Monday, November 24, 2008

ನಾಡ ಕೋವಿ


ಸೀರೆಯ ನೆರಿಗೆಯನ್ನು ಎತ್ತಿ ಹಿಡಿದು ಎರಡೆರಡು ಮೆಟ್ಟಿಲುಗಳನ್ನು ಹಾರಿ ಬಂದು ಏದುಸಿರು ಬಿಡುತ್ತಾ ಕೋಣೆಯ ಬಾಗಿಲನ್ನು ಟಪಾರನೆ ಸರಿಸಿ ಒಳ ಬಂದಳು ಬೆದರಿದ ಹುಲ್ಲೆ ಅಲಕಾ. ಏನು ಮಾಡಬೇಕೆಂದು ತೋಚದೆ ಸ್ನಾನದ ಕೋಣೆಗೆ ನುಗ್ಗಿ ಕನ್ನಡಿ ನೋಡಿಕೊಂಡಳು. ಮೈಯೆಲ್ಲಾ ರಕ್ತ! ಉಟ್ಟ ಬಟ್ಟೆಯನ್ನು ತೋಯಿಸಿದೆ! ಹನಿ ನೀರಿಗೆ ಮೈಯೊಡ್ಡಿದಳು. ಎಷ್ಟೋ ಸಮಯದ ನಂತರ ಉದ್ವೇಗ ಕಡಿಮೆಯಾಗಿ ಮನಸ್ಸು ಸ್ಥಿಮಿತೆಗೆ ಬಂತು. ಮೈ ಒರಸಿ ಹೊರ ಬಂದಾಗ ಇನ್ನೂ ಎಚ್ಚರವಾಗಿಲ್ಲದೆ ಮಲಗೇ ಇದ್ದಳು ವೈಯಾರಿ ನಿಲೀಮಾ!"ಎಷ್ಟೇ ಹೊತ್ತು ಅದು. ಹೊತ್ತು ಗೊತ್ತು ಇಲ್ಲದ ಕೆಲಸ. ಇನ್ನು ಮುಂದೆ ನಿನ್ನ ಬಾಸಿಗೆ ಸರಿಯಾಗಿ ಹೇಳ್ಬಿಡು. ಸಂಜೆ ಆರರ ನಂತರ ಕೆಲಸ ಮಾಡೋದಿಲ್ಲಾಂತ" ವೈಯಾರಿ ನಿದ್ದೆ ಕಣ್ಣಿನಲ್ಲೆ ಹೇಳಿದಳು.
ಅಲಕಾ ಒಮ್ಮೆಲೆ ವೈಯಾರಿಯ ಮಾತಿಗೆ ಬೆಚ್ಚಿ ಬಿದ್ದು ಸಾವರಿಸಿಕೊಂಡಳು. ಏನೋ ವಸ್ತುಗಳಿಗಾಗಿ ವಾರ್ಡ್ ರೋಬ್, ಮೇಜುಗಳನ್ನು ತಡಕಾಡಿದಳು. ತೂಗು ಹಾಕಿದ ಗಾಳಿ ಚೀಲದಲ್ಲಿ ಬೇಕಿದ್ದ ವಸ್ತುಗಳು ದೊರೆತಾಗ ತಟಕ್ಕನೆ ಬಾಗಿಲು ತೆರೆದು ಹೊರ ಬಂದಳು. ವೈಯಾರಿ ನಿದ್ದೆ ಮಂಪರಿನಲ್ಲಿ ಹೊರಳಿ,"ಅಲಕಾ ಆ ವ್ಯಕ್ತಿ..." ಅಂದಳು. ಉತ್ತರವಿಲ್ಲ!ಬೆದರಿದ ಹುಲ್ಲೆ ಮೆಟ್ಟಲಿಳಿದು ಕಾರ್ ಶೆಡ್ಡಿನ ಬಳಿ ಬಂದಳು. ಶೆಡ್ಡಿನ ಬಾಗಿಲು ಕಿರ್ ಸದ್ದಿನೊಂದಿಗೆ ತೆರೆದಾಗ ಉಸಿರು ಬಿಗಿ ಹಿಡಿದು, ಗೋಡೆಗೆ ಅಂಟಿದಂತೆ ನಿಂತಳು. ಯಾರು ಇಲ್ಲದನ್ನು ಗಮನಿಸಿ ಒಳ ಸರಿದು ಬಾಗಿಲು ಸರಿಸಿದಳು. ಹಳೇ ಕಾಲದ ಫೋರ್ಡ್ ಕಾರು ಧೂಳು ತುಂಬಿ ಮಲಗಿತ್ತು. ಬಾನೆಟ್ ಮೇಲೆ ಮಲಗಿಸಿದ್ದ ವ್ಯಕ್ತಿಯ ಮೂಗಿನ ಬಳಿ ಕೈ ಹಿಡಿದಳು. ಇನ್ನೂ ಉಸಿರಾಟವಿದೆ! ತುಂಬು ತೋಳಿನ ಅಂಗಿಯ ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ನೋಡಿದಳು. ರಕ್ತ ಇನ್ನೂ ಜಿನುಗುತಿತ್ತು. ಟಾರ್ಚ್ ಬೆಳಕಿನಲ್ಲಿ ಗಾಯವನ್ನು ನೋಡಿದಳು. ಗುಂಡೇಟಿನಿಂದ ಆದ ಗಾಯ! ಸಧ್ಯ ಅಪಾಯದಿಂದ ಪಾರಾಗಿದ್ದಾನೆ. ನಿಟ್ಟುಸಿರಿಟ್ಟಳು ಅಲಕಾ. ಗಾಯವನ್ನು ಒರಸಿ ಮುಲಾಮು ಹಚ್ಚಿ ಎದೆಯ ಸುತ್ತಾ ಬಟ್ಟೆಯನ್ನು ಬಿಗಿಯಾಗಿ ಕಟ್ಟಿದಳು.ಆತ ಮೆಲ್ಲನೆ ಮುಲುಗಿದ!
"ನಾಡಕೋವಿ.....""ನಾಡ ಕೋವಿ??!!!" ಅಲಕಾ ಬೆಚ್ಚಿದಳು! ನಾಡಕೋವಿಯಿಂದ ಗುಂಡು ಹಾರಿರಬೇಕು! ಹಣೆಗೆ ಕೈ ಹಚ್ಚಿ ನೋಡಿದಳು. ಸುಡುತ್ತಿತ್ತು. ಮಾತ್ರೆಯನ್ನು ಪುಡಿಮಾಡಿ ಅವನ ಬಾಯಿಗೆ ಸುರಿದಳು. ನೋವಿನಿಂದ ಮುಖ ಕಿವುಚಿ ತಲೆ ಹೊರಳಿಸಿ ಮುಲುಗಿದ. ಗೇಟಿನ ಬಳಿ ಸದ್ದಾದಂತಾಗಿ ಕಿವಿ ನಿಮಿರಿಸಿ ಉಸಿರು ಬಿಗಿ ಹಿಡಿದಳು ಅಲಕಾ. ಬಾನೆಟ್ ಮೇಲಿದ್ದ ವ್ಯಕ್ತಿ ಕೊಸರಿಕೊಂಡ. ಅವನ ಬಾಯಿಗೆ ಕೈ ಅಡ್ಡ ಹಿಡಿದಳು. ಸದ್ದು ಮರೆಯಾದಾಗ ಶೆಡ್ಡಿನ ಬಾಗಿಲು ತೆರೆದು ಇಣುಕಿದಳು. ಯಾರು ಇಲ್ಲದನ್ನು ಗಮನಿಸಿಕೊಂಡು ದಡ ದಡನೆ ಮೆಟ್ಟಿಲೇರಿ ಹೋಗಿ ಬಾಗಿಲು ತೆರೆದು ನೋಡಿದಳು. ವೈಯಾರಿಯ ಬೆಡ್ ಖಾಲಿಯಾಗಿತ್ತು! ಅದೇ ವೇಗದಲ್ಲಿ ಕೆಳಗಿಳಿದು ಬಂದಳು. ವಾಹನವೊಂದು ಸರಿದು ಹೋದ ಸದ್ದು! ಅನುಮಾನ ಬಂದು ಶೆಡ್ಡಿನ ಬಾಗಿಲು ತೆರೆದಳು. ಬಾನೆಟ್ ಮೇಲಿದ್ದ ವ್ಯಕ್ತಿ ಮಾಯವಾಗಿದ್ದ! ಬೆದರಿದಳು ಹುಲ್ಲೆ!ವೈಯಾರಿಯ ಬಗ್ಗೆ ಅನುಮಾನ ಬಂದು ಮತ್ತೆ ದಡ ಬಡನೆ ಮೆಟ್ಟಿಲೇರಿ ಬಂದಳು. ಬಾಗಿಲು ತೆರೆದಾಗ ನಿಲೀಮಾ ಬೆಡ್ ಮೇಲೆ ಬೋರಲಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದಳು! ಹಾಗಾದರೆ ವಾಹನದಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಹೋದವರು ಯಾರು?!! ತಲೆಗೆ ಕೈ ಹಚ್ಚಿ ಕುಳಿತಳು ಅಲಕಾ.***ಕಾಫಿ ತೋಟದ ಮಧ್ಯೆ ಹಾವಿನಂತೆ ಮಲಗಿದ್ದ ರಸ್ತೆಯಲ್ಲಿ ಜೀಪು ಓಡಿಸುತ್ತಿದ್ದ ಚೆಲುವ ಮೋಹನ ಚಂದ್ರ. ಕಬ್ಬಿಣದ ಸರಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಚೆಲುವನಿಗೇಕೋ ಮಾತ್ಸರ್ಯವಾಯಿತು. ಗಂಡನನ್ನು ಕಳೆದುಕೊಂಡ ಹದಿಹರೆಯದ ಚೆಲುವೆ. ಕೆಲಸಕ್ಕೆಂದು ಬಂದವಳು ಕೆಲಸದ ಜೊತೆಗೆ ಇದೇ ಊರಿನಲ್ಲಿ ಉಳಿದುಕೊಳ್ಳುವ ಆಸ್ಥೆ ತೋರಿಸಿದ್ದಳು. ಗಂಡನನ್ನು ಕಳೆದುಕೊಂಡವಳೆಂಬ ಅನುಕಂಪದಿಂದ ಕೆಲಸ ಕೊಡಿಸಿದ್ದ ಚೆಲುವ. ಅದೂ ತೋಟದ ಉಸ್ತುವಾರಿಕೆ. ಕೆಲವೆ ದಿನಗಳಲ್ಲಿ ಚೆಲುವನ ಮನಸ್ಸು ಗೆದ್ದವಳು. ಹುಡುಗಿಯರಿಂದ ದೂರವಿರುತ್ತಿದ್ದ ಚೆಲುವ ಮೋಹನ."ನೀವು ಕೆಲಸಕ್ಕಾಗಿ ಕೊಲ್ಕತ್ತದಿಂದ ಇಷ್ಟು ದೂರ ಬರುವ ಅಗತ್ಯವಿತ್ತೆ?""ನನ್ನ ನೋವು ಮರೆಯುವುದಕ್ಕೆ ಎಲ್ಲಿಯಾದರು ದೂರ ಹೋಗ ಬೇಕೆನಿಸಿತು" ಅವಳ ಮಾತಿನಲ್ಲಿ ದು:ಖದ ಛಾಯೆಯಿತ್ತು."ಏನದು ನಿಮ್ಮ ನೋವು?" ಬಾಯಿ ತಪ್ಪಿ ಬಂದ ಮಾತು. ತಟ್ಟನೆ ಗಾಡಿಗೆ ತಡೆ ಹಾಕಿದ."ಚಂದನ್ ನ ಕಳಕೊಂಡ ಮೇಲೆ ಅಲ್ಲಿ ಇರುವುದು ಕಷ್ಟವೆನಿಸಿತು""ಚಂದನ್ ಅಂದ್ರೆ?" ಸಂಶಯ ವ್ಯಕ್ತ ಪಡಿಸಿದ ಚೆಲುವ."ಚಂದನ್ ನನ್ನ ಗಂಡ""ಮನೆಯಲ್ಲಿ ಬೇರೆ ಯಾರು ಇರಲಿಲ್ಲವೇ""ಇದ್ರು. ಅತ್ತೆಗೆ ನಾನೆಂದ್ರೆ ಅಷ್ಟಕಷ್ಟೆ. ಯಾಕೆಂದ್ರೆ ನಾನು ಚಂದನ್ ನ ಮದುವೆಯಾಗಿದ್ದು ಅವರ ವಿರುದ್ಧವಾಗಿ""ಅಂದ್ರೆ?" ಅರ್ಥವಾಗದೆ ಕೇಳಿದ ಮೋಹನ."ಅಂದ್ರೆ ನಮ್ಮದು ಪ್ರೇಮ ವಿವಾಹ. ಚಂದನ್ ಮನೆಯಲ್ಲಿ ಎಲ್ಲರೂ ವಿರೋಧ ವ್ಯಕ್ತ ಪಡಿಸಿದ್ರು. ಆದ್ರೂ ಚಂದನ್ ನನ್ನ ಕೈ ಬಿಡಲಿಲ್ಲ. ಆದರೆ ಏನು ಮಾಡೋದು ಚಂದನ್ ನ ಉಳಿಸಿಕೊಳ್ಳುವ ಭಾಗ್ಯ ನನಗಿರಲಿಲ್ಲ""ಕ್ಷಮಿಸಿ ನಿಮ್ಮ ಮನಸ್ಸು ನೋಯಿಸಿ ಬಿಟ್ಟೆ. ಅಲಕಾ ಇಲ್ಲಿ ನಿಮಗೆ ಹೇಗನಿಸುತ್ತೆ" ಮಾತು ಬೇರೆಡೆಗೆ ತಿರುಗಿಸಿದ ಚೆಲುವ."ತುಂಬಾ ಮೆಚ್ಚಿಕೊಂಡಿರೋ ಸ್ಥಳ. ಪ್ರೀತಿ ತೋರೊ ಕೆಲಸದಾಳುಗಳು" ಮಚ್ಚುಗೆ ವ್ಯಕ್ತಪಡಿಸಿದಳು ಬೆಂಗಾಲಿ ಚೆಲುವೆ."ಕೆಲಸದಾಳುಗಳ ಬಗ್ಗೆ ಎಚ್ಚರವಿರಲಿ. ಅವರೆಲ್ಲಾ ವಿಷ ಸರ್ಪಗಳ ಹಾಗೇ""ಮೋಹನ್ ಚಂದ್ರ ಹಾಗನ್ಬೇಡಿ. ಅವರು ತೋರಿಸೊ ಪ್ರೀತಿಗೆ ನಾನು ಋಣಿ" ಗಂಟಲುಬ್ಬಿ ಬಂತು."ಸರಿ ಕಾಟೇಜ್ ಕಡೆ ಹೋಗೋಣ" ಜೀಪು ಮತ್ತೆ ಧೂಳೆಬ್ಬಿಸುತ್ತಾ ಕಾಟೇಜ್ ಕಡೆ ಸಾಗಿತು.ಪಾತಿ ಮಾಡುತ್ತಿದ್ದ ಕೆಲಸದಾಳು ಪಾಪಯ್ಯ ಜೀಪಿನಿಂದ ಇಳಿದ ಚೆಲುವೆಯನ್ನು ನೋಡಿ ಬೆರೆಗಾದ! ಮೋಹನ್ ಚಂದ್ರನಿಗೆ ಹೆಣ್ಣುಗಳೆಂದರೆ ಅಲರ್ಜಿ! ಒಂಟಿ ಜೀವನ ನಡೆಸೊ ಕಾಫಿ ತೋಟದ ಮಾಲಿಕ! ಮೊದಲ ಬಾರಿ ಹೆಣ್ಣಿನ ಜೊತೆಗೆ ಬರುತ್ತಿರುವುದು! ಕೆಲಸದಾಳಿನ ನೋಟ ಅಲಕಾಳಿಗೆ ವಿಚಿತ್ರವೆನಿಸಿತು. ಮಾಲಿಕನ ಜೊತೆ ಬಂದುದಕ್ಕಾಗಿಯೆ? ಮೋಹನ್ ಚಂದ್ರನ ಒತ್ತಾಯಕ್ಕಾಗಿ ಮೊದಲ ಬಾರಿ ಅವನ ಜೀಪಿನಲ್ಲಿ ಕಾಟೇಜಿಗೆ ಬಂದಿದ್ದಳು.ಕಾಟೇಜಿಗೆ ಬಂದಾಗ ಮೊದಲಿಗೆ ಕಂಡಿದ್ದು ಗೋಡೆಗೆ ತೂಗು ಹಾಕಿದ್ದ ನಾಡ ಕೋವಿ! ನಾಡ ಕೋವಿ ಪದ ಬಳಸಿ ನರಳಿದ್ದ ವ್ಯಕ್ತಿಯ ನೆನಪಾಯಿತು."ಮೋಹನ್ ಚಂದ್ರ ಇದೇನು?!!""ಆಟಿಕೆಯಂತು ಅಲ್ಲ..." ನಗು ತಂದು ಕೊಂಡು ಹೇಳಿದ"ತಮಾಷೆ ಬೇಡ. ನೀವು ಇದನ್ನ ಉಪಯೋಗಿಸ್ತೀರಾ?" ಅನುಮಾನ ಸುಳಿಯಿತು ಬಂಗಾಳಿ ಚೆಲುವೆಗೆ."ಯಾವಗಲಾದರೊಮ್ಮೆ. ಈಗ್ಗೆ ಎರಡು ದಿವಸಗಳಿಂದಷ್ಟೆ ನನ್ನ ಕೈಗೆ ಬಂತು""ಅಂದ್ರೆ?""ಚುನಾವಣೆ ಸಮಯದಲ್ಲಿ ಅದನ್ನ ಸರಕಾರಕ್ಕೆ ಒಪ್ಪಿಸಬೇಕು"ಚುನಾವಣೆ ಮುಗಿದು ಮೂರು ತಿಂಗಳ ನಂತರ ಹಿಂದಕ್ಕೆ ಪಡೆದುಕೊಂಡಿದ್ದಾನೆ!"ಮರಳಿ ತಂದ ನಂತರ ಅದನ್ನ ಉಪಯೋಗಿಸಿದ್ರಾ?" ಬಂಗಾಲಿ ಚೆಲುವೆಗೆ ಅನುಮಾನ ಪರಿಹಾರವಾಗಲಿಲ್ಲ."ಹೌದು. ಎಲ್ಲಾ ಶುಚಿಗೊಳಿಸಿ ಒಮ್ಮೆ ಪರೀಕ್ಷಿಸಿದೆ"ಕಾಫಿ ತೋಟದ ಮಾಲಿಕ ಸುಳ್ಳು ಹೇಳುತ್ತಿದ್ದಾನೆ. ಪರೀಕ್ಷೆಗಾಗಿ ಗುಂಡು ಹಾರಿಸಿದ್ದಲ್ಲ. ಉದ್ದೇಶ ಪೂರ್ವಕವಾಗಿ ಹಾರಿಸಿರಬೇಕು. ನನಗೇನು ತಿಳಿದಿಲ್ಲವೆಂದುಕೊಂಡಿದ್ದಾನೆ ಚೆಲುವ. ಗುಂಡೇಟು ತಗುಲಿ ಸ್ಮೃತಿ ತಪ್ಪಿದ್ದ ವ್ಯಕ್ತಿಯನ್ನು ನೆನಪಿಸಿಕೊಂಡಳು.ಗಾಜಿನ ಕಿಟಕಿಗಳನ್ನು ಸರಿಸಿದ. ಬೆಳಕು ಸಾಕಷ್ಟು ಹರಿಯಿತು. ಕಿಟಕಿಯ ಮೂಲಕ ಇಳಿಜಾರಿಗಿದ್ದ ಕಾಫಿಯ ತೋಟ ಸುಂದರವಾಗಿ ಕಾಣುತಿತ್ತು. ಅಲ್ಲಲ್ಲಿ ಕಾಫಿ ತೋಟದ ಮಧ್ಯದಲ್ಲಿ ನಿಂತ ನೀಲಗಿರಿ ಮರಗಳು. ಸುತ್ತಲೂ ಬೇಲಿಯಂತಿರುವ ಖೋ ಖೋ ಗಿಡಗಳು.ಸೀಸೆಯಲ್ಲಿದ್ದ ವಿಸ್ಕಿಯನ್ನು ಗ್ಲಾಸಿಗೆ ಸುರಿದು ಸೋಡ ಬೆರೆಸಿದ. ಐಸ್ ಕ್ಯೂಬ್ ಗಳನ್ನು ತುಂಬಿಸಿದ.
"ಅಭ್ಯಂತರವಿಲ್ಲದಿದ್ದರೆ......" ಇನ್ನೊಂದು ಗ್ಲಾಸಿಗೆ ಸುರಿದು ಅವಳಿಗೆ ನೀಡಿದ."ಕ್ಷಮಿಸಿ" ನಯವಾಗಿ ನಿರಾಕರಿಸಿದಳು ಅಲಕಾ. ಕರಿದ ಮೀನನ್ನು ತಟ್ಟೆಯಲ್ಲಿ ಜೋಡಿಸಿಟ್ಟ."ಸ್ವಲ್ಪ..." ಮತ್ತೊಮ್ಮೆ ಒತ್ತಾಯಿಸಿದ."ಕ್ಷಮಿಸಿ. ಅದರ ಅಗತ್ಯವಿಲ್ಲ. ನಿಮಗೆ ಕಂಪನಿ ಕೊಡಬೇಕೆಂದರೆ ತಣ್ಣನೆಯ ನೀರು ಸಾಕು" ಒಳಗೆ ಸರಿದ ಚೆಲುವ. ಕೈಯಲ್ಲಿ ತಂಪು ಲಘು ಪಾನೀಯ ತಂದು ಟೀಪಾಯಿ ಮೇಲಿರಿಸಿದ."ಉಪಕಾರವಾಯಿತು" ಎತ್ತಿಕೊಂಡಳು. ತಟ್ಟೆಯಲ್ಲಿ ಜೋಡಿಸಿಟ್ಟಿದ್ದ ಕರಿದ ಮೀನಿನ ಪರಿಮಳ ಅವಳನ್ನು ಸೆಳೆಯಿತು. ಕೈ ಇಕ್ಕಿದಳು ಬಂಗಾಲಿ ಚೆಲುವೆ! ಅವನ ತಲೆಯಲ್ಲಿ ಏನೋ ಹೊಳೆಯಿತು. ಕಿರು ನಕ್ಕ. ಮೀನಿನ ರುಚಿಗೆ ಬಾಯಿ ಚಪ್ಪರಿಸಿ ನಕ್ಕವನನ್ನು ತಲೆ ಎತ್ತಿ ನೋಡಿದಳು. ಇನ್ನೊಂದು ಪೆಗ್ಗು ಏರಿಸಿದವನು ಅವಳನ್ನು ನೋಡಿ ನಕ್ಕ. ಹುಬ್ಬು ಗಂಟಿಕ್ಕಿ ಅವನನ್ನು ನೋಡಿದಳು."ನನ್ನ ಊಹೆ ಸರಿಯಾಯ್ತು" ಗ್ಲಾಸನ್ನು ತುಟಿಗಳಿಗೆ ಸೋಕಿಸುತ್ತಾ ಹೇಳಿದ."ಏನು?""ಏನಿಲ್ಲ""ಮೋಹನ್ ಚಂದ್ರ ನನ್ನನ್ನು ಮರಳಿ ರೂಂಗೆ ತಲುಪಿಸುವಿರಲ್ವೆ?" ಎರಡು ಪೆಗ್ ಏರಿಸಿದವನನ್ನು ಎಚ್ಚರಿಸಿದಳು ಬಂಗಾಲಿ ಚೆಲುವೆ."ಓಹೋ ಅಲಕಾ. ನೀವು ನನ್ನನ್ನು ತಪ್ಪು ತಿಳಿಯೋದು ಬೇಡ. ನಾನು ಎಷ್ಟು ಕುಡಿದರೂ ಧೃತಿ ತಪ್ಪಲಾರೆ" ಭರವಸೆ ಕೊಟ್ಟ ಚೆಲುವ.ಯಾರೋ ಮುಲುಗಿದ ಸದ್ದು! ಏನೂ ಅರ್ಥವಾಗದೆ ಮೋಹನ್ ಚಂದ್ರನನ್ನು ನೋಡಿದಳು."ನಿಮಗೊಂದು ರಹಸ್ಯ ತಿಳಿಸುವುದಿದೆ. ಬನ್ನಿ""ರಹಸ್ಯ!!?""ಹೌದು. ಗಾಯಗೊಂಡು ಬಿದ್ದಿದ್ದ ವ್ಯಕ್ತಿ. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ"ಚೆಲುವ ನಯವಾಗಿ ಸುಳ್ಳು ಹೇಳುತ್ತಿದ್ದಾನೆ. ಗುಂಡೇಟು ತಗುಲಿ ಬಿದ್ದಿದೆ ವ್ಯಕ್ತಿ. ಕಾರಿನ ಶೆಡ್ಡಿನಿಂದ ಸಾಗಿಸಿ ಇಲ್ಲಿ ತಂದಿದ್ದಾನೆ! ತನಗೇನು ಗೊತ್ತಿಲ್ಲವೆಂದು ತಿಳಿದಿದ್ದಾನೆ. ಅನುಮಾನದಿಂದಲೆ ಹಿಂಬಾಲಿಸಿದಳು. ಅದೊಂದು ಸಣ್ಣ ಕೋಣೆ. ಮಂಚದ ಮೇಲೆ ವ್ಯಕ್ತಿಯನ್ನು ಮಲಗಿಸಲಾಗಿತ್ತು! ನಿದ್ರೆಯಲ್ಲಿ ಸಣ್ಣಗೆ ಗೊರೆಕೆ ಹೊಡೆಯುತ್ತಿದ್ದ. ಹತ್ತಿರ ಸರಿದು ನೋಡಿದಳು. ಎದೆಯ ಮೇಲೆ ದೊಡ್ಡ ಬ್ಯಾಂಡೇಜ್ ಹಾಕಲಾಗಿತ್ತು. ಗುಂಡೇಟು ತಿಂದು ಬಿದ್ದಿದ್ದ ವ್ಯಕ್ತಿ! ಕಾರ್ ಶೆಡ್ಡಿನಿಂದ ಮಾಯವಾದ ವ್ಯಕ್ತಿ!ಚಂದನ್!!!!ತಲೆ ಸುತ್ತು ಬಂದವಳು ಮಂಚದ ಅಂಚನ್ನು ಗಟ್ಟಿಯಾಗಿ ಹಿಡಿದು ನಿಂತಳು."ಅಲಕಾ ಏನಾಯ್ತು?"ಸಾವರಿಸಿಕೊಂಡಳು ಬಂಗಾಲಿ ಚೆಲುವೆ."ಏನಿಲ್ಲಾ. ಹೊರಡೋಣ್ವೆ" ಆತುರ ತೋರಿಸಿದಳು. ಕುಡಿದ ನಶೆ ನಿಧಾನವಾಗಿ ಅವನನ್ನು ಆವರಿಸುತಿತ್ತು."ಸರಿ. ಹೊರಡೋಣ" ಅವಳ ಜೊತೆ ಹೆಜ್ಜೆ ಹಾಕಿದ. ಏನೋ ಅನುಮಾನ ಸುಳಿಯಿತು. ಅವಳನ್ನು ನಿಲ್ಲಿಸಿದ ಮೋಹನ್ ಚಂದ್ರ!"ಏನಾಯ್ತು? ಎರಡನೆ ಪೆಗ್ ಏರಿಸುವಾಗಲೆ ಎಚ್ಚರಿಸಿದ್ದೆ. ನಿಮ್ಮ ಸ್ಥಿತಿ ನೋಡುವಾಗ ನನ್ನನ್ನು ಕೋಣೆಗೆ ತಲುಪಿಸಲಾರಿರಿ" ಆತಂಕ ವ್ಯಕ್ತ ಪಡಿಸಿದಳು ಅಲಕಾ."ಅಲಕಾ ನಿಮಗೆ ಡ್ರೈವಿಂಗ್ ಬರುತ್ತದೆಯೇ?""ಇಲ್ಲ""ಒಹೋ! ದಯವಿಟ್ಟು ಕ್ಷಮಿಸಿ. ಈ ದಿನ ಇಲ್ಲೆ ಇದ್ದುಬಿಡಿ...." ತೊದಲಿಕೆಯ ಮಾತು."ಮೋಹನ್ ಚಂದ್ರ ನನ್ನ ಇಕ್ಕಟ್ಟಿಗೆ ಸಿಲುಕಿಸಿದ್ರಿ" ಮುಖದಲ್ಲಿ ದು:ಖದ ಛಾಯೆ ಕಂಡಿತು."ಕ್ಷಮಿಸಿ ಅಂದ್ನಲ್ಲಾ" ಕೈ ಮುಗಿದ. ಕೆಲಸದ ಆಳು ಪಾಪಯ್ಯ ಅವಳಿಗೆ ಒಂದು ಕೋಣೆ ತೋರಿಸಿದ. ಬೇರೆ ದಾರಿ ತೋರದೆ ಹಾಗೆ ಹಾಸಿಗೆಯಲ್ಲಿ ಉರುಳಿಕೊಂಡಳು. ನಡೆದ ಘಟನೆಗಳೆಲ್ಲಾ ತಲೆಯಲ್ಲಿ ಗಿರಗಿರನೆ ಸುತ್ತುತಿತ್ತು. ಯಾರಿಗು ಗೊತ್ತಾಗದಿರಲಿಯೆಂದು ಇಷ್ಟು ದೂರ ಬಂದರೆ ಚಂದನ್ ಹೇಗೆ ಪತ್ತೆ ಹಚ್ಚಿ ಇಲ್ಲಿಯವರೆಗೂ ಬಂದ? ಬಣ್ಣದ ಚಿಟ್ಟೆಗಳ ಹಿಂದೆ ಸರಿದಾಡುವ ರಸಿಕ! ಇರಲಿ ತಾನು ಚಂದನ್ ನನ್ನು ಮಾತನಾಡಿಸಿ ಇಲ್ಲಿಂದ ದೂರ ಹೋಗಬೇಕು.ಎದ್ದು ಕೋಣೆಯ ಬಾಗಿಲು ತೆರೆದಳು. ಕತ್ತು ಹೊರಳಿಸಿ ಯಾರೂ ಇಲ್ಲದನ್ನು ಗಮನಿಸಿ, ಮೆಲ್ಲನೆ ಹೆಜ್ಜೆಯಿಡುತ್ತಾ ಚಂದನ್ ಇದ್ದ ಕೋಣೆಗೆ ಬಂದಳು. ಆತ ಇನ್ನೂ ಗೊರಕೆ ಹೊಡೆಯುತ್ತಿದ್ದ. ಮೆಲ್ಲನೆ ಅವನ ಬಳಿ ಸರಿದು ಅಲುಗಿಸಿದಳು.
"ಚಂದನ್" ಮೆಲ್ಲನೆ ಹೊರಳಿದ ಆತ! ಮತ್ತೊಮ್ಮೆ ಅಲುಗಿಸಿ ಕರೆದಳು. ದೀರ್ಘ ನಿಟ್ಟುಸಿರು ಬಿಟ್ಟು ಮತ್ತೆ ಗೊರಕೆ ಹೊಡೆಯ ಹತ್ತಿದ."ಅವರಿಗೆ ತೊಂದರೆ ಕೊಡಬೇಡಿ" ಮಾತು ಬಂದಾಗ ಬೆಚ್ಚಿ ಬಾಗಿಲ ಕಡೆ ನೋಡಿದಳು. ಮೋಹನ್ ಚಂದ್ರ ನಿಂತಿದ್ದ! ತಪ್ಪಿತಸ್ಥಳಂತೆ ತಲೆ ತಗ್ಗಿಸಿದಳು. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಳು. ನಿಜ ಸಂಗತಿ ತಿಳಿಸದೆ ಉಪಾಯವಿಲ್ಲ."ಚಂದನ್" ಮಂಚದ ಅಂಚು ಹಿಡಿದು ಚೆಲುವನಿಗೆ ಹೇಳಿದಳು."ನನ್ನ ಊಹೆ ಸರಿಯಾಯ್ತು" ಆಶ್ಚರ್ಯವಾಗಿ ತಲೆಯೆತ್ತಿ ನೋಡಿದಳು. ಮುಗುಳ್ನಗುತ್ತಾ ನಿಂತಿದ್ದ. ಮುಖದಲ್ಲಿ ನಶೆಯ ಕುರುಹಿಲ್ಲ! ಚೆನ್ನಾಗಿ ನಾಟಕವಾಡಿದ್ದಾನೆ ಚೆಲುವ!"ನೀನು ಮಾತ್ಸರ್ಯ ತುಂಬಿರೋನು" ಒಮ್ಮೆಲೆ ಆರ್ಭಟಿಸಿದಳು."ರಾತ್ರಿ ಹೊತ್ತು ಕಿರುಚ ಬೇಡಿ" ಸಂಯಮ ಕಳೆದುಕೊಳ್ಳದೆ ಹೇಳಿದ. ಉಸಿರಿನ ತೀವ್ರತೆಯನ್ನು ನಿಧಾನಗೊಳಿಸಿದಳು."ಮೋಹನ್ ಚಂದ್ರ ನೀನು ಹೊಟ್ಟೆ ಕಿಚ್ಚಿನ ಮನುಷ್ಯ""ಅಲಕಾ ಸತ್ಯನಾ ಮುಚ್ಚೋದಕ್ಕೆ ಪ್ರಯತ್ನಿಸ ಬೇಡಿ. ಚಂದನ್ ಸತ್ತು ಹೋದ. ವಿಧವೆ ಅಂದುಕೊಂಡು ಕೆಲಸಕ್ಕಾಗಿ ನನ್ನಲ್ಲಿಗೆ ಬಂದ್ರಿ. ನಿಮ್ಮನ್ನು ನೋಡಿದ್ರೆ ನೀವು ಯಾವುದೋ ಶ್ರೀಮಂತ ಮನೆತನದಿಂದ ಬಂದವರು ಅನಿಸಿತು""ಅದಕ್ಕೆ ನನ್ನ ಮೇಲೆ ಕನಿಕರ ತೋರಿಸೋ ಹಾಗೆ ನಟಿಸಿ. ನನ್ನನ್ನು ಪ್ರೀತಿಸಿ ನಿಮ್ಮ ಸಂಗಾತಿಯಾಗುವಂತೆ ಪ್ರೇರೇಪಿಸಿದ್ರಿ""ಸುಳ್ಳು""ಸತ್ಯ. ಹುಡುಗಿಯರೆಂದರೆ ಮಾರು ದೂರ ಹೋಗುವ ನೀವು ನನ್ನ ಬಗ್ಗೆ ತುಂಬಾ ಆಸ್ಥೆ ತೋರಿಸಿದ್ರಿ. ಕಾರಣ ನಿಮ್ಮ ಸ್ವಾರ್ಥ!""ಇರಬಹುದು. ಆದ್ರೆ ನೀವು ವಿಧವೆ ಅಲ್ಲಾಂತ ತಿಳಿದಿದ್ದು ಚಂದನ್ ಬಂದ ನಂತರ. ಅದೂ ಅಲ್ದೆ ಅದಕ್ಕೆ ಬೇಕಾಗಿದ್ದ ಕುರುಹುಗಳೂ ನಿಮ್ಮಲ್ಲಿದ್ದವು""ಕುರುಹು!!!" ಆಶ್ಚರ್ಯ ವ್ಯಕ್ತಪಡಿಸಿದಳು."ಹೌದು. ನಿಮ್ಮ ಕೈಯಲ್ಲಿರೋ ಶಂಖ. ಅಂದ್ರೆ ಬಿಳಿ ಬಣ್ಣದ ಬಳೆಗಳು. ಬೈತಲೆಯಲ್ಲಿರುವ ಕುಂಕುಮ. ಅದು ಅಲ್ದೆ...." ಮಾತು ನಿಲ್ಲಿಸಿದ."ಮತ್ತೇನಿದೆ?" ಕಣ್ಣು ಕಿರಿದುಗೊಳಿಸಿದಳಾಕೆ."..... ಮೀನು""ಮೀನು?!""ಬೆಂಗಾಲಿ ವಿಧವೆಯರಿಗೆ ಮೀನಿನ ಪದಾರ್ಥ ನಿಷಿದ್ಧ" ಕಣ್ಣಿಗೆ ಕೈ ಹಾಕಿದಂತಿತ್ತು ಅವನ ಮಾತು. ಎಲ್ಲವೂ ಸತ್ಯ. ಬೆಂಗಾಲಿಗಳ ಬಗ್ಗೆ ತುಂಬಾ ತಿಳಿದುಕೊಂಡಿದ್ದಾನೆ. ವಿಷಾದದ ನಗೆ ತೋರಿಸಿದಳು."ಅದಕ್ಕೆ ನೀವು ಚಂದನ್ ನ ಮುಗಿಸೋ ಪ್ರಯತ್ನ ಮಾಡಿದ್ರಿ""ಚಂದನ್ ನಿಮ್ಮನ್ನು ಹುಡುಕಿಕೊಂಡು ದೂರದ ಕೊಲ್ಕತ್ತಾದಿಂದ ಬಂದ. ನೀವು ಅವನ ಕಣ್ಣಿಗೆ ಬಿದ್ರಿ. ನಿಮ್ಮನ್ನ ವಾಪಸು ಬರುವಂತೆ ಒತ್ತಾಯಿಸಿದ. ನೀವು ನಿರಾಕರಿಸಿದ್ರಿ. ಆತ ಜಗಳವಾಡಿದ. ನೀವೂ ಹಠ ಹಿಡಿದ್ರಿ. ಕೊನೆಗೆ ಬೇರೆ ದಾರಿ ಕಾಣದೆ ಅವನನ್ನು ಕೊಲ್ಲೊ ಪ್ರಯತ್ನ ಮಾಡಿದ್ರಿ""ಸುಳ್ಳು, ಶುದ್ಧ ಸುಳ್ಳು. ನೀವೆ ನಾಡ ಕೋವಿಯಿಂದ ಗುಂಡಿಕ್ಕಿ ಕೊಲ್ಲೊ ಪ್ರಯತ್ನ ಮಾಡಿದ್ರಿ""ಇಲ್ಲ""ಹೌದು, ನನ್ನ ಮೇಲಿನ ಆಸೆಯಿಂದ ಗುಂಡು ಹೊಡೆದ್ರಿ""ಅಲಕಾ, ಬಾಯಿ ಮುಚ್ಚಿ""ಸತ್ಯ ಹೇಳಿದ್ರೆ ಕೋಪ ಬರುತ್ತೆ ಅಲ್ವಾ?" ಟೀಕಿಸಿದಳು. "ಮೋಹನ್ ಚಂದ್ರ ನೀವು ಕೋವಿಯನ್ನು ಶುಚಿಗೊಳಿಸಿ ಪರೀಕ್ಷೀಸೊದಕ್ಕೆ ಗುಂಡು ಹಾರಿಸಿದ್ದು ಅಂದ್ರಿ. ಅದು ಸುಳ್ಳು. ನನ್ನ ಹಿಂಬಾಲಿ ಬಂದಿರೋನು ನನ್ನ ಗಂಡ ಅಂದ ಕೂಡಲೇ ನೀವು ಮಾತ್ಸರ್ಯ ಹೊಂದಿದ್ರಿ. ಅಪರಿಚಿತ ಸ್ಥಳ ಬೇರೆ. ಅದಕ್ಕೆ ಸಾಯಿಸೋ ಪ್ರಯತ್ನ ಮಾಡಿದ್ರಿ""ನೀವು ತಪ್ಪು ತಿಳ್ಕೊಂಡಿದ್ದೀರಿ ಅಲಕಾ. ಚಂದನ್ ನ ಕೊಲ್ಲೊ ಹಾಗಿದ್ರೆ ಇಲ್ಲಿ ತಂದು ಯಾಕೆ ಉಪಚರಿಸಬೇಕಿತ್ತು?""ಉಪಚರಿಸದೆ? ಗುಂಡೇಟು ಬಿದ್ದ ವ್ಯಕ್ತಿನಾ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದು ನಾನು. ವ್ಯಕ್ತಿ ಚಂದನ್ ಅಂತ ನನಗೆ ಗೊತ್ತಿರಲಿಲ್ಲ. ನನ್ನನ್ನು ಹಿಂಬಾಲಿಸಿದ ನೀವು ಆತನನ್ನು ಗುರುತಿಸಿ ಜೀಪಿನಿಂದ ಬಂದು ಇಲ್ಲಿಗೆ ಸಾಗಿಸಿದ್ರಿ. ಈಗ ಸಂಬಾವಿತನಂತೆ ನಾಟಕವಾಡುತ್ತಿದ್ದೀರಿ""ಇಲ್ಲ, ಅಲಕಾ ಹಾಗನ್ಬೇಡಿ""ಹಾಗಾದರೆ ಗುಂಡು ಹಾರಿಸಿರೋದು ಯಾರು?""ನಾನು" ಅಚ್ಚರಿಯಿಂದ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಪಾತಿ ಕೆಲಸದಾಳು ಪಾಪಯ್ಯ!"ನೀನು! ನಿನಗೇನು ಇದರಿಂದ ಲಾಭ?""ಧಣಿಯೋರು ಕುಡಿತದ ಚಟ ಬೆಳೆಸ್ಕೊಂಡಿದ್ರು. ನೀವು ತೋಟದ ಉಸ್ತುವಾರಿಕೆಗೆ ಬಂದ ನಂತರ ಅವರ ಕುಡಿತ ಸ್ಥಿಮಿತೆಗೆ ಬಂತು. ಅವರ ಮುಖದಲ್ಲಿ ಸಂತಸ ಮಿನುಗುತಿತ್ತು. ಆದರೆ ಅದೇ ಸಮಯಕ್ಕೆ ನಿಮ್ಮ ಸಂಬಂಧಿಂತ ಹೇಳಿಕೊಂಡು ಚಂದನ್ ಬಂದ್ರು. ಮತ್ತೆ ದಣಿಯೋರು ಮೊದಲಿನಂತಾಗುತ್ತಾರೋ ಎಂದು, ಮನೆಯಲ್ಲಿ ಯಾರು ಇಲ್ಲದಾಗ ಕೋವಿ ತೆಗೆದುಕೊಂಡು ಆ ವ್ಯಕ್ತಿಯನ್ನು ಇಳಿಜಾರಿನಲ್ಲಿ ನಿಲ್ಸಿ ಗುಂಡು ಹಾರಿಸ್ದೆ""ಅವರನ್ನೇಕೆ ಇಳಿಜಾರಿನಲ್ಲಿ ನಿಲ್ಸಿದೆ?""ಅಲಕಾನ ರೂಮ್ ತೋರಿಸೋದಕ್ಕೆ ಹೇಳಿದ್ರು. ನನ್ನ ಯೋಜನೆಯ ಸಂಶಯ ಬರದಂತೆ ಎಚ್ಚರವಹಿಸಿ ಇಳಿಜಾರಿನ ರಸ್ತೆಯಲ್ಲಿ ನಿಲ್ಲಿಸಿದೆ""ಈ ವಿಷಯಾನ ನನಗೆ ತಿಳಿಸ್ದ. ಆದ್ರೆ ಚಂದನ್ ಗಾಗಿರೋದು ಗುಂಡಿನ ಗಾಯ ಅಲ್ಲ""ಮತ್ತೆ?" ಕಣ್ಣರಳಿಸಿ ಕೇಳಿದಳು ಅಲಕಾ."ಚೂರಿಯಿಂದ ತಿವಿದ ಗಾಯ""ಚೂರಿಯಿಂದ ತಿವಿದ ಗಾಯ!!" ಅಲಕಾ ಹುಬ್ಬೇರಿಸಿದಳು."ನಾನು ನೋಡುವಾಗ ಇರಿತದ ಗಾಯದ ಹಾಗೆ ಇರಲಿಲ್ಲ. ಗುಂಡೇಟು ತಗುಲಿದಂತಿತ್ತು. ಅದೂ ಅಲ್ದೆ ಆತ ನಾಡಕೋವಿ ಅಂದಿದ್ದ.""ಅದು ಕತ್ತಲೆಯಲ್ಲಿ ಸಾಗೋದು ಅಪಾಯ. ಪೊದೆಯ ಮಧ್ಯದಲ್ಲಿ ಕಾಡು ಪ್ರಾಣಿಗಳಿರುತ್ತವೆ. ಕೋವಿ ತರುತ್ತೇನೆ ಅಂದಿದ್ದೆ. ಅದಕ್ಕೆ ಹೇಳಿರಬಹುದು" ಪಾಪಯ್ಯ ಹೇಳಿದ."ಸರಿ ಈಗ ಅರ್ಥವಾಯಿತು. ನಾನು ಜೀಪ್ ನಲ್ಲಿ ಬರುತ್ತಿರುವಾಗ ಅವಳು ಎದುರಾಗಿದ್ಲು""ಯಾರು?" ಪಾಪಯ್ಯ, ಅಲಕಾ ಇಬ್ಬರೂ ಉದ್ಗಾರವೆಳೆದರು."ಅದೇ ಬಾಬ್ ಕೂದಲಿನ ಹುಡುಗಿ. ನನ್ನ ನೋಡಿ ಕಾಫಿ ಗಿಡಗಳ ಹಿಂದೆ ಮರೆಯಾದ್ಲು. ನಾನು ನನ್ನ ಪಾಡಿಗೆ ಬಂದೆ""ಯಾರವಳು?""ಸರಿಯಾಗಿ ಹೇಳಿದ್ರಿ. ದೂರದ ಊರಿಂದ ಪ್ರಿಯತಮನನ್ನು ಹುಡುಕಿಕೊಂಡು ಬಂದಿದ್ದೀನಿ ಅಂದಿದ್ಲು. ಕೆಲಸದಾಳುಗಳ ಜೊತೆಗೆ ಜಗಳ ಕಾಯ್ತ ಇದ್ಲು" ಪಾಪಯ್ಯನೆಂದ."ದೂರದ ಊರು!" ರಸಿಕ ಚಂದನ್ ನ ಪ್ರೇಮಿ ಇರಬೇಕು!"ಹೆಸರು ಗೊತ್ತಾ?" ಏನೋ ಅಲೋಚಿಸಿ ಕೇಳಿದಳು ಅಲಕಾ."ಇಲ್ಲ. ಅವಳು ಉಳಕೊಂಡಿದ್ದು ಕಾರ್ ಶೆಡ್ಡಿನ ಬಳಿ""ಶೆಡ್ಡಿನ ಬಳಿ!!" ಉತ್ತರ ದೊರಕಿತವಳಿಗೆ. ಅವಳು ಬೇರಾರು ಅಲ್ಲ. ವೈಯಾರಿ ನಿಲೀಮಾ!!!ಚಂದನ್ ಕಾಣೆಯಾದ ದಿನ ಏನೋ ನಾಟಕವಾಡಿದ್ದಾಳೆ. ನೆನಪಿಸಿಕೊಂಡಳು ಅಲಕಾ."ಯಾರು ನಿಮಗೆ ಗೊತ್ತೆ?" ಮೋಹನ್ ಚಂದ್ರ ಆಲೋಚನೆಯಲ್ಲಿದ್ದ ಅವಳನ್ನು ಕೇಳಿದ."ಹೌದು. ಆಕೆ ನನ್ನ ರೂಂ ಮೇಟ್ ನಿಲೀಮಾ""ಸರಿ. ನಾನು, ಪಾಪಯ್ಯ ಚಂದನ್ ನ ವಿಷಯ ಹೇಳಿದ ನಂತರ ಶೆಡ್ಡ್ ಬಳಿ ಬಂದೆ""ಗಾಯವಾಗಿ ಬಿದ್ದವನನ್ನು ಶೆಡ್ಡಿಗೆ ಸಾಗಿಸಿದೋಳು ನಾನು""ಇರಬಹುದು""ನೀವು ಬಂದಿದ್ದು ಅವನನ್ನು ಕಾಟೇಜಿಗೆ ಸೇರಿಸೋದಿಕ್ಕೆ""ಹೌದು. ಆಗ ಯಾರೋ ಮೆಟ್ಟಿಲಿನ ಮರೆಯಲ್ಲಿ ನಿಂತು ನೋಡುತ್ತಿದ್ದರು""ಸರಿಯಾಗಿ ಹೇಳಿದ್ರಿ. ಅವನಿಗೆ ಪ್ರಥಮ ಚಿಕಿತ್ಸೆ ಮುಗಿಸಿ ನನ್ನ ರೂಂಗೆ ಬಂದಾಗ ನಿಲೀಮಾ ರೂಂನಲ್ಲಿ ಇರಲಿಲ್ಲ""ಕೆಲವು ಬಾರಿ ಕಾಫಿ ತೋಟದಲ್ಲೂ ಕಾಣಿಸ್ಕೊಂಡಿದ್ಲು""ಮೋಹನ್ ಚಂದ್ರ, ವಿಳಂಬ ಮಾಡೋದು ಬೇಡ. ಕೂಡ್ಲೆ ರೂಮಿಗೆ ಹೋಗೋಣ" ಆತುರ ಪಡಿಸಿದಳು ಅಲಕಾ."ಪಾಪಯ್ಯ, ನೀನು ಚಂದನ್ ಬಳಿ ಇರು. ನಾವು ನಿಲೀಮಾನ ವಿಚಾರಿಸ್ತೀವಿ"ಇಬ್ಬರೂ ರೂಮಿಗೆ ಬಂದಾಗ ರೂಮಿಗೆ ಬಾಗಿಲು ಹಾಕಲಾಗಿತ್ತು. ಅಲಕಾ ತನ್ನ ಕೀಲಿಯಿಂದ ಬಾಗಿಲು ತೆರೆದಳು. ರೂಮಿನ ಎಲ್ಲಾ ವಸ್ತುಗಳು ಅಸ್ತವ್ಯಸ್ತವಾಗಿದ್ದವು. ಅಲಕಾಳ ಟೇಬಲ್ ಮೇಲೊಂದು ಪತ್ರ! ತೆರೆದು ನೋಡಿದಳು. ಅವಳ ಮುಖದಲ್ಲಿ ಬದಲಾವಣೆ ಕಂಡಿತು."ಏನಾಯ್ತು?""ಅವಳ ಆ ವ್ಯಕ್ತಿ ಸಿಕ್ಕಿದನಂತೆ. ಆತ ಕಳೆದು ಹೋದ ಅವನ ಹೆಂಡತಿಯನ್ನು ಹುಡುಕಿಕೊಂಡು ಬಂದಿರೋದಂತೆ""ಅವನ ಕಳೆದು ಹೋದ ಹೆಂಡತಿ ಅಂದ್ರೆ ನೀವೆ ತಾನೆ? ಆ ವ್ಯಕ್ತಿ ಚಂದನ್ ತಾನೆ?""ಸರಿಯಾಗಿ ಹೇಳಿದ್ರಿ. ನಿಲೀಮಾ ಚಂದನ್ ನ ಪ್ರೇಯಸಿಯಿರಬೇಕು""ಇರಬಹುದು. ಆದ್ರೆ ಚಂದನ್ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾರೆ""ನೀವು ಹೇಗೆ ಹೇಳಿದ್ರಿ""ಅಷ್ಟು ದೂರದಿಂದ ನಿಮ್ಮನ್ನು ಹುಡುಕಿಕೊಂಡು ಬಂದಿದ್ದಾರೆಂದ್ರೆ..."ಅವಳಿಗೆ ಚಂದನ್ ಬಗ್ಗೆ ಕನಿಕರವಾಯಿತು. ಚಂದನ್ ಬಗ್ಗೆ ತಪ್ಪಾರ್ಥ ಮಾಡಿದ್ದಕ್ಕಾಗಿ ನೊಂದುಕೊಂಡಳು"ಚಂದನ್ ನಿಲೀಮಾಳನ್ನು ನಿರಾಕರಿಸಿದ್ದಕ್ಕಾಗಿ ಅವನನ್ನು ಮುಗಿಸಿದಳಂತೆ" ಪತ್ರದಲ್ಲಿದ್ದದನ್ನು ಮತ್ತೆ ಮುಂದುವರಿಸಿದಳು."ಅವಳು ತಪ್ಪಾಗಿ ತಿಳ್ಕೊಂಡಿದ್ದಾಳೆ. ಚಂದನ್ ಸಾವಿನಿಂದ ಪಾರದ ವಿಷಯ ಅವಳಿಗೆ ತಿಳಿದಿಲ್ಲ.""ಹೌದು. ಈಗ ಅವಳು ತನ್ನ ಕೆಲಸ ಮುಗಿಸಿ ಊರಿಗೆ ವಾಪಾಸಾಗಿರಬಹುದು.""ನಿಮ್ಮ ಊಹೆ ನಿಜವಾಗಿರಬಹುದು""ಮೋಹನ್ ಚಂದ್ರ ನನ್ಗೊಂದು ಸಹಾಯ ಮಾಡಬಲ್ಲಿರಾ?""ಏನದು ಕೇಳಿ?""ಚಂದನ್ ಗುಣಮುಖನಾಗುವವರೆಗೂ ನಿಮ್ಮಲಿ ನಿಲ್ಲಲು ಅನುವು ಮಾಡಿ ಕೊಡಬಲ್ಲಿರಾ?""ಅದಕ್ಕೇನಂತೆ. ನಿಮ್ಮನ್ನು ಒಂದು ಮಾಡಿದ ಪುಣ್ಯ ನನಗಿರಲಿ. ನೀವು ಬಯಸುವಿರಾದರೆ ಚಂದನ್ ಗೂ ಇಲ್ಲೆ ಒಳ್ಳೆ ಕೆಲಸ ಕೊಡಿಸ ಬಲ್ಲೆ. ಈ ಎಸ್ಟೇಟ್ ನಿಮ್ಮದೆಂದೇ ತಿಳಿಯಿರಿ""ಧನ್ಯವಾದಗಳು" ಅಲಕಾ ಕೈ ಜೋಡಿಸಿದಳು."ಬನ್ನಿ ಕಾಟೇಜಿಗೆ ಹೋಗೋಣ"
ಇಬ್ಬರನ್ನೂ ಹೊತ್ತ ಜೀಪು ಕಾಟೇಜ್ ಕಡೆ ಓಡಿತು.***

No comments: