Tuesday, November 4, 2008

ಐವತ್ತನೆ ಕಥೆ


ರಾತ್ರಿಯ ನೀರವತೆಯನ್ನೂ ಮೀರಿ ಕೇಳುವ ಸಮುದ್ರದ ಬೋರ್ಗರೆತದ ಸದ್ದು, ಟಾರಸಿಯ ಮೇಲೆ ಕುಳಿರ್ಗಾಳಿಗೆ ಮೈ ಚೆಲ್ಲಿ ಕುಳಿತಿದ್ದವನನ್ನು ಎತ್ತಿ ಒಗೆದಂತಾಯಿತು. ಗೋಧಿ ಹಿಟ್ಟಿನ ಬಣ್ಣದ ಮರಳ ದಂಡೆಯ ಮೇಲೆ ಕಣ್ಣುಗಳು ಏಕಾಏಕಿ ಸರಿದಾಡಿ ಗಾಳಿಮರದ ತೋಪಿನ ಕಡೆಗೆ ಅಚಲವಾಗಿ ನಿಂತಿತು.ಕುರ್ಚಿಯ ಅಂಚಿಗೆ ಹಿಡಿದಿದ್ದ ಅಟ್ಟೆಯ ಜೊತೆಗಿದ್ದ ಕಾಗದಗಳು ಹಾರಿ ಟಾರಸಿಯ ಮೇಲೆ ಬಿದ್ದಾಗ, ಪೆನ್ನು ಜೇಬಿಗೆ ಸೇರಿಸಿ ಎದ್ದ. ಖಾಲಿ ಹಾಳೆಗಳು ಗಾಳಿಯ ಜೊತೆಗೆ ಬೆರೆತು ಅಣಕಿಸಿದಂತಾಯಿತು.ಮುಂಬೈನ ಕಪ್ಪು ಮರಳ ತೀರ, ಕಲುಷಿತ ನೀರಿನ ಸಮುದ್ರ, ಬರೆಯುವ ಉತ್ಸಾಹವನ್ನು ಜರ್ರನೆ ಇಳಿಸಿತ್ತು. ಬಂಡೆಯ ಮೇಲೆ ಕುಳಿತು ನೀರಿಗೆ ಕಾಲು ಇಳಿಸಿದ್ದ ತನುಹಾ ಚೀರಿದ್ದಳು."ನನ್ನಂತ ಒಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳದ ನೀನು ಒಂದಲ್ಲ ಒಂದು ದಿನ ಯಾರಿಗೂ ಗೊತ್ತಾಗದ ಹಾಗೆ ಸತ್ತು ಹೋಗ್ತೀಯಾ. ಆಗ ನಿಂಗಾಗಿ ಅಳೋರು ಯಾರು ಇರೋದಿಲ್ಲ ಸಮೀರ. ಬರಿ... ಇಡೀ ದಿನ ಬರಿತಾನೆ ಇರು... ನಿನ್ನ ಕಥೆ"ಎಲ್ಲಿಂದಲೋ ಹಾರಿ ಬಂದ ದೈತ್ಯ ಅಲೆಯೊಂದು ಬಂಡೆಯ ಮೇಲಿದ್ದವಳನ್ನು ಸೆಳೆದೊಯ್ದಿತ್ತು!"ಆ ಕಥೆಗಾರನ ಜೊತೆಗೆ ಸುತ್ತಾಡ್ತಾ ಇದ್ಲು. ಅವಳ ಸಾವು ಅಸಹಜಾಂತ್ಲೆ ಬರ್ದು ಬಿಡಿ"ಪತ್ರಿಕೆಯ ಪ್ರತಿನಿಧಿಗಳ ಮುಂದೆ ತೋಡಿಕೊಂಡಿದ್ದ ತನುಹಾಳ ಚಿಕ್ಕಪ್ಪ ಬಿಷನ್‍ಲಾಲ್.ನೆನಪುಗಳನ್ನು ಕೊಡವಿ ಕೆಳಗೆ ಬಿದ್ದ ಹಾಳೆಗಳನ್ನೆಲ್ಲಾ ಜೋಡಿಸಿ ಅಟ್ಟೆಯ ಕ್ಲಿಪ್‍ಗೆ ಸೇರಿಸಿದ.ಶುಭ್ರ ನೀಲಿಯ ಆಕಾಶದಲ್ಲಿ ಇದ್ದೂ ಇಲ್ಲದಂತಿದ್ದ ಚಂದಿರನ ಬೆಳಕು ಹರಡಿದ್ದ ಸಮುದ್ರ ದಂಡೆಯತ್ತ ದೃಷ್ಟಿ ಹೊರಳಿಸಿದ.ಇನ್ನೊಂದೆರಡು ಗಂಟೆಯಲ್ಲಿ ಸಮುದ್ರ ಶಾಂತವಾಗುವುದೆಂದು ತಿಳಿದಿತ್ತು. ಟಾರಸಿಯಿಂದ ಇಳಿದು ಹಜಾರಕ್ಕೆ ಬಂದ.ಮುಂಬಾಗಿಲನ್ನು ಸರಿಸಿ ಹೊರಗೆ ಇಣುಕು ಹಾಕಿದ. ಮನೆಯ ಸುತ್ತಾ ಎರಡಾಳಿನ ಎತ್ತರಕ್ಕೂ ಬೆಳೆದಿದ್ದ ಒರಟು ಹುಲ್ಲಿನ ಗರಿಗಳು ಗಾಳಿಗೆ ಕಿಚಾಯಿಸುವಂತೆ ಸದ್ದು ಮಾಡಿದವು. ಅವುಗಳ ನಡುವೆಯಿದ್ದ ಕಾಲುದಾರಿಯಲ್ಲಿ ನಡೆಯುವ ಧೈರ್ಯ ಉಡುಗಿ ಹೋಯಿತು. ಹಿಂದಕ್ಕೆ ಸರಿದು ಮೆಟ್ಟಿಲ ಮೇಲೆ ನಿಂತ.ಹುಲ್ಲುಗಳೆಡೆಯಿಂದ ಸದ್ದು ಕೇಳಿಸಿತು!ಕಿವಿಗಳನ್ನು ತೆರೆದು ಮಂದ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡ."ಯಾರಲ್ಲಿ?" ಬಾಯಿಯಿಂದ ಹೊರಟ ಪ್ರಶ್ನೆ ಗಂಟಲಿನಲ್ಲಿಯೇ ಇಳಿದಂತಾಯಿತು.ಪ್ರತಿಕ್ರಿಯೆ ಇಲ್ಲದಾಗ ಹಜಾರಕ್ಕೆ ನುಗ್ಗಿ, ಮುಂಬಾಗಿಲನ್ನು ಮುಚ್ಚಿ ಚಿಲಕ ಸೇರಿಸಿದ. ಇದ್ದೂ ಇಲ್ಲದಂತೆ ಉರಿಯುತ್ತಿದ್ದ ವಿದ್ಯುತ್ ದೀಪ, ರಾತ್ರಿಗೆ ಕೈ ಕೊಡುವ ಸೂಚನೆಯಿತ್ತಿತ್ತು. ಗೋಡೆಯ ಪಕ್ಕಕ್ಕಿದ್ದ ಲಾಂದ್ರವನ್ನು ಬೆಳಗಿಸಿ ವಿದ್ಯುತ್ ದೀಪದ ಗುಂಡಿ ಆರಿಸಿದ."ಒಳ್ಳೆಯದಾಯಿತು... ನಾನು ರಾತ್ರಿಗೆ ಬರ್‍ತೀನೀಂತ ನಿಮ್ಗೆ ಗೊತ್ತು... ಪಕ್ಕ ಬಾಗಿಲು ತೆಗ್ದು ಬಿಡಿ" ಕಿಟಕಿಯ ಬಳಿಯಿಂದ ಕೇಳಿದ ಪಿಸುದನಿಗೆ ಎದೆಗೆ ಕೈ ಹಚ್ಚಿ ನಿಂತ."ಸಮೀರ, ಬಾಗಿಲು ತೆಗೆಯಿರಿ..." ಕಿಟಿಕಿಯ ಬಳಿಯಿಂದ ಸರಿದು ಮುಂಬಾಗಿಲಿಗೆ ಬಂದು ನಿಂತಿತು ಹೆಣ್ಣು! ಜೊತೆಗೆ ಬಾಗಿಲಿನ ಮೇಲೆ ನಯವಾಗಿ ಗುದ್ದಿತು.ಗೊಣಗುತ್ತಾ ಅಸಹಾಯಕತೆಯಿಂದ ಬಾಗಿಲು ತೆರೆದು ನಿಂತ. ತಟ್ಟನೆ ಒಳಗೆ ಸೇರಿದ ಹೆಣ್ಣು ಬಾಗಿಲು ಮುಚ್ಚಿ ನಿಂತಾಗ ನಿಟ್ಟುಸಿರಿಟ್ಟ."ನಿಂಗೆ ಅದೆಷ್ಟು ಸಲ ಹೇಳಿದ್ದೀನಿ. ಹೀಗೆ ರಾತ್ರಿಗೆಲ್ಲಾ ಬರ್‍ಬೇಡಾಂತ. ನಂಗೆ ಇಷ್ಟವಾಗೋದಿಲ್ಲ"ಲಾಂದ್ರದ ಬೆಳಕಿಗೆ ಮುಖವೊಡ್ಡಿ ನಿಂತ. ಅವನ ದೈತ್ಯ ನೆರಳನ್ನು ನೋಡಿ ಕಿಲಕಿಲನೆ ನಕ್ಕ ಹೆಣ್ಣು ಮೇಜಿನ ಬಳಿ ಸರಿದು ಅಟ್ಟೆಯ ಮೇಲಿದ್ದ ಕಾಗದಗಳನ್ನು ತೆಗೆದು ಬೆಳಕಿಗೆ ಹಿಡಿಯಿತು.ಐವತ್ತನೆ ಕಥೆ!ಹಾಳೆಯ ಮೇಲಿದ್ದ ಶೀರ್ಷಿಕೆಯನ್ನು ಓದಿ ಬಾಯಿಯಿಂದ, `ಪ್ಚ್!' ಸದ್ದು ಹೊರಡಿಸಿತು."ಸಮೀರ, ನಾನು ನಿಮ್ಮ ಅಭಿಮಾನೀಂತ ಹೇಳ್ದೆ. ನಿಮ್ಮ `ಐವತ್ತನೆ ಕಥೆ' ಯಾವಾಗ ಮುಗಿಸ್ತೀರೀಂತ ನನಗೆ ಕಾತುರ. ನೀವು ನೋಡಿದ್ರೆ ಶೀರ್ಷಿಕೆ ಬರೆದು ನಿಲ್ಸಿದ್ದೀರಾ... ನನಗೆ ಕಥೆ ಹೇಳಿದ ವೇಗದಲ್ಲಿಯೆ ಬರೆದು ಮುಗಿಸಿ. ನೀವು ಹೇಳಿದ ಕಥೆ ಕುತೂಹಲವಾಗಿತ್ತು. ಬೇಕಿದ್ರೆ ಇನ್ನೊಂದೆರಡು ದಿನ ನಾನು ಇತ್ತ ತಲೆ ಹಾಕೋದಿಲ್ಲ. ತನುಹಾ ಬಂಡೆ ಜಾರಿ ಬಿದ್ದಿಲ್ಲಾಂತ ಹೇಳಿದ್ರಿ... ಅದು ನನ್ನಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಕಥೆಗೊಂದು ಅಂತ್ಯ ಬರ್‍ದು ಬಿಡಿ"ಹಾಳೆಗಳನ್ನು ಮೇಜಿನ ಮೇಲೆ ಎಸೆದ ಹೆಣ್ಣು ಅವನನ್ನು ತಬ್ಬಿ ಹಿಡಿಯಿತು. ಕೊಸರಾಡಿಕೊಂಡರೂ ಉಪಯೋಗವಿಲ್ಲವೆಂದು ಗೊತ್ತು.ಸಮುದ್ರದ ಬೋರ್ಗರೆತ ನಿಲ್ಲುವ ಸೂಚನೆಯಂತೆ ಗಾಳಿ ಬಲವಾಗಿ ಬೀಸಿತು. ಹುಲ್ಲು ಗರಿಗಳ ಒರೆಸು ಶಬ್ದದೊಂದಿಗೆ ತೂರಿ ಬಂದ ಗಾಳಿ ಲಾಂದ್ರವನ್ನು ಆರಿಸಿತು."ಒಳ್ಳೆಯದಾಯ್ತು ಬಿಡಿ" ಕತ್ತಲು ಆವರಿಸಿದಾಗ ಹೆಣ್ಣು ಪಿಸು ದನಿಯಲ್ಲಿ ನುಡಿಯಿತು. ಸಮುದ್ರ ಶಾಂತವಾದಂತಾಯಿತು. ಎದ್ದು ಕುಳಿತು ಬಾಗಿಲಿನತ್ತ ದೃಷ್ಟಿ ಹಾಯಿಸಿದ. ಹೆಣ್ಣು ಹೊರಟು ಬಾಗಿಲತ್ತ ನಿಂತಿದ್ದಳು."ಸಮೀರ, ಗಾಳಿಮರದ ತೋಪಿನವರೆಗೂ ನನ್ನ ಬಿಟ್ಬಿಡಿ" ದನಿಯಲ್ಲಿ ಆತಂಕ ತುಂಬಿತ್ತು."ಶಾಲಿ, ನಿನಗೆ ನಾನು ಎಷ್ಟು ಸಲ ಹೇಳಿದ್ದೆ. ನೀನು ಕೇಳ್ತಾ ಇಲ್ಲ. ಈಗ ನನ್ನನ್ನು ಸಿಕ್ಕಿ ಹಾಕಿಕೊಳ್ಳೊ ಹಾಗೇ ಮಾಡ್ತಿಯಾ" ಗೊಣಗುತ್ತಲೇ ಅವಳ ಹಿಂದೆ ನಡೆದ.ಹುಲ್ಲುಗಳ ನಡುವಿನ ದಾರಿ ಕ್ರಮಿಸಿ ಗಾಳಿಮರದ ತೋಪಿನ ಬಳಿ ಬರುವವರೆಗೂ ಕಿವಿಗಳಿಗೆ ಗಾಳಿ ಸೇರದಂತೆ ಮುಖಕ್ಕೆ ಸೆರಗು ಸೇರಿಸಿ ನಡೆಯುತ್ತಿದ್ದ ಶಾಲಿನಿ, ಅವನಿಗೆ ಹೇಳದೆ ಹಂಚಿನ ಮನೆಯತ್ತ ಓಡಿದಳು.ಮುಂದೆ ಹೆಜ್ಜೆ ಎತ್ತಿಡಲಿದ್ದವನು ಒಮ್ಮೆ ಸುತ್ತಲೂ ದೃಷ್ಟಿ ಹಾಯಿಸಿದ. ರಬ್ಬರ್ ಪೈಪ್‍ಗಳ ಮೇಲೆ ಲಂಗರು ಹಾಕಿ ನಿಂತ ನಾಡದೋಣಿಗಳ ಬಳಿಯಿಂದ ಪೆಟ್ರೋಮ್ಯಾಕ್ಸ್‍ನ ಬೆಳಕು ಸ್ಪಷ್ಟವಾಗಿ ಗೋಚರಿಸಿತು. ಅಪರೂಪವೇನಲ್ಲ, ಅದೆಷ್ಟೋ ಬಾರಿ ನಡುರಾತ್ರಿಯವರೆಗೂ ಟಾರಸಿಯಲ್ಲಿ ಕುಳಿತು ಬರೆಯುವಾಗ ಕಂಡಿದ್ದ. ಮೊದಮೊದಲು ಕುತೂಹಲವಿತ್ತು. ದೀಪದ ಬೆಳಕಿನ ಸುತ್ತಾ ಕುಳಿತು ಹೊಟ್ಟೆ ಉಬ್ಬೇರಿಸುವಂತೆ ಕುಡಿದು, ಇಸ್ಪೀಟು ಎಲೆಗಳ ಆಟವಾಡುತ್ತಿದ್ದಾರೆಂದು ತಿಳಿದಿದ್ದ. ಶಾಲಿನಿಯ ಪರಿಚಯವಾದ ನಂತರ ಕುತೂಹಲ ಇಳಿದಿತ್ತು. ಅವಳಿಗೂ ಗೊತ್ತಿಲ್ಲದ ಸಂಗತಿ ಅದು!ಮರದ ಸಾಲು ಹಿಡಿದು ವೇಗದ ಹೆಜ್ಜೆ ಹೊರಳಿಸಿದ. ಅಭ್ಯಾಸವಿಲ್ಲದ ಮರಗಳ ದಂಡೆಯ ಮೇಲಿನ ನಡುಗೆ ವೇಗವನ್ನು ನಿಯಂತ್ರಿಸುತ್ತಿತ್ತು.ತೋಪು ಮುಗಿದು ತೆರೆದ ಭಾಗದತ್ತ ಹೆಜ್ಜೆ ಹಾಕುವಾಗ ಗೊಗ್ಗರು ದನಿಯೊಂದು ಕೇಳಿ ಬೆಚ್ಚಿ ಬಿದ್ದ. ಕಾಲು ತಟಸ್ಥವಾಯಿತು."ನೀನು ಇಂತಹ ರಾತ್ರಿಯಲ್ಲಿ ಆ ಹೆಣ್ಣಿನ ಜೊತೆಗೆ ಓಡಾಡೋದು ಒಳ್ಳೆಯದಲ್ಲ. ನಾನು ನಿನ್ನ ಹಿತೈಷಿಯಾಗಿ ಹೇಳ್ತಾ ಇದ್ದೀನಿ"ಮಾತುಗಳು ಬಂದಾಗ ಧೈರ್ಯ ತುಂಬಿತು. ಮುಂಬೈ ತೊರೆದು ದಕ್ಷಿಣದ ಕಡಲತಡಿಗೆ ಬಂದಾಗ ವಿಧೇಯನಂತೆ ನಿಂತು ಉಪಚರಿಸಿದ್ದ ಚಂದ್ರಚೂಢ. ಉಳಿದುಕೊಳ್ಳಲು ಪಾಳು ಬಿದ್ದಂತಿದ್ದ ಅವನ ದೂರದ ಸಂಬಂಧಿಯೊಬ್ಬರ ಮನೆಯನ್ನು ಐದು ನೂರು ರೂಪಾಯಿಗಳ ಬಾಡಿಗೆಗೆ ನೀಡಿದ್ದ."ಚಂದ್ರಚೂಢ, ಬರೋ ಇಚ್ಛೆ ಇರ್‍ಲಿಲ್ಲ. ಆ ಹೆಣ್ಣು ನನ್ನ ಹುಡುಕಿಕೊಂಡು ಬಂದಿದ್ಲು. ಮನೆಯವರೆಗೂ ತಲುಪಿಸೋದಿಕ್ಕೆ ಹೇಳಿದ್ಲು"ಚಂದ್ರಚೂಢ ಒಣ ನಗೆ ನಕ್ಕ."ಅವಳು ಮಹಾ ಕುತಂತ್ರಿ. ನಿನ್ನ ಹೊಸಬಾಂತ ಏಮಾರಿಸಿ ಬಿಡ್ತಾಳೆ" ಚಂದ್ರಚೂಢ ತಟ್ಟನೆ ಮಾತು ನಿಲ್ಲಿಸಿ ಕತ್ತಲಲ್ಲಿ ಹೆಜ್ಜೆ ಹಾಕಿ ಹೊರಟ.ಸಮೀರ ಹುಲ್ಲು ಮೆದೆಯ ಸೀಳು ದಾರಿ ಹಿಡಿದು ನಡೆದ. ಏಕಾಏಕಿ ಹೆಣ್ಣಿನ ಆರ್ತನಾದ ಕೇಳಿಸಿತು. ಎದೆಗೆ ಕೈ ಹಚ್ಚಿ ನಿಂತ!ದೋಣಿಯ ಬಳಿಯಿದ್ದ ಪೆಟ್ರೋಮ್ಯಾಕ್ಸ್ ದೀಪ ಆರಿತು. ಅಲ್ಲಿದ್ದ ಮಂದಿ ಚದುರಿದಂತೆ ಕಂಡರು. ಅಲ್ಲಿ ನಿಂತಿರಲಾರದೆ ವೇಗದ ಹೆಜ್ಜೆಯಿಡುತ್ತಾ ಬಾಗಿಲು ತೆರೆದು ಒಳಗೆ ಸೇರಿಕೊಂಡ.ಸಾವು ಆವರಿಸಿದಂತೆ ಚೀರಿಕೊಂಡಿತ್ತು ಹೆಣ್ಣು!
***
ಸಮುದ್ರ ಕೊರೆತಕ್ಕೆ ತಡೆಗೋಡೆಯಂತೆ ಹಾಕಿದ್ದ ಕಲ್ಲು ರಾಶಿಗಳನ್ನು ಜಿಗಿದು ಗಾಳಿಮರದ ತೋಪಿನಿಂದ ಹಾದು ರಸ್ತೆಯ ಹಾದಿ ಹಿಡಿದ ಕಥೆಗಾರ.ನೆಲದವರೆಗೂ ಇಳಿದಿದ್ದ ಮಂಗಳೂರಿನ ಹಂಚಿನ ಸಣ್ಣ ಮನೆ ಅದು. ಜನ ಸಮೂಹವೆ ಅಲ್ಲಿ ನೆರೆದಿತ್ತು.ಚಂದ್ರಚೂಢ ಗಾಳಿಯಲ್ಲಿ ತೂರಿ ಕಳುಹಿಸಿದ್ದ ಸಂದೇಶ ಅದು! ಹೃದಯ ಕೈಯಲ್ಲಿಯೇ ಹಿಡಿದುಕೊಂಡು ಬಂದಿದ್ದ ಸಮೀರ.ರಾತ್ರಿಗೆ ತನ್ನಿಂದ ಬೀಳ್ಕೊಟ್ಟ ಹೆಣ್ಣು ಶವವಾಗಿದ್ದಾಳೆ?! ಅವಳ ಕೊರಡಿನಂತಹ ದೇಹ ನೋಡುವ ಧೈರ್ಯವಿರಲಿಲ್ಲ. ಹೋಗದಿದ್ದರೆ ಚಂದ್ರಚೂಢನ ವ್ಯಂಗ್ಯದ ಮಾತುಗಳನ್ನು ಎದುರಿಸಬೇಕಾದ ಪರಿಸ್ಥಿತಿ. ಯಾವುದೋ ಅವಿನಾಭಾವ ಸಂಬಂಧ ಬೆಳೆದಿತ್ತು."ನಿಮ್ಮ ಎಲ್ಲಾ ಕಥೆಗಳನ್ನು ಓದಿದ್ದೀನಿ ಸಮೀರ. ಕುತೂಹಲ ಉಳಿಸಿಕೊಂಡು ಅದೇಗೆ ಬರಿತೀರೋ? ನಿಮ್ಮ ಶೈಲಿ ಕೂಡ ವಿಭಿನ್ನ. ಮುಂದೆ ಯಾವ ಕಥೆ ಬರಿತೀರಾ?"ಸಮುದ್ರ ದಂಡೆಯಲ್ಲಿ ಕುಳಿತು ಕಾಗದದ ಮೇಲೆ ಪೆನ್ನು ಆಡಿಸುತ್ತಿದ್ದಾಗ ಅಲೆಗಳ ಜೊತೆಗೆ ಆಟವಾಡುತ್ತಿದ್ದವಳು ಪರಿಚಯ ಮಾಡಿಕೊಂಡು ಆಶ್ಚರ್ಯದಿಂದ ಕೇಳಿದ್ದಳು.ಸ್ಫುಟವಾಗಿ ಶಿಲ್ಪಿ ಕಡೆದ ಶಿಲ್ಪದಂತಿದ್ದ ದೇಹ ಸೌಂದರ್ಯವನ್ನು ಪುರುಷರ ಕಣ್ಣಿಗೆ, ಬಾಣ ಬಿಟ್ಟಷ್ಟೆ ವೇಗವಾಗಿ ಆಕರ್ಷಿಸುತ್ತಿದ್ದಳು.ಕಥೆಗಾರನೆಂಬ ಆತ್ಮೀಯತೆ, ಜೊತೆಗೆ ಒಂಟಿ ಯುವಕ! ಎಲ್ಲರಿಗಿಂತಲೂ ಬಹಳವಾಗಿಯೇ ಹಚ್ಚಿಕೊಂಡಿದ್ದಳು.ಬದುಕಿನ ಕಹಿ ಘಟನೆಯನ್ನು ಬಿಚ್ಚಿಟ್ಟ ಕಥೆಯ ರೂಪದಲ್ಲಿ!"ತನುಹಾಳ ಸಾವು ನಿಜವಲ್ಲಾಂತ ನೀವು ಹೇಗೆ ನಿರೂಪಿಸ್ತೀರಾ?" ಕಥೆ ಕೇಳಿದ ನಂತರ ತೊದಲಿದ್ದಳು."ಅದನ್ನು ನಿನಗೆ ಹೇಳಿದ್ರೆ ಮಜ಼ಾ ಇರೋಲ್ಲ ಶಾಲಿ. ಒಂದು ವಾರದಲ್ಲಿ ಬರೆದು ಮುಗಿಸ್ತೀನಿ. ನೀನೇ ಓದು..."ಶೀರ್ಷಿಕೆಯಲ್ಲಿಯೇ ನಿಂತಿತ್ತು ಕಥೆ. ಹೇಳಲೇ ಬಾರದಿದ್ದ ಬದುಕಿನ ಕಥೆ. ತನುಹಾಳ ಜೊತೆಗಿನ ನಿಜ ಬದುಕು! ತಪ್ಪಿ ನಾಲಗೆ ಒದರಿತ್ತು ಅದನ್ನು.ಜನ ಸಮೂಹದ ನಡುವೆ ತೂರಿಕೊಂಡು ಮನೆಯ ಒಳಗೆ ಇಣುಕು ಹಾಕಿದ. ಸತ್ತವಳ ಮುಖದಲ್ಲಿ ಪ್ರಶಾಂತತೆಯಿರಲಿಲ್ಲ. ಸಾವಿನ ಭೀತಿ ಮುಖದಲ್ಲಿ ವಿಕಾರವಾಗಿತ್ತು. ನುಣುಪು ಹೊಟ್ಟೆಯ ಮೇಲೆ ಬಲವಾಗಿ ಇರಿದಂತೆ ಇತ್ತು ಗಾಯ. ಜಗುಲಿಯ ಉದ್ದಕ್ಕೂ ನೀರು ಹರಿದಂತೆ ಕಾಣುತ್ತಿತ್ತು ರಕ್ತ!ಹೆಚ್ಚು ಹೊತ್ತು ನಿಲ್ಲಲಾರೆನೆನಿಸಿತು. ಹಾಗೇ ಹಿಂದಕ್ಕೆ ತಿರುಗಿದ.ಭುಜದ ಮೇಲೆ ಭಾರವಾದ ಕೈಗಳು ಬಿದ್ದಾಗ ಬೆದರಿದ. ಮುಖ ತಿರುಗಿಸಿ ನೋಡಿದ. ಚಂದ್ರಚೂಢ!ಯಾವೊಂದು ಭಾವನೆಯೂ ಆ ನೋಟದಲ್ಲಿರಲಿಲ್ಲ. ಮುಖ ಮತ್ತಷ್ಟು ಕಳಹೀನವಾಯಿತು."ನಿನ್ನೆ ರಾತ್ರಿಗೆ ನಿನ್ನ ಜೊತೆಗಿದ್ಲು... ಪೊಲೀಸ್ ನಿನ್ನ ಮನೆಯವರೆಗೂ ಬಂದ್ರೂ ಆಶ್ಚರ್ಯವಿಲ್ಲ"ಬಾಂಬ್ ಸಿಡಿಸಿದಂತೆ ಹೇಳಿದ. ಸಂಪೂರ್ಣ ತಿರುಗಿದ ಸಮೀರ ತರತರ ಕಂಪಿಸಿದ. ತಾನಾಗಿ ಮೈ ಮೇಲೆ ಎಳೆದುಕೊಂಡ ಸಮಸ್ಯೆ.ಚಂದ್ರಚೂಢನ ಕೈ ಹಿಡಿದುಕೊಂಡು ತೆಂಗಿನ ತೋಟದ ಮಧ್ಯೆ ಬಂದ. ಕಣ್ಣೀರು ಯಾವ ಕ್ಷಣದಲ್ಲಿಯಾದರೂ ಹೊರಗೆ ಬರುವಂತೆ ಇತ್ತು."ಚಂದ್ರಚೂಢ, ನನ್ನ ಹೆದರಿಸ್ಬೇಡ. ನನ್ನ, ಶಾಲಿನಿಯ ಸಂಬಂಧ ಯಾರಿಗೂ ತಿಳಿಯದಂತೆ ಕಾಪಾಡು" ಆತುರಾತುರವಾಗಿ ಜೇಬಿಗೆ ಕೈಯಿಳಿಸಿ ಐದು ನೂರರ ಒಂದು ನೋಟು ತೆಗೆದು ಅವನ ಕಿಸೆಯಲ್ಲಿಳಿಸಿದ.ಗಂಭೀರ ಚಿಂತೆಗೊಳಗಾದ."ನಿನ್ನ ತಪ್ಪಿಲ್ಲ ಸಮೀರ. ಅವಳು ನಿನ್ನನ್ನ ತುಂಬಾ ಪ್ರೀತಿಸಿದ್ಲು. ನಿನ್ನ ಕಥೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ಲು... ಆದ್ರೆ...""ಆದ್ರೆ... ಏನು? ನನ್ನ ಜೊತೆಗೆ ದೈಹಿಕ ಸಂಬಂಧ ಇತ್ತೂಂತನಾ?" ಅಲುಗಿಸಿ ಕೇಳಿದ. ಚಂದ್ರಚೂಢ ನೆರೆದಿದ್ದ ಜನರ ಕಡೆಗೆ ನೋಡಿದ."ಅಲ್ಲ... ನಿನ್ನ ಐವತ್ತನೆ ಕಥೆ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ಲು. ತನುಹಾ ನಿನ್ನ ಕಲ್ಪನೆಯ ಹೆಣ್ಣಲ್ಲವಂತೆ... ನಿನ್ನ ಬದುಕಿನಲ್ಲಿ ಬಂದ ಹುಡುಗಿಯಂತೆ. ಅವಳ ಸಾವು ನಿನ್ನನ್ನು ಮುಂಬೈ ಬಿಟ್ಟು ಬರುವಂತೆ ಮಾಡಿದೆಯಂತೆ. ನಿಜವೇನಾ?"ತತ್ತರಿಸಿದ ಕಥೆಗಾರ ತಲೆಯ ಮೇಲೆ ಕೈಯಿಟ್ಟು ನಿಂತ. ಚಂದ್ರಚೂಢನ ಸಾಂತ್ವನದ ಕೈಗಳು ಮತ್ತೊಮ್ಮೆ ಭುಜದ ಮೇಲೆ ಬಿದ್ದಾಗ ಕಣ್ಣೀರು ಇಳಿಯಿತು.ಪೊಲೀಸ್ ಜೀಪು ರಸ್ತೆಯ ನಡುವೆ ನಿಂತಾಗ ಎಚ್ಚರಿಸಿದ."ನೀನು ಮನೆ ಸೇರ್‍ಬಿಡು. ನನಗೆ ಗೊತ್ತಿರೋ ವಿಷಯ ನಾನು ಯಾರಿಗೂ ಹೇಳೊದಿಲ್ಲ" ರಸ್ತೆ ದಾಟಿ ಮರಳ ರಾಶಿಯ ಮೇಲೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಮನೆಯತ್ತ ನಡೆದ.ಮುಂಬೈನ ಸಮುದ್ರ ತೀರಕ್ಕಿಂತ ದಕ್ಷಿಣದ ತೀರ ಅಪಾಯವಲ್ಲದ ತಾಣವೆಂದು ತಿಳಿದಿದ್ದ. ನಿರ್ಧಾರ ಬುಡಮೇಲಾಯಿತು.ಶಾಲಿನಿ, ತನುಹಾಳ ಬಗ್ಗೆ ತಲೆಕೆಡಿಸಿಕೊಂಡಿದ್ದಾಳೆ! ತನ್ನಿಂದ ಸತ್ಯ ತಿಳಿದು ಏನೋ ಸಾಧಿಸಲು ಹೊರಟಿದ್ದಾಳೆ! ಅವಳ ಸಾವು ತನಗೆ ಪ್ರತಿಕೂಲವೇ ಆಗಿದೆ!ನಿಡಿದಾದ ಉಸಿರು ದಬ್ಬಿ ಮಂಚಕ್ಕೊರಗಿದ.ಚಂದ್ರಚೂಢ ನಂಬಿಕೆಯ ವ್ಯಕ್ತಿ. ಶಾಲಿನಿಗೆ ಹೇಳಿದ ತನುಹಾಳ ಕಥೆ ಅವನ ಕಿವಿಯ ಮೇಲೂ ಬಿದ್ದಿದೆ. ತಲೆ ಒಂದೇ ಸಮನೆ ಸಿಡಿಯುವ ನೋವು.ಅನಿರೀಕ್ಷಿತವೆಂಬಂತೆ ಬಾಗಿಲ ಮೇಲೆ ಬಡಿತದ ಸದ್ದು! ಜೊತೆಗೆ ಬೂಟುಗಳ ಸದ್ದು! ಆತಂಕದಿಂದ ಎದ್ದು ಕುಳಿತ. ಮೆದುಳು ನಿಷ್ಕ್ರೀಯವಾಯಿತು.ಪೊಲೀಸ್ ಬರದಂತೆ ನಿಗ್ರಹಿಸುತ್ತೇನೆಂದಿದ್ದ ಚಂದ್ರಚೂಢ. ಅವನ ಮೇಲಿರಿಸಿದ ಅತಿಯಾದ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾನೆ. ಬೆದರು ಕೈಗಳಿಂದಲೇ ಬಾಗಿಲು ತೆರೆದು ನಿಂತ.ಅವನನ್ನು ದೂಡಿಕೊಂಡಂತೆ ಬಂದ ಚಂದ್ರಚೂಢ. ಜೊತೆಗೆ ನಡುವಯಸ್ಸಿನ ದಢೂತಿ ಹೆಂಗಸು. ಉಪಚರಿಸುವ ಅಗತ್ಯವಿಲ್ಲದಂತೆ ಬೆನ್ನು ಮುರಿದ ಕುರ್ಚಿಯಲ್ಲಿ ದೊಪ್ಪನೆ ಕುಸಿದು ಕುಳಿತಿತು."ಸಮೀರ, ಇವರು ಈ ಮನೆಯ ಒಡತಿ... ಶಶಿರೇಖಾಂತ. ನೀನು ಎದುರಿಸುತ್ತಿರೋ ಸಮಸ್ಯೆಯಲ್ಲಿ ಇವಳು ಸಿಕ್ಕಿ ಬಿದ್ದಿದ್ದಾಳೆ"ಮೊದಲೇ ಹೆದರಿದವನ ಮೇಲೆ ಚೇಳು ಹಾಕಿದಂತಾಯಿತು. ಗೋಡೆಗೆ ಅಂಟಿದಂತೆ ಒರಗಿದ."ನಾನು ಎದುರಿಸುತ್ತಿರೋ ಸಮಸ್ಯೆ ಯಾವುದು?" ಬೆರಗು ಕಣ್ಣಿನಿಂದ ಕೇಳಿದ ಕಥೆಗಾರ."ನಾನು ಹೇಳಿದ್ನಲ್ಲಾ... ನೀವಿಬ್ರೂ ಒಂದೇ ಸಮಸ್ಯೆನಾ ಎದುರಿಸ್ತಾ ಇದ್ದೀರಿ" ಅರ್ಥವಾಗದೆ ಕುಳಿತಿದ್ದ ಹೆಂಗಸಿನತ್ತ ಮುಖ ಹೊರಳಿಸಿದ. ತಲೆಯ ಮೇಲೆ ಕೈ ಹೊತ್ತು ಕೊಂಡು ಕುಳಿತಿತ್ತು ಹೆಂಗಸು."ಸತ್ತಿರೋ ಶಾಲಿನಿಯ ದೂರದ ಸಂಬಂಧಿ ಈಕೆ. ಶಾಲಿನಿಯ ಕೊಲೆ ಮಾಡಿರೋದು ಇವಳೂಂತ ಶಾಲಿನಿಯ ತಂದೆಯ ಆರೋಪ"ಶಾಲಿನಿಯ ಸಾವಿಗೆ ತಾನು ಕಾರಣವಲ್ಲವೆನ್ನುವ ನೆಮ್ಮದಿ ತುಂಬಿದರೂ, ಅವಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚಂದ್ರಚೂಢನನ್ನು ನಂಬುವಂತಿಲ್ಲ."ಆ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿರೋದು ಹೇಗೆ?" ಕುತೂಹಲವಿತ್ತು ಪ್ರಶ್ನೆಯಲ್ಲಿ. ಶಶಿರೇಖಾ ತಲೆ ಕೆಳಗೆ ಹಾಕಿ ಕುಳಿತಿದ್ದಳು. ಚಂದ್ರಚೂಢ ಅವಳ ಮುಖವನ್ನೊಮ್ಮೆ ದಿಟ್ಟಿಸಿದ. ನಿಸ್ತೇಜಕವಾಗಿತ್ತು ಕಣ್ಣುಗಳು. ಕಥೆಗಾರನಿಗೆ ಉತ್ತರ ಕೇಳುವ ಕಾತುರ."ಹತ್ತು ವರ್ಷಗಳ ಹಿಂದೆ ಬಿಷನ್‍ಲಾಲ್‍ನನ್ನು ಅಗಾಧವಾಗಿ ಪ್ರೀತಿಸಿದ ಹೆಣ್ಣು ಇವಳು. ದಕ್ಷಿಣದ ಮರಳ ದಂಡೆಗೆ ಬಂದವನಿಗೆ ಕೈ ತುಂಬಾ ಹಣ ಸಂಪಾದನೆಯ ದಾರಿ ಸೂಚಿಸಿದವಳೂ ಇವಳೇ. ಇವಳ ನೆನೆಪಿಗಾಗಿ ಈ ಬಂಗ್ಲೆಯನ್ನು ಖರೀದಿಸಿದ್ದ. ಆದರೆ... ಅವನ ವ್ಯವಹಾರ ಅರ್ಧಕ್ಕೆ ನಿಂತು ಹೋಯಿತು. ಹೇಳ ಹೆಸರಿಲ್ಲದೆ ಮುಂಬೈಗೆ ಓಡಿದ"ಬಿಷನ್‍ಲಾಲ್‍ನ ಹೆಸರು ಕೇಳುತ್ತಲೇ ಎದೆ ನಡುಗಿತು. ಚಂದ್ರಚೂಢ ಶಾಲಿನಿಯಿಂದ ಮಾಹಿತಿ ಸಂಗ್ರಹಿಸಿಕೊಂಡು ಸುಳ್ಳು ಕಥೆ ಹೆಣೆಯುತ್ತಿದ್ದಾನೆ. ಅದಕ್ಕೆ ಪೂರಕವಾಗಿ ಅವನು ನೀಡಿರುವ ಉತ್ತರ ಕೂಡ ಸಮಂಜಸವಾದುದಲ್ಲ."ಸಮಸ್ಯೆಗೆ ಸರಿಯಾದ ಉತ್ತರ ನೀಡ್ಲಿಲ್ಲ ನೀನು..."ತಲೆ ಅಡಿಗೆ ಹಾಕಿ ಕುಳಿತಿದ್ದ ಹೆಂಗಸು ಮುಖವೆತ್ತಿ ನೋಡಿತು. ಏನೋ ಹೇಳುವ ಕಾತುರವಿತ್ತು. ಚಂದ್ರಚೂಢ ತಡೆದ."ತಾಳ್ಮೆಯಿಂದ ಕೇಳು. ರಾತ್ರಿ ಇಲ್ಲಿಗೆ ಬರೋ ಸ್ಮಗ್ಲಿಂಗ್ ದೋಣಿಯಲ್ಲಿ ಬಿಷನ್‍ಲಾಲ್ ಆಗಾಗ ಕಾಣಿಸಿಕೊಳ್ತಾನೆ. ಅವನು ತರೋ ವಸ್ತುಗಳಿಗಾಗಿ ಜನ ಮಧ್ಯರಾತ್ರಿಯವರೆಗೂ ಲಂಗರು ಹಾಕಿರೋ ದೋಣಿಯ ಬಳಿ ಕಾಯ್ತಾರೆ"ಆಶ್ಚರ್ಯದಿಂದ ಕಣ್ಣು ಅಗಲವಾಯಿತು. ಬಾಯಿಯಿಂದ ಹೊರಟ ಉದ್ಗಾರ ಗಂಟಲಿನೊಳಗೆ ಸೇರಿತು. "ಅಂದ್ರೆ..." ಉಗುಳು ನುಂಗಿಕೊಂಡ."ಅಂದ್ರೆ... ಹಾಂ... ಹೌದು ಪೆಟ್ರೋಮ್ಯಾಕ್ಸ್ ಹಿಡ್ಕೊಂಡು ದೋಣಿಯ ಬಳಿ ಕಾಯೋದು ಬಿಷನ್‍ಲಾಲ್‍ಗಾಗಿ... ಅವನು ಯಾವಾಗ ಬರ್‍ತಾನೇಂತ ಹೇಳೋಕಾಗೋದಿಲ್ಲ. ಬಂದಾಗಲೆಲ್ಲಾ ಲಕ್ಷಗಟ್ಟಲೆ ಮಾಲು ತರ್‍ತಾನೆ" ನಿಗೂಢವಾಗಿದ್ದ ಒಂದು ಸಂಗತಿ ಬಿಚ್ಚಿಕೊಂಡಾಗ ಆತಂಕ ಕಡಿಮೆಯಾಯಿತು. ಆದರೂ ಅಪಾಯ ತಪ್ಪಿದ್ದಲ್ಲ. ಬಿಷನ್‍ಲಾಲ್... ತನುಹಾಳ ಚಿಕ್ಕಪ್ಪ! ತನಗೆ ಆಸರೆ ನೀಡಿರುವ ಪಾಳು ಬಂಗಲೆ ಅಪಾಯದ ತಾಣ!ಶಶಿರೇಖಾಳನ್ನು ಕಾಣಲು ಬರುವ ಬಿಷನ್‍ಲಾಲ್‍ಗೆ ಸುಲಭವಾಗಿ ಆಹಾರವಾಗಬಹುದು. ಬೆನ್ನ ಹುರಿಯಲ್ಲಿ ಚಳಿಯಾಡಿದಂತಾಯಿತು."ಒಪ್ಪಿಕೊಳ್ತೀನಿ ಚಂದ್ರಚೂಢ. ಆದ್ರೆ... ಶಾಲಿನಿಯ ಕೊಲೆ ಮಾಡ್ದೋರು ಯಾರು? ಯಾಕೇಂತ? ಈ ಸಮಸ್ಯೆಯಲ್ಲಿ ಶಶಿರೇಖಾ ಸಿಕ್ಕಿ ಹಾಕಿಕೊಳ್ಳುವುದು ಹೇಗೆ?""ನಿನ್ನ ಹಾಗೆ..." ತಟ್ಟನೆ ಉತ್ತರಿಸಿದ ಚಂದ್ರಚೂಢ."ಅರ್ಥವಾಗ್ಲಿಲ್ಲ. ಸುಮ್ನೆ ನನ್ನ ಹೆದರಿಸ್ತೀಯಾ?"ಸಮೀರನ ಮಾತಿಗೆ ಕಿಟಕಿಯ ಬಳಿಗೆ ಸರಿದು ನಿಂತು ವ್ಯಂಗ್ಯದ ನಗೆ ನಕ್ಕ."ಅವಳು ನಿನ್ನ ಅಭಿಮಾನೀಂತ ಆವರಿಸಿದ್ಲು... ಇವಳಿಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಮಗಳೂಂತ ಒಪ್ಪಿಕೊಳ್ಳಬೇಕಾಯಿತು"ಸಮಸ್ಯೆಯೊಂದು ನೂರಾರು ಗಂಟುಗಳಾಗಿ ಸಿಕ್ಕಿ ಹಾಕಿಕೊಂಡಂತೆ ಇತ್ತು. ಪ್ರಶ್ನಾರ್ಥಕ ನೋಟ ಬೀರಿದ."ಬಿಷನ್‍ಲಾಲ್‍ನ ಮಗಳು ಅವಳು. ಯಾವುದೋ ಕೆಂಪುದೀಪದ ಏರಿಯಾಕ್ಕೆ ಹೋಗೋ ಹೆಣ್ಣನ್ನು ಕರೆದುಕೊಂಡು ಬಂದು ಇವಳ ಕೈಗೆ ಒಪ್ಪಿಸ್ದ. ಹಿಂದೆ ಮುಂದೆ ಆಲೋಚಿಸದೆ ಅವಳನ್ನು ಸಾಕಿದ್ಲು. ಆದ್ರೆ... ಈಗ..."ಅಲ್ಲಿಯವರೆಗೂ ಸುಮ್ಮನಿದ್ದ ಹೆಂಗಸು ಚೀರಿದಳು."ಚಂದ್ರಚೂಢ, ನೀನು ಢಂಗುರ ಬಾರ್‍ಸಿ ನನ್ನ ಜೈಲು ಸೇರೋ ಹಾಗೆ ಮಾಡ್ತಿದ್ದೀಯಾ"ಚಂದ್ರಚೂಢನ ಮುಖದಲ್ಲಿ ಅದೇ ನಗು!"ಶಶಿರೇಖಾ, ಆತುರ ಪಡ್ಬೇಡಾ. ಇದು ಐವತ್ತನೆ ಕಥೆ. ಕೊನೆಯವರೆಗೂ ಕುತೂಹಲ ಉಳಿಸ್ಕೊಂಡು ಬರೆಯೋ ಕಥೆಗಾರನಿಗೆ ಸಹಾಯವಾಗ್ಲೀಂತ ಹೇಳ್ತಿದ್ದೀನಿ"ಸಹನೆ ಕಳೆದುಕೊಂಡ ಹೆಂಗಸು ಕುರ್ಚಿಯಿಂದ ಎದ್ದು ನಿಂತು ಚಂದ್ರಚೂಢನತ್ತ ಧಾವಿಸಿತು. ಆತ ಕೈ ಅಡ್ಡ ತಂದು ಪಕ್ಕಕ್ಕೆ ತಳ್ಳಿದ. ಸಮತೋಲನ ಕಳೆದುಕೊಂಡಂತೆ ದೊಪ್ಪನೆ ನೆಲದ ಮೇಲೆ ಬಿದ್ದಳು. ಸಮೀರ ಸಹಾಯಕ್ಕೆ ಧಾವಿಸಿದ."ಬಿಟ್ಟು ಬಿಡು ಸಮೀರ. ಶಾಲಿನಿಗೆ ನೀನು ಯಾರೂಂತ ಚೆನ್ನಾಗಿ ಗೊತ್ತಿತ್ತು. ನಿನ್ನ ಮೇಲೆ ಸೇಡು ತೀರಿಸಿಕೊಳ್ಳೋದಿಕ್ಕೆ ಕಾಯ್ತ ಇದ್ಲು. ಅದನ್ನು ಶಶಿರೇಖಾಳ ಮುಂದೆ ಬಿಚ್ಚಿಟ್ಲು"ಶಶಿರೇಖಾಳನ್ನು ಮೇಲಕ್ಕೆತ್ತಿ ಕೂರಿಸಿದವನು ಆಘಾತಕ್ಕೊಳಗಾದವರಂತೆ ನಿಂತ."ಆಶ್ಚರ್ಯ ಅನ್ಸುತ್ತಲ್ಲಾ...? ನಿನ್ನ ಐವತ್ತನೆ ಕಥೆ ಕಲ್ಪನೆಯದಲ್ಲ, ನಿಜ ಕಥೆ... ತನುಹಾ ಕಾಲ್ಪನಿಕ ಪಾತ್ರವಲ್ಲ, ನಿನ್ನ ಪ್ರೀತಿಸಿದ ಹುಡುಗಿ. ಅವಳು ಸತ್ತಿಲ್ಲ, ನೀನೂ ಕೊಲೆ ಮಾಡ್ಲಿಲ್ಲ. ಅವಳನ್ನು ಕೊಂದಿದ್ದು..."ಅವನ ಮಾತು ಪೂರ್ತಿಯಾಗಿರಲಿಲ್ಲ ಹೆಂಗಸು ಎದ್ದು ಪೂತ್ಕರಿಸುತ್ತಾ ಚಂದ್ರಚೂಢನ ಕುತ್ತಿಗೆಯಲ್ಲಿ ಹಿಡಿಯಿತು. ಅಸಹಾಯಕತೆಯಿಂದ ಕೈ ಎತ್ತಿದ. ಕಣ್ಣಗುಡ್ಡೆಗಳು ಹೊರಕ್ಕೆ ಬಂದಂತಾಯಿತು. ಸಮೀರ ಸಹಾಯಕ್ಕೆ ಧಾವಿಸಿ ಹೆಂಗಸನ್ನು ದೂರ ಸರಿಸಿದ. ಸೋತಂತೆ ಕುಸಿದು ಕುಳಿತಳು."ತನುಹಾ ಸಾಯೋದಿಕ್ಕೂ ಕಾರಣ ಇವಳೇ... ಈಗ ಶಾಲಿನಿನ ಕೊಂದಿದ್ದು ಇವಳೇ..."ಸಿಕ್ಕಿನಂತೆ ಜಟಿಲವಾದ ಸಮಸ್ಯೆಯ ಗಂಟು ಮೆಲ್ಲಗೆ ಬಿಚ್ಚಿಕೊಂಡಿತು."ಇವಳು ಬಿಷನ್‍ಲಾಲ್‍ನನ್ನು ಸ್ಮಗ್ಲಿಂಗ್ ಗುಂಪಿಗೆ ಸೇರಿಸಿ ಆಟವಾಡಿಸಿದ್ಲು. ಸಂಸಾರಸ್ಥ ಬಿಷನ್‍ಗೆ ತನ್ನ ಮಕ್ಕಳ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ತನುಹಾ, ತನುಜಾ ಇಬ್ಬರೂ ಅವನ ಮಕ್ಕಳು. ಕೊಲೆಯಾಗಿರೋ ಶಾಲಿನಿನೇ ತನುಜಾ... ತನುಹಾ ಓದಿ, ಪದವಿ ಪಡೆದು ಮುಂದೆ ಬಂದ್ಲು. ಈ ಹೆಂಗಸಿಗೆ ಅದನ್ನು ಸಹಿಸೋದಕ್ಕಾಗ್ಲಿಲ್ಲ. ತಾನು ಬಿಷನ್‍ಲಾಲ್‍ನಿಂದ ಗಳಿಸಿಕೊಂಡಿರೋ ನಗ, ನಗದು, ಆಸ್ತಿಯೆಲ್ಲಾ ಅವನ ಮಕ್ಕಳಿಗೆ ಸೇರುತ್ತೇಂತ ಸಾಯಿಸ್ಲಿಲ್ಲ. ಬದಲಾಗಿ ತನ್ನ ಅಡ್ಡದಾರಿಗೆ ಅವರಿಬ್ಬರನ್ನೂ ಸೇರಿಸೋದಿಕ್ಕೆ ನೋಡಿದ್ಲು. ಅವರಿಬ್ರೂ ಒಪ್ಲಿಲ್ಲ""ತನುಹಾ ಬಂಡೆಯಿಂದ ಅಲೆಗಳ ಹೊಡೆತಕ್ಕೆ ಸಿಕ್ಕಿ, ಬಿದ್ದಿದ್ದನ್ನು ನಾನು ನೋಡಿದ್ದೀನಿ""ಅದು ನೀನು ತಿಳ್ಕೊಂಡಿರೋ ತಪ್ಪು ಸಮೀರ. ಶಶಿರೇಖಾ, ತನುಹಾಳನ್ನು ಮಾನಸಿಕವಾಗಿ ಹಿಂಸಿಸಿದ್ದಾಳೆ. ನೊಂದು ಹೋದ ಅವಳು ನಿನ್ನ ಪ್ರೀತಿಗಾಗಿ ಕಾದ್ಲು. ನೀನು ಸರಿಯಾದ ಉತ್ತರ ಕೊಡ್ಲಿಲ್ಲ. ಹುಚ್ಚಿಯಂತೆ ಬಂಡೆಯೇರಿ ಕುಳಿತಿದ್ಲು. ನೀನು ಅಲ್ಲಿಗೆ ಹೋಗದಿದ್ರೂ ಆ ದಿನ ಅವಳು ನಿರ್ಧರಿಸಿದಂತೆ ಆತ್ಮಹತ್ಯೆ ಮಾಡಿಕೊಳ್ತಾ ಇದ್ಲು. ಅದಕ್ಕೆ ಸಾಕ್ಷಿ ಅವಳು ತನ್ನ ಕೋಣೆಯಲ್ಲಿ ಬರೆದಿಟ್ಟಿರೋ ಪತ್ರ. ಅದನ್ನು ಶಾಲಿನಿ ನನಗೆ ತೋರಿಸಿದ್ಲು. ಅದರಲ್ಲಿ ನಿನ್ನ ಹೆಸರು ಇದ್ದಿದ್ದನ್ನು ನೋಡಿ ಅವಳು, ತನುಹಾಳ ಸಾವಿಗೆ ನೀನೇ ಕಾರಣಾಂತ ತಿಳಿದಿದ್ಲು... ಆದ್ರೆ ನಿನ್ನೆ ರಾತ್ರಿ ಶಾಲಿನಿ ನಿನ್ನ ಭೇಟಿಯಾಗೋದನ್ನು ಕದ್ದು ಹಿಂಬಾಲಿಸಿದ ಇವಳು, ಮನೆಗೆ ಬಂದವಳಿಗೆ ನಿನ್ನ ಭೇಟಿಯಾಗದ ಹಾಗೆ ಷರತ್ತು ಹಾಕಿದ್ಲು. ಮಾತಿಗೆ ಮಾತು ಬೆಳೆದು ಅವಳನ್ನು ಇರಿದ್ಲು... ಇನ್ನೂ ಇವಳನ್ನು ಸುಮ್ನೆ ಬಿಟ್ಟಿರಬೇಕೂಂತ ಹೇಳ್ತೀಯಾ?"ತಲೆ ಸಿಡಿದು ಹೋಗುವಂತೆ ಭಾಸವಾಯಿತು. ಹಣೆಗೆ ಕೈಯೊತ್ತಿಕೊಂಡ ಕಥೆಗಾರ.ಬಾಗಿಲಿನ ಉದ್ದಕ್ಕೂ ಬಿದ್ದ ಪೊಲೀಸ್ ಅಧಿಕಾರಿಯ ನೆರಳಿಗೆ, ಪಶ್ಚಾತ್ತಾಪದ ಕಳೆಯೇ ಇರದ ಹೆಂಗಸು ಸೋತಂತೆ ಕುಸಿದು ಕುಳಿತಿತು.ಐವತ್ತನೆ ಕಥೆಯ ಹಾಳೆಯ ಕೊನೆಯ ಪುಟದಲ್ಲಿ `ಮುಗಿಯಿತು' ಎಂದು ಬರೆದ ಸಮೀರ ನಿಟ್ಟುಸಿರಿಟ್ಟ.

No comments: