Wednesday, June 2, 2010

ರಸವಿದ್ಯೆಯ ಪಥದಲ್ಲಿ ವ್ಯಕ್ತಿ ವಿಕಾಸದ ಸೂತ್ರ - ದ ಅಲ್ಕೆಮಿಸ್ಟ್


ರಸವಿದ್ಯೆಯಿಂದ ವಸ್ತುಗಳನ್ನು ಚಿನ್ನವಾಗಿಸುವ ತಂತ್ರವನ್ನು ಕಲಿಯುವುದಕ್ಕಿಂತಲೂ ನಮ್ಮ ನಡುವೆ ಘಟಿಸುವ ಆಗು ಹೋಗುಗಳನ್ನು ಅಧ್ಯಯನ ಮಾಡುತ್ತಾ ಬಂದರೆ ಅದಕ್ಕಿಂತಲೂ ಉತ್ತಮವಾದ ಜೀವನಾನುಭವ ಬೇರೊಂದಿಲ್ಲ ಅನ್ನುವ ಸಂದೇಶವನ್ನು ಪರೋಕ್ಷವಾಗಿ ತೆರೆದಿಡುವ ಪೌಲೋ ಕೊಯೆಲ್ಹೋ ಅವರ ಕಾದಂಬರಿ ‘ದ ಅಲ್ಕೆಮಿಸ್ಟ್’

ಮನುಷ್ಯ ತನ್ನ ಆತ್ಮದ ಜೊತೆಗೆ ಸಂಭಾಷಿಸುತ್ತಾ, ಜೀವನಾನುಭವಗಳನ್ನು ಪರಾಮರ್ಶಿಸುತ್ತಾ, ತನ್ನೊಳಗೆ ಅವುಗಳೆಲ್ಲವನ್ನೂ ಮಂಥಿಸುತ್ತಾ ಮುನ್ನಡೆದರೆ ಅವನು ಎಲ್ಲರಿಗೂ ತಿಳಿಯುವ ಮತ್ತು ಎಲ್ಲರನ್ನೂ ಅರ್ಥೈಸಿಕೊಳ್ಳಬಹುದಾದ ವಿಶ್ವ ಭಾಷೆಯನ್ನು ಕಲಿಯಬಹುದೆಂದು ಸಾರುತ್ತಾನೆ ಕಾದಂಬರಿಕಾರ. ಇಲ್ಲಿ ವಿಶ್ವ ಭಾಷೆಯನ್ನು ಅರಿತರೆ ಮೂಕ ಪ್ರಾಣಿಗಳು ಮಾತ್ರವಲ್ಲ, ನಿರ್ಜೀವ ವಸ್ತುಗಳನ್ನೂ ಅರ್ಥ ಮಾಡಿಕೊಳ್ಳಬಹುದೆನ್ನುವ ಸತ್ಯದ ಅನಾವರಣವಾಗುತ್ತದೆ."

ಈ ಕಾದಂಬರಿಯಲ್ಲಿ ಪಾದ್ರಿಯಾಗಲೆಂದು ಹೊರಟ ಹುಡುಗ ಸ್ಯಾಂಟಿಯಾಗೋ ವಿಶ್ವ ಪರ್ಯಟನೆ ಮಾಡಬೇಕೆನ್ನುವ ಹಂಬಲದಿಂದ ತನ್ನ ತಂದೆಯ ಬಳಿ ವಾದ ಮಾಡಿ ಅವರಿಂದ ಚಿನ್ನದ ನಾಣ್ಯಗಳನ್ನು ಪಡೆದುಕೊಂಡು, ‘ಒಬ್ಬ ಕುರುಬನಾದರೆ ಮಾತ್ರ ದೇಶ ಸಂಚಾರ ಮಾಡಬಹುದು’ ಎನ್ನುವ ತಂದೆಯ ಮಾತಿನಂತೆ ಕುರಿಗಳನ್ನು ಕೊಂಡುಕೊಂಡು ಸಂಚಾರ ಆರಂಭಿಸುತ್ತಾನೆ. ಎಲ್ಲರಿಗೂ ಅರ್ಥವಾಗುವ ವಿಶ್ವ ಭಾಷೆ ಅಂದರೆ ತಿಳುವಳಿಕೆಯ ಜ್ಞಾನವನ್ನು ಪಡೆದುಕೊಂಡು ಬದುಕುತ್ತಿರುವ ಹೊತ್ತಿಗೆ ಕನಸೊಂದನ್ನು ಕಾಣುತ್ತಾನೆ. ಒಂದು ಮಗು ಆತನನ್ನು ಕರೆದುಕೊಂಡು ಪಿರಮಿಡ್ನ ಬಳಿ ನಿಲ್ಲಿಸಿದಂತೆ ಆ ಕನಸು. ಅದೇ ಮತ್ತೊಮ್ಮೆ ಕಾಣಿಸಿದಾಗ ಆ ಹುಡುಗ ತಾನು ಕಂಡ ಕನಸಿನ ಅರ್ಥವನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಹೀಗೆ ಆ ಕನಸಿನ ಅರ್ಥ, ಪಿರಮಿಡ್ನ ಬಳಿ ಇರುವ ಗುಪ್ತ ನಿಧಿಯ ಕುರಿತಾಗಿದೆ ಅನ್ನುವ ಅಭಿಪ್ರಾಯ ತಿಳಿದ ಬಳಿಕ ಈಜಿಪ್ಟನ್ನು ಸೇರುವ ತುಡಿತದಿಂದ ಆತನ ಪ್ರಯಾಣ ಮುಂದುವರಿಯುತ್ತದೆ. ತನ್ನ ಮಾಮೂಲು ವಾಸಸ್ಥಾನವಾದ ಪಾಳು ಬಿದ್ದ ಚರ್ಚ್ನಿಂದ ಆತನ ಪ್ರಯಾಣ ಆರಂಭವಾಗುತ್ತದೆ. ತನ್ನ ಕುರಿಗಳಿಂದ ತಾನು ವಿಶ್ವ ಭಾಷೆಯನ್ನು ಕಲಿತಿರುವೆಂದು ತಿಳಿಯುವ ಹುಡುಗ, ಬಳಿಕ ತನ್ನ ಹೃದಯದ ಪಿಸುನುಡಿಗಳನ್ನು ಆಲಿಸುವ ಮೂಲಭೂತ ವಿವೇಕವನ್ನು, ಜೀವನ ಪಥದಲ್ಲಿ ಹರಡಿರುವ ಶಕುನಗಳನ್ನು ಗುರುತಿಸುವ ಮತ್ತು ತನ್ನ ಕನಸನ್ನು ಸಾಕಾರಗೊಳಿಸುವುದನ್ನೂ ಅರಿತುಕೊಳ್ಳುತ್ತಾನೆ.

ತನ್ನ ಪ್ರಯಾಣಕ್ಕೆ ಅಣಿಗೊಂಡ ಹುಡುಗ ಕುರಿಗಳನ್ನು ಮಾರಿ ಆ ಹಣವನ್ನು ಭದ್ರವಾಗಿಟ್ಟುಕೊಂಡು ಹೊರಡುತ್ತಾನಾದರೂ ಒಬ್ಬ ನಯವಂಚಕನಿಂದ ಅದನ್ನು ಕಳೆದುಕೊಳ್ಳುತ್ತಾನೆ. ಮುಂದೆ ದಾರಿ ಕಾಣದೆ ಒಬ್ಬ ಬೇಕರಿಯವನ ಬಳಿ ಕೆಲಸ ಮಾಡಿ ಆ ದಿನದ ಹೊಟ್ಟೆಯ ಹಸಿವನ್ನು ನೀಗಿಕೊಂಡು ಮುಂದುವರಿಯುವಾಗ ಅವನಿಗೆ ಕ್ರಿಸ್ಟಲ್ ವ್ಯಾಪಾರಿಯ ಪರಿಚಯವಾಗುತ್ತದೆ. ಅಲ್ಲಿ ವ್ಯಾಪಾರಿಯ ಏಕತಾನತೆಯ ಬದುಕಿಗೆ ಹೊಸ ಆಲೋಚನೆಗಳನ್ನು ಕೊಟ್ಟು ಶ್ರೀಮಂತನನ್ನಾಗಿಸುತ್ತಾನೆ. ಜೊತೆಗೆ ತಾನೂ ಹಣ ಗಳಿಸುತ್ತಾನೆ. ಆ ಯೋಚನೆಯ ಮುಖ್ಯ ಗುರಿ ಆ ದಾರಿಯಲ್ಲಿ ಮೆಕ್ಕಾದತ್ತ ಪ್ರಯಾಣ ಮಾಡುವವರಿಗೆ ಕ್ರಿಸ್ಟಲ್ನ ಲೋಟಗಳಲ್ಲಿ ಚಹಾದ ಸರಬರಾಜು. ಇದನ್ನು ವ್ಯಾಪಾರಿ ನಿರಾಕರಿಸಿದರೂ ಹುಡುಗ, ‘ಗಂಡಸರ ಮನಸನ್ನು ಆಕರ್ಷಿಸುವಲ್ಲಿ ಸೌಂದರ್ಯವನ್ನು ಬಿಟ್ಟರೆ ಮತ್ತೊಂದಿಲ್ಲ’ ಅನ್ನುವ ವಾಸ್ತವದ ಸತ್ಯವನ್ನು ತಿಳಿಸಿದ ಬಳಿಕ ಆತ ಒಪ್ಪಿಕೊಳ್ಳುತ್ತಾನೆ. ಆ ಹಣ ತನಗೆ ಮತ್ತೆ ಕುರಿ ಮಂದೆಯನ್ನು ಹೊಂದುವುದಕ್ಕಾಗಿ ಎಂದು ಯೋಚಿಸಿದರೂ, ಅವನ ಆಂತರ್ಯದಲ್ಲಿರುವುದು ಗುಪ್ತನಿಧಿಯ ಬೇಟೆಗೆ ತೊಡಗಿಕೊಳ್ಳುವುದು ಮಾತ್ರ. ಆ ಕನಸೇ ಅವನನ್ನು ಕಳೆದುಕೊಂಡಿರುವ ಹಣವನ್ನು ಮತ್ತೊಮ್ಮೆ ಗಳಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಆಗಲೇ ಗಾಳಿಯ ಈರ್ಷ್ಯೆಯನ್ನು ಕಂಡು ಹುಡುಗ ತಾನೂ ಅಷ್ಟೇ ಸ್ವತಂತ್ರನಾಗುವುದಕ್ಕೆ ಬಯಸುತ್ತಾನೆ.

ತನ್ನ ಪ್ರಯಾಣದ ಆದಿಯಲ್ಲಿ ಆತ ವೃದ್ಧನೊಬ್ಬನನ್ನು ಭೇಟಿಯಾಗಿರುತ್ತಾನೆ. ಆತ ‘ಪ್ರಿನ್ಸಿಪಲ್ ಅಫ್ ಫೆವರೆಬಿಲಿಟಿ’ ಅಂದರೆ ಆರಂಭಿಕ ಅದೃಷ್ಟದ ಬಗ್ಗೆ ತಿಳಿಸುತ್ತಾನೆ. ಅದೃಷ್ಟ ನಮ್ಮ ಕಡೆಗಿರುವಾಗ ಅದರ ಲಾಭವನ್ನು ಪಡೆದುಕೊಳ್ಳಬೇಕು. ನಮಗೆ ಎಷ್ಟು ಸಾಧ್ಯವೋ ಅಷ್ಟು ಅದು ನೆರವೇರಲು ಅನುವುಮಾಡಿಕೊಡಬೇಕು. ಇದು ಆರಂಭಿಕ ಅದೃಷ್ಟದ ನಿಯಮ. ಈ ನಿಯಮವನ್ನು ತಿಳಿದುಕೊಂಡ ಹುಡುಗ ತನ್ನ ಕನಸುಗಳನ್ನು ನನಸಾಗಿಸುವಲ್ಲಿ ಮುಂದುವರಿಯುತ್ತಾನೆ. ಆದರೆ ಕ್ರಿಸ್ಟಲ್ ವ್ಯಾಪಾರಿ ಹೇಳಿದ ಮಾತು ಅವನನ್ನು ಮತ್ತೊಮ್ಮೆ ಆಲೋಚಿಸುವಂತೆ ಮಾಡುತ್ತದೆ. ಒಮ್ಮೆ ಕನಸು ನನಸಾಗಿ ಬಿಟ್ಟರೆ ಮುಂದೆ ಜೀವಿಸಲು ಬೇರೆ ದಾರಿಯಿರುವುದಿಲ್ಲವೆನ್ನುವ ಮಾತು ಅದು.

ಕೊನೆಗೂ ಮರುಭೂಮಿಯ ದಾರಿ ಹಿಡಿದ ಹುಡುಗ ಕ್ಯಾರವಾನ್ನಲ್ಲಿ ಸಾಗುತ್ತಿರುವಾಗ ಒಬ್ಬ ಇಂಗ್ಲಿಷ್ನವನ ಪರಿಚಯವಾಗುತ್ತದೆ. ಅವನಿಂದ ‘ರಸವಿದ್ಯೆ’ಯ ಬಗ್ಗೆ ತಿಳಿದುಕೊಳ್ಳುತ್ತಾನೆ. ಅವನಿಂದ ಪ್ರೇರಿತನಾಗಿ ವಿಶ್ವ ಭಾಷೆಯನ್ನೇ ಅರಿತಿರುವ ಆತ ಎಲ್ಲವನ್ನೂ ಆತ್ಮವಿಮರ್ಶೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯುತ್ತಾ, ‘ಈಂಟ್ಯೂಜನ್ ಅಂದರೆ ಅಂತರದೃಷ್ಟಿ ಎಂಬುವುದು ವಾಸ್ತವದಲ್ಲಿ ಸಾರ್ವತ್ರಿಕ ಜೀವನಧಾರೆಯಲ್ಲಿ ಆತ್ಮದ ಹಠಾತ್ ಮುಳುಗುವಿಕೆ’ ಎಂದು ತಿಳಿಯುತ್ತದೆ. ತಮ್ಮ ಅವಶ್ಯಕತೆಗಳನ್ನು, ಅಗತ್ಯತೆಗಳನ್ನು ಪಡೆಯುವ ಸಾಮರ್ಥ್ಯವಿದ್ದವರು ಅಜ್ಞಾತದ ಬಗ್ಗೆ ಹೆದರಬೇಕಾಗಿಲ್ಲ ಅನ್ನುವ ಸತ್ಯದ ಅರಿವಾದ ಹುಡುಗ ಮರುಭೂಮಿಯ ಭೀಕರತೆಯ ಬಗ್ಗೆ ಹೆದರದೆ ತನ್ನ ಗಮ್ಯ ತಲುಪುವುದರ ಕಡೆಗೆ ಗಮನ ಕೊಡುತ್ತಾನೆ. ಬದುಕಿನಲ್ಲಿ ಉನ್ನತಿ ಅಥವಾ ಸುಧಾರಣೆಯೆಂದರೆ ರಸವಿದ್ಯೆಯ ಭಾಷೆಯಲ್ಲಿ ಅದು ಪ್ರಪಂಚದ ಆತ್ಮ. ನಾವು ಏನನ್ನಾದರೂ ಹೃದಯಾಳದಿಂದ ಬಯಸಿದಾಗ ಪ್ರಪಂಚದ ಆತ್ಮಕ್ಕೆ ಬಹಳ ಹತ್ತಿರವಾಗಿರುತ್ತೇವೆ. ಇದು ಸಕಾರಾತ್ಮಕ ಶಕ್ತಿ. ಎಲ್ಲಾ ವಿಷಯಗಳ ಹಿಂದೆ ಇರುವುದು ಇದೇ ಸೂತ್ರ.

ಹೀಗೆ ಮರುಭೂಮಿಯ ಪ್ರಯಾಣದಲ್ಲಿ ರಸವಿದ್ಯಾ ಪ್ರವೀಣನನ್ನು ಹುಡುಕುತ್ತಿರುವಾಗ ಫಾತೀಮಾ ಅನ್ನುವ ಹುಡುಗಿಯ ಮೋಹಕ್ಕೆ ಒಳಗಾಗುತ್ತಾನೆ ಹುಡುಗ. ತನ್ನ ನಿಧಿ ಇರುವುದು ಈಜಿಪ್ಟ್ನ ಪಿರಮಿಡ್ನಲ್ಲಿ ಅಲ್ಲ, ಅದು ಈ ಫಾತೀಮಾ ಅನ್ನುವ ಹುಡುಗಿಯಲ್ಲಿ ಎಂದು ತಿಳಿಯುವ ಅವನಿಗೆ, ನಾವು ಅತೀತದಲ್ಲಾಗಲಿ ಭವಿಷ್ಯದಲ್ಲಾಗಲಿ ಜೀವಿಸುತ್ತಿಲ್ಲ. ವರ್ತಮಾನದ ಬಗ್ಗೆ ಗಮನವನ್ನು ಕೇಂದ್ರಿಕರಿಸಿದಾಗ ನಾವು ಸಂತಸದಿಂದಿರಬಹುದು ಅನ್ನುವುದು ಮನದಟ್ಟಾಗುತ್ತದೆ. ಹುಡುಗಿಯ ಗುಂಗಿನಲ್ಲಿ ತನ್ನ ನಿಧಿ ಹುಡುಕಾಟದ ಕಾರ್ಯವನ್ನೇ ಮರೆತು ಅವಳಲ್ಲಿ ಅನುರಕ್ತನಾಗುತ್ತಾನೆ.

‘ಮನುಷ್ಯನ ಬಾಯಿಯೊಳಗೆ ಏನು ಪ್ರವೇಶಿಸುತ್ತದೋ ಅದು ಕೆಟ್ಟದ್ದಲ್ಲ, ಆದರೆ ಅದರಿಂದ ಏನು ಹೊರಗೆ ಬೀಳುವುದೋ ಅದು ಕೆಟ್ಟದ್ದು’ ಎನ್ನುವ ರಸಜ್ಞನ ಮಾತನ್ನು ಮೆಚ್ಚಿಕೊಂಡ ಹುಡುಗ ಮತ್ತೆ ಪ್ರಯಾಣ ಮುಂದುವರಿಸಿ ಹೇಗೂ ಓಯಸಿಸ್ ತಲುಪುತ್ತಾನೆ. ಅಲ್ಲಿ ಅಪಾಯಕ್ಕೆ ಸಿಲುಕಿ ತನ್ನಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡು ನಿರಾಶನಾಗುತ್ತಾನೆ. ಆದರೆ ರಸಜ್ಞನ ಚಾಕಚಕ್ಯತೆಯಲ್ಲಿ ಚಿನ್ನವನ್ನು ಪಡೆದುಕೊಂಡು ಪಿರಮಿಡ್ ತಲುಪಿ ತನ್ನ ನಿಧಿಗಾಗಿ ಶೋಧನೆ ನಡೆಸುತ್ತಾನೆ. ನಿಧಿಯ ಸ್ಥಳ ನಿರ್ದಿಷ್ಟವಾದಾಗ ಅಗೆತ ಆರಂಭಿಸುತ್ತಾನೆ. ಅಲ್ಲಿಯೂ ತನ್ನ ಬಳಿಯಿದ್ದ ಚಿನ್ನವನ್ನು ಕಳೆದುಕೊಂಡು ಅಸ್ವಸ್ಥನಾಗಿ ಬಿಡುತ್ತಾನೆ. ಅವನಿಂದ ವಿಷಯ ತಿಳಿದ ದರೋಡೆಕಾರರು ಕೂಡ ಇಂತಹುದೆ ನಿಧಿ ಪಾಳು ಬಿದ್ದ ಚರ್ಚ್ನ ಬಳಿಯಿದೆಯೆಂದು ಕೇಳಿದರೂ ಅವನ ಹಾಗೆ ನಿಧಿಯನ್ನು ಹುಡುಕಿಕೊಂಡು ಹೋಗಿ ಮೂರ್ಖರಾಗದೆ ಉಳಿದ್ದಿದ್ದೇವೆ ಎಂದು ಹೇಳುವಾಗ ನಿಧಿ ಇರುವುದು ಈಜಿಪ್ಟಿನ ಪಿರಮಿಡ್ನಲ್ಲಿ ಅಲ್ಲ, ತಾನು ಕುರಿಗಳ ಜೊತೆಗೆ ಹಾಯಾಗಿದ್ದ ಪಾಳು ಚರ್ಚ್ನಲ್ಲಿಯೇ ಇದೆ ಎಂದು ಅರಿತ ಅವನು ಅಲ್ಲಿಗೆ ಬಂದು ಅದನ್ನು ಪಡೆಯುತ್ತಾನೆ.

ಸುದೀರ್ಘ ಪಯಣದಲ್ಲಿ ಹುಡುಗ ಬದುಕಿನ ಕ್ಲಿಷ್ಟತೆ, ವಿಶ್ವ ಭಾಷೆ, ಅಂತರ ದೃಷ್ಟಿಯಿಂದ ಪ್ರಪಂಚದ ಆತ್ಮದ ಜೊತೆಗೆ ಸಂವಾದ ಮಾಡುತ್ತಾನೆ. ಈ ರೀತಿ ಜೀವನವನ್ನು ಶಾಶ್ವತವಾಗಿ ಬದಲಾಯಿಸುವ ನಿಯಮಗಳನ್ನು, ಸರ್ವಕಾಲಿಕವಾಗಿ ಒಪ್ಪಿಕೊಳ್ಳುವ ಸತ್ಯ ಸಂಗತಿಗಳನ್ನು ಚೆನ್ನಾಗಿ ವಿವರಿಸುವ ಈ ಕೃತಿಯನ್ನು ಓದಲೇಬೇಕು.

ಈ ಕಾದಂಬರಿಯನ್ನು ಅನುವಾದಿಸಿರುವವರು ಕಿರಣ್ ಕುಮಾರ್ ಟಿ. ಪಿ. ಬೆಂಗಳೂರಿನ ಅನುಭವ ಪ್ರಕಾಶನದವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. ಇದರ ಬೆಲೆ ರೂ. ೬೦ ಮಾತ್ರ.

No comments: