Tuesday, November 16, 2010

ಬಾಳಾಸಾಹೇಬ ಲೋಕಾಪುರ ಅವರ ಕಥೆ ‘ಕಂಗಳು ತುಂಬಿದ ಬಳಿಕ’


ಕೃಷ್ಣೆ ಒಡಲ ತುಂಬ ಸಂಕಲನದ ಇನ್ನೊಂದು ಕಥೆ ‘ಕಂಗಳು ತುಂಬಿದ ಬಳಿಕ’. ಡಾ. ಬಾಳಾಸಾಹೇಬ ಲೋಕಾಪುರ ಅವರಿಂದ ಮೂಡಿಬಂದ ಮನೋಜ್ಞವಾದ ಕಥೆ ಇದು. ಪಕ್ವವಾದ ಎರಡು ಮನಸುಗಳ ಪರಿವರ್ತನಾ ಭಾವವು ಗಾಢವಾದ ಮೌನದೊಳಗೆ ತಬ್ಬಿಕೊಳ್ಳುವ ಸ್ಥಿತಿಯಾಗಿ ಏರ್ಪಡುವುದು ಇಲ್ಲಿಯ ವಿಶೇಷತೆ.

ಈ ಕಥೆಯ ಕೆ.ಟಿ.ಕೆ. ಸ್ವಪ್ರಯತ್ನದಿಂದ ಉನ್ನತ ಹುದ್ದೆಯನ್ನು ಗಳಿಸಿಕೊಂಡು ಎಂದೋ ತನ್ನ ಬಾಲ್ಯದಲ್ಲಿ ಬೆರಗಿನ ಭಾವನೆಗಳಿಗೆ ಲಗ್ಗೆಯಿಟ್ಟ ಬಾಲ್ಯಸಖಿಯೊಬ್ಬಳ ಅನಿರೀಕ್ಷಿತ ಮುಖಾಮುಖಿಯಲ್ಲಿ ವಿಷಾದದ ಸ್ಥಾಯಿಗಿಳಿಯುವ ಕಥೆಯಿದು. ಅನುಕಂಪ, ನಿರೀಕ್ಷೆ, ಆಸೆಗಳ ನಡುವೆ ಸಾಧಾರಣವಾಗಿ ಹುದುಗಿಹೋದ ಬದುಕನ್ನು ಕಂಡು ಒಳಗೊಳಗೆ ಕೊರಗುವ, ನಿಜ ಬದುಕಿನ ಸ್ಥಿತಿ ಮತ್ತು ಲಯವನ್ನು ಆವರಿಸಿಕೊಳ್ಳುತ್ತಾ ಪಟ್ಟಣದಲ್ಲಿ ಕಳೆದು ಹೋಗುವ ಅಸ್ತಿತ್ವವನ್ನು ವಿಮರ್ಶಿಸುತ್ತಾ ಹಾಗೂ ಕಳೆದುಕೊಂಡಿರುವುದನ್ನು ಜ್ಞಾಪಿಸಿಕೊಳ್ಳುವ ಮನೋಸ್ಥಿತಿ ಅಸಿಸ್ಟೆಂಟ್ ಕಮಿಷನರ್ ಕೆ.ಟಿ.ಕೆ.ಯದ್ದು."

ವೇಶ್ಯೆಯೊಬ್ಬಳನ್ನು ಲಾಕಪ್ಪಿಗೆ ಹಾಕಿ, ಆಕೆ ತನಗೆ ಎ.ಸಿ ಸಾಹೇಬ್ರು ಪರಿಚಯವೆಂದು ಹೇಳಿಕೊಂಡಾಗ ಬೆರಗಾಗುವ ಪೊಲೀಸ್ ವೃಂದ ಕೆ.ಟಿ.ಕೆ.ಗೆ ವಿಷಯ ತಿಳಿಸುವಲ್ಲಿಂದ ಕಥೆ ಆರಂಭವಾಗುತ್ತದೆ. ಅವಳ ಹೆಸರೇನೆಂದು ಗುಮಾನಿಯಿಂದ ಕೇಳುವ ಕಮಿಷನರ್ಗೆ, “ಅವರಿಗೆ ಹೆಸರ ಎಲ್ಲೀದು ಸರ್- ಎಷ್ಟೋ ಸಲ ನಮಗ ಸಿಗತಾರೊ ಅಷ್ಟ ಹೆಸರ ಹೇಳತಾರ” ಎಂದು ಹೇಳುವ ಪೊಲೀಸ್ನ ಮಾತುಗಳು ಸತ್ಯವಾದರೂ, ಅಲ್ಲಿ ಕುಹಕವಿದೆ.

ಅವಳ ಹೆಸರು ತಿಳಿದುಕೊಳ್ಳುವಾಗ ಸಿಟ್ಟಿನ ಬೀಜಗಳು ಒಳಗೇ ಒಡೆದು ಅನಂತ ಮೂಲಗಳಿಂದ ಸಾಹೇಬರನ್ನು ಆಕ್ರಮಿಸಿಕೊಳ್ಳುತ್ತವೆ. ಅವಳ ಹೆಸರು ರೇಖಾ ಎಂದು ಬರೆಸಿದರೂ; ರೇಣುಕಾ ಇರಬೇಕೆನ್ನುವ ಮಾತಿನಲ್ಲಿ ಬಾಲ್ಯದ ನೆನಪುಗಳತ್ತಾ ಕೊಂಡೊಯ್ದು ಒಂದು ರೀತಿಯ ಪುಳಕ ಅವರನ್ನು ಆವರಿಸುತ್ತದೆ.

ಬಾಲ್ಯದಲ್ಲಿ ಅಜ್ಜಿ ಒಂದು ಕಥೆ ಹೇಳು ಎಂದು ಪೀಡಿಸಿ ಕಥೆ ಕೇಳುತ್ತಲೇ ನಿದ್ದೆ ಹೋಗುವ ಮಕ್ಕಳು ಜಗತ್ತಿನಲ್ಲಿವೆ ಎಂಬುದು ಕೆ.ಟಿ.ಕೆ.ಗೆ ಬೆರಗಿನ ಸಂಗತಿ. ನಿದ್ದೆ ಯಾವಾಗ ಬರುತ್ತಿತ್ತೆನ್ನುವುದೇ ಅವನಿಗೆ ತಿಳಿಯುತ್ತಿರಲಿಲ್ಲ. ನಿದ್ದೆ ಬಂದದ್ದೆಂದರೆ ಆತ ಎದ್ದಾಗಿನ ಸ್ಥಿತಿ. ಬಡತನದಲ್ಲಿಯೆ ಬೆಳೆದ ಅವನಿಗೆ ಒಡೆದರೆ ನೂರು ಸುಟ್ಟರೆ ಸಾವಿರವಾಗುವ ತಗಣೆಗಳು ಕಚ್ಚಿದರೂ ತಿಳಿಯುವುದಿಲ್ಲ. ಅಂತಹ ಕೆ.ಟಿ,ಕೆ.ಯನ್ನು ಪ್ರೀತಿಯಿಂದ ‘ಕಲ್ಲಪ್ಪಾ’ ಎಂದು ಕರೆಯುವಷ್ಟು ಆತ್ಮೀಯಳಾಗಿರುವವಳು ಆತನ ಬಾಲ್ಯದ ಗೆಳತಿ ರೇಣುಕಾ.

ಜೋರಾಗಿ ಮಾತಾಡಿದರೆ ಅಸಂಸ್ಕೃತಿಯೆಂದು ಬದುಕುವ ಈಗಿನ ದಿನಗಳಲ್ಲಿ ಬಾಲ್ಯದ ವಿಚಿತ್ರ ನೆನಪುಗಳು ಅವನನ್ನು ಪುಳಕಗೊಳಿಸುತ್ತಿದ್ದವು. ಒಂದು ದಿನ ಕಣ್ಣಾಮುಚ್ಚಾಲೆ ಆಡುತ್ತಾ ಹೊಟ್ಟಿನ ಬಣವಿಯಲ್ಲಿ ಅಡಗಿ ಕುಳಿತಾಗ ರೇಣುಕಾ ಎಂಬ ಹರಾಮಿ ಹುಡುಗಿ ಅವನ ಕೈಯನ್ನು ತೆಗೆದುಕೊಂಡು ತನ್ನ ಲಂಗದಲ್ಲಿ ತೂರಿಸಿಕೊಂಡಿದ್ದಳು. ಕೈಗೆ ಹತ್ತಿದ ತಂಬಲಕ್ಕೆ ಹೇಸಿದವನಿಗೆ... ಹೀಗೆ ಅವಳ ಚಾರಿತ್ರ್ಯವನ್ನು ನೆನಪಿಸುತ್ತಾ ಅವಳು ಸೂಳೆಯಾದಳೆನ್ನುವ ನೋವು ಅವನನ್ನು ನೋಯಿಸುತ್ತಾ, ಪರಿಸ್ಥಿತಿಯನ್ನು ಕೈ ಹಿಡಿದ ಶ್ರೀಮಂತೆ ಗೀತಾಳ ಜೊತೆಗೆ ತುಲನೆ ಮಾಡಿಕೊಳ್ಳುತ್ತದೆ.

ಮಂತ್ರಿಗಳ ಮನೆತನದ ಹುಡುಗಿ ಗೀತಾ ಮದುವೆಯಾಗಿಯೂ ಗಂಡನ ಮನೆಗೆ ಬಾರದೆ ಅವನ ಅವ್ವ, ಅಪ್ಪ, ಅಕ್ಕರನ್ನು ದಿಕ್ಕರಿಸುವ ಒಬ್ಬ ಹೆಂಡತಿಯಾಗಿ ಮಾತ್ರ ದಕ್ಕುತ್ತಾಳೆ. ಅವಳಿಗೆ ಸ್ನಿಗ್ಧ ಸೌಂದರ್ಯವಿತ್ತು, ಈಗಲೂ ಇದೆ. ಆ ಸೌಂದರ್ಯ ಮೈ, ಮುಖಗಳಲ್ಲಿರುವುದು ಕೇವಲ ಭ್ರಮೆ. ಮೈಮಾಟದಲ್ಲಿ ಸುಖದ ಕೊಬ್ಬು ಸೇರಿ ಮತ್ತಷ್ಟು ಆಕರ್ಷಣೆ ಅವಳಿಗೆ. ಯಾಕೆ ಅವಳನ್ನು ಕಂಡರೆ ಧುಮುಧುಮಿಕೆಯೆನ್ನುವುದು ಕೆ.ಟಿ.ಕೆ.ಗೆ ಅರ್ಥವಾಗುವುದಿಲ್ಲ.

ಹೆಂಡತಿಯ ಬಗ್ಗೆ ತಾತ್ಸಾರ ಹುಟ್ಟುತ್ತಾ, ಚಾರ್ಜ್ಶೀಟ್ ಹಾಕದೆ ರೇಣುಕಾಳನ್ನು ಬಿಡುಗಡೆಗೊಳಿಸಿ ತನ್ನ ಅವಳ ನಡುವೆ ಒಂದಿಷ್ಟು ಎಲ್ಲೋ ಇದ್ದಿರಬಹುದಾದ ಮನದ ಎಳೆಗಳನ್ನು ಬಿಚ್ಚಿ ಇಡಬಲ್ಲಳು ಎಂಬ ಭ್ರಮೆಗೆ ಅವಳನ್ನು ತನ್ನ ಮನೆಗೆ ಕರೆತರುತ್ತಾನೆ. ಅವಳು ಬಂಗ್ಲೆಯ ಪ್ರತೀ ಇಂಚು ನೆಲವನ್ನು ಅನುಭವಿಸುತ್ತಾ ಹಠಮಾರಿಯಂತೆ, ಅಮೂಲಾಗ್ರವಾಗಿ ನೋಡುತ್ತಾ ಅವನ ಮಲಗುವ ಕೋಣೆಯಲ್ಲಿ ಬೆತ್ತಲಾಗುತ್ತಾ ಆಹ್ವಾನಿಸುವಾಗ ಕೆ.ಟಿ.ಕೆ ವಿಚಲಿತನಾಗುತ್ತಾನೆ. ಆಗ ಅವನಲ್ಲಿ ಪ್ರಚೋದನೆಯಿರದೆ ಅವಳ ದೇಹವನ್ನು ಕಂಡು ಕಣ್ಣು ತುಂಬಿ, ವಿರಾಗದ ಭಾವ ಹುಟ್ಟಿ, ಬಾಲ್ಯದ ನವಿರು ನೆನಪುಗಳನ್ನೆಲ್ಲಾ ಬೆತ್ತಲೆಯ ವಿರೂಪ ಸ್ಥಿತಿ ಅಳಿಸಿಹಾಕಿ, ಅವಳನ್ನು ನಿರಾಕರಿಸುತ್ತಾ ಮೌನಿಯಾಗುತ್ತಾನೆ.

ಆ ನಿರಾಕರೆಣೆಗೆ ಅವಳಲ್ಲಿದ್ದ ಅನುರಮ್ಯ ಭಾವನೆಗಳಿಗೆ ಜ್ಞಾನೋದಯದ ಬೆಳಕು ಬಿದ್ದು ಅವಳು ಮೈ ಮುಚ್ಚಿಕೊಳ್ಳುತ್ತಾಳೆ. ಶಿಸ್ತಿನ ಬಗ್ಗೆ ಸಿಟ್ಟುಗೊಂಡವನ ಹಾಗೆ ಅವಳಿಂದ ಮನೆಯೆಲ್ಲಾ ಅಸ್ತವ್ಯಸ್ತಗೊಳ್ಳುತ್ತಿರುವ ಪರಿಯನ್ನು ಆನಂದಿಸುತ್ತಾನೆ. ಅವಳೊಂದು ಅಸಂಗತ ನಾಟಕದ ಪಾತ್ರಧಾರಿಯಂತೆ ಕುಳಿತು ಮಾತನಾಡುವಾಗ ಅರಗಿಸಿಕೊಳ್ಳಲಾರದೆ ಮನಸ್ಸ್ಸು ಮುದುಡಿಕೊಳ್ಳುತ್ತದೆ. ಅವಳು ತಿರಸ್ಕೃತಳಾದರೂ ಅವನನ್ನು ಮುತ್ತಿಟ್ಟು ಹೊರಟಾಗ ಅವನಿಗೆ ಅಸಹ್ಯವೆನಿಸಿ ಎಲ್ಲವನ್ನೂ ಕಾರಿಕೊಳ್ಳುತ್ತಾನೆ. ಆದರೂ ಬಾಲ್ಯದ ಅವಳ ಒಡಾನಾಟದಲ್ಲಿದ್ದವನು ಅವಳು ಎಲ್ಲೋ ಯಾರದೋ ಒಂದು ಕತ್ತಲು ಕೋಣೆಯ ಚಾಪೆ ಮೇಲೆ... ನೆನೆಯುತ್ತಲೆ ಅಳು ಬರುತ್ತದೆ. ಅವಳ ಆ ಸ್ಥಿತಿಯನ್ನು ಕಂಡು ಸಹಾಯಕನಾಗುವ ಅವನಲ್ಲಿಯ ವೇದನೆಗೆ ಕಂಗಳು ತುಂಬಿ ಬರುತ್ತವೆ. ಅಷ್ಟರಲ್ಲಿಯೆ ಹಿಂದಿರುಗಿ ಬರುವ ಅವನ ಮಡದಿ ಗೀತಾ ಕುಶಲವನ್ನು ವಿಚಾರಿಸುವಾಗ, ‘ತನ್ನ ಮನಸ್ಸು ಒಂದು ಹುಸಿ ನಂಬಿಕೆಯಲ್ಲಿ ಲೀನವಾಯಿತೆ?’ ಎನ್ನುವ ಗೊಂದಲಕ್ಕೆ ಬೀಳುತ್ತಾನೆ.

ಹೀಗೆ ಬಾಲ್ಯದ ನೆನಪುಗಳಲ್ಲಿ ಕಳೆದು ಹೋಗುವ ಸ್ಥಿತಿಯನ್ನು ನೆನಪಿಸುತ್ತಾ ವಾಸ್ತವದೊಂದಿಗೆ ಹೋಲಿಸುತ್ತಾ ಕಥೆ ಭ್ರಮಾಲೋಕಕ್ಕೆ ಕರೆದೊಯ್ಯುತ್ತದೆ.

ಚಿತ್ರ ಕೃಪೆ: ಎಸ್.ವಿ.ಹೂಗಾರ್

No comments: