Monday, February 22, 2010

ಬಾಳಾಸಾಹೇಬ ಲೋಕಾಪುರ ಅವರ ‘ನೀಲಗಂಗಾ’ - ಒಂದು ಪ್ರೇಮ ಕಥೆ


‘ಉಧೊ! ಉಧೊ!’, ‘ಬಿಸಿಲುಪುರ’ ಮತ್ತು ‘ಹುತ್ತ’ ಕಾದಂಬರಿಗಳ ಮೂಲಕ ಚಿರಪರಿಚಿತರಾಗಿರುವ ಬಾಳಾಸಾಹೇಬ ಲೋಕಾಪುರ ಅವರ ಇನ್ನೊಂದು ಕೃತಿ ‘ನೀಲಗಂಗಾ’. ಉತ್ತರ ಕರ್ನಾಟಕದ ಅಪ್ಪಟ ಗ್ರಾಮ್ಯ ಭಾಷಾ ಶ್ರೀಮಂತಿಕೆಯ ಪ್ರೇಮಗಾಥೆಯಿರುವ ಈ ಕೃತಿ ಹದಿ ಹರೆಯದ ಮನಸ್ಸುಗಳ ಭಾವನೆಯ ಪ್ರವಾಹದ ವೇಗವೂ, ಓದಿನ ಸುಖ ನೀಡುವ ಉನ್ಮಾದ ಲಹರಿಯೂ ಹೌದು.

ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯೆನಿಸಿದರೂ ಕಾದಂಬರಿಯ ಶ್ರೀಮಂತಿಕೆಯಿರುವುದು ಕಥೆಗಿಂತಲೂ ಅದನ್ನು ಬರೆದ ಶೈಲಿಯಲ್ಲಿ. ಆಡು ಭಾಷೆಯ ಸೊಗಸು ಆಡುವುದಕ್ಕಿಂತಲೂ, ಓದುವುದರಲ್ಲಿಯೇ ಹೆಚ್ಚು ಆಪ್ತವೆನಿಸುತ್ತದೆ. ಪಂಚಯ್ಯ, ನೀಲಗಂಗಾ ಮತ್ತು ಸ್ವರೂಪರಾಣಿ ಪಾತ್ರಗಳ ಮೂಲಕ ಸ್ವಗತವಲ್ಲದೆ ಆಯಾಯ ಪಾತ್ರ ಚಿತ್ರಣದ ಮೂಲಕ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ."

ತುತ್ತು ಕೂಳಿಗೂ ಗತಿಯಿಲ್ಲದ ಬಡ ಹುಡುಗ ಪಂಚಯ್ಯ. ಮನೆಯವರ ಅನಾಧಾರದಲ್ಲಿ ಅನಾಥನಾಗಿ ಆಶ್ರಮ ಸೇರಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಕವಿ ಹೃದಯದ ಆತ ಪ್ರಬುದ್ದನಾಗಿ ಬೆಳೆದು ಸಾರಸ್ವತ ಲೋಕದ ‘ಮೃತ್ಯುಂಜಯ’ ಆಗಿ ಕಾಲೇಜ್ನಲ್ಲಿ ಪ್ರೊಫೆಸರೂ ಆಗುತ್ತಾನೆ.

ನೀಲಗಂಗಾ, ವೇದಮೂರ್ತಿ ‘ಮಲ್ಲಯ್ಯ’ನವರ ಮಗಳು. ಹೆಡೆದವ್ವನ ಪ್ರೀತಿಯಿಂದ ವಂಚಿತಳಾದ ಅವಳಿಗೆ ಹೆತ್ತಬ್ಬೆಯ ಪ್ರೀತಿಯ ಜೊತೆಗೆ ಜವಾಬ್ದಾರಿಯ ತಂದೆಯಾಗಿ ಅವೆರಡು ತಾವೇ ಆಗಿ ಅವಳನ್ನು ಬೆಳೆಸುತ್ತಾರೆ ಮಲ್ಲಯ್ಯ. ಕೊರ್ಯಾಣ ಹಿಡಿದು ಬದುಕುವ ಅವರ ಮನೆ ಬಡತನದ, ಬಟ್ಟಾ ಬಯಲಿನಂತೆ ಬಾಗಿಲುಗಳಿಲ್ಲದ ತೆರೆದ ಜಾಗ. ಹೀಗೆ ಬಡತನದಲ್ಲಿಯೇ ಬೆಳೆಯುತ್ತಾ ಕೃಷ್ಣೆಯಷ್ಟೆ ಮುಗ್ಧಳಾಗಿರುವ ನೀಲಗಂಗಾಳಿಗೆ ಓದಿ, ಪ್ರೊಫೆಸರ್ ಆಗಿರುವ ಪಂಚಯ್ಯನ ಮೇಲೆ ಹೇಳಿಕೊಳ್ಳಲಾರದಷ್ಟು ಪ್ರೀತಿ. ಅವನು ಮಾತನಾಡದಿದ್ದರೆ ಏನೋ ಕಳೆದುಕೊಳ್ಳುವ ತಳಮಳ. ಅಂತೊಂದು ಕಾತುರದ ದಿನ ಕೃಷ್ಣೆಯ ಬಳಿ ಅವನ ಭೇಟಿಯಾದಾಗ ಮಾತನಾಡಿದರೂ, ನಿರ್ಲಕ್ಷಿತನಂತೆ ಮೌನೊದೊಳಗೆ ನುಸುಳಿ ಹೋದ ಪಂಚಯ್ಯ ಮಲ್ಲಯ್ಯನವರು ಇಲ್ಲದ ಸಮಯದಲ್ಲಿ ನೀಲಗಂಗಾಳನ್ನು ಹುಡುಕಿಕೊಂಡು ಬರುತ್ತಾನೆ. ಹದಿಹರೆಯದ ಕನಸುಗಳ ಬೆಚ್ಚನೆಯ ಮುಸುಕೊಳಗೆ ಅರಿಯದೆ ನೀಲಗಂಗಾಳ ಕತ್ತಲ ಬದುಕಿಗೆ ನಾಂದಿ ಹಾಡುತ್ತಾನೆ.

ನೀಲಗಂಗಾಳ ಬದಲಾದ ಭಾವಕ್ಕೆ ಕಾರಣ ತಿಳಿದ ಮಲ್ಲಯ್ಯ ‘ಎಲ್ಲಾ ಶಿವನಿಚ್ಛೆ’ಯೆನ್ನುವ ದೈವ ಭಕ್ತ. ಮಗಳಿಗಾದ ಅನ್ಯಾಯವನ್ನು ಸಂಬಂಧ ಪಟ್ಟವರಿಗೆ ತಿಳಿಸಿದರೂ, ಅವರುಗಳ ಅಸಹಾಯಕತೆ, ಗೌಡರ ವಿಳಂಬ ನಿರ್ಧಾರ, ಕೊನೆಗೂ ಕೆಟ್ಟ ಸುದ್ದಿಯಾಗಿಯೇ ಎದುರಾಗುತ್ತದೆ. ಪಂಚಯ್ಯನನ್ನು ಹುಡುಕಿಕೊಂಡು ಬರುವಾಗ ಅವನು ಸ್ವರೂಪರಾಣಿಯೆನ್ನುವ ಅವನ ಅಭಿಮಾನಿಯಾದ ವೈದ್ಯೆಯ ಜೊತೆಗೆ ಮದುವೆಯಾಗಿ ಹನಿಮೂನಿಗೆ ಹೊರಟಿರುವುದು ತಿಳಿಯುತ್ತದೆ. ಇದರಿಂದ ನೊಂದ ಮಲ್ಲಯ್ಯ ಊರಿನವರಿಂದಲೂ ನಿಂದೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿ ನೀಲಗಂಗಾಳನ್ನು ನಿರ್ಗತಿಕಳನ್ನಾಗಿಸುತ್ತಾನೆ.

ಮುಂದೆ ಗಂಡು ಕೂಸಿಗೆ ಜನ್ಮವಿತ್ತ ನೀಲಗಂಗಾ ಎಲ್ಲದರಲ್ಲಿಯೂ ನಿರಾಸಕ್ತಳಾಗಿ, ಇನ್ನೊಂದೆಡೆ ತನ್ನ ತಂದೆಯ ಸಾವಿಗೆ ಕಾರಣನಾದೆನಲ್ಲಾವೆನ್ನುವ ದು:ಖ ಅವಳನ್ನು ಅಂತರ್ಮುಖಿಯನ್ನಾಗಿಸುತ್ತದೆ. ಬದುಕಿನಲ್ಲಿ ಸತ್ವವನ್ನೇ ಕಳೆದುಕೊಂಡ ಅವಳು ಅನ್ನಕ್ಕೂ ತಾತ್ವರ ಪಡುತ್ತಾಳೆ. ಕೊನೆಗೆ ತನ್ನ ಮೇಲೆ ಅನುಕಂಪ ತೋರಿದ ನಾಗವ್ವನೇ ಅವಳನ್ನು ನಿಂದಿಸುತ್ತಾಳೆ. ಆದರೆ ಹಸಿದ ಒಡಲಿನ ಜೊತೆಗೆ ಎಳೆ ಕೂಸಿನ ಮಮತೆ ಅವರ ಮುಂದೆ ಕೈಯೊಡ್ಡುತ್ತದೆ. ಅಲ್ಲಿ ನಾಗವ್ವನಿಂದ ಅವಮಾನಿತಳಾದ ಅವಳು ಹೆಣ್ಣು ಮಕ್ಕಳಿಗೆ ಕೊರ್ಯಣದ ಹಕ್ಕು ಇಲ್ಲದಿದ್ದರೂ ತನ್ನ ಗಂಡುಮಗುವಿಗೆ ಆ ಹಕ್ಕಿದೆಯೆಂದು ಹೊರಟಾಗ ನಾಗಮ್ಮ, ‘... ಈ ಜೋಳಿಗೆ ಐತಲ್ಲಾ ಅದು ಭಿಕ್ಷಾ ಬೇಡು ವಸ್ತು ಅಲ್ಲ. ಅದು ಶಿವನ ಸಂಕೇತ... ನಿನಗಾ ಧರ್ಮ ಸೂಕ್ಷ್ಮ ಕಲಿಸಿಕೊಡಬೇಕಾಗಿಲ್ಲ’ ಅನ್ನುವಾಗ ಸತ್ಯದ ಅರಿವಾಗಿ ಹಿಂದಕ್ಕೆ ಬರುತ್ತಾಳೆ ನೀಲಗಂಗಾ.

ಕವಿ ಹೃದಯದ ಪಂಚಯ್ಯನನ್ನು ಭೇಟಿಯಾಗಿ ತನ್ನ ತಾಯಿಯ ಮಾತನ್ನೂ ಮೀರಿ ಮದುವೆಯಾದ ಸ್ವರೂಪರಾಣಿ, ಓದುಗರನ್ನು ಭ್ರಾಮಾಲೋಕಕ್ಕೆ ಕರೆದೊಯುವ ಕವಿ, ವಾಸ್ತವದ ಬಗ್ಗೆ ಸ್ಪಷ್ಟವಾಗಿ ಮತ್ತು ನಿಷ್ಟುರವಾಗಿ ತನ್ನ ಮಡದಿಗೆ ಹೇಳುವಾಗ ತಾನು ಭಾವಿಸಿದೆಲ್ಲಾ ಸುಳ್ಳೇ ಅನಿಸುತ್ತದೆ ಅವಳಿಗೆ. ಅವಳನ್ನು ನಿರಾಶೆ ಆವರಿಸಿ, ಅವನ ಮೇಲೆ ಬೇಸರ ಮೂಡಿದರೂ, ಅದು ಪ್ರೀತಿಯ ಉನ್ಮಿಲಿತವೆನಿಸುತ್ತದೆ. ಅವನ ಬಗ್ಗೆ ವ್ಯತಿರೀಕ್ತವಾದ ಭಾವನೆಯೊಂದು ಉದಯಿಸುತ್ತದೆ. ಆದರೂ ಅವಳ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ.

ಒಮ್ಮೆ ಪಂಚಯ್ಯ ತನ್ನ ಮುಖ್ಯ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೊರಟಾಗ ಆತ ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾನೆ ಅನ್ನುವ ಸಂಶಯ ಸ್ವರೂಪರಾಣಿಗೆ ಮೂಡುತ್ತದೆ. ಅವನು ಬೆಂಗಳೂರಿಗೆ ಹೊರಟ ಮೇಲೆ ತಾನು ಉತ್ತರಭಾರತದ ಪ್ರವಾಸ ಕೈಗೊಂಡು ಅವನಿಗೆ ವಿಸ್ಮಯ ಮೂಡಿಸುವ ಹವಣಿಕೆಯಲ್ಲಿರುತ್ತಾಳೆ.

ಆದರೆ ಕಥೆ ತಿರುವು ಪಡೆಯುವುದು ಅಲ್ಲಿಯೆ. ಪಂಚಯ್ಯನ ಊರಿನವನೇ ಆದ ವಿದ್ಯಾರ್ಥಿಯೊಬ್ಬ ನೀಲಗಂಗಾಳಿಗೆ ಪಂಚಯ್ಯನಿಂದ ಆದ ಅನ್ಯಾಯವನ್ನು ಸ್ವರೂಪರಾಣಿಗೆ ತಿಳಿಸುತ್ತಾನೆ. ತಾನು ಕೈ ಹಿಡಿದಾತನ ಬಣ್ಣ ಬದಲಾದಾಗ ಹತಾಶಳಾದರೂ ತನ್ನ ಕಾರಿನಲ್ಲಿಯೇ ಪಂಚಯ್ಯನ ಊರಿಗೆ ಬರುತ್ತಾಳೆ. ನೀಲಗಂಗಾಳಿಗಾದ ಅನ್ಯಾಯವನ್ನು ತಿಳಿದು ಅವಳ ಇಚ್ಛೆಯಂತೆಯೇ ತನ್ನ ಜೊತೆಗೆ ಕರೆದುಕೊಂಡು ಬರುತ್ತಾಳೆ.

ಇತ್ತ ಪಂಚಯ್ಯ ಬೆಂಗಳೂರಿನಿಂದ ಮರಳಿದವನು ಸ್ವರೂಪರಾಣಿ ತನ್ನ ಊರಿಗೆ ಹೊರಟಿರುವುದು ತಿಳಿದು ಅವನು ಹುಡುಕಿಕೊಂಡು ಅಲ್ಲಿಗೆ ಬರುವಾಗ ಅವನ ತಾಯಿ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತದೆ. ಆತನ ಅಕ್ಕ ನಾಗವ್ವ ತಮ್ಮನಿಂದ ನೀಲಗಂಗಾಳಿಗಾದ ಮೋಸವನ್ನು ಕೇಳಿ ಸಿಟ್ಟಾಗುತ್ತಾಳೆ. ಆದರೂ ಅವಳಿಗೆ ಆತ ನಿರ್ದೋಶಿಯೆನ್ನುವುದು ಬೇಕು. ಆದರೆ ಪಂಚಯ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ನಾಗವ್ವ ನಿಷ್ಠುರವಾಗಿ ಮಾತನಾಡಿ ಒಂದು ಅಮಾಯಕ ಹೆಣ್ಣಿಗಾದ ನೋವನ್ನು ಪ್ರತಿಭಟಿಸುತ್ತಾಳೆ. ಪಂಚಯ್ಯ ಅಲ್ಲಿ ಸ್ವರೂಪರಾಣಿ ಮತ್ತು ನೀಲಗಂಗಾಳನ್ನು ಕಾಣದೆ ಹುಡುಕುತ್ತ ಬರುವಾಗ ಅವನಿಗೆ ಒಮ್ಮೆ ಸ್ವರೂಪರಾಣಿ ಹೇಳಿದ ಮಾತುಗಳು ನೆನಪಾಗಿ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಅವಳನ್ನು ಭೇಟಿಯಾದರೂ ಸ್ವರೂಪರಾಣಿಯ ದೃಢ ನಿರ್ಧಾರದ ಮುಂದೆ ತಲೆ ತಗ್ಗಿಸುತ್ತಾನೆ. ಆಕೆಯೇ ನೀಲಗಂಗಾಳ ಜೊತೆಗೆ ಊರಿಗೆ ಹೋಗು ಅನ್ನುತ್ತಾಳೆ. ಪಂಚಯ್ಯ ಕ್ಷಮಾಪಣೆ ಕೇಳಿಕೊಂಡು ಮಗುವಿನ ಜೊತೆಗೆ ನೀಲಗಂಗಾಳನ್ನು ಕರೆದುಕೊಂಡು ಊರಿಗೆ ಹಿಂತಿರುಗುತ್ತಾನೆ.

ಹೀಗೆ ಕಥೆ ಮುಗಿದರೂ ಆ ಕಥಾಭಾಷೆಯ ಸವಿ ಕೃತಿಯನ್ನು ಮಗದೊಮ್ಮೆ ಓದುವಂತೆ ಪ್ರೇರೇಪಿಸುತ್ತದೆ. ಅದೇ ಲಹರಿ, ಪದಗಳ ಸಿಹಿಯನ್ನು ಅಸ್ವಾದಿಸುವ ಮನಸ್ಸು ತನ್ನಿಂದ ತಾನೆ ಖುಷಿಪಡುತ್ತದೆ. ಈ ಕೃತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ರೂಪ ಪ್ರಕಾಶನ, 2406, 2407/ ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ, ಮೈಸೂರು - 570 004.

No comments: