Thursday, March 8, 2012

ವೇದವತಿ ನದಿಯಲ್ಲ, ನದಿಯೇ!


ಇತ್ತೀಚೆಗೆ ಬಿಡುಗಡೆಗೊಂಡ ಒಂದು ಅಪರೂಪದ ಕೃತಿ ಡಾ| ಎಚ್. ಎಸ್. ವೆಂಕಟೇಶ ಮೂರ್ತಿಯವರ `ವೇದವತಿ ನದಿಯಲ್ಲ'. ಈ ಕೃತಿ ಎರಡು ವಿಭಿನ್ನ ನೆಲೆಗಳಲ್ಲಿ ಅಪರೂಪದ ಕೃತಿಯಾಗಿ ಕಾಣಿಸುತ್ತದೆ. ಒಂದನೆ ಕಾರಣ ಇದು ಮೂವತ್ತು ವರ್ಷಗಳ ಹಿಂದೆ ಬರೆದಿರುವುದು ಮತ್ತು ಇತ್ತೀಚೆಗೆ ಯಾವ ಮಾರ್ಪಾಟಿಲ್ಲದೆ ಪ್ರಕಟವಾಗಿರುವಂತದ್ದು. ಇನ್ನೊಂದು ಕಾರಣ ಕವಿತೆಗಳಲ್ಲಿಯೇ ಎಲ್ಲವನ್ನೂ ಹೇಳಿಬಿಡುವ ಕವಿಯೊಬ್ಬನ ಕಾದಂಬರಿಯೆನ್ನುವ ಕುತೂಹಲಕ್ಕೆ. ಹಾಗಾಗಿ ಈ ಕೃತಿಯನ್ನು ಓದುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇದನ್ನು ಬರೆದ ಕಾಲಘಟ್ಟ. ಅಂದರೆ ಮೂವತ್ತು ವರ್ಷಗಳ ಹಿಂದಿನ ಜೀವನ ಶೈಲಿಯನ್ನ ಗಮನದಲ್ಲಿಟ್ಟುಕೊಂಡು ಓದಬೇಕಾಗುತ್ತದೆ. ಇದು ಮೂವತ್ತು ವರ್ಷಗಳ ಹಿಂದೆಯೆ ಬರೆದ ಕೃತಿಯೆನ್ನುವುದನ್ನು ಎಚ್.ಎಸ್.ವಿ ಅವರು `ಲೇಖಕರ ಮಾತು' ವಿನಲ್ಲಿಯೂ ಹೇಳಿಕೊಂಡಿದ್ದಾರೆ.
ನದಿ ಹರಿಯುವ ಭಾವದ ಹಂಗಿನ ಜೊತೆಗೆ ಸಾಗುವ ಕೃತಿ `ವೇದವತಿ ನದಿಯಲ್ಲ'. ವೇದವತಿ ನದಿಯೇ, ಈ ಕೃತಿಯ ನಾಯಕಿಯಾಗಿ ಕಾಣಿಸುವ ರಂಗಲಕ್ಷ್ಮೀ ನದಿಯಂತೆ ಯಾರಿಂದಲೂ ಯಾವ ಪ್ರತಿಫಲಾಭೀಷ್ಟಗಳನ್ನು ಎದುರು ನೋಡದೆ ಮತ್ತು ಎದುರಾಗುವ ಅಡೆತಡೆ, ತಿರುವುಗಳನ್ನು ದಿಟ್ಟವಾಗಿ ನುಗ್ಗಿ, ಗಮ್ಯವೆನಿಸುವ ಸಾಗರವನ್ನು ತಲುಪುವವಳು. ಇದು ಕಾದಂಬರಿಯ ಚೌಕಟ್ಟು. ಆದರೆ ಈ ಕಾದಂಬರಿಗೆ ಬಳಸಿಕೊಂಡ ಕ್ಯಾನ್‌ವಾಸ್ ಒಂದು ಮಹತ್ವದ ಕಾದಂಬರಿಯಾಗಿಸುವ ಹಾಗಿದ್ದರೂ ಪಾತ್ರ ಪೋಷಣೆ ಮತ್ತು ಸನ್ನಿವೇಶಗಳಿಗೆ ನಿರ್ಬಂಧ ಹಾಕಿಕೊಂಡಿರುವುದರಿಂದ ಕೃತಿ ಸೊರಗಿದಂತೆ ಕಾಣುತ್ತದೆ. ಹಾಗಂತ ರಂಗಪ್ಪ ಮತ್ತು ಅವನ ಮಗಳು ರಂಗಲಕ್ಷ್ಮೀಯ ಪಾತ್ರಗಳು ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಸ್ವಲ್ಪ ಮಟ್ಟಿಗಾದರೂ ಕೃತಿಗೆ ನ್ಯಾಯ ಒದಗಿಸಿಕೊಡುತ್ತವೆ.
ಇಲ್ಲಿ ಕ್ಲಿಕ್ಕಾಗುವ ಪಾತ್ರಗಳು ರಂಗಲಕ್ಷ್ಮೀ ಮತ್ತು ರಂಗಪ್ಪ. ರಂಗಪ್ಪ ಆಗಿನ ಪರಿಸ್ಥಿತಿಗೆ ಹೆಣ್ಣು ಸಂಪ್ರದಾಯವನ್ನು ಮುರಿದರೆ ಸಮಾಜದಲ್ಲಿ ಆತನ ಸ್ಥಾನಮಾನಕ್ಕೆ ಕುಂದಾಗಬಹುದೆನ್ನುವ ಧೋರಣೆಯಿಂದ ರಂಗಲಕ್ಷ್ಮೀಗೆ ಮರುಮದುವೆಯನ್ನು ನಿರಾಕರಿಸುತ್ತಾನೆ. ಆದರೆ ಆತ ಕಾಕತಾಳಿಯವೆಂಬಂತೆ ಒಬ್ಬ ಹೆಂಡತಿಯ ಕಾಲಾ ನಂತರ ಇನ್ನೊಬ್ಬಳನ್ನು ಹೀಗೆ ಮೂರು ಮದುವೆಯಾಗುತ್ತಾನೆ. ಇಲ್ಲಿ ಮಗಳ ವೈಧವ್ಯದ ಬದುಕು ಅವನಿಗೆ ಏನೂ ಅನಿಸುವುದಿಲ್ಲ. ಹಾಗಂತ ಅವನು ಕೆಟ್ಟವನಾಗಿ ಉಳಿಯುವುದು ಓದುಗನ ಮನಸ್ಸಿನಲ್ಲಿ ಮಾತ್ರ.
ಈ ಎರಡು ಪಾತ್ರಗಳು ಸತ್ವ ಕಳೆದುಕೊಳ್ಳುವಂತದ್ದು ಕಾದಂಬರಿಯ ಉತ್ತರಾರ್ಧದಲ್ಲಿ. ಇಲ್ಲಿ ಸಿನಿಮೀಯ ಬದಲಾವಣೆಯೊಂದಿಗೆ ಕಾದಂಬರಿ ಓಡುತ್ತದೆ.
ನದಿ ಸಾಗರ ಸೇರುವುದಕ್ಕೂ, ಸಾಗರದ ಉಬ್ಬರವಿಳಿತಗಳೂ ಕಾರಣವಾಗುತ್ತವೆ. ಇಲ್ಲಿ ರಂಗಲಕ್ಷ್ಮೀ ಚಿದಂಬರನನ್ನು ಸೇರಲು ಆಕೆಯ ಮಗು ಪಾರ್ವತಿಯ ಅಸೌಖ್ಯ ಒಂದು ಹೆಳೆಯಾದರೂ ಚಿದಂಬರನನ್ನು ಒಪ್ಪಿಕೊಳ್ಳುವಲ್ಲಿ ಯಾವ ತಡೆಯೂ ಎದುರಾಗುವುದಿಲ್ಲ. ಇಲ್ಲಿ ಬಹಳಷ್ಟು ಗಮನಸೆಳೆಯುವ ಸನ್ನಿವೇಶ ಮಗಳ ಆರೈಕೆಯಲ್ಲಿ ಚಿದಂಬರನ ಮನೆಯಲ್ಲಿಯೇ ಉಳಿಯುವ ರಂಗಲಕ್ಷ್ಮೀಯನ್ನು ಕರೆದುಕೊಂಡು ಹೋಗುವುದಾಗಿ ಅವಳ ತಂದೆ ರಂಗಪ್ಪ ಪತ್ರ ಬರೆಯುತ್ತಾನೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಚಿದಂಬರನಿಗೆ ಅವಕಾಶ ಕೊಡದೆ ಅವಳು ಪರೋಕ್ಷವಾಗಿ ತಾನೆ ಉತ್ತರಿಸುವುದಾಗಿ ತಿಳಿಸುತ್ತಾಳೆ. ಕಾದಂಬರಿಯ ಅಂತ್ಯದಲ್ಲಿ ಅವಳು ಚಿದಂಬರನ ಮನೆಯಲ್ಲಿ ಅಸ್ತವ್ಯಸ್ತವಾದ ಹಾಸಿಗೆಯನ್ನು ಸರಿಪಡಿಸುವ ದೃಶ್ಯ. ಕಾದಂಬರಿ ಇಲ್ಲಿಗೆ ಮುಗಿಯುತ್ತಿದ್ದರೆ ಓದುಗನ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತಿತ್ತೇನೋ. ರಂಗಲಕ್ಷ್ಮೀಯ ಈ ಅಚಲ ನಿರ್ಧಾರ ಸಾಮಾಜಿಕ ಕಟ್ಟುಪಾಡಿನಿಂದ ಹೊರಗೆ ಬರುವಂತೆ ಮೂಡಿರುವುದರಿಂದ ಕೃತಿಗೆ ಹೆಚ್ಚಿನ ತೂಕ ಬಂದಿದೆಯೆನ್ನಲಡ್ಡಿಯಿಲ್ಲ.
ಕಾದಂಬರಿಯ ಕೆಲವು ಮುಖ್ಯ ಪಾತ್ರಗಳಾದ ಶಂಕರ, ಗೌಡ, ಚಿದಂಬರ ಇವರೆಲ್ಲಾ ಹಾಗೆ ಬಂದು ಹೀಗೆ ಹೋಗುವ ನಾಟಕದ ಪಾತ್ರಗಳಾಗಿ ಗೋಚರಿಸುತ್ತಾರೆ. ಈ ಯಾವ ಪಾತ್ರಗಳು ಬೆಳವಣಿಗೆ ಕಾಣುವುದೇ ಇಲ್ಲ. ಅದರಂತೆಯೇ ಇಲ್ಲಿಯ ಇನ್ನೊಂದು ಮುಖ್ಯ ನಾಟಕೀಯ ಬೆಳವಣಿಗೆಯಾಗಿ ಪ್ರತೀ ಬಾರಿಯೂ ಮಲ್ಲಪ್ಪನ ಹೆಂಡತಿಯರು ಸಾಯುವಾಗ ಧುತ್ತನೆ ಅವನಿಗೆ ಇನ್ನೊಂದು ಸಂಬಂಧ ತಯಾರಾಗಿರುವುದು ಕಾಣುತ್ತೇವೆ. ಇವುಗಳೆಲ್ಲಾ ಪುಟ ವ್ಯಾಪ್ತಿಯಲ್ಲಿ ರಚಿಸಿದಂತೆ ಕಾಣಿಸುತ್ತದೆ.
ರಂಗಲಕ್ಷ್ಮೀ ಆಧುನಿಕ ಮಹಿಳೆಯ ಹಾಗೆ ದಿಟ್ಟ ನಿಲುವಿನ ಹೆಣ್ಣು ಅನ್ನುವುದನ್ನು ಮೂವತ್ತು ವರ್ಷಗಳ ಹಿಂದೆಯೇ ಬೆಳೆಸಿರುವುದು ಗಮನಾರ್ಹ. ಆಗಿನ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಚಿದಂಬರನನ್ನು ಒಪ್ಪಿಕೊಳ್ಳುವ ಅವಳ ಧೈರ್ಯ ಕಾದಂಬರಿಯನ್ನು ಸುಖಾಂತದಲ್ಲಿ ಮುಗಿಸುವುದಕ್ಕಿಂತಲೂ ಓದುಗನಿಗೆ ಬೆರಗನ್ನು ನೀಡುತ್ತದೆ. ಚಿದಂಬರನ ಬಗ್ಗೆ ಅವಳಿಗಿರುವ ಒಲವನ್ನು ನೇರವಾಗಿ ಎಲ್ಲೂ ಹೇಳದೆ ಅಚಾನಕ್ಕಾಗಿ ಅವನನ್ನು ಅಪ್ಪಿಕೊಳ್ಳುವ ಸಂದರ್ಭದಲ್ಲಿ ಮೌನವೇ ಓದುಗನಿಗೆ ಎಲ್ಲವನ್ನೂ ಹೇಳಿಬಿಡುವಂತೆ ತೋರುತ್ತದೆ.
ಆಧುನಿಕತೆಯ ಸೋಂಕಿಲ್ಲದ ಹಳ್ಳಿಯ ಚಿತ್ರಣ, ಬದುಕಿನ ರೀತಿ, ಹಳ್ಳಿಗರ ಸ್ವಾಭಿಮಾನ, ಮೂಲ ಸೌಕರ್ಯಗಳಿಲ್ಲದ ವ್ಯವಸ್ಥೆ, ದ್ವೇಷ ಸಾಧನೆ, ಎಲ್ಲೂ ಮಿತಿ ಮೀರದೆ ಮತ್ತು ವ್ಯತಿರೀಕ್ತಗಳೆನಿಸದೆ ಕಾದಂಬರಿಯನ್ನು ಆಸ್ವಾದಿಸುವಂತೆ ಮಾಡುತ್ತದೆ.
ಎಚ್. ಎಸ್. ವಿ ಅವರ ಕಾವ್ಯಗಳ ಮಾದುರ್ಯತೆಯ ಹಾಗೆಯೇ ಈ ಕೃತಿಯೂ ಒಂದು ಕ್ಲಾಸಿಕಲ್ ವರ್ಕ ಆಗಿ ಮೂಡಿಬಂದಿರುವುದರಿಂದ ಒಮ್ಮೆಯಾದರೂ ಓದಬೇಕೆನಿಸುತ್ತದೆ. ಈ ಕೃತಿಗೆ ಎನ್. ಎಸ್. ಶ್ರೀಧರಮೂರ್ತಿಯವರ ಮುನ್ನುಡಿ ಮತ್ತು ಜೋಗಿಯವರ ಬೆನ್ನುಡಿಯಿದೆ.

No comments: