Friday, November 26, 2010

ಉತ್ಕೃಷ್ಟ ರಚನೆಯ ‘ಜಾಲ’


ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅವ್ಯವಸ್ಥೆಯ ವಿಡಂಬನಾತ್ಮಕ ರಚನೆಯ ‘ಜಾಲ’ ಕಾದಂಬರಿ ಇಂಗ್ಲಿಷ್ ಕಾದಂಬರಿಯನ್ನು ಓದುತ್ತಿರುವಂತೆ ಭಾಸವಾದರೆ ಸುಳ್ಳಲ್ಲ. ಈ ರೀತಿಯ ರಚನೆ ಒಬ್ಬ ಸಾಮಾನ್ಯ ಲೇಖಕನಿಗೆ ಅಸಾಧ್ಯ. ಎಷ್ಟೊಂದು ವಿಷಯಗಳನ್ನು ಸೂಕ್ಷ್ಮವಾಗಿ, ಬಹಳ ನಾಜೂಕಾಗಿ, ವಿಡಂಬನೆಯ ಶೈಲಿಯಲ್ಲಿ ಕಾದಂಬರಿಕಾರ ನಾರಾಯಣ ಮಾಳ್ಕೋಡ್ ಕಟ್ಟಿಕೊಡುತ್ತಾರೆ. ಕಾದಂಬರಿಯಲ್ಲಿ ಬರುವ ರಾಜಕೀಯ ಅವ್ಯವಸ್ಥೆ ಸದ್ಯದ ಪರಿಸ್ಥಿತಿಯಲ್ಲಿ ಕಾಣಸಿಗದಿದ್ದರೂ ಅದು ಎಲ್ಲೋ ಒಂದು ಕಡೆ ನಡೆಯುತ್ತಿರುವಂತೆ ನಮಗೆ ಅನಿಸುತ್ತದೆ.

ಇಲ್ಲಿಯ ಪಾತ್ರಗಳೆಲ್ಲವೂ ಮೆಚ್ಯೂರ್ಡ್ ಪಾತ್ರಗಳು. ಏನನ್ನೋ ಹೇಳುತ್ತಾ ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಬಹಳ ಚೆನ್ನಾಗಿ ಅರಗಿಸಿಕೊಂಡಿರುವಂತೆ ಮಾತುಗಳ ಮೂಲಕ ವಸ್ತು ಸ್ಥಿತಿಯನ್ನು ಬಿಚ್ಚಿಡುತ್ತಾ ಹೋಗುತ್ತವೆ ಇಲ್ಲಿಯ ಪಾತ್ರಗಳೆಲ್ಲ. ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲ; ಅವಳು ರಾಜಕೀಯದ ಏರು ಪೇರುಗಳನ್ನು ಅರಿತವಳು ಅನ್ನುವಂತೆ ಇಲ್ಲಿಯ ಸಣ್ಣ ಪುಟ್ಟ ಪಾತ್ರಗಳು ಕೂಡ ಬಹಳ ಸೊಗಸಾಗಿ ಮಾತನಾಡುತ್ತವೆ. ಒಂದಕ್ಕಿಂತ ಒಂದು ಪಾತ್ರಗಳ ಮಾತುಗಳು ಅಸಂಗತವೆನಿಸಿದರೂ ಅವುಗಳ ಒಳಗಿರುವ ನಿಗೂಢತೆ ಬಹಳ ಸುಲಭವಾಗಿ ಓದುಗನನ್ನು ತಲುಪುತ್ತದೆ. ಈ ರೀತಿಯ ಅಸಂಗತ ಮಾತುಗಳನ್ನೇ ಪೋಣಿಸಿ ಸಾಮಾಜಿಕ, ರಾಜಕೀಯದ ಅಭದ್ರತೆಯನ್ನು ಜಾಲಾಡಿಸುವ ರಚನೆ ಇಷ್ಟವಾಗುತ್ತದೆ. ಇಲ್ಲಿ ಒಂದು ಸನ್ನಿವೇಶಕ್ಕೆ ಇನ್ನೊಂದನ್ನು ಬೆಸೆಯುವ ಮಾತಿನ ಮಂಟಪ ಕಾದಂಬರಿಕಾರನ ಕೈಯಲ್ಲಿ ಲೀಲಾಜಾಲವಾಗಿ ಮೂಡಿಬಂದಿದೆ."

ವ್ಯಕ್ತಿ ಮತ್ತು ಪರಿಸ್ಥಿತಿಯ ಸಂಬಂಧಗಳು, ರಾಜಕೀಯ ಬಿಕ್ಕಟ್ಟುಗಳು, ವಿದ್ರೋಹಗಳು, ವಿಕಲ್ಪಗಳು ಇವೆಲ್ಲವೂ ಈ ಕಾದಂಬರಿಯಲ್ಲಿ ಆಟವಾಡುತ್ತಾ ಪಾತ್ರಗಳೆಲ್ಲವೂ ಒಂದನ್ನು ಇನ್ನೊಂದು ಮುಷ್ಟಿಯಲ್ಲಿ ಹಿಡಿದುಕೊಂಡಿರುವಂತೆ ಭಾಸವಾದರೂ ಇಲ್ಲಿ ವಾಸ್ತವದ ಕರಿ ನೆರಳು ಕಾಣಿಸುತ್ತದೆ. ದಿನಬೆಳಗಾದರೆ ನಡೆಯುವ ವಿದ್ಯಮಾನಗಳು ಇಲ್ಲಿ ಈಗಲೆ ನಡೆಯುತ್ತಿರುವಂತೆ ಬಿಂಬಿತವಾಗಿವೆ.

ಮಾದರಿ ಪಟ್ಟಣವಾಗಿ ರೂಪುಗೊಂಡಿರುವ ಹೊಸಪಟ್ಟಣದ ರಚನೆ ಮತ್ತು ಕಲ್ಪನೆಯೆ ವಿಚಿತ್ರವಾದ್ದುದು. ಒಂದು ವೃತ್ತಾಕಾರದಲ್ಲಿರುವ ಪಟ್ಟಣದಲ್ಲಿ ಅರವಿಂದ ಹೆಗಡೆಯೆನ್ನುವ ಪೂಜಾರಿ, ದಾಸಪ್ಪನೆನ್ನುವ ಏಕಸಾಮ್ಯವಿಚಾರಧಾರೆಯ ರಾಜಕೀಯ ವ್ಯಕ್ತಿ; ಹೊರನೋಟಕ್ಕೆ ಇಬ್ಬರೂ ಬೇರೆಬೇರೆಯದಾಗಿ ಕಂಡರೂ ಇಬ್ಬರಲ್ಲು ಒಂದು ರೀತಿಯ ಸಾಮ್ಯತೆ ಇದೆ. ಜನರನ್ನ ತನ್ನತ್ತ ಒಲಿಸಿಕೊಳ್ಳುವ ಸಾಫ್ಟ್ ಕಾರ್ನರ್ ಅರವಿಂದನದ್ದಾದರೆ, ಜನರನ್ನು ತನ್ನ ಶಕ್ತಿ, ವಾಕ್ಚಾತುರ್ಯ, ಬೆದರಿಕೆಯ ಮೂಲಕ ಆಕ್ರಮಿಸಿಕೊಳ್ಳುವ ವ್ಯಕ್ತಿ ದಾಸಪ್ಪ. ಹಿಟ್ಲರಿಜಂ ಕೂಡ ಇಲ್ಲಿ ಎದ್ದು ಕಾಣುತ್ತದೆ.

ಕಥೆ ಆರಂಭವಾಗುವುದು ಶಹನಾಯಿ ವಾದಕ ವೆಂಕಪ್ಪ ಭಂಡಾರಿಯ ಕೊಲೆಯಿಂದ. ಇಲ್ಲಿ ಕೊಲೆ ಮಾಡಿದವರು ಯಾರು? ಪಶುವಿನಷ್ಟು ಸಾಧುವಾದ ವೆಂಕಪ್ಪನನ್ನು ಯಾಕೆ ಕೊಲೆ ಮಾಡಿದರು? ಇವೆಲ್ಲಾ ಕ್ಷುಲ್ಲಕವಾಗಿ ಕೇವಲ ಆ ಕೊಲೆಯಿಂದ ಉದ್ಭವಿಸಿದ ಬಿಕ್ಕಟ್ಟುಗಳನ್ನು ಮಾತ್ರ ಜಾಲಾಡುತ್ತಾ ಸಾಗುತ್ತದೆ ಕಥೆ. ಉಸಿರು ಬಿಗಿ ಹಿಡಿದು ಓದಿಸಿಕೊಂಡು ಹೋಗುವ ರಚನೆಯಲ್ಲವಾದರೂ ಸಮಾಜದಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ತುಡಿತ ಓದುಗನನ್ನು ಬಿಟ್ಟುಕೊಡುವುದಿಲ್ಲ. ಇಲ್ಲಿಯ ಸಂಭಾಷಣೆಗಳೆಲ್ಲವೂ ಹಲವಾರು ವಿಷಯಗಳನ್ನು ಪ್ರಸ್ತುತಪಡಿಸುತ್ತವೆ.

ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಒಬ್ಬ ತಾಯಿಯ ಮಾತು ಹೇಗಿದೆಯೆಂದರೆ - ‘ಸದ್ಯದಲ್ಲೇ ಎದುರಾಗಲಿರುವ ಚುನಾವಣೆಯಲ್ಲಿ ನಾನು ಮತ ಚಲಾಯಿಸಬಹುದು ಎನಿಸುತ್ತದೆ’ ಈ ಮಾತುಗಳು ಇಲ್ಲಿ ರಾಜಕೀಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಆರೋಗ್ಯ ಸುಧಾರಿಸಿದೆ. ಎದ್ದು ಓಡಾಡಬಲ್ಲೆ ಅನ್ನುತ್ತಿದ್ದಳೆನೋ... ಇದು ಲೇಖಕನ ಪ್ರಬುದ್ಧತೆಯ ಲಕ್ಷಣವೂ ಹೌದು ಅನಿಸಿದರೆ ತಪ್ಪಲ್ಲ.

ಸುಬ್ಬಯ್ಯನ ಕ್ಷೌರದ ಅಂಗಡಿ ರಾಜಕೀಯದ ವಿಶ್ಲೇಷಣೆಯ ಅಡ್ಡೆಯಿದ್ದಂತೆ. ಅಲ್ಲಿ ನಡೆಯುವ ಮಾತುಕತೆಗಳು ಇನ್ನೆಲ್ಲಿಯೂ ಕೇಳಿಸಲಾರವು. ಇವತ್ತಿನ ರಾಜಕೀಯದ ಬಿಕ್ಕಟ್ಟನ್ನು ಪ್ರಸ್ತುತಪಡಿಸುವ, ‘ಆಡಳಿತ ಬದಲಾಗುತ್ತದೆ, ಸರ್ಕಾರ ಬದಲಾಗುತ್ತದೆ. ಆದರೆ ಜನರ ಸ್ಥಿತಿ ಮಾತ್ರ ಒಂದೇ ರೀತಿಯಲ್ಲಿರುತ್ತದೆ’ ಅನ್ನುವ ಮಾತು ಅಕ್ಷರಶ: ಸತ್ಯವಾದದ್ದು. ಕಾದಂಬರಿಯ ಉದ್ದಕ್ಕೂ ಇಂತಹ ವಿವೇಚನೆಯುಳ್ಳ ಮಾತುಗಳು ಬರುತ್ತಿರುತ್ತವೆ.

ಇಲ್ಲಿ ಬರುವ ಸ್ತ್ರೀ ಪಾತ್ರಗಳು ಕೂಡ ಬಹಳ ದೃಢವಾದ ಹಂಬಲವುಳ್ಳ ಪಾತ್ರಗಳು. ಗಾಯತ್ರಿ, ಸೀತಾ, ಮಾಧವಿ, ಭಾಗ್ಯ, ಸರಸ್ವತಿ, ಮೀನಾ, ಮಾಲಿನಿ ಪಾತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾದರೂ ಅದರಲ್ಲಿಯೆ ಕೊರಗುವುದಿಲ್ಲ. ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವಂತಹವುಗಳು. ಈ ಪಾತ್ರಗಳನ್ನು ಕೀಳಾಗಿ ಬಿಂಬಿಸಲು ಗೋಡೆಗೆ ಅಂಟುವ ಪೋಸ್ಟರ್ಗಳ ಬಗ್ಗೆ ಹೆದರಿಕೆಯಿದ್ದರೂ ಅದನ್ನು ವಿಚಾರಿಸುವಷ್ಟು ಮತ್ತು ಅಪವಾದವನ್ನು ಹತ್ತಿರಕ್ಕೆ ಎಳೆದುಕೊಳ್ಳುವಲ್ಲಿ ತಡೆಯುವ ಗಟ್ಟಿಗಿತ್ತಿಯರು ಇಲ್ಲಿಯ ಸ್ತ್ರೀಯರು.

ಕೆಲವೊಂದು ಕಟು ವಾಸ್ತವಿಕ ಸತ್ಯಗಳು ಕೂಡ ಇಲ್ಲಿ ಅನಾವರಣಗೊಂಡಿದೆ. ಉದಾಹರಣೆಗೆ ‘ಎಲ್ಲರೂ ತಮಗೆ ತಾವೇ ದೊಡ್ಡವರೆಂದುಕೊಂಡು ಬಿಡುತ್ತಾರೆ. ಒಂದು ಕೆಲಸ ಹೋದರೆ ಮತ್ತೊಂದು ಕೆಲಸ ಸಿಗುತ್ತದೆ ಎಂಬ ಧೋರಣೆ ಅವರದು. ಆದರೆ ಈ ಧೋರಣೆ ಇರುವವರು ಎಲ್ಲಿಯೂ ನೆಲೆ ಕಂಡುಕೊಳ್ಳುವುದಿಲ್ಲ. ಕೋತಿಗಳಂತೆ ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಜಿಗಿಯುತ್ತಲೇ ಇರುತ್ತಾರೆ. ಜೀವನದಲ್ಲಿ ಸೆಟಲ್ ಎಂಬ ಪ್ರಶ್ನೆಯೇ ಬರುವುದಿಲ್ಲ’ ಇದು ವಾಸ್ತವಿಕವಾಗಿ ಒಪ್ಪಿಕೊಳ್ಳಬೇಕಾದ ಮಾತು. ಈ ಮಾತುಗಳನ್ನು ಓದುವಾಗ ಶ್ರೀಕೃಷ್ಣ ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರ’ ನೆನಪಾಗದಿರದು.

ರಾಜಕಾರಣಿ, ಪೂಜಾರಿ, ಡಾಕ್ಟರ್, ನ್ಯಾಯಮೂರ್ತಿ ಹೀಗೆ ಒಂದೊಂದು ರೀತಿಯ ಪಾತ್ರಗಳ ಮೂಲಕ ವಾಸ್ತವತೆಯ ಅವಲಕ್ಷಣಗಳನ್ನು ಕಟುವಾಗಿ ಟೀಕಿಸುವಂತಹ ಸ್ಥಿತಿ ಇಲ್ಲಿ ಚಿತ್ರಿತವಾಗಿದೆ. ಇಂತಹ ಗಂಭೀರ ಚಿಂತನೆಗೆ ಒಳಪಡಿಸುವ ಕಾದಂಬರಿಯನ್ನು ಓದಲೇಬೇಕು. ಈ ಕೃತಿಯನ್ನು ಸುಮುಖ ಪ್ರಕಾಶನ, ಮಾಗಡಿ ರಸ್ತೆ, ಟೋಲ್ಗೇಟ್, ವಿದ್ಯಾರಣ್ಯನಗರ, ಬೆಂಗಳೂರು - 23, ದೂರವಾಣಿ ಸಂಖ್ಯೆ ೦೮೦- 23118585 ಇವರು ಪ್ರಕಟಿಸಿದ್ದಾರೆ.

No comments: