Wednesday, November 3, 2010

ಬಾಲ


ಬಾಳಾಸಾಹೇಬ ಲೋಕಾಪುರ ಅವರ ‘ಕೃಷ್ಣೆ ಒಡಲ ತುಂಬ’ ಇದುವರೆಗಿನ ಕಥೆಗಳು ಪುಸ್ತಕದ ಮೊದಲ ಕಥೆ ‘ಬಾಲ’ ಮನುಷ್ಯನ ಬೆಳವಣಿಗೆಯ ಪರೋಕ್ಷವಾದ ಐರನಿಯಾಗಿರುವುದಲ್ಲದೆ, ಇದು ತಾರ್ಕಿಕ ಮತ್ತು ದಾರ್ಶನಿಕಗಳ ನಡುವಿನ ಸಂಘರ್ಷವಾಗಿ ಬೆಳೆಯುತ್ತಾ ಅವು ಗುರು ಶಿಷ್ಯರ ನಡುವಿನ ಮಾತುಗಳಲ್ಲಿ ಬದುಕಿನ ಸ್ತರಗಳನ್ನು ಬಿಂಬಿಸುವ ಮತ್ತು ಕಾಲ ಬದಲಾದಂತೆ ಮತ್ತೊಂದು ತಲೆಮಾರಿನ ಪ್ರಗತಿಯನ್ನು ಗುರುತಿಸುತ್ತದೆ."

ಎಂ.ಆರ್. ಕೆ ಪ್ರೊಫೆಸರ್‌ರವರ ವ್ಯಕ್ತಿ ಚಿತ್ರಣದೊಂದಿಗೆ ಆರಂಭವಾಗುವ ಕಥೆ ಅವರು ಬಾಹ್ಯ ಘಟನೆಗಳತ್ತ ವಿಮುಖರಾಗುತ್ತಾ ತಮ್ಮದೇ ಲೋಕವನ್ನು ಸೃಷ್ಟಿಸಿಕೊಂಡು ತಾವು ಅನುಭವಿಸಿದ ಓದು ಬರೆಹಗಳನ್ನು ಮೆಲುಕು ಹಾಕುತ್ತಾ ವಯೋ ಸಹಜವಾದ ಭ್ರಮೆಗಳನ್ನು ಹುಟ್ಟಿಸಿಕೊಂಡು ಪುಳಕಿತರಾಗುತ್ತಾರೆ.

ಅವರ ಗ್ರಂಥಾಲಯವೆಂದರೆ ಬರೀಯ ಅಚ್ಚು ಹಾಕಿ ಬೆಚ್ಚಗೆ ಕುಳಿತ ಪುಸ್ತಕದ ರಾಶಿಯಲ್ಲ; ಸ್ವತ: ಲೇಖಕರುಗಳೆ ಜೀವಂತವಾಗಿ ಗ್ರಂಥಾಲಯದಲ್ಲಿರುವ ಪುಳಕ ಅವರಿಗೆ. ಇದು ಕಥೆಗಾರನಿಗೆ ಪುಸ್ತಕಗಳ ಮೇಲಿರುವ ಅಪಾರ ಪ್ರೀತಿಯನ್ನು ಧ್ವನಿಸುತ್ತದೆ.

ರಕ್ತಿ ಹೀರಿ ತನು ಅಲ್ಲಾಡಿಸಿ ಇಡೀ ರಾತ್ರಿ ನಿದ್ದೆಗೆಡಿಸಿಕೊಂಡು ಹೆಂಡಿರು ಮಕ್ಕಳು ಸಂಸಾರವೆನ್ನುವ ಮೋಹದಿಂದ ಪ್ರೊಫೆಸರರನ್ನು ದೂರಗೊಳಿಸಿ, ಅವುಗಳೆಲ್ಲಗಳಿಂದ ವಿಮುಖವಾಗುವ ಆತ್ಮದ ತುಂಡುಗಳು ಅವರ ಬರಹಗಳು. ಇಲ್ಲಿ ಲೇಖಕರ ಬರಹಗಳೆಂದರೆ ಅವರ ಗಾಢವಾದ ಅನುಭವವಗಳು, ಎಕ್ಸ್‌ಪೋಷರ್‍ಸ್‌ಗಳು ಮಾತ್ರವಲ್ಲ ಇಮೇಜಿನೇಷನ್ಸ್‌ಗಳು. ಅವು ಆತ್ಮದ ತುಂಡುಗಳಾಗಿ ಜೀವಂತಿಕೆ ಪಡೆದುಕೊಂಡು ಪುಸ್ತಕ ರೂಪದಲ್ಲಿ ಹೊರ ಹೊಮ್ಮಿರುವಂತಹವುಗಳು. ಇದು ಲೇಖಕನ ಸೃಜನಶೀಲತೆಯ ಮತ್ತು ಮಹಾತ್ವಾಕಾಂಕ್ಷೆಯ ತಲ್ಲಣಗಳಾಗಿ ಓದುಗನನ್ನು ಕಾಡುವುದು. ಮನುಷ್ಯನಾದವನಿಗೆ ಅನುಭವಗಳನ್ನು ಪಡೆಯಬೇಕಾದರೆ ಆತ ತನ್ನ ಸುತ್ತಮುತ್ತ ಘಟಿಸುವ ಸಂಗತಿಗಳನ್ನು ಒಟ್ಟಾಗಿ ಗ್ರಹಿಸಿ ತನ್ನ ಕಲ್ಪನೆಯಲ್ಲಿ ಹೊಸೆದುಕೊಡುವುದು ಅನುಭವ ಮತ್ತು ಅನುಭಾವದಿಂದ ಸಾಧ್ಯ. ‘ಎಲ್ಲೋ ಹುಡಿಕಿದೆ ಇಲ್ಲದ ದೇವರ’ ಅನ್ನುವ ಕವಿ ಸಾಲಿನಂತೆ ಹೊರಗೆಲ್ಲಾ ಹುಡುಕುತ್ತಾ ಅಂಡಲೆಯುವುದು, ವ್ಯರ್ಥ ಕಾಲಹರಣ ಮಾಡುವುದು ಒಂದು ವರ್ಗದ ಜನರಿಗೆ ಬದುಕು ಹೊರಗಡೆಯೆ ಅನಂತ ಪ್ರಮಾಣದಲ್ಲಿ ಸಿಗುತ್ತಿರಬೇಕು ಅನ್ನುವುದು ಊಹನೆಯಾಗಿ ಉಳಿದರೂ ವಾಸ್ತವದಲ್ಲಿ ಓದುವ, ಬರೆಯುವ ಹವ್ಯಾಸ ಹೇಗೆ ದೂರವಾಗುತ್ತಿದೆಯೆನ್ನುವುದನ್ನೂ ಪ್ರತಿಬಿಂಬಿಸುತ್ತದೆ.

ಹೊರಗಡೆಯ ಅಲೆದಾಟ ಇಲ್ಲಿ ಲೌಕಿಕವಾದ ಮತ್ತು ಎಲ್ಲರೂ ಒಪ್ಪಿಕೊಳ್ಳುವ ಬದುಕಿನ ಪರಿಯಾದರೆ, ಅಲ್ಲಿ ಅನುಭವಗಳ ಮೂಟೆಯಿರಬಹುದು ಅದೇ ಮುಂದೆ ತನ್ನನ್ನೇ ತಾನು ಸುತ್ತಿಕೊಳ್ಳುವ ಕಕೂನ್ಸ್ ತರಹ ಅನುಭವಗಳತ್ತ ವಾಲುತ್ತಾ ಎಂದಾದರೊಮ್ಮೆ ಪ್ರೊಫೆಸರ್‌ರಂತೆ ರೂಮಿನ ಒಳಗೆ, ರ್‍ಯಾಕಿನಲ್ಲಿ ಜೀವಂತವಾಗಿರುವ ಪುಸ್ತಕಗಳಂತೆ ಮತ್ತು ತಮ್ಮ ಅನುಭವದ ಆತ್ಮದ ತುಂಡುಗಳಂತೆ ಕಾಣಬಹುದು. ಇದು ಹೊರಗಡೆಯ ಬದುಕಿಗಿಂತ ಭಿನ್ನವಾದ ಒಂದು ಅನುಭವವನ್ನು ಕೊಡುವ ಸತ್ಯದಂತೆ ಗೋಚರವಾಗುತ್ತದೆ.

ಪ್ರೊಫೆಸರರಿಗೆ ಕಿವಿ ಕೇಳಿಸದಿದ್ದರೂ ಧ್ವನಿ ಹೊರಡಿಸುವುದು ತಿಳಿಯುತ್ತದೆ. ಅವರು ಬೆರಗಿನಿಂದ, ‘ನೀವು ಯಾವಾಗ ಮಾತನಾಡಲು ಕಲಿತಿರಿ?’ ಎಂದು ಪುಸ್ತಕಗಳನ್ನು ಕೇಳುತ್ತಾರೆ. ಅವು ತಮ್ಮ ಆತ್ಮದ ತುಂಡುಗಳಂತಹ ಪುಸ್ತಕಗಳು ಮಾತ್ರವಲ್ಲ ತಮ್ಮ ಅನುಭವಗಳನ್ನು ಧಾರೆಯೆರೆದು ಕೊಟ್ಟ ಹಲವು ಶಿಷ್ಯ ವೃಂದಗಳಲ್ಲಿ ಒಬ್ಬ ಶಿಷ್ಯನ ದನಿಯಾಗಿರುವುದು ತಿಳಿಯುತ್ತದೆ. ಅಷ್ಟೊಂದು ತಮ್ಮ ಗ್ರಂಥಾಲಯದಂತಹ ಪ್ರಪಂಚವನ್ನು ನೆಚ್ಚಿಕೊಂಡಿರುವ ಅವರಿಗೆ ಪುಸ್ತಕಗಳೆ ಮಾತನಾಡಿದಂತೆ ಕಂಡರೂ ಇಲ್ಲಿ ಶಿಷ್ಯಂದಿರು ತನ್ನನ್ನು ಮೀರಿ ಹೋಗಲಾರರೆನ್ನುವ ಪರೋಕ್ಷವಾದ ಅವರ ಬಾಹ್ಯದಲ್ಲಿ ತೋರಿಸಿಕೊಳ್ಳಲಾಗದ ‘ಅಹಂ’ ಅನ್ನು ಕೂಡ ತಿಳಿಸುತ್ತದೆ.

ಇಲ್ಲಿ ಕಥೆಗಾರ, ಗ್ರಂಥಾಲಯದಲ್ಲಿ ಕುರ್ಚಿ ಇರಬಾರದು; ನಾವು ನೆಲಕ್ಕೆ ಕುಂತು ಓದಬೇಕು. ಬುದ್ಧಿ ಆಕಾಶಕ್ಕೆ ಜಿಗಿದಾಗ ನೆಲ ನಮ್ಮ ಇರುವಿಕೆಯನ್ನು ನೆನಪಿಸಿಕೊಡುತ್ತದೆ. ಕುರ್ಚಿಗೆ ಆ ಶಕ್ತಿ ಇರುವುದಿಲ್ಲ. ಈ ವಾಕ್ಯಗಳು ಮನುಷ್ಯನ ಬುದ್ಧಿಮಟ್ಟ ಹೆಚ್ಚಾದಂತೆ ಅವನು ತಾನು ನಿಂತ ನೆಲವನ್ನೇ ಮರೆಯುತ್ತಾನಲ್ಲದೆ, ಓತಪ್ರೋತವಾಗಿ ತನ್ನ ಮನಸ್ಸನ್ನು ಹರಿಯಬಿಡುತ್ತಾನೆ, ಅವನನ್ನು ಎಚ್ಚರಿಸುವುದು ಭೂಮಿಯೆನ್ನುವ ಸತ್ಯವನ್ನು ತಿಳಿಸುತ್ತಾರೆ. ಈ ವಾಕ್ಯಗಳಲ್ಲಿ ಮನುಷ್ಯನ ಕಾಮನೆಗಳು, ಅಹಂ ಮತ್ತು ಅನುಭವದ ಕೊರತೆ ಇವುಗಳನ್ನು ಹದ್ದು ಬಸ್ತಿನಲ್ಲಿಡದಿದ್ದರೆ ತನ್ನನ್ನು ತಾನು ಮರೆತು ಬಿಡುವ ಕಲ್ಪನೆಯಿದೆ. ನಿಜವಾಗಿಯೂ ಇದೊಂದು ಅದ್ಭುತ ಅನುಭವದ ಮಾತು! ಹಾಗಾಗಿಯೆ ಈ ಕಥೆ ಶಿಷ್ಯ ಮತ್ತು ಗುರುವಿನ ಸಂಬಂಧವನ್ನು ತಿಳಿಸುವುದಕ್ಕಿಂತಲೂ ಅನುಭವಗಳನ್ನು ಹಂಚಿಕೊಡುವಲ್ಲಿ ಒಂದು ಯಶಸ್ವಿ ದನಿಯಾಗಿ ನಿಲ್ಲುತ್ತದೆ.

ಇಂಡಿಯಾ ಅಮೆರಿಕಾದ ವ್ಯಕ್ತಿ ಸ್ವಾತಂತ್ರ್ಯ ಮತ್ತು ಶಿಷ್ಟಾಚಾರದ ಹೋಲಿಕೆಯನ್ನು ಮಾಡುತ್ತಾ ತನ್ನ ಗುರುವನ್ನು ಮೀರಿಸುವ ಮಾತುಗಳನ್ನು ಆಡುತ್ತಾನೆ ಶಿಷ್ಯ ಬಗರಿ. ವ್ಯಕ್ತಿ ಸ್ವಾತಂತ್ರ್ಯವೆಂದರೆ ಇನ್ನೊಬ್ಬನನ್ನು ಹೊಡೆಯೋದು ಬಡಿಯೋದು ಅಲ್ಲ. ಅದಕ್ಕಿಂತಲೂ ವಿಭಿನ್ನವಾಗಿರುವಂತಹುದು. ಒಂದು ಕಪ್ ಚಹಾ ಮಾಡಿಕೊಡುವ ಭಾರತೀಯ ಶಿಷ್ಟಾಚಾರದಲ್ಲಿಯೂ ವ್ಯಕ್ತಿಗತವಾದ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಶಿಷ್ಯನ ಪರಿ ದ್ವೈತ ಅದ್ವೈತಗಳ ನಡುವೆ ಹೋಲಿಸಿದಾಗ ಶಿಷ್ಯ ಸೋಲಿನೊಡನೆ ಜಾರುತ್ತಾ ಗೆಲುವಿನ ಹಾದಿ ಏರುತ್ತಾ ಒಂದೊಮ್ಮೆ ಎಷ್ಟೊಂದು ಶಿಸ್ತಿನ ಸಿಟ್ಟಿನ ಪ್ರಖರ ವೈಚಾರಿಕತೆಯ ಮನುಷ್ಯನಾಗಿದ್ದರು ಈ ಪ್ರೊಫೆಸರು ಎಂದು ಅಚ್ಚರಿಪಡುತ್ತಾನೆ.

ಶಿಷ್ಯನಿಗೆ, ಬದುಕಿನ ದಾರಿ ಅಂಚು ಪಟ್ಟಿಯಿಂದ ಗೆರೆ ಎಳೆಯುವಂತೆ ಅಲ್ಲ; ಕಾಡಿನ ಕಾಲು ಹಾದಿಯಂತೆ ಒಮ್ಮೊಮ್ಮೆ ನಾವೇ ಹೊಸದಾರಿಯನ್ನು ತುಳಿಯುವುದು ಅನಿವಾರ್ಯ ಅಂದುಕೊಳ್ಳುತ್ತಾ, ಇಂಡಿಯಾದಲ್ಲಿ ಅದು ಸಾಧ್ಯವಿಲ್ಲವೆನಿಸುತ್ತದೆ. ಯಾವಾಗಲೂ ತರ್ಕದ ಬಾಗಿಲುಗಳನ್ನು ತೆರೆದುಕೊಂಡೆ ಇರುವ ಪ್ರೊಫೆಸರು ಶಿಷ್ಯನ ಮುಂದೆ ಸೋಲು ಒಪ್ಪಿಕೊಳ್ಳಲಾರರು. ಮುಂದೆ ಕ್ರಾಂತಿಯ ವಿಷಯವನ್ನು ಮಾತನಾಡುತ್ತಾ,

ಕ್ರಾಂತಿಯೆಂದರೆ ಬದಲಾವಣೆ, ಪ್ರಗತಿ, ನಿಂತ ನೆಲದ ವಿಸ್ತಾರದಲ್ಲಿ ಕ್ರಾಂತಿ ಅಂದರೆ ಕ್ರಿಯೆಯ ಎಲ್ಲಾ ಅಯಾಮಗಳನ್ನು ಮೂಲಭೂತವಾಗಿ ಅರ್ಥ ಮಾಡಿಕೊಳ್ಳುವುದು. ಅರ್ಥ ಮಾಡಿಕೊಳ್ಳುವ ಕ್ರಿಯೆ ಮೌನವಾಗಿ ನಡೆಯುವಂತದ್ದು. ಕ್ರಾಂತಿ ಮೌನದ ವಿರೋಧಿ. ಅದು ಪ್ರತಿಕ್ರಿಯೆಯಲ್ಲ. ಪ್ರತಿಕ್ರಿಯೆ ಯಾವತ್ತೂ ಸಂತೋಷವನ್ನು ಹುಟ್ಟು ಹಾಕುತ್ತದೆ. ವಿರೋಧ ಯಾವತ್ತೂ ಕ್ರಿಯಾಶೀಲವಲ್ಲ - ಪ್ರೊಫೆಸರರು ವಾದಿಸುತ್ತಾರೆ.

ಶಿಷ್ಯ ಬಗರಿಗೆ - ಕ್ರಾಂತಿಯೆಂದರೆ ಆದರ್ಶರಹಿತವಾಗಿರಬೇಕು. ಕ್ರಾಂತಿ ಅಂದ್ರೆ ದೇಶದ ಪ್ರಗತಿ, ಇದರಿಂದ ಬಲಿದಾನಗಳಾದರೂ ತಪ್ಪಿಲ್ಲ. ಅದನ್ನೇ ವಿರೋಧಿ ಅನ್ನುವುದಾದರೆ ಆ ವಿರೋಧದಲ್ಲಿಯೇ ಆನಂದ ಇದೆ. ಜಗತ್ತಿನ ಎಲ್ಲರೂ ಚಿಂತನೆ ಮತ್ತು ವಿಚಾರಣೆಗಳಿಗೆ ಒಗ್ಗಿದ ಮೇಲೆ ಎಲ್ಲಾ ಕಡೆ ತಾತ್ವಿಕವಾದ ಸಮಾನತೆ ಮೂಡುತ್ತದೆ. ಇದು ಬದುಕಿನ ಎಲ್ಲಾ ಸ್ತರದಲ್ಲಿಯೂ ಅಸಮಾಧಾನ ತರುವುದು ವಾಸ್ತವ ಸತ್ಯ. ಈ ಸತ್ಯ ಕ್ರಾಂತಿಯ ಮೂಲ.

ಇಲ್ಲಿ ಶಿಷ್ಯನ ತರ್ಕ ಮೇಲುಗೈಸಾಧಿಸಿ ಗುರುವಿನ ಸೋಲಿಗೆ ನಾಂದಿಹಾಡುತ್ತಾನೆ. ಸಮಾನತೆಯೆಂದರೆ ಕಲ್ಪನೆ ಮಾತ್ರ. ಅದು ಭ್ರಮೆ. ವಿಚಾರಗಳು ಸ್ವಂತವಾದ ಮೇಲೆ ಈ ಸಮಾನತೆ ಮೂಡುತ್ತದೆ. ಆಗ ಪ್ರೀತಿ ಹುಟ್ಟುತ್ತದೆ. ಅದೇ ನಿಜವಾದ ಕ್ರಾಂತಿ. ಪ್ರೀತಿಯನ್ನು ಬೆಳೆಸಲಿಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೇ ಕ್ರಾಂತಿಯನ್ನೂ ಅನ್ನುತ್ತಾರೆ ಪ್ರೊಫೆಸರ್. ಗುರುವಿನ ತರ್ಕವನ್ನು ಒಪ್ಪಿಕೊಳ್ಳದ ಶಿಷ್ಯ ಬರೀ ಪ್ರೀತಿಯಿಂದ ಊಟ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲವೆನ್ನುತ್ತಾನೆ. ಸ್ಥಾವರ ಅಳಿದ ಮೇಲೆ ಜಂಗಮಕ್ಕೆ ಬೆಲೆಯೆನ್ನುವ ತರ್ಕವನ್ನು ಮುಂದಿಡುತ್ತಾನೆ. ಶಿಷ್ಯನ ಈ ರೀತಿಯ ಬೆಳವಣಿಗೆ ಕಂಡು ಪ್ರೊಫೆಸರ್ ಅಧೀರರಾಗುತ್ತಾರೆ.

ಆಗ ಶಿಷ್ಯ ಗುರುವನ್ನು ಸೋಲಿಸಿದೆನೆನ್ನುವ ಭ್ರಮೆಗೆ ಇಳಿಯುತ್ತಾನೆ. ಆ ‘ಅಹಂ’ ಅವನ ತಲೆಯ ಕೋಡುಗಳಾಗಿ, ಬಗಲಲ್ಲಿನ ರೆಕ್ಕೆಗಳಾಗಿ ಕಾಣಿಸುತ್ತದೆ. ತನ್ನ ಮುಂದಿನ ಪೀಳಿಗೆಗೆ ಉತ್ತರ ಹುಡುಕುವ ಶಿಷ್ಯನ ತವಕ ಇತಿಹಾಸವಾಗಿ ಅದು ಅಗತ್ಯವಾಗಿರುವುದೆ ಸಂದೇಹಗಳ ಪರಿಹಾರವೆನ್ನುತ್ತಾ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಅವನ ಬೆಳವಣಿಗೆಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಶಿಷ್ಯ ಬಗರಿ ಎದ್ದು ಹೊರಗೆ ಹೊರಡುತ್ತಾನೆ. ಸದಾ ತರ್ಕದ ಬಾಗಿಲುಗಳನ್ನು ತೆರೆದುಕೊಂಡೆ ಇರುವ ಪ್ರೊಫೆಸರರಿಗೆ ಅವನ ಬಾಲ ಮಾತ್ರ ಬಾಗಿಲ ಬಳಿಯೆ ಸಿಕ್ಕಿಕೊಂಡು ಬಾಗಿಲು ಮುಚ್ಚುವುದೂ ಕಷ್ಟವಾಗುತ್ತದೆ. ಒಂದು ಮುಗಿದ ಅಧ್ಯಾಯದ ಕೊಂಡಿಯಂತೆ ‘ಬಾಲ’ ಕಂಡರೂ ಅದು ಇತಿಹಾಸದ ಜೀವಂತಿಕೆಯಿರುವ ಇನ್ನೊಂದು ಅಧ್ಯಾಯದ ಪ್ರಗತಿಯಾಗಿ ಗೋಚರಿಸುವುದು ಈ ಕಥೆಯ ವಿಶೇಷತೆ.
ಚಿತ್ರ ಕೃಪೆ: ಎಸ್.ವಿ. ಹೂಗಾರ್

No comments: