Wednesday, March 16, 2011

ಸುನಂದಾ ಪ್ರಕಾಶ ಕಡಮೆ ಅವರ ‘ಗಾಂಧಿ ಚಿತ್ರದ ನೋಟು’


ಸುನಂದಾ ಪ್ರಕಾಶ ಕಡಮೆಯವರ ‘ಗಾಂಧಿ ಚಿತ್ರದ ನೋಟು’ ಕಥಾ ಸಂಕಲನದ ಬಹುತೇಕ ಕಥೆಗಳು ಕಥನಗಾರಿಕೆಯ ಸೃಜನಶೀಲತೆಯನ್ನು ಅನಾವರಣಗೊಳಿಸುತ್ತವೆ. ಇಲ್ಲಿಯ ಒಂದೊಂದು ಕಥೆಯು ಒಂದೊಂದು ಮುಖಿಯಾಗಿದ್ದು; ಬದುಕಿನಲ್ಲಿ ಕಳೆದುಕೊಳ್ಳುವ ತಲ್ಲಣಗಳನ್ನು ಬಹಳ ಮನೋಜ್ಞವಾಗಿ ಬಿಂಬಿಸುತ್ತವೆ. ಎಲ್ಲವೂ ಇದ್ದು ಎಲ್ಲೋ ಒಂದು ಕಡೆ ಏನೂ ಇಲ್ಲದೆ ಹೋಗುವ ಸಂದರ್ಭಗಳಲ್ಲಿ ಸಂಬಂಧಗಳು, ಸಮಸ್ಯೆಗಳು ಎದುರಾಗುವ ಮತ್ತು ಸೋಲದೆ ಪರಿಹಾರವನ್ನು ಕಾಣುವ ಪಾತ್ರಗಳು ಇಲ್ಲಿಯ ಕಥೆಗಳಲ್ಲಿ ಎದ್ದು ಕಾಣುತ್ತದೆ.

‘ಸುನಂದಾ ಅವರ ಕಥೆಗಳ ಶಕ್ತಿ ಇರುವುದು ಅವುಗಳ ನಿರೂಪಣೆಯಲ್ಲಿರುವ ನಿಸ್ಪ್ರಹತೆಯಲ್ಲಿ’ ಇದು ಮುನ್ನುಡಿಯಲ್ಲಿ ವಿವೇಕ ಶಾನಭಾಗ ಅವರ ಮಾತು. ಇದು ಸತ್ಯ. ಪಾತ್ರಗಳ ಸ್ವಚ್ಛಂದ ಚಿತ್ರಣ ಕಳೆದು ಹೋದ ಬದುಕಿನ ತುಣುಕುಗಳಾಗಿ ಮತ್ತು ನಮ್ಮ ಸುತ್ತ ಮುತ್ತಲಲ್ಲಿಯೇ ಆಗಿ ಹೋದಷ್ಟು ಆಪ್ತವಾಗುತ್ತಾ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ಸುನಂದಾರವರ ಕಥೆಗಳಲ್ಲಿಯ ಇನ್ನೊಂದು ವಿಶೇಷತೆಯೆಂದರೆ ಎಲ್ಲೂ ಎಲ್ಲವನ್ನೂ ಬಿಚ್ಚಿಡದೆ ಕೆಲವನ್ನು ಓದುಗರಿಗಾಗಿ ಉಳಿಸಿ ಬಿಡುವ ಸೂಕ್ಷ್ಮತೆಗಳು ಹಲವು. ಇವು ಓದುಗನ ಮೇಲೆ ಹೆಚ್ಚು ಪರಿಣಾಮ ಬೀರಬಲ್ಲವು ಮತು ಚಿಂತನೆಗೆ ಹಚ್ಚಬಲ್ಲವು. ಆದ್ದರಿಂದಾಗಿಯೇ ಲೇಖಕಿ ಇಲ್ಲಿ ವಿಭಿನ್ನರಾಗಿ ಉಳಿಯುತ್ತಾರೆ.

ಈ ಸಂಕಲನದ ಕಥೆಗಳೆಲ್ಲವೂ ಎಲ್ಲೋ ಘಟಿಸಿದಷ್ಟು ವಾಸ್ತವತೆಯನ್ನು ಬಿಂಬಿಸಿದರೂ ಬಹುತೇಕ ಕಥೆಗಳಲ್ಲಿ ಒಪ್ಪಿಕೊಳ್ಳಬಹುದಾದ ನೈಜತೆಗಳು ಕಥೆಯನ್ನು ಕಥೆಯಾಗಿಯೇ ಉಳಿಸದೆ ಬೇರೊಂದು ದೃಷ್ಟಿಕೋನದಲ್ಲಿ ಮರುವಿಶ್ಲೇಷಣೆಗೆ ಒಳಪಡಿಸುತ್ತವೆ.

ಇಡೀ ಸಂಕಲನದಲ್ಲಿ ಬಹುವಾಗಿ ಕಾಡುವ ಕಥೆ ‘ತಂಕಿ’. ಮೌನವಾಗಿ ನೋವುಗಳನ್ನೆಲ್ಲಾ ತನ್ನೊಳಗೆಬಚ್ಚಿಟ್ಟುಕೊಂಡು ವಿಷಾದದೆಡೆಗೆ ನಡೆಯುವ ತಂಕಿಯ ಅಕ್ಕ ಒಂದು ಜೀವಂತ ಗೊಂಬೆ ಮಾತ್ರ. ಅವಳ ಭಾವನೆಗಳು, ಆಕಾಂಕ್ಷೆಗಳನ್ನು ಹತ್ತಿಕ್ಕಿಕೊಂಡು ತನ್ನ ಸುತ್ತ ಒಂದು ಅವ್ಯಕ್ತ ಬಲೆಯನ್ನು ನೇಯ್ದು ನಾಳೆಗಳಿಲ್ಲದ ಬದುಕಿನಲ್ಲಿ, ಬದುಕನ್ನು ಸವೆಸುವುದು ಒಂದು ಮೂಕ ರೋಧನವಾಗುಳಿಯುತ್ತದೆ. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆಯೆನ್ನುವಂತೆ ವಾಸಿಯಾಗದ ಕಾಯಿಲೆಗೆ ತುತ್ತಾಗುವ ಶಂಕರ (ತಂಕಿ) ತನ್ನ ಬದುಕಿನ ಕೊನೆ ತಿಳಿದಿದ್ದರೂ ಲವಲವಿಕೆಯಿಂದ ಬದುಕುವವನು. ಅಕ್ಕನ ಹತಾಶೆ, ಅಮ್ಮನ ಕನಿಕರವನ್ನು ಉಣ್ಣುತ್ತಲೇ ನಿಜವನ್ನು ಮರೆತು ಬದುಕುವವನು.

‘ಪತ್ರೊಡೆ’ ಕಥೆಯಲ್ಲಿ ಸಾಂಪ್ರದಾಯಿಕ ಎಳೆಯೊಂದನ್ನು ಮತ್ತು ರೀತಿರಿವಾಜುಗಳನ್ನು ತಿಳಿಸುತ್ತಾ ಸತ್ತ ನಂತರದ ಸೂಕ್ಷ್ಮ ಸಂಬಂಧವೊಂದನ್ನು ಕಾಣಿಸುತ್ತಾ, ಅಲ್ಲಿರುವ ಪ್ರೀತಿ, ದ್ವೇಷಗಳನ್ನು ತಿಳಿಸುತ್ತಾಸಾಗುವ ಕಥೆಯಲ್ಲಿ ತನ್ನಾಸೆಗಳನ್ನು ಪೂರೈಸಿಕೊಳ್ಳುವ ಯಮುನಜ್ಜಿಯ ಪಾತ್ರ ಎರಡು ತಲೆಮಾರುಗಳ ನಡುವಿನ ಒಂದು ಕೊಂಡಿಯಂತೆ ತೋರಿದರೆ ಹೆಚ್ಚಲ್ಲ.

ಸಂಸಾರದ ಜಂಜಡಗಳನ್ನು ಪರಿಣಾಮಕಾರಿಯಾಗಿ ಗುರುತಿಸಿಕೊಂಡು ನರೆದಿರುವ ಕಥೆ ‘ಚಿನ್ನಿದಾಂಡು’. ಎಲ್ಲರೊಂದಿಗಿದ್ದು ಪರಕೀಯವಾಗಿ ಉಳಿದು ಹೋಗುವ ಒಂದು ಸಂಬಂಧ; ಕಣ್ಣಂಚಿನಲ್ಲಿಯೇ ಆಸೆಗಳನ್ನು ಕಟ್ಟಿಕೊಂಡು ಅಲ್ಲಿರಲಾರದೆ ಎಲ್ಲೂ ಹೋಗಲಾರದ ಸಂದಿಗ್ಧತೆಯಲ್ಲಿ ತೊಳಲಾಡಿ ಕೊನೆಗೂ ಒಂದು ರೀತಿಯಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡು ಆವಜ್ಞೆಗೆ ಒಳಗಾಗಿಯೇ ನಿಂತು ಬಿಡುತ್ತದೆ.

ಹೊಸ ಬಗೆಯ ನಿರೂಪಣೆಯ ಕಥನ ‘ಚೌಕ ಮತ್ತು ಗೋಲ’. ಯಾವುದು ಹೇಗಿದ್ದರೆ ಒಳ್ಳೆಯದು ಮತ್ತು ಹೇಗಿರಬಾರದೆನ್ನುವ ಎರಡು ಸೂಕ್ಷ್ಮಗಳನ್ನು ಬರೀಯ ಎರಡು ಆಕೃತಿಗಳಲ್ಲಿ ಬಿಂಬಿಸುವ ಕಥೆಯಲ್ಲಿ ಹೊಸತನವಿದೆ. ಇಲ್ಲಿಯ ಹುಡುಕಾಟವಿರುವುದು ಚೌಕ ಮತ್ತು ಗೋಲಗಳೂ ಯಾವುವು ಅನ್ನುವಂತದ್ದು. ಇದೇ ರೀತಿಯಲ್ಲಿ ‘ಕೋಲು ಸಂಪಿಗೆ ಮರ’; ‘ಅಪ್ಪಿ’; ‘ಕಾಯದೊಳಗಣ ಆತ್ಮ’ ಕಥೆಗಳು ಕೂಡ ನಾವಿನ್ಯ ಶೈಲಿಯನ್ನು ಹೊಂದಿವೆ.

‘ಹೀಗೆ ಕಥೆಯೆಂಬ ಒಂದು ಕಥೆಯು ನನ್ನನ್ನೇ ನಡುಗಿಸಿ, ಆಕಾಶಕ್ಕೆ ತಳ್ಳಿ, ಹಾಗೆ ಏಕಾಂಗಿಯಾಗಿ ಆ ಒಮ್ದು ದಡಕ್ಕೆ ಒಯ್ದು ನಿಲ್ಲಿಸುವ ಮೊದಲು ನಾನು ಈ ಕಥೆ ಕಟ್ಟುವ ದುಶ್ಚಟದಿಂದ ಹೊರಬರಬೇಕು’ ಇದು ‘ಕೋಲು ಸಂಪಿಗೆ ಮರ’ದ ಸಾಲುಗಳು. ಅವ್ಯಕ್ತವಾದ ಬದುಕಿನ ಕ್ಷಣಗಳನ್ನು ವಿಭಿನ್ನ ಶೈಲಿಯಲ್ಲಿ ಬರೆದ ಕಥೆ ಇದು. ಆಧುನಿಕ ಜೀವನ ಶೈಲಿಯಲ್ಲಿ ಬರಡಾಗುವ ಬಸಿರ ತುಣುಕುಗಳ ಅವ್ಯವಸ್ಥೆಯನ್ನು ಮತ್ತು ತಪ್ಪಿಸಿಕೊಳ್ಳಲಾಗದ ಅನಿವಾರ್ಯತೆಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಒಂದು ಮುಗ್ಧ ಹುಡುಗಿಯ ಪಾತ್ರ ಚಿತ್ರಣದ ಮೂಲಕ ತೆರೆದಿಡುವ ಕಥೆಯೆ ‘ಅಪ್ಪಿ’. ಆಂತರಿಕ ತುಮುಲಗಳನ್ನು ಪರಾಮರ್ಶಿಸುವ ಕಥೆ, ‘ಕಾಯದೊಳಗಣ ಆತ್ಮ’ ಕೇವಲ ಒಂದು ರೀತಿಯ ವ್ಯಾಕುಲತೆ ಮಾತ್ರವಲ್ಲ ಬದುಕಿನಲ್ಲಿ ಆಗು ಹೋಗುಗಳನ್ನು ಕೂಡ ಉದಾತ್ತವಾಗಿ ಚಿತ್ರಿಸಿದೆ.

ಮಾನವ ಸಂಬಂಧಗಳು ನೈಜ್ಯ ಅಂತ:ಕರಣದ ಮೂಲಕ ಭಾವನಾತ್ಮಕ ಸಂಬಂಧಗಳನ್ನು ಬೆಸೆದುಕೊಂಡು ಬದುಕುತ್ತಿರುತ್ತವೆ. ಅಂತಹ ಸಂಬಂಧದೊಳಗೆ ತನ್ನ ತಾಯಿಯನ್ನು ಹುಡುಕುವ ಮಗಳೊಬ್ಬಳಿಗೆ ತಾನೇ ತಾಯಿಯಾಗಿ ಉಳಿಯುವ ಮಲತಾಯಿಯ ಅಂತ:ಕರಣ ಮತ್ತು ಮಗಳ ಭಾವದೀಪ್ತಿ, ‘ನಿನ್ನದೊಂದು ನೋಟ ಬೇಕು’ ಕಥೆಯಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಹಳದಿ ಸೀರೆಯುಟ್ಟ ತಾಯಿಯಂದಿರೆಲ್ಲಾ ತನ್ನ ಅಮ್ಮನ ಹಾಗೆ ಕಾಣುವ ಚಿನ್ನುಗೆ ಕೊನೆಗೂ ಹಳದಿಸೀರೆಯುಟ್ಟ ಮಲತಾಯಿ ಕೂಡ ಅಮ್ಮನಂತೆ ಕಾಣುವುದು ಈ ಕಥೆಯ ತಾಂತ್ರಿಕತೆಯೂ ಹೌದು. ಇಂತಹುದೇ ಇನ್ನೊಂದು ಹುಡುಕಾಟದ ಕಥೆ, ‘ನನ್ನ ಪೊರೆವ ತೊಟ್ಟಿಲು’. ಬಾಲ್ಯದ ನೆನಪುಗಳನ್ನು ಬೆಚ್ಚಗೆ ಬಿಚ್ಚಿಡುವ ‘ಮಳೆ ಹೊಯ್ದು ನಿಂತ ಕ್ಷಣ’ ಕಥೆಯಲ್ಲಿ ಹೆಣ್ಣೊಬ್ಬಳು ಬದುಕಿನಲ್ಲಿ ಜವಾಬ್ದಾರಿಗಳ ಹೊರೆಯನ್ನು ಹೊತ್ತು ಏಗಬೇಕಾದ ಅನಿವಾರ್ಯತೆಯನ್ನು ಹೇಳುತ್ತಾ, ಸಮಾಜದಲ್ಲಿ ಗಂಡು-ಹೆಣ್ಣಿನ ಪಾತ್ರ, ಜವಾಬ್ದಾರಿಗಳ ಬಗೆಯೂ ತಿಳಿಸುತ್ತದೆ.

ಜೇಡವನ್ನು ಉಪಮೆಯವಾಗಿಟ್ಟುಕೊಂಡು ರಚಿಸಿರುವ ಕಥೆ ‘ಜೇಡ ಬಲೆ ನೇಯುತಿದೆ’. ಇದು ಗಂಡ ಹೆಂಡಿರ ಸಂಬಂಧದ ಕಥೆಯಾದರೂ ಹೊರ ಜಗತ್ತಿನೊಂದಿಗೆ ವ್ಯವಹರಿಸುವ ಗಂಡು ಮತ್ತು ಒಳಜಗತ್ತಿನಲ್ಲಿ ಬದುಕು ಸವೆಸುವ ಹೆಣ್ಣಿನ ಸಂಬಂಧವನ್ನು ಬಿಚ್ಚಿಡುವ ಕಥೆ. ಮಿತ್ರಕ್ಕನ ಪಾತ್ರ ಚಿತ್ರಣ ಮನಸ್ಸಿನಲ್ಲಿ ಉಳಿದು ಬಿಡುತ್ತದೆ.

‘ಜರಿಯಂಚಿನ ಫ್ರಾಕು’ ಕಥೆಯಲ್ಲಿ ಶ್ರಮಜೀವಿಯೊಬ್ಬನ ಹೋರಾಟದ ದನಿಯಿದೆ. ತನ್ನ ಶ್ರಮದಿಂದ ಮೇಲೆ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳುವ ಹೊತ್ತಿಗೆ ಸಾಮಾಜಿಕ ವ್ಯವಸ್ಥೆಯೊಳಗೆ ನಲುಗಿ ತನಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯತೆಯಲ್ಲಿ ಬಂದ ಕೆಲಸವನ್ನು ಒಪ್ಪಿಕೊಳ್ಳುತ್ತಾ, ತನ್ನ ಮಗಳಿಗಾಗಿ ಹೊಲಿಯಲು ತಂದ ಜರಿ ಮಾತ್ರ ಹಾಗೆಯೇ ಉಳಿದು ನೋವುಣಿಸುತ್ತದೆ. ನಗರದ ಅಭಿವೃದ್ಧಿಯಲ್ಲಿ ಬದುಕು (ಹೊಲಿಗೆ ಮೆಷಿನ್ನು) ಕಳೆದುಕೊಳ್ಳುವ ವಾಸ್ತವ ಚಿತ್ರಣವನ್ನು ನಿರೂಪಿಸುತ್ತದೆ.

ಈ ಸಂಕಲನದ ಕೊನೆಯ ಕಥೆ ‘ಗಾಂಧಿ ಚಿತ್ರದ ನೋಟು’; ಎಷ್ಟೇ ಪ್ರಾಮಾಣಿಕ ವ್ಯಕ್ತಿಯಾದರೂ ಹಣದ ವಿಷಯದಲ್ಲಿ ಎಂತಹವನ ಮನಸ್ಸನ್ನೂ ಕೂಡ ಒಮ್ಮೆ ಸ್ವಾರ್ಥಿಯನ್ನಾಗಿಸುತ್ತದೆ. ಹಾಗೆ ಸ್ವಾರ್ಥದಿಂದ ಎಗರಿಸಿದ ಹಣವನ್ನು ಹಿಂತಿರುಗಿಸುವ ಕೆಲಸದಾಕೆಯ ಪ್ರಾಮಾಣಿಕತೆಯು ಅವಳನ್ನು ತುಚ್ಛಿಕರಿಸಿ ‘ಕ್ಷಮೆ’ ನೀಡದೆ ಆರೋಪದ ಹಣೆಪಟ್ಟಿಯನ್ನು ಕಟ್ಟುತ್ತದೆ. ಇಲ್ಲಿ ಅಸಹಾಯಕ ಪಾತ್ರಗಳು ಕೆಲಸದಾಕೆಯ ಮೇಲೆ ಕನಿಕರ ತೋರಿಸುತ್ತವಾದರೂ ವ್ಯಂಗ್ಯದ ದನಿಯೊಂದು ಸದಾ ಅವಳನ್ನು ಕುಕ್ಕುತ್ತಲೇ ಇರುತ್ತದೆ.

ಸುನಂದಾರವರು ತಮ್ಮ ಕಥಾ ಪಾತ್ರಗಳ ಮೂಲಕ ಬದುಕಿನ ಸೂಕ್ಷ್ಮತೆಯನ್ನು ಮನಮುಟ್ಟುವಂತೆ ಬರೆದಿರುವುದು ಶ್ಲಾಘನೀಯ. ಇಲ್ಲಿಯ ಕಥನಗಳನ್ನು ಒಮ್ಮೆಯಾದರೂ ಓದಿಯೇ ಆಸ್ವಾದಿಸಬೇಕು.

1 comment:

sunanda said...

ತುಂಬಾ ಥ್ಯಾಂಕ್ಸ್ ಅನು ಬೆಳ್ಳೆಯವರೇ, ಇದೀಗ ನೋಡಿದೆ ನಿಮ್ಮ ಪುಸ್ತಕ ಪ್ರೇಮ. ಥ್ಯಾಂಕ್ಸ ಅ ಲಾಟ್.