Thursday, March 3, 2011

ಕೊರೆಲ್


ವಿಶ್ವವಿಖ್ಯಾತ ಬಂಗಾಲಿ ಕಾದಂಬರಿಕಾರ ಶರಚ್ಚಂದ್ರ ಚಟರ್ಜಿ (ಶರತ್ ಚಂದ್ರ ಚಟ್ಟೋಪಾಧ್ಯಾಯ) ಯವರ ಕಾದಂಬರಿ ‘ಕೊರೆಲ್’ ಸರಳ, ಸುಂದರ ಕಥಾವಸ್ತುವುಳ್ಳ ಕೃತಿ. ಕೊರೆಲ್ ಲಂಡನ್ ಸಮೀಪದ ಒಂದು ಊರಿನ ಹೆಸರು. ಈ ಕಾದಂಬರಿಯ ಕಾಲ, ಆಗಿನ್ನೂ ಬರ್ಮಾ ಬ್ರಿಟಿಷರ ಸಂಸ್ಥಾನಕ್ಕೆ ಒಳಪಟ್ಟಿರಲಿಲ್ಲ. ಆ ಸಮಯದಲ್ಲಿ ನಡೆಯುವ ಒಂದು ಘಟನೆಯೇ ಇಲ್ಲಿ ಮುಖ್ಯ ಕಥನಕ. ಎರಡು ಕುಟುಂಬಗಳ ಎರಡನೆ ತಲೆಮಾರಿನಲ್ಲಿಯ ರಾಗ-ದ್ವೇಷದಂತೆ ಕಂಡರೂ ಆ ಕುಟುಂಬಗಳ ಸಂಘರ್ಷ, ಕಲಹಗಳು ಇಲ್ಲಿ ಮುಖ್ಯವಾಗಿರುವುದಿಲ್ಲ."

ಇಲ್ಲಿ ಇಬ್ಬರು ನಿವೃತ್ತ ಸೈನಿಕರು ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಅಟ್ಟಲಿಕೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಅವರಿಬ್ಬರೂ ಸಂಸಾರಸ್ಥರಾಗಿದ್ದು, ಸುಂದರ ಜೀವನ ಅವರದ್ದು. ಒಬ್ಬನಿಗೆ ಲಿವೋ ಅನ್ನುವ ಒಂದು ಗಂಡು ಮಗು, ಮತ್ತೊಬ್ಬನಿಗೆ ಮೇರಿ ಅನ್ನುವ ಹೆಣ್ಣು ಮಗುವಿರುತ್ತದೆ. ಲಿವೋನ ತಾಯಿ ಅಸ್ವಸ್ಥದಿಂದ ಮರಣಿಸಿದ ಬಳಿಕ ಆತನನ್ನು ಮೇರಿಯ ತಾಯಿಯು ಬಹಳ ಕಾಳಜಿಯಿಂದ ಬೆಳೆಸುತ್ತಾಳೆ. ಪತ್ನಿ ವಿಯೋಗದಿಂದ ಲಿವೋನ ತಂದೆ ಜೂಜಾಟಕ್ಕೆ ಇಳಿದು ಆಸ್ತಿಯನ್ನೆಲ್ಲಾ ಕಳೆದುಕೊಂಡು ಕೊನೆಗೆ ಮನೆಯನ್ನು ಮೇರಿಯ ತಂದೆಯ ಬಳಿ ಅಡವಿಡುತ್ತಾನೆ. ಹುಟ್ಟಿನಿಂದ ಬಡವನಲ್ಲವಾದರೂ ಲಿವೋ ಬಡತನಕ್ಕೆ ಸಿಲುಕುತ್ತಾನೆ. ಆತ ಸ್ವಾಭಿಮಾನಿ. ತಂದೆಯ ಸಾಲದ ಹೊರೆಯಿದ್ದರೂ ಅದನ್ನು ತೀರಿಸಬೇಕೆನ್ನುವ ದೃಢ ನಿರ್ಧಾರವಿರುವವನು.

ಬದುಕು ಒಂದೇ ತೆರನಾಗಿರುವುದಿಲ್ಲ. ಕಾಲಕ್ರಮೇಣ ಲಿವೋನಂತೆಯೇ ಮೇರಿಯೂ ಕೂಡ ತಂದೆ- ತಾಯಿಯರನ್ನು ಕಳೆದುಕೊಂಡು ಅನಾಥಳಾಗುತ್ತಾಳೆ. ಲಿವೋ ಅವಳನ್ನು ಸಾಂತ್ವನಿಸುತ್ತಾನೆ.

ಆದರೆ ಲಿವೋನಿಗೆ ತಾನೊಬ್ಬ ಸಾಲಗಾರ; ತನ್ನ ಜೀವಿತದಲ್ಲಿ ಮೇರಿಯ ಸಾಲವನ್ನು ತೀರಿಸಿ ಋಣಮುಕ್ತನಾಗಬೇಕೆಂದು ಬಯಸುತ್ತಾನೆ. ಮೇರಿಯಾದರೂ ಶ್ರೀಮಂತಿಕೆಯಿಂದ ಮತ್ತು ಚೆಲುವಿನಿಂದ ರಾರಾಜಿಸುತ್ತಿರುತ್ತಾಳೆ. ಲಿವೋನೊಳಗಿರುವ ಕೀಳರಿಮೆಯೋ ಅಥವಾ ತಾಳ್ಮೆಯೋ ಅವನನ್ನು ಮೇರಿಯಿಂದ ದೂರವಿರುವಂತೆ ಮಾಡುತ್ತದೆ. ಮೇರಿಯಾದರೂ ಸ್ವತಂತ್ರಳು ಮತ್ತು ಅವಳಿಗೆ ಬೇಕಾದ ರೀತಿಯಲ್ಲಿ ಬದುಕುವವಳು. ಬರವಣಿಗೆಯ ಹುಚ್ಚು ಬೆಳೆಸಿಕೊಂಡ ಲಿವೋಗೆ ಅವಳ ಸ್ವಾತಂತ್ರ್ಯ ಮತ್ತು ಸ್ವಚಂದದ ಬದುಕು ಎಲ್ಲೋ ದಾರಿ ತಪ್ಪುತ್ತಿದೆಯೆಂದು ತಿಳಿಯುತ್ತದೆ. ಮೇರಿ ಒಮ್ಮೆ ಮಿತಿಮೀರಿ ಕುಡಿದು ಗೆಳೆಯರ ಜೊತೆಗೆ ಪಿಯಾನೋ ನುಡಿಸುತ್ತಾ ಇಡೀ ರಾತ್ರಿ ಕಳೆಯುವಾಗ ಲಿವೋ ಅವಳಿಗೆ ಬುದ್ಧಿಮಾತು ಹೇಳುತ್ತಾನೆ.

ಸುಖದ ದಾರಿಯನ್ನು ಸವೆಸಿಕೊಂಡ ಮೇರಿಗಾದರೂ ಲಿವೋನ ಬುದ್ಧಿವಾದ ಹೊರೆಯೆನಿಸಿ ಅವನನ್ನು ಅವಮಾನಿಸಿ, ತಿರಸ್ಕರಿಸುತ್ತಾಳೆ. ಅದಲ್ಲದೆ, ಒಳಗೊಳಗೆ ದ್ವೇಷದ ಕಿಚ್ಚನ್ನು ಹೊತ್ತಿಸಿಕೊಳ್ಳುತ್ತಾಳೆ. ಅವಳ ಉದ್ದೇಶವೇನಿದೆಯೆಂದರೆ ಹೇಗಾದರೂ ಸರಿಯೇ ಲಿವೋ ಅವಳಿಂದ ಅವಮಾನಿತನಾಗಬೇಕೆಂದು ಕಾಯುತ್ತಿರುತ್ತಾಳೆ.

ಲಿವೋ ಬಹಳ ತಾಳ್ಮೆಯ ಮತ್ತು ಸಹನಾಶೀಲ ವ್ಯಕ್ತಿತ್ವದವನು. ಮೇರಿಯ ಅಪಾರ್ಥವನ್ನು ಅರ್ಥೈಸಿಕೊಂಡು ಅವಳ ಮನೆಗೆ ಬಂದು ಹೋಗುವವರ ಗದ್ದಲಗಳನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ. ಅವಳಿಗೆ ಬುದ್ಧಿವಾದ ಹೇಳುವುದು ಕೂಡ ನಿಶ್ಪ್ರಯೋಜಕವೆಂದು ತಿಳಿಯುತ್ತಾನೆ. ಆದರೆ ಅವಳು ಮರುದಿನ ಲಿವೋನ ಮನೆಗೆ ಬಂದು ಅವನನ್ನು ಕರೆಯುತ್ತಾಳೆ. ಲಿವೋ ಅವಳು ಕುಡಿದು ನಶೆ ಏರಿಸಿಕೊಂಡಿರುವುದನ್ನು ಗಮನಿಸಿ, ಕುಡಿಯುವುದನ್ನು ಕಡಿಮೆ ಮಾಡಬೇಕೆಂದು ಅವಳನ್ನು ಕೇಳುತ್ತಾನೆ. ಇದರಿಂದ ಕುಪಿತಳಾದ ಮೇರಿಯು ತಾನು ಕುಡಿದಿಲ್ಲವೆಂದು ವಾದಿಸುತ್ತಾಳೆ. ಆಗ ಲಿವೋ ಅವಳನ್ನು ಸುಧಾರಿಸಿಕೊ, ಇಲ್ಲ ಮನೆಗೆ ಹೋಗು ಎಂದು ಕಾಳಜಿಯಿಂದ ಹೇಳುತ್ತಾನೆ. ಇದರಿಂದ ಅವಮಾನಿತಳಾದ ಅವಳು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಹಗೆ ಸಾಧಿಸುವಂತೆ ಹಿಂತಿರುಗುತ್ತಾಳೆ.

ಹೀಗೆ ಮುಂದೊಂದು ದಿನ ತನ್ನ ಹುಟ್ಟು ಹಬ್ಬದ ದಿನದಂದು ಒಬ್ಬ ಜಾದೂಗಾರನನ್ನು ಕರೆಸಿ, ಅವನಿಂದ ಜಾದೂ ಪ್ರದರ್ಶನವನ್ನು ನಡೆಸಿಕೊಡುವಂತೆ ಕೋರುತ್ತಾಳೆ. ಆದರೆ ಆತ ಆ ದಿನ ಬರದೆ ಕೈಕೊಡುತ್ತಾನೆ. ಮೇರಿ ಅವಮಾನಿತಳಾಗಿ ಅಳುತ್ತಾಳೆ. ಈ ವಿಷಯ ತಿಳಿದ ಲಿವೋ ಅವಳ ಮನೆಗೆ ಬಂದು ಪಿಯಾನೋ ನುಡಿಸಿ ಸೇರಿದವರನ್ನು ರಂಜಿಸುತ್ತಾನೆ. ಆವರೆಗೆ ಅವಳಲ್ಲಿದ್ದ ದ್ವೇಷವೆಲ್ಲ ಕರಗಿ ಲಿವೋನನ್ನು ಅಪ್ಪಿ ಹಿಡಿದು ಅಳುತ್ತಾಳೆ. ಲಿವೋ ತನ್ನ ಸಾಲದ ಋಣದಿಂದ ಮುಕ್ತನಾಗಿದ್ದರೂ ಮೇರಿಯ ಪ್ರೀತಿಯಲ್ಲಿ ಕರಗಿ ಹೋಗುತ್ತಾನೆ. ಇದು ಕಥೆಯ ಸಂಕ್ಷಿಪ್ತ ರೂಪ.

ಈ ಕಾದಂಬರಿಯ ಕಾಲವಾಗಲಿ, ನಡೆಯುವ ಘಟನೆಯಾಗಲಿ ಈಗಿನ ಸಂದರ್ಭಕ್ಕೆ ಅಪ್ರಸ್ತುತವೆನಿಸುತ್ತದೆ. ಇಲ್ಲಿ ಕೇವಲ ಪ್ರೀತಿ, ದ್ವೇಷಗಳ ಬಗ್ಗೆ ಮಾತ್ರವಿರದೆ ಒಂದು ಅನೂಹ್ಯ ಸಂಬಂಧವನ್ನು ಬಿಚ್ಚಿಕೊಡುತ್ತದೆ. ಮೇಲ್ನೋಟಕ್ಕೆ ಕಥಾನಾಯಕ ನಾಯಕಿಯರು ನೆರೆಕರೆಯವರಾದರೂ ಅವರಲ್ಲಿ ಆ ಸಂಬಂಧಕ್ಕಿಂತಲೂ ಇಲ್ಲಿ ಅವರು ಮಾಮೂಲು ವ್ಯಕ್ತಿಗಳಾಗಿ ಗೋಚರಿಸುತ್ತಾರೆ. ಕೆಲವೇ ಕೆಲವು ಪಾತ್ರಗಳ ಮೂಲಕ ಅಭಿವ್ಯಕ್ತವಾಗುವ ಇಲ್ಲಿಯ ಪ್ರಸಂಗ ಹೆಚ್ಚು ಶ್ರಮವಿಲ್ಲದೆ ಓದಿಸಿಕೊಂಡು ಹೋಗುತ್ತದೆ. ಪ್ರಯತ್ನಿಸಿದಲ್ಲಿ ಕೊರೆಲ್ ಇಂಗ್ಲೀಷ್ ಸಾಹಿತ್ಯದಲ್ಲಿರುವ ನಾಟಕಗಳಂತೆ ರಂಗಪ್ರದರ್ಶನಕ್ಕೆ ಹೇಳಿ ಮಾಡಿಸಿದ ಹಾಗೆ ಇದೆ. ಇಲ್ಲಿಯ ಕಥೆಯನ್ನು ಓದುವಾಗ ಶೇಕ್ಸ್ಪಿಯರ್ನ ನಾಟಕಗಳ ನೆನಪಾಗದಿರದು. ಇಂತಹ ಅಪರೂಪದ ಕೃತಿಗಳನ್ನು ಹುಡುಕಿ ಓದುವುದರಿಂದ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಈ ಕೃತಿಯನ್ನ ಒಮ್ಮೆಯಾದರೂ ಓದಲೇಬೇಕು.

ಈ ಕೃತಿಯನ್ನು 1983 ರಲ್ಲಿ ಶ್ರೀ ಜನಾರ್ಧನ ಕುಲಕರ್ಣಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಸಮಾಜ ಪುಸ್ತಕಾಲಯ ಪ್ರಕಟಿಸಿದೆ.

No comments: