Tuesday, November 24, 2009

ಮರದ ಪೆಟ್ಟಿಗೆ


(ಕರ್ಮವೀರದಲ್ಲಿ ಪ್ರಕಟವಾದ ಪತ್ತೇದಾರಿ ಕಥೆ)

ಮರಳ ದಿಣ್ಣೆ ಏರಿ ಮೊಣಕಾಲ ಮೇಲೆ ಗಲ್ಲವಿಟ್ಟು ಸೂರ್ಯ ಮುಳುಗುವವರೆಗು ಕುಳಿತು ಸಮುದ್ರದ ಅಲೆಗಳನ್ನು ನೋಡುತ್ತಿದ್ದಳು ಗಾಜು ಕಣ್ಣಿನ ಚೆಲುವೆ ನಿನಾದ. ಸೂರ್ಯ ಕೆಂಪು ತಟ್ಟೆಯಾಗಿ ಮುಳುಗಿದಾಗ ಸುತ್ತಲೂ ಕತ್ತಲಾವರಿಸಿತು. ಸಮುದ್ರದ ಬೋರ್ಗರೆತದ ಸದ್ದು ಜೋರಾಗುತ್ತಿದ್ದಂತೆ ಅವಳ ಆಲೋಚನೆಗಳೆಲ್ಲಾ ಕಡಿಮೆಯಾದಂತಾಯಿತು. ಅಲೆಗಳನ್ನೇ ನೋಡುತ್ತಾ ಕುಳಿತಿದ್ದವಳನ್ನು ಎಚ್ಚರಿಸಿದ್ದು ಯಾವುದೋ ಅಪರಿಚಿತ ದನಿ!
"ಎಕ್ಸ್ ಕ್ಯೂಸ್ ಮಿ" ವ್ಯಕ್ತಿ ಧ್ವನಿಯಲ್ಲಿ ಮೃದುತ್ವ ಬೆರೆಸಿ ಕೇಳಿದ. ಅಪರಿಚಿತ ದನಿ ಕೇಳಿ ಬೆಚ್ಚಿ ತಲೆ ಎತ್ತಿದಳು ನಿನಾದ. ಅವಳನ್ನು ನೋಡಿ ಮುಗುಳ್ನಕ್ಕ. ಎದ್ದು ನಿಂತು ಸೀರೆಗೆ ಅಂಟಿಕೊಂಡಿದ್ದ ಮರಳನ್ನು ಕೊಡವಿಕೊಂಡಳು.
"ನೀವು ನನಗೆ ಸಹಾಯ ಮಾಡ ಬಲ್ಲಿರಿ?" ಬೇಡಿಕೆಯ ಸ್ವರದಲ್ಲಿ ಕೇಳಿದ ಅಪರಿಚಿತ ಯುವಕ! ಮುಖ ಅಸ್ಪಷ್ಟವಾಗಿ ಕಂಡಿತು. ಯುವಕ ಸಹಾಯ ಹಸ್ತ ಕೇಳುತ್ತಿದ್ದಾನೆ. ಅಪರಿಚಿತನನ್ನು ಅಳೆಯುವಂತೆ ನೋಡಿದಳು."
"ಇಲ್ಲೆ ಅರ್ಧ ಫರ್ಲಾಂಗ್ ದೂರದಲ್ಲಿ ನನ್ನ ಯಾಂತ್ರಿಕ ದೋಣಿ ಲಂಗರು ಹಾಕಿದೆ. ಅದರಿಂದ ವಸ್ತುವನ್ನು ಇಳಿಸಬೇಕಿದೆ. ಇಲ್ಲಿ ಸಹಾಯಕ್ಕೆ ಬೇರೆ ಯಾರು ಕಾಣಿಸ್ತಿಲ್ಲ. ನೀವು ಸಹಾಯ ಮಾಡಬಲ್ಲಿರೀಂತ ಭಾವಿಸ್ತೀನಿ" ಅವಳ ಮೌನವನ್ನು ಅರ್ಥೈಸಿಕೊಂಡಂತೆ ಹೇಳಿದ.
ಅವನು ಹೇಳುವುದು ಸರಿ. ಇಲ್ಲಿ ಬೇರಾವ ವ್ಯಕ್ತಿಯೂ ಕಾಣುತ್ತಿಲ್ಲ. ಸಹಾಯ ಮಾಡುವುದರಲ್ಲಿ ತಪ್ಪೇನಿದೆ. ಯುವಕ ಸಭ್ಯನಂತೆ ಕಾಣುತ್ತಿದ್ದಾನೆ.
"ಸರಿ" ಮರಳ ದಂಡೆಯ ಮೇಲೆ ಹೆಜ್ಜೆ ಮೂಡಿಸುತ್ತಾ ಅವನನ್ನು ಅನುಸರಿಸಿದಳು.
ಲಂಗರು ಹಾಕಿದ ದೋಣಿಯ ಪತಾಕೆ ಗಾಳಿಗೆ ತಟಪಟನೆ ಹಾರಾಡುತ್ತಿತ್ತು. ಅದೊಂದು ಯಾಂತ್ರಿಕ ದೋಣಿ. ಅವಳನ್ನು ಕೆಳಗೆ ನಿಲ್ಲುವಂತೆ ಹೇಳಿ, ಜಿಗಿದು ಯಾಂತ್ರಿಕ ದೋಣಿಯನ್ನೇರಿದ. ಉದ್ದನೆಯ ಎರಡು ಸ್ಲೈಡಿಂಗ್ ಗಳನ್ನು ಒಂದರ ಪಕ್ಕದಲ್ಲೊಂದು ಜೋಡಿಸಿ ದೋಣಿಗೆ ಓರೆಯಾಗಿ ನಿಲ್ಲಿಸಿದ. ಆರಡಿ ಉದ್ದನೆಯ ಮರದ ಪೆಟ್ಟಿಗೆಯನ್ನು ಸ್ಲೈಡಿಂಗ್ ನ ಪಕ್ಕಕ್ಕಿಟ್ಟು ಮೆಲ್ಲನೆ ಜಾರಿಸಿದ.
"ನಿಧಾನವಾಗಿ ಹಿಡಿಯಿರಿ." ಅವಳನ್ನು ಎಚ್ಚರಿಸಿದ. ಮರದ ಪೆಟ್ಟಿಗೆಯ ಇನ್ನೊಂದು ಬದಿಯ ಹಿಡಿಯನ್ನು ಹಿಡಿದು ಮರಳ ದಂಡೆಯ ಮೇಲೆ ಜಾರಿಸಿದಳು. ಆತ ದೋಣಿಯಿಂದ ಇಳಿದು ಪೆಟ್ಟಿಗೆಯನ್ನು ಎಳೆದು, ಸ್ಲೈಡಿಂಗ್ ಗಳನ್ನು ದೋಣಿಯೊಳಗೆ ತೂರಿಸಿದ.
"ಇದು ಪರ್ಸಿಯನ್ ದೋಣಿ ನನ್ನ ಗೆಳೆಯನದ್ದು. ಎರಡು ದಿವಸ ಇಲ್ಲೆ ಲಂಗರು ಹಾಕಿರುತ್ತೆ" ಅನಗತ್ಯ ವಿಚಾರವನ್ನು ಹೇಳುತ್ತಿದ್ದಾನೆ ಯುವಕ.
"ದಯವಿಟ್ಟು ನಿಲ್ಲಿ. ಇಲ್ಲೆ ದಂಡೆಯ ಅಂಚಿಗೆ ನನ್ನ ಕಾರು ನಿಂತಿದೆ. ನೀವು ಏನು ತಿಳ್ಕೊಳಾಂದ್ರೆ ಇದನ್ನು ಅಲ್ಲಿಯವರೆಗೆ ತಲುಪಿಸಲು....." ಹೆಜ್ಜೆ ಮುಂದಿಟ್ಟವಳನ್ನು ಕೇಳಿಕೊಂಡ.
"ಸರಿ"
ಉದ್ದನೆಯ ಪೆಟ್ಟಿಗೆಯ ಹಿಡಿಯನ್ನು ಹಿಡಿದಳು. ಇನ್ನೊಂದು ತುದಿಯಿಂದ ಆತ ಹಿಡಿದ. ಹೆಣ ಭಾರದ ಮರದ ಪೆಟ್ಟಿಗೆ! ಕೈಯ ಬೆರಳುಗಳು ಕಿತ್ತು ಬರುವಂತೆ ನೋಯುತ್ತಿದ್ದವು. ಕಾರಿನ ಬಳಿ ಬರುವಾಗ ಸುಸ್ತಾದಳು ಗಾಜು ಕಣ್ಣಿನ ಚೆಲುವೆ.
ಹಳೇ ಕಾಲದ ಕಾರಿನ ಡಿಕ್ಕಿಯನ್ನು ತೆರೆದು ಪೆಟ್ಟಿಗೆಯನ್ನು ಅದರಲ್ಲಿಟ್ಟ ಯುವಕ. ಕಾರಿನ ಒಳ ತೂರಿ, ದೀಪ ಬೆಳಗಿಸಿದ. ನೋಯುತ್ತಿದ್ದ ಕೈ ಬೆರಳುಗಳನ್ನು ಒರೆಸಿಕೊಂಡಳು ನಿನಾದ.
"ತುಂಬಾ ಉಪಕಾರವಾಯ್ತು. ನನ್ನಿಂದ ಸಹಾಯ ಬೇಕಿದ್ದಲ್ಲಿ ತಿಳಿಸಿ" ಕಡು ನೀಲಿ ಬಣ್ಣದ ಜೀನ್ಸು, ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ ಮುಗುಳ್ನಗುತ್ತಾ ಹೇಳಿದ. ಪರ್ಸಿನಿಂದ ವಿಸಿಟಿಂಗ್ ಕಾರ್ಡ ನೀಡಿದ. ಕೈ ಮುಗಿಯುವ ಸೌಜನ್ಯ ತೋರಿಸಿದಳು ನಿನಾದ. ಆತ ಯಂತ್ರಕ್ಕೆ ಚಾಲನೆ ನೀಡಿದ. ಕಾರು ಕಪ್ಪು ಹೊಗೆಯುಗುಳುತ್ತಾ ಮುಂದಕ್ಕೋಡಿತು. ನಿಧಾನವಾಗಿ ಹೆಜ್ಜೆಯಿಡುತ್ತಾ ರಸ್ತೆಯಂಚಿನಲ್ಲೆ ಸಾಗಿದಳು.
ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದವಳು ಏಕಾಏಕಿ ವರ್ಗವಾಗಿ ಹಳ್ಳಿಗೆ ಬಂದಿದ್ದಳು. ಅಪರಿಚಿತ ಊರು! ನಿಲ್ಲಲು ಬಾಡಿಗೆ ಮನೆ ಕೂಡ ದೊರೆತಿರಲಿಲ್ಲ. ಊರಿನ ಶ್ರೀಮಂತ ಚಿನ್ನದ ವ್ಯಾಪಾರಿ ಪನ್ನಲಾಲ್ ಮಡದಿ ಚಾಂದಿನಿ ಬಾಯಿಯ ಮಾತಿಗೆ ಒಂದು ಸಣ್ಣಗಿನ ಕೋಣೆಯನ್ನು ನೀಡಿದ್ದ. ಸ್ಟೌವ್, ಪಾತ್ರೆಗಳು, ಪುಸ್ತಕಗಳನ್ನು ಜೋಡಿಸಿದ ನಂತರ ಉಳಿದಿದ್ದು ಚಾಪೆ ಹಾಸುವಷ್ಟು ಜಾಗ ಮಾತ್ರ! ಮನಸ್ಸಿಗೆ ಬೇಸರವಾದಾಗ ಚಾಂದಿನಿ ಬಾಯಿಯ ಜೊತೆ ತಾಸು ಗಟ್ಟಲೆ ಮಾತನಾಡಿ ಸಮಯ ಕಳೆಯುತ್ತಿದ್ದಳು. ಅದರೆ ಪನ್ನಲಾಲ್ ಸಂಸಾರ ಸಮೇತ ಗುಜರಾತಿಗೆ ಹೋಗಿದ್ದ. ಮನಸ್ಸಿನ ಬೇಸರ ಕಳೆಯಲು ಸಮುದ್ರ ದಂಡೆಗೆ ಬಂದಳೆಂದರೆ ಕತ್ತಲಾವರಿಸಿದ ನಂತರವೇ ಹಿಂತಿರುಗುತ್ತಿದ್ದಳು.
ಚಂದಿರನ ಮಂದ ಬೆಳಕು ರಸ್ತೆಯಂಚಿನ ಮರಗಳ ಮರೆಯಿಂದ ತೂರಿ ರಸ್ತೆಯ ಮೇಲೆ ನೆರಳು ಬೆಳಕನ್ನು ಚಿತ್ರಿಸಿತ್ತು. ಕೈಯಲ್ಲಿದ್ದ ಪೇಪರನ್ನು ಸುತ್ತಿ ಹೆಬ್ಬೆರಳಿನಿಂದ ಟಕ್ಕನೆ ಮೇಲೆ ಹಾರಿಸಿದಳು. ಅದು ಹಾರಿ ಎಲ್ಲೋ ಬಿದ್ದಿತು. ತಟ್ಟನೆ ನೆನಪಾಯಿತು. ಅದು ಮರಳ ದಂಡೆಯಲ್ಲಿ ಯುವಕ ನೀಡಿದ್ದ ವಿಸಿಟಿಂಗ್ ಕಾರ್ಡ್. ಹೋಗಲಿ ಅದರಿಂದ ತನಗೇನು ಲಾಭ? ಯಾರೋ ಅಪರಿಚಿತ ಸಹಾಯ ಯಾಚಿಸಿದ. ಸಹಾಯ ಮಾಡಿದ್ದಾಯಿತು. ನಡಿಗೆ ವೇಗ ಹೆಚ್ಚಿಸಿ ಕೋಣೆಗೆ ಬಂದಾಗ ಏಕಾಂತ ಅವಳನ್ನು ಕಾಡಿತು. ರೇಡಿಯೋಗೆ ಚಾಲನೆ ಕೊಟ್ಟು ಕಾರ್ಯಕ್ರಮಗಳನ್ನು ಅಲಿಸುತ್ತಿದ್ದಳು. ಹಳ್ಳಿಗೆ ಕತ್ತಲಾಗುವುದು ಬೇಗ! ರಾತ್ರಿಯ ಊಟ ಮುಗಿಸಿ, ಚಾಪೆ ಹಾಸಿಕೊಂಡಳು. ಕ್ಯಾಂಡಲಿನ ಬೆಳಕಿನಲ್ಲಿ ಯಾವುದೋ ಪುಸ್ತಕವನ್ನು ಬಿಡಿಸಿ ಬೋರಲಾಗಿ ಮಲಗಿ ಓದುತ್ತಿದ್ದಳು. ನಿದ್ದೆ ದೂರವಾಗಿತ್ತು. ಪನ್ನಾಲಾಲ್ ನ ಸಂಸಾರ ಬರಲು ಇನ್ನು ಎರಡು ವಾರವಿದೆ. ಅಲ್ಲಿಯವರೆಗೆ ತಾನು ಒಬ್ಬಂಟಿ! ಮನದಲ್ಲಿ ಯಾವುದೋ ಆತಂಕ ತುಂಬಿತ್ತು.
ಕಣ್ಣು ಸೆಳೆಯುತ್ತಿದೆಯೆಂದಾಗ ಬಾಗಿಲಿನ ಚಿಲಕ ಭದ್ರ ಪಡಿಸಿ ಕ್ಯಾಂಡಲ್ ಆರಿಸಿದಳು. ಸೊಳ್ಳೆಗಳ ಕಾಟ ತಪ್ಪಿದಲ್ಲ. ಹೊರಗೆ ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಚಂದಿರನ ಬೆಳಕನ್ನು ನೋಡಿ ಬೊಗಳುತ್ತಿರಬಹುದು.
ಅಲ್ಲ! ಯಾರನ್ನೋ ಅಟ್ಟಿಸಿಕೊಂಡು ಹೋಗುವಂತೆ ಬೊಗಳುತ್ತಿವೆ! ಅಂದರೆ ಯಾರೋ ಕಳ್ಳ ಬಂದಿರಬಹುದು! ಏನೇನೋ ಆಲೋಚನೆಗಳು ಅವಳ ನಿದ್ದೆಯನ್ನು ದೂರಗೊಳಿಸಿದವು. ಎದೆ ಬಡಿತ ತೀವ್ರವಾಯಿತು. ಯಾರೋ ಅಂಗಳದಲ್ಲಿ ಓಡಾಡುವ ಸದ್ದು! ದಿಗ್ಗನೆ ಎದ್ದು ಕುಳಿತಳು. ಟಕ ಟಕ ಬೂಟುಗಾಲಿನ ಸದ್ದು! ಪನ್ನಾಲಾಲ್ ಆಗಿರಲಾರದು! ಆತನ ಸಂಸಾರ ಬರಲು ಇನ್ನೂ ಎರಡು ವಾರಗಳಿವೆ. ಅವನ ಕೆಲಸಾದಾಳುಗಳಿರಬೇಕು! ಚಿನ್ನದ ವ್ಯಾಪಾರಿಯ ಮನೆಗೆ ಕನ್ನ ಹಾಕುವಷ್ಟು ಕೀಳು ದರ್ಜೆಯ ವ್ಯಕ್ತಿಗಳಲ್ಲ. ಚಿತ್ತ ಸಮಾಧಾನಕ್ಕೆ ಎದ್ದು ಬಂದು ಕಿಟಿಕಿಯ ಬಳಿ ಮುಖ ತೂರಿಸಿದಳು. ಆಸ್ಪಷ್ಟ ಅಕೃತಿ! ಬೆಳದಿಂಗಳಿದ್ದರೂ ಸರಿಯಾಗಿ ಕಾಣಲಾರದು. ಗಿಡಗಳ ಮರೆಯಿಂದ ಅವಳ ಕೋಣೆಯ ಕಡೆ ನಡೆದು ಬರುತ್ತಿದ್ದ. ಕಳ್ಳತನದ ಹೆಜ್ಜೆಯಿಂದ ಬರುತ್ತಿಲ್ಲ! ಸರ ಸರನೆ ನಡೆದುಕೊಂಡು ಬರುತ್ತಿದ್ದಾನೆ! ಅವಳಿಗೆ ಸ್ಪಷ್ಟವಾಗಿ ಗೋಚರಿಸಿದ! ಪರದೆ ಬಿಟ್ಟು ಬಾಗಿಲಿನ ಬಳಿ ಬಂದು ಬೆದರಿಕೆಯಿಂದ ನಿಂತಳು.
ಸಂಜೆ ಮರಳ ದಂಡೆಯ ಮೇಲೆ ಕಾಣಿಸಿಕೊಂಡ ವ್ಯಕ್ತಿ! ಕಡು ನೀಲಿ ಪ್ಯಾಂಟ್ ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ! ಇಲ್ಲಿಗೆ ತನ್ನನ್ನು ಹುಡುಕಿಕೊಂಡು ಬಂದಿರಬಹುದು! ಇಲ್ಲ ಅಗಿರಲಾರದು. ತಾನು ಇಲ್ಲಿರುವೆನೆಂದು ಅವನಿಗೆ ತಿಳಿದಿಲ್ಲ. ಹೆಣ ಭಾರದ ಮರದ ಪೆಟ್ಟಿಗೆಯನ್ನು ದೋಣಿಯಿಂದ ಇಳಿಸಿ ಕಾರಿನಲ್ಲಿ ಇಡಲು ಸಹಕರಿಸಿದ್ದಳು. ಆತ ಕಾರನ್ನು ಚಲಾಯಿಸಿಕೊಂಡು ಹೋಗಿದ್ದ. ಮತ್ತೆ ಇಲ್ಲಿ ಹೇಗೆ ಕಾಣಿಸಿಕೊಂಡಿದ್ದಾನೆ?
ಬೂಟುಗಾಲಿನ ಸದ್ದು ನಿಂತಿತು. ಸಮಾಧಾನದ ಉಸಿರೆಳೆದುಕೊಂಡಳು. ಅಂದರೆ ಆ ವ್ಯಕ್ತಿ ಎತ್ತಲೋ ಸರಿದು ಹೋಗಿರಬೇಕು. ಬಾಗಿಲಿನ ಬಳಿಯಿಂದ ಇತ್ತ ಸರಿದವಳಿಗೆ ಕೇಳಿಸಿದ ಸದ್ದಿಗೆ ಬೆಚ್ಚಿ ಬಿದ್ದಳು!
ಬಾಗಿಲಿನ ಮೇಲೆ ನಯವಾಗಿ ಬೆರಳುಗಳಿಂದ ಕುಟ್ಟುವ ಸದ್ದು!
ಆ ವ್ಯಕ್ತಿ ತಾನೆಣಿಸಿದಂತೆ ಸರಿದು ಹೋದುದ್ದಲ್ಲ! ಬಾಗಿಲಿನ ಬಳಿ ನಿಂತು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ! ನಿಶಬ್ದವಾಗಿ ನಿಂತೇ ಇದ್ದಳು.
ಮತ್ತೊಮ್ಮೆ ಬಾಗಿಲಿನ ಮೇಲೆ ಬಡಿದ. ಬಾಗಿಲು ತೆರೆಯದಿದ್ದರೆ ಖಂಡಿತವಾಗಿಯು ಬಾಗಿಲು ಮುರಿದು ಒಳಗೆ ಬರುವ ಯೋಚನೆ ಇರಬಹುದು. ಬಾಗಿಲ ಬಳಿ ಧೈರ್ಯ ಮಾಡಿ ಬಂದಳು. ಹೇಗೂ ಆತ ಪರಿಚಿತ ವ್ಯಕ್ತಿ. ಸಂಜೆಯ ಹೊತ್ತು ಅವನಿಗೆ ಸಹಾಯ ಮಾಡಿದ್ದಾಗಿದೆ. ತನಗೇನು ಮಾಡಲಾರ. ಭಂಡ ಧೈರ್ಯದಿಂದ ಬಾಗಿಲಿನ ಚಿಲಕ ತೆಗೆಯಬೇಕೆನ್ನುವಷ್ಟರಲ್ಲಿ ಮತ್ತೆ ಜೋರಾಗಿ ಬಾಗಿಲು ಕಿತ್ತು ಬರುವಂತೆ ಬಡಿದ!
ತಟಕ್ಕನೆ ಚಿಲಕ ಜಾರಿಸಿದಳು. ಕ್ಯಾಂಡಲ್ ಉರಿಸಿ ದೀಪ ಬೆಳಗಿಸಿದಳು. ಅವಳನ್ನು ಕಂಡು ಸಣ್ಣಗೆ ಉದ್ಗಾರ ತೆಗೆದ.
"ಓಹೋ ನೀವು, ಮತ್ತೆ ನಿಮ್ಮನ್ನು ಕಾಣ್ತೀನೀಂತ ಅಂದುಕೊಂಡಿರಲಿಲ್ಲ" ಅವಳು ಬಾಗಿಲಿಗೆ ಅಡ್ಡವಾಗಿ ನಿಂತಿದ್ದಾಗ ಸರಿದು ಒಳ ಬಂದ. ಅವಳಿಗೆ ಧೈರ್ಯ ಬಂದಿತ್ತಾದರು ತಾನು ಒಬ್ಬಂಟಿಯಾಗಿರುವಾಗ ಬಂದನೆಂದರೆ! ಏನಾದರೂ ಸಂಚು ಹೂಡಿರಬಹುದು!
"ಕ್ಷಮಿಸಿ ನಿಮ್ಮ ನಿದ್ದೇನ ಹಾಳು ಮಾಡ್ದೆ. ನಿಮ್ಮಿಂದ ನನಗೊಂದು ದೊಡ್ಡ ಉಪಕಾರವಾಗಬೇಕಿದೆ" ಮತ್ತೆ ಸಹಾಯ ಹಸ್ತ ಯಾಚಿಸುತ್ತಿದ್ದಾನೆ. ಈಗಾಗಲೆ ಎರಡು ಬಾರಿ ಸಹಾಯ ಮಾಡಿದ್ದಾಯಿತು.
"ಏನದು?" ಕಣ್ಣು ಕಿರಿದುಗೊಳಿಸಿ ಕೇಳಿದಳು ಗಾಜು ಕಣ್ಣಿನ ಚೆಲುವೆ.
"ನನ್ನ ಹೆಸರು ಅನುಪ್ರೀತ್. ಗುಜರಾತಿನಿಂದ ಹುಚ್ಚು ಸಾಹಸ ಮಾಡ್ಕೊಂಡು ಇಲ್ಲಿಯವರೆಗೆ ಬಂದಿದ್ದೀನಿ. ಆದ್ರೆ ನನಗೆ ಬೇಕಾಗಿರೋ ವ್ಯಕ್ತಿ ಊರಿನಲಿಲ್ಲ. ಆತ ಎಲ್ಲೋ ದೂರದೂರಿಗೆ ಹೋಗಿದ್ದಾನಂತೆ. ಮರದ ಪೆಟ್ಟಿಗೆಯನ್ನು ಮರಳಿಸಿ ಹೋಗಲು ಬಂದಿದ್ದೀನಿ. ದಯವಿಟ್ಟು ಇಲ್ಲ ಅನ್ಬೇಡಿ. ಒಂದೆರಡು ದಿವಸದ ಮಟ್ಟಿಗೆ ಆ ಪೆಟ್ಟಿಗೆ ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಉಪಕಾರ ಮಾಡಿದ ಹಾಗೆ"
"ಇಲ್ಲ ಸಾಧ್ಯವಿಲ್ಲ ಅನುಪ್ರೀತ್. ಇಲ್ಲಿ ಸರಿಯಾಗಿ ಕೈ ಕಾಲು ಬಿಟ್ಟು ಮಲಗುವಷ್ಟು ಜಾಗವಿಲ್ಲ. ಪೆಟ್ಟಿಗೆ ಇಟ್ಟರೆ ಕಷ್ಟ. ಅದೂ ಅಲ್ದೆ ಇದು ನನ್ನ ಮನೆಯಲ್ಲ. ನಾನು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೀನಿ. ನಾನು ಬಾಡಿಗೆಗೆ ಪಡೆದಿರೋ ಅಗ್ಗದ ಕೋಣೆ ಇದು. ನಿಮ್ಮ ಪೆಟ್ಟಿಗೆಗೆ ಭದ್ರತೆ ಕೂಡ ಇರಲಾರದು" ನಯವಾಗಿ ನಿರಾಕರಿಸಿದಳು ನಿನಾದ.
"ಭದ್ರತೆಯ ಮಾತು ಬೇಕಾಗಿಲ್ಲ. ನೀವು ಹೊರಗೆ ಹೋಗುವಾಗ ಬಾಗಿಲು ಮುಚ್ಚಿ ಹೋಗುವಿರಲ್ಲವೆ? ಎರಡು ದಿನ ನಿಮ್ಮಲ್ಲಿರಲಿ. ನಾನು ಮರಳುವ ಮೊದಲು ಇಲ್ಲಿಂದ ಅದನ್ನು ಸಾಗಿಸ್ತೀನಿ" ಮತ್ತೆ ಗೋಗರೆದ.
ಯುವಕ ಸಭ್ಯನಂತೆ ಕಾಣುತ್ತಾನೆ! ಹೇಗೂ ಪನ್ನಾಲಾಲ್ ಕೂಡ ಊರಲಿಲ್ಲ. ತನ್ನ ಕೋಣೆಗೆ ಬರುವವರು ಯಾರು ಇಲ್ಲ. ಇರಲಿ ಚಾಪೆ ನೆಲದಲ್ಲಿ ಹಾಸಿ ಮಲಗುವ ಬದಲು ಪೆಟ್ಟಿಗೆ ಮೇಲೆ ಹಾಸಿ ಮಲಗಬಹುದು.
"ಸರಿ, ಅದರೆ ಎರಡು ದಿನದೊಳಗೆ ಮರಳಿ ತೆಗೆದುಕೊಂಡು ಹೋಗಬೇಕು"
ಅವಳ ಒಪ್ಪಿಗೆ ತಿಳಿದು ದಂತ ಪಂಕ್ತಿ ಕಾಣುವಂತೆ ತುಟಿಯಗಲಿಸಿದ. ಅವನ ಮುಖವನ್ನೊಮ್ಮೆ ದಿಟ್ಟಿಸಿದಳು. ತುಂಬಾ ಸುಂದರ ಯುವಕನೆನಿಸಿತು.
"ಬನ್ನಿ ಪೆಟ್ಟಿಗೆ ಇಲ್ಲೆ ಗಿಡಗಳ ಮರೆಯಲ್ಲಿದೆ. ನೀವು ಕೈ ಚಾಚಿದರೆ ಸುಲಭದಲ್ಲಿ ತರಬಹುದು"
ಅವನನ್ನು ಹಿಂಬಾಲಿಸಿ ಗಿಡಗಳ ಬಳಿ ಬಂದಳು. ಪೆಟ್ಟಿಗೆಯನ್ನು ಅವಳ ಕೋಣೆಗೆ ತಂದರು.
"ಉಪಕಾರವಾಯ್ತು ಮಿಸ್..." ಹೆಸರು ತಿಳಿಯದೆ ಮಾತು ನಿಲ್ಲಿಸಿದ.
"ನಿನಾದ"
"ನಿನಾದ... ನಿಮ್ಮ ಉಪಕಾರಾನ ಯಾವತ್ತು ಮರೆಯಲಾರೆ" ಮತ್ತೊಮ್ಮೆ ವಂದಿಸಿ ಬಿರಬಿರನೆ ನಡೆದು ಕತ್ತಲಲ್ಲಿ ಮಾಯವಾದ.
ಬಾಗಿಲು ಮುಚ್ಚಿ ಚಿಲಕ ಸಿಕ್ಕಿಸಿದಳು. ಮರದ ಪೆಟ್ಟಿಗೆಯ ಮೇಲೆ ಚಾಪೆ ಹಾಸಿ ಮಲಗಿದಳು. ನಿದ್ದೆ ಯಾವಾಗ ಅವರಿಸಿತೋ ತಿಳಿಯಲಿಲ್ಲ. ಕೈ ಸೆಳೆಯುತ್ತಿತ್ತು. ನೋವಿನಿಂದ ಹೊರಳಿ ಮಲಗಿದವಳಿಗೆ ತಟ್ಟನೆ ಎಚ್ಚರವಾಯಿತು. ಕಣ್ಣು ಬಿಟ್ಟಾಗ ಸೂರ್ಯನ ಕಿರಣ ಕಿಟಿಕಿಯ ಪರದೆಯನ್ನು ತೂರಿ ಒಳ ಬಂದಿತ್ತು. ಮುಂಜಾನೆಯ ಜಡ ಆವರಿಸಿದ್ದರೂ ಕೆಲಸ ಅನಿವಾರ್ಯ. ಮುಖ ತೊಳೆದು ಬಂದವಳಿಗೆ ಯಾವುದೋ ಕೆಟ್ಟ ವಾಸನೆ ಬಂದಂತಾಗಿ ಹೊಟ್ಟೆ ತೊಳೆಸಿದಂತಾಯಿತು. ಮೂಗಿಗೆ ಕೈ ಹಿಡಿದು ಸುತ್ತಲೂ ದೃಷ್ಟಿಸಿದಳು. ಯಾವುದೋ ಅಸಹ್ಯ ವಾಸನೆ! ಇಲಿಯೋ ಹೆಗ್ಗಣವೋ ಸತ್ತಿರಬಹುದೆಂದು ಪುಸ್ತಕದ ರಾಶಿಯನ್ನು ತೆಗೆದು ನೋಡಿದಳು.
ಇಲ್ಲ!
ತಟ್ಟನೆ ನೆನಪಾಗಿದ್ದು ಆರು ಅಡಿ ಉದ್ದದ ಮರದ ಪೆಟ್ಟಿಗೆ! ಅದರೊಳಗೆ ಕೊಳೆತು ನಾರುವ ವಸ್ತು!!?? ಕುತೂಹಲದಿಂದ ಅದರ ಬಳಿ ಬಂದವಳಿಗೆ ಬವಳಿ ಬಂದಂತಾಯಿತು. ಮೂಗಿಗೆ ಸೆರಗು ಹಿಡಿದು ನಿಂತಳು.
ಪೆಟ್ಟಿಗೆಗೆ ಚಿಲಕ ಮಾತ್ರ ಸಿಕ್ಕಿಸಿದೆ! ಬೀಗ ಜಡಿದಿರಲಿಲ್ಲ!
‘ಯಾವುದೋ ವ್ಯಕ್ತಿಗೆ ತಲುಪಿಸುವುದಿದೆ, ಆ ವ್ಯಕ್ತಿ ಊರಲ್ಲಿಲ್ಲ’ ಅನುಪ್ರೀತ್ ಹೇಳಿದ್ದ. ಯಾವುದೋ ಸಮಸ್ಯೆಯಲ್ಲಿ ತನ್ನನ್ನು ಸಿಲುಕಿಸಿದ್ದಾನೆ ಚೆಲುವ. ಚಿಲಕ ಸರಿಸಿ ಪ್ರಯಾಸದಿಂದ ಬಾಗಿಲು ತೆರೆದಳು. ಕಿಟಾರನೆ ಕಿರುಚಿ ಬಿಕ್ಕಳಿಸಿದಳು.
ಕಣ್ಣುಗಳನ್ನು ತೆರೆದು, ಬಾಯಿ ಅಗಲಿಸಿ ವಿಕಾರ ರೂಪದಲ್ಲಿ ಮಲಗಿದ್ದ ಹೆಂಗಸಿನ ದೇಹ!
ಆ ಮುಖವನ್ನು ಎಲ್ಲೋ ನೋಡಿದ ನೆನಪು!
ತನ್ನೆಣಿಕೆ ಸುಳ್ಳಲ್ಲ! ಚಾಂದಿನಿ ಬಾಯಿ!
ಪನ್ನಲಾಲ್ ನ ಮಡದಿ! ತನಗೆ ಬಾಡಿಗೆ ಮನೆಯನ್ನು ಕೊಡುವ ಸೌಜನ್ಯ ತೋರಿಸಿದೋಳು.
ಪನ್ನಲಾಲ್ ಸಂಸಾರ ಸಮೇತ ರೈಲಿನಲ್ಲಿ ಗುಜರಾತಿಗೆ ತೆರೆಳಿದ್ದಾನೆ. ಅನುಪ್ರೀತ್ ರೈಲಿನಲ್ಲಿ ಒಡವೆ ಹಣಕ್ಕಾಗಿ ಅವಳನ್ನು ಕೊಂದು ಯಾಂತ್ರಿಕ ದೋಣಿಯಲ್ಲಿ ಹೆಣವನ್ನು ಸಾಗಿಸಿದ್ದಾನೆ! ತಾನೀಗ ಸಮಸ್ಯೆಯಲ್ಲಿ ಸಿಕ್ಕಿಬಿದ್ದದಂತಾಗಿದೆ. ಏನೋ ನೆನಪಾಗಿ ರೂಮಿಗೆ ಬೀಗ ಜಡಿದು ಹಾರು ನಡಿಗೆಯಲ್ಲಿ ಸಮುದ್ರದ ದಂಡೆಯ ಬಳಿ ಬಂದಳು. ಅನುಪ್ರೀತ್ ಎಲ್ಲೂ ಹೋಗಿರಲಾರ. ಲಂಗರು ಹಾಕಿ ನಿಂತಿರೋ ದೋಣಿಯಲ್ಲಿ ತಂಗಿರಬಹುದು. ಅಲ್ಲಿ ಬಂದವಳಿಗೆ ನಿರಾಶೆ ಕಾದಿತ್ತು.
ಅಂದರೆ ಅನುಪ್ರೀತ್ ತನ್ನನ್ನು ಇಕ್ಕಟಿನಲ್ಲಿ ಸಿಲುಕಿಸಿ ಪರಾರಿಯಾಗಿದ್ದಾನೆ! ದು:ಖ ಉಮ್ಮಳಿಸಿ ಬಂತು. ಇನ್ನು ಪೋಲಿಸ್ನೋರ ವಿಚಾರಣೆ... ಕೋರ್ಟು ಕಛೇರಿ ಅಲೆದಾಟ... ಸಣ್ಣಗೆ ನಡುಕ ಅರಂಭವಾಯಿತು.
ಒಂದು ವಾರ ಕಳೆದಿರಬಹುದು......
ಪೋಲಿಸ್ ಠಾಣೆಗೆ ಅಲೆದು ಸುಸ್ತಾಗಿದ್ದಳು. ಕೇಳುವ ನೂರಾರು ಪ್ರಶ್ನೆಗಳಿಗೆ ಉತ್ತರಿಸಿ ರೋಸಿ ಹೋಗಿತ್ತು. ಇಂದು ಕೊಲೆಗಾರ ಯಾರೆಂದು ನಿರ್ಧರಿಸಲಾಗುತ್ತದೆ!!? ನಡೆದ ಘಟನೆಯನ್ನೆಲ್ಲಾ ಮುಚ್ಚು ಮರೆಯಿಲ್ಲದೆ ಎಸ್. ಐ. ಭಾರಾಧ್ವಜ್ ಗೆ ತಿಳಿಸಿದ್ದಾಳೆ. ಬಸ್ಸು ಇಳಿದು ಭಾರವಾದ ಹೆಜ್ಜೆಯಿಡುತ್ತಾ ಠಾಣೆಯ ಮೆಟ್ಟಲೇರಿ ಬಂದಳು. ನಗು ಮುಖದಲ್ಲೆ ಎಸ್. ಐ. ಸ್ವಾಗತಿಸಿದರು. ಅವಳಿಗೆ ಆತಂಕವಾಗಿತ್ತು. ಅವರು ತೋರಿಸಿದ ಬೆಂಚಲ್ಲಿ ಕುಳಿತು ಅದರ ಅಂಚನ್ನು ಗಟ್ಟಿಯಾಗಿ ಹಿಡಿದುಕೊಂಡು ಹೃದಯ ಬಡಿತದ ತೀವ್ರತೆಯನ್ನು ನಿಯಂತ್ರಿಸಲೆತ್ನಿಸುತ್ತಿದ್ದಳು.
"ಮಿಸ್ ನಿನಾದ" ಬಾರಧ್ವಜ್ ನ ಕರೆಗೆ ಬೆಚ್ಚಿ ಬಿದ್ದಳು.
"ಕೊಲೆಗಾರ ಸಿಕ್ಕಿ ಬಿದ್ದಿದ್ದಾನೆ"
ಕೊಲೆಗಾರ ಮತ್ತಾರು ಅಲ್ಲ, ಹುಚ್ಚು ಸಾಹಸ ಮಾಡಿ ಗುಜರಾತಿನಿಂದ ಬಂದ ಸುಂದರ ಯುವಕ ಅನುಪ್ರೀತ್! ಚಾಂದಿನಿ ಬಾಯಿಯನ್ನು ಕೊಲೆ ಮಾಡಿ ಒಡವೆಗಳನ್ನು ಅಪಹರಿಸಿದ್ದು ಹುಚ್ಚು ಸಾಹಸ!
ಬಾರಧ್ವಜ್ ಮುಂದುವರಿಸುತಿದ್ದರು, "...ಕೊಲೆಗಾರನಿಗೂ ಚಾಂದಿನಿ ಬಾಯಿಗೂ ಅಗಿಂದಾಗೆ ಜಗಳವಾಗ್ತಾ ಇತ್ತು"
ಅನುಪ್ರೀತ್ ಚಾಂದಿನಿ ಬಾಯಿಗೆ ಪರಿಚಿತ!
"...ಚಾಂದಿನಿ ಬಾಯಿ ಅವನಿಗೆ ಚಿನ್ನದ ವ್ಯಾಪರ ಮಾಡಲು ಪ್ರಚೋದಿಸಿದ್ಲು. ಅದಕ್ಕಾಗೆ ತನ್ನ ಅಣ್ಣನಿಂದ ಸಹಾಯ ಪಡೆದ್ಲು. ಅದ್ರೆ ಕೊಲೆಗಾರ ಅವಳಿಗೆ ದ್ರೋಹ ಮಾಡ್ದ. ಲಕ್ಷಗಟ್ಟಲೆ ಬಾಕಿ ಇರೋ ಹಣಾನ ಕೊಡಲು ನಿರಾಕರಿಸಿದ. ಚಾಂದಿನಿ ಬಾಯಿ ಮೋಸ ಮಾಡಿದಕ್ಕಾಗಿ ಅವನನ್ನು ಕಾನೂನಿನ ಕೈಗೆ ಒಪ್ಪಿಸುವುದಾಗಿ ಬೆದರಿಸಿದ್ಲು. ಕೊಲೆಗಾರ ಶಾಂತನಾದ. ಗುಜರಾತಿಗೆ ಮರಳಿದ ನಂತರ ಬಾಕಿ ಹಣವನ್ನು ಕೊಡುವುದಾಗಿ ಭರವಸೆ ನೀಡಿದ. ಇಬ್ಬರೂ ರೈಲಿನಲ್ಲಿ ಗುಜರಾತಿಗೆ ಹೊರಟರು. ಆತ ಮೊದಲೆ ನಿರ್ಧರಿಸಿದಂತೆ ಅವಳನ್ನು ರೈಲಿನಲ್ಲಿ ಮುಗಿಸ್ದ!"
ಪನ್ನಾಲಾಲ್ ಮತ್ತು ಚಾಂದಿನಿ ಬಾಯಿಯನ್ನು ಕೊಲೆಗಾರ ಅನುಸರಿಸಿ ಹೋಗಿದ್ದಾನೆ. ಪನ್ನಾಲಾಲ್ ಇಲ್ಲದ ಸಮಯ ನೋಡಿ ಚಾಂದಿನಿ ಬಾಯಿಯನ್ನು ಮುಗಿಸಿದ್ದಾನೆ!
"...ಕೊಲೆಗಾರ ಅವಳನ್ನು ಹೊಡೆದು ಸಾಯಿಸಿದ್ದಲ್ಲ. ಅವಳಿಗೆ ಕಾಫಿಯಲ್ಲಿ ವಿಷ ಬೆರೆಸಿ ನೀಡ್ದ. ಅವಳು ಹೊತ್ತಲ್ಲದ ಹೊತ್ತಲ್ಲಿ ಕಾಫಿ ಕುಡಿಯೋದಿಕ್ಕೆ ನಿರಾಕರಿಸಿದ್ಲು. ಆತ ಅವಳನ್ನು ಜಬರ್ದಸ್ತಿಯಿಂದ ಕುಡಿಯುವಂತೆ ಪ್ರಯತ್ನಿಸ್ದ. ಬೋಗಿಯಲ್ಲಿ ಆಗ ಅವರಿಬ್ಬರೆ ಇದ್ದಿದ್ದು! ಬೇರೆ ದಾರಿ ಕಾಣದೆ ಅವಳು ಕಿರುಚಿಕೊಂಡು ಓಡಿ ಬರೋದಕ್ಕೆ ಪ್ರಯತ್ನಿಸಿದ್ಲು. ಅತ ಕಾಲು ಅಡ್ಡ ಹಿಡಿದು ಅವಳನ್ನು ಬೀಳಿಸಿದ. ಅವಳ ತಲೆ ಬಲವಾಗಿ ಬೋಗಿಯ ಕಿಟಕಿಗೆ ಬಡಿಯಿತು. ಉಸಿರು ನಿಂತು ಹೋಯಿತು. ಗುಜರಾತಿನಲ್ಲಿ ರೈಲು ನಿಲ್ಲುತ್ತಲೆ ಕೆಳಗಿಳಿದ. ಅವಳ ಹೆಣವನ್ನು ಸಾಗಿಸೋದಕ್ಕೆ ಯಾರಾದರು ಸಹಾಯಕ್ಕೆ ಬರಬಹುದೆಂದುಕೊಂಡ. ಯಾರು ಕಾಣಲಿಲ್ಲ. ಇನ್ನೇನು ರೈಲು ಮುಂದೆ ಹೊರಡಬೇಕೆನ್ನುವಾಗ ಒಳಗೆ ಹಾರಿ ಬಂದ. ಚಾಂದಿನಿ ಬಾಯಿಯ ಹೆಣ ಕಾಣೆಯಾಗಿತ್ತು"
"ಕಾಣೆಯಾಗಿತ್ತು!!" ಆಶ್ಚರ್ಯ ವ್ಯಕ್ತ ಪಡಿಸಿದಳು ನಿನಾದ.
"ಹೆಣ ಕಾಣೆಯಾದುದಲ್ಲ. ಹೆಣವನ್ನು ಸಾಗಿಸ್ದೋನು ಅನುಪ್ರೀತ್"
"ಅಂದ್ರೆ... ಕೊಲೆಗಾರ ಅನುಪ್ರೀತ್...." ಅವಳ ಮಾತು ಮುಗಿಯುವ ಮೊದಲೆ ಎಸ್. ಐ. ಮುಗುಳ್ನಕ್ಕು "ಅಲ್ಲ" ಅಂದರು. ನಿನಾದಳಿಗೆ ಆಶ್ಚರ್ಯವಾಯಿತು.
"ಅನುಪ್ರೀತ್ ರೈಲ್ವೆಯಲ್ಲಿ ಠಾಣಾಧಿಕಾರಿ. ಕೊಲೆ ಮಾಡ್ದೋನು ಅನುಪ್ರೀತ್ ಅಲ್ಲ. ಪನ್ನಾಲಾಲ್"
"ಪನ್ನಾಲಾಲ್!!!" ಉದ್ಗರಿಸಿದಳು.
"ಹೌದು. ಕಂಪಾರ್ಟ್ ಮೆಂಟಿನಲ್ಲಿ ಗಲಾಟೆ ಅದಾಗ ಯಾರೋ ಅದನ್ನು ನೋಡಿ ಪೋಲಿಸರಿಗೆ ತಿಳಿಸಿದರು. ಅನುಪ್ರೀತ್ ಅಲ್ಲಿಗೆ ಬಂದಾಗ ಪನ್ನಲಾಲ್ ಕಾಣೆಯಾಗಿದ್ದ"
"ಹಾಗಾದ್ರೆ ಅನುಪ್ರೀತ್ ಹೆಣವನ್ನೇಕೆ ಇಲ್ಲಿ ತಂದಿದ್ದು?" ಅವಳ ಬಾಲಿಶವಾದ ಪ್ರಶ್ನೆಗೆ ಬಾರಧ್ವಜಿಗೆ ನಗು ಬಂತು.
"ಎರಡು ದಿನವಾದ್ರೂ ಪನ್ನಾಲಾಲ್ ನ ಪತ್ತೆಯಾಗದಾಗ ತಿಳಿದು ಬಂದ ವಿಷಯ, ಆತ ಯಾವುದೋ ಯಾಂತ್ರಿಕ ದೋಣಿ ಹಿಡಿದು ದಕ್ಷಿಣಕ್ಕೆ ಹೊರಟನೆಂದು. ಹಾಗೆ ಅನುಪ್ರೀತ್ ಹುಚ್ಚು ಸಾಹಸ ಮಾಡ್ಕೊಂಡು ಹೆಣ ಸಮೇತ ಇಲ್ಲಿಗೆ ಬಂದ. ಪನ್ನಾಲಾಲ್ ನ ಮನೆಯಲ್ಲಿ ಯಾರೋ ಇರುವ ಸುದ್ದಿ ತಿಳಿದು ಇಲ್ಲಿಗೆ ಬಂದ. ಅದ್ರೆ ಅಲ್ಲಿದ್ದಿದ್ದು ನೀನು. ನಿನಗೇನಾದರೂ ಸುಳಿವು ತಿಳಿದಿರಬಹುದೆಂದು ಅನುಪ್ರೀತ್ ನಿನ್ನಲ್ಲಿಗೆ ಬಂದ. ಅದೇ ಸಮಯಕ್ಕೆ ಪನ್ನಾಲಾಲ್ ಒಂದು ಅಗ್ಗದ ವಸತಿ ಗೃಹದಲ್ಲಿ ಸಿಕ್ಕಿ ಬಿದ್ದಿದ್ದ. ಕೊಲೆ ಮಾಡ್ದೋನು ತಾನೇಂತ ಒಪ್ಕೊಂಡ"
ಅಗಲೇ ವಾಹನವೊಂದು ಬಂದು ನಿಂತಿತು. ಕತ್ತು ಹೊರಳಿಸಿದಳು ನಿನಾದ.
ಕಡು ನೀಲಿ ಜೀನ್ಸ್, ತಿಳಿ ನೀಲಿ ಬಣ್ಣದ ಟೀ ಶರ್ಟ್ ಧರಿಸಿ ಮೆಟ್ಟಲೇರಿ ಬರುತ್ತಿದ್ದ ಅನುಪ್ರೀತ್....
"ಏನೂ, ಟೀಚರ್ ಶಾಲೆಯಲ್ಲಿ ಪಾಠ ಮಾಡೋದು ಬಿಟ್ಟು ಠಾಣೆಯಲ್ಲಿ ಪಾಠ ಮಾಡಲು ಬಂದಿದ್ದಾರೆಯೆ?" ಅಣಕು ಮಾತಿನಲ್ಲಿ ಕೇಳಿದ.
"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿದ್ರೆ..... ಠಾಣೆಯಲ್ಲಿರುವವರಿಗೆ ಪಾಠ ಕಲಿಸ್ಬೇಕಲ್ಲ"
ಅನುಪ್ರೀತ್, ಬಾರಧ್ವಜ್ ಇಬ್ಬರೂ ಅವಳ ಮಾತಿಗೆ ಗೊಳ್ಳನೆ ನಕ್ಕರು.
"ಕ್ಷಮಿಸಿ ನಿನಾದ..." ಅಂದು ಕೈ ಜೋಡಿಸುವ ಸೌಜನ್ಯ ತೋರಿಸಿದ ಅನುಪ್ರೀತ್.
****

No comments: