Thursday, November 12, 2009
ಕೊಲೆಗಾರ
(ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾದ ಪತ್ತೇದಾರಿ ಕಥೆ)
ಸುಮಾರು ಆರುಗಂಟೆಯ ಸಮಯ. ರಸ್ತೆಯಲ್ಲಿ ವಾಹನ ಸಂಚಾರ ಅತ್ಯಧಿಕವಾಗಿತ್ತು. ಒಮ್ಮೆ ತನ್ನ ದೃಷ್ಟಿಯನ್ನು ಕೈ ಗಡಿಯಾರದತ್ತ ಹೊರಳಿಸಿದ ಗೋಪಾಲಸ್ವಾಮಿ ತನ್ನ ಸಹಾಯಕನನ್ನು ಕರೆದು ಹೋಗುವಂತೆ ಹೇಳಿ, ಮುಖ್ಯವಾದ ಫೈಲೊಂದನ್ನು ಕೈಗೆತ್ತಿಕೊಂಡ. ಮರುದಿನದ ಕೇಸ್‍ಗಳನ್ನು ಅಧ್ಯಯನ ಮಾಡಲು ಸರಿಯಾದ ಸಮಯ ಬೇಕಾಗಿತ್ತು. ರಾತ್ರಿಯ ಹೊತ್ತು ಕ್ಲಾಯಿಂಟ್‍ಗಳು ಬಂದು ತೊಂದರೆ ಕೊಡುವುದಿಲ್ಲವೆಂದು ಗೊತ್ತು. ತದೇಕ ಚಿತ್ತದಿಂದ ಕಡತದ ಮೇಲೆ ಕಣ್ಣಾಡಿಸುತ್ತಿದ್ದ ವಕೀಲ ತನ್ನಷ್ಟಕ್ಕೆ ತಾನು ಸಾಧ್ಯ ಅಸಾಧ್ಯತೆಗಳ ಬಗ್ಗೆ ಪರಾಮರ್ಶಿಸುತ್ತಿದ್ದ. ತಟ್ಟನೆ ಬಾಗಿಲಿನ ಉದ್ದಕ್ಕೂ ಯಾರೋ ನಿಂತಂತಾಯಿತು. ತಲೆಯೆತ್ತಿದ. ಇಪ್ಪತ್ತೈದರ ಆಸುಪಾಸಿನ ಹೆಣ್ಣು ಆತಂಕದ ಮುಖದಿಂದ ವಕೀಲನ ಅನುಮತಿಗಾಗಿ ಕಾದು ನಿಂತಿತ್ತು.
"ನಾನು ಒಳಗೆ ಬರಬಹುದೆ?" ಅನುಮತಿಯ ಪ್ರಶ್ನೆ ತೂರಿದರು ಬಾಗಿಲಿನಲ್ಲಿಯೇ ನಿಂತಿರುವಷ್ಟು ತಾಳ್ಮೆ ಕಾಣಿಸಲಿಲ್ಲ. ನುಣುಪು ನೆಲದ ಮೇಲೆ ಪಾದರಕ್ಷೆಯ ಟಕಟಕ ಸದ್ದು ಆ ಹೊತ್ತು ಸಮಸ್ಯೆಯೊಂದರ ಪೀಠಿಕೆಯಂತೆ ಕಂಡಿತು. ನೋಡುತ್ತಿದ್ದ ಕಡತಕ್ಕೆ ಕಾಗದದ ಚೂರನ್ನು ತುರುಕಿಸಿ ಹಾಗೇ ಮುಚ್ಚಿಟ್ಟ ವಕೀಲ, ಬಲಗೈಯಿಂದ ಸನ್ನೆ ಮಾಡಿ ಹೆಣ್ಣನ್ನು ಕುಳಿತುಕೊಳ್ಳುವಂತೆ ಸೂಚಿಸಿದ.
ಆತುರದಲ್ಲಿದ್ದ ಹೆಣ್ಣು ಒಮ್ಮೆ ವಕೀಲನ ಕಡೆಗೆ ಮತ್ತೊಮ್ಮೆ ಎದುರಿಗಿದ್ದ ಗಡಿಯಾರದ ಕಡೆಗೆ ನೋಟ ಹರಿಸಿ ಮೆಲ್ಲಗೆ ಮಾತು ತೆಗೆಯಿತು."
"ಪೊಲೀಸರಿಂದ ಸಹಾಯ ನಿರೀಕ್ಷಿಸಿದ್ದೆ. ಆದರೆ ಈಗ ಕೊಲೆಗಾರ ತಪ್ಪಿಸಿಕೊಳ್ತಾನೇನೋ ಅನ್ನೋ ಅನುಮಾನ ಕಾಡ್ತಾ ಇದೆ. ಹಾಗಾಗ್ಬಾರ್‍ದು... ಆ ಮೈಲಾರಿನಾ ನೇಣುಗಂಭಕ್ಕೆ ಏರಿಸ್ಬೇಕು. ನಿಮ್ಮ ಸಹಾಯ ನಂಗೆ ಮುಖ್ಯ" ಮುಖದ ಮೇಲೆ ಟಿಸಿಲೊಡೆದ ಬೆವರಿನ ಬಿಂದುಗಳನ್ನು ತೆಳುವಾದ ಸಣ್ಣ ಕರವಸ್ತ್ರದಿಂದ ಒರೆಸಿಕೊಂಡು ಸಹಾಯ ಯಾಚಿಸಿತು ಹೆಣ್ಣು.
"ಪೂರ್ತಿಯಾಗಿ ಹೇಳಿ. ನೀವು ಯಾರು? ಕೊಲೆಯಾಗಿದ್ದು ಯಾರು? ಈ ಮೈಲಾರಿ ಯಾರು? ಪೊಲೀಸರೇಕೆ ಸಹಾಯ ಮಾಡುತ್ತಿಲ್ಲ?" ತಾಳ್ಮೆಯಿಂದ ಕೇಳಿದ ವಕೀಲ.
ಪ್ರಶ್ನೆಗಳ ಉದ್ದ ಸಾಲುಗಳು ಎದುರಾದಾಗ ದೀರ್ಘ ನಿಟ್ಟುಸಿರೊಂದನ್ನು ಚೆಲ್ಲಿದ ಹೆಣ್ಣು ಮೆಲ್ಲಗೆ ನಡೆದ ಘಟನೆಯನ್ನು ಹೇಳಿತು.
"ನನ್ನ ಹೆಸರು ಶಾಂತಿರಾಜು. ರಾಜು ನನ್ನ ಗಂಡ. ನಮ್ಮದೊಂದು ಸಣ್ಣ ಸಿದ್ದ ಉಡುಪುಗಳ ಉದ್ಯಮವಿದೆ. ಮೂರು ತಿಂಗಳ ಹಿಂದೆ ರಾಜುನ ಯಾರೋ ಕೊಲೆ ಮಾಡಿಬಿಟ್ರು. ಆ ಸಮಯದಲ್ಲಿ ನಾನು ಮನೆಯಲ್ಲಿರಲಿಲ್ಲ. ಸೋಫಾದಲ್ಲಿ ಕುಳಿತಂತೆ ಇತ್ತು ರಾಜುನ ದೇಹ. ಮೈ ಮೇಲೆ ಗಾಯಗಳಾಗಲಿ, ರಕ್ತದ ಕಲೆಯಾಗಲಿ ಇಲ್ಲ. ಶವ ಪರೀಕ್ಷೆ ವರದಿ ಕೂಡ ಸ್ಪಷ್ಟವಾಗಿಲ್ಲ. ರಾಜು ಅತೀಯಾಗಿ ಕುಡಿದು ಸತ್ತಿದ್ದಾನೇಂತ ಆ ವರದಿ ಹೇಳುತ್ತೆ. ಆದ್ರೆ ರಾಜು ಯಾವತ್ತು ಕುಡಿದೇ ಇಲ್ಲ. ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿ ಎಫ಼್.ಐ.ಆರ್ ಫೈಲ್ ಮಾಡಿದೆ. ನನ್ನ ಪರವಾಗಿದ್ದ ಪೊಲೀಸರೀಗ ನನಗೆ ವಿರುದ್ಧವಾಗಿದ್ದಾರೆ. ಅಂದ್ರೆ ಇದೊಂದು ಮಾಮೂಲು ಕೇಸು ಅನ್ನೋತರ ಸುಮ್ಮನಾಗಿದ್ದಾರೆ. ಈಗ ರಾಜುನ ಕೊಲೆಯ ಹಿಂದೆ ಒಂದು ಹೆಣ್ಣಿನ ಕೈವಾಡವಿದೆ ಅನ್ನುವುದು ನನ್ನ ಅನುಮಾನ. ಆದರೆ ಪೊಲೀಸರು ಆ ಹೆಣ್ಣನ್ನು ಕರೆದು ವಿಚಾರಿಸುತ್ತಿಲ್ಲ. ಅದಕ್ಕೆ... ಈ ಕೇಸು ಮುಚ್ಚಿ ಹೋಗುತ್ತೇನೋ ಅನ್ನೋ ಅನುಮಾನದಿಂದ ನಿಮ್ಮ ಸಹಾಯ ಯಾಚಿಸಿ ಬಂದಿದ್ದೇನೆ" ಕಥೆ ಹೇಳಿದ ಬಳಿಕ ಮತ್ತೊಮ್ಮೆ ದೀರ್ಘ ಶ್ವಾಸ ಎಳೆದುಕೊಂಡ ಹೆಣ್ಣು ವಕೀಲನ ಮುಖದ ಮೇಲಾಗುತ್ತಿದ್ದ ಬದಲಾವಣೆಗಳನ್ನು ಗಮನಿಸುತ್ತಿತ್ತು.
"ಸರಿಯಾದ ಸಾಕ್ಷಿ, ಪುರಾವೆಗಳಲ್ಲದೆ ಅಪರಾಧಿಯನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸುವುದು ಕಷ್ಟ ಶಾಂತಮ್ಮ" ಕೈಗಡಿಯಾರದತ್ತ ಕಣ್ಣಾಡಿಸಿ ಆಕಳಿಸಿದ ವಕೀಲ, "ಪ್ರಯತ್ನಿಸೋಣ ಶಾಂತಮ್ಮ... ನಾಳೆ ಇದೇ ಹೊತ್ತು ಬನ್ನಿ. ಸಾಧ್ಯವಾದಲ್ಲಿ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಕೂಡ ಒದಗಿಸೋ ಪ್ರಯತ್ನ ಮಾಡಿ" ಅಂದು ಮುಂದಕ್ಕೆ ಜರುಗಿ ಕುಳಿತ.
ಶಾಂತಿರಾಜುವಿನ ಮುಖದಲ್ಲಿ ನಿರಾಸೆಯ ಸೆಲೆಯೊಡೆಯಿತು. ಇಲ್ಲೂ ತನಗೆ ಸೋಲು ಅನ್ನುವ ಆತಂಕ. ಎದ್ದು ನಿಂತು ಕೈ ಮುಗಿದ ಹೆಣ್ಣು ನಾಳೆಯ ಹೊತ್ತು ಬರುವುದಾಗಿ ಹೇಳಿ ಹೊರಟಿತು.
ವಕೀಲ ಗೋಪಾಲಸ್ವಾಮಿ ಮತ್ತೆ ಮುಚ್ಚಿಟ್ಟ ಕಡತ ತೆರೆದು ಮುಳುಗಿ ಹೋದ.
***
ಆ ದಿನ ಶಾಂತಿರಾಜು ಹೇಳಿದ ವಿಷಯವನ್ನು ಮೆಲುಕು ಹಾಕಿದ ಗೋಪಾಲಸ್ವಾಮಿ ಅವಳನ್ನು ನಿರೀಕ್ಷಿಸುತ್ತಾ ಕುಳಿತಿದ್ದ. ಬಾಗಿಲ ಬಳಿಯಿಂದ ಸೌಜನ್ಯದ ಪದಗಳು ಕೇಳಿದಾಗ, "ಬನ್ನಿ, ಶಾಂತಿರಾಜು... ನಿಮ್ಮನ್ನೇ ಕಾಯ್ತಾ ಇದ್ದೆ" ತಲೆಯೆತ್ತದೆ ಹೊರಗೆ ನಿಂತಿದ್ದವಳನ್ನು ಒಳಗೆ ಕರೆದ.
"ಕ್ಷಮಿಸಿ, ನಾನು ಶಾಂತಿರಾಜುವಲ್ಲ... ಅನಘಾರಾಜು... ರಾಜುವಿನ ವಿಧವೆ ಹೆಣ್ಣು ನಾನು. ರಾಜುವನ್ನು ಯಾರೋ ಕೊಲೆ ಮಾಡಿದ್ದಾರೆ. ಸೋಫಾದಲ್ಲಿ ಕುಳಿತಂತೆ ಇತ್ತು ಅವನ ದೇಹ. ಮೈಮೇಲೆ ಗಾಯಗಳಾಗಲಿ, ಇನ್ಯಾವುದೇ ಕುರುಹುಗಳಾಗಲಿ ಇಲ್ಲ. ಆದ್ರೂ ರಾಜುನಾ ಕೊಲೆಯಾಗಿದೆ ಅನ್ನೋದು ನನ್ನ ಅನುಮಾನ. ಪೊಲೀಸರು ಮಾಮೂಲಿ ವಿಚಾರಣೆ ಮುಗಿಸಿ ಹೋಗಿದ್ದಾರೆ. ಇಲ್ಲಿಯವರೆಗೂ ಕೊಲೆಗಾರನ್ನ ಪತ್ತೆ ಹಚ್ಚೋದಕ್ಕೆ ಅವರಿಂದ ಸಾಧ್ಯವಾಗಿಲ್ಲ. ದಯವಿಟ್ಟು ತಾವು ಈ ವಿಷಯದಲ್ಲಿ ನನಗೆ ಸಹಾಯ ಮಾಡ್ಬೇಕು" ಕೈಗಳನ್ನು ಜೋಡಿಸಿದ ಹೆಣ್ಣು ಲಾಯರ್‍ನ ಎದುರಿಗಿದ್ದ ಕುರ್ಚಿಯನ್ನು ಏಳೆದು ಕುಳಿತಿತು.
ಗೋಪಾಲಸ್ವಾಮಿಗೆ ಆ ಹೆಣ್ಣು ಹೇಳಿದ್ದನ್ನು ಇನ್ನೂ ಅರಗಿಸಿಕೊಳ್ಳಲಾಗಲಿಲ್ಲ. ಹಿಂದಿನ ದಿನ ಶಾಂತಿರಾಜು ಕೂಡ ಇದೇ ವಿಷಯ ತಿಳಿಸಿದ್ದು! ಮಾತ್ರವಲ್ಲ, ರಾಜುವಿನ ಕೊಲೆಯ ಹಿಂದೆ ಒಂದು ಹೆಣ್ಣಿನ ಕೈವಾಡವಿದೆ ಅನ್ನುವುದನ್ನೂ ಸ್ಪಷ್ಟಪಡಿಸಿದ್ದಾಳೆ. ಆ ಹೆಣ್ಣು ಅನಘಾರಾಜು!
ರಾಜು ಇಬ್ಬರು ಹೆಂಡಿರ ಮುದ್ದಿನ ಗಂಡ!? ಆದರೆ ಎರಡು ಹೆಣ್ಣುಗಳು ಒಂದೇ ಮನೆಯಲ್ಲಿರಲು ಸಾಧ್ಯವಿಲ್ಲ. ಇಬ್ಬರ ಹೇಳಿಕೆಯೂ ಒಂದೇ ತೆರನಾಗಿದೆ. ಹಾಗಾದಲ್ಲಿ ಒಬ್ಬಳು ರಾಜುವಿನ ನಿಜವಾದ ಹೆಂಡತಿ; ಇನ್ನೊಬ್ಬಳು ರಾಜುವಿನ ಪ್ರೇಯಸಿ!!
ಚೇತರಿಸಿಕೊಂಡ ವಕೀಲ ಮೆಲ್ಲಗೆ ಮಾತಿಗಿಳಿದ.
"ಕೊಲೆಯಾದ ರಾಜು ನಿಮಗೇನಾಗ್ಬೇಕು?"
ವಕೀಲನ ಪ್ರಶ್ನೆಗೆ ಹೆಣ್ಣಿನ ಕಣ್ಣುಗಳಲ್ಲಿ ಆಶ್ಚರ್ಯ ಮೂಡಿತು. ತಟ್ಟನೆ ನುಡಿಯಿತು.
"ರಾಜು ನನ್ನ ಗಂಡ. ಐದು ವರ್ಷಗಳ ಹಿಂದೆ ಅವನನ್ನು ಪ್ರೀತಿಸಿ ಮದುವೆಯಾದೋಳು ನಾನು..."
ಹೆಣ್ಣಿನ ಕಂಠದಲ್ಲಿ ದು:ಖದ ಎಳೆಯೊಂದು ಕೇಳಿಸಿತು.
"ಅಂದ್ರೆ ರಾಜು ಸಿದ್ದ ಉಡುಪುಗಳ ವ್ಯವಹಾರ ನಡೆಸ್ತಿದ್ದ. ನೀವು ಸಂಜೆ ಮನೆಗೆ ಬರೋವಷ್ಟರಲ್ಲಿ ಸೋಫಾದ ಕುಳಿತಿದ್ದಂತೆ ಇತ್ತು ಅವನ ದೇಹ. ನೀವು ಪೊಲೀಸರ ಸಹಾಯ ಯಾಚಿಸಿದ್ರಿ. ಶವ ಪರೀಕ್ಷೆಯ ವರದಿಯಲ್ಲಿಯೂ ಕೂಡ ಇದು ಕೊಲೆಯಲ್ಲಾಂತ ಸಾಬೀತಾಯಿತು. ಪೊಲೀಸರು ಆಸಕ್ತಿ ಕಳೆದುಕೊಂಡ್ರು. ಇದು ಕೊಲೆ ಕೇಸ್ ಅಲ್ಲ; ಆತ್ಮಹತ್ಯೆ ಅನ್ನೋ ನಿರ್ಧಾರಕ್ಕೆ ಬಂದ್ರು. ನೀವು ನಿರಾಶಾರಾದ್ರಿ... ಅದಕ್ಕೆ ನನ್ನ ಸಹಾಯ ಯಾಚಿಸಿ ಬಂದ್ರಿ, ಸರಿನಾ?"
ವಕೀಲನ ಮಾತಿಗೆ ಹುಬ್ಬೇರಿಸಿತು ಹೆಣ್ಣು.
"ಇಷ್ಟೊಂದು ಮಾಹಿತಿಗಳು ನಿಮಗೆ ಹೇಗೆ ತಿಳಿಯಿತು?"
ವಕೀಲ ನಕ್ಕು ನುಡಿದ.
"ಯಾವುದೋ ಒಂದು ಪತ್ರಿಕೆಯಲ್ಲಿ ಓದಿದ ನೆನಪು" ಗೋಪಾಲಸ್ವಾಮಿಯ ಚಾಣಾಕ್ಷತನದ ಉತ್ತರ.
"ಅನಘಾರಾಜುರವರೇ, ನಿಮಗೆ ಯಾರ ಮೇಲಾದರೂ ಅನುಮಾನವಿದೆಯೆ?"
ಎದುರಿಗೆ ಕುಳಿತ ಹೆಣ್ಣು ಅಲೋಚನೆಗೊಳಗಾಗಿ ಮೆಲ್ಲಗೆ ತಲೆಯಲುಗಿಸಿತು.
"ರಾಜುಗೆ ದುಶ್ಚಟಗಳು ಯಾವುದೂ ಇರಲಿಲ್ಲ. ಆದ್ರೆ ಒಂದು ಹೆಣ್ಣಿನ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದ... ಆ ವಿಷಯ ನಂಗೆ ಗೊತ್ತಾಗಿದ್ದು ರಾಜು ಕೊಲೆಯಾದ ರಾತ್ರಿ. ರಾಜುನ ಹೆಣ ಶವ ಪರೀಕ್ಷೆಗೆ ಹೋದ ಸಮಯದಲ್ಲಿ ಅವನ ಮೊಬೈಲ್‍ಗೆ ಒಂದು ಕರೆ ಬಂದಿತ್ತು. ನಾನೆ ತೆಗೆದುಕೊಂಡೆ. ‘ರಾಜು, ಇವತ್ತು ಮನೆಗೆ ಹೋಗೋ ಮೊದ್ಲು ನನ್ನ ಭೇಟಿಯಾಗು’ ಅಂತ ಆತುರದಲ್ಲಿದ್ದ ಹೆಣ್ಣು ಹೇಳಿದ್ದು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೆ. ನಾನು ಮಾತಾಡೋದ್ರಷ್ಟ್ರಲ್ಲಿ ಕರೆ ನಿಂತ್ತಿತ್ತು"
"ಅಂದ್ರೆ... ಆ ದಿನ ರಾಜು, ಅಂದ್ರೆ ನಿಮ್ಮ ಗಂಡ ಎಂದಿಗಿಂತಲೂ ಬೇಗನೆ ಮನೆಗೆ ಬಂದಿದ್ನೆ?"
"ಹೌದು, ಆ ದಿನ ನಮ್ಮ ಮದುವೆಯಾದ ದಿನ. ಅದಕ್ಕೆ ವಿಶೇಷ ಅಡುಗೆ ಆಗ್ಬೇಕೆಂದಿದ್ದ. ನಾನು ಮಾರುಕಟ್ಟೆಗೆ ಹೋಗಿ ಬರೋವಷ್ಟರಲ್ಲಿ ರಾಜುನ ಕೊಲೆಯಾಗಿದ್ದ. ನಂಗೆ ಆ ಹೆಣ್ಣಿನ ಮೇಲೆ ಅನುಮಾನ..."
ಅನಘಾಳ ಮಾತು ನಿಂತಿತು. ತಟ್ಟನೆ ವಕೀಲ ಪ್ರಶ್ನಿಸಿದ.
"ಆ ವಿಷಯ ನೀವು ಪೋಲಿಸರಿಗೆ ತಿಳಿಸಿಲ್ವೆ?"
"ತಿಳಿಸ್ದೆ... ಅವರು ಆ ಫೋನ್ ಸಂಖ್ಯೆಯನ್ನು ಪತ್ತೆ ಮಾಡಿದ್ರು. ಆದರೆ ಆ ಸಂಖ್ಯೆ ಚಾಲ್ತಿಯಲ್ಲಿಲ್ಲಾಂತ ಉತ್ತರ ಬಂತು"
ಸ್ವಲ್ಪ ಹೊತ್ತು ಆಲೋಚಿಸಿದ ಬಳಿಕ ಕೇಳಿದ.
"ಆ ಸಂಖ್ಯೆ ನಿಮ್ಮ ಬಳಿಯಿದೆಯೆ?"
"ಇಲ್ಲ, ಅನಗತ್ಯಾಂತ ಅಳಿಸಿ ಹಾಕಿದೆ"
"ಸರಿ, ನಾಳೆ ಬೆಳಿಗ್ಗೆ ನಾನು ಕೋರ್ಟ್‍ಗೆ ಹೋಗೋ ಮೊದಲು ಬನ್ನಿ. ನಿಮಗೆ ಯಾರ ಮೇಲೆ ಅನುಮಾನವಿದೆ ಅವರ ವಿರುದ್ಧ ಕೇಸ್ ಹಾಕೋಣ"
ಕೈಚೀಲ ತಡಕಾಡಿದ ಹೆಣ್ಣು ಐದು ನೂರರ ಒಂದು ನೋಟನ್ನು ತೆಗೆದು ಗೋಪಾಲಸ್ವಾಮಿಯ ಮುಂದೆ ಹಿಡಿಯಿತು.
"ಪರ್ವಾಗಿಲ್ಲ, ಮತ್ತೆ ಕೊಡಿ" ನಿರಾಕರೆಣೆಯಿದ್ದರೂ ನೋಟನ್ನು ತೆಗೆದುಕೊಂಡ ಲಾಯರ್ ಆ ಹೆಣ್ಣನ್ನು ಬೀಳ್ಕೊಟ್ಟು ಸೀಟಿನ ಹಿಂದಕ್ಕೊರಗಿ ಕುಳಿತ. ಕೈಯಲ್ಲಿದ್ದ ನೋಟನ್ನು ದೀಪದ ಬೆಳಕಿಗೆ ಹಿಡಿದು ನೋಡಿದ. ನೋಟಿನ ಮೇಲೆ ಇಂಕ್‍ನಿಂದ ಬರೆದ ಅಕ್ಷರಗಳು ಕಾಣಿಸಿದವು.
‘ಪ್ಲೀಸ್ ಕಾಲ್’ ಜೊತೆಗೆ ಹತ್ತು ಅಂಕಿಗಳ ಒಂದು ಸಂಖ್ಯೆ!
ಗೋಪಾಲಾಸ್ವಾಮಿಯ ಮುಖದಲ್ಲಿ ಗೆಲುವಿನ ನಗುವಿತ್ತು. ಆ ಸಂಖ್ಯೆಯನ್ನು ಡಯಲಿಸಿದ. ಅತ್ತಲಿಂದ ‘ಹಲೋ’ ಅನ್ನುವ ಹೆಣ್ಣು ದನಿ ಕೇಳಿಸಿತು.
"ಹಲೋ, ಮಿಸೆಸ್ ರಾಜು ಮಾತಾಡ್ತಾ ಇದ್ದೀನಿ"
"ಎಸ್, ಶಾಂತಿರಾಜು?" ಅನುಮಾನದ ಪ್ರಶ್ನೆಯ ದನಿಯಲ್ಲಿ ನಿರಾಶೆಯೂ ಇತ್ತು.
"ಕ್ಷಮಿಸಿ, ನಾನು ಅನಘಾರಾಜು"
ಉತ್ತರ ಕೇಳಿ ತಟ್ಟನೆ ರಿಸೀವರ್ ಇಟ್ಟು ತಲೆಗೆ ಕೈ ಹಚ್ಚಿದ ಲಾಯರ್!
***
ಕೋರೆ ಕಲ್ಲಿನ ಬಂಡೆಗಳ ಮೇಲೆ ಹತ್ತಿ ಇಳಿದ ವಕೀಲ ಗೋಪಾಲಸ್ವಾಮಿಯ ಹಳೇಯ ಅಂಬಾಸಿಡರ್ ಕಾರು ದೂರಕ್ಕೆ ನೆಗೆದಂತೆ ಹಾರಿ ಒಂದು ಕಡೆಗೆ ತಟಸ್ಥವಾಯಿತು. ಕಾರಿನ ಗಾಜುಗಳವರೆಗೂ ಮುಖ ದೂಡಿ ಉದ್ಗರಿಸಿದ ಲಾಯರ್.
"ಇನ್ನು ಮುಂದಕ್ಕೆ ದಾರಿ ಕಾಣಿಸ್ತಿಲ್ಲಾ. ಇದು ಕಾರು ಓಡಾಡುವ ಮಾಮೂಲಿ ರಸ್ತೆ ಅಲ್ಲ" ಪಕ್ಕದಲ್ಲಿ ಕುಳಿತಿದ್ದ ಹೆಣ್ಣಿನತ್ತ ಅಸಹಾಯಕ ನೋಟ ಬೀರಿದ.
"ಇಲ್ಲಿಂದ ಬಂಡೆ ಇಳಿದ್ರೆ ನಾನು ಹೇಳಿರೋ ಮನೆ ಸಿಗುತ್ತೆ" ಕಾರಿನಿಂದ ಇಳಿದು ಇಳಿಜಾರಿನತ್ತ ಕೈ ತೋರಿಸಿದ ಶಾಂತಿರಾಜು ಗೋಪಾಲಸ್ವಾಮಿಯೂ ಇಳಿಯುವಂತೆ ಮಾಡಿದಳು. ಅವಳ ತೋರು ಬೆರಳುಗಳು ನಿಂತತ್ತ ದೃಷ್ಟಿ ಹಾಯಿಸಿದ. ಹಂಚು ಮಾಡಿನ ಒಂಟಿ ಮನೆ!
"ಅದು ಕೊಲೆಗಾರನ ಮನೆ ಅಂತೀರಾ?"
ವಕೀಲನ ಮಾತಿಗೆ ಹುಬ್ಬುಗಳನ್ನು ಕೂಡಿಸಿದ ಹೆಣ್ಣು ಕೈಯನ್ನು ಹಿಂದಕ್ಕೆ ಸರಿಸಿತು.
"ಹೌದು!" ಸ್ಪಷ್ಟವಾಗಿತ್ತು ಉತ್ತರ.
ಆಶ್ಚರ್ಯವಿತ್ತು ವಕೀಲನ ಮುಖದಲ್ಲಿ. ಶಾಂತಿರಾಜು ತಪ್ಪಿತಸ್ಥೆಯಂತೆ ನಾಲಗೆ ಕಚ್ಚಿಕೊಂಡು ನುಡಿದಳು.
"ಆ ವ್ಯಕ್ತೀನ ಇಲ್ಲಿ ಒಂದೆರಡು ಬಾರಿ ನೋಡಿದ್ದೆ"
ವಕೀಲ ಹೆಣ್ಣಿನತ್ತ ನೋಟ ಹರಿಸಿದ. ಅಸ್ಪಷ್ಟ ಚಿತ್ರಣವೊಂದು ಅವಳ ಮುಖದಲ್ಲಿ ಮೂಡಿ ಮರೆಯಾಗುತ್ತಿತ್ತು.
"ನಿಮಗೆ ಇಂತ ನಿರ್ಜನ ಪ್ರದೇಶದಲ್ಲಿ ಓಡಾಡೋ ಪ್ರಮೇಯವೇನಿತ್ತು?"
"ನಾನೂ ರಾಜೂ ಬೇಸರವಾದಾಗ ಈ ಕಲ್ಲಿನ ಕೋರೆಯ ಬಳಿ ಕುಳಿತು ಸಮಯ ಕಳೆಯುವುದಿತ್ತು"
ವಕೀಲನ ತಲೆಯಲ್ಲಿ ಬಿಡಿಸಲಾಗದ ಒಂದು ಸಮಸ್ಯೆಗೆ ನಿಖರವಾದ ಉತ್ತರವೊಂದು ಹೊಳೆದಂತಾಯಿತು.
"ಕ್ಷಮಿಸಿ, ನೀವು ನೆನ್ನೆ ದಿನ ಬರ್ತೀನಿಂತ ಹೇಳಿದೋರು ನಾಪತ್ತೆಯಾದ್ರಿ. ನಿಮಗೆ ಕೊಲೆಗಾರನ ಮೇಲೆ ಸಂಶಯವಿದ್ರೆ ಪೊಲೀಸ್ ಅಧಿಕಾರಿಯನ್ನು ಕಂಡು ಎಫ್.ಐ.ಆರ್‍ಗೆ ಜೀವ ಬರಿಸಬಹುದು" ವಿಷಯ ಬದಲಿಸಿದ ಗೋಪಾಲಾಸ್ವಾಮಿ.
ಶಾಂತಿರಾಜುವಿನ ಕಣ್ಣುಗಳಲ್ಲಿ ಹೊಳಪು ಮೂಡಿತು.
"ಕೊಲೆಗಾರನಿಗೆ ಶಿಕ್ಷೆ ನೀಡೋದಿಕ್ಕೆ ಸಾಧ್ಯಾನಾ?"
"ಅಧಿಕಾರಿ ಒಳ್ಳೆಯವನಾಗಿದ್ರೆ ಮತ್ತೊಮ್ಮೆ ತನಿಖೆ ಆರಂಭಿಸಬಹುದು. ಇಲ್ಲವಾದ್ರೆ..."
"ಇಲ್ಲಾಂದ್ರೆ ಏನು ಮಾಡೋಕಾಗುತ್ತೆ?"
"ತನಿಖೆ ಸರಿಯಾಗಿಲ್ಲಾಂತ ಹೇಳಿ, ನ್ಯಾಯಾಲಯದ ಅನುಮತಿ ಪಡೆದು ಮರು ತನಿಖೆ ನಡೆಸಿ ಕೊಲೆಗಾರನನ್ನು ಹಿಡಿಯಬಹುದು"
"ತನಿಖೆ ಮುಗಿದಿದೆ ಲಾಯರ್ ಸಾಹೇಬ್ರೆ. ನೀವು ಕೊಲೆಗಾರನ ಹೇಗಾದರೂ ಮಾಡಿ ಶಿಕ್ಷೆಗೆ ಗುರಿ ಪಡಿಸ್ಬೇಕು"
ಗೋಪಾಲಸ್ವಾಮಿ ಆಲೋಚನೆಗೊಳಗಾದವನು ಕಾರಿನತ್ತ ನಡೆದು ಹೇಳಿದ.
"ನೀವು ಮೊನ್ನೆ ದಿನ ಮೈಲಾರಿ ಅನ್ನೋ ವ್ಯಕ್ತಿಯ ಹೆಸರು ಹೇಳಿದ್ರಿ? ಅವನು ಯಾರು?"
ಶಾಂತಿಯ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.
"ಮೈಲಾರಿ ನನ್ನ ಗಂಡನನ್ನು ತಪ್ಪು ದಾರ್‍ಇಗೆ ಎಳೆಯುತ್ತಿದ್ದವನು. ನಿಯತ್ತಿನಿಂದ ದುಡಿಯುತ್ತಿದ್ದ ರಾಜುವನ್ನು ಕಂಡ್ರೆ ಅವನಿಗೆ ಹೊಟ್ಟೆಯುರಿ. ಯಾವಾಗಲೂ ರಾಜುನನ್ನು ಕೆಣಕ್ತಾ ಇದ್ದ. ಅದಕ್ಕೆ ಸರಿಯಾಗಿ ಆ ಹುಡುಗಿ ಕೂಡ ಎಲ್ಲೆ ಮೀರಿ ವರ್ತಿಸೋದಿಕ್ಕೆ ಪ್ರಯತ್ನಿಸುತ್ತಿದ್ಲು"
ವಕೀಲ ಬಾಗಿಲು ತೆರೆದು ಸೀಟಿನಲ್ಲಿದ್ದ ಬಟ್ಟೆಯನ್ನು ತೆಗೆದು ಮುಖ ಒರೆಸಿಕೊಂಡ. ಅಲ್ಲಿಯೇ ಪಕ್ಕದಲ್ಲಿಟ್ಟಿದ್ದ ನೀರಿನ ಬಾಟಲಿ ತೆಗೆದು ಕುಡಿದ. ಶಾಂತಿ ಕಾರಿನ ಇನ್ನೊಂದು ಪಾರ್ಶ್ವಕ್ಕೆ ನಡೆದಾಗ ನೀರಿನ ಬಾಟಲಿ ಇಟ್ಟು, ಕಾರಿನ ಎದುರಿನ ಚಕ್ರಕ್ಕೆ ತಡೆಯಾಗಿಟ್ಟಿದ್ದ ಕಲ್ಲನ್ನು ತೆಗೆದು ಕಾರಿನೊಳಗೆ ಕುಳಿತ. ಶಾಂತಿ ಮುಂದಿನ ಸೀಟನ್ನು ಆಕ್ರಮಿಸಿದಳು.
ಕಾರನ್ನು ಚಾಲನೆಗೆ ತರುವ ಮೊದಲು ವಕೀಲ ಪ್ರಶ್ನೆಯೊಂದನ್ನು ಎಸೆದ.
"ಶಾಂತಿ, ನೇರವಾಗಿ ಹೇಳ್ಬಿಡಿ. ರಾಜು ನಿಮಗೇನಾಬೇಕು?" ಶಾಂತಿ ಆಶ್ಚರ್ಯದಿಂದ ವಕೀಲನ ಮುಖವನ್ನು ನೋಡಿದಳು. ಅನಗತ್ಯ ಪ್ರಶ್ನೆ ಅನಿಸಿತು.
"ರಾಜು ನನ್ನ ಮದುವೆಯಾದೋನು. ನನ್ನ ಗಂಡಾಂತ ಈ ಮೊದ್ಲೇ ತಿಳಿಸಿದ್ದೆ. ಲಾಯರಪ್ನೋರೆ ನೀವು ಈ ರೀತಿ ಪ್ರಶ್ನೆ ಕೇಳೋದ್ರಲ್ಲಿ ಅರ್ಥವಿಲ್ಲ" ಅವಳ ಮಾತಿನಲ್ಲಿ ಅಸಹನೆ ತುಂಬಿತ್ತು.
ವಕೀಲನ ತುಟಿಗಳಲ್ಲಿ ಕಿರು ನಗೆಯೊಂದು ಸುಳಿಯಿತು.
"ಕ್ಷಮಿಸಿ, ಶಾಂತಿಯವರೆ... ಒಂದು ಅನುಮಾನದ ಎಳೆಯಿಂದಾಗಿ ಕೇಳಿದ ಪ್ರಶ್ನೆಯನ್ನೇ ಕೇಳಬೇಕಾಗಿದೆ. ದಯವಿಟ್ಟು ತಾಳ್ಮೆ ಕಳ್ಕೊಳ್ಬೇಡಿ" ಕಾರು ಸದ್ದು ಹೊರಟಿಸಿತು. ಸ್ವಲ್ಪ ಮುಂದಕ್ಕೆ ಹೊರಳಿ ಸವೆದ ಟಯರುಗಳ ಗಿರಗಿರ ಸದ್ದಿನೊಂದಿಗೆ ಹಿಮ್ಮುಖವಾಗಿ ಚಲಿಸಿ ಬಂಡೆಯ ಮೇಲೆ ಹರಿಯಿತು.
"ಅದೇನು ಕೇಳ್ತೀರೋ ನಂಗೊಂದೂ ಅರ್ಥವಾಗ್ತಾ ಇಲ್ಲ. ನನ್ನ ರಾಜುವನ್ನು ಕೊಂದವರನ್ನು ಸುಮ್ಮನೆ ಬಿಡಬಾರದು. ಅದಕ್ಕಾಗಿ ನಾನು ನಾಳೆ ನಿಮ್ಮಲ್ಲಿಗೆ ಬರ್‍ತೀನಿ. ಕೊಲೆಗಾರನ ವಿರುದ್ಧ ದಾವೆ ಹೂಡಬೇಕು"
"ಸರಿ, ಅದಕ್ಕಿಂತ ಮೊದಲು ನೀವು ಫೈಲ್ ಮಾಡಿರೋ ಎಫ್.ಐ.ಆರ್ ಸಂಖ್ಯೆ ನನಗೆ ಬೇಕಿದೆ. ಪೊಲೀಸ್ ಅಧಿಕಾರಿಯನ್ನು ಕಂಡು ಮಾತನಾಡಿ ಕಡತವನ್ನು ಹೊರ ತೆಗೆಯೋದಿದೆ"
ಕಾರಿನ ವೇಗದ ಚಲನೆಯನ್ನು ನಿರ್ಲಕ್ಷಿಸಿದ ಹೆಣ್ಣು ಪರ್ಸ್‍ನಿಂದ ರಶೀದಿಯನ್ನು ತೆಗೆದು ವಕೀಲನತ್ತ ಚಾಚಿತು.
ಅದನ್ನು ಪಡೆದುಕೊಂಡು ಒಮ್ಮೆ ಕಣ್ಣಾಡಿಸಿದ ಗೋಪಾಲಸ್ವಾಮಿ.
ಈ ಎಫ್.ಐ.ಆರ್. ಸಂಖ್ಯೆಗೂ ಅನಘಾರಾಜುವಿನ ಎಫ್.ಐ.ಆರ್.ಗೂ ತಾಳೆಯಾದರೆ ಕೊಲೆಗಾರ ಸುಲಭದಲ್ಲಿ ಸಿಕ್ಕಿಬೀಳುತ್ತಾನೆ. ಮನಸ್ಸಿನಲ್ಲಿಯೇ ಲೆಕ್ಕ ಹಾಕಿಕೊಂಡ ಗೋಪಾಲಸ್ವಾಮಿ ಶಾಂತಿಯನ್ನು ಮನೆಯ ಹತ್ತಿರ ಇಳಿಸಿ ಕಚೇರಿಯ ಕಡೆಗೆ ಕಾರನ್ನು ಓಡಿಸಿದ.
***
ಪೊಲೀಸ್ ಅಧಿಕಾರಿ ಸುಬ್ರಹ್ಮಣಿ, ಗೋಪಾಲಸ್ವಾಮಿಯನ್ನು ಆದರದಿಂದಲೇ ಒಳಗೆ ಕರೆದ. ದಫೇದಾರ್‍ನನ್ನು ಕರೆದು ಎರಡು ಲೋಟ ಚಹಾ ತರುವಂತೆ ಹೇಳಿದ.
"ಲಾಯರ್ ಸಾಹೇಬ್ರು ಬಹಳ ಅಪರೂಪವಾಗ್ಬಿಟ್ರಿ"
ಅಧಿಕಾರಿಯ ಮಾತಿಗೆ ಗೋಪಾಲಸ್ವಾಮಿ ನಕ್ಕ.
"ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದ ಮೇಲೆ ನನ್ನಂತಹ ಲಾಯರ್‍ಗಳಿಗೆ ಪೊಲೀಸ್ ಠಾಣೆ ಹತ್ತುವಂತ ಪ್ರಮೆಯವೇನಿರುತ್ತೆ ಸಾರ್..." ರಾಗವೆಳೆದ ವಕೀಲ ಗಹಗಹಿಸಿ ನಕ್ಕ.
"ಅಂದ್ರೆ... ಈಗ ನಾವು ಕರ್ತವ್ಯ ವಿಮುಖರಾಗಿದ್ದೇವೆ. ಯಾರೋ ನಿಮ್ಮ ಕ್ಲೈಂಟ್ ಹಾಗಂತ ಕಂಪ್ಲೆಂಟ್ ಕೊಟ್ಟಿದ್ದಾರೆ. ಅದಕ್ಕಾಗಿ ‘ಸಾರ್, ನಿಮ್ಮ ತನಿಖೆ ಸರಿಯಾಗಿಲ್ಲ. ಇನ್ನೊಮ್ಮೆ ಆ ಕಡತವನ್ನು ಪರಿಶೀಲಿಸಿ’ ಅನ್ನೋದಕ್ಕೆ ನೀವು ಬಂದಿರೋದು?" ನಗುತ್ತಲೇ ಅಧಿಕಾರಿ ಕೇಳಿದಾಗ ವಕೀಲನ ಮುಖದಲ್ಲಿ ಬದಲಾವಣೆ ಕಾಣಿಸಿತು.
"ನಿಮ್ಮ ಊಹೆ ಸರಿಯಾಗಿದೆ. ನಾನು ಬಂದಿರೋದು ರಾಜು ಕೊಲೆ ಕೇಸನ್ನು ವಿಚಾರಿಸುವುದಕ್ಕೆ. ಕೊಲೆಯಾದ ರಾಜುವಿನ ಹೆಂಡತಿ ಶಾಂತಿಗೆ ಯಾರ ಮೇಲೋ ಅನುಮಾನವಿದೆ. ಆ ಕಡತವನ್ನು ಮತ್ತೊಮ್ಮೆ ಹೊರ ತೆಗೆಯುವುದಕ್ಕೆ ಒತ್ತಾಯಿಸುತ್ತಿದ್ದಾಳೆ. ನನ್ನ ಕ್ಲೈಂಟ್‍ಗೆ ನ್ಯಾಯ ಸಿಗಬೇಕು ಮಿಸ್ಟರ್ ಸುಬ್ರಹ್ಮಣಿ"
ಅಧಿಕಾರಿಯ ಮುಖ ಸಂಪೂರ್ಣವಾಗಿ ಬದಲಾಯಿತು. ಮುಖದಲ್ಲಿ ಗಂಭೀರತೆ ತುಂಬಿಕೊಂಡಿತು.
"ಲಾಯರ್ ಸಾರ್, ನಿಮಗೆ ಬೇಕಾಗಿರೋದು ರಾಜುವಿನ ಕಡತ ತಾನೆ?"
ಬಿಸಿಬಿಸಿ ಚಹಾದ ಲೋಟವನ್ನು ಇಬ್ಬರ ಮುಂದೆಯೂ ಹಿಡಿದ ದಫೇದಾರ್.
"ನೋಡಿ ವೆಂಕಟ್ರಮಣ, ಮಧುಸೂದನ್‍ಗೆ ರಾಜುವಿನ ಫೈಲ್ ತರೋದಿಕ್ಕೆ ಹೇಳಿ"
ಎರಡೇ ನಿಮಿಷದಲ್ಲಿ ಸಹಾಯಕ ಅಧಿಕಾರಿ ಮಧುಸೂದನ್ ಫೈಲ್ ತಂದು ಮೇಜಿನ ಮೇಲಿರಿಸಿ ಗೋಪಾಲಸ್ವಾಮಿಯ ಕಡೆಗೆ ನೋಡಿದ.
ಫೈಲನ್ನು ಎತ್ತಿಕೊಂಡ ಅಧಿಕಾರಿ.
"ರೀ, ಮಧುಸೂದನ್... ಈ ಫೈಲ್ ಅನಘಾರಾಜುಂದು. ಇವರಿಗೆ ಬೇಕಾಗಿರೋದು ಶಾಂತಿರಾಜುವಿನ ಫೈಲ್" ಅಂದಾಗ ವಕೀಲ ಕುರ್ಚಿಯಿಂದ ಎದ್ದು ನಿಂತ.
"ಅಂದ್ರೆ, ಇಬ್ಬರು ರಾಜುಗಳ ಕೊಲೆಯಾಗಿದೆಯೇ!!?" ಉದ್ಗರಿಸಿ ಫೈಲ್‍ನತ್ತ ನೋಡಿದ.
"ಹೌದು, ಸಾರ್. ನಮ್ಗೂ ನಿಮ್ಮ ಹಾಗೇ ಆಶ್ಚರ್ಯವಾಗಿತ್ತು. ಒಂದೇ ದಿವಸ ಒಂದೇ ಹೆಸರಿನ ಇಬ್ಬರ ಕೊಲೆ. ಅದೂ ಒಂದೇ ಠಾಣಾ ವ್ಯಾಪ್ತಿಯಲ್ಲಿ"
"ಸಾರ್, ನಾನು ಇಬ್ಬರ ಫೈಲ್‍ಗಳನ್ನು ಪರಿಶೀಲಿಸಬಹುದೆ?"
ಕ್ಷಣ ಹೊತ್ತು ಆಲೋಚಿಸಿದ ಅಧಿಕಾರಿ ಕಡತವನ್ನು ಗೋಪಾಲಸ್ವಾಮಿಯ ಮುಂದೆ ಹಿಡಿದ. ಸಹಾಯಕ ಅಧಿಕಾರಿ ಇನ್ನೊಂದು ಕಡತವನ್ನು ತಂದು ಮೇಜಿನ ಮೇಲೆ ಇಟ್ಟ. ಬಳಿಕ ಎರಡು ಫೈಲುಗಳನ್ನು ಪರಿಶೀಲಿಸಿದ ವಕೀಲ ಒಂದು ನಿರ್ಧಾರಕ್ಕೆ ಬಂದ.
***
ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಒಂದೇ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದಾರೆ. ಅದೂ ಇಬ್ಬರ ಕೊಲೆಯೂ ಒಂದೆ ಮಾದರಿಯಾಗಿದೆ. ಸೋಫಾದಲ್ಲಿ ಕುಳಿತಂತೆ! ಗಾಯಗಳಿಲ್ಲದೆ!! ರಕ್ತದ ಕಲೆಗಳಿಲ್ಲದೆ!!! ಇಬ್ಬರದ್ದೂ ಕೊಲೆಯೇ ಆಗಿದ್ದರೆ ಆ ಇಬ್ಬರನ್ನು ಕೊಂದವನು ಒಬ್ಬನೇ!!!!...
ಲೇಖನಿ ಮತ್ತು ಬಿಳಿಯ ಹಾಳೆಯನ್ನು ತೆಗೆದುಕೊಂಡ ವಕೀಲ ಮುಖ್ಯವಾದ ವಿಷಯಗಳನ್ನು ಗುರುತಿಸಿಕೊಂಡ. ತನ್ನ ಬಳಿಯಿದ್ದ ಅನಘಾಳ ಸಂಖ್ಯೆಗೆ ಕರೆ ಮಾಡಿದ.
"ಹೌದು, ಸುಳಿವು ದೊರಕಿದೆ. ಇವತ್ತೇ ಬರಬೇಕು" ವಕೀಲನ ಮಾತಿನಲ್ಲಿ ಆತುರವಿರುವುದನ್ನು ಗಮನಿಸಿದ ಅನಘಾ ನಿಂತ ಮೆಟ್ಟಿಗೆ ಆಫೀಸಿಗೆ ಬಂದಾಗ ವಕೀಲ ಸ್ವಾಗತಿಸಿದ.
"ಮಿಸೆಸ್ ರಾಜುರವರೇ, ನನ್ಗೆ ನೀವು ಕೊಟ್ಟಿರೋ ಐದು ನೂರರ ನೋಟು ಎಲ್ಲಿಂದ ಸಂಪಾದಿಸಿದಿರಿ?" ಏದುಸಿರು ಬಿಡುತ್ತಿದ್ದವಳನ್ನು ಕೇಳಿದ.
ಕೊಲೆಯ ವಿಚಾರ ಮಾಡುತ್ತಾನೆಂದು ತಿಳಿದವಳಿಗೆ ತೀವ್ರ ನಿರಾಶೆಯಾಯಿತು.
"ಅದು ನಕಲಿ ನೋಟಲ್ಲಾಂತ ಭಾವಿಸ್ತೀನಿ"
"ಅದು ಅಸಲಿ ನೋಟೇ. ಆದ್ರೆ ಅದು ನಿಮ್ಮ ಕೈಗೆ ಹೇಗೆ ಬಂತು?" ಮಾರ್ಮಿಕವಾಗಿತ್ತು ಪ್ರಶ್ನೆ.
"ರಾಜು ಸತ್ತ ದಿವಸ ಅವನ ಅಂಗಿಯ ಜೇಬಿನಲ್ಲಿತ್ತು"
"ಪೊಲೀಸರು ತನಿಖೆ ನಡೆಸುವ ಮೊದಲೇ ಅದನ್ನು ತೆಗೆದುಕೊಂಡ್ರಾ?"
ಅನಘಾಳ ಮುಖದಲ್ಲಿ ಭೀತಿ ಕಾಣಿಸಿತು. ಕಣ್ಣುಗಳನ್ನು ಅಗಲಕ್ಕೆ ತೆರೆದು ತಲೆಗೆ ಕೈ ಹಚ್ಚಿಕೊಂಡು ಜ್ಞಾಪಿಸಿಕೊಂಡಳು.
"ಆ ನೋಟು ಜೇಬಿನಿಂದ ಹೊರಗೆ ಬೀಳುವಂತೆ ಇತ್ತು. ಅದಕ್ಕೆ ಅದನ್ನು ತೆಗೆದುಕೊಂಡೆ"
"ನೀವು ಅದನ್ನು ಗಮನಿಸಿದ್ರಾ?"
"ಯಾವುದನ್ನು?" ಮುಗ್ಧತೆಯಿತ್ತು ಪ್ರಶ್ನೆಯಲ್ಲಿ.
"ಆ ಐದು ನೂರರ ನೋಟನ್ನು"
ಇಲ್ಲವೆನ್ನುವಂತೆ ತಲೆಯಲುಗಿಸಿದವಳು ಅನುಮಾನದಿಂದ ವಕೀಲನ ಮುಖವನ್ನೇ ನೋಡುತ್ತಿದ್ದಳು.
"ಆ ನೋಟಿನ ಮೇಲೆ ನಿಮ್ಮ ಮೊಬೈಲ್ ಫೋನ್‍ನ ಸಂಖ್ಯೆ ಇದೆ" ಅದ್ಭುತವೆನ್ನುವಂತೆ ಹುಬ್ಬೇರಿಸಿದಳು.
"ನನ್ನ ಬಳಿ ಇರೋದು ರಾಜುನ ಮೊಬೈಲ್. ನಾನು ಆ ನೋಟನ್ನು ಅಷ್ಟಾಗಿ ಗಮನಿಸ್ಲಿಲ್ಲ"
"ಸರಿ, ಮುಚ್ಚಿ ಹೋಗಿರೋ ತನಿಖೆಯನ್ನು ಜೀವಗೊಳುಸುವುದಕ್ಕೆ ಕೋರ್ಟ್‍ಗೆ ಮನವಿ ಸಲ್ಲಿಸಿದ್ದೀನಿ. ಇನ್ನೇನು ಎರಡು ಮೂರು ದಿನಗಳೊಳಗೆ ಅನುಮತಿ ದೊರಕುತ್ತೆ. ಕೂಡಲೇ ಮರು ತನಿಖೆ ನಡೆಸೋಣ. ಈಗ ನೀವು ನನ್ನ ಜೊತೆಗೆ ಬನ್ನಿ. ಈ ಕೇಸ್‍ಗೆ ಸಂಬಂಧ ಪಟ್ಟ ಇನ್ನೊಬ್ಬ ವ್ಯಕ್ತಿಯನ್ನು ಭೇಟಿ ಮಾಡಿಸುವುದಿದೆ"
ಫೋನ್ ತಿರುವಿ ಯಾರೊಂದಿಗೊ ಮಾತನಾಡಿದ ವಕೀಲ. ಇಬ್ಬರೂ ಕೆಳಗೆ ಬರುವಾಗ ಅವನ ಅಂಬಾಸಿಡರ್ ಕಾರು ಹಲ್ಲು ಕಿರಿಯುತ್ತಾ ನಿಂತಿತ್ತು.
***
ಹಜಾರಕ್ಕೆ ಹಾಸಿದ ಕೆಂಪು ಜಮಖಾನೆಯ ಮೇಲೆ ಮೃದು ಹೆಜ್ಜೆಗಳನ್ನು ಹಾಕುತ್ತಾ ಒಳಗೆ ಬಂದವರನ್ನು ಕಂಡು ಶಾಂತಿಗೆ ಆಶ್ಚರ್ಯವಾಯಿತು. ವಕೀಲನ ಜೊತೆಗೆ ಹರೆಯದ ಹೆಣ್ಣನ್ನು ನಿರೀಕ್ಷಿಸಿರಲಿಲ್ಲ.
"ಬನ್ನಿ ಲಾಯರ್ ಸಾಹೇಬ್ರೆ, ಕುಳಿತಿರಿ. ಈಕೆ...?" ಅನಘಾಳತ್ತ ಅಪರಿಚಿತ ನೋಟ ಹರಿಸಿದಾಗ ವಕೀಲ ಚುಟುಕಾಗಿ ಪರಿಚಯಿಸಿದ.
ಅನಘಾ ಗೋಪಾಲಸ್ವಾಮಿಯ ಪಕ್ಕದಲ್ಲಿಯೇ ಕುಳಿತಳು.
ಎರಡು ಲೋಟಗಳಲ್ಲಿ ಕಿತ್ತಳೆಯ ಹಣ್ಣಿನ ರಸವನ್ನು ತಂದು ಇಬ್ಬರತ್ತಲೂ ಹಿಡಿದಳು. ಏಕಾಏಕಿ ಛಾವಣಿಯಲ್ಲಿ ತಿರುಗುತ್ತಿದ್ದ ಫ್ಯಾನ್ ನಿಂತಿತು! ಶಾಂತಿಯ ಕಣ್ಣುಗಳಲ್ಲಿ ನಿರಾಶೆ ಸುಳಿಯಿತು.
"ಕರೆಂಟ್ ಹೋಯ್ತು. ಕುಳಿತಿರಿ ಬಂದೆ..." ಆತುರಾತುರವಾಗಿ ಒಳಗೆ ನಡೆದವಳು ಧಾವಿಸುತ್ತಲೇ ಹೊರಗೆ ಬಂದು ಅನಘಾಳ ಮೇಲೆರಗಿದಳು!
ಅನಿರೀಕ್ಷಿತ ದಾಳಿಯಿಂದ ತತ್ತರಿಸಿದ ಅನಘಾ ವಕೀಲನ ಕಡೆಗೆ ವಾಲಿದಳು. ವಕೀಲ ಮಿಂಚಿನ ವೇಗದಲ್ಲಿ ಶಾಂತಿಯನ್ನು ಹಿಂದಕ್ಕೆ ತಳ್ಳಿದ! ಶಾಂತಿಯ ಕೈಯಲ್ಲಿ ಮಿರಿಮಿರಿ ಮಿಂಚುವ ಚೂರಿ ಇತ್ತು!
"ಶಾಂತಿ, ಹಾಗೆ ಇರು. ಮೇಲಕ್ಕೆದ್ರೆ ಶೂಟ್ ಮಾಡ್ತೀನಿ" ಲಾಯರ್‍ನ ಕೈಯಲ್ಲಿ ರಿವಾಲ್ವರ್ ಇತ್ತು.
ಶಾಂತಿ ಅಸಹಾಯಕತೆಯಿಂದ ನೆಲದ ಮೇಲೆಯೇ ಇದ್ದಳು.
"ನಿನ್ನ ಪ್ಲಾನೆಲ್ಲಾ ನಂಗೆ ಗೊತ್ತಾಗಿಯೇ ಅನಘಾನ ಇಲ್ಲಿಗೆ ಕರ್ಕೊಂಡು ಬಂದೆ. ಅನಘಾಳ ಗಂಡ ರಾಜುಗೆ ‘ಮೈಲಾರಿ’ ಅನ್ನೊ ಹೆಸರು ಕೊಟ್ಟು ಅವನನ್ನು ನಿನ್ನ ಗಂಡನನ್ನು ತಪ್ಪು ದಾರಿಗೆ ಏಳೆಯುತ್ತಿದ್ದಾನೆಂತ ಸಾಯಿಸ್ದೆ"
ವಕೀಲನ ಮಾತು ಕೇಳಿ ಅನಘಾ ಆಶ್ಚರ್ಯ ತೋರಿಸಿದಳು.
"ನಿನ್ನ ಗಂಡ ರಾಜು, ಸಿದ್ದ ಉಡುಪುಗಳನ್ನು ತಯಾರಿಸೋ ಉದ್ಯಮ ಮಾಡ್ತಾ ಇದ್ದ. ಅಲ್ಲಿರೋ ಬಡ ಹುಡುಗಿಯರ ಮೇಲೆ ಸಣ್ಣತನ ತೋರಿಸ್ತಿದ್ದ. ಅಲ್ಲಿ ಕೆಲಸ ಮಾಡುತ್ತಿದ್ದ ಅನಘಾಳ ಗಂಡ ರಾಜು ಬುದ್ಧಿವಾದ ಹೇಳಿದ್ರೆ ಅವನನ್ನೇ ಕೆಟ್ಟವನನ್ನಾಗಿ ಚಿತ್ರಿಸಿದ. ಪದೇ ಪದೇ ಅನಘಾನ ಮನೆಗೆ ಹೋಗ್ತಿದ್ದ. ನಿನ್ನ ಗಂಡನ ಮೇಲೆ ಅನುಮಾನ ಬಂದು ಒಂದು ದಿವಸ ಹಿಂಬಾಲಿಸ್ದೆ ನೀನು. ಆ ದಿನ ದುರಾದೃಷ್ಟವಶಾತ್ ಅನಘಾ ಒಬ್ಳೇ ಮನೆಯಲ್ಲಿದ್ಲು. ನೀನು ಅಪಾರ್ಥ ಮಾಡ್ಕೊಂಡೆ"
"ಇಲ್ಲ, ರಾಜೂನ ಅಲ್ಲಿಂದ ಕೆಲಸ ಬಿಡಿಸ್ದೆ ನಾನು. ಆದ್ರೂ ಮಾಲೀಕ ಆಗಾಗ್ಗೆ ನಮ್ಮ ಮನೆಗೆ ಬಂದು ಬೆದರಿಕೆ ಹಾಕ್ತಿದ್ದ. ನನ್ನ ಕೆಟ್ಟದಾಗಿ ನೋಡ್ತಿದ್ದ" ಅನಘಾ ಅಲ್ಲಿಯವರೆಗೂ ಮುಚ್ಚಿಟ್ಟಿದ್ದ ವಿಷಯವನ್ನು ತೆರೆದಳು.
"ಆ ದಿನ ಕೊಲೆಗಾರನನ್ನ ಹುಡುಕಿಕೊಂಡು ನಿಮ್ಮ ಮನೆ ಹತ್ತಿರ ಬಂದಿದ್ದೆವು. ಆನಂತರ ನಾನೇ ಖುದ್ದಾಗಿ ಶಾಂತಿಯವರನ್ನು ಹುಡುಕಿಕೊಂಡು ಬಂದೆ. ಆ ಸಮಯದಲ್ಲಿ ಶಾಂತಿಯವರು ಮನೆಯಲ್ಲಿರಲಿಲ್ಲ. ಆದರೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಒಳಗೆ ಬಂದೆ. ಅವರ ಫ್ಯಾಕ್ಟರಿಯ ವಿದ್ಯುತ್ ಕೆಲಸಗಾರ ಮುರಾರಿ ಕೆಲಸ ಮಾಡ್ತಿದ್ದ. ಅವನಿಂದ ಒಂದು ಮುಖ್ಯ ಕುರುಹು ದೊರಕಿತು"
ಶಾಂತಿರಾಜು ಮೆಲ್ಲಗೆ ಎದ್ದು ಕುಳಿತಾಗ ವಕೀಲ ಎಚ್ಚರಿಸಿದ.
"ಈಗೆ ನಿನ್ನ ಗಂಡನ್ನ ತನ್ನ ಮನೆಗೆ ಆಹ್ವಾನಿಸಿದ್ಲು. ಆದರೆ ನಿನ್ನ ಗಂಡ ಇಲ್ಲಿಗೆ ಬರೋ ಮೊದ್ಲೇ ಅವಳ ಗಂಡನೇ ಮನೆಗೆ ಬಂದ. ಟೀವಿ ಹಾಕಿಕೊಂಡು ಸೋಫಾದಲ್ಲಿ ಕುಳಿತವನು ಹಾಗೇ ಕೊಲೆಯಾಗ್ಬಿಟ್ಟ. ಆ ಸಮಯದಲ್ಲಿ ಶಾಂತಿ ಮನೆಯಲ್ಲಿರಲಿಲ್ಲ. ಅವಳಿಗೆ ಫ್ಯಾಕ್ಟರಿಯಿಂದ ತುರ್ತು ಕರೆ ಬಂದಿತ್ತು"
"ಅರ್ಥವಾಗ್ಲಿಲ್ಲ" ಅನಘಾಳ ಮುಖದಲ್ಲಿ ಗೊಂದಲವಿತ್ತು.
"ಅಂದ್ರೆ, ನಾವು ಕೂತಿರೋ ಸೋಫಾಕ್ಕೊಂದು ವಿಶೇಷತೆಯಿದೆ"
ಅನಘಾಳ ದೃಷ್ಟಿ ಸೋಫಾದತ್ತ ಸರಿಯಿತು. ಶಾಂತಿ ತಲೆ ತಗ್ಗಿಸಿ ಕುಳಿತಿದ್ದಳು.
"ನಿಮಗೆ ಅದನ್ನ ಸ್ಪಷ್ಟ ಪಡಿಸ್ತೇನೆ" ಕೈಯಲ್ಲಿದ್ದ ಫ್ಯೂಸ್‍ನ ಕಟೌಟನ್ನು ಕೈಯಲ್ಲಿ ಹಿಡಿದು ತೋರಿಸಿದ ವಕೀಲ ಹೊರಗೆ ನಿಂತಿದ್ದ ಮುರಾರ್‍ಇಯನ್ನು ಕರೆದ.
"ಇವನೇ ಇಲೆಕ್ಟ್ರೀಶನ್ ಮುರಾರ್‍ಇ. ಈ ಕಬ್ಬಿಣದ ಅಂಚಿರೋ ಸೋಫಾಕ್ಕೆ ವಿದ್ಯುತ್ ಹರಿಯೋ ಹಾಗೇ ಮಾಡಿರೋನು. ಛಾವಣಿಯ ಫ್ಯಾನ್‍ಗೂ ಈ ಸೋಫಾಕ್ಕೆ ಹರಿಯೋ ವಿದ್ಯುತ್‍ಗೂ ಒಂದೇ ಸ್ವಿಚ್"
ಅನಘಾ ಗೋಡೆಯತ್ತ ದೃಷ್ಟಿ ಹಾಯಿಸಿದಾಗ ವಕೀಲ ಮುಂದುವರಿಸಿದ.
"ಆ ದಿನ ಗುಂಡಿ ಹಾಕಿ ನಿನ್ನ ಗಂಡನನ್ನ ಕರೆದು ಸೋಫಾದಲ್ಲಿ ಕುಳ್ಳಿರಿಸೋ ಪ್ಲಾನ್ ಮಾಡಿದ್ಲು ಶಾಂತಿ. ಆದ್ರೆ ಆ ಸೋಫಾದಲ್ಲಿ ಅವಳ ಗಂಡನೇ ಕುಳಿತ. ಅದರಲ್ಲಿ ಹರಿಯೋ ವಿದ್ಯುತ್‍ನ ಆಘಾತಕ್ಕೆ ಸಿಲುಕಿ ಸತ್ತ. ಈ ವಿಷಯ ಪೊಲೀಸ್ನೋರಿಗೂ ಗೊತ್ತಾಗ್ಲಿಲ್ಲ. ಶವಪರೀಕ್ಷೆ ವರದಿಯಲ್ಲಿ ವಿದ್ಯುತ್ ಆಘಾತದಿಂದ ಸಾವು ಸಂಭವಿಸಿದೆ ಅಂದ್ರೂ ಯಾರಿಗೂ ನಂಬೋಕೆ ಆಗ್ಲಿಲ್ಲ. ಪೊಲೀಸರಿಗೆ ಹಣ ಕೊಟ್ಟು ಕೇಸನ್ನು ಅಲ್ಲಿಯೇ ಮುಚ್ಚಿ ಹಾಕಿದ್ಲು ಶಾಂತಿ. ಆದ್ರೆ ಮುರಾರ್‍ಇ ಈಗ ಅವಳನ್ನೇ ಬ್ಲಾಕ್ ಮೇಲ್ ಮಾಡ್ತಿದ್ದಾನೆ. ಅದಕ್ಕೆ ಮುಚ್ಚಿ ಹೋಗಿರೋ ಕಡತವನ್ನು ತೆರೆಯೋದಿಕ್ಕೆ ನನ್ನ ಸಹಾಯ ಯಾಚಿಸಿ ಬಂದಿದ್ಲು. ಇದೆಲ್ಲಾ ಗೊತ್ತಾಗಿದ್ದು ಇಬ್ಬರ ಫೈಲ್‍ಗಳನ್ನು ಪರಿಶೀಲಿಸಿದ ನಂತರ"
"ಅಂದ್ರೆ, ನನ್ನ ಗಂಡ ಕೂಡಾ ಸತ್ತಿರೋದು...!"
"ಇಲ್ಲ ಅನಘಾರವರೆ, ನಿಮ್ಮ ಗಂಡ ಸತ್ತಿರೋದು ವಿದ್ಯುದಾಘಾತದಿಂದಲ್ಲ. ಅವರನ್ನು ಉಸಿರುಗಟ್ಟಿಸಿ ಸಾಯಿಸಿರೋದು. ಸೋಫಾದಲ್ಲಿ ಕುಳಿತಿದ್ದಂತೆ ರಾಜುನ ಪ್ರಾಣ ಹೋಗಿಲ್ಲ. ಅವನನ್ನು ಸಾಯಿಸಿ ಸೋಫಾದಲ್ಲಿ ಕುಳ್ಳಿರಿಸಿದ್ದು. ಸರಿಯಾಗಿ ಗಮನಿಸಿದ್ರೆ ನಿಮ್ಗೆ ಗೊತ್ತಾಗ್ತಿತ್ತು. ರಾಜೂನ ದೇಹ ವಾಲಿದಂತೆ ಸೋಫಾದಲ್ಲಿತ್ತು. ಕಾಲುಗಳು ಉದ್ದಕ್ಕೆ ಚಾಚಿದಂತೆ ಇತ್ತು. ಸತ್ತ ಮೇಲೆ ಸೋಫಾದಲ್ಲಿ ಅವನನ್ನು ಕುಳ್ಳಿರಿಸೋದಿಕ್ಕೆ ಶಾಂತಿ ತುಂಬಾ ಹೆಣಗಾಡಿದ್ಲು. ಈ ವಿಷಯನೂ ಫೈಲ್‍ನಲ್ಲಿ ಸ್ಪಷ್ಟವಾಗಿತ್ತು"
"ನೀವು ಹೇಳಿದ್ರಲ್ಲಾ... ಈ ಎರಡು ಕೊಲೆಯೂ ಒಂದೇ ಮಾದರಿಯಾಗಿದೇಂತ. ಪೋಲಿಸ್ ಕೂಡ ಯಾಕೆ ಈ ನಿರ್ಧಾರಕ್ಕೆ ಬಂದ್ರು?" ಅನಘಾರಾಜುವಿನ ಪ್ರಶ್ನೆಯಲ್ಲಿ ಸಂಶಯವಿತ್ತು.
"ಅಂದ್ರೆ, ಎರಡು ಕೊಲೆನೂ ಮೇಲ್ನೋಟಕ್ಕೆ ಒಂದೇ ಮಾದರಿಯಾಗಿತ್ತು. ಅದಕ್ಕಾಗಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿತ್ತು ಈ ಕೊಲೆ ಕೇಸ್‍ಗಳು"
ಮುರಾರ್‍ಇ ಕೂಡ ತಪ್ಪಿತಸ್ಥನಂತೆ ನಿಂತಿದ್ದ.
"ಮುರಾರ್‍ಇ, ನೀನೂ ಕೂಡ ಈ ಕೊಲೆ ಕೇಸ್‍ನಲ್ಲಿ ಶಾಮೀಲಾಗಿದ್ದೀಂತನೇ ಆಗುತ್ತೆ. ಅನಘಾರವರೇ ಆ ದಿನ ನೀವು ಕೊಟ್ಟ ನೋಟ್‍ನಲ್ಲಿ ಫೋನ್ ನಂಬರಿತ್ತಲ್ಲ... ಅದು ಶಾಂತಿಯವರೆ ಬರೆದಿರೋದು. ನಿಮಗೆ ಆಶ್ಚರ್ಯವಾಗುತ್ತಲ್ಲಾ? ಅದು ಹೇಗಾಯ್ತೂಂದ್ರೆ... ಆ ದಿನ ನಿಮ್ಮ ಗಂಡನಿಗೆ ಮನೆಗೆ ಫೋನ್ ಮಾಡಿ ಅವರ ಮೊಬೈಲ್ ನಂಬರು ಕೇಳಿದ್ರು. ಆ ಸಮಯದಲ್ಲಿ ತನ್ನ ಕೈಯಲ್ಲಿದ್ದ ನೋಟ್ ಮೇಲೆ ನಿಮ್ಮ ಗಂಡನ ಮೊಬೈಲ್ ನಂಬರ್ ಬರೆದು, ಸುಮಾರು ಸಂಜೆ ಆರು ಗಂಟೆ ಹೊತ್ತಿಗೆ ನೀವು ಹೊರಗೆ ಹೋದ ಸಮಯದಲ್ಲಿ ನಿಮ್ಮ ಮನೆಗೆ ಬಂದ ಶಾಂತಿ ನಿಮ್ಮ ಗಂಡನ್ನ ವಿಚಾರಿಸಿದ್ಲು. ನನ್ನ ಕೈಯಲ್ಲಿ ದುಡ್ಡಿಲ್ಲ ಅದಕ್ಕೆ ಬರ್‍ಲಿಲ್ಲಾಂತ ನಿಮ್ಮ ಗಂಡ ಸುಳ್ಳು ಸಬೂಬು ನೀಡ್ದಾಗ ತನ್ನ ಬಳಿಯಿದ್ದ ಆ ನೋಟನ್ನೇ ನಿಮ್ಮ ಗಂಡನ ಜೇಬಿಗೆ ಸೇರಿಸಿದೋಳು ಇವಳೆ. ಆಗ ನಿಮ್ಮ ಗಂಡ ರಾಜು ತಾನು ಮನೆಗ ಬರೋದಿಕ್ಕೆ ಸಾಧ್ಯವಿಲ್ಲಾಂತ ಕಡಾಖಂಡಿತವಾಗಿ ಹೇಳಿದ ಮೇಲೆ ಬೇರೆ ದಾರಿ ಕಾಣದೆ ಅವರನ್ನು ಸಾಯಿಸಿದ್ಲು"
ಅನಘಾ ಮುಖದ ಮೇಲೆ ಮೂಡಿದ ಬೆವರ ಹನಿಗಳನ್ನು ಒರೆಸಿಕೊಂಡು ಶಾಂತಿಯತ್ತ ಭಯದ ನೋಟ ಬೀರಿದಳು.
ಆ ಹೊತ್ತಿಗೆ ಹೊರಗೆ ಪೊಲೀಸ್ ಜೀಪು ಬಂದು ನಿಂತ ಸದ್ದಾಯಿತು.
Subscribe to:
Post Comments (Atom)
No comments:
Post a Comment