Sunday, June 6, 2010

ಡಾ. ಕೆ. ಎನ್. ಗಣೇಶಯ್ಯ ಅವರ ‘ಪದ್ಮಪಾಣಿ’


ತಮ್ಮ ವಿಶಿಷ್ಟ ಕಥನ ಶೈಲಿಯಿಂದ ಕನ್ನಡದ ಕಥಾಪ್ರಕಾರದಲ್ಲಿ ಗುರುತಿಸಿಕೊಂಡಿರುವ ಡಾ. ಕೆ. ಎನ್. ಗಣೇಶಯ್ಯನವರ ಇತ್ತೀಚಿನ ಕಥಾಸಂಕಲನ ‘ಪದ್ಮಪಾಣಿ’. ಎಂಟು ಕಥೆಗಳನ್ನೊಳಗೊಂಡಿರುವ ಈ ಸಂಕಲನದಲ್ಲಿ ‘ಉಗ್ರಬಂಧ’ ಮತ್ತು ‘ಮಲಬಾರ್ ೦೭’ ಕಥೆಗಳನ್ನುಳಿದು ಉಳಿದ ಆರು ಕಥೆಗಳು ಚರಿತ್ರೆ ಮತ್ತು ಚರಿತ್ರೆಯ ಚೌಕಟ್ಟಿನೊಳಗೆ ಬೆಳೆದು ಅವುಗಳಿಗೆ ಆಧಾರ ಸಹಿತ ಸಮರ್ಥಿನೆ ನೀಡುವ ರೀತಿ ಕಥಾ ಬೆಳವಣಿಗೆಯಲ್ಲಿ ಕೂತುಹಲವನ್ನು ಹುಟ್ಟಿಸುತ್ತದೆ. ಎಂದೋ ಚರಿತ್ರೆಯ ಕೆಲವು ಘಟನೆಗಳನ್ನು, ವ್ಯಕ್ತಿಗಳನ್ನು ಪಠ್ಯ ಪುಸ್ತಕದಲ್ಲಿಯೋ, ಕಥೆ ಪುಸ್ತಕಗಳಲ್ಲಿಯೋ ಅಲ್ಪ ಸ್ವಲ್ಪ ಓದಿರುವ ನಮಗೆ ಅದಕ್ಕಿಂತಲೂ ಬೇರೆಯದೇ ಆದ ಸಂಭವಗಳನ್ನು ತಮ್ಮ ಕಥೆಯ ಮೂಲಕ ತೆರೆದಿಡುತ್ತಾರೆ ಡಾ. ಗಣೇಶಯ್ಯನವರು. "

ಪದ್ಮಪಾಣಿ ಕಥಾ ಸಂಕಲನದಲ್ಲಿ ಚರಿತ್ರೆಯ ಹಿಂದಿರುವ ಕಟು ಸತ್ಯಗಳನ್ನು ಸಮರ್ಥಿಸುತ್ತಾ (ಇಲ್ಲಿ ಅವರು ಅಧ್ಯಯನ ಮಾಡಿರುವ ಆಕರ ಗ್ರಂಥಗಳ ಬಗ್ಗೆಯೂ ತಿಳಿಸಿದ್ದಾರೆ) ಕಥೆಯನ್ನು ಬಿಚ್ಚಿಡುತ್ತಾರೆ. ಅಜಂತಾದ ಗುಹೆಗಳಲ್ಲಿಯ ವೈಶಿಷ್ಟ್ಯವನ್ನು ‘ಪದ್ಮಪಾಣಿ’ ಕಥೆಯ ಮೂಲಕ ಬಹಳ ವಾಸ್ತವಿಕವಾಗಿ ಹೇಳುತ್ತಾರೆ.

‘ಕೆರಳಿದ ಕರುಳು’ ಕಥೆಯಲ್ಲಿ ದಂತಕತೆಯಾಗಿರುವ ಪಾಲುಕ್ಕಮ್ಮ ದೇವತೆಯ ಹಿನ್ನಲೆಯನ್ನಾಧರಿಸಿ, ಆಕೆಗೆ ಆಗಿರುವ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಹೆಣ್ಣೊಬ್ಬಳ ಚಿತ್ರಣವಿದೆ. ಕೇವಲ ಜಾನಪದ ಹಾಡಿನ ದಾಟಿಯನ್ನು ಹಿಡಿದು ಕಥೆಯೊಂದನ್ನು ಹೆಣೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಮೈಸೂರಿನ ಅರಸರಿಗೆ ಮಕ್ಕಳಿಲ್ಲ ಅನ್ನುವ ಕುರಿತು ಸಂಶೋಧನೆಗಿಳಿದು ಅವರಿಗಿರುವ ಶಾಪದ ಹಿನ್ನಲೆಯನ್ನು ಅರಿತು ಅದನ್ನು ವೈಜಾನಿಕವಾಗಿ ಸಮರ್ಥಿಸುವ ಕಥೆ ‘ಮರಳ ತೆರೆಯೊಳಗೆ’. ಕಥೆಗಳಿಗೆ ಪೂರಕವಾದ ಚಿತ್ರಗಳನ್ನು ಒಳಗೊಂಡಿರುವ ಈ ಸಂಕಲನದ ಇನ್ನೊಂದು ಕಥೆ ‘ಕಿತ್ತೂರ ನಿರಂಜನಿ’. ಕಿತ್ತೂರನ್ನು ಆಳಿದ ೧೪ ರಾಜ ವಂಶದ ಹೆಸರುಗಳಲ್ಲಿ ೯ನೇಯ ರಾಜನ ಹೆಸರು ಮಾಳವ ರುದ್ರ ಗೌಡ ಉರ್ಫ್ ಫಕೀರರುದ್ರಸರ್ಜ ಒಂದು ಮುಸ್ಲಿಂ ಹೆಸರಿನಂತಿದ್ದು ಅದರ ಜಾಡಿನಲ್ಲಿ ಸಾಗುವ ಕಥೆ. ಬಹಳ ಕುತೂಹಲ ಮತ್ತು ಅಷ್ಟೇ ದುರಂತವಾಗಿರುವುದು ವಿಷಾದನೀಯ.

ಬೇಲೂರಿನ ಶಿಲಾಬಾಲಿಕೆಯರಿಗೆ ಮನಸೋಲದವರು ಯಾರು ಇಲ್ಲ. ಇಲ್ಲಿಯ ಆ ಶಿಲಾಬಾಲಿಕೆಯರ ಕೆತ್ತನೆಯ ಹಿಂದೆ ಒಂದು ದೀರ್ಘ ಕಥೆಯಿರುವುದು ಸೋಜಿಗ. ಇಲ್ಲಿಯ ಶಿಲಾ ಕೆತ್ತನೆಗೆ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲೆಯೇ ರೂಪದರ್ಶಿನಿಯಾಗಿದ್ದಳೆ? ಅನ್ನುವುದು ಕೌತುಕ. ವಿಷ್ಣುವರ್ಧನ ಜೈನ ಧರ್ಮವನ್ನು ತ್ಯಜಿಸಿ ವೈಷ್ಣವ ಧರ್ಮಸ್ವೀಕಾರ ಮಾಡಿದರೂ ಶಾಂತಲೆ ಜೈನಧರ್ಮದಲ್ಲಿದ್ದುಕೊಂಡೇ ಚವಣ ಮತ್ತು ಆತನ ತಂದೆ ದಾಸೋಜರಿಂದ ತನ್ನ ಹುಟ್ಟೂರಾದ ಬಳ್ಳಿಗಾವೆಯಿಂದಲೇ ಮದನಿಕೆಯರ ಪ್ರತಿಮೆಗಳನ್ನು ಮಾಡಿ ಬೇಲೂರಿಗೆ ತರಲಾಗುತ್ತಾದರೂ ಅದರ ಹಿನ್ನಲೆಯನ್ನು ತಿಳಿದುಕೊಳ್ಳುವಲ್ಲಿ ವಿಷ್ಣುವರ್ಧನ ಆಸಕ್ತನಾಗುತ್ತಾನೆ. ಮದನಿಕೆಗಳ ಹಿಂದೆ ಶಾಂತಲೆಯದೇ ನಾಟ್ಯ ಭಂಗಿಗಳಿರುವುದು ಸ್ಪಷ್ಟವಾಗುತ್ತದೆ. ದುರಂತದಲ್ಲಿಯೇ ಕಥೆ ಮುಗಿಯುತ್ತದೆಯಾದರೂ ಬಿಚ್ಚಿಕೊಳ್ಳುವ ಕಥೆ ಅಪೂರ್ವವೆನಿಸುತ್ತದೆ.

‘ಧರ್ಮಸ್ಥಂಭ’, ಸಾಂಚಿಯಲ್ಲಿರುವ ಅರ್ಧ ಮುರಿದ ಕಂಭದ ಹಿಂದಿರುವ ದುರಂತ ಕಥೆಯೊಂದನ್ನು ಬಿಚ್ಚಿಡುತ್ತದೆ. ಬೌದ್ಧ ಧರ್ಮದ ವೈಚಾರಿಕತೆ ಮತ್ತು ತಾತ್ವಿಕ ಚಿಂತನೆಗಳನ್ನು ಸೂಕ್ಷ್ಮವಾಗಿ ವಾದಿಸುತ್ತಾ ಮಾದ್ರಿಯ ಮಾತುಗಳ ಮೂಲಕ ಸಮರ್ಥಿಸುತ್ತಾ ಸಾಗುವ ಕಥೆ ಎಂತಹವರನ್ನು ಒಮ್ಮೆ ಚಿಂತನೆಗೆ ಹಚ್ಚುತ್ತದೆ.

‘ಅತ್ತಿಯ ಮರ ಹೂಬಿಡುವುದಿಲ್ಲ, ಬಿಟ್ಟರೂ ರಾತ್ರಿಯ ಹೊತ್ತು ಅರಳುತ್ತದೆ’ ಇದು ನಾವು ಸಣ್ಣವರಿದ್ದಾಗ ಕೇಳಿದ ಮಾತುಗಳು. ಅದರ ವೈಜಾನಿಕ ಸತ್ಯ ‘ಮಲಬಾರ್ ೦೭’ ಕಥೆಯ ಮೂಲಕ ತಿಳಿಯುತ್ತದೆ. ವಿಚಿತ್ರ ಅಂದರೆ ಅತ್ತಿಯ ಕಾಯಿಯ ಒಳಗಡೆಯೇ ಹೂವಿದ್ದು ಪರಾಗ ಕ್ರಿಯೆ ನಡೆಸಲು ಒಂದು ರೀತಿಯ ಕಣಜ ಕಾಯಿಯಲ್ಲಿರುವ ತೂತಿನ ಮೂಲಕ ಒಳಹೊಕ್ಕು, ಅಲ್ಲಿಯೇ ಮೊಟ್ಟೆಗಳನ್ನಿಡುತ್ತದೆ. ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪರಿಸರ ನಾಶಗೊಳಿಸುವ ಅಮೆರಿಕದ ತಂತ್ರವನ್ನು ವಿಫಲಗೊಳಿಸುವ ಕಥೆಯಿದು. ಇದೇ ರೀತಿ ‘ಉಗ್ರಬಂಧ’ ಕಥೆಯಲ್ಲಿ ವಿಕಾಸವಾದದ ಹೊಸ ತತ್ವ ತಾಯಿ ಮಕ್ಕಳ ಕಲಹ (Parent- Offspring Conflict) ಅನ್ನು ಪ್ರತಿಪಾದಿಸಿ ಮನುಷ್ಯ ಸಂಬಂಧಗಳನ್ನು ಜಾತೀಯತೆಯ ಚೌಕಟ್ಟನ್ನು ಮೀರಿ ಪ್ರಸ್ತುತ ಪಡಿಸುತ್ತದೆ.

ಇಂತಹ ಅಪರೂಪದ ಸಾಹಿತ್ಯವನ್ನು ಕೊಡುತ್ತಿರುವ ಡಾ. ಗಣೇಶಯ್ಯ ಅವರ ಕೃತಿಗಳನ್ನು ಓದಲೆಬೇಕು ಮತ್ತು ಅವರ ಸಾಹಿತ್ಯ ಕೃಷಿಯನ್ನು ಮೆಚ್ಚಲೇಬೇಕು. ಈ ಕೃತಿಯನ್ನು ಅಂಕಿತ ಪುಸ್ತಕದವರು ಹೊರ ತಂದಿದ್ದಾರೆ. ಇದರ ಬೆಲೆ ಕೇವಲ ರು. ೧೨೦/- ಮಾತ್ರ.

1 comment:

Anonymous said...

ನಮಸ್ತೆ, ನಾನು ಪದ್ಮಪಾಣಿ ಪುಸ್ತಕವನ್ನ ಓದುತ್ತಿದ್ದೇನೆ. 98-111ವರೆಗೆ ಪುಟಗಳು print ಅಗಿಲ್ಲ. Screenshot ಸಿಗಬಹುದೇ?