Monday, November 29, 2010

ನಾಗತಿಹಳ್ಳಿ ಚಂದ್ರಶೇಖರ ಅವರ ‘ವಲಸೆ...’


ಮೇಷ್ಟ್ರ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಓದುವುದೆ ಒಂದು ಚೇತೋಹಾರಿ ಅನುಭವ. ಅವರ ‘ಬಾ ನಲ್ಲೆ ಮಧುಚಂದ್ರಕ್ಕೆ’ ಕಾದಂಬರಿ, ಅಮೆರಿಕಾ! ಅಮೆರಿಕಾ!! ಪ್ರವಾಸಕಥನ ಮತ್ತು ನನ್ನ ಪ್ರೀತಿಯ ಹುಡುಗಿಗೆ ಕಥಾಸಂಕಲನ ಯುವ ಮನಸುಗಳನ್ನು ಸಾಹಿತ್ಯದತ್ತ ಆಕರ್ಷಿಸಿದೆಯೆಂದರೆ ಹೆಚ್ಚಲ್ಲ. ಸದಾ ವಸ್ತುಸ್ಥಿತಿಯ ನಿಚ್ಚಳವಾದ ಅನಾವರಣ, ತಿಳಿ ಹಾಸ್ಯದ ಶೈಲಿಯ ಮಾತುಗಳು, ಒಂದಷ್ಟು ಮುದನೀಡುವ ಸನ್ನಿವೇಶಗಳು ಅವರ ಸಾಹಿತ್ಯದ ಕೃಷಿಯಲ್ಲಿ ಎದ್ದು ಕಾಣುವ ಸಂಗತಿಗಳು.

‘ವಲಸೆ ಹಕ್ಕಿಯ ಹಾಡು’ ಅವರ ಹೊಸ ಕೃತಿಯೇನಲ್ಲ. ಅದು ಅವರು ಎಂಬತ್ತರ ದಶಕದಲ್ಲಿ ಬರೆದ ಕಾದಂಬರಿ. ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಜೀವನವನ್ನ ಕಟ್ಟಿಕೊಡುವ ಶೈಲಿ ತುಂಬಾ ಆಪ್ತವೆನಿಸುತ್ತದೆ. ತಿಳಿ ಹಾಸ್ಯದೊಂದಿಗೆ ಆರಂಭವಾಗುವ ಕಾದಂಬರಿಯಲ್ಲಿ ಚಿಕ್ಕಮಾಳಿಗೆ ಕೊಪ್ಪಲು (ಸಿ.ಎಂ.ಕೊಪ್ಪಲು) ಅನ್ನುವ ಹಳ್ಳಿಯ ಚಿತ್ರಣವನ್ನು, ಅಲ್ಲಿಯ ಜನಜೀವನವನ್ನೂ ತೆರೆಯುತ್ತಾ ಕಾದಂಬರಿ ಓದುಗನನ್ನು ಸೆಳೆದುಕೊಳ್ಳುತ್ತದೆ. ಪಂಡ್ರಿಯೆನ್ನುವ ಮುಗ್ಧ ಹುಡುಗ, ಹುಟ್ಟು ಹೋರಾಟಗಾರನಲ್ಲದಿದ್ದರೂ ಪ್ರಾಮಾಣಿಕವಾಗಿ ಆ ಹಳ್ಳಿಯ ಬಗ್ಗೆ ಕಾಳಜಿವಹಿಸುವ ಕೆಂಚೇಗೌಡರು, ಪ್ರೀತಿ ತೋರಿದರೂ ಪರಿಸ್ಥಿತಿಯೊಂದಿಗೆ ರಾಜಿ ಮಡಿಕೊಳ್ಳದ ಸಿಡುಕು ಸ್ವಭಾವದ ಗೌಡರ ಮಡದಿ ಹೊಂಬಾಳಮ್ಮ, ಸ್ವತಂತ್ರವಾಗಿ ತಿರುಗಾಡಿಕೊಂಡು ಪಡ್ಡೆಯೆಂದು ಗುರುತಿಸಿಕೊಳ್ಳುವ ಗೌಡರ ಮಗ ಸ್ವತಂತ್ರ ಹೀಗೆ ನಾನಾ ಬಗೆಯ ಪಾತ್ರಗಳು ಈ ಕಾದಂಬರಿಯ ಬೆಳವಣಿಗೆಗೆಯಲ್ಲಿ ಜೀವ ಪಡೆದುಕೊಳ್ಳುತ್ತವೆ."

ಡ್ರಿಲ್ ಮಾಸ್ಟ್ರು ಯಲ್ಲಯ್ಯ ಪಂಡ್ರಿಗೆ ಸ್ವಾತಂತ್ರ್ಯ ದಿನಾಚರಣೆಯ ವಂದನಾರ್ಪಣೆಯ ಜವಾಬ್ದಾರಿಯನ್ನು ಕೊಟ್ಟ ಮೇಲೆ ಹೃಸ್ವ ಮತ್ತು ದೀರ್ಘಗಳ ವ್ಯತ್ಯಾಸ ತಿಳಿಯದ ಅವನು ಅದನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಉರು ಹೊಡೆದು ರಾತ್ರಿ ನಿದ್ದೆಯಲ್ಲಿಯೂ ಮಗ ಕನಸಿನಲ್ಲಿ ವಂದನಾರ್ಪಣೆಯೆನ್ನುವುದನ್ನು ಕನವರಿಸುವಾಗ ಅವನ ತಾಯಿ ಭವಾನಿ ಇದು ‘ಒಂದ’ಕ್ಕೆ ಸಂಬಂಧಿಸಿರಬಹುದೆಂದು ಊಹಿಸಿ, “ಎದ್ದು ಹೋಗಿ ಒಂದ ಮಾಡಿ ಬಂದು ಬಿದ್ಕೊ” ಎಂದು ಗದರಿಸಿವ ಸನ್ನಿವೇಶವಂತು ನಗೆಗಡಲಲ್ಲಿ ಮುಳುಗಿಸುತ್ತದೆ. ಇಂತಹ ಮುಗ್ಧತೆಯಿರುವ ಹಳ್ಳಿಯಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಪ್ರಚುರಪಡಿಸುವ ಗೌಡರಿಗೆ ಮಾತ್ರ ಮಗ ಸ್ವತಂತ್ರನಿಂದ ನೆಮ್ಮದಿಯಿರುವುದಿಲ್ಲ. ಸದಾ ಕುಡಿದು, ಗಲಾಟೆ ಮಾಡಿಕೊಂಡು ಬಂದು ಮನೆಯಲ್ಲಿ ತಾಯಿಯ ಮಾತಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು; ಮಾತ್ರವಲ್ಲ, ಗೌಡರ ನೆಮ್ಮದಿಯನ್ನು ಕದಿಯುತ್ತಾನೆ. ಅವನೊಂದು ದೊಡ್ಡ ಹೊರೆಯಾಗಿ ಸದಾ ಅವರನ್ನು ಕಾಡುತ್ತಲೇ ಇರುತ್ತಾನೆ.

ಇಷ್ಟಾದರೂ ಗೌಡರ ಸ್ವಾತಂತ್ರ್ಯ ಸೇವೆ ನಿಲ್ಲುವುದಿಲ್ಲ. ಅವರು ಶಾಲೆಯ, ಊರಿನ ಅಭಿವೃದ್ಧಿಗೆ ತೊಡಗುತ್ತಾರೆ. ಮನೆಯಲ್ಲಿ ಸದಾ ಹಾಲುಹೊಳೆಯೆ ಹರಿಯುತ್ತಿರುತ್ತದೆ. ಅವರ ಉದಾರಗುಣ ಹೊಂಬಾಳಮ್ಮನಿಗೆ ಸರಿಕಾಣದು. ಸದಾ ದುಮುಗುಟ್ಟುತ್ತಾ ಮೌನದ ತೆಕ್ಕೆಗೆ ಜಾರುವ ಅವರು ಒಮ್ಮೆಯೂ ಗೌಡರ ಬಳಿ ಪ್ರೀತಿಯಿಂದ ಮಾತನಾಡಿದಿಲ್ಲ. ಆದರೂ ಗೌಡರ ಮನೆಯೆ ನ್ಯಾಯದ ಕಟ್ಟೆಯಾಗಿರುವುದರಿಂದ ಅವರು ಹೇಳಿದ್ದೆ ನ್ಯಾಯವಾಗಿ ಊರವರಿಗೆಲ್ಲಾ ಅವರ ಮೇಲೆ ಗೌರವ, ಪ್ರೀತಿ ಎಲ್ಲವೂ.

ಇಂತಿರುವ ಗೌಡರು ದೇಶದಲ್ಲೆಲ್ಲಾ ಸ್ವಾತಂತ್ರ್ಯದ ಬಿರುಗಾಳಿ ಬೀಸುತ್ತಿರುವಾಗ ದೇಶಸೇವೆಗಾಗಿ ಅಲ್ಲದಿದ್ದರೂ ಗೆಳೆಯನೊಬ್ಬನನ್ನು ಹುಡುಕುತ್ತಾ ದೇಶ ಸುತ್ತಾಡುವುದಕ್ಕೆ ಹೋಗಿ ವಿಭಜನೆಯಾಗದ ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಕ್ಕಿಕೊಂಡು, ಅಲ್ಲಿ ತಾವು ಗಳಿಸಿಕೊಂಡ ಗೆಳೆಯನ ಮೂಲಕ ತಾನು ಹುಡುಕುತ್ತಿರುವ ವ್ಯಕ್ತಿಯ ಮಗನೆ ಆತನೆಂದು ತಿಳಿದು ಸಂತೋಷಪಡುತ್ತಾರೆ. ಆದರೆ ಗೌಡರ ತಂದೆಯಂತೆಯೆ ಆ ವ್ಯಕ್ತಿಯೂ ಎಲ್ಲಿ ಹೋದ? ಏನಾದನೆನ್ನುವುದು ಮಗನಿಗೂ ಗೊತ್ತಿರುವುದಿಲ್ಲ. ಹೀಗೆ ಅವರ ಹಿನ್ನಲೆಯನ್ನು ಕೆದಕುವ ಕಾದಂಬರಿ ಮತ್ತೆ ಓಟ ಪಡೆಯುವುದು ಕೆಂಚೇಗೌಡರ ಮಗನ ಮರು ಪ್ರವೇಶದಿಂದ. ಅವನು ತಂದೆಯ ಆಸ್ತಿಯನ್ನು ತನಗೆ ಕೊಡಬೇಕೆಂದು ಗಲಾಟೆಯೆಬ್ಬಿಸಿ ಮನೆಯನ್ನು ರಣರಂಗ ಮಾಡುತ್ತಾನೆ. ಗೌಡರಿಗಾದರೂ ಅವನಿಗೆ ಆಸ್ತಿ ಬರೆದುಕೊಟ್ಟರೆ ತಮಗೆ ಉಳಿಯುವುದು ಚಿಪ್ಪು ಮಾತ್ರವೆಂದು ತಿಳಿದಿರುವುದರಿಂದ ಆ ವಿಷಯವನ್ನು ಮುಂದಕ್ಕೆ ದೂಡುತ್ತಾರೆ. ಆದರೆ ಬಂದಾಗಲೆಲ್ಲ ಅವನು ಗಲಾಟೆಯೆಬ್ಬಿಸುತ್ತಲೇ ಇರುತ್ತಾನೆ.

ಒಮ್ಮೆ ಆ ಊರಿಗೆ ಪ್ರಪಂಚ ಅಲೆದಾಟಕ್ಕೆ ಬಂದಿರುವ ಪ್ರೆಂಚ್ ಮಹಿಳೆ ವುಲ್ಫ್ಗಂಗ್ಳು ಭೇಟಿಕೊಟ್ಟು ಗೌಡರ ಮನೆಯಲ್ಲಿಯೆ ಉಳಿಯುತ್ತಾಳೆ. ಅವಳಿಗೆ ಸಿ.ಎಂ.ಕೊಪ್ಪಲು ಹಳ್ಳಿ ತುಂಬಾ ಇಷ್ಟವಾಗಿರುತ್ತದೆ. ಅಲ್ಲಿಯ ಸಂಸ್ಕೃತಿ, ಜನರ ನಡೆ ನುಡಿಗಳನ್ನು ಮೆಚ್ಚಿ, ಅವಳನ್ನು ಬೆರಗಿನಿಂದ ನೋಡುವ ಹಳ್ಳಿಯ ಜನರ ಪ್ರೀತಿಪಾತ್ರಳಾಗುತ್ತಾಳೆ. ಗೌಡರಿಗೆ ತಮ್ಮ ಮನಸ್ಸಿನಲ್ಲಿರುವ ಖಿನ್ನತೆಯನ್ನು ಬಿಚ್ಚಿಕೊಳ್ಳುವ ಸಂದರ್ಭ ಬಂದಾಗ ಅವರು ತಮ್ಮ ಮಗನಿಂದಾದ ನೋವನ್ನೆಲ್ಲಾ ಹೇಳಿಕೊಂಡು ಹಗುರಾಗುತ್ತಾರೆ. ಅವಳ ಸಾಂತ್ವನದಲ್ಲಿ ಒಬ್ಬ ತಾಯಿ, ಒಬ್ಬ ಸ್ನೇಹಿತೆಯ ಆದರ್ಶವನ್ನು ಕಾಣುತ್ತಾರೆ. ಅವಳ ಮಾತಿನಂತೆ ತಮ್ಮ ಎಲ್ಲಾ ಆಸ್ತಿಯನ್ನು ಮಗನಿಗೆ ಬರೆದು ತಾವು ಮಡದಿಯ ಜೊತೆಗೆ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಉಳಿಯುತ್ತಾರೆ.

ಸ್ವತಂತ್ರ ತನ್ನ ದುಷ್ಟ ಗುಣಗಳನ್ನೆ ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಶಾಸಕನಾಗುತ್ತಾನೆ. ಅವನು ಕಾಟಾಚಾರಕ್ಕಾದರೂ ತಂದೆ-ತಾಯಿಯನ್ನು ತಂದಿರಿಸಿಕೊಳ್ಳಬೇಕೆಂದುಕೊಂಡರೂ ಸ್ವಾಭಿಮಾನಿಯಾದ ಕೆಂಚೇಗೌಡರು ಒಲ್ಲೆನೆನ್ನುತ್ತಾರೆ. ಏತನ್ಮಧ್ಯೆ ಹೊಂಬಾಳಮ್ಮ ಜಗದ ಋಣ ತೀರಿಸಿಕೊಂಡಿರುತ್ತಾಳೆ. ಈ ಆಘಾತ ಗೌಡರನ್ನು ಭೀಕರವಾದ ಪರಿಸ್ಥಿತಿಗೆ ತಳ್ಳುತ್ತದೆ. ಕೈಯಲ್ಲಿ ಬಿಡಿಗಾಸು ಇಲ್ಲದೆ ತಾತ್ವರ ಪಡುತ್ತಾರೆ. ಆಗ ಅವರ ಸಹಾಯಕ್ಕೆ ಬರುವುದು ಅವರ ಇಂಗ್ಲಿಷ್ ಮಾತ್ರ. ಹಾಗಾಗಿ ಅವರು ಭದ್ರಾವತಿಯಂತಹ ಊರನ್ನು ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ತಾನೇ ಸಲಹಿ ಸಾಕಿದ ಹುಡುಗ ಪಂಡ್ರಿಯ ಮಾತುಗಳಿಂದ ಭೂಮಿಗೆ ಇಳಿದ ಅವರಿಗೆ, ತನ್ನ ಬೆನ್ನ ಹಿಂದೆ ಕರಾಳ ವಾಸ್ತವ ಲೋಕವೊಂದಿದೆ. ಅದು ಸಾವಿಗಿಂತ ಭೀಕರ ಮತ್ತು ನಿರ್ಧಯಿ. ಪ್ರತಿ ಮನುಷ್ಯ ಇಂಥದ್ದೊಂದು ಭೀಕರ ಅವಸ್ಥೆಯನ್ನು ಬೆನ್ನ ಹಿಂದೆ ಹೊತ್ತು ತಿರುಗುತ್ತಾನೆ. ಅದರ ಅರಿವಿದ್ದೂ ನಿರ್ಲಕ್ಷ್ಯದಿಂದ ನಡೆಯುವವ ಜಾಣನೆನ್ನುವ ಅರಿವಾಗುತ್ತದೆ. ಅವರು ಆರಿಸಿಕೊಂಡ ದಾರಿಯೇನು ಸುಗಮವಾಗಿರುವುದಿಲ್ಲ. ಬಹದ್ದೂರು ಷಾನ ಗಜಲುಗಳಲ್ಲಿಯ ಸತ್ಯವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ. ಕೊನೆಗೆ ಅಲ್ಲಿಯೂ ಅವರಿಗೆ ಸೋಲು ಎದುರಾಗುತ್ತದೆ.

ರೋಗಗ್ರಸ್ತನಾಗಿ ಅವರು ಮರಳಿ ಸಿ.ಎಂ.ಕೊಪ್ಪಲು ಹಳ್ಳಿಗೆ ಬರುತ್ತಾರೆ. ಅಲ್ಲಿ ಒಂದು ರೀತಿಯ ಮತಿಭ್ರಾಂತಿಗೆ ಒಳಗಾಗಿ ಹೇಗೇಗೋ ನಡೆದುಕೊಳ್ಳುತ್ತಾರೆ. ಇದನ್ನು ಕಂಡ ಮಗ ಸ್ವತಂತ್ರ ತನ್ನ ಮರ್ಯಾದೆಯ ಪ್ರಶ್ನೆಯೆಂದು ತಿಳಿದು ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾನೆ. ಅಲ್ಲಿಂದ ಹಿಂತಿರುಗಿದ ಅವರು ಏನೂ ಅಲ್ಲದ, ಯಾರಿಗೂ ಬೇಡವಾದ ಒಂದು ಮೌನಿಯಾಗಿ ಮಾತ್ರ ಪರಿಚಯವಾಗುತ್ತಾರೆ. ಹೀಗೆ ಕಾದಂಬರಿ ಅಂತ್ಯವಾಗುತ್ತದೆ. ಮೊದಲೆ ಹೇಳಿದಂತೆ ಮೇಷ್ಟ್ರ ಕಾದಂಬರಿ ನಮ್ಮನ್ನು ಕಾಡುತ್ತಲೆ ಇರುತ್ತದೆ. ಕೆಂಚೇಗೌಡರ ಪಾತ್ರವಂತು ಆದರ್ಶಪ್ರಾಯವಾಗಿ ಮೂಡಿಬಂದಿದೆಯೆಂದರೆ ಅಚರಿಯೇನಿಲ್ಲ.

ಈ ಕೃತಿಯನ್ನು ‘ಅಭಿವ್ಯಕ್ತಿ’ ಒಂದು ಸಾಂಸ್ಕೃತಿಕ ವೇದಿಕೆ, ನಂ. 166, 28ನೇ ಅಡ್ಡ ರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070, ಫೋನ್ : 080-26715235 ಇವರು ಪ್ರಕಟಿಸಿದ್ದಾರೆ.

2 comments:

ವಿ.ರಾ.ಹೆ. said...

ನಮಸ್ಕಾರ,

ನಿಮ್ಮ ಬ್ಲಾಗ್ ನಿಂದ ಬಹಳಷ್ಟು ಒಳ್ಳೆಯ ಪುಸ್ತಕಗಳು ಪರಿಚಯವಾದವು.

ಧನ್ಯವಾದ

ನಕ್ಷತ್ರ ಬಳ್ಳಿ said...

ಶ್ರೀಯುತರೆ, ಕಮೆಂಟ್‍ಗಾಗಿ ಧನ್ಯವಾದಗಳು.