಬ್ಬ ಅಸಹಾಯಕ ಹುಡುಗನ ಮುಗ್ಧತೆಯನ್ನು ಬಿಚ್ಚಿಟ್ಟು ಭಾವುಕರನ್ನಾಗಿಸುತ್ತದೆ. ಇಂತಹ ಎರಡು ಮೂರು ಪ್ರಸಂಗಗಳು ಕಾದಂಬರಿಯಲ್ಲಿ ಬರುತ್ತವಾದರೂ ಅಲ್ಲಿಯೇ ಕ್ಯಾತನ ಪ್ರವೇಶವಾಗುತ್ತಲೆ ನಮ್ಮನ್ನು ವಾಸ್ತವಕ್ಕೆ ತರುತ್ತದೆ.

ಇಂತಹ ಅಪರೂಪದ ಕಾದಂಬರಿಯನ್ನು ಓದುವಾಗ ಸ್ಲಂ ಜನರ ಆಶಾದಾಯಕ ನಿರೀಕ್ಷೆಯನ್ನು ನೆನಪಿಸುವ ಘಟನೆ ನೆನಪಾಗುತ್ತದೆ. ಯಾರೇ ಆಗಲಿ ಕ್ಯಾಮರಾ ಹಿಡಿದುಕೊಂಡು ಸ್ಲಂ ಏರಿಯಾದಲ್ಲಿ ನಡೆದರೆ ಸಾಕು ಅವನು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಇತ್ತೀಚೆಗೆ ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ ಗೆಳೆಯನೊಬ್ಬ ಹೇಳಿದ ಮಾತುಗಳು ನೆನಪಾಗುತ್ತವೆ. ಅವನು ಸುಮ್ಮನೆ ಸ್ಲಂ ಏರಿಯಾದ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾಗ ಅಲ್ಲಿಯ ಮಹಿಳೆಯರೆಲ್ಲ ಸೇರಿ ಅವನು ಪತ್ರಿಕೆಯವನೆಂದು ತಿಳಿದು, ‘ಸಾರ್ ಇಲ್ಲಿ ನಮಗೆ ಮೂಲಭೂತ ಸೌಕರ್ಯಗಳೇ ಇಲ್ಲ ಸಾರ್, ನಮ್ಮ ಗುಡುಸ್ಲು ನೋಡಿ ಸಾರ್. ನೀವೇನಾದರೂ ಪೇಪರ್ನಲ್ಲಿ ಹಾಕಿಸಿಬಿಟ್ರೆ ನಮ್ಮ ಬಗ್ಗೆ ಯಾರಿಗಾದ್ರೂ ಕನಿಕರ ಮೂಡಬಹುದು, ಸಾರ್’ ಅಂತ ಅಲವತ್ತುಕೊಂಡರಂತೆ. ಈ ರೀತಿಯ ನಿರ್ಲಕ್ಷಕ್ಕೊಳಗಾಗಿರುವ ಅದೆಷ್ಟೋ ಏರಿಯಾಗಳಲ್ಲಿ ಕ್ಯಾತನಂತಹ ಮುಗ್ಧ ಹುಡುಗರು, ದೇವೀರಿಯಂತಹ ಶೋಷಣೆಗೊಳಗಾದ ಹೆಣ್ಣುಗಳು ಇದ್ದಾರೋ. ಆದರೆ ಅವರ ಬವಣೆಗಳು ಅವರಿಗೆ...

ಈ ನಿಟ್ಟಿನಲ್ಲಿ ಲಂಕೇಶ್ ಅವರು ‘ಅಕ್ಕ’ ಕಾದಂಬರಿಯಲ್ಲಿ ರಾಜಕೀಯ ಹುನ್ನಾರವನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಬಹಳ ಸಮಯದ ಬಳಿಕ ಒಂದು ಒಳ್ಳೆಯ ಮತ್ತು ನೂತನ ಶೈಲಿಯ ಕಾದಂಬರಿಯನ್ನು ಓದಿದ ಅನುಭವವಾಯಿತು. ಅನಾಥಾಶ್ರಮದ ಉಸಿರುಕಟ್ಟಿಸುವ ವಾತಾವರಣವನ್ನು ನಿರಾಕರಿಸುತ್ತಲೇ, ತನ್ನ ಹಟ್ಟಿಯ ನಾತವನ್ನು ನೆನಪಿಸಿಕೊಳ್ಳುವ ಕ್ಯಾತ ಈಗಲೂ ಕಾಡುತ್ತಲೇ ಇರುತ್ತಾನೆ. ಯಾರಿಗೂ, ಕೊನೆಗೆ ಕ್ಯಾತನಿಗೂ ಹೇಳದೆ ರಿಕ್ಷಾ ಏರಿದ ದೇವೀರಿ ಎಲ್ಲಿಯೋ ನೋವು ಅನುಭವಿಸುತ್ತಿದ್ದಾಳೆ ಅನಿಸುತ್ತದೆ. ‘ಅಕ್ಕ’ ಓದಲೇಬೇಕಾದ ಒಂದು ಒಳ್ಳೆಯ ಕಾದಂಬರಿ.

No comments: