Tuesday, December 20, 2011

ಜಂಬಣ್ಣ ಅಮರಚಿಂತ ಅವರ `ಬೂಟುಗಾಲಿನ ಸದ್ದು’


ಆಜ್ ಕೆ ಇಸ್ ಇನ್ಸಾನು ಕೊ, ಯೇ ಕ್ಯಾ ಹೋಗಯಾ?
ಇಸಕಾ ಪುರಾನ ಪ್ಯಾರು ಕಹಾಪರ್ ಖೋ ಗಯಾ?
ಕೈಸಾ ಯೇ ಮನಹೂಸ್ ಘಡಿ ಹೈ
ಬಾಯಿ ಯೋಂ ಮೆ, ಜಂಗ್ಛಿಡಿ ಹೈ
ಕ ಹಿಂಪೆ ಖೂನ್, ಕಹಿಂ ಪ ಜ್ವಾಲಾ
ನಹಿಪತಾ ಕ್ಯಾ ಹೋನೇವಾಲಾ...

ಇದು ಊರ ಓಣಿಯಲ್ಲಿ ಪಕೀರನೊಬ್ಬ ದಪು ಬಡಿಯುತ್ತಾ ವಿಷಾದದಲ್ಲಿ ಹಾಡುವ ಸನ್ನಿವೇಶ. ಈ ಸನ್ನಿವೇಶ ಓದುಗನನ್ನು ಕಾಡುತ್ತಿರುವುದು ಜಂಬಣ್ಣ ಅಮರಚಿಂತ ಅವರ `ಬೂಟುಗಾಲಿನ ಸದ್ದು’ ಕಾದಂಬರಿಯಲ್ಲಿ. ಇದು ದಲಿತ ಮತ್ತು ಬಂಡಾಯ ಸಾಹಿತ್ಯದ ಮೂಲಕ ವೈಚಾರಿಕ ಬರಹಗಳನ್ನು ನೀಡುತ್ತಿರುವ ಜಂಬಣ್ಣ ಅವರ ಎರಡನೆಯ ಕಾದಂಬರಿ.

ದೇಶದ ಮಹಾನುಭಾವರು ಸ್ವಾತಂತ್ರ್ಯಕ್ಕಾಗಿ ಹೇಗೆ ಹೋರಾಟ ನಡೆಸಿದರೋ ಹಾಗೆಯೇ ಸ್ವಾತಂತ್ರ್ಯಾನಂತರ ಕೂಡ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಎದುರಾದದ್ದು ದೇಶದ ಅತೀ ದೊಡ್ಡ ದುರಂತವೆಂದರೆ ಸರಿಯೇನೋ? ನೂರು ಸಾವಿರ ಸಾವಿನ ನೆನಪಿನಲ್ಲಿ ಹಿಟ್ಲರ್ನ ಆಡಳಿತದ ದುರಂತಮಯ ಚಿತ್ರಣ ನೇಮಿಚಂದ್ರ ಅವರ `ಯಾದ್ ವಶೇಮ್’ನಲ್ಲಿ ಕಾಣುವಂತೆಯೇ `ಬೂಟುಗಾಲಿ...’ನಲ್ಲಿ ನಿಜಾಮನ ಆಡಳಿತದ ಉಳಿವಿಗಾಗಿ ಮುಗ್ಧ ಜನರ ಮಾರಣಹೋಮ ನಡೆದಿರುವುದು ಚಿತ್ರಿತವಾಗಿದೆ. ಒಂದೆಡೆ ಕಿತ್ತು ತಿನ್ನುವ ಬಡತನದ ಜೊತೆಗೆ ರಜಾಕಾರರ ಭಯದ ನೆರಳಿನಲ್ಲಿ ಬದುಕುವ ಜೀವನವಾದರೆ, ಇನ್ನೊಂದೆಡೆ ಸ್ವಾತಂತ್ರ್ಯದ ಕನಸು. ಈ ಕನಸನ್ನು ಕಟ್ಟಿಕೊಳ್ಳುವುದಕ್ಕೂ ಹೆದರುವ ಜನರಲ್ಲಿ ಕ್ರಾಂತಿಯ ಸಣ್ಣ ಕಿಡಿ ಉರಿಯುತ್ತಲೇ ಇರುತ್ತದೆ. ಆದರೆ ಅವೆಲ್ಲೂ ವ್ಯಕ್ತವಾಗದೆ ಸೋಲು ಸೋಲುಗಳ ನಡುವೆ ಕಾಣದ ಗೆಲುವಾಗಿ ಗೋಚರವಾಗುವಾಗ ಬದುಕು ಮುಗಿದಿರುವ ಸತ್ಯ ನೋವಾಗಿ ಕಾಡುತ್ತದೆ.

ಈ ಕಾದಂಬರಿಯು ಸ್ವಾತಂತ್ರ್ಯ ನಂತರದ ಭಾರತದ ಚಿತ್ರಣವನ್ನು ನೀಡುವುದರ ಜೊತೆಗೆನೆ ಭಾರತದ ಜೊತೆಗೆ ವಿಲೀನವಾಗದೆ ದಬ್ಬಾಳಿಕೆ ಮತ್ತು ರಾಜನೀತಿಯನ್ನು ಮುಂದುವರಿಸಿಕೊಂಡು ಹೋಗುವ ನಿಜಾಮನ ನಿಜ ರೂಪವನ್ನು ಪರೋಕ್ಷವಾಗಿ ಅನಾವರಣಗೊಳಿಸುತ್ತದೆ. ಕಾದಂಬರಿಯ ವಸ್ತು ಸ್ಥಿತಿ ಸ್ವಾತಂತ್ರ್ಯ ನಂತರದ್ದಾದರೂ ಇದು ನಡೆಯುವ ಕಾಲಘಟ್ಟ 1947 ರಿಂದ 1952 ರವೆಗಿನದ್ದು. ಅಂದರೆ ಆ ಕಾಲಘಟ್ಟದ ಅಂತ್ಯದಲ್ಲಿ ನಿಜಾಮನ ಆಡಳಿತ ಕೊನೆಗೊಂಡು ಕೊನೆಗೂ ಭಾರತದೊಂದಿಗೆ ವಿಲೀನವಾದ ಸಮಯ. ನಿಜಾಮನ ಆಡಳಿತ ಮುಂದುವರೆದರೆ ತಮ್ಮಿಚ್ಛೆಯಂತೆ ಬದುಕಬಹುದೆನ್ನುವ ಕುರುಡು ನಂಬಿಕೆಯನ್ನು ಕಟ್ಟಿಕೊಂಡ ರಜಾಕಾರರು, ನಿಜಾಮನ ಆಳ್ವಿಕೆಯನ್ನು ಬಯಸದ ಹಿಂದೂವಾಗಲಿ, ಮುಸಲ್ಮಾನರನವನಾಗಲಿ ಅಥವಾ ಕೆಂಪು ಬಾವುಟ ಕಟ್ಟುವ ಯಾವನನ್ನೇ ಆಗಲಿ ಜೀವಂತ ಬಿಡುವವರಲ್ಲ. `ಹಿಡಿ, ಕೊಲ್ಲು’ ಸೂತ್ರಗಳನ್ನು ಬದ್ಧವಾಗಿ ಪಾಲಿಸಿಕೊಂಡು ಬರುವ ರಜಾಕಾರರು ಆಡಿದ್ದೇ ಅಟ್ಟಹಾಸ; ಮೆರದದ್ದೆ ಮಂದಹಾಸ! ಅವರ ಕುಕೃತ್ಯಗಳ ಹಿನ್ನಲೆಯಲ್ಲಿ ಹಿಂದು ಮುಸಾಲ್ಮಾನರೆಂಬ ಭೇದಭಾವವಿಲ್ಲದೆ ಸೌಹಾರ್ದತೆಯಿಂದ ಬದುಕು ನಡೆಸುವ ಮುಗ್ಧ ಮನದ ಜನಸಾಮಾನ್ಯರಲ್ಲಿ ಪ್ರೀತಿ, ವಿಶ್ವಾಸ, ಸಹಾಯ, ರಕ್ಷಣೆಗಳೇ ಮೂಲ ಧ್ಯೇಯಗಳಾಗಿದ್ದವು. ಈ ಕಾದಂಬರಿಯಲ್ಲಿ ರಜಾಕಾರರ ವಿರುದ್ಧ ಹೋರಾಡಿದ ಸ್ಥಳೀಯರ ಸ್ಥಿತಿ - ಗತಿಗಳು ಮತ್ತು ಸನ್ನಿವೇಶಗಳಿವೆ. ಇದು ಸ್ವಾತಂತ್ರ್ಯ ಪೂರ್ವ ಮತ್ತು ಆನಂತರದ ಕಾಲವನ್ನು ನೆನಪಿಸಿಕೊಡುತ್ತದೆ. ಜಮೀನ್ದಾರರ ಶೋಷಣೆ, ಬದುಕಿಗಾಗಿ ತಾತ್ವರ, ಏನನ್ನೂ ಪೂರೈಸಿಕೊಳ್ಳಲಾಗದ ವಾಸ್ತವತೆ ಜನರ ಬದುಕನ್ನು ಇನ್ನಷ್ಟು ಬಡತನಕ್ಕೆ ತಳ್ಳಿ ಅವರನ್ನ ಬಲಹೀನನ್ನನ್ನಾಗಿಸುವ ದೃಶ್ಯಗಳು ಕಾದಂಬರಿಯುದ್ದಕ್ಕೂ ಕಾಣಿಸುತ್ತದೆ.

ಇಷ್ಟೆಲ್ಲವೂ ಇದ್ದು ಕಾದಂಬರಿ ಧ್ವನಿಸುವಂತದ್ದು ಚಾರಿತ್ರಿಕತೆಯನ್ನು. ಇದು ಹೈದರಾಬಾದ್ ಕರ್ನಾಟಕವನ್ನೂ ಒಳಗೊಂಡಂತೆ ದಖನ್ ಪ್ರದೇಶದ ಬಹುಭಾಗವನ್ನು ತತ್ತರಗೊಳಿಸಿದ ರಜಾಕಾರರ ಪ್ರಕರಣ ಕುರಿತು ಬರೆದ ಕಾದಂಬರಿಯಾಗಿರುವುದರಿಂದ ಚರಿತ್ರೆಯ ಅಂಶವಾಗಿಯೇ ಓದಿಸಿಕೊಳ್ಳುತ್ತದೆ. ಇತಿಹಾಸದ ಪುಟಗಳನ್ನು ತಿರುಚಿದಾಗ ಮಾನವೀಯತೆಯ ಮೌಲ್ಯಗಳು ಸತ್ವ ಕಳೆದುಕೊಂಡದನ್ನು ಕೇಳಿಸುವ ಈ ಕೃತಿಯು `ಸೆಕ್ಯುಲರಿಸಂ’ ಅನ್ನು ತೋರಿಸುತ್ತದೆ. ಇಲ್ಲಿಯ ಪ್ರಭುತ್ವದ ವಿನಾಶ ಕೇವಲ ಒಂದು ಧರ್ಮ ಅಥವಾ ಕಾಲದ ಆಡಳಿತಕ್ಕೆ ಸೀಮಿತವಾದುದ್ದಲ್ಲ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಕಾಣುವ ಪ್ರಭುತ್ವದ ಮಾದರಿಯೇ ಈ ಕಾದಂಬರಿಯಲ್ಲಿ ಚರಿತ್ರೆಯಾಗಿ ಹೊರಹೊಮ್ಮಿದೆ. `ಹಿಸ್ಟರಿ ರಿಪೀಟ್ಸ್ ಇಟ್ಸೆಲ್ಫ್’ ಅನ್ನುವ ಮಾತನ್ನು ಇಲ್ಲಿ ನಮಗೆ ಸ್ಪಷ್ಟಪಡಿಸುವುದಾದರೂ ಇದು ಬದಲಾಗದ ಪರಿಸ್ಥಿತಿಯೇನಲ್ಲ. ಬದಲಾವಣೆಯ ದಾರಿಯನ್ನು ಮತ್ತು ಪ್ರಭುತ್ವವನ್ನು ಜನಸಾಮಾನ್ಯನೇ ಸಂಘಟಕನಾಗಿ ಸರಿಪಡಿಸಬೇಕಾಗಿರುವ ಅನಿವಾರ್ಯತೆ ಎದ್ದು ಕಾಣುತ್ತದೆ. ಇದು ಕೆಲವೊಂದು ಕ್ರಾಂತಿ, ರಕ್ತಪಾತಗಳಿಗೂ ಕಾರಣವಾದರೂ ಮುಂದೊಂದು ದಿನ ಸ್ವಸ್ಥ್ಯ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.

ಕಾದಂಬರಿ ಆರಂಭವಾಗುವುದೆ `ಟಕ್ ಟಕ್ ಟಕ್’ ಬೂಟುಗಾಲಿನ ಸದ್ದಿನೊಂದಿಗೆ. ಅವರ ವಧಾಸ್ಥಾನದಂತಿರುವ ಮಕ್ತಲ್ ಪೇಟೆಯನ್ನು ಪ್ರವೇಶಿಸುವ ರಜಾಕಾರರ ದರ್ಪದ ನಡುಗೆಯೇ ಇಡೀ ಕಾದಂಬರಿಯಲ್ಲಿ ಕ್ರೌರ್ಯವನ್ನು ಕೂಲಂಕಷವಾಗಿ ಬಿಂಬಿಸುತ್ತದೆ. ಮದರಸಾಬ್ನ ಮೇಲೆ ವಿಶ್ವಾಸವಿಟ್ಟಿರುವ ರಜಾಕಾರರ ಮುಖಂಡ ಕರೀಂಖಾನ್ ಆ ಗಲ್ಲಿಯಲ್ಲಿ ಅಥವಾ ಮಕ್ತಲ್ ಪೇಟೆಯಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳನ್ನು ಅವನಿಂದ ತಿಳಿದುಕೊಳ್ಳುವವನು. ಮದರಸಾಬ್ ಮಾನವೀಯತೆಯುಳ್ಳ ಮುಸಲ್ಮಾನ. ಯಾವನಿಗೂ ಅನ್ಯಾಯವಾಗುವುದನ್ನು ಸಹಿಸದವ. ಹಿಂದುವಾಗಲಿ, ಮುಸಲ್ಮಾನನಾಗಲಿ ರಜಾಕಾರರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಅವರನ್ನು ರಕ್ಷಿಸುವವನು. ಅವನ ಮೇಲೆ ಊರಿನವರಿಗೂ ಪ್ರೀತಿ, ವಿಶ್ವಾಸ.

ಅಗಸರ ರಂಗಪ್ಪ ಮತ್ತು ಆತನ ಮಡದಿ ಮಂಗಮ್ಮ ತಮ್ಮ ಮಗ ನಲ್ಲಜೋಮನೊಡನೆ ಒಗೆದ ಬಟ್ಟೆಗಳನ್ನು ಕತ್ತೆಗಳ ಮೇಲೆ ಹೊರಿಸಿ ಬರುವಾಗ ರಜಾಕಾರರ ಸಂದೇಹಕ್ಕೆ ಗುರಿಯಾಗುತ್ತಾರೆ. ತೆಲುಗಿನವರಾದ ಅವರ ಮೇಲೆ ಕೆಂಪು ಬಾವುಟದವರೆಂದು ಮತ್ತು ಮಡಿ ಬಟ್ಟೆಯ ಗಂಟಿನ ನಡುವೆ ಬಾವುಟವಿದೆಯೆಂದು, ಅದನ್ನು ರಸ್ತೆಯಲ್ಲಿ ಕೆಡವಿ ತಡಕಾಡುತ್ತಾರೆ. ಅವರ ಪರ ವಹಿಸಿ ಮಾತಾಡುವವನು ಮದರಸಾಬ್ ಮಾತ್ರ. ರಜಾಕಾರರಿಂದ ತಪ್ಪಿಸಿಕೊಂಡು ಬಂದ ಅಗಸರ ಕುಟುಂಬಕ್ಕೆ ಮನೆಯಿಂದ ಹೊರಗೆ ಬರುವುದಕ್ಕೂ ಹೆದರಿಕೆ. ಇಲ್ಲಿ ರಜಾಕಾರರು ಮತ್ತು ಅಗಸರ ನಡುವಿನ ಮುಖಾಮುಖಿ ಅವರ ದಬ್ಬಾಳಿಕೆಯನ್ನು ಮತ್ತು ಅವರ ಎಡೆಬಿಡಂಗಿತನವನ್ನು ವ್ಯಂಗ್ಯವಾಗಿಯೂ ಚಿತ್ರಿಸುತ್ತದೆ. ಅಂದರೆ ರಜಾಕಾರರಿಗಿದ್ದ ದ್ವೇಷ ಕ್ಷುಲ್ಲಕವಾದುದೆನ್ನುವುದನ್ನು ತಿಳಿಸುತ್ತದೆ. ಇಲ್ಲಿ ಕೇವಲ ಅಗಸನೊಬ್ಬನನ್ನು ತಮ್ಮ ವೈರಿಯೆಂದುಕೊಳ್ಳುವುದು ಅವರ ಮೂರ್ಖತೆಯನ್ನು ತಿಳಿಸುತ್ತದೆ. ಯಾಕೆಂದರೆ ಅಗಸ ರಂಗಪ್ಪ ತನ್ನ ಬದುಕಿಗಾಗಿ ಪಡುವ ಕಷ್ಟ, ಅವನಿಗೆ ರಾಜಕೀಯದ ಬಗ್ಗೆ ಎಳ್ಳಷ್ಟು ತಿಳುವಳಿಕೆಯಿಲ್ಲದ್ದನ್ನು ಸೂಚಿಸುತ್ತದೆ. ಹಾಗಿರುವಾಗ ರಜಾಕಾರರು ಬ್ರೆಡ್ಡಿಗಾಗಿ ತಾತ್ವರ ಪಡುವಂತಹ ರಂಗಪ್ಪನನ್ನು ಹಿಡಿದು ಮಾಡುವುದಾದರೂ ಏನು? ಕೇವಲ ಅವನ ಪ್ರಾಣ ಹರಣ ಮಾಡಬೇಕಷ್ಟೆ!

ಬಡ್ಡಿಲೇವಾದೇವಿಯಿಂದ ಜನರನ್ನ ಶೋಷಣೆ ಮಾಡುವ ರಾಮಿ ರೆಡ್ಡಿ ಮತ್ತು ಅವನ ಚಮಚ ಪಕೀರಪ್ಪ ಮುಗ್ಧ ಜನರನ್ನು ಇನ್ನೊಂದು ರೀತಿಯಲ್ಲಿ ಆಳುತ್ತಿರುವವರು. ಆದರೆ ಅವರ ಆಟ ರಜಾಕಾರರ ಮುಂದೆ ನಡೆಯುವುದಿಲ್ಲ. ರಜಾಕಾರರ ದಾಳಿಯಾದಾಗ ಯಾವನೇ ಆಗಲಿ ಪ್ರಾಣ ರಕ್ಷಣೆಗಾಗಿ ಅವಿತುಕೊಳ್ಳಲೇಬೇಕು. ಆದರೆ ಅವರನ್ನು ಎದುರಿಸಿ ನಿಲ್ಲುವ ಕೆಲವೊಂದು ಗಟ್ಟಿ ಹೃದಯಗಳು ಇವೆ. ಅವರಲ್ಲಿ ಹುಚ್ಚು ಮುಬಾರಕ ಒಬ್ಬ. ಮುಬಾರಕ ಹುಚ್ಚನಾಗಿದ್ದರೂ ಅವನ ಬಾಯಿಯಲ್ಲಿ ದೇಶಗೀತೆಯ ಧ್ಯೇಯ ಅನುರಣಿಸುತ್ತಿರುತ್ತದೆ. ಇದೇ ವಿಷಯಕ್ಕೆ ರಜಾಕಾರರು ಅವನನ್ನು ಹಿಡಿದು ಕೊಲ್ಲುವುದಕ್ಕೆ ಮುಂದಾಗುತ್ತಾರೆ. ಆದರೆ ಮುಬಾರಕನ ತಂದೆ ಅಮೀನುಲ್ಲಾನ ಸಮಯಪ್ರಜ್ಞೆಯಿಂದ `ಬೋಲೊ ಭಾರತ್ ಮಾತಾಕಿ ಜೈ, ಗಾಂಧಿ ಮಾತ್ಮ ಕಿ ಜೈ, ವಂದೇಮಾತರಂ’ ಎಂದು ಜಯಕಾರ ಕೂಗುವ ತನ್ನ ಮಗನನ್ನು ರಜಾಕಾರರಿಂದ ರಕ್ಷಿಸಿದರೂ, ಮುಬಾರಕನು ಮರದ ಮೇಲೇರಿ ಅಲ್ಲಿಂದ ಬಿದ್ದು ಸಾಯುವುದು ಒಬ್ಬ ವೀರ ಯೋಧ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಷ್ಟೇ ಮಹತ್ವದ್ದಾಗಿ ಕಾಣುತ್ತದೆ. ಒಬ್ಬ ಹುಚ್ಚನೆಂದುಕೊಂಡವನು ಸಮಷ್ಟಿ ಪ್ರಜ್ಞೆ ಬುದ್ಧಿಯಿದ್ದವನಾರಿಗೂ ಇಲ್ಲ, ಮತ್ತು ಆ ಪುಕ್ಕಲುತನವಿರುವುದರಿಂದ ಬುದ್ಧಿಯಿರುವವನು ಹೆದರುತ್ತಲೇ ಬದುಕುವುದನ್ನು ಅಲ್ಲಿಯ ಜನ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಾರೆ. ಸಾಧು ಸ್ವಭಾವದವನಾದ ಮಾಸುಂಅಜ್ಜ ಫಕೀರನ ಮರವೇರಿ ತನಗೆ ಅರಿಯ ಭಾಷೆಯೊಂದರಿಂದ ಮಾತನಾಡುವುದು ಮತ್ತು ಹುಚ್ಚ ಮುಬಾರಕ ದೇಶಗೀತೆಯನ್ನು ಹಾಡುವುದು ವ್ಯತಿರೀಕ್ತಗಳೆನಿಸಿದರೂ ಇದು ಅಲ್ಲಿಯ ಜನರ ಹೃದಯದೊಳಗೆ ಗಟ್ಟಿಯಾಗಿ ಕುಳಿತಿರುವ ದೇಶಭಿಮಾನದ ಅಂತರ್ಗತವಾದ ಆಶಯಗಳೇನೋ ಅನಿಸುತ್ತದೆ.

ಇಷ್ಟೊಂದು ರೀತಿಯಲ್ಲಿ ನಿಜಾಮನ ದರ್ಬಾರು ಮತ್ತು ರಜಾಕಾರರ ಕಾರುಬಾರು ನಡೆಯುತ್ತಿದ್ದರೂ, ಅವರನ್ನು ಬೆಂಬಲಿಸುವ ಪೊಲೀಸರು ಮತ್ತು ಸರಕಾರದ ವ್ಯಕ್ತಿಗಳನ್ನು ಕೆರಳಿಸುವಂತಹ ಸನ್ನಿವೇಶಗಳು ಮಕ್ತಲ್ಪೇಟೆಯಲ್ಲಿ ನಡೆಯುತ್ತಲೇ ಇರುತ್ತವೆ. ರಾತ್ರೋ ರಾತ್ರಿ ಅಗಸರ ಕತ್ತೆಗಳು ಮಾಯವಾಗಿರುವುದರಿಂದ ಅದನ್ನು ಹುಡುಕಲು ರಂಗಪ್ಪ ಮತ್ತು ಅವನಂತೆ ಕತ್ತೆಗಳನ್ನು ಕಳೆದುಕೊಂಡವರು ಹೊರಡುತ್ತಾರೆ. ಆದರೆ ಅವರಿಗೆ ಆ ಕತ್ತೆಗಳು ಪೊಲೀಸ್ ಠಾಣೆಯಲ್ಲಿರುವ ಮಾಹಿತಿ ದೊರಕುತ್ತದೆ. ಮನುಷ್ಯ ಏನೇ ಅನ್ಯಾಯ ಮಾಡಿದರೂ ಸಹಿಸಿಕೊಳ್ಳುವ ಸರಕಾರಿ ಅಧಿಕಾರಿಗಳು ಕತ್ತೆಗಳನ್ನು ಬಂದಿಸಿರುವುದು ಏಕೆಂದು ತಿಳಿಯುವುದಿಲ್ಲ. ಪೊಲೀಸರೇನು ಅವುಗಳನ್ನು ಹೊತ್ತೊಯ್ಯಲು ಕತ್ತೆಗಳೇನು ಕಳ್ತನ ಮಾಡ್ಯಾವಾ? ಸೂಳೆತನ ಮಾಡ್ಯಾವ? ಅವೇನು ಇಸ್ಪೀಟ್ ಆಡ್ಯಾವ? ಅನ್ನುವ ಮುಗ್ಧ ಮಾತುಗಳು ಪರಿಸ್ಥಿತಿಯ ಕ್ಷುಲ್ಲಕತನವನ್ನು ವ್ಯಂಗ್ಯವಾಗಿ ರೂಪಿಸುತ್ತದೆ. ಆನಂತರ ಅವರಿಗೆ ಅವುಗಳ ಕೊರಳಿಗೆ ನಿಜಾಮ, ಖಾಸಿಂ ರಜ್ವಿ, ಸರಕಾರಿ ಅಧಿಕಾರಿಗಳ ವ್ಯಂಗ್ಯಚಿತ್ರಗಳನ್ನು ಹಾಕಿರುವುದರಿಂದ ಅವುಗಳನ್ನು ಠಾಣೆಗೆ ಕರೆದೊಯ್ಯಲಾಗಿದೆಯೆಂದು ತಿಳಿಯುತ್ತದೆ. ಅಲ್ಲಿಗೆ ಹೋದರೂ ಅವು ತಮ್ಮವೆಂದು ಹೇಳುವ ಧ್ವನಿ ಯಾವನಿಗೂ ಇರುವುದಿಲ್ಲ. ಹಾಗೇನಾದರೂ ಹೇಳಿದರೆ ಅವರನ್ನು ಕಂಬಿಯ ಹಿಂದೆ ಹಾಕುವುದಂತು ಖಚಿತವಾಗಿತ್ತು. ಆದರೆ ಆ ಕತ್ತೆಗಳು ರಟ್ಟಿನ ಫಲಕಗಳನ್ನು ತಿಂದು ಪುರಾವೆಯನ್ನು ಸಹಿತ ಉಳಿಸದಿರುವುದು ಅಗಸರಿಗೆ ಅನುಕೂಲವಾಗುತ್ತದೆ. ಆ ಪರಿಸ್ಥಿತಿಯಲ್ಲಿ ಅವು ತಮ್ಮದೆನ್ನುವ ನೈತಿಕ ಹಕ್ಕು ಅವರಿಗಿರುವುದಿಲ್ಲ.

ಕಾದಂಬರಿಯ ಅಂತ್ಯದಲ್ಲಿ ಮಾಯದಂತಹ ಮಳೆಯಾಗುವುದು ರಜಾಕಾರರ ದಾಳಿಯನ್ನು ಸೂಚಿಸುತ್ತಾದರೂ ಆ ದಾಳಿಯ ಹಿಂದೆಯೆ ಅಲ್ಲಿಯವರೆಗೂ ಸುಪ್ತವಾಗಿದ್ದ ಜನರ ಕ್ರಾಂತಿಯ ಕಿಡಿಯ ಹೊತ್ತಿ ಉರಿಯುತ್ತದೆ. ಅದೇ ಸಂದರ್ಭದಲ್ಲಿ ಭಾರತ ಸರಕಾರದ ಮಿಲಿಟರಿಯ ಪ್ರವೇಶವಾಗಿ ನಿಜಾಮನ ದಬ್ಬಾಳಿಕೆಯ ದರ್ಬಾರು ಕೊನೆಗೊಳ್ಳುತ್ತದೆ. ರಜಾಕಾರರ ಕಾರುಬಾರು ಕೊನೆಗೊಂಡು ಜೀವ ಭಯದಿಂದ ಅವಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರ ಜೊತೆಜೊತೆಗೇನೆ ಜಮೀನ್ದಾರಿಕೆಯ ಶೋಷಣೆಯೂ ಸಮಾಪ್ತಿಯಾಗುತ್ತದೆ.

ಹೀಗೆ ಕಾದಂಬರಿ ಕೊನೆಗೊಂಡರೂ ಓದುಗನಿಗೆ ಆ ಕಾಲದ ಘಟನೆಗಳು, ಪರಿಸ್ಥಿತಿ, ಬದುಕು, ಕಷ್ಟಗಳು, ತೊದರೆಗಳು ಇವೆಲ್ಲವನ್ನೂ ಕಣ್ಣಿಗೆ ಕಟ್ಟಿದ ಹಾಗೆಯೇ ಮನಸ್ಸಿಗೆ ತಟ್ಟಿ ಆಲೋಚನೆಗೆ ಹಚ್ಚುತ್ತದೆ. ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಕಾದಂಬರಿ ಧ್ವನಿಸುವುದರಿಂದ ಒಂದು ಗಟ್ಟಿ ಕಥಾಹಂದರದ ಕಾದಂಬರಿ ಚಾರಿತ್ರಿಕತೆಯನ್ನು ತೆರೆದಿಟ್ಟಂತೆ ಮತ್ತು ಆಗಿನ ವಾಸ್ತವವನ್ನು ತಿಳಿಸಿಕೊಡುವಂತೆ ಕಾಣುತ್ತದೆ. ಅಮರೇಶ ನುಗಡೋಣಿಯವರು ಮುನ್ನುಡಿ ನೆಪದ ಕೆಲವು ಮಾತುಗಳಲ್ಲಿ ಈ ಕೃತಿ ಆ ಸಂದರ್ಭದ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಗ್ರಹಿಸುವ ಪ್ರಯತ್ನವೆಂದು ಹೇಳುತ್ತಾರೆ. ಇದೊಂದು ಅಪರೂಪದ ಕೃತಿಯೆಂದರೆ ತಪ್ಪಲ್ಲ.

No comments: