Sunday, November 27, 2011

ಅನ್ಯ ದೇಶಗಳ ಅನನ್ಯ ಕತೆಗಳು


ಕನ್ನಡದ ‘ಮೃಗಯಾ ಸಾಹಿತಿ’ ಶ್ರೀ ಕೆದಂಬಾಡಿ ಜತ್ತಪ್ಪ ರೈಗಳು ಅನುವಾದ ಸಾಹಿತ್ಯದ ಕುರಿತು, ‘ಅನುವಾದವಾದರೇನು ಅದಕ್ಕೆ ಬೆಲೆ ಕಡಿಮೆಯೆ? ಓದಿ ನೋಡಿದರೆ ತಿಳಿದಿತು; ಎರವಲಾಗಿ ತಂದ ಕೊಡಲಿ ಕಡಿಮೆಯೇನಲ್ಲ, ಕಡಿದರೆ ಉರುಳುವುದಿಲ್ಲವೆ ದೊಡ್ಡ ಮರ’ ಎಂದು ಕಾರಂತರ ‘ಚೋಮನ ದುಡಿ’ಯ ತುಳು ಅನುವಾದದ ಅರ್ಪಣೆಯಲ್ಲಿ ಹೇಳುತ್ತಾರೆ.

ಭಾಷಾಂತರ ಸಾಹಿತ್ಯ ಅಥವಾ ಅನುವಾದ ಸಾಹಿತ್ಯಕ್ಕೆ ಅದರದೇ ಆದ ಒಂದು ಅಸ್ಮಿತೆಯಿದೆ. ಆ ಅಸ್ಮಿತೆಯಲ್ಲಿ ಆಯಾ ದೇಶದ, ಪ್ರದೇಶದ ಸಾಂಸ್ಕೃತಿಕ ಮತ್ತು ನೆಲದ ಕಂಪು ಮಿಳಿತವಾಗಿ ಓದುಗ ವರ್ಗವನ್ನು ಗಳಿಸಿಕೊಂಡಿರುವುದು ಸಹಜ. ಸಾಹಿತ್ಯ ಮತ್ತು ಸಂಸ್ಕೃತಿಗೆ ಭಾಷೆಯ ಹಂಗಿಲ್ಲ. ಹಾಗಾಗಿ ಯಾವ ಭಾಷೆಯ ಸಾಹಿತ್ಯವಾಗಲಿ ಅವು ನಿಜವಾದ ಓದುಗನೊಬ್ಬನನ್ನು ತಲುಪಬೇಕಾದರೆ ಅನುವಾದವೆನ್ನುವ ಕೊಂಡುಕೊಳ್ಳುವಿಕೆಯಲ್ಲಿ ಮರುಸೃಷ್ಟಿ ಪಡೆಯಬೇಕು. ಹೀಗೆ ಮರುಸೃಷ್ಟಿ ಪಡೆಯುತ್ತಾ ಒಂದು ದೇಶದ ಜನರನ್ನ, ಸಂಸ್ಕೃತಿಯನ್ನ, ಪರಂಪರೆಯನ್ನ, ಜೀವನಕ್ರಮವನ್ನ, ಸಂಕಟಗಳನ್ನ, ದು:ಖ ದುಮ್ಮಾನಗಳನ್ನ... ಒಟ್ಟಾಗಿ ಹೇಳುವುದಾದರೆ ಬದುಕನ್ನ ತಿಳಿದುಕೊಳ್ಳಲು ಪರಿಣಾಮಕಾರಿಯಾಗಬಲ್ಲದು. ಆದ್ದರಿಂದ ಅನುವಾದ ಸಂಸ್ಕೃತಿಗಳ ನಡುವಿನ ಮತ್ತು ವಿಭಿನ್ನ ಜನರ ನಡುವಿನ ಅಂತರಕ್ಕೊಂದು ಸೇತುವಾಗಿ ಬೆಸೆದುಕೊಳ್ಳುವುದು ಒಪ್ಪಬೇಕಾದ ವಿಷಯ. ಅನುವಾದದಲ್ಲಿ ಅನುಭಾವದ ನೆಲೆಯನ್ನು ಬಿಚ್ಚಿಡುತ್ತಾ ಮೂಲ ಕೃತಿಯ ಆಶಯವನ್ನ ತೆರೆಗೆ ಸರಿಸದೆ ಅಭಿವ್ಯಕ್ತಗೊಳಿಸುವ ಕಾರ್ಯ ಸುಲಭವೇನಲ್ಲ. ಇಲ್ಲಿ ಅನುವಾದಕ ಎರಡು ರೀತಿಯ ಎಚ್ಚರಿಕೆಗಳನ್ನು ಗಮದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಒಂದು ಮೂಲಕಥೆಯ ದಾಯಿತ್ವವನ್ನ ಉಳಿಸಿಕೊಳ್ಳಬೇಕು. ಎರಡನೆಯದಾಗಿ ಅನುವಾದವಾಗುವ ಭಾಷೆಯ ಮಣ್ಣಿನ ಸಂಸ್ಕೃತಿಯನ್ನ ತೆರೆದಿಡಬೇಕು. ಇವೆರಡನ್ನು ಎಚ್ಚರಿಕೆಯಿಂದ ಪಾಲಿಸಿದರೆ ಅನುವಾದವಾಗುವ ಕೃತಿ ಹೆಚ್ಚು ಪರಿಣಾಮಕಾರಿಯಾಗಿ ಮೂಡಬಹುದು.

ಅನುವಾದವೆಂದರೆ ಮೂಲ ಬರವಣಿಗೆಯ ಭಾಷೆ ಮತ್ತು ಸ್ವೀಕಾರ ಬರಹದ ಭಾಷೆ ಈ ಎರಡು ಭಾಷೆಗಳ ನಡುವೆ ನಡೆಯುವ ವ್ಯಾಖ್ಯಾನದ ಮರು ಸೃಷ್ಟಿ. ಹಾಗಾಗಿ ಅನುವಾದದ ಅಗತ್ಯ ಸ್ವೀಕಾರ ಭಾಷೆಯ ನಡುವೆ ನಡೆಯುವ ಬೇರೆಯದೇ ಆದ ಒಂದು ವ್ಯುತ್ಪತ್ತಿ. ‘ಎರಡು ಭಾಷೆಗೆ ಪೂರ್ತಿ ತಲೆಬಾಗಿ ಅನುವಾದ ಮಾಡಿದರೆ ಅದು ಬೆಲೆ ಪಡೆಯುವುದೆ?’ ಈ ಪ್ರಶ್ನೆಗೆ ಮೂಲ ಕೃತಿಯ ಭಾಷೆಯನ್ನು ಅದರ ಸ್ವರೂಪ ಮತ್ತು ಶಕ್ತಿಯನ್ನು ಸೂಕ್ಷ್ಮತೆಗಳ ಜೊತೆಗೆ ಪ್ರಚಾರ ಪಡಿಸಬೇಕಾದ ರೂಪವೇ ಅನುವಾದಿತ ಕೃತಿಗಳ ಗೆಲ್ಮೆಯ ಧೀಮಂತಿಕೆ. ಅನುವಾದವಾಗುವಾಗ ಆಕರ ಬರಹದ ಲೇಖಕ ಮತ್ತು ಅವನ ವ್ಯಕ್ತಿತ್ವದ ಕೃತಿಯೊಂದಿಗೆ ಅನುವಾದಿಸಬೇಕಾದ ಅಗತ್ಯವಿದೆ. ಅದರ ಜೊತೆಗೆ ಸ್ವೀಕಾರ ಭಾಷೆಯ ಪರಿಸರದ ಹಿನ್ನಲೆಯಲ್ಲಿ ಕೃತಿ ಹೊರಹೊಮ್ಮಬೇಕಾಗಿದೆ.

ಕನ್ನಡದ ಅನುವಾದ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ಲೇಖಕರಲ್ಲಿ ಒಬ್ಬರಾದ ‘ಬಿ. ಜನಾರ್ಧನ ಭಟ್’ ಅವರ ಇತ್ತೀಚೆಗೆ ಬಿಡುಗಡೆಯಾದ ಕೃತಿ ‘ಅನ್ಯ ದೇಶದ ಅನನ್ಯ ಕತೆಗಳು’. ಈ ಸಂಕಲನದಲ್ಲಿ ವಿಶ್ವದ ಬೇರೆ ಬೇರೆ ದೇಶದ ವಿಭಿನ್ನ ಕಥೆಗಳು ಬಹಳ ಪರಿಣಾಮಕಾರಿಯಾಗಿ ಅನುವಾದಿಸಲ್ಪಟ್ಟಿವೆ. ಕಥೆಯ ಮಟ್ಟಿಗೆ ವಿಭಿನ್ನವೂ, ಅಪರೂಪವೂ ಆದ ಕಥೆಗಳು ಇಲ್ಲಿರುವುದರಿಂದ ಈ ಕಥೆಗಳು ಓದುಗನನ್ನು ಸೃಷ್ಟಿಸುವುದಕ್ಕಿಂತಲೂ ಓದುಗನ ಅರಿಯುವಿಕೆಯನ್ನು ವಿಸೃತಗೊಳಿಸಬಲ್ಲವುಗಳೆಂದರೆ ತಪ್ಪಲ್ಲ. ಒಬ್ಬ ನಿಜವಾದ ಸಾಹಿತಿಗೆ ತನ್ನ ಸುತ್ತಮುತ್ತಲಲ್ಲಿ ಸಾಗುವ ಸಾಹಿತ್ಯದ ಅರಿವು ಕೂಡ ಅಗತ್ಯವಾಗಿಬೇಕಾಗಿದೆ. ಅದು ಆಧುನಿಕತೆಯದ್ದಾಗಿರಲಿ ಅಥವಾ ಶತಮಾನಗಳಾದಾಚೆಯಾಗಿರಲಿ, ಅದು ಅಪ್ರಸ್ತುತ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ‘ದೇಶಕಾಲ’ದಂತಹ ಪತ್ರಿಕೆ ಅನುವಾದ ಸಾಹಿತ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಓದುಗರಿಗೆ ಮಾಹಿತಿಯನ್ನ ತಿಳಿಸಿಕೊಡುತ್ತಿದೆ.

‘ಅನ್ಯ ದೇಶಗಳ...’ ಕೃತಿಯ ಕಥೆಗಳೆಲ್ಲವೂ ಸಂಸ್ಕೃತಿ ಮತ್ತು ದೇಸೀಯತೆಯನ್ನು ತೆರೆದಿಡುವುದಕ್ಕಿಂತಲೂ ಸಾಹಿತ್ಯದ ಶ್ರೀಮಂತಿಕೆಯನ್ನು ಬಿಚ್ಚಿಡುತ್ತವೆ. ಹೆಚ್ಚಿನ ಕಥೆಗಳು ಹದಿನೇಳು, ಹದಿನೆಂಟನೆಯ ಶತಮಾನದ ಕಥೆಗಳಾಗಿರುವುದರಿಂದ ಆಗಿನ ಬದುಕು, ಅವ್ಯವಸ್ಥೆ, ಅಸಮಾನತೆ, ಬಿರುಕು ಇವುಗಳ ಸುತ್ತಾ ಕಥನಕವು ಸಾಗುತ್ತದೆ. ಈ ಕೃತಿಯಲ್ಲಿ ಒಟ್ಟು ಹನ್ನೊಂದು ಕಥೆಗಳಿದ್ದು ಅವೆಲ್ಲವೂ ಒಂದಕ್ಕೊಂದು ವಿಭಿನ್ನವಾಗಿವೆ. ಕಥೆಗಳನ್ನು ಓದುತ್ತಲೇ ಇನ್ನೊಂದು ಜಗತ್ತಿಗೆ ನಮ್ಮನ್ನು ಕರೆದೊಯ್ಯುವಷ್ಟು ಇಲ್ಲಿಯ ಕಥಾ ಮರುಸೃಷ್ಟಿಯೂ ನಡೆದಿದೆ. ಕೆಲವೊಂದು ಕಡೆ ಮೂಲ ಭಾಷೆಯ ಶಬ್ದವನ್ನು ಉಳಿಸಿಕೊಂಡಿರುವುದು ಕಥೆಯ ಮತ್ತು ಸಾಹಿತ್ಯದ ಶ್ರೀಮಂತಿಕೆಯಂತೆ ಕಾಣುತ್ತದೆ. ಇದರಿಂದಾಗಿ ಹೆಚ್ಚು ಪರಿಣಾಮಕಾರಿಯಾಗಿ ಅದು ಓದುಗನಿಗೆ ಶಾಬ್ದಿಕ ಜ್ಞಾನವನ್ನೂ ವೃದ್ಧಿಸುವುದಕ್ಕೆ ಮತ್ತು ಇನ್ನೊಂದು ನೆಲದ ಸೊಗಡನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ ಅನ್ನುವುದು ನನ್ನ ಅನಿಸಿಕೆ.

ವಾಷಿಂಗ್‌ಟನ್ ಐರ್ವಿಂಗ್‌ನ ‘ರಿಪ್ ವ್ಯಾನ್ ವಿಂಕಲ್’ನಲ್ಲಿ ಕಾಲ ಸರಿಯುವುದರ ಬಗ್ಗೆ, ಜೀವನ ವಿಧಾನದ ಬಗ್ಗೆ ಮತ್ತು ಆಧುನಿಕ ಜೀವನದ ಹಪಹಪಿಯನ್ನ ತೋರಿಸುತ್ತದೆ. ಇದರ ಜೊತೆಗೆ ಸರ್ವವನ್ನೂ ಪಡೆಯುವ ಹಪಿಹಪಿಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುವುದು ಮಾತ್ರ ಸ್ಪುಟವಾಗುತ್ತದೆ. ವೇದವ್ಯಾಸರಿಗಿದ್ದಂತಹ ವಿಶಾಲ ದೃಷ್ಟಿ ಸ್ವಲ್ಪಮಟ್ಟಿಗೆ ಟಾಲ್ ಸ್ಟಾಯ್ ಗೆ ಇತ್ತು ಅನ್ನುವುದಕ್ಕೆ ಅವನು ಕರ್ಮಸಿದ್ಧಾಂತದ ನೆಲೆಯಲ್ಲಿ ರಚಿಸಿದ ಕಥೆ, ‘ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ಕಾಯುತ್ತಾನೆ’ ಸಾಕ್ಷಿಯಾಗಿದೆ. ನೈತಿಕ ಮೌಲ್ಯಗಳ ಬದಲಾವಣೆಯನ್ನು ಕಾಸ್ಮೋ ಹ್ಯಾಮಿಲ್ಟನ್ ‘ಚಿಕ್ಕ ಚಿನ್ನದುಂಗುರ’ ಕಥೆಯಲ್ಲಿ ತೋರಿಸಿಕೊಡುತ್ತಾನೆ. ಇದೊಂದು ಪ್ರೇಮಕಥೆಯಿನಿಸಿದರೂ ಕಥಾ ಹಂದರವು ಕುತೂಹಲಕಾರಿಯಾಗಿದೆ. ಚಾರ್ಲ್ಸ್ ಡಿಕನ್ಸ್‌ನ ಕಥೆ ‘ಸಿಗ್ನಲ್ ಮನ್’ ಮೇಲ್ನೋಟಕ್ಕೆ ಭ್ರಮೆಯೊಳಗೆ ಸಾಗುವಂತೆ ಕಂಡರೂ ಇದು ಮನುಷ್ಯ ಆಧುನಿಕತೆಯೆಡೆಗೆ ಮುಖಮಾಡುತ್ತಾ ಯಂತ್ರಗಳ ಜೊತೆಗೆ ಅನಿವಾರ್ಯವಾಗಿ ಏಗುತ್ತಾ ತನ್ನ ಬದುಕನ್ನು ಕೂಡ ಯಾಂತ್ರಿಕವಾಗಿ ನಡೆಸುತ್ತಾನೆ. ಇಂತಹ ಅನೂಹ್ಯ ಜೀವನಕ್ಕೆ ಬಲಿಯಾಗುವ ಹೃದಯಸ್ಪರ್ಶಿ ಕಥೆಯಾಗಿದೆ ಇದು ಮೂಡಿಬಂದಿದೆ.

‘ಕಪಿ ಮುಷ್ಟಿ’ ಡಬ್ಲ್ಯು ಡಬ್ಲ್ಯು ಜೇಕಬ್ಸ್ ನ ‘ದ ಮಂಕೀಸ್ ಪಾ’ ಕಥೆಯ ಅನುವಾದವಾಗಿದೆ. ಇಲ್ಲಿ ಮಾಂತ್ರಿಕ ಶಕ್ತಿಯನ್ನು ನಂಬಬಹುದಾದರೂ ಅದೇ ಕೊನೆಯಲ್ಲ. ಅದು ಮಿಥ್ಯೆಯೆನ್ನುವಂತೆ ಸಾರುವ ಕಥೆ. ಇಲ್ಲಿಯೂ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡಿರುವ ಲೇಖಕ ಮಾಂತ್ರಿಕತೆಯನ್ನು ನಿರಾಕರಿಸಿಬಿಡುತ್ತಾನೆ. ‘ಹೆಡ್ಡ ಗಿಂಪೆಲ್’ ಕಥೆಯಲ್ಲಿ ಐಸಾಕ್ ಬಾಷೆವಿಸ್ ಸಿಂಗರ್ ಯಹೂದಿಗಳ ಬದುಕಿನ ಕ್ರಮ, ನಂಬಿಕೆ ಮತ್ತು ಜೀವನದರ್ಶನಗಳನ್ನು ತೆರೆದಿಡುತ್ತಾನೆ.

ಶ್ರೇಷ್ಠ ಮನೋ ವೈಜ್ಞಾನಿಕ ಒಳನೋಟವನ್ನೊಳಗೊಂಡಿರುವ ಕಥೆ ‘ಸ್ಟೀವ್‌ಗೊಂದು ಕ್ಯಾಪು’ ಇದೊಂದು ತಂದೆ ಮತ್ತು ಮಗನ ಸಂಬಂಧದ ಕುರಿತಾದರೂ ಇಲ್ಲಿ ಮಗನ ಮನೋಭಿಲಾಷೆಯನ್ನು ಅರಿತುಕೊಳ್ಳುವ ತಂದೆ ಅವನಿಗಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾನೆ. ಇಲ್ಲಿ ವಾಸ್ತವತೆಗಿಂತಲೂ ಗಟ್ಟಿ ಭಾಂದವ್ಯವೊಂದು ಹುಟ್ಟಿಕೊಳ್ಳುತ್ತದೆ. ಸರ್ ಅರ್ಥರ್ ಕಾನನ್ ಡಾಯ್ಲ್‌ನ ‘ಮಚ್ಚೆ ಮಚ್ಚೆಯ ಪಟ್ಟಿ’ ಮತ್ತು ಅಗಾಥ ಕ್ರಿಸ್ಟಿಯ ‘ನೀಲಿ ಜೇರೇನಿಯಂ’ ಪತ್ತೇದಾರಿ ಶೈಲಿಯ ಕಥೆಯಾದರೂ ಕುತೂಹಲಕರವಾಗಿ ಮತ್ತು ಮಾಹಿತಿಪೂರ್ಣವಾಗಿ ಓದುಗರನ್ನು ಆಕರ್ಷಿಸುತ್ತವೆ. ಅರ್ಥರ್ ಇಲ್ಲಿ ಎತ್ತಿಕೊಂಡಿರುವ ವಿಷಯ ಭಾರತದಲ್ಲಿ ಕಂಡು ಬರುವ ಒಂದು ಜಾತಿಯ ಹಾವಿನ ಬಗ್ಗೆಯಾದರೂ ಅಂತಹ ಹಾವು ಭಾರತದಲ್ಲಿರಲಿಲ್ಲವೆನ್ನುವುದು ಓದುಗನಿಗೆ ತಿಳಿಯುತ್ತದೆ. ಆದರೆ ಕಥೆ ಬಹಳ ಕುತೂಹಲದಿಂದ ಉಸಿರು ಬಿಗಿ ಹಿಡಿದು ಓದುವಂತೆ ಮಾಡುತ್ತದೆ. ಹಾಗೇಯೆ ಅಗಾಥ ಕ್ರಿಸ್ಟಿಯ ಕಥೆ ‘ನೀಲಿ ಜೇರೆನಿಯಂ’ ಕೂಡ. ಸಾವಿನ ಹಿನ್ನಲೆಯನ್ನು ವೈಜ್ಞಾನಿಕ ಕಾರಣದಿಂದ ಕಂಡುಹಿಡಿಯುವ ರೀತಿ ಬೆರಗನ್ನು ಹುಟ್ಟಿಸುತ್ತದೆ. ಎಲಿಸ್ ಪಾರ್ಕರ್ ಬಟ್ಲರ್‌ನ ಪತ್ತೇದಾರಿ ಕಥೆಯಾದ ‘ಫಿಲೋ ಗಬ್‌ನ ಮಹಾನ್ ಸಾಹಸ’ ಒಂದು ರೀತಿಯ ವಿಢಂಬನಾತ್ಮವಾಗಿ ರಚಿತವಾಗಿದೆ.

ಈ ಕೃತಿಯ ಒಂದು ಅಪೂರ್ವ ಮತ್ತು ಅತ್ಯುತ್ತಮ ಕಥೆ ‘ಮೂಗು’, ನಿಕೊಲಾಯ್ ಗೊಗೊಲ್ ಬರೆದಿರುವ ಕಥೆ ಸಮಾಜದ ಢಂಬಾಚಾರವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿಯ ವೈಶಿಷ್ಟ್ಯವೆಂದರೆ ಮೂಗೇ ಒಂದು ಪಾತ್ರವಾಗಿ ಕಥೆಯ ಉದ್ದಕ್ಕೂ ಕಾಣಸಿಗುವುದು.

‘ಅನ್ಯ ದೇಶಗಳ...’ ಕಥೆಯನ್ನು ಟ್ರೇಲರ್ ತರಹ ಹೇಳುವುದಕ್ಕಿಂತಲೂ ಅವುಗಳನ್ನು ಓದಿ ಆಸ್ವಾದಿಸುವುದೇ ಒಳ್ಳೆಯದು. ಈ ಕೃತಿಯನ್ನು ಪ್ರಕಟಿಸಿದವರು ಶ್ರೀ ರಾಮ ಪ್ರಕಾಶನ, ನಂ. 893/ ಡಿ 3ನೇ ಕ್ರಾಸ್, ಪೂರ್ವ ಬಡಾವಣೆ, ನೆಹರು ನಗರ, ಮಂಡ್ಯ ಇವರು. 240 ಪುಟಗಳ ಈ ಕೃತಿಯ ಬೆಲೆ ರೂ. 125/- ಮಾತ್ರ. ಕೃತಿಗಳಿಗಾಗಿ 94811 45775 ಮೊಬೈಲ್ ಸಂಖ್ಯೆಯನ್ನು ಕೂಡ ಸಂಪರ್ಕಿಸಬಹುದು.

No comments: