Thursday, June 10, 2010

ಆಂಟನ್ ಚೆಕಾಫ್ ಕಥೆಗಳು


ಸಣ್ಣ ಕಥಾ ಪ್ರಕಾರವೆಂದಕೂಡಲೇ ನೆನಪಾಗುವುದು ಆಂಟನ್ ಚೆಕಾಫ್. ಸರಳ ಬರವಣಿಗೆಯಿಂದ ಬದುಕಿನ ಮೌಲ್ಯಗಳನ್ನು ಲೇವಡಿಯ ಮೂಲಕ ತೆರೆದಿಡುವ ಚೆಕಾಫ್‌ನ ಕಥೆಗಳನ್ನು ಓದಿ ಅರ್ಥೈಸಿಕೊಳ್ಳುವುದು ಒಂದು ಸವಾಲು. ವರ್ಗ ನೀತಿಯ ತಾರತಮ್ಯವನ್ನು, ನೋವು, ಹತಾಶೆಗಳನ್ನು ಮನಮುಟ್ಟುವ ರೀತಿಯಲ್ಲಿ ಬರೆದ ಚೆಕಾಫ್‌ನನ್ನು ಓದಿಕೊಳ್ಳುವುದು ಒಂದು ಸುಂದರ ಅನುಭವವೆಂದರೆ ತಪ್ಪಲ್ಲ. ಇಂದಿನ ದಿನ ಪತ್ರಿಕೆಗಳು ಬಯಸುವ ರೀತಿಯಲ್ಲಿ ಆಗಲೇ ಚೆಕಾಫ್ ಪುಟಗಳ ಮಿತಿಯಲ್ಲಿ ಸಣ್ಣ ಕಥೆಗಳನ್ನು ಬರೆದರೂ, ಅವುಗಳ ಆಳವನ್ನು ತಿಳಿದುಕೊಳ್ಳಬೇಕಾದರೆ ಕಥೆ ಓದಿದ ಬಳಿಕ ನಮ್ಮನ್ನು ಒರೆಗೆ ಹಚ್ಚುವುದನ್ನು ತಿಳಿಯಬಹುದು. ಒಂದು ಉದಾಹರಣೆ ಕೊಡುವುದಾದರೆ ‘ಊಸರವಳ್ಳಿ’ ಕಥೆ. ಒಂದು ನಾಯಿ ಒಬ್ಬ ಕುಡುಕ ಬಡಗಿಯ ಕೈಬೆರಳನ್ನು ಕಚ್ಚಿದಾಗ ಸಿಟ್ಟಿಗೆದ್ದ ಬಡಗಿ ಆ ನಾಯಿಯನ್ನು ಒಂದು ಗತಿ ಕಾಣಿಸಬೇಕೆಂದು ಹಾತೊರೆಯುತ್ತಿರುವಾಗ ಪೊಲೀಸ್ ಅಧಿಕಾರಿ ಅಲ್ಲಿಗೆ ಬಂದು ತನಿಖೆ ನಡೆಸುತ್ತಾನೆ. ಬಡಗಿಯ ಮೇಲಿದ್ದ ಕನಿಕರ ಕ್ರಮೇಣ ಕರಗಿ ಆ ನಾಯಿಯ ಒಡೆಯನ ಮೇಲೆ ತಿರುಗಿ ಕೊನೆಗೆ ಆತ ಬಹುಗೌರವಸ್ಥ ವ್ಯಕ್ತಿಯೆಂದು ತಿಳಿದ ಮೇಲೆ ಆ ಅಭಿಪ್ರಾಯ ಮತ್ತೆ ಬಡಗಿಯತ್ತ ತಿರುಗುತ್ತದೆ. ಹೀಗೆ ಕ್ಷಣ ಕ್ಷಣವೂ ಸನ್ನಿವೇಶ ಬದಲಾಗುತ್ತಾ ಹೋಗುವುದನ್ನು ಗಾಳಿ ಬಂದ ಕಡೆಗೆ ಕೊಡೆ ಹಿಡಿಯುವ ಮಾತಿನಂತೆ ಕಾಣಿಸುತ್ತದೆ. ಅರಗಿಸಿಕೊಳ್ಳಲು ಭಾರವೆನಿಸದ ಇಲ್ಲಿಯ ಎಲ್ಲಾ ಕಥೆಗಳು ಬಹಳ ಸ್ವಾರಸ್ಯಕರ ಮತ್ತು ಜೀವನದ ಮೌಲ್ಯಗಳನ್ನು ಸೂಕ್ಷ್ಮವಾಗಿ ತೋರಿಸುತ್ತಾ ಅಸಹಾಯಕತೆಯ ದನಿಯಾಗಿ ಮಾರ್ದನಿಸುತ್ತದೆ. "

‘ಭಿಕ್ಷುಕ’ ಕಥೆಯಲ್ಲಿ ಭಿಕ್ಷುಕ ಮತ್ತು ಕುಡುಕನಾಗಿದ್ದವನೊಬ್ಬ ಸುಳ್ಳು ಹೇಳಿಕೊಂಡು ದಿನಕಳೆಯಬೇಕೆಂದುಕೊಂಡರೂ ಅವನನ್ನು ಭಿಕ್ಷೆ ಬೇಡದೆ ದುಡಿದು ತಿನ್ನುವಂತೆ ಪ್ರಚೋದಿಸುವ ವ್ಯಕ್ತಿಯೊಬ್ಬ ಅವನನ್ನು ಕರೆದುಕೊಂಡು ಬಂದು ತನ್ನ ಮನೆಯಲ್ಲಿ ಕಟ್ಟಿಗೆ ಒಡೆಯುವ ಕೆಲಸಕ್ಕೆ ನೇಮಿಸುತ್ತಾನೆ. ಅದೃಷ್ಟವಶಾತ್ ಆ ವ್ಯಕ್ತಿಯ ಮಡದಿ ಒಳ್ಳೆಯವಳಾಗಿದ್ದು ಸೋಂಬೇರಿ ಭಿಕ್ಷುಕನನ್ನು ಹಿಯಾಳಿಸುತ್ತಾ ತಾನೆ ಕಟ್ಟಿಗೆಯನ್ನು ಒಡೆಯುತ್ತಾಳೆ. ಆ ಸತ್ಯ ಕೊನೆಗೆ ಅನಾವರಣವಾಗುವ ಹೊತ್ತಿಗೆ ಅವನಿಗೆ ಬೇರೊಂದು ಕಡೆ ಒಳ್ಳೆಯ ಕೆಲಸ ದೊರಕಿಸಿಕೊಡುತ್ತಾನೆ. ಆತ ಈ ವಿಷಯ ಅವನನ್ನು ಮತ್ತೊಮ್ಮೆ ಭೇಟಿಯಾದಾಗ ತಿಳಿಸುತ್ತಾನೆ. ಅವನ ಹೆಂಡತಿಯ ಬೈಗಳಿಂದ ಮತ್ತು ಅವಳ ಒಳ್ಳೆಯತನದಿಂದ ತಾನು ಕುಡಿತವನ್ನು ಬಿಟ್ಟು ಒಳ್ಳೆಯ ರೀತಿಯಲ್ಲಿರುವುದಾಗಿ ಆ ಭಿಕ್ಷುಕ ಹೇಳುತ್ತಾನೆ.

ಒಂದು ಸೀನಿನಿಂದ ಕೀಳರಿಮೆಗೆ ತುತ್ತಾಗುವ ವ್ಯಕ್ತಿ ತಾನು ಯಾರ ಮೇಲೆ ಸೀನಿದೆನೋ ಆತನನ್ನು ಕ್ಷಮಾಪಣೆಗಾಗಿ ಕೇಳಿಕೊಳ್ಳುತ್ತಾನೆ. ಆತ ಕ್ಷಮಿಸಿದೆನೆಂದರೂ ಈತ ಬೆಂಬಿಡದೆ ಅದೇ ಭಾವೋದ್ವೇಗದಲ್ಲಿ ಅವನಿಗೆ ಕಾಟವಾಗಿ ಪರಿಣಮಿಸುತ್ತಾನೆ. ಕೊನೆಗೆ ಬೇಸತ್ತ ಅವನು ಗದರಿಸಿ ಅವನನ್ನು ಆಚೆಗೆ ತಳ್ಳುತ್ತಾನೆ. ಬಹಳ ತಮಾಷೆಯಾಗಿ ಇದು ‘ಅಧಿಕೃತ ಸಾವು’ ಕಥೆಯಲ್ಲಿ ಕಂಡರೂ ಇಲ್ಲಿ ವರ್ಗಭೇದದ ಗಾಢ ಸಂಬಂಧವಿರುವುದನ್ನು ಗಮನಿಸಬಹುದು. ‘ಶಾಂಪೇನ್’ ಕಥೆಯಲ್ಲಿ ಹತಾಶ ವ್ಯಕ್ತಿಯೊಬ್ಬ ಒಂಟಿ ಜೀವನ ನಡೆಸಿ ಬೇಸತ್ತು ಒಂದು ಹನಿ ಪ್ರೀತಿಗಾಗಿ ಹಂಬಲಿಸುವ ಚಿತ್ರಣವಿದೆ.

ಮನುಷ್ಯನ ನಿರ್ಧಾರಗಳು ಊಸರವಳ್ಳಿಯಂತೆ ಸದಾ ಬಣ್ಣ ಬದಲಾಯಿಸುವುದನ್ನು ‘ಊಸರವಳ್ಳಿ’ ಕಥೆ ತೆರೆದಿಡುತ್ತದೆ. ಒಬ್ಬ ಕುಡುಕ ಬಡಗಿಯ ಕೈ ಬೆರಳಿಗೆ ನಾಯಿಯೊಂದು ಕಚ್ಚಿ ಆತ ಅದಕ್ಕಾಗಿ ಪರಿಹಾರ ಪಡೆಯಬೇಕೆಂದುಕೊಳ್ಳುತ್ತಾನೆ. ಆದರೆ ಮಧ್ಯೆ ಪ್ರವೇಶಿಸುವ ಪೊಲೀಸ್ ಅಧಿಕಾರಿ ಮೊದಲಿಗೆ ಆತನ ಮೇಲೆ ಕನಿಕರ ಮೂಡಿದರೂ ಕ್ರಮೇಣ ಅದು ಊಸರವಳ್ಳಿ ಬಣ್ಣ ಬದಲಾಯಿಸಿದಂತೆ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಕುಡುಕ ಬಡಗಿಯದೇ ತಪ್ಪು ಅನ್ನುವುದು ಸಾಬೀತುಗೊಳಿಸುತ್ತಾನೆ.

ಪಟ್ಟಣದ ಕುಡುಕನೊಬ್ಬ ಸನ್ಯಾಸಿಗಳ ಆಶ್ರಮಕ್ಕೆ ಬಂದು ಮನುಷ್ಯರಲ್ಲಿ ಸತ್ಯ ಉಳಿದಿಲ್ಲ, ಅವರೆಲ್ಲಾ ಮೋಹದಲ್ಲಿ ಮುಳುಗಿರುವುದಾಗಿಯೂ ಅವರನ್ನು ಇದರಿಂದ ಮುಕ್ತಿ ಹೊಂದುವಂತೆ ಯಾರು ಭೋದಿಸುತ್ತಾರೆಂದು ಕೇಳುವಾಗ ಆಲೋಚನೆಗೊಳಗಾದ ಸನ್ಯಾಸಿ ಗುರು ಪಟ್ಟಣಕ್ಕೆ ಹೋಗಿ ಅಲ್ಲಿಯ ಸ್ಥಿತಿಯನ್ನು ಅಧ್ಯಯನ ಮಾಡುತ್ತಾನೆ. ತನ್ನ ಕೈಯಿಂದ ಅದನ್ನು ಸರಿಪಡಿಸಲಾಗದೆ ಆತ ಆಶ್ರಮಕ್ಕೆ ಹಿಂತಿರುಗಿ ಉಳಿದ ಸನ್ಯಾಸಿಗಳಿಗೆ ಅಲ್ಲಿಯ ನಗ್ನ ಸ್ತ್ರೀಯರು, ಕುಡಿತದ ಬಗ್ಗೆ ಮತ್ತು ಅಲ್ಲಿಯ ಸ್ಥಿತಿಗತಿಗಳನ್ನು ತಿಳಿಸುತ್ತಾನೆ. ಮರುದಿನ ಆತ ಆಶ್ರಮಕ್ಕೆ ಹಿಂತಿರುಗುವಾಗ ಅಲ್ಲಿ ಒಬ್ಬನೇ ಒಬ್ಬ ಸನ್ಯಾಸಿ ಉಳಿದಿರುವುದಿಲ್ಲ. ಎಲ್ಲರೂ ಪಟ್ಟಣದ ಕಡೆಗೆ ಹೋಗಿರುತ್ತಾರೆ. ಕ್ಷಣಿಕ ಸುಖದತ್ತ ವಾಲುವ ಮನಸ್ಸನ್ನು ‘ಒಂದು ಹೆಸರಿಲ್ಲದ ಕಥೆ’ ಯಲ್ಲಿ ಕಾಣಬಹುದು.

ಅಪರಾಧಿಯಾದರೂ ತನ್ನ ಹೆಸರು ಪತ್ರಿಕೆಯಲ್ಲಿ ಬಂತೆನ್ನುವ ಖುಷಿಯನ್ನು ಹಂಚಿಕೊಳ್ಳುವ ಕಥೆ ‘ಖುಷಿ’. ವಾಸ್ತವವನ್ನು ನೆಚ್ಚಿಕೊಂಡರೂ ಕನಸುಗಳತ್ತ ವಾಲುವ ಮನುಷ್ಯ ಅದೃಷ್ಟ ಪರೀಕ್ಷೆಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಸರ್ವೇ ಸಾಮಾನ್ಯ. ಇಂತಹ ಲಕ್ಷಣಗಳುಳ್ಳ ಒಬ್ಬ ಚಮ್ಮಾರ ಕನಸು ಕಾಣುತ್ತಾ ವಾಸ್ತವವನ್ನು ಮರೆತು ಬಿಡುತ್ತಾನೆ. ಅವನಿಗಾಗುವ ಕನಸಿನ ಅನುಭವ ‘ಚಮ್ಮಾರ ಮತ್ತು ಭೂತ’ ಕಥೆಯಲ್ಲಿ ವ್ಯಕ್ತವಾಗಿದೆ. ಬಡ ಕುಟುಂಬವೊಂದರ ಜವಾಬ್ದಾರಿಯಿಲ್ಲದ ಕುಡುಕ ಯಜಮಾನನ ದುರಭ್ಯಾಸಗಳನ್ನು ಚಿತ್ರಿಸುವ ಕಥೆ ‘ಹಳೆಯ ಮನೆ’. ಕುಡಿತದಿಂದ ಮುಕ್ತಿ ಹೊಂದುವ ನಿರ್ಧಾರವಿದ್ದರೂ ಅವಕಾಶ ಎದುರಾದಾಗ ತನ್ನ ಚಾಳಿಯನ್ನು ಮುಂದುವರಿಸುವ ಯಜಮಾನ ಕೊನೆಗೂ ಬದಲಾಗುವುದೇ ಇಲ್ಲ.

ಈ ಸಂಕಲನದ ಉಸಿರು ಬಿಗಿ ಹಿಡಿದು ಓದಿಸಿಕೊಂಡು ಹೋಗುವ ಕಥೆ ‘ಪಣ’. ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ಇವೆರಡರಲ್ಲಿ ಯಾವುದು ಮಾನವೀಯ ಮತ್ತು ನೈತಿಕವಾದುದೆಂಬ ಪ್ರಶ್ನೆಯೊಡ್ಡುವ ಪಣ, ಪಣ ಒಡ್ಡುವವನನ್ನು ಮತ್ತು ಒಪ್ಪಿಕೊಂಡವರಿಬ್ಬರ ಕಣ್ಣನ್ನೂ ತೆರೆಸುವ ಕಥೆ. ದುಡ್ಡಿನ ಅಗತ್ಯಕ್ಕಾಗಿ ಪಂಥವನ್ನು ಸ್ವೀಕರಿಸುವ ವ್ಯಕ್ತಿ, ಷರತ್ತಿನ ಪ್ರಕಾರ ಹದಿನೈದು ವರ್ಷಗಳಷ್ಟೂ ದೀರ್ಘ ಅವಧಿಯಲ್ಲಿ ಸೆರೆವಾಸದಲ್ಲಿದ್ದು ಏಕಾಂತವಾಗಿ ಜೀವಿಸುವುದನ್ನು ಸಾಬೀತು ಮಾಡುತ್ತಾನಾದರೂ. ಏಕಾಂತದಲ್ಲಿದ್ದುಕೊಂಡೇ ಜೀವನದ ಮೌಲ್ಯಗಳನ್ನು ಕಂಡುಕೊಂಡು ಮುಂದೊಂದು ದಿನ ನಿಶ್ಶಕ್ತನಾಗಿ ಒಂದು ಚೀಟಿ ಬರೆದಿಡುತ್ತಾನೆ. ಪಣದ ಕೊನೆಯ ದಿನ ಪಂಥಕ್ಕೊಡಿದವನು ತನ್ನ ಇಪ್ಪತ್ತು ಲಕ್ಷಗಳು ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವನನ್ನು ಅಲ್ಲಿಯೇ ಮಲಗಿಸಿ ಉಸಿರುಗಟ್ಟಿಸಿ ಸಾಯಿಸುವ ಯೋಚನೆಯನ್ನು ಮಾಡುತ್ತಾನೆ. ಆದರೆ ಆತ ಬರೆದಿಟ್ಟ ಚೀಟಿಯನ್ನು ನೋಡಿ ಆಘಾತಕ್ಕೊಳಗಾಗುತ್ತಾ ಜೀವನ ಮೌಲ್ಯವನ್ನು ಮತ್ತು ದುರಾಸೆಗಳ ಮಿಥ್ಯೆಯನ್ನು ಕಂಡುಕೊಳ್ಳುತ್ತಾನೆ. ಈ ಸಂಕಲದ ಅತ್ಯುತ್ತಮ ಕಥೆಯಿದು.

ನಾಯಿಯೊಡತಿಯ ಪ್ರೀತಿಗೆ ಬೀಳುವ ವ್ಯಕ್ತಿ ಅವಳನ್ನು ಹೇಗಾದರೂ ತನ್ನವಳನ್ನಾಗಿಸಿಕೊಳ್ಳುವುದಕ್ಕೆ ಹಂಬಲಿಸುತ್ತಾನೆ. ಕೊನೆಗೂ ಪ್ರೀತಿಗೆ ಸೋಲಲೇಬೇಕಾದ ಅವರಿಬ್ಬರೂ ಬದುಕಿನ ಜಟಿಲ ಮತ್ತು ಕಷ್ಟಕರ ಬದುಕು ತಾವು ಒಂದಾದ ಮೇಲೆ ಆರಂಭವಾಗುವುದೆನ್ನುವ ಅನುಭವವಿದ್ದರೂ ಅಗಲಿರಲಾರರು. ಇದು ‘ನಾಯಿಯೊಡತಿ’ ಕಥೆ. ‘ಮನೆ’ ಕಥೆಯಲ್ಲಿ ತಪ್ಪು ದಾರಿಗಿಳಿದ ಮಗನನ್ನು ತಿದ್ದುವ ತಂದೆಯ ಒದ್ದಾಟವನ್ನು ಮಾರ್ಮಿಕವಾಗಿ ಬಿಂಬಿಸಲಾಗಿದೆ. ಯಾವ ರೀತಿಯಲ್ಲಿ ಆ ತಪ್ಪನ್ನು ಮಗನಿಗೆ ಸ್ಪಷ್ಟಪಡಿಸಬೇಕೆನ್ನುವುದು ತಿಳಿಯದ ಜವಾಬ್ದಾರಿಯುತ ತಂದೆಯೊಬ್ಬನ ಅಳಲು ಇಲ್ಲಿದೆ. ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿಯಿರುವ ಹೆಂಗಸು ಹೊಟೇಲ್‌ನಲ್ಲಿ ಉಳಿದುಕೊಂಡು ಒಬ್ಬ ಡ್ರೈವರ್‌ನ ಕೊಳಕು ಮಾತುಗಳನ್ನು ಕೇಳಬೇಕಾಗುತ್ತದೆ. ಹೊಟೇಲ್ ಮಾಲೀಕನಿಗೆ ದೂರು ಕೊಟ್ಟು ಅವನನ್ನು ಅಲ್ಲಿಂದ ಓಡಿಸುವ ತಂತ್ರ ಹೂಡಿದರೂ ಕೊನೆಗೆ ಆತ ಒಳ್ಳೆಯವನೆಂದು ತಿಳಿಯುತ್ತಲೇ ಆತ ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬಳನ್ನಾದರೂ ಮದುವೆಯಾಗಲಿ ಎಂದು ಚಡಪಡಿಸುತ್ತಾಳೆ. ಇದು ‘ಹೊಟೇಲಿನಲ್ಲಿ’ ಕಥೆಯ ಸಾರಾಂಶ.

ಹೀಗೆ ಒಟ್ಟು ಹನ್ನೆರಡು ಕಥೆಗಳಿರುವ ಈ ಸಂಕಲನವನ್ನು ಕನ್ನಡಭಿಮುಖಿಯಾಗಿಸಿದವರು ಮಹಾಬಲ ಸೀತಾಳಭಾವಿ ಅವರು. ಈ ಕೃತಿಯನ್ನು ಅಂಕಿತ ಪುಸ್ತಕ, ಬೆಂಗಳೂರು ಇವರು ಹೊರ ತಂದಿದ್ದಾರೆ.

No comments: