Wednesday, November 25, 2009

ಭೂತದ ಕೋಳಿ (ಮಯೂರದಲ್ಲಿ ಪ್ರಕಟವಾದ ಕಥೆ)


ಬೆಳಿಗ್ಗೆ ಬೇಗನೆ ಎದ್ದು ಬಚ್ಚಲು ಮನೆಯ ಒಲೆಗೆ ಬೆಂಕಿ ಹಾಕಿ, ಒಂದಷ್ಟು ಕೊತ್ತಳಿಗೆಗಳನ್ನು ಒಳಗೆ ತಳ್ಳಿ ಎದ್ದ ಕೇಶವ ಭಟ್ಟರು ಬೈರಾಸನ್ನು ಹೆಗಲಿಗೆ ಸೇರಿಸಿ ಗದ್ದೆಯ ಪುಣಿಯನ್ನು ಹಿಡಿದು ಹೊರಟರು. ಭತ್ತದ ತೆನೆಗಳು ಪಾಯಕಟ್ಟಿ, ಹಸಿರಿನಿಂದ ಬಂಗಾರದ ಬಣ್ಣಕ್ಕೆ ತಿರುಗಿದ್ದವು. ಇನ್ನೊಂದೆರಡು ದಿನ ನೀರು ಹಾಕಿದರೆ ಸಾಕು. ಹೇಗೂ ಹದಿನೈದು ದಿನಗಳೊಳಗೆ ಕೊಯ್ಲು ಆರಂಭಿಸುವುದೇ ಎಂದು ನಿರ್ಧರಿಸಿದವರು, ಪಂಪಿನ ನೀರನ್ನು ಗದ್ದೆಗೆ ತಿರುಗಿಸಿ ಹೆಗಲಿನ ವಸ್ತ್ರದಿಂದ ಕೈ ಒರೆಸಿಕೊಂಡರು.


ಎಲ್ಲಿದ್ದವೋ, ಸೈನಿಕರ ಪಡೆಯಂತೆ ಓಡಿ ಬಂದ ಹತ್ತು ಹದಿನೈದು ಕೋಳಿಗಳು ಹಠಾತ್ತನೆ ದಾಳಿ ಮಾಡುವಂತೆ ಭಟ್ಟರು ನೋಡುತ್ತಿದ್ದಂತೆ ಮಾಗಿದ ತೆನೆಗಳನ್ನು ಕುಕ್ಕಿ, ನುಂಗುತ್ತಿದ್ದವು. ತುಂಬಿದ್ದ ತೆನೆಯ ಅಷ್ಟೇ ಕಾಳುಗಳು ಗದ್ದೆಯನ್ನೂ ಸೇರುತ್ತಿದ್ದವು. ಅವರು ಹೆಗಲಿನ ಬೈರಾಸು ತೆಗೆದು, `ಹೌ.. ಹೌ... ಅಂದರೂ, `ಕೊಕ್ಕೋ.. ಕ್ಕೋ ಎಂದು ಸದ್ದು ಹೊರಡಿಸಿ ತಮ್ಮವರನ್ನೆಲ್ಲ ಎಚ್ಚರಿಸಿದವೆ ಹೊರತು, ರೆಕ್ಕೆ ಬಿಚ್ಚದೆ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿದವು.

ಭಟ್ಟರು ನೇರವಾಗಿ ಮನೆಗೆ ಬಂದವರೇ, ಇಕ್ಕಳ್ಳೇ, ಅಲ್ಲಿ ಒಂದು ದೊಡ್ಡ ಸೈನ್ಯವೇ ಬಂದಿದೆ. ಪೈರೆಲ್ಲಾ ಹಾಳಾಗುತ್ತೆ. ಮಕ್ಕಳಿಗೆ ಹೇಳು ಆ ಗದ್ದೆಯತ್ರ ಕುಳಿತುಕೊಂಡು ಓದಲಿ. ಅವುಗಳನ್ನು ಕಾಯುವುದಕ್ಕೂ ಆಯ್ತು, ಓದುವುದಕ್ಕೂ ಆಯ್ತಲ್ಲ ಅಂದರು.
ಬೆಳಗ್ಗಿನ ಉಪಹಾರ ಮುಗಿಸದೆ ಮಕ್ಕಳು ಪುಸ್ತಕ ಕೈಯಲ್ಲಿ ಹಿಡಿಯುವುದಿಲ್ಲವೆಂದು ಮೀನಾಕ್ಷಮ್ಮನಿಗೆ ಗೊತ್ತು. ದೋಸೆ ಹೊಯ್ಯುತ್ತಿದ್ದವರು ಗಂಡನಿಗೆ, ನೀವು ಪೂಜೆ ಮಾಡಿ ಹೊರಡಿ. ನಾನೇ ನೋಡಿಕೊಳ್ತೇನೆ. ಅವರಿಗೆಲ್ಲಾ ನಮ್ಮ ಮೇಲೆ ಎಂತದ್ದೋ ಹಠ. ಇಲ್ಲಾಂದ್ರೆ ಇಷ್ಟು ಬೇಗನೆ ಆ ಕೋಳಿಗಳನ್ನೆಲ್ಲಾ ಬಿಡೋದಾ? ಅವುಗಳಿಗೆ ನಾಲ್ಕು ಕಾಳು ಹಾಕುವ ಗತಿಯಿಲ್ಲದವರು ಸಾಕುವುದು ಯಾಕೆ? ಆ ಸೇಸಕ್ಕನಿಗೆ ನಾನೇ ಹೇಳಿ ಬರ್ತೇನೆ. ಎಂತದು ಇದು ಇಲ್ಲಾಂದ್ರೆ? ಹೇಳಿದವರೇ ಕಟ್ಟಿಗೆಯ ಒಲೆಯ ಉರಿಯನ್ನು ಕಡಿಮೆ ಮಾಡಿ ತಮ್ಮ ಹಿರಿ ಮಗಳನ್ನು ಕರೆದರು."

ಸಾವಿತ್ರಿ, ಇಲ್ಲಿ ಬಾ. ದೋಸೆ ಕಲ್ಲು ಕಾಯ್ತು. ಒಂದೆರಡು ದೋಸೆ ಹಾಕು. ಆ ಕೋಳಿಗಳನ್ನು ಓಡಿಸಿ ಬರ್ತೇನೆ ಅಂಗಳಕ್ಕಿಳಿದು ಕೈಯಲ್ಲಿ ಒಂದೆರಡು ಮಣ್ಣಿನ ಹೆಂಟೆಗಳನ್ನು ಹಿಡಿದು ನಿಧಾನವಾಗಿ ಗದ್ದೆಯತ್ತ ನಡೆದರು. ಒಮ್ಮೆ ತಲೆಯೆತ್ತಿ ಸದ್ದು ಆಲಿಸಿದ ಕೋಳಿಗಳು, `ಕ್ಕೊಕ್ಕೋ ಅಂದವು. ಗಂಡ ಹೇಳಿದ್ದು ಸುಳ್ಳಲ್ಲ. ಒಂದು, ಎರಡಾ? ಹತ್ತು ಹದಿನೈದು ಕೋಳಿಗಳು. ಗದ್ದೆಯ ನೇರಕ್ಕೆ ನಿಂತು ಮಣ್ಣಿನ ಹೆಂಟೆಗಳನ್ನು ಒಂದರ ಹಿಂದೆ ಒಂದರಂತೆ ಬಿಸಾಡಿದರೆ ತಪ್ಪಿಸಿಕೊಂಡು ತಮಗೆ ಹಾರಲು ಗೊತ್ತಿದೆ ಎಂದು ಎತ್ತರಕ್ಕೆ ಹಾರಿ, `ಕೊಕ್ಕೊಕ್ಕೋ ಅನ್ನುವ ದೊಡ್ಡ ಗದ್ದಲವನ್ನೆಬ್ಬಿಸಿ ಕೆಳಗಿನ ಮನೆಯತ್ತ ಹಾರಿದವು.
ಕೆಳಗೆ ಸೇಸಕ್ಕ, ಗಿರಿಜಕ್ಕ, ಪದ್ರಸನ ಮನೆಗಳು. ಎಲ್ಲರ ಮನೆಯಲ್ಲಿಯೂ ಕೋಳಿಗಳು. ಗಿರಿಜಕ್ಕ ಶಿಸ್ತಿನಲ್ಲಿ ಕೋಳಿಗಳನ್ನು ಕುತ್ತರಿಯೊಳಗೆ ಹಾಕಿಟ್ಟರೆ, ಪದ್ರಸ ಒಂದು ಕೋಳಿಯೂ ಅಂಗಳ ಬಿಟ್ಟು ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದ.

ಆದರೆ ಸೇಸಕ್ಕ ಹಾಗಲ್ಲ. ಅವರ ಮನೆಯಲ್ಲಿ ಬೇಕಾದಷ್ಟಿದ್ದರೂ ಇನ್ನೊಬ್ಬರದಕ್ಕೆ ಆಸೆ ಪಡುವವರು. ಐದು ಗಂಟೆಗೆ ಎದ್ದರೇ ಮೊದಲು ಕೋಳಿಗಳನ್ನು ಬಿಡುವ ಕೆಲಸ ಅವರದ್ದು. ತಮಗೆ ಎಲ್ಲಿ ಆಹಾರ ಸಿಗುತ್ತದೆಯೆಂದು ಅವುಗಳಿಗೂ ಗೊತ್ತು. ನೇರವಾಗಿ ಬರುವುದೇ ಭಟ್ಟರ ಗದ್ದೆಗಳಿಗೆ.
ಕೋಳಿಗಳ ಆರ್ಭಟ ಕೇಳಿ ಮಡಲಿನ ತಟ್ಟಿಯಿಂದ ಹೊರಗೆ ಇಣುಕು ಹಾಕಿದ ಸೇಸಕ್ಕ, ಭಟ್ಟರ ಹೆಂಗಸು, ಮೀನಾಕ್ಷಮ್ಮನನ್ನು ನೋಡುತ್ತಲ್ಲೇ ಹೊರಗೆ ಧಾವಿಸಿ ಬಂದರು. ಎಂತದ್ದು ಇದು? ನಿಮ್ಮ ಜಾತಿಯೆಂತದ್ದು? ನೀವು ಕೋಳಿಗಳನ್ನು ಕೊಲ್ಲುತ್ತೀರಾ? ಪಾಪ... ಪಾಪ ತಟ್ಟುತ್ತದೆ ನಿಮಗೆ ಅಂದದ್ದೇ ಮೀನಾಕ್ಷಿಯವರಿಗೆ ಸಿಟ್ಟು ಬಂತು. ನೀವು ಎಂತದ್ದು ಮಾತನಾಡುವುದು? ನೀವು ಮಾಡಿದ್ದು ಸರಿಯಾ? ಬೆಳಿಗ್ಗೆದ್ದು ಕೋಳಿಗಳನ್ನು ನಮ್ಮ ಗದ್ದೆಗೆ ಮೇಯಲ್ಲಿಕ್ಕೆ ಬಿಡುವುದಾ? ನಿಮಗೆ ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲವಾ? ನಾವೇನು ಅವುಗಳನ್ನು ನಿಮ್ಮ ಗದ್ದೆಗೆ ಬಿಟ್ಟಿದೇವಾ? ಅವುಗಳಿಗೇನು ಗೊತ್ತು? ನೀವು ಹಾಗೆ ಕಲ್ಲು ಬಿಸಾಡಿದರೆ ಅವು ಸಾಯುವುದಿಲ್ಲವಾ?

ಅಷ್ಟು ನಿಮಗೆ ಕಾಳಜಿಯಿದ್ದರೆ ನಿಮ್ಮ ಕೋಳಿಗಳನ್ನು ನೀವೇ ನೋಡಿಕೊಳ್ಳಿ. ಇಲ್ಲಿಗೆ ಎಂತಕ್ಕೆ ಬಿಡುವುದು? ಎಂದು ಹೇಳುತ್ತಲೇ ಮನೆಗೆ ಬಂದರು ಮೀನಾಕ್ಷಮ್ಮ. ಸೇಸಕ್ಕ ಇನ್ನೂ ಗೊಣಗುತ್ತಿರುವುದು ಕೇಳಿಸುತ್ತಿತ್ತು.
ಮೀನಾಕ್ಷಿಯವರು ಕೈ ತೊಳೆದುಕೊಂಡು ಬಂದು ಮಗಳನ್ನು ಎಬ್ಬಿಸಿ ದೋಸೆ ಹೊಯ್ಯಲು ತಾವೇ ಕುಳಿತರು. ಅಷ್ಟರಲ್ಲಿ ಕೇಶವ ಭಟ್ಟರು ಕೂಡ ಪೂಜೆ ಮುಗಿಸಿ ಅಂಗಡಿಗೆ ಹೊರಡಲು ಅನುವಾದರು. ಆ ಹೆಂಗಸೆಂತ ಬೊಬ್ಬೆ ಹಾಕಿದ್ದು? ಬೆಳಗ್ಗೆದ್ದು ಅವುಗಳತ್ರ ಎಂತ ಮಾತಡ್ಲಿಕ್ಕೆ ಹೋಗಿದ್ದು? ಭಟ್ಟರ ಮಾತು ಕೇಳಿ ಮೀನಾಕ್ಷಿಗೆ ರೇಗಿತು.ನೀವೇ ಹೇಳಿದ್ದಲ್ಲ. ಅಲ್ಲಿ ಒಂದು ದೊಡ್ಡ ಪಡೆಯೇ ಇತ್ತು. ಕಲ್ಲು ಬಿಸಾಡಿದ್ದಕ್ಕೆ ಆ ಹೆಂಗಸು ಒದರ್ತು. ಇನ್ನು ಬರ್ಲಿ ಕೊಂದೇ ಹಾಕ್ತೇನೆ ಅಂದಾಗ ಭಟ್ಟರಿಗೆ ಹೆದರಿಕೆಯಾಯಿತು.ಎಂತದು ನೀನು ಹೇಳುವುದು? ಇನ್ನು ಅದೊಂದು ಅಪವಾದ ನಮಗೆ ಬೇಡ. ಅವತ್ತು ಆ ಪದ್ರಾಸ ಮಾಡಿದ್ದು ಗೊತ್ತುಂಟಲ್ಲಾ? ನಮ್ಮನ್ನು ಅವರು ನೆಮ್ಮದಿಯಿಂದ ಬದುಕುವುದಕ್ಕೆ ಬಿಡುವುದಿಲ್ಲ. ಆದ್ರೂ ಇಂತದಕ್ಕೆಲ್ಲಾ ಹೋಗುವುದು ಬೇಡ. ಆದಷ್ಟು ನೋಡಿಕೊಳ್ಳುವ. ಅವುಗಳ ಪಾಲು ಅವುಗಳಿಗೆ ಹೋಗ್ಲಿ ಎಂದು ಮಡದಿಯನ್ನು ಸಮಾಧಾನಿಸಲು ಪ್ರಯತ್ನಿಸಿದರು.


ಆ ಪದ್ರಾಸ ಅಷ್ಟು ಗಲಾಟೆ ಮಾಡಿದ್ರೂ ಈಗ ಸರಿಯಾಗಿಲ್ವಾ? ನೋಡುವಾ... ಈಗ ಅವನ ಕೋಳಿಗಳು ಬರ್ತಾವಾ? ನಾವು ಬ್ರಾಹ್ಮಣರೆಂದರೆ ಅವರಿಗೆಲ್ಲಾ ತಾತ್ಸಾರ. ನಾವು ಯಾರ ತಂಟೆಗೆ ಹೋಗದಿದ್ದರೂ ಸುಮ್ಮನೆ ನಮ್ಮ ಕಾಲು ಏಳಿತಾರೆ. ಇವರೆಲ್ಲಾ ಯಾಕೆ ಮಾತಾಡಿ ಮನಸ್ಸು ನೋಯಿಸ್ತಾರೋ? ಮೀನಾಕ್ಷಿಯ ಮಾತು ಕೇಳಿ ಭಟ್ಟರಿಗೂ ಬೇಸರವೆನಿಸಿತು. ಊರಿಗೆ ಬಂದಾಗಿನಿಂದ ಒಬ್ಬರಲ್ಲ ಒಬ್ಬರು ಹಠ ಹಿಡಿದು ಜಗಳ ಕಾಯುತ್ತಿದ್ದರು. ನೆರೆಕರೆಯೇ ದೊಡ್ಡ ಹೊರೆಯಂತಾಗಿತ್ತು.

ಚುಚ್ಚಿ ಮಾತನಾಡುವವರೂ ಎಲ್ಲೆಲ್ಲಿಯೂ ಇದ್ದಾರೆ. ಅದು ಅವರವರ ಸಣ್ಣತನ. ನಾಲ್ಕು ದೊಡ್ಡ ಜನರ ಸಂಪರ್ಕದಲ್ಲಿರುವ ಒಬ್ಬ ಸಾಮಾನ್ಯ ವ್ಯಕ್ತಿ ತಾನೇ ದೊಡ್ಡ ಮನುಷ್ಯ ಅಂದುಕೊಳ್ಳುತ್ತಾ, ಇತರರನ್ನು ಹಂಗಿಸುತ್ತ, ಬೆನ್ನಿಗೆ ಇರಿಯುತ್ತಲೇ ಇರುತ್ತಾನೆ. ತನಗಿಲ್ಲದ ಸುಖ, ಸಂತೋಷಗಳನ್ನು ಬೇರೆಯವರಲ್ಲಿ ಕಂಡು, ಅನಗತ್ಯವೆನಿಸಿದರೂ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಕೆಟ್ಟದಾಗಿ ನೋಡುತ್ತಾನೆ. ಒಂದಲ್ಲಾ ಒಂದು ದಿನ ಅಂತಹವರೂ ಕೆಳಗೆ ಬೀಳುತ್ತಾರೆಯೇ ಅಂದುಕೊಂಡ ಭಟ್ಟರು ಪದ್ರಾಸ ಆ ದಿನ ಮಾಡಿದ್ದನ್ನು ನೆನೆಸಿಕೊಂಡರು.


ಮನೆ ಕಟ್ಟಿದ ನಂತರ ಮೊದಲ ಬಾರಿಗೆ ಗದ್ದೆ ನೆಟ್ಟಿದ್ದು. ಆ ವರ್ಷವೇ ಪದ್ರಸನ ದೊಡ್ಡ ಹುಂಜ ಗದ್ದೆಯನ್ನು ದಾಟಿ ಭಟ್ಟರ ಅಂಗಳದವರೆಗೂ ಬಂದಿತ್ತು. ಆ ದಿನ ಸರೀ ಬಿಸಿಲು ಇದ್ದದ್ದಕ್ಕೆ ಮೀನಾಕ್ಷಮ್ಮ ರಾಗಿಯ ಸೆಂಡಿಗೆ ಹಾಕಿದ್ದರು. ಸೆಂಡಿಗೆ ಹರಡಿದ್ದ ಬಟ್ಟೆಯ ಮೇಲೆ ರಾಜಾರೋಷವಾಗಿ ಓಡಾಡಿತ್ತು ಅದು. ಕಾಗೆಗಳ ಉಪದ್ರಕ್ಕೆ ಹೆದರಿದ್ದ ಅವರಿಗೆ ಈ ರೀತಿಯಾಗಿ ಕೋಳಿ ಸೆಂಡಿಗೆಯ ಮೇಲೆ ಓಡಾಡುತ್ತದೆಯೆನ್ನುವ ಅಲೋಚನೆಯೇ ಇರಲಿಲ್ಲ. ಪಕ್ಕದಲ್ಲಿಯೇ ಕಾಡು ಇದ್ದದ್ದರಿಂದ ಅವರು ಅದು ಕಾಡು ಕೋಳಿಯೇ ಬಂದಿದೆಯೆಂದು ಮಕ್ಕಳನ್ನು ಕರೆದು ತೋರಿಸಿದರು. ಮಕ್ಕಳು ಅದನ್ನು ನೋಡುವ ಕುತೂಹಲದಿಂದ ಹೊರಗೆ ಬರುವಾಗ ಅದು ಒಂದಷ್ಟು ಕಡೆಗೆ ಇಶ್ಶಿ ಕೂಡ ಮಾಡಿತ್ತು. ಸೆಂಡಿಗೆಯ ಬಣ್ಣಕ್ಕು ಅದಕ್ಕೂ ಪರಕ್ಕೇ ಇರಲಿಲ್ಲ. ಮಕ್ಕಳು ಕರೆದು ಹೇಳುವಾಗ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಬಂದವರೇ ಅದನ್ನು ಅಟ್ಟಿಸಿಕೊಂಡು ಹೋದರು.

ಅದು ಕಾಡಿನ ಕಡೆಗೆ ಓಡುವುದು ಬಿಟ್ಟು ಕೆಳಗಿನ ಮನೆಯತ್ತ ಓಡಿತು. `ಅಯ್ಯೋ ದೇವರೇ! ಇದು ಕಾಡು ಕೋಳಿ ಅಲ್ವಾ? ಮನುಷ್ಯ ಸಾಕಿದ ಕೋಳಿ ಈ ತರ ಇನ್ನೊಬ್ಬರ ಮನೆಗೆ ಹೋಗಿ ಉಪದ್ರ ಮಾಡ್ತದ? ಅಂದವರೇ ಅದು ಯಾರ ಕೋಳಿ ಎಂದು ತಿಳಿಯುವ ಕುತೂಹಲಕ್ಕೆ ಅಲ್ಲಿಯೇ ನಿಂತಿದ್ದ ಪದ್ರಸನ ಮಗನನ್ನು ಕೇಳಿದರು. `ನಮ್ಮ ಕೋಳಿ ಅಂದ ಅವನನ್ನು ಕರೆದು ಹೇಳಿದರು. ನೋಡು, ಮನೆಯಲ್ಲಿ ಹೇಳು... ಕೋಳಿ ಸೆಂಡಿಗೆಯ ಮೇಲೆಲ್ಲ ಇಶ್ಶಿ ಮಾಡಿದೇಂತ. ಇನ್ನು ಇತ್ತ ಕಡೆ ಬಂದ್ರೆ ಕಲ್ಲು ಬಿಸಾಡ್ತೇನೆ

ಪದ್ರಸನ ಮಗ ಹಾಗೇ ಹೋಗಿ ಮನೆಯಲ್ಲಿ ಹೇಳಿರಬೇಕು. ಒಂದೆರಡು ದಿನ ಆ ಹುಂಜ ಕಾಣಿಸಲೇ ಇಲ್ಲ. ಆದರೆ ಮರು ದಿನ ದನದ ಹಟ್ಟಿಯಲ್ಲಿ ಇಟ್ಟಿದ್ದ ಅಕ್ಕಚ್ಚಿಯ ಪಾತ್ರೆಯ ಮೇಲೆ ನಿಂತು ಇಶ್ಶಿ ಮಾಡಿದನ್ನು ಕಣ್ಣಾರೆ ನೋಡಿದ ಮೀನಾಕ್ಷಿಯವರಿಗೆ ರೇಗಿತು. ಮಾತಾಡದೆ ಮೆಲ್ಲ ಬಂದವರೇ ಅದು ಎತ್ತ ಕಡೆಗೆ ಹಾರಿ ಹೋಗುತ್ತದೆಯೆಂದು ತಿಳಿದು ಅತ್ತ ಅಡ್ಡ ನಿಂತು ತೂರಿ ಒಂದು ಕಲ್ಲನ್ನು ಒಗೆದರು. ಕೋಳಿ ಕಂಗಾಲಾಗಿ `ಕೊಕ್ಕೊಕ್ಕೋ ಕೂಗುತ್ತಾ ಕಾಡಿನತ್ತ ಹಾರಿತ್ತು. ಸುಮಾರು ಸಮಯದವರೆಗೂ ಕಾಡಿನ ಮರದ ಮೇಲೆ ಕುಳಿತು ಕೂಗುತ್ತಿದ್ದುದು ಕೇಳುತ್ತಿತ್ತು. ಸಂಜೆಯ ಹೊತ್ತಿಗೆಲ್ಲ ಕೂಗು ನಿಂತಿತ್ತು. ಆದರೆ ಪದ್ರಸನ ಮನೆಯಲ್ಲಿ `ಬೋ... ಬೋ... ಎಂದು ಕೋಳಿಯನ್ನು ಕರೆಯುವ ಕೂಗು ಮಾತ್ರ ಕೇಳುತ್ತಲೇ ಇತ್ತು. ಹೊರಗೆ ಮುಸ್ಸಂಜೆಯ ಹೊತ್ತು ತುಳಸಿಕಟ್ಟೆಗೆ ದೀಪ ಇಡಲು ಬಂದಿದ್ದ ಮೀನಾಕ್ಷಿಯವರಿಗೆ ಅದನ್ನು ಕೇಳಿ ಆತಂಕವಾಯಿತು.

`ಕಾಡಿನಾಚೆ ಹೋದ ಕೋಳಿ ಮನೆಗೆ ಬರಲಿಲ್ಲವಾ? ನಾನೇ ಅದನ್ನು ಓಡಿಸಿದ್ದಲ್ವಾ? ಅಲ್ಲಿ ನರಿ ಗಿರಿಯೇನಾದರೂ ಹಿಡಿಯಿತಾ, ಹೇಗೆ? ಪದ್ರಸನ ಮನೆಯಲ್ಲಿ ನಡೆಯುತ್ತಿರುವ ಆತಂಕದ ದೃಶ್ಯ ಅವರ ಕಣ್ಣ ಮುಂದೆ ಸುಳಿಯುತ್ತಲೇ ಬೆದರಿದರು. ಮನಸ್ಸು ತಡೆಯಲಾರದೆ ಮಗನನ್ನು ಕಳುಹಿಸಿ, `ನಿಮ್ಮ ಕೋಳಿ ಕಾಡಿನ ಹತ್ತಿರ ಕೂಗ್ತಾ ಇತ್ತೂಂತ ಹೇಳು ಅಂದರು. ಮಗ ಪಟ್ಟಾಬಿ ಹಾಗೇ ಪದ್ರಸನ ಮನೆಗೆ ಬಂದು ಹೇಳುವಾಗ ಮತ್ತೂ ಒಂದು ಮಾತು ಹೇಳಿದ್ದ. `ಅಮ್ಮನೇ ಅದನ್ನು ಕಾಡಿಗೆ ಓಡಿಸಿದ್ದು ಅಂತ. ಪದ್ರಾಸ ರಾತ್ರಿಗೆ ಕುಡಿದು ಬಂದವನು ಹುಂಜ ಕಾಣದ್ದಕ್ಕೆ ಏನೇನೋ ಬಯ್ಯುತ್ತಿದ್ದದ್ದು ಕೇಳಿಸುತ್ತಿತ್ತು.
ಮರು ದಿವಸ ಕಾಡಿನ ಬದುವಿನ ಹತ್ತಿರ ಕೋಳಿ ಸತ್ತು ಬಿದ್ದಿದ್ದು ನೋಡಿ, ಪದ್ರಾಸ ಮೀನಾಕ್ಷಿಯಮ್ಮನನ್ನು ಸೇರಿ ಬೈಯ್ಯುತ್ತಿದ್ದ. ಅವರು ಮಕ್ಕಳನ್ನು ಹೊರಗೆ ಹೋಗದ ಹಾಗೇ ನೋಡಿಕೊಂಡರು. ಆದರೂ ಭಯ ಅವರಿಂದ ದೂರವಾಗಲಿಲ್ಲ. ಮಧ್ಯಾಹ್ನದ ಹೊತ್ತು ಕೇಶವ ಭಟ್ಟರು ಅಂಗಡಿಯಿಂದ ಬರುವಾಗ ಪದ್ರಾಸ ಹಡೆ ಮಾತುಗಳನ್ನು ಒದರುತ್ತಾ ಸತ್ತ ಕೋಳಿಯನ್ನು ತಂದು ಭಟ್ಟರ ಮನೆಯಂಗಳಕ್ಕೆ ಬಿಸಾಡಿದ. ಗಿರಿಜಕ್ಕನ ಮನೆಯವರು, ಸೇಸಕ್ಕನ ಮನೆಯವರೆಲ್ಲಾ ಇದನ್ನು ನಾಟಕದಂತೆ ನೋಡುತ್ತಾ ನಿಂತಿದ್ದರು.


ಕಟ್ಟದ ಕೋಳಿ ಅದು. ನಾಲ್ಕೈದು ಬಾರಿಯಾದರೂ ಗೆಲ್ಲುತ್ತಿತ್ತು. ಅದನ್ನೇ ಸಾಯಿಸಿದ್ರಲ್ಲ. ನೀವೇ ತಿನ್ನಿ ಅಂದು ಹಿಡಿ ಶಾಪ ಹಾಕಿ ಹೋದ ಪದ್ರಾಸ. ಮೀನಾಕ್ಷಿಯವರಿಗೆ ಅಳುವೇ ಬಂತು. ಗಂಡ ತಲೆ ತಗ್ಗಿಸಿಕೊಂಡೇ ಒಳಗೆ ಬರುವಾಗ ಅವರಿಗೆ ದು:ಖ ತಡೆಯಲಾಗಲಿಲ್ಲ. ಇಂತದನ್ನೆಲ್ಲಾ ಕೇಳಬೇಕಾಯಿತಲ್ಲ? ಎಂದು ವ್ಯಥೆ ಪಟ್ಟರು. ನಾನು ಹೇಳಿಲ್ವಾ ನಿನಗೆ, ನಮಗೆ ಎಂತಕ್ಕೆ ಬೇಕಿತ್ತು? ನೀನು ಕೊಂದಿಯಾ ಅದನ್ನಾ? ಭಟ್ಟರು ಶಂತವಾಗಿಯೇ ಕೇಳಿದಾಗ ಮೀನಾಕ್ಷಿಯಾವರು ಕಣ್ಣೀರನ್ನು ಒರೆಸಿಕೊಂಡು, ಅಕ್ಕಚ್ಚಿ ಪಾತ್ರೆ ಮೇಲೆ ಕುಳಿತು ಗಲೀಜು ಮಾಡಿತು. ಅದನ್ನು ಇನ್ನು ದನಗಳಿಗೆ ಇಡುವುದಕ್ಕಾಗುತ್ತಾ? ಅದಕ್ಕೆ ಕಾಡಿನತ್ತ ಓಡಿಸಿದೆ. ನಾನೇನು ಅದನ್ನು ಸಾಯಿಸ್ಲಿಲ್ಲ. ಬೇಕಾದ್ರೆ ಮಕ್ಕಳನ್ನು ಕೇಳಿ ಅಂದರು. ಭಟ್ಟರಿಗೆ ಉಭಯಸಂಕಟವಾಯಿತು. ಕೋಳಿಯನ್ನು ಸಾಯಿಸದಿದ್ದರೂ ಸಾಯಿಸಿದ ಆರೋಪ ಹೊತ್ತುಕೊಳ್ಳಬೇಕಾಯಿತಲ್ಲ ಎಂದು ವ್ಯಥೆಪಟ್ಟರು. ಇನ್ನು ಪದ್ರಾಸನನ್ನು ಸಮಾಧಾನ ಮಾಡಿ ಅದನ್ನು ತೆಗೆದುಕೊಂಡು ಹೋಗು ಅನ್ನುವಂತೆ ಇರಲಿಲ್ಲ. ಗಿರಿಜಕ್ಕನ ಮಗನನ್ನು ಕರೆದು ಅದನ್ನು ತೋಟದಲ್ಲಿ ಹುಗಿದು ಹಾಕುವಂತೆ ಹೇಳಿದರು. ಆದರೆ ಪದ್ರಾಸನಿಗೆ ಹೆದರಿದ ಗಿರಿಜಕ್ಕ ಮಗನಿಂದ ಅಂತಹ ಕೆಲಸವನ್ನು ಮಾಡದಂತೆ ತಾಕೀತು ಮಾಡಿದರು.

ಇನ್ನು ತಾನೇ ಅದನ್ನು ಇತ್ಯರ್ಥ ಮಾಡುವುದೆಂದು ಹಾರೆ ಹಿಡಿದುಕೊಂಡು ತೋಟಕ್ಕೆ ಹೊರಟಾಗ ಪದ್ರಾಸನ ಹೆಂಡತಿ ಜಲಜ ತೋಟದ ಬಳಿ ನಿಂತಿರುವುದು ಕಾಣಿಸಿತು. ಭಟ್ರೆ, ನಮ್ಮದು ತಪ್ಪಾಯಿತು. ಅವರೇನೋ ಬೇಸರದಿಂದ ಹೇಳಿದ್ರು, ಕ್ಷಮಿಸಿ ಅಂದವಳೇ ಅವರ ಅಂಗಳದಲ್ಲಿದ್ದ ಕೋಳಿಯನ್ನು ಎತ್ತಿಕೊಂಡು ಬರುವಂತೆ ಮಗನನ್ನು ಕಳುಹಿಸಿದಳು. ಭಟ್ಟರು ಮಾತಾಡದೆ ಸುಮ್ಮನೆ ತಲೆಯಲುಗಿಸಿ ಬಂದ ಹಾಗೆ ಹಿಂದಕ್ಕೆ ನಡೆದರು. ಅದೇ ದಿನ ಸಂಜೆ ಹೊತ್ತು ಸೇಸಕ್ಕನ ಕೋಳಿಯನ್ನು ನರಿಯೊಂದು ಹಿಡಿದುಕೊಂಡು ಹೋಗಿದ್ದನ್ನು ಎಲ್ಲರೂ ಕಣ್ಣಾರೆ ಕಂಡ ಬಳಿಕ ಪದ್ರಾಸನ ಕೋಳಿಯನ್ನು ಕೂಡ ನರಿಯೇ ನುಂಗಿದ್ದು ಎಂದು ತಿಳಿಯಿತು. ಬಳಿಕ ಪದ್ರಾಸನ ಕೋಳಿಗಳು ಎಂದೂ ಅವನ ಅಂಗಳವನ್ನು ದಾಟಿ ಹೋಗಿದ್ದಿಲ್ಲ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಭಟ್ಟರ ಹೆಂಡತಿಯ ಬಳಿ ಬಂದು ಕ್ಷಮಾಪಣೆ ಕೂಡ ಕೇಳಿ ಹೋಗಿದ್ದ.

ಆದರೂ ಮೀನಾಕ್ಷಿಯವರಿಗೆ ನೆರೆಕರೆಯೆಂದರೆ ಹೆದರಿಕೆಯೇ. ಈಗ ಸೇಸಕ್ಕನ ಕೋಳಿಗಳ ಉಪಟಳ. ಮತ್ತೊಮ್ಮೆ ಹಿಂದಿನದರ ಹಾಗೇ ಆದರೆ ಎಂಬ ಆತಂಕವಿದ್ದರೂ ಅವರನ್ನು ಕರೆದು ನಾಲ್ಕು ಮಾತು ಹೇಳುವುದೇ ಸರಿಯೆನಿಸಿತು. ಮೀನಾಕ್ಷಿಯವರಿಗೆ ಮೊದಲಿನ ಹೆದರಿಕೆ ಇರಲಿಲ್ಲ. ಅವರು ಒಂದೆರಡು ದಿನ ನೋಡಿದರು. ಹೇಳಿ ಕಳುಹಿಸಿದರೂ ಕೂಡ ಕೋಳಿಗಳ ಪಡೆ ಬರುವುದು ನಿಲ್ಲಲಿಲ್ಲ. ಸ್ವತ: ತಾವೇ ಸೇಸಕ್ಕನನ್ನು ಹುಡುಕಿಕೊಂಡು ಬಂದರು. ಬಸಳೆ ಗಿಡದ ಬಳಿ ಸಂಜೆಯ ಹೊತ್ತಿಗೆ ಮೀನು ಮೂರುತ್ತಿದ್ದ ಸೇಸಕ್ಕ ಬ್ರಾಹ್ಮಣರ ಹೆಂಗಸು ಬಂದದ್ದನ್ನು ನೋಡಿ ಮೀನನ್ನು ಹಾಗೆ ಬಿಟ್ಟು ಎದ್ದು ನಿಂತರು.
ಮುಸ್ಸಂಜೆ ಹೊತ್ತಿನಲ್ಲಿ ಏನು ಈ ಕಡೆ? ಎಂದು ಕೇಳುವಾಗ ಮೀನಾಕ್ಷಿಯವರು ನೇರವಾಗಿ ಮಾತಿಗೆ ಇಳಿದರು.

ಎಂತ ಸೇಸಕ್ಕ ನೀವು? ನಿಮ್ಮ ಕೋಳಿಗಳು ಬಂದು ಗದ್ದೆ ಹಾಳು ಮಾಡುವುದು ನಿಮಗೆ ಗೊತ್ತುಂಟು. ಆದರೂ ನೀವು ನಮ್ಮ ಗದ್ದೆಗೆ ಅವುಗಳನ್ನು ಅಟ್ಟುತ್ತಿದ್ದೀರಿ. ನಾವು ಎಂತದು ಮಾಡುವುದು ಹೇಳಿ. ಇರುವ ಎರಡು ಕೊಯ್ಲು ಗದ್ದೆಯಲ್ಲಿ ಆಗುವುದೇ ಮೂರು ಮುಡಿ ಅಕ್ಕಿ. ಅದೂ ಹೀಗಾದರೆ ಹೇಗೆ? ಎಂದು ಶಾಂತರಾಗಿಯೇ ನುಡಿದರಾದರೂ ಸೇಸಕ್ಕನಿಗೆ ಸರಿ ಕಾಣಲಿಲ್ಲ.
ನಾವೇನು ಮಾಡಬೇಕು. ಅವುಗಳು ಬಿಟ್ಟ ಕೂಡಲೇ ನಿಮ್ಮ ಗದ್ದೆಗೆ ಬರುತ್ತವಾ? ಇಡೀ ದಿನ ಅವುಗಳನ್ನು ಕಟ್ಟಿಹಾಕುವುದು ನಮಗೂ ಕಷ್ಟವೇ. ಇನ್ನೊಂದೆರಡು ದಿನ, ಎಲ್ಲವನ್ನು ಸಾಟೇ ಮಾಡಿಯಾಗಿದೆ ಎಂದು ಮತ್ತೆ ತಮ್ಮ ಕೆಲಸವನ್ನು ಮುಂದುವರಿಸಿದರು. ಮೀನಾಕ್ಷಿಯವರಿಗೆ ಅಲ್ಲಿ ನಿಲ್ಲಲಾಗದೆ ಹೊರಟು ಬಂದರು. ಸೇಸಿಯಕ್ಕ ಕೋಳಿಗಳ ಬಗ್ಗೆ ಗಮನ ಹರಿಸಲೇ ಇಲ್ಲ. ಅವುಗಳು ಮಾಮೂಲು ಅನ್ನುವಂತೆ ಭಟ್ಟರ ಗದ್ದೆಯನ್ನು ಅರ್ಧಕರ್ಧ ಖಾಲಿ ಮಾಡಿದ್ದವು. ಭಟ್ಟರೂ ಜಗಳಕ್ಕೆ ನಿಲ್ಲಲಿಲ್ಲ. ಅದಲ್ಲದೆ ಹೆಂಡತಿಗೂ ಅವುಗಳ ತಂಟೆಗೆ ಹೋಗದಂತೆ ತಾಕೀತುಮಾಡಿದ್ದರು.
ಎರಡು ದಿನವಲ್ಲ ಎರಡು ವಾರಗಳಾದರೂ ಕೋಳಿಗಳನ್ನು ಸಾಟೆ ಮಾಡಿದವನು ತೆಗೆದುಕೊಂಡು ಹೋಗಲು ಬರಲೇ ಇಲ್ಲ. ಇನ್ನು ಅವುಗಳ ಉಪದ್ರ ತಡೆಯುವುದು ಸಾಧ್ಯವಿಲ್ಲವೆಂದು ತಿಳಿದ ಅನಂತರ ತಮ್ಮ ದೂರದ ಸಂಬಂಧಿ ವಾದಿರಾಜ ಭಟ್ಟರ ಮುಂದೆ ಎಲ್ಲವನ್ನೂ ಹೇಳಿಕೊಂಡರು ಕೇಶವ ಭಟ್ಟರು. ವಾದಿರಾಜಣ್ಣ ಒಂದು ಉಪಾಯ ಸೂಚಿಸಿದರು. ಆದರೆ ಭಟ್ಟರಿಗೆ ಅದರಿಂದ `ಅಪರಾಧಿ ಸ್ಥಾನದಲ್ಲಿ ನಿಂತರೇ? ಅನ್ನುವ ಅನುಮಾನ ಕಾಡಿತು.
ವಾದಿರಾಜಣ್ಣ, ನೀವೇನೋ ಸುಲಭದಲ್ಲಿ ಹೇಳಿದ್ರಿ. ಆದ್ರೆ ಅವುಗಳಿಗೆ ವಿಷ ಇಟ್ಟು ಸಾಯಿಸಿ, ಅದನ್ನು ಅವರ ಮನೆಯವರು ತಿಂದು ನಾನು ಆ ಪಾಪ ಕಟ್ಟಿಕೊಳ್ಳಬೇಕಾ? ಅದು ಸಾಧ್ಯವಿಲ್ಲ... ಬೇರೆ ಏನಾದರೂ ಪರಿಹಾರವಿದ್ದರೆ ತಿಳಿಸಿ ಎಂದ ಕೇಶವ ಭಟ್ಟರ ಮಾತನ್ನು ಕೇಳಿ ವಾದಿರಾಜರು ನಕ್ಕರು.
ನೀನು ಅವರಿವರ ಬಗ್ಗೆ ಅಷ್ಟು ಆಲೋಚಿಸುವುದು ಯಾಕೆ? ಈಗ ನಿನ್ನ ಹೆಂಡ್ತಿ ಅಷ್ಟು ಚೆಂದದಲ್ಲಿ ಅವರಿಗೆ ಹೇಳಿದ್ದಲ್ವಾ? ಅವರು ಏನಾದರೂ ಅದಕ್ಕೆ ಮರ್ಯಾದೆ ಕೊಟ್ರಾ? ಮತ್ತೆ ನೀನ್ಯಾಕೆ ಯೋಚಿಸ್ತೀಯಾ? ಎಂದು ಅವರಿಗೆ ಕೇಳಿದರು. ಆದರೂ ಕೇಶವ ಭಟ್ಟರಿಗೆ ಅದೆಲ್ಲ ಸರಿಯಲ್ಲವೆನಿಸಿತು. ವಾದಿರಾಜಣ್ಣ ಕೂಡ ಆಲೋಚನೆಗೆ ಬಿದ್ದರು.


ನೋಡು, ನಮ್ಮ ಟೈಗರನ್ನೇ ತೆಗೆದುಕೊಂಡು ಹೋಗು ಎಂದ ಅವರ ಮಾತು ಕೇಳಿ ಭಟ್ಟರಿಗೆ ಅದೇ ಸರಿಯಾದ ಪರಿಹಾರವೆಂದು ತಿಳಿಯಿತು. ವಾದಿರಾಜಣ್ಣನ ಮನೆಯ ನಾಯಿಯೆಂದರೆ ಎಲ್ಲರಿಗೂ ಹೆದರಿಕೆಯೆ. ಯಾರಾದರೂ ಅಪರಿಚಿರು ಬಂದರೆ ಎದೆಯ ಮೇಲೆ ಎರಡು ಕಾಲುಗಳನ್ನು ಇಟ್ಟು ನಿಲ್ಲುತ್ತಿದ್ದ ಅದರ ಗಂಭೀರ ಮುಖ, ಎಂತಹ ಎದೆಗಾರಿಕೆಯವರನ್ನೂ ಕ್ಷಣ ಹೊತ್ತು ಅಲ್ಲೋಲ್ಲ ಕಲ್ಲೋಲ ಮಾಡುತ್ತಿತ್ತು.
ಸರಿಯಾಗಿ ಹೇಳಿದೆ ನೋಡು. ಆದರೆ ಅದನ್ನು ತೆಗೆದುಕೊಂಡು ಹೋಗುವುದು ದೊಡ್ಡ ಸಮಸ್ಯೆಯೆ

ನೀನು ಅದಕ್ಕೆ ಯೋಚಿಸುವುದು ಬೇಡ. ನನ್ನ ಸ್ಕೂಟರಿನಲ್ಲಿಯೇ ಅದನ್ನು ನಿನ್ನ ಮನೆಗೆ ತಲುಪಿಸುತ್ತೇನೆ ಅಂದವರೇ ಎರಡೇ ದಿನದಲ್ಲಿ ಅಷ್ಟು ದೊಡ್ಡ ನಾಯಿಯನ್ನು ತಾವೇ ಕೇಶವ ಭಟ್ಟರ ಮನೆಗೆ ತಂದು ಕಟ್ಟಿದರು. ಮೀನಾಕ್ಷಿಯವರಿಗೆ ಅದರ ಹತ್ತಿರ ಹೋಗುವುದಕ್ಕೂ ಹೆದರಿಕೆಯಾಗುತ್ತಿತ್ತು. ಆದರೆ ಕೇಶವ ಭಟ್ಟರನ್ನು ನೋಡಿದ ಕೂಡಲೇ ಬಾಲ ಆಲ್ಲಾಡಿಸುತ್ತಾ ಇತ್ತು. ಅವರೂ ಅರೆ ಬರೆ ಧೈರ್ಯದಿಂದ `ಟೈಗರ್ ಅನ್ನುತ್ತಾ ಅದನ್ನು ಸಮಾಧಾನಿಸಿ ಅದರ ವಿಶ್ವಾಸವನ್ನು ಗೆದ್ದರು. ತದ ನಂತರ ರಾತ್ರಿಯ ಹೊತ್ತು ಅದನ್ನು ತಿರುಗಾಡಾಲು ಬಿಡುತ್ತಿದ್ದರು. ಬೆಳಗಾಗುತ್ತಲೇ ಅದನ್ನು ಕಟ್ಟುತ್ತಿದ್ದರು. ಈ ರೀತಿಯ ಒಪ್ಪಂದಕ್ಕೆ ಅದು ಒಗ್ಗಿಕೊಂಡಿತು.
`ಟೈಗರ್ ಅಂದರೆ ಸಾಕು ತಲೆಯೆತ್ತಿ ಗುರಾಯಿಸಿ ನೋಡುತ್ತಿದ್ದ ನಾಯಿಯನ್ನು ಕಂಡರೆ ಯಾರಾದರೂ ಒಮ್ಮೆ ಹೆದರಲೇ ಬೇಕು. ಅದು ಬೊಗಳಿತೆಂದರೆ ಊರಿನ ನಾಲ್ಕು ಮನೆಗಳಿಗೂ ಕೇಳುವ ಹಾಗೆ ಇತ್ತು. ಭಟ್ಟರು ಬೆಳಿಗ್ಗೆ ಎದ್ದ ಕೂಡಲೇ ಅದನ್ನು ಕರೆದು ಕಟ್ಟುತ್ತಿದ್ದರು. ಆ ದಿನ ಅವರು ಕರೆಯುವಾಗಲೂ ಅದು ಬರಲಿಲ್ಲ. `ಎಲ್ಲಿ ಹೋದ ಇವ? ಅಂದುಕೊಂಡು ತೋಟದ ಕಡೆಗೆ ಬರುವಾಗ ತಾಳೆಯ ಮರದ ಕೆಳಗೆ ಸುಮ್ಮನೆ ಕುಳಿತಿತ್ತು. `ಎಂತಾಯ್ತು ಇವನಿಗೆ? ಯಾರಾದರೂ ವಿಷವೇನಾದರೂ ಹಾಕಿದರಾ ಹೇಗೆ? ಸುಮ್ಮನೆ ಮಲಗಿದ್ದಾನಲ್ಲ? ಅನ್ನುತ್ತಾ ಅದರ ಹತ್ತಿರ ಬಂದು `ಟೈಗರ್ ಅಂದರು. ಅವರ ಕರೆಗೆ ವಿಧೇಯತೆಯಿಂದ `ಕುಯ್ಯುಂ ಕುಯ್ಯುಂ ರಾಗ ಹೊರಡಿಸಿ ತಲೆಯನ್ನು ಮುಂದಕ್ಕೆ ಚಾಚಿ ಮಲಗಿತು. ಭಟ್ಟರಿಗೆ ಇನ್ನಷ್ಟು ಆತಂಕವಾಯಿತು. `ಎಂತದು ಇದು, ಇವನ ವರ್ತನೆ? ಅಂದುಕೊಂಡು ಹತ್ತಿರ ಹೋಗಿ `ಬಾರೋ ಮನೆಗೆ ಅಂದು ಮೆಲ್ಲನೆ ಕೋಲಿನಿಂದ ಬೆನ್ನಿನ ಮೇಲೆ ಮೆಲ್ಲನೆ ಬಾರಿಸಿದರು. ಅವರ ಪೆಟ್ಟಿಗೆ ಹೆದರಿದ ಅದು ಚಂಗನೆ ಎದ್ದು ಹತ್ತಿರದಲ್ಲಿದ್ದ ತನ್ನ ಬೇಟೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡು ಮನೆಯತ್ತ ಓಡಿತು.
`ಎಲಾ! ಇವನಾ? ಇದೆಂತ ಗ್ರಾಚಾರ? ಅವನು ಬಾಯಿಯಲ್ಲಿ ಎಂತ ಹಿಡಿದುಕೊಂಡು ಹೋದದ್ದು? ಅನ್ನುತ್ತಾ ಅದರ ಹೆಸರನ್ನು ಕೂಗುತ್ತಾ ಅದರ ಹಿಂದೆ ಓಡಿದರು. ಅವರು ಕರೆಯುವಾಗ ಅದು ಅಷ್ಟೇ ವೇಗದಿಂದ ಹಿಂದಕ್ಕೆ ಬಂದು ಬಾಯಿಯಲ್ಲಿದ್ದದ್ದನ್ನು ಅವರಿಗೆ ತೋರಿಸುವಂತೆ ನಿಂತಿತು. ಭಟ್ಟರಿಗೆ ತಲೆ ಸುತ್ತು ಬಂದು ಬೀಳುವುದೊಂದೇ ಬಾಕಿ. `ಇವ ಎಂತ ಕೆಲಸ ಮಾಡಿದ ಅಂದುಕೊಂಡು ಕೋಲಿನಿಂದ ರಪ್ಪನೆ ಬಾರಿಸಿ ಅವನನ್ನು ಸರಪಣಿಯತ್ತ ಓಡಿಸಿದರು. ಬಿದ್ದ ಪೆಟ್ಟಿನ ನೋವಿಗೆ ಬಾಯಿಯಲ್ಲಿದ ಕೋಳಿಯನ್ನು ಬಿಟ್ಟು ತನ್ನ ಸ್ಥಾನದಲ್ಲಿ ಹೋಗಿ ನಿಂತಿತು. ದಡದಡನೆ ಬಂದವರು ಅದನ್ನು ಕಟ್ಟಿ ಹಾಕಿ, ಮತ್ತೆರಡು ಪೆಟ್ಟು ಬಿಗಿದರು. `ಕುಯ್ಯೋಂ ಕುಯ್ಯೋಂ ಅನ್ನುತ್ತಾ ಮುದುರಿ ಕುಳಿತಿತು.

`ಛೆ! ಎಂತ ಕೆಲಸ ಆಗೋಯ್ತು? ಅಂದುಕೊಂಡು ಮೀನಾಕ್ಷಿಯನ್ನು ಕರೆದರು. ಅವರು ಗಂಡನ ಕೂಗಿಗೆ ದಿಗಿಲುಗೊಂಡು ಹೊರಗೆ ಬರುವಾಗ ಅಂಗಳದಲ್ಲಿದ್ದ ಸತ್ತ ಕೋಳಿಯನ್ನು ಕಂಡು ಬೆದರಿದರು. ಇದೆಂತ ಕಥೆ? ಅವನನ್ನು ಬಿಟ್ಟದ್ದು ತಪ್ಪಾಯ್ತು ನಾಯಿಯ ಕೆಲಸವನ್ನು ಕಂಡು ಹಾಗೇ ಹೇಳಿದಾಗ ಭಟ್ಟರಿಗೂ ಹಾಗೇ ಅನಿಸಿತು. ಆದರೆ ಯಾವತ್ತೂ ಇಲ್ಲದ್ದು ಇವತ್ತೇ ಹೀಗಾಗಾಬೇಕೆ? ಇರಲಿ ಅಂದುಕೊಂಡು ಮಡದಿಯ ಮುಖ ನೋಡಿದರು.
ಯಾರಿಗೂ ಹೇಳೋದು ಬೇಡ. ಅದನ್ನು ಕಾಡಿನ ಹತ್ತಿರ ಹೂತು ಹಾಕಿ ಬಿಡಿ ಎಂದು ಗಂಡನಿಗೆ ಬಿಟ್ಟಿ ಸಲಹೆ ಮಾಡಿದರು. ಇನ್ನು ಇದನ್ನು ನೋಡಿ ಸೇಸಕ್ಕ ದೊಡ್ಡ ರಾದ್ಧಾಂತ ಮಾಡುವುದು ಬೇಡವೆಂದು ಮಗನನ್ನು ಕರೆದು ಹಾರೆಯಿಂದ ಅದನ್ನು ಬುಟ್ಟಿಯಲ್ಲಿ ಹಾಕಿ, ಕಾಡಿನತ್ತ ನಡೆದರು. ಅಲ್ಲಿ ಸ್ವಲ್ಪ ಮಣ್ಣು ತೆಗೆದು ಅದನ್ನು ಮುಚ್ಚಿ ಹಾಕಿದರು. ಆದರೆ ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರುವುದೆಂದು ಅವರಿಗೆ ತಿಳಿದಿತ್ತು. ಅದಕ್ಕೆ ತಕ್ಕಂತೆ ನರಿಯೋ ನಾಯಿಯೋ ಹೂತು ಹಾಕಿದ್ದ ಕೋಳಿಯನ್ನು ಮೇಲಕ್ಕೆ ಹಾಕಿದ್ದವು. ಬಿಜಕ್ರೆ ತರಲೆಂದು ಕಾಡಿಗೆ ಹೋಗಿದ್ದ ಸೇಸಕ್ಕನ ಕಣ್ಣಿಗೆ ಅದು ಬೀಳಬೇಕೆ? ಮೂರು ದಿನದಿಂದ ಕಾಣೆಯಾಗಿದ್ದ ತನ್ನ ಮೊಟ್ಟೆ ಇಟ್ಟ ಹೆಂಟೆ ಕಾಣೆಯಾಗಿದ್ದಕ್ಕೆ ನರಿಗೆ ಶಾಪ ಹಾಕಿದ್ದರು. ಮೊಟ್ಟೆಗಳೂ ಕಲ್ಲಾಗಿ ಹೋಗಿದ್ದವು. ಆದರೆ ಆ ಕೋಳಿ ಮಣ್ಣಿನಿಂದ ಮೇಲೆ ಬಂದಿರುವಾಗ ಅವರಿಗೆ ಅನುಮಾನವಾಯಿತು.

ಬಿಜಕ್ರೆಯ ತೊಟ್ಟೆಯನ್ನು ಹಾಗೆ ಅಲ್ಲೇ ಬಿಸಾಡಿ ಬಂದವರು. ಮೀನಾಕ್ಷಮ್ಮನಿಗೆ ಶಾಪ ಹಾಕುತ್ತಲೇ ಬಂದರು. ಆ ಸತ್ಯವನ್ನು ಮುಚ್ಚಿ ಹಾಕಲು ಗೊತ್ತಿಲ್ಲದ ಮೀನಾಕ್ಷಮ್ಮ ನಡೆದುದ್ದನ್ನು ಹೇಳಿಯೇ ಬಿಟ್ಟರು. ನಾಯಿಯಿಂದ ಅದನ್ನು ಹಿಡಿಸಿದ್ದು ನೀವೇ ಅನ್ನುವ ಆರೋಪದ ಜೊತೆಗೆ ಕೆಟ್ಟ ಬೈಗುಳನ್ನೂ ಕೇಳಬೇಕಾಗಿದ್ದು ಅವರ ಹಣೆಬರಹವಾಯಿತು. ಆವತ್ತು ಸಂಜೆ ಕೋಳಿ ಸಾಟೆಯ ಪುಟ್ಟನಿಗೆ ಎಂಟು ಕೋಳಿಗಳನ್ನು ಮಾರಿದಲ್ಲದೆ ಉಳಿದ ಮೂರು ಕೋಳಿಗಳನ್ನು ಭೂತಕ್ಕೆ ಬಿಟ್ಟರು. ಆ ವಿಷಯ ಗೊತ್ತಾಗಿದ್ದು ಅವರ ಮಗನಿಂದಲೇ. ಅವನು ಭಟ್ಟರ ಮಗ ಪಟ್ಟಾಬಿಯ ಜೊತೆಗೆ ಶಾಲೆಗೆ ಹೋಗುವಾಗ ಹೇಳಿದನಂತೆ.
ಇನ್ನು ನೀವು ಕೋಳಿಗಳನ್ನು ಏನೂ ಮಾಡುವ ಹಾಗಿಲ್ಲ. ಅದನ್ನೆಲ್ಲಾ ಅಮ್ಮ ಭೂತಕ್ಕೆ ಬಿಟ್ಟಿದ್ದಾರೆ

ಅದನ್ನು ಕೇಳಿದ ಭಟ್ಟರ ಮಗ ಮನೆಗೆ ಬಂದು ಹೇಳಿದ ಮೇಲೆ ಮೀನಾಕ್ಷಿಗೂ ಹೆದರಿಕೆಯಾಗಿತ್ತು. ಅವರು ಗಂಡನನ್ನು ಕರೆದು, ನೋಡಿ, ಇನ್ನು ಊರಿನ ಕೋಲ ಮುಗಿಯುವ ತನಕ ನಾಯಿಯನ್ನು ಬಿಡುವುದು ಬೇಡ. ಅವರು ಕೋಳಿಗಳನ್ನು ಭೂತಕ್ಕೆ ಬಿಟ್ಟಿದ್ದಾರಂತೆ ಎಂದು ಎಚ್ಚರಿಕೆಯ ಮಾತು ಹೇಳಿದರು. ಕೇಶವ ಭಟ್ಟರಿಗೂ ಆತಂಕವಾಗದಿರಲಿಲ್ಲ. ನಾಯಿಯನ್ನು ಕಟ್ಟಿಯೇ ಹಾಕಿದರು. ಅದು ಮಲಗಿದಲ್ಲಿಯೇ ಒಂದು... ಎರಡು... ಮಾಡುವುದನ್ನು ರೂಢಿ ಮಾಡಿಕೊಂಡಿತು. ಇದರಿಂದಾಗಿ ಅದರ ಚಾಕರಿಯೇ ಒಂದು ದೊಡ್ಡ ಹೊರೆಯಾದಾಗ ಅದನ್ನು ವಾಪಾಸು ವಾದಿರಾಜಣ್ಣನಿಗೆ ಕೊಟ್ಟು ಬರುವುದೆಂದು ನಿರ್ಧರಿಸಿದರು. ವಾದಿರಾಜಣ್ಣನ ಒಪ್ಪಿಗೆ ದೊರೆತ ನಂತರ ಒಂದು ದಿನ ರಿಕ್ಷಾದಲ್ಲಿ ಹಾಕಿಕೊಂಡು ಆದನ್ನು ಬಿಟ್ಟು ಬಂದರು.

ಕೋಳಿಗಳನ್ನು ಭೂತಕ್ಕೆ ಬಿಟ್ಟರೂ ಅವುಗಳ ಉಪದ್ರ ನಿಲ್ಲಲಿಲ್ಲ. ಗದ್ದೆಗೆ ಬರುವುದು, ತೋಟದಲ್ಲೆಲ್ಲಾ ಜಾಲಾಡಿಸುವುದು, ಮಣ್ಣನ್ನು ಕಾಲಿನಿಂದ ಎಳೆದು ಹಾಕುವುದು, ಅಂಗಳದಲ್ಲೆಲ್ಲಾ ಹಿಕ್ಕೆ ಹಾಕುವುದು, ಬೈ ಹುಲ್ಲಿನ ಮೇಲೆ ಹಾರಿ ಕುಳಿತುಕೊಳ್ಳುವುದು. ಹೀಗೆ ಉದ್ದಕ್ಕೆ ಅವುಗಳ ಉಪದ್ರ ನಡೆಯುತ್ತಲೇ ಇತ್ತು. ಸೇಸಕ್ಕನ ಮನೆಯವರಿಗಿಂತಲೂ ಅವುಗಳ ಮೇಲೆ ಭಟ್ಟರ ಮನೆಯವರಿಗೆ `ಭೂತಕ್ಕೆ ಬಿಟ್ಟ ಕೋಳಿ ಅನ್ನುವ ಗೌರವವಿತ್ತು. ಅವುಗಳ ಉಪಟಳವನ್ನು ತಡೆದುಕೊಂಡು ಸುಮ್ಮನಾದರು. ಸೇಸಕ್ಕನಿಗೂ ಆತಂಕ ತಪ್ಪಿತು. ಅವರು ಪದೇ ಪದೇ ಭಟ್ಟರ ಮಕ್ಕಳು ಸಿಕ್ಕಿದಾಗಲೆಲ್ಲಾ `ಕೋಳಿಗಳಿಗೆ ಕಲ್ಲು ಬಿಸಾಡ ಬೇಡಿ. ಭೂತಕ್ಕೆ ಬಿಟ್ಟಿದೆ ಅನ್ನೋರು.

ಹೀಗೆ ಭೂತಕ್ಕೆ ಬಿಟ್ಟ ಕೋಳಿಗಳು ಭಟ್ಟರ ಮನೆಯಲ್ಲೆಲ್ಲಾ ಓಡಾಡಿಕೊಂಡು ಸೊಕ್ಕಿ ಹೋದವು. ಭಟ್ಟರಿಗೆ ಧರ್ಮ ಸಂಕಟ. ಒಮ್ಮೆ ಅವರ ಮನೆಗೆ ಸಂಬಂಧಿಕರು ಯಾರೋ ಬಂದವರು, ಏನು, ನೀವೂ ಕೋಳಿಗಳನ್ನು ಸಾಕಿದ್ದೀರಾ? ಅಂದಾಗ ಭಟ್ಟರಿಗೆ ನಾಚಿಕೆಯಾಯಿತು. ಅವರು ಪರಿಸ್ಥಿತಿಯನ್ನು ವಿವರಿಸಿ ಹೇಳಿದ ನಂತರ ಅವರೆಲ್ಲಾ ನಕ್ಕರು. ಭಟ್ಟರು ಈ ಅವಮಾನವನ್ನು ನುಂಗಿಕೊಂಡಿದ್ದರು. ಇದ್ದಕ್ಕಿದ್ದಂತೆ ಕೋಳಿಗಳು ಬರುವುದು ನಿಂತಿತು. ಭಟ್ಟರಿಗೂ ಅವರ ಮನೆಯವರಿಗೂ ಆಶ್ಚರ್ಯ! ಊರಿನ ಕೋಲಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಭೂತಕ್ಕೆ ಬಿಟ್ಟ ಕೋಳಿಗಳೆಲ್ಲಾ ಎಲ್ಲಿ ಹೋದವು? ಸೇಸಕ್ಕನಿಗೆ ಬುದ್ಧಿ ಬಂದಿರಬೇಕು. ಅವುಗಳನ್ನು ಗೂಡಿನಲ್ಲಿ ಹಾಕಿ ಸಾಕುತ್ತಿದ್ದಾರೇನೋ? ಅಂದುಕೊಂಡು ನೆಮ್ಮದಿಯ ನಿಡುಸುಯ್ದರು.

ಆದರೆ ಹಾಗಾಗಲಿಲ್ಲ. ಎರಡು ದಿವಸ ಕಾಣಿಸದ ಕೋಳಿಗಳು ಗದ್ದೆಯ ನಡುವೆ ಓಡಾಡುತ್ತಿದ್ದದ್ದು ಕಾಣಿಸಿತು ಭಟ್ಟರಿಗೆ. `ಎಲಾ ಶಿವನೇ! ಈ ಕೋಳಿಗಳಿಗೂ ಕಳ್ಳ ಬುದ್ಧಿ ಗೊತ್ತುಂಟಾ? ಹೀಗೆ ಯಾರಿಗೂ ಗೊತ್ತಾಗದ ಹಾಗೆ ಗದ್ದೆಯ ನಡುವೆ ಬಂದು ತೆನೆಯನ್ನು ಹಾಳು ಮಾಡುವುದಾ? ಅಂದುಕೊಂಡವರೇ ಒಂದು ಕಲ್ಲನ್ನು ತೆಗೆದು ಬಿಸಾಡಿದರು. ಕಲ್ಲು ಕೋಳಿಯ ಕಾಲಿಗೆ ನಾಟಿರಬೇಕು. ಕೂಗುತ್ತಾ ಎತ್ತರಕ್ಕೆ ಹಾರಿದ ಕೋಳಿ ಗದ್ದೆಯ ಬದಿಗೆ ಬಂದು ಬಿದ್ದು ಒದ್ದಾಡಿತು. ಭಟ್ಟರ ಎದೆ ಝಲ್ಲೆಂದಿತು. `ಇನ್ನೆಂತ ಮಾಡುವುದು? ಎಂದು ತಲೆಗೆ ಕೈ ಹಚ್ಚಿದರು. ಹೊರಗೆ ಬಂದ ಮಡದಿಗೆ ನೀರು ತರುವಂತೆ ಹೇಳಿದರು. ಮೀನಾಕ್ಷಮ್ಮ ನೀರು ತಂದು ಅವರ ಕೈಯಲ್ಲಿ ಕೊಟ್ಟರು. ಕೈಗೆ ನೀರು ಆಪೋಷನ ಮಾಡಿಕೊಂಡು ಕೋಳಿಯ ಮೇಲೆ ಹಾಕಿದರು. ಕೋಳಿ ಸತ್ತೆನೋ, ಬದುಕಿದೆನೋ ಎಂದು ಓಡಿತು. ಅವರು ನಿರುಮ್ಮಳರಾದರು.

ಎಂತದು ನೀವು, ಅದು ಭೂತದ ಕೋಳಿಯಲ್ವಾ? ಅದಕ್ಕೆ ನೀವು ಕಲ್ಲು ಬಿಸಾಡಿದ್ದಾ? ಅದು ಸತ್ತಿದ್ರೆ ನಾವು ಎಂತದು ಮಾಡ್ಬೇಕಿತ್ತು? ಅನ್ನುತ್ತಾ ಭಟ್ಟರ ತಲೆ ಕೊರೆದರು. ಭಟ್ಟರು ಮಾತಾಡದೆ ನೀರಿನ ಪಾತ್ರೆಯನ್ನು ತೆಗೆದುಕೊಂಡು ಮನೆಯತ್ತ ನಡೆದರು.
ಅವರು ಮನೆಯ ಒಳಗೆ ಕಾಲಿಟ್ಟಿದ್ದರಷ್ಟೇ ಸೇಸಕ್ಕನ ಗಂಟಲು `ಟೈಂ ಟೈಂ ಅನ್ನುವುದು ಕೇಳಿಸಿತು. ಭೂತಕ್ಕೆ ಬಿಟ್ಟ ಕೋಳಿಯ ಕಾಲು ಮುರಿದದ್ದೆ ಅದಕ್ಕೆ ಕಾರಣವೆನ್ನುವುದು ತಿಳಿಯಿತು. ಮಾತಿಗೆ ಮಾತು ಬೆಳೆದರೆ ದೊಡ್ಡ ಜಗಳವೇ ಆಗುತ್ತದೆಯೆಂದು ಅವರಿಗೆ ಗೊತ್ತು.
ಕಾಲ ಹಾಗೇ ನಿಲ್ಲುತ್ತದಾ? ಭಟ್ಟರು ರಾತ್ರಿ ಅಂಗಡಿ ಮುಚ್ಚಿ ಮನೆಗೆ ಬಂದಾಗ ಸುಮಾರು ಎಂಟು ಗಂಟೆಯ ಸಮಯ. ಮನೆಯ ಒಳಗೆ ಕಾಲಿಟ್ಟಿದ್ದರಷ್ಟೆ ಕೋಳಿಗಳು ಒಂದೇ ಸಮನೆ `ಕೊಕ್ಕೊಕ್ಕೋ ಎಂದು ಕೂಗುವುದು ಕೇಳಿಸಿತು. ಇಷ್ಟು ಹೊತ್ತಿಗೆ ಕಾಡು ಬೆಕ್ಕೋ, ನರಿಯೋ, ಇಲ್ಲ ಕತ್ತೆಕಿರುಬನೋ ಬಂದಿರಬೇಕೆಂದುಕೊಂಡರು. ಭೂತದ ಕೋಳಿಗಳನ್ನು ಅವು ಏನು ಮಾಡಲಾರವು ಅನ್ನುವ ಮುಗ್ಧತೆ ಭಟ್ಟರ ಮನೆಯವರಿಗೆ.
ಬೆಳಿಗ್ಗೆ ಸೇಸಕ್ಕನ ಮಗ ಸ್ಟೀಲ್ನ ಚೆಂಬು ಹಿಡಿದುಕೊಂಡು ಭಟ್ಟರ ಮನೆಗೆ ಬಂದ. ದೇವರಿಗೆ ಹೂವು ಕೊಯ್ಯುತ್ತಿದ್ದ ಭಟ್ಟರು `ಏನು? ಅಂದರು.
ಹಾಲು ಕೊಡ್ಬೇಕಂತೆ, ಬೊಂಬಾಯಿಯಿಂದ ಅಕ್ಕ, ಭಾವ ಬಂದಿದ್ದಾರೆ ಅಂದ.
ಭಟ್ಟರು ಮಡದಿಯನ್ನು ಕರೆದು ಹಾಲು ಕೊಡುವಂತೆ ಹೇಳಿದವರೆ ಹುಡುಗನ ಬಳಿ, ಅಲ್ಲನಾ, ನಿನ್ನೆ ರಾತ್ರಿ ನಿಮ್ಮ ಕೋಳಿಗಳು ಯಾಕೆ ಹಾಗೆ ಕೂಗಿಕೊಂಡದ್ದಾ? ಅಂದರು.
ಹುಡುಗ ನಗುತ್ತಾ ನಿಂತಿದ್ದ. ಅವನ ವರ್ತನೆ ವಿಚಿತ್ರವಾಗಿತ್ತು.
ನಿಮ್ಮ ಕೋಳಿಯಲ್ವಾ? ಭಟ್ಟರು ಅನುಮಾನದಿಂದ ಮತ್ತೊಮ್ಮೆ ಪ್ರಶ್ನಿಸುವಾಗ ಅವನು ನಗುತ್ತಲೇ, ಅದು ನಿನ್ನೆ ಅಕ್ಕನವರು ಬಂದಿದ್ರಲ್ಲಾ ಅದಕ್ಕೆ... ಅಂದ.
ಅಲ್ಲನಾ, ಅದು ಭೂತಕ್ಕೆ ಬಿಟ್ಟ ಕೋಳಿಯಲ್ವಾ? ಹಾಗೂ ಮಾಡ್ತಾರಾ? ಆಶ್ಚರ್ಯದಿಂದ ಭಟ್ಟರು ಕೇಳುವಾಗ ಅವನು, ಭೂತಕ್ಕೆ ನಾಳೆ ಫಾರಂನಿಂದ ಕೋಳಿಗಳನ್ನು ತರ್ತಾರೆ ಅಂದು ಮೀನಾಕ್ಷಮ್ಮ ಹಾಕಿದ ಹಾಲನ್ನು ತೆಗೆದುಕೊಂಡು ಹೊರಟ. ಮೀನಾಕ್ಷಮ್ಮನಿಗೂ ಆಶ್ಚರ್ಯ.
ಹಾಗೆ ಭೂತಕ್ಕೆ ಬಿಟ್ಟ ಕೋಳಿಯನ್ನು ತಿಂದವರನ್ನು ಸುಮ್ಮನೆ ಬಿಡ್ತದಾ ಅದು? ಮುಗ್ಧತೆಯಿಂದ ಪ್ರಶ್ನಿಸಿದವರನ್ನು ನೋಡಿ ಭಟ್ಟರು ಕೂಡ ಅಷ್ಟೆ ಮುಗ್ಧತೆಯಿಂದ `ಏನೋ, ಗೊತ್ತಿಲ್ಲ ಅನ್ನುವಂತೆ ಕೈ ತಿರುಚಿದರು.

No comments: