Tuesday, November 11, 2008

ಖಂಡಿತಾ ಮನುಷ್ಯರನ್ನು ನಂಬಬಹುದು!


ಮನುಷ್ಯನ ಜೀವನದ ಪಯಣದಲ್ಲಿ ಎದುರಾಗುವ, ಎದುರಿಸುವ ನೋವು, ನಲಿವುಗಳ ಮತ್ತು ಅವುಗಳಿಗೊಂದು ಸೂಕ್ಷವಾದ ಪರಿಹಾರವನ್ನು ಕೊಡುವ ಪರಿಶುದ್ಧ ಕಥೆಗಳ ಒಂದು ಪ್ರಾಮಾಣಿಕ ಪ್ರಯತ್ನ ಬಿ. ರಮೇಶ ಭಟ್ಟರ `ಮನುಷ್ಯರನ್ನು ನಂಬಬಹುದು'. ಶಿರೋನಾಮೆಯೆ ಸೂಚಿಸುವಂತೆ ಇಲ್ಲಿಯ ಕಥೆಗಳೆಲ್ಲ ಮನುಷ್ಯ ಸಂಬಂಧಗಳ ಎಳೆಯನ್ನು ಹಿಡಿದು ಸಾಗುವಂಥವುಗಳು. ಬಹಳ ಆತ್ಮೀಯವಾಗಿ ಬಿಡುವ, ನಿನ್ನೆ ಮೊನ್ನೆಯೆಲ್ಲೋ ಕಂಡಂತೆ, ಕೇಳಿದಂತೆ, ಅವು ನಮ್ಮನ್ನು ಆವರಿಸುತ್ತವೆ. ಅಲ್ಲಿಯ ಪಾತ್ರಗಳು ನಿಜಕ್ಕೂ ಜೀವಂತ ಮತ್ತು ನಮಗೆ ಪರಿಚಿತ ಅನ್ನುವಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವ ಬೀರುತ್ತವೆ. `ಯಾರನ್ನೂ ನಂಬಬಾರದು' ಅಂದುಕೊಳ್ಳುತ್ತಲೇ ನಾವು ಎಲ್ಲರನ್ನೂ ನಂಬುತ್ತೇವೆ ಮತ್ತು ನಂಬಲೇ ಬೇಕಾಗುತ್ತದೆ, ಇಲ್ಲಿಯ ಕಥೆಗಳ ಹಾಗೆ.
ಸಂಕಲನದ ಮೊದಲ ಕಥೆ `ಮನುಷ್ಯರನ್ನು ನಂಬಬಹುದು', ಒಬ್ಬ ಮನುಷ್ಯನಿಗೆ, ಒಂದು ಅಪರಿಚಿತ ಸ್ಥಳದಲ್ಲಿ ತನ್ನ ಮುಂದಿನ ಪ್ರಯಾಣಕ್ಕೆ ಅನಾನುಕೂಲವಾಗಿ ಅಲ್ಲಿ ಆತನಿಗೆ ಎದುರಾಗುವ ಪರಿಸ್ಥಿತಿಯನ್ನು ಈ ಕಥೆ ಚಿತ್ರಿಸುತ್ತದೆ. ಅಸಾಹಯಕ ಮನುಷ್ಯ ಗಮ್ಯ ತಲುಪುವಲ್ಲಿ ಅವನಿಗಿರುವ ಆತಂಕ ಮತ್ತು ಆ ಸಮಯದಲ್ಲಿ ಯಾವುದೋ ದೂರದ ಸಂಬಂಧವೊಂದನ್ನು ಹೇಳಿಕೊಂಡು ಸಹಾಯ ಯಾಚಿಸುವ ಸ್ಥಿತಿ, ಅನಾಥರಾಗುವ ಪ್ರಜ್ಞೆ, ಯಾರಾದರೂ ಸಹಾಯ ಮಾಡಿಯಾರೆಂಬ ಧನಾತ್ಮಕ ಚಿಂತನೆ, ಹಾಲಾಡಿಯ ಉಡುಪರ ಮೂಲಕ ತೆರೆದುಕೊಳ್ಳುತ್ತದೆ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಶ್ರೀನಿವಾಸ, ಸಹಾಯವನ್ನು ನಿರಾಕರಿಸುವಾಗ ಕಥಾ ನಾಯಕ, ಮನುಷ್ಯ ಮನುಷ್ಯರನ್ನು ನಂಬಲಿಕ್ಕಾಗದ ಕಾಲದಲ್ಲೂ ಅವನ ಸಹಾಯಕ್ಕೆ ನಿಲ್ಲುತ್ತಾನೆ. ಮುಂದೆ ಉಡುಪರು ಅವನಿಂದ ಪಡೆದ ಎಲ್ಲಾ ಸಹಾಯವನ್ನೂ ಪದೇ ಪದೇ ನೆನಪಿಸಿಕೊಳ್ಳುವ ಮೂಲಕ ಮನುಷ್ಯ ಮನುಷ್ಯನನ್ನು ನಂಬಬಹುದು ಅನ್ನುವುದನ್ನು ದೃಢಪಡಿಸುತ್ತಾರೆ.
ನಾವು ಒಳ್ಳೆಯದು ಅಂದುಕೊಂಡು ಆರಂಭಿಸಿದರೆ ಎಲ್ಲವೂ ಒಳ್ಳೆಯದು; ಕೆಟ್ಟದಾದರೆ ಎಲ್ಲವೂ ಕೆಟ್ಟದ್ದೇ ಅನ್ನುವ ಹಾಗೆ ಮನುಷ್ಯನ ಆಂತರ್ಯದಲ್ಲಿ ಮೊಳೆತ ಒಂದು ನಿರ್ಧಾರ ಮುಂದೆ ಬದಲಾಗುವುದು ತನ್ನ ನಂಬಿಕೆಯಿಂದ ಮತ್ತು ಧನಾತ್ಮಕ ಚಿಂತನೆಯಿಂದ ಎನ್ನುವುದನ್ನು ಸಾಬೀತುಪಡಿಸುವ ಕಥೆ `ಜೋಯಿಸರ ಕುರ್ಚಿ'. ಜೋಯಿಸರಿಂದ ನಿಮಿತ್ಯ ಕೇಳಲು ಬರುವ ಜನರಿಗೆ ಅವರ ಕುರ್ಚಿಯ ಮೇಲಿರುವ ಗೌರವ ಮತ್ತು ಆ ಕುರ್ಚಿಯಲ್ಲಿ ಕುಳಿತು ಹೇಳುವವನ ಮಾತು ಎಲ್ಲವೂ ಗೌರವಕ್ಕೆ ಪಾತ್ರವಾದವುಗಳು. ದೂರದ ಊರಿನಿಂದ ಬರುವ ಹೆಂಗಸಿಗೆ, ಜೋಯಿಸರು ಮನೆಯಲ್ಲಿಲ್ಲದ ಸಮಯದಲ್ಲಿ ಕಥಾನಾಯಕನೇ ನಿಮಿತ್ಯವನ್ನು ಹೇಳುತ್ತಾನೆ. ಅವನಿಗೆ ಆ ಹೆಂಗಸಿನ ಪೂರ್ವಾಪರ ತಿಳಿದುಕೊಂಡು, ಅವನು ಹೇಳುವ ನಿಮಿತ್ಯ ಮುಂದೆ ಆ ಹೆಂಗಸಿನ ಸವತಿಯ ಮಗಳ ಬಾಳನ್ನು ಹಸನುಗೊಳಿಸುತ್ತದೆ. ಹೆಣ್ಣಿನ ಹೃದಯವಿದ್ರಾವಕ, ಕಠಿಣ ಪರಿಸ್ಥಿತಿಯನ್ನು ಜಾಣ್ಮೆಯಿಂದ ಪರಿಹರಿಸಿ, ಮುಂದೊಂದು ದಿನ ಅದೇ ಹುಡುಗಿ ಮೈಕೈ ತುಂಬಿಕೊಂಡು, ಸಾಕ್ಷಾತ್ ಲಕ್ಷ್ಮೀಯೇ ಬಂದಂತೆ ಅವನಲ್ಲಿ ತನ್ನ ಕಷ್ಟದ ದಿನಗಳು ದೂರವಾದುದನ್ನು ಹೇಳುತ್ತಾಳೆ. ಇದೊಂದು ಸಂಕಲನದ ಉತ್ತಮ ಕಥೆ ಮತ್ತು ಇದು ಓದುಗರ ಕಣ್ಣಲ್ಲಿ ಒಂದೆರಡು ಹನಿ ಹನಿಸಿದರೂ ಹೆಚ್ಚಲ್ಲ.
ಕತ್ತಲೆಯ ಕೊನೆಯಲ್ಲಿ ಬೆಳಕಿನ ರೇಖೆ ಇದ್ದೇ ಇರುತ್ತದೆಯೆನ್ನುವಂತೆ ತನ್ನ ಸಮಸ್ಯೆಗೂ ಒಂದು ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಿಂದ ಬರುವ ಕೃಷ್ಣಯ್ಯ, ತನ್ನ ಸಹಪಾಠಿ, ಪ್ರಾಣದ ಗೆಳೆಯನನ್ನು ಹುಡುಕಿಕೊಂಡು ಬರುವಾಗ ವಿಧಿ ಲಿಖಿತ ಬೇರೆಯೇ ಇರುತ್ತದೆ. ಗೆಳೆಯ ಪಾರ್ಶ್ವವಾಯು ಪೀಡಿತನಾಗಿ ಮಲಗಿದಲ್ಲಿಯೇ ಇರುವಾಗ ಅವನನ್ನು ಕೇಳಲು ಮನಸ್ಸಾಗದೆ ಹಿಂದಿರುಗಬೇಕೆನ್ನುವಾಗ ಅವರಿಬ್ಬರ ಬಾಲ್ಯದ ಘಟನೆಗಳನ್ನು ಹೇಳಲು ಅವನ ಮಕ್ಕಳೇ ಒತ್ತಾಯಿಸುತ್ತಾರೆ. ಹೀಗೆ ಸುಧಾಮನ (ಇಲ್ಲಿ ಶ್ರೀಮಂತ) ಮನೆಗೆ ಕೃಷ್ಣಯ್ಯ ಬರುವಾಗ ಬಾಲ್ಯದ ಗೆಳತನದಿಂದ ಅವನ ಬದುಕು ಮತ್ತೆ ಚಿಗುರುತ್ತದೆ. ಇದು `ಅಂಟಿನ ನೆಂಟಿನ ಕೊನೆ ಬಲ್ಲವರಾರೆ?' ಕಥೆ.
`ಕುಶಾವರ್ತ' ಒಂದು ತಪ್ಪಿನಿಂದ ಕೈ ಸೋತ ರಾಮಚಂದ್ರರು, ತಮ್ಮ ಮಡದಿಯ ಜೊತೆಗೆ ಕುಶಾವರ್ತಕ್ಕೆ ಬಂದು ಬದುಕು ಸಾಕು ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ತಾವು ಹಿಂದೊಮ್ಮೆ ಸಹಾಯ ಮಾಡಿದ್ದ ಪೇಪರ್ ಹಾಕುವ ಹುಡುಗನೇ ಅಲ್ಲಿ ಅವರನ್ನು ಕಂಡು ಆನಂದತುಂದಿಲನಾಗಿ ಅವರನ್ನು ಆದರಿಸುತ್ತಾನೆ. ಆಗ ಅವರ ಮುಖದಲ್ಲಿ ಹೊಸಕಳೆ ಜಿಗಿತು, ಬದುಕುವ ದಾರಿ ತುಂಬಾ ಇವೆ ಅನ್ನುವ ಅರಿವು ಮೂಡುತ್ತದೆ. ಹೇಗೋ ಬದುಕುತ್ತಿದ್ದ ಹುಡುಗ; ಈಗ ಇಷ್ಟು ಎತ್ತರಕ್ಕೆ ಏರಿರುವಾಗ, ತನಗೂ ಸಾಧ್ಯವಿಲ್ಲವೇ ಅನ್ನುವ ಜ್ಞಾನೋದಯವಾಗುತ್ತದೆ.
ಎರಡು ಸಂಸಾರಗಳ ಪ್ರೀತಿಧಾರೆಯ ನಡುವೆ, ವಿರಹದ ಬೇಗೆಯಲ್ಲಿ ಮಿಂದು ಮತ್ತೆ ಒಬ್ಬರಿಗೊಬ್ಬರು ಎದುರಾಗುವ ಪ್ರೇಮಿಗಳ ಸುತ್ತಾ `ಒಂದು ಪ್ರೇಮದ ಕಥೆ'. ಎಷ್ಟೋ ವರ್ಷಗಳ ಬಳಿಕ ಭೇಟಿಯಾದರೂ ತಮ್ಮ ಪ್ರೀತಿಯನ್ನು ಗೌರವದಿಂದಲೇ ಕಾಣುವ, ಆ ಪರಿಧಿಯಿಂದ ಹೊರಗೆ ಬಂದು ವಾಸ್ತವತೆಯನ್ನು ನೆಚ್ಚಿಕೊಂಡು, ಅಳುಕಿಲ್ಲದೆ, ಮುಚ್ಚುಮರೆಯಿಲ್ಲದೆ ತಿಳಿ ನಗುವಿನಿಂದಲೇ ಪರಿಸ್ಥಿತಿಯನ್ನು ಹದಗೊಳಿಸುವ ಸುಂದರ ಕಥೆ. ಕಳೆದು ಹೋದುದಕ್ಕಾಗಿ ಪರಿತಪಿಸುವುದಿಲ್ಲ. ಆದರೆ ಓದುಗನ ಮನಸ್ಸಿನಲ್ಲಿ ಆ ಭಾವನೆಯನ್ನು ಬಲವಾಗಿ ನಾಟುವಂತೆ ನಿರೂಪಿಸಿರುವ ಇದೊಂದು ಅಪರೂಪದ ಕಥೆ.
ಮನೆಯಲ್ಲಿರುವ ಮುದುಕಿಯರಿಬ್ಬರ ಮನಸ್ಸಮಾಧಾನಕ್ಕಾಗಿ ಮಗನನ್ನು ಕಳೆದುಕೊಂಡ ಸೊಮಯಾಜಿಗಳು ದೆಹಲಿಗೆ ಹೊರಟು, ಅಲ್ಲಿ ತಮ್ಮ ಕೆಲಸ ಕೈಗೂಡದೆ ನಿರಾಶರಾಗಿ ಹಿಂತಿರುಗುತ್ತಾರೆ. ಆ ಸಮಯದಲ್ಲಿ ರೈಲಿನಲ್ಲಿ ತನ್ನ ಬದುಕಿಗೆ ಅಂತ್ಯ ಬರೆಯಲು ಹೊರಟ ಕೈಗೂಸಿರುವ ಹೆಣ್ಣನ್ನು ತಡೆದು, ಆಕೆಯ ಕಥೆ ಕೇಳಿ ಸಹಾಯಕ್ಕೆ ಮುಂದಾಗುತ್ತಾರೆ. ಹಣದ ದಾಹದಲ್ಲಿ ಮುಳುಗಿದ ತನ್ನ ಗಂಡನಿಂದ ಹೊರಬರಲಾಗದ ಹೆಣ್ಣು, ಆತ್ಮಹತ್ಯೆಗೆ ಮುಂದಾಗುತ್ತಾಳೆ. ಇದನ್ನೆಲ್ಲಾ ತಿಳಿದುಕೊಂಡ ಸೊಮಯಾಜಿಯಾವರು ಆ ಮುತೈದೆ ಹೆಣ್ಣನ್ನು, ಮುದಿ ಜೀವಿಗಳ ನೆಮ್ಮದಿಗಾಗಿ ವಿಧವೆ ಸೊಸೆಯಾಗಿ ಬರುವಂತೆ ಕೇಳುವ `ಏನೋ ತೀಡಲು ಏನೋ ತಾಗೀತು' ಮನಕಲಕುವ ಕಥೆಯಾಗಿದೆ.
`ಒಂದು ಪ್ರೇಮದ ಕಥೆ'ಯಂತೆಯೆ ಕಾಲಘಟ್ಟದಲ್ಲಿ ಹುದುಗಿ ಹೋಗುವ ಪ್ರೀತಿಯ ಸಂಘರ್ಷಕ್ಕೆ, ಅಸಹಾಯಕತೆಗೆ ಬದುಕನ್ನೇ ಪಣತೊಟ್ಟು ಸುಗಮ ದಾರಿಯನ್ನು ಕಂಡುಕೊಳ್ಳುವ ನಾಯಕ ಮುಂದೊಂದು ದಿನ ತಾನು ಪ್ರೀತಿಸಿದ ಹೆಣ್ಣು ಎದುರಾದಾಗ ಅನೂಹ್ಯವಾದ ಬೆಳಕು ಆಕೆಯ ಕಣ್ಣುಗಳಲ್ಲಿ ಬೆಳಗುತ್ತದೆ. ಆ ಬೆಳಕಿನಲ್ಲಿ ಸಾವಿರ ಅರ್ಥಗಳು ಕಂಡರೂ, ತನ್ನ ಉದ್ವೇಗವನ್ನು ತಡೆದುಕೊಳ್ಳುವ ನಾಯಕ ತಾನು ಎತ್ತರಕ್ಕೆ ಏರಿದ ಕಾರಣಗಳನ್ನು ಬಿಚ್ಚಿಡುವ ಕಥೆ `ಸಮಾಗಮ'.
ತಾನು ಮದುವೆಯಾಗುವುದು ಎರಡನೆ ಸಂಬಂಧವೆಂದು ತಿಳಿದೂ, ಕೈ ಹಿಡಿಯುವವನ ಬಗ್ಗೆಯೂ ತಿಳಿದ ಪಾರ್ವತಿ, ಅವನ ಮನಸ್ಸಿನೊಳಗೆ ಉಳಿದು ಹೋದ ನೋವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಮುಂದೊಂದು ದಿನ ಅವನ ಕೊರಗನ್ನು ತಿಳಿದುಕೊಂಡು ಅದಕ್ಕೆ ಕಾರಣವನ್ನೂ ತಿಳಿದುಕೊಳ್ಳಲು ಹಂಬಲಿಸುತ್ತಾಳೆ. ಸತ್ಯ ಬೇರೆಯೇ ಇರುತ್ತದೆ. ಅವಳು ತಿಳಿದುಕೊಂಡಂತೆ ಗೆಳಯನ ಜೊತೆಗೆ ಓಡಿ ಹೋದ ಮೊದಲ ಹೆಂಡತಿಯನ್ನು ನೆನೆಯದೆ ಅವಳಿಂದ ತನ್ನ ರಕ್ತ ಹಂಚಿಕೊಂಡ ಮಗುವನ್ನು ನೆನೆದು ವೇದನೆಪಡುತ್ತಾನೆ. ಪಾರ್ವತಿಗೆ ಸತ್ಯದ ಅರಿವಾಗಿ ಮನಸ್ಸಿನೊಳಗೆ ಅಡಗಿದ, ಎಲ್ಲೂ ತೋರಗೊಡದ ಮಾತ್ಸರ್ಯ ಕರಗಿ ಜೀವನೋತ್ಸಾಹ ಮೂಡುತ್ತದೆ `ಮರದೊಳಡಗಿದ ಬೆಂಕಿ'ಯ ಹಾಗೆ. ನಂಬಿಕೆಗೆ ಅರ್ಹನಾದ, ಒಂದು ಕಾಲದಲ್ಲಿ ಎಲ್ಲರಿಂದಲೂ ಅಯೋಗ್ಯ ಅನಿಸಿಕೊಂಡವನು ಪ್ರತೀಕಾರ ತಿರಿಸಿಕೊಳ್ಳಲು ಬರುತ್ತಾನಾದರೂ, ಅಂತಹ ಸನ್ನಿವೇಶವನ್ನು ಸೃಷ್ಟಿಸಿಕೊಂಡರೂ, ತನ್ನ ಸೇಡಿನ ವಿಷಯವನ್ನು ತಾನು ಪ್ರೀತಿಸಿದ ಹುಡುಗಿಯ ಜೊತೆಗೆ ಹೇಳಿಕೊಳ್ಳುತ್ತಾನೆ. ಅವನ ಸೇಡನ್ನು ಅರಿಯದ ಅವಳು ಬೆದರುತ್ತಾಳೆ. ಕೆಟ್ಟವನಲ್ಲದಿದ್ದರೂ, ಅಂತಹ ಹಣೆಪಟ್ಟಿಯನ್ನು ಕಟ್ಟಿಕೊಂಡು ಬದುಕಿನಲ್ಲಿ ಸ್ಥಾನ ಮಾನ ಪಡೆದುಕೊಂಡಾಗ ದೂರಿದ ಜನರೇ ಆದರಿಸುತ್ತಾರೆ. ನೋವುಗಳಿದ್ದರೂ ಸೇಡು ತೀರಿಸಿಕೊಳ್ಳುವ ತುಡಿತವಿದ್ದರೂ ಕೊನೆಗೆ ತನ್ನ ಮನುಷ್ಯತ್ವವನ್ನು ತೋರಿಸುವ ಸುಂದರ ಕಥೆ `ಕೆಂಡ ತುಳಿದವನು'.
`ಅಸಂಬದ್ಧ' ಕಥೆಯಲ್ಲಿ ತಾನು ಬಯಸಿದ ಪ್ರೀತಿಗಾಗಿ ಹಂಬಲಿಸಿ, ಆ ಪ್ರೀತಿ ಮುಂದೆ ಅನಾವರಣಗೊಂಡರೂ ತನ್ನ ನಿರ್ಲಕ್ಷ್ಯದಿಂದ ಶರ್ಮಿಳೆಗೆ ಅದು ದಕ್ಕದೆ ಹೋಗುತ್ತದೆ. ಸಮಾಜದ ಕಟ್ಟು ಕಟ್ಟಳೆಗಳೆಂಬ ಬಂಧನದೊಳಗೆ ಸಿಲುಕಿ, ಸ್ವತಂತ್ರವಾಗಿ ಬದುಕಲು ಹವಣಿಸುವ, ಬದುಕಲಾರದೆ ಚಡಪಡಿಸುವ ಹೆಣ್ಣಿನ ಸುತ್ತಾ ಹೆಣೆದ `ಚಾಚು ಕೈಗಳ ದಾಟು'. ತನ್ನ ಅಂತರಂಗದಲ್ಲಿ ಭುಗಿಲೆದ್ದ ಭಾವನೆಗಳನ್ನು ಪ್ರಶ್ನಿಸುತ್ತಾ, ಉತ್ತರ ಹುಡುಕುತ್ತಾ, ತಾನು ಪ್ರೀತಿಸಿದ ಹುಡುಗನ ಮುಂದೆ ಹೇಳುವ ಕಥೆ.ತಾಯಿಯಾಗಲಿ ಅಥವಾ ಸಂಗಾತಿಯಾಗಲಿ; ಒಂದು ಹೆಣ್ಣಿನ ಮನಸ್ಸನ್ನು ಅರ್ಥಮಾಡಿಕೊಂಡಿರುವ ಮಗ, ಆತ ತೆಗೆದುಕೊಂಡ ನಿರ್ಧಾರಗಳು ಸಮಾಜಕ್ಕೆ ವಿರುದ್ಧವಾದರೂ, ಅದೆಲ್ಲವನ್ನೂ ಅರ್ಥಮಾಡಿಕೊಂಡು ಹೊಸ ಕ್ರಾಂತಿಗೆ ನಾಂದಿಹಾಡುವ ತಾಯಿಯೊಬ್ಬಳ ಅಂತರಂಗದಲ್ಲಿ ಅಡಗಿದ `ಅಪೂರ್ವ ರಾಗಗಳು' ಕಥೆಯಾಗಿ ಮೂಡಿವೆ.
ಈ ಸಂಕಲನದ ಒಂದು ಅಪರೂಪದ ಮತ್ತು ಅತ್ಯುತ್ತಮ ಕಥೆ `ನಿಗೂಢ'. ವಿಭಿನ್ನ ಕಥಾಹಂದರವಿರುವ ಈ ಕಥೆ ಅನೇಕ ಕೌತುಕಗಳನ್ನು ತಿಳಿಸುತ್ತಾ, ಹೊಸತನ್ನು ಬಿಚ್ಚಿಡುತ್ತಾ, ಏನೋ ಇದೆ ಅನ್ನುವಾಗ `ನಿಗೂಢ'ವನ್ನು ಅನಾವರಣಗೊಳಿಸುತ್ತದೆ. ಮದುವೆಯಾಗಿ ಎರಡೇ ದಿನಕ್ಕೆ ವಿಧವೆಯಾಗುವ ನಾಯಕಿ, ತನ್ನನ್ನು ಅಗಾಧವಾಗಿ ಪ್ರೀತಿಸಿದ ನಾಯಕನ ಜೊತೆಗೆ ತನ್ನ ಗಂಡನ ಸಾವಿನ ಹಿಂದಿರುವ ನಿಗೂಢತೆಯನ್ನು ತಿಳಿಸುತ್ತಾಳೆ. ಅವಳು ಹೇಳಿದ ಸತ್ಯ ವಾಸ್ತವತೆಗೆ ಹಿಡಿದ ಕನ್ನಡಿಯಂತೆ ಇದೆ. ಮುಂದೇನೋ ಇದೆ ಅನ್ನುವ ಕುತೂಹಲವಿರುವ ಈ ಕಥೆಯನ್ನು ಓದಿಯೇ ತಿಳಿಯಬೇಕು.
ನಾಯಕ ತನ್ನ ಪ್ರೀತಿಯನ್ನು ತೆರೆದಿಟ್ಟರೂ, ಒಂದೊಮ್ಮೆ ಅವನಿಂದ ಸಾಂತ್ವನ ಬಯಸಿದ ಹೆಣ್ಣು ಕೊನೆಗೆ ಅವನ ಬಡತನವನ್ನು ಎತ್ತಿ ತೋರಿಸಿ ಅವನನ್ನು ನಿರಾಕರಿಸುವ ಕಥೆ `ಹೇಳದೇ ಉಳಿದದ್ದು'. `ಮತ್ತೆ ಬಾರದೆ ಶ್ರಾವಣ'ದಲ್ಲಿ ಎಷ್ಟೋ ವರ್ಷಗಳಿಂದ ಮುರಿದು ಬಿದ್ದಿದ್ದ ತನ್ನ ಗಂಡನೊಂದಿಗಿನ ಸಂಬಂಧ ಮತ್ತೆ ಚಿಗುರಿಕೊಳ್ಳುವ ಹೆಣ್ಣಿನ ಬಾಳಿನ ಚಿತ್ರಣವಿದೆ.
`ಸುಮ್ಮನೆ' ಕಥೆ ಬರೀ ಸುಮ್ಮನೆಯಲ್ಲ. ಆಳವಾದ ಅರ್ಥವಿರುವ ಒಂದು ಅತ್ಯುತ್ತಮ ಕಥೆ. ಒಂದೊಮ್ಮೆ ತಾನು ವಾಸವಾಗಿದ್ದ ಮನೆಯ ಉನ್ನತಿಯನ್ನು ಕಂಡು ಸಂತೋಷ ಪಡುವ ಮುದಿ ಜೀವದ ಸಂತೃಪ್ತ ಮಾತುಗಳ ಹಂದರವಿರುವ ಕಥೆಯಿದು. ಸಣ್ಣ ಕಥೆಯಾದರೂ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಓದುಗರಲ್ಲಿ ಅನುಕಂಪವನ್ನು ಹುಟ್ಟಿಸುತ್ತದೆ.
ಶಾಂತರಾಮ ಸೋಮಯಾಜಿಯವರ ಹುಮ್ಮಸ್ಸಿನ ಮುನ್ನುಡಿ ಮತ್ತು ವಸುಧೇಂದ್ರ ಅವರ ತೂಕದ ಬೆನ್ನುಡಿಯಿರುವ ಈ ಪುಸ್ತಕಕ್ಕೆ ಅಪಾರ ಅವರ ಆಕರ್ಷಕ ಮುಖಪುಟವಿದೆ.
ಈ ಪುಸ್ತಕವನ್ನು ಸುಹಾಸಂ, `ವಾಗ್ದೇವಿ', ಹಯಗ್ರೀವ ನಗರ, ಉಡುಪಿ ಇವರು ಪ್ರಕಟಿಸಿದ್ದಾರೆ. ಬೆಲೆ ರೂ. ೬೦/-

No comments: