Thursday, November 11, 2010

ಶಿವರಾಮ ಕಾರಂತರ ‘ಬೆಟ್ಟದ ಜೀವ’


‘ಬೆಟ್ಟದ ಜೀವ’ ಕಾದಂಬರಿ ಮೇಲ್ನೋಟಕ್ಕೆ ವ್ಯಕ್ತಿ ಚಿತ್ರಣದಂತೆ ಕಂಡರೂ, ಇಲ್ಲಿ ಶ್ರಮಜೀವಿಯೊಬ್ಬನ ಬದುಕು ಮತ್ತು ಬದುಕಿನಲ್ಲಿ ತಮ್ಮ ಕರುಳ ಬಳ್ಳಿಗಳನ್ನು ಕಳೆದುಕೊಂಡಿರುವ ಜೀವಿಗಳ ಸೂಕ್ಷ್ಮ ಸಂವೇದನೆಯಿದೆ. ಆ ಸಂವೇದನೆಯಲ್ಲೂ ಬತ್ತದ ಉತ್ಸಾಹದ ಜೊತೆಗೆ ಪರೋಪಕಾರದ ಉದಾತ್ತ ಗುಣವನ್ನು ಬೆಳೆಸಿಕೊಂಡು ಬದುಕುವ ವ್ಯಕ್ತಿಯ ಬದುಕಿನ ಸ್ತರಗಳನ್ನು ಈ ಕಾದಂಬರಿಯು ಚಿತ್ರಿಸುತ್ತದೆ. ಏಕವ್ಯಕ್ತಿ ಕೇಂದ್ರಿಕೃತ ಮತ್ತು ಒಂದೇ ಕೋನದಲ್ಲಿ ಕಥೆ ಸಾಗುತ್ತಾದರು, ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾದ ಮಗ ಮನೆಯಿಂದ ದೂರವಿದ್ದು ಮತ್ತೆ ಹಿಂತಿರುಗುವನೊ, ಇಲ್ಲವೊ? ಅನ್ನುವ ಕುತೂಹಲ ಹುಟ್ಟಿಸುತ್ತಾ ಮುಂದುವರಿಯುವುದು ಕೂಡ ಈ ಕಾದಂಬರಿಯ ಕೇಂದ್ರವಾಗಿದೆ. ಗೋಪಾಲಯ್ಯ, ಶಂಕರಿ, ಶಿವರಾಮ, ದೇರಣ್ಣಗೌಡ, ನಾರಾಯಣ, ಲಕ್ಷ್ಮೀ, ಬಟ್ಯಗಳಂತಹ ಕೆಲವೇ ಪಾತ್ರಗಳ ಮೂಲಕ ನೇರಮಾತುಗಳಿಂದ ಅರ್ಥಪೂರ್ಣವಾದ ಜೀವನಾನುಭವಳನ್ನು ಮಂಡಿಸುವುದು ಈ ಕಾದಂಬರಿಯ ಪ್ರಮುಖ ಲಕ್ಷಣ."

ಕಥೆಯ ಮುಖ್ಯವಾಹಿನಿ ಬದುಕಿದ್ದೂ ಹೆತ್ತವರಿಂದ ದೂರವಿರುವ ಮಗ ಶಹರಿನ ವ್ಯಾಮೋಹಕ್ಕೆ ಬಲಿಯಾಗಿ, ಮನೆಗೆ ಹಿಂದಿರುಗದೆ ಇರುವುದಾದರೂ, ಇಲ್ಲಿ ಬೆಟ್ಟದ ಮೇಲೆ ನಿರೀಕ್ಷೆಗಳನ್ನು ಹೊತ್ತು ನಿಂತ ಮಹಾತ್ವಕಾಂಕ್ಷಿಯೊಬ್ಬನ ಕಷ್ಟ ಕಾರ್ಪಣ್ಯಗಳನ್ನು, ತಲ್ಲಣಗಳನ್ನು ಗೋಪಾಲಯ್ಯನ ಪಾತ್ರದ ಮೂಲಕ ಬಿಚ್ಚಿಡುತ್ತದೆ. ಮಗನನ್ನು ಕಳೆದುಕೊಳ್ಳುವ ಆತಂಕ, ಭಯವಿದ್ದರೂ ಅದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಅವರು ಮಾತ್ರ ಕೈ ಹಿಡಿದ ಶಂಕರಿಯಲ್ಲಿ ಮಗನ ಬಗೆಗಿರುವ ಅದಮ್ಯ ಆಸೆಗಳನ್ನು ಉಪೇಕ್ಷಿಸಲಾರದೆ ಒಳಗೊಳಗೆ ಬೇಯುವುದು, ಬದುಕಿನ ಕೊನೆ ಘಳಿಗೆಯ ಹೆದರಿಕೆಯಿಂದಲ್ಲ. ಬದಲಾಗಿ ಅಲ್ಲಿ ಆತ್ಮೀಯತೆ, ಹೊಂದಾಣಿಕೆ, ಭರವಸೆಗಳ ಮಹಾಪೂರವೆ ತುಂಬಿದೆ; ಅವರನ್ನು ಸಾಂತ್ವನಿಸುವ ಹಿರಿಮೆಯಿದೆ.

‘ಲಕ್ಷ್ಮೀ ದನವನ್ನು ಹುಲಿ ಹಿಡಿದ ಹಾಗೆ ಯಾವುದೋ ಹೆಣ್ಣು ಹುಲಿ ಮಗನನ್ನು ಹಿಡಿದಿದೆ’ ಯೆನ್ನುವ ಉಪಮೆಯು ಮಗ ಶಂಭುವಿನಿಂದ ದೂರವಿದ್ದರೂ ಅವನ ಬಗ್ಗೆ ನಡೆದಿರಬಹುದಾದ್ದನ್ನು ಅವರು ಊಹಿಸುವಂತೆ ಮಾಡುತ್ತದೆ. ಅದಲ್ಲದೆ ನಾರಾಯಣನ ಮಡದಿ ಶಿವರಾಮನ ಜೊತೆಗೆ ಶಂಭು ಅವಳ ಜೊತೆಗೆ ನಡೆದುಕೊಂಡ ರೀತಿಯಿಂದ ಅವನು ನಿಗೂಢವಾಗಿರುವುದಕ್ಕೆ ಮತ್ತು ಅವನ ಗುಣಗಳನ್ನು ತಿಳಿಸುವುದಕ್ಕೆ ಸರಿಯಾದ ಸಾಕ್ಷಿಯಾಗಿ ನಿಲ್ಲುತ್ತದೆ. ಲಕ್ಷ್ಮೀಗೆ ಅವನು ದೂರವಿರುವುದಕ್ಕೆ ಒಂದು ರೀತಿಯಲ್ಲಿ ತಾನು ಕಾರಣಳೆನ್ನುವ ಅಗಾಧ ಅಪರಾದಿ ಭಾವನೆಯಿದ್ದರೂ ಅದು ಅವಳ ಪರಿಸ್ಥಿತಿಯನ್ನು ಮೀರಿರುವಂತದ್ದು.

ಬೆಟ್ಟದ ಮೇಲೆಯೆ ತನ್ನ ಹಿರಿಯರ ಆಸ್ತಿಯನ್ನು ಅನುಭೋಗಿಸುತ್ತಾ, ಕಾಟುಮೂಲೆ ಮತ್ತು ನೀರ್ಕಟ್ಟೆಯಂತಹ ಪ್ರಯೋಜನಕ್ಕೆ ಬಾರದ ಬಂಡೆ ಕಲ್ಲುಗಳ ನೀರಿನ ಸೆಲೆಯಿರುವ ಪ್ರದೇಶಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸುವ ಗೋಪಾಲಯ್ಯನ ಛಲಗಳೇನಿದ್ದರೂ ಕೊನೆಗೂ ಉಳಿಯುವುದು ಅತೃಪ್ತಿ ಮತ್ತು ಶಂಭುನಿಲ್ಲದ ನೋವು. ಶಂಕರಿಯವರು ಕೂಡ ಎಷ್ಟೇ ಲವಲವಿಕೆಯಿಂದಿದ್ದರೂ ಅವರನ್ನು ಹೈರಾಣಾಗಿಸುವುದು ತಮ್ಮ ತೊಡೆಗಳಲ್ಲಿಯೆ ತಲೆಯಿಟ್ಟು ಇಹಲೋಕ ತ್ಯಜಿಸಿದ ಮಗಳು ವಾಗ್ದೇವಿಯ ದಾರುಣ ಸಾವು ಮತ್ತು ಇದ್ದು ಇಲ್ಲದಂತೆ ದೂರವಿರುವ ಮಗ ಶಂಭುವಿನ ಚಿಂತೆ.

ಮಗನಿಲ್ಲದ ಚಿಂತೆ ಮನವನ್ನು ಸುಡುತ್ತಿದ್ದರೂ ಅನಾಥನಾಗಿರುವ ನಾರಾಯಣನನ್ನು ಕರೆಸಿ ಕಾಟುಮೂಲೆಯನ್ನು ಅವನ ಭೋಗ್ಯಕ್ಕೆ ಬಿಟ್ಟು ಸ್ವತ: ತನ್ನ ಮಗ ಶಂಭುವಿಗಿಂತಲೂ ಹೆಚ್ಚಾಗಿ ಅವನನ್ನು ನೋಡುವುದು ಗೋಪಾಲಯ್ಯನವರ ಉದಾರತೆಗೆ ಕನ್ನಡಿ ಹಿಡಿಯುತ್ತದೆ. ಮಗ ಬರಲಾರನೆನ್ನುವ ದೃಢವಾದ ನೋವು, ‘ನಮ್ಮ ಸರ್ವ ಭವಿಷ್ಯಕ್ಕೂ - ನಮ್ಮ ಹೆಣ ಹೊರಲಿಕ್ಕೆ ಆಗಲಿ, ಪಿಂಡ ಹಾಕಲಿಕ್ಕೇ ಆಗಲಿ - ನಾರಾಯಣನೇ ಗತಿ; ಅವನು ಅಷ್ಟನ್ನು ಮಾಡಿಯಾನು; ಮಾಡಿದರೆ ನಮ್ಮ ಪ್ರೇತಕ್ಕೂ ತೃಪ್ತಿಯಾದೀತು. ಬದಲು ವಂಶದ ಮಗನು ಬಂದು ಶ್ರಾದ್ಧ ಮಾಡಿದರೂ ನನಗೆ ಬೇಕಿಲ್ಲ” ಈ ಮಾತುಗಳ ಮೂಲಕ ಅವರಿಗೆ ಮಗನು ಬಂದೇ ಬರುವನೆನ್ನುವ ಭರವಸೆಯ ಜೊತೆಗೆ ನಾರಾಯಣನಲ್ಲಿಟ್ಟಿರುವ ಅವರ ಭರವಸೆಯನ್ನೂ ಎತ್ತಿ ಹಿಡಿಯುತ್ತದೆ.

ನಾರಾಯಣನಿಗಾದರೂ ಮುಂದೆ ಶಂಭುವು ಬಂದರೆ ತಾನು ಉಟ್ಟ ಬಟ್ಟೆಯಲ್ಲಿಯೇ ಇಲ್ಲಿಂದ ಹೊರಟು ಎಲ್ಲಿಗೆ ಹೋಗಬೇಕೆನ್ನುವ ದೂರದರ್ಶಿತ್ವ, ನಿರ್ಗತಿಕತೆ, ನಿರಾಶೆ ಆವರಿಸುವಾಗ ಅಲ್ಲೇ ಎಲ್ಲಾದರೂ ಜಾಗೆ ಖರೀದಿಸಿ ಕಾಟುಮೂಲೆಯನ್ನು ಬಿಟ್ಟು ಹೋಗುವ ನಿರ್ಧಾರವಿದ್ದರೂ ಮುಂದೆ ಗೋಪಾಲಯ್ಯನವರಿಂದಲೆ ಭರವಸೆಯ ಮಾತುಗಳು ಬಂದಾಗ ಅವನು ಮೌನಿ.

ಇಲ್ಲಿ ಬೆಟ್ಟವೆಂದರೆ ಬರೀಯ ಕಣ್ಣಿಗೆ ಹಬ್ಬ ತರುವ ಹಸಿರು ಬೆಟ್ಟವಲ್ಲ; ಬದಲಾಗಿ ಹುಲಿ, ಕಪ್ಪು ಚಿತರೆ, ಶಾರ್ದೂಲ, ಕಾಟಿ, ಆನೆ, ಪಾರಂಬೆಕ್ಕು(ಹಾರುವ ಅಳಿಲು)ಗಳಂತಹ ಅಪೂರ್ವದ ಪ್ರಾಣಿಗಳು ಮತ್ತು ಅವುಗಳ ಕ್ರೂರತನದ ಅನಾವರಣಗಳನ್ನು ತಿಳಿಸುತ್ತದೆ. ಅವುಗಳ ನಡುವೆಯೂ ಮನುಷ್ಯ ಬದುಕುವ ಮತ್ತು ಭದ್ರತೆಯನ್ನು ನಿರ್ಮಿಸುವ ಹೋರಾಟವನ್ನು ಕೂಡ ಇಲ್ಲಿ ದಾಖಲಿಸಲಾಗಿದೆ. ಅಲ್ಲದೆ ಸಸ್ಯಪ್ರಬೇಧಗಳು, ಮರಗಿಡಗಳಿರುವಲ್ಲಿ ಕಂಗು, ಮರಗೆಣಸುಗಳಂತಹ ವ್ಯವಹಾರಿಕ ಬೆಳೆಗಳನ್ನು ಬೆಳೆಸಿ ಬದುಕುವ ಛಲ ಮಾದರಿಯಾಗಿಯೂ ಕಾಣುತ್ತದೆ.

ಬೆಟ್ಟದ ಜೀವ ಕಾದಂಬರಿಯಲ್ಲಿ ಗಂಭೀರವಾದ ಸಮಸ್ಯೆಗಳು, ವಿಷಯಗಳು ಕಂಡರೂ ಪಾತ್ರಗಳು ಮಾತ್ರ ನಿರಾಳ. ಗೋಪಾಲಯ್ಯನಂತಹ ಪಾತ್ರವೇ ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಾ ಬಟ್ಯ, ನಾರಾಯಣ, ದೇರಣ್ಣಗೌಡ ಪಾತ್ರಗಳ ಮೂಲಕ ಹಾಸ್ಯವನ್ನು ಮಾಡುತ್ತಾ ಲವಲವಿಕೆಯಿಂದ ಇರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಶಿವರಾಮನನ್ನು ತಹಶೀಲ್ದಾರನೆಂದು ಪರಿಚಯಿಸುವುದು. ಸ್ವತ: ನಾರಾಯಣನಿಗೂ ಶಿವರಾಮ ತಹಶೀಲ್ದಾರನೇನೋ ಅನ್ನುವ ಅನುಮಾನವಾಗುವವರೆಗೂ. ಇದಲ್ಲದೆ ಹುಲಿಗಾಗಿ ಕರ್ಫು ಇಡುವ ಸಂದರ್ಭದಲ್ಲಿ ಹುಲಿಯ ಆಕರ್ಷಣೆಗಾಗಿ ನಾಯಿಯನ್ನು ಒಳಗಿಟ್ಟು ಅದನ್ನು ವಿವರಿಸುವ ಸನ್ನಿವೇಶವಂತು ನಗೆಯುಕ್ಕಿಸುತ್ತದೆ.

ಬೆಟ್ಟದ ಮೇಲಿನ ಬದುಕು ಎಷ್ಟು ದುಸ್ತರವೆನ್ನುವುದನ್ನು, ‘ನಮ್ಮಲ್ಲಿ ಸಾಯುವುದು ಸುಲಭ; ಹೆಣಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಸ್ವಲ್ಪ ಕಷ್ಟ ನೋಡಿ’ ಈ ವಾಕ್ಯಗಳು ಸಾಬೀತುಪಡಿಸುತ್ತವೆ. ಆದರೂ ಇಂತಹ ಬದುಕನ್ನು ತ್ಯಜಿಸಿ, ಪೇಟೆಯಲ್ಲಿ ಬದುಕುವ ಉತ್ಸಾಹ ಗೋಪಾಲಯ್ಯನವರಿಗಾಗಲಿ, ಶಂಕರಿಯವರಿಗಾಗಲಿ ಇಲ್ಲ. ತಾವು ವಾಸಿಸುತ್ತಿರುವುದು ತಮ್ಮ ಹಿರಿಯರ ಆಸ್ತಿಯನ್ನು. ಅದನ್ನು ಉಪಭೋಗಿಸುತ್ತಾ ಬದುಕುವುದರಲ್ಲಿಯೂ ಖುಷಿಯನ್ನು ಕಂಡವರು ಅವರು. ಆ ಆಸ್ತಿಯನ್ನು ಮಾರಾಟ ಮಾಡದೆ ತಮ್ಮ ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸುವ ಆಶಯವೂ ಅವರಿಗಿದೆ.

ಇಲ್ಲಿ ಇನ್ನೊಂದು ಬಹು ಮುಖ್ಯ ಅಂಶವೆಂದರೆ ಗೋಪಾಲಯ್ಯ ಎಂತಹ ಧೀಮಂತ ವ್ಯಕ್ತಿಯೆಂದರೆ ಅವರಿಗೆ ಜಾತಿ, ವರ್ಗ, ಲಿಂಗಗಳ ಅಂತರವಿಲ್ಲದೆ ಬಟ್ಯ, ದೇರಣ್ಣನಂತಹವರ ಜೊತೆಗೆ ಒಳ್ಳೆಯ ಸಂಬಂಧವಿರಿಸಿಕೊಂಡವರು. ತಮ್ಮ ಸ್ವಾರ್ಥವಿದ್ದರೂ ಅವರಿಗೆ ಬದುಕಿಗೊಂದು ದಾರಿಯನ್ನೂ ಮಾಡಿಕೊಡುತ್ತಾರೆ. ಹಾಗಾಗಿ ಬಟ್ಯ, ನಾರಾಯಣ, ಲಕ್ಷ್ಮೀ, ದೇರಣ್ಣ ಗೌಡರಂತಹ ಪಾತ್ರಗಳಿಗೆ ಅಸಾಧಾರಣ ವ್ಯಕ್ತಿಯಾಗಿ ಮತ್ತು ದೇವರಂತಹ ಮನುಷ್ಯನಾಗಿ ಗೋಚರಿಸುತ್ತಾರೆ.

ಇಡೀ ಕಾದಂಬರಿ ಬೆಟ್ಟದಂತಹ ಪರಿಸರದಲ್ಲಿ ನಡೆಯುವುದಲ್ಲದೆ ಅಲ್ಲಿಯ ಕಷ್ಟಕರ ಬದುಕು, ನಗರದಿಂದ ದೂರವೇ ಉಳಿಯುವ ಅಭಾಗ್ಯ, ಕಾಡುಮೃಗಗಳನ್ನು ಎದುರಿಸುವ ಸಮಸ್ಯೆಯ ಜೊತೆಗೆ ಹೊಂದಾಣಿಕೆ ನಡೆಸುವುದು ಇವೆಲ್ಲಾ ಒಂದು ಹೊಸ ಜಗತ್ತನ್ನೇ ಸೃಷ್ಟಿಸಿಕೊಂಡಂತೆ ಕಾಡುತ್ತದೆ. ದನವನ್ನು ಹಿಡಿದು ತಿನ್ನುವ ಹುಲಿಯ ಶಿಕಾರಿಯಂತು ಕಾದಂಬರಿಯ ಒಂದು ಮುಖ್ಯ ಭಾಗವಾಗಿ ಮೂಡಿಬಂದಿದೆ. ಕೊನೆಗೂ ಹುಲಿಯನ್ನು ಸಾಯಿಸುವಲ್ಲಿ ಯಶಸ್ವಿಯಾಗುವ ಗೋಪಾಲಯ್ಯ ಮಗ ಶಂಭುವನ್ನು ಹುಡುಕಿಕೊಂಡು ಬರುವಲ್ಲಿಯೂ ಯಶಸ್ಸು ಸಾಧಿಸುತ್ತಾರೆನ್ನುವ ಆಶಯದಂತೆ ಕಾದಂಬರಿ ಮುಕ್ತಾಯವನ್ನು ಪಡೆಯುತ್ತದೆ.

ಶಂಭುವಿನ ವಿಚಾರವನ್ನು ಕಾಕತಾಳೀಯವೆಂಬಂತೆ ಹೇಳುವ ಶಿವರಾಮ ಕೊನೆಗೂ ಆತ ಪುಣೆಯಲ್ಲಿ ಕಂಡ ವ್ಯಕ್ತಿಯೆ ಶಂಭುವೆನ್ನುವ ಸತ್ಯ ಸಿನಿಮೀಯವಾಗಿ ಕಂಡರೂ ಕಾದಂಬರಿಯ ಅಂತ್ಯವನ್ನು ಓದುಗನ ಊಹನೆಗೆ ಬಿಟ್ಟಿರುವುದು ಇಡೀ ಕಾದಂಬರಿಯ ಕುತೂಹಲದ ಘಟ್ಟಕ್ಕೆ ನಾಂದಿಯಾದಿತೇ ಹೊರತು ಅದೇ ಅಂತ್ಯವೂ ಆಗಬೇಕಾಗಿಲ್ಲ. ಇಲ್ಲಿ ಗೋಪಾಲಯ್ಯನವರು ಗಾಡಿ ಕಟ್ಟಿಕೊಂಡು ಹೊರಡುವ ಆತುರ ಎಷ್ಟಿದೆಯೆಂದರೆ ‘ಆಗಲೆ ಭಟ್ಟರು ಪುಣೆಯ ತನಕವೂ ಹೋಗಲು ಕಾಲು ಕಿತ್ತಂತೆಯೇ’ ಎನ್ನುವ ಆಶಯದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಈ ಆಶಯವೇ ಶಿವರಾಮ ಹೇಳುವ ಪುಣೆಯ ವ್ಯಕ್ತಿಯೆ ಶಂಭುವೆನ್ನುವುದು ನಿಟ್ಟುಸಿರಿಡುವಂತೆ ಮಾಡುತ್ತದೆ.

ಪ್ರಸ್ತುತ ಡಾ|| ಕೆ. ಶಿವರಾಮ ಕಾರಂತರ ‘ಬೆಟ್ಟದ ಜೀವ’ ಶ್ರೀ ಪಿ. ಶೇಷಾದ್ರಿಯವರ ನಿರ್ದೇಶನದಲ್ಲಿ ದತ್ತಣ್ಣ, ಲಕ್ಷ್ಮೀ ಹೆಗಡೆಯಂತಹ ಪ್ರತಿಭೆಗಳಿಂದ ಜೀವ ತುಂಬುತ್ತಿರುವುದು ಚಿತ್ರ ಬಿಡುಗಡೆಯಾಗುವವರೆಗೂ ಕುತೂಹಲ ಮೂಡಿಸಿದೆ. ಇಂತಹ ಅಪೂರ್ವ ಕೃತಿಯನ್ನು ದೃಶ್ಯಮಾಧ್ಯಮಕ್ಕೆ ತರುತ್ತಿರುವ ಶ್ರೀ ಪಿ. ಶೇಷಾದ್ರಿಯವರಿಗೆ ಅಭಿನಂದನೆಗಳು.

5 comments:

Dr.D.T.Krishna Murthy. said...

ನಮಸ್ಕಾರ.ನಿಮ್ಮ ಬ್ಲಾಗಿಗಿದು ನನ್ನ ಮೊದಲ ಭೇಟಿ.ನಿಮ್ಮ ಬ್ಲಾಗಿನ ಫಾಲೋಯರ್ ಆಗಿದ್ದೇನೆ.ವೃತ್ತಿಯಲ್ಲಿ ನಾನೊಬ್ಬ ವೈದ್ಯ.ನನ್ನ ನಿಜ ಜೀವನದ ಕೆಲವು ವಿಶಿಷ್ಟ ಅನುಭವಗಳನ್ನು ಬ್ಲಾಗಿಸಿದ್ದೇನೆ.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.ನಿಮ್ಮ ಬ್ಲಾಗಿನಲ್ಲಿ ನೀವು ಓದಿದ ಒಳ್ಳೆಯ ಪುಸ್ತಕಗಳ ಪರಿಚಯ
ಮಾಡಿಕೊಡುತ್ತಿರುವುದು ಸಂತೋಷ.ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ನಮಸ್ಕಾರ.

"ಬೆಟ್ಟದ ಜೀವ" ನನ್ನ ಅಚ್ಚುಮೆಚ್ಚಿನ ಕಾದಂಬರಿಗಳಲ್ಲೊಂದು. ಇದರೊಳಗಿನ ಜೀವನಪ್ರೀತಿ ಸದಾ ಕಾಲ ಓದುಗನ ಮನಸಿನೊಳಗೆ ಹಸಿರಾಗಿರುತ್ತದೆ. ಈ ಕಾದಂಬರಿಯ ಕಿರು ಪರಿಚಯವನ್ನು ನಾನೂ ಮಾಡಿದ್ದೆ. ಅದು ಈ ಲಿಂಕಿನಲ್ಲಿದೆ.
http://manasa-hegde.blogspot.com/2009/09/blog-post_13.html

ನಕ್ಷತ್ರಬಳ್ಳಿ ಚೆನ್ನಾಗಿದೆ.

Unknown said...

ಡಾ|| ಮೂರ್ತಿಯವರೆ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಿಮ್ಮ ಬ್ಲಾಗನ್ನು ಓದಿ ಅಭಿಪ್ರಾಯ ತಿಳಿಸುತ್ತೇನೆ.

Unknown said...

ತೇಜಸ್ವಿನಿಯವರೆ ಧನ್ಯವಾದಗಳು. ಬ್ಲಾಗ್ ಓದಿ ಪ್ರತಿಕ್ರಿಯೆ ತಿಳಿಸುವೆ.

ಮಂಜುನಾಥ.ಕೆ.ಎಸ್. said...

"ಬೆಟ್ಟದ ಜೀವ"ಶಿವರಾಮ ಕಾರನಂತರ ಕಾದಂಬರಿ ಯನ್ನ ಶೇಷಾದ್ರಿ ಯವರು ಅದ್ಭುತ ನಿರ್ದೇಶನದಿಂದ ಚಲನಚಿತ್ರ ಮಾಡಿದ್ದಕ್ಕೆ ಅವರಿಗೆ ಹಾಗೂ ಕಾರಂತ ರವರಿಗೆ ಧನ್ಯವಾದಗಳು ದತ್ತತ್ರಯ ಮತ್ತು ಸುಚೇಂದ್ರ ಪ್ರಸಾದ್ ಲಕ್ಷ್ಮಿ ಹಗ್ಗಡೆ ಯವರ ಅದ್ಭುತ ಅಭಿನಯನ ವನ್ನ ನನ್ನಿಂದ ಮರೆಯಲು ಸಾಧ್ಯವಾಗುತಿಲ್ಲ.