Friday, February 26, 2010

ವಿವೇಕ ಶಾನಭಾಗ ಅವರ ಆಯ್ದ ಕಥೆಗಳು


ಸರಳವಾದ ಶೈಲಿಯಲ್ಲಿ ಮನಮುಟ್ಟುವಂತೆ ಬರೆಯುವ ವಿವೇಕ ಶಾನಭಾಗ ಅವರ ಕಥೆಗಳನ್ನು ಓದಿಯೇ ಆಸ್ವಾದಿಸಬೇಕು. ಇಲ್ಲಿಯ ಹೆಚ್ಚಿನ ಕತೆಗಳಲ್ಲಿ ಉತ್ತರ ಕನ್ನಡದ ಪಾತ್ರ ಚಿತ್ರಣಗಳಿವೆ. ಕೆ.ವಿ. ಸುಬ್ಬಣ್ಣ ಅವರ ನೆನಪಿನ ‘ಮೊದಲ ಓದು’ ಪುಸ್ತಕ ಮಾಲಿಕೆಯಲ್ಲಿ ಹೊರ ಬಂದಿರುವ ವಿವೇಕರ ಆಯ್ದ ಕಥೆಗಳ ಸಂಗ್ರಹಯೋಗ್ಯ ಕೃತಿ ಇದು.

ಕಂತು ನೀಳ್ಗತೆ ಸೇರಿದಂತೆ ಏಳು ಕಥೆಗಳಿರುವ ಈ ಕೃತಿಯ ಇತರ ಕಥೆಗಳು ಲಂಗರು, ಅಂತ:ಪಟ, ಹುಲಿ ಸವಾರಿ, ಸಶೇಷ, ಮತ್ತೊಬ್ಬನ ಸಂಸಾರ ಮತ್ತು ಶರವಣ ಸರ್ವಿಸಸ್."

ಲಂಗರು ಕಥೆಯಲ್ಲಿ ಮಚವೆಯ ಪ್ರಾಮುಖ್ಯತೆ ಕಡಿಮೆಯಾದಂತೆ ರಘುವೀರನ ಜೀವನವೂ ಹದಗೆಡುವಾಗ ಊರಿನವರ ದೃಷ್ಟಿಯಲ್ಲಿ ಭೋಳೇ ಸ್ವಭಾವದವನು ಅನಿಸಿಕೊಳ್ಳಬೇಕಾಗುತ್ತದೆ. ಆದರೆ ಆತ ಮುಗ್ಧ, ಎಲ್ಲರಿಂದಲೂ ಪಕ್ಕನೆ ಮೋಸಕ್ಕೆ ಒಳಗಾಗುವವ ಮತ್ತು ಸಂಬಂಧಗಳಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸದ ಉದಾರ ಮನಸ್ಸಿನವ. ಹಾಗಾಗಿಯೇ ಅವನು ಅಣ್ಣ ಅನಂತನಿಂದಲೂ ಮೋಸಕ್ಕೊಳಗಾಗಿ ಆಸ್ತಿಯ ಪಾಲಾಗಿ ಮಚವೆಯನ್ನು ಪಡೆದವನು. ಇದು ಅವನ ಮಡದಿಯ ಆರೋಪವೂ ಹೌದು. ಓದಿನಲ್ಲಿ ಅನಂತನಿಗಿಂತಲು ಜಾಣ. ಆದರೆ ವ್ಯವಹಾರದಲ್ಲಿ ಅಣ್ಣನ ಸೂತ್ರವಿರುವಾಗ ಅದರ ಒಳಗುಟ್ಟುಗಳನ್ನು ಅರಿಯುವಲ್ಲಿ ವಿಫಲನಾದವನು. ಮಚವೆಯ ಏರಿಳಿತದಲ್ಲಿ ಅಲೌಕಿಕದ ಬೆನ್ನು ಹಿಡಿದವನಿಗೆ ಶರಾವತಿ ನದಿಗೆ ಸೇತುವೆಯಾದಾಗ ಮಚವೆಯ ಪ್ರಾಮುಖ್ಯತೆ ಹೋಗಿ, ಒಂದು ಅಸ್ಥಿಪಂಜರವಾಗುವ ಸ್ಥಿತಿಯಂತೆ, ಮಡದಿಯ ಆಸ್ತಿಯ ಬೇಡಿಕೆಯಲ್ಲಿ ಮೌನವಾಗುತ್ತಾನೆ.

ಲಂಗರು ಕಥೆಯ ರಘುವೀರನಂತೆ ಅಂತ:ಪಟ ಕಥೆಯ ಮಹಾದೇವ. ಆತ ಕೆಲಸ ಮಾಡುತ್ತಿದ್ದ ಬಟ್ಟೆಯ ಮಿಲ್ಲು ಮುಚ್ಚಿದ ಬಳಿಕ ದರ್ಜಿಯ ಕೆಲಸಕ್ಕೆ ಬರುತ್ತಾನೆ. ಅಲ್ಲಿ ರಾಮಣ್ಣನಿಂದ ಎಲ್ಲವನ್ನೂ ಕಲಿತುಕೊಳ್ಳುತ್ತಾನಾದರೂ ಅಳತೆ ತೆಗೆಯುವ ಕೆಲಸ ಮಾತ್ರ ಕಲಿಯಲು ಅವಕಾಶವಿರುವುದಿಲ್ಲ. ಮದುವೆಯ ಅನಂತರ ಜೀವನ ಸುಸೂತ್ರವಾಗಿ ನಡೆದು, ಮಾವನ ಆಸ್ತಿಗೂ ಭಾದ್ಯಸ್ಥನಾಗುತ್ತಾನೆ. ಹೊಸ ಬದುಕಿಗೆ ಹೊಂದಿಕೊಳ್ಳುವಾಗ ರಾಗಿಣಿಯ ಪರಿಚಯವಾಗುತ್ತದೆ. ಗಂಡನಿಂದ ದೂರವಿರುವ ಅವಳು ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಾಳೆ. ಅವಳ ಸಾನಿಧ್ಯ, ತನ್ನ ಸಂಬಂಧ ನೂನ್ಯತೆಯ ಹೊಳೆಯದಿದ್ದ ಮನಸಿನಲ್ಲಿ ಹೊಸ ಪುಳಕ ಹುಟ್ಟಿಸುತ್ತದೆ. ಈ ಸಂಬಂಧ ಕಾಮಾತಿರೇಕ ತಲುಪಿ, ಈ ದೇಹಗಳ ಮೂಲಕ ಹೊಸ ದಾರಿಯನ್ನು ಹುಡುಕುತ್ತಿದ್ದೇನೆ ಅನಿಸುತ್ತದೆ. ಆದರೆ ಅವಳ ನಿರ್ಧಾರವನ್ನು ಕೇಳಿ ಅಸಾಧ್ಯದ ನಿರ್ಣಯ ನೀಡುತ್ತಾನೆ.

‘ಕಂತು’ ಗ್ರಹಣಕ್ಕೆ ಸಂಬಂಧಿಸಿದ ಒಂದು ಅತ್ಯುತ್ತಮ ಕಥೆ. ಮಾವಿನೂರಿನಲ್ಲಿ ಪೂರ್ಣ ಗ್ರಹಣ ಗೋಚರಿಸುವುದೆನ್ನುವಾಗ ದೇಶ ವಿದೇಶದಿಂದ ಜನರು ಅಲ್ಲಿಗೆ ಬರುತ್ತಾರೆ. ಸದಾನಂದ ಮಾಸ್ತರರಿಗೆ ಗ್ರಹಣದ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡು ಊರವರಿಗೆ ತಿಳಿಸುವ ಧ್ಯೇಯವಿದ್ದರೂ, ಎಷ್ಟೇ ಸರಳವಾಗಿ ವಿವರಿಸ ಹೋದರೂ ಮತ್ತಷ್ಟು ಕಗ್ಗಂಟಾಗಿ ಆ ವಿವರಗಳು ತಮ್ಮನ್ನೇ ಸುತ್ತಿಕೊಂಡಂತಾಗುತ್ತದೆ. ಗ್ರಹಣದ ಸಂಗತಿ ನಡೆಯುತ್ತಿರುವಾಗಲೇ ಆ ಊರು ಮುಳುಗಡೆಯಾಗುವಾಗ ದೇವಸ್ಥಾನದ ಜವಾಬ್ದಾರಿಯಿರುವ ಗಂಗಾಧರ ನಿಧಿಯನ್ನು ಹುಡುಕಿ ಲಾಭಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಮಾತ್ರವಲ್ಲ ಊರಿನ ಜನರೆಲ್ಲಾ ತಮ್ಮ ತಮ್ಮ ಮುಳುಗಡೆಯಾಗಲಿರುವ ಮನೆಗಳನ್ನು ಗ್ರಹಣ ವೀಕ್ಷಿಸಲು ಬರುವವರಿಗೆ ಬಾಡಿಗೆಗೆ ನೀಡಿ ಹಣ ಗಳಿಸುವ ತಂತ್ರ ಹೂಡುತ್ತಾರೆ. ಜಗನ್ನಾಥ ಮತ್ತು ಆತನ ಅಣ್ಣನ ಮಗ ಪಾಂಡುರಂಗ ಕೂಡ ಇದರಿಂದ ಹೊರತಾಗಿರುವುದಿಲ್ಲ. ಊರಿನವರಿಗೆ ಹಣದ ಅಮಲು ಹತ್ತಿಸಿ ಅವರ ಮನ ಓಲೈಸುವ ಸರಕಾರ ಆ ಜನರ ಮುಗ್ಧತೆಯ ಪ್ರತಿಬಿಂಬದಂತೆ ಕಾಣುತ್ತದೆ.

ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ವ್ಯವಸ್ಥಿತ ರೀತಿಯಲ್ಲಿ ಚಿತ್ರಿಸುವ ಕಥೆ ‘ಹುಲಿ ಸವಾರಿ’. ಮಾನವೀಯ ಮೌಲ್ಯಗಳೆಲ್ಲಾ ವ್ಯವಹಾರಿಕವಾಗಿ ಮನುಷ್ಯನ ಸ್ಥಿರತೆಯನ್ನು ವಿಭಿನ್ನವಾಗಿ ತಿಳಿಸುತ್ತದೆ.

ಆರ್ಥಿಕ ಉದಾರಿಕರಣದ ಇನ್ನೊಂದು ಉತ್ತಮ ಕಥೆ ‘ಸಶೇಷ’. ನಂಬಿಯಾರ್ ಮಧ್ಯಮವರ್ಗದಿಂದ ಬಂದರೂ ಓದಿ ಒಳ್ಳೆಯ ಕೆಲಸ ಹಿಡಿದು ದುಬೈಗೆ ತೆರಳಿ ಡಾಲರ್ಗಳಲ್ಲಿ ಸಂಬಳ ಎಣಿಸುತ್ತಾನೆ. ಆದರೆ ಆತ ಒಂದು ಸಾಲದ ಸಮಸ್ಯೆಯಲ್ಲಿ ಬೀಳುತ್ತಾನೆ. ಆ ಸಾಲ ಎಷ್ಟೆಂದರೆ ‘ಹನ್ನೆರಡು ರೂಪಾಯಿಗಳು’. ತನ್ನ ಅಜ್ಜನಿಂದ ಬಂದ ಖರ್ಚುವೆಚ್ಚಗಳನ್ನು ಬರೆದಿಡುವ ಅಭ್ಯಾಸ, ಈ ಸಮಸ್ಯೆಯನ್ನು ಎತ್ತಿ ಹಿಡಿಯುತ್ತದೆ. ಈ ಅಭ್ಯಾಸ ನಾವು ಗಳಿಕೆಯ ಮಿತಿಯಲ್ಲಿದ್ದೇವೆ ಮತ್ತು ವ್ಯಯಿಸಿದ್ದು ಸಕಾರಣಕ್ಕಾಗಿ ಅನ್ನುವ ಉದ್ದೇಶದಿಂದಾಗಿ ಮಾತ್ರ ಅನ್ನುವುದಕ್ಕಾಗಿ. ಕೊನೆಗೂ ಗೆಳೆಯನ ಮಾತಿನಂತೆ ಖರ್ಚು ಬರೆಯುವುದನ್ನು ನಿಲ್ಲಿಸಿದ ನಂಬಿಯಾರ್ ದಂಪತಿಗಳಿಗೆ ಏನೋ ನಿಯಮ ಮುರಿದ ಅಳುಕು ಇರುತ್ತದೆ.

ಒಂದೇ ಹೆಸರಿನ ಇಬ್ಬರು ಹುಡುಗರ ತಂದೆಯ ಹೆಸರೂ ಒಂದೇ ಮತ್ತು ಅವರಿಬ್ಬರ ಇನಿಶಿಯಲ್ ಕೂಡ ಒಂದೇ! ಆ ಹುಡುಗರನ್ನು ಗುರುತಿಸಬಹುದಾದ ಒಂದೇ ಒಂದು ವ್ಯತ್ಯಾಸವೆಂದರೆ ಒಬ್ಬ ಆರ್ಟ್ಸ್ ಮತ್ತೊಬ್ಬ ಸಾಯನ್ಸ್ ವಿದ್ಯಾರ್ಥಿ. ಸೆಲ್ಸ್ ಮನ್ ಜಾನಕೀರಾಮನಿಗೆ ಎರಡು ಸಂಸಾರವಿದೆಯೆನ್ನುವುದು ಊರಿನ ತುಂಬಾ ಬಿರುಗಾಳಿಯಂತೆ ಹರಡಿದ ಸುದ್ದಿ. ಕೊನೆಗೂ ಓದುಗನಿಗೆ ನಿರ್ಧರಿಸಲು ಬಿಟ್ಟಂತೆ ‘ಮತ್ತೊಬ್ಬನ ಸಂಸಾರ’ ಕಥೆ ಕೊನೆಗೊಳ್ಳುವುದರಿಂದ ‘ಹೌದೋ? ಅಲ್ಲವೋ?’ ಅನ್ನುವುದು ಕಾಡುತ್ತಲೇ ಇರುತ್ತದೆ.

ಈ ಪುಸ್ತಕದ ಇನ್ನೊಂದು ಅತ್ಯುತ್ತಮ ಕಥೆ ‘ಶರವಣ ಸರ್ವಿಸಸ್’ ವೇಗದ ಬದುಕಿನಲ್ಲಿ ಎಲ್ಲವನ್ನೂ ಮನೆಯ ಬಾಗಿಲಿನವರೆಗೆ ತಲುಪಿಸುವುದನ್ನು ನಿರೀಕ್ಷಿಸುವ ಜನರ ದಿನನಿತ್ಯದ ಜಂಜಾಟವನ್ನು ಬಿಚ್ಚಿಡುತ್ತದೆ ಈ ಕಥೆ. ವ್ಯವಹಾರದ ಬೆನ್ನು ಹಿಡಿದ ಮೇಲೆ ಶರವಣನಿಗೆ ಸಂಸಾರದಿಂದ ದೂರವಾಗುವ ಸನ್ನಿವೇಶದಲ್ಲಿ ಎಲ್ಲವನ್ನೂ ಕಳೆದುಕೊಂಡ ಭಾವನೆ ಎದುರಾಗುತ್ತದೆ. ಆದರೂ ವ್ಯವಹಾರವನ್ನು ಬಿಡಲಾರದ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಈ ಕಥೆಯ ಪ್ಲಸ್ ಪಾಯಿಂಟ್ ಶರವಣನ ಫ್ಲ್ಯಾಷ್ಬ್ಯಾಕ್ ಆತನ ಮಾತಿನಿಂದಲೇ ಹೇಳಿಸುವ ತಂತ್ರ. ಇದು ಹೊಸತನವೂ ಹೌದು ಮತ್ತು ಕಥೆಗೆ ಮೆರುಗನ್ನೂ ನೀಡಿರುವುದು ಸತ್ಯ. ಹಾಗಾಗಿ ಈ ಕಥೆ ಬಹಳ ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.

ಈ ಕೃತಿಯ ಏಳು ಕಥೆಗಳೂ ಕನ್ನಡ ಸಾಹಿತ್ಯವನ್ನು ಪ್ರವೇಶಿಸುವವರಿಗೆ ಅಪೂರ್ವ ಕೊಡುಗೆಯೆಂದರೆ ತಪ್ಪಾಗಲಾರದು. ಇಲ್ಲಿಯ ಕಥೆಗಳನ್ನು ಓದಿಯೇ ಆನಂದಿಸಬೇಕು.

No comments: